ನೀನೂ ಥೇಟ್ ನಮ್ಮಂತೆಯೇ ಆಗಿಬಿಟ್ಯಲ್ಲೋ ಅಣ್ಣಾ...? | Vartha Bharati- ವಾರ್ತಾ ಭಾರತಿ

ಫಹ್ಮಿದಾ ರಿಯಾಝ್

ನೀನೂ ಥೇಟ್ ನಮ್ಮಂತೆಯೇ ಆಗಿಬಿಟ್ಯಲ್ಲೋ ಅಣ್ಣಾ...?

    ರೇಣುಕಾ ನಿಡಂಗುಂದಿ

‘‘ಈರಾಜ್ಯವನ್ನು ಮೃಗಗಳು ಆಳುತ್ತಿವೆ / ದಿಕ್ಕಿಲ್ಲದ ದುರ್ಬಲರ ನೋವೇನು ಬಲ್ಲವು / ಎಲ್ಲಾ ಬಲ್ಲ ಪ್ರಜ್ಞಾವಂತರು ಬಹಳ ಮೊದಲೇ ಸತ್ತಿದ್ದಾರೆ / ಬದುಕಿದ್ದಾಗಲೂ ಅವರು ಸತ್ತಂತಿದ್ದರು’’ ಹೀಗೆ ನಿರ್ಭೀತವಾಗಿ ನಿರಂಕುಶ ಪ್ರಭುತ್ವವನ್ನು ಚುಚ್ಚಿ ಟೀಕಿಸುತ್ತಿದ್ದ ಪಾಕಿಸ್ತಾನಿ ಸ್ತ್ರೀವಾದಿ, ಉರ್ದು ಕವಿ, ಲೇಖಕಿ, ಮಾನವ ಹಕ್ಕುಗಳ ಹೋರಾಟಗಾರ್ತಿ ಫಹ್ಮಿದಾ ರಿಯಾಝ್ ನವೆಂಬರ್ 21 ರಂದು ತಮ್ಮ 73ನೇ ವಯಸ್ಸಿನಲ್ಲಿ ಲಾಹೋರಿನಲ್ಲಿ ಕೊನೆಯುಸಿರೆಳೆದರು. ಸಮಕಾಲೀನ ಮತ್ತು ಆಧುನಿಕ ಉರ್ದು ಸಾಹಿತ್ಯದಲ್ಲಿ ವಿಶಿಷ್ಟ ದನಿಯಾಗಿದ್ದ ರಿಯಾಝ್ ಫೈಝ್ ಅಹ್ಮದ್ ಫೈಝ್ ಅವರ ನಂತರ ಲಕ್ಷಾಂತರ ಭಾರತೀಯರ ಪ್ರೀತಿಪಾತ್ರರಾಗಿದ್ದರು. 1946ರಲ್ಲಿ ಉತ್ತರಪ್ರದೇಶದ ಮೀರಾತ್‌ನ ಸುಸಂಸ್ಕೃತ ಕುಟುಂಬದಲ್ಲಿ ಜನಿಸಿ ಸಿಂಧ್ ಪ್ರಾಂತದ ಹೈದರಾಬಾದಿನಲ್ಲಿ ಬಾಲ್ಯ ಕಳೆದ ಫಹ್ಮಿದಾ ಬದುಕಿನ ಬಹುಪಾಲು ಇಂಗ್ಲೆಂಡ್ ಮತ್ತು ಪಾಕಿಸ್ತಾನದಲ್ಲಿದ್ದರೂ ಆಕೆಯದು ಭಾರತೀಯ ಹೃದಯ! ಶಿಕ್ಷಣ ತಜ್ಞರಾಗಿದ್ದ ಆಕೆಯ ತಂದೆ ರಿಯಾಝುದ್ದೀನ್ ಅಹ್ಮದ್, ಸಿಂಧ್‌ಪ್ರಾಂತದ ಆಧುನಿಕ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವ ಹಾಗೂ ಅಭಿವೃದ್ಧಿಪಡಿಸುವಲ್ಲಿ ಗಣನೀಯವಾದ ಸೇವೆ ಸಲ್ಲಿಸಿದ್ದರು. ಆಕೆ ನಾಲ್ಕು ವರ್ಷದವಳಿದ್ದಾಗಲೇ ತಂದೆಯನ್ನು ಕಳೆದುಕೊಳ್ಳುತ್ತಾಳೆ. ಮುಂದೆ ತಾಯಿಯೇ ಅವರನ್ನು ಪೋಷಿಸುತ್ತಾರೆ. ಚಿಕ್ಕ ವಯಸ್ಸಿನಲ್ಲಿಯೇ ಬರೆಯಲು ಆರಂಭಿಸಿದ ಫಹ್ಮಿದಾ ನ್ಯಾಶನಲ್ ಬುಕ್ ಫೌಂಡೇಶನ್ ಮತ್ತು ಉರ್ದು ಡಿಕ್ಷನರಿ ಬೋರ್ಡಿನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದರು. ಕಾಲೇಜಿನಿಂದ ಪದವಿ ಪಡೆದ ಫಹ್ಮಿದಾ ಕುಟುಂಬ ನಿಶ್ಚಯಿಸಿದವನೊಂದಿಗೆ ಮದುವೆಯಾಗಿ ಇಂಗ್ಲೆಂಡಿಗೆ ತೆರಳುತ್ತಾರೆ. ಅಲ್ಲಿ ಬಿಬಿಸಿ ಉರ್ದು ರೇಡಿಯೊದಲ್ಲಿ ಕೆಲಸ ಮಾಡುತ್ತಲೇ ಚಲನಚಿತ್ರ ತಯಾರಿಕೆಯಲ್ಲಿ ಪದವಿ ಗಳಿಸಿದರು. ಆಗ ಅವರಿಗೊಬ್ಬ ಮಗಳು ಹುಟ್ಟುತ್ತಾಳೆ. ಮೊದಲ ಪತಿಯೊಂದಿಗೆ ವಿಚ್ಛೇದನ ಪಡೆದು ಮತ್ತೆ ಪಾಕಿಸ್ತಾನಕ್ಕೆ ಮರಳುತ್ತಾರೆ. ಎಡಪಂಥೀಯ ರಾಜಕೀಯ ಕಾರ್ಯಕರ್ತ ಝಫರ್ ಅಲಿ ಅವರೊಂದಿಗೆ ಎರಡನೆಯ ಮದುವೆಯಿಂದ ಆಕೆಗೆ ಇಬ್ಬರು ಮಕ್ಕಳಿದ್ದರು. ಪ್ರಜಾಪ್ರಭುತ್ವದ ಸೋಲು, ಧರ್ಮಾಂಧತೆಯ ಅಮಲೇರುತ್ತಿರುವ ದುರಿತಕಾಲದಲ್ಲಿ ಪ್ರಜಾಪ್ರಭುತ್ವದ ಆದರ್ಶಗಳನ್ನು ಎತ್ತಿಹಿಡಿಯುವುದೇ ರಾಜಕಾರಣಿಗಳ ಆದ್ಯ ಕರ್ತವ್ಯವೆಂದು ಎಚ್ಚರಿಸುತ್ತಿದ್ದ ರಿಯಾಝ್‌ರ ಸುಡು ಕಿಡಿಗಳಂಥ ವಿಚಾರಗಳನ್ನು ಪಾಕಿಸ್ತಾನ ಸಹಿಸಿಕೊಳ್ಳಲಿಲ್ಲ. ಧಾರ್ಮಿಕ ಸಂಪ್ರದಾಯ, ಪುರುಷವಾದಿ ಕಟ್ಟಳೆಗಳನ್ನು ಉಲ್ಲಂಘಿಸಿದ ಫಹ್ಮಿದಾ ರಿಯಾಝ್ ತಮ್ಮ ಅಸಾಂಪ್ರದಾಯಿಕ ಸಿದ್ಧಾಂತಗಳಿಂದಾಗಿ ಭಾರೀ ಬೆಲೆ ತೆರಬೇಕಾಯಿತು. ಅವರು ಉರ್ದು ಸಾಹಿತ್ಯದ ಎಲ್ಲ ಸಂಪ್ರದಾಯಗಳನ್ನು ತಿರಸ್ಕರಿಸಿದರು. ‘‘ನಾವು ಒಂದು ಹೊಸ ಶಬ್ಧಕೋಶವನ್ನು ರಚಿಸೋಣ’’ ಕವಿತೆಯಲ್ಲಿ - ನಾವು ಹೊಸ ಶಬ್ಧಕೋಶವನ್ನು ರಚಿಸೋಣ / ಪ್ರತಿ ಪದದ ನಮಗಿಷ್ಟವಿಲ್ಲದ ಅರ್ಥ ಅಲ್ಲಿರದು/ ನಾನು ಮತ್ತು ನೀನು ಸಮಾನವಾಗಿರುವ ಶಬ್ಧ /ನಾವು ಮತ್ತು ಅವರು ಒಂದೇ ಆಗುವ ಮುನ್ನ ಹೊಸ ಶಬ್ಧಕೋಶವನ್ನು ರಚಿಸೋಣ ಎನ್ನುವ ಫಹ್ಮಿದಾ ಕೆಚ್ಚೆದೆಯ ಮಹಿಳೆ ! ದುರ್ಬಲರು, ದಮನಿತರು ತಮ್ಮ ಹಕ್ಕುಗಳಿಗಾಗಿ ದನಿಯೆತ್ತಿದಾಗೆಲ್ಲ ಸಮಾಜ ತತ್ತರಿಸುತ್ತದೆ. ಮಹಿಳೆಯರ ಸ್ಥಾನಮಾನ, ಮಾನವ ಹಕ್ಕು, ಸಮಾನತೆಗಾಗಿ ಸದಾ ತುಡಿಯುತ್ತಿದ್ದ ಫಹ್ಮಿದಾಳನ್ನು ಸಮಾಜ ನಿರ್ದಯವಾಗಿ ನಡೆಸಿಕೊಂಡಿತು. ಅವರ ಸಮಕಾಲೀನ ಬರಹಗಾರರು ಆಕೆಯೊಂದಿಗೆ ಗುರುತಿಸಿಕೊಳ್ಳಲೂ ಇಷ್ಟಪಡಲಿಲ್ಲ. ಫಹ್ಮಿದಾ ತಮ್ಮ ‘ಧೂಪ್’’ ಕವಿತಾ ಸಂಗ್ರಹದ ಮುನ್ನುಡಿಯಲ್ಲಿ ಪಾಕಿಸ್ತಾನದ ಲೇಖಕರು ಭಾಷೆಗೂ ಧರ್ಮದ ಬಣ್ಣ ಬಳಿಯುವುದನ್ನು ಬಹಿರಂಗಗೊಳಿಸಿ ವಿವಾದದ ಸುಳಿಗೆ ಸಿಲುಕುತ್ತಾರೆ. ಪರಿಸ್ಥಿತಿ ಹದಗೆಟ್ಟು ಫಹ್ಮಿದಾ ಇಂಗ್ಲೆಂಡಿಗೆ ತೆರಳಬೇಕಾಗುತ್ತದೆ. ಅಲ್ಲಿ ಚಲನಚಿತ್ರ ತಯಾರಿಕೆಯ ಕೋರ್ಸ್ ಮಾಡಿ, ಬಿಬಿಸಿ ಉರ್ದು ನ್ಯೂಸ್‌ನಲ್ಲಿ ಕೆಲಸ ಮಾಡುತ್ತಾರೆ. ಮಿಲಿಟರಿ ಸರ್ವಾಧಿಕಾರ ವಿದ್ಯಾರ್ಥಿ ಸಂಘಗಳನ್ನು ನಿಷೇಧಿಸಿದ ಸಂದರ್ಭದಲ್ಲಿ ಅಯ್ಯೂಬ್ ಖಾನ್ ವಿರೋಧಿ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡರು. ನವೆಂಬರ್ 1968ರಲ್ಲಿ, ರಾವಲ್ಪಿಂಡಿಯಲ್ಲಿ ಎಡಪಂಥೀಯ ವಿದ್ಯಾರ್ಥಿ ಪ್ರದರ್ಶನದ ಮೇಲೆ ಪೊಲೀಸರು ಗುಂಡು ಹಾರಿಸಿ, ಮೂವರು ವಿದ್ಯಾರ್ಥಿಗಳನ್ನು ಕೊಂದರು. ಆಗ ಫಹ್ಮಿದಾ ಹಿಂಸಾಚಾರ ವಿರೋಧಿ ರ್ಯಾಲಿಯಲ್ಲಿ ಭಾಗವಹಿಸಿದ್ದಲ್ಲದೇ ಸಿಂಧಿ ಮತ್ತು ಬಲೋಚ್ ಜನರಿಗೆ ಬೆಂಬಲ ನೀಡಿದರು. ಬಲೂಚಿಸ್ತಾನದ ಮಿಲಿಟರಿ ಕಾರ್ಯಾಚರಣೆಯನ್ನು ಪ್ರತಿಭಟಿಸಿದ್ದಲ್ಲದೇ ಮಾನವ ಹಕ್ಕು ವಂಚಿತ ಸಿಂಧಿಗಳ ಪರವಾಗಿ ನಿಲ್ಲುತ್ತಾರೆ. ಝಿಯಾವುಲ್ ಹಕ್ ಆಳ್ವಿಕೆಯಲ್ಲಿ ಫಹ್ಮಿದಾ ಹೊರತರುತ್ತಿದ್ದ ‘ಆವಾಝ್’ ಉರ್ದು ಪತ್ರಿಕೆಯ ವಿರುದ್ಧ ಹದಿನಾಲ್ಕು ಪ್ರಕರಣಗಳನ್ನು ದಾಖಲಿಸಲಾಯಿತು. ಆಕೆ ಮತ್ತು ಅವಳ ಪತಿಯನ್ನು ದೇಶದ್ರೋಹದ ಆರೋಪದಲ್ಲಿ ಬಂಧಿಸಲಾಯಿತು. ಪತ್ರಿಕೆ ಮುಚ್ಚಿಹೋಗುತ್ತದೆ. ಹೇಗೋ ಜಾಮೀನು ಪಡೆಯುವಲ್ಲಿ ಯಶಸ್ವಿಯಾದ ಫಹ್ಮಿದಾ ಭಾರತಕ್ಕೆ ಬರುತ್ತಾರೆ. ಅವರ ಹಳೆಯ ಸ್ನೇಹಿತೆಯಾಗಿದ್ದ ಅಮೃತಾ ಪ್ರೀತಮ್ ಮನೆ ತೆರೆದ ತೋಲಿನಿಂದ ಸ್ವಾಗತಿಸುತ್ತದೆ. ಅಮೃತಾ ಪ್ರೀತಮ್ ಅವರೇ ಆಗಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರನ್ನು ಸಂಪರ್ಕಿಸಿ ಆಕೆಯ ವಸತಿಗಾಗಿ ವ್ಯವಸ್ಥೆ ಮಾಡುತ್ತಾರೆ. ಹೀಗೆ ಏಳು ವರ್ಷಗಳ ಅವಧಿಯಲ್ಲಿ ದಿಲ್ಲಿಯ ಜಾಮಿಯಾ ಮಿಲಿಯಾದಲ್ಲಿ ಕೆಲಸಮಾಡುತ್ತ ಫಹ್ಮಿದಾ ಹಿಂದಿ ಭಾಷೆಯನ್ನೂ ಮೈಗೂಡಿಸಿಕೊಳ್ಳುತ್ತಾರೆ.

ಪರ್ಷಿಯನ್, ಸಿಂಧಿ, ಬಲೂಚಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪರಿಣಿತರಿದ್ದ ಫಹ್ಮಿದಾ, ರೂಮಿ ಮುಂತಾದ ಅನೇಕ ಸೂಫಿ ಕವಿಗಳ ಸಾಹಿತ್ಯವನ್ನು ಅನುವಾದಿಸಿದ್ದಾರೆ. ಗೋದಾವರಿ, ಖತ್ ಏ ಮುರ್ಮುಜ್, ಖಾನಾ ಏ ಆಬ್ ಓ ಗಿಲ್ , ಪತ್ಥರ್ ಕಿ ಜುಬಾನ್, ಧೂಪ್, ಬದನ್ ದರೀದಾ, ಕರಾಚಿ, ಅಧೂರಾ ಆದ್ಮಿ ಮುಂತಾದವು ಅವರಿಗೆ ಕೀರ್ತಿ ತಂದುಕೊಟ್ಟ ಅತ್ಯುತ್ತಮ ಕೃತಿಗಳು. ಆಕೆ ಪ್ರತಿಪಾದಿಸಿದ ಸ್ತ್ರೀವಾದ ಪುರುಷ ವಿರೋಧಿಯಾಗಿರಲಿಲ್ಲ. ಹಿಂದೂ ಮತ್ತು ಸಿಖ್ ಸಮುದಾಯಗಳ ವಿರುದ್ಧ ಪಾಕಿಸ್ತಾನಿ ಸಮಾಜ ತೋರುತ್ತಿದ್ದ ಅಸಡ್ಡೆ, ಪಕ್ಷಪಾತ ಅವರನ್ನು ನೋಯಿಸುತ್ತಿತ್ತು. ಪಾಕಿಸ್ತಾನದಂತೆಯೇ ಭಾರತವು ಅಪಾಯಕಾರಿ ಹಿಂದುತ್ವದ ರಾಜಕೀಯದಲ್ಲಿ ಗ್ರಸ್ತವಾಗಿರುವುದನ್ನು ಟೀಕಿಸುತ್ತಾ ಆಕೆ ‘‘ತುಮ್ ಭಿ ಬಿಲ್ಕುಲ್ ಹಮ್ ಜೈಸೆ ಹಿ ನಿಕಲೆ’’..

ನೀನೂ ಥೇಟ್ ನಮ್ಮಂತೆಯೇ ಆಗಿಬಿಟ್ಟೆಯಲ್ಲೋ ಅಣ್ಣಾ / ಎಲ್ಲಡಗಿದ್ದೆ ಇಲ್ಲಿ ತನಕ / ಆ ಮೂರ್ಖತನ ಹುಂಬತನದಲ್ಲಿ ಶತಮಾನಗಳನೇ ಕಳೆದಿಯಲ್ಲೋ / ಥಕ ಥೈಕುಣಿತಿದೆ ಧರ್ಮದ ಪ್ರೇತ / ಕೇಕೆ ಹಾಕುತಿದೆ ಹಿಂದೂ ಕೆಂಭೂತ / ಬುದ್ಧಿ -ವಿವೇಚನೆ -ಪಾಂಡಿತ್ಯ ಹಾಳಾಗಲಿ / ತ್ರೇತಾಯುಗಕೇ ಮರಳಿರಿ ಇನ್ನು / ಆಹಾ ಹೆಮ್ಮೆಯ ಭಾರತವೇ / ನನ್ನ ವೈಭವದ ಭಾರತವೇ!! ‘‘ ಎಚ್ಚರಿಕೆಯ ಗಂಟೆಯಂತೆ ಈ ಕಟು ವಿಡಂಬನಾತ್ಮಕ ಕವಿತೆ ಬರೆದಾಗ ಆಕೆ ಹಿಂದೂ ಕೋಮುವಾದಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಒಮ್ಮೆ ಜೆಎನ್‌ಯುನಲ್ಲಿ ಈ ಕವಿತೆಯನ್ನು ಓದುತ್ತಿದ್ದಾಗ, ಸಭಿಕರಲ್ಲೊಬ್ಬರು ಆಕೆಯನ್ನು ಕೊಲ್ಲಲು ಗನ್ ಇಟ್ಟುಕೊಂಡಿದ್ದರಂತೆ. ಕತ್ತಿಯಲುಗಿನ ಸಂಘರ್ಷಮಯ ಬದುಕಿನಲ್ಲಿ ಫಹ್ಮಿದಾ ಕೂದಲೆಳೆಯಲ್ಲೇ ಗಲ್ಲು ಶಿಕ್ಷೆಯಿಂದ ಪಾರಾಗುತ್ತಾರೆ. ಕ್ರಾಂತಿಯ ನಂತರದ ಪಾಕಿಸ್ತಾನದಲ್ಲಿ ಚಿತ್ರಹಿಂಸೆ, ದಬ್ಬಾಳಿಕೆಯನ್ನು ಎದುರಿಸುತ್ತಿರುವ ಜನರ ಸಂಘರ್ಷಣೆಗೆ ದಿವ್ಯಪ್ರಜ್ಞೆಯಾಗುವ ಅವರ ಸಾಹಿತ್ಯ ರಾಷ್ಟ್ರೀಯ, ರಾಜಕೀಯ ಮತ್ತು ಸೈದ್ಧಾಂತಿಕ ನೆಲೆಗಳಲ್ಲಿ ಅನನ್ಯವಾದುದು. ಸ್ತ್ರೀವಾದವು ಅನೇಕ ವ್ಯಾಖ್ಯಾನಗಳನ್ನು ಹೊಂದಿದೆ ಎಂದು ಫಹ್ಮಿದಾ ಪ್ರತಿಪಾದಿಸುತ್ತಿದ್ದರು. ಇದರ ಅರ್ಥವೇನೆಂದರೆ, ಪುರುಷರಂತೆ ಮಹಿಳೆಯರು ಅಪರಿಮಿತ ಸಾಧ್ಯತೆಗಳನ್ನು ಹೊಂದಿರುವ ಸಂಪೂರ್ಣ ಮಾನವರು. ಅವರು ದಲಿತರು ಅಥವಾ ಕಪ್ಪು ಅಮೆರಿಕನ್ನರಂತೆ ಸಾಮಾಜಿಕ ಸಮಾನತೆಯನ್ನು ಹೊಂದಬೇಕು. ಮಹಿಳೆಯರ ವಿಷಯದಲ್ಲಿ ಸಮಾನತೆಯೆಂಬುದು ತುಂಬಾ ಸಂಕೀರ್ಣವಾಗಿದೆ. ನನ್ನ ಪ್ರಕಾರ, ಕಿರುಕುಳಕ್ಕೆ ಒಳಗಾಗದೆ ರಸ್ತೆಯಲ್ಲಿ ನಡೆಯುವ ಅಥವಾ ನೀತಿಗೆಟ್ಟವಳು. ಅನೈತಿಕ ಎಂದು ಪರಿಗಣಿಸದೆ ಗಂಡಿನಂತೆಯೇ ಹೆಣ್ಣಿಗೂ ಈಜುವ, ಪ್ರೇಮ ಕವಿತೆಯನ್ನು ಬರೆಯುವ ಹಕ್ಕಿದೆ. ತಾರತಮ್ಯವೆಂಬುದು ಅತ್ಯಂತ ಸ್ಪಷ್ಟ ಮತ್ತು ಅತ್ಯಂತ ಸೂಕ್ಷ್ಮ, ಅತ್ಯಂತ ಕ್ರೂರ ಮತ್ತು ಯಾವಾಗಲೂ ಅಮಾನವೀಯವಾದುದು’. ಗರ್ಭಿಣಿಯ ಸಂವೇದನೆ, ಅತೃಪ್ತ ಆಸೆಗಳು ಮತ್ತು ಅನೂರ್ಜಿತವಾದ ಪ್ರೇಮದ ಬಗ್ಗೆ ಬರೆದ ‘‘ಬದನ್ ದರೀದಾ’’ ಕವಿತೆ ಮಡಿವಂತ ಕರ್ಮಠರನ್ನು ಬೆಚ್ಚಿಬೀಳಿಸಿತ್ತು. ನೇಮಿಷ್ಟರ ಉರಿಗಣ್ಣ ಝಳದಲ್ಲಿ ಫಹ್ಮಿದಾ ಬೆಂದುಹೋಗುತ್ತಾರೆ. ಆಗ ತನ್ನ ಕೆಲಸವನ್ನು ತೊರೆದು ಅಜ್ಞಾತಳಾಗಿ ಯಾವುದೋ ಊರಿನ ಒಂದು ಕಾರ್ಖಾನೆಯಲ್ಲಿ ದುಡಿಯಬೇಕಾಯಿತು. ಫಹ್ಮಿದಾ ರಿಯಾಝ್ 22ನೇ ವರ್ಷದಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಬರೆದ ಮೊದಲ ಪ್ರೇಮ ಕವನ ಸಂಕಲನ ‘‘ಪತ್ಥರ್ ಕಿ ಜುಬಾನ್ ‘‘ (ಕಲ್ಲಿನ ನುಡಿ), ಹಾಗೂ ‘‘ಬದನ್ ದರೀದಾ’’ (ಛಿದ್ರಗೊಂಡ ದೇಹ) ಸಂಕಲನ ಉರ್ದು ಸಾಹಿತ್ಯಕ್ಕೆ ಹೊಸ ಆಯಾಮವನ್ನು ನೀಡಿದವು. ಫಹ್ಮಿದಾ ಸಮಾಜ ಪರಿವರ್ತನೆಗೆ ಪ್ರೇರಣೆಯಾಗಬಲ್ಲ ಕೃತಿಗಳನ್ನು ಬರೆದರು. ಸಮಾಜ ಸುಧಾರಕ ಮಜ್ಡಾಕ್‌ನ ಜೀವನ, ವೈಚಾರಿಕತೆ, ಆಸ್ತಿ -ಸಂಪತ್ತಿನ ಪುನರ್ವಿತರಣೆಯ ಬೋಧನೆಗಳನ್ನು ಆಧರಿಸಿ ಖಲಾ-ಏ-ಪರಾಮೋಶಿ (ಮರೆವುಗಳ ಕೋಟೆ) ಪುಸ್ತಕವನ್ನು ಬರೆದರು. ಸಂತಾಪ ಸೂಚಕ ಸಂಕಲ್ಪದಲ್ಲಿ ಹೀಗೆ ಬರೆದಿದ್ದಾರೆ: ಸತ್ತಾಗ ನಾನು ನಂಬಿಗಸ್ಥಳಾಗಿದ್ದೆನೆಂದು ಸಮರ್ಥಿಸಬೇಡಿ / ನಿಷ್ಠಾವಂತ ದೇಶಭಕ್ತಳೆಂದು ಘೋಷಿಸಬೇಡಿ / ಮೌಲವಿ ಸಮಾಧಿ ವಿಧಿಗಳನ್ನು ನಿರಾಕರಿಸಿದರೆ ನೋಯಬೇಡಿ / ದೇಹವನ್ನು ಕಾಡಿಗೆ ಎಸೆಯಿರಿ / ಪ್ರಾಣಿಗಳು ಮಾಂಸ, ಮೂಳೆ ಮತ್ತು ಗಟ್ಟಿ ಹೃದಯದ ಮೇಲೆ ಎರಗಿ ತಿನ್ನಬಹುದು / ನನ್ನ ವಿಚಾರಗಳೊಳಗೂ ಇಣುಕಲಾರವು ಅವು ಫಹ್ಮಿದಾ ರಿಯಾಝ್‌ಳನ್ನು ಸದಾಕಾಲ ತಿರಸ್ಕರಿಸಿದ ಪಾಕಿಸ್ತಾನದ ಸಾಹಿತ್ಯಿಕ ಲೋಕ ಅವಳ ಸಾವಿನಲ್ಲೂ ದೂರವೇ ಉಳಿಯಿತು. ಲಾಹೋರಿನಲ್ಲಿ ಅವಳ ಅಂತ್ಯ ಸಂಸ್ಕಾರಕ್ಕೆ ಬಂದವರು ಕೇವಲ ಮೂವರು ಬರಹಗಾರರು. ಜೊತೆಗೆ ಸಂಜೆ ಆಕಸ್ಮಿಕವಾಗಿ ನಮಾಝ್ ಸಲ್ಲಿಸಲು ಆಗಮಿಸಿದ್ದ ಒಂದಿಷ್ಟು ಅಪರಿಚಿತರು ಅಷ್ಟೇ....

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top