ಝೀನಾ ಉಳಿಸಿಹೋದ ಪರಂಪರೆ | Vartha Bharati- ವಾರ್ತಾ ಭಾರತಿ
ಶ್ರೀಲಂಕಾ ಸ್ಫೋಟಕ್ಕೆ ಬಲಿಯಾದ ಮಂಗಳೂರಿನ ಸೊಸೆ ರಝೀನಾ ಖಾದರ್ ಗೆ ಅಳಿಯನ ನಮನ

ಝೀನಾ ಉಳಿಸಿಹೋದ ಪರಂಪರೆ

ಮೊಮ್ಮಗಳ ಜೊತೆ ರಝೀನಾ

ಝೀನಾ ಎಂದು ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ರಝೀನಾ ಖಾದರ್, ಶ್ರೀಲಂಕಾದ ಪುತ್ರಿ, ಮಂಗಳೂರಿನ ಸೊಸೆ. ಕಳೆದ ಎಪ್ರಿಲ್‌ನಲ್ಲಿ ಈಸ್ಟರ್ ಸಂಡೆಯಂದು ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಜೀವ ಕಳೆದುಕೊಂಡರು. ತಮ್ಮ ರಜೆ ಪ್ರವಾಸದ ಕೊನೆಯ ಹಂತದಲ್ಲಿ ಝೀನಾ ಹಾಗೂ ಪತಿ ಅಬ್ದುಲ್ ಖಾದರ್ ಕುಕ್ಕಾಡಿ ಕೊಲಂಬೊದ ಶಾಂಗ್ರಿ-ಲಾ ಹೋಟೆಲ್‌ನಲ್ಲಿ ತಂಗಿದ್ದರು. ಮರುದಿನ ತಮ್ಮ ಉದ್ಯಮ ಸಂಬಂಧಿ ಕೆಲಸಕ್ಕಾಗಿ ಟೋಕಿಯೋಗೆ ಪ್ರಯಾಣ ಬೆಳೆಸಬೇಕಿದ್ದ ಖಾದರ್ ಆ ನತದೃಷ್ಟ ಮುಂಜಾನೆ ಕೊಲಂಬೊದಿಂದ ತಾವು ಈಗ ತಾತ್ಕಾಲಿಕವಾಗಿ ನೆಲೆಸಿರುವ ದುಬೈಗೆ ಪ್ರಯಾಣ ಬೆಳೆಸಿದ್ದರು. ಕುಟುಂಬದ ಜೊತೆ ಕೆಲ ದಿನ ಕಳೆಯುವ ಸಲುವಾಗಿ, ಸ್ವಲ್ಪ ಸಮಯದ ಬಳಿಕ ಝೀನಾ ಮಂಗಳೂರಿಗೆ ಪ್ರಯಾಣ ಬೆಳೆಸಬೇಕಿತ್ತು. ಪತಿಯನ್ನು ವಿಮಾನ ನಿಲ್ದಾಣಕ್ಕೆ ಬೀಳ್ಕೊಟ್ಟು ಅಮೆರಿಕದಲ್ಲಿರುವ ಪುತ್ರನ ಜತೆಗೆ ಫೋನ್ ಸಂಭಾಷಣೆ ಮುಗಿಸಿದ ಅವರು, ಶಾಂಗ್ರಿ-ಲಾ ಹೋಟೆಲ್‌ನ ಉಪಾಹಾರಗೃಹಕ್ಕೆ ಆಗಷ್ಟೇ ಬಂದಿದ್ದರು. ಬೆಳಗ್ಗಿನ 8:50ರ ಸಮಯ. ಆಗ ನಡೆದ ಭೀಕರ ಬಾಂಬ್ ಸ್ಫೋಟ ಝೀನಾ ಸೇರಿದಂತೆ ಹಲವು ಜೀವಗಳನ್ನು ಬಲಿತೆಗೆದುಕೊಂಡಿತು. ದುಬೈ ತಲುಪಿದ ಬಳಿಕವಷ್ಟೇ ಈ ಆಘಾತಕಾರಿ ಸುದ್ದಿ ಖಾದರ್‌ಗೆ ತಿಳಿಯಿತು. ತಕ್ಷಣವೇ ಕೊಲಂಬೊಗೆ ವಾಪಸಾದ ಅವರಿಗೆ ಕೆಲ ಗಂಟೆಗಳ ಹಿಂದಷ್ಟೇ ಜತೆಗಿದ್ದ ಪತ್ನಿ, ಈ ತಿಳಿಗೇಡಿ ಧರ್ಮಾಂಧತೆಗೆ ಬಲಿಯಾದುದನ್ನು ನಂಬಲು ಸಾಧ್ಯವಾಗಲಿಲ್ಲ. ಕೊಲಂಬೊದಲ್ಲಿ ಮರುದಿನ ಝೀನಾ ಅಂತ್ಯಸಂಸ್ಕಾರ ನಡೆಯಿತು. ಮಕ್ಕಳಾದ ಖಾನ್ಫರ್ ಹಾಗೂ ಫರಾಹ್, ಅಳಿಯ ಅನಿರುದ್ಧ್, ಅಂತ್ಯ ಸಂಸ್ಕಾರದ ಮರುದಿನವಷ್ಟೇ ಅಮೆರಿಕದಿಂದ ಕೊಲಂಬೊ ತಲುಪಲು ಸಾಧ್ಯವಾಯಿತು.

ಝೀನಾ ಅವರ ಧಾರ್ಮಿಕ ನಂಬಿಕೆ ಹಾಗೂ ಪ್ರಗತಿಪರ ಜೀವನ ತಮ್ಮನ್ನು ಹೇಗೆ ತಟ್ಟಿತು ಎಂದು ಅವರ ಅಳಿಯ ಅನಿರುದ್ಧ್ ಬರೆದ ಲೇಖನ ಇಲ್ಲಿದೆ:

ಕನ್ನಡಕ್ಕೆ: ಎನ್.ಕೆ.

ಶ್ರೀಲಂಕಾ: ನಾವು ಮತ್ತೆ ಕಳಕೊಂಡ ಸ್ವರ್ಗ

ಶ್ರೀಲಂಕಾದಲ್ಲಿ ಮತ್ತೆ ಉಗ್ರ ದಾಳಿ ನಡೆದು ನಾಲ್ಕು ತಿಂಗಳು ಕಳೆದಿವೆ. ಶ್ರೀಲಂಕಾ ಇನ್ನೂ ಶೋಕ ಹಾಗೂ ಭೀತಿಯಲ್ಲೇ ಇದೆ. ಈಸ್ಟರ್ ಸಂಡೇಯಂದು ಅಂದರೆ 2019ರ ಎಪ್ರಿಲ್ 21ರಂದು ಅಲ್ಲಿ ನೂರಾರು ಜನರು ಬಲಿಯಾದರು: ಪ್ರಾರ್ಥನೆಯ ಸ್ಥಳದಲ್ಲಿ ಸಮಾವೇಶಗೊಂಡಿದ್ದ ಮತ್ತು ಶಾಂತಿಯುತ ವಿಹಾರಕ್ಕೆ ಆಗಮಿಸಿದ್ದ ಅಮಾಯಕರು ಜೀವ ಕಳಕೊಂಡರು. ಮುಕ್ತಿ ಹಾಗೂ ನಿರೀಕ್ಷೆಯ ದಿನವಾಗಿ ಆಚರಿಸಲ್ಪಡುವ ಆ ವಿಶೇಷ ದಿನವೇ ಇಂತಹದೊಂದು ಬರ್ಬರ ದಾಳಿಗೆ ಹಲವು ಬದುಕುಗಳು ಅರ್ಧಕ್ಕೇ ಮೊಟಕುಗೊಂಡವು.

ಘಟನೆ ಬಳಿಕ, ಸ್ವರ್ಗದಂತಿರುವ ಈ ದ್ವೀಪವನ್ನು ಧಾರ್ಮಿಕ ಅರಾಜಕತೆ ಆವರಿಸಿತ್ತು. ವಿಶ್ವ ಇಂದಿಗೂ ಅಲ್ಲಿ ಶಾಂತಿಯುತ ಭವಿಷ್ಯದ ಹೊಸ ನಿರೀಕ್ಷೆಯ ಹುಡುಕಾಟದಲ್ಲಿದೆ. ಈ ಕಹಿ ಘಟನೆ ಯ ನಡುವೆಯೇ, ಆ ದಿನದಂದು ಬಲಿಯಾದ ಶ್ರೀಲಂಕಾ ಸಂಜಾತೆ, ಪ್ರೀತಿ ಪಾತ್ರ ಭಾರತೀಯ ತಾಯಿಯ ಕತೆ ನಮಗೆ ಮುಂದಿನ ದಾರಿ ತೋರಿಸಬಹುದು. ಅವರ ಬದುಕು ವಿಶಾಲ ಧಾರ್ಮಿಕತೆ ಹಾಗೂ ಸಮೃದ್ಧವಾದ ಪ್ರಗತಿಪರ ಬಾಳ್ವೆಯ ಸಮನ್ವಯತೆಯ ನಿದರ್ಶನ. ಇಂದು ಕಂಡುಬರುವ ಕೋಮು ಹಾಗೂ ಪ್ರತ್ಯೇಕತಾ ಪ್ರವೃತ್ತಿಯ ನಡುವೆ ಇಂಥ ಅಪೂರ್ವ ಸಂಗಮ ಅತ್ಯಂತ ಅಪರೂಪ ಹಾಗೂ ಅತ್ಯಮೂಲ್ಯ.

►ರಝೀನಾ ಅವರ ಕಥೆ

ರಝೀನಾ ಖಾದರ್, ಶ್ರೀಲಂಕಾದ ಉದ್ಯಮಿಯೊಬ್ಬರ ಪುತ್ರಿ. ಮೂಲತಃ ಕೇರಳದವರಾದ ಇವರು, ಎಲ್‌ಟಿಟಿಇ ಸಶಸ್ತ್ರ ಬಂಡುಕೋರರ ಪ್ರಬಲ ನೆಲೆಯಾದ ಲಂಕಾದ ವವ್ಯನಿಯಾ ಎಂಬ ಪಟ್ಟಣದಲ್ಲಿ ಬಾಲ್ಯ ಕಳೆದರು. ಮಂಗಳೂರಿನ ವಿಶಾಲ ಬ್ಯಾರಿ ಮುಸ್ಲಿಂ ಕುಟುಂಬಕ್ಕೆ 19ನೇ ವಯಸ್ಸಿನಲ್ಲೇ ವಿವಾಹವಾಗಿ ಬಂದ ಝೀನಾಗೆ ಈ ಮೂಲಕ ತಮ್ಮ ಮೂಲದ ನಂಟಿಗೆ ಸಾಮೀಪ್ಯ ಸಿಕ್ಕಿತು. ಪತಿಯ ಕುಟುಂಬಕ್ಕೆ ಬಂದೊಡನೆ ಅವರ 10 ಮಂದಿ ಸಹೋದರರಿಗೆ ಆಕೆ ಮಾರ್ಗದರ್ಶಿಯಾದರು. ಹಾಗೆಯೇ ಪಕ್ಕದ ಕೇರಳದ ಕಾಸರಗೋಡಿನಲ್ಲಿರುವ ತಮ್ಮ ಹಲವು ಮಂದಿ ಸಂಬಂಧಿಕರ ಜತೆ ನಿಕಟ ಬಾಂಧವ್ಯ ಬೆಸೆದುಕೊಂಡರು. ಮಂಗಳೂರು, ಕೇರಳ ಮತ್ತು ಶ್ರೀಲಂಕಾ ನಡುವಿನ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ವ್ಯತ್ಯಾಸಗಳ ಸವಾಲುಗಳನ್ನು ಅತ್ಯಂತ ಸುಲಲಿತವಾಗಿ ನಿಭಾಯಿಸಿಕೊಂಡ ರಝೀನಾ ಈ ಎಲ್ಲ ಸ್ಥಳಗಳಲ್ಲಿರುವ ಕುಟುಂಬಿಕರ ನಡುವಿನ ಸಹಜ ಕೊಂಡಿಯಾಗಿಬಿಟ್ಟರು.

ರಝೀನಾ ವ್ಯಕ್ತಿತ್ವ

ರಝೀನಾ ಧರ್ಮನಿಷ್ಠ ಮುಸ್ಲಿಮ್ ಆಗಿದ್ದರು. ಅವರ ಕುಟುಂಬದ ಹಲವು ಸದಸ್ಯರು, ಮಕ್ಕಳು ಕ್ರಮೇಣ ಪಾಶ್ಚಿಮಾತ್ಯ ಪ್ರಗತಿಪರ ಆಲೋಚನೆಗಳಿಗೆ ತೆರೆದುಕೊಂಡರು. ಆದರೆ ತಮ್ಮ ವಿಶಾಲ ಕುಟುಂಬವು ಇಸ್ಲಾಮಿನ ಬೋಧನೆಯನ್ನು ಅರ್ಥ ಮಾಡಿಕೊಂಡು, ಅನುಸರಿಸಿಕೊಂಡು ಸಂರಕ್ಷಿಸಿಕೊಂಡು ಮುಂದುವರಿಯುವಂತೆ ಅವರು ನೋಡಿಕೊಂಡಿದ್ದರು. ಧರ್ಮನಿಷ್ಠೆ ತನ್ನತನದ ಕೇಂದ್ರಬಿಂದು; ಸುತ್ತಮುತ್ತಲಿನ ಜನರ ಜತೆಗಿನ ಸಾಮರಸ್ಯಕ್ಕೆ, ಜೀವನದಲ್ಲಿ ಎದುರಾಗುವ ಸವಾಲುಗಳಿಗೆ ಇದು ಉತ್ತರ ಎಂದು ಬಲವಾಗಿ ನಂಬಿದ್ದರು. ಇತರರ ನಂಬಿಕೆಗಳ ಬಗ್ಗೆ ಅಪಾರ ಗೌರವ ಹೊಂದಿದ್ದ ರಝೀನಾ, ಜೀವನದಲ್ಲಿ ಧರ್ಮದ ಬಗೆಗಿನ ಯೋಚನೆಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿದ್ದರು. ಇಸ್ಲಾಮೋ ಫೋಬಿಯಾ ಎದುರಾದಾಗ ಅದನ್ನು ಜಾಣ್ಮೆಯಿಂದ ಶಮನಗೊಳಿಸುತ್ತಿದ್ದರು. ಧರ್ಮ ಮತ್ತು ಇಸ್ಲಾಂನ ಧನಾತ್ಮಕ ಶಕ್ತಿ, ಪರಸ್ಪರ ಸಂತಸ ಹರಡುವುದು, ಪ್ರೀತಿ ಮತ್ತು ಶಾಂತಿಯುತ ಸಹಬಾಳ್ವೆ - ಇವುಗಳ ಬಗ್ಗೆ ಆಕೆಗೆ ಅಪಾರ ಆಸಕ್ತಿ ಇತ್ತು. ಇದೇ ವೇಳೆ ಸಾಂಪ್ರದಾಯಿಕವಾಗಿ ಪ್ರಗತಿಪರ ಜೀವನದ ಬಗ್ಗೆಯೂ ರಝೀನಾಗೆ ತುಂಬಾ ಒಲವಿತ್ತು. ಜಾಗತಿಕ ಶಾಸ್ತ್ರೀಯ ಸಂಗೀತದಿಂದ ಆಧುನಿಕ ಯುಗದ ಪಾಪ್‌ವರೆಗೆ ಅವರ ಸಂಗೀತದ ಅಭಿರುಚಿ ಅದ್ಭುತ ಮಟ್ಟದ್ದಾಗಿತ್ತು. ಆಕೆ ತನಗೆ ಬ್ರಿಟ್ನಿ ಸ್ಪಿಯರ್ಸ್ ಹಾಗೂ ಸ್ಪೈಸ್‌ಗರ್ಲ್ಸ್ ಅನ್ನು ಪರಿಚಯ ಮಾಡಿಕೊಟ್ಟಿದ್ದನ್ನು ಆಕೆಯ ಮಗಳು ಸದಾ ನೆನಪಿಸಿಕೊಳ್ಳುತ್ತಾರೆ. ಪಿಯಾನೊ ನುಡಿಸುವಷ್ಟೇ ಆಸಕ್ತಿಯಿಂದ ಶಾಪಿಂಗ್ ಕೂಡ ಮಾಡುತ್ತಿದ್ದರು. ಅಪರಿಚಿತ ವಿದೇಶಿ ಸ್ಥಳಗಳಲ್ಲಿ ಕೂಡ ವಿಶಿಷ್ಟ ಸಂಗ್ರಹಾರ್ಹ ವಸ್ತುಗಳನ್ನು ಖರೀದಿಸುವ ಅವಕಾಶಗಳನ್ನು ಆಕೆ ಎಂದೂ ಕಳೆದು ಕೊಂಡದ್ದಿಲ್ಲ. ವಿಶ್ವದ ಎಲ್ಲೆಡೆಯಿಂದ ಅವರು ಜಾಗರೂಕವಾಗಿ ಆಯ್ದು ಸಂಗ್ರಹಿಸಿದ ಕಿರು ಆಭರಣಗಳನ್ನು ಹಲವು ಕುಟುಂಬಿಕರ ಮನೆಗಳಲ್ಲಿ ಇಟ್ಟಿದ್ದು, ಇವುಗಳಲ್ಲಿ ಪ್ರತಿಯೊಂದರ ಹಿಂದೆ ಒಂದೊಂದು ವಿಶಿಷ್ಟ ಕಥೆಯಿದೆ. ಅಡುಗೆ ಮತ್ತು ತಿನಿಸುಗಳ ತಯಾರಿಯಲ್ಲೂ ವಿಶೇಷ ಕೌಶಲ ಹೊಂದಿದ್ದ ಝೀನಾ ಸದಾ ಹೊಸ ರುಚಿಗಳನ್ನು ಪ್ರಯೋಗಿಸುತ್ತಿದ್ದರು. ವಿಶಿಷ್ಟ ಬೀದಿಬದಿ ತಿನಿಸುಗಳನ್ನು ಆಸ್ವಾದಿಸುತ್ತಿದ್ದಷ್ಟೇ ಸಹಜವಾಗಿ ಅವರಿಗೆ ಜಾಗತಿಕ ವಿಲಾಸಿ ಹೋಟೆಲ್‌ಗಳ ಊಟ, ತಿಂಡಿ, ಶಿಷ್ಟಾಚಾರಗಳ ಪರಿಚಯವಿತ್ತು. ಸಂಗೀತ ಕಛೇರಿ, ಸಿನೆಮಾ ಹಾಗೂ ರಂಗಭೂಮಿಗಳ ಬಗ್ಗೆ ಸದಾ ಕುತೂಹಲಿ. ಇವೆಲ್ಲಕ್ಕೆ ಕಳಶಪ್ರಾಯವಾಗಿ ಜೀವನದ ಸಂತಸದ ಘಟನೆಗಳನ್ನು ಮಕ್ಕಳಂತೆ ಪ್ರೀತಿಯಿಂದ ಆಸ್ವಾದಿಸುತ್ತಿದ್ದ ಅವರ ಹಾಸ್ಯಪ್ರಜ್ಞೆ ಕೂಡಾ ಅನನ್ಯವಾಗಿತ್ತು.

►ವಿಶಾಲ ವ್ಯಾಪ್ತಿ

ಸಾಮಾಜಿಕ ಹಾಗೂ ಧಾರ್ಮಿಕ ಒತ್ತಡಗಳ ವಿರುದ್ಧ ರಝೀನಾ ಸದಾ ಮಹಿಳೆಯ ಪರವಾಗಿ ನಿಂತು, ಅವರ ಸಬಲೀಕರಣಕ್ಕೆ ಹಾಗೂ ಸಾಮಾಜಿಕ ರಕ್ಷಣೆಗೆ ಮಹತ್ವದ ಕೊಡುಗೆ ನೀಡಿದ್ದರು. ಇದರ ಹರವು ಎಷ್ಟು ವ್ಯಾಪಕವಾಗಿತ್ತು ಎಂದರೆ, ಕೆಲವು ದೇಶಗಳಲ್ಲಿ ಧಾರ್ಮಿಕ ಕಾನೂನಿನ ಹೆಸರಿನಲ್ಲಿ ನಡೆಯುತ್ತಿದ್ದ ದಬ್ಬಾಳಿಕೆ ಹಾಗೂ ಕಿರುಕುಳವನ್ನು ಎದುರಿಸಲು ಕೂಡಾ ಆಕೆ ಪರಿಚಯಸ್ಥರಿಗೆ ಸಹಾಯಹಸ್ತ ಚಾಚಿದ್ದರು.

ರಝೀನಾ ಉತ್ತರ ಆಫ್ರಿಕಾ ಹಾಗೂ ಮಧ್ಯಪ್ರಾಚ್ಯದಲ್ಲಿ ವಾಸವಿದ್ದರು; ಅಲ್ಪಕಾಲ ಪ್ಯಾರೀಸ್‌ನಲ್ಲೂ ಇದ್ದರು. ಮಗಳು, ಮಗ ಹಾಗೂ ತನ್ನ ಪ್ರೀತಿಯ ಮೊಮ್ಮಗಳು ವಾಸವಿದ್ದ ಅಮೆರಿಕಕ್ಕೆ ಕೂಡಾ ನಿಯತವಾಗಿ ಭೇಟಿ ನೀಡುತ್ತಿದ್ದರು. ಬಹುತೇಕ ಕುಟುಂಬಕ್ಕೆ ಅಗತ್ಯ ಇದ್ದ ಎಲ್ಲೆಡೆ ಅವರು ತಲುಪುತ್ತಿದ್ದರು. ಆಕೆಯ ನಿಧನದ ಬಳಿಕ ಪ್ರಕಟವಾಗಿರುವ ಆನ್‌ಲೈನ್ ಲೇಖನಗಳ ಮೇಲೆ ಕ್ಷಣಕಾಲ ದೃಷ್ಟಿ ಹರಿಸಿದರೆ, ರಝೀನಾರ ಅಗಲಿಕೆಗೆ ವಿವಿಧ ದೇಶ - ಭಾಷೆ- ಸಂಸ್ಕೃತಿಗಳ ಜನರು ಕಂಬನಿ ಮಿಡಿದಿದ್ದು ಎದ್ದು ಕಾಣುತ್ತದೆ. ಕೆಲ ಪ್ರಕಟಿತ ಲೇಖನಗಳಲ್ಲಿ ಅವರು ದುಬೈನಲ್ಲಿದ್ದ ಭಾರತೀಯ ಮೂಲದ ಮಹಿಳೆಯಾದರೆ; ಮತ್ತೆ ಕೆಲ ಬರಹಗಳಲ್ಲಿ ಮೂಲತಃ ಕೇರಳ ಅಥವಾ ಮಂಗಳೂರಿನವರು. ಆದರೆ ಬಹುತೇಕ ಕಡೆ ಆಕೆ ಶ್ರೀಲಂಕಾ ಪ್ರಜೆ, ಕೊನೆಗೆ ತಾಯ್ನ್ನೆಡಿನಲ್ಲೇ ಮಣ್ಣಿಗೆ ಮರಳಿದರು ಎಂದು ಬರೆಯಲಾಗಿದೆ. ಆಂತರಿಕ ಯುದ್ಧದಿಂದ ಜರ್ಜರಿತವಾಗಿದ್ದ ಅವಧಿಯಲ್ಲಿ ತಮ್ಮ ಜೀವನದ ಬಹುಪಾಲು ವೇಳೆಯನ್ನು ರಝೀನಾ ಶ್ರೀಲಂಕಾದಲ್ಲಿ ಕಳೆದಿದ್ದರು. ಅದು ಬಹುಶಃ ಅವರ ಜೀವನದ ಕರಾಳ ಅಧ್ಯಾಯವಾಗಿತ್ತು. ಎಲ್‌ಟಿಟಿಇ ಉಗ್ರರು ಅವರ ತಂದೆಯನ್ನು ಅಪಹರಿಸಿ, ಶ್ರೀಲಂಕಾ ಕಾಡಿನಲ್ಲಿ ಒತ್ತೆ ಇರಿಸಿಕೊಂಡ ಸಂದರ್ಭದಲ್ಲಿ ಕಾಡಿದ್ದ ಭೀತಿಯನ್ನು ಅವರು ಮರೆತಿರಲಿಲ್ಲ. ಇಷ್ಟಾಗಿಯೂ ಸುಂದರ ತಾಯ್ನಾಡಿಗೆ ಹಲವು ವರ್ಷಗಳ ಬಳಿಕ ಮರಳಿ ಆಹ್ಲಾದದಾಯಕ ವಿಹಾರದ ರೂಪದಲ್ಲಿ ಕೊನೆಯ ದಿನಗಳನ್ನು ಕಳೆದರು. ಶ್ರೀಲಂಕಾ ಬಗ್ಗೆ ವಿಶೇಷ ಒಲವು ಹಾಗೂ ಭಾವನಾತ್ಮಕ ಬಾಂಧವ್ಯ ಅವರಿಗಿತ್ತು. ವಿಹಾರ ತಾಣವಾಗಿ ಅದು ರೂಪುಗೊಂಡ ಬಗ್ಗೆ, ಅದನ್ನು ಅನುಭವಿಸಿದ ಬಗ್ಗೆ ಸದಾ ಹೇಳಿಕೊಳ್ಳುತ್ತಿದ್ದರು. ಶ್ರೀಲಂಕಾದಲ್ಲಿ ವಿರಾಮ ವಿಹಾರ ಆಸ್ವಾದಿಸುತ್ತಿದ್ದ ಅವರು ಕೊನೆಯ ದಿನ ಪಿಯಾನೊದಲ್ಲಿ ನುಡಿಸಿದ್ದು, ಶ್ರೀಲಂಕಾದ ರಾಷ್ಟ್ರಗೀತೆಯನ್ನು. ಬಹುಶಃ ಗಾಢಾಗಿ ಆಕೆ ನಂಬಿದ್ದ ಧರ್ಮದ ಹೆಸರಿನಲ್ಲಿ ಆ ಕರಾಳ ದಿನದಂದು ಹಾಗೂ ಆ ಬಳಿಕ ಪ್ರೀತಿಯ ಶ್ರೀಲಂಕಾ ಅನುಭವಿಸಿದ ಭೀತಿಗೆ, ಉಗ್ರರ ಕೃತ್ಯಕ್ಕೆ, ಹತ್ಯೆಗೆ, ದ್ವೇಷಪೂರಿತ ಅರಾಜಕತೆಗೆ ರಝೀನಾ ನಿಜವಾಗಿಯೂ ಬಲಿಯಾದರು. ದ್ವೇಷ, ಅಪನಂಬಿಕೆಯ ಆಳ ಕಂದಕದಿಂದ ವಾಪಸಾದ ಶ್ರೀಲಂಕನ್ನರೂ ಸೇರಿದಂತೆ ಎಲ್ಲರನ್ನೂ ಒಂದೆಡೆ ತಂದ- ನಿಮ್ಮನ್ನು ತಿಳಿದುಕೊಂಡ, ತಿಳಿದುಕೊಳ್ಳುವ ಪ್ರತಿಯೊಬ್ಬರೂ ಪ್ರೀತಿಸುವ, ನಂಬುವ ಮತ್ತು ಒಗ್ಗೂಡಿ ಬಾಳುವ ನಿಮ್ಮ ತತ್ವವನ್ನು ಅಳವಡಿಸಿ ಕೊಳ್ಳುವ, ಅನುಸರಿಸುವ ನಿರೀಕ್ಷೆ ನಮ್ಮದು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top