ಸಮಕಾಲೀನ ಕಣ್ಣಲ್ಲಿ ಅಂಬೇಡ್ಕರ್‌ರ ಆರ್ಥಿಕ ಚಿಂತನೆಗಳು | Vartha Bharati- ವಾರ್ತಾ ಭಾರತಿ

ಇಂದು ಅಂಬೇಡ್ಕರ್ ಜಯಂತಿ

ಸಮಕಾಲೀನ ಕಣ್ಣಲ್ಲಿ ಅಂಬೇಡ್ಕರ್‌ರ ಆರ್ಥಿಕ ಚಿಂತನೆಗಳು

ರಾಜಕೀಯ ಪ್ರಜಾಪ್ರಭುತ್ವವೆಂದರೆ ‘ಸೌಲಭ್ಯಗಳನ್ನು ಪಡೆದುಕೊಳ್ಳಲು ವ್ಯಕ್ತಿಯೊಬ್ಬ ತನ್ನ ಸಂವಿಧಾನಾತ್ಮಕ ಹಕ್ಕಿನಿಂದ ವಂಚಿತನಾಗದೆ ಇರುವುದು’ ಮತ್ತು ‘ರಾಜ್ಯಾಂಗವು ಖಾಸಗಿ ವ್ಯಕ್ತಿಗಳಿಗೆ ಇತರರನ್ನು ನಿಯಂತ್ರಿಸಲು ಅಧಿಕಾರವನ್ನು ಕೊಡತಕ್ಕದ್ದಲ್ಲ’ ಎಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ವಾದಿಸುತ್ತಾರೆ. ‘ವ್ಯಕ್ತಿಗತ ಲಾಭವನ್ನು ಪ್ರಚೋದಿಸುವ ಖಾಸಗಿ ಉದ್ಯಮ ಆಧಾರಿತ ಸಾಮಾಜಿಕ ಆರ್ಥಿಕತೆಯ ವ್ಯವಸ್ಥೆ ಈ ಆವಶ್ಯಕತೆಗಳನ್ನು ಧಿಕ್ಕರಿಸುತ್ತದೆ ಎಂದು ಹೇಳುತ್ತಾರೆ.

ಬಾಬಾಸಾಹೇಬ್ ಅಂಬೇಡ್ಕರ್ ಆರ್ಥಿಕ ಚಿಂತನೆಗಳನ್ನು ಅಭಿವ್ಯಕ್ತಿಯ ದೃಷ್ಟಿಯಿಂದ ಎರಡು ಭಾಗ ಮಾಡಬಹುದು. ಒಂದು ಪ್ರತ್ಯಕ್ಷ ಅಥವಾ ವ್ಯಕ್ತವಾದದ್ದು. ಇನ್ನೊಂದು ಪರೋಕ್ಷ ಅಥವಾ ಧ್ವನಿತ. ಅಂಬೇಡ್ಕರರು ತಮ್ಮ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿಗಳ ಶೈಕ್ಷಣಿಕ ಚಟುವಟಿಕೆಯ ಭಾಗವಾಗಿ ಬರೆದ ಪ್ರೌಢಪ್ರಬಂಧ ಮತ್ತು ಲೇಖನಗಳು ಮುಂತಾದವುಗಳಲ್ಲಿ ಆರ್ಥಿಕ ಸಮಸ್ಯೆಯ ಬಗ್ಗೆ ಪ್ರಮುಖವಾಗಿ ಗಮನಹರಿಸಿದ್ದನ್ನು ಕಾಣಬಹುದು. ಡಾ. ಅಂಬೇಡ್ಕರರ ಶೈಕ್ಷಣಿಕ ಬರಹಗಳೆಂದರೆ: ಈಸ್ಟ್ ಇಂಡಿಯಾ ಕಂಪೆನಿಯ ಆಡಳಿತ ಮತ್ತು ಹಣಕಾಸು (ಎಂ.ಎ. ಪದವಿ, ಕೊಲಂಬಿಯಾ ವಿ.ವಿ), ಬ್ರಿಟಿಷ್ ಭಾರತದಲ್ಲಿ ಪ್ರಾಂತೀಯ ಹಣಕಾಸಿನ ಪರಿಣಾಮ (ಪಿಎಚ್‌ಡಿ ಪ್ರೌಢ ಪ್ರಬಂಧ, ಕೊಲಂಬಿಯಾ ವಿ.ವಿ., 1917; 1925ರಲ್ಲಿ ಪ್ರಕಟವಾಗಿದೆ); ರೂಪಾಯಿಯ ಸಮಸ್ಯೆ: ಅದರ ಹುಟ್ಟು ಪರಿಹಾರ (ಡಿ.ಎಸ್ಸಿ. ಪ್ರೌಢಪ್ರಬಂಧ, ಲಂಡನ್ ಅರ್ಥಶಾಸ್ತ್ರ ಶಾಲೆ, 1917; 1921ರಲ್ಲಿ ಪ್ರಕಟ). ಮತ್ತೊಂದು ಅವರ ಲೇಖನ, ಸಣ್ಣ ಹಿಡುವಳಿಗಳ ಸಮಸ್ಯೆ, (ಭಾರತದಲ್ಲಿ ಸಣ್ಣ ಹಿಡುವಳಿಗಳು ಮತ್ತು ಅದರ ಸಮಸ್ಯೆಗಳು) ಶೈಕ್ಷಣಿಕ ಪೂರ್ವದ ಆರ್ಥಿಕ ಬರಹಗಳು ಕರಡು ಪ್ರಸ್ತಾವನೆಗಳಾಗಿದ್ದು ಅವುಗಳನ್ನು ತನ್ನ ಪಕ್ಷದ (ಭಾರತದ ಸಂವಿಧಾನಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟ) ಪರವಾಗಿ ಬರೆಯಲಾಯಿತು. ಇದನ್ನು ರಾಜ್ಯಾಂಗ ಮತ್ತು ಅಲ್ಪಸಂಖ್ಯಾತರು ಎಂಬುದಾಗಿ ಪ್ರಕಟಿಸಲಾಗಿತ್ತು.

ಆರ್ಥಿಕ ನೀತಿಗಳಿಗೆ (ನೀರು, ವಿದ್ಯುತ್, ಮೂಲಸೌಕರ್ಯ ಮತ್ತು ಕುಟುಂಬ ಯೋಜನೆ ಇತ್ಯಾದಿ) ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ವೈಸರಾಯ್ ಕೌನ್ಸಿಲ್ ಸದಸ್ಯರಾಗಿದ್ದಾಗ ವ್ಯಕ್ತಪಡಿಸಿದ ಚಿಂತನೆಗಳು ಚೆಲ್ಲಾಪಿಲ್ಲಿಯಾಗಿವೆೆ. ಈ ಸ್ಪಷ್ಟ ಆರ್ಥಿಕ ಚಿಂತನೆ ಗಟ್ಟಿಯಾದ ತಳಹದಿಯಾಗಿದೆ. ಉದಾಹರಣೆ ಜಾತಿಪದ್ಧತಿ ವಿರುದ್ಧದ ಅವರ ಹೋರಾಟ ಬರೀ ನೈತಿಕ ಅಥವಾ ಮತೀಯ ಕಾರಣಕ್ಕಾಗಿ ಅಲ್ಲ. ಇದು ನಿಕೃಷ್ಟ ಮತ್ತು ವಿವೇಚನಾಯುತ ದೃಷ್ಟಿಕೋನ, ಆದ್ದರಿಂದಲೇ ಸ್ವಾತಂತ್ರ, ಸಮಾನತೆ ಮತ್ತು ಸೋದರತ್ವ ಮುಂತಾದವು ಅಥವಾ ರಾಜನೀತಿಯ ನಿರ್ದೇಶಕ ತತ್ವಗಳು ಅಥವಾ ಸಮಾಜದ ದುರ್ಬಲ ವರ್ಗಗಳ ಪರವಾದ ಸಕಾರಾತ್ಮಕ ಕ್ರಮಗಳು ಮುಂತಾದ ವಿವಿಧ ಸಂವಿಧಾನಾತ್ಮಕ ಪ್ರಸ್ತಾವಗಳು ಅಥವಾ ಬೌದ್ಧಧರ್ಮಕ್ಕೆ ಮತಾಂತರ ಅವರ ದರ್ಶನವಾಗಿದೆ.

ಈ ಎಲ್ಲ ಅಂಶಗಳನ್ನು ಕಾಗದದೊಳಗೆ ಸೆರೆ ಹಿಡಿಯುತ್ತೇವೆನ್ನುವುದು ಧಾರ್ಷ್ಟ ವಾಗುತ್ತದೆ. ಆದ್ದರಿಂದ ನಾನು ಆರ್ಥಿಕ ಚಿಂತನೆಗಳ ಕೆಲವು ಅಂಶಗಳನ್ನು ಸಂಗ್ರಹಿಸಿದ್ದೇನೆ.

 ಅವರ ವಿದ್ಯಾರ್ಥಿ ದೆಸೆಯಲ್ಲಿ ಬರೀ ವಿದ್ಯಾರ್ಥಿ ವೇತನದಿಂದ ಅತಂತ್ರವಾಗಿ ಬದುಕಿದ್ದರು. ಆದ್ದರಿಂದ ತನ್ನ ತಕ್ಷಣದ ಗುರಿಗಳನ್ನು ಈಡೇರಿಸಿಕೊಳ್ಳುವ ಉತ್ಸಾಹ ಹೊಂದಿದ್ದರು. ಪದವಿಗಳನ್ನು ಪಡೆದುಕೊಳ್ಳುವುದು, ಬಡವರ ಬಗ್ಗೆ ಕಾಳಜಿ ಮತ್ತು ಅನ್ಯಾಯ, ಶೋಷಣೆಯ ಬಗ್ಗೆ ಸಿಟ್ಟು ಈ ಅವರ ಲೇಖನಗಳು ಮತ್ತು ಪ್ರೌಢ ಪ್ರಬಂಧಗಳಲ್ಲಿ ಕಂಡುಬರುತ್ತದೆ. ಉದಾಹರಣೆಗೆ ಈಸ್ಟ್ ಇಂಡಿಯಾ ಕಂಪೆನಿಯ ಆಡಳಿತ ಮತ್ತು ಹಣಕಾಸು ಎಂಬ ಅವರ ಮೊದಲ ಪ್ರಬಂಧದಲ್ಲಿ 1792ರಿಂದ 1858ರವರೆಗೆ ದೀರ್ಘ ಅವಧಿಯಲ್ಲಿ ಈಸ್ಟ್ ಇಂಡಿಯಾ ಕಂಪೆನಿಯು ಭಾರತೀಯರನ್ನು ಹೇಗೆ ಶೋಷಿಸಿತು ಎಂಬುದನ್ನು ಮತ್ತು ಅದರ ಆಳ್ವಿಕೆಯನ್ನು ನಂತರದಲ್ಲಿ 1858ರಲ್ಲಿ ರದ್ದುಗೊಳಿಸಿದಾಗ ಆದ ಅನ್ಯಾಯವನ್ನು ಪರಿಹರಿಸುವ ಬದಲಿಗೆ ಬ್ರಿಟಿಷ್ ಸಾಮ್ರಾಜ್ಯವು ಈಸ್ಟ್ ಇಂಡಿಯಾ ಕಂಪೆನಿ ತನ್ನ ಅನುಭೋಗಕ್ಕೆ ತೆಗೆದುಕೊಂಡ ದೊಡ್ಡ ಮೊತ್ತದ ಸಾಲವನ್ನು ಹಸಿದ ಭಾರತೀಯನ ತಲೆಗೆ ಹೇಗೆ ಹೊರಿಸಿತು ಎಂಬುದನ್ನು ಪ್ರತಿಪಾದಿಸಿದ್ದಾರೆ.

ನನ್ನ ಮನಸ್ಸಿನಲ್ಲಿ ಉಳಿದಿರುವ ಅಂಬೇಡ್ಕರರ ಆರ್ಥಿಕ ಬರವಣಿಗೆಗಳಲ್ಲಿನ ಒಂದು ಮುಖ್ಯವಾದ ಅಂಶವೆಂದರೆ ‘ಸಣ್ಣ ಹಿಡುವಳಿಗಳ ಸಮಸ್ಯೆ’ಯ ಬಗ್ಗೆ ಸಮಕಾಲೀನ ಅರ್ಥಶಾಸ್ತ್ರಜ್ಞರ ಜೊತೆಗಿನ ಅವರ ಚರ್ಚೆಯ ಪ್ರಬಂಧ. ಮುಖ್ಯವಾಹಿನಿಯ ಅಭಿಪ್ರಾಯಕ್ಕಿಂತ ಭಿನ್ನವಾದ ಒಳನೋಟವನ್ನು ಅವರು ಹೊಂದಿದ್ದಾರೆ. ಭೂಮಿಗಳ ವಿಭಾಗದ ಬಗ್ಗೆ ಆಡಳಿತ ವರ್ಗದ ಅಭಿಪ್ರಾಯದ ಭಿನ್ನವಾಗಿತ್ತು. ಅದು ಹಿಡುವಳಿಗಳನ್ನು ತುಂಡುತುಂಡಾಗಿ ಒಡೆಯುವುದು ಸಮಸ್ಯಾತ್ಮಕವಾಗಿರುವುದರಿಂದ ಅವುಗಳನ್ನು ದೊಡ್ಡ ‘ಆರ್ಥಿಕ ಹಿಡುವಳಿ’ಗಳನ್ನಾಗಿ ಒಗ್ಗೂಡಿಸುವ ಆವಶ್ಯಕತೆಯ ಪರವಾಗಿತ್ತು. ಡಾ.ಅಂಬೇಡ್ಕರರು ಈ ತರಹದ ಸಿದ್ಧ ಮಾದರಿಯ ಆರ್ಥಿಕ ಹಿಡುವಳಿಗಳನ್ನು ವಿರೋಧಿಸುತ್ತಾ ಯಾವುದೇ ಹಿಡುವಳಿಗಳನ್ನು ಆರ್ಥಿಕತೆಯಾಗಿ ಮಾಡುವಲ್ಲಿ ಹಿಡುವಳಿಗಳ ಗಾತ್ರವು ಅಪ್ರಸ್ತುತ ಎಂದು ಪ್ರತಿಪಾದಿಸುತ್ತಾರೆ. ಭೂಮಿಯ ಮೇಲಿನ ಉತ್ಪಾದಕ, ಬಂಡವಾಳ ಮತ್ತು ಶ್ರಮಶಕ್ತಿ ಹಾಗೂ ಇತರ ಎಲ್ಲ ಸಂಗತಿಗಳನ್ನೊಳಗೊಂಡಂತೆ ಬೇಸಾಯದ ಸಾಂದ್ರತೆಯು ಭೂಮಿಯನ್ನು ಆರ್ಥಿಕತೆಯನ್ನಾಗಿಸುತ್ತದೆ. ನಿಜವಾದ ಪರಿಹಾರವಿರುವುದು ಕೈಗಾರಿಕೆಯ ಅಭಿವೃದ್ಧಿಯಲ್ಲಿ. ಅದು ದೇಶದಾದ್ಯಂತ ಲಭ್ಯವಿರುವ ಅಧಿಕ ಶ್ರಮವನ್ನು ಹೀರಿಕೊಳ್ಳುವುದು ಮಾತ್ರವಲ್ಲ, ಪ್ರತಿಫಲವಾಗಿ ವ್ಯವಸಾಯಕ್ಕೆ ಆವಶ್ಯಕವಾದ ಇತರ ಸವಲತ್ತುಗಳ ಪೂರೈಕೆಗೆ ಭಾರತದ ಕೃಷಿಯನ್ನು ಕುಂಠಿತಗೊಳಿಸಿತು.ಒಂದು ವೇಳೆ ಹೊಲಗದ್ದೆಗಳನ್ನು ಒಗ್ಗೂಡಿಸಬೇಕೆಂದರೆ, ಸಹಕಾರದ ಮೂಲಕ ಮಾಡಬೇಕೇ ಹೊರತು ಬಲತ್ಕಾರದ ನಿಗಮೀಕರಣದಿಂದಲ್ಲ ಎಂದು ಸೂಚಿಸುತ್ತಾರೆ. ಇಂದಿಗೂ ಕೂಡ, ಇದೊಂದು ಒಳ್ಳೆಯ ವಿಶ್ಲೇಷಣೆ ಮತ್ತು ನಮ್ಮ ದೇಶದ ಸಮಸ್ಯೆಗೆ ನ್ಯಾಯಸಮ್ಮತ ಪರಿಹಾರ ಎಂದು ಕಾಣುತ್ತದೆ. ಕೃಷಿಯ ನಿಗಮೀಕರಣಕ್ಕೋಸ್ಕರ ಹಿಡುವಳಿಗಳ ಕ್ರೋಡೀಕರಣವು ಜಾಗತೀಕರಣದ ಕೊನೆಯ ದಶಕದಲ್ಲಿ ಆರಂಭವಾದರೂ ಈ ವಿಶ್ಲೇಷಣೆ ಇನ್ನೂ ಕೂಡ ಪ್ರಬಲ ಪರಿಹಾರವನ್ನು ಒದಗಿಸುತ್ತದೆ. ಹಿಡುವಳಿಗಳ ಕ್ರೋಡೀಕರಣವಾದವನ್ನು ವಿರೋಧಿಸುತ್ತಾ ಡಾ. ಅಂಬೇಡ್ಕರರು ಆಮೂಲಾಗ್ರ ಭೂಸುಧಾರಣೆಯ ಅನಿವಾರ್ಯತೆ ಮತ್ತು ಈ ಸುಧಾರಣೆಯನ್ನು ತರುವಲ್ಲಿ ರಾಜ್ಯಾಂಗದ ಪಾತ್ರದ ಬಗ್ಗೆ ಒತ್ತು ನೀಡುತ್ತಾರೆ.

ಆನಂತರದ ವರ್ಷಗಳಲ್ಲಿ ಆರ್ಥಿಕ ನೀತಿಯ ಸಮಸ್ಯೆಗಳನ್ನು ಪರಿಶೀಲಿಸುವಾಗ ಅವರು ಈ ಸೂಕ್ಷ್ಮ ಒಳನೋಟಗಳನ್ನೇ ನೆಚ್ಚಿಕೊಂಡಂತೆ ಕಾಣುತ್ತದೆ. ಅಕ್ಟೋಬರ್ 10, 1927ರಂದು ಬಾಂಬೆ ಲೆಜಿಸ್ಲೇಟಿವ್ ಕೌನ್ಸಿಲ್‌ನಲ್ಲಿ ‘ಸಣ್ಣ ಹಿಡುವಳಿದಾರರ ರಿಲೀಫ್ ಪರಿಹಾರ ಅಡಗಿರುವುದು’ ಹೊಲಗದ್ದೆಗಳ ಗಾತ್ರವನ್ನು ಹೆಚ್ಚಿಸುವುದರಲ್ಲಿ ಅಲ್ಲ. ಆದರೆ ಅಧಿಕ ಬಂಡವಾಳ ಮತ್ತು ಅಧಿಕ ಶ್ರಮಗಳನ್ನೊಳಗೊಂಡ ಭೂಮಿಯ ಮೇಲಿನ ತೀವ್ರಗತಿಯ ಬೇಸಾಯದಿಂದ’ ಎಂದು ವಾದಿಸುತ್ತಾರೆ. ಅವರು ಮುಂದುವರಿಯುತ್ತಾ, ‘ಒಳ್ಳೆಯ ವಿಧಾನವೆಂದರೆ ಸಹಕಾರಿ ಕೃಷಿಯನ್ನು ಪರಿಚಯಿಸುವುದು ಮತ್ತು ಸಣ್ಣ ಹೊಲಗದ್ದೆಗಳ ಮಾಲಕರನ್ನು ಬೇಸಾಯದಲ್ಲಿ ತೊಡಗಿಸಿಕೊಳ್ಳಲು ಒತ್ತಾಯಿಸುವುದು’ ಎಂದು ಹೇಳುತ್ತಾರೆ. ಅವರು ಸೂಚಿಸಿದ ಸಹಕಾರಿ ಮಾದರಿಯು ಕೆಲವು ಯೂರೋಪಿಯನ್ ರಾಷ್ಟ್ರಗಳಿಂದ ತೆಗೆದುಕೊಂಡದ್ದೆಂದು ಹೇಳುತ್ತಾ.... ‘ನಾನು ಸಲಹೆ ಮಾಡುತ್ತಿರುವ ವಿಧಾನವು ನನ್ನ ಸ್ವಂತದಲ್ಲ. ಆದರೆ ತುಂಬಾ ಪ್ರಯೋಜನಗಳೊಂದಿಗೆ ಈ ವ್ಯವಸ್ಥೆಯು ಈಗಾಗಲೇ ಇಟಲಿ, ಫ್ರಾನ್ಸ್ ಮತ್ತು ಇಂಗ್ಲೆಂಡಿನ ಕೆಲವು ಭಾಗಗಳಲ್ಲಿ ಅಸ್ತಿತ್ವದಲ್ಲಿದೆ’ ಎನ್ನುತ್ತಾರೆ.

ಅವರು ಈ ವಾದವನ್ನು ಎಷ್ಟರಮಟ್ಟಿಗೆ ಮುಂದುವರಿಸುತ್ತಾರೆಂದರೆ ಭಾರತ ಸಂವಿಧಾನದಲ್ಲಿ ಇದನ್ನು ಸೇರಿಸಿಕೊಳ್ಳಲು ಸೂಚಿಸುತ್ತಾ ಇದೊಂದು ಆಡಳಿತ ವರ್ಗದ ನಡತೆಯನ್ನು ನಿರ್ದೇಶಿಸಲು ಇರುವ ದಾಖಲೆಯಾಗಿರದೆ ಸಮಾಜದ ಮೂಲಭೂತ ಆರ್ಥಿಕ ರಚನೆಯನ್ನು ಆದೇಶಿಸುವಂತಹುದಾಗಿರಬೇಕೆಂದು ಯೋಚಿಸಿದ್ದರು. ಪರಿಶಿಷ್ಟ ಜಾತಿಗಳ ಒಕ್ಕೂಟ (ಅವರ ಆಗಿನ ರಾಜಕೀಯ ಪಕ್ಷ)ದಿಂದ ಬರೆಯಲ್ಪಟ್ಟ ‘ರಾಜ್ಯಾಂಗ ಮತ್ತು ಅಲ್ಪಸಂಖ್ಯಾತರು’ ಎನ್ನುವ ತನ್ನ ಚಿಕ್ಕ ಪ್ರಸ್ತಾವನೆಯಲ್ಲಿ ಭೂಮಿಯ ರಾಷ್ಟ್ರೀಕರಣ ಮತ್ತು ಕೃಷಿಯ ಅಭಿವೃದ್ಧಿಗಾಗಿ ಸಹಕಾರಿ ಸಂಘಗಳ ಮೂಲಕ ಕೃಷಿಯನ್ನು ಪ್ರೋತ್ಸಾಹಿಸುವ ಉಳುಮೆದಾರರ ಗುಂಪುಗಳಿಗೆ ಭೂಮಿಯನ್ನು ಗೇಣಿಗೆ ಕೊಡಬೇಕೆಂದು ವಾದಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ ರಾಜ್ಯಾಂಗವು ಅವಶ್ಯವಾಗಿ ಅತೀ ಮುಖ್ಯ ಪಾತ್ರವನ್ನು ವಹಿಸಬೇಕು. ಯಾವುದನ್ನೂ ಖಾಸಗಿ ಉದ್ಯಮಕ್ಕೆ ನೀಡದೆ ಅತ್ಯಧಿಕ ಉತ್ಪಾದಕತೆಯನ್ನು ಕೊಡುವ ಜನರ ಆರ್ಥಿಕ ಜೀವನವನ್ನು ರೂಪಿಸುವ ಹಾಗೂ ಸಂಪತ್ತಿನ ಸಮಾನ ಹಂಚಿಕೆಯನ್ನು ನಿರ್ಧರಿಸುವ ಯೋಜನೆಯನ್ನು ರೂಪಿಸುವ ಜವಾಬ್ದಾರಿಯನ್ನು ರಾಜ್ಯಾಂಗದ ಮೇಲೆ ಹೊರಿಸುತ್ತಾರೆ. ಅವರು ತಯಾರಿಸಿದ ಯೋಜನೆಯು ‘ಸಂಘಟಿತ ವಿಧಾನದ ಬೇಸಾಯವನ್ನು ಒಳಗೊಂಡ ಕೃಷಿಯ ಮೇಲಿನ ರಾಜ್ಯಾಂಗ ಮಾಲಕತ್ವ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ರಾಜ್ಯಾಂಗದ ಸುಧಾರಿತ ರೀತಿಯ ಸಮಾಜವಾದ’ ಎಂಬುದಾಗಿತ್ತು. ಪ್ರಮುಖ ಕೈಗಾರಿಕೆಗಳು ಮತ್ತು ವಿಮೆಗಳು ಸಾರ್ವಜನಿಕ ಕ್ಷೇತ್ರದಡಿಯಲ್ಲಿರಬೇಕೆಂದು ಆಲೋಚಿಸಿದ್ದರು. ತಮ್ಮ ಪ್ರಸ್ತಾವನೆಯಲ್ಲಿ ಕಾರಣಗಳನ್ನು ಕೊಡುತ್ತಾ ‘ರಾಜ್ಯಾಂಗದಿಂದ ಬಂಡವಾಳದ ಪೂರೈಕೆ ಇಲ್ಲದಿದ್ದರೆ ಭೂಮಿಯಾಗಲಿ, ಕೈಗಾರಿಕೆಯಾಗಲೀ, ಯಾವುದೇ ಉತ್ತಮ ಫಲಿತಾಂಶ ನೀಡುವಂತೆ ಮಾಡಲು ಸಾಧ್ಯವಿಲ್ಲ’ ಎನ್ನುತಾರೆ. ಖಾಸಗಿ ವಿಮೆಗಳಿಗಿಂತ ರಾಷ್ಟ್ರೀಕೃತ ವಿಮೆಗಳು ಹಣದ ಪಾವತಿಗಾಗಿ ವಾಣಿಜ್ಯ ಸಂಸ್ಥೆಯು ರಾಜ್ಯಾಂಗದ ಎಲ್ಲ ಸಂಪನ್ಮೂಲಗಳನ್ನು ಭದ್ರತೆಯಾಗಿ ಅಡವಿಡುತ್ತದೆ. ರಾಜ್ಯಾಂಗವು ಆರ್ಥಿಕ ಯೋಜನೆಗಳಿಗಾಗಿ ಅಗತ್ಯ ಹಣಕಾಸಿನ ಸಂಪನ್ಮೂಲಗಳನ್ನು ಹಣಕಾಸು ಮಾರುಕಟ್ಟೆಯಿಂದ ಅಧಿಕ ಬಡ್ಡಿದರದಲ್ಲಿ ಪಡೆಯಲಾಗದ ಸಂದರ್ಭದಲ್ಲಿ ಇದು ಒದಗಿಸುತ್ತದೆ. ಅವರ ಪ್ರಕಾರ ಭಾರತದ ಕ್ಷಿಪ್ರ ಕೈಗಾರೀಕರಣಕ್ಕೆ ರಾಜ್ಯಾಂಗ ಸಮಾಜವಾದ ಅವಶ್ಯವಾಗಿದೆ.

ಖಾಸಗಿ ಉದ್ಯಮಕ್ಕೆ ಇದನ್ನು ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಮಾಡಿದರೆ ಖಾಸಗಿ ಬಂಡವಾಳಶಾಹಿ ಯೂರೋಪಿನಲ್ಲಾದಂತೆ ಸಂಪತ್ತಿನ ಅಸಮಾನತೆಯನ್ನು ಸೃಷ್ಟಿಸುತ್ತದೆ ಹಾಗೂ ಭಾರತೀಯರಿಗೆ ಇದೊಂದು ಎಚ್ಚರಿಕೆಯಾಗಿದೆ.

ಅವರ ಯೋಜನೆಯು ಎರಡು ಪ್ರಮುಖ ಲಕ್ಷಣಗಳನ್ನು ಹೊಂದಿದೆ. ಒಂದು, ಅದು ಆರ್ಥಿಕ ಜೀವನದ ಮುಖ್ಯ ಕ್ಷೇತ್ರಗಳಲ್ಲಿ ರಾಜ್ಯಾಂಗ ಸಮಾಜವಾದವನ್ನು ಪ್ರತಿಪಾದಿಸುತ್ತದೆ;ಎರಡು ಇದರ ಸ್ಥಾಪನೆಯನ್ನು ಶಾಸಕಾಂಗದ ಇಚ್ಛೆಗೆ ಬಿಟ್ಟುಕೊಟ್ಟಿರಲಿಲ್ಲ. ರಾಜ್ಯಾಂಗ ಸಮಾಜವಾದವು ಸಂವಿಧಾನದ ಕಾನೂನಿನ ಮೂಲಕವೇ ಅಸ್ತಿತ್ವಕ್ಕೆ ಬರಬೇಕು. ಆ ರೀತಿ ಮಾಡುವುದರಿಂದ ಶಾಸಕಾಂಗ ಮತ್ತು ಕಾರ್ಯಾಂಗದ ಕಾಯ್ದೆ ಇದನ್ನು ಬದಲಾವಣೆ ಮಾಡಲಾಗದು. ಅವರು ಈ ಅಂಶಗಳನ್ನು ರಾಜಕೀಯ ಪ್ರಜಾಪ್ರಭುತ್ವದ ಮೂಲ ಸ್ಫೂರ್ತಿ ಎಂದು ಹೇಳುತ್ತಾ ಸಮರ್ಥಿಸಿಕೊಳ್ಳುತ್ತಿದ್ದರು.

ರಾಜಕೀಯ ಪ್ರಜಾಪ್ರಭುತ್ವವೆಂದರೆ ‘ಸೌಲಭ್ಯಗಳನ್ನು ಪಡೆದುಕೊಳ್ಳಲು ವ್ಯಕ್ತಿಯೊಬ್ಬ ತನ್ನ ಸಂವಿಧಾನಾತ್ಮಕ ಹಕ್ಕಿನಿಂದ ವಂಚಿತನಾಗದೆ ಇರುವುದು’ ಮತ್ತು ‘ರಾಜ್ಯಾಂಗವು ಖಾಸಗಿ ವ್ಯಕ್ತಿಗಳಿಗೆ ಇತರರನ್ನು ನಿಯಂತ್ರಿಸಲು ಅಧಿಕಾರವನ್ನು ಕೊಡತಕ್ಕದ್ದಲ್ಲ’ ಎಂದು ವಾದಿಸುತ್ತಾರೆ. ‘ವ್ಯಕ್ತಿಗತ ಲಾಭವನ್ನು ಪ್ರಚೋದಿಸುವ ಖಾಸಗಿ ಉದ್ಯಮ ಆಧಾರಿತ ಸಾಮಾಜಿಕ ಆರ್ಥಿಕತೆಯ ವ್ಯವಸ್ಥೆ ಈ ಆವಶ್ಯಕತೆಗಳನ್ನು ಧಿಕ್ಕರಿಸುತ್ತದೆ ಎಂದು ಹೇಳುತ್ತಾರೆ. ಅವರು ಯಾವಾಗಲೂ ಹೇಳುತ್ತಿದ್ದರು. ‘ಆರ್ಥಿಕ ವ್ಯವಸ್ಥೆಯಲ್ಲಿ ಕೆಲಸಗಾರರ ಕೆಲಸ ಮಾಡುವ ಕೈಗಳು, ನಿಗದಿತ ವಿರಾಮಗಳಲ್ಲಿ ಅತ್ಯಧಿಕ ಸಾಮಗ್ರಿಗಳನ್ನು ಉತ್ಪಾದಿಸಲು ಯಾರಾದರೊಬ್ಬರು ನಿಯಮಗಳನ್ನು ರೂಪಿಸಬೇಕು; ಆಗ ಕೆಲಸಗಾರರು ಕೆಲಸ ಮಾಡುತ್ತಾರೆ, ಹಾಗೂ ಕೈಗಾರಿಕೆಯು ಮುಂದುವರಿಯುತ್ತದೆ. ರಾಷ್ಟ್ರವು ಇದನ್ನು ಮಾಡದಿದ್ದರೆ ಖಾಸಗಿ ಯಜಮಾನ ಮಾಡಬೇಕು. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ‘ರಾಜ್ಯಾಂಗದ ನಿಯಂತ್ರಣದಿಂದ ಸ್ವಾತಂತ್ರವೆಂದು ಏನನ್ನು ಕರೆಯುತ್ತೇವೋ ಅದರ ಇನ್ನೊಂದು ಹೆಸರೇ ಖಾಸಗಿ ಯಜಮಾನನ ನಿರಂಕುಶ ಸರ್ವಾಧಿಕಾರತ್ವ.’

ಆಗ ಅವರು ಕೆಟ್ಟ ಜಾತಿವ್ಯವಸ್ಥೆಯ ವಿರುದ್ಧ ಸಾಮಾಜಿಕ-ಸಾಂಸ್ಕೃತಿಕ ಮಟ್ಟದ ತನ್ನ ಹೋರಾಟ ಆರಂಭಿಸಿದ್ದರೂ, ಒಬ್ಬ ಅರ್ಥಶಾಸ್ತ್ರಜ್ಞನಾಗಿ ಡಾ.ಅಂಬೇಡ್ಕರರು ಸಾಮಾಜಿಕ ಮತ್ತು ಆರ್ಥಿಕತೆಯ ನಡುವಿನ ತಾರ್ಕಿಕ ಸಂಬಂಧವನ್ನು ಅರಿತಿದ್ದರು. ಆರ್ಥಿಕ ಅಭಿವೃದ್ಧಿಯನ್ನು ಉತ್ಪಾದಕ ವ್ಯವಸ್ಥೆಯಲ್ಲಿ ನಿಜವಾದ ವಾಸ್ತವಿಕ ಬದಲಾವಣೆಯಾಗದೆ, ಸಾಮಾಜಿಕ ವ್ಯವಸ್ಥೆಯಲ್ಲಿ ಅಪೇಕ್ಷಿತ ಬದಲಾವಣೆ ಸಾಧ್ಯವಿಲ್ಲ. ಆದುದರಿಂದ ಸಂಬಂಧಿತ ಕ್ಷೇತ್ರದಲ್ಲಿ ಬದಲಾವಣೆ ತರಲು ಹೋರಾಡುತ್ತಿದ್ದಾಗಲೇ ಅವರು ಉತ್ಪಾದಕ ಕ್ಷೇತ್ರವನ್ನು ಊಳಿಗಮಾನ್ಯ ಆಧಿಪತ್ಯದ ಸಂಕೋಲೆಯಿಂದ ಬಿಡಿಸಲು ಪ್ರಯತ್ನಿಸಿದ್ದರು.

ಸಣ್ಣ ಹಿಡುವಳಿಗಳ ಅಧ್ಯಯನದ ಮೂಲಕ ಗಳಿಸಿದ ಒಳನೋಟಗಳು ಭೂಸುಧಾರಣೆಯಿಂದ ಕೂಡಿದ ಭಾರತೀಯ ಆರ್ಥಿಕತೆಯ ಬೇಸಾಯದ ಸಾಂದ್ರತೆಯ ಆಧಾರವನ್ನು ಒದಗಿಸಿದೆಯಲ್ಲದೆ ಕೈಗಾರೀಕರಣವನ್ನು ಮಾಡುವಲ್ಲಿಯೂ ಸಹ ರಾಜ್ಯಾಂಗವು ಅಡಿಪಾಯ ಹಾಕಲೇಬೇಕಾಗಿತ್ತು. ಈ ಗ್ರಹಿಕೆಯು ಅವರ ಮುಂದಿನ ಎಲ್ಲ ಸೂಚನೆಗಳಿಗೂ ಪೂರಕವಾಗಿಯೇ ಇತ್ತು. ಆದುದರಿಂದ ಅವರು ಹಿಂದಿನ ಕೆಲವು ಹೋರಾಟಗಳಂತೆ ತನ್ನ ಜಾತಿಗೆ ಸೀಮಿತಗೊಳಿಸಿರಲಿಲ್ಲ ಹಾಗೂ ಎರಡು ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಲು ನಿರ್ಧರಿಸಿದ್ದರು.

ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಆಚರಣೆಯಲ್ಲಿದ್ದ ಜಮೀನ್ದಾರಿ ಪದ್ಧತಿಯಾದ ಖೋಟಿ ವ್ಯವಸ್ಥೆಯ ವಿರುದ್ಧ ಹೋರಾಟವು ಅಸಂಖ್ಯಾತ ಗ್ರಾಮೀಣ ಬಡವರನ್ನು ತೀವ್ರತರ ಆರ್ಥಿಕ ಶೋಷಣೆಯಿಂದ ಸ್ವತಂತ್ರಗೊಳಿಸಿತ್ತು. ಹಾಗೆಯೇ ಮಹಾರ್ ವತನ್ ವಿರುದ್ಧವೂ ಚಳವಳಿ ಮಾಡಿದ್ದರು. ಪಟ್ಟಣಗಳಲ್ಲಿನ ಕೈಗಾರಿಕಾ ಕ್ಷೇತ್ರದಲ್ಲಿ ತಮ್ಮ ವರ್ಗ ಸಿದ್ಧಾಂತದ ಅಡಿಯಲ್ಲಿ ಕಮ್ಯುನಿಸ್ಟರ ಮುಂದಾಳತ್ವದಲ್ಲಿ ಪ್ರಬಲ ಕಾರ್ಮಿಕ ಸಂಘಟನೆಗಳ ಹೋರಾಟ ನಡೆಯುತ್ತಿದ್ದರೂ ಅವುಗಳು ದಲಿತ ಕಾರ್ಮಿಕರ ಜಾತಿ ತುಳಿತವನ್ನು ಸರಿಯಾಗಿ ಪ್ರತಿನಿಧಿಸುತ್ತಿರಲಿಲ್ಲ.

 ಕಮ್ಯೂನಿಸ್ಟ್ ಕಾರ್ಮಿಕ ಸಂಘಟನೆಗಳ ಈ ತರಹದ ಲೋಪ ಹಾಗೂ ಶ್ರಮದ ಶೋಷಣೆಯಿಂದ ಹೊರಬರಲೆಂದೇ ಡಾ.ಅಂಬೇಡ್ಕರ್ 1936ರಲ್ಲಿ ಕಾರ್ಮಿಕ ಪಕ್ಷ ಕಟ್ಟುತ್ತಾರೆ.ಡಾ.ಅಂಬೇಡ್ಕರ್ ಒಬ್ಬ ಸಾಮಾಜಿಕ ಸ್ವತಂತ್ರ ಸುಧಾರಕನಾಗುವ ಲಕ್ಷಣಗಳನ್ನು ಹೊಂದಿದ್ದು ಜಾತಿ ಪದ್ಧತಿಯನ್ನು ತೊಡೆದು ಹಾಕಲು ಇಚ್ಛಿಸಿದರು.ಯಾಕೆಂದರೆ ಸ್ವತ: ಅವರು ಅದರ ಕೆಡುಕುಗಳನ್ನು ಅನುಭವಿಸಿದ್ದರು.ಹಾಗಾಗಿ ಅವರು ಜನರನ್ನು ಅದರಿಂದ ಮುಕ್ತಗೊಳಿಸಲು ಇಚ್ಛಿಸಿದ್ದರು. ನಿಜವಾಗಿಯೂ ಅವರ ವೈಯಕ್ತಿಕ ನೋವುಗಳೇ ಜಾತಿಪದ್ಧತಿಯ ವಿರುದ್ಧದ ಅವರ ತೀವ್ರ ಹೋರಾಟದ ಪ್ರೇರಕ ಶಕ್ತಿಯಾಗಿತ್ತು.

 ಇಲ್ಲಿ ಗಮನಿಸದೆ ಇರುವಂಥ ಒಂದು ಬಹುಮುಖ್ಯ ಸಂಗತಿಯೆಂದರೆ ಜಾತಿವ್ಯವಸ್ಥೆಯನ್ನು ನಿಭಾಯಿಸದೆ ಭಾರತದ ಅಭಿವೃದ್ಧಿ ಸಾಧ್ಯವಿರಲಿಲ್ಲ. ಎಂದರೆ ಅವರ ಆರ್ಥಿಕತೆಯ ತರ್ಕವು ಜಾತಿಪದ್ಧತಿಯ ನಿವಾರಣೆಯಾಗದೆ ಪೂರ್ಣಗೊಳ್ಳುತ್ತಿರಲಿಲ್ಲ.ಅದ್ದರಿಂದ ದಲಿತರ ಸ್ವಾತಂತ್ರ ದೇಶದ ಸಮಗ್ರ ಅಭಿವೃದ್ಧಿಯನ್ನು ಅವಲಂಬಿಸಿತ್ತು. ಯಾವಾಗ ಜಾತಿಪದ್ಧತಿಯ ಮುಂದಾಳುಗಳು ತಮ್ಮನ್ನು ಆರ್ಥಿಕತೆಯ ಸಮಯ ಸಾಧಕ ಮೂಲತತ್ವಗಳ, ಶ್ರಮ ವಿಭಜನೆಗಳ ಆಧಾರದ ಮೇಲೆ ಸಮರ್ಥಿಸಲು ಪ್ರಯತ್ನಿಸಿದರೋ ಆವಾಗ ಅಂಬೇಡ್ಕರ್ ಜಾತಿಗಳ ನಿರ್ನಾಮದ ಮೂಲಕ ಬಲವಾದ ಹೊಡೆತವನ್ನು ನೀಡಿದರು.ಜಾತಿ ವ್ಯವಸ್ಥೆಯು ಕೇವಲ ‘ಶ್ರಮವಿಭಜನೆ’ ಯಾಗಿರದೆ ‘ಶ್ರಮಜೀವಿಗಳ ವಿಭಜನೆ’ಯಾಗಿದೆ ಎನ್ನುತ್ತಾರೆ.

 ಜಾತಿವ್ಯವಸ್ಥೆಯ ಮೇಲಿನ ಅಂಬೇಡ್ಕರ್ ದಾಳಿ ದೋಷಮುಕ್ತವಾಗಿ ಕಂಡಿದ್ದರಿಂದ ಮೇಲ್ಜಾತಿಯವರೆಂದು ಹೇಳಿಕೊಳ್ಳುತ್ತಿದ್ದವರ ಪ್ರತಿಷ್ಠೆಗೆ ಸವಾಲಾಗಿತ್ತು. ಈಗ ಸವಾಲುಗಳೇ ಅವರ ಹೋರಾಟದ ಅವಿಭಾಜ್ಯ ಭಾಗಗಳಾಗಿದ್ದಾಗಲೂ, ಆರ್ಥಿಕ ಪ್ರಗತಿ ಮತ್ತು ಅಭಿವೃದ್ಧಿಯ ಈ ಹೋರಾಟದ ತಳಹದಿ ಎಂಬುದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಭಾರತದಲ್ಲಿ ಜಾತಿಪದ್ಧತಿಯ ಶ್ರಮ ಮತ್ತು ಬಂಡವಾಳಗಳ ಚಲನೆಯನ್ನು ನಿಯಂತ್ರಿಸುವ ಮೂಲಕ ಆರ್ಥಿಕ ಪ್ರಗತಿ ಮತ್ತು ಅಭಿವೃದ್ಧಿಗೆ ಮಾರಕವಾಗಿದೆ ಎಂದು ಅಂಬೇಡ್ಕರ್ ವಾದಿಸುತ್ತಾರೆ.ಶ್ರಮ ಮತ್ತು ಬಂಡವಾಳಗಳ ನಿಶ್ಚಲತೆಯು ಉತ್ಪಾದಕ ಪ್ರಕ್ರಿಯೆಯಲ್ಲಿ ಅದಕ್ಷತೆಯನ್ನು ಉಂಟುಮಾಡುವ ಮೂಲಕ ಆರ್ಥಿಕ ಪ್ರಗತಿಯನ್ನು ವ್ಯರ್ಥಗೊಳಿಸುತ್ತದೆ.

 ಆದ್ದರಿಂದ, ಸಾಮಾಜಿಕ ಮತ್ತು ವೈಯಕ್ತಿಕ ದಕ್ಷತೆಯು,ತನ್ನ ಜೀವನವನ್ನು ಆಯ್ಕೆ ಮಾಡಿಕೊಳ್ಳುವ ಮತ್ತು ರೂಪಿಸಿಕೊಳ್ಳುವ ಸಾಮರ್ಥ್ಯದ ದೃಷ್ಟಿಯಿಂದ ವ್ಯಕ್ತಿಯ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ನಮಗೆ ಅಗತ್ಯವಾಗುತ್ತದೆ. ಈ ತತ್ವವು ಜಾತಿ ವ್ಯವಸ್ಥೆಯ ಉಲ್ಲಂಘನೆಯಾಗಿದ್ದು ಇದು ವ್ಯಕ್ತಿಗಳಿಗೆ ಕೆಲಸಗಳನ್ನು ಮೊದಲೇ ತರಬೇತುಗೊಂಡ ಮೂಲ ಅರ್ಹತೆಗಳ ಮೇಲೆ ನೀಡುವ ಪ್ರಯತ್ನ ಮಾಡುತ್ತಿದ್ದು ಹೆತ್ತವರ ಸಾಮಾಜಿಕ ಸ್ಥಿತಿಗತಿಗಳಿಗೆ ಅನುಗುಣವಾಗಿರುತ್ತದೆ’ ಎಂದವರು ಹೇಳುತ್ತಾರೆ. ಆರ್ಥಿಕ ಅಭಿವೃದ್ಧಿಯ ಪ್ರಕ್ರಿಯೆಯು ಸಾಮಾಜಿಕ-ಆರ್ಥಿಕ ರಚನೆಗಳಲ್ಲಿ ನಿರಂತರ ಬದಲಾವಣೆಗಳನ್ನು ಬಯಸುತ್ತಿದ್ದರೆ, ಜಾತಿವ್ಯವಸ್ಥೆಯು ಸಾಂಪ್ರದಾಯಿಕ ಸಾಮಾಜಿಕ ಆರ್ಥಿಕ ರೀತಿಗೆ ಪ್ರಚೋದಿಸುತ್ತಿದ್ದು ಇದು ಅಭಿವೃದ್ಧಿಗೆ ಮಾರಕವಾಗಿರುವುದು ಋಜುವಾತಾಗಿದೆ.

ಡಾ. ಅಂಬೇಡ್ಕರರ ಆರ್ಥಿಕ ಚಿಂತನೆಗಳ ಪ್ರಸ್ತುತತೆಯನ್ನು ಸಮಕಾಲೀನ ವಿಚಾರಗಳೊಂದಿಗೆ ತುಲನೆ ಮಾಡಲು ತುಂಬಾ ದಾರಿಗಳಿವೆ. ಅನೇಕ ಮುಖ್ಯವಾಹಿನಿಯ ಆರ್ಥಿಕತಜ್ಞರು ಹಣಕಾಸು ನಿರ್ವಹಣೆ, ಹಣಕಾಸು ವ್ಯವಸ್ಥೆ ಮತ್ತು ಆರ್ಥಿಕ ನಿಯಂತ್ರಣ ಸಮಗ್ರ ಅಂಶಗಳ ಬಗೆಗಿನ ಅವರ ದೃಷ್ಟಿಕೋನಗಳನ್ನು ಈಗಲೂ ಪ್ರಸ್ತುತವೆಂದು ಮನಗಂಡಿದ್ದಾರೆ.

ಕೃಪೆ: ಲಡಾಯಿ ಪ್ರಕಾಶನ

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top