---

ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಸಂದರ್ಶನ

ಮೋದಿ ಅಲೆ ಇರುವುದು ಮಾಧ್ಯಮಗಳಲ್ಲಿ ಮಾತ್ರ: ಸಿದ್ದರಾಮಯ್ಯ

ರಾಜ್ಯ ವಿಧಾನಸಭಾ ಚುನಾವಣೆಯ ಕಾವು ಏರುತ್ತಿದೆ. ಬಿಜೆಪಿ ಪರವಾಗಿ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ಮೋದಿಯೇ ಇಳಿಯುವಂತಹ ಅನಿವಾರ್ಯತೆಯನ್ನು ಮುಖ್ಯಮಂತ್ರಿ ಸಿದ್ದ್ಧರಾಮಯ್ಯ ಸೃಷ್ಟಿಸಿದ್ದಾರೆ. ಚುನಾವಣೆ ಸಿದ್ದರಾಮಯ್ಯ ಮತ್ತು ಮೋದಿ ನಡುವಿನ ಹಣಾಹಣಿಯಾಗಿ ಪರಿವರ್ತನೆಗೊಂಡಿದೆ. ಇದೇ ಸಂದರ್ಭದಲ್ಲಿ ಪಕ್ಷದೊಳಗೂ, ಹೊರಗೂ ಸಿದ್ದರಾಮಯ್ಯ ಮುಂದಿರುವ ಸವಾಲುಗಳನ್ನು ಮುಂದಿಟ್ಟು 'ವಾರ್ತಾಭಾರತಿ' ಅವರನ್ನು ವಿಶೇಷ ಸಂದರ್ಶನ ಮಾಡಿದೆ.


ವಾರ್ತಾಭಾರತಿ: ಈ ಬಾರಿ ಅಭಿವೃದ್ಧಿಯನ್ನು ವಿಷಯವನ್ನಾಗಿಟ್ಟು ಕೊಳ್ಳದೆ ಲಿಂಗಾಯತ ಧರ್ಮ, ಕನ್ನಡ ಬಾವುಟ ಮೊದಲಾದ ಭಾವ ನಾತ್ಮಕ ವಿಷಯಗಳನ್ನಿಟ್ಟು ತಮ್ಮ ಪಕ್ಷ ಚುನಾವಣೆ ಎದುರಿಸಲು ಹೊರಟಿದೆ ಎಂಬ ಆರೋಪಗಳಿವೆಯಲ್ಲ?

ಸಿದ್ದರಾಮಯ್ಯ: ಲಿಂಗಾಯತ ಧರ್ಮ ಇಲ್ಲವೆ ನಾಡಧ್ವಜ ನಮ್ಮ ಚುನಾವಣಾ ಪ್ರಚಾರದ ವಿಷಯ ಖಂಡಿತ ಅಲ್ಲ. ಈ ವಿಚಾರ ಗಳನ್ನು ನಾನೆಂದೂ ಚುನಾವಣಾ ಪ್ರಚಾರದಲ್ಲಿ ಪ್ರಸ್ತಾಪಿಸಿಲ್ಲ. ನಿಮ್ಮಂತಹಪತ್ರಕರ್ತರು ಪ್ರಶ್ನೆ ಕೇಳಿದಾಗ ಉತ್ತರಿಸಿರಬಹುದು.ಚುನಾವಣೆಯಲ್ಲಿ ನಮ್ಮ ಮುಖ್ಯ ವಿಷಯವೇ ಅಭಿವೃದ್ಧ್ದಿ. ಐದು ವರ್ಷಗಳಲ್ಲಿ ನಾವು ರೂಪಿಸಿ ಜಾರಿಗೆ ತಂದ ಯೋಜನೆಗಳೇ ಚುನಾವಣಾ ವಿಷಯ.

ಲಿಂಗಾಯತ-ವೀರಶೈವ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆಯನ್ನು ಮೊದಲು ಮುಂದಿಟ್ಟವರು ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ. ಅದರ ನಂತರ ಬೇರೆಯ ವರೂ ಮನವಿ ಸಲ್ಲಿಸಿದರು. ನಮ್ಮ ಸರಕಾರ ಆ ಮನವಿಗಳನ್ನು ಪರಿಶೀಲಿಸಿ ವರದಿ ನೀಡಲು ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ನೇಮಿಸಿದೆ. ಅವರು ಕೊಟ್ಟ ವರದಿ ಆಧಾರದಲ್ಲಿ ಸಂಪುಟ ಕೈಗೊಂಡ ತೀರ್ಮಾನವನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿದ್ದೇನೆ. ನಿಜ ವಾಗಿ ಹೇಳಬೇಕೆಂದರೆ ನಮ್ಮ ಸರಕಾರ ಕೇವಲ ಪೋಸ್ಟ್‌ಮ್ಯಾನ್ ಕೆಲಸ ಮಾಡಿದೆ. ವಿರೋಧ ಪಕ್ಷಗಳು ಹೇಳುವಂತೆ ನಾವೇನೂ ಹೊಸ ಧರ್ಮ ಹುಟ್ಟುಹಾಕಿಲ್ಲ, ಯಾವ ಧರ್ಮವನ್ನೂ ಒಡೆದಿಲ್ಲ. 850 ವರ್ಷಗಳ ಹಿಂದೆಯೇ ಬಸವಣ್ಣನವರು ವೈದಿಕಶಾಹಿಗೆ ವಿರುದ್ಧ ವಾಗಿ ಲಿಂಗಾಯತ ಧರ್ಮ ಸ್ಥಾಪಿಸಿದ್ದರು.


 ವಾ.ಭಾ.: ತಮ್ಮ ನೇತೃತ್ವದಲ್ಲಿ ಸರಕಾರ ನುಡಿದಂತೆ ನಡೆದಿದೆಯೇ?

ಸಿದ್ದರಾಮಯ್ಯ: ಖಂಡಿತ ನಾವು ನುಡಿದಂತೆ ನಡೆದಿದ್ದೇವೆ. ಕಳೆದ ಚುನಾವಣೆ ಯ ಕಾಲದಲ್ಲಿ ನಾವು 165 ಭರವಸೆಗಳನ್ನು ನೀಡಿ್ದೆವು. ಅವುಗಳಲ್ಲಿ 158 ಭರವಸೆ ಗಳನ್ನು ಈಡೇರಿಸಿದ್ದೇವೆ. ಯಾರಾದರು ಸವಾಲು ಹಾಕಿದರೆ ಅದಕ್ಕೆ ಅಧಿಕೃತ ಪುರಾವೆಗಳನ್ನು ಒದಗಿಸಲು ನಾನು ಸಿದ್ಧನಿದ್ದೇನೆ. ಆರೇಳು ಭರವಸೆಗಳನ್ನು ತಾಂತ್ರಿಕ ಕಾರಣಗಳಿಂದಾಗಿ ಅನುಷ್ಠಾನಕ್ಕೆ ತರಲಾಗಿಲ್ಲ. ಇಷ್ಟು ಮಾತ್ರವಲ್ಲ ಹೇಳದೆ ಇದ್ದುದನ್ನು ಕೂಡಾ ಮಾಡಿ ತೋರಿಸಿದ್ದೇವೆ. ರೈತರ ಸಾಲ ಮನ್ನಾ, ಇಂದಿರಾ ಕ್ಯಾಂಟೀನ್, ಮಾತೃಪೂರ್ಣ, ಅನಿಲ ಭಾಗ್ಯ, ಪಶುಭಾಗ್ಯ, ಮೈತ್ರಿ, ಶೂ ಮತ್ತು ಸಾಕ್ಸ್ ಭಾಗ್ಯ, ಮೈತ್ರಿ, ಕೃಷಿ ಇ ಮಾರುಕಟ್ಟೆ ಮೊದಲಾದ 30ಕ್ಕೂ ಹೆಚ್ಚು ಕಾರ್ಯಕ್ರಮಗಳು ನಮ್ಮ ಪ್ರಣಾಳಿ ಕೆಯಲ್ಲಿ ಇಲ್ಲದೆ ಇದ್ದರೂ ಜಾರಿಗೆ ತಂದಿದ್ದೇವೆ. ರಾಜಕೀಯ ಪಕ್ಷಗಳು ಸಾಮಾನ್ಯ ವಾಗಿ ಪ್ರಣಾಳಿಕೆಯನ್ನು ಪ್ರಚಾರ ಪತ್ರ ವಾಗಿ ಬಳಸುತ್ತೆ. ನಾವು ಅದನ್ನು ಸರಕಾರದ ಲಿಖಿತ ಅಜೆಂಡಾ ಎಂದು ಸ್ವೀಕರಿಸಿ ಭರವಸೆಗಳನ್ನು ಈಡೇರಿಸಿದ್ದೇವೆ.


ವಾ.ಭಾ.: ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳ ಪ್ರಕರಣಗಳು ಹೆಚ್ಚಿವೆ ಎಂಬ ಆರೋಪಗಳ ಕುರಿತು?

ಸಿದ್ದರಾಮಯ್ಯ: 4 ವರ್ಷಗಳಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗಿಲ್ಲ. 2015- 16 ಮತ್ತು 2016-17ರ ಅವಧಿ ಭೀಕರ ಬರಗಾಲದ ದಿನಗಳು. ಆ ಅವಧಿಯಲ್ಲಿ ಕರ್ನಾಟಕದಲ್ಲಿ ರೈತರ ಆತ್ಮಹತ್ಯೆಗಳು ಹೆಚ್ಚಾಗಿ ನಡೆದು ಹೋಯಿತು. ಅದರ ನಂತರದ ವರ್ಷಗಳಲ್ಲಿ ರೈತರ ಆತ್ಮಹತ್ಯೆಯ ಸಂಖ್ಯೆ ಕಡಿಮೆಯಾಗಿದೆ. ನಮ್ಮ ಸರಕಾರದ ಹಲವಾರು ಯೋಜನೆಗಳು ರೈತರ ಆತ್ಮಹತ್ಯೆ ಕಡಿಮೆಯಾಗಲು ಕಾರಣ. 50 ಸಾವಿರ ರೂ.ವರೆಗಿನ ಸಾಲ ಮನ್ನಾ ಮಾಡಿದ್ದು ಇದರಿಂದ 22.27 ಲಕ್ಷ ರೂ. ರೈತರಿಗೆ 8,165 ಕೋಟಿ ರೂ. ಲಾಭವಾಗಿದೆ. ಬೆಳೆ ಸಾಲ ಪಡೆದ ರೈತರು ಸಾವಿಗೀಡಾದಲ್ಲಿ ಒಂದು ಲಕ್ಷ ರೂ.ವರೆಗಿನ ಅವರ ಸಾಲವನ್ನು ಮನ್ನಾ ಮಾಡಲಾಗಿದೆ. ನಾವು ಮೂರು ಲಕ್ಷ ರೂ.ವರೆಗೆ ರೈತರಿಗೆ ಬಡ್ಡಿರಹಿತ ಸಾಲ ನೀಡುತ್ತಿದ್ದೇವೆ. 2008-13ರ ಬಿಜೆಪಿ ಆಡಳಿತದ ಅವಧಿಯಲ್ಲಿ ಕೃಷಿ ಕ್ಷೇತ್ರಕ್ಕೆ ಖರ್ಚು ಮಾಡ ಲಾದ ಹಣ ಕೇವಲ 7,367 ಕೋಟಿ ರೂ.. ನಮ್ಮ 5 ವರ್ಷಗಳ ಅವಧಿಯಲ್ಲಿ ಖರ್ಚು ಮಾಡಲಾದ ಹಣ 19,561 ಕೋಟಿ ರೂ.. ಅಂದರೆ ಶೇ.256ರಷ್ಟು ಹೆಚ್ಚಳ. ನಮ್ಮ ಕೃಷಿಭಾಗ್ಯ, ಕ್ಷೀರಭಾಗ್ಯ,ರೈತಬೆಳಕು, ಸಾವಯವ ಭಾಗ್ಯ, ಹವಾಮಾನ ಆಧರಿತ ಬೆಳೆ ವಿಮೆ, ಮಣ್ಣು ಪರೀಕ್ಷಾ ಯೋಜನೆಗಳು ರೈತರಿಗೆ ನೆರವಾಗಿವೆ. ನೀರಾವರಿ ಕ್ಷೇತ್ರಕ್ಕೆ ಕಳೆದ 5 ವರ್ಷಗಳಲ್ಲಿ 50,000 ಕೋಟಿ ರೂ. ಅನುದಾನ ನೀಡಿದ್ದೇವೆ. ನಾನು ರೈತ ಕುಟುಂಬದಿಂದ ಬಂದವನು, ದನ ಮೇಯಿಸಿ, ಹೊಲ ಉತ್ತು ನನಗೆ ಗೊತ್ತು. ರೈತಸಂಘದ ಮೂಲಕ ರಾಜಕೀಯಕ್ಕೆ ಬಂದವನು. ರೈತರ ಸಮಸ್ಯೆಗಳು, ಕಷ್ಟ-ಸುಖಗಳು ನನಗೆ ಗೊತ್ತು. ಪ್ರತೀ ಬಜೆಟ್‌ನಲ್ಲಿ ಕೃಷಿ ಸಂಬಂಧಿ ಯೋಜನೆಗಳಿಗೆ ನಮ್ಮ ಒಟ್ಟು ಆಯವ್ಯಯದ ಕನಿಷ್ಠ ಶೇ.25ರಷ್ಟು ಹಣವನ್ನು ಮೀಸಲಿಟ್ಟಿದ್ದೇನೆ. ಇದರಿಂದಾಗಿ ಕಳೆದ ಎರಡು ವರ್ಷಗಳಿಂದ ರೈತರ ಆತ್ಮಹತ್ಯೆ ಕಡಿಮೆಯಾಗಿದೆ.


ವಾ.ಭಾ: ಪ್ರಾದೇಶಿಕ ಪಕ್ಷವಷ್ಟೇ ರಾಜ್ಯದ ಹಿತಾಸಕ್ತಿ ಕಾಪಾಡಬಹುದು ಎನ್ನುವ ಅಭಿಪ್ರಾಯ ಜನರಲ್ಲಿ ಗಾಢವಾಗುತ್ತಿದೆ. ಈ ಬಗ್ಗೆ ತಮ್ಮ ನಿಲುವು?

ಸಿದ್ದರಾಮಯ್ಯ: ದೇಶದ ಮಟ್ಟಿಗೆ ನಿಮ್ಮ ಅಭಿಪ್ರಾಯ ಸ್ವಲ್ಪ ನಿಜ ಇರಬಹುದು. ಆದರೆ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಎಂದೂ ಮತದಾರರ ಬೆಂಬಲ ಸಿಕ್ಕಿಲ್ಲ. ನಮ್ಮದು ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯ ಅಲ್ಲ. ಇಲ್ಲಿನ ಮತದಾರರು ಸದಾ ರಾಷ್ಟ್ರೀಯ ಪಕ್ಷವನ್ನೇ ಬೆಂಬಲಿಸುತ್ತಾ ಬಂದಿದ್ದಾರೆ.
ಈಗ ನಮ್ಮ ಕಾಂಗ್ರೆಸ್ ಪಕ್ಷ ಕೂಡಾ ಹೆಚ್ಚು ಪ್ರಾದೇಶಿ ಕವಾಗಿದೆ, ಬಿಜೆಪಿ ಹೆಚ್ಚು ರಾಷ್ಟ್ರೀಯವಾಗಿದೆ. ಹಿಂದಿ ಹೇರಿಕೆ, ನಾಡಧ್ವಜ ಮೊದಲಾದ ವಿಷಯಗಳಲ್ಲಿ ನಮ್ಮ ಪಕ್ಷದ ಹೈಕಮಾಂಡ್ ನಮಗೆ ಮುಕ್ತವಾದ ಸ್ವಾತಂತ್ರ್ಯ ಕೊಟ್ಟಿತ್ತು. ರಾಹುಲ್ ಗಾಂಧಿ ಅವರು ನೂತನ ಅಧ್ಯಕ್ಷ ರಾದ ನಂತರ ಇಂತಹದ್ದೊಂದು ಬೆಳವಣಿಗೆಯಾಗಿದೆ ಎನ್ನುವುದನ್ನು ಗಮನಿಸಬೇಕು.


ವಾ.ಭಾ: ಒಂದು ಕಾಲದ ಅಹಿಂದ ಮಿತ್ರರು ನಿಮ್ಮ ವಿರುದ್ಧ ಮಾತನಾಡುತ್ತಿದ್ದಾರಲ್ಲ?
ಸಿದ್ದರಾಮಯ್ಯ: ಅಹಿಂದ ಮಿತ್ರರಲ್ಲಿ ಯಾರು ನನ್ನ ವಿರುದ್ಧ ಮಾತ ನಾಡುತ್ತಿದ್ದಾರೆ ಎಂದು ನಿರ್ದಿಷ್ಟವಾಗಿ ಹೇಳಿದರೆ ಉತ್ತರಿಸಬಹುದು. ಇವೆಲ್ಲವೂ ಸಂಘ ಪರಿವಾರದ ಕುತಂತ್ರಗಳು. ಅವರು ದಲಿತರ ವಿರುದ್ಧ ದಲಿತರನ್ನು, ಹಿಂದುಳಿದ ಜಾತಿಗಳ ವಿರುದ್ಧ ಹಿಂದುಳಿದ ಜಾತಿಗಳನ್ನೇ ಎತ್ತಿಕಟ್ಟುತ್ತಾರೆ. ಯಾರೋ ಒಬ್ಬಳು ಮುಸ್ಲಿಮ್ ಹೆಣ್ಣುಮಗಳನ್ನು ಕರೆತಂದು ಮುಸ್ಲಿಮರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿಲ್ಲವೇ?
ಇಂತಹ ಕುತಂತ್ರಗಳೆಲ್ಲವೂ 25 ವರ್ಷಗಳ ಹಿಂದೆ ನಡೆಯುತ್ತಿತ್ತೋ ಏನೋ? ಈಗ ನಡೆಯಲಾರದು. ಮಂಡಲ್ ವರದಿ ಜಾರಿಗೊಳಿಸಿದಾಗ ಹಿಂದುಳಿದ ಜಾತಿಗಳಲ್ಲಿ ಅಷ್ಟೊಂದು ಜಾಗೃತಿ ಇರಲಿಲ್ಲ, ಅದರಿಂದಾಗಿ ಅವರೇ ವಿರೋಧಿಸಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಇದರಿಂದಾಗಿ ಬಿಜೆಪಿ ಕೂಡಾ ಮೀಸಲಾತಿ ವಿರುದ್ಧ ಬಹಿರಂಗವಾಗಿ ದನಿ ಎತ್ತುವ ಸ್ಥಿತಿಯಲ್ಲಿಲ್ಲ. ಇದಕ್ಕಾಗಿ ಇಂತಹ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.
ಒಂದು ಕಡೆ ಇವರೇ ಸಿದ್ದರಾಮಯ್ಯನವರದ್ದು ‘ಅಹಿಂದ ಸರಕಾರ’ ಎಂದು ಆರೋಪಿಸುತ್ತಾರೆ, ಇನ್ನೊಂದು ಕಡೆ ಸಿದ್ದರಾಮಯ್ಯನವರನ್ನು ಅಹಿಂದ ದವರೇ ವಿರೋಧಿಸುತ್ತಿದ್ದಾರೆ ಎಂದು ಪ್ರಚಾರ ಮಾಡ್ತಾರೆ. ಜನ ಜಾಣರಿದ್ದಾರೆ. ಅವರಿಗೆ ಗೊತ್ತಾಗುತ್ತೆ.


ವಾ.ಭಾ: ದಲಿತ ಮುಖ್ಯಮಂತ್ರಿ ಕೂಗಿನ ಬಗ್ಗೆ ನಿಮ್ಮ ಅಭಿಪ್ರಾಯ?

ಸಿದ್ದರಾಮಯ್ಯ: ದಲಿತರು ಮುಖ್ಯಮಂತ್ರಿ ಯಾಗಬೇಕೆನ್ನುವವರಲ್ಲಿ ನಾನೂ ಒಬ್ಬ. ಯಾರಾದರೂ ದಲಿತರು ಸಿಎಂ ಇಲ್ಲವೇ ಪ್ರಧಾನಮಂತ್ರಿ ಆಗಲು ಸಾಧ್ಯ ಇದ್ದರೆ ಅದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ.
ಆದರೆ ಇಲ್ಲಿ ದಲಿತ ಮುಖ್ಯಮಂತ್ರಿಯ ವಿಷಯ ಎತ್ತುತ್ತಿರುವವರು ಅದನ್ನು ದಲಿತರ ಮೇಲಿನ ಕಾಳಜಿಯಿಂದ ಮಾಡ್ತಿಲ್ಲ. ನಮ್ಮ ನಡುವೆ ಒಡಕು ಮೂಡಿಸುವ ಉದ್ದೇಶದಿಂದ ಮಾಡ್ತಾ ಇದ್ದಾರೆ.
ನಾನೂ ದಲಿತನೇ, ಹುಟ್ಟಿನಿಂದ ಇಲ್ಲದೇ ಇರ ಬಹುದು, ಆದರೆ ಅವರ ಮನೆಮಗನಾಗಿ ಬೆಳೆದ ವನು ನಾನು. ಈ ಬದ್ಧತೆ ಇರುವ ಕಾರಣಕ್ಕಾಗಿಯೇ ಕ್ರಾಂತಿಕಾರಿಯಾದ ಎಸ್‌ಸಿಎಸ್ಪಿ ಮತ್ತು ಟಿಎಸ್ಪಿ ಕಾಯ್ದೆ ಜಾರಿಗೆ ತಂದೆವು. ಇದರಿಂದಾಗಿ ಎಸ್ಸಿ ಮತ್ತು ಎಸ್ಟಿ ಸಮುದಾಯದ ಅಭಿವೃದ್ಧಿಗಾಗಿ ನಮ್ಮ ಒಟ್ಟು ಆಯವ್ಯಯದ ಶೇ.24.1ರಷ್ಟನ್ನು ವ್ಯಯ ಮಾಡಿದ್ದೇವೆ. ಕಳೆದ ನಾಲ್ಕು ವರ್ಷಗಳಲ್ಲಿ ಈ ಉಪಯೋಜನೆಗಾಗಿ 84 ಸಾವಿರ ಕೋಟಿ ರೂ. ವ್ಯಯಮಾಡಿದ್ದೇವೆ. ಈ ವರ್ಷ 28 ಸಾವಿರ ಕೋಟಿ ರೂ. ಮೀಸಲಿರಿಸಿದ್ದೇವೆ. ಕೇಂದ್ರ ಸರಕಾರ ತನ್ನ ಬಜೆಟ್‌ನಲ್ಲಿ ಈ ವರ್ಷ ನಿಗದಿಪಡಿಸಿರುವ ಹಣ ಕೇವಲ 52 ಸಾವಿರ ಕೋಟಿ ರೂ..
ನಮಗೆ ಬೇಕಾಗಿರುವುದು ದಲಿತ ಮುಖ್ಯಮಂತ್ರಿಗಿಂತಲೂ ಹೆಚ್ಚಾಗಿ ದಲಿತರ ಪರವಾಗಿ ಕೆಲಸ ಮಾಡುವ ಮುಖ್ಯಮಂತ್ರಿ. ಆ ಮುಖ್ಯಮಂತ್ರಿಯಾಗಿದ್ದೇನೆ ಎನ್ನುವ ಹೆಮ್ಮೆ ನನಗೂ ಇದೆ, ಆ ತೃಪ್ತಿ ರಾಜ್ಯದ ಜನರಲ್ಲಿಯೂ ಇದೆ.


ವಾ.ಭಾ: ನೀವು ಅಲ್ಪಸಂಖ್ಯಾತರ ಪರವಾಗಿ ಇಷ್ಟೊಂದು ಕೆಲಸ ಮಾಡುತ್ತ ಬಂದಿದ್ದರೂ ಅವರ ಸ್ಥಿತಿಗತಿಗಳಲ್ಲಿ ಮೂಲಭೂತ ಬದಲಾವಣೆ ಆಗಿಲ್ಲ ಎಂಬ ಅಭಿಪ್ರಾಯ ಇದೆ. ಇದನ್ನು ನೀವು ಹೇಗೆ ವಿವರಿಸುತ್ತೀರಿ.

ಸಿದ್ದರಾಮಯ್ಯ: ನಿಮ್ಮ ಮಾತನ್ನು ನಾನು ಪೂರ್ಣವಾಗಿ ಒಪ್ಪಲಾರೆ. ಬದಲಾವಣೆ ನಿರೀಕ್ಷಿತ ಪ್ರಮಾಣದಲ್ಲಿ, ವೇಗದಲ್ಲಿ ಆಗಿಲ್ಲದೆ ಇರಬಹುದು, ಆದರೆ ಮುಸ್ಲಿಂ ಸಮುದಾಯದ ಸ್ಥಿತಿಗತಿಯಲ್ಲಿ ಸಾಕಷ್ಟು ಸುಧಾರಣೆಗಳು ಆಗಿವೆ. ಇಂದು ಸಮಾಜದ ವಿವಿಧ ವಲಯಗಳಲ್ಲಿ ಮುಸ್ಲಿಂ ಸಮುದಾಯದ ಪ್ರತಿನಿಧಿಗಳನ್ನು ನೀವು ಕಾಣುತ್ತೀರಿ. ಸುಶಿಕ್ಷಿತ ಮುಸ್ಲಿಂ ಯುವಪೀಳಿಗೆ ಕ್ರಿಯಾಶೀಲವಾಗಿ ತೊಡಗಿಕೊಂಡಿರುವುದನ್ನು ಕಾಣಬಹುದು.

ಮೇಲಿನ ಅಂಶಕ್ಕೆ ಪೂರಕವಾಗಿ ನಿಮಗೆ ಕೆಲವು ಉದಾಹರಣೆಗಳನ್ನು ನೀಡುತ್ತೇನೆ. ನಮ್ಮ ಸರಕಾರದ ಅವಧಿಯಲ್ಲಿ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಮೆರಿಟ್-ಕಮ್- ಮೀನ್ಸ್ ವಿದ್ಯಾರ್ಥಿವೇತನ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ 5.5 ಲಕ್ಷದಿಂದ 14 ಲಕ್ಷಕ್ಕೆ ಏರಿಕೆಯಾಗಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಇದಕ್ಕಾಗಿ 1,606 ಕೋಟಿ ರೂ. ವಿದ್ಯಾರ್ಥಿ ವೇತನ ನೀಡಿದ್ದೇವೆ.

ಈ ಹಿಂದೆ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಯೋಜನೆಯಡಿ ನೀಡುವ 20 ರೂ. ಲಕ್ಷ ವಿದ್ಯಾರ್ಥಿವೇತನ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ 20 ಇತ್ತು. ಅದು ಇಂದು 400 ಕ್ಕೆ ಏರಿಕೆಯಾಗಿದೆ. ‘ಅರಿವು’ಯೋಜನೆಯಡಿ ತಾಂತ್ರಿಕ ಹಾಗೂ ವೈದ್ಯ ಕೀಯ ಶಿಕ್ಷಣ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾ ರ್ಥಿಗಳಿಗೆ ವಿಶೇಷ ನೆರವು ನೀಡಲಾಗುತ್ತದೆ. 78,536 ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆದಿದ್ದಾರೆ. ಈ ಹಿಂದೆ ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಸಂಖ್ಯೆ 124 ಇತ್ತು. ಕಳೆದ 4 ವರ್ಷಗಳ ಅವಧಿಯಲ್ಲಿ 190 ಹೊಸ ವಿದ್ಯಾರ್ಥಿನಿಲಯಗಳನ್ನು ತೆರೆಯಲಾಗಿದ್ದು ಒಟ್ಟು 18,000 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ. ಈ ಹಿಂದೆ 47 ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, 3 ಪದವಿ ಪೂರ್ವ ಕಾಲೇಜು ಗಳು ಕಾರ್ಯ ನಿರ್ವಹಿಸುತ್ತಿದ್ದವು. ಕಳೆದ ನಾಲ್ಕು ವರ್ಷದ ಅವಧಿಯಲ್ಲಿ 82 ಹೊಸ ವಸತಿ ಶಾಲಾ ಕಾಲೇಜುಗಳನ್ನು ತೆರೆಯಲಾಗಿದ್ದು, 25 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ.

ಇದಲ್ಲದೆ ಹೊಸದಾಗಿ 20 ಮೊರಾರ್ಜಿ ವಸತಿ ಶಾಲೆ, 5 ಪದವಿ ಪೂರ್ವ ಕಾಲೇಜು, 2 ಮಾದರಿ ವಸತಿ ಶಾಲೆಗಳ ಆರಂಭಕ್ಕೂ ಅನುಕೂಲ ಮಾಡಲಾಗಿದೆ. ಹೊಸದಾಗಿ 25 ಮೊರಾರ್ಜಿ ವಸತಿ ಶಾಲೆ, ಐದು ಪದವಿಪೂರ್ವ ಮಹಿಳಾ ವಸತಿ ಕಾಲೇಜು, ಎರಡು ಮಾದರಿ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗುವುದು. ಇದರ ಜತೆಗೆ 25 ವಿದ್ಯಾರ್ಥಿ ನಿಲಯ, 10 ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯಗಳು, ನಾಲ್ಕು ಬಿ.ಎಡ್. ಮತ್ತು ಡಿ.ಎಡ್. ಆಂಗ್ಲ ಮಾಧ್ಯಮ ಬಾಲಕಿಯರ ವಸತಿ ಸಹಿತ ಕಾಲೇಜು ಮತ್ತು ಸಂಪನ್ಮೂಲ ಕೇಂದ್ರವನ್ನು ಪ್ರಾರಂಭಿಸಲಾಗುವುದು.

ಐಐಎಂ, ಐಐಟಿ, ಐಐಎಸ್ಸಿ ಮುಂತಾದ ಪ್ರತಿಷ್ಠಿತ ರಾಷ್ಟ್ರೀಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿ ಗಳಿಗೆ ರೂ. 2 ಲಕ್ಷ ಪ್ರೋತ್ಸಾಹಧನ ನೀಡಲು ತೀರ್ಮಾನಿಸಿದ್ದೇವೆ. ಇದನ್ನೆಲ್ಲಾ ಹೇಳುತ್ತಿರುವ ಉದ್ದೇಶವಿಷ್ಟೇ, ಮುಸಲ್ಮಾನರ ಏಳಿಗೆಯ ವಿಚಾರ ಬಂದಾಗ ನಾವು ಓಲೈಕೆಯ ರಾಜಕಾರಣ ಮಾಡುತ್ತಿದ್ದೇವೆ ಎಂದು ವಿಪಕ್ಷಗಳು ಆರೋಪಿಸಲು ಬರುತ್ತವೆ. ನಾನು ಮೇಲೆ ಹೇಳಿದ ಕಾರ್ಯಕ್ರಮಗಳಲ್ಲಿ ನಿಮಗೆ ಓಲೈಕೆ ಎಲ್ಲಿ ಕಂಡು ಬರುತ್ತದೆ! ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಒಂದು ಸಮುದಾಯವನ್ನು ಶೈಕ್ಷಣಿಕವಾಗಿ ಮುಂಚೂಣಿಗೆ ತರುವ, ಸಮಾನ ಅವಕಾಶಗಳನ್ನು ಪಡೆಯುವಂತೆ ಸಜ್ಜುಗೊಳಿಸುವ ಕಾರ್ಯಕ್ರಮಗಳನ್ನು ನಾವು ಮಾಡುತ್ತಿದ್ದೇವೆ. ಇದು ಓಲೈಕೆ ಯಾಗುತ್ತದೆಯೇ?

ಅಲ್ಪಸಂಖ್ಯಾತರಿಗೆ ಕೌಶಲ್ಯಾಭಿವೃದ್ಧಿ ಯೋಜನೆಗಳಡಿ ವಿಶೇಷ ಕಾರ್ಯ ಕ್ರಮಗಳನ್ನೂ ರೂಪಿಸಿ ಅನುಷ್ಠಾನಗೊಳಿಸುವ ಮೂಲಕ ಆರ್ಥಿಕವಾಗಿ ಅವರು ಸಬಲರಾಗುವಂತೆ ಮಾಡಲು ಶ್ರಮಿಸುತ್ತಿದ್ದೇವೆ. ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು 800 ಕೋಟಿ ರೂ. ಕ್ರಿಯಾಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದೇವೆ. ಈ ಎಲ್ಲ ಕ್ರಮಗಳಿಂದ ನಿಶ್ಚಿತವಾಗಿಯೂ ಅಲ್ಪಸಂಖ್ಯಾತ ಸಮುದಾಯದಲ್ಲಿ ಇಂದು ಶೈಕ್ಷಣಿಕ ಜಾಗೃತಿ ಉಂಟಾಗಿದೆ. ನಾನು ಈ ಹಿಂದೆಯೇ ಹೇಳಿದಂತೆ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಇಂದು ವಿಪುಲ ಅವಕಾಶಗಳು ಸೃಷ್ಟಿಯಾಗಿದ್ದು ಅದನ್ನು ಸಮುದಾಯ ಉತ್ತಮವಾಗಿ ಬಳಸಿಕೊಳ್ಳುತ್ತಿದೆ. ಸಮುದಾಯದಲ್ಲಿ ಜಾಗೃತಿ ಹೆಚ್ಚಾದಷ್ಟೂ ನಮ್ಮ ಯೋಜನೆಗಳು ಹೆಚ್ಚು ಅರ್ಥಪೂರ್ಣವಾಗುತ್ತವೆ. ನನ್ನ ಕಳಕಳಿ ಇಷ್ಟೇ, ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳು ಎಂದರೆ ಶಾದಿಭಾಗ್ಯ, ಶಾದಿಮಹಲ್ ಅಷ್ಟೇ ಎಂದು ಕೊಂಡವರಿಗೆ ಮೇಲಿನ ವಿಚಾರಗಳು ತಿಳಿದಿರುವುದಿಲ್ಲ. ಮೇಲಿನ ಅಂಶಗಳ ಹಿನ್ನೆಲೆಯಲ್ಲಿ ಮತ್ತಷ್ಟು ಸಕಾರಾತ್ಮಕ ಚರ್ಚೆಗಳನ್ನು ನಾವೆಲ್ಲರೂ ಮಾಡಬೇಕಿದೆ.


ವಾ.ಭಾ: ಮೋದಿ ಅಲೆ ಚುನಾವಣೆಯ ಫಲಿತಾಂಶ ಬದಲಿಸಬಹುದು ಎಂಬ ಆತಂಕವಿದೆಯೇ?

ಸಿದ್ದರಾಮಯ್ಯ: ನರೇಂದ್ರ ಮೋದಿಯವರ ಅಲೆ ಇರುವುದು ಮಾಧ್ಯಮಗಳಲ್ಲಿ ಮಾತ್ರ. ಕಳೆದ ವಿಧಾನಸಭಾ ಚುನಾವಣೆಯ ಕಾಲದಲ್ಲಿ ಮೋದಿಯವರು ಕರಾವಳಿಯ ಮೂರು ಜಿಲ್ಲೆಗಳಲ್ಲಿ ವ್ಯಾಪಕ ಪ್ರಚಾರ ನಡೆಸಿದ್ದು, 19 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದದ್ದು ನಾಲ್ಕು ಸ್ಥಾನಗಳಲ್ಲಿ ಮಾತ್ರ, ಹದಿಮೂರರಲ್ಲಿ ಗೆದ್ದದ್ದು ಕಾಂಗ್ರೆಸ್.

ಆ ಕಾಲದಲ್ಲಿ ಗುಜರಾತ್ ಮಾದರಿ ಬಗ್ಗೆ ಜನರಲ್ಲಿಯೂ ಭ್ರಮೆ ಇತ್ತು. ಆ ಭ್ರಮೆ ಈಗ ಹರಿದಿದೆ. ನಿಜ ಹೇಳಬೇಕೆಂದರೆ ಈ ಚುನಾವಣೆಯಲ್ಲಿ ನರೇಂದ್ರಮೋದಿ ಬಿಜೆಪಿ ಪಾಲಿಗೆ ಹೊರೆ, ಆಸ್ತಿ ಖಂಡಿತ ಅಲ್ಲ.

ಯಾಕೆಂದರೆ ಕೇಂದ್ರ ಸರಕಾರದ ವಿರುದ್ಧದ ಆಡಳಿತ ವಿರೋಧಿ ಅಲೆ ರಾಜ್ಯದಲ್ಲಿ ನರೇಂದ್ರ ಮೋದಿಯವರಿಂದಾಗಿ ಪರಿಣಾಮ ಬೀರಲಿದೆ. ಮೋದಿಯವರು ಏನೇ ಮಾತನಾಡಲಿ, ಅವರನ್ನು ನೋಡಿದ ಕೂಡಲೇ ಜನರಿಗೆ ನೆನಪಾಗುವುದು, ಹದಿನೈದು ಲಕ್ಷ ರೂ., ಎರಡು ಕೋಟಿ ಉದ್ಯೋಗ, ನೋಟು ಅಮಾನ್ಯೀಕರಣದ ಕಷ್ಟಗಳು, ಬ್ಯಾಂಕುಗಳ ಲೂಟಿ ಇತ್ಯಾದಿ. ಅವರ ಭಾಷಣಗಳು ಅವರಿಗೆ ಹೇಗೆ ಬೂಮ್‌ರಾಂಗ್ ಆಗಿವೆ ಎಂದು ನೀವೇ ಮಾಧ್ಯಮದವರು ಬರೆದಿದ್ದೀರಲ್ಲಾ?


ವಾ.ಭಾ: ಅಧಿಕಾರಕ್ಕೇರಿದ ಆರಂಭದಲ್ಲಿ ಇನ್ನು ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದಿರಿ. ನಿಮ್ಮ ನಿಲುವಿನಲ್ಲಿ ಬದಲಾವಣೆಗೆ ಕಾರಣ?
ಸಿದ್ದರಾಮಯ್ಯ:
ಹೌದು ಕಳೆದ ವಿಧಾನಸಭಾ ಚುನಾವಣೆಯ ಕಾಲದಲ್ಲಿ ಕೊನೆಯ ಚುನಾವಣೆ ಎಂದು ನಾನು ಹೇಳಿದ್ದು ನಿಜ. ಆದರೆ ನಮ್ಮ ಸರಕಾರ ಸ್ಥಾಪನೆಯಾದ ದಿನದಿಂದ ಬಿಜೆಪಿಯವರು ಕಾಂಗ್ರೆಸ್ ಮುಕ್ತ ಮಾಡುವುದಾಗಿ ಕೂಗಲು ಶುರು ಮಾಡಿದರು. ಅದರ ನಂತರ ನನ್ನ ನಿಲುವು ಬದಲಾಯಿಸಿದೆ. ಮತ್ತೊಮ್ಮೆ ಸ್ಪರ್ಧಿಸಿ ಕಾಂಗ್ರೆಸ್ ಪಕ್ಷವನ್ನು ಮರಳಿ ಅಧಿಕಾರಕ್ಕೆ ತಂದೇ ತರ್ತೇನೆ ಎಂದು ನಿರ್ಧರಿಸಿ ಚುನಾವಣೆಯಲ್ಲಿ ಸ್ಪರ್ಧಿಸುವ ತೀರ್ಮಾನ ಕೈಗೊಂಡೆ. ಇದಲ್ಲದೆ ಈ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೆ ಪಲಾಯನ ಮಾಡಿದ್ದಾರೆ ಎಂಬ ಅಭಿಪ್ರಾಯ ಬರುವುದರಿಂದ ಸ್ಪರ್ಧಿಸಲೇಬೇಕೆಂದು ರಾಹುಲ್ ಗಾಂಧಿಯವರು ಹೇಳಿದ್ದರು.


ವಾ.ಭಾ: ಜಾತ್ಯತೀತ ಶಕ್ತಿಗಳು ಒಂದಾಗಬೇಕು ಎನ್ನುವುದು ಕೋಮುವಾದಿ ವಿರೋಧಿಗಳ ಬಯಕೆಯಾಗಿತ್ತು. ಈ ಬಗ್ಗೆ ಕಾಂಗ್ರೆಸ್ ಆಸಕ್ತಿ ತೋರಿಸಿಲ್ಲ ಎನ್ನುವ ಆರೋಪ ಇದೆ. ಇದು ಕಾಂಗ್ರೆಸ್‌ನ ಮೇಲೆ ಪರಿಣಾಮ ಬೀರುವುದಿಲ್ಲವೇ?

ಸಿದ್ದರಾಮಯ್ಯ: ಜಾತ್ಯತೀತ ಶಕ್ತಿಗಳು ಒಂದಾಗಬೇಕು ಎನ್ನುವುದನ್ನು ನಾನೂ ಒಪ್ಪುತ್ತೇನೆ. ಅದನ್ನು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಇದು ವಿಧಾನಸಭಾ ಚುನಾವಣೆ, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತುರುಸಿನ ಪೈಪೋಟಿ ಇದೆ, ಜತೆಗೆ ಕಿಂಗ್ ಮೇಕರ್ ಆಗಲು ಹೊರಟ ಜೆಡಿಎ್ ಇದೆ. ಅದು ಹಿಂದೆ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡು ಆಡಳಿತ ನಡೆಸಿದ್ದ ಪಕ್ಷ. ಆ ಪಕ್ಷವನ್ನು ಹೇಗೆ ನಂಬುವುದು ಎನ್ನುವ ಆತಂಕ ನಮ್ಮ ಪಕ್ಷದ ಕಾರ್ಯಕರ್ತರಲ್ಲಿಯೂ ಇದೆ. ಉಳಿದಂತೆ ರಾಜ್ಯದಲ್ಲಿ ಜಾತ್ಯತೀತ ಶಕ್ತಿಗಳು ಸೀಟು ಬಿಟ್ಟುಕೊಡುವಷ್ಟು ಪ್ರಬಲವಾಗಿ ಬೆಳೆದಿಲ್ಲ. ಪಾಂಡವಪುರದಲ್ಲಿ ರೈತಸಂಘದ ನೆಲೆ ಇದೆ, ಅಲ್ಲಿ ಪುಟ್ಟಣ್ಣಯ್ಯ ಅವರ ಮಗನಿಗೆ ಬೆಂಬಲ ನೀಡುತ್ತಿದ್ದೇವೆ.


ಕರಾವಳಿ, ಉತ್ತರ ಕನ್ನಡದಲ್ಲಿ ಕೋಮು ಗಲಭೆ ನಿಯಂತ್ರಣ ಮಾಡುವಲ್ಲಿ ಸರಕಾರ ಎಡವಿದೆಯಲ್ಲ?
ಸಿದ್ದರಾಮಯ್ಯ:
ನಾನು ಇದನ್ನು ಸಂಪೂರ್ಣವಾಗಿ ಒಪ್ಪುವುದಿಲ್ಲ. ಕಳೆದ ಐದು ವರ್ಷಗಳ ಅವಧಿಯಲ್ಲಿ ಕರಾವಳಿಯೂ ಸೇರಿದಂತೆ ಸಂಘ ಪರಿವಾರದ ಕುಮ್ಮಕ್ಕಿನ ಹೊರತಾಗಿಯೂ ದೊಡ್ಡ ಪ್ರಮಾಣದ ಕೋಮುಗಲಭೆಗಳು ನಡೆದಿಲ್ಲ. ಹಿಂದಿನ ಐದು ವರ್ಷಗಳ ಅವಧಿಯ ಕರಾವಳಿ ಹೇಗಿತ್ತು ಎಂದು ನೆನಪು ಮಾಡಿಕೊಂಡರೆ ನಮ್ಮ ಪ್ರಯತ್ನದ ಅರಿವು ಆಗಬಹುದು. ಇಂತಹದ್ದು ನಡೆಯದಂತೆ ತಡೆದಿರುವುದು ನಮ್ಮ ಸರಕಾರವಲ್ಲವೇ?

ಆದರೆ ಇನ್ನ್ನೂ ಸ್ವಲ್ಪ ಪ್ರಯತ್ನ ಮಾಡಿದ್ದರೆ ಕೋಮುವಾದಿಗಳ ಬೆನ್ನನ್ನು ಶಾಶ್ವತವಾಗಿ ಮುರಿದುಬಿಡಬಹುದಿತ್ತು. ಸಮಸ್ಯೆ ಏನೆಂದರೆ ನಮ್ಮ ಪೊಲೀಸ್ ಇಲಾಖೆಯ ಕೆಳಗಿನ ಸಿಬ್ಬಂದಿಯ ತಲೆಯಲ್ಲಿಯೂ ಕೋಮುವಾದ ತುಂಬಿಸಿಬಿಟ್ಟಿದ್ದಾರೆ. ನೀವು ಹಿರಿಯ ಅಧಿಕಾರಿಗಳನ್ನು ಗುರುತಿಸಿ ವರ್ಗಾವಣೆ ಮಾಡಿಬಿಡಬಹುದು. ಆದರೆ ಕೆಳಗಿನ ಸಿಬ್ಬಂದಿಯನ್ನು ನಿಯಂತ್ರಿಸುವುದು ಕಷ್ಟ. ಪಾಪ ಅವರದ್ದೂ ತಪ್ಪಲ್ಲ, ಅವರಿಗೆ ಶಿಕ್ಷಣ ಕಡಿಮೆ. ಬಹಳ ಬೇಗ ಇಂತಹ ಹುನ್ನಾರಗಳಿಗೆ ಬಲಿಯಾಗಿ ಬಿಡುತ್ತಾರೆ.


ವಾ.ಭಾ: ತಮ್ಮ 5 ವರ್ಷಗಳ ಅಧಿಕಾರಾವಧಿಯಲ್ಲಿ ಸಂತೃಪ್ತಿ ಕೊಟ್ಟ ಕೆಲವು ವಿಷಯಗಳು?
ಸಿದ್ದರಾಮಯ್ಯ:
ಮುಖ್ಯಮಂತ್ರಿಯಾಗಿ ನಮ್ಮ ಸರಕಾರದ ಎಲ್ಲ ಕಾರ್ಯಕ್ರಮಗಳು ನನಗೆ ತೃಪ್ತಿ ಕೊಟ್ಟಿವೆ. ಆದರೆ ಜನರ ಹಸಿವನ್ನು ತಣಿಸುವ ಅನ್ನಭಾಗ್ಯ ನನಗೆ ಅತ್ಯಂತ ಹೆಚ್ಚು ತೃಪ್ತಿಕೊಟ್ಟ ಯೋಜನೆ. ನಾನು ಹಸಿವನ್ನು ನೋಡುತ್ತಾ ಬೆಳೆದವನು. ನಮ್ಮ ಅಭಿವೃದ್ಧಿ ಸಮತೋಲನದಿಂದ ಕೂಡಿರಬೇಕಾದರೆ, ಅದು ಸರ್ವತೋಮುಖ ಎಂದು ಅನಿಸಬೇಕಾದರೆ ರಾಜ್ಯದ ಯಾವ ಪ್ರಜೆಯೂ ಹಸಿವಿನಿಂದ ನರಳುವ ಪರಿಸ್ಥಿತಿ ಇರಬಾರದು. ಅದೇ ರೀತಿ ಕ್ಷೀರಭಾಗ್ಯ, ಕ್ಷೀರಧಾರೆ, ಕೃಷಿ ಹೊಂಡಗಳು, ವಿದ್ಯಾಸಿರಿ, ಮಾತೃಪೂರ್ಣ ಮೊದಲಾದ ಯೋಜನೆಗಳು ನನಗೆ ತೃಪ್ತಿ ಕೊಟ್ಟಿವೆ.

ನಮ್ಮ SCSP, TSP ಕಾಯ್ದೆ, ವಾಸಿಸುವವನಿಗೆ ಮನೆಯ ಒಡೆತನ ನೀಡುವ ಕಾಯ್ದೆ, ಮೂಢನಂಬಿಕೆ ನಿಷೇಧ ಕಾಯ್ದೆ, ಲಿಂಗತ್ವ ಅಲ್ಪಸಂಖ್ಯಾತರ ನೀತಿ ಮೊದಲಾದವುಗಳು ಶಾಶ್ವತ ಸ್ವರೂಪದ ನೀತಿ ನಿರ್ಧಾರಗಳು. ಇವು ತೃಪ್ತಿ ನೀಡಿವೆ.


ವಾ.ಭಾ: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಮ್ಮನ್ನು ಸೋಲಿಸಲು ಎಲ್ಲರೂ ಒಂದಾಗಿದ್ದಾರೆ. ಈ ಬಗ್ಗೆ ನಿಮಗೆ ಆತಂಕ ಇದೆಯೇ?

ಸಿದ್ದರಾಮಯ್ಯ: ಅದಕ್ಕಾಗಿಯೇ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಹೊರಟಿದ್ದೀರಿ ಎನ್ನಲಾಗುತ್ತಿದೆ. ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡೂ ಕ್ಷೇತ್ರಗಳಲ್ಲಿ ನಾನು ಗೆಲ್ತೇನೆ, ಯಾವ ಅನುಮಾನವೂ ಬೇಡ. ಅವರು ಒಂದಾಗಿದ್ದಾರೆ ನಿಜ, ಆದರೆ ಯಾಕೆ ಒಂದಾಗಿದ್ದಾರೆ ಎನ್ನುವುದು ಜನರಿಗೆ ಗೊತ್ತು. ಅವರು ಒಂದಾಗಿರುವುದು ಜನರಿಗಾಗಿ ಅಲ್ಲ, ಜನಪರವಾಗಿರುವ ನನ್ನನ್ನು ಸೋಲಿಸಲಿಕ್ಕಾಗಿ. ಇದರಿಂದ ಜನರಿಗೇನು ಲಾಭ? ಚಾಮುಂಡೇಶ್ವರಿ ಕ್ಷೇತ್ರದ ಮನೆಮನೆಯೂ ನನಗೆ ಗೊತ್ತು. ಅವರು ನನ್ನ ಕೈಬಿಡುವುದಿಲ್ಲ ಎನ್ನುವ ನಂಬಿಕೆ ನನಗಿದೆ.

ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆಂದು ಉತ್ತರ ಕರ್ನಾಟಕದ ಶಾಸಕರು ಮತ್ತು ಕಾರ್ಯಕರ್ತರು ಒತ್ತಾಯಿಸಿದ್ದರು. ನನ್ನ ಸ್ಪರ್ಧೆಯಿಂದ ಸುತ್ತಲಿನ ಕ್ಷೇತ್ರಗಳ ಮೇಲೆ ಪ್ರಭಾವ ಬೀರಲಿದ್ದು ಪಕ್ಷಕ್ಕೆ ನೆರವಾಗಬಹುದು ಎಂದು ಹೇಳಿದ್ದರು. ಅದಕ್ಕೆ ಹೈಕಮಾಂಡ್ ನನ್ನನ್ನು ಅಲ್ಲಿ ಸ್ಪರ್ಧಿಸಲು ಹೇಳಿದೆ. ಇದೇನು ಹೊಸದಲ್ಲವಲ್ಲಾ? ಕುಮಾರಸ್ವಾಮಿಯವರು ಸ್ಪರ್ಧಿಸುತ್ತಿಲ್ಲವೇ? ಮೋದಿಯವರು ಎರಡು ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿಲ್ಲವೇ ?

ವಾ.ಭಾ: ಈ ಚುನಾವಣೆಯಲ್ಲಿ ನೀವು ಮತ ಯಾಚಿಸಲು ಮುಂದಿಡುವ ಮುಖ್ಯ ವಿಷಯಗಳು ಯಾವುವು?
ಸಿದ್ದರಾಮಯ್ಯ: ನಾವು ಮುಖ್ಯವಾಗಿ ನಮ್ಮ ಸರಕಾರದ ಸಾಧನೆ ಗಳನ್ನು ಮುಂದಿಟ್ಟು ಈ ಚುನಾವಣೆ ಎದುರಿಸುತ್ತಿದ್ದೇವೆ. ನಮ್ಮ ಎಲ್ಲ ಕಾರ್ಯಕ್ರಮಗಳು ಉದ್ದೇಶಿತ ಫಲಾನುಭವಿಗಳನ್ನು ತಲುಪಿವೆ ಎನ್ನುವ ವಿಶ್ವಾಸ ನನಗಿದೆ. ನಾವು ಐದು ವರ್ಷ ಜನರ ಕೆಲಸ ಮಾಡಿದ್ದೇವೆ, ಈಗ ಕೂಲಿ ಕೇಳ್ತಾ ಇದ್ದೇವೆ. ನಮ್ಮ ಯೋಜನೆಗಳಿಂದಾಗಿ ಅನ್ನ ಉಂಡವರು, ಹಾಲು ಕುಡಿದವರು, ಔಷಧಿ ಪಡೆದವರು, ಮನೆ ಪಡೆದವರು, ಶಿಕ್ಷಣ ಪಡೆದವರು, ಉದ್ಯೋಗ ಪಡೆದವರು ಕಾಂಗ್ರೆಸ್ ಪಕ್ಷವನ್ನು ಕೈಬಿಡುವುದಿಲ್ಲ ಎಂಬ ನಂಬಿಕೆ ನನ್ನದಾಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top