ಜಯ್ ಶಾ ಕಂಪೆನಿಗೆ ನೀಡಿರುವ ಸಾಲ 300 ಶೇ.ದಷ್ಟು ಹೆಚ್ಚಳ

ಚುನಾವಣಾ ಅಫಿದಾವಿತ್ ನಲ್ಲಿ ಪುತ್ರನ ವಹಿವಾಟಿನ ಸಾಲದ ವಿವರ ನೀಡದ ಅಮಿತ್ ಶಾ

ಅಮಿತ್ ಶಾ ತಮ್ಮ ಮಗ ಜಯ್ ಶಾ ಅವರ ಉದ್ದಿಮೆಯಾದ ‘ಕುಸುಮ್ ಫಿನ್ ‍ಸರ್ವ್’ ಎಲ್‍ಎಲ್‍ ಪಿಗೆ ಸಾಲ ಪಡೆಯಲು ತಮ್ಮ ಎರಡು ಆಸ್ತಿಗಳನ್ನು ಅಡಮಾನ ಇಟ್ಟಿದ್ದರು. ತೀರಾ ಕಡಿಮೆ ಹಣಕಾಸು ಸಂಪನ್ಮೂಲ ಹೊಂದಿದ್ದರೂ, ಈ ಕಂಪನಿಗೆ ನೀಡುತ್ತಿರುವ ಸಾಲಸೌಲಭ್ಯ ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಹೆಚ್ಚಿದೆ. ಈ ಸಾಲಸೌಲಭ್ಯಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಹೊಣೆಗಾರಿಕೆಯನ್ನು 2017ರ ಚುನಾವಣಾ ಅಫಿಡವಿಟ್ ನಲ್ಲಿ ತೋರಿಸಿಲ್ಲ.

ಸಾರ್ವಜನಿಕವಾಗಿ ಲಭ್ಯವಾಗುವ ದಾಖಲೆಗಳಿಂದ ತಿಳಿದುಬರುವಂತೆ 2016ರಲ್ಲಿ ಅಮಿತ್ ಶಾ ಅವರ ಎರಡು ಆಸ್ತಿಗಳನ್ನು ಗುಜರಾತ್‍ನ ಅತಿದೊಡ್ಡ ಸಹಕಾರ ಬ್ಯಾಂಕ್‍ಗಳಲ್ಲೊಂದಾದ ಕಲುಪುರ್ ಕಮರ್ಷಿಯಲ್ ಕೋ ಆಪರೇಟಿವ್ ಬ್ಯಾಂಕ್‍ ನಿಂದ ಕುಸುಮ್ ಫಿನ್‍ಸರ್ವ್‍ಗೆ 25 ಕೋಟಿ ರೂ. ಸಾಲ ಪಡೆಯುವ ಸಲುವಾಗಿ ಒತ್ತೆ ಇಡಲಾಗಿದೆ. caravanmagazine.in ಪಡೆದ ಹೊಸ ದಾಖಲೆಗಳಿಂದ ತಿಳಿದುಬರುವಂತೆ 2016ರಿಂದೀಚೆಗೆ ಕುಸುಮ್ ಫಿನ್‍ಸರ್ವ್, 97.35 ಕೋಟಿ ರೂಪಾಯಿ ಸಾಲಸೌಲಭ್ಯವನ್ನು ಒಂದು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೇರಿದಂತೆ ಎರಡು ಬ್ಯಾಂಕ್‍ ಗಳಿಂದ ಪಡೆದಿದೆ. ಇತ್ತೀಚಿನ ಬ್ಯಾಲೆನ್ಸ್ ಶೀಟ್ ವಿವರಗಳ ಪ್ರಕಾರ ಕಂಪನಿಯ ಒಟ್ಟು ಮೌಲ್ಯ 5.83 ಕೋಟಿ ಆಗಿದ್ದರೂ, ಕುಸುಮ್ ಫಿನ್‍ ಸರ್ವ್‍ಗೆ ನೀಡಿರುವ ಸಾಲ ಕಳೆದ ವರ್ಷ ಶೇಕಡ 300ರಷ್ಟು ಹೆಚ್ಚಿದೆ.

ಅಹ್ಮದಾಬಾದ್‍ನ ಮೂರು ಆಸ್ತಿಗಳನ್ನು ಭದ್ರತಾ ಆಸ್ತಿಯಾಗಿ ಪಡೆದು ಜಯ್ ಶಾ ಅವರ ಕಂಪನಿಗೆ ಸಾಲಸೌಲಭ್ಯವನ್ನು ನೀಡಲಾಗಿದೆ. ಶಿಲಾಜ್ ಗ್ರಾಮದಲ್ಲಿ 3,839 ಚದರ ಮೀಟರ್ ಮತ್ತು 459 ಚದರ ಮೀಟರ್‍ನ ಎರಡು ನಿವೇಶನಗಳು ಮತ್ತು ಬೊಡೊಕದೇವ್‍ನ ಸಾರ್ಥಿಕ್-2 ವಾಣಿಜ್ಯ ಸಂಕೀರ್ಣದ ಮೂರನೇ ಮಹಡಿಯಲ್ಲಿ 186 ಚದರ ಮೀಟರ್ ಕಟ್ಟಡವನ್ನು ಒತ್ತೆ ಇರಿಸಲಾಗಿದೆ.

ಶಿಲಾಜ್ ಆಸ್ತಿಗಳು ಅಮಿತ್ ಶಾ ಹೆಸರಿನಲ್ಲಿವೆ. ಕಲುಪುರ ಬ್ಯಾಂಕ್ ಮತ್ತು ಕುಸುಮ್ ಫಿನ್‍ಸರ್ವ್ ನಡುವೆ 2016ರ ಮೇ ತಿಂಗಳಲ್ಲಿ ಮಾಡಿಕೊಂಡ ಅಡಮಾನ ಒಪ್ಪಂದದ ಅನ್ವಯ ಅಡಮಾನ ಮಾಡಿದ ‘ವ್ಯಕ್ತಿ ಸಂಖ್ಯೆ 2’ ಇವರನ್ನು ಎರಡೂ ನಿವೇಶನಗಳ ಸಂಪೂರ್ಣ ಮಾಲಕ ಎಂದು ಪಟ್ಟಿ ಮಾಡಲಾಗಿದೆ. ಜಯ್ ಶಾ ಅವರನ್ನು ತಂದೆಯ ಅಡಮಾನ ಆಸ್ತಿಯ ಪವರ್ ಆಫ್ ಅಟಾರ್ನಿ ಹೊಂದಿರುವ ವ್ಯಕ್ತಿ ಎಂದು ತೋರಿಸಲಾಗಿದೆ. ದಾಖಲೆಗಳನ್ನು ಹಣಕಾಸು ತಜ್ಞರ ಬಳಿ ತೋರಿಸಿದಾಗ, "ನೀವು ಆಸ್ತಿಯನ್ನು ಸಾಲಕ್ಕಾಗಿ ಅಡಮಾನ ಮಾಡಿದಾಗ, ಪ್ರಾಥಮಿಕವಾಗಿ ನೀವು ಗ್ಯಾರೆಂಟರ್ ಆಗುತ್ತೀರಿ. ಅವರು ಲಾಭದಾಯಕ ಪಾಲು ಹೊಂದಿಲ್ಲದಿದ್ದರೂ, ಅವರಿಗೂ ಈ ವಹಿವಾಟಿನಲ್ಲಿ ಪಾಲು ಇದೆ" ಎಂಬ ಉತ್ತರ ಲಭಿಸಿದೆ.

ಅಮಿತ್ ಶಾ ರಾಜ್ಯಸಭಾ ಸದಸ್ಯ. ಜನಪ್ರತಿನಿಧಿ ಕಾಯ್ದೆಯ ಪ್ರಕಾರ, ವಿಧಾನಸಭೆ ಅಥವಾ ಸಂಸತ್ತಿಗೆ ಸ್ಪರ್ಧಿಸುವ ವ್ಯಕ್ತಿಗಳು ತಮ್ಮ ಆಸ್ತಿ ಮತ್ತು ಹೊಣೆಗಾರಿಕೆ ವಿವರಗಳನ್ನು ತಮ್ಮ ಚುನಾವಣಾ ಅಫಿಡವಿಟ್‍ನಲ್ಲಿ ನೀಡಬೇಕು. ಈ ಕಾಯ್ದೆಯ ಅನ್ವಯ, ಚುನಾವಣಾ ಅಫಿಡವಿಟ್‍ನಲ್ಲಿ ಸುಳ್ಳು ಮಾಹಿತಿಯನ್ನು ನೀಡಿದರೆ ಅದು ಶಿಕ್ಷಾರ್ಹ ಅಪರಾಧ ಮತ್ತು ನಾಮಪತ್ರವನ್ನು ತಿರಸ್ಕರಿಸಬಹುದಾಗಿದೆ.

"ಶಾಸನಸಭೆ ಸದಸ್ಯರ ಚುನಾವಣಾ ಅಫಿಡವಿಟ್ ಸಂಪೂರ್ಣ ಸತ್ಯಾಂಶವನ್ನು ಒಳಗೊಂಡಿರಬೇಕು. ಮೇಲ್ನೋಟಕ್ಕೆ ಅಕ್ರಮಗಳು ಕಂಡುಬಂದಲ್ಲಿ, ಆ ಶಾಸನಸಭೆ ಸದಸ್ಯನ ವಿರುದ್ಧ ಕ್ರಮ ಕೈಗೊಳ್ಳಬಹುದು. ಇಲ್ಲಿರುವ ನಿಜವಾದ ಪ್ರಶ್ನೆ ಎಂದರೆ, ಇಂತಹ ರಾಜಕಾರಣಿಗಳಿಗೆ ಎಂತಹ ಕಟ್ಟುನಿಟ್ಟಿನ ಶಿಕ್ಷೆ ವಿಧಿಸಬಹುದು ಎನ್ನುವುದು" ಎಂದು ಭಾರತದ ಮಾಜಿ ಚುನಾವಣಾ ಆಯುಕ್ತ ಎಸ್.ವೈ.ಖುರೇಷಿ ಹೇಳುತ್ತಾರೆ. "ಒಬ್ಬ ಅಭ್ಯರ್ಥಿ ತನ್ನ ಹೊಣೆಗಾರಿಕೆಯನ್ನು ನಮೂದಿಸದಿದ್ದಾಗ ಯಾವ ಕ್ರಮ ಕೈಗೊಳ್ಳಬಹುದು ಎಂದು caravanmagazine.in ಕೇಳಿದ ಪ್ರಶ್ನೆಗೆ ಉತ್ತರವಾಗಿ ತಿಳಿಸಿದರು.

"ಅಧಿಕ ಸಂಖ್ಯೆಯ ಅಫಿಡವಿಟ್‍ಗಳು ಸಲ್ಲಿಕೆಯಾಗುವುದರಿಂದ ಇಂಥ ಸುಳ್ಳು ಅಫಿಡವಿಟ್ ಬಗ್ಗೆ ನಾಮಪತ್ರ ಪರಿಶೀಲನೆ ವೇಳೆ ಪರಿಶೀಲನೆ ನಡೆಸುವುದು ಸಾಧ್ಯವಿಲ್ಲ. ತಪ್ಪು ಮಾಹಿತಿಯನ್ನು ಒಳಗೊಂಡ ಅಫಿಡವಿಟ್ ಸಲ್ಲಿಸಿದಲ್ಲಿ ಅಂಥ ಶಾಸನಸಭೆ ಸದಸ್ಯರನ್ನು ಅನರ್ಹಗೊಳಿಸಬೇಕು ಮತ್ತು ದೇಶದಲ್ಲಿ ಪ್ರಸ್ತುತ ಇರುವ ಪ್ರತ್ಯೇಕ ಕಾಯ್ದೆಗಳ ಅನ್ವಯ ಕ್ರಮ ಕೈಗೊಳ್ಳಬಹುದು" ಎಂದು ಮತ್ತೊಬ್ಬ ಮಾಜಿ ಚುನಾವಣಾ ಆಯುಕ್ತರು ಅಭಿಪ್ರಾಯಪಟ್ಟಿದ್ದಾರೆ.

ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಎಂಬ ಸ್ವಯಂಸೇವಾ ಸಂಸ್ಥೆಯ ಸ್ಥಾಪಕ ಸದಸ್ಯ ಜೈದೀಪ್ ಛೋಕರ್ ಹೇಳುವಂತೆ, ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 75 ಎ ಅನ್ವಯ, ಎಲ್ಲ ಜನಪ್ರತಿನಿಧಿಗಳು ತಮ್ಮ ಆಸ್ತಿ ಮತ್ತು ಹೊಣೆಗಾರಿಕೆಯ ವಿವರಗಳನ್ನು ಸಲ್ಲಿಸುವುದು ಕಡ್ಡಾಯ. ಈ ಘೋಷಣೆಯನ್ನು ಚುನಾವಣಾ ಆಯೋಗ ಸಿದ್ಧಪಡಿಸಿದ ನಮೂನೆಯಲ್ಲಿ ವಿವರಗಳನ್ನು ನೀಡಬೇಕು. ಯಾರಾದರೂ ಸುಳ್ಳು ಅಫಿಡವಿಟ್ ಸಲ್ಲಿಸಿದರೆ, ಅವರನ್ನು ಅನರ್ಹಗೊಳಿಸಿ ಪದಚ್ಯುತಗೊಳಿಸಬಹುದು. ಭಾರತೀಯ ದಂಡಸಂಹಿತೆಯ ಸೆಕ್ಷನ್‍ಗಳ ಅನ್ವಯ ಅವರ ವಿರುದ್ಧ ಅಪರಾಧ ವಿಚಾರಣೆಯನ್ನೂ ಆರಂಭಿಸಬಹುದು. ಯಾವುದೇ ಜನಪ್ರತಿನಿಧಿಯ ವಿರುದ್ಧ ಕ್ರಮ ಜರುಗಿಸುವಂತೆ ಜನಸಾಮಾನ್ಯರು ಕೂಡಾ ಚುನಾವಣಾ ಆಯೋಗಕ್ಕೆ ಪತ್ರ ಬರೆಯಬಹುದು.

=================

ಕುಸುಮ್ ಫಿನ್‍ಸರ್ವ್‍ ನ ಸಾರ್ವಜನಿಕ ದಾಖಲೆಯನ್ನು ಆಧರಿಸಿ 2017ರಲ್ಲಿ ಆನ್‍ಲೈನ್ ಸುದ್ದಿತಾಣ ‘ದ ವೈರ್’ ವರದಿ ಮಾಡಿದಂತೆ, ಈ ಕಂಪನಿಗೆ ಕಲುಪುರ ಬ್ಯಾಂಕ್ 25 ಕೋಟಿ ರೂಪಾಯಿ ಸಾಲ ಮಂಜೂರು ಮಾಡಿತ್ತು. ಮತ್ತೊಂದು ಸಾರ್ವಜನಿಕ ವಲಯದ ಬ್ಯಾಂಕ್ 10.35 ಕೋಟಿ ರೂಪಾಯಿ ಸಾಲ ನಿಡಿತ್ತು. ಕಳೆದ ವರ್ಷದ ಸೆಪ್ಟೆಂಬರ್‍ನಿಂದೀಚೆಗೆ ಕಂಪನಿಗೆ ನೀಡಿದ ಸಾಲದ ಪ್ರಮಾನ ಮೂರು ಪಟ್ಟು ಹೆಚ್ಚಳವಾಗಿದೆ. ಕಲುಪುರ ಬ್ಯಾಂಕ್, ಕೊಟ್ಯಾಕ್ ಮಹೀಂದ್ರ ಬ್ಯಾಂಕ್‍ಗಳು ಕ್ರಮವಾಗಿ 40 ಕೋಟಿ ಹಾಗೂ 47 ಕೋಟಿ ರೂಪಾಯಿಗಳ ಸಾಲ ನೀಡಿವೆ. ಲಭ್ಯವಿರುವ ಬ್ಯಾಲೆನ್ಸ್‍ಶೀಟ್ ಪ್ರಕಾರ, 2012-13 ಮತ್ತು 2015-16ನೇ ಹಣಕಾಸು ವರ್ಷದಲ್ಲಿ ಕಂಪನಿ ನಷ್ಟ ಅನುಭವಿಸಿದೆ. ಜತೆಗೆ ಈ ಅವಧಿಯುದ್ದಕ್ಕೂ ದುಡಿಯುವ ಬಂಡವಾಳ ಋಣಾತ್ಮಕವಾಗಿತ್ತು.

2017ರ ಜುಲೈನಲ್ಲಿ ಅಮಿತ್ ಶಾ ಸಲ್ಲಿಸಿದ ಚುನಾವಣಾ ಆಫಿಡವಿಟ್‍ನಲ್ಲಿ, ಶಿಲಾಜ್ ಆಸ್ತಿಗಳ ಪೈಕಿ ದೊಡ್ಡ ಆಸ್ತಿಯ ಮೌಲ್ಯವನ್ನು 5 ಕೋಟಿ ಎಂದು ನಮೂದಿಸಿದ್ದರು. ಪ್ರಸ್ತುತ ಮಾರುಕಟ್ಟೆ ದರದಲ್ಲಿ ಸಣ್ಣ ನಿವೇಶನದ ಮೌಲ್ಯ 55 ಲಕ್ಷ ಮತ್ತು ಬೊಡಕ್‍ದೇವ್ ಕಚೇರಿಯ ಮೌಲ್ಯ 2 ಕೋಟಿ. ಕುಸುಮ್ ಫಿನ್‍ಸರ್ವ್ 2016ರ ಮೇ ತಿಂಗಳಿನಲ್ಲಿ 25 ಕೋಟಿ ರೂಪಾಯಿಗಳನ್ನು ಕಲುಪುರ ಕಮರ್ಷಿಯಲ್ ಕೋ ಆಪರೇಟಿವ್ ಬ್ಯಾಂಕ್‍ನಿಂದ ಸಾಲವಾಗಿ ಪಡೆಯಲು ಈ ಆಸ್ತಿಗಳನ್ನು ಸ್ಟಾಕ್ ಮತ್ತು ಪುಸ್ತಕ ಸಾಲಕ್ಕೆ ಹೆಚ್ಚುವರಿಯಾಗಿ ಆಧಾರವಾಗಿರಿಸಿದೆ. 2017ರ ಸೆಪ್ಟೆಂಬರ್‍ನಲ್ಲಿ ಇದೇ ಬ್ಯಾಂಕ್ ಕಂಪನಿಗೆ ನೀಡಿದ ಸಾಲಮೊತ್ತವನ್ನು 15 ಕೋಟಿಯಷ್ಟು ಹೆಚ್ಚಿಸಿದೆ.

ಇದೇ ತಿಂಗಳಿನಲ್ಲಿ ಕಂಪನಿಯು ಸರಕು ಮತ್ತು ಪುಸ್ತಕ ಸಾಲಕ್ಕೆ ಪ್ರತಿಯಾಗಿ 30 ಕೋಟಿ ರೂಪಾಯಿಯನ್ನು ಖಾಸಗಿ ಬ್ಯಾಂಕಿನಿಂದ ಪಡೆದಿದೆ. ಸನಂದ್ ಕೈಗಾರಿಕಾ ಎಸ್ಟೇಟ್‍ನಲ್ಲಿ 15,754.83 ಚದರ ಮೀಟರ್ ವಿಸ್ತೀರ್ಣದ ಆಸ್ತಿಯನ್ನು ಗುಜರಾತ್ ಕೈಗಾರಿಕಾ ಅಭಿವೃದ್ಧಿ ನಿಗಮ (ಜಿಐಡಿಸಿ) ಕಂಪನಿಗೆ ಭೋಗ್ಯಕ್ಕೆ ನೀಡಿದೆ. ಲೀಸ್ ಒಪ್ಪಂದ ಮಾಡಿಕೊಂಡ ಒಂದೇ ತಿಂಗಳಲ್ಲಿ ಈ ಆಸ್ತಿಯನ್ನು ಅಡವಿಟ್ಟು, ಕುಸುಮ್ ಫಿನ್ ಸರ್ವ್, ಹೆಚ್ಚುವರಿಯಾಗಿ 17 ಕೋಟಿ ರೂಪಾಯಿಗಳನ್ನು 2018ರಲ್ಲಿ ಖಾಸಗಿ ಬ್ಯಾಂಕ್‍ನಿಂದ ಪಡೆದಿದೆ. ಪ್ರಸ್ತುತ ಈ ಕಂಪನಿ ಸನಂದ್‍ನಲ್ಲಿರುವ ಒತ್ತೆ ಇಟ್ಟ ಆಸ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಜಯ್ ಶಾ ಮಾಲಕ ಕುಸುಮ್ ಫಿನ್ ‍ಸರ್ವ್‍ಗೆ ಸಾಲ ನೀಡಿದ ಬಗ್ಗೆ ಸುದ್ದಿ ವರದಿಗಳಲ್ಲಿ ಮತ್ತು ಸಂಸತ್ತಿನಲ್ಲಿ ಹಲವು ಬಾರಿ ಪ್ರಶ್ನೆಗಳನ್ನು ಎತ್ತಿದ ಬಳಿಕ, ಗಡುವು ಮುಗಿದು ಒಂಬತ್ತು ತಿಂಗಳು ಕಳೆದರೂ, 2016-17ನೇ ಸಾಲಿಗೆ ಕುಸುಮ್ ಫಿನ್ ‍ಸರ್ವ್ ತನ್ನ ಲೆಕ್ಕಪತ್ರ ವಿವರಗಳನ್ನು ಬಿಡುಗಡೆ ಮಾಡಿಲ್ಲ. ಎಲ್‍ಎಲ್‍ಪಿಗಳು ತಮ್ಮ ಲೆಕ್ಕಪರ್ರ ಹೇಳಿಕೆಯನ್ನು ಪ್ರತಿ ವರ್ಷದ ಅಕ್ಟೋಬರ್ 30ರ ಒಳಗಾಗಿ ಸಲ್ಲಿಸಬೇಕು. ಇದಕ್ಕೆ ವಿಫಲವಾದಲ್ಲಿ ಲಿಮಿಟೆಡ್ ಲಯಬಿಲಿಟಿ ಪಾರ್ಟರ್‍ ಶಿಪ್ ಕಾಯ್ದೆ ಅನ್ವಯ ಇದು ಅಪರಾಧ. ಇದಕ್ಕೆ ಐದು ಲಕ್ಷ ರೂಪಾಯಿವರೆಗೂ ದಂಡ ವಿಧಿಸಬಹುದಾಗಿದೆ. ಕಂಪನಿ 2016-17ನೇ ಸಾಲಿನ ಲೆಕ್ಕಪತ್ರ ವಿವರ ನೀಡದ ಹಿನ್ನೆಲೆಯಲ್ಲಿ, ಕಂಪನಿಯ ಸಾಲದ ಹೊರೆ 96.35 ಕೋಟಿಗಿಂತ ಎಷ್ಟು ಅಧಿಕವಿದೆ ಎಂದು ಖಾತ್ರಿಪಡಿಸಲು ಸಾಧ್ಯವಾಗಿಲ್ಲ.

caravanmagazine.in ಕಳುಹಿಸಿದ ಪ್ರಶ್ನೆಗೆ ಅಮಿತ್ ಶಾ ಮತ್ತು ಸಹಕಾರ ಬ್ಯಾಂಕ್ ಇನ್ನೂ ಉತ್ತರ ನೀಡಿಲ್ಲ. ಜಯ್ ಶಾ ತಮ್ಮ ಮೆಸೆಂಜರ್ ಮೂಲಕ ಉತ್ತರ ನೀಡಿದ್ದಾರೆ. "ನಾವು ಕಾನೂನುಬದ್ಧ ವ್ಯವಹಾರವನ್ನು ಕಾನೂನುಬದ್ಧವಾಗಿ ಮಾಡುತ್ತಿದ್ದೇವೆ ಎಂದು ಗಮನಕ್ಕೆ ತರಬಯಸುತ್ತೇವೆ. ನಮ್ಮ ವ್ಯವಹಾರದ ಪ್ರತಿ ವಹಿವಾಟಿಗೆ ಕೂಡಾ ಸೂಕ್ತ ಲೆಕ್ಕಪತ್ರವಿದ್ದು, ತೆರಿಗೆ ಅಧಿಕಾರಿಗಳ ಮುಂದೆ ಲೆಕ್ಕಪತ್ರ ಹಾಜರುಪಡಿಸಿದ್ದೇವೆ. ನಮ್ಮ ವ್ಯವಹಾರ ವಿವರಗಳು ಯಾವುದೇ ಪತ್ರಿಕೋದ್ಯಮ ಉದ್ದೇಶಕ್ಕೆ ಪ್ರಸ್ತುತವಲ್ಲ. ಇದು ಸಾರ್ವಜನಿಕ ಚರ್ಚೆಗೆ ಹಾಗೂ ಪ್ರಕಟಣೆಗೆ ಒಳಗಾಗಬೇಕಿಲ್ಲ" ಎಂದು ಹೇಳಿದ್ದಾರೆ. ಕಾನೂನು ಅಭಿಪ್ರಾಯ ಪಡೆದು ಸೂಕ್ತವಾದ ಉತ್ತರ ನೀಡಲು ಏಳರಿಂದ ಹತ್ತು ದಿನ ಬೇಕು ಎಂದೂ ಸ್ಪಷ್ಟಪಡಿಸಿದ್ದಾರೆ. ಹೆಚ್ಚುವರಿ ಮಾಹಿತಿ ಬಂದ ಬಳಿಕ ವರದಿ ಪರಿಷ್ಕರಿಸಲಾಗುತ್ತದೆ. ಕೋಟಕ್ ಬ್ಯಾಂಕ್ ನೀಡಿರುವ ಉತ್ತರದ ಪ್ರಕಾರ, "ಬ್ಯಾಂಕ್ ಕಟ್ಟುನಿಟ್ಟಿನ ಪ್ರಕ್ರಿಯೆಗಳನ್ನು ಅನುಸರಿಸುತ್ತದೆ ಮತ್ತು ಬಾಕಿ ಸಾಲ ವಸೂಲಿಗೆ ಕ್ರಮ ಕೈಗೊಳ್ಳುತ್ತದೆ. ಗ್ರಾಹಕರ ರಹಸ್ಯ ಮಾಹಿತಿಗಳನ್ನು ಮೂರನೇ ವ್ಯಕ್ತಿಯ ಜತೆ ಹಂಚಿಕೊಳ್ಳಲು ನಿಯಂತ್ರಣ ಸಂಸ್ಥೆ ಅವಕಾಶ ನೀಡುವುದಿಲ್ಲ"

ಕುತೂಹಲಕಾರಿ ಅಂಶವೆಂದರೆ, ಕಲುಪುರ ಬ್ಯಾಂಕ್ ಮತ್ತು ಕುಸುಮ್ ಫಿನ್ ಸರ್ವ್ ನಡುವೆ ಅಡಮಾನ ಒಪ್ಪಂದದಲ್ಲಿ ಕಂಪನಿಯ ಸ್ಟಾಕ್, ಪುಸ್ತಕ ಸಾಲ ಮತ್ತು ಯಂತ್ರೋಪಕರಣ ಕುರಿತ ಕಲಂಗಳು ಖಾಲಿ ಇವೆ. ಕಡ್ಡಾಯವಾಗಿ ಭರ್ತಿ ಮಾಡಬೇಕಾದ ಸ್ಟಾಕ್ ಇನ್ವೆಂಟರಿ, ಸರಕಿನ ಸ್ವರೂಪ ಹಾಗೂ ದಾಸ್ತಾನಿನ ಮೌಲ್ಯ ಮತ್ತು ಬಾಕಿ ಸರಕಿನ ವಿವರಗಳು ಕೂಡಾ ಖಾಲಿ ಇವೆ. ಖಾಸಗಿ ಬ್ಯಾಂಕ್ ನೀಡಿದ ಮಂಜೂರಾತಿ ಪತ್ರದಲ್ಲಿ ಕಂಡುಬರುವ ಮೂಲ ಬಂಡವಾಳ ಮತ್ತು ಒಟ್ಟು ಹೊರಗಿನ ಹೊಣೆಗಾರಿಕೆಯನ್ನು ನಮೂದಿಸಿಲ್ಲ.

1970ರಲ್ಲಿ ಆರಂಭವಾದ ಕಲುಪುರ ಕಮರ್ಷಿಯಲ್ ಕೋ ಆಪರೇಟಿವ್ ಬ್ಯಾಂಕ್ ಇತ್ತೀಚಿನ ವರ್ಷಗಳಲ್ಲಿ ಗುಜರಾತ್‍ ನ ಸಹಕಾರ ಬ್ಯಾಂಕ್‍ಗಳ ಪೈಕಿ ಪ್ರಬಲ ಬ್ಯಾಂಕ್ ಆಗಿ ರೂಪುಗೊಂಡಿದೆ. ಕಳೆದ ವರ್ಷದ ಅಕ್ಟೋಬರ್‍ನಲ್ಲಿ ಬಿಡುಗಡೆ ಮಾಡಿದ ವರದಿಯಲ್ಲಿ ಗುಜರಾತ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‍ಗಳ ಒಕ್ಕೂಟ, ಕಲುಪುರ ಬ್ಯಾಂಕನ್ನು ರಾಜ್ಯದ ಅಗ್ರಗಣ್ಯ ಬ್ಯಾಂಕ್ ಎಂದು ಘೋಷಿಸಿದೆ. ಒಟ್ಟು 6,249 ಕೋಟಿ ರೂಪಾಯಿ ಠೇವಣಿ ಹೊಂದಿ ಮತ್ತು 4221 ಕೊಟಿ ರೂಪಾಯಿ ಸಾಲ ನೀಡಿರುವ ಬ್ಯಾಂಕ್ ರಾಜ್ಯಾದ್ಯಂತ 55 ಶಾಖೆಗಳನ್ನು ಹೊಂದಿದೆ.

ಗುಜರಾತ್‍ನಲ್ಲಿ ಸಹಕಾರ ಸಂಘಗಳು ಗ್ರಾಮಗಳಲ್ಲಿ ಪ್ರಬಲ ಅಸ್ತಿತ್ವವನ್ನು ಹೊಂದಿವೆ. ಸಹಕಾರ ಸಂಸ್ಥೆಗಳ ಜಾಲ ಗುಜರಾತ್‍ನ ಪ್ರತಿ ಮೂವರಲ್ಲಿ ಒಬ್ಬರನ್ನು ತಲುಪಿದೆ. ಗುಜರಾತ್‍ನಲ್ಲಿ ಇದು ರಾಜಕೀಯವಾಗಿಯೂ ಪ್ರಬಲವಾಗಿದ್ದು, 18 ಜಿಲ್ಲಾ ಬ್ಯಾಂಕ್‍ಗಳ ಪೈಕಿ 16 ಜಿಲ್ಲಾ ಬ್ಯಾಂಕ್‍ಗಳು ಬಿಜೆಪಿ ನಿಯಂತ್ರಣದಲ್ಲಿವೆ. ಕಲುಪುರ ಬ್ಯಾಂಕ್ ಕೂಡಾ ಇದಕ್ಕೆ ಹೊರತಾಗಿಲ್ಲ.

ಅಂಬುಭಾಯ್ ಮಂಗಲ್‍ಭಾಯ್ ಪಟೇಲ್ ಈ ಬ್ಯಾಂಕಿನ ಅಧ್ಯಕ್ಷೆ. 2017ರಲ್ಲಿ ಗುಜರಾತ್ ಉಪಮುಖ್ಯಮಂತ್ರಿ ನಿತಿನ್‍ ಭಾಯ್ ಪಟೇಲ್ ಸಲ್ಲಿಸಿದ ಅಫಿಡವಿಟ್ ಪ್ರಕಾರ, ಅವರು ಹಾಗೂ ಪತ್ನನಿ ಕಲುಪುರ ಬ್ಯಾಂಕ್‍ನ ಷೇರುದಾರರು.

ಸೆಪ್ಟೆಂಬರ್ 27ರಂದು ಬ್ಯಾಂಕ್, ಎರಡನೇ ಕಂತಿನ ಸಾಲವನ್ನು ಕುಸುಮ್ ಕಂಪನಿಗೆ ನೀಡಿದ ಕೆಲವೇ ದಿನಗಳಲ್ಲಿ ಖಾಸಗಿ ಬ್ಯಾಂಕ್ ಕೂಡಾ 30 ಕೋಟಿ ರೂಪಾಯಿ ಸಾಲ ಬಿಡುಗಡೆ ಮಾಡಿದೆ.

‘ದ ವೈರ್’ ಪ್ರಕಟಿಸಿದ ವರದಿಯಲ್ಲಿ ಮೂಲಭೂತವಾಗಿ, ಜಯ್ ಶಾ ಅವರ ಇನ್ನೊಂದು ಕಂಪನಿಯಾದ ಟೆಂಪಲ್ ಎಂಟರ್‍ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ಬಗ್ಗೆ ವಿವರಗಳು ಇದ್ದವು. ಇದು ತನ್ನ ವಹಿವಾಟನ್ನು 16 ಸಾವಿರ ಪಟ್ಟು ಹೆಚ್ಚಿಸಿಕೊಂಡಿದೆ ಎನ್ನಲಾಗಿತ್ತು. ಕೆಲ ವರ್ಷಗಳ ಕಾಲ ನಗಣ್ಯ ಎನಿಸುವ ಲಾಭ ಅಥವಾ ನಷ್ಟವನ್ನು ದಾಖಲಿಸಿದ ಕಂಪನಿ, 2014-15ರಲ್ಲಿ, 50 ಸಾವಿರ ರೂಪಾಯಿ ಆದಾಯ ಘೋಷಿಸಿತ್ತು. ಮರು ವರ್ಷ ಇದರ ವಹಿವಾಟು 80,5 ಕೋಟಿಗೆ ಹೆಚ್ಚಿತು. ಆದರೆ 2016ರ ಅಕ್ಟೋಬರ್‍ನಲ್ಲಿ ಕಂಪನಿ ವಹಿವಾಟು ಸ್ಥಗಿತಗೊಳಿಸಿತು. ಈ ಬಗ್ಗೆ ದ caravanmagazine.in ತನಿಖೆ ನಡೆಸಿದಾಗ, ಜಯ್ ಶಾ ಅವರ ವ್ಯವಹಾರ ದೃಷ್ಟಿ ಸಂಪೂರ್ಣವಾಗಿ ಟೆಂಪಲ್ ಎಂಟರ್‍ಪ್ರೈಸಸ್‍ನಿಂದ ಕುಸುಮ್ ಫಿನ್‍ಸರ್ವ್‍ಗೆ ಹರಿದಿರುವುದು ತಿಳಿದುಬಂತು.

‘ದ ವೈರ್’ ವರದಿ ಪ್ರಕಟವಾದ ಐದು ದಿನಗಳ ಬಳಿಕ ಶಾ ಇಂಡಿಯಾಟುಡೇ ಸಮೂಹ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿ, "ನನ್ನ ಮಗನ ಕಂಪನಿ ಟೆಂಪಲ್ ಎಂಟರ್‍ಪ್ರೈಸಸ್ ಸರ್ಕಾರದ ಜತೆ ಒಂದು ರೂಪಾಯಿ ವಹಿವಾಟನ್ನೂ ನಡೆಸಿಲ್ಲ. ಸರ್ಕಾರದ ಭೂಮಿಯನ್ನು ಪಡೆದಿಲ್ಲ. ಸರ್ಕಾರದ ಗುತ್ತಿಗೆಯನ್ನೂ ಪಡೆದಿಲ್ಲ" ಎಂದು ಘೋಷಿಸಿದ್ದರು. ಆ ಕಂಪನಿಯ ಬದಲು ಜಯ್ ಶಾ ಅವರ ಮತ್ತೊಂದು ಕಂಪನಿ ಕೇಂದ್ರ ಸರ್ಕಾರಿ ಸ್ವಾಮ್ಯದ ಐಆರ್‍ ಡಿಎನಿಂದ ಸಾಲ ಪಡೆದಿದೆ. 15 ಸಾವಿರ ಚದರ ಮೀಟರ್ ಭೂಮಿಯನ್ನು ಜಿಐಡಿಸಿಯಿಂದ ಇದಕ್ಕೆ ಹಂಚಿಕೆ ಮಾಡಲಾಗಿತ್ತು ಹಾಗೂ ಜಿಐಡಿಸಿ ಜತೆ ಕಂಪನಿ ಒಪ್ಪಂದ ಮಾಡಿಕೊಂಡಿತ್ತು.

ಕುಸುಮ್ ಫಿನ್‍ ಸರ್ವ್, ಜಿಐಡಿಸಿಗೆ 2017ರ ಮೇ 16ರಂದು ಭೂಮಿ ಮಂಜೂರಾತಿಗೆ ಅರ್ಜಿ ಸಲ್ಲಿಸಿತ್ತು. ಇದಾದ ಎರಡು ತಿಂಗಳ ಬಳಿಕ 15,754.83 ಚದರ ಮೀಟರ್ ಜಾಗವನ್ನು ಜಿಡಿಐಸಿ ಮಂಜೂರು ಮಾಡಿತು. ಹಂಚಿಕೆ ಪತ್ರದ ಪ್ರಕಾರ ಇದರ ನಿವ್ವಳ ಮೌಲ್ಯ 6.33 ಕೋಟಿ ರೂಪಾಯಿ.

ಎಂಟು ತಿಂಗಳ ಬಳಿಕ 2018ರಲ್ಲಿ ಜಿಐಡಿಸಿ ಕುಸುಮ್ ಫಿನ್‍ ಸರ್ವ್ ಜತೆ ಲೀಸ್ ಒಪ್ಪಂದ ಮಾಡಿಕೊಂಡಿದೆ. ಒಂದು ತಿಂಗಳ ಬಳಿಕ ಖಾಸಗಿ ಬ್ಯಾಂಕ್, ಈ ಭೂಮಿ ಮತ್ತು ಷೇರುಗಳಿಗೆ ಪ್ರತಿಯಾಗಿ 17 ಕೋಟಿ ರೂಪಾಯಿ ಮಂಜೂರು ಮಾಡಿದೆ. ಒಟ್ಟು ಕುಸಮ್ ಫಿನ್‍ ಸರ್ವ್‍ಗೆ ನೀಡಿದ ಸಾಲ 47 ಕೋಟಿ ರೂ. ಆಯಿತು.

ಜಿಐಡಿಸಿಯ ವೆಬ್‍ಸೈಟ್‍ನಲ್ಲಿ ಭೂಮಿ ಹಂಚಿಕೆ ಅರ್ಜಿಗಳಿಗೆ ಮೌಲ್ಯಮಾಪನ ಮಾನದಂಡವನ್ನು ಪಟ್ಟಿ ಮಾಡಲಾಗಿದೆ. ಪ್ರತಿ ಅರ್ಜಿಗಳಿಗೆ 100 ಅಂಕಗಳ ಪೈಕಿ ಇದು ಅಂಕ ನೀಡುತ್ತದೆ. ಜಿಐಡಿಎ ಮಾನದಂಡದ ಪ್ರಕಾರ, ಹೊಸ ಘಟಕವನ್ನು ಆರಂಭಿಸುವ ಹಣಕಾಸು ನೆಲೆಗೆ 20 ಅಂಕ. ಆದರೆ ಜಿಐಡಿಸಿ ಮೌಲ್ಯಮಾಪನದಲ್ಲಿ ಕುಸುಮ್ ಫಿನ್‍ಸರ್ವ್ ಹೇಗೆ ಒಳ್ಳೆಯ ಅಂಕ ಪಡೆಯಿತು ಎನ್ನುವುದು ಅರ್ಥವಾಗುತ್ತಿಲ್ಲ. ಏಕೆಂದರೆ 2015-16ರವರೆಗೂ ಸಾರ್ವಜನಿಕವಾಗಿ ಲಭ್ಯವಾಗುವ ಬ್ಯಾಲೆನ್ಸ್‍ಶೀಟ್ ಪ್ರಕಾರ ಅದರ ಹಣಕಾಸು ಪರಿಸ್ಥಿತಿ ಸರಿ ಇಲ್ಲ. ಆದಾಗ್ಯೂ, ಅಷ್ಟು ದೊಡ್ಡ ಜಮೀನನ್ನು ಜಿಡಿಐಸಿ ಹೇಗೆ ಮಂಜೂರು ಮಾಡಿತು ಎನ್ನುವ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ.

ಜಿಐಡಿಸಿ ಮತ್ತು ಕುಸುಮ್ ಫಿನ್ ಸರ್ವ್‍ನ ಭೋಗ್ಯದ ಒಪ್ಪಂದ ಪ್ರತಿಯನ್ನು ಪಡೆಯಲು ನಡೆಸಿದ ಪ್ರಯತ್ನ ಫಲ ನೀಡಿಲ್ಲ. ಜಿಐಡಿಸಿಯ ಸನಂದ್ ಪ್ರದೇಶದ ಪ್ರಾದೇಶಿಕ ವ್ಯವಸ್ಥಾಪಕಿ ದೀಪ್ತಿ ಮರಾಠ, ಈ ಪ್ರತಿಯನ್ನು ನೀಡಲು ನಿರಾಕರಿಸಿದ್ದು, ಈ ಕುರಿತ ಪ್ರಶ್ನೆಗಳಿಗೆ ಉತ್ತರಿಸಲು ಕೂಡಾ ನಿರಾಕರಿಸಿದ್ದಾರೆ. ಒಪ್ಪಂದದ ಪ್ರತಿ ಪಡೆಯಬೇಕಿದ್ದರೆ, ಸಂಬಂಧಪಟ್ಟ ಕಂಪನಿಯಿಂದ ಅನುಮತಿ ಪಡೆಯಬೇಕು ಎನ್ನುವುದು ಅವರು ನೀಡುವ ಉತ್ತರ.

ಬೋಲ್ ಗ್ರಾಮದಲ್ಲಿರುವ ಜಿಐಡಿಸಿ ಕಚೇರಿಗೆ ನಾನು ಭೇಟಿ ನೀಡಿ, ಹಂಚಿಕೆ ಬಗ್ಗೆ ವಿಚಾರಿಸಿದಾಗ, ಭೂ ಇಲಾಖೆಯ ಒಬ್ಬ ಅಧಿಕಾರಿ, ಮತ್ತೊಬ್ಬ ಅಧಿಕಾರಿ ‘ಝಾಲಾ ಸಾಹೇಬ್’ ಬರುವವರೆಗೆ ಕಾಯುವಂತೆ ಸೂಚಿಸಿದರು. ಇಬ್ಬರು ಅಲ್ಲಿಗೆ ಆಗಮಿಸಿದರು. “ಕುಸುಮ್ ಫಿನ್‍ ಸರ್ವ್‍ಗೆ ಹಂಚಿಕೆಯಾದ ಪ್ಲಾಟ್ ಸಂಖ್ಯೆ 55, 56, 57ರ ಬಗ್ಗೆ ಕೇಳುತ್ತಿದ್ದೀರಾ?” ಎಂದು ಅವರು ಪ್ರಶ್ನಿಸಿದರು. ನಾನು “ಹೌದು” ಎಂದು ತಲೆಯಾಡಿಸಿದೆ.

"ಇದರ ಮಾಲಕರು ಯಾರು ಎಂದು ನಿಮಗೆ ಗೊತ್ತಿರಬೇಕಲ್ಲವೇ?"

"ಹೌದು ನನಗೆ ಗೊತ್ತು" ಎಂದು ನಾನು ಉತ್ತರಿಸಿದೆ.

ಎರಡನೇ ವ್ಯಕ್ತಿ ಮೌಲಿಕ್ ಸುಖಾದಿಯಾ, ಈತ ಕುಸುಮ್ ಫಿನ್‍ ಸರ್ವ್‍ನ ಮಾಜಿ ಉದ್ಯೋಗಿ. ಜಿಐಡಿಸಿ ಭೂಮಿಗೆ ಸಂಬಂಧಿಸಿದಂತೆ ಖಾಸಗಿ ಬ್ಯಾಂಕಿನ ಅಡಮಾನ ಒಪ್ಪಂದಕ್ಕೆ ಸಾಕ್ಷಿಯಾಗಿ ಸಹಿ ಮಾಡಿದ್ದ ವ್ಯಕ್ತಿ. ಇಬ್ಬರೂ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು. ಮತ್ತೆ ಏನನ್ನೂ ಕೇಳದಂತೆ ತಡೆಯುತ್ತಿದ್ದರು.

ಸನಂದ್ ಕೈಗಾರಿಕಾ ಸಂಕೀರ್ಣದಲ್ಲಿ ಕಂಪನಿಗೆ ಹಂಚಿಕೆಯಾದ ನಿವೇಶನಗಳನ್ನು ಪತ್ತೆ ಮಾಡುವುದು ಸುಲಭವಾಗಿರಲಿಲ್ಲ. ಎರಡು ಗಂಟೆ ಬೇಕಾಯಿತು. ಇಲ್ಲಿ ಒಂದು ದೊಡ್ಡ ಫ್ಯಾಕ್ಟರಿ ಕಾರ್ಯನಿರ್ವಹಿಸುತ್ತಿದೆ. ಭದ್ರತಾ ಸಿಬ್ಬಂದಿ ನನ್ನನ್ನು ಒಳಕ್ಕೆ ಬಿಡಲು ನಿರಾಕರಿಸಿದ. ಬ್ಯಾಂಕ್ ದಾಖಲೆಗಳ ಪ್ರಕಾರ, ಫ್ಯಾಕ್ಟರಿಯಲ್ಲಿ ಪಿಪಿ, ಎಚ್‍ಡಿಪಿಇ ಹಾಗೂ ಜಂಬೊ ಬ್ಯಾಗ್ ಉತ್ಪಾದನೆಯಾಗುತ್ತದೆ. ಆದರೆ ಸ್ಥಳದಲ್ಲಿ ಇದು ಉತ್ಪಾದನೆಯಾಗುವ ಯಾವ ಸುಳಿವೂ ಕಾಣಸಿಗಲಿಲ್ಲ.

ಕುಸುಮ್ ಫಿನ್‍ ಸರ್ವ್, ಖಾಸಗಿ ಬ್ಯಾಂಕಿನಿಂದ 17 ಕೋಟಿ ರೂ. ಸಾಲ ಪಡೆಯಲು ಒಟ್ಟು 14 ಕಂಪನಿಗಳನ್ನು ಒತ್ತೆ ಇಟ್ಟಿದೆ. ಬ್ಯಾಂಕ್ ದಾಖಲೆಗಳ ಪ್ರಕಾರ, ಷೇರುಗಳ ಒಟ್ಟು ಮೌಲ್ಯ ಮೇ 9ಕ್ಕೆ 13.62 ಕೋಟಿ ರೂಪಾಯಿ.

ಬ್ಯಾಂಕಿನಿಂದ ಪಡೆದ ಸಾಲಸೌಲಭ್ಯವಲ್ಲದೇ, ಕುಸುಮ್ ಫಿನ್‍ಸರ್ವ್, ಭದ್ರತೆ ಇಲ್ಲದ ಸಾಲವನ್ನೂ ಕೆಐಎಫ್‍ಎಸ್‍ನಿಂದ ಪಡೆದಿದೆ. ಇದರ ಪ್ರವರ್ತಕ ರಾಜೇಶ್ ಖಂಡ್ವಾಲಾ. 2014 ಮತ್ತು 1025ರಲ್ಲಿ ಈ ಕಂಪನಿ ಕುಸುಮ್ ಫಿನ್ ಸರ್ವ್‍ಗೆ ಸಾಳ ನೀಡಿದೆ. ಆದರೆ ನೀಡಿದ ಸಾಲದ ಮೊತ್ತವನ್ನು ಬಹಿರಂಗಪಡಿಸಿಲ್ಲ. ಖಂಡ್ವಾಲಾ, ರಾಜ್ಯಸಭಾ ಸದಸ್ಯೆ ಪರಿಮಳ ನಾಥವಾನಿಯವರ ಸಂಬಂಧಿ. ನಾಥ್‍ವಾನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‍ನ ಸಮೂಹ ಅಧ್ಯಕ್ಷರು. ಖಂಡ್ವಾಲಾ ಪುತ್ರಿಯನ್ನು ನಾಥವಾನಿ ಮಗನಿಗೆ ವಿವಾಹ ಮಾಡಲಾಗಿದೆ. ವೈರ್ ಸಲ್ಲಿಸಿದ ಪ್ರಶ್ನಾವಳಿಗೆ ಜೈ ಶಾ ಅರ ವಕೀಲ, ಖಂಡ್ವಾಲಾ ಅವರು ಜೈ ಶಾ ಅವರ ಕುಟುಂಬಕ್ಕೆ ಹಲವು ವರ್ಷಗಳಿಂದ ಷೇರುಬ್ರೋಕರ್ ಎಂಬ ಉತ್ತರ ನೀಡಿದ್ದರು.

=====================

ಜೈ ಶಾ ಅವರ 16 ಸಾವಿರ ಪಟ್ಟು ವಹಿವಾಟು ಹೆಚ್ಚಳವನ್ನು ಘೋಷಿಸಿಕೊಂಡ ಟೆಂಪಲ್ ಎಂಟರ್‍ಪ್ರೈಸಸ್ ದೀಢೀರನೇ ಮುಚ್ಚಿತು. ಆರಂಭದಿಂದಲೂ ಕುಸುಮ್ ಫಿನ್‍ಸರ್ವ್ ಒಂದು ವಹಿವಾಟಿನಿಂದ ಇನ್ನೊಂದಕ್ಕೆ ಬದಲಾಯಿಸಿಕೊಳ್ಳುತ್ತಿದೆ.

ಸಾರ್ವಜನಿಕ ದಾಖಲೆಗಳು ಮತ್ತು ಹೇಳಿಕೆಗಳ ಪ್ರಕಾರ, ಕುಸುಮ್ ಫಿನ್ ಸರ್ವ್, ಷೇರು ಮಾರಾಟ, ಕನ್ಸಲ್ಟೆನ್ಸಿ, ಕೋಕ್ ಮತ್ತು ಕಲ್ಲಿದ್ದಲು ಮಾರಾಟ, ಸಿಮೆಂಟ್ ಚೀಲ ಉತ್ಪಾದನೆಯಂಥ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಜೈ ಶಾ ಶೇಕಡ 60ರಷ್ಟು ಷೇರು ಹೊಂದಿದ್ದರೆ ಅವರ ಪತ್ನಿ ರಕ್ಷಿತಾ ಶಾ ಶೇಕಡ 39 ಷೇರು ಹೊಂದಿದ್ದಾರೆ. ಉಳಿದ ಶೇಕಡ 1 ಷೇರನ್ನು ಪ್ರದೀಪ್‍ಭಾಯ್ ಕಾಂತಿಲಾಲ್ ಶಾ ಹೊಂದಿದ್ದಾರೆ.

‘ದ ವೈರ್’ ಪ್ರಶ್ನೆಗೆ ಉತ್ತರಿಸಿದ ಜೈ ಶಾ ಅವರ ವಕೀಲ, "ಕುಸುಮ್ ಫಿನ್‍ ಸರ್ವ್ ಷೇರು ಮಾರಾಟ, ಆಮದು ಮತ್ತು ರಫ್ತು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ ಹಾಗೂ ವಿತರಣೆ ಮತ್ತು ಮಾರಾಟ ಸಲಹಾ ಸೇವೆಯನ್ನು ನೀಡುತ್ತಿದೆ" ಎಂದು ಹೇಳಿದ್ದರು. 2014-15ರ ಕಂಪನಿ ಹೇಳಿಕೆ ಪ್ರಕಾರ ಅದು ಕೃಷಿ ವಸ್ತುಗಳ ಮಾರಾಟದಲ್ಲಿ ತೊಡಗಿಸಿಕೊಂಡಿದೆ. ಕಂಪನಿಯ ಒಟ್ಟು ವಹಿವಾಟಿನ ಶೇಕಡ 60ರಷ್ಟು ಆದಾಯ ಸಲಹಾ ಸೇವೆಯಿಂದ ಬಂದಿದೆ. ಕೃಷಿ ವಸ್ತುಗಳ ಮಾರಾಟದಿಂದ ಶೇಕಡ 29ರಷ್ಟು ಆದಾಯ ಬಂದಿದೆ. ಕಲುಪುರ ಬ್ಯಾಂಕ್‍ನಿಂದ ಮಂಜೂರು ಮಾಡಲಾದ ಸಾಲದ ದಾಖಲೆಗಳ ಪ್ರಕಾರ, ಕಂಪನಿ ಕಲ್ಲಿದ್ದಲು ಮತ್ತು ಕೋಕ್ ವ್ಯವಹಾರದಲ್ಲೂ ತೊಡಗಿಸಿಕೊಂಡಿದೆ. 2012ರಲ್ಲಿ ಕುಸುಮ್ ಫಿನ್‍ಸರ್ವ್ ಪ್ರೈವೇಟ್ ಲಿಮಿಟೆಡ್ ಎಂದು ನೋಂದಣಿಯಾದ ಕಂಪನಿ, 2014-15ರಿಂದೀಚಗೆ ಹಲವು ವ್ಯವಹಾರ ವಲಯಗಳಿಂದ ವಹಿವಾಟು ತೋರಿಸಿದೆ. 2015ರ ಜುಲೈನಲ್ಲಿ ಕುಸುಮ್ ಫಿನ್‍ಸರ್ವ್, ಪ್ರೈವೇಟ್ ಲಿಮಿಟೆಡ್ ಕಂಪನಿಯಿಂದ ಎಲ್‍ಎಲ್‍ಪಿಯಾಗಿ ಪರಿವರ್ತನೆಯಾಗಿದೆ.

2016ರಲ್ಲಿ ಕಂಪನಿಯು ಇಂಡಿಯನ್ ರಿನಿವೇಬಲ್ ಎನರ್ಜಿ ಡೆವಲಪ್‍ಮೆಂಟ್ ಏಜೆನ್ಸಿ ಲಿಮಿಟೆಡ್‍ನಿಂದ 10.35 ಕೋಟಿ ರೂಪಾಯಿ ಸಾಲ ಪಡೆದಿದೆ. ಇದು ಸಾರ್ವಜನಿಕ ವಲಯದ ಕಂಪನಿಯಾಗಿದ್ದು, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದಿಂದ ನಿರ್ವಹಿಸಲ್ಪಡುತ್ತದೆ. ಪವನ ವಿದ್ಯುತ್ ಕ್ಷೇತ್ರದಲ್ಲಿ ಯಾವ ಅನುಭವ ಇಲ್ಲದಿದ್ದರೂ, 2.1 ಮೆಗಾವ್ಯಾಟ್ ಪವನ ವಿದ್ಯುತ್ ಘಟಕವನ್ನು ಮಧ್ಯಪ್ರದೇಶದ ರತ್ನಮ್ ಜಿಲ್ಲೆಯಲ್ಲಿ ಸ್ಥಾಪಿಸುವ ಸಲುವಾಗಿ ಈ ಸಾಲ ಪಡೆಯಲಾಗಿದೆ. ಐ ಆರ್‍ಇಡಿಎ ವೆಬ್‍ಸೈಟ್‍ನಲ್ಲಿ ಪ್ರಕಟಿಸಿರುವ ನಿಯಮಾವಳಿಗಳನ್ನು ಉಲ್ಲಂಘಿಸಿ ಈ ಸಾಲ ಮಂಜೂರು ಮಾಡಲಾಗಿದೆ. ಐಆರ್‍ಇಡಿಎ ವೆಬ್‍ಸೈಟ್ ಪ್ರಕಾರ ಕೇವಲ 1 ಮೆಗಾವ್ಯಾಟ್ ವರೆಗೆ ವಿದ್ಯುತ್ ಉತ್ಪಾದಿಸುವ ಯೋಜನೆಗಳಿಗೆ ಮಾತ್ರ ಒಟ್ಟು ಯೋಜನಾ ವೆಚ್ಚದ ಶೇಕಡ 70ರಷ್ಟು ಸಾಲ ವಿತರಿಸಲಾಗುತ್ತದೆ. ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಘಟಕ ಸ್ಥಾಪನೆಯ ಅಂದಾಜು ವೆಚ್ಚ 4 ರಿಂದ 7 ಕೋಟಿ ರೂಪಾಯಿ. ಅಂದರೆ ಶೇಕಡ 70ರಷ್ಟು ಗರಿಷ್ಠ ಸಾಲ ನೀಡಿದರೂ, 4.9 ಕೋಟಿ ಸಾಲ ಮಂಜೂರು ಮಾಡಬಹುದು. ಕುಸುಮ್ ಫಿನ್‍ಸರ್ವ್ ಇದರ ದುಪ್ಪಟ್ಟು ಸಾಲ ಪಡೆದಿದೆ. ಜೈ ಶಾ ಅವರ ವಕೀಲರು 2017ರ ಅಕ್ಟೋಬರ್‍ನಲ್ಲಿ ಹೇಳಿದಂತೆ ಆ ವರ್ಷದ ಜೂನ್‍ವರೆಗೆ ಬಾಕಿ ಇದ್ದ ಸಾಲದ ಮೊತ್ತ 8,52 ಕೋಟಿ ರೂಪಾಯಿ. ಆದರೆ ಇದು ಎಂಸಿಎ ವೆಬ್‍ಸೈಟ್‍ನಲ್ಲಿ ಕಂಪನಿಯ ಇಂಡೆಕ್ಸ್ ಆಫ್ ಚಾರ್ಜ್‍ನಲ್ಲಿ ಪ್ರತಿಫಲನಗೊಂಡಿಲ್ಲ.

ಕುಸುಮ್ ಫಿನ್‍ಸರ್ವ್‍ನ ಪ್ರಸ್ತುತ ವ್ಯವಹಾರಗಳ ಬಗ್ಗೆ ಹೆಚ್ಚಿನ ಒಳನೋಟಗಳು ಸಿಕ್ಕಿಲ್ಲ. ಇದು 2015-16ನೇ ಹಣಕಾಸು ವರ್ಷಕ್ಕೆ ಲೆಕ್ಕಪತ್ರಗಳ ವಿವರಗಳನ್ನು ಸಲ್ಲಿಸಿಲ್ಲ. 2016-17ನೇ ವರ್ಷಕ್ಕೆ ಕಂಪನಿ ವಾರ್ಷಿಕ ರಿಟರ್ನ್ ಸಲ್ಲಿಸಿದೆ. ಆದರೆ ಇದರಲ್ಲಿ ಕಂಪನಿಯ ವ್ಯವಹಾರದ ಹಣಕಾಸು ವಿವರಗಳು ಇಲ್ಲ. ಎಲ್‍ಎಲ್‍ಪಿಯ ವಹಿವಾಟು 5 ಕೋಟಿಯನ್ನು ಮೀರಿದೆ ಎಂದಷ್ಟೇ ಹೇಳಲಾಗಿದೆ.

ಪ್ರಸ್ತುತ ಕಂಪನಿಯು ಪ್ಲಾಸ್ಟಿಕ್ ಚೀಲಗಳ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ. ಆದರೆ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಕ್ಕೆ ಸಲ್ಲಿಸಿದ ದಾಖಲೆಗಳ ಪ್ರಕಾರ, ಕಂಪನಿ ಈ ಕ್ಷೇತ್ರದಲ್ಲಿ ಹಿಂದೆ ತೊಡಗಿಸಿಕೊಂಡಿದ್ದ ವಿವರಗಳಿಲ್ಲ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top