ಹೊಟೇಲ್, ಹೋಂಸ್ಟೇಗಳು ಖಾಲಿ ಖಾಲಿ

ಸೆ.1ರವರೆಗೆ ಪ್ರವಾಸಿಗರಿಗೆ ನಿರ್ಬಂಧ: ಸಂಕಷ್ಟದಲ್ಲಿ ಕೊಡಗಿನ ವ್ಯಾಪಾರಸ್ಥರು!

#ಕೊಚ್ಚಿಹೋದ ಕೊಡಗು: ವಿಶೇಷ ವರದಿ ಸರಣಿ

►ಆಟೋ ಸಹಿತ ಟ್ಯಾಕ್ಸಿ ಚಾಲಕರು ಕಂಗಾಲು

►ಕೂಲಿಕಾರ್ಮಿಕರ ಬದುಕು ಅತಂತ್ರ

ಮಂಗಳೂರು, ಆ.27: ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಕೊಡಗು ಜಿಲ್ಲೆಗೆ ಪ್ರವಾಸಿಗರು ಬಾರದಂತೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಇದರಿಂದ ಪ್ರವಾಸಿಗರನ್ನೇ ಅವಲಂಬಿಸಿರುವ ಕೊಡಗಿನ ಪ್ರಮುಖ ಉದ್ಯಮವಾದ ಸಾಂಬಾರು ಪದಾರ್ಥ(ಸ್ಪೈಸ್), ಹೊಟೇಲ್ ಸಹಿತ ಸಣ್ಣ ಪುಟ್ಟ ಅಂಗಡಿ ಮಾಲಕರು ವ್ಯಾಪಾರ ಇಲ್ಲದೆ ಕಂಗಾಲಾಗಿದ್ದಾರೆ. ಆಟೋ, ಜೀಪು ಸಹಿತ ಟ್ಯಾಕ್ಸಿ ಚಾಲಕರು ಬಾಡಿಗೆ ಸಿಗದೆ ದಿನದೂಡುತ್ತಿದ್ದಾರೆ. ಕೂಲಿ ಕಾರ್ಮಿಕರಂತೂ ಅಂತಂತ್ರರಾಗಿದ್ದಾರೆ.

ಜಿಲ್ಲೆಯಲ್ಲಿ ಸುರಿದ ಮಹಾಮಳೆ ಹಾಗೂ ಭೂಕುಸಿತ ಸಾವಿರಾರು ಮಂದಿಯನ್ನು ನಿರಾಶ್ರಿತರನ್ನಾಗಿ ಮಾಡಿದೆ. ಸಾವಿರಾರು ಮನೆಗಳು ಹಾನಿಗೊಂಡಿವೆ. ಹಲವು ರಸ್ತೆಗಳು ಬಂದ್ ಆಗಿದ್ದು ಹೊರ ಜಿಲ್ಲೆಗಳಿಂದ ಬರುವ ಕೆಲವು ಬಸ್ ಗಳು ಕೂಡಾ ನಿಂತಿವೆ. ಪ್ರಕೃತಿ ವಿಕೋಪಕ್ಕೆ ತತ್ತರಿಸಿರುವ ಕೊಡಗು ಜಿಲ್ಲೆಗೆ ಪ್ರವಾಸಿಗರನ್ನು ನಿರ್ಬಂಧಿಸಿರುವುದರಿಂದ ಪ್ರವಾಸಿಗರಿಲ್ಲದೆ ಇಡೀ ಜಿಲ್ಲೆ ಬಿಕೋ ಎನ್ನುತ್ತಿದೆ. ಪ್ರವಾಸಿ ತಾಣಗಳಲ್ಲಿ ಮೌನ ಆವರಿಸಿದೆ. ಪ್ರವಾಸಿ ತಾಣಗಳಲ್ಲಿ ಇರುವ ಅಂಗಡಿಮುಂಗಟ್ಟುಗಳು ಬಾಗಿಲು ಮುಚ್ಚಿವೆ. 

ಬಹುತೇಕ ಮನೆಯವರು ತಮ್ಮ ಮನೆಯ ಒಂದು ಭಾಗವನ್ನು ಹೋಂಸ್ಟೇಗಳನ್ನಾಗಿಸಿ ಪ್ರವಾಸಿಗರಿಗೆ ಬಾಡಿಗೆಗೆ ನೀಡುತ್ತಾರೆ. ಇದರಿಂದ ಬರುವ ಬಾಡಿಗೆ ಕುಟುಂಬದ ವರಮಾನವೂ ಆಗಿದೆ. ಸುಮಾರು ಒಂದು ತಿಂಗಳಿಂದ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು. ಅದರಲ್ಲೂ ಇತ್ತೀಚೆಗೆ ಸುರಿದ ಭಾರೀ ಮಳೆ ಹಾಗೂ ಭೂಕುಸಿತ ಇಡೀ ಜಿಲ್ಲೆಯನ್ನು ನಲುಗಿಸಿದೆ. ಸುರಕ್ಷತೆಯ ದೃಷ್ಟಿಯಿಂದ ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ ಸೆಪ್ಟಂಬರ್ 1ರವರೆಗೆ ಜಿಲ್ಲೆಗೆ ಪ್ರವಾಸಿಗರು ಬಾರದಂತೆ ನಿರ್ಬಂಧ ಹೇರಿದ್ದಾರೆ. ಜಿಲ್ಲೆಯ ಹಲವು ಭಾಗಗಳಲ್ಲಿ ತತ್ಕಾಲಿಕ ಚೆಕ್‍ ಪೋಸ್ಟ್ ತೆರೆಯಲಾಗಿದ್ದು, ಪ್ರವಾಸಿಗರ ವಾಹನಗಳನ್ನು ಜಿಲ್ಲೆಯೊಳಗೆ ಬಾರದಂತೆ ತಡೆಹಿಡಿಯಲಾಗುತ್ತಿದೆ. ಅದರಲ್ಲೂ ಮಡಿಕೇರಿ ನಗರ ಸಹಿತ ಸುತ್ತಮುತ್ತಲಿನ ಪ್ರದೇಶದೊಳಗೆ ಬರುವ ಪ್ರತೀ ವಾಹನಗಳನ್ನು ತಪಾಸಣೆ ನಡೆಸಿ ಪ್ರವಾಸಕ್ಕೆ ಬಂದಿರುವುದು ಕಂಡು ಬಂದರೆ ವಾಪಸ್ ಕಳುಹಿಸಲಾಗುತ್ತಿದೆ.

ಕೊಡಗು ಜಿಲ್ಲೆಯ ಪ್ರಮುಖ ಬೆಳೆಯಾದ ಕಾಫಿ ಹಾಗೂ ಸಾಂಬಾರು ಪದಾರ್ಥಗಳೇ ಇಲ್ಲಿನ ಪ್ರಮುಖ ಉದ್ಯಮವೂ ಆಗಿದೆ. ಈ ಉದ್ಯಮ ಮಾಡುವವರು ಹೆಚ್ಚಾಗಿ ಪ್ರವಾಸಿಗರನ್ನೇ ಅವಲಂಭಿಸಿದ್ದಾರೆ. ಪ್ರವಾಸಿಗರು ಬಂದು ನೆಲೆಸುವ ಹಾಗೂ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿರುವ ಬಹುತೇಕ ಸಾಂಬಾರು ಪದಾರ್ಥಗಳ ಅಂಗಡಿಗಳು ಗ್ರಾಹಕರಿಲ್ಲದೆ ಬಂದ್ ಆಗಿವೆ.

ಒಂದು ದಿನಕ್ಕೆ 800ರಿಂದ ಸಾವಿರದವರೆಗೆ ಬಾಡಿಗೆ ಸಿಗುತ್ತಿತ್ತು. ಆದರೆ ಕೆಲವು ದಿನಗಳಿಂದ ಗ್ರಾಮೀಣ ಪ್ರದೇಶಗಳ ಬಸ್ಸುಗಳು ನಗರಕ್ಕೆ ಬರುತ್ತಿಲ್ಲ. ಪ್ರವಾಸಿಗರು ಬಾರದಂತೆ ನಿರ್ಬಂಧ ಹೇರಲಾಗಿದೆ. ಗ್ರಾಮೀಣ ಜನರು, ಪ್ರವಾಸಿಗರು ಬಾರದಿದ್ದರೆ ನಗರದಲ್ಲಿ ಜನಸಂಚಾರ ಇರುವುದಿಲ್ಲ. ಆದ್ದರಿಂದ ಬಾಡಿಗೆ ಇರುವುದಿಲ್ಲ ಎಂದು ಮಡಿಕೇರಿ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದ ಬಳಿಯ ಆಟೋ ಚಾಲಕ ಮುತ್ತಪ್ಪ ಎಂಬವರು ಮಡಿಕೇರಿಯ ಪ್ರಸಕ್ತ ಪರಿಸ್ಥಿತಿಯನ್ನು ಹೇಳುತ್ತಾರೆ. 

“20 ವರ್ಷಗಳಿಂದ ಜೀಪು ಬಾಡಿಗೆ ಮಾಡಿ ಕುಟುಂಬವನ್ನು ಸಾಕುತ್ತಿದ್ದೇನೆ. ಮೊನ್ನೆ ಉಂಟಾದ ಪ್ರಕೃತಿ ವಿಕೋಪದ ಬಳಿಕ ಜಿಲ್ಲೆಗೆ ಬರುವ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಆದ್ದರಿಂದ ಇದೀಗ ನಾವು ಬೆಳಗ್ಗೆ ಬಂದು ಖಾಲಿ ಕೈಯಲ್ಲಿ ಸಂಜೆ ಮನೆಗೆ ಹೋಗುತ್ತಿದ್ದೇವೆ. ಇಪ್ಪತ್ತು ವರ್ಷಗಳಲ್ಲಿ ಈ ರೀತಿಯ ಪರಿಸ್ಥಿತಿ ನಾನು ಕಂಡಿಲ್ಲ. ಇದೇ ಮೊದಲ ಬಾರಿಗೆ ಈ ರೀತಿ ಆಗಿದೆ” ಎಂದು ಮಡಿಕೇರಿ ನಗರದ ಪಾರ್ಕ್‍ನಲ್ಲಿರುವ ಜೀಪ್ ಚಾಲಕ ದಿನೇಶ್ ಎಂಬವರು ಹೇಳುತ್ತಾರೆ.

ಬಸ್ಸು ಇಲ್ಲ. ಪ್ರವಾಸಿಗರೂ ಇಲ್ಲ. ನಗರದೊಳಗೆ ಜನ ಸಂಚಾರವೇ ಇಲ್ಲ. ಇದರಿಂದ ದುಡಿಯುವವರಿಗೆ ತುಂಬಾ ತೊಂದರೆ ಆಗಿದೆ. ದಿನದ ಸಂಪಾದನೆಗೆ ಕುತ್ತಾಗಿದೆ. ಇವತ್ತು ಶಾಲಾ ಕಾಲೇಜು ಆರಂಭವಾಗಿರುವುದರಿಂದ ಸ್ವಲ್ಪ ಜನಸಂಚಾರ ಹೆಚ್ಚಾಗಿದೆ. ಜೀವನವೇ ಕಷ್ಟಕರವಾಗಿದೆ ಎಂದು ಮಡಿಕೇರಿ ನಗರದ ಆಟೋ ಚಾಲಕ ಫಯಾಝ್ ಎಂಬವರು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.

ಸಂಬಳ ಕೊಡಬೇಕು... ಬಾಡಿಗೆ ಕಟ್ಟಬೇಕು

“ಮಡಿಕೇರಿಯಲ್ಲಿ ಪ್ರವಾಸಿಗರೇ ಇಲ್ಲ. ನಾವು ಪ್ರವಾಸಿಗರನ್ನೇ ಅವಲಂಭಿಸಿದ್ದೇವೆ. ಪ್ರವಾಸಿಗರನ್ನು ಹೊರತುಪಡಿಸಿ ಬೇರೆ ಯಾರದ್ದೇ ವ್ಯಾಪಾರ ನಮಗೆ ಇಲ್ಲ. ನಗರದ ಹೋಂ ಸ್ಟೇ, ಲಾಡ್ಜ್, ಹೋಟೇಲ್‍ಗಳು ಎಲ್ಲವೂ ಬಂದ್ ಆಗಿವೆ. ಹಾಗಾಗಿ ಹೊಟೇಲ್ ತೆರೆದು ಪ್ರಯೋಜನವೂ ಇಲ್ಲ. ಕೆಲಸದವರಿಗೆ ರಜೆ ಕೊಡಲಾಗಿದೆ. ಆದರೂ ಅವರಿಗೆ ಸಂಬಳ ಕೊಡಲೇ ಬೇಕಾಗುತ್ತದೆ. ಜೊತೆಗೆ ಹೊಟೇಲ್ ಬಾಡಿಗೆ ಕಟ್ಟಡದಲ್ಲಿರುವುದರಿಂದ ಇನ್ನಷ್ಟು ಕಷ್ಟಕರವಾಗಿದೆ” ಎಂದು ಮಡಿಕೇರಿ ಹೋಟೇಲ್ ಫೈಝಲ್ ಎಂಬವರು ಹೇಳುತ್ತಾರೆ.

ಮನೆ, ಜಮೀನು ಕಳೆದುಕೊಂಡವರಂತೆ ನಾವೂ ನಿರಾಶ್ರಿತರು!

“ಪ್ರವಾಸಿಗರನ್ನೇ ನೆಚ್ಚಿಕೊಂಡಿರುವ ಕೊಡಗು ಜಿಲ್ಲೆಯಲ್ಲಿರುವ ಹೆಚ್ಚಿನ ಸಂಖ್ಯೆಯ ಸಾಂಬಾರು ಪದಾರ್ಥ ವ್ಯಾಪಾರಸ್ಥರು ಈ ತಿಂಗಳು ಪೂರ್ತಿ ವ್ಯಾಪಾರ ಇಲ್ಲದೆ ತಮ್ಮ ಅಂಗಡಿಗಳನ್ನು ಮುಚ್ಚಿ ಮನೆಯಲ್ಲಿ ಕುಳಿತಿದ್ದಾರೆ. ಪ್ರಕೃತಿ ವಿಕೋಪದ ಬಳಿಕ ಜಿಲ್ಲೆಗೆ ಪ್ರವಾಸಿಗರೂ ಬರುತ್ತಿಲ್ಲ. ಹೀಗಾಗಿ ನಮ್ಮ ಕೆಲಸಗಾರರಿಗೆ ಕೆಲಸ ಕೊಡಲೂ ಆಗುತ್ತಿಲ್ಲ. ನಮ್ಮ ಜೀವನವೂ ಸಂಕಷ್ಟದಿಂದ ಕೂಡಿದೆ. ಮನೆ, ಗುಡ್ಡ ಕುಸಿದು ನಿರಾಶ್ರಿತರಾದ ಜನರಂತೆ ವ್ಯಾಪಾರಿಗಳಾದ ನಾವೂ ನಿರಾಶ್ರಿತರಾಗಿದ್ದೇವೆ. ವ್ಯಾಪಾರ ಇಲ್ಲದಿದ್ದರೂ ಅಂಗಡಿಯ ಬಾಡಿಗೆ ಕೊಡಬೇಕಲ್ವಾ. ಹೀಗಾದರೆ ಬಾಡಿಗೆ ಕಟ್ಟುವುದು ಹೇಗೆ. ಆದರೂ ಜಿಲ್ಲೆಯ ಸಮಸ್ಯೆಗಳೆಲ್ಲವೂ ಬಗೆಹರಿದು ಮುಂದಿನ ದಿನಗಳಲ್ಲಿ ಜಿಲ್ಲೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತಾಗಲಿ” ಎಂದು ಮಡಿಕೇರಿಯ ಸಾಂಬಾರು ಪದಾರ್ಥ ವ್ಯಾಪಾರಿ ಮುಸ್ತಫಾ ಹೇಳುತ್ತಾರೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top