ಎಚ್ಚೆತ್ತ ಹಾಡುಗಳ ಜನಕವಿ ದಾನಪ್ಪ ನಿಲೋಗಲ್ | Vartha Bharati- ವಾರ್ತಾ ಭಾರತಿ

---

ಎಚ್ಚೆತ್ತ ಹಾಡುಗಳ ಜನಕವಿ ದಾನಪ್ಪ ನಿಲೋಗಲ್

ಕರ್ನಾಟಕದ ಜನಪರ ಚಳವಳಿ, ಕಾರ್ಯಾಗಾರ, ಸಭೆಗಳ ಹೋರಾಟದ ಹಾಡುಗಳಲ್ಲಿ ಒಂದಾದರೂ ಮಸ್ಕಿಯ ದಾನಪ್ಪನಿಲೋಗಲ್ ರಚನೆ ಇದ್ದೇ ಇರುತ್ತೆ. ಹೀಗೆ ಹಾಡುವಾಗ ಕೆಲವೊಮ್ಮೆ ಈ ಹಾಡನ್ನು ದಾನಪ್ಪಕಟ್ಟಿದ್ದು ಎನ್ನುವುದೂ ಮರೆಯಾಗುತ್ತದೆ. ಅಂದರೆ ದಾನಪ್ಪನ ಹಾಡುಗಳು ಜನಪದ ಗೀತೆಗಳಂತೆ ನಾಡಿನಾದ್ಯಾಂತ ಹೆಸರಿನ ಹಂಗಿಲ್ಲದೆ ಚಲಿಸುತ್ತಿವೆ. ಹೀಗೆ ಜನರನ್ನು ತಲುಪುವುದೇ ಮುಖ್ಯ ನನ್ನ ಹೆಸರನ್ನು ಹೇಳುವ ಅಗತ್ಯವಿಲ್ಲ ಎಂದು ಸ್ವತಃ ದಾನಪ್ಪತನ್ನ ಹಾಡನ್ನು ಸಾರ್ವಜನಿಕ ವಲಯಕ್ಕೆ ಒಪ್ಪಿಸಿದ್ದಾರೆ. ಹೀಗೆ ಎಂಬತ್ತರ ದಶಕದಿಂದಲೂ ದಲಿತ ಚಳವಳಿಯ ಸಂಗಾತಿಯಾಗಿ, ಆಯಾ ಕಾಲದ ಬಿಕ್ಕಟ್ಟುಗಳನ್ನು, ಜನರನ್ನು ಎಚ್ಚರಿಸಬೇಕಾದ ವಿದ್ಯಮಾನಗಳನ್ನು ಸರಳವಾಗಿ ಜನರ ಲಯದಲ್ಲಿ ಹಾಡು ಕಟ್ಟಿ ಹಾಡುತ್ತಾರೆ. ನಂತರ ಈ ಹಾಡಿಗೆ ಕಾಲು ಬಂದೋ, ರೆಕ್ಕೆ ಬಂದೋ ಬೇರೆ ಬೇರೆ ಕಡೆಗಳಿಗೆ ಚಲಿಸುತ್ತವೆ. ಹೀಗೆ ಚಲಿಸುತ್ತಾ ಚಳವಳಿಗಳ ಸಂಗಾತಿಗಳಾಗುತ್ತವೆ. ದಾನಪ್ಪ ಮಸ್ಕಿಯಲ್ಲೇ ಇದ್ದರೂ ಆತನ ಹಾಡುಗಳು ದಣಿವರಿಯದೆ ಚಳವಳಿಯಲ್ಲಿ ನಿರತವಾಗಿರುತ್ತವೆ. ‘ದಾನಪ್ಪನ ಜತೆ ಹಾಡಿದವರು, ಹಾಡುಕಟ್ಟಿದವರು ಅದನ್ನೇ ಏಣಿ ಮಾಡಿಕೊಂಡು ಕಳೆದು ಹೋದರೂ, ದಾನಪ್ಪಮಾತ್ರ ಈಗಲೂ ಹಾಡನ್ನೇ ಬದುಕುತ್ತಿದ್ದಾರೆ. ಇದೇ ನನ್ನಂಥವರಿಗೆ ಸೋಜಿಗ’ ಎನ್ನುವ ಕೊಟಗಾನಹಳ್ಳಿ ರಾಮಯ್ಯನವರ ಮಾತುಗಳು ದಾನಪ್ಪನ ಬದ್ಧತೆಗೆ ಸಾಕ್ಷಿಯಾಗಿವೆ.

ಇಂತಹ ಜನಕವಿ ದಾನಪ್ಪನ ಜತೆ ಮಸ್ಕಿಯ ಸರಕಾರಿ ಐಬಿಯಲ್ಲಿ ಒಂದು ಮಾತುಕತೆ ನಡೆಸಿದೆ. ಹಾಡು ಕಟ್ಟಲು ಬಾಲ್ಯದಲ್ಲಿ ಕೇಳಿದ ಜನಪದ ಭಜನೆಗಳೇ ಸ್ಫೂರ್ತಿ ಎನ್ನುವುದರಿಂದಿಡಿದು, ತನ್ನೂರಿನ ಧಣಿಗಳ ದಬ್ಬಾಳಿಕೆ, ಧಾರವಾಡದಲ್ಲಿ ಓದಿನ ಜತೆಗಿನ ಹೋರಾಟದ ಒಡನಾಟ, ಇಂದು ದಲಿತ ಸಂಘಟನೆಗಳು ಒಡೆದು ಚೂರಾದದ್ದರ ಬಗ್ಗೆ ವಿಷಾದ ಹೀಗೆ ಹತ್ತಾರು ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ. ಈ ಪಯಣದಲ್ಲಿ ಜೊತೆಗಿದ್ದ ಮಿತ್ರ ಗೋಪಾಲ ಕೃಷ್ಣ, ಮಾತುಕತೆ ನಡೆಸುವಾಗಲೆ ಜೊತೆ ಸೇರಿಕೊಂಡ ಸಾಹಿತಿ ಗುಂಡೂರಾವ್ ದೇಸಾಯಿ ಈ ಮಾತುಕತೆಯನ್ನು ಮತ್ತಷ್ಟು ಅರ್ಥಪೂರ್ಣಗೊಳಿಸಿದ್ದಾರೆ. ದೀರ್ಘ ಮಾತುಕತೆಯ ಕೆಲವು ಆಯ್ದ ಭಾಗಗಳನ್ನು ಸಂವಾದ ಓದುಗರೊಂದಿಗೆ ಜನಕಥನದಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಸರ್, ನಮಸ್ಕಾರ.. ನಿಮ್ಮ ಬಾಲ್ಯದ ಅನುಭವಗಳು ಹೇಗೆ ನೀವೊಬ್ಬ ಹಾಡುಗಾರರಾಗಲು ನೆರವಾದವು?

 - ಹೈದರಾಬಾದ್ ಕರ್ನಾಟಕ ಅಂದ್ರೆ ಆರ್ಥಿಕವಾಗಿ, ಸಾಮಾಜಿಕ ವಾಗಿ ಹಿಂದುಳಿದದ್ದು ಅಂತಾರೆ ಅದು ಸತ್ಯ, ಅದರ ಜೊತೆಗೆ ಹಿಂದುಳಿಯೋಕೆ ಕಾರಣ ಏನು ಅಂತ ನೋಡುವಾಗ ಇಲ್ಲಿ ಫ್ಯೂಡಲ್ ಸಂಸ್ಕೃತಿ ಜೀವಂತವಾಗಿರುವ ನೆಲ. ಅಂತೆಯೇ ಸ್ವಾತಂತ್ರ ಸಿಕ್ಕು ಒಂದು ವರ್ಷದ ನಂತರ ಸ್ವಾತಂತ್ರ ಸಿಕ್ಕ ಪ್ರದೇಶ. ಹೈದರಾಬಾದ್ ನಿಜಾಮನ ಆಡಳಿತವಿದ್ದ ಕಾರಣ ಫ್ಯೂಡಲ್ ವ್ಯವಸ್ಥೆಯೂ ಜೀವಂತವಾಗಿದ್ದು, ಪ್ರತಿಯೊಂದು ಹಳ್ಳಿಯಲ್ಲಿ ಯೂ ದಲಿತ ಮತ್ತು ಅಸ್ಪಶ್ಯರ ಜೀವನ ಗಂಭೀರವಾದ ಕಡು ಬಡತನದಲ್ಲಿತ್ತು. ಇವರಿಗೆ ಭೂಮಿ ಇಲ್ಲ, ಓದು ಇಲ್ಲ. ಹೀಗಿರು ವಾಗ ಗೌಡ್ರು, ಜಮೀನ್ದಾರರ ದಬ್ಬಾಳಿಕೆಯ ಆಡಳಿತ. ಈ ಸ್ಥಿತಿಯಲ್ಲಿ ನನಗೆ ಓದಲು ಅವಕಾಶ ಸಿಕ್ಕದ್ದೇ ದೊಡ್ ವಿಷ್ಯ. ನಮ್ದು ನಿಲೋಗಲ್ ಆದ್ರೂ ಸಹ ಹತ್ತನ್ನೆರಡು ಕಿಮೀ ದೂರದ ಹಟ್ಟಿ ಗೋಲ್ಡ್ ಮೈನ್ಸ್‌ನಲ್ಲಿ ನಮ್ಮಪ್ಪಕಾರ್ಮಿಕ ಆಗಿದ್ದ ಕಾರಣ ನನಗೆ ಓದೋಕೆ ಅವಕಾಶ ಸಿಕ್ತು. ಗೆದ್ದಲಗಟ್ಟಿ ನಿಲೋಗಲ್‌ಗಳು ಧಣಿಗಳ ದರ್ಬಾರ್ ಇರೋ ಊರುಗಳು. ಅಕಸ್ಮಾತ್ ಕೂಲಿ ಆಗಿ ಕಳೆದು ಹೋಗೋನು ಓದಿ ಉಳಕಂಡೆ.

ಇಲ್ಲಿಂದ ಮುಂದಿನ ವಿದ್ಯಾಭ್ಯಾಸಕ್ಕೆ 1978 ರ ಹೊತ್ತಿಗೆ ಧಾರವಾಡಕ್ಕೆ ಓದೋಕೆ ಹೋದೆ. ಫಾರಿನ್‌ಗೆ ಹೋದಾಗ ಹೇಗೆ ಅನ್ಸುತ್ತೋ ಆಗ ಧಾರವಾಡನೂ ಹಾಗೆ ಅನ್ಸಿತ್ತು. ತಂಪುಗಾಳಿ, ಕಾಲೇಜು, ಹುಡುಗೀರು, ಲೈನ್ ಹೊಡೆಯೋದು ಎಲ್ಲವೂ ಹೊಸ ಅನುಭವಗಳು. ಆದ್ರೂ ಈ ಯಾವುದರಲ್ಲೂ ಕಳೆದು ಹೋಗಲಿಲ್ಲ. ಬದಲಾಗಿ ಪಿಯುಸಿನಲ್ಲೇ ಚಳವಳಿಯ ಸಂಪರ್ಕ ಸಿಕ್ ಬಿಟ್ಟಿತ್ತು. ಧಾರವಾಡದಿಂದ ರಜಕ್ಕೆ ಊರಿಗೆ ಬಂದಾಗ ಇಲ್ಲಿನ ಸ್ಥಿತಿ ಬೇರೆ ಯದೇ ರೀತಿಯಲ್ಲಿ ಕಾಣೋಕೆ ಶುರುವಾಯ್ತು. ಇಲ್ಲಿನ ಹುಡುಗರ ಜತೆ ಕೂರೋದು ಈ ಬಗ್ಗೆ ಚರ್ಚೆ ಮಾಡೋದು ಮಾಡ್ತಿದ್ದೆ.

ಅದೇ ತಾನೇ ಬಳ್ಳಾರಿಯಲ್ಲಿ ಎಸೆಸೆಲ್ಸಿ ಪಾಸಾಗಿದ್ದೆ. ಅಪ್ಪನ ನೌಕರಿ ಹಟ್ಟಿ ಚಿನ್ನದ ಗಣಿಯಲ್ಲಿ ಅನ್‌ಫಿಟ್ ಅಂತ ತೆಗೆಯಲಾ ಗಿತ್ತು. ಇಂದಿಗೂ ನೆನಪಿದೆ ನನ್ನಪ್ಪನ ಟಿ.ನಂ. 564, ಚಿನ್ನದ ಗಣಿಯ ವಾತಾವರಣದಲ್ಲಿ 15 ವರ್ಷ ಕಳೆದ ಕಾರಣ ನಮ್ಮ ಕುಟುಂಬ ಕೆಳಮಧ್ಯಮ ವರ್ಗದ ಬದುಕನ್ನ ರೂಢಿಸಿಕೊಂಡಿತ್ತು. ಅಪ್ಪನೌಕರಿ ಕಳಕೊಂಡ ಮೇಲೆ ಮರಳಿ ನಮ್ಮೂರಿಗೆ ಹೋಗೋದು ಅನಿವಾರ್ಯ ಆಯ್ತು. ನಮ್ಮೂರು ನಿಲೋಗಲ್ ಅಂದ್ರೆ ‘ಅದು ಧಣಿ ಊರು, ಗೆಜ್ಜಲಗಟ್ಟಿ ರಾಣಿ ಊರು’ ಅಂತಾನೆ ಗುರುತಿಸ್ತಿದ್ರು. ನಾವು ಊರಿಗೆ ಬಂದ ಮೇಲೆ ಇದು ನಿಜವಾಗ್ಲೂ ಧಣಿಗಳ ಊರು ಅಂತ ಗೊತ್ತಾಯ್ತು. ನೂರು ದನ ಎತ್ತುಗಳು ನಿಲ್ಲುವ ದೊಡ್ಡ ಪಡಸಾಲೆ, ತೋಟ ಗದ್ದೆ ಹೊಲ ಜಿನ್ನಾ ಎಲ್ಲಾ ಧಣಿಗಳದೆ. ಊರ ಜನರಿಗೆ ಈ ಹೊಲಗಳೆ ಆಸರೆ. ಊರಿನ ಹೊಟೇಲು, ದೇವಸ್ಥಾನಗಳು ನಮ್ಮಿಂದ ದೂರ. ಪುಣ್ಯಕ್ಕೆ ಹೊಲೆ ಮಾದಿಗರಿಗೆ ಊರ ಹೊರಗಡೆ ಎರಡು ಸಪರೇಟ ಬಾವಿಗಳಿದ್ದವು. ಈ ಬಾವಿ ಸುತ್ತಲ ಊರವರ ತಿಪ್ಪೆಗುಂಡಿಗಳು. ಈ ಬಾವಿ ನೀರೇ ನನ್ನೋಣಿ ಯ ಬಾಯಾರಿಕೆ ನೀಗಿಸಬೇಕಿತ್ತು. ಹಟ್ಟಿಯಿಂದ ಬಂದ ನಾವು ಈ ಬಿಟ್ಟಿ ಚಾಕರಿ ಇರೋ ಊರಲ್ಲಿ ಹೊಂದಿಕೋಬೇಕಿತ್ತು. ಊರ ಅಂಗಡಿಗಳಲ್ಲಿ ಕಿರಾಣಿ ಸಾಮಾನು ತಗಳ್ಳಾಕ ಹೋದಾಗ ಅವ್ರ ನಮ್ಮ ದುಡ್ಡನ್ನು ಮುಟ್ಟತಾ ಇರಲಿಲ್ಲ. ಒಂದು ರಟ್ಟೆಂಚಿನ ಪಾತ್ರಾಗ ದುಡ್ ತಗಂಡು ಅದೇ ಪಾತ್ರಯಾಗ ವಸ್ತುಗಳು ಸರಬರಾಜು ಆಗ್ತಾ ಇದ್ವು. ನಮ್ಮ ಓಣಿಗೆ ಅಂಟಿಕೊಂಡೇ ಸಾರಾಯಿ ಅಂಗಡಿ ಗಳಿದ್ವು. ನನ್ನೋಣಿ ಜನರು ಕುಡಿದು ಅಮಲೇರಿ ಕೂಗ್ಯಾಡಿದ್ರೂ ಊರಿಗೆ ಈ ಸೌಂಡು ಕೇಳತಿರಲಿಲ್ಲ. ನನ್ನೂರು ಮೊಹರಂ ಹಬ್ಬಕ್ಕೆ ರಂಗೇರತಿತ್ತು. ಅಲಾಯಿ ಹಬ್ಬಕ್ಕ ನಮ್ಮೂರಂತೂ ಬಾರೀ ಫೇಮಸ್ಸು. ತಿಂಗಳಗಟ್ಟಲೆ ಹೆಜ್ಜೆ ಹಾಕೋದು, ಅಲಾವಿ ಹಾಡ ಹೇಳೋದನ್ನ ಕಲಿಸೋ ತಾಲೀಮುಗಳು ನಡೀತಿದ್ವು.

ನಮ್ಮ ಮನೆ ಮುಂದಿನ ಈರಣ್ಣನ ಗುಡಿಯ ಕಟ್ಟೆಯೇ ಎಲ್ಲಾದಕ್ಕೂ ವೇದಿಕೆ. ಭಜನೆ, ಮದ್ವಿ, ಜಗಳ ಎಲ್ಲಾನು ಅಲ್ಲೇ ನಡೀತಿದ್ವು. ಅಪ್ಪಕುಡೀತಿದ್ದ, ಕುಡಿದಾಗೆಲ್ಲಾ ಅನ್ಯಾಯದ ವಿರುದ್ಧ ಬಂಡೇಳುವ ಮಾತು ಮತ್ತು ಜಗಳದಲ್ಲಿ ಮುಳುಗ್ತಿದ್ದ. ದೇವದಾಸಿ ಪದ್ಧತಿ, ಮುಟ್ಟಿಸಿಕೊಳ್ಳದೆ ಇರೋದು, ಮೇಲುಕೀಳು ಭೇದ ಮಾಡೋದು ಇವೆಲ್ಲಾ ಕುಡಿದಾಗ ಅಪ್ಪನ ಬಾಯಲ್ಲಿ ಜೋರಾಗಿ ಬರ್ತಿದ್ವು. ಹೀಗಾಗಿ ಊರ ನ್ಯಾಯಪಂಚಾಯ್ತಿಯಲ್ಲಿ ಅಪ್ಪನದು ಮೇಟಿಯ ಸ್ಥಾನ. ಆತನ ಮಾತುಗಳು ಕಡ್ಡಿ ಮುರದಂಗ ಇರ್ತಿತ್ತು. ಅವ್ವ ಸೂಗಮ್ಮ ಅಪ್ಪಚೌರಪ್ಪನನ್ನು ಸಮಾಧಾನ ಮಾಡೋಕೆ ಬಾಳ ಕಷ್ಟ ಪಡ್ತಿದ್ಲು. ಐದು ಮಕ್ಕಳ ಕುಟುಂಬ ನಮ್ಮದು. ಹಿರೇ ಮಗನಾದ ನನಗೆ ನನ್ನಜ್ಜನ ಹೆಸರು ಇಟ್ಟಿದ್ರು. ಈ ತಾತಯ್ಯ ರಜಾಕಾರರ ವಿರುದ್ಧ ಸಿಡಿದೆದ್ದದ್ದನ್ನು ಅಪ್ಪ ಆಗಾಗ ಹೇಳತಿದ್ರು. ಧಣಿಗಳ ಕಾರಿನ ಸಲುವಾಗಿ ನನ್ನೂರಿಗೆ ಟಾರು ರೋಡು ಬಂತು. ಧಣಿ ಬಂದರ ನಾವೆಲ್ಲಾ ತಲೆ ತಗ್ಗಿಸಿ ನಿಲ್ಲಬೇಕು, ಇಲ್ಲಾಂದ್ರೆ ಕಾಣದಂಗ ಓಡಿ ಹೋಗಬೇಕು. ಆತನ ಎದುರು ಎದೆ ಸೆಟೆಸಿ ನಿಲ್ಲೋ ಗಂಡಸು ನಮ್ಮೂರಲ್ಲಿ ಯಾರೂ ಇರಲಿಲ್ಲ. ಈ ಮಧ್ಯೆ ಅಪ್ಪ ಅವ್ವನಿಗೆ ನನ್ನ ಓದಿಸಬೇಕೆಂಬ ಹಟ ಮಾತ್ರ ಕಡಿಮೆ ಆಗಲಿಲ್ಲ. ತಂಗ್ಯಾರೆಲ್ಲ ಓದು ನಿಲ್ಲಿಸಿ, ಅವರು ಕೂಲಿ ಮಾಡಿದ ದುಡ್ಡು ನನ್ನ ಓದಿಗೆ ನೆರವಾಯ್ತು. ಡ್ರೈವರ್ ಆಗಿದ್ದ ನನ್ನ ಚಿಕ್ಕಪ್ಪರಾಯಪ್ಪನನ್ನ ಓದಿಗೆ ಸಾಥ್ ಕೊಟ್ಟ ಕಾರಣ ನಾನು ಧಾರವಾಡದ ಕರ್ನಾಟಕ ಕಾಲೇಜಿಗೆ 1978 ರಿಂದ

1982 ತನಕ ಕಲಿಯೋಕೆ ಸಾಧ್ಯವಾಯ್ತು. ಈ ಐದು ವರ್ಷದಲ್ಲಿ ಬಿ.ಎ. ಓದಿಕೊಂಡೆ. ನಮ್ ಸುತ್ ಮುತ್ತಣ ಊರಲ್ಲಿ ಮೊದಲ ಬಿ.ಎ. ಪಾಸು ಮಾಡಿದ ಮಾದರ ಹುಡುಗ ಅಂದ್ರೆ ನಾನೆ.

ಈ ಓದಿನ ಜೊತೆಗೆ ಹೋರಾಟಕ್ಕೆ ದುಮುಕಿದ್ದು ಹೇಗೆ?

- ಧಾರವಾಡಕ್ಕ ಓದೋಕೆ ಬಂದಾಗ ನಮಿಗೆ ಇದು ಫಾರಿನ್ ನೋಡಿದಂಗ್ ಆಗಿತ್ತು. ಇಷ್ಟು ದೂರ ಬಂದದ್ದೆ ಮೊದಲ ಸಲ. ಧಾರವಾಡದ ತಂಪು ಗಾಳಿ, ದೊಡ್ಡ ದೊಡ್ಡ ಮರ ಗಿಡ ಬಳ್ಳಿ, ಹಂಚಿನ ಮನೆಗಳು, ಬಿಸಿಲ ಬೆಂಗಾಡಿನಿಂದ ಹೋದ ನನಗೆ ಹೊಸ ಲೋಕನೆ ತೆರೆದಿಟ್ಟಂಗಾಗಿತ್ತು. ಹಿಂಗಿದ್ದೂ ನಮ್ಮೂರನ್ನು ನೆನೆಸಿಕೊಂಡಾಗ ಈ ತಂಪೂ ಬಿರುಬಿಸಿಲಾಗಿ ಕಾಡತಿತ್ತು. ಕರ್ನಾಟಕ ಸಂಘದಲ್ಲಿ ನಡೀತಿದ್ದ ಭಾಷಣ, ಮಾತುಕತೆ, ಚರ್ಚೆ, ವಿಚಾರಗೋಷ್ಠಿ, ಕವಿಗೋಷ್ಠಿಗಳು ನನ್ನ ಮೇಲೆ ತುಂಬಾ ಪ್ರಭಾವ ಬೀರತಿದ್ವು. ಬಹುಶಃ ಇಲ್ಲಿಂದಲೇ ನನ್ನೊಳಗಿನ ಹೋರಾಟದ ಮನೋಭಾವಕ್ಕೆ ಚಾಲನೆ ಸಿಕ್ಕಿತು.

ನನ್ನನ್ನ ಹೋರಾಟದ ರಂಗಕ್ಕ ಕರೆ ತಂದದ್ದು ಚಂದ್ರಶೇಖರ ಪಾಟೀಲ ಅವರ ತಮ್ಮ ವಿಜಯ ಪಾಟೀಲರು. ಇವರು ಹಾಸ್ಟೆಲ್ ಪ್ರವೇಶ ಮಾಡಿ ನಮ್ಮನ್ನು ರೂಪಿಸಿದವರು. ಇವರು ಸಮಾಜ ವಾದಿ ಹಿನ್ನೆಲೆಯವರು. ತೆಳ್ಳಗಿನ, ತಲೆ ತುಂಬಾ ಬಿಳಿ ಕೂದಲಿನ, ಕೋತಿ ಗಡ್ಡದ ಆಸಾಮಿ, ಎಲೆ ಅಡಕೆ ತಂಬಾಕು ಜಗೀತಾ, ಬೀಡಿ ಸಿಗರೆಟ್ ಸೇದ್ತಾ ಚಹಾ ಹೀರತಾ ಸಮಾಜದ ಒಂದೊಂದೆ ಮಗ್ಗಲನ್ನು ನಮಗೆ ಪರಿಚಯಿಸ್ತಾ ಹೋದರು. ಅದೇ ಹೊತ್ತಿಗೆ ಪ್ರೊ.ಬಿ.ಕೃಷ್ಣಪ್ಪನವರು ಧಾರವಾಡಕ್ಕ ಬಂದದ್ದು, ಅವರ ಮಾತು ಒಡನಾಟ ಸಿಕ್ಕದ್ದು ನನ್ನನ್ನ ಹೊಸ ಮನುಷ್ಯನ್ನ ಮಾಡಿದ್ವು. ಫುಡಾರಿಗಳ ದಂಡೆಂದೇ ಹೆಸರಾದ ಇಡೀ ನಮ್ಮ ಗೆಳೆಯರ ಬಳಗ ಹೋರಾಟಕ್ಕ ಧುಮಿಕಿತ್ತು. ಎಸ್.ಬಿ.ದೊಡ್ಡಮನಿ, ಶಿವಪ್ಪವಂದಲಿ, ಭೀಮಣ್ಣ ಹಿರೇನಗನೂರು (ಬಿ.ಎನ್.ಆರ್.) ಹನುಮಂತಪ್ಪ ಕಸಬಾ ಲಿಂಗಸೂರು (ಇರುವೆ) ಪದ್ಮವರ್ಧನ್, ಯಮುನಪ್ಪ ಹಸ್ಮಕಲ್, ಹನುಮಂತಪ್ಪ ಆಲ್ಕೋಡ್(ಮಾಜಿ ಸಚಿವರು), ಮುದುಕಪ್ಪನಾಗರ ಬೆಂಚೆ, ಭೀಮಪ್ಪಹಟ್ಟಿ, ಅನೀಲ್ ಕುಮಾರ್ ಹಟ್ಟಿ, ಭೀಮಾಶಂಕರ್ ಮಾಳಗಿ, ನೀಲಕಂಠಪ್ಪ ಕಾರಟಗಿ, ಹನುಮಂತ ಮಲ್ಲಾಪುರ, ಕುಪ್ಪಣ್ಣ ಗೋನ್ವಾರ್, ಖಾನ್ ಸಾಬ್ ಹಸ್ಮಕಲ್, ರಂಗನಾಥ, ಚಿಕ್ಕಣ್ಣ, ಹಾದಿಮನಿ, ತಳವಾರ, ಕಾಳೆ ಮುಂತಾದವರ ಒಡನಾಟದ ದೊಡ್ಡದೊಂದು ದಂಡು ರೆಡಿಯಾಯ್ತು. ಹಾಸ್ಟೆಲುಗಳೇ ಹೋರಾಟದ ಕೇಂದ್ರಗಳಾದವು. ಅಂಬೇಡ್ಕರ್ ಹೇಳುವ ‘ಓದು-ಹೋರಾಟ’’ ಒಟ್ಟೊಟ್ಟಿಗೆ ಆಗಬೇಕೆಂಬ ಮಾತನ್ನು ನಾವು ಅಕ್ಷರಶಃ ಪಾಲಿಸ್ತಿದ್ವಿ. ಬಿ.ಕೆ. ಅವರ ಮಾರ್ಗ ದರ್ಶನ, ದಲಿತ ಕಲಾ ಮಂಡಳಿಯ ಪಿಚ್ಚಳ್ಳಿ ಶ್ರೀನಿವಾಸ, ಮುನಿಸ್ವಾಮಿ ಮೊದಲಾದವರ ಹೋರಾಟದ ಹಾಡುಗಳು ನಮಗೆ ಸ್ಫೂರ್ತಿಯಾದ್ವು. ಇದೆಲ್ಲದರ ಪರಿಣಾಮ ಧಾರವಾಡ ಜಿಲ್ಲೆಯ ದಸಂಸದ ಚಟುವಟಿಕೆಗಳು ಹಳ್ಳಿಗಳತ್ತ ನಡೀತು. ಬ್ಯಾಡಗಿ ತಾಲೂಕಿನ ದುಮ್ಮಿಹಾಳ ಘಾಳ ಪೂಜೆ ಭೂ ಹೋರಾಟ, ಧರಣಿ ಹೋರಾಟ, ಅರೆಸ್ಟು, ಧಿಕ್ಕಾರಗಳು ನಮ್ಮ ನಿತ್ಯದ ಒಡನಾಡಿ ಗಳಾದವು. ಬಿ.ಕೆಯವರ ನಿರಂತರ ಒಡನಾಟ, ರಾಮದೇವ ರಾಕೆ, ಎಚ್.ಗೋವಿಂದಯ್ಯ, ಶಿವಲಿಂಗಪ್ಪ(ಶಿವಮೊಗ್ಗ), ಸಿ.ಎಂ.ಮುನಿಯಪ್ಪ(ಕೋಲಾರ), ಎಂ.ವೆಂಕಟಸ್ವಾಮಿ, ದೇವನೂರ ಮಹಾದೇವ, ಕವಿ ಸಿದ್ದಲಿಂಗಯ್ಯ, ಮೊದಲಾದವರ ಭೇಟಿ ಚರ್ಚೆ ಮಾತುಕತೆ ನನ್ನನ್ನು ಮತ್ತಷ್ಟು ಗಟ್ಟಿಯಾಗಿಸಿದವು.

ಅನಸೂಯಮ್ಮನ ಪ್ರತಿಭಟನೆ ಇಡೀ ಧಾರವಾಡಕ್ಕೆ ದನಿ ನೀಡಿತು. ಅಂಬೇಡ್ಕರ್ ಹಾಸ್ಟೆಲ್ ಮೊದಲ ಹೋರಾಟ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ನೀಡಿತು. ಸವದತ್ತಿಯ ದೇವದಾಸಿ ಪದ್ಧತಿ ವಿರೋಧಿಸಿ ನಡೆದ ಪ್ರತಿಭಟನೆ, ಪೂಜಾರಿಗಳ ಕುತಂತ್ರ ಬೆಂಕಿ ಹಚ್ಚಿದ್ದು, ನಿತ್ಯಾನಂದ ಸ್ವಾಮಿಯ ನೇತೃತ್ವದಲ್ಲಿ ಅವರ ಆಶ್ರಮದಲ್ಲಿ ಆಶ್ರಯ ಪಡೆದದ್ದು ಮರೆಯಲಾಗದ ಅನುಭವಗಳು.

ಎಂಬತ್ತರ ದಶಕ ಕರ್ನಾಟಕ ಹೋರಾಟದ ಮೈಲುಗಲ್ಲು ಅಂತಾರೆ, ಅಂತಹ ವಾತಾವರಣವೆ ನಿಮ್ಮನ್ನು ರೂಪಿಸಿತು ಅಂತಾನೂ ಹೇಳಿದ್ರಿ. ಈ ಸಂದರ್ಭದಲ್ಲಿ ಹೊಸ ತಲೆಮಾರಿನ ಹೋರಾಟಗಾರರನ್ನು ರೂಪಿಸಿದ ಕ್ರಿಯಾತ್ಮಕ ಚಟುವಟಿಕೆಗಳು ಯಾವುವು?

- ಎಂಬತ್ತರ ದಶಕ ಕರ್ನಾಟಕದ ಜನಪರ ಸಾಹಿತ್ಯ ದ ಇತಿಹಾಸಕ್ಕೆ ಒಂದು ಮೈಲುಗಲ್ಲು. ಬಂಡಾಯ ಸಾಹಿತ್ಯ ಸಮ್ಮೇಳನವನ್ನು ಶ್ರೀ ಶ್ರೀಶ್ರೀ ಅವರು ಬೆಂಗಳೂರಿನ ದೇವಾಂಗ ಕಲ್ಯಾಣ ಮಂಟಪದಲ್ಲಿ ಉದ್ಘಾಟಿಸಿದ್ದು, ಧಾರವಾಡದ ಜಿಲ್ಲಾ ಬಳಗ ಅದರಲ್ಲಿ ಪಾಲ್ಗೊಂಡಿದ್ದು, ನಂತರ ಹೊಸ ತಲೆಮಾರಿನ ಯುವಕ ಯುವತಿ ಯರನ್ನು ಸಜ್ಜುಗೊಳಿಸಲು ಕಾಳನಹಟ್ಟಿ ಶಿಬಿರ, ತುಮಕೂರಿನ ನಾಮದ ಚಿಲುಮೆ ಶಿಬಿರಗಳು ವೈಚಾರಿಕ ವಾಗಿಯೂ, ನೈತಿಕವಾಗಿ ಯೂ ವ್ಯವಸ್ಥೆಯನ್ನು ಪ್ರಶ್ನಿಸುವಂತೆ ಮಾಡಿದವು. ತಿಪಟೂರಿನ ಸಭೆ, ಅಂಬೇಡ್ಕರ್ ಜಯಂತಿ ಸಮಾವೇಶಗಳು, ಧಾರವಾಡದ ಜೈಭೀಮ್ ನಗರದಲ್ಲಿನ ಹೋರಾಟ, ಕಳಸನಕೊಪ್ಪದ ಜನರ ಕೆಚ್ಚು,ಗೋಕಾಕ್ ಚಳವಳಿ, ನರಗುಂದ ನವಲಗುಂದ ಬಂಡಾಯದ ಬಿಸಿ... ಇವೆಲ್ಲಾ ಇಡೀ ಕರ್ನಾಟಕದಾದ್ಯಂತ ಹೋರಾಟದ ಕಾವನ್ನು ಹೆಚ್ಚಿಸುತ್ತಲೇ ಬಂದವು. ಈ ನಡುವೆ 1984 ರಲ್ಲಿ ಧಾರವಾಡದ ಕಲಾಭವನದಲ್ಲಿ ದಸಂಸ ರಾಜ್ಯ ಸಮ್ಮೇಳನ ನಡೆಯಿತು.

ನಿಮ್ಮ ಹೋರಾಟದ ಭೂಮಿಕೆ ಧಾರವಾಡದಿಂದ ರಾಯಚೂರು ಭಾಗಕ್ಕೆ ಬದಲಾದಾಗ ಇಲ್ಲಿನ ವಾತಾವರಣ ಬೇರೆನೆ ಇತ್ತು. ಹಾಗಾಗಿ ನೀವು ನಿಮ್ಮದೇ ತವರು ಜಿಲ್ಲೆಯಲ್ಲಿ ಹೋರಾಟದ ಸಂಗಾತಿ ಆದದ್ದು, ಚಳವಳಿಗಳ ಜೊತೆಯಾದದ್ದು ಹೇಗೆ?

- ನಾನು ಧಾರವಾಡದಲ್ಲಿದ್ರೂ ನನ್ನ ಹುಟ್ಟೂರು ದಿನೇ ದಿನೇ ಕಾಡತೊಡಗಿತ್ತು. ನಾವು ಧಾರವಾಡದಲ್ಲಿ ಮಾಡತಿದ್ದ ಹೋರಾಟದ ಅಗತ್ಯ ನಮ್ಮೂರ ಕಡೆಗಳಲ್ಲಿ ಇನ್ನೂ ಹೆಚ್ಚಿದೆ ಅನ್ಸಿತ್ತು. ಹಾಗಾಗಿ ಬಿ.ಎ. ಮುಗಿಸಿಕೊಂಡು ರಾಯಚೂರಿನಲ್ಲಿ ಎಲ್.ಎಲ್.ಬಿ.ಗೆ ಸೇರಿ ಕೊಂಡೆ. ನಂತರದಲ್ಲಿ ರಾಯಚೂರಿನ ಹೋರಾಟದ ನೆಲ ನನ್ನ ಕರ್ಮ ಭೂಮಿಯಾಯ್ತು. ಈ ಭಾಗದ ಬೋಳಬಂಡೆಪ್ಪ, ಜಂಬಣ್ಣ ಅಮರಚಿಂತ, ಕರಿಯಪ್ಪ ಮಾಸ್ತರ್, ಬಾಬು ಭಂಡಾರಿಗಲ್, ಚನ್ನಣ್ಣ ವಾಲೀಕಾರ, ಎಸ್. ಮಾರೆಪ್ಪ, ಹಚ್ಚಪ್ಪ (ಪಿ.ನರಸಪ್ಪ ವಕೀಲರು), ಬಸವರಾಜ ಗಾರಲದಿನ್ನಿ, ರೆಡ್ಡಿ ತಿಮ್ಮಯ್ಯ, ದೊಡ್ಡಿ ತಿಮ್ಮಯ್ಯ, ಹನುಮಂತ, ತಾಯಪ್ಪ, ಉರುಕುಂದಪ್ಪ, ದೇವೇಂದ್ರ ಸಾತ್ಪಾಡೆ, ಆರ್.ಶಿವಪುತ್ರ, ರಾಮಣ್ಣ ಆರೆಜ್ಜೆ, ನೀಲಕಂಠಪ್ಪ, ದೇವಿಮಿತ್ರ ಗಾರಲದಿನ್ನಿ, ಆರ್.ರಾಮಸ್ವಾಮಿ, ಆರ್.ಮಾನಸಯ್ಯ, ದಲಿತ ಮಹಿಳಾ ಒಕ್ಕೂಟದ ನಾಗಮ್ಮ ಹೊಸೂರು, ನರಸಮ್ಮ ಗಾರಲದಿನ್ನಿ ಇನ್ನೂ ಅನೇಕ ಹರಿಜನವಾಡದ ಸಂಗಾತಿಗಳ ಒಡನಾಟ, ಬೋಳಬಂಡೆಪ್ಪನವರ ಮಾರ್ಗದರ್ಶನ ಜಿಲ್ಲೆಯಲ್ಲಿ ಹೋರಾಟ ಗಟ್ಟಿಗೊಳ್ಳಲು ಸಾಥ್ ನೀಡಿದ್ವು.

ಹಾಸ್ಟೆಲ್ ವಿದ್ಯಾರ್ಥಿಗಳ ಸಂಘಟನೆ ಆಗಿನ ಕಾರ್ಯಕರ್ತರಿಗೆ ಆಶ್ರಯ ತಾಣಗಳಾದವು. ಸ್ಟೇಷನ್ ಪಕ್ಕದಲ್ಲಿರುವ ಹೊಸೂರು ಹೋರಾಟದ ತವರಾಯಿತು. ಅಲ್ಲಿನ ಸಮುದಾಯ ಭವನದಲ್ಲಿ ನಿತ್ಯ ಹಾಡುಗಳು, ಚರ್ಚೆಗಳು ಸ್ಥಳೀಯ ಸಂಗಾತಿಗಳನ್ನು ಜಾಗೃತರನ್ನಾಗಿಸಿದವು. ಇದೆಲ್ಲದರ ಪರಿಣಾಮ ದಸಂಸ ಹಳ್ಳಿಯ ಮಟ್ಟದಲ್ಲಿ ಹೆಜ್ಜೆ ಇಡಲು ಆರಂಭಿಸಿತು. ಈ ಭಾಗದ ನಿತ್ಯದ ಜ್ವಲಂತ ಸಮಸ್ಯೆಗಳಾದ ಅಸ್ಪಶ್ಯತೆ, ಹೋಟೆಲ್ ದೇವಸ್ಥಾನ ಪ್ರವೇಶಗಳು, ದೇವದಾಸಿ ಪದ್ಧತಿ ವಿರುದ್ಧದ ಹೋರಾಟ, ಭೂಮಿ ಹೋರಾಟಗಳು ಹುಟ್ಟತೊಡಗಿದವು. ಮೆದಕಿನಾಳ ಭೂ ಹೋರಾಟ, ಗೆಜ್ಜಲಗಟ್ಟ ಭೂ ಹೋರಾಟ, ಬಸಾಪುರ, ಜವಳಗೇರಾ, ಅಹಮದನಗರ, ಸಾಸಲಮರಿ, ಕುಷ್ಟಗಿ ಶರಣಮ್ಮ ಮುಂತಾದ ಹೋರಾಟಗಳು ಜಿಲ್ಲೆಯಾದ್ಯಂತ ಸಂಚಲನ ಸೃಷ್ಟಿಸಿದವು. ಹಳ್ಳಿಗಳೂ ಹೋರಾಟದ ಕೇಂದ್ರಗಳಾಗಿ ಬದಲಾದವು. ಇದಕ್ಕೆ ಪೂರಕವಾಗಿ ಜನರ ಬದುಕು, ಕಲೆ, ಹಬ್ಬ ಹರಿದಿನಗಳು ಹೋರಾಟಕ್ಕೆ ಜೊತೆಯಾದವು. ಇದರಿಂದಾಗಿಯೇ ಹೋರಾಟದ ಹಾಡುಗಳು ಹುಟ್ಟತೊಡಗಿದವು. ಆರ್.ಮಾನಸಯ್ಯ ಗೆಜ್ಜಲಗಟ್ಟಾ, ಜಂಬಣ್ಣ ಅಮರಚಿಂತ, ಬೋಳಬಂಡೆಪ್ಪ, ಬಾಬು ಭಂಡಾರಿಗಲ್ ಇವರುಗಳೆಲ್ಲಾ ಹೋರಾಟದ ಹಾಡುಗಳನ್ನು ಬರೆಯತೊಡಗಿದರು.

ನೀವು ಈ ಚಳವಳಿಯ ಭಾಗವಾಗಿ ಹೋರಾಟದ ಹಾಡುಗಳನ್ನು ಬರೆದದ್ದು ಯಾವ ಸಂದರ್ಭ?

ನಿಮಗೆ ಹಾಡು ಬರೆಯಲು ಸ್ಫೂರ್ತಿಯಾದ ಘಟನೆಗಳಾವುವು?

 - ನಮ್ಮ ಮನೆ ಎದುರು ಈರಣ್ಣನ ಕಟ್ಟೆ ಇತ್ತು. ಅಲ್ಲಿ ಭಜನಿ ಮಾಡತಿದ್ದರು. ನಾನು ಮಕ್ಕಂಡೇ ಈ ಭಜನಿ ಹಾಡುಗಳನ್ನು ಕೇಳಿಸಿಕೊಂಡು ಗುನುಗ್ತಾ ಇದ್ದೆ. ಹಿಮ್ಮೇಳವಾಗಿ ಭಜನಿಯಲ್ಲಿ ಕೂತು ಹಾಡತಿದ್ದೆ. ಕ್ರಿಶ್ಚಿಯನ್ ಮಾಸ್ ಗೀತೆಗಳ ಜತೆ ಹಾಡತಿದ್ದೆ. ನಮ್ಮಪ್ಪ ಭಜನೆ ಪದಾನ ಚೊಲೋ ಹಾಡತಿದ್ದ. ‘ಗೂಳಿ ಬಂತು ಗೂಳಿ ಬಂತಣ್ಣಾ, ಗುರುಮಠಕೆ ತಕ್ಕ ಗೂಳಿ ಬಂತು ಗೂಳಿ ಬಂತಣ್ಣಾ..’ ತರಹದ ಜನಪದ ಭಜನೆಗಳು ನನ್ನೊಳಗೆ ಹಾಡಿನ ಲಯವನ್ನು ಕೂರಿಸ್ತಾ ಇದ್ವು. ‘ನೀರ ನಿಲ್ಲದ ಬಾವಿ ತುಂಬುವುದೋ/ತುಂಬಿ ತುಳಕುವುದೋ/ಇರುವಿ ನೀರಡಿಸಿ ಬಂದು ಕುಡಿಯುವುದೋ/ಜಲ ಬತ್ತುವುದೋ/ ರೆಕ್ಕೆ ಇಲ್ಲದ ಪಕ್ಷಿ ಸುತ್ತುವುದೋ..’ ಈ ತರಹದ ತತ್ವಪದಗಳು ನನಗೆ ಹೆಚ್ಚು ಪ್ರಭಾವ ಬೀರ್ತಾ ಇದ್ವು. ಇಂತಹ ಹಿನ್ನೆಲೆಯ ಕಾರಣ ಇದೇ ಹಾಡಿಕೆ ಲಯಗಾರಿಕೆ ಚಳವಳಿಗೆ ದುಮುಕಿದ ಮೇಲೆ ಮತ್ತೆ ನನ್ನೊಳಗೆ ಹೊಸ ರೂಪ ಪಡೆದವು. ದಲಿತ ಕಲಾ ಮಂಡಳಿಯ ಹಾಡಿಕೆ, ಪದ ರಚನೆಗಳೂ ಆ ಕಾಲಕ್ಕೆ ನಮ್ಮನ್ನು ತುಂಬಾ ಪ್ರಭಾವ ಬೀರಿದ್ವು. ಪಿಚ್ಚಳ್ಳಿ ಶ್ರೀನಿವಾಸರ ಹಾಡುಗಳು ಆಗ ದೊಡ್ಡಮಟ್ಟದಲ್ಲಿ ಚಳವಳಿಯಲ್ಲಿ ಹಾಡಿಕೆಗೆ ಬಂದಿದ್ದವು. ಹೀಗಿರುವಾಗ ಹಿರೇನನೂರು ಹೊಟೇಲ್ ಪ್ರವೇಶ ಹೋರಾಟದ ಸಂದರ್ಭದಲ್ಲಿ ‘ಅವತ್ತು ಸೋಮವಾರ, ಅಪ್ಪಬಸವನ ವಾರ’ ಅನ್ನೋ ಮೊದಲ ಹಾಡನ್ನು ಬರೆದೆ. ಎಂಬತ್ತರ ದಶಕದಲ್ಲಿ ಕ್ರಾಂತಿಕಾರಿ ಕವಿ ಗದ್ದರ್‌ರವರ ಕಾರ್ಯಕ್ರಮ ನೋಡಲು ಸಿಕ್ಕಿತು. ಜನಪರ ಸಾಹಿತ್ಯದ ಒಳ ತಿರುಳು ನನ್ನನ್ನು ಮತ್ತಷ್ಟು ಗಟ್ಟಿಗೊಳಿಸಿತು. ‘ವಂಚಿತರೇ ಈ ದೇಶದ ವಾರಸುದಾರರು’ ಎನ್ನುವ ಸ್ಪಷ್ಟ ಕಲ್ಪನೆ ಬಂದಿತು. ಜನ ಕಲಾ ಮಂಡಳಿಯ ನಂಟಿನಿಂದ ಚೌಡಕಿ ಕತೆ, ನೀಲಗಿರಿ, ಹೆಸರಾದ ತವರೂರು, ಕೊಡಗು ಹೀಗೆ ಆಯಾ ಕಾಲದ ವಿಷ್ಯಗಳನ್ನು ಹಾಡುಗಳನ್ನಾಗಿ ಬರೆಯೋದು ಹಾಡೋದು ಶುರುವಾಯಿತು.

ನನ್ನ ಪ್ರತಿಯೊಂದು ಹಾಡಿನ ಮೊದಲ ತಾಲೀಮು ನನ್ನ ಮನೆ. ನನ್ನ ಹೆಂಡ್ತಿ ಮೇರಿ (ಮರಿಯಮ್ಮ) ಮಕ್ಕಳಾದ ಸ್ನೇಹಲತಾ, ಪ್ರಶಾಂತ್, ಪ್ರಮೋದ್ ಇವರನ್ನು ಅದೆಷ್ಟೋ ರಾತ್ರಿಗಳು ನಿದ್ದೆಗೆಡಿಸಿ ಕೋರಸ್ಸಿಗೆ ಎಬ್ಸಿದ್ದು, ರಾಗ ಲಯ ತಿದ್ದಿ ತೀಡಿ ಹಾಡು ಹೊರಬರೋ ಹೊತ್ತಿಗೆ ಬೆಳಕರಿದದ್ದೂ ಇದೆ.

ಸರ್ ನೀವು ಗದ್ದರ್ ಪ್ರಭಾವನ ಹೇಳಿದ್ರಿ, ಆದರೆ ಗದ್ದರ್ ಹೋರಾಟದ ಹಾಡುಗಳನ್ನು ಕಥನ ಮಾಡಿ ನಾಟಕೀಯವಾಗಿ ಜನರನ್ನು ತನ್ಮಯರಾಗಿ ಹಾಡಿನೊಳಗೆ ಸೆಳೆಯುವ ವಿಶಿಷ್ಟ ಮಾದರಿ ಬಳಸ್ತಾರೆ. ಆದರೆ ಕನ್ನಡದ ಸಂದರ್ಭದಲ್ಲಿ ಹೀಗೆ ಹಾಡಿನ ಕಥನ ಮಾಡೋದಕ್ಕಿಂತ ಬರೀ ಗೀತೆಗಳಾಗಿ ಜೋರು ಹಾಡುವುದೇ ಕ್ರಾಂತಿ ಗೀತೆಗಳು ಅಂತ ಭಾವಿಸಿದ್ದಾರೆ. ಈ ವ್ಯತ್ಯಾಸವನ್ನು ಹೇಗೆ ಗುರುತಿಸ್ತೀರಿ?

- ಇಲ್ಲ ಎಪ್ಪತ್ತು ಎಂಬತ್ತರ ದಶಕದಲ್ಲಿ ನಾವೂ ಹೀಗೆ ಹಾಡು ಕತೆ ಸೇರಿಸಿಯೇ ಹಾಡತಿದ್ವಿ. ಪತ್ರಿ ಸಂಗಪ್ಪನ ಕೊಲೆಯಾಗಿರಬಹುದು, ಅನುಸೂಯಮ್ಮನ ಘಟನೆಯಾಗಿರಬಹುದು ಇಂತಹ ಘಟನೆಗಳನ್ನು ಕಥನಗಳನ್ನಾಗಿ ಹಾಡ್ತಿದ್ವಿ. ಶೋಷಣೆಯ ಸಂಗತಿಗಳು ನಾಡಿನಾದ್ಯಾಂತ ಧ್ವನಿಸ್ತಾ ಇತ್ತು. ಆಗ ಆ ಘಟನೆಗಳೇ ಹಾಡು ಕಥೆಯಾಗಿ ಬರ್ತಾ ಇದ್ವು. ಈಗ ಆ ತರಹದ ತ್ಯಾಗ ಬಲಿದಾನಗಳು ಕಡಿಮೆ. ಇನ್ನು ಗದ್ದರ್ ಅವರು ನಂಬಿದ ಚಳವಳಿಯೇನಿತ್ತು ಅದು ಅಂದು ತ್ಯಾಗಕ್ಕೂ ಬಲಿದಾನಕ್ಕೂ ಸಿದ್ದ ಅನ್ನೋತರ ಇತ್ತು. ಹೋರಾಟಕ್ಕಾಗಿ ಜೀವಕೊಟ್ಟೋರು ಇರ್ತಿದ್ರು. ಅಂತಹವರ ಹಾಡು ಗಳನ್ನು ಹಾಡುವಾಗ ಸಹಜವಾಗಿ ಜನರು ಅದರಲ್ಲಿ ಇನ್ವಾಲ್ವ್ ಆಗ್ತಿದ್ರು. ಹಾಗಾಗಿಯೇ ಆ ಹಾಡುಗಳಿಗೆ ವಿಚಿತ್ರ ಶಕ್ತಿ ಇತ್ತು. ಇನ್ನು ಗದ್ದರ್‌ಗೆ ಬುರ್ರಕಥಾ ಪ್ರಭಾವ ದಟ್ಟವಾಗಿದೆ. ಈ ಬುರ್ರಕಥಾ ಆಂಧ್ರದ ಕೆಳಸಮುದಾಯಗಳಲ್ಲೂ ಇದೆ. ಹೀಗಾಗಿ ಜನರಿಗೆ ಬೇಗ ಆಪ್ತವಾಗು ತ್ತದೆ. ಆಂಧ್ರದ ಹೋರಾಟದ ಹಿನ್ನೆಲೆಯೂ ನಮಗಿಂತ ಬೇರೆ.

ಈಗಿನ ದಲಿತ ಹೋರಾಟ ಚಳವಳಿಯ ಚಲನೆಗಳನ್ನು ಹೇಗೆ ಗುರುತಿಸ್ತೀರಿ?

- ಈ ಎನ್‌ಜಿಒಗಳ ಪ್ರವೇಶ ಆದ ಮೇಲೆ ಚಳವಳಿಗಳು ತುಂಬಾ ದಿಕ್ಕುತಪ್ಪಿವೆ. ಒಂದೊಂದು ಎನ್‌ಜಿಒಕ್ಕೆ ಒಂದೊಂದು ಕಮಿಟ್ ಮೆಂಟ್. ಒಂದೊಂದು ಇಶ್ಶು ಇಟ್ಕೋತಾರೆ. ಅವರಿಗೆ ಇಶ್ಶು ಪೋಕಸ್ ಆಗಬೇಕು, ಅದಕ್ಕೆ ಸರಕಾರದಿಂದಲೋ ಮತ್ಯಾವುದೋ ಸಂಸ್ಥೆಗಳಿಂದಲೋ ದುಡ್ಡು ಬರಬೇಕು, ಮೀಡಿಯಾದಲ್ಲಿ ಮಿಂಚಬೇಕು ಇಷ್ಟೆ. ಪ್ರೊಜೆಕ್ಟ್ ಅಪ್ಲೈ ಮಾಡೋವಾಗ ಇಶ್ಶುವಿನ ದಯನೀಯ ಸ್ಥಿತಿಯನ್ನು ಹೇಳುತಾರೆ.ಈ ಪ್ರಾಜೆಕ್ಟ್ ಮುಗದ ಮೇಲೆ ಈ ಇಶ್ಶು ಸಮಸ್ಯೆ ಪೂರ್ತಿ ಬಗೆಹರಿದಿದೆ ಅಂತ ತೋರಿಸ್ತಾರೆ. ಇಂತಹ ಸಾವಿರಾರು ಎನ್‌ಜಿಒಗಳು ಸಾವಿರಾರು ಇಶ್ಶುಗಳಲ್ಲಿ ಜನರನ್ನು ಹಂಚಿಕೆ ಮಾಡ್ತಾರೆ. ಟಾರ್ಗೆಟ್ ಇರುತ್ತೆ, ಅದಕ್ಕೆ ಫಂಡ್ ಬರುತ್ತೆ, ಕೊನೆಗೆ ಅದಕ್ಕೆ ತಕ್ಕ ಹಾಗೆ ರಿಜಲ್ಟ್ ತೋರಿಸ್ತಾರೆ.ಈ ದೇಶದಲ್ಲಿ ಎನ್‌ಜಿಒಗಳು ಬಂದ ಮೇಲೆ ನಮ್ಮಂತಹ ಹೋರಾಟ ಗಾರರಿಗೆ ಇವುಗಳು ದುಡ್ಡು ಕೊಡೋಕೆ ಶುರು ಮಾಡಿದ್ವು. ಇದರಿಂದ ಹೋರಾಟಗಾರರೆಲ್ಲಾ ದುಡ್ಡಿನ ಹಿಂದೆ ಬಿದ್ದು ಜನರ ನೋವು ಸಂಕಟಗಳಿಂದ ದೂರ ಆದ್ರು. ಮೊದಲಾದ್ರೆ ಜನರ ಹತ್ರ ದುಡ್ ಇಸ್ಕೊಂಡು ಓಡಾಡ್ತಿದ್ವಿ. ಈ ಊರಿಂದ ಮುಂದಿನ ಊರಿಗೆ ಹೋಗ್ಬೇಕಂದ್ರೆ ಆಯಾ ಊರಿನವರು ಊಟ ತಿಂಡಿ ಮಾಡಿಸಿ ಚಾರ್ಜ್ ಕೊಟ್ಟು ಕಳಿಸ್ತಾ ಇದ್ರು. ಆಗ ಜನರ ದುಡ್ಡು ಪಡೆದಾಗ ಅದರ ಅರಿವೂ ನಮಗಿರ್ತಾ ಇತ್ತು. ಈಗ ಪೇಡೆಡ್ ಹೋರಾಟಗಾರರು ಹೆಚ್ಚಾಗಿದ್ದಾರೆ.

 ನೋಡಿ, ಇನ್ನೂ ಅಸ್ಪಶ್ಯತೆ ಇದೆ, ದೌರ್ಜನ್ಯವಿದೆ. ಜೀವಂತ ಸುಡುವಿಕೆ ಇದೆ. ದಿನಾಲು ಪೇಪರುಗಳಲ್ಲಿ ಈ ಇಶ್ಶುಗಳನ್ನು ಓದ್ತೀವಿ. ಅಂದ್ರೆ ಇವ್ಯಾವು ಈಗ್ಲೂ ನಿಂತಿಲ್ಲ. ಆದರೆ ಇವೆಲ್ಲಾ ನಿಂತಿವೆ ಅನ್ನೋ ಸಂತೃಪ್ತಿಯಲ್ಲಿ ಹೆಚ್ಚಿನ ದಲಿತ ಹೋರಾಟಗಾರ್ರು ತಣ್ಣಗ್ ಆಗ್ಯಾರ. ಇವುಗಳು ಇಂದಿನ ದಲಿತ ಸಂಘಟನೆಗಳಿಗೆ ದೊಡ್ಡ ಇಶ್ಶುಗಳಾಗಿ ಕಾಣ್ತಿಲ್ಲ. ಹೆಂಡದಂಗಡಿ ಬಂದ್ ಮಾಡಿ ಸಾಲಿ ತೆರೀರಿ ಅಂತ ಹೇಳಿದ್ದು, ದೇವದಾಸಿಗಳ ಇಶ್ಶುಗಳಲ್ಲಿ ಕೇಸ್ ಹಾಕಿಸಿಕೊಂಡದ್ದು ದಲಿತ ಸಂಘಟನೆಗಳು. ಆದರೆ ಈ ವಿಷ್ಯಗಳು ಇಂದು ಹೋರಾಟದ ಫ್ಯಾಶನ್ ಆಗಿವೆ. ಇನ್ನು ದಲಿತ ಸಂಘಟನೆಗಳು ಕ್ರಾಂತಿನೂ ಬೇಕು ರಾಜಕಾರಣನೂ ಬೇಕು ಅಂತ ಭಾವಿಸಿದ್ದರಿಂದ ದೊಡ್ಡ ಹೊಡೆತ ಆಯ್ತು. ಸಿದ್ದಲಿಂಗಯ್ಯನ್ನೇ ತಗೊಳ್ರೀ..ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ ಅಂದೋರು ರಾಜಕೀಯ ಪಾರ್ಟಿಗಳನ್ನು ಓಲೈಸಿ ಎಮ್ಮೆಲ್ಸಿ ಆದ್ರು, ಈ ಸತ್ಯಗಳನ್ನು ಯಾರೂ ಬರೆಯೊಂಗಿಲ್ಲ. ಮಾದೇವರ ಬಗ್ಗೆ ವಿಮರ್ಶೆ ಮಾಡಂಗಿಲ್ಲ. ಈ ಸಾಹಿತ್ಯ ವಲಯದಲ್ಲೂ ಬಾಳ ಗಂಡಾಂತರಗಳಿವೆ. ಅದನ್ನ ನಾನು ಹೇಳಂಗಿಲ್ಲ. ನಿಮಗೆ ಅದೆಲ್ಲ ಗೊತ್ತಿದೆ. ಹೀಗಾಗಿ ನಾನು ಅಧ್ಯಕ್ಷ ಆಗಬೇಕು, ಅಧಿಕಾರ ಹಿಡಿಬೇಕು ಅನ್ಕಂಡು ಇವತ್ತು ಅವರವರೆ ಒಂದೊಂದು ಸಂಘಟನೆಗಳನ್ನ ಮಾಡಿ ಕೊಂಡ ಕಾರಣ ಇವತ್ತು ಇಪ್ಪತ್ತಾರು ಬಣಗಳಾಗ್ಯಾವ. ನನ್ನ ಪ್ರಶ್ನೆ ಅಂದ್ರೆ ಅಂಬೇಡ್ಕರ್ ಚಿಂತನೆ ಮ್ಯಾಲೆ ಕಟ್ಟಿದ ದಲಿತ ಚಳವಳಿ ಇಷ್ಟೊಂದು ಬಣಗಳಾಗಾಕ ಹೇಗೆ ಸಾಧ್ಯ? ಇಂದಿನ ದಲಿತ ಸಂಘಟನೆಗಳ ನಾಯಕರೆ ರಾಜಕೀಯ, ಅಧಿಕಾರದ ಆಸೆ ಆಮಿಷಗಳಿಗೆ ಬಲಿಯಾದಾಗ, ಚಳವಳಿಗೆ ಬರುವ ಹೊಸ ಪೀಳಿಗೆಗೆ ಸಮಾಜದ ಬದಲಾವಣೆ ಬಗೆಗೆ ಅರಿವು ಮೂಡಿಸೋಕೆ ಹೇಗೆ ಸಾಧ್ಯ?

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top