ಕಸ್ತೂರ್ಬಾ ಹೀಗೊಂದು ಸ್ವಗತ | Vartha Bharati- ವಾರ್ತಾ ಭಾರತಿ

ಕಸ್ತೂರ್ಬಾ ಹೀಗೊಂದು ಸ್ವಗತ

ಡಾ. ಎಚ್.ಎಸ್. ಅನುಪಮಾ

ನಮ್ಮ ತವರುಮನೆಯಲ್ಲಿ ವ್ರತ, ಉಪವಾಸಗಳು ಸ್ವಲ್ಪ ಕಡಿಮೆ. ಅವರು ಹೆಚ್ಚು ಲೌಕಿಕರು. ಹಾಗಾಗಿ ನಮಗೂ ಕಷ್ಟಪಟ್ಟು ಉಪವಾಸ ಹಿಡಿದು, ಹೊಟ್ಟೆ ಕಡೆ ಗಮನ ಹರಿಯದಂತೆ ಇರುವುದು ರೂಢಿಯಿರಲಿಲ್ಲ. ಆದರೆ ನಮ್ಮ ಅತ್ತೆಯವರ ಮನೆ ಹಾಗಲ್ಲ. ಅಲ್ಲಿ ವ್ರತ, ಉಪವಾಸಗಳು ದುಡಿಮೆಯಷ್ಟೇ ಮುಖ್ಯ. ಬಂದ ಕಷ್ಟ ತೀರಲಿ ಅಂತ ನಂತರ ವ್ರತ ಹಿಡಿಯುವುದಲ್ಲ, ಎಲ್ಲ ಸರಿಯಿರುವಾಗಲೂ ನಮ್ಮನ್ನು ನಾವು ಶುದ್ಧವಾಗಿಟ್ಟುಕೊಳ್ಳಲು ಉಪವಾಸ ಮಾಡಬೇಕು ಅನ್ನುತ್ತಿದ್ದರು ನಮ್ಮ ಅತ್ತೆ. ಯಾಕಷ್ಟು ಉಪವಾಸ, ವ್ರತ ಮಾಡಬೇಕು ಎಂಬ ಪ್ರಶ್ನೆಯನ್ನು ಎಲ್ಲರೂ ಅವರಿಗೆ ಕೇಳಿದ್ದಿದೆ. ಅದೇ ಪ್ರಶ್ನೆಯನ್ನು ನಂತರ ಅವರ ಮಗನೂ ಎದುರಿಸಿದ್ದಾರೆ. ಅಮ್ಮ-ಮಗ ಇಬ್ಬರ ಉತ್ತರ ಹೆಚ್ಚುಕಮ್ಮಿ ಒಂದೇ: ‘ನನ್ನ ಅಸ್ತಿತ್ವದ ಒಂದು ಭಾಗ ಉಪವಾಸ. ಕಣ್ಣಿಲ್ಲದೆ ಬದುಕಿರಬಲ್ಲೆ, ಹಾಗೆಯೇ ಉಪವಾಸ ಇಲ್ಲದೆಯೂ. ಆದರೆ ಹೊರಜಗತ್ತಿಗೆ ಕಣ್ಣು ಏತಕ್ಕೆ ಬೇಕೋ, ಒಳಲೋಕಕ್ಕೆ ಉಪವಾಸ ಅದಕ್ಕೇ ಬೇಕು. ಬಾಪು ಬ್ರಹ್ಮಚರ್ಯ ಹಿಡಿದಿದ್ದರಲ್ಲ, ವಿಶೇಷ ಪಥ್ಯಾಹಾರ ಮತ್ತು ಮೇಲಿಂದ ಮೇಲೆ ಉಪವಾಸ ಮಾಡದೆ ಬ್ರಹ್ಮಚರ್ಯವನ್ನು ಸಾಧಿಸುವುದು ಕಷ್ಟ ಎಂದು ಮತ್ತೆಮತ್ತೆ ಉಪವಾಸ ಹಿಡಿಯುತ್ತಿದ್ದರು. ದೇಹವನ್ನು ನಿರಾಕರಿಸಲೂಬಾರದು, ಮುದ್ದು ಮಾಡಲೂಬಾರದು ಎನ್ನುವುದು ಬಾಪು ನಿಲುವು. ಅದಕ್ಕೇ ಆರೋಗ್ಯ, ಆಹಾರದ ಬಗ್ಗೆ ಕಾಳಜಿ ವಹಿಸುತ್ತಲೇ ಉಪವಾಸವನ್ನೂ ಮಾಡುತ್ತಿದ್ದರು. ಉಪವಾಸದ ಹೊತ್ತಲ್ಲಿ ಧ್ಯಾನಮಗ್ನ ಆಗಿಬಿಡೋರು. ತೀವ್ರ ಆತ್ಮಶೋಧನೆ ನಡೆಸುತ್ತಿದ್ದರು. ಯಾವುದೇ ಆಗಲಿ, ಅವರು ತಕ್ಷಣದ ನಿರ್ಧಾರಕ್ಕೆ ಬರ್ತಿರಲಿಲ್ಲ. ಉಪವಾಸದ ಹೊತ್ತಲ್ಲೋ, ಪ್ರಾರ್ಥನೆ-ಬಂಧನ-ಬರವಣಿಗೆ-ಧ್ಯಾನ-ವೌನದ ಹೊತ್ತಲ್ಲೋ ಮೊದಲೇ ಚಿಂತನೆ ನಡೆಸಿ ಬೇಕೆಂದಾಗ ಅವನ್ನು ಹೊರಗೆಳೆದು ಪ್ರಯೋಗಿಸುತ್ತಿದ್ದರು. ಒಳಗೊಂದು ಅಂಥದೇನೋ ನಡೆದಿದೆ ಅಂತ ಸ್ಪಷ್ಟವಾಗಿ ತಿಳೀತಿತ್ತು. ಪ್ರತಿ ಉಪವಾಸದ ಮೊದಲು ಮತ್ತು ಆ ಮೇಲೆ, ಅವರ ಮನಸ್ಥಿತಿಯ ವ್ಯತ್ಯಾಸ ನಿಚ್ಚಳವಾಗಿ ಗೊತ್ತಾಗುತ್ತಾ ಇತ್ತು.

ಆದರೆ ತಾನು ಉಪವಾಸ ಮಾಡದ ಯಾವ ಹೆಂಡತಿಗೇ ಆದರೂ ತನ್ನ ಗಂಡ ಸಾಯುವ ತನಕ ಉಪವಾಸ ಮಾಡುತ್ತೇನೆ ಅಂತ ಪದೇಪದೇ ಊಟತಿಂಡಿ ಬಿಟ್ಟರೆ ಬಲು ಸಂಕಟ. ಹೌದೋ ಅಲ್ಲವೋ? ಅದಕ್ಕೇ ನಾನಿಲ್ಲದ ಕಡೆ ಉಪವಾಸ ಮಾಡುತ್ತಿದ್ದರು ಬಾಪು. ಆದರೆ ಅವರಲ್ಲಿ ಉಪವಾಸ ಕೂತಾಗ ನಾನಿಲ್ಲಿ ಹೇಗೆ ಉಣ್ಣುವುದು? ಹಾಗಂತ ನಾನೂ ಉಪವಾಸ ಕೂರಲೂ ಆಗುತ್ತಿರಲಿಲ್ಲ. ನನಗೆ ಹೆಚ್ಚು ತಿನ್ನಲೂ ಆಗುತ್ತಿರಲಿಲ್ಲ, ಉಪವಾಸವಿರಲೂ ಆಗುತ್ತಿರಲಿಲ್ಲ. ‘ನಿಮ್ಮ ಉಪವಾಸವೊಂದು ಅತಿ ಅಂತ ಬಾಯಿಯ ಕಾಲೆಳೆಯುತ್ತಿದ್ದೆ. ಕೊನೆಗೆ ಅವರ ಉಪವಾಸದ ಸಮಯದಲ್ಲಿ ನಾನು ಒಂದೇ ಹೊತ್ತು ತಿನ್ನುವುದು, ಬರೀ ಹಣ್ಣು ತಿನ್ನುವುದು ಮಾಡುತ್ತ ಇರುತ್ತಿದ್ದೆ. ಅವರಿದ್ದಲ್ಲಿ ಹೋಗಿ ಅವರಿಗೆ ಇಷ್ಟವಾಗುವ ಹಾಗೆ ಕಾಲು, ಬೆನ್ನು, ಹಣೆ ಒತ್ತುತ್ತಾ ಕೂರುತ್ತಿದ್ದೆ. ಅಥವಾ ಅವರ ಪಕ್ಕ ಸುಮ್ಮನೇ ಕೂರುತ್ತಿದ್ದೆ. ಸತ್ಯಾಗ್ರಹಕ್ಕಾಗಿ ಸಾರ್ವಜನಿಕವಾಗಿ ಉಪವಾಸ ಕೂರುವುದು ದಕ್ಷಿಣ ಆಫ್ರಿಕಾದಲ್ಲಿದ್ದಾಗಲೇ ಶುರುವಾದದ್ದು. ಅಲ್ಲಿದ್ದಾಗಲೇ ಒಂದು ವಾರ, ಎರಡು ವಾರದವರೆಗೂ ಉಪವಾಸ ಮಾಡಿದ್ದರು. ಎಲ್ಲ ಘನ ಪದಾರ್ಥ ತ್ಯಜಿಸಿ ಬರಿಯ ದ್ರವಾಹಾರದ ಮೇಲೆ ಇದ್ದು ನೋಡಿದ್ದರು. ಭಾರತಕ್ಕೆ ಬಂದ ಮೇಲೆ ಅದು ಮುಂದುವರಿಯಿತು. ಜಲಿಯನ್‌ವಾಲಾಬಾಗ್ ಘಟನೆ ಆದಮೇಲೆ ಇರಬೇಕು, 1921ನೇ ಇಸವಿಯಿಂದ ಸ್ವರಾಜ್ಯ ದೊರೆಯುವ ತನಕ ಪ್ರತಿ ಸೋಮವಾದ 24 ಗಂಟೆ ಉಪವಾಸ ಮಾಡಿದರು. ಹದಿನೇಳು ಸಲ ನಿಮಗೆ ಗೊತ್ತಿರುವ ಹಾಗೆ ಉಪವಾಸ ಹಿಡಿದಿದ್ದಾರೆ ಬಾಪು. ಕೆಲವು ನನ್ನ ನೆನಪಿನಲ್ಲಿ ಈಗಲೂ ಉಳಿದಿವೆ. ಅಮದಾವಾದಿನ ಗಿರಣಿ ಕಾರ್ಮಿಕರ ಮುಷ್ಕರ ಶುರುವಾಗಿತ್ತು. ಮೊದಲು ಬಾಪು ಅದನ್ನು ಬೆಂಬಲಿಸಲಿಲ್ಲ. ಆದರೆ ಬಾಪುವಿಗೆ ಹಸಿವು ಅಂದರೆ ಏನು ಅಂತ ಗೊತ್ತಿಲ್ಲ ಅಂತ ಕಾರ್ಮಿಕರೇ ಹೇಳಿಬಿಟ್ಟರು. ಆಗ ಉಪವಾಸ ಕೂತರು. ಉಪವಾಸ ಕೂತಿದ್ದೇ ತಗೋ, ಮಿಲ್ಲಿನ ಮಾಲಕರು ಓಡೋಡಿ ಬಂದು ದಯವಿಟ್ಟು ಉಪವಾಸ ನಿಲ್ಲಿಸಿ ಅಂತ ಒಪ್ಪಂದ ಮಾಡಿಕೊಂಡುಬಿಟ್ಟರು. ಇದು 1918ರಲ್ಲಿ ಅನಿಸುತ್ತೆ. ಆಮೇಲೆ 1921ನೇ ಇಸವಿ ಇರಬೇಕು. ಬ್ರಿಟನ್ನಿನ ರಾಜಕುಮಾರ ಭಾರತಕ್ಕೆ ಬಂದಾಗ ಕಾಂಗ್ರೆಸ್ ಭಾರತ ಬಂದ್‌ಗೆ ಕರೆ ನೀಡಿತ್ತು. ಆದರೆ ಪಾರ್ಸಿ, ಯಹೂದಿ, ಕ್ರೈಸ್ತರು ತಮ್ಮ ಅಂಗಡಿ, ಮುಂಗಟ್ಟು ಬಂದ್ ಮಾಡಿರಲಿಲ್ಲ. ಅದಕ್ಕೆ ಅವರ ಮೇಲೆ ಹಿಂದೂ, ಮುಸ್ಲಿಮರ ದಾಳಿ ಶುರುವಾಯಿತು. ಮರುದಿನ ಪಾರ್ಸಿ, ಯಹೂದಿ, ಕ್ರೈಸ್ತರು ತಮ್ಮ ದಾಳಿ ಶುರು ಮಾಡಿದರು. ಬಾಪು ಬಲು ದುಃಖಗೊಂಡು ಉಪವಾಸ ಕೂತರು. ಬೇರೆಬೇರೆ ಮತದವರು ಹೊಡೆದಾಟ ನಿಲ್ಲಿಸದಿದ್ದರೆ ತಾನು ಅನ್ನ, ನೀರು ಮುಟ್ಟುವುದಿಲ್ಲ ಅಂತ ಬರೆದರು. ಆಗ ದೇವದಾಸ ಬಾರ್ಡೋಲಿಯಲ್ಲಿದ್ದ. ಅವನನ್ನು ಕರೆಸಿದರು. ಗಲಭೆ ನಿಲ್ಲದಿದ್ದರೆ ಗಲಭೆಯ ಸ್ಥಳಕ್ಕೆ ದೇವದಾಸನನ್ನು ‘ಆಹುತಿ ಯಾಗಿ ಕಳಿಸುತ್ತೇನೆ ಅಂತ ಅಂದುಬಿಟ್ಟರು. ನಂಗೆ ಯಾವ ಪರಿ ಸಂಕಟವಾಯಿತು ಅಂದರೆ ಅದನ್ನು ಹೇಗೆ ವರ್ಣಿಸಲಿ? ಆದರೆ ಮುಂಬಯಿ ಶಾಂತವಾಗಿಬಿಟ್ಟಿತು. ಎಲ್ಲ ಕೋಮಿಗೆ ಸೇರಿದ ಜನರ ಎದುರು ಬಾಪು ತಮ್ಮ ಉಪವಾಸ ನಿಲ್ಲಿಸಿದರು. ಅದಾದ ಮೂರು ವರ್ಷಕ್ಕೆ ಮತ್ತೆ ಒಮ್ಮೆ ಹೀಗೇ ಕೋಮು ಗಲಭೆ ಆದಾಗ ಉಪವಾಸ ಕೂತರು. ಒಂದೆರೆಡಲ್ಲ, 21 ದಿನ! ಎಲ್ಲರೂ ಬೇಡಬೇಡ ಅಂದರೂ ದಿಲ್ಲಿಯ ಮುಹಮ್ಮದ್ ಅಲಿಯವರ ಮನೆಯಲ್ಲಿ ಉಪವಾಸ ಕುಳಿತರು. ‘ಈ ಉಪವಾಸಗಳಿಗೆ ನಾನು ಜವಾಬ್ದಾರನಲ್ಲ, ತಮಾಷೆಗೆ ಮಾಡುತ್ತಿಲ್ಲ. ಕೀರ್ತಿಗಾಗಿಯೂ ಮಾಡುತ್ತಿಲ್ಲ. ಹಸಿವಿನ ಹೊಡೆತ ಕಷ್ಟವೇ. ಆದರೆ ಅದು ಉನ್ನತ ಶಕ್ತಿಯೊಂದು ನನಗೆ ವಹಿಸಿದ ಜವಾಬ್ದಾರಿ ಎಂಬ ತಿಳಿವಳಿಕೆಯಿಂದ ನಿಭಾಯಿಸಲು ಸಾಧ್ಯವಾಗಿದೆ ಅಂತ ಹಠ ಹಿಡಿದು ಉಪವಾಸ ಕೂತೇ ಬಿಟ್ಟರು. ಅಂತೂ 21 ದಿನ ಕಳೆಯಿತು.

ಹೀಗೆ ಸತ್ಯಾಗ್ರಹದ ನಡುನಡುವೆ ಉಪವಾಸ ನಡೆಯುತ್ತಲೇ ಇತ್ತು. 1933ರಲ್ಲಿ ಮತ್ತೊಂದು ಸಲ 21 ದಿನ ಉಪವಾಸ ಕೂತರು. ಅದು ತನ್ನ ಮತ್ತು ತನ್ನ ಸಹಚರಿಗಳ ಅಂತರಂಗ ಶುದ್ಧಿಗಾಗಿ. ‘ಉಪವಾಸ ದೇಹವನ್ನು ಶುದ್ಧೀಕರಿಸುತ್ತದೆ. ಪ್ರಾರ್ಥನೆ ಮನಸ್ಸನ್ನು ಶುದ್ಧಗೊಳಿಸುತ್ತದೆ. ಪ್ರಾರ್ಥನೆ ಮತ್ತು ಉಪವಾಸ ಎರಡೂ ಸೇರಿದರೆ ಅದ್ಭುತ ಸಾಧನೆ ಸಾಧ್ಯವಿದೆ. ಪ್ರಾರ್ಥನೆಯಿಲ್ಲದೆ ಉಪವಾಸವಿಲ್ಲ. ಉಪವಾಸವಿಲ್ಲದೆ ಪ್ರಾರ್ಥನೆಯಿಲ್ಲ ಎನ್ನುತ್ತಿದ್ದರು. ಉಪವಾಸವಿದ್ದಾಗ ಪ್ರಾರ್ಥನೆ ಇದ್ದೇ ಇರುತ್ತಿತ್ತು. ಡಾಕ್ಟರ್ ಸಾಹೇಬರ ಜೊತೆ ಪುಣೆ ಒಪ್ಪಂದದ ಸಮಯವಿರ ಬೇಕು, ಯರವಾಡ ಜೈಲುಮಂದಿರದಲ್ಲಿ ಉಪವಾಸ ಕೂತರು. ಆಗ ಬಾಪುವಿನ ಆರೋಗ್ಯ ಏನೂ ಸರಿಯಿರಲಿಲ್ಲ. ಕಲಕತ್ತೆಯಿಂದ ಗುರುದೇವ ಬಾಪುವನ್ನು ನೋಡಲು ಬಂದರು. ತಮ್ಮಿಷ್ಟದ ಪ್ರಾರ್ಥನೆಯೊಂದನ್ನು ಹಾಡಿದರು. ಆದರೆ ಆ ಸಲ ಮಾತ್ರ ನಾನಂತೂ ಹೆದರಿ ಸತ್ತೇ ಹೋದಂತಾದೆ. ಮೀರಾ ಹತ್ತಿರ ಪತ್ರ ಬರೆಸಿದೆ. ‘ಈಗ ಉಪವಾಸ ಮಾಡೋ ನಿರ್ಧಾರ ಏನೂ ಸರಿಯಲ್ಲ, ಆದರೆ ಎಲ್ಲಿ ಮಾತು ಕೇಳ್ತಿರಿ ನೀವು ಅಂತ ಬರೆಸಿದ್ದೆ. ಅದಕ್ಕೆ ಬಾಪು, ‘ಮತ್ಯಾವ ಹೆಂಡತಿಯೇ ಆಗಿದ್ದರೂ ಅವರಪ್ಪ ಹೇರಿದ ಈ ಮನುಷ್ಯನ ಭಾರಕ್ಕೆ ಸತ್ತು ಹೋಗ್ತಾ ಇದ್ದರು. ಆದರೆ ನಿನ್ನ ಪ್ರೀತಿ, ಶಕ್ತಿ ದೊಡ್ಡದು. ಅದೇ ನನ್ನನ್ನು ಕಾಪಾಡುತ್ತ ಇದೆ ಅಂತ ಬರೆದಿದ್ದರು. ಅದು ಅವರ ‘ಅಂತರಂಗದ ದನಿ ಕೇಳಿ ಕುಳಿತ ಉಪವಾಸ. ಯಾರೆಷ್ಟು ಹೇಳಿದರೂ ನಿಲ್ಲಿಸಲಾರರು ಅಂತ ಎಲ್ಲರಿಗೂ ಗೊತ್ತಿತ್ತು. ಆದರೆ ಎಲ್ಲರೂ ಆತಂಕ ಪಟ್ಟಿದ್ದೆವು. ಹರಿಯೂ ಒಂದು ಪತ್ರ ಬರೆದಿದ್ದ. ‘ಈ ದೇಹ ಏನನ್ನು ಮಾಡಬಹುದೋ ಅದೆಲ್ಲವನ್ನೂ ಬೇಷರತ್ತಾಗಿ ಮಾಡ್ತೀನಿ. ಆದರೆ ಉಪವಾಸ ಬೇಡ, ಬಿಡಿ ಅಂದಿದ್ದ. ಅದಕ್ಕವರ ಅಪ್ಪ, ‘ನಿನ್ನ ಪತ್ರ ನನ್ನನ್ನು ಕಲಕಿದೆ. ನನ್ನ ಉಪವಾಸ ನಿನ್ನನ್ನು ಪರಿಶುದ್ಧಗೊಳಿಸುವುದೇ ಆದರೆ ಅದಕ್ಕೆ ಎರಡು ಪಲ ಪ್ರಾಪ್ತವಾದಂತೆ, ಚಿಂತಿಸಬೇಡ ಎಂದು ಬರೆದಿದ್ದರಂತೆ. ಆ ಸಲ ಅಂತೂ ಹೇಗೋ ಕಳೆಯಿತು. ಅದರ ನಂತರ ಒಮ್ಮೆ 21 ದಿನ ಉಪವಾಸ ಮಾಡಿದರು. ಅದೂ ನಮ್ಮೆಲ್ಲರ ಆತಂಕ, ಭಯಗಳ ನಡುವೆ ಕಳೆದೇ ಹೋಯಿತು. ಆ ಸಲ ಅವರನ್ನು ಜೈಲಿನಿಂದ ಬಿಡುಗಡೆ ಮಾಡಿ ಪುಣೆಯ ಪ್ರೇಮಲೀಲಾ ಥ್ಯಾಕರ್ಸೆ ಅವರ ಮನೆ ‘ಪರ್ಣಕುಟಿಗೆ ಕಳಿಸಿದ್ದರು. ಅವಳು ಗಿರಣಿ ಮಾಲಕರ ಹೆಂಡತಿ, ನಮ್ಮ ಶಿಷ್ಯೆ. ಒಳ್ಳೇ ಮನಸ್ಸಿನ ಹೆಣ್ಣುಮಗಳು. ಮಲಬಾರ್ ಹಿಲ್ಸ್‌ನಲ್ಲಿದ್ದ ಪ್ರೇಮಲೀಲಾ ಮನೆಯ ಜಗಲಿಯಲ್ಲಿ ಬಾಪು ಸ್ವಲ್ಪ ಹೊತ್ತು ಕೂತು, ತಿರುಗಿ, ಅಷ್ಟು ದೂರದ ತನಕ ಕಾಣುತ್ತಿದ್ದ ಹಳ್ಳಿ ದೃಶ್ಯ ನೋಡುತ್ತ ಮಲಗಿದರು. ಉಪವಾಸ ಮಾಡಿ ಬದುಕುವ ಶಕ್ತಿ ಸಿದ್ದಿಯಾಗಿತ್ತು ಬಾಪುವಿಗೆ. ಆ ಉಪವಾಸದ ಕೊನೆಯ ದಿನ ಅನ್ಸಾರಿ ಸಾಹೇಬರು ಕುರಾನನ್ನು, ಮಹದೇವ ಕ್ರೈಸ್ತ ಸಂದೇಶವನ್ನು, ಸುತ್ತಲಿದ್ದವರು ನರಸಿ ಮೆಹ್ತಾರ ವೈಷ್ಣವ ಜನತೋ ಅನ್ನು ಹಾಡಿದೆವು. ಪ್ರೇಮಲೀಲಾ ಕೊಟ್ಟ ಅರ್ಧ ಲೋಟ ಕಿತ್ತಳೆ ರಸ ಕುಡಿದು ಉಪವಾಸ ನಿಲ್ಲಿಸುವಾಗ ಗುರುದೇವ ಅಲ್ಲೇ ಇದ್ದರು. ಅವರ ಸುತ್ತ ಇದ್ದೋರೆಲ್ಲ ಅವರನ್ನೇ ನೋಡುತ್ತ ವೌನವಾಗಿ ಕೂತಿದ್ದೆವು. ಈ ಗಂಡಾಂತರ ಮುಗಿದು ಒಂದೆರೆಡು ತಿಂಗಳಾಗಿತ್ತು ಅಷ್ಟೇ. ಬಾಪು ಆಗಷ್ಟೇ ಸುಧಾರಿಸಿಕೊಂಡಿದ್ದರು. ಮತ್ತೆ ಜೈಲಿನಲ್ಲಿ ಇನ್ನೊಮ್ಮೆ ಉಪವಾಸ ಕೂತರು, ‘ಹರಿಜನ ಸೇವಕ ಸಂಘದ ಕೆಲಸವನ್ನು ಜೈಲಿನಿಂದ ಮಾಡಲು ಬಿಡುತ್ತಿಲ್ಲ ಅಂತ. ಈಗ ಬ್ರಿಟಿಷರಿಗೆ ಹೆದರಿಕೆ ಆಗಿರಬೇಕು, ಅವರನ್ನು ಕೂಡಲೇ ಜೈಲಿನಿಂದ ಬಿಡುಗಡೆ ಮಾಡಿ ಮತ್ತೆ ಪ್ರೇಮಲೀಲಾ ಮನೆಗೇ ಕಳಿಸಿದರು. ಯರವಾಡಾದಲ್ಲಿದ್ದಾಗ ಬಾಪುವಿಗೆ ಆಕಾಶ ನೋಡುವ, ನಕ್ಷತ್ರ ನೋಡುವ ಅಭ್ಯಾಸ ಶುರುವಾಗಿತ್ತು. ಪ್ರೇಮಲೀಲಾನೇ ದೊಡ್ಡ ಕೊಳವೆ ತರಹದ್ದು, ನಕ್ಷತ್ರ ನೋಡೋದು, ಟೆಲಿಸ್ಕೋಪು ಅಂತೇನೋ, ತರಿಸಿಕೊಟ್ಟಿದ್ದಳು. ‘ಆಶ್ರಮಕ್ಕೆ ಬನ್ನಿ ಅಂತ ಪ್ರಾರ್ಥಿಸಿ ಪತ್ರ ಹಾಕಿಸಿದೆ. ‘ಶಿಕ್ಷೆಯ ಅವಧಿ ಮುಗಿದಿಲ್ಲ, ಇನ್ನೂ ಬಂಧನದಲ್ಲಿರುವೆ. ಬಿಡುಗಡೆಯಾದ ಮೇಲೆ ಬರುವೆ ಅಂತ ಪತ್ರ ಬರೆಸಿದರು. ದೇವದಾಸ, ಮಹದೇವ ಮತ್ತು ಉಳಿದವರೆಲ್ಲ ಅವರ ಜೊತೆಗೇ ಇದ್ದರು. ಕೊನೆಗೆ ನಾನೂ ಹೋದೆ.

1942 ಇರಬೇಕು. ಭಾರತ ಬಿಟ್ಟು ತೊಲಗಿ ಚಳವಳಿ ಕಾಡ್ಗಿಚ್ಚಿನ ತರಹ ಹಬ್ಬಿತ್ತು. ಸಾವಿರಗಟ್ಟಲೆ ಜನ ಜೈಲಲ್ಲಿದ್ದರು. ನಾವು ಆಗಾಖಾನ್ ಜೈಲುಮಂದಿರದಲ್ಲಿ ಇದ್ದೆವು. ನನಗೆ ಅಷ್ಟೇನೂ ಆರಾಮವಿರಲಿಲ್ಲ. ಮಹದೇವ ಬೇರೆ ಇದ್ದಕ್ಕಿದ್ದಂತೆ ತೀರಿಕೊಂಡು ಹೇಳಲಾರದಷ್ಟು ಆಘಾತ ಆಗಿತ್ತು. ಬರೀ ಐವತ್ತು ವರ್ಷಕ್ಕೇ ಅವನಿಗೆ ಹೃದಯಾಘಾತ ಆಯಿತು ಅಂದರೆ ನನಗೆ ನಂಬಲಿಕ್ಕೇ ಆಗಲಿಲ್ಲ. ಕೈಕಾಲು ಬಿದ್ದು ಸತ್ತೇ ಹೋದ ಹಾಗೆ ಆಗೋಯ್ತು. ಇನ್ನು ನಾವು ಹೇಗಿರೋದು ಅನಿಸಿ ಎಲ್ಲ ಮುಗಿದೇ ಹೋದಂತೆ, ಕೊನೆಗಾಲ ಬಂದಹಾಗೆ ಆಗಿಹೋಗಿತ್ತು. ಎಷ್ಟು ಶಿಸ್ತಿನ, ಆರೋಗ್ಯದ ಮನುಷ್ಯ! ನಮಗಿಂತ ಸಣ್ಣೋನು, ಮೊದಲೇ ಹೋಗಿಬಿಟ್ಟ. ಜೈಲಿಗೆ ಬಂದು ಬರೀ ಆರು ದಿನ ಆಗಿತ್ತು ಅಷ್ಟೆ. ದುರ್ಗಾ ಬೆಹೆನ್, ಮಗು ನಾರಾಯಣ ಅವರನ್ನೆಲ್ಲ ನೋಡಿ ಬಲು ದುಃಖ ಆಗಿ ಕಣ್ಣು ಕತ್ತಲಿಟ್ಟು ಹೋಯ್ತು. ಬಾಪುವಿಗೂ ಅಷ್ಟೆ. ಅವರ ಮಗ, ಗೆಳೆಯ, ವಿಮರ್ಶಕ, ಕಾರ್ಯದರ್ಶಿ, ಲಿಪಿಕಾರ ಎಲ್ಲ ಆಗಿದ್ದವ ಮಹದೇವ. ದಂಗುಬಡಿದು ಕೂತುಬಿಟ್ಟಿದ್ದರು ಅವರು. ತುಂಬ ದುಃಖದಿಂದ ಮಹದೇವನ ದೇಹವನ್ನು ತಾವೇ ಮೀಯಿಸಿ, ತಾವೇ ಸಂಸ್ಕಾರ ಮಾಡಿಸಿದರು. ಅವರು ದುಃಖ ತಡಕೊಂಡಿದ್ದು ನೋಡುವಾಗ ಉಪವಾಸ ಮಾಡಿ ಹಸಿವು ತಡೆದುಕೊಳ್ಳಲು ಆದರೆ ಮತ್ತೆಲ್ಲವನ್ನೂ ತಡೆದುಕೊಳ್ಳುವ ಶಕ್ತಿ ಬಂದುಬಿಡುತ್ತಾ ಅಂತ ಅನಿಸಿತು. ನನಗೆ ಹಸಿವು ತಡೆಯಲೂ ಸಾಧ್ಯವಿರಲಿಲ್ಲ, ದುಃಖ ತಡೆಯಲೂ ಆಗುತ್ತಿರಲಿಲ್ಲ.

ಮಹದೇವ ಹೋದ ದುಃಖ ಆರುವುದರಲ್ಲಿ ಬೇರೆಬೇರೆ ಸಂಕಟಗಳು ಬಂದು ಬಾಪುವಿನ ಕುತ್ತಿಗೆ ಒತ್ತುತ್ತಿದ್ದವು. ಜಿನ್ನಾ ಸಾಹೇಬರು ಬೇರೆ ದೇಶ ಕೇಳುತ್ತಿದ್ದರು. ಡಾಕ್ಟರ್ ಸಾಹೇಬರು ಬೇರೆ ಧರ್ಮದ ಮಾತಾಡುತ್ತಿದ್ದರು. ಅವೆರಡನ್ನು ಬಿಟ್ಟುಕೊಡೋದು ಹೇಗೆ ಅನ್ನುವ ಸಂಕಟ ಶುರುವಾಗಿತ್ತು ಬಾಪುವಿಗೆ. ಅವೆರಡೇ ಯೋಚನೆ, ಅವರಿಬ್ಬರದೇ ಧ್ಯಾನ. ಮತ್ತೆ 21 ದಿನ ಉಪವಾಸ ಮಾಡಿದರು. ಅದು ಮನೆಯಿಂದ ಹೊರಗೆ ಸಾರ್ವಜನಿಕವಾಗಿ ಮಾಡಿದ 15ನೇ ಉಪವಾಸ. ಆಮರಣಾಂತ ಅಲ್ಲ, ಹಣ್ಣಿನ ರಸ, ನೀರು ತಗೊಳ್ಳುತ್ತ ಇದ್ದರು. ಬ್ರಿಟಿಷ್ ಸರಕಾರ ಉಪವಾಸ ಮಾಡಬೇಡಿ ಎಂದಿತು. ಅದರಿಂದ ಆಗುವ ಪರಿಣಾಮಕ್ಕೆ ತಾನು ಜವಾಬ್ದಾರ ಅಲ್ಲ ಅಂತ ಹೇಳಿತು. ಯಾವುದಕ್ಕೂ ಚರ್ಚೆ ಮಾಡುವ, ಮಾತುಕತೆ ನಡೆಸುವ, ಉಪವಾಸ ಕೂರುವುದು ಏಕೆ ಅಂತ ಕೇಳಿತು. ‘ಯಾರೋ ಹೇಳಿದರು ಅಂತ ಉಪವಾಸ ಮಾಡಲು ಸಾಧ್ಯವಿಲ್ಲ. ಸಿಟ್ಟಿನಿಂದಲೂ ಸಾಧ್ಯವಿಲ್ಲ. ಸಿಟ್ಟು ತಕ್ಷಣದ ಹುಚ್ಚುತನ. ನನ್ನೊಳಗಿನ ಕ್ಷೀಣದನಿ ಹೇಳಿದರಷ್ಟೆ ಉಪವಾಸ ಮಾಡಲು ಸಾಧ್ಯ ಅಂತ ಉಪವಾಸ ಮಾಡೇ ಸಿದ್ಧ ಎಂದರು ಬಾಪು. ಮಾತೆತ್ತಿದರೆ ಉಪವಾಸ ಕೂರುತ್ತಿದ್ದ ಈ ಹಠಮಾರಿ ಮನುಷ್ಯನ ಬಗ್ಗೆ ಬ್ರಿಟಿಷರಿಗೆ ಎಂಥ ಸಿಟ್ಟು ಬಂದಿರುತ್ತೋ ಏನೋ, ಅಳಬೇಕೋ ನಗಬೇಕೋ, ಇವನನ್ನ ಹಿಡಿದು ಜೈಲಿಗೆ ಹಾಕಿ ಕೊಲ್ಲಬೇಕೋ, ನಿನ್ನಿಷ್ಟದಂತೆ ಮಾಡು ಅಂತ ಬಿಡಬೇಕೋ ಒಂದೂ ಗೊತ್ತಾಗದಂತೆ ಆಗಿರಬಹುದು. ಒಂಥರಾ ನೀರ ಮೇಲಿರುವ ಎಣ್ಣೆಯ ತರಹ ಬಾಪು. ಹಿಡಿಯಲಿಕ್ಕೆ ಆಗದೇ, ನಿಯಂತ್ರಣ ಮಾಡಲಿಕ್ಕೂ ಆಗದೇ ಬ್ರಿಟಿಷರು ಬಲು ಕಷ್ಟ ಪಟ್ಟಿರಬಹುದು. 73-74 ವರ್ಷದ ಹಿರಿಯರು 21 ದಿನ ಉಪವಾಸ ಮಾಡಿ ಬದುಕುವುದು ಅಂದರೆ ಸುಮ್ಮನೆ ಅಲ್ಲ ಮಗೂ. ಆ ಉಪವಾಸ ಸುಲಭವಾಗಿರಲಿಲ್ಲ. ಬಾಪು ಬಲು ಕಷ್ಟಪಟ್ಟಿದಾರೆ. ಒಬ್ಬಿಬ್ಬರಲ್ಲ, ಒಂಬತ್ತು ಜನ ವೈದ್ಯರ ತಂಡವೇ ಬಂದು ಅವರನ್ನು ಪರೀಕ್ಷೆ ಮಾಡುತ್ತಿತ್ತು. ಇನ್ನೇನು ಮೂತ್ರಕೋಶ ವಿಪಲವಾಗಿ, ಯುರೇಮಿಯಾ ಆಗಿ, ಎಂ. ಕೆ. ಗಾಂಧಿ ಸದ್ಯದಲ್ಲೇ ಸಾಯ್ತಿರೆ ಅಂತ ವೈದ್ಯರ ತಂಡ ವರದಿ ಕೊಟ್ಟಿದ್ದರು. ರಕ್ತ ಕೊಟ್ಟರೂ, ಸಲೈನ್ ಏರಿಸಿದರೂ ಏನೂ ಮಾಡಕ್ಕಾಗಲ್ಲ ಅಂತ ಎಚ್ಚರಿಸಿ ಹೋಗಿದ್ದರು. ಆದರೆ ಬಾಪು ಯಾವ ಚಿಕಿತ್ಸೆ ಪಡೆಯಲಿಕ್ಕೂ ಒಪ್ಪಲೇ ಇಲ್ಲ, 21 ದಿನ ಉಪವಾಸ ಮಾಡೇ ಸಿದ್ಧ ಅಂತ ಉಪವಾಸ ಶುರುಮಾಡೇ ಬಿಟ್ಟರು. ಅವರು ಉಪವಾಸ ಕೂರುತ್ತಾರೆ ಅಂದರೆ ಜನರಿಗೆ ಹೆದರಿಕೆ ಆಗುತ್ತಿತ್ತು. ಬಳಗಕ್ಕೆ ಹೆದರಿಕೆ ಆಗುತ್ತಿತ್ತು. ಬ್ರಿಟಿಷರಿಗೆ ಹೆದರಿಕೆ ಆಗುತ್ತಿತ್ತು. ಎಲ್ಲರಿಗಿಂತ ಅವರ ವಿರೋಧಿಗಳಿಗೆ ಬಾಪುವೇನಾದರೂ ಇಲ್ಲವಾದರೆ ಅದು ತಮ್ಮ ಮೇಲೆಲ್ಲಿ ಬರುವುದೋ ಅಂತ ಹೆದರಿಕೆ ಆಗುತ್ತಿತ್ತು.

ಉಪವಾಸ ಮಾಡುವಾಗ ಸುಮ್ಮನೆ ಕೂರುತ್ತಿರಲಿಲ್ಲ ಅವರು. ಅವರ ಭೇಟಿಗೆ ಜನ ಬರೋರು. ಶಕ್ತಿ ಉಳಿಸಿಕೊಳ್ಳಲು ಮಲಗುತ್ತ ಇದ್ದರೇ ಹೊರತು ಚಟುವಟಿಕೆ ಕಡಿಮೆ ಆಗುತ್ತ ಇರಲಿಲ್ಲ. ಊಟವಿಲ್ಲದೆ ವಾಕರಿಕೆ ಬರುತ್ತಿತ್ತು. ಆವಾಗೀವಾಗ ಬೆಚ್ಚನೆ ನೀರು ಕುಡಿಯುತ್ತಿದ್ದರು. ಒಂದೆರೆಡು ಚಮಚ ನಿಂಬೆರಸ ಮತ್ತು ಜೇನುತುಪ್ಪವನ್ನು ಬಿಸಿನೀರಲ್ಲಿ ಸೇರಿಸಿ ಕುಡಿಯುತ್ತಿದ್ದರು. ವೈದ್ಯರು ಹಸಿ ತರಕಾರಿ ರಸ ಕುಡಿಯಿರಿ ಅಥವಾ ಹಣ್ಣು ತಿನ್ನಿ ಅಂತಿದ್ದರು. ಇವರು ಕೇಳಬೇಕಲ್ಲ, ಊಂಹ್ಞೂಂ.. ಊಟ ಬಿಟ್ಟಿದ್ದಕ್ಕೆ ಮಲಬದ್ಧತೆ ಆಗುತ್ತಿತ್ತು. ಮೂಲವ್ಯಾಧಿ ತೊಂದರೆ ಮೊದಲೇ ಇತ್ತು. ಅದಕ್ಕೆ ಎನಿಮಾ ತಗೊಳೋರು. ಎಲ್ಲ ಅವರದ್ದೇ ಪ್ರಯೋಗ, ಅವರದ್ದೇ ಚಿಕಿತ್ಸೆ. ಅವರ ಪ್ರಕಾರ ಅವರ ದೇಹಕ್ಕೆ ಏನಾಗುತ್ತ ಇದೆ, ಏನು ಆಗಬೇಕು ಅನ್ನುವುದು ಅವರಿಗೆ ತುಂಬ ಚೆನ್ನಾಗಿ ಗೊತ್ತಿದೆ, ಅದನ್ನು ತಾವು ಸಂಪೂರ್ಣ ನಿಯಂತ್ರಣ ಮಾಡಿಟ್ಟುಕೊಂಡಿದೀನಿ ಅಂತ ತಿಳಿದಿದ್ದರು. ಎಷ್ಟು ವಾಕರಿಕೆ ಆಗಲಿ, ಏನೇ ಆಗಲಿ, ನೀರು, ಉಪ್ಪು, ನಿಂಬೆರಸವನ್ನು ಒಂದು ಮಿತಿಯಲ್ಲಿ ಬಳಸುತ್ತಿದ್ದರು.

ಬಾಪು 21 ದಿನ ಉಪವಾಸ ಮಾಡಿದರು ಅಂದರೆ ಕೆಲವರು, ‘ಅದು ಹೇಗೆ ಸಾಧ್ಯ? ಯಾರಿಗೂ ಗೊತ್ತಿಲ್ಲದಂತೆ ತಿಂದಿರಬೇಕು ಅಂದಿದ್ದರಂತೆ. ಅಯ್ಯೋ ರಾಮನೇ, ಅದೆಂಥಾ ಜನ?! ಬಾಪು ಉಪವಾಸ ಮಾಡಿದ್ದು ಎಲ್ಲರ ಎದುರಲ್ಲಿ, ಯಾರ್ಯಾರದೋ ಸ್ನೇಹಿತರ ಮನೆಯಲ್ಲಿ, ಬೇರೆಬೇರೆ ಊರುಗಳಲ್ಲಿ, ಜೈಲಿನಲ್ಲಿ. ಅಲ್ಲೆಲ್ಲ ಕದ್ದುಮುಚ್ಚಿ ತಿನ್ನಲು ಸಾಧ್ಯವೇ? ದೃಢ ಮನಸ್ಸು ಮತ್ತು ನೀರು ಇವೆರಡೇ ಅವರನ್ನು ಕಾಪಾಡಿದ್ದು. ಉಪವಾಸ ಕೂರುವುದು ಅಂದರೆ ಊಟ ಬಿಟ್ಟು ಕೂತಷ್ಟು ಸರಳವಲ್ಲ ಮಗೂ. ನಿರಂತರ ಒಂದು ಹೊತ್ತು ಉಪವಾಸ ಮಾಡುವವರಿಗೂ ದಿನಗಟ್ಟಲೆ ಉಪವಾಸ ಸಾಧ್ಯವಿಲ್ಲ. ನನಗಂತೂ ಸಾಧ್ಯವೇ ಇಲ್ಲ. ಅಷ್ಟು ದೇಹಬಲವೂ ಇಲ್ಲ, ಮನೋಬಲವಂತೂ ಇಲ್ಲವೇ ಇಲ್ಲ. ಆದರೆ ಬಾಪುವಿಗೆ ತನ್ನಮ್ಮ ಉಪವಾಸ ಮಾಡಿದ್ದು ನೋಡಿನೋಡಿ ರೂಢಿ ಆಗಿಬಿಟ್ಟಿತ್ತು. ಅವರ ಉಪವಾಸದ ಶಕ್ತಿ ನೋಡಿ ಆತ ಮಹಾತ್ಮನೇ ಇರಬೇಕು ಅಂತ ಎಲ್ಲರೂ ಅಲ್ಲ, ನಾನೂ ಸಹಾ ಅಂದುಕೊಂಡಿದ್ದೆ. ಅವರು ಮಹಾ ದೈವಭಕ್ತರು. ಉಪವಾಸವೂ ಸಂಪೂರ್ಣ ತಮ್ಮನ್ನೇ ತಾವು ನಿರಾಕರಿಸಿಕೊಂಡು ಮಾಡುವ ಒಂದು ಕ್ರಿಯೆ ಅಂದುಕೊಂಡಿದ್ದರು. ಅವರ ಪ್ರಕಾರ, ‘ದೇವರ ದಯೆಯಿಲ್ಲದೆ ಮಾಡಿದ ಉಪವಾಸ ಬರೀ ಹಸಿವು ಅಷ್ಟೆ. ಒಟ್ಟಾರೆ ದೇವರ ಮೇಲಿನ ಶ್ರದ್ಧೆ, ಧೃಢ ನಿರ್ಧಾರ ಮತ್ತು ಮನೋಬಲಗಳಿಂದ ಅವರಿಗೆ ಉಪವಾಸ ಸಾಧ್ಯವಾಯಿತು ಅನಿಸುತ್ತದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top