ಪ್ರಕೃತಿಯ ಮಡಿಲಲ್ಲಿ.... | Vartha Bharati- ವಾರ್ತಾ ಭಾರತಿ

ಪ್ರಕೃತಿಯ ಮಡಿಲಲ್ಲಿ....

ಮನವರಳಿಸಿ ಮುದನೀಡುವ ಪ್ರಕೃತಿಯ ಮಡಿಲ ಆ ಸುಂದರ ದಿನಗಳು ಮರಳಿ ಬಂದಾವೇ? ಇಲ್ಲ, ಎಂದಿಗೂ ಇಲ್ಲ, ಎನ್ನುವಂತೆ ನನ್ನೂರ ಪರಮಪ್ರಿಯ ರುದ್ರ ರಮ್ಯ ಸಮುದ್ರ ತೀರದ ಬದಲಾದ ನೋಟವೂ ನನ್ನ ಮುಂದೆ ತೆರೆದು ಕೊಂಡಿದೆ. ವಿಶಾಲ ಮರಳ ತೀರವಿದ್ದ, ಹೆದ್ದೆರೆಗಳು ಅಪ್ಪಳಿಸುತ್ತಿದ್ದ, ಚಿಪ್ಪುಗಳನ್ನಾಯ್ವ, ಮರಿ ಏಡಿಗಳ ಹಿಂದೆ ಓಡುವ ಚಿಣ್ಣರು ಮನಸೋಕ್ತ ಆಡಿ ವಿಹರಿಸುತ್ತಿದ್ದ ತೀರವೀಗ ಬಂಡೆಗಲ್ಲುಗಳ ತಡೆಗೋಡೆಯನ್ನು ಹೊತ್ತು ಸಮುದ್ರವನ್ನೇ ಮರೆಮಾಡಿ ನಿಂತಿದೆ. 

ಮ್ಮೂರು, ಮಂಗಳೂರು ಸೆರಗ ಹಾಸಿದಂತಿರುವ ನೇತ್ರಾವತಿ ನದಿಯಾಚೆಗಿನ ಉಳ್ಳಾಲದತ್ತಣ ಕಡಲಕರೆಯ ಹಳ್ಳಿ ಸೋಮೇಶ್ವರ ಉಚ್ಚಿಲ. ಊರ ತೆಂಕು ತುದಿಯಲ್ಲಿ ನಮ್ಮಜ್ಜಿ ಮನೆ, ಗುಡ್ಡೆಮನೆ. ಮನೆಯ ಮೂರು ದಿಕ್ಕುಗಳಲ್ಲೂ ವಿಶಾಲವಾಗಿ ಹರಡಿದ ಭತ್ತದ ಗದ್ದೆಗಳು. ಬಡಗು ದಿಕ್ಕಿಗೆ ನಮ್ಮ ನೆರೆಯ ಐಸಕುಂಞಿಯ (ಆಯಿಶಾ) ವಿಶಾಲ ಹಿತ್ತಿಲು,. ಮೂಡಲಿಗೆ ಮುಖ ಮಾಡಿದ ನಮ್ಮ ಮನೆಯೆದುರು ಕಂಬಳ ಗದ್ದೆ. ಅದರೆದುರಿನಲ್ಲಿ ಹಾದುಹೋಗಿರುವ ಬಂಡಿ ರಸ್ತೆ. ತೆಂಕಲಾಗಿನ ಗದ್ದೆಯಂಚಿನಲ್ಲಿ ಹರಿವ ಹೊಳೆ. ಪಶ್ಚಿಮಕ್ಕೆ ಮನೆಯ ಹಿಂಭಾಗದಲ್ಲಿ ಹಿತ್ತಿಲಿಗೆ ಹೊಂದಿಕೊಂಡೇ ನಮ್ಮ ಗದ್ದೆ. ಅದರ ಆಚೀಚೆ ಸುವಿಶಾಲವಾಗಿ ಹರಡಿದ ಹಲವು ಗದ್ದೆಗಳು. ಅವುಗಳಂಚಿಗೆ ಕೇದಿಗೆ ಹಕ್ಕಲು. ಮತ್ತದರಾಚೆ ಎತ್ತರದ ದಿನ್ನೆಯ ಮೇಲೆ ಹಾದು ಹೋಗಿರುವ ರೈಲು ಹಳಿ. ಹಳಿಯಾಚೆಗೆ ಊರ ತೆಂಕುತುದಿಯಲ್ಲಿ ಬೆಟ್ಟದ ಮೇಲೆ ಕೋಟೆ ವಿಷ್ಣುಮೂರ್ತಿ ದೇವಳ. ಗುಡ್ಡೆಮನೆ ಹಿತ್ತಿಲಲ್ಲಿ ಬದುಗಳ ಮೇಲೆ ತೆಂಗಿನ ಮರಗಳು; ಬದುಗಳ ನಡುವಣ ಕಿರುತೋಡುಗಳಲಿ ನನ್ನ ಪ್ರೀತಿಯ ಬೆಳ್ದಾವರೆ ಹೂ ಬಳ್ಳಿಗಳು. ಪಡುವಣ ಗದ್ದೆಗಳ ನಡುವೆಯೂ ಹರಿದ ಕಿರುತೋಡುಗಳಲ್ಲಿ ಬೆಳ್ದಾವರೆ ಬಳ್ಳಿ, ಹೂಗಳು. ಗದ್ದೆಗಳ ನಡುವಣ ಕೈತೋಡಿನಲ್ಲಿ ನಮ್ಮ ತೊಡೆ ಮಟ್ಟದ ನೀರು. ಅಂಗಿ ಮೇಲೆತ್ತಿಕೊಂಡು ಆ ತಂಪು ತಂಪು ನೀರನ್ನು ದಾಟುವುದೆಂದರೆ ಮೈಯೆಲ್ಲ ಪುಳಕ. ಹಿತ್ತಿಲ ತೆಂಕುತುದಿಯಲ್ಲೊಂದು ಪಾಳ್ಗೊಳ. ಅದರಲ್ಲಿ ಕೆಂಪು ತಾವರೆ ಹೂಗಳು. ನಮ್ಮ ಗದ್ದೆಯಾಚೆಗಿನ ಹೊಳೆ ಪಕ್ಕದಲ್ಲೂ ಕೆಂದಾವರೆಗಳು ತುಂಬಿದ ಆಳವಾದ ಕೊಳವೊಂದಿದ್ದು, ಕೇದಿಗೆ ಬಲ್ಲೆ, ಹೊನ್ನೆಮರಗಳಿಂದ ಆವೃತವಾದ ಈ ಕೊಳಕ್ಕೆ ಯಾರೂ ಇಳಿಯುತ್ತಿರಲಿಲ್ಲ. ಹಿತ್ತಿಲ ತುಂಬಾ ಮಾವು, ಗೇರು ಮರಗಳು. ಚಿಕ್ಕ, ದೊಡ್ಡ ಗಾತ್ರದ ಬಲು ಸಿಹಿಯಾದ ಕಾಟುಮಾವಿನ ಮರಗಳು. ಬೇಕೆಂದಷ್ಟು ತಿನ್ನಲು, ಮೇಲೋಗರಕ್ಕೆ, ಉಪ್ಪಿನಕಾಯಿಗೆ, ಬೇಯಿಸಿ ಉಪ್ಪುನೀರಲ್ಲಿ, ತುಂಬಿಡಲು, - ಬೇಸಿಗೆ ಪೂರ್ತಿ ಮಾವಿನ ಸಮೃದ್ಧ್ಧಿ. ಆ ಮಾವಿನ ಮರದಿಂದ ತೂಗುವ ನಮ್ಮ ಉಯ್ಯಿಲೆಗಳು. ವಿಶು ಹಬ್ಬದ ಕಣ್ಣಿಗೊದಗುವ ನಮ್ಮದೇ ಗೇರು ಮರದ ಯಥೇಷ್ಟ ಹುರಿದ ಗೇರುಬೀಜ, ಮನೆಯಂಗಳದಲ್ಲೇ ಎಡತುದಿಗೆ ಆಳವಿಲ್ಲದ ಪುಟ್ಟ ಬಾವಿ. ಅದಕ್ಕೆ ತಾಗಿ ಕೊಂಡೇ ಬಲದಲ್ಲಿ, ಪೊಟರೆಗಳುಳ್ಳ ವಿಶಾಲ ಅತ್ತಿಮರ; ಎಡಕ್ಕೆ ಸದಾ ಕಂಪಿನ ಹೂ ಸುರಿಸುವ ಗೋಸಂಪಿಗೆ ಮರಗಳು. ಬಚ್ಚಲು ಮನೆಯ ಹಿಂದೆ ಹಿತ್ತಿಲಂಚಿಗೆ ಸಾಗುವಲ್ಲಿ ದೈತ್ಯಾಕಾರದ ತಾಳೆಮರ. ಯಾರೂ ಹತ್ತಲಾಗದಷ್ಟು ಅಗಲವಿದ್ದ ಈ ತಾಳೆಮರ ಅದೆಷ್ಟು ವರ್ಷಗಳಿಂದ ಅಲ್ಲಿ ನಿಂತಿತ್ತೋ, ಯಾರು ಬಲ್ಲರು? ಮರದ ತುಂಬಾ ತೂಗುವ ಬಯಾ ಪಕ್ಷಿಗಳ ಗೂಡುಗಳು. ಮರ ಹತ್ತುವ ಪ್ರಶ್ನೆಯೇ ಇರಲಿಲ್ಲವಾದ್ದರಿಂದ, ಹಣ್ಣಾಗಿ ಉದುರಿ ಬೀಳುವ ಕಿತ್ತಳೆ ಬಣ್ಣದ ನಾರಿನ ತಿರುಳಿನ ಹಣ್ಣುಗಳಷ್ಟೇ ನಮಗೆ ಪ್ರಾಪ್ತಿ. ಮನೆಯೆದುರಿಗೆ ಬಲಕ್ಕೆ ಹಿತ್ತಿಲ ಗೋಡೆಯ ಪಕ್ಕ ಬಲು ದೊಡ್ಡ ಗೇರು ಮರ. ದೊಡ್ಡ ಹಳದಿ ಬಣ್ಣದ ಬಲು ಸಿಹಿಯಾದ ಹಣ್ಣುಗಳು. ವಿಶು ಹಬ್ಬಕ್ಕೆ ಇದೇ ಮರದ ಯಥೇಷ್ಟ ಗೇರು ಬೀಜ.

 ಬೋರೆಂದು ಮಳೆ ಸುರಿದು ನೆರೆ ನೀರೂ ಹರಿದು ಬರುವ ಮಳೆಗಾಲದಲ್ಲಿ ನಮ್ಮ ಬಾವಿ ತುಂಬ ನೀರು. ಆದರೆ ಪಕ್ಕದಲ್ಲೇ ಹರಿವ ಹೊಳೆಯ ವರಪ್ರಸಾದವಾಗಿ ಈ ನೀರು ಎಂದೂ ಉಪ್ಪುಪ್ಪು. ಕುಡಿವ ನೀರಿಗೆ ಪಕ್ಕದ ಹಿತ್ತಿಲ ಐಸ ಕುಂಞಿಯ ಮನೆಯ ಬಂಡೆಗಲ್ಲಿನೊರತೆಯ ಸಿಹಿ ಸಿಹಿ ನೀರೇ ಗತಿ. ದೊಡ್ಡರಜೆಯ ಸೆಕೆಗಾಲದಲ್ಲಿ, ಪುಟ್ಟಮಕ್ಕಳಾಗಿದ್ದ ನಮ್ಮನ್ನು, ಆ ಬಾವಿಯೆದುರಿನ ಕಲ್ಲುಚಪ್ಪಡಿಯ ಮೇಲೆ ಕುಳ್ಳಿರಿಸಿ, ಅಮ್ಮ, ಅತ್ತೆ, ದೊಡ್ಡಮ್ಮಂದಿರು, ಬಾವಿಯ ತಂಪು ತಂಪು ನೀರನ್ನು ಸೇದಿ ಸೇದಿ ತಲೆಗೆ ಹೊಯ್ದು ಮೀಯಿಸುತ್ತಿದ್ದರು. ಐಸ ಕುಂಞಿ, ಬೆಳ್ಳನೆ ನಗುಮೊಗದ, ಜಿಂಕೆಯಂಥ ಸೌಮ್ಯಕಂಗಳ ಮೃದುಮಾತಿನ ಪ್ರಿಯ ಜೀವ. ನಮ್ಮ ಹುಡುಗು ಪಾಳ್ಯದ ಆಟೋಟಗಳು ಅವರ ವಿಶಾಲ ಹಿತ್ತಿಲಲ್ಲೂ ನಡೆಯುವುದಿತ್ತು. ಮತ್ತೆ ಹಾಗೇ ಐಸ ಕುಂಞಿಯ ಮನೆಯ ಹೆಂಗಸರ ಬಾಗಿಲ ಜಗಲಿಯೇರಿ, ಅಲ್ಲಿ ಬೀಡಿ ಸುತ್ತುತ್ತಾ ಕುಳಿತಿರುತ್ತಿದ್ದ ಅವಳ ಪಕ್ಕ ಕುಳಿತು, ನಾನೂ ಮಾಡುವೆನೆಂದು ಅದೆಷ್ಟು ಎಲೆಗಳನ್ನು ಹಾಳು ಮಾಡಿದ್ದೆನೋ, ದೇವರೇ ಬಲ್ಲ. ಆದರೆ ಆ ಸೌಮ್ಯಕಂಗಳ ಸಿಹಿ ನಗುವಷ್ಟೇ ಸಿಗುತ್ತಿದ್ದ ಬಳುವಳಿ. ಒಂದು ಕಟುಮಾತನ್ನೂ ಆಡಲರಿಯದ ಐಸಕುಂಞಿ, ತನ್ನ ಕೊನೆಯ ದಿನಗಳಲ್ಲಿ ಬಾಯಿಯ ಕ್ಯಾನ್ಸರ್‌ನಿಂದ ನರಳಿ ದಿನವೆಣಿಸುತ್ತಿದ್ದಾಗ , ನಾನವಳನ್ನು ಕಾಣ ಹೋಗಿದ್ದೆ. ರಝಾಕ್, ನಫೀಸಾ, ಸೆಫಿಯಾ, ಬೀಪಾತುಮ್ಮ,ಆಮಿನ ಎಂದು ಅವಳ ಐವರು ಮಕ್ಕಳೂ ತಮ್ಮ ಮಕ್ಕಳೊಡನೆ ಅಲ್ಲಿದ್ದರು. ಹಿತ್ತಿಲು ಭಾಗಶಃ ಮಾರಾಟವಾಗಿ, ಅಲ್ಲಿ ಬೇರೆರಡು ಮನೆಗಳು ಎದ್ದಿದ್ದುವು. ಬಾವಿ, ಪಂಪ್ ಇಡಿಸಿಕೊಂಡು, ಕಲುಷಿತವಾದಂತೆ ತೋರುತ್ತಿತ್ತು. ನಫೀಸಾ ಕುಡಿಯಲು ತಂದಿದ್ದ ನೀರೂ ಮೊದಲಿನಂತೆ ಸಿಹಿಯಿರಲಿಲ್ಲ. ಆ ಸಿಹಿಯೊರತೆ, ಬಹುಶಃ ಐಸಕುಂಞಿಯ ಸಿಹಿ ನಗುವಿನೊಂದಿಗೇ ಮಾಯವಾಯ್ತೇನೋ. ವರ್ಷಂಪ್ರತಿ, ಎಪ್ರಿಲ್ ತಿಂಗಳ ಇಪ್ಪತ್ತೆರಡು, ಇಪ್ಪತ್ಮೂರಕ್ಕೆ ಉಚ್ಚಿಲ ಕೋಟೆ ವಿಷ್ಣುಮೂರ್ತಿ ಜಾತ್ರೆ. ಮನೆಯ ಪಶ್ಚಿಮಕ್ಕೆ ರೈಲು ಹಳಿಯಾಚೆ, ಸಮುದ್ರತಡಿಯಲ್ಲಿ ಎತ್ತರದ ಬೆಟ್ಟದ ಮೇಲಿನ ದೇವಳದ ಬಿಸಿಲು ಮಹಡಿಯು, ಇತ್ತ ಕೆಳಗಿದ್ದ ನಮ್ಮ ಹಿತ್ತಿಲಿಂದ ನೋಡಿದರೆ ಕಾಣುತ್ತಿತ್ತು, ಹಾಗೆಯೇ, ದೇವಳದ ಆ ಬಿಸಿಲು ಮಹಡಿಯೇರಿ, ಪೂರ್ವಕ್ಕೆ ದಿಟ್ಟಿಸಿದರೆ, ನಮ್ಮ ಅರಸುವ ಕಣ್ಗಳಿಗೆ ಆ ಅಗಾಧ ಹಸಿರಿನ ನಡುವೆ ಕಾಣುತ್ತಿದ್ದುದು, ನಮ್ಮಜ್ಜಿ ಮನೆಯ ಗೋಡೆಯೊಂದೇ. ಪಶ್ಚಿಮಕ್ಕೆ ಸಮುದ್ರ ನೀಲಿಯ ವೈಶಾಲ್ಯ ದೊಡ್ಡದೋ, ಈ ಪೂರ್ವದ ಹಸಿರ ವೈಶಾಲ್ಯ ದೊಡ್ಡದೋ ಎಂದು ಕೌತುಕವೆನಿಸುತ್ತಿತ್ತು. ಅದೇ ಈಗ ಆ ಬಿಸಿಲು ಮಹಡಿಯೇರಿದರೆ, ಪೂರ್ವಕ್ಕೆ ಆ ಹಸಿರನ್ನು ಸೀಳಿ ಹಲವು ಕಟ್ಟಡಗಳೆದ್ದಿರುವುದು, ಕಂಡು ಬರುತ್ತದೆ. ಮಂಗಳೂರ ದಿಕ್ಕಿನಲ್ಲೂ ದೇರ್ಲಕಟ್ಟೆಯ ಆಸ್ಪತ್ರೆಗಳು, ವಿದ್ಯಾಸಂಸ್ಥೆಗಳಾದಿಯಾಗಿ ಎದ್ದು ನಿಂತಿರುವ ಕಟ್ಟಡಗಳು ಪರಿವರ್ತನೆಯ ಚಿತ್ರವನ್ನೇ ನಮ್ಮೆದುರು ತೆರೆದು ತೋರುತ್ತವೆ.

        

  ಕೋಟೆ ಜಾತ್ರೆಯ ಸಂದರ್ಭ, ‘‘ಅಮರಾ, ಮಧುರಾ, ಪ್ರೇಮಾ ನೀ ಬಾ ಬೇಗ ಚಂದ ಮಾಮಾ ...’’, ‘‘ಏ ಮೊಹಬ್ಬತ್ ಜಿಂದಾಬಾದ್...’’ ಮುಂತಾದ ಅಂದಿನ ಚಿತ್ರಗೀತೆಗಳು ಅಲೆಅಲೆಯಾಗಿ ಅಲ್ಲಿಂದ ಹರಿದು ಬರುತ್ತಿದ್ದುವು, ರಜಾದಿನಗಳು ಆರಂಭವಾದೊಡನೆ ಊರು ಸೇರಿಕೊಳ್ಳುತ್ತಿದ್ದ ನಮಗೆ ಜಾತ್ರೆಯ ಸಂಭ್ರಮವಂತೂ ಹೇಳ ತೀರದು. ರಾತ್ರಿ ತೂಕಡಿಸುತ್ತಾ ದೇವರ ಬಲಿ ಪೂಜೆ ನೋಡಿ ಹಿಂದಿರುಗುವಾಗ, ಒಂದೆರಡು ಹನಿಯಾದರೂ ಮಳೆ ಸುರಿಯದೆ ಇಲ್ಲ. ಬಲಿಪೂಜೆಯ ಮರುದಿನ ಬಂಟ, ಜುಮಾದಿಯ ನೇಮಕ್ಕೆ ಹಾಗೂ ಸಂತೆ ತಿರುಗಲು ಹೋಗುವಾಗ ದೊಡ್ಡಪ್ಪ ನಮ್ಮೆಲ್ಲರ ಕೈಗೂ ನಾಲ್ಕಾಣೆಯಂತೆ ಕೊಡುತ್ತಿದ್ದರು. ಸಂತೆಯಲ್ಲಿ ಬೊಂಬೆ, ಮೆಣಸುಮಿಠಾಯಿ, ಸುಕುನುಂಡೆ, ಬಳೆ, ಮಲ್ಲಿಗೆ ಹೂ ಎಂದು ಎಂತಹ ಸಂಭ್ರಮ! ಜುಮಾದಿಯ ನೇಮದಲ್ಲಿ ಮಾತ್ರ, ಬಂಬೂತನ ಮುಖ ನನ್ನ ದೃಷ್ಟಿಗೆ, ಐಸಕುಂಞಿಯ ದೊಡ್ಡಮ್ಮ ಮರಿಯತರ ಮುಖದಂತೆಯೇ ಕಂಡು ಭಯ ಹುಟ್ಟಿಸುತ್ತಿತ್ತು. ಅವೇ ಉಂಗುರುಂಗುರ ಕಿವಿಯೋಲೆಗಳ ದೊಡ್ಡ ಜೋಲುವ ಕಿವಿಗಳು; ಕಾಲ ದಪ್ಪ ಅಂದುಗೆಗಳು, ಭಾರದ ಒಡ್ಯಾಣ! ಮರಿಯತರನ್ನು ಕಂಡರೆ ಬಂಬೂತನದೇ ನೆನಪು! ಅದೇ ಐಸ ಕುಂಞಿ ಎಂದರೆ ಅಷ್ಟೇ ಪ್ರೀತಿ, ಸಲುಗೆ. ಅವಳ ಬಿಳಿ, ಗುಲಾಬಿ ಮೈ ಬಣ್ಣ, ಸೌಮ್ಯ ನೀಲ ಕಂಗಳು, ತಲೆಯ ಹಸಿರು ವಸ್ತ್ರದಿಂದಿಣುಕುವ ಅವಳ ತೆಳು ಅಲೆಗೂದಲು, ಹಕ್ಕಿತುಪ್ಪಳದಂತಹ ಬೆಳ್ಳನೆ ಮಲ್ ಬಟ್ಟೆಯ, ಕುಚ್ಚು ತೂಗುವ ಸಡಿಲ ಕುಪ್ಪಾಯ ಮತ್ತದರ ಕಸೂತಿಯ ಚಿತ್ತಾರದ ಸೊಗಸು! ಗುಡ್ಡೆಮನೆಯ ನಮ್ಮಜ್ಜಿ, ನಮ್ಮ ಪ್ರೀತಿಯ ಬೆಲ್ಯಮ್ಮ. ಮೊಮ್ಮಕ್ಕಳಿಗೆ ತಿನಿಸಿದಷ್ಟೂ ತಣಿಯದ ಜೀವ. ಸೋದರತ್ತೆ ಶಾರದತ್ತೆ, ಸದಾ ಹಾಡು ಗುನುಗುತ್ತಾ ಒಳ ಹೊರಗೆ ಅಡ್ಡಾಡುತ್ತಾ ಮನೆಕೆಲಸದಲ್ಲಿ ಮಗ್ನರಾಗಿರುತ್ತಿದ್ದ ಪ್ರಿಯಜೀವ. ಗುಡಿಸುವಾಗ ಸಿಕ್ಕಿದ ಚೂರು ಕಾಗದವನ್ನಾದರೂ ಓದಿಯೇ ತೀರುವ ಶಾರದತ್ತೆಯ ಕೆಲಸ ಮುಗಿಯಿತೆಂದರೆ, ಆ ಕೈಗಳಲ್ಲಿ ಪುಸ್ತಕ ಪ್ರತ್ಯಕ್ಷ. ದೊಡ್ಡಮ್ಮ ಎಳೆ ಶಿಶುವಿನ ಬಟ್ಟೆಗಳನ್ನೊಗೆಯಲು ಹೊಳೆಗೆ ಹೋದಾಗ ನಾವು ಮಕ್ಕಳೂ ಅವರ ಹಿಂದೆ ಹೋಗಿ ಹೊಳೆ ನೀರಲ್ಲಿ ಮನಸೋ ಇಚ್ಛೆ ಆಡುತ್ತಿದ್ದೆವು. ಜುಳು ಜುಳು ಹರಿವ ಸ್ವಚ್ಛ ನೀರಲ್ಲಿ ಕಾಲಿಗೆ ಕಚಗುಳಿ ಇಡುವ ಮೀನಮರಿಗಳು. ಬಿಸಿಲಿಗೆ ನೀರಲ್ಲಿ ಹೊಳೆವ ಹೊಯ್ಗೆ, ನೊರಜುಗಲ್ಲುಗಳು. ಈಗ ಬೆಳೆದ ನಗರೀಕರಣದಲ್ಲಿ ನಮ್ಮೀ ಹೊಳೆ ಕೊಳಚೆಯ ಬೀಡಾಗಿ ಹೃದಯವನ್ನೇ ಕುಗ್ಗಿಸುತ್ತಿದೆ. ಹೊಟೇಲ್‌ಗಳ ತ್ಯಾಜ್ಯ ಈ ನೀರನ್ನು ಕಲುಷಿತಗೊಳಿಸಿ ಪರಿಸರದ ಬಾವಿ ನೀರನ್ನೂ ವಿಷಮಯವಾಗಿಸಿದೆ. ರಸ್ತೆ ಚತುಷ್ಪಥವಾಗುವಲ್ಲಿ ನಡೆದ ಕಾಮಗಾರಿಯಲ್ಲಿ ಮಣ್ಣು, ಸಿಮೆಂಟ್, ಹರಿವ ನೀರಿಗೆ ತಡೆಯಾಗಿ ಆ ಸ್ವಚ್ಛ ಸೌಂದರ್ಯವನ್ನು ಹಾಳುಗೆಡವಿದೆ. ಸುತ್ತಣ ಗದ್ದೆ, ತೋಡುಗಳಲ್ಲಿ ಸೊಗಸಾಗಿ ಕಣ್ಗೆ ಹಬ್ಬವಾಗಿದ್ದ ಬೆಳ್ದಾವರೆ ಹೂಬಳ್ಳಿಗಳೂ ಅಳಿದು ಹೋಗಿವೆ. ರೈಲು ಸಂಕದ ವರೆಗೆ ಮಾತ್ರ ನಮ್ಮ ನೀರಾಟ; ಈಜಾಟ. ಅಲ್ಲಿಂದ ಮುಂದೆ ಹೊಳೆ ಆಳವಿತ್ತಷ್ಟೇ ಅಲ್ಲ, ದೊಡ್ಡಪ್ಪನ ಮಗ ತುಂಟ ಸುರೇಶಣ್ಣನ ಹಲವು ಭೂತದ ಕಥೆಗಳು ನಮ್ಮ ಸಾಹಸಕ್ಕೆ ಅಡ್ಡಿ ಬರುತ್ತಿದ್ದುವು. ರೈಲು ಸಂಕದ ಅಡ್ಡ ಪಟ್ಟಿಗಳಿಂದ ಪುಟ್ಟ ಮಗುವೊಂದು ಕಾಲುಜಾರಿ ಬಿದ್ದು ಕೆಳಗಿನ ಬಂಡೆಕಲ್ಲಿನಲ್ಲಿ ತಲೆಯೊಡೆದು ಸತ್ತಿದ್ದು, ಸಂಕದ ಮೇಲೆ ನಡೆವವರನ್ನು ಬೂತವಾಗಿ ಕೆಳಗೆಳೆಯುತ್ತದೆ ಎಂಬ ಸುರೇಶಣ್ಣನ ಕಥೆ, ಅಂಥ ಅವರ ಕಟ್ಟುಕಥೆಗಳ ಭಂಡಾರದಲ್ಲೊಂದು!

ಗದ್ದೆಹುಣಿಯಲ್ಲಿ ಯಾರಾದರೂ ಸೂಟೆ ಹೊತ್ತಿಸಿಕೊಂಡು ಹೋಗುತ್ತಿದ್ದರೆ, ‘‘ಅಕೋ, ಕೊಳ್ಳಿ ದೆವ್ವ ಹೋಗುತ್ತಿದೆ’’, ಎಂದೂ, ರಾತ್ರಿ ದೀಪವಾರಿ ನಾವೆಲ್ಲ ಮಲಗಿರುವಾಗ, ಬಂಡಿರಸ್ತೆಯಲ್ಲಿ ಎತ್ತಿನ ಬಂಡಿಯ ಕೊರಳಗಂಟೆ ಕೇಳಿಸಿದರೆ, ‘‘ಅದೋ, ಭಂಡಾರ ಹೋಗುತ್ತಿದೆ’’ ಎಂದೂ, ಮನೆಯ ಹಿಂಬದಿಗೆ ಹೋಗಿ ‘‘ಉಕ್ಕೆವೂ’’ ಎಂದು ನರಿಯಂತೆ ಊಳಿಟ್ಟು ನಮ್ಮನ್ನು ಬೆದರಿಸಲೆತ್ನಿಸುವ ಸುರೇಶಣ್ಣ. ಮಾವಿನ ಮರಕ್ಕೆ ಹಾಕಿದ ಉಯ್ಯೆಲೆಯಲ್ಲಿ ನಾವು ತೂಗಿಕೊಳ್ಳುತ್ತಿದ್ದರೆ, ಸದ್ದಿಲ್ಲದೆ ಮರ ಹತ್ತಿ ಮೇಲಿನಿಂದ ಹಗ್ಗ ಬಿಚ್ಚಿ ನಾವು ಬಿದ್ದಾಗ ನಗುತ್ತಿದ್ದ ಸುರೇಶಣ್ಣ. ಒಮ್ಮೆ ನಾನು ಹಾಗೆ ಗಿಡದ ಕತ್ತರಿಸಿದ ಕುಟ್ಟಿಯೊಂದರ ಮೇಲೆ ಬಿದ್ದು ಚಡ್ಡಿ ಹರಿದು ಗಾಯವಾದಾಗ, ಸುರೇಶಣ್ಣನಿಗೆ ಬೆಲ್ಯಮ್ಮನಿಂದ ಒಳ್ಳೇ ಪೂಜೆಯಾಗಿತ್ತು. ಕೋಟೆ ಬೆಟ್ಟದ ಮೈಯ ಬಂಡೆಯಲ್ಲಿದ್ದ ಟಿಪ್ಪು ಸುಲ್ತಾನನ ಸುರಂಗದೆದುರು ನಿಂತು, ‘‘ಮೈಸೂರಿಗೆ ಯಾರೆಂದು ಕೇಳಿದ್ದೀರಿ?’’ ಎಂದು ಬಯಲಾಟದ ದಿಗಿಣ ಕುಣಿಯುತ್ತಿದ್ದ ಸುರೇಶಣ್ಣ.

ನಮ್ಮ ಗದ್ದೆಯನ್ನು ಗೇಣಿಗೆ ಮಾಡಿಕೊಂಡಿದ್ದ ಗಂಗಯ್ಯಣ್ಣನೇ ನಮ್ಮಲ್ಲಿ ಕಾಯಿ, ಸೀಯಾಳ ಕೀಳಲು ಬರುತ್ತಿದ್ದುದು. ಗಂಗಯ್ಯಣ್ಣ ಸೀಯಾಳದ ಮರದ ಬಳಿ ತೆರಳುವಾಗ ನಮ್ಮ ಸಂಭ್ರಮ ಹೇಳಿ ತೀರದು. ಮೂರು ದೊಡ್ಡ ಲೋಟ ಸಿಹಿ ಸಿಹಿ ನೀರು ಹಿಡಿವಂತಹ ಕಾಯ್ಗಳು. ಮತ್ತೆ ಬನ್ನಂಗಾಯ್ಗಳು. ಬನ್ನಂಗಾಯಿ ತಿರುಳು ಸೀಳಿ ಎಬ್ಬಿಸಿ, ಓಲೆ ಬೆಲ್ಲದೊಂದಿಗೆ ಬೆಲ್ಯಮ್ಮ ನಮಗೆಲ್ಲ ತಿನಿಸಿದ ಮೇಲೆ, ಊಟಕ್ಕೆ ಹೊಟ್ಟೆಯಲ್ಲಿ ಸ್ಥಳವಾಗ ಬೇಕಾದರೆ ಪುನಃ ನಮ್ಮ ದಂಡಯಾತ್ರೆ ಸುತ್ತಣ ಹಿತ್ತಿಲು, ಗದ್ದೆಗಳಲ್ಲೆಲ್ಲ ಸಾಗ ಬೇಕು. ಮಧ್ಯಾಹ್ನ ಹನ್ನೆರಡು ಗಂಟೆಗೆ ಪಕ್ಕದ ಮಸೀದಿಯ ಬಾಂಗ್ ಹೊರಟಿತೆಂದರೆ ‘‘ಬಾಂಗ್ ಆಯ್ತು; ಮಕ್ಕಳಿಗೆ ಊಟ ಬಡಿಸಿ’’, ಎಂದು ಬೆಲ್ಯಮ್ಮನ ಕರೆಯೂ ಹೊರಡುತ್ತಿತ್ತು. ಸಂಜೆಯ ಬಾಂಗ್ ಹೊರಟಿತೆಂದರೆ, ‘‘ಬಾಂಗ್ ಆಯ್ತು; ದೀಪ ಬೆಳಗಿ’’ ಎನ್ನುತ್ತಿದ್ದರು. ಆಗ ಚಾವಡಿಯ ತೂಗುದೀಪವನ್ನು ಬೆಳಗಲಾಗುತ್ತಿತ್ತು. ಮಸೀದಿಯ ಬಾಂಗ್ ಅಂದಿಗೂ ಇಂದಿಗೂ ನಮ್ಮ ಬೆಲ್ಯಮ್ಮನ ವಾತ್ಸಲ್ಯದೊಂದಿಗೆ ತಳಕು ಹಾಕಿಕೊಂಡಿದೆ. ಅಂತೆಯೇ ಎಂದೆಂದಿಗೂ ನನಗೆ ಪ್ರಿಯವಾಗಿದೆ .

ಮನೆಯ ಸುತ್ತ ಹೊರಜಗಲಿ, ಬಲದಲ್ಲೊಂದು ಮೇಲ್ಜಗಲಿ, ಅಡುಗೆಮನೆಯೆದುರಿಗೆ ಅಗಲವಾದ ಜಗಲಿ. ಈ ಜಗಲಿಯಲ್ಲೇ ನಾವು ಕುಳಿತು ಉಣ್ಣುತ್ತಿದ್ದೆವು. ಪಶ್ಚಿಮದ ಗದ್ದೆಯ ಪೈರಿನ ಮೇಲಿನಿಂದ ಬೀಸಿ ಬರುವ ತಂಗಾಳಿ ಆಪ್ಯಾಯಮವಾಗಿರುತ್ತಿತ್ತು . ಸೆಗಣಿ ಸಾರಿಸಿದ ಮನೆ ಸದಾ ತಂಪಾಗಿದ್ದು, ಸೆಗಣಿ ಸಾರಿಸಿದ ಅಂಗಳದೆದುರಿನ ಎರಡು ಕೋಣೆಗಳ ಕೊಟ್ಳು ನಮ್ಮ ಆಟದ ಪ್ರಿಯ ತಾಣವಷ್ಟೇ ಅಲ್ಲ, ತಿಂಗಳು ತಿಂಗಳು ಕಾಗೆಯಿಂದ ಮುಟ್ಟಿಸಿಕೊಳ್ಳುತ್ತಿದ್ದ ಅತ್ತೆ, ದೊಡ್ಡಮ್ಮ, ಚಿಕ್ಕಮ್ಮಂದಿರು ಮಲಗುವ ತಾಣವೂ ಆಗಿತ್ತು. ಹುಲ್ಲಿನ ಮಾಡಿನ ಈ ಕೊಟ್ಳುವಿನಂತೆಯೇ ಅಡುಗೆ ಮನೆಯೆದುರಿಗೆ ಅಂಗಳದಾಚೆಗಿದ್ದ ಬಚ್ಚಲು ಮನೆಗೆ ಕೂಡಾ ಹುಲ್ಲಿನ ಮಾಡು. ಅಂಗಳದಲ್ಲಿ ಭತ್ತ ಕುಟ್ಟುವ ಗುಳಿಗಳು. ಕೃಷಿ ಕೆಲಸದಲ್ಲಿ ಸಹಾಯಕ್ಕೆ ಬರುತ್ತಿದ್ದ ನಮ್ಮ ಚೆನ್ನಮ್ಮಕ್ಕ ಭತ್ತ ಕುಟ್ಟುತ್ತಿದ್ದರೆ, ಆ ಭಾರದ ಒನಕೆಗೆ ನನ್ನ ಪುಟ್ಟ ಕೈಗಳನ್ನು ಕೂಡಿಸುತ್ತಿದ್ದ, ಅಂತೆಯೇ ಒನಕೆ ಊರುವಾಗ ‘‘ಉಸ್, ಉಸ್’’ ಎಂದು ಅನುಕರಿಸುತ್ತಿದ್ದ ನನ್ನ ಮೇಲೆ, ನಮ್ಮೆಲ್ಲರ ಮೇಲೆ ಚೆನ್ನಮಕ್ಕನಿಗೆ ತುಂಬ ಅಕ್ಕರೆ. ನಮ್ಮ ಗುಡ್ಡೆಮನೆಗೆ ಸೇರಿದ ಆಸ್ತಿ, ಕೋಟೆ ದೇವಳದ ಬೆಟ್ಟದ ತಡಿಯಲ್ಲಿದ್ದ, ಮೇಲಿನ ಹಿತ್ತಿಲ ಮನೆಯಲ್ಲಿ ಚೆನ್ನಮ್ಮಕ್ಕನ ವಾಸ. ಗಿಡ, ಮರ, ಪೊದೆಗಳಿಂದ ತುಂಬಿದ ಆ ಹಿತ್ತಿಲಲ್ಲಿ ಗಂಧದ ಮರಗಳೂ ಇದ್ದುವು. ಮುಂಬೈಯಲ್ಲಿದ್ದ ದೊಡ್ಡ ದೊಡ್ಡಪ್ಪನ ಸಂಸಾರ, ಸೋದರತ್ತೆಯ ಸಂಸಾರ, ನಮ್ಮ ಚಿಕ್ಕಪ್ಪ ಎಂದಾದರೊಮ್ಮೆ ಕುಟುಂಬ ವರ್ಗದ ಮದುವೆಗಳಿದ್ದರೆ ಊರಿಗೆ ಬಂದು ಹೋಗುತ್ತಿದ್ದರು. ಮಂಗಳೂರಿನಿಂದ ಮುಂಬೈಗೆ ಮೂರುದಿನಗಳ ಹಡಗಿನ ಪಯಣ, ಆಗ. ಈ ಹಡಗಿನ ಪಯಣದ ಭಾಗ್ಯ ನನಗಿದ್ದರೆ ಎಷ್ಟು ಚೆನ್ನಿತ್ತು ಎಂದು ನಾನು ಹಂಬಲಿಸಿದ್ದು ಅಷ್ಟಿಷ್ಟಲ್ಲ. ಆದರೆ, ನನ್ನ ಮದುವೆಯಾಗಿ, ನನ್ನ ಮುಂಬೈ ಪಯಣ ಆರಂಭವಾಗುವ ಹೊತ್ತಿಗೆ ಈ ಹಡಗು ಸಂಚಾರ ನಿಂತೇ ಹೋಗಿತ್ತು. ಸನಿಹ ಬಂಧುಗಳಾದ ಮದುಮಕ್ಕಳಿಗೆ ಔತಣದೇರ್ಪಾಟಂತೂ ನಮ್ಮ ಗುಡ್ಡೆಮನೆಯಲ್ಲಿ ಬಹಳ ಗಡದ್ದಾಗಿರುತ್ತಿತ್ತು. ಭೋಜನದ ಬಳಿಕ, ಮುಂಬೈಯಿಂದ ಬಂದ ಬಂಧುಗಳು, ಹಿತ್ತಿಲಲ್ಲಿ ತೆಂಗಿನ ಮರಗಳಡಿಯಲ್ಲಿ ಚಾಪೆ ಹಾಸಿ ಒರಗಿಕೊಂಡು ಆ ತಂಪುಗಾಳಿಯ ಸುಖವನ್ನು ಸವಿಯುತ್ತಿದ್ದರೆ, ನಾವು ಮಕ್ಕಳೂ ಅವರ ಎಡೆ ಎಡೆಯಲ್ಲಿ ನುಸುಳಿ ಅವರ ಮಾತುಕತೆಯ ಮೋಜನ್ನು ಆಲಿಸಿ ಸವಿಯಲೆತ್ನಿಸುತ್ತಿದ್ದೆವು. ನಗರದಿಂದ ಬರುತ್ತಿದ್ದ ಅಡ್ಕದ ಅತ್ತೆಯ ಮಗ ಯೇಸಣ್ಣ , ಗ್ರಾಮಫೋನ್ ತರುತ್ತಿದ್ದು, ಅದು ನಮ್ಮೆಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ಹಿತ್ತಿಲಂಚಿಗೆ ಗದ್ದೆಯ ಮೇಲೆ ದರೆಗೆ ಅಡ್ಡಲಾಗಿ ಒರಗಿಕೊಂಡಿದ್ದ ತೆಂಗಿನ ಮರವೊಂದಿತ್ತು. ಮಳೆಗಾಲದಲ್ಲಿ ಗದ್ದೆಯಲ್ಲಿ ನೀರು ತುಂಬಿ ಕೊಂಡಾಗ ಆ ಮರದ ಪ್ರತಿಬಿಂಬ ಬೀಸುವ ಗಾಳಿಗೆ ಅಲೆಯಲೆಯಾಗಿ ಆ ನೀರಲ್ಲಿ ಮೂಡುತ್ತಿದ್ದು ಹಾವು ಹರಿದಂತೆ ಕಾಣುತ್ತಿತ್ತು. ನಾವು ಆ ಮರದ ಮೇಲೆ ಒರಗಿಕೊಂಡು ಮುಂದು ಮುಂದಕ್ಕೆ ಹೋಗಿ ಮತ್ತೆ ನೆಟ್ಟಗೆ ಕುಳಿತು ಜೀಕಿಕೊಳ್ಳುತ್ತಿದ್ದೆವು. ಈಗ ಆ ಮರ ಇಲ್ಲವಾಗಿ ವರ್ಷಗಳೆಷ್ಟೋ ಸಂದರೂ, ಈಗಲೂ ಅದು ನನ್ನ ಕನಸಲ್ಲಿ ಮೂಡುವುದಿದೆ. ಮನವರಳಿಸಿ ಮುದನೀಡುವ ಪ್ರಕೃತಿಯ ಮಡಿಲ ಆ ಸುಂದರ ದಿನಗಳು ಮರಳಿ ಬಂದಾವೇ? ಇಲ್ಲ, ಎಂದಿಗೂ ಇಲ್ಲ, ಎನ್ನುವಂತೆ ನನ್ನೂರ ಪರಮಪ್ರಿಯ ರುದ್ರ ರಮ್ಯ ಸಮುದ್ರ ತೀರದ ಬದಲಾದ ನೋಟವೂ ನನ್ನ ಮುಂದೆ ತೆರೆದು ಕೊಂಡಿದೆ. ವಿಶಾಲ ಮರಳ ತೀರವಿದ್ದ, ಹೆದ್ದೆರೆಗಳು ಅಪ್ಪಳಿಸುತ್ತಿದ್ದ,ಚಿಪ್ಪುಗಳನ್ನಾಯ್ವ, ಮರಿಏಡಿಗಳ ಹಿಂದೆ ಓಡುವ ಚಿಣ್ಣರು ಮನಸೋಕ್ತ ಆಡಿ ವಿಹರಿಸುತ್ತಿದ್ದ ತೀರವೀಗ ಬಂಡೆಗಲ್ಲುಗಳ ತಡೆಗೋಡೆಯನ್ನು ಹೊತ್ತು ಸಮುದ್ರವನ್ನೇ ಮರೆಮಾಡಿ ನಿಂತಿದೆ. ಕರೆಯ ವಿಶಾಲ ಮರಳ ಹಾಸು, ಹಸಿರು ಕುರುಚಲು ಬಳ್ಳಿಗಳು, ಅಸಂಖ್ಯ ಗಾಳಿ ಮರಗಳು, ಅವುಗಳ ನಡುವೆ ಇದ್ದ ವೃತ್ತಾಕಾರದ ತೋಡುಬಾವಿಗಳು ಎಲ್ಲವೂ ಅದೆಂದೋ ಮಾಯವಾದುವು. ಸಮುದ್ರ ಹಿಂದೆ ಸರಿದಂತೆ ಅದರ ತಾಣವನ್ನೂ ಆಕ್ರಮಿಸಿ ತನ್ನದಾಗಿಸಿಕೊಂಡ ಹುಲುಮನುಜ, ಈಗ ಸಮುದ್ರಕ್ಕೇ ದಿಗ್ಬಂಧನ ವಿಧಿಸುವ ಯತ್ನದಲ್ಲಿದ್ದಾನೆ. ಪ್ರಕೃತಿ ನಾಶವೇ ನಮ್ಮ ವಿನಾಶ ಎಂದರಿವಾಗುವ ದಿನ ಇನ್ನೂ ದೂರವೇ?

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top