ಅವನದು ಕವಿತೆಯಂತಹ ಬದುಕು! | Vartha Bharati- ವಾರ್ತಾ ಭಾರತಿ

ಅವನದು ಕವಿತೆಯಂತಹ ಬದುಕು!

ವಾಸ್ತವ ಜಗತ್ತಿನೊಂದಿಗೆ ತೀರಾ ವ್ಯಾಮೋಹವಿಲ್ಲದಂತೆ ಮನೆಯ ಮೂಲೆಯಲ್ಲೆಲ್ಲಾದರೂ ಜಪಮಣಿಯನ್ನಿಡಿದು ಕುಳಿತುಕೊಳ್ಳುವ ಅಜ್ಜ ಕಥೆ ಹೇಳಹೊರಟರೆ ನಾಲ್ಕು ರೆಡ್ಬುಲ್ ಒಟ್ಟಿಗೆ ಕುಡಿದ ಹುಮ್ಮಸ್ಸಿನೊಂದಿಗೆ ಹದವಾದ ಹಾಸ್ಯ ಮಿಶ್ರಿತ ಶೈಲಿಯಲ್ಲಿ ತಾಂಬೂಲ ಮೆಲ್ಲುತ್ತಾ ತನ್ನ ಮೊಮ್ಮಕ್ಕಳನ್ನು ಮುತ್ತಾತರ ಕೈಗೊಪ್ಪಿಸಿ ನಿರಾಳರಾಗುತ್ತಾರೆ. ಹಾಗೆಲ್ಲಾ ತಲೆಮಾರುಗಳನ್ನು ಒಂದೇ ದಾರದಲ್ಲಿ ಪೋಣಿಸಿದ ಸಂತೃಪ್ತಿ ಅವರ ಕಣ್ಣುಗಳಲ್ಲಿ ತುಂಬಿಕೊಂಡಿರುತ್ತದೆ. ಬಾಯಲ್ಲಿರುವ ಎಲೆಯಡಿಕೆಯ ಬಣ್ಣ ಕೆಂಪಾಗುತ್ತಾ ಹೋದಂತೆ ಕಥೆ ರಂಗೇರುತ್ತದೆ. ಹೂಂಗುಟ್ಟಬೇಕೆಂಬ ಶರತ್ತಿಗೆ ಒಪ್ಪಿದರೆ ಮತ್ತು ಅದನ್ನು ಚಾಚು ತಪ್ಪದೆ ಪಾಲಿಸಿದರೆ ಉಳಿದಂತೆ ಕಥೆಯ ಓಘಕ್ಕೆ ಯಾವ ನಿರ್ವಿಘ್ನವೂ ಇಲ್ಲ. ನಂತರ ನಮ್ಮ ಪಾಲಿಗೆ ಒಲಿಯುವುದು ಕವಲೊಡೆದು ಸಾವಿರ ಕಥೆಗಳಾಗಬಲ್ಲ ತುಂಡು ತುಂಡು ಕಥಾ ಹಂದರಗಳ ಚಂದದ ಪ್ರಪಂಚ.

 ನಮ್ಮ ಮಲೆಬೆಟ್ಟಿಗೆ ಆಗ ಬಸ್ಸು ಬರುತ್ತಿತ್ತೇ ಎಂದು ಕೇಳಿದರೆ ಅಂಗೈಯಲ್ಲಿ ಗಲ್ಲಕೂರಿಸಿ ನಗುತ್ತಾರೆ ಅಜ್ಜ. ನಾವು ಕಣ್ಣು ಬಿಡುವಾಗಲೇ ಗಡಿಬಿಡಿಯ ಊರಾಗಿದ್ದ ಬೆಳ್ತಂಗಡಿಯಲ್ಲಿ ಆ ದಿನಗಳಲ್ಲಿ ಒಂದೇ ಒಂದು ದಿನಸಿ ಅಂಗಡಿಯಿದ್ದಿತು ಎಂಬ ವಿಷಯವನ್ನು ಯಾವ ಸೋಜಿಗವೂ ಇಲ್ಲದಂತೆ ಮುಂದಿಡುತ್ತಾರೆ. ಮೊದಮೊದಲು ಊರಿಗೆ ಎತ್ತಿನ ಗಾಡಿ ಬಂದ ದಿನ ತಾನು ರಾತ್ರಿಯಿಡೀ ಎತ್ತಿನ ಗಾಡಿಯಲ್ಲಿ ಸವಾರಿ ಮಾಡಿದಂತೆ, ಊರ ಜನರೆಲ್ಲರೂ ತನ್ನ ಹಿಂದೆ ಓಡಿ ಬಂದಂತೆ, ತಾನು ಹಾರಿ ಹತ್ತಿದಂತೆ, ಗಾಳಿಯಲ್ಲಿ ತೇಲಿದಂತೆ ಕನಸ್ಸು ಬಿದ್ದಿತೆನ್ನುವಾಗ ಆ ಕ್ಷಣದಲ್ಲಿ ನಮ್ಮ ಹತ್ತಿರವೇ ಕುಳಿತ ಅಜ್ಜ ಬಾಲ್ಯದ ದಿನಗಳನ್ನು ಮೆಲುಕುಹಾಕಿದರೆ, ಅವರ ಮುಖದ ಸುಕ್ಕುಗಳು ಮಾಯವಾಗಿ ಆಗತಾನೇ ಅರಳಿದ ಹೂವಿನ ಮೊಗ್ಗಿನಂತೆ ಕಾಣುತ್ತಾರೆ. ಊರಿಗೆ ವಿಶೇಷ ಹಿರಿಮೆ ತಂದು ಕೊಟ್ಟ ಎತ್ತಿನ ಗಾಡಿನ ಒಡೆಯ ಗಾಂಜಾಲ್ ಬಾಬು ತನ್ನ ಗಾಡಿಯಿಂದ ಹೊರಡಿದನೆಂದರೆ ದಾರಿಯ ಇಕ್ಕೆಲಗಳಲ್ಲೂ ಸೇರುತ್ತಿದ್ದ ಮಕ್ಕಳು ಕೈಬೀಸಿ ಟಾಟಾ ಮಾಡಿದರೆ ಮಕ್ಕಳ ಪಾಲಿಗೆ ಆ ದಿನದ ಹಬ್ಬ ಮುಗಿದಂತೆ. ಬಾಬಣ್ಣನೂ ಅಷ್ಟೇ ಒಂದಿಷ್ಟು ಪುಟಾಣಿಗಳನ್ನು ಕೂರಿಸಿಕೊಂಡು ‘ಹೊಯಿ ಹೊಯಿ’ ಎನ್ನುತ್ತಾ ಅತ್ತಿತ್ತ ಓಡಾಡಿಸಿ ಮರಳಿ ಹತ್ತಿಸಿದಲ್ಲಿಯೇ ಇಳಿಸಿದಾಗ ಮಕ್ಕಳ ವದನದಲ್ಲಿ ಮೂಡುವ ನಗುವನ್ನು ತನ್ನ ಗಾಡಿಯ ಪರವಾನಗಿ ಎಂದು ತಿಳಿದುಕೊಂಡವನು. ಎಲ್ಲವನ್ನೂ ಎಲ್ಲರನ್ನೂ ಸಾಗಿಸಲು ಇರುತ್ತಿದ್ದ ಆ ಎತ್ತಿನಗಾಡಿ ಅದೆಷ್ಟು ಜನರ ಜೀವ ಉಳಿಸಿರಬಹುದೋ ಎಂದ ಅಜ್ಜ ತನ್ನ ತಂದೆಗೆ ಹಾವು ಕಡಿದಾಗ ಗಾಂಜಾಲ್ ಬಾಬುನ ಗಾಡಿ ಇರುತ್ತಿದ್ದರೆ ಬದುಕಿ ಉಳಿಯುತ್ತಿದ್ದರೋ ಏನೋ ಎಂದು ಎಷ್ಟೋ ವರುಷಗಳ ಹಿಂದೆ ಅಗಲಿದ ಜೀವದ ಉಳಿವಿಗೆ ತುಡಿಯುವ ಅವರು ಮಾತು ನಿಲ್ಲಿಸಿ ಮೌನಿಯಾದರೆ ಇತ್ತ ನಾವು ಹೂಂಗುಟ್ಟುವುದನ್ನು ಮರೆತು ಬಿಡುತ್ತಿದ್ದೆವು. ಈ ಇಳಿ ಜೀವಗಳಿಗೂ ಆಸೆಗಳಿರುತ್ತದಾ ? ಇನ್ನೂ ಅಂಥಹದೊಂದು ಸಾಧ್ಯತೆಯನ್ನು ಮನಸ್ಸಿನಲ್ಲಿ ಕಾಪಿಟ್ಟುಕೊಂಡು ಬದುಕುತ್ತಿದ್ದಾರಾ ಎಂದೆನಿಸಿ ಅವರ ಮುಖ ನೋಡಿದರೆ ತುಟಿಯ ಅಂಚಿನಲ್ಲಿ ಹರಿದ ತಾಂಬೂಲ ರಸವನ್ನ ಬೈರಾಸಿನ ಚುಂಗಿನಿಂದ ಒರೆಸಿಕೊಂಡರು.

ಅಪ್ಪನ ಕುರಿತು ಕೇಳಿದರೆ ಮಾತ್ರ ಸ್ವಲ್ಪ ಹೆಚ್ಚೇ ಗಂಟಲು ಸರಿಮಾಡಿಕೊಂಡು ಸಪೂರಗೆ ಬೆಳ್ಳಗಿದ್ದ ತನ್ನ ತಂದೆಯ ಸೌಂದರ್ಯ, ಸೇರಿದ ದಪ್ಪ ಹುಬ್ಬು,ಶಿಕಾರಿಯ ಟ್ರಿಕ್ಕು ಮತ್ತು ಇಡೀ ಊರಿನಲ್ಲಿ ಸಂಚಲನ ಸೃಷ್ಟಿಸಿದ ಒಂದೂವರೆ ರೂಪಾಯಿಯ ಅಂಗಿ ಹೊಲಿಸಿದ ಗತ್ತು ಎಲ್ಲವನ್ನು ಹುಮ್ಮಸ್ಸಿನಿಂದ ಮುಂದಿಡುತ್ತಾರೆ.ಅದನ್ನು ಧ್ಯಾನಿಸಿ ಕೇಳಿದರೆ ಕೇಳುಗರಿಗೆ ಸ್ವರ್ಗದ ತುಂಡೊಂದು ಭೂಮಿಗೆ ಬಿದ್ದಷ್ಟು ಸಂಭ್ರಮ. ಬೈರಾಸು ಸುತ್ತಿಕೊಂಡು ಮದುವೆ ಸಮಾರಂಭಗಳಿಗೆ ಹೋಗುತ್ತಿದ್ದ ದಿನಗಳಲ್ಲಿ ಮುತ್ತಾತ ಒಂದು ಅಂಗಿ ಹೊಲಿಸಿದ್ದರಂತೆ.ಶತಮಾನದ ಹಿಂದೆ ಆ ಬಿಳಿ ಗೀಟಿನ ಅದೇ ಬಣ್ಣದ ಅಂಗಿ ಮಾಡಿದ ಸದ್ದು ಗದ್ದಲಕ್ಕೆ ನಾವು ಬೆರಗಾಗಬೇಕು.! ಮುಕ್ಕಾಲು ಕೈಯ ಆ ದೊಗಲೆ ಅಂಗಿ ಊರಿನಲ್ಲಲ್ಲದೆ ನೆರೆ ಊರಿಗೂ ತನ್ನ ಪ್ರತೀತಿಯನ್ನು ಹಬ್ಬಿ ಅದರ ವೀಕ್ಷಣೆಗೆ ಸುಮಾರು ಮೈಲುಗಟ್ಟಲೆ ನಡೆದು ಬರುತ್ತಿದ್ದವರೆಲ್ಲರೂ ಸೇರಿ ಮನೆಯಲ್ಲಿ ಜಾತ್ರೆಯಾಗಿತ್ತಂತೆ. ಕೆಲವೊಮ್ಮೆ ದೂರದೂರಿನಿಂದ ಬಂದ ಅತಿಥಿಗಳು ಒಂದು ದಿನ ಇದ್ದು ಹೋಗುತ್ತಿದ್ದರಂತೆ. ‘‘ಔದ್ರಮ ಬ್ಯಾರಿ ಅಂಗಿ ಪೊಲ್ಲಾದೆರಿಗೆ’’ (ಔದ್ರಮ ಬ್ಯಾರಿ ಅಂಗಿ ಹೊಲಿಸಿದ್ದಾರಂತೆ) ಎಂದು ಜನರು ಮಾತನಾಡಿಕೊಂಡದ್ದು ಕಾಡ್ಗಿಚ್ಚಿನಂತೆ ಹರಡಿ ಅದನ್ನು ನೋಡಲು ಬರುತ್ತಿದ್ದವರ ಸಂಖ್ಯೆ ಮತ್ತಷ್ಟು ಹೆಚ್ಚಿದಾಗ ಕೆಲಸಕ್ಕೆ ಹೋಗದೆ ಅಂಗಿ ಪ್ರದರ್ಶನಕ್ಕೆ ಇಡಬೇಕಾದ ಅನಿವಾರ್ಯತೆ ಉಂಟಾಗುತ್ತದೆ ಎಂದರೆ ಈ ಕಾಲಕ್ಕೂ ಅದು ಅಚ್ಚರಿಯ, ಅಚ್ಚಳಿಯದ ಸೋಜಿಗದ ಸಂಗತಿಯಾಗುತ್ತದೆ.ಸ್ವಲ್ಪವೂ ಬಣ್ಣ ಮಾಸದೆ ಕಪಾಟಿನಲ್ಲಿ ಉಳಿದು ಬಿಟ್ಟ, ಒಂದೇ ಒಂದು ಗುಂಡಿ ಕಳಚಿಕೊಂಡು ಮೂಲೆಗುಂಪಾಗಿರುವ ನಮ್ಮ ಹತ್ತಾರು ಜೋಡಿ ಉಡುಪುಗಳು ನೆನಪಾಗಿ ಮನಸ್ಸಿನಲ್ಲಿ ಸಣ್ಣ ಪಶ್ಚಾತ್ತಾಪ ಮಿಂಚಿ ಮರೆಯಾದರೆ ಈ ಸೋಜಿಗಕ್ಕೊಂದು ಒಳ್ಳೆಯ ಅರ್ಥ ಬರುತ್ತದೆ.ಉಳಿದವರಂತೆ ಬದುಕುವ ಹಠಕ್ಕೆ ಬಿದ್ದು ದುಂದುವೆಚ್ಚ ಮಾಡುವ ಈ ತಲೆಮಾರಿನ ಮನದಾಳದಲ್ಲಿ ಸರಳತೆಯ ಸಣ್ಣ ಬೀಜವೊಂದು ಕುಡಿಯೊಡೆಯಬೇಕೆಂಬ ಹಂಬಲವನ್ನು ಅಜ್ಜ ಮುಂದಿಡುತ್ತಾ ಬದುಕಿನ ಬೇರೊಂದು ಪುಟವನ್ನು ತೆರೆದಿಡುತ್ತಾರೆ.

ಪುಟ್ಟ ಸೌಟಿನಲ್ಲಿರುವ ಹಿಟ್ಟಿನ ಒಂದು ಹನಿಯೂ ಕಾವಲಿಯ ಸೀಮೆಯನ್ನು ದಾಟಿ ಚೆಲ್ಲಿಹೋಗದಂತೆ ಟ್ರಾನ್ಸ್ ಫ್ರಂಟ್ ದೋಸೆ ಸುಡುತ್ತಿದ್ದ ಅಜ್ಜ ನಮ್ಮ ಕಣ್ಣಿಗೆ ಮಹಾ ಶ್ರದ್ಧೆಯಿಂದ ಕುಂಚಹಿಡಿದ ಚಿತ್ರಕಾರ, ಆ ದೋಸೆ ಕೊಂಚವೂ ಕದಡದ ಚಂದದ ಚಿತ್ತಾರ. ಅಜ್ಜನ ಈ ಕೈಚಳಕ ಅವನು ನಡೆಸುತ್ತಿದ್ದ ಹೋಟೆಲಿನ ಬಳುವಳಿ ಎಂದು ಇತ್ತೀಚೆಗಷ್ಟೇ ಅರಿವಿಗೆ ಬಂದಿತ್ತು. ನಾವು ಮೊಳಕೆಯೊಡೆಯುವ ವರುಷಗಳ ಹಿಂದೆ ಅಜ್ಜ ಹೋಟೆಲ್ ನಡೆಸುತ್ತಿದ್ದನೆಂದು ತಿಳಿದದ್ದೇ ಕುಬೇರ ವಂಶದಲ್ಲಿ ಜನಿಸಿದ ಪ್ರಭೇದಗಳೆಂಬ ನಿರರ್ಥಕ ಅಹಂ ವಿಪರೀತ ಎನ್ನುವಷ್ಟು ಆವಾಹಿಸಿ ನಾಚಿಕೆ ಹುಟ್ಟಿಸಿತು. ಕೈಚೆಲ್ಲಿ ಹೋದ ಸಿರಿವಂತಿಕೆಗೆ ಅಜ್ಜ ಎಂದಿಗೂ ಆಸೆ ಪಟ್ಟವನಲ್ಲ. ಆದರೂ ಅಜ್ಜ ಮಾತ್ರ ಊರವರ ಪಾಲಿಗೆ ಈಗಲೂ ಶ್ರೀಮಂತ ಹೃದಯದವನೇ.ಊರಿನ ಬಹುಪಾಲು ಜನರು ಅಜ್ಜ ಮಾಡಿಟ್ಟ ಬೆಂದು ಹೋದ ಆ ಚಾ ಹುಡಿಗಾಗಿ ಸಂಜೆಯ ಹೊತ್ತಿಗೆ ಬಂದು ಸೇರುತ್ತಿದ್ದರಂತೆ. ಅವರ ಮನೆಯಲ್ಲಿ ಅದು ಮತ್ತೆ ಬಣ್ಣ ಬಿಟ್ಟು ಮಗದೊಂದು ಚಹಾ ಆಗುತ್ತಿದ್ದರೆ ಕೊಟ್ಟವನ ಹೊಟ್ಟೆ ತಣ್ಣಗಾಗಿ ಇರುವುದಿಲ್ಲವೇ! ದಿನದ ಸಾಲ ಬರೆದಿಡುವ ಹಳೆಯ ರಟ್ಟಿನ ತುಂಡು ಆ ದಿನ ಸೂರ್ಯ ಮುಳುಗುವುದರೊಂದಿಗೆ ಆಯಸ್ಸು ಕಳೆದುಕೊಂಡು ಬೂದಿಯಾಗುತ್ತಿತ್ತು. ತುಂಬಾ ಭಾವುಕ ಜೀವಿಗಳಿಗೆ ಈ ವ್ಯಾಪಾರ ವಹಿವಾಟು ಹೇಳಿ ಮಾಡಿಸಿದ್ದಲ್ಲ ಎನ್ನುವುದು ಅಜ್ಜನ ವಾದ. ಹಸಿವಿಗೆ ಬಡವನ ಮೇಲೆ ಹೆಚ್ಚೇ ಕಕ್ಕುಲತೆಯಂತೆ ಎಂದರೆ ತಲೆಯಾಡಿಸಿ ನಾವು ಬೆರಗಾಗಿ ಹೋಗಬೇಕು. ಅಜ್ಜ ತಾಂಬೂಲ ಮೆಲ್ಲುತ್ತಾ ಕಥೆ ಮುಂದುವರಿಸುತ್ತಾರೆ.

ಮುತ್ತಾತರ ಅಂಗಿಯ ಕಥೆ ಒಂದು ಪುಟ್ಟ ಕಾದಂಬರಿ ಆಗಬಲ್ಲದಾದರೆ ಅಜ್ಜನದು ಕವಿತೆಯಂತಹಾ ಬದುಕು. ಒಂದು ನೋಟಕ್ಕೋ, ನೋಟ ಒಂದಕ್ಕೊ ದಕ್ಕದ ಶುದ್ಧ ಅಪ್ಯಾಯಮಾನವಾದ ಯಾವ ಹರಿವಿಗೂ ಹೊಂದಿಕೊಂಡ ದೊಡ್ಡ ಜೀವದ ಶ್ರೇಷ್ಠ ಮತ್ತು ಶ್ರೀಮಂತ ಬಾಳು. ತನ್ನ ಸಂಗಾತಿಯಾದವಳು ಸಿಂಹಪಾಲು ಬದುಕು ಹಾಸಿಗೆಯಲ್ಲಿ ಮಗ್ಗುಲು ಬದಲಿಸುತ್ತಾ ಮುಗಿಸಿಹೋದಾಗ ಗಟ್ಟಿಯಾಗಿ ನಿಂತು ಪ್ರೀತಿಯ ಬೀಳ್ಕೊಡುಗೆ ಕೊಟ್ಟವನು. ಮದುವೆಯೆಂಬುದು ಗಂಡಸಿನ ಚಾಕರಿಗಾಗಿ ಮಾತ್ರವಿರುವ ಸಮಾಜ ನೀಡುವ ಅಪ್ಪಣೆ ಪತ್ರವೆಂದು ಸ್ವತಃ ಹೆಣ್ಣು ಕುಲವೇ ಒಪ್ಪಿಕೊಂಡೋ, ಒಗ್ಗಿಕೊಂಡೋ ಇರುತ್ತಿದ್ದ ಕಾಲವದು. ಅಜ್ಜಿಯ ಸೀರೆ ಒಗೆಯುವುದು.ವಾರಕ್ಕೊಮ್ಮೆ ಉಗುರು ಕತ್ತರಿಸುವುದು,ಆಗಾಗ್ಗೆ ಹಾಸಿಗೆ ಓರಣವಾಗಿ ಹಾಕಿಕೊಡುವುದು. ಬೇರೆಯೇ ಸಣ್ಣ ಗಡಿಗೆಯಲ್ಲಿ ಹದವಾಗಿ ಅನ್ನ ಬೇಯಿಸಿ ಕೊಡುವುದು. ದಿನವಿಡೀ ಮಲಗಿಯೇ ಇರುತ್ತಿದ್ದ ಅಜ್ಜಿಯನ್ನು ಕಂಡರೆ ಗದರಿಸಿ ಮರದ ಜೋಲಿ ಕುರ್ಚಿಯನ್ನು ಮೊಗಸಾಲೆಯ ಮೂಲೆಯಲ್ಲಿ ಹಾಕಿ ಅವನೂ ಅಲ್ಲೇ ಕೆಳಗೆ ಕುಳಿತುಕೊಂಡು ಹಲ್ಲಿಲ್ಲದ ಅಜ್ಜಿಗೆ ಅಡಿಕೆ ಕುಟ್ಟಿ ಕೊಡುತ್ತಿದ್ದರೆ ಈ ಜಗತ್ತಿನ ಶ್ರೇಷ್ಠ ಪ್ರಣಯ ಸಲ್ಲಾಪವಾಗಿ ಅದು ದಾಖಲಾಗಿ ಬಿಡುತ್ತಿದ್ದವು. ಅಜ್ಜ ತುಂಬಾ ಜಾಗ್ರತೆಯ ಮನುಷ್ಯ, ತನ್ನ ಬಳಿಯಿರುವ ಸಣ್ಣ ಗುಂಡು ಸೂಜಿಯೂ ಅವನ ಕಣ್ಣು ತಪ್ಪಿಸಿ ಎಲ್ಲಿಯೂ ಹೋಗಲಿಕ್ಕಿಲ್ಲ. ಬೀಪಿ ಟೆಸ್ಟಿಗೆಂದು ಹೋದಾಗ ಆಸ್ಪತ್ರೆಯ ಕಾರಿಡಾರಿನಲ್ಲಿ ಸುಮ್ಮನೆ ತಿರುಗುವ ಫ್ಯಾನು ಕಂಡು ತಲೆಕೆಡಿಸಿಕೊಳ್ಳುತ್ತಿದ್ದ. ಎಪ್ಪತ್ತರ ವಯಸ್ಸಿನ ಅಜ್ಜ ಈಗಲೂ ತನ್ನ ಒಂದು ತುಂಡು ಬಟ್ಟೆಯನ್ನು ಯಾರೊಂದಿಗೂ ಒಗೆಯಲು ಕೊಡದೆ ಇಪ್ಪತ್ತರ ಯುವಕರಿಗೆ ಮುಜುಗರ ಹುಟ್ಟಿಸಿಬಿಡುತ್ತಾನೆ. ಹನ್ನೆರಡು ಮಳೆಗಾಲವನ್ನು ಒಂದೇ ಕಪ್ಪು ಬಣ್ಣದ ಕೊಡೆ ಹಿಡಿದು ದಾಟಿ ಬಂದ ಅಜ್ಜ ಬಾಲ್ಯದಲ್ಲಿ ನಮಗೆ ತಾತ್ಸಾರ ಹುಟ್ಟಿಸಿ ಬಿಡುತ್ತಿದ್ದ ಜಿಪುಣನಂತೆ ಕಾಣುತ್ತಿದ್ದ. ಮೊನ್ನೆ ಬಕ್ರೀದ್ ಹಬ್ಬದ ದಿನ ಇಸ್ತ್ರಿ ಹಾಕಲು ಎರಡು ಅಂಗಿಯನ್ನು ಕೊಟ್ಟು ಅಲ್ಲೇ ಹತ್ತಿರವೇ ನಿಂತು ಮೆಲ್ಲಗೆ ಸ್ವಲ್ಪವೇ ಬಿಸಿಮಾಡಿ ಅದರ ಮಡಚುಗಳು ಹೋದರೆ ಸಾಕೆಂದು ಸಲಹೆಯನ್ನು ನೀಡುತ್ತಾ ನಿಂತಿದ್ದ. ಅದರಲ್ಲಿ ಒಂದು ಅಂಗಿ ಚಿಕ್ಕಪ್ಪ ದುಬೈನಿಂದ ಕಳಿಸಿ ಕೊಟ್ಟ ಪೀಸಿನಿಂದ ಹೊಲಿಗೆ ಹಾಕಿಸಿದ್ದಂತೆ. ಅಂದರೆ ಸುಮಾರು ಹದಿಮೂರು ವರ್ಷಗಳ ಹಿಂದಿನ ಪುರಾತನ ವಸ್ತು. ಅವನ ಹಳೆಯ ಸೂಟ್ ಕೇಸು ಎಂದರೆ ಸಣ್ಣದಾದ ಒಂದು ಮೊಹಂಜದಾರೋ ನಗರವಿದ್ದಂತೆ. ಒಂದು ವಸ್ತುವನ್ನು ಇಷ್ಟೊಂದು ಜೋಪಾನವಾಗಿ ಇಡಲು ಹೇಗೆ ಸಾಧ್ಯವೆಂದು ಕೇಳಿದರೆ ಈ ಜಗತ್ತಿನಲ್ಲಿ ಒಂದನ್ನು ಹೆಚ್ಚು ಜೋಪಾನವಾಗಿ, ಜಾಗ್ರತೆಯಿಂದ ನೋಡಿಕೊಳ್ಳಲು ಇರುವ ಅತ್ಯಂತ ಸುಲಭ ಮತ್ತು ಶ್ರೇಷ್ಠವಾದ ದಾರಿ ಅದನ್ನು ಪ್ರೀತಿಸುವುದು ಎಂದುಬಿಡುತ್ತಿದ್ದ ಅಜ್ಜ ಅವನದೇ ಸಿದ್ಧಾಂತ ರೂಪಿಸಿಕೊಂಡು ಹಾಗೆಯೇ ನಂಬಿಕೊಂಡು ಅದರಂತೆ ಬದುಕಿದವ.

ಈಗಲೂ ‘ಹಳ್ಳಿ’ ಎಂದು ಕರೆದರೆ ಸಿಡಿಮಿಡಿಗೊಳ್ಳದೆ ಮಾತನಾಡಿಸುವ ಊರು ಮಲೆಬೆಟ್ಟಿನಿಂದ ಮೊಮ್ಮಕ್ಕಳ ಶಿಕ್ಷಣದ ಅನಿವಾರ್ಯತೆ ಅವನನ್ನು ಮಂಗಳೂರಿಗೆ ಒಗ್ಗಿಕೊಳ್ಳುವಂತೆ ಮಾಡಿದೆ. ಇಲ್ಲೊಂದು ಹಲಸಿನ ಮಿಡಿ ಹೆಚ್ಚು ಬಿಟ್ಟರೆ ಅವನಿಗದರ ವರ್ತಮಾನ ತಲುಪಿರುತ್ತದೆ. ಆ ದಾರಿಯಾಗಿ ಹೋಗುವಾಗ ಲೆಲ್ಲವೂ ನಮ್ಮ ಬಾಲ್ಯದ ಕುರುಹುಗಳು ಕಾಲಿಗೆ ಸುತ್ತಿಕೊಳ್ಳುತ್ತದೆ. ಮನೆಯ ಮುಂದೆ ಹಾಕಲಾಗಿದ್ದ ‘ಹಲೀಮಾ ಮಂಝಿಲ್’ ಎಂಬ ಬೋರ್ಡು ಒಂದು ಮೊಳೆ ಕಳಚಿಕೊಂಡು ಒಂದೇ ಕೈಯಲ್ಲಿ ನೇತಾಡುತ್ತ ಸರ್ಕಸ್ ಮಾಡುತ್ತಿರುತ್ತದೆ. ಬಾಡಿಗೆಯವರ ಮಗುವೊಂದು ಕ್ರೇನ್ಸ್ ಹಿಡಿದು ಗೋಡೆಯಲ್ಲೆಲ್ಲಾ ಚಿತ್ತಾರ ಬಿಡಿಸುತ್ತಿದ್ದರೆ ನೋಡುವ ನಮ್ಮ ಹೊಟ್ಟೆಯಲ್ಲಿ ಸಂಕಟವಾಗುತ್ತದೆ. ಅಜ್ಜ ಮಲೆಬೆಟ್ಟಿನ ಮನೆಯಲ್ಲೇ ಅರ್ಧ ಜೀವವನ್ನು ಉಳಿಸಿ ಅದು ಹೇಗೆ ನಗುತ್ತಾನೆಂದು ಅರ್ಥವಾಗುವುದೇ ಇಲ್ಲ. ಆ ಮನೆ,ಅದರ ಸುತ್ತಲೂ ಇರುವ ಅವನು ಮುದ್ದಿಸಿ ಬೆಳೆಸಿದ ತೆಂಗು, ಕಂಗು, ಮಾವು, ಹಲಸು, ಎಲ್ಲವೂ ಅಜ್ಜನಿಗಾಗಿ ಕಾದು ಕುಳಿತಿರುವಾಗ ಅವನು ಅಲ್ಲಿಲ್ಲ.

ಅವನ ಆಪ್ತ ಗೆಳೆಯರು ತಿಂಗಳಿಗೊಮ್ಮೆ ಜಯರಾಜರ ನ್ಯಾಯಬೆಲೆ ಅಂಗಡಿಗೆ ರೇಶನಿಗೆಂದು ಬಂದರೆ ಮತ್ತೆ ಹೇಳುವುದೇ ಬೇಡ.ಮರಳುವಾಗ ಮನೆಯ ಗೇಟಿನ ಬಳಿಗೆ ಹೋಗಿ ಹರಟಲು ತೊಡಗಿದರೆ ತಲೆಯಿಂದ ಅಕ್ಕಿ ಮೂಟೆಯನ್ನು ಇಳಿಸಿ ಕೈಯಲ್ಲಿ ಸೀಮೆಎಣ್ಣೆಯ ಡಬ್ಬವನ್ನು ಹಿಡಿದುಕೊಂಡೇ ಒಂದಿಡೀ ವರುಷಕ್ಕಾ ಗುವಷ್ಟು ಮಾತನಾಡುತ್ತಾರೆ. ಗೆಳೆಯರ ಕುರಿತು ಮಾತೆತ್ತಿದರೆ ಕಾಶಿಗೆ ಹರಕೆ ಕೊಂಡೊಯ್ದು ಅಲ್ಲೇ ಕಾಣೆಯಾಗಿ ಹಿಂದಿರುಗದ ಗಾಂಜಾಲ್ ಬಾಬುವಿಗೆ ಏನಾಗಿದೆಯೋ ಎಂದು ತಲೆಕೆಡಿಸಿಕೊಂಡು ಕುಳಿತರೆ ಬಳಿಕ ಅವನು ಮತ್ತೆರಡು ತಾಸು ಚಡಪಡಿಸುತ್ತಿರುತ್ತಾನೆ.ಹಾಗೊಂದು ವೇಳೆ ಬದುಕಿನುದ್ದಕ್ಕೂ ಕಳೆದುಕೊಂಡವರು ನೆನಪಾದರೆ ಅವನ ತಾಂಬೂಲದ ಡಬ್ಬದಲ್ಲಿರುವ ಹೊಗೆ ಸೊಪ್ಪಿನ ಪ್ರಮಾಣದಲ್ಲಿ ತಕ್ಷಣದ ಏರುಪೇರು ಕಾಣತೊಡಗುತ್ತದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top