ಪತ್ರವೊಂದು ತೆರೆದಿಡುವ ಮಂಡೇಲಾ ನೆನಪು

ನೂರು ವರ್ಷಗಳ ಹಿಂದೆ ಅಂದರೆ 1918ನೇ ಜುಲೈ 18ರಂದು ಕರಿಯರ ಹೋರಾಟಗಳ ಸಂಕೇತವಾಗಿರುವ ನೆಲ್ಸನ್ ಮಂಡೇಲಾ ದಕ್ಷಿಣ ಆಫ್ರಿಕಾದ ಟ್ರಾನ್ಸ್‌ಕೆಯಿ ಬಂಟುಸ್ತಾನದ ಉಮ್‌ಟಾಟಾ ಜಿಲ್ಲೆಯ ಮ್‌ಬಷೆ ಗ್ರಾಮದಲ್ಲಿ ಜನಿಸಿದರು. ಹತ್ತಿರದ ಕುನು ಗ್ರಾಮದಲ್ಲಿ ಬೆಳೆದರು. ಅವರದು ಥೆಂಬು ರಾಜಮನೆತನಕ್ಕೆ ಸಂಬಂಧಿಸಿದ ಕುಟುಂಬ. ತಂದೆ ಹೆನ್ರಿ ಗಾಡ್ಲಾ. ತಾಯಿ ನೊಂಕಾಪಿ. ಕರೆಯುವ ಹೆಸರು ನೊಸಕೆನಿ. ಸ್ವಾತಂತ್ರ ಹೋರಾಟಗಾರ ಮಂಡೇಲಾರನ್ನು ಬಿಳಿಯರ ಸರಕಾರ 27 ವರ್ಷಗಳವರೆಗೆ ಜೈಲಿನಿಟ್ಟರೂ ಅವರ ಅದಮ್ಯ ಚೇತನವನ್ನು ಕುಂದಿಸಲಿಕ್ಕಾಗಲಿಲ್ಲ. 1990ರ ಫೆಬ್ರವರಿ 11ರಂದು ನೆಲ್ಸನ್ ಮಂಡೇಲಾ ಅವರನ್ನು ಬಿಡುಗಡೆ ಮಾಡಲೇ ಬೇಕಾದ ಪರಿಸ್ಥಿತಿ ಬಿಳಿಯರ ಸರಕಾರಕ್ಕೆ ಉಂಟಾಯಿತು. ಅದೇ ವರ್ಷ ಭಾರತ ಸರಕಾರ ಮಂಡೇಲಾ ಅವರಿಗೆ ಭಾರತರತ್ನ ಪ್ರಶಸ್ತಿ ಕೊಟ್ಟು ಗೌರವಿಸಿತು. 1993ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿತು. 1994ರಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾದರು. ಕಪ್ಪು ಜನಾಂಗದಿಂದ ಬಂದ ಮೊದಲ ಅಧ್ಯಕ್ಷರಾಗುವ ಮೂಲಕ 350 ವರ್ಷಗಳ ಜನಾಂಗಭೇದ ನೀತಿಗೆ ಕೊನೆ ಹಾಡಿದರು. 1999ರ ವರೆಗೆ ಅಧ್ಯಕ್ಷರಾಗಿದ್ದ ನೆಲ್ಸನ್ ಮಂಡೇಲಾ ಇನ್ನೊಂದು ಅವಧಿಗೆ ಅಧ್ಯಕ್ಷರಾಗಿ ಮುಂದುವರಿಯಲು ನಿರಾಕರಿಸಿದರು.

 2013ನೇ ಡಿಸೆಂಬರ್ 5ರಂದು ಮಂಡೇಲಾ ಅವರು ತಮ್ಮ 90ನೇ ವಯಸ್ಸಿನಲ್ಲಿ ಜೊಹಾನ್ಸ್‌ಬರ್ಗ್‌ನಲ್ಲಿ ನಿಧನರಾದರು. ಭಾರತ ಸೇರಿದಂತೆ 90 ದೇಶಗಳ ಪ್ರತಿನಿಧಿಗಳು ಅವರ ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದ್ದರು.

ಭಾರತಕ್ಕೆ ಒಂದು ಪತ್ರ

(ಅಂತರ್‌ರಾಷ್ಟ್ರೀಯ ತಿಳಿವಳಿಕೆಗಾಗಿ ಇರುವ ಜವಾಹರಲಾಲ್ ನೆಹರೂ ಪ್ರಶಸ್ತಿಗಾಗಿ ಕಳೆದ 27 ವರ್ಷಗಳಿಂದ ದಕ್ಷಿಣ ಆಫ್ರಿಕಾದ ಜೈಲಿನಲ್ಲಿದ್ದ ನೆಲ್ಸನ್ ಮಂಡೇಲಾ ಅವರನ್ನು 1979ರಲ್ಲಿ ಆಯ್ಕೆ ಮಾಡಲಾಯಿತು. ಆ ಸಂಬಂಧದಲ್ಲಿ ಅವರು ಆಗಸ್ಟ್ 3, 1980ರಂದು ಈ ಪ್ರಶಸ್ತಿ ನೀಡುವ ಸಾಂಸ್ಕೃತಿಕ ಸಂಬಂಧಗಳ ಭಾರತೀಯ ಮಂಡಳಿಯ ಕಾರ್ಯದರ್ಶಿ ಶ್ರೀಮತಿ ಮನೋರಮಾ ಭಲ್ಲಾ ಅವರಿಗೆ ಪತ್ರ ಬರೆದರು.

 ದಕ್ಷಿಣ ಆಫ್ರಿಕಾದ ಜೈಲು ಅಧಿಕಾರಿಗಳು ಆ ಪತ್ರವನ್ನು ತಡೆ ಹಿಡಿದರು. ಜೈಲಿನಿಂದ ರಹಸ್ಯವಾಗಿ ಕಳಿಸಿದ ಆ ಪತ್ರವನ್ನು ಸಾಂಸ್ಕೃತಿಕ ಸಂಬಂಧಗಳ ಭಾರತೀಯ ಮಂಡಳಿ ಆಗಸ್ಟ್ 26ರ 1981ರಂದು ಬಿಡುಗಡೆ ಮಾಡಿತು.

 ಮಂಡೇಲಾ ಪರವಾಗಿ ಅವರ ಪತ್ನಿ ಮಂಡೇಲಾ ಅವರು ಪ್ರಶಸ್ತಿ ಪಡೆಯಲು ದಕ್ಷಿಣ ಆಫ್ರಿಕಾ ಸರಕಾರ ಅನುಮತಿ ನೀಡಲಿಲ್ಲ. ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಅಧ್ಯಕ್ಷ ಆಲಿವರ್ ಟಾಂಬೊ ಅವರು ನವೆಂಬರ್ 1980ರಂದು ದಿಲ್ಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿದರು.)

ಪ್ರೀತಿಯ ಶ್ರೀಮತಿ ಭಲ್ಲಾ

‘‘ಅಂತರ್‌ರಾಷ್ಟ್ರೀಯ ತಿಳಿವಳಿಕೆಗಾಗಿ ಇರುವ ಜವಾಹರಲಾಲ್ ನೆಹರೂ ಪ್ರಶಸ್ತಿ’’ ನೀಡಿ ನನ್ನನ್ನು ಗೌರವಿಸಿದ್ದಕ್ಕಾಗಿ, ಸಾಂಸ್ಕೃತಿಕ ಸಂಬಂಧಗಳ ಭಾರತೀಯ ಮಂಡಳಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆ ಮತ್ತು ಮೆಚ್ಚುಗೆ ವ್ಯಕ್ತಪಡಿಸುವುದಕ್ಕಾಗಿ ಬರೆಯುತ್ತಿದ್ದೇನೆ. ಈ ಪ್ರಶಸ್ತಿಗಾಗಿ ನನ್ನನ್ನು ಪ್ರತ್ಯೇಕಿಸಿ ಆಯ್ಕೆ ಮಾಡಿದ್ದರೂ ಇದು ನಿಜವಾಗಿ ಸಲ್ಲಬೇಕಾದುದು ನನ್ನ ದೇಶದ ಜನರಿಗೆ, ಈ ಗೌರವಕ್ಕಾಗಿ ನಾನು ಕೇವಲ ಮಾಧ್ಯಮವಾಗಿದ್ದೇನೆ ಎಂಬುದು ನನ್ನ ಭಾವನೆ ಆಗಿದೆ.

 ಈ ಹಿಂದೆ ಈ ಪ್ರಶಸ್ತಿ ಪಡೆದ ಪ್ರತಿಷ್ಠಿತ ಸ್ತ್ರೀ-ಪುರುಷರ ಸಾಲಿಗೆ ಸೇರುವುದಕ್ಕಾಗಿ ತಮ್ಮ ದೇಶದವನೊಬ್ಬ ಆಯ್ಕೆ ಆಗಿದ್ದಾನೆ ಎಂಬುದು ನಮ್ಮ ದೇಶದ ಜನರಲ್ಲಿ ವಿನಯ ಮತ್ತು ಹೆಮ್ಮೆ ಉಂಟುಮಾಡಿದೆ.

 ಆ ಹೆಸರುಗಳನ್ನು ನಾನು ಏಕೆ ಜ್ಞಾಪಿಸಿಕೊಳ್ಳುತ್ತಿದ್ದೇನೆ ಎಂದರೆ ಆ ಹೆಸರುಗಳು ಈ ಪ್ರಶಸ್ತಿಯ ವ್ಯಾಪ್ತಿ ಮತ್ತು ಲಕ್ಷಣಗಳ ಸಂಕೇತ ಮಾತ್ರವಲ್ಲ; ಯಾರ ಹೆಸರಿನಲ್ಲಿ ಈ ಪ್ರಶಸ್ತಿ ಇದೆಯೊ ಆ ಮಹಾವ್ಯಕ್ತಿ ಪಂಡಿತ್ ಜವಾಹರ್‌ಲಾಲ್ ನೆಹರೂಗೆ ಸಲ್ಲುವ ‘ಗೌರವ’ವಾಗಿದ್ದಾರೆ. ಆ ಜೀವಗಳು ಮತ್ತು ಆ ಪ್ರತಿಯೊಬ್ಬರ ವಿವಿಧ ಕಾಣಿಕೆಗಳು ಕೆಲ ಅಳತೆಯಲ್ಲಿ ಪಂಡಿತ್‌ಜಿ ಅವರ ಸಮೃದ್ಧ ಮತ್ತು ಬಹುಮುಖ ಬದುಕನ್ನು ಪ್ರತಿಬಿಂಬಿಸುತ್ತವೆ. ನಿಸ್ವಾರ್ಥ ಮಾನವತಾವಾದಿ ಮದರ್ ತೆರೇಸಾ, ಅಂತರ್‌ರಾಷ್ಟ್ರೀಯ ರಾಜನೀತಿಜ್ಞ ಜೊಸಿಪ್ ಬ್ರೋಜ್ ಟಿಟೊ, ಪ್ರಸಿದ್ಧ ರಾಜಕೀಯ ನಾಯಕರಾದ ಜೂಲಿಯಸ್ ನೈರೇರೆ ಮತ್ತು ಕೆನೆತ್ ಕೌಂಡಾ, ವೈದ್ಯಕೀಯ ಉಪಕಾರಿ ಜೋನಸ್ಕ್ ಮತ್ತು ನಾಗರಿಕ ಹಕ್ಕುಗಳ ನಾಯಕ ಮಾರ್ಟಿನ್ ಲೂಥರ್ ಕಿಂಗ್.

 ನಿಜವಾಗಿಯೂ ಜವಾಹರಲಾಲ್ ನೆಹರೂ ಅವರು ಗಣನೀಯ ವ್ಯಕ್ತಿ ಆಗಿದ್ದರು. ಅನೇಕ ಜನರ ಒಂದು ಸಂಯೋಗವಾಗಿದ್ದರು. ಸ್ವಾತಂತ್ರ ಹೋರಾಟಗಾರ, ರಾಜಕಾರಣಿ, ಜಾಗತಿಕ ರಾಜನೀತಿಜ್ಞ, ಇಂಗ್ಲಿಷ್ ಭಾಷೆಯ ಮೇಲೆ ಪ್ರಭುತ್ವ ಪಡೆದವರು. ನ್ಯಾಯವಾದಿ ಮತ್ತು ಇತಿಹಾಸ ತಜ್ಞ, ಅಲಿಪ್ತ ಚಳವಳಿಯ ಮೂಲಕರ್ತರಲ್ಲಿ ಒಬ್ಬರಾಗಿ ವಿಶ್ವಶಾಂತಿ ಮತ್ತು ಮಾನವ ಸಹೋದರತ್ವಕ್ಕೆ ಶಾಶ್ವತ ಕಾಣಿಕೆ ಸಲ್ಲಿಸಿದ್ದಾರೆ.

   ಯುದ್ಧಾನಂತರದ ಅವಧಿಯಲ್ಲಿ ಏಶ್ಯಾ ಮತ್ತು ಅಫ್ರಿಕಾದ ತುಂಬೆಲ್ಲ ಬೀಸಿದ ವಸಾಹತುಶಾಹಿ ವಿರೋಧಿ ಮತ್ತು ಸ್ವಾತಂತ್ರ ಹೋರಾಟಗಳ ಬಿರುಗಾಳಿಯಲ್ಲಿ ಜವಾಹರಲಾಲ್ ನೆಹರೂ ಮತ್ತು ಅಖಿಲ ಭಾರತ ಕಾಂಗ್ರೆಸ್‌ನ ವಿಚಾರಗಳು, ಚಟುವಟಿಕೆಗಳು ಮತ್ತು ಉದಾಹರಣೆಯಿಂದ ಒಂದಿಲ್ಲೊಂದು ರೀತಿಯಲ್ಲಿ ಪ್ರಭಾವಕ್ಕೊಳಗಾಗದ ಸ್ವಾತಂತ್ರ ಚಳವಳಿಯಾಗಲೀ ರಾಜಕೀಯ ನಾಯಕರಾಗಲೀ ಇಲ್ಲ. ನನ್ನ ಸ್ವಂತದ ರಾಜಕೀಯ ಶಿಕ್ಷಣ ಮತ್ತು ಬೆಳವಣಿಗೆಯ ಸಿಂಹಾವಲೋಕನ ಮಾಡಿದಾಗ ನನ್ನ ವಿಚಾರಗಳು ಅವರ ಅನುಭವದಿಂದ ಪ್ರಭಾವಿತವಾದದ್ದು ಕಂಡುಬರುತ್ತದೆ. ವಿಶ್ವವಿದ್ಯಾನಿಲಯದಲ್ಲಿ ಇದ್ದಾಗ ಮತ್ತು ವಿದ್ಯಾರ್ಥಿ ರಾಜಕೀಯದಲ್ಲಿ ತಲ್ಲೀನವಾದಾಗ ಮೊದಲ ಬಾರಿಗೆ ಈ ಪ್ರಸಿದ್ಧ ಪುರುಷನ ಹೆಸರು ನನಗೆ ಗೊತ್ತಾಯಿತು. ನಲವತ್ತರ ದಶಕದಲ್ಲಿ ನಾನು ಮೊದಲ ಬಾರಿಗೆ ಅವರ ಪುಸ್ತಕಗಳಲ್ಲೊಂದಾದ ‘ಭಾರತದ ಏಕತೆ’ ಓದಿದೆ. ಅದು ನನ್ನ ಮನಸ್ಸಿನ ಮೇಲೆ ಅಚ್ಚಳಿಯದ ಪ್ರಭಾವ ಬೀರಿತು. ಅಂದಿನಿಂದ ಲಭ್ಯವಾಗುವಂಥ ಅವರ ಗ್ರಂಥಗಳನ್ನೆಲ್ಲ ಪಡೆದೆ, ಓದಿದೆ ಮತ್ತು ಸಂಗ್ರಹಿಸಿದೆ. ಅವರ ಜೀವನ ಚರಿತ್ರೆ ಅಥವಾ ‘ಜಾಗತಿಕ ಇತಿಹಾಸದ ನಸುಸೋಟ’ ಓದುವಾಗ, ಅವರ ವಿಚಾರಗಳ ಅಪರಿಮಿತ ವ್ಯಾಪ್ತಿಯ ತೀವ್ರ ಪರಿಣಾಮ ಮತ್ತು ಅವರ ದರ್ಶನದ ಪ್ರಭಾವ ಉಂಟಾಗುವುದು.

 ಜೈಲಿನಲ್ಲಿ ಇದ್ದಾಗ ಕೂಡ; ಐಹಿಕ ವಸ್ತುಗಳು ಅಥವಾ ವಿಷಮ ವಾತಾವರಣದಿಂದ ಉಂಟಾದ ದೈಹಿಕ ಕಷ್ಟಕಾರ್ಪಣ್ಯಗಳಿಗೆ ಅವರು ಸೋಲಲು ಒಪ್ಪಲಿಲ್ಲ. ಅದಕ್ಕೆ ಬದಲು ಅವರು ಸೃಜನಶೀಲ ಚಟುವಟಿಕೆಗಳಲ್ಲಿ ತಲ್ಲೀನರಾದರು. ಅನೇಕ ತಲೆಮಾರುಗಳ ಸ್ವಾತಂತ್ರಪ್ರಿಯರಿಗೆ ಪೂರ್ವಾರ್ಜಿತ ಆಸ್ತಿ ಅಗುವಂಥ ಗ್ರಂಥಗಳ ರಚನೆ ಮಾಡಿದರು. ‘‘ಗೋಡೆಗಳು ಅಪಾಯಕಾರಿ ಸಂಗಾತಿಗಳು’’ ಅವರು ಬರೆದರು; ‘‘ಅವು ಕೆಲವು ಸಲ ಹೊರಗಿನ ಅನಿಷ್ಟದಿಂದ ರಕ್ಷಿಸಬಹುದು ಮತ್ತು ಆಕ್ರಮಣಕಾರರನ್ನು ತಡೆಗಟ್ಟಬಹುದು. ಆದರೆ ಅವು ನಿಮ್ಮನ್ನು ಕೈದಿ ಮತ್ತು ಗುಲಾಮನನ್ನಾಗಿಯೂ ಮಾಡಬಲ್ಲವು. ಸ್ವಾತಂತ್ರದ ಬೆಲೆ ತೆತ್ತು ನೀವು ಪಾವಿತ್ರ ಮತ್ತು ನಿರೋಧಕ ಶಕ್ತಿ ಎನ್ನುವಂಥದ್ದನ್ನು ಪಡೆಯುವಿರಿ. ಹಳೆಯದೆನ್ನುವ ಒಂದೇ ಕಾರಣದಿಂದ ಅನಿಷ್ಟ ಸಂಪ್ರದಾಯಗಳನ್ನು ಹೊರಹಾಕುವುದನ್ನು ಮತ್ತು ನವೀನವಾಗಿರುವ ಹೊಸ ಯೋಜನೆಗಳು ಸ್ವೀಕರಿಸುವುದನ್ನು ತಡೆಗಟ್ಟುವವುೆ ಮನಸ್ಸಿನಲ್ಲಿ ಬೆಳೆಯುವ ಗೋಡೆಗಳು. ಗೋಡೆಗಳೆಲ್ಲ ಭಯಂಕರವಾದವು.

  ನಮ್ಮದನ್ನು ಹೋಲುವ ಸಂದರ್ಭಗಳಲ್ಲಿನ ಅನೇಕ ಯುವಜನರ ಹಾಗೆ ರಾಜಕೀಯವಾಗಿ ಕಾರ್ಯೋನ್ಮುಖವಾದ ನನ್ನ ತಲೆಮಾರಿನ ಯುವಕರು ಕೂಡ ತೀವ್ರ ಭಾವನೆಗಳಿಂದ ಆದರೆ ರಾಷ್ಟ್ರವಾದದ ಸಂಕುಚಿತ ರೂಪದಿಂದ ಆಕರ್ಷಿತರಾದರು. ಹಾಗಿದ್ದರೂ ಅನುಭವದಿಂದಾಗಿ ದೇಶ ವಿದೇಶಗಳಲ್ಲಿ ನಡೆದ ಘಟನೆಗಳಿಂದಾಗಿನಾವು ಹೊಸ ದೃಷ್ಟಿಕೋನ ಪಡೆದೆವು. ಕ್ಷಿತಿಜ ವಿಸ್ತಾರಗೊಂಡಂತೆಲ್ಲ ಕೆಲ ತಾರುಣ್ಯದ ವಿಚಾರಗಳ ಅಸಮರ್ಪಕತೆ ಯನ್ನು ಗುರುತಿಸಲು ಪ್ರಾರಂಭಿಸಿದೆವು. ಕಾಲ ನಮಗೆ ಕಲಿಸಬೇಕಾಗಿತು. ಪಂಡಿತ್‌ಜಿ ಹೇಳಿದಂತೆ:

‘‘ರಾಷ್ಟ್ರವಾದ ತನ್ನ ಸ್ಥಾನದಲ್ಲಿ ಒಳ್ಳೆಯದೆ ಆಗಿದೆ. ಆದರೆ ಅದು ನಂಬಲನರ್ಹ ವಾದ ಮಿತ್ರ ಮತ್ತು ಅಪಾಯಕಾರಿ ಚರಿತ್ರೆಕಾರ. ಅನೇಕ ಆಗು ಹೋಗುಗಳಿಗೆ ನಮ್ಮನ್ನು ಕುರುಡಾಗಿಸುವಂಥದ್ದು. ಕೆಲ ಸಲ, ಅದರಲ್ಲೂ ನಮ್ಮ ಮತ್ತು ನಮ್ಮ ದೇಶಕ್ಕೆ ಸಂಬಂಧಿಸಿದಂತೆ ಅದು ಸತ್ಯವನ್ನು ವಿರೂಪಗೊಳಿಸುತ್ತದೆ.’’

 ನಿಬ್ಬೆರಗಾಗಿಸುವ ತಂತ್ರಜ್ಞಾನ ಮತ್ತು ಸಂಪರ್ಕ ವಿಧಾನಗಳಲ್ಲಿನ ಪ್ರಗತಿಯಿಂದಾಗಿ ಈ ಮುಂಚೆ ಪ್ರವೇಶಿಸಲು ಅಸಾಧ್ಯವೆನಿಸಿದ್ದ ದೂರದ ಪ್ರದೇಶಗಳ ನಡುವಿನ ಅಂತರವನ್ನು ತೊಡೆದು ಹಾಕಿರುವ, ಹಳೆ ತಲೆಮಾರಿನ ನಂಬಿಕೆಗಳು ಮತ್ತು ಮನುಷ್ಯರ ಮಧ್ಯದ ಕಾಲ್ಪನಿಕ ವ್ಯತ್ಯಾಸಗಳು ತ್ವರಿತವಾಗಿ ನಿವಾರಣೆ ಆಗುತ್ತಿರುವ ಮತ್ತು ಒಂಟಿತನ

 ಕಳೆದು ಸಹಕಾರ ಹಾಗೂ ಪರಸ್ಪರ ಅವಲಂಬನೆಗಳು ಕಂಡುಬರುವ ಈ ಪ್ರಪಂಚದಲ್ಲಿ ನಾವು ಕೂಡ ನಮ್ಮ ಸಂಕುಚಿತ ದೃಷ್ಟಿಕೋನ ತೊರೆದು ಹೊಸ ವಾಸ್ತವತೆಗಳಿಗೆ ಹೊಂದಿಕೊಳ್ಳುವ ಅಗತ್ಯ ಕಂಡು ಬಂದಿತು. ವಸಾಹತುಶಾಹಿ ಜಗತ್ತಿನ ಪ್ರಮುಖ ರಾಷ್ಟ್ರೀಯ ವಿಮೋಚನಾ ಚಳವಳಿಗಳಲ್ಲೊಂದಾದ ಅಖಿಲ ಭಾರತ ಕಾಂಗ್ರೆಸ್ ರೀತಿಯಲ್ಲಿ ನಾವು ಕೂಡ ನಮ್ಮ ಪರಿಸ್ಥಿತಿಯನ್ನು ಜಾಗತಿಕ ಹಿನ್ನೆಲೆಯಲ್ಲಿ ತೂಗಿ ನೋಡಲು ಪ್ರಾರಂಭಿಸಿದೆವು.

 ‘ಇತರ ಭಾಗಗಳಲ್ಲಿ ಇರುವ ತಮ್ಮ ಸಹೋದರರು ಇನ್ನೂ ಪರಕೀಯರ ಆಳ್ವಿಕೆಗೆ ಒಳಪಟ್ಟಿದ್ದರೆ ವಿಶ್ವದ ಯಾವುದೇ ಒಂದು ಭಾಗದ ಜನತೆ ನಿಜವಾಗಿಯೂ ಸ್ವತಂತ್ರರಾಗಲು ಸಾಧ್ಯವಿಲ್ಲ’ ಎಂಬ ಒಬ್ಬ ಮಹಾನ್ ರಾಜಕೀಯ ಚಿಂತಕ ಮತ್ತು ಶಿಕ್ಷಕನ (ಗಾಂಧೀಜಿ) ಎಚ್ಚರಿಕೆಯನ್ನು ನಾವು ಶೀಘ್ರವಾಗಿ ಅರಿತೆವು.

 ಫ್ಯಾಶಿಸ್ಟ್ ಇಟಲಿಯು ಇಥಿಯೋಪಿಯಾವನ್ನು ನಾಶಗೊಳಿಸುತ್ತಿದ್ದಾಗ ಆ ದೇಶದ ಜನತೆಯ ಜತೆ ಅಖಿಲ ಭಾರತ ಕಾಂಗ್ರೆಸ್ ತೋರಿಸಿದ ಸೌಹಾರ್ದವನ್ನು ನಮ್ಮ ಜನ ಕೊಂಡಾಡಿದರು. ಹಣೆಪಟ್ಟಿಗೆ ಹೆದರದೆ ಸ್ಪೇನ್ ಗಣರಾಜ್ಯಕ್ಕೆ ಧೈರ್ಯವಾಗಿ ಅಖಿಲ ಭಾರತ ಕಾಂಗ್ರೆಸ್ ತೋರಿಸಿದ ಅನುಕಂಪವನ್ನು ನಾವು ಗಮನಿಸಿದೆವು. 1938ರ ಕಾಂಗ್ರೆಸ್ ವೈದ್ಯಕೀಯ ತಂಡ ಚೀನಾ ದೇಶಕ್ಕೆ ಹೋದದ್ದನ್ನು ಕೇಳಿ ನಾವು ಸ್ಫೂರ್ತಿಗೊಂಡೆವು.

 ಸೋವಿಯತ್ ದೇಶದ ವಿರುದ್ಧ ಅನಾಗರಿಕ ನಾಜಿ ಪಡೆಗಳನ್ನು ಮುನ್ನುಗ್ಗಿಸಲು ಆಶಿಸುತ್ತಿದ್ದ ಮತ್ತು ಅದಕ್ಕಾಗಿ ಪಿತೂರಿ ಮಾಡುತ್ತಿದ್ದ ಸಮಯದಲ್ಲಿ ಪಂಡಿತ್‌ಜಿ ಅವರು ಮುಸೋಲಿನಿಯನ್ನು ಭೇಟಿ ಮಾಡುವ ಒತ್ತಾಯದ ಆಮಂತ್ರಣವನ್ನು ಸಾರ್ವಜನಿಕವಾಗಿ ತಿರಸ್ಕರಿಸಿದರು. ಎರಡು ವರ್ಷಗಳ ನಂತರ ನಾಜಿ ಜರ್ಮನಿಗೆ ಭೇಟಿ ನೀಡಬೇಕೆಂಬ ಆಮಂತ್ರಣವನ್ನು ಅವರು ಮತ್ತೆ ತಿರಸ್ಕರಿಸಿದುದನ್ನು ನಾವು ಗಮನಿಸಿದೆವು. ಅದಕ್ಕೆ ಬದಲಾಗಿ ಕುಪ್ರಸಿದ್ಧ ಮ್ಯೂನಿಕ್ ಒಪ್ಪಂದದಲ್ಲಿ ನಂಬಿ ಮೋಸಹೋದ ಮತ್ತು ಹೊರಗೆ ಹಾಕಲಾದ ಜೆಕೊಸ್ಲೊವಾಕಿಯಾಗೆ ಹೋಗಲು ಅವರು ನಿರ್ಧರಿಸಿದರು.

 ಅಖಿಲ ಭಾರತ ಕಾಂಗ್ರೆಸ್ ಮತ್ತು ಅದರ ನಾಯಕತ್ವದ ಅಂತರ್‌ರಾಷ್ಟ್ರೀಯತೆಯನ್ನು ಗಮನಿಸುತ್ತ ನಾವು ಮಹಾತ್ಮಾ ಗಾಂಧಿ ಅವರ ಅರ್ಥಪೂರ್ಣ ವಿವರಣೆಯನ್ನು ಸ್ಮರಿಸಿದೆವು.

‘‘ಸರಕಾರ ಸೃಷ್ಟಿಸಿದ ಗಡಿಗಳ ಆಚೆ ಇರುವ ನೆರೆ ಹೊರೆಗಳಿಗೆ ನಮ್ಮ ಸೇವೆ ಸಲ್ಲಿಸುವುದಕ್ಕೆ ಯಾವುದೇ ಮಿತಿ ಇಲ್ಲ, ದೇವರು ಎಂದೂ ಗಡಿಗಳನ್ನೂ ಸೃಷ್ಟಿಸಿಲ್ಲ’’. ನಮ್ಮ ಜನ ಮತ್ತು ಭಾರತದ ಜನತೆಯ ಮಧ್ಯದ ನಿಕಟ ಸಂಬಂಧಗಳನ್ನು ಹಾಗೂ ಅಖಿಲ ಭಾರತ ಕಾಂಗ್ರೆಸ್‌ನ ಅಂತರ್‌ರಾಷ್ಟ್ರೀಯ ದೃಷ್ಟಿಕೋನದ ಪರಿಣಾಮವಾಗಿ ನಾವು ಪಡೆದಿರುವ ಪ್ರೋತ್ಸಾಹ, ಸ್ಫೂರ್ತಿ ಮತ್ತು ವಾಸ್ತವ ನೆರವುಗಳನ್ನು ನಮೂದಿಸದೆ ಹೋದಲ್ಲಿ ಅದೊಂದು ಗಂಭೀರ ಕೊರತೆ ಆದೀತು.

 ದಕ್ಷಿಣ ಆಫ್ರಿಕಾದಲ್ಲಿ ಇನ್ನೂ ಇರುವಂಥ ಅತ್ಯಂತ ಹಳೆಯ ರಾಜಕೀಯ ಸಂಘಟನೆ ನತಾಲ್ ಇಂಡಿಯನ್ ಕಾಂಗ್ರೆಸ್ ಅನ್ನು 1894ರಲ್ಲಿ ಮಹಾತ್ಮಾ ಗಾಂಧಿ ಅವರು ಸ್ಥಾಪಿಸಿದರು. ಅವರು ಅದರ ಮೊದಲ ಕಾರ್ಯದರ್ಶಿಗಳಾದರು. ಇಲ್ಲಿ ಇದ್ದಂಥ 21 ವರ್ಷಗಳ ಅವಧಿಯಲ್ಲಿ ದಕ್ಷಿಣ ಆಫ್ರಿಕಾ ಮತ್ತು ಭಾರತದ ಇತಿಹಾಸದ ಮೇಲೆ ಅಗಣಿತ ಪ್ರಭಾವವನ್ನು ಬೀರುವಂಥ ವಿಚಾರ ಮತ್ತು ಹೋರಾಟಗಳ ಹುಟ್ಟಿಗೆ ನಾವು ಸಾಕ್ಷಿ ಆದೆವು. ಹಾಗೆ ನೋಡಿದರೆ ಮಹಾತ್ಮಾ ಗಾಂಧಿ ಅವರು ದಕ್ಷಿಣ ಆಫ್ರಿಕಾದ ನೆಲದ ಮೇಲೆಯೇ ಸತ್ಯಾಗ್ರಹದ ತತ್ತ್ವಜ್ಞಾನವನ್ನು ಕಂಡುಹಿಡಿದು ಆಚರಿಸಲು ಪ್ರಾರಂಭಿಸಿದರು.

 ಮಹಾತ್ಮಾಜಿ ಅವರು ಭಾರತಕ್ಕೆ ಮರಳಿ ಬಂದ ಮೇಲೆ ದಕ್ಷಿಣ ಆಫ್ರಿಕಾದ ಕಾಳಜಿಗಳು ಅಖಿಲ ಭಾರತ ಕಾಂಗ್ರೆಸ್‌ನ ಮತ್ತು ಇಡೀ ಭಾರತ ಜನತೆಯ ಕಾಳಜಿಗಳಾದವು. ಭಾರತ ಸ್ವಾತಂತ್ರದ ಮುನ್ನಾ ದಿನ ಪಂಡಿತ್ ನೆಹರೂ ಹೇಳಿದರು: ‘‘ತುಂಬ ವರ್ಷಗಳ ಹಿಂದೆ ನಾವು ವಿಧಿಯ ಜತೆ ಒಪ್ಪಂದ ಮಾಡಿಕೊಂಡೆವು. ಈಗ ನಾವು ನಮ್ಮ ಪ್ರತಿಜ್ಞೆಯನ್ನು ಈಡೇರಿಸುವ ಸಮಯ ಬಂದಿದೆ. ಮಧ್ಯರಾತ್ರಿಯ ಗಂಟೆ ಬಾರಿಸುವಾಗ, ಜಗತ್ತು ಮಲಗಿರುವಾಗ ಬದುಕು ಮತ್ತು ಸ್ವಾತಂತ್ರಕ್ಕೆ ಭಾರತ ಎಚ್ಚರಗೊಳ್ಳುವುದು. ಈ ಗಂಭೀರ ಕ್ಷಣದಲ್ಲಿ ನಾವು ಭಾರತದ, ಅದರ ಜನತೆಯ ಮತ್ತು ಮಾನವಕುಲದ ಹಿರಿದಾದ ಧ್ಯೇಯಗಳ ಸೇವೆಗೆ ಸಮರ್ಪಣೆ ಮಾಡಿಕೊಳ್ಳುವ ಪ್ರತಿಜ್ಞೆ ಕೈಗೊಳ್ಳುವುದು ಯೋಗ್ಯವಾಗಿದೆ’’.

  ಈ ಪ್ರತಿಜ್ಞೆಯನ್ನು ಅವರು ಕೈಗೊಂಡಾಗ ಪಂಡಿತ್‌ಜಿ ಅವರ ಮನಸ್ಸಿನಲ್ಲಿ ನಮ್ಮ ಹೋರಾಟ ಎಷ್ಟು ಗಮನಾರ್ಹವಾಗಿತ್ತೆಂಬುದನ್ನು ಕಂಡುಕೊಳ್ಳಲು ನಮ್ಮ ಜನ ಬಹಳ ಕಾಲ ಕಾಯಬೇಕಾಗಲಿಲ್ಲ. ಅವರ ಪ್ರತಿಭಾವಂತ ಸಹೋದರಿ ಶ್ರೀಮತಿ ವಿಜಯಲಕ್ಷ್ಮೀ ಪಂಡಿತ್ ಅವರು ವಿಶ್ವಸಂಸ್ಥೆಗೆ ಸ್ವತಂತ್ರ ಭಾರತದ ರಾಯಭಾರಿ ಆದಾಗ ದೃಢ ನಿರ್ಧಾರದಿಂದ ನಮ್ಮ ಹೋರಾಟದೊಂದಿಗೆ ವಿಶ್ವ ಸೌಹಾರ್ದವನ್ನು ಸಾಧಿಸಿದ ಕಾರಣ, ನಮ್ಮ ದೇಶ ಮತ್ತು ನಮೀಬಿಯಾದ ಧ್ವನಿಕಟ್ಟಿದ ಜನತೆಗಷ್ಟೇ ಅಲ್ಲದೆ ವಿಶ್ವಾದ್ಯಂತ ನಮ್ಮಂತೇ ಇರುವ ಇತರ ಜನತೆಯ ಆದರದ ವಕ್ತಾರರಾದರು. ಸ್ವಾತಂತ್ರ ಹೋರಾಟದ ಸಮಯದಲ್ಲಿನ ಕಾಂಗ್ರೆಸ್ ಹೇಳಿಕೆಗಳು ಮತ್ತು ಪ್ರಯತ್ನಗಳನ್ನು ಈಗ ಭಾರತ ಸರಕಾರ ತನ್ನ ನೀತಿಯಾಗಿ ಒಪ್ಪಿಕೊಂಡು ಕಾರ್ಯತತ್ಪರತೆಯಿಂದ ಆಚರಿಸುತ್ತಿದೆ ಎನ್ನುವುದು ನಮಗೆ ಧನ್ಯಭಾವವನ್ನುಂಟು ಮಾಡುವ ವಿಚಾರ.

 1947ರಲ್ಲಿ ಮುಂಬೈನಲ್ಲಿ ನಡೆದ ಏಶ್ಯಾ ಜನತೆಯ ಸಮ್ಮೇಳನ. 1955ರ ಬಾಂಡುಂಗ್ ಸಮ್ಮೇಳನ, ಕಾಮನ್‌ವೆಲ್ತ್ ಚರ್ಚೆಗಳು. ಅಲಿಪ್ತ ಚಳವಳಿ ಹೀಗೆ ಎಲ್ಲೆಡೆ ಮತ್ತು ಎಲ್ಲ ಕಾಲದಲ್ಲಿ ಸ್ವತಂತ್ರ ಭಾರತ ಹಾಗೂ ಪಂಡಿತ್‌ಜಿ ನಮ್ಮ ಹೋರಾಟವನ್ನು ಏಕಪ್ರಕಾರವಾಗಿ ಎತ್ತಿ ಹಿಡಿದರು. ಅದೇ ಹಾದಿಯಲ್ಲಿ, ಕಡಿಮೆಯಾಗದ ಚೈತನ್ಯ ಮತ್ತು ದೃಢ ನಿರ್ಧಾರಗಳಿಂದ ಮುನ್ನಡೆಯುತ್ತಿರುವ, ಅವರಷ್ಟೇ ಉದಾಹರಿಸಬಲ್ಲ ಅವರ ಪುತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರನ್ನು ನೋಡಿ ನಾವು ಇಂದು ಅಳವಾದ ಸ್ಫೂರ್ತಿ ಪಡೆಯುತ್ತಿದ್ದೇವೆ. ಅವರ ಕಾರ್ಯಚಟುವಟಿಕೆಗಳು, ಆಸಕ್ತಿಗಳು ಮತ್ತು ಹೇಳಿಕೆಗಳು ನಮಗೆ ಭಸರವಸೆ ಮತ್ತು ಪ್ರೇರಣೆಯ ನಿರಂತರ ಮೂಲಗಳಾಗಿವೆ.

 ವಿಶ್ವದ ಜನಸಂಖ್ಯೆಯ ಒಂದು ಅತಿಸಣ್ಣ ಭಾಗವಾಗಿರುವ 21 ದಶಲಕ್ಷಗಳಿಗೆ ಮೀರದ ಜನಸಂಖ್ಯೆ ಹೊಂದಿದ್ದ ನಮ್ಮ ದೇಶ 153 ದೇಶಗಳನ್ನೊಳಗೊಂಡ ರಾಷ್ಟ್ರಗಳ ಕುಟುಂಬದಲ್ಲಿ ಒಂದಾಗಿರುವುದನ್ನು ಗಣನೆಗೆ ತೆಗೆದುಕೊಂಡಾಗ, ಭಾರತ ನಮ್ಮ ಹೋರಾಟವನ್ನು ಎತ್ತಿಹಿಡಿಯುವುದು ಹೆಚ್ಚು ಅರ್ಥ ಗರ್ಭಿತವಾಗುತ್ತದೆ. ಅದೂ ಅಲ್ಲದೆ, ಘರ್ಷಣೆ, ಯುದ್ಧಗಳು, ಕ್ಷಾಮ, ಪೌಷ್ಟಿಕ ಆಹಾರದ ಕೊರತೆ, ರೋಗರುಜಿನಗಳು, ಬಡತನ, ನಿರಕ್ಷರತೆ ಮತ್ತು ದ್ವೇಷ ಇವೆಲ್ಲವುಗಳಿಂದ ಸುತ್ತುವರಿದು ಅಲ್ಲೋಲಕಲ್ಲೋಲಗೊಂಡಿರುವ ಜಗತ್ತಿನ ಹಿನ್ನೆಲೆಯಲ್ಲಿ ನಮ್ಮ ಕಷ್ಟಕಾರ್ಪಣ್ಯಗಳುದೊಡ್ಡದಾಗಿದ್ದರೂ ಚಿಕ್ಕದಾಗಿ ಕಾಣುವುವು.

  ವಿಶ್ವದ ಎಲ್ಲ ಮೂಲೆಗಳಿಂದ ಮಾನವ ನಿರ್ಮಿತ ನೋವಿನ ಕೊನೆಯ ಕುರುಹು ಅಳಿದು ಹೋಗುವ ದಿನವರೆಗೂ ವಿಶ್ವದ ಯಾವುದೇ ಭಾಗವು ತನ್ನಷ್ಟಕ್ಕೇ ಅವುಗಳಿಂದ ಮುಕ್ತ ಎಂದು ತಿಳಿದುಕೊಳ್ಳುವ ಧೈರ್ಯ ಮಾಡಕೂಡದು ಮತ್ತು ನಮ್ಮ ಸಮಸ್ಯೆಗಳು. ಅವೆಷ್ಟೇ ತೀವ್ರವಾಗಿರಲಿ, ಮಾನವಕುಲದ ಸಮಸ್ಯೆಗಳ ಭಾಗ ಎಂಬುದನ್ನು ನಮಗೆ ನೆನಪು ಮಾಡಿಕೊಡುವ ಪಾತ್ರವನ್ನು ಜಾಗತಿಕ ವ್ಯವಹಾರಗಳಲ್ಲಿ ಭಾರತ ಉದಾಹರಿಸಲು ಯೋಗ್ಯವಾಗಿ ನಿರ್ವಹಿಸಿದೆ. ಬೃಹತ್ ಗಾತ್ರದ್ದಾಗಿದ್ದರೂ ಆ ನೋವನ್ನು ಹಂಚಿಕೊಂಡ ಜ್ಞಾನ ಮನುಕುಲ ದೊಂದಿಗೆ ನಮ್ಮ ಏಕತೆಯನ್ನು ಹಾಗೂ ಅದರಿಂದ ಉದ್ಭವಿಸುವಂಥ ಜಾಗತಿಕ ಜವಾಬ್ದಾರಿಗಳನ್ನು ಕೂಡ ಜೀವಂತವಾಗಿ ಇಡುತ್ತದೆ. ನಮ್ಮ ಭವಿಷ್ಯದಲ್ಲಿ ವಿಶ್ವಾಸ ಮತ್ತು ನಂಬಿಕೆಯನ್ನು ಬಲಗೊಳಿಸುವಲ್ಲಿ ಸಹಾಯಕವಾಗಿದೆ.

 ಪುನಃ ಪಂಡಿತ್‌ಜಿ ಅವರು ಕಂಡ ಲೋಕವನ್ನು ಇನ್ನೊಮ್ಮೆ ಅವಲೋಕಿಸಿದಾಗ ಘರ್ಷಣೆ, ದ್ವೇಷ ಮತ್ತು ಹಿಂಸೆಗಳಿಂದ ತುಂಬಿದ ಪ್ರಪಂಚದಲ್ಲಿ ಮಾನವ ಗುರಿಯಲ್ಲಿ ನಂಬಿಕೆ ಇಡುವುದು ಬೇರೆ ಎಲ್ಲಾ ಕಾಲಕ್ಕಿಂತ ಈಗ ಹೆಚ್ಚು ಅಗತ್ಯವಾಗಿದೆ. ನಾವು ಯಾವ ಭವಿಷ್ಯಕ್ಕಾಗಿ ದುಡಿಯುತ್ತಿದ್ದೇವೊ ಅದು ಮಾನವಕುಲಕ್ಕೆ ಸಂಪೂರ್ಣ ಭರವಸೆ ನೀಡುವಂಥದ್ದಾಗಿದ್ದ ಪಕ್ಷದಲ್ಲಿ ವರ್ತಮಾನದ ಅನಿಷ್ಟಗಳ ಬಗ್ಗೆ ಹೆಚ್ಚು ತಲೆಕೆಡಿಸಿ ಕೊಳ್ಳಬೇಕಾಗಿಲ್ಲ. ಆ ಭವಿಷ್ಯಕ್ಕಾಗಿ ದುಡಿಯುವುದೇ ಸಮರ್ಥನೀಯ.

 ಈ ತಿಳಿವಳಿಕೆ ಮತ್ತು ನಂಬಿಕೆ ಬಗೆಗಿನ ಗಾಢ ನಿಷ್ಠೆಯಲ್ಲಿ ನಮ್ಮ ಸ್ನೇಹಿತರ ನಿಷ್ಠೆ ಮತ್ತು ಸೌಹಾರ್ದದಲ್ಲಿ ನಮ್ಮದೇ ಶಕ್ತಿ ದೃಢನಿಶ್ಚಯ ಮತ್ತು ಹೋರಾಟದ ಬಗೆಗಿನ ನಂಬಿಕೆಯಲ್ಲಿ ನಾವು ಮುಂದುವರಿಯುತ್ತಿದ್ದೇವೆ. ಭಾರತದ ಜನತೆಯ ಜತೆ. ಇಡೀ ಜಗತ್ತಿನ ಜತೆ ಹೊಸತೊಂದು ನಾಳೆಯನ್ನು ಸೃಷ್ಟಿ ಮಾಡುವುದಕ್ಕಾಗಿ ನಾವು ಸೇರುತ್ತಿದ್ದೇವೆ. ಈ ನಾಳೆ, ರವೀಂದ್ರನಾಥ್ ಟಾಗೋರ್ ಅವರು ‘ಗೀತಾಂಜಲಿ’ಯಲ್ಲಿ ಕನಸು ಕಂಡ ನಾಳೆಯನ್ನು ವಿಶ್ವದ ಜನತೆಗಾಗಿ ವಾಸ್ತವ ಮಾಡಲು ಪ್ರಯತ್ನಿಸುವಂಥದ್ದು:

‘‘ಎಲ್ಲಿ ಮನಸಿರುವುದೋ ಭಯವಿಲ್ಲದೆ.

ತಲೆ ಎತ್ತಿಹುದೊ. ಜ್ಞಾನ ಎಲ್ಲಿ ಮುಕ್ತವಾಗಿರುವುದೊ.

ಎಲ್ಲಿ ಸಂಕುಚಿತ ನಾಡಗೋಡೆಗಳಿಂದ

ತಿರೆ ತುಂಡು ತುಂಡಾಗಿಲ್ಲವೊ.

ಎಲ್ಲಿ ಸತ್ಯದಾಳದಿಂದ

ಮಾತುಗಳು ಹೊರಹೊಮ್ಮುವವೊ.

ಎಲ್ಲಿ ಪೂರ್ಣತೆಯೆಡೆಗೆ

ಅವಿಶ್ರಾಂತ ಹೆಣಗು

ಕೈಚಾಚುತ್ತಿದೆಯೋ.

ಎಲ್ಲಿ ವಿವೇಕದ ನಿಚ್ಚಳ ಹೊಳೆ

ಜಡರೂಢಿಯ ಮಂಕು ಕವಿದ

ಮರುಭೂಮಿಯ ಮರಳಲ್ಲಿ

ದಾರಿ ಕಳೆದು ಕೊಂಡಿಲ್ಲವೊ.

ಎಲ್ಲಿ ಇವೆಲ್ಲ ಸದಾ

ವಿಶಾಲಗೊಳ್ಳುವ ವಿಚಾರ,

ಕ್ರಿಯೆಯೆಡೆಗೆ ಮನವ ಮುನ್ನಡೆಸುವವೊ,

ಆ ಸ್ವಾತಂತ್ರದ ಸ್ವರ್ಗದಲ್ಲಿ

ತಂದೆ- ನನ್ನ ನಾಡು ಎಚ್ಚರಗೊಳ್ಳಲಿ.

ನಿಮ್ಮ ವಿಶ್ವಾಸದ

ನೆಲ್ಸನ್ ಮಂಡೇಲಾ.

(ನಂತರದ ಮಾತು: ಮೇಲಿನ ದಿನಾಂಕ ತಿಳಿಸುವಂತೆ ಈ ಪತ್ರವನ್ನು ತಮಗೆ 3ನೇ ಆಗಸ್ಟ್ 1980 ರಂದು ಕಳಿಸುವುದಕ್ಕಾಗಿ ರಾಬ್ಬೆನ್ ದ್ವೀಪದ ಕಮಾಂಡಿಂಗ್ ಆಫೀಸರ್‌ಗೆ ಕೊಡಲಾಯಿತು. ಈ ಕೆಲಸವನ್ನು ತ್ವರಿತವಾಗಿ ಮಾಡಲು ಕೂಡ ಹೇಳಿದ್ದೆ.

ತಮಗೆ ಈ ಪತ್ರ ಕಳಿಸಿದ್ದಾಯಿತೆ ಎಂದು ಅಂದಿನಿಂದ ಪದೇ ಪದೆ ಜೈಲು ಇಲಾಖೆಯಲ್ಲಿ ವಿಚಾರಿಸಿದೆ. ಡಿಸೆಂಬರ್ ಕೊನೆಯ ವಾರದಲ್ಲಿ ‘‘ಸಾಂಸ್ಕೃತಿಕ ಸಂಬಂಧಗಳ ಭಾರತೀಯ ಮಂಡಳಿಗೆ ಕೃತಜ್ಞತೆಯನ್ನು ಸಲ್ಲಿಸಬಹುದು; ಆದರೆ ಆ ಪತ್ರದಲ್ಲಿ ಉಪಯೋಗಿಸಿರುವ ಮಾತುಗಳಿಂದಲ್ಲ’’ ಎಂದು ನನಗೆ ಉತ್ತರ ಬಂದಿತು. ಆ ಕಾರಣಕ್ಕಾಗಿ ಈ ಪತ್ರ ನಿಮಗೆ ತಲುಪಿಸಲು ನನ್ನದೇ ಆದ ಮಾರ್ಗವನ್ನು ಉಪಯೋಗಿಸಲು ನಿರ್ಧರಿಸಿದೆ.)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top