“ಕೊಡಗು ಉಳಿಯಬೇಕಾದರೆ ಪರ್ವತಗಳನ್ನು ಸಂರಕ್ಷಿಸಬೇಕು”

ಭೂಕುಸಿತ ಸಂಭವಿಸುವ ಒಂದು ದಿನ ಮೊದಲು ತೋಟಗಳಲ್ಲಿ ಕಂಡುಬಂದಿತ್ತು ಬಿರುಕುಗಳು !

►ಹಿರಿಯರು, ಸಂಘಸಂಸ್ಥೆಗಳ ಮುಖಂಡರಿಂದ ಎಚ್ಚರಿಕೆ

#ಕೊಚ್ಚಿಹೋದ ಕೊಡಗು: ವಿಶೇಷ ವರದಿ ಸರಣಿ

ಮಡಿಕೇರಿ, ಆ.26: ಕೊಡಗು ಪರ್ವತ ಶ್ರೇಣಿಗಳಿಂದ ಕೂಡಿರುವ ಜಿಲ್ಲೆ. ಕೊಡಗು ಜಿಲ್ಲೆ ಉಳಿಯಬೇಕಾದರೆ ಇಲ್ಲಿನ ಬೆಟ್ಟಗುಡ್ಡಗಳು ಉಳಿಯಬೇಕು. ಬೆಟ್ಟ-ಗುಡ್ಡಗಳಿಲ್ಲದ ಕೊಡಗನ್ನು ಊಹಿಸಲು ಸಾಧ್ಯವೇ ಇಲ್ಲ. ಜಿಲ್ಲೆಯ ಇಂದಿನ ಸ್ಥಿತಿಗೆ ಪ್ರಾಕೃತಿಕ ವಿಕೋಪಕ್ಕಿಂತಲೂ ಮಾನವ ನಿರ್ಮಿತ ವಿಕೋಪಗಳೇ ದೊಡ್ಡ ಕಾರಣ.

ಸುಮಾರು ಎರಡು ದಶಕಗಳ ಹಿಂದಿನ ಕೊಡಗಿಗೂ ಇಂದಿನ ಕೊಡಗಿಗೂ ಅಜಗಜಾಂತರ ವ್ಯತ್ಯಾಸ ಇದೆ. ಹಲವು ಜಾತಿಯ ಬೃಹತ್ ಮರಗಳಿಂದ ಕೂಡಿದ್ದ ಹಚ್ಚ ಹಸುರಾದ ಕಾಡುಗಳಿಂದ ಕೂಡಿದ್ದ ಕೊಡಗಿನ ಪರ್ವತಗಳಲ್ಲಿ ಇಂದು ಕಾಂಕ್ರಿಟ್ ಕಾಡುಗಳು ತಲೆಎತ್ತಿವೆ. ಡಾಂಬಾರು, ಕಾಂಕ್ರಿಟ್ ರಸ್ತೆಗಳು ನಿರ್ಮಾಣವಾಗುತ್ತಿವೆ. ಕಾಡು ಕಡಿದು ರಬ್ಬರ್ ಮರಗಳನ್ನು ಬೆಳೆಸಲಾಗುತ್ತಿದೆ. ಮಿತಿ ಮೀರಿದ ಶುಂಠಿ ಬೆಳೆ ಮಣ್ಣಿನ ಫಲವತ್ತತೆಯನ್ನು ಕಡಿಮೆ ಮಾಡಿದೆ. ಪ್ರವಾಸಿಗರನ್ನು ಆಕರ್ಷಿಸುವ ಜಿಲ್ಲೆಯಾಗಿರುವುದರಿಂದ ಹೊಟೇಲ್, ಹೋಂಸ್ಟೇಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಮಾನವನ ದುರಾಸೆಗಳಿಂದ ಕೊಡಗಿನ ಪ್ರಕೃತಿಯ ಮೇಲೆ ನಡೆದ ವಿಕೋಪವೇ ಜಿಲ್ಲೆಯ ಇಂದಿನ ಸ್ಥಿತಿಗೆ ಕಾರಣ ಎಂದು ಜಿಲ್ಲೆಯ ಹಲವು ಹಿರಿಯರು, ಪ್ರಜ್ಞಾವಂತರು ಅಭಿಪ್ರಾಯ ಪಡುತ್ತಾರೆ.

ಮಡಿಕೇರಿ ತಾಲೂಕಿನ ಮಕ್ಕಂದೂರು ಗ್ರಾಮದಲ್ಲಿ ಪರ್ವತ ಕುಸಿತದ ಭೀಕರತೆಯನ್ನು ವೀಕ್ಷಿಸಲು ಬಂದವರು ಹಾಗೂ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಹಿರಿಯ ಮುಖಂಡರು 'ವಾರ್ತಾ ಭಾರತಿ'ಯೊಂದಿಗೆ ಕೊಡಗು ಜಿಲ್ಲೆಯ ದುರಂತಗಳಿಗೆ ಕಾರಣಗಳನ್ನು ಈ ರೀತಿ ವಿವರಿಸುತ್ತಾರೆ.

ಕೊಡಗು ಪರ್ವತ ಶ್ರೇಣಿಗಳಿಂದ ಕೂಡಿರುವ ಪ್ರಕೃತಿ ರಮಣೀಯ ಜಿಲ್ಲೆ. ಹೆಚ್ಚಿನ ಭೂಭಾಗ ವರ್ಷ ಪೂರ್ತಿ ಹಚ್ಚ ಹಸುರಾದ ಕಾಡುಗಳಿಂದ ಕೂಡಿರುತ್ತದೆ. ಹಲವು ನೈಸರ್ಗಿಕ ಸಂಪತ್ತಿನ ಭೂಮಿ. ಕರ್ನಾಟಕದ ಜೀವ ನದಿ ಕಾವೇರಿಯ ತವರೂರು. ಎಲ್ಲದಕ್ಕೂ ಮಿಗಿಲಾಗಿ ಜಗತ್ತಿನ ಅಪರೂಪದ ಜಾತಿಗಳ ಪಕ್ಷಿ, ಪ್ರಾಣಿ, ಸರೀಸೃಪಗಳೂ ಇಲ್ಲಿವೆ. ಆದರೆ ಮಾನವನ ದುರಾಸೆಗೆ ಇಂದು ಇವೆಲ್ಲವೂ ನಾಶವಾಗುತ್ತಿವೆ. ಈ ಹಿಂದೆ ಕಂಡರಿಯದ ಭೀಕರ ಪ್ರಕೃತಿ ವಿಕೋಪಗಳು ಸಂಭವಿಸತೊಡಗಿವೆ. ಭಯಭೀತರಾದ ಜಿಲ್ಲೆಯ ಜನರು ಈಗ ತಲೆ ಮೇಲೆ ಕೈಹೊತ್ತರೆ ಏನು ಪ್ರಯೋಜನ ಎಂದು ನಿವೃತ್ತ ಸೇನಾಧಿಕಾರಿ ಕೆ.ಪಿ.ಜಗದೀಶ್ ಪ್ರಶ್ನಿಸುತ್ತಾರೆ.  

ರಬ್ಬರ್, ಕಾಫಿ ಬೆಳೆಯಲು ಕಾಡುಗಳನ್ನು ದೊಡ್ಡ ಪ್ರಮಾಣದಲ್ಲಿ ಕಡಿಯಲಾಗಿದೆ. ರಬ್ಬರ್ ಗಿಡ ನೆಡಲು ಪರ್ವತಗಳನ್ನು ಅಗೆಯಲಾಗಿದೆ. ಮೆಟ್ಟಿಲು ಆಕಾರದಲ್ಲಿ ಅಗೆಯುತ್ತಿರುವುದರಿಂದ ಪರ್ವತಗಳ ಮೇಲ್ಪದರ ನಾಶ ಹೊಂದಿ ಮಳೆ ನೀರು ಹರಿದು ಹೋಗದೆ ಅಲ್ಲೇ ಇಂಗುವಂತೆ ಆಗಿದೆ. ಇದರಿಂದ ಮಣ್ಣು ಮೃದುಗೊಂಡು ದೊಡ್ಡ ದೊಡ್ಡ ಪರ್ವತಗಳು ಕುಸಿಯುತ್ತಿವೆ. ಹಲವು ಸಾವು ನೋವುಗಳು ಸಂಭವಿಸುತ್ತಿವೆ. ಸಾವಿರಾರು ಮಂದಿ ಬೀದಿಪಾಲಾಗಿದ್ದಾರೆ. ಈ ದುರಂತಕ್ಕೆ ನಾವು ನಮ್ಮನ್ನೇ ದೂರಬೇಕೆ ಹೊರತು ಪ್ರಕೃತಿಯನ್ನು ದೂರುವುದರಲ್ಲಿ ಅರ್ಥವಿಲ್ಲ ಎಂದು ಕೊಡಗು ಏಕೀಕರಣದ ಅಧ್ಯಕ್ಷ ಸುಗುಣ ಮುತ್ತಣ್ಣ ಹೇಳುತ್ತಾರೆ.

ಪರ್ವತಗಳ ತುದಿಯಲ್ಲಿ ಕಾಂಕ್ರಿಟ್ ಕಟ್ಟಡಗಳನ್ನು ನಿರ್ಮಿಸಬೇಕಾದರೆ ಇಡೀ ಪರ್ವತವನ್ನು ಸುತ್ತು ಬಳಸಿ ರಸ್ತೆ ನಿರ್ಮಿಸಲಾಗುತ್ತಿದೆ. ಪರ್ವತಗಳ ಅಡಿಪಾಯವನ್ನು ಅಗೆದು ರಸ್ತೆ ನಿರ್ಮಿಸುವುದರಿಂದ ಇಡೀ ಪರ್ವತ ತನ್ನ ನಿಯಂತ್ರಣವನ್ನು ಕಳೆದುಕೊಳ್ಳುತ್ತಿವೆ. ಅಲ್ಲದೆ ರಸ್ತೆ, ಕಟ್ಟಡ ನಿರ್ಮಾಣಕ್ಕಾಗಿ ಪರ್ವತಗಳಿಂದ ಮಳೆನೀರು ಹರಿಯುವ ಸ್ಥಳಗಳನ್ನು ಸಮತಟ್ಟು ಮಾಡಲಾಗುತ್ತಿದೆ. ಸ್ವಾಭಾವಿಕವಾಗಿ ಹರಿಯುವ ಝರಿಗಳ ದಿಕ್ಕುಗಳನ್ನು ಕೂಡಾ ಬದಲಾಯಿಸಲಾಗುತ್ತಿದೆ. ಇದರಿಂದಾಗಿ ಧಾರಾಕಾರ ಮಳೆ ಸುರಿದಾಗ ರಭಸದಲ್ಲಿ ಹರಿಯುವ ನೀರು ರಸ್ತೆ, ಮನೆಗಳನ್ನು ಕೊಚ್ಚಿಕೊಂಡು ಹೋಗುತ್ತದೆ. ಪರ್ವತಗಳನ್ನು ಕುಸಿಯುವಂತೆ ಮಾಡುತ್ತದೆ. ಇದು ಮಾನವ ನಿರ್ಮಿತ ವಿಕೋಪ ಎಂದು ಅವರು ಅಭಿಪ್ರಾಯಪಡುತ್ತಾರೆ.

ಕೊಡಗಿನ ಇಂದಿನ ಸ್ಥಿತಿಗೆ ಜಿಲ್ಲಾಡಳಿತ ಮತ್ತು ಸರಕಾರದ ನಿರ್ಲಕ್ಷ್ಯವನ್ನೂ ನಿರಾಕರಿಸುವಂತಿಲ್ಲ. ಮಳೆ ಕಾಡುಗಳು, ನೈಸರ್ಗಿಕ ಸಂಪತ್ತು, ಕೊಡಗನ್ನು ಸಂರಕ್ಷಿಸಲು ಜಿಲ್ಲಾಡಳಿತ ಮತ್ತು ಸರಕಾರ ವಿಫಲವಾಗಿದೆ. ಇಲ್ಲಿನ ಪರಿಸರವನ್ನು ಸಂರಕ್ಷಿಸಲು ಈಗಾಗಲೇ ಕೆಲವು ನೀತಿಗಳು ಜಾರಿಯಲ್ಲಿದ್ದರೂ ಅವು ಯಾವುದೂ ಪಾಲನೆಯಾಗುತ್ತಿಲ್ಲ. ಆದ್ದರಿಂದ ಪ್ರತ್ಯೇಕ ನೀತಿಯ ಅಗತ್ಯವಿದೆ. ಎಲ್ಲದಕ್ಕೂ ಹೆಚ್ಚಾಗಿ ಪರ್ವತಗಳನ್ನು ಅಗೆಯುವುದು, ಕಾಡು ಕಡಿಯುವಂತಹ ಟಿಂಬರ್ ಮಾಫಿಯಾಗಳಿಗೆ ಮೊದಲು ಕಡಿವಾಣ ಹಾಕಬೇಕು ಎಂದು ಆಗ್ರಹಿಸುವ ಲಯನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಜೆ.ಎಸ್.ಮಾದಪ್ಪ ಅವರು, ಕ್ರಮ ಕೈಗೊಳ್ಳದಿದ್ದರೆ ಭೀಕರ ದುರಂತಗಳನ್ನು ಎದುರಿಸಬೇಕಾಗಿ ಬಂದೀತು ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ಬೆಟ್ಟಗುಡ್ಡಗಳನ್ನು ಅಗೆಯಲು ಅನುಮತಿ ನೀಡಲೇಬಾರದು. ಒಂದು ವೇಳೆ ನೀಡಲೇಬೇಕೆಂದರೆ ಹಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಡಳಿತ ನೋಡಬೇಕು. ಪರ್ವತಗಳನ್ನು ಸುತ್ತು ಬಳಸಿ ರಸ್ತೆ ನಿರ್ಮಿಸುವ ಸಂದರ್ಭದಲ್ಲಿ ಮಳೆ ನೀರು ಹರಿಯಲು ಸೂಕ್ತ ಚರಂಡಿ ವ್ಯವಸ್ಥೆಯನ್ನು ಮಾಡಬೇಕು. ಬರೆಗಳಿಗೆ ತಡೆಗೋಡೆ ನಿರ್ಮಿಸಬೇಕು. ಸ್ವಾಭಾವಿಕವಾಗಿ ಮಳೆನೀರು, ಝರಿಗಳು ಹರಿಯುವ ಸ್ಥಳಗಳಲ್ಲಿ ರಸ್ತೆ ನಿರ್ಮಾಣಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಯಾವುದೇ ಕಾರಣಕ್ಕೂ ಮಳೆ ನೀರು, ಝರಿಗಳು ಹರಿಯುವ ದಿಕ್ಕನ್ನು ಬದಲಾಯಿಸದಂತೆ ನೀಡಬೇಕು. ಜಿಲ್ಲೆಯಲ್ಲಿ ಶುಂಠಿ ಬೆಳೆ ವ್ಯಾಪಕವಾಗುತ್ತಿದೆ. ಶುಂಠಿ ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿವೆ. ಇದು ಕೂಡಾ ಭೂಕುಸಿತಕ್ಕೆ ಕಾರಣವಾಗುತ್ತಿದೆ. ಇವೆಲ್ಲದಕ್ಕೂ ಜಿಲ್ಲಾಡಳಿತ, ಸರಕಾರ ಕಡಿವಾಣ ಹಾಕಿದಾಗ ಮಾತ್ರ ಕೊಡಗು ಜಿಲ್ಲೆಯನ್ನು ಉಳಿಸಲು ಸಾಧ್ಯ ಎಂದು ಜೆ.ಎಸ್.ಮಾದಪ್ಪ  ಹೇಳುತ್ತಾರೆ.

ಕಳೆದ ವಾರ ಮಡಿಕೇರಿ ಸಹಿತ ಜಿಲ್ಲೆಯಲ್ಲಿ ವಿವಿಧೆಡೆ ಉಂಟಾದ ಭೂಕುಸಿತದ ಒಂದೆರಡು ದಿನದ ಹಿಂದೆ ಹಲವು ಕಡೆ ಭೂಮಿ ಬಿರುಕು ಬಿಟ್ಟಿದ್ದವು. ಹಲವರು ತಮ್ಮ ತೋಟಗಳಲ್ಲಿ ಈ ಬಿರುಕುಗಳನ್ನು ಕಂಡಿದ್ದಾರೆ. ಪರ್ವತ ಕುಸಿದ ಪ್ರದೇಶಗಳಲ್ಲಿ ರಸ್ತೆಗಳು ಬಿರುಕು ಬಿಟ್ಟಿರುವುದನ್ನು ಗಮನಿಸಿರುವ ಸ್ಥಳೀಯರು ಸ್ಥಳೀಯ ಆಡಳಿತದ ಮೂಲಕ ಜಿಲ್ಲಾಡಳಿತದ ಗಮನವನ್ನೂ ಸೆಳೆದಿದ್ದರು ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಜಿಲ್ಲಾಡಳಿತ ತಲೆಕೆಡಿಸಿಕೊಂಡಿಲ್ಲ ಎಂದು ಮಕ್ಕಂದೂರು ಗ್ರಾಮದ ಹಿರಿಯರೊಬ್ಬರು ಆರೋಪಿಸಿದ್ದಾರೆ. 

ವಸತಿ ಪ್ರದೇಶಕ್ಕಿಂತಲೂ ನಿರ್ವಸತಿ ಪ್ರದೇಶ, ಪರ್ವತಗಳ ತುದಿಯಲ್ಲಿ ಹೆಚ್ಚಿನ ಬಿರುಕು ಆಗಿರಬಹುದು. ಇದು ಭೂಪಲ್ಲಟದಿಂದ ಆಗಿರುವ ಸಾಧ್ಯತೆ ಇದೆ. ಈ ಬಿರುಕುಗಳಲ್ಲಿ ಮಳೆ ನೀರು ಹರಿದು ಪರ್ವತಗಳು ಕುಸಿದಿರಬಹುದು ಎಂದು ಭೂತಜ್ಞರು ಅಭಿಪ್ರಾಯ ಪಡುತ್ತಾರೆ. ಭೂಮಿಯಲ್ಲಿ ಬಿರುಕು ಕಂಡ ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಆ ಪ್ರದೇಶಗಳ ಜನರನ್ನು ಸ್ಥಳಾಂತರ ಮಾಡಿಸಿದ್ದರೆ ಇಂದು ಹತ್ತಾರು ಜೀವಗಳು ಉಳಿಯುತ್ತಿದ್ದವೋ ಏನೋ ಎಂದು ಕೊಡಗು ಜಿಲ್ಲಾ ಬೆಳಗಾರರ ಒಕ್ಕೂಟದ ಅಧ್ಯಕ್ಷ ಹರೀಶ್ ಅಪ್ಪಯ್ಯ ನುಡಿದಿದ್ದಾರೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top