ನೀವು ಸಾಮಾಜಿಕ ಮಾಧ್ಯಮಗಳಲ್ಲಿ ಆ್ಯಕ್ಟಿವ್ ಇಲ್ಲವೇ?.. ಶೇ.57ರಷ್ಟು ಕಂಪನಿಗಳು ನಿಮಗೆ ಉದ್ಯೋಗ ನೀಡುವುದಿಲ್ಲ
ಆನ್ಲೈನ್ನಲ್ಲಿ ಭಾಷಾ ನೀತಿಗಳ ಬಗ್ಗೆ ಆಟಾಟೋಪ ಅಥವಾ ಗೋರಕ್ಷಕರ ಕುರಿತು ಚರ್ಚೆಯಂತಹ ವಿಷಯಗಳು ನಿಮಗೆ ತೃಪ್ತಿಯ ಭಾವನೆಯನ್ನು ನೀಡಬಹುದು, ಆದರೆ ನಿಮಗೆ ಉದ್ಯೋಗ ನೀಡಬಹುದಾದ ವ್ಯಕ್ತಿ ಇವುಗಳನ್ನು ಗಮನಿಸಿದರೆ ಅದು ನಿಮ್ಮ ಭವಿಷ್ಯಕ್ಕೆ ಕೆಂಪು ನಿಶಾನೆಯಾಗಬಹುದು. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಶೇರ್ ಮಾಡಿಕೊಳ್ಳದಿದ್ದರೆ ಅದೂ ನೀವು ಉದ್ಯೋಗ ಪಡೆಯುವಲ್ಲಿ ಅಡಚಣೆಯನ್ನು ಸೃಷ್ಟಿಸಬಹುದು.
ಶೇ.17ರಷ್ಟು ಉದ್ಯೋಗದಾತರು ಸಾಮಾಜಿಕ ಮಾಧ್ಯಮಗಳಲ್ಲಿ ಅತಿಯಾಗಿ ಕ್ರಿಯಾಶೀಲರಾಗಿರುವ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳದಿರಬಹುದು ಎಂದು ಇತ್ತೀಚಿನ ಸಮೀಕ್ಷೆಯೊಂದು ಬೆಳಕಿಗೆ ತಂದಿದೆ. ಆದರೆ ಅಭ್ಯರ್ಥಿಯು ಸಾಮಾಜಿಕ ಮಾಧ್ಯಮಗಳಲ್ಲಿ ಇದ್ದೂ ಇಲ್ಲದಂತಿದ್ದರೆ ಅದೂ ಕೆಟ್ಟದ್ದೇ. ಶೇ.57ರಷ್ಟು ಕಂಪನಿಗಳು ಇಂತಹವರನ್ನು ನೇಮಕ ಮಾಡಿಕೊಳ್ಳುವುದಿಲ್ಲ ಎಂದು ಸಮೀಕ್ಷೆಯಲ್ಲಿ ಕಂಡು ಬಂದಿದೆ.
ಶೇ.92ರಷ್ಟು ಕಂಪನಿಗಳು ತಮ್ಮಲ್ಲಿನ ಖಾಲಿಹುದ್ದೆಗಳಿಗಾಗಿ ಸೂಕ್ತ ವ್ಯಕ್ತಿಗಳ ಅನ್ವೇಷಣೆಗಾಗಿ ಮತ್ತು ಅಭ್ಯರ್ಥಿಗಳ ಜಾತಕಗಳನ್ನು ಜಾಲಾಡಲು ಸಾಮಾಜಿಕ ಮಾಧ್ಯಮಗಳನ್ನು, ನಿರ್ದಿಷ್ಟವಾಗಿ ಫೇಸ್ಬುಕ್, ಟ್ವಿಟರ್ ಮತ್ತು ಲಿಂಕ್ಡ್ಇನ್ಗಳನ್ನು ಬಳಸುತ್ತವೆ ಎನ್ನುತ್ತಾರೆ ಎಂಪಾಸ್ ಡಾಟ್ ಮೊಬಿಯ ಸಂವಹನ ತಜ್ಞ ಅಸವರಿ ಶರ್ಮಾ. ಸಾಮಾಜಿಕ ಮಾಧ್ಯಮಗಳನ್ನು ಜಾಲಾಡುವುದರಿಂದ ತಮಗೆ ಬೇಕಾದ ಅರ್ಹತೆಯ ಅಭ್ಯರ್ಥಿಗಳನ್ನು, ಅದೂ ಕಡಿಮೆ ಸಮಯದಲ್ಲಿ ನೇಮಕ ಮಾಡಿಕೊಳ್ಳಲು ಕಂಪನಿಗಳಿಗೆ ಸಾಧ್ಯವಾಗುತ್ತದೆ ಎನ್ನುತ್ತಾರೆ ಅವರು.
ಸಾಮಾಜಿಕ ಮಾಧ್ಯಮಗಳಲ್ಲಿಯ ತಮ್ಮ ಚಟುವಟಿಕೆಗಳ ಮೂಲಕವೇ ಉತ್ತಮ ಹುದ್ದೆಗಳನ್ನು ಗಿಟ್ಟಿಸಿಕೊಂಡ ಪ್ರಕರಣಗಳಿವೆ. ಕೋರಾ ಬಳಕೆದಾರ ಜೋಷ್ ಲಿಮ್ ಇದಕ್ಕೊಂದು ಉದಾಹರಣೆ. ಅವರು ಕೋರಾ ಜಾಲತಾಣದಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ್ದ ಉತ್ತರವನ್ನು ಕಂಡು ಪ್ರಭಾವಿತರಾಗಿದ್ದ ಪ್ರತಿಷ್ಠಿತ ಕಂಪನಿಯೊಂದರ ಸಿಇಓ ಅವರನ್ನು ಕರೆದು ಕೈತುಂಬ ವೇತನದ ಕೆಲಸ ನೀಡಿದ್ದಾರೆ.
ಸಾಮಾಜಿಕ ಮಾಧ್ಯಮ ಪ್ರೊಫೈಲ್ಗಳ ಪರಿಶೀಲನೆಯಿಂದ ಉದ್ಯೋಗದಾತರು ಅಭ್ಯರ್ಥಿಯ ರೆಸ್ಯೂಮ್ನಲ್ಲಿಲ್ಲದ ವಿವರಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ತಂತ್ರಜ್ಞಾನ ಮತ್ತು ಡಿಜಿಟಲ್ ಸಂಬಂಧಿತ ಹುದ್ದೆಗಳಲ್ಲಿ ಆನ್ಲೈನ್ ಚಟುವಟಿಕೆಯು ಮುಖ್ಯವಾಗಿದೆ. ನೀವು ಆನ್ಲೈನ್ನಲ್ಲಿ ಟೆಕ್ ಮತ್ತು ಕೋಡಿಂಗ್ ಚರ್ಚೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರೆ ಉದ್ಯೋಗದಾತರಿಗೆ ನಿಮ್ಮ ವಿಚಾರಗಳ ಬಗ್ಗೆ ಸ್ಪಷ್ಟವಾದ ಐಡಿಯಾ ಬರುತ್ತದೆ ಎನ್ನುತ್ತಾರೆ ರಿಕ್ರೂಟ್ಮೆಂಟ್ ಸ್ಟಾರ್ಟ್ಅಪ್ ‘ಬಿಲಾಂಗ್’ನ ಸಹಸ್ಥಾಪಕ ರಿಷಭ್ ಕೌಲ್.
ಉದ್ಯೋಗಿಯ ‘ಶೇರಿಂಗ್ ಬಿಹೇವಿಯರ್’ಅನ್ನು ತಿಳಿದುಕೊಳ್ಳಲು ಕೆಲವು ಉದ್ಯೋಗ ದಾತರು ಲಿಂಕ್ಡ್ಇನ್ನಿಂದ ಟೂಲ್ಗಳನ್ನು ಬಳಸಿಕೊಳ್ಳುತ್ತಾರೆ. ತಮ್ಮ ಉದ್ಯೋಗಿಗಳು ಕಂಟೆಂಟ್ಗಳನ್ನು ಶೇರ್ ಮಾಡಿಕೊಳ್ಳಲು ಕಂಪನಿಗಳು ಬಳಸುವ ಪೇಡ್ ಆ್ಯಪ್ ‘ಲಿಂಕ್ಡ್ಇನ್ ಎಲಿವೇಟ್’ ಜನರು ಏನನ್ನು ಮತ್ತು ಹೇಗೆ ಶೇರ್ ಮಾಡಿಕೊಳ್ಳುತ್ತಾರೆ ಎನ್ನುವುದನ್ನು ವಿಶ್ಲೇಷಿಸಿ ತನ್ನ ಬಾಸ್ಗೆ ವರದಿಗಳನ್ನು ರವಾನಿಸುತ್ತದೆ. ನಿಯಮಿತವಾಗಿ ಕಂಟೆಂಟ್ಗಳನ್ನು ಶೇರ್ ಮಾಡಿಕೊಳ್ಳುವ ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳು ತಮ್ಮ ಸೇವೆಗಳಿಗೆ ಉತ್ತಮ ಮಾರುಕಟ್ಟೆಯನ್ನು ಕಂಡುಕೊಳ್ಳುವಲ್ಲಿ ಸಮರ್ಥವಾಗುತ್ತವೆ ಎನ್ನುವುದು ನಮ್ಮ ಸಂಶೋಧನೆಗಳಿಂದ ತಿಳಿದು ಬಂದಿದೆ ಎಂದು ಲಿಂಕ್ಡ್ಇನ್ ತನ್ನ ಕಾರ್ಪೊರೇಟ್ ಬಳಕೆದಾರರಿಗೆ ಸಂದೇಶವೊಂದರಲ್ಲಿ ತಿಳಿಸಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಸದ್ದು ಮಾಡದಿರುವುದು ಅಂತಹ ವ್ಯಕ್ತಿಯು ಇತರರ ಕಣ್ಣಿಗೆ ಬೀಳುವ ಅವಕಾಶಗಳನ್ನು ಕುಗ್ಗಿಸುತ್ತದೆ ಎನ್ನುತ್ತಾರೆ ಕೌಲ್. ಅತ್ಯುತ್ತಮ ಇಂಜಿನಿಯರ್ಗಳು ಖಾಲಿ ಲಿಂಕ್ಡ್ಇನ್ ಪ್ರೊಫೈಲ್ಗಳನ್ನು ಹೊಂದಿರುತ್ತಾರೆ, ಆದರೆ ಸಾಮಾನ್ಯವಾಗಿ ಅವರು ತಂತ್ರಜ್ಞಾನ ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುತ್ತಾರೆ. ಉದ್ಯೋಗದಾತರಿಗೆ ಇಷ್ಟು ಸಾಕಾಗುತ್ತದೆ ಎಂದು ಕೌಲ್ ಅಭಿಪ್ರಾಯಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವುದು ಅಥವಾ ತಮ್ಮದೇ ಆದ ಬ್ಲಾಗ್ ಹೊಂದಿರುವುದು ಮಧ್ಯಮ ದರ್ಜೆಯಿಂದ ಸೀನಿಯರ್ ದರ್ಜೆಯವರೆಗಿನ ಹುದ್ದೆಗಳಲ್ಲಿರುವರಿಗೆ ಮತ್ತು 10ರಿಂದ 15 ವರ್ಷ ಅನುಭವವಿರುವ ಜನರಿಗೆ ಒಳ್ಳೆಯದು. ಅನುಭವಿ ವೃತ್ತಿಪರರು ಜಾಬ್ ಲಿಸ್ಟಿಂಗ್ ಸೈಟ್ಗಳಲ್ಲಿರುವ ಸಾಧ್ಯತೆಗಳು ಕಡಿಮೆ. ಹೀಗಾಗಿ ಅವರ ಆನ್ಲೈನ್ ಚಟುವಟಿಕೆಗಳನ್ನು ವೀಕ್ಷಿಸುವ ಮೂಲಕ ಮಾತ್ರ ಸಂಭಾವ್ಯ ಉದ್ಯೋಗದಾತರು ಅಂತಹವರನ್ನು ಅನ್ವೇಷಿಸಬಹುದಾಗಿದೆ ಎನ್ನುತ್ತಾರೆ ಕೌಲ್.
ಸಾಮಾಜಿಕ ಮಾಧ್ಯಮಗಳಲ್ಲಿ ತೀಕ್ಷ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಸಮಸ್ಯೆಯನ್ನುಂಟು ಮಾಡುವುದಿಲ್ಲ, ಆದರೆ ಅಂತಹ ಅಭಿಪ್ರಾಯಗಳ ಅಭಿವ್ಯಕ್ತಿಯ ವಿಧಾನಗಳು ಮುಖ್ಯವಾಗುತ್ತವೆ. ಆಕ್ಷೇಪಾರ್ಹ ಮತ್ತು ನಿಂದನೀಯ ಶಬ್ದಗಳ ಬಳಕೆಯನ್ನು ಉದ್ಯೋಗದಾತರು ಮೆಚ್ಚಿಕೊಳ್ಳುವುದಿಲ್ಲ. ಫೇಸ್ಬುಕ್ ಅಥವಾ ಟ್ವಿಟರ್ಗಳಿಗಿಂತ ಹೆಚ್ಚಾಗಿ ಪ್ರೊಫೆಷನಲ್ ನೆಟ್ವರ್ಕ್ಗಳನ್ನು ಪರಿಶೀಲಿಸಲಾಗುತ್ತದೆ ಎನ್ನುತ್ತಾರೆ ಟೀಮ್ಲೀಸ್ನ ಸಹಸ್ಥಾಪಕಿ ರಿತುಪರ್ಣಾ ಚಕ್ರವರ್ತಿ.