ಬಸವವಾದ | Vartha Bharati- ವಾರ್ತಾ ಭಾರತಿ

ಬಸವವಾದ

         ರಂಜಾನ್ ದರ್ಗಾ

ವಿಜಾನೀಹಿ ಆರ್ಯಾನ್ ಯೇ ಚ ದಸ್ಯವಃ

ಬರ್ಹಿಷ್ಮತೆ ರಂಧಯ ಶಾಸದವ್ರತಾನ್

ಶಾಕೀಭವ ಯಜಮಾನಸ್ಯ ಚೋದಿತಾ ವಿಶ್ವೇತ್ತಾ

ತೇ ಸದಮಾದೇಷು ಚಾಕನ ॥

- ಋಗ್ವೇದ 1ನೇ ಮಂಡಲ, 5ನೇ ಸೂಕ್ತ, 8ನೇ ಮಂತ್ರ

(ಆರ್ಯರನ್ನು ಮತ್ತು ದಸ್ಯುಗಳನ್ನು ಸರಿಯಾಗಿ ತಿಳಿ. ಯಜ್ಞಾದಿ ವ್ರತಗಳನ್ನು ಮಾಡದ ದಸ್ಯುಗಳನ್ನು ಶಿಕ್ಷಿಸು. ಯಜ್ಞದ ವೇಳೆ ದೇವತೆ ಗಳನ್ನು ಆಹ್ವಾನಿಸಲು ದರ್ಬೆಯ ಹುಲ್ಲನ್ನು ಹರಡಿರುವವರಿಗೆ (ಯಜ್ಞ ಮಾಡುವವರಿಗೆ) ಅವರು (ದಸ್ಯುಗಳು) ಅಧೀನರಾಗುವ ಹಾಗೆ ಮಾಡು. ಯಜ್ಞ ಮಾಡುವ ಯಜಮಾನನಿಗೆ ನೀನು ಪ್ರೋತ್ಸಾಹ ದಾಯಕನಾಗು. ನಿನ್ನ ಪೂರ್ವೋಕ್ತ ಕೃತ್ಯಗಳು ನನಗೆ ಆನಂದದಾಯಕ.)

ಧರ್ಮಸ್ಯ ಬ್ರಾಹ್ಮಣೋ ಮೂಲಂ

- ಮನುಸ್ಮತಿ 11ನೇ ಅಧ್ಯಾಯ, 83ನೇ ಶ್ಲೋಕ

(ಬ್ರಾಹ್ಮಣನು ಧರ್ಮದ ಮೂಲ)

‘ಬ್ರಾಹ್ಮಣಃ ಸಂಭವೇನೈವ ದೇವಾನಾಮಪಿ ದೈವತಂ

ಪ್ರಮಾಣಂ ಚೈವ ಲೋಕಸ್ಯ ಬ್ರಹ್ಮಾತ್ರೈವ ಹಿ ಕಾರಣಂ॥

- ಮನುಸ್ಮತಿ 11ನೇ ಅಧ್ಯಾಯ, 84ನೇ ಶ್ಲೋಕ

(ಬ್ರಾಹ್ಮಣನು ಹುಟ್ಟಿನಿಂದಲೇ ದೇವತೆಗಳಿಗೂ ದೇವತೆ ಯಾಗಿರುತ್ತಾನೆ. ಈ ಲೋಕದ ಧರ್ಮಸಾಧನೆಗೆ ಪ್ರತ್ಯಕ್ಷ ಪ್ರಮಾಣವೆಂದರೆ ಬ್ರಾಹ್ಮಣನೇ.)

ಭಾರತದ ಮೂಲನಿವಾಸಿಗಳ ಮೇಲೆ, ಹೊರಗಿನಿಂದ ಬಂದ ಆರ್ಯರು ಈ ತೆರನಾಗಿ ಭಯೋತ್ಪಾದನೆಯ ಕೃತ್ಯ ಗಳನ್ನು ಮಾಡುತ್ತಿದ್ದರು ಎನ್ನಲು ಋಗ್ವೇದದ ಮತ್ತು ಮನುಸ್ಮತಿಯ ಅನೇಕ ಮಂತ್ರಗಳು ಮತ್ತು ಶ್ಲೋಕಗಳು ಸಾಕ್ಷಿಯಾಗಿವೆ. ಋಗ್ವೇದ ದೈಹಿಕ ಗುಲಾಮಗಿರಿಗೆ ಮಾರ್ಗದರ್ಶಿಯಾದರೆ ಮನುಸ್ಮತಿ ಮಾನಸಿಕ ಗುಲಾಮಗಿರಿಗೆ ಮಾರ್ಗದರ್ಶಿಯಾಗಿದೆ. ಬಹು ಸಂಖ್ಯಾತ ಮೂಲನಿವಾಸಿಗಳನ್ನು ವೈದಿಕಶಾಹಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹತೋಟಿಯಲ್ಲಿ ಡುತ್ತ ಸಹಸ್ರಾರು ವರ್ಷಗಳಿಂದ ಸಾಮಾಜಿಕ ಮತ್ತು ಸಾಂಸ್ಕೃತಿಕ ನಿಯಂತ್ರಣ ವನ್ನು ಸಾಧಿಸಿದೆ. ರಾಜ್ಯಶಕ್ತಿಯ

ಮೇಲೆ ಅದರ ಹಿಡಿತ ಇಂದಿಗೂ ಇದೆ. ಈ ಹಿನ್ನೆಲೆಯಲ್ಲಿ ಅವೈದಿಕ ಬಸವವಾದವನ್ನು ಅರ್ಥೈಸಿಕೊಳ್ಳುವುದು ಕಾಲದ ಕರೆಯಾಗಿದೆ.

ವೈದಿಕಶಾಹಿಯ ಬಗ್ಗೆ ಮೊದಲಿಗೆ ಧ್ವನಿ ಎತ್ತಿದವರೆಂದರೆ ಚಾರ್ವಾಕರು ಎಂದು ಜನಪ್ರಿಯರಾಗಿದ್ದ ಲೋಕಾಯರು. ಚಾರ್ವಾಕರು ಎಂದರೆ ಸುಂದರವಾಗಿ ಮಾತನಾಡುವವರು. ಲೋಕಾಯತರು ಎಂದರೆ ಲೋಕಪ್ರಿಯರು. ನಾಸ್ತಿಕರಾಗಿದ್ದ ಇವರು ಸ್ವರ್ಗ ನರಕಗಳನ್ನು ನಂಬಲಿಲ್ಲ. ವೈದಿಕರ ಮಂತ್ರ ತಂತ್ರಗಳನ್ನು ತಿರಸ್ಕರಿಸಿದರು. ಮಾನವನ ಐಹಿಕ ಬದುಕು ಸುಂದರವಾಗಿರಬೇಕು ಎಂಬುದು ಅವರ ವಾದವಾಗಿತ್ತು. ಆದರೆ ವೈದಿಕಶಾಹಿ ವ್ಯವಸ್ಥೆಯಲ್ಲಿ ಸವರ್ಣೀಯರು ಮಾತ್ರ ಸುಖದಿಂದ ಇರುವಂಥ ಆರ್ಥಿಕ ವ್ಯವಸ್ಥೆಯನ್ನು ಧಾರ್ಮಿಕ ಕಟ್ಟಳೆಗಳ ಮೂಲಕ ನಿಯಂತ್ರಿಸಲಾಗಿತ್ತು. ಚಾತುರ್ವರ್ಣ ಪ್ರದ್ಧತಿಯ ಪ್ರಕಾರ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ವರ್ಣಗಳಾಗಿ ಸಮಾಜವನ್ನು ವಿಂಗಡಿಸಲಾಯಿತು. ಮೇಲಿನ ಮೂರೂ ವರ್ಣಗಳು ಸವರ್ಣೀಯ ವರ್ಣಗಳಾದರೆ ಶೂದ್ರವರ್ಣದವರು ಕೆಳಗಿನ ವರ್ಣಗಳಾಗಿ ಉಳಿದರು. ಅವರಲ್ಲಿನ ಬಂಡಾಯಗಾರರನ್ನು ಪಂಚಮರೆಂದು ಕರೆದು ಊರ ಹೊರಗೆ ಇಡಲಾಯಿತು. ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಅವರಿಗೆ ವಂಶಪಾರಂಪರ್ಯ ಈ ಅಸ್ಪಶ್ಯತೆಯ ಶಿಕ್ಷೆಯನ್ನು ವಿಧಿಸಲಾಯಿತು. ಸವರ್ಣೀಯ ಹೆಣ್ಣುಮಕ್ಕಳನ್ನು ಕೂಡ ಶೂದ್ರರ ಹಾಗೆ ನಡೆಸಿಕೊಳ್ಳಲಾಯಿತು. ಗಂಡ ಸತ್ತರೆ ಆತನ ಚಿತೆ ಏರಿ ಸಾಯುವಂಥ ಕಟ್ಟಳೆಯನ್ನು ವಿಧಿಸಲಾಯಿತು. ಇದೆಲ್ಲವನ್ನು ವಿರೋಧಿ ಸುತ್ತಿದ್ದ ಚಾರ್ವಾಕರನ್ನು ಕೊಲೆಗೈದು ಅವರ ಸಾಹಿತ್ಯವನ್ನು ಸುಟ್ಟು ಹಾಕಲಾಯಿತು. ನಂತರ ಬಂದ ಜೈನರು ಅವೈದಿಕ

ಜೀವನವಿಧಾನಕ್ಕೆ ಒತ್ತುಕೊಟ್ಟರು. ಆದರೆ ಮಹಾ ವೀರನ ನಂತರ 50 ವರ್ಷಗಳ ಅವಧಿಯಲ್ಲೇ ವೈದಿಕ ವ್ಯವಸ್ಥೆಯ ಜೊತೆ ಹೊಂದಾಣಿಕೆ ಮಾಡಿಕೊಂಡರು. ಈ ಹೊಂದಾಣಿಕೆ ಆದ ಸಂದರ್ಭದಲ್ಲೇ ಬುದ್ಧನ ಜನನವಾಯಿತು. ಆತನ ಅವೈದಿಕ ಸಿದ್ಧಾಂತ ಭಾರೀ ಪ್ರಭಾವಶಾಲಿಯಾಗಿ ಬೆಳೆಯಿತು. ಆತನದು ಮುಖ್ಯವಾಗಿ ಯಜ್ಞವಿರೋಧಿ ನಿಲುವಾಗಿತ್ತು.

ರಾಜರು ಯಜ್ಞಗಳನ್ನು ವರ್ಷಗಟ್ಟಲೆ ಮಾಡುತ್ತಿದ್ದರು. ವೈದಿಕರು ವರ್ಷಗಟ್ಟಲೆ ಅಲ್ಲೇ ಉಳಿದು ದಕ್ಷಿಣೆ ಪಡೆಯುತ್ತ, ಮಾಂಸದೂಟ ಸವಿಯುತ್ತ ಕೂಡುತ್ತಿದ್ದರು. ಇಂಥ ಒಂದು ಪ್ರಸಂಗ ಕಾಳಿದಾಸನ ಮೇಘದೂತ ಖಂಡಕಾವ್ಯದಲ್ಲಿ ಬರುತ್ತದೆ. ರಂತಿದೇವ ಎಂಬ ರಾಜನ ಯಜ್ಞಕ್ಕಾಗಿ ವೈದಿಕರು ಪ್ರತಿದಿನ ಪಶುಗಳನ್ನು ಕೊಂದು ಅವುಗಳ ಚರ್ಮವನ್ನು ರಾಶಿ ಹಾಕುತ್ತಿದ್ದರು. ವರ್ಷಗಟ್ಟಲೆ ನಡೆದ ಈ ಯಜ್ಞದ ಕೊನೆಯ ದಿನದ ಕೊನೆಯ ಗಳಿಗೆಯಲ್ಲಿ ಬಹು ದೂರದಿಂದ ವೈದಿಕರ ಗುಂಪೊಂದು ಬಂದಿತು. ಆಗ ಮಾಂಸದ ತುಂಡುಗಳು ಖಾಲಿಯಾಗಿ ಬರಿ ಸೂಪ್ (ಸಂಸ್ಕೃತದ ಈ ಸೂಪ್ ಇಂಗ್ಲಿಷ್ ಭಾಷೆ ಸೇರಿದೆ) ಮಾತ್ರ ಉಳಿದಿತ್ತು. ಇದರಿಂದ ಕೆಂಡಾಮಂಡಲವಾದ ವೈದಿಕರು ರಂತಿದೇವನಿಗೆ ಶಾಪ ಕೊಡಲು ಮುಂದಾದರು. ಆಗ ಭಯಭೀತನಾದ ರಂತಿದೇವ ‘ತಾವು ತಡಮಾಡಿ ಬಂದಿದ್ದೀರಿ. ಈ ದೀರ್ಘಕಾಲದ ಯಜ್ಞದಲ್ಲಿ ಅದೆಷ್ಟು ಪಶುಗಳ ಬಲಿ ಕೊಡಲಾಗಿದೆ ಎಂಬುದಕ್ಕೆ ಈ ಚರ್ಮಗಳ ರಾಶಿಯನ್ನು ನೋಡಿರಿ. ಇವುಗಳ ರಕ್ತದಿಂದಲೇ ಹರಿಯುತ್ತಿರುವ ನದಿಯನ್ನು ನೋಡಿರಿ. ಇದು ಚರ್ಮಣ್ವತಿ ನದಿ ಎಂದು ಹೆಸರು ಪಡೆದಿದೆ’ ಎಂದು ಮನವಿ ಮಾಡಿದ. (ಆ ಚರ್ಮಣ್ವತಿ ನದಿಯೇ ಇಂದಿನ ಚಂಬಲ್ ನದಿ)

ಈ ರಾಜರು ಇಷ್ಟೊಂದು ಪಶುಗಳನ್ನು ಎಲ್ಲಿಂದ ತರುತ್ತಿದ್ದರು ಎಂಬುದಕ್ಕೆ ಧರ್ಮಾನಂದ ಕೋಸಂಬಿಯವರ ‘ಭಗವಾನ ಬುದ್ಧ’ ಗ್ರಂಥದಲ್ಲಿ ಮಾಹಿತಿ ದೊರೆಯುತ್ತದೆ. ರಾಜರು, ಶ್ರೀಮಂತರು ಮತ್ತು ವೈದಿಕರು ಯಜ್ಞಕ್ಕಾಗಿ ರೈತರ ಸಾಕು ಪ್ರಾಣಿ ಗಳನ್ನು ಯಾವುದೇ ಹಣ ಕೊಡದೆ ತರುತ್ತಿದ್ದರು. ರೈತಾಪಿ ಜನರಿಗೆ ದನವೇ ಧನವಾಗಿತ್ತು. (ದನ ಎಂಬುದು ಧನದಿಂದ ಬಂದಿದೆ. ದನವೇ ಧನ. ಇಂಗ್ಲಿಷ್‌ನಲ್ಲಿ ಕ್ಯಾಟಲ್‌ನಿಂದ ಕ್ಯಾಪಿಟಲ್ ಬಂದಿದೆ.) ಆದ್ದರಿಂದ ರಾಜ ಮುಂತಾದ ಬಲಾಢ್ಯರು ಮಹಾಯಜ್ಞ ಆರಂಭಿಸಿದರೆ ರೈತಾಪಿ ಜನ ಒಬ್ಬರಿಗೊಬ್ಬರು ತಬ್ಬಿಕೊಂಡು ಅಳುತ್ತಿದ್ದರು. ರೈತರು ತಮ್ಮ ದನಗಳನ್ನು ಯಜ್ಞಕ್ಕೆ ಬಲಿಪಶುಗಳಾಗಿ ಕೊಡದಿದ್ದಾಗ ಅವರ ಮೇಲೆ ಹಲ್ಲೆ ಮಾಡಿ ತೆಗೆದುಕೊಂಡು ಹೋಗುತ್ತಿದ್ದರು! ದೀರ್ಘ ಕಾಲದ ಆ ಮಹಾಯಜ್ಞಕ್ಕೆ ಬೇಕಾದ ಬಲಿಪಶುಗಳನ್ನು ಸೈನಿಕರು ಬಂದು ಕಂಡ ಕಂಡ ರೈತರ ಮನೆಗಳ ಮುಂದೆ ಕಟ್ಟಿದ ಪಶುಗಳನ್ನು ಹೊಡೆದುಕೊಂಡು ಹೋಗುತ್ತಿದ್ದರು. ಹಾಗೆ ದನಗಳನ್ನು ಹೊಡೆದುಕೊಂಡು ಹೋಗುವುದನ್ನು ಬುದ್ಧ ಗಮನಿಸಿದ್ದರಿಂದಲೇ ಯಜ್ಞಹಿಂಸೆ ಯನ್ನು ತಡೆಯಲು ನಿರ್ಧರಿಸಿದ. ದೊಡ್ಡವರ ಯಜ್ಞ ಕ್ಕ್ಕಾಗಿ ತಮ್ಮ ದನಕರುಗಳನ್ನು ಪುಕ್ಕಟೆ ಕೊಡಬೇಕಾಗಿ ಬಂದದ್ದರಿಂದಲೇ ಬಡವರು ಮತ್ತು ರೈತಾಪಿ ಜನರು ಸಹಜವಾಗಿಯೆ ಯಜ್ಞವಿರೋಧಿಯಾಗಿದ್ದರು. ಜನ ಬೆಂಬಲವಿದ್ದ ಕಾರಣದಿಂದಲೇ ಬುದ್ಧನ ಯಜ್ಞವಿರೋಧಿ ನಿಲುವಿಗೆ ಮಾನ್ಯತೆ ದೊರೆಯಿತು.

 ಮಹಾ ಮೇಧಾವಿ ಧರ್ಮಾನಂದ ಕೋಸಂಬೀ ಅವರು ಮರಾಠಿಯಲ್ಲಿ ರಚಿಸಿದ ಭಗವಾನ್ ಬುದ್ಧ ಗ್ರಂಥ ವನ್ನು ಆದ್ಯ ರಂಗಾಚಾರ್ಯ (ಶ್ರೀರಂಗ)ರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡಮಿ ಈ ಅನುವಾದ ಗ್ರಂಥವನ್ನು 1956 ರಲ್ಲಿ ಪ್ರಕಟಿಸಿದೆ. ಆ ಗ್ರಂಥದ ಯಜ್ಞ ಯಾಗ ಅಧ್ಯಾಯದಲ್ಲಿನ ‘ಜನರಿಗೆ

ಗೋ ಹಿಂಸೆ ಬೇಕಿದ್ದಿಲ್ಲ’ ಎಂಬ ಉಪಶೀರ್ಷಿಕೆಯಲ್ಲಿ ಕೆಳಗಿನ ವಿಚಾರ ವ್ಯಕ್ತವಾಗಿದೆ. ‘ಈ ದಾಸ, ದೂತ ಮತ್ತು ಆಳುಗಳು ಯಜ್ಞದ ಕೆಲಸಗಳನ್ನು ಅಳುತ್ತ ಅಳುತ್ತ ಯಾಕೆ ಮಾಡುತ್ತಿರಬಹುದಾಗಿದೆ? ಯಾಕೆಂದರೆ ಈ ಯಜ್ಞದಲ್ಲಿ ದನಗಳನ್ನು ಕೊಲ್ಲಲಾಗುತ್ತಿತ್ತು. ಅದನ್ನು ಬಡ ರೈತರಿಂದ ಕಸಿದು ಕೊಳ್ಳಲಾಗುತ್ತಿತ್ತು. ಅದಕ್ಕಾಗಿ ರೈತರಿಗೆ ಬಹಳ ಕೆಡುಕೆನಿಸುತ್ತಿತ್ತು.

 ರಾಜರು ಮತ್ತು ಶ್ರೀಮಂತ ಜನರು ಸ್ವಂತ ತಮ್ಮ ಹಸುಗಳನ್ನೇ ಕೊಲ್ಲುತ್ತಿದ್ದರೆ ದಾಸರೂ ಆಳುಗಳೂ ಅಳುವ ಪ್ರಸಂಗಗಳು ಕಡಿಮೆ ಪ್ರಮಾಣದಲ್ಲಿ ಬರಬಹುದಾಗಿತ್ತು. ಆದರೆ ಈ ದನಗಳನ್ನು ತಮ್ಮಂತಹ ಬಡ ರೈತರ ಮೇಲೆ ಒತ್ತಾಯ ಮಾಡಿ ಕಸಿದುಕೊಳ್ಳುತ್ತಿದ್ದುದಕ್ಕಾಗಿ ಅವರಿಗೆ ಹೇಳದಷ್ಟು ದುಃಖವಾಗುವುದು ಸಹಜವಾಗಿದೆ.

 ಯಜ್ಞಯಾಗದಂತೆ ಉದರ ನಿರ್ವಾಹದ ಸಲು ವಾಗಿಯೂ ಆ ಕಾಲದಲ್ಲಿ ಅನೇಕ ಪ್ರಾಣಿಗಳು ಕೊಲ್ಲಲ್ಪ ಡುತ್ತಿದ್ದವು. ಹಸುವನ್ನು ವಧಿಸಿ ಅದರ ಮಾಂಸವನ್ನು ಕೂಟದಾರಿಯಲ್ಲಿ ಮಾರುವ ರೂಢಿ ಹೆಚ್ಚಾಗಿತ್ತು. (ಈ ಮಾತು ಸತಿ ಪಟ್ಠಾನ ಸುತ್ತದಲ್ಲಿ ಬರುತ್ತದೆ) ಬುದ್ಧನು ಯಜ್ಞ ಯಾಗವನ್ನು ನಿಷೇಧಿಸಿದಷ್ಟು ಈ ಕೃತ್ಯಗಳನ್ನು ಬೇರೆಯಾರೂ ನಿಷೇಧಿಸಿದಂತೆ ಕಾಣುವುದಿಲ್ಲ. ಕೂಟದಾರಿಯಲ್ಲಿ ಮಾಂಸವನ್ನು ಮಾರುವ ಪದ್ಧತಿ ಬುದ್ಧನಿಗೆ ಸರಿಬರುತ್ತಿತ್ತು ಎಂದು ತಿಳಿಯಬಾರದು. ಆದರೆ ಒಂದು ಯಜ್ಞಯಾಗದ ಮುಂದೆ ಅದಕ್ಕೆ ಏನೂ ಬೆಲೆ ಇರಲಿಲ್ಲ. ಕಟುಕನ ಕೈಗೆ ಬಿದ್ದ ಹಸು ಹಾಲನ್ನು ಕೊಡುತ್ತಿರಲಿಲ್ಲ. ಎತ್ತು ವ್ಯವಸಾಯಕ್ಕೆ ನಿರುಪಯೋಗದ್ದಿರುತ್ತಿತ್ತು. ಅದಕ್ಕಾಗಿ ಯಾರೂ ಕಣ್ಣೀರನ್ನು ಸುರಿಸುತ್ತಿರಲಿಲ್ಲ. ಯಜ್ಞದ ಮಾತು ಬೇರೆಯಾಗಿದ್ದಿತು. ಅಯ್ನೂರು ಇಲ್ಲವೆ ಏಳುನೂರು ಮಣಕಗಳನ್ನು, ಇಲ್ಲವೆ ಹೋರಿಗಳನ್ನು ಒಂದು ಯಜ್ಞದಲ್ಲಿ ವಧಿಸುವುದೆಂದರೆ ಒಕ್ಕಲುತನ್ನಕ್ಕೆ ಹಾನಿ ಎಷ್ಟಾಗುತ್ತಿರಬೇಕು? ಆ ಬಗ್ಗೆ ರೈತರು ಎಷ್ಟು ದುಃಖಿತರಾಗುತ್ತಿದ್ದರು ಎಂಬುದನ್ನು ಕಲ್ಪನೆಯಲ್ಲಿ ಮಾತ್ರವೇ ತಿಳಿಯಬೇಕು! ಇಂತಹ ಬಲುಮೆಯನ್ನು ಬುದ್ಧನು ನಿಷೇಧಿಸಿದರೆ ಅವನಿಗೆ ವೇದನಿಂದಕ ಎಂದು ಯಾಕೆ ಹೇಳಬೇಕು?’

 ಇದೇ ಅಧ್ಯಾಯದ ‘ಯಜ್ಞವು ಪಾಪವೇಕೆ?’ ಎಂಬ ಉಪಶೀರ್ಷಿಕೆಯಲ್ಲಿ ಬುದ್ಧನು ಶ್ರಾವಸ್ತಿಯ ಜೇತವನದ ಅನಾಥಪಿಂಡಿಕಾರಾಮದಲ್ಲಿ ಇದ್ದಾಗ ಉದ್ಗತಶರೀರ ಎಂಬ ಬ್ರಾಹ್ಮಣ ಮಹಾಯಜ್ಞದ ಸಿದ್ಧತೆ ನಡೆಸಿದ್ದ. ಬುದ್ಧನು ಯಜ್ಞಹಿಂಸೆಯ ಕುರಿತು ತಿಳಿಹೇಳಿದ ಮೇಲೆ ಆತ ಹೀಗೆ ನುಡಿಯುತ್ತಾನೆ.

‘ಬೋ ಗೋತಮಾ ನಾನು ಯೂಪಸ್ತಂಭಗಳಿಗೆ ಕಟ್ಟಿದ್ದ ಬಡ ರೈತರ ಅಯ್ನೂರು ಎತ್ತುಗಳನ್ನು, ಅಯ್ನೂರು ಹೋರಿಗಳನ್ನು, ಅಯ್ನೂರು ಮಣಕಗಳನ್ನು, ಅಯ್ನೂರು ಕುರಿ ಮತ್ತು ಅಯ್ನೂರು ಆಡುಗಳನ್ನು - ಎಲ್ಲ ಪ್ರಾಣಿಗಳನ್ನು ಯೂಪದಿಂದ ಬಿಚ್ಚಿ ಬಿಡುವೆ. ಅವಕ್ಕೆ ಜೀವದಾನ ಕೊಡುವೆ. ಹಚ್ಚನ್ನ ಹುಲ್ಲನ್ನು ಮೇಯ್ದು, ತಣ್ಣೀರನ್ನು ಕುಡಿದು ಶೀತಲ ಛಾಯೆಯಲ್ಲಿ ಅವು ಆನಂದದಿಂದಿರಲಿ’.

 ‘ಹಿಂದೂ ಧರ್ಮಶಾಸ್ತ್ರಕ್ಕೆ ಬುನಾದಿಯಾಗಿರುವ ಮನುಸ್ಮತಿಯ ವಸ್ತುನಿಷ್ಠ ಸಮಗ್ರ ಅನುವಾದ’ ಎಂದು ಹೇಳಿಕೊಂಡ ದಿವಂಗತ ಶೇಷ ನವರತ್ನ ಅವರು ಮನುಸ್ಮತಿ ಯ ಅನುವಾದವನ್ನು ನಿಜವಾಗಿಯೂ ನಿಷ್ಪಕ್ಷಪಾತಿಯಾಗಿ ಮಾಡಿದ್ದಾರೆ. ಮನು ಎಷ್ಟೊಂದು ಪಕ್ಷಪಾತಿ ಎಂಬುದಕ್ಕೆ ಆತನ ಮನುಸ್ಮತಿ ಗ್ರಂಥ ಸಾಕ್ಷಿಯಾಗಿದೆ.

 ಮೇಲಿನ ಮೂರೂ ವರ್ಣದವರು ಮಾತ್ರ ಶುದ್ಧ ಮಾಂಸ ಭಕ್ಷಣೆ ಮಾಡಬೇಕು; ಶೂದ್ರರು ಮತ್ತು ಅತಿಶೂದ್ರರಿಗೆ ಇಂಥ ಮಾಂಸಾಹಾರ ಸೇವನೆಗೆ ಅವಕಾಶವಿರಬಾರದು ಎಂಬ ಕುತಂತ್ರದಿಂದ ಮನು ಅನೇಕ ಶ್ಲೋಕಗಳನ್ನು ರಚಿಸಿದ್ದಾನೆ. ‘ಯಜ್ಞಹಿಂಸೆ ಎಂಬುದು ಹಿಂಸೆ ಅಲ್ಲ’ ಎಂಬುದು ಅವನ ವಾದವಾಗಿದೆ. ಆದರೆ ‘ಶೂದ್ರರು ಪ್ರಾಣಿಹಿಂಸೆ ಮಾಡಬಾರದು’ ಎಂದು ಉಪದೇಶಿಸುತ್ತಾನೆ. ವೈದಿಕರು ಪ್ರಾಣಿಗಳನ್ನು ಯಜ್ಞದಲ್ಲಿ ಕೊಲ್ಲುವುದು ಧರ್ಮಸಮ್ಮತ. ಆದರೆ ಶೂದ್ರರು ಪ್ರಾಣಿವಧೆ ಮಾಡುವುದು ಧರ್ಮಬಾಹಿರ ಎಂದು ಎಚ್ಚರಿಸುತ್ತಾನೆ.

 ಆಹಾರ ಸಂಸ್ಕೃತಿಯ ಮೇಲೆ ಪ್ರತಿಬಂಧ ಹೇರುವ ಕೆಳಗಿನ ಶ್ಲೋಕಗಳು ಮನುವಿನ ವರ್ಣಭೇದ ನೀತಿಗೆ ಕನ್ನಡಿ ಹಿಡಿಯುತ್ತವೆ.

ಪ್ರಾಣಸ್ಯಾನ್ನಮಿದಂ ಸರ್ವಂ ಪ್ರಜಾಪತಿರಕಲ್ಪಯತ್

ಸ್ವಾವರಂ ಜಂಗಮಂ ಚೈವ ಸರ್ವಂ ಪ್ರಾಣಸ್ಯ ಬೋಜನಂ ॥

- ಮನುಸ್ಮತಿ ಅಧ್ಯಾಯ 5 ಶ್ಲೋಕ 28

(ಈ ಜಗತ್ತಿನಲ್ಲಿರುವ ಸಮಸ್ತ ಸ್ಥಾವರ ಜಂಗಮ ಜೀವಜಂತುಗಳನ್ನು, ಚರಾಚರ ವಸ್ತುಗಳನ್ನು ತಿನ್ನಲಿಕ್ಕೆಂದೇ ಪರಮಾತ್ಮನು ಸೃಷ್ಟಿಸಿದ್ದಾನೆ.)

ಚರಣಾಮನ್ನಮಚರಾ ದಂಷ್ಟ್ರಿಣಾಮಪ್ಯದಂಷ್ಟ್ರಿಣಃ

ಅಹಸ್ತಾಶ್ಚ ಸಹಸ್ತಾನಾಂ ಶೂರಾಣಾಂ ಚೈವ ಭೀರವಃ ॥

- ಮನುಸ್ಮತಿ ಅಧ್ಯಾಯ 5 ಶ್ಲೋಕ 29

(ಚಲಿಸುವ ಪಶುಪ್ರಾಣಿಗಳಿಗೆ ಚಲಿಸದಿರುವ ಹುಲ್ಲು ಸಸ್ಯಗಳು ಆಹಾರ. ಕೋರೆದಾಡೆಗಳಿರುವ ಸಿಂಹ ಹುಲಿಗಳಿಗೆ ಕೋರೆದಾಡೆಗಳಿರದ ಜಿಂಕೆ ಇತ್ಯಾದಿಗಳು ಆಹಾರ. ಕೈಗಳಿರುವ ಮನುಷ್ಯರಿಗೆ ಕೈಗಳಿಲ್ಲದ ಪಶು ಪ್ರಾಣಿಗಳು ಆಹಾರ. ಶೂರವಾದ ಕ್ರೂರವಾದ ಪ್ರಾಣಿಗಳಿಗೆ ಸಾಧುವಾದ ಭೀರುವಾದ ಪ್ರಾಣಿಗಳು ಆಹಾರ.)

ಮಧುಪರ್ಕೇ ಚ ಯಜ್ಞೇ ಚ ಪಿತೃದೈವತ ಕರ್ಮಣಿ

ಅತ್ರೈವ ಪಶವೋ ಹಿಂಸ್ಯಾ ನಾನ್ಯತ್ರೇತ್ಯಬ್ರ ವೀನ್ಮನುಃ ॥

- ಮನುಸ್ಮತಿ ಅಧ್ಯಾಯ 5 ಶ್ಲೋಕ 41

(ಮಧುಪರ್ಕದಲ್ಲಿ, ಯಜ್ಞದಲ್ಲಿ, ದೇವ-ಪಿತೃ ಕರ್ಮಗಳಲ್ಲಿ ಮಾತ್ರ ಪಶುಗಳನ್ನು ಕೊಲ್ಲಬೇಕೇ ಹೊರತಾಗಿ ಬೇರೆ ಸಂದರ್ಭಗಳಲ್ಲಿ ಪಶುಹಿಂಸೆ ಸಲ್ಲದು ಎಂದು ಮನುವು ಹೇಳಿದ್ದಾನೆ.)

ಏಷ್ವರ್ಧೇಷು ಪಶೂನ್ ಹಿಂಸನ್ ವೇದತತ್ತ್ವಾರ್ಥವಿದ್ವಜಃ

ಆತ್ಮಾನಂ ಚ ಪಶುಂ ಚೈವ ಗಮಯತ್ಯುತ್ತಮಾಂ ಗತಿಂ ॥

- ಮನುಸ್ಮತಿ ಅಧ್ಯಾಯ 5 ಶ್ಲೋಕ 42

(ಹೀಗೆ ಯಜ್ಞ, ಶ್ರಾದ್ಧ ಹಾಗೂ ಮಧುಪರ್ಕ ಮುಂತಾದ ಕಾರ್ಯಗಳಿಗಾಗಿ ಮಾತ್ರ ವೇದಜ್ಞನಾದ ಬ್ರಾಹ್ಮಣನು ಪಶುವನ್ನು ಕೊಂದರೆ ತನ್ನ ಜೊತೆಗೆ ಆ ಪಶುವಿಗೂ ಉತ್ತಮ ಗತಿಯನ್ನುಂಟುಮಾಡುತ್ತಾನೆ.)

ಯಾ ವೇದ ವಿಹಿತಾ ಹಿಂಸಾ ನಿಯತಾಸ್ಮಿಂಶ್ಚರಾಚರೇ

ಅಹಿಂಸಾಮೇವ ತಾಂ ವಿದ್ಯಾದ್ವೇದಾದ್ಧರ್ಮೋ ಹಿ ನಿರ್ಬಬೌ ॥

-ಮನುಸ್ಮತಿ ಅಧ್ಯಾಯ 5 ಶ್ಲೋಕ 44

(ವೇದವಿಹತವಾದ ಎಂದರೆ ವೇದಗಳಲ್ಲಿ ಯಜ್ಞಗಳಲ್ಲಿ ಹೇಳಿದ ಹಿಂಸೆಯು ಶಾಸ್ತ್ರನಿಯಮ ರೀತಾ ನಡೆಯುವು ದರಿಂದ ಅದನ್ನು ಅಹಿಂಸೆಯೆಂದೇ ಪರಿಗಣಿಸಬೇಕು. ಏಕೆಂದರೆ ವೇದಗಳಿಂದಲೇ ಧರ್ಮ ಹುಟ್ಟಿದೆ.)

ಯಜ್ಞಾಯ ಜಗ್ಧಿರ್ಮಾಂಸಸ್ಯೇತ್ಯೇಷ ದೈವೋ ವಿಧಿಃ ಸ್ಮತಃ

ಅತೋ ನ್ಯಥಾ ಪ್ರವೃತ್ತಿಸ್ತು ರಾಕ್ಷಸೋ ವಿಧಿರುಚ್ಯತೇ ॥

- ಮನುಸ್ಮತಿ ಅಧ್ಯಾಯ 5 ಶ್ಲೋಕ 31

(ಯಜ್ಞಕ್ಕಾಗಿ ಪಶುವನ್ನು ಕೊಂದು ಮಾಡಿದ ಮಾಂಸಭಕ್ಷಣವು ‘ದೈವಿಕರೀತಿ’ ಎಂದು ಹೇಳಲ್ಪಟ್ಟಿದೆ. ಇದಕ್ಕೆ ವಿರುದ್ಧವಾಗಿ ಅನ್ಯಸಂದರ್ಭಗಳಲ್ಲಿ ಮಾಡುವ ಅಕಾರಣ ಪಶುವಧೆ ಮತ್ತು ಮಾಂಸಭಕ್ಷಣವು ‘ರಾಕ್ಷಸರೀತಿ’ ಎಂದು ಹೇಳಲ್ಪಟ್ಟಿದೆ.)

ವೇದ ಪ್ರಮಾಣವಾದ ಮನುಸ್ಮತಿಯ ಪ್ರಕಾರ ಶೂದ್ರರಿಗೆ ಯಜ್ಞ ಮಾಡುವ ಹಕ್ಕಿಲ್ಲ. ಆದ್ದರಿಂದ ಅವರು ಪ್ರಾಣಿಹಿಂಸೆ ಮಾಡುವ ಹಾಗಿಲ್ಲ. (ಏನಿದ್ದರೂ ಅವರು ಸತ್ತದ್ದನ್ನೇ ತಿನ್ನಬೇಕು.) ಶೂದ್ರರು ಆಹಾರಕ್ಕಾಗಿ ಪ್ರಾಣಿವಧೆ ಮಾಡಿದರೆ ಅದು ರಾಕ್ಷಸೀ ಕೃತ್ಯ. ಸವರ್ಣೀಯರು ಯಜ್ಞದಲ್ಲಿ ಪ್ರಾಣಿಗಳನ್ನು ಕೊಂದು ತಿಂದರೆ ಅದು ದೈವಿಕರೀತಿ. ದೇವಮಾರ್ಗದಲ್ಲಿ ಪ್ರಾಣಿಗಳನ್ನು ಕೊಲ್ಲುವ ಹಕ್ಕು ವೈದಿಕರಿಗೆ ಮಾತ್ರ ಇದೆ. ಶೂದ್ರರಿಗೆ ಪ್ರಾಣಿಗಳನ್ನು ಆಹಾರವಾಗಿಸುವ ಹಕ್ಕಿಲ್ಲ. ಹೇಗಿದೆ ಮನುಧರ್ಮ ನ್ಯಾಯ?

‘ನುಡಿ ಲೇಸು ನಡೆ ಅಧಮವಾದಲ್ಲಿ ಬಿಡಿಸಲಾಗದ ಹೊಲೆ’ ಎಂದು ಮಾದಾರ ಚೆನ್ನಯ್ಯನವರು ಹೇಳುತ್ತಾರೆ. ಮನುವಾದಿಗಳು ಬಿಡಿಸಲಾಗದ ಹೊಲೆಯಲ್ಲಿ ಒದ್ದಾಡುತ್ತಿದ್ದಾರೆ. ಹೊಲಗೇರಿಯಲ್ಲಿರುವವರು ಹೊಲೆಯರಲ್ಲ ಮನುವಾದಿಗಳೇ ಹೊಲೆಯರು ಎಂಬುದನ್ನು ಶರಣರು 12ನೇ ಶತಮಾನದಲ್ಲೇ ತೋರಿಸಿಕೊಟ್ಟಿದ್ದಾರೆ. ‘ಬೆಟ್ಟದ ಲಿಂಗವ ಹಿರಿದು ಮಾಡಿ ತನ್ನ ಇಷ್ಟಲಿಂಗವ ಕಿರಿದು ಮಾಡುವ ಮೂಳ ಹೊಲೆಯರಿರಾ’ ಎಂದು ಅಂಬಿಗರ ಚೌಡಯ್ಯನವರು ಲಿಂಗವಂತರಾದ ಮೇಲೆ ಕೂಡ ಸ್ಥಾವರಲಿಂಗಕ್ಕೆ ಎರಗುವವರನ್ನು ಟೀಕಿಸಿದ್ದಾರೆ. ‘ಊರೊಳಗಣ ಹೊಲೆಯ, ಊರ ಹೊರಗಣ ಕುಲಜ’ ಎಂದು ಬಾಲಸಂಗಣ್ಣ ಅಸ್ಪಶ್ಯರನ್ನು ಎತ್ತಿ ಹಿಡಿದಿದ್ದಾರೆ. ‘ಸತ್ತುದನೆಳವನೆತ್ತಣ ಹೊಲೆಯ ಹೊತ್ತು ತಂದು ನೀವು ಕೊಲುವಿರಿ’ ಎಂದು ಬಸವಣ್ಣನವರು ವೈದಿಕರಿಗೆ ಎಚ್ಚರಿಸಿದ್ದಾರೆ. ‘ಬಸವಣ್ಣನ ಮನದ ಕೊನೆಯ ಮೊನೆಯ ಮೇಲೆ ಹೊಲೆಯಿದ್ದಿತ್ತಾಗಿ ಜಿನನಿಲ್ಲ’ ಎಂದು ಸಕಳೇಶ ಮಾದರಸ ತಿಳಿಸುತ್ತಾರೆ. ‘ಅನೀತಿ ದೇವರುಗಳ ಎಡೆಯ ತಿನ್ನುವಂತಹ ಮಾದಿಗರು ನೀವು ಕೇಳಿರೊ’ ಎಂದು ಅಂಬಿಗರ ಚೌಡಯ್ಯನವರು ಹೇಳುತ್ತಾರೆ. ‘ಚತುರ್ವೇದಿಯಾದಡೇನು ಲಿಂಗವಿಲ್ಲದವನೆ ಹೊಲೆಯ’ ಎಂದು ಬಸವಣ್ಣನವರು ಸ್ಪಷ್ಟಪಡಿಸುತ್ತಾರೆ.

‘ಹೊಲೆಯರ ಬಾವಿಯಲೊಂದು ಎಲು ನಟ್ಟಿದ್ದಡೆ

ಹೊಲೆಯೆಂಬುದು ಲೋಕವೆಲ್ಲ.

ಹಲವೆಲುವಿದ್ದ ಬಾಯಿ ಒಲವರ ಪಕ್ಷಪಾತಿಯಾಗಿ ನುಡಿದಡೆ

ಹೊಲೆಯರ ಬಾವಿಯಿಂದ ಕರಕಷ್ಟ ಕಾಣಾ ರಾಮನಾಥ.’ ಎಂದು ಜೇಡರ ದಾಸಿಮಯ್ಯನವರು ಮಾನಸಿಕವಾಗಿ ಕೀಳಾದವರ ಕುರಿತು ತಿಳಿಸುತ್ತಾರೆ.

‘ಹೊಲೆಯ ಹೊಲೆಯನೆಂದು ಹೊರಗಿರು ಎಂದೆಂಬರು

ಹೊಲೆಯನೆಂತವನಯ್ಯ?

ತನ್ನ ಹೊಲೆಯ ತಾನರಿಯದೆ

ಮುನ್ನಿನವರ ಹೊಲೆಯನರಸುವ

ಭ್ರಷ್ಟರಿಗೆ ಏನೆಂಬೆನಯ್ಯ

ಮಹಾದಾನಿ ಕೂಡಲಚೆನ್ನಸಂಗಮದೇವಾ’

ಎಂದು ಚೆನ್ನಬಸವಣ್ಣನವರು ಸವರ್ಣೀಯರ ಮಾನಸಿಕ ಭ್ರಷ್ಟತೆಯನ್ನು ಎತ್ತಿ ತೋರಿಸುತ್ತಾರೆ.

 ಹೀಗೆ ವಚನಕಾರರು ಬರಿ ದಾರ್ಶನಿಕರಾಗಿರದೆ ಅರ್ಥ, ಸಮಾಜ, ಭಾಷಾ ಮತ್ತು ಮನೋವಿಜ್ಞಾನಿಗಳೂ ಆಗಿದ್ದರು. ಕಾಳೀದಾಸ ಹೇಳುವಂತೆ ಶಬ್ದ ಮತ್ತು ಅರ್ಥಗಳ ಸಂಬಂಧ ಪಾರ್ವತೀಪರಮೇಶ್ವರರ ಹಾಗೆ ಇಲ್ಲ. ಶಬ್ದವೆಂಬ ಪರಮೇಶ್ವರನಿಗೆ ಅರ್ಥಗಳೆಂಬ ಅನೇಕ ಪಾರ್ವತಿಯರಿದ್ದಾರೆ. ಶರಣರ ಪ್ರಕಾರ ಶಬ್ದವು ಅನೇಕ ಅರ್ಥಗಳನ್ನು ಆಯಾ ಕಾಲದ, ಪರಿಸರದ ಮತ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿವಿಧಾರ್ಥಗಳನ್ನು ಸ್ಫುರಿಸುತ್ತಲೇ ಇರುತ್ತದೆ. ಒಂದೇ ಶಬ್ದ ವಿವಿಧ ವಚನಗಳಲ್ಲಿ ವಿವಿಧ ಅರ್ಥಗಳನ್ನು ಧ್ವನಿಸುವ ರೀತಿಯಲ್ಲಿ ವಚನಕಾರರು ಶಬ್ದಗಳ ಪ್ರಯೋಗ ಮಾಡಿದ್ದಾರೆ. ಅವು ಬರಿ ಶಬ್ದಾರ್ಥಕ್ಕೆ ಮಾತ್ರ ಸೀಮಿತವಾಗದೆ ಲಕ್ಷಣಾರ್ಥ, ಧನ್ಯರ್ಥ ಮತ್ತು ತತ್ತ್ವಾರ್ಥಗಳನ್ನು ಒಳಗೊಂಡಿವೆ.

 ಶರಣರು ಹೊಲೆ ಮಾದಿಗ ಶಬ್ದಗಳನ್ನು ಬಳಸಿದ ಕ್ರಮ ವಿನೋತನವಾಗಿದೆ. ಆ ಬಳಕೆಯ ಹಿಂದೆ ಸಾಮಾಜಿಕ ನ್ಯಾಯವಿದೆ. ಶಬ್ದಗಳನ್ನು ಲೀಲಾಜಾಲವಾಗಿ ಬಳಸುವ ಸೃಜನಶೀಲತೆ ಇದೆ. ಯಾರು ಬಹುಜನರನ್ನು ಕೀಳಾಗಿಸುತ್ತ ತಾವು ಉನ್ನತ ಕುಲದವರೆಂದು ಸಾವಿರಾರು ವರ್ಷಗಳಿಂದ ಬೀಗುತ್ತಿದ್ದರೋ ಅಂಥವರನ್ನು ಕೀಳಾಗಿ ನೋಡುವ ನೈತಿಕ

ಧೈರ್ಯವಿದೆ. ‘ಕುಲಕ್ಕೆ ತಿಲಕ ನಮ್ಮ ಮಾದಾರ ಚೆನ್ನಯ್ಯ ನಿಮ್ಮಿಂದಧಿಕ ನೋಡಾ ಕೂಡಲಸಂಗಮದೇವಾ’ ಎಂದು ತುಳಿತಕ್ಕೊಳಗಾದವರನ್ನು ದೇವರಿಗಿಂತಲೂ ಮೇಲೆತ್ತಿ ತೋರಿಸುವ ಸೈದ್ಧಾಂತಿಕ ಸಾಮರ್ಥ್ಯವಿದೆ.

ಬಸವಣ್ಣನವರು ಯಾರ ವಿರೋಧಿಗಳೂ ಅಲ್ಲ. ಅವರು ಅನ್ಯಾಯದ ವಿರೋಧಿಗಳು. ಎಲ್ಲರೂ ಜಾತ್ಯತೀತರಾಗಿ ನಿಜಮಾನವರಾಗಬೇಕೆಂಬ ಆಶಯ ಹೊಂದಿದ್ದರು. ಅವರು ವೈದಿಕ ದೇವತೆಗಳನ್ನು ಅಲ್ಲಗಳೆದಂತೆ ಶೂದ್ರದೈವಗಳನ್ನೂ ಅಲ್ಲಗಳೆದರು. ಏಕದೇವೋಪಾಸನೆಯ ಮೂಲಕ ನಮ್ಮೆಲ್ಲರೊಳಗೆ ಇರುವ ದೇವರು ಒಬ್ಬನೇ, ಒಂದೇ ವಿಶ್ವ, ಒಂದೇ ಮಾನವ ಜನಾಂಗ ಎಂಬ ಸತ್ಯದ ಅರಿವು ಮೂಡಿಸಿದರು. ಒಂದೇ ವಿಶ್ವ, ಒಂದೇ ಮಾನವಕುಲ ಆದರೆ ದೇವರ ಬಗ್ಗೆ ಗೊತ್ತಿಲ್ಲ ಎಂಬ ಅಜ್ಞೇಯವಾದಿ ನಿಲುವನ್ನು ಬುದ್ಧ ತಳೆದಿದ್ದ. ದೇವರು ಮತ್ತು ಆತ್ಮ ಇವೆಯೋ ಇಲ್ಲವೋ ಆದರೆ ಮನುಷ್ಯರು ಇದ್ದಾರೆ. ಅವರ ಒಳಿತೇ ಬಹುಮುಖ್ಯವಾದುದು. ನಿಸರ್ಗದ ಮತ್ತು ಸಕಲಜೀವಿಗಳ ಒಳತಿನಲ್ಲಿ ಮಾನವರ ಒಳಿತು ಅಡಗಿದೆ ಎಂಬ ಬುದ್ಧವಾದವು ಜನಸಮುದಾಯವನ್ನು, ಬಹುಜನರನ್ನು ಆಕರ್ಷಿಸಿತು. ‘ಬಹುಜನ ಸುಖಾಯ, ಬಹುಜನ ಹಿತಾಯ’ ಎಂಬುದು ಬುದ್ಧನ ಘೋಷಣೆಯಗಿತ್ತು. ‘ಸರ್ವೇ ಜನಾಃ ಸುಖಿನೋ ಭವಂತು’ ಎಂಬುದು ಆತನಿಗೆ ಹಿಡಿಸಲಿಲ್ಲ. ಏಕೆಂದರೆ ವೈದಿಕರ ದೃಷ್ಟಿಯಲ್ಲಿ ಶೂದ್ರರು ಮತ್ತು ಪಂಚಮರು ಮನುಷ್ಯರಾಗಿ ಕಾಣಲೇ ಇಲ್ಲ. ಅವರ ದೃಷ್ಟಿಯಲ್ಲಿ ‘ಸರ್ವೇ ಜನ’ರೆಂದರೆ ಸವರ್ಣೀಯರು ಮಾತ್ರ ಆಗಿದ್ದರು. ಒಂದು ವೇಳೆ ಶೂದ್ರರು ಮತ್ತು ಪಂಚಮರು ಅವರಿಗೆ ಜನ ಎಂದು ಕಂಡಿದ್ದರೆ ಚಾತುರ್ವರ್ಣ ಪದ್ಧತಿ ನಿರ್ನಾಮವಾಗಿ ಹೋಗುತ್ತಿತ್ತು. ಈ ಶೂದ್ರರು ಮತ್ತು ಪಂಚಮರೇ ಬಹುಜನರು ಆ ಸರ್ವಜನರು ಕಡಿಮೆ ಸಂಖ್ಯೆಯಲ್ಲಿದ್ದು ಎಲ್ಲ ಐಹಿಕ ಸಂಪತ್ತಿನ ಒಡೆಯರಾಗಿದ್ದವರು. ಒಬ್ಬನೇ ದೇವರು, ಒಂದೇ ವಿಶ್ವ ಮತ್ತು ಒಂದೇ ಮಾನವಕುಲ ಎಂಬುದು ಬಸವಣ್ಣನವರ ಸಂದೇಶವಾಗಿದೆ. ಈ ಸಂದೇಶ ಸಹಜವಾಗಿಯೆ ಜಾತಿ, ಕುಲ, ವರ್ಣ, ವರ್ಗ ಮತ್ತು ಲಿಂಗಭೇದಗಳಿಗೆ ವಿರುದ್ಧವಾಗಿದೆ. ಅಂತೆಯೇ ಈ ಎಲ್ಲ ಅನಿಷ್ಟಗಳನ್ನು ಒಳಗೊಂಡ ವೈದಿಕ ವ್ಯವಸ್ಥೆಗೆ ಸವಾಲಾಗಿದೆ. ಹೀಗೆ ಬಸವವಾದವು ಸಕಲಜೀವಾತ್ಮರಿಗೆ ಲೇಸನೆ ಬಯಸುವ ವಾದವಾಗಿದೆ.

ಬಸವವಾದ ನಡೆನುಡಿ ಸಿದ್ಧಾಂತದಿಂದ ಕೂಡಿದೆ. ಇದು ಮಾತಿನ ಮಂಟಪವನ್ನು ತಿರಸ್ಕರಿಸಿ ಅನುಭವ ಮಂಟಪದ ಸ್ಥಾಪನೆಗೆ ಮಾರ್ಗಸೂಚಿಯಾಯಿತು. ಮನುವಾದಿ ವೈದಿಕ ವ್ಯವಸ್ಥೆಯಿಂದಾಗಿ ತೊಳಲಾಡುತ್ತಿದ್ದ ಜನಸಮುದಾಯವನ್ನು ಮೇಲಕ್ಕೆತ್ತುವಂಥ ಯೋಜನೆಯನ್ನು ಬಸವವಾದ ರೂಪಿಸಿತು. ತಮ್ಮ ವಾದವನ್ನು ಕಾರ್ಯಗತಗೊಳಿಸಲು ಬಸವಣ್ಣನವರು ಕೈಗೊಂಡ ಕ್ರಮಗಳು ಅನನ್ಯವಾಗಿವೆ. ಅವೈದಿಕ ಚಿಂತನಾಕ್ರಮಕ್ಕೆ ಲೋಕಾಯತರು ಭೂಮಿಯಾದರು. ಜೈನರು ಆ ಭೂಮಿಯನ್ನು ಬಿತ್ತನೆಗೆ ಅಣಿಗೊಳಿಸಿದರು. ಬುದ್ಧ ಬೀಜ ಬಿತ್ತಿದ. ಬಸವಣ್ಣನವರು ಆ ಬೀಜವನ್ನು ಮರವಾಗಿ ಬೆಳೆಸಿದರು. ಹೀಗೆ ಕಳೆದ ಮೂರು ಸಾವಿರ ವರ್ಷಗಳಿಂದ ವೈದಿಕ ವ್ಯವಸ್ಥೆಯ ವಿರುದ್ಧ ಜನಸಾಮಾನ್ಯರ ಪರವಾದ ಹೋರಾಟ ನಡೆದೇ ಇದೆ. ಲೋಕಾಯತ, ಜೈನ ಮತ್ತು ಬೌದ್ಧಧರ್ಮಗಳ ವೈಜ್ಞಾನಿಕ ಮನೋಭಾವವು 12ನೇ ಶತಮಾನದಲ್ಲಿ ಬಸವಾದಿ ಶರಣರಿಂದ ಕೂಡಿದ ವಚನ ಚಳವಳಿಯಲ್ಲಿ ವಿಸ್ತಾರಗೊಂಡಿದೆ.

 ಬಸವಣ್ಣನವರು ಬಿಜ್ಜಳನ ಆಡಳಿತದಲ್ಲಿ ಕರಣಿಕ ಹುದ್ದೆಯಿಂದ ಪ್ರಧಾನಿ ಪದವಿಯ ವರೆಗೂ ಬಂದು ನಿಂತರು. ಮನೆಯಲ್ಲಿ ವೈದಿಕ ವ್ಯವಸ್ಥೆಯ ಅನುಭವವಾಗಿದ್ದರೆ ಪ್ರಭುತ್ವದಲ್ಲಿ ಅದರ ಪರಿಣಾಮದ ಅನುಭವವಾಯಿತು. ರಾಜಧರ್ಮ ಎಂಬುದು ವೈದಿಕ ವ್ಯವಸ್ಥೆಯ ಸಂರಕ್ಷಣೆಯೆ ಆಗಿತ್ತು. ವೈದಿಕ

ಧರ್ಮವು ಚಾತುರ್ವರ್ಣಗಳ ಮೇಲೆ ನಿಂತ ಕಾರಣ, ಆ ವರ್ಣವ್ಯವಸ್ಥೆಯನ್ನು ಕಾಪಾಡುವುದೇ ರಾಜಧರ್ಮವಾಗಿತ್ತು. ಶಂಬೂಕ ಶೂದ್ರ ತಪಸ್ವಿಯಾಗಿದ್ದ. ಇದು ವರ್ಣ ವ್ಯವಸ್ಥೆಗೆ ವಿರುದ್ಧವಾಗಿತ್ತು. ಇವನ ತಪಸ್ಸಿನಿಂದ ಒಬ್ಬ ಬ್ರಾಹ್ಮಣನ ಮಗ ಮಡಿದನೆಂಬ ಕಾರಣದಿಂದ ರಾಮ ಇವನನ್ನು ಕೊಂದು ಬ್ರಾಹ್ಮಣ ಪುತ್ರನನ್ನು ಬದುಕಿಸಿದ ಎಂದು ರಾಮಾಯಣದಲ್ಲಿ ಬರುತ್ತದೆ. ಹೀಗೆ ರಾಮ ರಾಜಧರ್ಮವನ್ನು ಪಾಲಿಸಿದ!

 ಬಸವಣ್ಣನವರ ಚಳವಳಿ ವರ್ಣವ್ಯವಸ್ಥೆಯ ಮತ್ತು ಇದನ್ನು ಕಾಪಾಡುವ ರಾಜಧರ್ಮದ ವಿರುದ್ಧ ಇತ್ತು. ಆದ್ದರಿಂದಲೇ ಬಸವವಾದಕ್ಕೆ ಇಡೀ ವೈದಿಕ ಸಮಾಜೋ ಧಾರ್ಮಿಕ, ಆರ್ಥಿಕ ವ್ಯವಸ್ಥೆಯನ್ನು ಪ್ರಶ್ನಿಸುವ ಶಕ್ತಿ ಬಂದಿತು. ವರ್ಣವ್ಯವಸ್ಥೆಯು ಶೂದ್ರರ ಮತ್ತು ಪಂಚಮರ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಮತ್ತು ಧಾರ್ಮಿಕ ಜೀವನವಿಧಾನದ ಮೇಲೆ ಹಿಡಿತ ಸಾಧಿಸಿತ್ತು. ಅವರು ನಿರಕ್ಷರಿಗಳಾಗಿ ಬದುಕುವಂತೆ ನೋಡಿಕೊಂಡಿತು. ಆರ್ಥಿಕವಾಗಿ ಎಂದೂ ಮೇಲೇಳದಂಥ ನಿರ್ಬಂಧಗಳನ್ನು ಹಾಕಿತು. ಸಾಮಾಜಿಕವಾಗಿ ಅವರು ಕಟ್ಟುಪಾಡುಗಳಲ್ಲಿ ಬದುಕುವಂತೆ ಮಾಡಿತು. ಧಾರ್ಮಿಕವಾಗಿ ಅವರು ಮಾನಸಿಕ ಗುಲಾಮಗಿರಿಯನ್ನು ಅನುಭವಿಸುವಂತೆ ಮಾಡಿತು. ಅಷ್ಟೇ ಅಲ್ಲದೆ ಅವರ ಆಹಾರದ ಮೇಲೆ ಮತ್ತು ಉಡುಗೆ ತೊಡುಗೆಗಳ ಮೇಲೆಯೂ ನಿಯಂತ್ರಣ ಹೇರಿತು. ಹೀಗೆ ಬಹುಜನ ಸಮಾಜವಾದ ಶೂದ್ರರು ಮತ್ತು ಪಂಚಮರು ಎಂದೂ ಯಾವ ರೀತಿಯಿಂದಲೂ ಮೇಲೇಳದಂತೆ ನೋಡಿಕೊಂಡಿತು. ಇಂಥ ಹೀನಾಯ ಸ್ಥಿತಿಯ ವಿರುದ್ಧ ಬಸವಾದಿ ಶರಣರು ಚಳವಳಿ ಹೂಡಿದರು. ಇದುವೇ ವಚನ ಚಳವಳಿ ಎಂದು ಪ್ರಸಿದ್ಧವಾಯಿತು. ವಿವಿಧ ಸಮಾಜಗಳಿಗೆ ಸೇರಿದ ಕಾಯಕಜೀವಿಗಳು ಈ ಚಳವಳಿಯಲ್ಲಿ ಮೊದಲ ಬಾರಿಗೆ ಅಕ್ಷರ ಕಲಿತರು. ತಮ್ಮ ಹಕ್ಕುಗಳ ಬಗ್ಗೆ ಚಿಂತಿಸಿದರು. ತಮ್ಮ ಶೋಷಣೆಯ ನೆಲೆಗಳನ್ನು ಗುರುತಿಸಿದರು. ವೈದಿಕ ವ್ಯವಸ್ಥೆಯ ಷಡ್ಯಂತ್ರಗಳನ್ನು ಅರಿತುಕೊಂಡರು. ತಾವೇ ಉತ್ಪಾದಕ ಶಕ್ತಿಗಳು. ಆದರೆ ಸವರ್ಣೀಯರು ಪಲಾನುಭವಿಗಳು ಎಂಬ ಸತ್ಯದ ಅರಿವು ಅವರಿಗಾಯಿತು. ಹೀಗೆ ಕಾಯಕಜೀವಿಗಳು ತಮ್ಮತನವನ್ನು ಕಂಡುಕೊಳ್ಳಲು ಬಸವಣ್ಣನವರು ಮಾಡಿದ ಪ್ರಯತ್ನ ಅಗಾಧವಾಗಿದೆ.

ಲೋಕಾಯತರಿಂದ ಲಿಂಗಾಯತರ ತನಕ: ಲೋಕಾಯತರಿಂದ 12ನೇ ಶತಮಾನದ ಲಿಂಗಾಯತರ ವರೆಗೆ ಭಾರತದಲ್ಲಿ ನಿರಂತರವಾಗಿ ವೈದಿಕ ವಿರೋಧಿ ಚಿಂತನೆಗಳು ನಡೆದಿವೆ. ಈ ಕ್ರೂರ ವ್ಯವಸ್ಥೆಯ ಮರ್ಮವನ್ನು ಮೊದಲಿಗೆ ಅರಿತವರೆಂದರೆ ಲೋಕಾಯತರು ಎಂದು ಕರೆಯಿಸಿಕೊಳ್ಳುವ ಚಾರ್ವಾಕರು. ಅವರು ಈ ಭೇದಸಂಸ್ಕೃತಿಯ ವಿರುದ್ಧ ಸೈದ್ಧಾಂತಿಕವಾಗಿ ಹೋರಾಡಿದರು. ಆದರೆ ಮನುವಾದಿ ವೈದಿಕರು ಒಟ್ಟಾಗಿ ಚಾರ್ವಾಕರನ್ನು ನಿರ್ನಾಮ ಮಾಡಿ ಅವರ ವೈಚಾರಿಕ ಸಾಹಿತ್ಯವನ್ನು ಸುಟ್ಟುಹಾಕಿದರು! ನಂತರ ಬಂದ ಜೈನರು ಕೂಡ ಭೇದಸಂಸ್ಕೃತಿಯನ್ನು ವಿರೋಧಿಸಿದರು. ಆದರೆ ಕಠಿಣ ವ್ರತಗಳಿಂದಾಗಿ ಅವರ ಜನಸಂಖ್ಯೆ ಕಡಿಮೆ ಇದ್ದುದರಿಂದ ಬಹಳ ಬೇಗನೆ ಅವರೆಲ್ಲ ಶಕ್ತಿಗುಂದಿದ ಕಾರಣ ವೈದಿಕರನ್ನು ಎದುರಿಸದೆ ಹೋದರು. ನಂತರ ಬಂದ ಗೌತಮಬುದ್ಧ ವೈದಿಕ ವ್ಯವಸ್ಥೆಯನ್ನು ಪ್ರಶ್ನಿಸುವಂಥ ಚಿಂತನೆ ಮಾಡಿದ. ಅದುವೇ ಬೌದ್ಧಧರ್ಮ ಎಂದು ಪ್ರಸಿದ್ಧವಾಯಿತು. ಮನುವಾದಿಗಳು ಬೌದ್ಧರ ಮೇಲೆ ದಾಳಿ ನಡೆಸಿದರು. ಅವರ ಹತ್ಯೆ ಮಾಡಿ ಅವರ ಸಾಹಿತ್ಯವನ್ನೂ ಸುಟ್ಟರು. ಹೀಗಾಗಿ ಬೌದ್ಧಧರ್ಮ ಭಾರತ ದೇಶದ ಹೊರಗೆ ಹೋಗಿ ಬೆಳೆಯುವಂಥ ಪರಿಸ್ಥಿತಿ ಉಂಟಾಯಿತು. ಇವರೆಲ್ಲರ ನಂತರ 12ನೇ ಶತಮಾನದಲ್ಲಿ ಮನುವಾದಿ ವೈದಿಕಶಕ್ತಿಗಳನ್ನು ನೇರವಾಗಿ ಎದುರಿಸಿದವರೆಂದರೆ ಬಸವಣ್ಣನವರು. ಅವರು ವಿವಿಧ ಜಾತಿ ಮತ್ತು ಉಪಜಾತಿಗಳಲ್ಲಿ ಚದುರಿಹೋಗಿದ್ದ ದುಡಿಯುವ ವರ್ಗದ ಜನಸಮುದಾಯಗಳನ್ನು ಒಂದುಗೂಡಿಸಿದರು. ವೈದಿಕರು ವರ್ಣ ಮತ್ತು ಜಾತಿಗಳ ಗುಂಪುಗಳನ್ನು ಮಾಡಿದ್ದರು. ಆದರೆ ಬಸವಣ್ಣನವರು ಎಲ್ಲ ಗುಂಪುಗಳನ್ನು ಒಂದುಗೂಡಿಸಿ ಇಡೀ ಕಾಯಕಜೀವಿಗಳ ಸಮೂಹವನ್ನು ಸೃಷ್ಟಿಸಿದರು. ಬಸವಣ್ಣನವರಿಗಿಂತ ಮೊದಲು ದುಡಿಯುವ ವರ್ಗವನ್ನು ಹೀಗೆ ಒಂದುಗೂಡಿಸಿದ ದಾಖಲೆ ಜಗತ್ತಿನ ಯಾವುದೇ ದೇಶದಲ್ಲಿ ಕಾಣ ಸಿಗುವುದಿಲ್ಲ. ಮಹಾನುಭಾವಿ ಬಸವಣ್ಣನವರು ಸೋಪಜ್ಞ ಚಿಂತಕರಾಗಿದ್ದರು. ಹೀಗಾಗಿ ಅವರ ಚಿಂತನೆಗಳು ಬದುಕಿನ ಹೊಸ ಹೊಳವುಗಳಿಂದ ಕೂಡಿದ್ದಾಗಿವೆ. ಮಾನವಕುಲವನ್ನು ಒಂದುಗೂಡಿಸುವ ಕ್ರಮವನ್ನು ಅವರು ಅರಿವು ಮತ್ತು ಆಚರಣೆಯ ಮೂಲಕ ಜಗತ್ತಿಗೆ ತೋರಿಸಿಕೊಟ್ಟರು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top