ಬಿರುದಿಲ್ಲದ ಭಾರತ ರತ್ನ ಧ್ಯಾನ್ ಚಂದ್ | Vartha Bharati- ವಾರ್ತಾ ಭಾರತಿ

ಬಿರುದಿಲ್ಲದ ಭಾರತ ರತ್ನ ಧ್ಯಾನ್ ಚಂದ್

ಆಗಸ್ಟ್ 29 ಭಾರತದ ರಾಷ್ಟ್ರೀಯ ಕ್ರೀಡಾದಿನ. ಭಾರತದ ಕ್ರೀಡಾ ಇತಿಹಾಸದಲ್ಲಿ, ರಾಷ್ಟ್ರೀಯ ಕ್ರೀಡೆಯೆಂದು ಕರೆಯಿಸಿಕೊಳ್ಳುವ ಹಾಕಿ ಆಟಕ್ಕೆ ಭದ್ರಬುನಾದಿ ಹಾಕಿಕೊಟ್ಟ ಮಹನೀಯ, ಹಾಕಿ ಆಟದ ಮಾಂತ್ರಿಕ, ಗಾರುಡಿಗ, ಜಾದೂಗಾರ, ದಂತಕತೆ ಎಂದು ಬಿರುದಾಂಕಿತರಾದ ಮೇಜರ್ ಧ್ಯಾನ್ ಚಂದ್ ಸಿಂಗ್ ರವರ ಜನುಮದಿನ. ಇಷ್ಟನ್ನೇ ಹೇಳಿದರೆ ಮೂರು ಒಲಿಂಪಿಕ್ ಚಿನ್ನವನ್ನು ಗಳಿಸಿಕೊಟ್ಟ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಒಟ್ಟು 400ಕ್ಕೂ ಹೆಚ್ಚು ಗೋಲುಗಳನ್ನು ದಾಖಲಿಸಿದ ಧ್ಯಾನ್ ಚಂದ್ ರ ಹೆಗ್ಗಳಿಕೆಯನ್ನು ತಿಳಿಸಿದಂತಾಗುವುದಿಲ್ಲ. ಭಾರತದಲ್ಲಿ ಹಾಕಿ ಕ್ರೀಡೆ ಬೆಳೆದ ಹಾದಿ ಮತ್ತು ಧ್ಯಾನ್ ಚಂದ್‌ರ ಜೀವನಯಾನವನ್ನು ತಿಳಿಯುತ್ತಲೇ, ಈ ಕ್ರೀಡೆಗೆ ಅವರು ನೀಡಿದ ಕಾಣಿಕೆಯನ್ನು ತಿಳಿಯೋಣ.

ಇತ್ತೀಚೆಗೆ ಇಂಡೋನೇಶಿಯಾ ದಲ್ಲಿ ನಡೆದ ಏಶಿಯನ್ ಗೇಮ್ಸ್ ನಲ್ಲಿ ನಮ್ಮ ಹೆಮ್ಮೆಯ ಭಾರತದ ಮಹಿಳಾ ಹಾಕಿ ತಂಡ ರಜತ ಪದಕವನ್ನು ಹಾಗೂ ಪುರುಷರ ತಂಡ ಕಂಚಿನ ಪದಕವನ್ನು ಜಯಿಸಿದ ಈ ಸಂದರ್ಭದಲ್ಲಿ, ಭಾರತದಲ್ಲಿ ಹಾಕಿ ಆಟ ವನ್ನು ಉತ್ತುಂಗಕ್ಕೇರಿಸಿದ ಮಹನೀಯ ರನ್ನು ನೆನೆಯುವುದು ಸಮಂಜಸವೆಂದು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇನೆ.

 1936ರ ಬೆರ್ಲಿನ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಭಾರತದ ಹಾಕಿ ತಂಡ

2018ರ ಆಗಸ್ಟ್ 29 ಈಗಾಗಲೇ ಕಳೆದು ಹೋಗಿದೆ. ಈ ದಿನವನ್ನು ಜನಸಾಮಾನ್ಯರು ಎಷ್ಟು ಮಂದಿ ನೆನಪಿಸಿ ಕೊಳ್ಳುತ್ತಾರೋ ತಿಳಿಯದು. ಕ್ರೀಡಾಸಕ್ತರು, ಕ್ರೀಡಾಭಿಮಾನಿಗಳು ಹಾಗೂ ಕ್ರೀಡಾಪಟುಗಳಂತೂ ನೆನಪಿನಲ್ಲಿಟ್ಟು ಕೊಳ್ಳಬೇಕಾದ ದಿನವೆಂದು ನನ್ನ ಭಾವನೆ. ಏಕೆಂದರೆ, ಈ ಆಗಸ್ಟ್ 29 ಭಾರತದ ರಾಷ್ಟ್ರೀಯ ಕ್ರೀಡಾದಿನ. ಭಾರತದ ಕ್ರೀಡಾ ಇತಿಹಾಸದಲ್ಲಿ, ರಾಷ್ಟ್ರೀಯ ಕ್ರೀಡೆಯೆಂದು(?) ಕರೆಯಿಸಿಕೊಳ್ಳುವ ಹಾಕಿ ಆಟಕ್ಕೆ ಭದ್ರಬುನಾದಿ ಹಾಕಿಕೊಟ್ಟ ಮಹನೀಯ, ಹಾಕಿ ಆಟದ ಮಾಂತ್ರಿಕ, ಗಾರುಡಿಗ, ಜಾದೂಗಾರ, ದಂತಕತೆ ಎಂದು ಬಿರುದಾಂಕಿತರಾದ ಮೇಜರ್ ಧ್ಯಾನ್ ಚಂದ್ ಸಿಂಗ್ ರವರ ಜನುಮದಿನ. ಇಷ್ಟನ್ನೇ ಹೇಳಿದರೆ ಮೂರು ಒಲಿಂಪಿಕ್ ಚಿನ್ನವನ್ನು ಗಳಿಸಿಕೊಟ್ಟ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಒಟ್ಟು 400ಕ್ಕೂ ಹೆಚ್ಚು ಗೋಲುಗಳನ್ನು ದಾಖಲಿಸಿದ ಧ್ಯಾನ್ ಚಂದ್ ರ ಹೆಗ್ಗಳಿಕೆಯನ್ನು ತಿಳಿಸಿದಂತಾಗುವುದಿಲ್ಲ. ಭಾರತದಲ್ಲಿ ಹಾಕಿ ಕ್ರೀಡೆ ಬೆಳೆದ ಹಾದಿ ಮತ್ತು ಧ್ಯಾನ್ ಚಂದ್‌ರ ಜೀವನಯಾನವನ್ನು ತಿಳಿಯುತ್ತಲೇ, ಈ ಕ್ರೀಡೆಗೆ ಅವರು ನೀಡಿದ ಕಾಣಿಕೆಯನ್ನು ತಿಳಿಯೋಣ.

ಭಾರತಕ್ಕೆ ಹಾಕಿಯ ಪರಿಚಯವನ್ನು ದಾಖಲಿಸುವುದಾದರೆ, 19ನೇ ಶತಮಾನದಲ್ಲಿ ಬ್ರಿಟಿಶ್ ಸಾಮ್ರಾಜ್ಯದ ಆಳ್ವಿಕೆಯ ಕಾಲದಲ್ಲಿ ಹಾಕಿ ಕ್ರೀಡೆಯು ಭಾರತದ ಉಪಖಂಡದಲ್ಲಿ ಹೆಚ್ಚು ಪ್ರಚಲಿತವಾಯಿತು. 1885ರಲ್ಲಿ ಮೊದಲ ಬಾರಿಗೆ ಕೋಲ್ಕತಾದಲ್ಲಿ ಹಾಕಿಯ ಕ್ಲಬ್ ಒಂದು ಪ್ರಾರಂಭವಾಯಿತು. ನಂತರ ಬಾಂಬೆ ಮತ್ತು ಪಂಜಾಬ್ ಗಳಲ್ಲಿ ಆರಂಭಗೊಂಡವು.1895ರ ತನಕ ಯಾವುದೇ ಪ್ರಮುಖ ಹಾಕಿ ಸ್ಪರ್ಧೆಗಳು ಏರ್ಪಟ್ಟಿರಲಿಲ್ಲ. ಭಾರತದಲ್ಲಿ ಹಾಕಿ ಕ್ರೀಡೆಗೆ ಒಂದು ಪ್ರಮುಖವಾದ ಸಂಸ್ಥೆಯಿರಲಿಲ್ಲ.1925ರ ನವೆಂಬರ್ 7 ರಂದು ಭಾರತದ ಹಾಕಿಯ ಎಲ್ಲಾ ಸಂಘಸಂಸ್ಥೆಗಳು ಗ್ವಾಲಿಯರ್‌ನಲ್ಲಿ ಸಭೆ ಸೇರಿದವು. ಈ ಸಭೆಯ ಫಲಿತಾಂಶವೇ ಭಾರತ ಹಾಕಿ ಸಂಯುಕ್ತ ಸಂಘ (Indian Hockey Federation-IHF) ನ ಹುಟ್ಟು. ಈ IHF ನ ಉದಯವು ನಮ್ಮ ದೇಶೀ ಆಟಗಾರರಿಗೆ ಜಾಗತಿಕ ಮಟ್ಟದ ಅನುಭವವಾಗಲು ವೇದಿಕೆಯಾಯಿತು. ಭಾರತದ ಹಾಕಿತಂಡದ ಸದಸ್ಯರು ಮೊತ್ತಮೊದಲ ಅಂತರ್‌ರಾಷ್ಟ್ರೀಯ ಸ್ಪರ್ಧಾಕೂಟದ ಪ್ರಯಾಣವನ್ನು ನ್ಯೂಝಿಲೆಂಡ್‌ಗೆ ಬೆಳೆಸಿದರು. ಇಲ್ಲಿಯೇ ನಮ್ಮ ಕಥಾನಾಯಕ ಮೇಜರ್ ಧ್ಯಾನ್ ಚಂದ್ ರವರ ಕೌಶಲ್ಯ ಬೆಳಕಿಗೆ ಬಂತು. ಅವರ ಕೈಚಳಕ ಎದುರಾಳಿ ತಂಡವನ್ನು ತಬ್ಬಿಬ್ಬುಗೊಳಿಸಿ ದಿಗ್ಭ್ರಮೆಗೊಳಪಡಿಸಿತು. ನಂತರದ ದಿನಗಳಲ್ಲಿ ಭಾರತದ IHF , ಅಂತರ್‌ರಾಷ್ಟ್ರೀಯ ಹಾಕಿ ಸಂಯುಕ್ತ ಸಂಘ (International Hockey Federation)

 ದ ಸದಸ್ಯತ್ವಕ್ಕೆ ಅರ್ಜಿಸಲ್ಲಿಸಿ, 1927ರಲ್ಲಿ ಅನುಮೋದನೆಯನ್ನು ಪಡೆಯಿತು. ಇದರಿಂದ1928ರ ಆಮ್ ಸ್ಟರ್ ಡ್ಯಾಮ್ (Amsterdam) ನ ಬೇಸಿಗೆ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಹೊಂದಿ ದಾಖಲೆ ಬರೆಯುವತ್ತ ಹೆಜ್ಜೆ ಇಟ್ಟಿತು.1928 -1956ರ ಅವಧಿಯಲ್ಲಿ ಸತತವಾಗಿ 6 ಚಿನ್ನದ ಪದಕಗಳನ್ನು ಗೆದ್ದ ಭಾರತ ಸಾರ್ವಕಾಲಿಕ ದಾಖಲೆಯನ್ನು ಬರೆಯಿತು. ಇದರಲ್ಲಿ ಮೊದಲ ಮೂರು, 1928(Amsterdam),1932(Los Angeles) ಮತ್ತು 1936(Berlin) ಒಲಿಂಪಿಕ್ಸ್ ಗಳಲ್ಲಿನ ಚಿನ್ನದಪದಕಗಳ ಗೆಲುವಿನ ರೂವಾರಿ ಯುಗಪುರುಷ ಮೇಜರ್ ಧ್ಯಾನ್ ಚಂದ್. ಇನ್ನು ಧ್ಯಾನ್ ಚಂದ್‌ರ ಜೀವನಚರಿತ್ರೆಯ ಜೊತೆಯಲ್ಲಿ ಭಾರತದ ಹಾಕಿ ತಂಡದ ಒಲಿಂಪಿಕ್ಸ್ ಯಶೋಗಾಥೆಯನ್ನು ಅರಿಯೋಣ.

ಧ್ಯಾನ್ ಚಂದ್ ಸಿಂಗ್1905ರ ಆಗಸ್ಟ್ 29ರಂದು ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ಸಮೇಶ್ವರ್ ದತ್ ಸಿಂಗ್ ಮತ್ತು ಶಾರದಾ ಸಿಂಗ್ ದಂಪತಿಯ ಜ್ಯೇಷ್ಠ ಪುತ್ರನಾಗಿ ಜನಿಸಿದರು. ಅವರ ತಮ್ಮಂದಿರು ರೂಪ್ ಸಿಂಗ್ ಮತ್ತು ಮೂಲ್ ಸಿಂಗ್. ತಂದೆ ಬ್ರಿಟಿಷ್ ಸೈನ್ಯದಲ್ಲಿ ಕೆಲಸಮಾಡುತ್ತಿದ್ದು ಅಲ್ಲಿಯೇ ಹಾಕಿ ಆಟ ಆಡುತ್ತಿ ದ್ದರು. ತಂದೆಯವರ ನಿರಂತರ ವರ್ಗಾವಣೆಯ ಬವಣೆಯಲ್ಲಿ ಧ್ಯಾನ್ ಚಂದ್ 6ನೇ ವರ್ಷಕ್ಕೆ ಶಾಲೆಯನ್ನು ಬಿಡಬೇಕಾಯಿತು. ನಂತರ ತಂದೆಯವರು ಝಾನ್ಸಿಯಲ್ಲಿ ನೆಲೆ ನಿಂತರು (ಮುಂದೆ 1932ರಲ್ಲಿ ಗ್ವಾಲಿಯರ್‌ನ ವಿಕ್ಟೋರಿಯ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿದರು). ಧ್ಯಾನ್ ಚಂದ್ ತಮ್ಮ ಆತ್ಮಕಥೆ"Goal'' ನಲ್ಲಿ ಹೇಳಿರುವಂತೆ ಅವರು ಮಿಲಿಟರಿಗೆ ಸೇರುವ ಮೊದಲು ಯಾವುದೇ ಆಟಗಳಲ್ಲಿ ಆಸಕ್ತಿ ತೋರಿರಲಿಲ್ಲ. ಕುಸ್ತಿ(wrestling)ಯಲ್ಲಿ ಒಲವಿದ್ದರೂ ಹೆಚ್ಚಿನ ಆಸ್ಥೆ ಇರಲಿಲ್ಲ. ಆಗಾಗ ಸ್ನೇಹಿತರೊಡನೆ ಆಟವಾಡುತ್ತಿದ್ದರೂ ಹಾಕಿಯಲ್ಲಿ ಭಾಗವಹಿಸಿದ ನೆನಪಿರಲಿಲ್ಲ.

ತಮ್ಮ 16ನೇ ವಯಸ್ಸಿನಲ್ಲಿ ಮಿಲಿಟರಿ ಸೇರಿದ ಧ್ಯಾನ್ ಚಂದ್, ಅಲ್ಲಿ ಹಾಕಿಯಲ್ಲಿ ಹೆಚ್ಚಾಗಿ ತೊಡಗಿಸಿ ಕೊಂಡರು. ತಮ್ಮ ಕೆಲಸದ ಅವಧಿ ಮುಗಿದನಂತರ ಸರಿ ರಾತ್ರಿಯವರೆವಿಗೂ ಹಾಕಿ ಆಡುವ ಅಭ್ಯಾಸವನ್ನಿಟ್ಟುಕೊಂಡರು. ಒಳ್ಳೆಯ ಆಟಗಾರನೆಂದು ಗುರುತಿಸಿಕೊಂಡ ಅವರು 1922ರಲ್ಲಿ ಭೂಸೈನ್ಯದ ಹಾಕಿ ಕ್ರೀಡಾಕೂಟದಲ್ಲಿ ಪಾಲ್ಗೊಂಡರು. ಅಲ್ಲಿಯ ಅವರ ಆಟದ ಕೌಶಲ್ಯದ ಫಲಿತಾಂಶವಾಗಿ ಭಾರತೀಯ ಸೈನ್ಯದ ಹಾಕಿ ತಂಡದಲ್ಲಿ ಸೇರ್ಪಡೆಯಾದರು. ಧ್ಯಾನ್ ಚಂದ್‌ರವರಿಗೆ ಸೈನ್ಯದಲ್ಲಿ ಲಾನ್ಸ್ ನಾಯಕ್(Lance Naik) ಪದವಿಗೆ ಭಡ್ತಿದೊರೆಯಿತು. 1908ರ ಲಂಡನ್ ಒಲಿಂಪಿಕ್ಸ್ ನಲ್ಲಿ ಹಾಕಿಗೆ ಮಾನ್ಯತೆ ಸಿಕ್ಕಿದ್ದರೂ, 1920ರ ಆಂಟ್ವರ್ಪ್ ಒಲಿಂಪಿಕ್ಸ್ ಕ್ರೀಡಾಕೂಟದ ನಂತರ ಕೈಬಿಡಲಾಗಿತ್ತು. ಎಂಟುವರುಷಗಳ ತರುವಾಯ ಅಂದರೆ 1928ರ ಅಮ್ ಸ್ಟರ್ ಡಾಮ್ ಒಲಿಂಪಿಕ್ಸ್‌ನಲ್ಲಿ ಹಾಕಿ ಕ್ರೀಡೆಯನ್ನು ಮರು ಸೇರ್ಪಡೆಗೊಳಿಸಲಾಯಿತು.

1928ರ ಒಲಿಂಪಿಕ್ಸ್ ಹಾಕಿ ತಂಡಕ್ಕೆ ಆಕ್ಸ್ ಫರ್ಡ್‌ನಲ್ಲಿ ಓದುತ್ತಿದ್ದ ರಾಂಚಿಯ ಹುಡುಗ ಜೈಪಾಲ್ ಸಿಂಗ್ ನಾಯಕನಾಗಿ ಆಯ್ಕೆಯಾದನು. ಇವನೊಟ್ಟಿಗೆ ಬ್ರಿಟನ್‌ನಲ್ಲಿಯೇ ವಾಸವಾಗಿದ್ದ ಭಾರತೀಯರಾದ ಎಸ್.ಎಂ. ಯೂಸುಫ್(SM Yusuf) ಮತ್ತು ಪಟೌಡಿಯ ನವಾಬ(Nawab of Pataudi Sr.) ಆಯ್ಕೆಯಾಗಿದ್ದರು.ಒಟ್ಟು 15 ಜನರ ತಂಡವನ್ನು ಗುರುತಿಸಲಾಗಿತ್ತು.

1928ರ ಮಾರ್ಚ್ 10 ರಂದು ‘‘ಕೇಸರ್ - ಇ - ಹಿಂದ್’’ ಹಡಗಿನಲ್ಲಿ ಆಮ್ ಸ್ಟರ್ ಡಾಮ್ ಗೆ ಪ್ರಯಾಣ ಬೆಳೆಸಿದ ಭಾರತೀಯ ಒಲಿಂಪಿಕ್ಸ್ ಹಾಕಿತಂಡವನ್ನು ಬೀಳ್ಕೊಡಲು ಕೇವಲ ಮೂರು ಮಂದಿ ಮಾತ್ರ ಹಾಜರಿದ್ದರು. ಅವರಲ್ಲಿ IHF ನ ಪ್ರೆಸಿಡೆಂಟ್, ವೈಸ್ ಪ್ರೆಸಿಡೆಂಟ್ ಮತ್ತು ಪತ್ರಕರ್ತರೊಬ್ಬರು.

ಹೀಗೆ ಪ್ರಯಾಣ ಬೆಳೆಸಿದ ಹಡಗು, ಲಂಡನ್‌ನ ಬಂದರಿನಲ್ಲಿ 20 ದಿನಗಳ ವಾಸ್ತವ್ಯವನ್ನು ಹೂಡಬೇಕಾಯಿತು. ಇದರಿಂದ ಭಾರತೀಯ ಹಾಕಿ ತಂಡಕ್ಕೆ ಲಂಡನ್ನಿನ ಕ್ಲಬ್ ತಂಡಗಳ ಎದುರು ಕೆಲವು ಪಂದ್ಯಗಳನ್ನು ಆಡುವ ಅವಕಾಶ ಮತ್ತು ಅನಿವಾರ್ಯತೆ ಎದುರಾಗುತ್ತದೆ. ಅಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲೂ ಜಯಗಳಿಸಿದ ಭಾರತೀಯ ತಂಡಕ್ಕೆ ಪ್ರಶಂಸೆಯ ಸುರಿಮಳೆಯಾಗುತ್ತದೆ. ಮೇ 17 ರಂದು ನಡೆಯುವ ಆಸ್ಟ್ರಿಯಾ ಎದುರಿನ ಮೊದಲ ಒಲಿಂಪಿಕ್ಸ್ ಪಂದ್ಯದಲ್ಲಿ 6-0 ಅಂತರದಲ್ಲಿ ಭಾರತ ತಂಡ ಅತ್ಯದ್ಭುತ ಜಯಪಡೆಯುತ್ತದೆ. ಈ ಪಂದ್ಯದ ಮೊದಲಾರ್ಧದಲ್ಲಿಯೇ ಧ್ಯಾನ್ ಚಂದ್ ಹ್ಯಾಟ್ರಿಕ್ ಗೋಲ್ ದಾಖಲಿಸಿ ಒಟ್ಟು 4 ಗೋಲುಗಳನ್ನು ಗಳಿಸುತ್ತಾರೆ. ಮೊದಲನೇ ಪಂದ್ಯ ನಡೆದ ಮರುದಿನವೇ ಏರ್ಪಟ್ಟ ಎರಡನೇ ಪಂದ್ಯದಲ್ಲಿ ಭಾರತ ತಂಡವು ಯೂರೋಪಿನ ಬಲಿಷ್ಠ ಬೆಲ್ಜಿಯಂ ವಿರುದ್ಧ 9-0 ಅಂತರದಲ್ಲಿ ಜಯಪಡೆದು ಕ್ವಾರ್ಟರ್ ಫೈನಲ್ ಗೆ ಪ್ರವೇಶ ಪಡೆಯುತ್ತದೆ. ಈ ಪಂದ್ಯದಲ್ಲಿ ಧ್ಯಾನ್ ಚಂದ್ 1 ಗೋಲನ್ನು ಹೊಡೆದರೆ, ಫಿರೋಝ್ ಖಾನ್ -5 , ಫ್ರೆಡರಿಕ್ ಸೀಮನ್ -2 ಹಾಗೂ ಜಾರ್ಜ್ ಮಾರ್ಟಿನ್ಸ್-1 ಗೋಲನ್ನು ದಾಖಲಿಸುತ್ತಾರೆ. ಮೇ20 ರಂದು ನಡೆದ ಡೆನ್ಮಾರ್ಕ್ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ, ಡೆನ್ಮಾರ್ಕ್ ನ ಗೋಲ್ ಕೀಪರ್ ಧ್ಯಾನ್ ಚಂದ್ ರವರ ಹೊಡೆತಗಳನ್ನು ಸಾಕಷ್ಟು ತಡೆದರೂ, ಭಾರತ ತಂಡವು 5-0 ರ ಅಂತರದಲ್ಲಿ ಜಯದಾಖಲಿಸುವಲ್ಲಿ ಯಶಸ್ವಿಯಾಗುತ್ತದೆ. ಭಾರತದ ಗೋಲ್ ಕೀಪರ್ ಅಲನ್‌ನಂತೂ ಶ್ರೇಷ್ಠ ತಡೆಗೋಡೆಯಂತೆ ಪ್ರಕಾಶಿಸಿರುತ್ತಾನೆ. ಗಳಿಸಿದ 5 ಗೋಲುಗಳಲ್ಲಿ 4 ಧ್ಯಾನ್ ಚಂದ್ ರವರ ಪಾಲಾಗಿದ್ದರೆ, ಉಳಿದ ಒಂದು ಫ್ರೆಡರಿಕ್ ಸೀಮನ್‌ನ ಪಾಲಾಗಿರುತ್ತದೆ. ಸ್ವಿಟ್ಜರ್ ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು 6-0 ಗೋಲುಗಳ ಜಯಪಡೆದು ಫೈನಲ್ ಪಂದ್ಯಕ್ಕೆ ದಾಪುಕಾಲಿಕ್ಕುತ್ತದೆ. ಈ ಪಂದ್ಯದಲ್ಲಿ ಧ್ಯಾನ್ ಚಂದ್-3, ಮೋರಿಸ್ ಗೇಟ್ಲಿ- 2 ಮತ್ತು ಮಾರ್ಟಿನ್ಸ್ -1 ಗೋಲನ್ನು ಗಳಿಸುತ್ತಾರೆ.

ಮೇ 26, 1928 ರಂದು ನಡೆದ ಫೈನಲ್ ಪಂದ್ಯ ತವರಿನ ಹಾಲೆಂಡ್ (ನೆದರ್ಲೇಂಡ್) ತಂಡದ ವಿರುದ್ಧವಾಗಿರುತ್ತದೆ. ಭಾರತ ತಂಡದ ಪ್ರಮುಖ ಆಟಗಾರರು ಜ್ವರ ಮತ್ತಿತರ ಕಾಯಿಲೆಗೆ ತುತ್ತಾಗಿರುತ್ತಾರೆ. ಇದಕ್ಕೆ ಧ್ಯಾನ್ ಚಂದ್ ಸಹ ಹೊರತಲ್ಲ. ಆದರೆ ಧ್ಯಾನ್ ಚಂದ್ ಕಾಯಿಲೆಯ ನಡುವೆಯೇ ಆಟಕ್ಕಿಳಿಯುತ್ತಾರೆ. ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಮುನ್ನುಗ್ಗಿದ ಭಾರತ ತಂಡ 3-0 ಅಂತರದ ಗೋಲುಗಳ ಗೆಲುವಿನೊಂದಿಗೆ ಆಡಿದ ಮೊತ್ತಮೊದಲ ಒಲಿಂಪಿಕ್ಸ್ ಕ್ರೀಡೆಯಲ್ಲಿಯೇ ಚಿನ್ನದ ಪದಕಕ್ಕೆ ಮುತ್ತಿಕ್ಕುತ್ತದೆ. ಈ ಪಂದ್ಯದಲ್ಲಿಯೂ ಧ್ಯಾನ್ ಚಂದ್ ಕೈಚಳಕದಲ್ಲಿ 2 ಗೋಲುಗಳು ಮತ್ತು ಜಾರ್ಜ್ ಮಾರ್ಟಿನ್ಸ್ ನಿಂದ 1 ಗೋಲು ದಾಖಲಾಗುತ್ತದೆ. ಒಟ್ಟಾರೆ 5 ಪಂದ್ಯಗಳಿಂದ ಧ್ಯಾನ್ ಚಂದ್ 14 ಗೋಲುಗಳನ್ನು ಪಡೆದು ಅತ್ಯುತ್ತಮ ಸಾಧಕರೆನಿಸುತ್ತಾರೆ. ಭಾರತ ತಂಡವು ಆಡಿದ 5 ಪಂದ್ಯಗಳಲ್ಲಿ ಎದುರಾಳಿ ತಂಡಕ್ಕೆ ಒಂದು ಗೋಲನ್ನೂ ಬಿಟ್ಟುಕೊಡದೆ ಚಿನ್ನದ ಪದಕವನ್ನು ಗೆದ್ದದ್ದು ಅತ್ಯದ್ಭುತ ಸಾಧನೆಯಾಗಿ ಎಲ್ಲ ಕಡೆಯಿಂದಲೂ ಪ್ರಶಂಸೆಗೊಳಪಡುತ್ತದೆ. ಮುಂದಿನ 1932ರ ಲಾಸ್ ಏಂಜಲೀಸ್‌ನ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಧ್ಯಾನ್ ಚಂದ್ ಸಹಜವಾಗಿಯೇ ಸ್ಥಾನ ಪಡೆಯುತ್ತಾರೆ. ಆದರೆ ಉಳಿದ ಆಟಗಾರರು ಮತ್ತೊಮ್ಮೆ ಅಂತರ್ ಸಂಸ್ಥಾನ ಮಟ್ಟದ ದೇಶಿಯ ಪಂದ್ಯಗಳಲ್ಲಿ ತಮ್ಮ ಸಾಧನೆಯನ್ನು ತೋರಿಸಬೇಕಿರುತ್ತದೆ. ಹೀಗೆ ತಮ್ಮ ಸಾಧನೆಯನ್ನು ನಿರೂಪಿಸಿ 1932 ರ ಒಲಿಂಪಿಕ್ಸ್ ಸ್ಥಾನ ಪಡೆದವರು ಧ್ಯಾನ್ ಚಂದ್‌ರ ಕಿರಿಯ ಸಹೋದರ ರೂಪ್ ಸಿಂಗ್. ಈ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮೊದಲ ಪಂದ್ಯದಲ್ಲಿ ಜಪಾನ್ ವಿರುದ್ಧ ಭಾರತ ತಂಡವು 11-1 ಗೋಲುಗಳ ಜಯದೊಂದಿಗೆ ಶುಭಾರಂಭವನ್ನು ಪಡೆದು, ಮುಂದಿನ ಪಂದ್ಯವೊಂದರಲ್ಲಿ ಅಮೆರಿಕ ವಿರುದ್ಧ 24-1 ಗೋಲುಗಳನ್ನು ದಾಖಲಿಸಿ ಕೊನೆಗೆ ಚಿನ್ನದ ಪದಕವನ್ನು ಮತ್ತೊಮ್ಮೆ ಪಡೆಯುತ್ತದೆ. ಈ ಕ್ರೀಡಾಕೂಟದಲ್ಲಿ ಗಳಿಸಿದ 35 ಗೋಲುಗಳಲ್ಲಿ ಧ್ಯಾನ್ ಚಂದ್ ಪಾಲು 12 ಆದರೆ, ರೂಪ್ ಸಿಂಗ್ ರವರ ಕಾಣಿಕೆ 13 ಗೋಲುಗಳು. ಹೀಗಾಗಿ ಅಣ್ಣ ತಮ್ಮಂದಿರ ಈ ಸಾಧನೆ ಅವರನ್ನು ‘‘ಹಾಕಿ ಅವಳಿಗಳು (Hockey Twins)’’ ಎನ್ನುವಲ್ಲಿಗೆ ಕರೆದೊಯ್ಯುತ್ತದೆ. ಈ ಒಲಿಂಪಿಕ್ಸ್ ನಂತರ ಭಾರತದ ತಂಡ ಅಂತರ್‌ರಾಷ್ಟ್ರೀಯ ಪಂದ್ಯಗಳನ್ನಾಡಲು, ಅಮೆರಿಕ, ಇಂಗ್ಲೆಂಡ್, ನೆದರ್ಲೆಂಡ್ ಮುಂತಾದ ದೇಶಗಳಲ್ಲಿ ಪ್ರವಾಸ ಕೈಗೊಳ್ಳುತ್ತದೆ. ಈ ಪ್ರವಾಸದ ಕೊನೆಗೆ ಆಡಿದ 37 ಪಂದ್ಯಗಳಲ್ಲಿ 34ರಲ್ಲಿ ಭಾರತವು ಜಯಗಳಿಸಿರುತ್ತದೆ. ಭಾರತ ತಂಡವು ಗಳಿಸಿದ 338 ಗೋಲುಗಳಲ್ಲಿ 133 ಗೋಲುಗಳು ಧ್ಯಾನ್ ಚಂದ್ ರ ಖಾತೆಯಲ್ಲಿರುತ್ತದೆ. ನೆದರ್ಲೆಂಡ್‌ನಲ್ಲಿ ನಡೆದ ಪಂದ್ಯವೊಂದರ ಬಳಿಕ ಧ್ಯಾನ್ ಚಂದ್ ರವರ ಹಾಕಿ ಬ್ಯಾಟನ್ನು ವಶಕ್ಕೆ ಪಡೆದು, ಅದರಲ್ಲಿ ಚೆಂಡನ್ನು ಹಿಡಿತದಲ್ಲಿಟ್ಟು ಕೊಳ್ಳುವಂತಹ ಅಯಸ್ಕಾಂತವೇನಾದರೂ ಇದೆಯೇ ಎಂದು ಮುರಿದುನೋಡುತ್ತಾರೆ. ಅವರಿಗೆ ನಿರಾಸೆ ಕಾದಿರುತ್ತದೆ. ಹೀಗಿತ್ತು ಧ್ಯಾನ್ ಚಂದ್ ರವರ ಮಾಂತ್ರಿಕತೆ ಎಂಬುದನ್ನು ಈ ಘಟನೆ ತಿಳಿಸುತ್ತದೆ.

 ಭಾರತ ಹಾಕಿ ತಂಡದ ನಾಯಕತ್ವವನ್ನು 1934ರಲ್ಲಿ ಧ್ಯಾನ್ ಚಂದ್ ರವರಿಗೆ ವಹಿಸಲಾಗುತ್ತದೆ. 1936 ರ ಬರ್ಲಿನ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಇವರ ಹೆಗಲಮೇಲೇರುತ್ತದೆ. ಅಲ್ಲಿಯೂ ಸಹ ಈ ಹಾಕಿ ಗಾರುಡಿಗನ ಮಾಂತ್ರಿಕತೆ ಮುಂದುವರಿಯುತ್ತದೆ. ಬರ್ಲಿನ್ ನಲ್ಲಿ ನಡೆದ ಭಾರತದ ಮೊದಲ ಪಂದ್ಯದ ನಂತರ, ಬೇರೆ ಬೇರೆ ಪಂದ್ಯಗಳನ್ನು, ಕ್ರೀಡೆಗಳನ್ನು ವೀಕ್ಷಿಸುತ್ತಿದ್ದ ಜನರು ಹಾಕಿ ಸ್ಟೇಡಿಯಂ ನತ್ತ ದೌಡಾಯಿಸುತ್ತಾರೆ. ಜರ್ಮನಿಯ ವಾರ್ತಾಪತ್ರಿಕೆಯೊಂದು ತನ್ನ ಮುಖಪುಟದಲ್ಲಿ ,,“The Olympic Complex now has a Magic Show too”  ಎಂದು ಮುದ್ರಿಸುತ್ತದೆ. ಹಾಗೂ ಇಡೀ ಬರ್ಲಿನ್ ಪಟ್ಟಣದಲ್ಲಿ ‘“Visit the hockey stadium to watch the Indian magician Dhyan Chand in action” ಎಂಬ ಪೋಸ್ಟರ್ ಗಳು ರಾರಾಜಿಸುತ್ತವೆ. ಹೀಗೆ ಭಾರತ ತಂಡವು ಪಂದ್ಯದಿಂದ ಪಂದ್ಯಕ್ಕೆ ಜಯಗಳಿಸುತ್ತಾ, ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ರಂಜಿಸುತ್ತಾ ಕೊನೆಯ ಫೈನಲ್ ಪಂದ್ಯದಲ್ಲಿ ಜರ್ಮನಿಯ ಡಿಕ್ಟೇಟರ್ ಅಡಾಲ್ಫ್ ಹಿಟ್ಲರ್ ಸಮ್ಮುಖದಲ್ಲಿಯೇ ಜರ್ಮನಿಯ ತಂಡವನ್ನು 8-1 ಗೋಲುಗಳ ಅಂತರದಲ್ಲಿ ಸೋಲಿಸಿ ಸತತ ಮೂರನೇ ಬಾರಿಗೆ ಚಿನ್ನದ ಪದಕವನ್ನು(Hatrick Gold) ಗೆಲ್ಲುತ್ತದೆ. ಈ ಪಂದ್ಯದಲ್ಲಿ ಧ್ಯಾನ್ ಚಂದ್ ಒಬ್ಬರೇ 6 ಗೋಲುಗಳನ್ನು ಗಳಿಸಿರುತ್ತಾರೆ. ಕೆಲವು ಮಾಹಿತಿಗಳ ಪ್ರಕಾರ ಈ ಹಾಕಿ ಮಾಂತ್ರಿಕನ ಇಂದ್ರಜಾಲವನ್ನು ಕಂಡ ಹಿಟ್ಲರ್ ಧ್ಯಾನ್ ಚಂದ್ ರವರಿಗೆ ಜರ್ಮನಿಯ ನಾಗರಿಕತೆಯನ್ನು ಮತ್ತು ಜರ್ಮನಿ ಸೈನ್ಯದ ಒಂದು ಅಧಿಕಾರವನ್ನು ಒಪ್ಪಿಕೊಳ್ಳುವಂತೆ ಕೇಳಿದ್ದರು. ಅದಕ್ಕೆ ಧ್ಯಾನ್ ಚಂದ್ ರವರ ದಿಟ್ಟ ಉತ್ತರ ‘‘ನಾನು ಹಿಂದೆ, ಇಂದು, ಮುಂದೆಂದೂ ಭಾರತೀಯನಾಗಿಯೇ ಇರುತ್ತೇನೆ’’ ಎನ್ನುವುದಾಗಿತ್ತು. ಹಾಗೆಯೇ ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್ ಸಹ, 1935ರಲ್ಲಿ ಆಸ್ಟ್ರೇಲಿಯಾದ ಅಡಿಲೇಡ್ ನಲ್ಲಿ ಭೇಟಿಯಾಗಿ ಅವರ ಪಂದ್ಯವನ್ನು ವೀಕ್ಷಿಸಿದ ನಂತರ, “He scores goals like run in cricket”ಎಂದು ಉದ್ಗರಿಸಿದ್ದರಂತೆ.

1936ರ ಒಲಿಂಪಿಕ್ಸ್ ನಂತರವೂ ಭಾರತ ತಂಡವನ್ನು ಪ್ರತಿನಿಧಿಸುತ್ತಾ (ಎರಡನೇ ಮಹಾಯುದ್ಧದ ಕಾಲದಲ್ಲಿ ಒಲಿಂಪಿಕ್ ಪಂದ್ಯಗಳು ನಡೆಯುವುದಿಲ್ಲ) ಸತತವಾಗಿ ಹಾಕಿ ಆಡುತ್ತಲೇ ಇದ್ದ ಧ್ಯಾನ್‌ಚಂದ್ 1948 ರಲ್ಲಿ ತನ್ನ ಕೊನೆಯ ಪಂದ್ಯವನ್ನು ಭಾರತ ಇತರೆ ತಂಡವನ್ನು ಪ್ರತಿನಿಧಿಸಿ ಭಾರತ ಒಲಿಂಪಿಕ್ ತಂಡದ ವಿರುದ್ಧ ಆಡುತ್ತಾರೆ. ಆಡಿದ ಅಷ್ಟೂ ಅಂತರ್‌ರಾಷ್ಟ್ರೀಯ ಪಂದ್ಯಗಳಿಂದ ಸುಮಾರು 400ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದ ಸಾರ್ವಕಾಲಿಕ ದಾಖಲೆ ಧ್ಯಾನ್‌ಚಂದ್ ಹೆಸರಿನಲ್ಲಿದೆ. ದೇಶಿಯ ಪಂದ್ಯಗಳನ್ನು ಸೇರಿಸಿದರೆ ಒಟ್ಟು 1000ಕ್ಕೂ ಮಿಗಿಲಾದ ಗೋಲುಗಳ ಲೆಕ್ಕ ಸಿಗುತ್ತದೆೆ. ತಮ್ಮ ಹಾಕಿ ಆಟದ ನಿವೃತ್ತಿಯ ನಂತರ, 1956ರಲ್ಲಿ ಮೇಜರ್ ಪದವಿಯೊಂದಿಗೆ ಸೈನ್ಯದಿಂದಲೂ ಧ್ಯಾನ್ ಚಂದ್ ನಿವೃತ್ತಿ ಪಡೆಯುತ್ತಾರೆ. ಅದೇ ವರ್ಷ ಘನ ಭಾರತ ಸರಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಅವರನ್ನು ಗೌರವಿಸುತ್ತದೆ. ನಿವೃತ್ತಿಯ ನಂತರ ರಾಜಸ್ಥಾನದ ಮೌಂಟ್ ಅಬುವಿನಲ್ಲಿ ತರಬೇತಿ ಶಿಬಿರಗಳನ್ನು ನಡೆಸುತ್ತಾರೆ. ಮುಂದೆ ಪಾಟಿಯಾಲದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್‌ನಲ್ಲಿ ಹಾಕಿಯ ಮುಖ್ಯತರಬೇತುದಾರರಾಗಿ ಸುಮಾರು ವರ್ಷಗಳ ಕಾಲ ಕೆಲಸಮಾಡುತ್ತಾರೆ.

1936ರಲ್ಲಿ ಜಾನಕಿ ದೇವಿಯವರೊಡನೆ ವಿವಾಹವಾಗುವ ಧ್ಯಾನ್ ಚಂದ್ 7 ಗಂಡು ಮಕ್ಕಳ ತಂದೆಯಾಗಿ ತುಂಬು ಸಂಸಾರ ಜೀವನವನ್ನು ಸಾಗಿಸುತ್ತಾರೆ. ಆದರೆ ಕೊನೆಯ ವರ್ಷಗಳಲ್ಲಿ ಈ ಹಾಕಿ ಗಾರುಡಿಗನ ಜೀವನ ದಾರುಣ ಸ್ಥಿತಿಯಲ್ಲಿರುತ್ತದೆ. ಹಣವಿಲ್ಲದ, ಜನ ಮರೆತ ಹಾಗೂ ಲಿವರ್ ಕ್ಯಾನ್ಸರ್‌ನಿಂದ ಬಳಲಿದ ಧ್ಯಾನ್ ಚಂದ್ ದಿಲ್ಲಿಯ All India Institute of Medical Sciences  ನಲ್ಲಿ 1979 ರ ಡಿಸೆಂಬರ್ 3 ರಂದು ತಮ್ಮ 74 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆಯುತ್ತಾರೆ.

ಇಷ್ಟೆಲ್ಲಾ ಸಾಧಿಸಿದ ಧ್ಯಾನ್ ಚಂದ್‌ಗೆ ಸರಿಯಾದ ಗೌರವ ಅವರು ಬದುಕಿದ್ದ ಕಾಲಕ್ಕಿಂತ, ಕಾಲವಾದ 20 ವರ್ಷಗಳ ನಂತರ ಸಂದಾಯವಾದದ್ದು ಕಂಡುಬರುತ್ತದೆ. 2002ರಲ್ಲಿ ಅವರ ಗೌರವಾರ್ಥವಾಗಿ ಅವರ ಜನ್ಮದಿನ ಆಗಸ್ಟ್ 29ಅನ್ನು ರಾಷ್ಟ್ರೀಯ ಕ್ರೀಡಾ ದಿನವಾಗಿ ಘನ ಭಾರತ ಸರಕಾರ ಘೋಷಿಸಿತು. ಅಂದು ಕ್ರೀಡೆಯಲ್ಲಿಯ ಜೀವಮಾನ ಸಾಧನೆಗಾಗಿ ಧ್ಯಾನ್ ಚಂದ್ ಪ್ರಶಸ್ತಿಯನ್ನು, ಅತ್ಯುತ್ತಮ ಸಾಧನೆಗಾಗಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, ಅರ್ಜುನ ಪ್ರಶಸ್ತಿ ಹಾಗೂ ತರಬೇತುದಾರರಿಗೆ ನೀಡುವ ದ್ರೋಣಾಚಾರ್ಯ ಪ್ರಶಸ್ತಿಗಳನ್ನು ಸನ್ಮಾನ್ಯ ರಾಷ್ಟ್ರಪತಿಯವರು ವಿತರಿಸುತ್ತಾರೆ. ಧ್ಯಾನ್ ಚಂದ್ ಹೆಸರಿನಲ್ಲಿ ನಾನಾ ಸ್ಟೇಡಿಯಂಗಳು, ಹಾಸ್ಟೆಲ್‌ಗಳು ನಾಮಾಂಕಿತವಾಗಿವೆ. ಇವುಗಳಲ್ಲಿ ಮುಖ್ಯವಾಗಿ ಲಂಡನ್‌ನ ಭಾರತದ ಜಿಮ್ಕಾನದ ಟರ್ಫ್ ಹಾಕಿ ಅಂಕಣಕ್ಕೆ ಧ್ಯಾನ್ ಚಂದ್ ಹೆಸರಿಡಲಾಗಿದೆ. 2012ರಲ್ಲಿ ಜರ್ನಲಿಸ್ಟ್ ಫೆಡರೇಷನ್ ಆಫ್ ಇಂಡಿಯಾದಿಂದ ಕೊಡಮಾಡುವ ಜೆಮ್ ಆಫ್ ಇಂಡಿಯಾ ರಾಷ್ಟ್ರೀಯ ಪ್ರಶಸ್ತಿ ಧ್ಯಾನ್ ಚಂದ್‌ರವರಿಗೆ ಸಂದಿದೆ.

2014 ಎಪ್ರಿಲ್ 20ರಂದು ಝಾನ್ಸಿ ನಗರದ ಸಿಪ್ರಿ ಬೆಟ್ಟದಲ್ಲಿ ಹಾಕಿ ಸ್ಟಿಕ್ ಹಿಡಿದು ನಿಂತಿರುವ ಧ್ಯಾನ್ ಚಂದ್‌ರವರ ಪ್ರತಿಮೆಯೊಂದನ್ನು ಸ್ಥಾಪಿಸಲಾಗಿದೆ. ಈ ಪ್ರತಿಮೆಯು ಝಾನ್ಸಿ ನಗರದ ಯಾವುದೇ ಟೆರೇಸಿನಲ್ಲಿ ನಿಂತರೂ ಕಾಣುವಂತೆ ನಿಲ್ಲಿಸಲಾಗಿದೆ.

ಇದಕ್ಕಿಂತ ಮುಖ್ಯವಾಗಿ ವಿಯೆನ್ನಾದಲ್ಲಿ ನಾಲ್ಕು ಕೈಗಳಲ್ಲಿ ನಾಲ್ಕು ಹಾಕಿ ದಂಡಗಳನ್ನಿಡಿದು ನಿಂತಿರುವ ಧ್ಯಾನ್ ಚಂದ್‌ರವರ ಪ್ರತಿಮೆಯನ್ನು ನಿಲ್ಲಿಸಲಾಗಿದೆ. ಇದು ಈ ಹಾಕಿ ಜಾದೂಗಾರ ಹಾಕಿ ಚೆಂಡಿನ ಮೇಲೆ ಸಾಧಿಸಿದ ಹಿಡಿತವನ್ನು ಪ್ರತಿಸಿಧಿಸುತ್ತದೆ.

ಆದರೆ ವಿಪರ್ಯಾಸವೆಂದರೆ, ಹಾಕಿ ಆಟಕ್ಕೆ ಆಗಿರುವ ಅನ್ಯಾಯ. ಮೊದಲಿಗೆ ನಾವೆಲ್ಲಾ ಪಠ್ಯ ಪುಸ್ತಕದಲ್ಲಿ ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿ ಎಂದು ಓದಿಕೊಂಡಿದ್ದೇವೆ. ಆದರೆ 2012ರಲ್ಲಿ 10 ನೇ ತರಗತಿಯ ವಿದ್ಯಾರ್ಥಿನಿ ಐಶ್ವರ್ಯ ಪರಾಶರ್ ಭಾರತ ಸರಕಾರಕ್ಕೆ RTI ಅಡಿಯಲ್ಲಿ ಪತ್ರಬರೆದು ರಾಷ್ಟ್ರೀಯ ಕ್ರೀಡೆಯ ಬಗ್ಗೆ ಪ್ರಶ್ನಿಸಿದಾಗ, ಅಂದಿನ ಕೇಂದ್ರ ಸರಕಾರದ ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯದ ಕಾರ್ಯದರ್ಶಿಗಳಾದ ಎಸ್‌ಪಿ ಎಸ್ ತೋಮರ್ ರವರು, ‘‘ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆ’’ ಎಂದು ಘೋಷಿಸಿದ ಸರಕಾರಿ ದಾಖಲೆ ಇಲ್ಲ ಎಂದು ಉತ್ತರಿಸುತ್ತಾರೆ. ಇದು ಕೇವಲ ಆಡು ಮಾತಿಂದ ಹರಡಿರುವ ಸುದ್ದಿ ಎನ್ನುತ್ತಾರೆ. ಇದೇ ರೀತಿ ‘‘ಮಹಾತ್ಮಾ ಗಾಂಧಿ ಭಾರತ ದೇಶದ ರಾಷ್ಟ್ರಪಿತ’’ ಎಂಬ ಅಧಿಕೃತ ಘೋಷಣೆಯ ದಾಖಲೆಯೂ ಇಲ್ಲದಿರುವುದು ವಿಷಾದಕರ. ಹೀಗೆ ಭಾರತದ ಹಾಕಿ ಕ್ರೀಡೆ ಸುಮಾರು 93 ವರ್ಷಗಳ ಇತಿಹಾಸದೊಂದಿಗೆ, ಒಲಿಂಪಿಕ್ಸ್‌ನಲ್ಲಿ 8 ಚಿನ್ನದ ಪದಕ, 1 ರಜತ ಪದಕ ಹಾಗೂ 2 ಕಂಚಿನ ಪದಕಗಳನ್ನು ಗೆದ್ದು, ಹಾಕಿ ವಿಶ್ವಕಪ್ ನಲ್ಲಿ ಒಮ್ಮೆ(1975) ಚಾಂಪಿಯನ್‌ಆಗಿ ಮತ್ತು ಏಶ್ಯನ್ ಗೇಮ್ಸ್, ಆಜ್ಲಾನ್ ಷಾ ಮುಂತಾದ ಕೂಟಗಳಲ್ಲಿ ಹತ್ತಾರೂ ಪದಕಗಳನ್ನು ಪಡೆದಿದ್ದರೂ ಅಧಿಕೃತವಾಗಿ ‘‘ಭಾರತದ ರಾಷ್ಟ್ರೀಯ ಕ್ರೀಡೆ’’ಯಾಗಿ ಮಾನ್ಯತೆ ಪಡೆಯದಿರುವುದು ವಿಪರ್ಯಾಸವಲ್ಲದೆ ಮತ್ತೇನು?

ಇನ್ನು 2014 ರಲ್ಲಿ ಕ್ರೀಡಾ ಸಚಿವಾಲಯದಿಂದ 2013ನೇ ಸಾಲಿನ ಭಾರತರತ್ನ ಪ್ರಶಸ್ತಿಗೆ ಧ್ಯಾನ್ ಚಂದ್ ಹೆಸರು ನಾಮಾಂಕಿತ ಗೊಂಡರೂ, ಘನ ಸರಕಾರ ಅವರನ್ನು ಕಡೆಗಣಿಸಿ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್‌ಗೆ ನೀಡಿದ ರಾಜಕೀಯ ನಡೆ ಟೀಕೆಗೊಳಗಾಗಿದ್ದು ಎಲ್ಲರಿಗೂ ತಿಳಿದ ವಿಷಯವಾದರೂ, ಕ್ರೀಡಾ ಕ್ಷೇತ್ರದಲ್ಲಿ ಮೊದಲ ಭಾರತರತ್ನ ಪ್ರಶಸ್ತಿ ಧ್ಯಾನ್ ಚಂದ್ ರವರಿಗೆ ಸಲ್ಲದೇ ಇರುವುದು ವಿಷಾದನೀಯ. ಇದು ನೊಬೆಲ್ ಶಾಂತಿ ಪಾರಿತೋಷಕಕ್ಕೆ ಮಹಾತ್ಮ ಗಾಂಧೀಜಿರವರ ಹೆಸರು ಮೂರು ಬಾರಿ ನಾಮಾಂಕಿತವಾದರೂ ಅವರಿಗೆ ನೀಡದ ಮನೋಭಾವವನ್ನು ನೆನಪಿಸುತ್ತದೆ. ನಂತರ ನೊಬೆಲ್ ಪ್ರತಿಷ್ಠಾನ ನೆಲ್ಸನ್ ಮಂಡೇಲಾಗೆ ಶಾಂತಿ ಪ್ರಶಸ್ತಿ ನೀಡಿ ಗಾಂಧೀಜಿಯವರಿಗೆ ನೀಡದ ಕಾರಣಕ್ಕೆ ಪ್ರಾಯಶ್ಚಿತವನ್ನೂ, ವಿಷಾದ ವ್ಯಕ್ತಪಡಿಸಿದಂತೆ ಮುಂದೆ ಕ್ರೀಡಾವಿಷಯಕ್ಕೆ ಸಂಬಂಧಿಸಿದಂತೆ ಭಾರತರತ್ನ ಪ್ರಶಸ್ತಿ ಧ್ಯಾನ್ ಚಂದ್ ರವರಿಗೆ ದೊರಕದಿರುವುದಕ್ಕೆ ಯಾರಾದರೂ ಪ್ರಾಯಶ್ಚಿತ ವ್ಯಕ್ತಪಡಿಸುತ್ತಾರೆಯೋ ಎಂದು ಕಾದು ನೋಡಬೇಕಿದೆ. ಇಷ್ಟೆಲ್ಲಾ ಸಾಧನೆಯಿದ್ದರೂ ಸಹ ಕೊನೆಗೆ ಬಿರುದಿಲ್ಲದ ಭಾರತರತ್ನವಾಗಿಯೇ ಉಳಿದವರು ಮೇಜರ್ ಧ್ಯಾನ್ ಚಂದ್ ಎಂಬುದು ನಿಜವಲ್ಲವೇ...

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top