ಸ್ವಾತಂತ್ರ್ಯದ ಅಂತರ್ಜಲ | Vartha Bharati- ವಾರ್ತಾ ಭಾರತಿ
ಭಾರತದ ಅಂದಿನ ವೈಸರಾಯ್‌ಗೆ ಲೋಹಿಯಾ ಬರೆದ ಬಹಿರಂಗ ಪತ್ರ

ಸ್ವಾತಂತ್ರ್ಯದ ಅಂತರ್ಜಲ

ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಲೋಹಿಯಾ ಅವರು 1942ರ ಆಗಸ್ಟ್ 8ರಿಂದ 1944ರ ಮೇ 20ರವರೆಗೆ ಭೂಗತರಾಗಿದ್ದರು. ಸ್ವಾತಂತ್ರ ಚಳವಳಿಗಾರರ ಮೇಲೆ ಬ್ರಿಟಿಷ್ ಸರಕಾರ ನಡೆಸಿದ ಹಿಂಸೆಯನ್ನು ಪ್ರತಿಭಟಿಸಿ ಲೋಹಿಯಾ 1942ರ ಕೊನೆಯ ಭಾಗದಲ್ಲಿ ಬರೆದ ಚಾರಿತ್ರಿಕ ಪತ್ರ ಇದು.

 ಪ್ರಿಯ ಲಾರ್ಡ್ ಲಿನ್‌ಲಿಥ್‌ಗೊ,

ಈ ಪತ್ರವನ್ನು ನಿಮಗೆ ಏಕೆ ಬರೆಯುತ್ತಿದ್ದೇನೆ ಎಂಬುದು ಖುದ್ದು ನನಗೂ ಗೊತ್ತಿಲ್ಲ. ನಿಮ್ಮ ಆಡಳಿತದಲ್ಲಿ ನನಗೆ ಯಾವ ಭರವಸೆಯೂ ಉಳಿದಿಲ್ಲ. ನೀವು ಪ್ರತಿನಿಧಿಸುತ್ತಿರುವ ಭ್ರಷ್ಟ ಹಾಗೂ ಕೊಲೆಗಡುಕ ಸರಕಾರ ಹಾಗೂ ನಾನು ಪ್ರತಿನಿಧಿಸುತ್ತಿರುವ ಆಂದೋಲನ ಇವೆರಡೂ ನನ್ನ ನಾಡಿನಲ್ಲಿ ಒಟ್ಟೊಟ್ಟಿಗೆ ಇರಲು ಸಾಧ್ಯವಿಲ್ಲ. ಆದರೂ ನೀವು ವಿಶ್ವದ ಸಹಾನುಭೂತಿಯ ಬಗ್ಗೆ, ಕಾಂಗ್ರೆಸ್ ಮತ್ತದರ ಅನ್ಯಾಯದ ಬಗ್ಗೆ ಮಾತಾಡಿದ್ದೀರಿ; ಅಲ್ಲದೇ ಈ ಬಗ್ಗೆ ನ್ಯಾಯವನ್ನು ನಿರೀಕ್ಷಿಸಿದ್ದೀರಿ. ಈ ಅಂಶಗಳು ಗಾಳಿಗೆ ತೂರಿ ಬಿಡುವಂಥವಲ್ಲ. ಬಹುಶಃ ಈ ಕಾರಣದಿಂದಾಗಿಯೇ ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ.

ಚರಿತ್ರೆ ಈವರೆಗೆ ನ್ಯಾಯದ ಒಂದೇ ಒರೆಗಲ್ಲನ್ನು ತಿಳಿಸಿದೆ. ಒಬ್ಬ ವ್ಯಕ್ತಿ ಅಥವಾ ಒಂದು ಸಮಾಜ ದಬ್ಬಾಳಿಕೆಯ ಎದುರು ಮಂಡಿಯೂರಿ ಕುಳಿತು ಬಿಡಬೇಕೇ ಅಥವಾ ಅದನ್ನು ಪ್ರತಿಭಟಿಸಬೇಕೇ? ಬಹುಕಾಲದಿಂದ ವಿಶ್ವದ ಸಹಾನುಭೂತಿಯು ನಿಮ್ಮ ಮತ್ತು ನಿಮ್ಮ ಆಡಳಿತದ ವಿರುದ್ಧವಾಗಿದೆ. ಹಾಗೂ ಅದು ನಮ್ಮ ಪ್ರಯತ್ನಗಳ ಪರವಾಗಿದೆ; ನಿಮ್ಮ ವ್ಯವಸ್ಥೆಯನ್ನು ಪ್ರತಿಭಟಿಸುತ್ತಿರುವ ಜನತೆಯ ಪರವಾಗಿದೆ. ಇದುವರೆಗೆ ನಿಮ್ಮ ಪಾಲಿಗೆ ಮುಚ್ಚಿರುವ ಈ ಪುಸ್ತಕವನ್ನು ನಿಮ್ಮ ಮುಂದಿನ ಪೀಳಿಗೆ ಓದಲಿದೆ. ಬಹುಶಃ ನೀವೂ ನಿಮ್ಮ ನೆನಪು ಮಂಕಾದ ಕಾಲದಲ್ಲಿ ಇದನ್ನು ಓದಬಹುದು.

  ಲಾರ್ಡ್ ಲಿನ್‌ಲಿಥ್‌ಗೊ

ಗಾಂಧೀಜಿ ಇನ್ನೂ ಒಂದು ಒರೆಗಲ್ಲನ್ನು ರೂಪಿಸಿದ್ದಾರೆ: ಯಾವುದೇ ಒಬ್ಬ ವ್ಯಕ್ತಿ ಅಥವಾ ಒಂದು ರಾಷ್ಟ್ರ, ಹಿಂಸಾಚಾರವಿಲ್ಲದೆ, ಆಸ್ತಿಪಾಸ್ತಿಗೆ ಹಾನಿ ಉಂಟುಮಾಡದೇ, ದಬ್ಬಾಳಿಕೆಯನ್ನು ಕೊನೆಗೊಳಿಸಲು ಸಾಧ್ಯವಿದೆಯೇ? ಈವರೆಗೆ ಇದು ಸಾರ್ವತ್ರಿಕ ವಾಗಿ ಸ್ವೀಕೃತವಾದ ಒರೆಗಲ್ಲಲ್ಲ. ಇಡೀ ವಿಶ್ವದಲ್ಲಿ ನಾವು ಭಾರತೀಯರು ಮಾತ್ರ ಈ ಒರೆಗಲ್ಲಿನ ಪ್ರಾಮಾಣಿಕತೆಯನ್ನು ಸಾಬೀತುಪಡಿಸುವ ಪ್ರಯತ್ನ ಮಾಡಿದ್ದೇವೆ. ಈ ಒರೆಗಲ್ಲನ್ನು ಒಪ್ಪಿಕೊಳ್ಳುವ ದಿಕ್ಕಿನಲ್ಲಿ ನೀವು ನಿಜಕ್ಕೂ ಗಂಭೀರವಾಗಿ ವಿಚಾರ ಮಾಡಿದ್ದೀರಾ? ಯಾಕೆಂದರೆ, ಇದರಲ್ಲಿ ನಿಮ್ಮ ಜವಾಬ್ದಾರಿಯೂ ಅಡಗಿದೆ ಎಂಬುದನ್ನು ನೀವು ತಿಳಿದುಕೊಳ್ಳಬೇಕು.

ಆಗಸ್ಟ್ 9ರ ಮುಂಚೆ ಬಂಧಿಸಲಾದ ಕಾಂಗ್ರೆಸ್ ನಾಯಕರ ಚಟುವಟಿಕೆಗಳನ್ನು ಹಾಗೂ ನಂತರ ಇಡೀ ಜನಸಮುದಾಯ ಮತ್ತು ಪ್ರಸಿದ್ಧ ಕಾಂಗ್ರೆಸಿಗರು ನಡೆಸಿದ ಕಾರ್ಯಚಟುವಟಿಕೆಗಳನ್ನು ಈ ಒರೆಗಲ್ಲಿಗೆ ಹಚ್ಚಲು ನೀವು ಪ್ರಯತ್ನಿಸಿದ್ದೀರಿ. ನಮ್ಮ ನಿರೀಕ್ಷೆಯಂತೆ, ಈ ಮೂರರಲ್ಲೂ ಕೊರತೆಗಳು ನಿಮಗೆ ಕಾಣಿಸಿವೆ. ನಿಮ್ಮ ಆಡಳಿತ ಇಡೀ ವಿಶ್ವದಲ್ಲೇ ಅತ್ಯಂತ ಹಿಂಸೆಯಿಂದ ಕೂಡಿದ್ದಾಗಿದೆ. ಇಂಥ ಸಂದರ್ಭದಲ್ಲಿ ಯಾವುದಾದರೂ ಒಂದು ಪರಿಹಾರ ಕಂಡುಕೊಳ್ಳಲು ನೀವು ಒಬ್ಬ ಆಡಳಿತಗಾರನಾಗಿ ಇರದೆ, ತಟಸ್ಥ ವ್ಯಕ್ತಿಯಾಗಿ ಇರಬೇಕಿತ್ತು.

ಗಾಂಧೀಜಿ ಮತ್ತು ಇತರ ಕಾಂಗ್ರೆಸ್ ನಾಯಕರು ಕಟ್ಟಿದ ಸಂಘಟನೆ ಮತ್ತು ಹಾಕಿಕೊಂಡ ಯೋಜನೆಯಿಂದ ಹಿಂಸಾಚಾರವಾಯಿತು ಎಂದು ನೀವು ಆರೋಪಿಸಿದ್ದೀರಿ. ನಿಮ್ಮ ಈ ಮಾತು ಇನ್ನೂ ವ್ಯಾಪಕವಾಗಿ ಪ್ರಸಾರವಾಗಿಲ್ಲ. ಆದರೆ ಇದು ಕಾಲ ಕಳೆದಂತೆ ತೀವ್ರವಾಗಿ ಹರಡಬಹುದು. ನಿಮ್ಮ ಈ ಮಾತನ್ನು ಒಪ್ಪಿಕೊಂಡರೆ, ಕಾಂಗ್ರೆಸ್ ಸಂಸ್ಥೆಯ ಬಳಿ ಅಹಿಂಸಾತ್ಮಕವಾದ ಯಾವುದೇ ಯೋಜನೆ ಅಥವಾ ಸಂಘಟನೆ ಇರಲಿಲ್ಲ ಎಂದು ಜನರು ಆರೋಪಿಸಿದ್ದರು ಎಂದೇ ಅರ್ಥವಾಗುತ್ತದೆ. ಯೋಜನೆ ಮತ್ತು ಸಂಘಟನೆ ಶಬ್ದಗಳಿಗೆ ನೀವು ತಿಳಿದಂಥ ಅರ್ಥವನ್ನೇ ನಾನೂ ತಿಳಿಯುವುದಾದರೆ, ಈ ಆರೋಪ ಸಂಪೂರ್ಣವಾಗಿ ತಪ್ಪು. ಕಾಂಗ್ರೆಸ್ ಇಂಥ ಯಾವುದೇ ಯೋಜನೆಯನ್ನು ಮಾಡಿರಲಿಲ್ಲ. ನಿಮಗೆ ನಿಮ್ಮದೇ ಕೊಳಕು ಭ್ರಾಂತಿಯ ಪ್ರೇತ ಮಾತ್ರ ಕಾಣುತ್ತಿದೆ.

ನಾಲ್ಕೂ ದಿಕ್ಕಿನಲ್ಲಿರುವ ಭೂಮಿ ಮತ್ತು ಬೆಟ್ಟ-ಗುಡ್ಡಗಳ ಅಡಿಯಲ್ಲಿ ಹರಿಯುತ್ತಿರುವ ಸಹಸ್ರಾರು ಅಂತರ್ಜಲ ಧಾರೆಗಳ ಹಾಗೆ ‘‘ಅಹಿಂಸಾತ್ಮಕ ಕ್ರಾಂತಿ’’ಯು ನಮ್ಮ ಸುತ್ತಲೂ ಹರಿಯುತ್ತಿದೆ. ಇದಕ್ಕಾಗಿ ಕಾಲುವೆಗಳನ್ನೇನೂ ಹೊಸತಾಗಿ ತೋಡಬೇಕಾಗಿಲ್ಲ.

    ರಾಮಮನೋಹರ ಲೋಹಿಯಾ

ಆಗಸ್ಟ್ 9ರಂದು ಪ್ರಾರಂಭವಾದ ಕ್ರಾಂತಿಗೆ ಪೂರ್ವಭಾವಿಯಾಗಿ ಯಾವ ಯೋಜನೆಯನ್ನೂ ಮೇಲಿನಿಂದ ಹೇರಲಾಗಿರಲಿಲ್ಲ. ಅದು ಭೂತಕಾಲದ ರೋಮಾಂಚಕ ನೆನಪುಗಳ ಜೊತೆಗೆ, ಭಾರತದ ಜೀವಂತ ವಾಸ್ತವದಿಂದಲೂ ಸ್ಫೂರ್ತಿ ಪಡೆದಿತ್ತು. ಸ್ವಾತಂತ್ರದ ಕನಸು ಕಾಣುತ್ತಿದ್ದ ಸಮಸ್ತ ಜನಮನದ ಉತ್ಸಾಹ ತುಂಬಿದ ಕ್ರಿಯೆ ಅದಾಗಿತ್ತು. ಉತ್ಸಾಹ ಮತ್ತು ವಾಸ್ತವಗಳೆರಡರ ಸಂವೇದನಾಶೀಲ ಮಿಲನದ ಬಲದಿಂದ ಒಬ್ಬ ವ್ಯಕ್ತಿ ಹಿಂದಿನ ಇಪ್ಪತ್ತ ಮೂರು ವರ್ಷಗಳಿಂದ ಮಾಡಿಕೊಂಡು ಬಂದಿದ್ದ ಸಂಕಲ್ಪ ಶಕ್ತಿಯ ಪ್ರತಿಫಲನವು ಅಲ್ಲಿ ರೂಪ ತಾಳಿತ್ತು. ನಿಮ್ಮ ದೇಶಕ್ಕಿಂತ ಐದು ಪಟ್ಟು ಹೆಚ್ಚು ಶತಮಾನಗಳಿಂದ ಅಸ್ತಿತ್ವ ಉಳಿಸಿಕೊಂಡಿರುವ ಒಂದು ದೇಶದ ಜನತೆಯ ಮನಃಸ್ಥಿತಿಯನ್ನು ನಾನು ನಿಮಗೆ ಬಿಚ್ಚಿಡಬಯಸುತ್ತೇನೆ. ಉತ್ಸಾಹ ಎಂಬುದು ಯಾರೂ ಕಸಿಯಲಾಗದ ಒಂದು ಮನಃಸ್ಥಿತಿ. ಇದನ್ನು ಯಾವ ಗುಂಡುಗಳೂ ಹೊಸಕಿ ಹಾಕಲಾರವೂ; ಯಾವ ಬೇಟೆ ನಾಯಿಗಳೂ ಇದರ ಹೆಜ್ಜೆ ಗುರುತುಗಳನ್ನು ಪತ್ತೆ ಮಾಡಲಾರವು. ನೀವು ಲಕ್ಷಾಂತರ ಜನರ ಮೇಲೆ ಹಲ್ಲೆ ನಡೆಸಿದಿರಿ; ಬಲಾತ್ಕಾರ ಮಾಡಿದಿರಿ; ಅವರನ್ನು ಸುಟ್ಟು ಹಾಕಿದಿರಿ. ಸಂಘಟನೆಗಳನ್ನು ಧೂಳೀಪಟ ಮಾಡಿದಿರಿ, ಲಕ್ಷಾಂತರ ಮಂದಿಯನ್ನು ಬಂದೀಖಾನೆಗೆ ದೂಡಿದಿರಿ. ಆದರೆ, ಇಷ್ಟೆಲ್ಲ ನಡೆದ ಮೇಲೂ ಹೊಸ ಹೊಸ ಜನ ಮತ್ತು ಸಂಘಟನೆಗಳು ಈ ಉತ್ಸಾಹದ ಗಾಳಿಯತ್ತ ಆಕರ್ಷಿತರಾಗಿ, ತಮ್ಮನ್ನು ತಾವು ಸಮರ್ಪಿಸಿಕೊಳ್ಳಲಿಲ್ಲವೇನು? ಏನೇ ಆಗಲಿ, ಈ ಉತ್ಸಾಹ ನಿಮ್ಮ ಆಳ್ವಿಕೆ ಕೊನೆಗೊಳ್ಳುವವರೆಗೆ ನಿಮ್ಮನ್ನು ಹಿಂಬಾಲಿಸುತ್ತಲೇ ಇರುತ್ತದೆ. ನೀವು ಕಾಂಗ್ರೆಸ್‌ನ್ನು ನಾಶ ಮಾಡುವಲ್ಲಿ ಸಫಲರಾಗಬಹುದು. ಆದರೆ ಅದಕ್ಕೂ ಮುನ್ನ ಹೊಸದಾದ ಮತ್ತು ಇನ್ನೂ ಶಕ್ತಿಶಾಲಿಯಾದ ಕಾಂಗ್ರೆಸ್ ಜನ್ಮ ತಾಳಿರುತ್ತದೆ. ಹೀಗಾಗಿ ನಿಮಗೆ ನೆಮ್ಮದಿ ಸಿಗುವುದು ಖಂಡಿತ ಸಾಧ್ಯವಿಲ್ಲ.

ಒಂದು ವೇಳೆ ಜೇಡಿಮಣ್ಣು ನಮ್ಮ ಸ್ವಾತಂತ್ರ ಭಾವನೆಯ ಜೀವಾಳವೆನಿಸಿದರೆ ಅದರೊಡನೆ ಕೆಲಸಮಾಡುವ ಕ್ರಾಂತಿಕಾರಿ ತಂತ್ರಜ್ಞನೇ ಕುಂಬಾರನಾಗುತ್ತಾನೆ. ಸಾಕಷ್ಟು ಆಲೋಚನೆ, ಚಿಂತನೆ ನಡೆಸಿ ಶಸ್ತ್ರಾಸ್ತ್ರಗಳ ಬಳಕೆಯನ್ನು ಕೈಬಿಟ್ಟಿರುವ ಜನತೆಯೇ ಇಂಥ ತಂತ್ರಜ್ಞನ ರೂವಾರಿ. ಕಾರ್ಖಾನೆಗಳನ್ನು ಬಂದ್ ಮಾಡುವ, ಹಳ್ಳಿ-ಪಟ್ಟಣ -ನಗರಗಳ ನಡುವಣ ವ್ಯಾಪಾರ ನಿಂತು ಹೋಗುವ ಹಾಗೆ ಮಾಡುವ ಹಾಗೂ ಸಂಚಾರ ವ್ಯವಸ್ಥೆಯನ್ನು ಮತ್ತು ಆಡಳಿತ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸುವ - ಎಲ್ಲ ಅಪೂರ್ವ ಪ್ರಯತ್ನಗಳ ಹಿಂದೆ ಇದೇ ಮಹಾನ್ ತಂತ್ರ ಅಡಗಿದೆ. ಇದು ಶಸ್ತ್ರಾಸ್ತ್ರಗಳನ್ನು ಹಿಡಿದು ಕಾದಾಡುವ ನೀತಿಯಲ್ಲ. ಬದಲಾಗಿ ಎದುರಾಳಿಗಳನ್ನು ಅಸಹಾಯಕರನ್ನಾಗಿಸುವ, ನಿರ್ವಿಣ್ಣ ರನ್ನಾಗಿಸುವ ತಂತ್ರ ಇದಾಗಿದೆ. ಬಲಾತ್ಕಾರದಿಂದ ಇನ್ನೊಂದು ರಾಷ್ಟ್ರದ ಮೇಲೆ ಅಧಿಕಾರ ಸ್ಥಾಪಿಸಲು ಹೊರಡುವ ಜನ ಮಾತ್ರ ಈ ತಂತ್ರವನ್ನು ಎದುರಿಸಲಾಗದೇ, ಶರಣಾಗತರಾಗಿ ಬಿಡುತ್ತಾರೆ; ಅವರಿಗೆ ಬೇರೆ ದಾರಿಯೇ ಉಳಿದಿರುವುದಿಲ್ಲ. ನಮ್ಮ ಈ ನೀತಿಯ ಉದ್ದೇಶ ಎಲ್ಲೋ ಕೆಲವು ಪ್ರಾಂತಗಳಲ್ಲಿ ಮಾತ್ರ ಅಧಿಕಾರಕ್ಕೆ ಬರುವುದಲ್ಲ. ಬದಲಾಗಿ ಇಡೀ ರಾಷ್ಟ್ರದಿಂದ ಆಕ್ರಮಣಕಾರಿ ಆಡಳಿತವನ್ನು ಬುಡಸಹಿತ ಕಿತ್ತೊಗೆಯುವುದಾಗಿದೆ. ಅಧಿಕಾರವನ್ನು ವಶಪಡಿಸಿಕೊಳ್ಳುವುದಲ್ಲ; ಅಧಿಕಾರವನ್ನು ಧೂಳೀಪಟ ಮಾಡುವ ನೀತಿ ಇದು. ಭಾರತೀಯ ಕ್ರಾಂತಿಯು ಇದೊಂದು ಅಂಶದಿಂದಾಗಿ ಪಡೆದುಕೊಂಡಿರುವ ಮಹತ್ವದ ಮುಂದೆ ರಷ್ಯಾ ಮತ್ತು ಫ್ರಾನ್ಸ್ ಕ್ರಾಂತಿಗಳೂ ಕೂಡ ನಿಸ್ತೇಜವಾಗಿ ಕಾಣುವುದು ಸತ್ಯ. ಯಾಕೆಂದರೆ, ಈ ಕ್ರಾಂತಿಯು ಎಲ್ಲೋ ಕೆಲವು ಸಶಸ್ತ್ರ ಅಲ್ಪಸಂಖ್ಯಾತರಿಂದ ನಡೆಯುತ್ತಿರುವಂಥದಲ್ಲ. ಬದಲಾಗಿ ರಾಷ್ಟ್ರದ ಸಮಸ್ತ ಜನತೆಯು ಮನಃಪೂರ್ವಕವಾಗಿ ನಡೆಸುತ್ತಿರುವ ಕ್ರಾಂತಿ ಇದು. ಇತಿಹಾಸದಲ್ಲಿ ಮೊದಲ ಬಾರಿಗೆ ಶ್ರೀಸಾಮಾನ್ಯ ಬಂಡಾಯ ಎದ್ದಿದ್ದಾನೆ. ಅವನ ಬಳಿ ಯಾವ ಶಸ್ತ್ರಾಸ್ತ್ರಗಳೂ ಇಲ್ಲ. ಏಕೆಂದರೆ ಅವನ ಪಾಲಿಗೆ ಆತ್ಮಶಕ್ತಿಯೇ ಶ್ರೇಷ್ಠ ಅಸ್ತ್ರ.

ಜನಜಂಗುಳಿ ನಡೆಸಿದ ಹಿಂಸಾಚಾರದ ಬಗ್ಗೆ ನೀವು ಪ್ರಸ್ತಾಪಿಸಿದ್ದೀರಿ. ಇದರ ಬಗ್ಗೆ ಕೆಲವು ವಿವರಗಳನ್ನು ನೀವು ಗಮನಿಸಬೇಕು: ದೃಢಸಂಕಲ್ಪ ಹೊಂದಿದ್ದ ಇಪ್ಪತ್ತಕ್ಕೂ ಹೆಚ್ಚು ಮಂದಿ ನಿರಾಯುಧ ಜನ ಆಗಸ್ಟ್ 18ರಂದು ಒಂದು ಗ್ರಾಮೀಣ ಪೊಲೀಸ್ ಠಾಣೆಯ ಮೇಲೆ ಆಕ್ರಮಣ ಮಾಡಿದರು. ಆಗ ಪೊಲೀಸ್ ಇನ್‌ಸ್ಪೆಕ್ಟರ್-ಪೊಲೀಸರು ಮತ್ತು ಅವರ ಮನೆ ಮಂದಿ, ಮಕ್ಕಳು ಠಾಣೆಯನ್ನು ಖಾಲಿ ಮಾಡುವಷ್ಟು ಸಮಯ ನೀಡಬೇಕೆಂದು ವಿನಂತಿಸಿಕೊಂಡರು. ಭಾರತೀಯರು ದಯಾಪರರು; ಧರ್ಮ ಪಾರಾಯಣರು. ಈ ವಿನಂತಿಯನ್ನು ಮನ್ನಿಸಿದ ಜನಸ್ತೋಮ ಕೆಲಕಾಲ ಹೊರಗೇ ಉಳಿಯಿತು. ಆದರೆ ಅಷ್ಟರಲ್ಲಿ ಜನತೆ ಕಂಡಿದ್ದೇನು? ವಿನಂತಿ ಮಾಡಿಕೊಂಡ ಇನ್‌ಸ್ಪೆಕ್ಟರ್ ಸಹಿತ ಹಲವು ಪೊಲೀಸರು ಠಾಣೆಯ ಮಾಳಿಗೆ ಏರಿ, ಬಂದೂಕು ಹಿಡಿದು ನಿಂತಿದ್ದಾರೆ. ಠಾಣೆಯ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಿಕೊಳ್ಳಲಾಗಿತ್ತು. ಆ ಹೊತ್ತಿನಲ್ಲಿ 23 ವರ್ಷದ ಯುವಕನೊಬ್ಬ, ಈ ಮೋಸಕ್ಕಾಗಿ ಬುದ್ಧಿ ಕಲಿಸಬೇಕೆಂದು ನುಸುಳಿಕೊಂಡು ಠಾಣೆಯ ಮಾಳಿಗೆ ಏರಿದ; ಇನ್‌ಸ್ಪೆಕ್ಟರ್ ಮೇಲೆ ಮುಗಿಬಿದ್ದು, ಅವನ ಕೈಯಿಂದ ಬಂದೂಕು ಕಸಿದುಕೊಳ್ಳಲು ಪ್ರಯತ್ನಿಸಿದ: ಸಹಸ್ರಾರು ಜನ ನೋಡುತ್ತಿದ್ದ ಹಾಗೆ, ಆ ಯುವಕನ ದೇಹವನ್ನು ಪೊಲೀಸ್ ಬಂದೂಕುಗಳು ಛಿದ್ರಛಿದ್ರಗೊಳಿಸಿಬಿಟ್ಟವು. ನಂತರ ಗೋಲಿಬಾರ್ ನಡೆಯಿತು. ಹದಿನೆಂಟು ಜನ ಸ್ಥಳದಲ್ಲೇ ಸತ್ತರು; ಸುಮಾರು ಇನ್ನೂರು ಜನ ಗಾಯಗೊಂಡರು. ಇಷ್ಟಾದರೂ ಜನಸ್ತೋಮ ದಿಕ್ಕಾಪಾಲಾಗಿ ಓಡಲಿಲ್ಲ. ಪೊಲೀಸರ ಮದ್ದು ಗುಂಡು ಖಾಲಿಯಾದವು. ಆಗ ಪೊಲೀಸರು ಗಾಬರಿಯಾದರು. ಅವರನ್ನು ಭಯ ಮುತ್ತಿಕೊಂಡಿತು. ಸಹಸ್ರ ಸಹಸ್ರ ಜನ ಆಗ ಠಾಣೆಯನ್ನು ವಶಪಡಿಸಿಕೊಂಡರು. ಆನಂತರ ಏನಾಯಿತು ಎಂಬುದನ್ನು ದೇವರೇ ಬಲ್ಲ. ಠಾಣೆಯನ್ನು ಜನ ಸುಟ್ಟು ಹಾಕಿದರು. ಅದರ ಒಬ್ಬನೇ ಒಬ್ಬ ಪೊಲೀಸನ ಕೂದಲು ಕೂಡ ಕೊಂಕಲಿಲ್ಲ. ನಾನು ಉದ್ದೇಶ ಪೂರ್ವಕವಾಗಿ ಈ ಪೊಲೀಸ್ ಠಾಣೆಯ ಹೆಸರು ಹೇಳಿಲ್ಲ. ಯಾಕೆಂದರೆ ಇಂಥ ಪ್ರಸಂಗಗಳು ಸಹಸ್ರಾರು ಠಾಣೆಗಳಲ್ಲಿ ನಡೆದಿರಲು ಸಾಧ್ಯವಿದೆ.

ನಿಮ್ಮ ‘‘ಜನ’’ ಭಾರತೀಯ ಮಹಿಳೆಯರನ್ನು ಬೆತ್ತಲೆಗೊಳಿಸಿ, ಅವರನ್ನು ಮರಕ್ಕೆ ಕಟ್ಟಿ ಹಾಕಿ, ಹಿಂಸಿಸಿ ಸಾಯಿಸಿದ್ದಾರೆ. ನಿಮ್ಮ ‘‘ಜನ’’ ಅವರನ್ನು ಬೆದರಿಸಿ, ಬೀದಿ ಬೀದಿಯಲ್ಲಿ ಅವರ ಮೇಲೆ ಬಲಾತ್ಕಾರ ಮಾಡಿದ್ದಾರೆ ಮತ್ತು ಕೊಂದಿದ್ದಾರೆ. ನೀವು ಫ್ಯಾಶಿಸ್ಟ್ ಸೇಡಿನ ನೀತಿಯನ್ನು ಉದಾಹರಿಸಿದ್ದೀರಿ. ಆದರೆ ನಿಮ್ಮ ‘‘ಜನ’’ ತಮಗೆ ಬೇಕಾದ ಹೋರಾಟಗಾರರು ಸಿಕ್ಕದಿದ್ದಾಗ, ಅವರ ಮನೆಯ ಹೆಂಗಸರ ಮೇಲೆ ಬಲಾತ್ಕಾರ ಮಾಡಿ, ಅವರನ್ನು ಕೊಲೆ ಮಾಡಿದ್ದಾರೆ. ಈ ಎಲ್ಲಾ ದುಷ್ಕೃತ್ಯಗಳಿಗೆ ನೀವು ಮತ್ತು ನಿಮ್ಮ ‘‘ಜನ’’ ಉತ್ತರಿಸಬೇಕಾದ ಕಾಲ ಶೀಘ್ರದಲ್ಲೇ ಬರಲಿದೆ.

ಒಂದು ಸಾವಿರಕ್ಕಿಂತ ಕಡಿಮೆ ದೇಶಭಕ್ತರನ್ನು ಕೊಂದಿರುವುದಾಗಿ ನೀವು ಹೇಳಿಕೊಂಡಿದ್ದೀರಿ. ಆದರೆ ವಾಸ್ತವವಾಗಿ ಐವತ್ತು ಸಾವಿರಕ್ಕಿಂತ ಹೆಚ್ಚು ಜನ ದೇಶಭಕ್ತರು ಜೀವ ಕಳೆದುಕೊಂಡಿದ್ದಾರೆ; ಅದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಮಂದಿ ಗಾಯಗೊಂಡಿದ್ದಾರೆ, ದೌರ್ಜನ್ಯಕ್ಕೀಡಾಗಿದ್ದಾರೆ. ಕೇವಲ ಎರಡು ವಾರಗಳ ಕಾಲ ದೇಶವನ್ನು ಸುತ್ತಲು ನನಗೆ ಅವಕಾಶ ಕೊಡಿ; ನಿಮ್ಮ ಪೊಲೀಸರು ನನ್ನನ್ನು ತಡೆಯದಿರಲಿ. ಆಗ ನಿಮ್ಮ ದೌರ್ಜನ್ಯಕ್ಕೆ ಬಲಿಯಾದ ಹತ್ತು ಸಾವಿರಕ್ಕೂ ಹೆಚ್ಚು ದೇಶಭಕ್ತರ ಹೆಸರು, ವಿಳಾಸಗಳನ್ನು ನಾನು ಪಟ್ಟಿಮಾಡಿ ಕೊಡುತ್ತೇನೆ. ಇದಕ್ಕೂ ಹೆಚ್ಚಿನ ಜನ ಬಲಿಯಾಗಿರುವುದನ್ನು ಕುರಿತ ಅಂಕಿ ಅಂಶಗಳು ಬಹುಶಃ ನನ್ನ ರಾಷ್ಟ್ರವು ಸ್ವಾತಂತ್ರ ಪಡೆದ ಮೇಲೆಯೇ ಬಯಲಾಗಬಹುದೇನೋ?

ಕಳೆದ ಆರು ತಿಂಗಳಲ್ಲಿ ದೇಶದ ನಾನಾ ಭಾಗಗಳಲ್ಲಿ ಜಲಿಯನ್ ವಾಲಾಬಾಗ್ ರೀತಿಯ ಹತ್ಯಾಕಾಂಡಗಳು ಎಷ್ಟೋ ನಡೆದಿವೆ. ಆದರೆ ಒಂದು ಬದಲಾವಣೆ ಕಾಣುತ್ತದೆ. ಅದೆಂದರೆ, ನಿಮ್ಮದು ಕೊಲೆಪಾತಕ ಆಡಳಿತವೆಂದು ಸಾಬೀತಾದ ಮೇಲೆ, ನಿಮ್ಮನ್ನು ಎದುರಿಸಲು ಭಾರತದ ಜನತೆ ಇನ್ನೂ ಹೆಚ್ಚಿನ ಆತ್ಮಸ್ಥೈರ್ಯದಿಂದ ದೃಢಸಂಕಲ್ಪ ಮಾಡಿದ್ದಾರೆ. ನಿಮ್ಮ ಆಡಳಿತದ ಗೋಲಿಬಾರ್ ಎದುರಿಸಲು ನಿಶ್ಯಸ್ತ್ರರಾದ ಭಾರತೀಯರು ತಮ್ಮ ದೈವೀಸಾಹಸವನ್ನು ತೋರುತ್ತ ಮುಂದಡಿ ಇಟ್ಟಿದ್ದಾರೆ.

ನಿಮ್ಮನ್ನು ಹೊಡೆದೋಡಿಸುವಲ್ಲಿ ನಾವು ಬಹುಮಟ್ಟಿಗೆ ಸಫಲ ರಾಗಿಬಿಟ್ಟಿದ್ದೆವು. ರಾಷ್ಟ್ರದ ಶೇಕಡಾ ಹದಿನೈದರಷ್ಟು ಭಾಗದಲ್ಲಿ ನಿಮ್ಮ ಆಡಳಿತವನ್ನು ಕಿತ್ತೊಗೆದು ಬಿಟ್ಟಿದ್ದೆವು. ಆದರೆ ನಮ್ಮ ಸ್ವತಂತ್ರ ಪ್ರಾಂತಗಳನ್ನು ನಿಮ್ಮ ಸೇನೆ ಎರಡನೇ ಬಾರಿಗೆ ಜಯಿಸಿತು. ನಮ್ಮ ಜನರೂ ಹಿಂಸಾಚಾರಕ್ಕೆ ಇಳಿದಿದ್ದರೆ, ನೀವು ಹೀಗೆ ಎರಡನೇ ಬಾರಿಗೆ ಜಯಗಳಿಸಲು ಸಾಧ್ಯವಿತ್ತೇನು? ಹೀಗೇನಾದರೂ ಆಗಿದ್ದರೆ, ನಿಮ್ಮ ಸೇನೆ ಕೂಡ ಭಾರತೀಯ ಮತ್ತು ಇಂಗ್ಲಿಷ್ ಎಂಬ ಎರಡು ಬಣಗಳಾಗಿ ವಿಭಜನೆಗೊಂಡಿರುತ್ತಿತ್ತು.

ಶ್ರೀಮಾನ್ ಲಿನ್‌ಲಿಥ್‌ಗೊ, ನಾನು ಖಚಿತವಾಗಿ ಹೇಳುತ್ತೇನೆ: ಒಂದು ವೇಳೆ ನಮ್ಮ ಜನತೆ ಶಸ್ತ್ರ ಹಿಡಿದು ನಿಂತಿದ್ದರೆ, ಹಿಂಸೆಯನ್ನು ಆಯ್ಕೆ ಮಾಡಿಕೊಂಡಿದ್ದರೆ ಈ ಹೊತ್ತು ನಿಮಗೆ ಮರಣ ದಂಡನೆಯಾಗಿರುತ್ತಿತ್ತು; ಸ್ವತಂತ್ರ ಜನತೆ ಹಾಗೂ ಆ ಜನತೆಯ ಸರಕಾರ ನಿಮಗೆ ನೀಡಿದ್ದ ಈ ಮರಣದಂಡನೆಯ ಶಿಕ್ಷೆಯನ್ನು ನಿಲ್ಲಿಸಲು ಗಾಂಧೀಜಿ ಹಾಗೂ ಭಾರತದ ಕರುಣಾಳು ಹೃದಯಿಗಳು ಪ್ರಯತ್ನಿಸುತ್ತಾ ಇರುತ್ತಿದ್ದರು.

ಆದರೆ ಇನ್ನೂ ಅಸಂತುಷ್ಟನಾಗಿಲ್ಲ: ಏಕೆಂದರೆ, ಇನ್ನೊಬ್ಬರಿಗಾಗಿ ದುಃಖ ಅನುಭವಿಸುವುದು ಹಾಗೂ ಆ ಮೂಲಕ ಅವರನ್ನು ಸರಿದಾರಿಗೆ ತರುವುದು ಭಾರತದ ಪರಂಪರೆಯೇ ಆಗಿದೆ. ನಿರಾಯುಧರಾದ ಸಾಮಾನ್ಯ ಜನತೆಯ ಚರಿತ್ರೆಯು ಆಗಸ್ಟ್ ಒಂಬತ್ತರ ಭಾರತೀಯ ಕ್ರಾಂತಿಯಿಂದಲೇ ಪ್ರಾರಂಭವಾಗುತ್ತದೆ.

ಐವತ್ತು ಸಾವಿರ ಭಾರತೀಯರು ಸಾವಿಗೆ ಹಾಗೂ ತೀವ್ರ ಗಾಯಗಳಿಗೆ ತುತ್ತಾದರು. ಆದರೆ, ನಿಮ್ಮ ಸೇನೆಯ ದಬ್ಬಾಳಿಕೆಗೆ ಪ್ರತಿಕ್ರಿಯೆಯಾಗಿ ಭಾರತೀಯರಿಂದ ಹೆಚ್ಚು ಹಿಂಸಾಚಾರ ನಡೆಯಲಿಲ್ಲ. ಆದರೂ, ನಿಮ್ಮ ಸೇನೆಗೆ ಸೇರಿದ ಸುಮಾರು ಒಂದುನೂರು ಜನ ಪ್ರಾಣ ಕಳೆದುಕೊಳ್ಳುವ ಹಾಗಾಯಿತಲ್ಲ ಎಂಬ ಬಗ್ಗೆ ನನಗೆ ತೀವ್ರ ದುಃಖವಾಗಿದೆ. ಈ ಪ್ರಪಂಚದಲ್ಲಿ ದುಃಖ ತರುವ ಘಟನೆಗಳು ನಡೆಯುವುದು ಸಹಜ. ಆದರೆ ಇದಕ್ಕೂ ನಾನು ನಿಮ್ಮನ್ನೇ, ನಿಮ್ಮ ಆಡಳಿತವನ್ನೇ ಜವಾಬ್ದಾರರನ್ನಾಗಿಸಲು ಬಯಸುತ್ತೆ

ೀನೆ. ಯಾಕೆಂದರೆ ನಮ್ಮ ಜನರಿಗೆ ಸೂಚನೆ ಹಾಗೂ ನಿರ್ದೇಶನ ನೀಡಬಹುದಾಗಿದ್ದ ನಮ್ಮ ಸಂಘಟನೆಯನ್ನೇ ನೀವು ನಾಶ ಮಾಡಿದ್ದೀರಿ. ನಮ್ಮ ಜನತೆಯಲ್ಲಿ ಕೇವಲ ಸ್ವಯಂ ನಿಯಂತ್ರಣ ಮಾತ್ರ ಉಳಿದಿತ್ತು. ಲಕ್ಷಾಂತರ - ಕೋಟ್ಯಂತರ ಸಂಖ್ಯೆಯಲ್ಲಿದ್ದ ಭಾರತೀಯ ಜನತೆ ಇಂತಹ ಗೊಂದಲದಲ್ಲೂ, ಇಂತಹ ಪ್ರಚೋದನೆಯಲ್ಲೂ ಇಷ್ಟು ಸಂಯಮ ತೋರಿದ್ದೇ ಒಂದು ಅದ್ಭುತ. ಇದು ಬಹುಶಃ ನಿಮಗೆ ಅರ್ಥವಾಗಲಾರದು. ನಾವು ಸಭ್ಯರು. ಒಬ್ಬ ಮಹಾನ್ ಗುರುವಿನಿಂದ ಕಳೆದ ಇಪ್ಪತ್ತಮೂರು ವರ್ಷಗಳ ಕಾಲ ದೀಕ್ಷೆ ಪಡೆದವರು. ಆದರೆ ನೀವು ಇಡೀ ದೇಶದ ಮೇಲೆ ಅಂಕುಶ ಹಿಡಿದು ಕಾವಲು ನಿಂತವರು. ನಿಃಶಸ್ತ್ರರಾದ ಲಕ್ಷಾಂತರ ಜನತೆಯನ್ನು ದಮನ ಮಾಡಲು ಶಸ್ತ್ರಧಾರಿ ಸೇನೆ ಬಂದಾಗ ವಿಷಾದಕರವೆನಿಸುವ ಚಿಕ್ಕ ಪುಟ್ಟ ಘಟನೆಗಳು ಜರುಗುವುದು ಸಹಜವಲ್ಲವೆಂದು ಹೇಳಲು ಯಾರಿಗೆ ತಾನೆ ಸಾಧ್ಯ?

ಇನ್ನು ಚಿರಪರಿಚಿತ ಕಾಂಗ್ರೆಸಿಗರ ಕಾರ್ಯಚಟುವಟಿಕೆಗಳ ಬಗ್ಗೆ ಹೇಳುತ್ತೇನೆ. ನಿಮ್ಮ ಕಾರ್ಯದರ್ಶಿಯು ಆಂದೋಲನದ ಕಾರ್ಯಕರ್ತರ ಅಹಿಂಸಾತ್ಮಕ ಚಟುವಟಿಕೆಗಳನ್ನು ವಿವರವಾಗಿ ವರದಿ ಮಾಡಿದ ಗೃಹಖಾತೆಯ ರಹಸ್ಯ ಕಡತ (ಸಮೀಕ್ಷೆ 2)ವನ್ನು ಸಾಕ್ಷವಾಗಿ ನೀಡುತ್ತೇನೆ. ನೀವು ಅದನ್ನು ಪರಿಶೀಲಿಸಿ. ಕಾಂಗ್ರೆಸಿಗರ ಚಲನವಲನಗಳ ಮೇಲೆ ಕಣ್ಣಿಡಲು ನೀವು ಇಂಡಿಯನ್ ರಾಯಲ್ ನೇವಿಯ ಬ್ರಿಟಿಷ್ ಅಧಿಕಾರಿಗಳಿಗೆ ಆದೇಶ ನೀಡಿದಿರಿ. ನೀವು ಹೀಗೆ ಮಾಡಿರದಿದ್ದರೆ ಸೂಕ್ತವಾಗಿರುತ್ತಿತ್ತು. ಯಾಕೆಂದರೆ ಸೌಜನ್ಯಶೀಲರಾದ ಆ ಅಧಿಕಾರಿಗಳು ಕೂಡ ಈ ಬಗ್ಗೆ ವ್ಯಥೆಪಟ್ಟದ್ದನ್ನು ನಾನು ಬಲ್ಲೆ.

ನಿಮ್ಮ ಆಡಳಿತವು ಆದಷ್ಟು ಬೇಗನೇ ಎಲ್ಲವನ್ನೂ ವಿನಾಶಮಾಡುವುದರ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ಆಗಸ್ಟ್ ಒಂಬತ್ತರ ನಂತರದ ಕೆಲವೇ ದಿನಗಳಲ್ಲಿ ಕಾಂಗ್ರೆಸ್‌ನ್ನು ಅಪ್ರಸ್ತುತಗೊಳಿಸಲು ನೀವು ಪ್ರಯತ್ನಿಸಿದಿರಿ. ಆದರೂ ಕಾಂಗ್ರೆಸ್ ನಿಮ್ಮ ತಂತ್ರವನ್ನು ವಿಫಲಗೊಳಿಸಿತು. ಯಾಕೆ ಗೊತ್ತೇ? ಇಂದು ಪ್ರತಿಯೊಬ್ಬ ನಿಜವಾದ ಭಾರತೀಯನೂ ಒಬ್ಬ ಕಾಂಗ್ರೆಸಿಗನೇ ಆಗಿದ್ದಾನೆ.

ನಾನು ಆತ್ಮ ವಿಶ್ವಾಸದಿಂದ ಹೇಳುತ್ತೇನೆ: ಬೇರೆ ರಾಷ್ಟ್ರಗಳಲ್ಲಿನ ಕ್ರಾಂತಿಕಾರಿಗಳಿಗಿಂತ ಕಾಂಗ್ರೆಸಿಗರು ಭಿನ್ನವಾಗಿದ್ದಾರೆ. ಅವರು ಹಿಂಸಾಚಾರದಿಂದ ಬಹು ದೂರ. ಅವರು ನಿರ್ದೋಷಿಗಳನ್ನು ಹಿಂಸೆಗೆ ಗುರಿಪಡಿಸುವುದು ಹಾಗಿರಲಿ, ನಿಮ್ಮಂತ ಕೊಲೆಪಾತಕಿಗಳನ್ನು ಕೂಡ ಹಿಂಸೆಗೊಳಪಡಿಸಲು ಮುಂದಾಗಿಲ್ಲ. ನಿಮ್ಮ ರಾಷ್ಟ್ರದ ಕ್ರಾಂತಿಕಾರಿಗಳು ಈ ಅಪೂರ್ವ ವಸ್ತು ಸ್ಥಿತಿಯ ಬಗ್ಗೆ ಏನು ಹೇಳುತ್ತಾರೆ? ತಮ್ಮ ಜೀವಕ್ಕೆ ಸಂಚಕಾರ ಶತಃಸಿದ್ಧ ಎಂದು ಮನವರಿಕೆಯಾದ ಮೇಲೂ ಹಿಂಸೆಯನ್ನು ಒಪ್ಪದ, ಅದನ್ನು ಆತ್ಮರಕ್ಷಣೆಗಾಗಿ ಕೂಡ ಬಳಸದ ಕ್ರಾಂತಿಕಾರಿಗಳ ಬಗ್ಗೆ ಯಾರಿಗಾದರೂ ಗೊತ್ತೇನು? ಈಗ ಭಾರತದಲ್ಲಿ ನಡೆಯುತ್ತಿರುವುದು ಇಂತಹ ಅತ್ಯಂತ ಅಪರೂಪವಾದ ವಿದ್ಯಮಾನ. ಇದಕ್ಕೆ ಕೆಲವು ಅಪವಾದಗಳೂ ಉಂಟು.

ಈ ಅಪವಾದಗಳ ಸಂಖ್ಯೆ ಹೆಚ್ಚಲೂಬಹುದು. ಏಕೆಂದರೆ ಒಂದು ರೀತಿಯಲ್ಲಿ ಭಾರತ ಮತ್ತು ಬ್ರಿಟನ್ ನಡುವೆ ಹೋರಾಟದ ನಿರ್ಧಾರ ಆಗಿಹೋಗಿದೆ. ಅಂತಿಮ ಹೋರಾಟ ನಡೆಸುವ ರೀತಿ ಯಾವುದು ಎಂಬುದು ಮಾತ್ರ ಈಗ ನಿರ್ಧಾರವಾಗಬೇಕಿದೆ ಅಷ್ಟೇ.

ನೀವು ಸಾಕ್ಷ ಮತ್ತು ನ್ಯಾಯ ತೀರ್ಮಾನದ ಬಗ್ಗೆ ಮಾತಾಡಿದ್ದೀರಿ. ನೀವು ಈ ದಾರಿ ಹಿಡಿದಿದ್ದರೂ ಪರಿಣಾಮವೇನೂ ಬೇರೆ ಆಗುತ್ತಿರಲಿಲ್ಲ. ನಿಃಶಸ್ತ್ರರಾದ ಲಕ್ಷಾಂತರ ಜನತೆಯನ್ನು ಸೇನೆಯ ಬಲದಿಂದ ಕೊಲೆಗೈದ ನೀವು ಬಾಗಿಲು ಮುಚ್ಚಿ ನ್ಯಾಯಾಲಯಗಳ ಒಳಗೆ ವಿಚಾರಣೆ ಎಂಬ ಏಕಪಕ್ಷೀಯ ತಂತ್ರದಲ್ಲಿ ಸಿಲುಕಿಸಿ, ಈ ಜನರನ್ನು ಕೊಲೆಗೈಯುತ್ತಿದ್ದಿರಿ, ಅಷ್ಟೇ. ನಿಮಗೆ ಧೈರ್ಯ ಇದ್ದಲ್ಲಿ ನನ್ನ ಸವಾಲನ್ನು ಅಂಗೀಕರಿಸಿ: ಸಾರ್ವಜನಿಕ ವಿಚಾರಣೆಯನ್ನು ನಮ್ಮ ಜನರ ಬಗೆಗೆ ನಡೆಸಿ. ತೀರ್ಪನ್ನು ನೀವೇ ಕೊಡಿ ಅಥವಾ ನಿಮ್ಮ ಜನರೇ ಕೊಡಲಿ. ನಮಗೆಲ್ಲ ಬದುಕು ಪ್ರಿಯವಾದುದು. ನಮಗೆ ಭವಿಷ್ಯದ ಬಗ್ಗೆ ತೀವ್ರವಾದ ಕಾಳಜಿಯೂ ಇದೆ. ಆದ್ದರಿಂದಲೇ ಇಂತಹ ಮುಕ್ತ ವಿಚಾರಣೆಯ ಸಂದರ್ಭದಲ್ಲಿ ಎದುರಾಗುವ ಸಾಕ್ಷಗಳು ಕುತೂಹಲಕರವಾಗಿದ್ದು, ಹೊಸ ಮಾಹಿತಿಗಳನ್ನು ಖಂಡಿತ ಹೊರಹಾಕುವಂತವುಗಳಾಗಿರುತ್ತವೆ.

ನಮಗೆ ಭವಿಷ್ಯದ ಬಗ್ಗೆ ತೀವ್ರವಾದ ಕಾಳಜಿ ಇದೆ ಎಂದು ನಾನು ಹೇಳಿದೆ. ಜಯ ನಿಮ್ಮದಾದಲ್ಲಿ ಹತಾಶೆ, ಮತ್ತು ಗಾಢಾಂಧಕಾರ ಎಲ್ಲೆಡೆ ಆವರಿಸಿರುತ್ತದೆ. ಸ್ವತಂತ್ರ ಭಾರತ ಈ ಹೋರಾಟವನ್ನು ಪ್ರಜಾಸತ್ತಾತ್ಮಕವಾದ ಮುಕ್ತಾಯದೆಡೆಗೆ ತೆಗೆದುಕೊಂಡು ಹೋಗಬಲ್ಲದೆಎಂಬುದು ಈ ಹೊತ್ತಿನಲ್ಲಿ ಕಾಣುವ ಏಕ ಮಾತ್ರ ಆಶಾಜ್ಯೋತಿ.

ನಿಮ್ಮ ಜನ ಎಲ್ಲರೂ ಕೂಡಿ ಹೊರಲಾಗದಂತಹ ಹೊಣೆಗಾರಿಕೆ ಯನ್ನು ನೀವು ಹೊತ್ತುಕೊಂಡಿದ್ದೀರಿ. ಪಾಂಟಿಯಸ್ ಪೈಲೆಟ್ ಎಂಬ ಶ್ರೀಮಂತ ಎಲ್ಲರನ್ನೂ ಅಪಹಾಸ್ಯ ಮಾಡುತ್ತಿದ್ದ; ಆದರೆ ಅವನು ನಾಸ್ತಿಕ. ನೀವಾದರೋ ಆಸ್ತಿಕರೆಂಬಂತೆ ಮಾತನಾಡುತ್ತೀರಿ. ಚರಿತ್ರೆಯು ನಿಮ್ಮ ಹೆಸರನ್ನು ಮರೆಯಲು ಪ್ರಯತ್ನ ನಡೆಸುತ್ತಲೇ ಇರುತ್ತದೆ. ಈ ಪ್ರಯತ್ನದಲ್ಲಿ ಚರಿತ್ರೆಗೆ ಯಶಸ್ಸು ಸಿಗುವವರೆಗೆ ನೋವು ಮತ್ತು ನಿಸ್ಸಹಾಯಕತೆ ಉಳಿದಿರುತ್ತವೆ. ನಿಮ್ಮ ಆತ್ಮಸಾಕ್ಷಿಗೆ ಹೆದರಿ- ನಿಮ್ಮಲ್ಲೂ ಅದು ಇದ್ದಿರಲೇ ಬೇಕು - ಅಥವಾ ಜನತೆಯ ಕೋಪೋದ್ರೇಕಕ್ಕೆ ಭಯಭೀತರಾಗಿ ನೀವು ಗಾಂಧೀಜಿಯವರನ್ನು ಬಿಡುಗಡೆ ಮಾಡಬಹುದು. ನೀವು ಬಿಡುಗಡೆ ಮಾಡಿ ಇಲ್ಲವೇ ಬಿಡಿ, ನೀವು ಸಂಪೂರ್ಣ ಶರಣಾಗತರಾಗುವವರೆಗೆ ನಮ್ಮ ಸ್ವಾತಂತ್ರದ ಹುಮ್ಮಸ್ಸು ಮಾತ್ರ ನಿಮ್ಮ ಬೆನ್ನು ಬಿಡುವುದಿಲ್ಲ, ನೆನಪಿರಲಿ.

ದಬ್ಬಾಳಿಕೆಯ ಸಂದರ್ಭದಲ್ಲಿ ಲಭ್ಯವಿರುವ ಈ ಸಂಪರ್ಕ ಸಾಧನದ ಮೂಲಕ ಈ ಪತ್ರವನ್ನು ನಿಮಗೆ ಕಳಿಸುತ್ತಿದ್ದೇನೆ. ನಿಮ್ಮ ಹಿತೈಷಿ,

ರಾಮಮನೋಹರ ಲೋಹಿಯಾ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top