---

ಸೌದಿ ಸಂಕಟ ವಿಶೇಷ ವರದಿ

ಸೌದಿಯಲ್ಲಿ ಕಮರಿದ ಕನಸು: ಬದುಕಿಗಾಗಿ ಮುಂದುವರಿದಿದೆ ಪರದಾಟ

►ಅತಂತ್ರದಲ್ಲಿ ಅನಿವಾಸಿ ಭಾರತೀಯರು

► ವಾಪಸಾಗುವವರಿಗೆ ಬೇಕಿದೆ ಸರಕಾರದ ಸಹಾಯದ ಹಸ್ತ

ಕೈತುಂಬಾ ವೇತನದ ಕನಸು ಹೊತ್ತು ಗಲ್ ರಾಷ್ಟ್ರಗಳಿಗೆ ತೆರಳಿ ಹಲವಾರು ವರ್ಷಗಳ ಕಾಲ ದುಡಿದು ಭಾರತ ದಲ್ಲಿರುವ ತಮ್ಮ ಕುಟುಂಬಗಳಿಗೆ ಆಸರೆಯಾಗಿದ್ದ ಗಲ್‌ನ ಅನಿವಾಸಿ ಭಾರತೀಯರ ಕನಸುಗಳು ಕಮರುತ್ತಿವೆ. ಸೌದಿ ರಾಷ್ಟ್ರಗಳಲ್ಲಿ ಒಂದರ ಮೇಲೊಂದರಂತೆ ಅಲ್ಲಿನ ವಲಸಿಗರು ಹಾಗೂ ಅವರ ಅವಲಂಬಿತರ ಮೇಲಿನ ನೀತಿ ನಿಯಮ ಗಳು ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ. ಕಳೆದ ಎರಡು ವರ್ಷಗಳಿಂದೀಚೆಗೆ ಸೌದಿ ರಾಷ್ಟ್ರಗಳಿಂದ ಭಾರತೀ ಯರ ವಾಪಸಾತಿ ತೀವ್ರ ಪ್ರಮಾಣದಲ್ಲಿ ಹೆಚ್ಚುತ್ತಿದೆ. ವಿಶೇಷವೆಂದರೆ, ಈ ರೀತಿ ವಾಪಾಸಾಗುತ್ತಿರುವವರಲ್ಲಿ ಬಹುಪಾಲು ಮಂದಿ ಕರ್ನಾಟಕದ ಕರಾವಳಿಗರು ಎಂಬುದು ಮುಖ್ಯ. ಸೌದಿಯಲ್ಲಿ ತಮ್ಮ ಉದ್ಯೋಗವನ್ನು ಮುಂದುವರಿಸಲೂ ಆಗದೆ, ಇತ್ತ ತವರಿಗೆ ಬಂದು ಸೂಕ್ತ ಉದ್ಯೋಗವೂ ದೊರೆಯದೆ ಪೇಚಾಡುತ್ತಿರುವ ಅನಿವಾಸಿ ಭಾರತೀಯರ ಅದರಲ್ಲೂ ಮುಖ್ಯವಾಗಿ ಬಹು ಸಂಖ್ಯೆಯಲ್ಲಿ ಸೌದಿ ರಾಷ್ಟ್ರಗಳಲ್ಲಿ ತಮ್ಮ ನೆಲೆಯನ್ನು ಕಂಡುಕೊಂಡಿರುವ ಅವಿಭಜಿತ ದ.ಕ. ಜಿಲ್ಲೆಯ ನಿವಾಸಿಗಳ ಬವಣೆಯ ಬಗ್ಗೆ ಸರಕಾರದ ಗಮನ ಸೆಳೆ ಯುವ ನಿಟ್ಟಿನಲ್ಲಿ ಈ ಲೇಖನ.

ಅದು 1970-80ರ ದಶಕ. ಅವಿಭಜಿತ ದ.ಕ. ಜಿಲ್ಲೆಯು ಇನ್ನೂ ಅಭಿವೃದ್ಧಿ ಹೊಂದಿರಲಿಲ್ಲ. ಹಾಗಾಗಿ ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಅಷ್ಟೇನೂ ಆಶಾದಾಯಕ ವಾಗಿರಲಿಲ್ಲ. ಆ ಸಂದರ್ಭದಲ್ಲಿ ಅವಿಭಜಿತ ದ.ಕ. ಜಿಲ್ಲೆಯ ನಿರುದ್ಯೋಗಿ ಯುವಕರನ್ನು ಗಲ್ ರಾಷ್ಟ್ರ ಕೈ ಬೀಸಿ ತನ್ನತ್ತ ಕರೆಸಿಕೊಂಡಿತು. ಗಲ್‌ಗೆ ಹೋದವರದ್ದು ಒಬ್ಬೊಬ್ಬರದ್ದು ಒಂದೊಂದು ಕಥೆ. ಒಂದೊಂದು ಕಥೆಯ ಹಿಂದೆಯೂ ತ್ಯಾಗ, ತಾಳ್ಮೆ ಯಿದೆ. ಕೆಲವರು ಮೈ ಮುರಿದು ದುಡಿಯುತ್ತಲೇ ಗಲ್ ನಲ್ಲೂ ಸ್ವಂತ ವ್ಯಾಪಾರ ಆರಂಭಿಸಿ ಶ್ರೀಮಂತ ಉದ್ಯಮಿ ಗಳಾದರೆ, ಇನ್ನು ಕೆಲವರು ಅದೇ ಕಾರ್ಮಿಕನಾಗಿ ಅಥವಾ ಮಧ್ಯಮ ಸ್ತರದ ಉದ್ಯೋಗಿಯಾಗಿ, ಅಂಗಡಿ- ಹೊಟೇಲುಗಳ ಮಾಲಕರಾಗಿ ಮೆರೆದರು. ಅಷ್ಟೇ ಅಲ್ಲ, ಭವಿಷ್ಯದ ಹಿತದೃಷ್ಟಿಯಿಂದ ವಾಣಿಜ್ಯ ಸಂರ್ಕೀಣ, ವಸತಿ ಗೃಹ ಕಟ್ಟಿಸಿಕೊಂಡರು. ಬಿಲ್ಡರ್‌ಗಳಾದರು. ಯಶಸ್ವಿ ಉದ್ಯೋಗಿಗಳಾದರು. ಈ ಪ್ರಕ್ರಿಯೆ ಗಲ್ ರಾಷ್ಟ್ರಗಳಲ್ಲಿ ಮಾತ್ರವಲ್ಲ, ಊರಲ್ಲೂ ಮುಂದುವರಿಯಿತು.

1995-2000ರ ವೇಳೆಗೆ ಅವಿಭಜಿತ ದ.ಕ. ಜಿಲ್ಲೆಯ ಲ್ಲಾದ ಶೈಕ್ಷಣಿಕ ಕ್ರಾಂತಿ ಗಲ್ ನ ಅನಿವಾಸಿ ಭಾರತೀಯ ಮೇಲೂ ಪರಿಣಾಮ ಬೀರಿತು. ಗಲ್ ರಾಷ್ಟ್ರದಲ್ಲಿ ದುಡಿಯು ತ್ತಿರುವವರು, ಸ್ವಂತ ವ್ಯಾಪಾರ ಮಾಡಿಕೊಂಡವರು ಪರಸ್ಪರ ಸಮಾಲೋಚಿಸಿ ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡರು. ಹಾಗೇ ಊರಿನ ಸಂಘ ಸಂಸ್ಥೆಗೆ ಆರ್ಥಿಕ ಸಹಾಯ ಮಾಡಿ ದರು. ಮಸೀದಿ, ಮದ್ರಸ, ಯತೀಂ ಖಾನಾ, ಮದುವೆ ಸಭಾಂಗಣಗಳ ನಿರ್ಮಾಣವಲ್ಲದೆ ಹತ್ತು-ಹಲವು ಯೋಜನೆಗಳ ಯಶಸ್ಸಿಗೆ ಮುನ್ನುಡಿ ಬರೆದರು. ಇಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಯಲ್ಲಿ ಅನಿವಾಸಿ ಕನ್ನಡಿಗರ ಶ್ರಮ-ಕೊಡುಗೆ ಅಪಾರ. ಹೀಗೆ ಮನೆಯವರ, ಊರವರ ಕಷ್ಟಸುಖಗಳಿಗೆ ಭಾಗಿಯಾದ ಗಲ್-ಕನ್ನಡಿಗರ ಅದರಲ್ಲೂ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಲಕ್ಷಾಂತರ ಅನಿವಾಸಿ ಭಾರತೀ ಯರ ಬದುಕು ಈಗ ಅತಂತ್ರ ಸ್ಥಿತಿಯಲ್ಲಿದೆ.

ಮತ್ತಷ್ಟು ಬಿಗಿಗೊಂಡ ಕಾನೂನು

ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ ಲಕ್ಷಾಂತರ ಮಂದಿ ವಿದೇಶೀಯರ ಪೈಕಿ ಆಗಲೇ ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದರು. ಇದೀಗ ಮತ್ತೆ ಅಲ್ಲಿನ ಸರಕಾರವು ಸೌದಿ ಪ್ರಜೆಗಳಿಗೆ ಉದ್ಯೋಗ ಕಲ್ಪಿಸಿ ಕೊಡುವಲ್ಲಿ ಕೈಗೊಂಡ ಮಹತ್ವದ ನಿರ್ಧಾರವನ್ನು ಬಿಗುಗೊಳಿಸಿವೆ. ಇದರಿಂದ ಭಾರತದ ಅದರಲ್ಲೂ ಕರಾವಳಿ ಕರ್ನಾಟಕದ ಹಲವಾರು ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಮೊದಲೇ ನಿರುದ್ಯೋಗ ಸಮಸ್ಯೆಯಿಂದ ತತ್ತರಿಸುವ ಯುವ ಜನತೆಗೆ ಇದು ಸಿಡಿಲೆರಗಿದಂತಾಗಿದೆ.

ವರ್ಷಗಳ ಹಿಂದೆ ನಿತಾಕತ್ ಕಾನೂನು ಜಾರಿಗೊಂಡಾಗ ದಕ್ಷಿಣ ಕನ್ನಡ, ಉಡುಪಿ ಸಹಿತ ಕರಾವಳಿ ತೀರದ ಹಲವು ಮಂದಿ ಕಾರ್ಮಿಕರು ಸೌದಿ ಅರೇಬಿಯಾ ಉದ್ಯೋಗ ಕಳೆದುಕೊಂಡು ತವರಿಗೆ ಮರಳಿದ್ದರಲ್ಲದೆ, ಡ್ರೈವಿಂಗ್, ಕೃಷಿ, ಹೈನುಗಾರಿಕೆ, ಮೀನು ಮಾರಾಟ, ಮೇಸ್ತ್ರಿ ಕೆಲಸ, ಪೈಂಟರ್, ಅಂಗಡಿ, ಬೇಕರಿ ಸಹಿತ ಸಣ್ಣಪುಟ್ಟ ವ್ಯಾಪಾರ ಮತ್ತಿತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆಯಲ್ಲದೆ, ವಿದೇಶೀಯರಿಗೆ ಪ್ರತ್ಯೇಕ ತೆರಿಗೆ ವಿಧಿಸತೊಡಗಿದ ಕಾರಣ ಕುಟುಂಬ ಸಮೇತ ನೆಲೆಸಿದ್ದ ಮಧ್ಯಮ, ಶ್ರೀಮಂತ ವರ್ಗದವರೂ ಕೂಡಾ ತವರಿಗೆ ಮರಳುತ್ತಿದ್ದಾರೆ.

ಸೌದಿ ಅರೇಬಿಯಾದ ಕಾರ್ಮಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಸಚಿವಾಯಲ ಯವು ಇದೀಗ ಸ್ಥಳೀಯ 12 ವಲಯದ ಉದ್ಯೋಗಗಳನ್ನು ಸೌದಿ ಪ್ರಜೆಗಳಿಗೆ ಕಡ್ಡಾಯಗೊಳಿಸಿದೆ. ಇದು ಸೆಪ್ಟಂಬರ್ 11ರಿಂದ ಜಾರಿಗೊಳ್ಳಲಿದೆ. ಹಾಗಾಗಿಈಗಾಗಲೆ ಉದ್ಯೋಗ ಕಳಕೊಂಡವರು ತವರೂರಿಗೆ ಮರಳಲು ಸಿದ್ಧತೆ ನಡೆಸಿದ್ದಾರೆ. ಇನ್ನು ಕೆಲವರು ಮರಳಿ ಬರುತ್ತಿದ್ದಾರೆ. ಸೆಪ್ಟಂಬರ್ 11ರಿಂದ ವಾಹನಗಳ ಶೋ ರೂಂ, ಆಟೊಮೊಬೈಲ್, ಸಿದ್ಧ ಉಡುಪುಗಳ ಮತ್ತು ಪೀಠೋಪಕರಣ ಮಳಿಗೆಗಳು ಹಾಗೂ ಮನೆ ಬಳಕೆ ವಸ್ತುಗಳ ಮಾರಾಟ ಮಳಿಗೆಗಳಲ್ಲಿ ಸೌದಿಯ ಪ್ರಜೆ ಉದ್ಯೋಗ ಮಾಡಬೇಕಾಗಿದೆ. ಹಾಗಾಗಿ ಅಲ್ಲಿ ಕೆಲಸ ಮಾಡುತ್ತಿದ್ದ ವಿದೇಶಿಯರು ಮುಖ್ಯವಾಗಿ ಕರಾವಳಿಯ ಕನ್ನಗಡಿಗರು ನಿರುದ್ಯೋಗಿಗಳಾಗಲಿದ್ದಾರೆ.

ಸೌದಿಯ ವಲಸಿಗರನ್ನು ಜರ್ಝರಿತಗೊಳಿಸಿದ ನಿತಾಕತ್

ಸೌದಿಯಲ್ಲಿ ಅನಿವಾಸಿ ಭಾರತೀಯರ ಜೀವನ ಹೀಗೆ ಕಷ್ಟ ಸುಖಗಳ ನಡುವೆಯೇ ಸಾಗುತ್ತಿರಬೇಕಾದರೆ, ಸೌದಿ ಅರೇಬಿಯಾದ ರಿಯಾದ್ ಪ್ರಾಂತೀಯ ಸರಕಾರವು ‘ನಿತಾಕತ್’ ಮೂಲಕ ವಿದೇಶಿಯರನ್ನು ನಿರುದ್ಯೋಗಿಗಳನ್ನಾಗಿಸಲು ಮುಂದಾಯಿತು. 2017ರಲ್ಲಿ ಸೌದಿ ಅರೇಬಿಯಾದ ವಿಷನ್ 2030 ಕಾರ್ಯತಂತ್ರದ ಭಾಗವಾಗಿ ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯವು (ಎಂಎಲ್ಎಸ್‌ಡಿ) ಸಂಸ್ಥೆಗಳಿಗೆ ಅಸ್ತಿತ್ವದಲ್ಲಿರುವ ನಿತಾಕತ್ ವ್ಯವಸ್ಥೆಯನ್ನು ತಿದ್ದುಪಡಿ ಮಾಡುವ ಮೂಲಕ ಅಲ್ಲಿನ ವಲಸಿಗರ ಮೇಲೆ ಮರಣ ಶಾಸನಕ್ಕೆ ಮುಂದಾಯಿತು.

ಸೌದಿಯ ಪ್ರಜೆಗಳಿಗೆ ರಾಷ್ಟ್ರೀಯ ಕಡ್ಡಾಯ ಉದ್ಯೋಗ ನೀತಿಯನ್ನು ಜಾರಿಗೊಳಿಸಲಾಯಿತು. ಅದರ ಪ್ರಕಾರ ಎಲ್ಲಾ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಶೇ.70 ಮೀಸಲು ಕಡ್ಡಾಯ ಮತ್ತು ಉಳಿದ ಶೇ.30ನ್ನು ವಿದೇಶಿಗರಿಗೆ ನೀಡುವ ಕ್ರಮಕ್ಕೆ ಮುಂದಾಯಿತು. ಅದಕ್ಕೆ ಪೂರ್ವಭಾವಿಯಾಗಿ 2016ರಲ್ಲಿ ವಿದೇಶಿಗರಿಗೆ ಕೆಲಸದ ವೀಸಾ (ಇಕಾಮಾ) ಅರ್ಜಿಗಳನ್ನು ಶೇ.60ರಷ್ಟು ನಿರಾಕರಿಸಿ ವಿದೇಶಿಗರಿಗೆ ಬಿಸಿ ಮುಟ್ಟಿಸಿತ್ತು. ಇದನ್ನು ಕೇಳಿದ ಅವಿಭಜಿತ ದ.ಕ. ಜಿಲ್ಲೆಯ ಸಾವಿರಾರು ಕುಟುಂಬಸ್ಥರು ಆತಂಕಿತರಾದರು.

‘ನಿತಾಕತ್’ ನಿಯಮ ಬಿಗಿಗೊಳ್ಳುತ್ತಿದ್ದಂತೆಯೇ ಜಿಲ್ಲೆಯ ಹಲವು ಮಂದಿ ಗಲ್ಫ್ ಉದ್ಯೋಗಿಗಳು ಅಲ್ಲಿ ನೆಲೆ ನಿಲ್ಲಲಾಗದೆ ತವರೂರಿಗೆ ಮರಳಿ ಬಂದಿದ್ದರು. ಇದರಿಂದ ಉದ್ಯೋಗಿಗಳು ಮಾತ್ರವಲ್ಲ ಅವರ ಕುಟುಂಬವೂ ಕಂಗಾಲಾಗಿತ್ತು. ಸುಂದರ ಬದುಕಿನ ಕನಸನ್ನು ಕಂಡು ಚಿನ್ನಾಭರಣ ಅಡವಿಟ್ಟೋ, ಸಾಲ ಮಾಡಿಯೋ ವಿಮಾನ ಏರಿ ಹೋಗಿದ್ದ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಯುವಕರು ಕೆಲಸವೂ ಸಿಗದೆ, ಕೆಲಸಕ್ಕಾಗಿ ಹುಡುಕಾಟವೂ ನಡೆಸಲಾಗದೆ ಮರಳಿ ಬಂದಿದ್ದರು. ಇದರಿಂದ ಚಿನ್ನ ಬಿಡಿಸಲಾಗದೆ, ಸಾಲ ತೀರಿಸಲಾಗದೆ ಅನೇಕರು ಪರಿತಪಿಸಿದ್ದರು.

ಸೌದಿ ಅರೇಬಿಯಾ ಸರಕಾರದ ಹೊಸ ಕಾರ್ಮಿಕ ನೀತಿಯ ಪ್ರಕಾರ ಸ್ವತಂತ್ರ (ಫ್ರೀ) ವೀಸಾ ಹೊಂದಿದವರು ಹಿಂದಿನಂತೆ ತಮಗಿಷ್ಟ ಬಂದಲ್ಲಿ ಕೆಲಸ ಮಾಡುವ ಅವಕಾಶವಿಲ್ಲ. ತಮ್ಮ ಆಯೋಜಕನ ಅಧೀನದಲ್ಲಿ ಮಾತ್ರ ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಿದೆ. ಹಾಗೆಯೇ ಪ್ರತೀ ವರ್ಷದ ವೀಸಾ ನವೀಕರಣ ಶುಲ್ಕವನ್ನು ಹಲವು ಪಟ್ಟು ಏರಿಸಿದೆ. ಈ ನಿಯಮಗಳನ್ನು ಉಲ್ಲಂಘಿಸಿದವರನ್ನು ಕಡ್ಡಾಯವಾಗಿ ತವರೂರಿಗೆ ಕಳುಹಿಸಿಕೊಡಲಾಗುತ್ತಿದೆ. ಈ ಹಿಂದೆ ‘ಫ್ರೀ ವೀಸಾ’ದ ಮೇಲೆ ಹೋದವರು ಕನಿಷ್ಠ ಮೂರು ತಿಂಗಳ ಕಾಲ ಕೆಲಸಕ್ಕಾಗಿ ಪ್ರಯತ್ನ ನಡೆಸುವ ಅವಕಾಶವಿತ್ತು. ಆವರೆಗೆ ಗೆಳೆಯರ, ಕುಟುಂಬಸ್ಥರ ರೂಮಿನಲ್ಲಿ ಕಾಲ ಕಳೆಯುತ್ತಿದ್ದರು. ಅವರ ಆಹಾರವನ್ನೇ ಹಂಚಿ ತಿನ್ನುತ್ತಿದ್ದರು. ಆದರೆ ನಿತಾಕತ್‌ನ ಪರಿಣಾಮ ಅನಿವಾಸಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಯುವಕರ ಬದುಕನ್ನೇ ಕಿತ್ತುಕೊಳ್ಳುವ ವಾತಾವರಣ ಸೃಷ್ಟಿಸಿದೆ.

‘ನಿತಾಕತ್’ನ ಕಾರಣದಿಂದ ಸಾವಿರಾರು ಯುವಕರು ಸಾಲು ಸಾಲಾಗಿ ಮರಳಿ ಮನೆ ಸೇರುತ್ತಿರುವುದನ್ನು ಕಂಡು ಅದೆಷ್ಟೋ ಮಂದಿ ಕೇಂದ್ರ ಸರಕಾರ ಮಧ್ಯ ಪ್ರವೇಶ ಮಾಡಬೇಕು ಎಂದು ಆಶಿಸಿದ್ದರು. ಈ ಮಧ್ಯೆ ಪ್ರಮುಖ ಪಕ್ಷಗಳ ಸ್ಥಳೀಯ ಮುಖಂಡರು ಕೂಡಾ ಸಾಕಷ್ಟು ಭರವಸೆ ನೀಡಿದ್ದರು. ಆದರೆ ಎಲ್ಲವೂ ಹುಸಿಯಾಗಿತ್ತು. ಸಂತ್ರಸ್ತ ಕುಟುಂಬವು ಸಹಾಯಧನಕ್ಕೆ ನಿರೀಕ್ಷಿಸಿದ್ದೇ ಬಂತು. ನೆರವು ಸಿಕ್ಕಿತಾ?. ಮತ್ತೆ ಗಲ್ಫ್‌ಗೆ ತೆರಳುವ ಅವಕಾಶ ದೊರೆತೀತೇ?ಎಂದು ಆಸೆಗಣ್ಣಿನಿಂದ ನೋಡಿದ್ದೇ ಬಂತು.

ಆರಂಭದಲ್ಲಿ ‘ನಿತಾಕತ್’ನ್ನು ಎಷ್ಟು ಬಿಗಿಗೊಳಿಸಲಾಗಿತ್ತೆಂದರೆ, ಅಲ್ಲಿನ ಅಧಿಕಾರಿಗಳ ಕಣ್ಣು ತಪ್ಪಿಸಿ ಅಂಗಡಿ-ಮುಂಗಟ್ಟುಗಳಲ್ಲಿ ಕೆಲಸ ಮಾಡಬೇಕಿತ್ತು. ಸೌದಿ ಅರೇಬಿಯಾದ ಪ್ರಮುಖ ನಗರಗಳಾದ ಜಿದ್ದಾ, ಮಕ್ಕ, ಮದೀನಾ, ದಮಾಮ್, ಕೋಬರ್, ಜುಬೈಲ್, ಅಲ್‌ಹಸ ನಗರದಲ್ಲಿ ಅಧಿಕಾರಿಗಳ ತಪಾಸಣೆ ತೀವ್ರವಾಗಿತ್ತು. ದಿನನಿತ್ಯ ತಪಾಸಣೆ ಕಾರ್ಯ ನಡೆಯುತ್ತಿದ್ದ ಕಾರಣ ಅನೇಕ ಯುವಕರು ಆತಂಕದಿಂದ ಕೆಲಸ ಮಾಡುತ್ತಿದ್ದರು. ಸಿಕ್ಕಿಬಿದ್ದರೆ ಜೈಲೇ ಗತಿ ಎಂಬಂತಹ ವಾತಾವರಣವಿತ್ತು.

ಉದ್ಯೋಗಕ್ಕಾಗಿ ಮುಂದುವರಿದ ಪರದಾಟ!

ಸೌದಿ ಅರೇಬಿಯಾದಲ್ಲಿ 2017ರ ಜುಲೈನಿಂದ ವಲಸಿಗರ ಅವಲಂಬಿತರ ಮೇಲೆ ಭಾರೀ ಪ್ರಮಾಣದ ಶುಲ್ಕವನ್ನು ವಿಧಿಸಿ ರುವ ಪರಿಣಾಮವಾಗಿ ಶುಲ್ಕದ ಹೊರೆಯನ್ನು ಹೊರಲಾಗದೆ ಎನ್‌ಆರ್‌ಐಗಳು ತಮ್ಮ ಕುಟುಂಬದ ಸದಸ್ಯರನ್ನು ತವರಿಗೆ ಕಳುಹಿಸಿರುವ ಅಥವಾ ಖುದ್ದು ತಾವೇ ಉದ್ಯೋಗವನ್ನು ತೊರೆದು ವಾಪಸ್ ಆಗುತ್ತಿರುವವರ ಸಂಖ್ಯೆ ಹೆಚ್ಚಾಗಿವೆ. ಏತನ್ಮಧ್ಯೆ ಈ ರೀತಿ ಉದ್ಯೋಗವನ್ನೇ ತೊರೆದು ಆಗಮಿಸಿರುವ ಯುವಕರು ತಮ್ಮ ತಾಯ್ನೋಡಿನಲ್ಲಿ ಅರ್ಹ ಉದ್ಯೋಗಕ್ಕಾಗಿ ಪೇಚಾಡುವ ದುಸ್ಥಿತಿಯು ನಿರ್ಮಾಣವಾಗಿದೆ. ಸೌದಿಯಲ್ಲಿ ಇಕಾಮಾ (ನಿವಾಸ ಪರವಾನಿಗೆ)ಕ್ಕೆ ಸಂಬಂಧಿ ಸಿದ ಅವಲಂಬಿತರ ಶುಲ್ಕ ಹೆಚ್ಚು ಪಾವತಿಸಬೇಕಾದ ಕಾರಣ ಕೆಲವರು ಹೆಂಡತಿ ಮತ್ತು ಮಕ್ಕಳನ್ನು ತವರಿಗೆ ಕಳುಹಿಸಿದ್ದರೆ ಇನ್ನು ಕೆಲವರು ಕುಟುಂಬ ಸಮೇತವಾಗಿ ಮರಳಿ ಬಂದಿದ್ದಾರೆ.ಜಾಗತಿಕವಾಗಿ ತೈಲ ಬೆಲೆಯಲ್ಲಿ ಕುಸಿತದಿಂದಾಗಿ ಪಾತಾಳಕ್ಕಿಳಿ ಯುವ ದೇಶದ ಆದಾಯವನ್ನು ಮೇಲೆತ್ತುವ ಸಲುವಾಗಿ ಸೌದಿ ಅರೇಬಿಯಾ ಸರಕಾರವು ಅಲ್ಲಿ ಉದ್ಯೋಗದಲ್ಲಿರುವ ವ್ಯಕ್ತಿಗಳ ಅವಲಂಬಿತರ (ಪತ್ನಿ- ಮಕ್ಕಳು ಅಥವಾ ಇತರರು) ಮೇಲೆ ಶುಲ್ಕವನ್ನು ಆರಂಭಿಸಿತ್ತು.

ಒಂದು ಮೂಲದ ಪ್ರಕಾರ ಸೌದಿ ಅರೇಬಿಯಾವು 2017 ರಿಂದ (ಪ್ರತಿ ತಿಂಗಳಿಗೆ ಒಬ್ಬರಿಗೆ ತಲಾ 100 ಸೌದಿ ರಿಯಲ್(ಅಂದಾಜು 1,800 ರೂ.)ನಂತೆ ಈ ಶುಲ್ಕವನ್ನು ವಿಧಿಸಿದೆ. ಸದ್ಯ 2020ರವರೆಗೆ ಈ ಶುಲ್ಕ ಮುಂದುವರಿಯಲಿದ್ದು, ವರ್ಷದಿಂದ ವರ್ಷಕ್ಕೆ ಈ ಶುಲ್ಕ ದುಪ್ಪಟ್ಟುಗೊಳ್ಳಲಿದೆ ಎಂದು ಹೇಳಲಾಗಿದೆ. 2018ರಲ್ಲಿ ಒಬ್ಬರಿಗೆ ತಲಾ 200 ಸೌದಿ ರಿಯಲ್‌ನಂತೆ ಈ ಶುಲ್ಕವನ್ನು ಸೌದಿ ವಲಸಿಗರು ಪಾವತಿಸಬೇಕಾಗುತ್ತದೆ. 2019ಕ್ಕೆ 300 ಹಾಗೂ 2020ಕ್ಕೆ ತಿಂಗಳಿಗೆ ತಲಾ 400 ರಿಯಲ್‌ಗಳಂತೆ ಈ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿದು ಬಂದಿದೆ. ಅಂದಹಾಗೆ, ಈ ಶುಲ್ಕಕ್ಕೆ (ತೆರಿಗೆ) ಪ್ರತಿಯಾಗಿ ಸೌದಿ ಸರಕಾರವು ಯಾವುದೇ ಸೌಕರ್ಯಗಳನ್ನು ಒದಗಿಸುತ್ತಿಲ್ಲ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಉಡುಪಿ, ದಕ್ಷಿಣ ಕನ್ನಡ ಸಹಿತ ಕರಾವಳಿ ಕರ್ನಾಟಕದ ಬಹುತೇಕ ಪ್ರದೇಶದ ಸಾವಿರಾರು ಕುಟುಂಬಗಳು ಗಲ್ಫ್ ರಾಷ್ಟ್ರಗಳಲ್ಲಿ ಎನ್‌ಆರ್‌ಐಗಳಾಗಿ ಗುರುತಿ ಸಿಕೊಂಡಿದ್ದರು. ಉದ್ಯೋಗವನ್ನು ಅರಸಿ ಹೋದ ಕರಾವಳಿ ಕರ್ನಾಟಕದ ಯುವಕರು ಅಲ್ಲೇ ತಮ್ಮ ಕುಟುಂಬ ದೊಂದಿಗೆ ನೆಲೆ ನಿಂತಿದ್ದರು. ಆದರೆ ವಲಸಿಗರ ಅವಲಂಬಿತರ ಮೇಲಿನ ಶುಲ್ಕವು ಉದ್ಯೋಗಕ್ಕಾಗಿ ಕುಟುಂಬದೊಂದಿಗೆ ನೆಲೆಸಿದವರನ್ನು ಕಂಗೆಡಿಸಿದೆ. ಈ ಮಧ್ಯೆ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿ ರುವ ವಲಸಿಗರ ಅವಲಂಬಿತರ ಮೇಲಿನ ಶುಲ್ಕದ ಬೆನ್ನಲ್ಲೇ ಈ ವರ್ಷದಿಂದ ಅಲ್ಲಿನ ಸರಕಾರ ಸರಕಾರಿ ಸೌಮ್ಯದ ಉದ್ಯೋಗದಲ್ಲಿರುವ ವಲಸಿಗರನ್ನೂ ಕೂಡಾ ಟಾರ್ಗೆಟ್ ಮಾಡಿದೆ. ಅಂದರೆ ಅಲ್ಲಿನ ಉದ್ಯೋಗಿಗಳಿಗೆ ಒತ್ತು ನೀಡುವ ಸಲುವಾಗಿ ಉದ್ಯೋಗದಲ್ಲೂ ಕೂಡಾ ಕಡಿತ ಆರಂಭಿಸಿವೆ. ಹಾಗಾಗಿ ಮೊದಲು ಸರಕಾರಿ ಸೌಮ್ಯದ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುವ ಕೆಲಸವನ್ನು ಆರಂಭಿಸಿದೆ.

ನವೆಂಬರ್ 9ರಿಂದ ದ್ವಿತೀಯ ಹಂತದ ಸೌದೀಕರಣ!

ದ್ವಿತೀಯ ಹಂತದ ಸೌದೀಕರಣವು ನವೆಂಬರ್ 9ರಿಂದ ಆರಂಭಗೊಳ್ಳಲಿದೆ. ಆವಾಗ ಇಲೆಕ್ಟ್ರಿಕ್ ಹಾಗೂ ಇಲೆಕ್ಟ್ರಾನಿಕ್ಸ್, ವಾಚ್ ಅಂಗಡಿಗಳು, ಆಪ್ಟಿಕಲ್ಸ್ ಹಾಗೂ ಮೆಡಿಕಲ್ ಶಾಪ್‌ಗಳಲ್ಲಿ ಸೌದಿಯ ಪ್ರಜೆಗಳು ಕೆಲಸ ಮಾಡುವುದು ಕಡ್ಡಾಯವಾಗಿದೆ. 2019ರ ಜನವರಿ 7ರಿಂದ ತೃತೀಯ ಹಂತದಲ್ಲಿ ಕಟ್ಟಡ ಕಾಮಗಾರಿ ವಸ್ತುಗಳ ಮಾರಾಟ ಮಳಿಗೆಗಳು, ವಾಹನದ ಬಿಡಿ ಭಾಗಗಳ ಮಾರಾಟ ಮಳಿಗೆ, ಕಾರ್ಪೆಟ್ ಮಾರಾಟ ಶಾಪ್‌ಗಳು, ಚಾಕಲೇಟ್, ಸಿಹಿತಿಂಡಿ ಮಾರಾಟ ಮಾಡುವ ಅಂಗಡಿ ಇತ್ಯಾದಿಗಳಲ್ಲಿ ಸೌದಿಯ ಪ್ರಜೆಗಳು ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಸೌದಿ ಅರೇಬಿಯಾ ಸರಕಾರವು ಮಹಿಳೆಯರಿಗೆ ಚಾಲನಾ

ಪರವಾನಗಿ ನೀಡತೊಡಗಿದೆ. ಇದು ಕೂಡಾ ಕರಾವಳಿ ಕನ್ನಡಿಗರ ಮೇಲೆ ಹೊಡೆತ ನೀಡುತ್ತಿವೆ. ಇಲ್ಲಿನ ಸಾವಿರಾರು ಮಂದಿ ಅಲ್ಲಿ ಹೌಸ್ ಡ್ರೈವರ್‌ಗಳಾಗಿ ಕೆಲಸ ಮಾಡುತ್ತಿದ್ದರು. ಮಹಿಳೆಯರಿಗೆ ಚಾಲನಾ ಪರವಾನಿಗೆ ಸಿಕ್ಕ ಕಾರಣ ಮಹಿಳೆಯರೇ ತಮ್ಮ ಸ್ವಂತ ಕಾರು ಚಲಾಯಿಸತೊಡಗಿದ್ದು, ಹೌಸ್ ಡ್ರೈವರ್‌ಗಳು ನಿರುದ್ಯೋಗಿಗಳಾಗುತ್ತಿದ್ದಾರೆ. ಎಲ್ಲಾ ಕಡೆಯೂ ಸೌದಿಗಳೇ ಕೆಲಸ ಮಾಡುವ ಸಲುವಾಗಿ ಸೌದಿಯ ಯುವಕ-ಯುವತಿಯರಿಗೆ ತರಬೇತಿ ನೀಡಲಾಗುತ್ತಿದೆ. ಸೆಪ್ಟಂಬರ್ 11ರಿಂದ ಕಟ್ಟುನಿಟ್ಟಿನ ಪರಿಶೀಲನೆ ನಡೆಯಲಿದೆ. ಅಲ್ಲದೆ ಕಾನೂನು ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಿ ಗಡಿಪಾರು ಶಿಕ್ಷೆ ವಿಧಿಸುವ ಎಚ್ಚರಿಕೆಯನ್ನೂ ಸೌದಿಯ ಕಾರ್ಮಿಕ ಇಲಾಖೆ ಎಚ್ಚರಿಕೆ ನೀಡಿದೆ ಎಂದು ತಿಳಿದು ಬಂದಿದೆ.

ಆರಂಭದಲ್ಲಿ ಎಲ್ಲ ಪ್ರಮುಖ ವಾಣಿಜ್ಯ ಮಳಿಗೆಗಳಲ್ಲಿ ಶೇ.100ರಷ್ಟು ಸೌದಿ ಪ್ರಜೆಗಳೇ ಕೆಲಸ ಮಾಡಬೇಕು ಎಂದು ಸೂಚಿಸಿತ್ತು. ಅಲ್ಲದೆ ತರಬೇತಿ ಪಡೆದ ಉದ್ಯೋಗಿಗಳಿಗೆ ತರಬೇತಿ ಹಾಗೂ ಸಚಿವಾಲಯವು ಪ್ರಮಾಣ ಪತ್ರ ನೀಡಲಾಗುವುದು ಎಂದು ತಿಳಿಸಿತ್ತು. ಅಧಿಕಾರಿಗಳು ದಾಳಿ ಮಾಡುವ ಸಂದರ್ಭ ಈ ದಾಖಲೆಗಳನ್ನು ಪ್ರದರ್ಶಿಸಲು ಸೂಚಿಸಿತ್ತು. ಇದೀಗ ಶೇ. 100ರ ಬದಲು ಶೇ.70ರಷ್ಟು ಸೌದಿ ಪ್ರಜೆಗಳು ಕೆಲಸ ಮಾಡಬೇಕು ಎಂಬ ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ.

ಕೌಶಲ್ಯ ತರಬೇತಿ ಕೇಂದ್ರ ಸ್ಥಾಪನೆಯಾಗಲಿ: ಖಾಸಿಮ್ ಅಹ್ಮದ್

ನಾನು ಸುಮಾರು 32 ವರ್ಷಗಳಿಂದ ಗಲ್ಫ್ ರಾಷ್ಟ್ರದಲ್ಲಿ ಬದುಕು ಕಟ್ಟಿಕೊಂಡವ. 1985ರಲ್ಲಿ ನಾನು ಗಲ್ಫ್‌ಗೆ ಹೋದಾಗ ಅಲ್ಲಿನ ಚಿತ್ರಣ ಹೀಗಿನಂತಿರಲಿಲ್ಲ. ಅಂದು ಗಲ್ಫ್ ಅಂದರೆ ಕೈ ತುಂಬಾ ಹಣ ಸಂಪಾದಿಸುವ ನಾಡಾಗಿತ್ತು. ಆದರೆ, ಇಂದು ಅವೆಲ್ಲವೂ ಕನಸಿನಲ್ಲಿ ತೇಲಿ ಹೋದಂತಿದೆ. ಸೌದಿ ಅರೇಬಿಯಾದಲ್ಲಿ ಕೇರಳ, ದಕ. ಉಡುಪಿ ಮತ್ತು ಹೈದರಾಬಾದ್‌ನವರು ಅಧಿಕ ಸಂಖ್ಯೆಯಲ್ಲಿದ್ದರು. ಈಗ ಬಹುತೇಕ ಮಂದಿ ಅಲ್ಲಿಂದ ಮರಳುತ್ತಿದ್ದಾರೆ. ಯಾಕೆಂದರೆ ಅಲ್ಲಿ ಬದುಕು ತುಂಬಾ ತುಟ್ಟಿಯಾಗುತ್ತಿದೆ. ಅಂದರೆ ನೀರಿನ, ವಿದ್ಯುತ್, ರೂಮಿನ ಬಿಲ್ ದುಬಾರಿಯಾಗುತ್ತಿದೆ. ಅನ್ನಾಹಾರವೂ ಕೂಡಾ ಕೈಗೆ ಎಟಕದಂತಿವೆ. ಹಿಂದೆ ದುಬೈ ದುಬಾರಿ ಬದುಕಿನ ನಗರವಾಗಿತ್ತು. ಈಗ ಸೌದಿಯು ದುಬೈಯನ್ನೂ ಮೀರಿಸುತ್ತಿವೆ. ವ್ಯಾಪಾರವಿದ್ದರೂ ಕೂಡಾ ಖರ್ಚು ಜಾಸ್ತಿಯಾದ ಕಾರಣ ಉಳಿತಾಯವಿಲ್ಲ. ಅದು ಒಂದು ಕುಟುಂಬ, ಸಂಘಸಂಸ್ಥೆಗಳು ಮಾತ್ರವಲ್ಲ, ಸಮಾಜ-ಸಮುದಾಯದ ಮೇಲೂ ಆಗುತ್ತಿವೆ.

ಬಂಡವಾಳಶಾಹಿಗಳು, ಉದ್ಯಮಿಗಳೂ ಕೂಡಾ ಅಲ್ಲಿಂದ ಮರಳುವ ಸ್ಥಿತಿಯಲ್ಲಿದ್ದಾರೆ. ಅಲ್ಲಿನ ಕಾನೂನು ಮತ್ತಷ್ಟು ಬಿಗಿಯಾದರೆ ಉದ್ಯಮಿಗಳ ಬದುಕು ಕೂಡಾ ಬೀದಿ ಪಾಲಾಗಬಹುದು. ತರಕಾರಿ ಅಂಗಡಿಗೆ ಅಲ್ಲೀಗ ನೂರಕ್ಕೆ ನೂರು ಮಂದಿಯನ್ನೂ ಕೂಡಾ ಸೌದಿಯವರನ್ನೇ ನಿಯುಕ್ತಿಗೊಳಿಸಲಾಗುತ್ತಿದೆ. ಅದು ಕರಾವಳಿಯ ಯುವಕರ ಬದುಕಿನ ಮೇಲೆ ಹೊಡೆತ ನೀಡಿದೆ. ಎಲ್ಲರ ಬದುಕು ಕೂಡಾ ಆಯೋಮಯವಾಗಿದೆ. ಅಲ್ಲಿನ ಮಹಿಳೆಯರಿಗೆ ಚಾಲನಾ ಪರವಾನಿಗೆ ಲಭಿಸಿದ ಬಳಿಕ ಹೌಸ್ ಡ್ರೈವರ್‌ಗಳಿಗೆ ಸಂಕಷ್ಟವಾಗಿದೆ. ಎಲ್ಲರಲ್ಲೂ ಅಭದ್ರತೆ ಕಾಡುತ್ತಿವೆ. ನಮ್ಮಲ್ಲಿನ ಯುವಕರಿಗೆ ಕೌಶಲ್ಯದ ಮಾಹಿತಿಯ ಕೊರತೆ ಇದೆ. ಕೇರಳ ಸರಕಾರವು ಸಂಕಷ್ಟದಲ್ಲಿರುವ ಅಲ್ಲಿನ ಉದ್ಯೋಗಿಗಳು, ಕಾರ್ಮಿಕರಿಗೆ ಸಕಾಲಕ್ಕೆ ಸ್ಪಂದಿಸುತ್ತಿವೆ. ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆಯಾಗಿದ್ದ ಡಾ. ಆರತಿಕೃಷ್ಣ ಅವರು ಒಳ್ಳೆಯ ಕೆಲಸ ಕಾರ್ಯಗಳಿಗೆ ಅಡಿಪಾಯ ಹಾಕಿದರೂ ಸರಕಾರ ಬದಲಾದ ಕಾರಣ ಅವರ ಕಲ್ಪನೆಯ ಯೋಜನೆಗಳು ನನೆಗುದಿಗೆ ಬಿದ್ದಿದೆ. ಆರಂಭದಲ್ಲಿ ನಾವು ಕೆಲವು ಮಂದಿ ಸ್ನೇಹಿತರು ಸೇರಿಕೊಂಡು ರಿಯಾದ್ ಆಸುಪಾಸಿನ ಸುಮಾರು 100-200 ಕಿ.ಮೀ ವ್ಯಾಪ್ತಿಯಲ್ಲಿ ನೆಲೆಸಿರುವ ಭಾರತೀಯರಿಗೆ ನೆರವು ನೀಡುತ್ತಾ ಬಂದಿದ್ದೆವು. ಉದ್ಯೋಗ ಕಳೆದುಕೊಂಡು ತವರೂರಿಗೆ ಮರಳುವವರಿಗೆ ನೆರವು ನೀಡಲು ರಾಜ್ಯ ಮತ್ತು ಕೇಂದ್ರ ಸರಕಾರ ಹೊಸ ಯೋಜನೆ ರೂಪಿಸಬೇಕು. ಅದಕ್ಕಾಗಿ ಕೌಶಲ್ಯ ತರಬೇತಿ ಕೇಂದ್ರವನ್ನು ತೆರೆಯಬೇಕಿದೆ.

ಅಲ್ಪಸ್ವಲ್ಪ ಕಲಿತು ಡ್ರೈವರ್, ಮೊಬೈಲ್, ಬಟ್ಟೆಬರೆ ಅಂಗಡಿಯಲ್ಲಿ ಕೆಲಸಕ್ಕೆ ನಿಲ್ಲುವಂತಹ ಅವಕಾಶ ಇನ್ನು ಅಲ್ಲಿಲ್ಲ. ಇನ್ನು ಅಲ್ಲಿ ಏನಿದ್ದರೂ ಹೊಸತನಕ್ಕೆ ಅವಕಾಶ. ಹಾಗಾಗಿ ಉದ್ಯೋಗ ಆಧಾರಿತ ಹೊಸ ಹೊಸ ಕೋರ್ಸ್‌ಗಳನ್ನು ಕಲಿಯಲು ಯುವ ಜನಾಂಗ ಆಸಕ್ತಿ ವಹಿಸಬೇಕು. ಅದಕ್ಕಾಗಿ ಸೂಕ್ತ ಮಾರ್ಗದರ್ಶನ, ಸಲಹೆ, ಸೇವೆ ನೀಡುವಂತಹ ವಾತಾವರಣ ರೂಪಿಸಬೇಕು. ಸೌದಿಯಲ್ಲಿ ಸದ್ಯ ಮೇಲ್ಮಟ್ಟದ ಮತ್ತು ಕೆಳಮಟ್ಟದ ಉದ್ಯೋಗಿಗಳು-ಕಾರ್ಮಿಕರಿಗೆ ತೊಂದರೆಯಿಲ್ಲ. ಭವಿಷ್ಯದಲ್ಲಿ ಏನಾಗುತ್ತದೆಯೋ ಎಂದು ಹೇಳಲಾಗದು. ಸದ್ಯ ಮಧ್ಯಮ ಮಟ್ಟದ ಜನರ ಬದುಕು ಬೀದಿ ಪಾಲಾಗುವ ಸಾಧ್ಯತೆ ಇದೆ. ಅದಕ್ಕಿಂತ ಮುನ್ನ ಸರಕಾರ-ಸಮಾಜ ಎಚ್ಚೆತ್ತುಕೊಳ್ಳಬೇಕಿದೆ.

ಖಾಸಿಮ್ ಅಹ್ಮದ್, ಸ್ಥಾಪಕಾಧ್ಯಕ್ಷರು, ಹಿದಾಯ ಫೌಂಡೇಶನ್ ಮಂಗಳೂರು

ಕೇರಳ ಮಾದರಿಯ ಸಮಿತಿ ರಚನೆಗೆ ವರದಿ ಸಲ್ಲಿಕೆಗೆ ವರ್ಷ ತುಂಬಿತು...

ಮಂಗಳೂರು ದಕ್ಷಿಣದ ಶಾಸಕರಾಗಿದ್ದ ಜೆ.ಆರ್. ಲೋಬೋ ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಅಧ್ಯಕ್ಷರಾಗಿದ್ದಾಗ ರಾಜ್ಯದ ಅನಿವಾಸಿ ಭಾರತೀಯ ಸಮಿತಿಯನ್ನು ಕೇರಳದ ಸಮಿತಿಯ ಮಾದರಿಯಲ್ಲಿ ಬಲವರ್ಧನೆಗೊಳ್ಳಲು ವರದಿಯೊಂದನ್ನು ಸಲ್ಲಿಸಿದ್ದರು. ಆ ವರದಿಯ ಪ್ರಕಾರ ರಾಜ್ಯದ ಅನಿವಾಸಿ ಭಾರತೀಯ ಕನ್ನಡಿಗರ ಕಲ್ಯಾಣಕ್ಕಾಗಿ ಕೇರಳ ಮಾದರಿಯ ಸಮಿತಿ ರಚಿಸಬೇಕಾಗಿದೆ.

ಅನಿವಾಸಿ ಭಾರತೀಯ ಕನ್ನಡಿಗರ ಕಲ್ಯಾಣದ ನಿಟ್ಟಿನಲ್ಲಿ ಕೇರಳ, ಗೋವಾ, ಆಂಧ್ರಪದೇಶದಲ್ಲಿ ಸಮಿತಿಯು ಅಧ್ಯಯನ ಮಾಡಿತ್ತು.ಅಂತಿಮವಾಗಿ ಕೇರಳ ಸರಕಾರವು ಅನಿವಾಸಿ ಭಾರತೀಯರ ಕಲ್ಯಾಣಕ್ಕಾಗಿ ಹಮ್ಮಿಕೊಂಡ ಸಾಕಷ್ಟು ಯೋಜನೆಗಳು ಸಮಿತಿಗೆ ತೃಪ್ತಿಯನ್ನುಂಟು ಮಾಡಿದ ಕಾರಣ ಅದನ್ನೇ ಆಧಾರವಾಗಿಟ್ಟುಕೊಂಡು ಸಮಿತಿಯು ವಿಧಾನಮಂಡಲದಲ್ಲಿ ತನ್ನ ವರದಿಯನ್ನು 2017ರ ಫೆಬ್ರವರಿಯಲ್ಲಿ ಮಂಡಿಸಿತ್ತು. ದ.ಕ., ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಚಿಕ್ಕಮಗಳೂರು, ಕೊಡಗು ಜಿಲ್ಲೆಯ ಅತ್ಯಧಿಕ ಮಂದಿ ಅನಿವಾಸಿ ಭಾರತೀಯ ಕನ್ನಡಿಗರಾಗಿದ್ದು, ಇದರಲ್ಲಿ ಹೆಚ್ಚಿನವರು ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ. ಅದರಲ್ಲೂ ಮುಖ್ಯವಾಗಿ ಗಲ್ಫ್ ರಾಷ್ಟ್ರಗಳಲ್ಲಿ ಕೆಳಹಂತದ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ನಾನಾ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಆದರೆ, ಇವರ ಸಮಸ್ಯೆಗೆ ಸಕಾಲದಲ್ಲಿ ಸ್ಪಂದಿಸುವ ವ್ಯವಸ್ಥೆ ಇಲ್ಲಿಲ್ಲ. ಈ ನಿಟ್ಟಿನಲ್ಲಿ ಕೇರಳ ಮಾದರಿಯ ಸಮಿತಿ ರಚಿಸಬೇಕು ಎಂದು ಜೆ.ಆರ್.ಲೋಬೊ ಅಧ್ಯಕ್ಷತೆಯ ಆ ವರದಿ ತಿಳಿಸಿತ್ತು.

2008ರಲ್ಲಿ ಅನಿವಾಸಿ ಭಾರತೀಯ ಸಮಿತಿಯನ್ನು ರಚಿಸಲಾಗಿತ್ತು. ಆದರೆ ಈ ಸಮಿತಿಯು ಅನಿವಾಸಿ ಭಾರತೀಯ ಕನ್ನಡಿಗರ ಕಲ್ಯಾಣಕ್ಕಾಗಿ ನಿರ್ದಿಷ್ಟ ವ್ಯವಸ್ಥೆಯನ್ನು ಮಾಡಿರಲಿಲ್ಲ. ಕೇರಳದಲ್ಲಿ ಅಧ್ಯಯನ ಪ್ರವಾಸಕೈಗೊಂಡಾಗ ಅನೇಕ ರಚನಾತ್ಮಕ ಕೆಲಸಗಳು ಅಲ್ಲಿನ ಸಮಿತಿಯಿಂದ ಆಗಿರುವುದನ್ನು ಜೆ.ಆರ್.ಲೋಬೊ ನೇತೃತ್ವದ ಸಮಿತಿ ಕಂಡು ಕೊಂಡಿತ್ತು. 

ಕೇರಳದಲ್ಲಿ ‘ನೋರ್ಕಾ’ ಎಂಬ ಇಲಾಖೆಯಿದ್ದು, ಅದರ ಅಧೀನದಲ್ಲಿ ‘ನೋರ್ಕಾ ರೂಟ್ಸ್’ ಮತ್ತು ‘ದಿ ಕೇರಳ ನಾನ್ ರೆಸಿಡೆಂಟಲ್ ಕೇರಳಿಟಿಸ್ ವೆಲ್ಫೇರ್ ಬೋರ್ಡ್’ ಎಂಬ 2 ಸರಕಾರಿ ಸ್ವಾಮ್ಯದ ಸಂಸ್ಥೆಯಿದೆ. ಅವುಗಳ ಮೂಲಕ ಅನೇಕ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅಂದಹಾಗೆ ಅನಿವಾಸಿ ಭಾರತೀಯ ಕನ್ನಡಿಗರ ಬಗ್ಗೆ ಈವರೆಗೂ ಅಧಿಕೃತ ಸಮೀಕ್ಷೆ ಆಗಿಲ್ಲ. ಕನ್ನಡಿಗರ ಕಲ್ಯಾಣಕ್ಕಾಗಿ ‘ನೋರ್ಕಾ ರೂಟ್ಸ್’ ತೆರೆಯಬೇಕು. ಕಾರ್ಯಕ್ರಮದ ಅನುಷ್ಠಾನಕ್ಕಾಗಿ ರಾಜ್ಯದ ಶೇ.51 ಮತ್ತು ಅನಿವಾಸಿ ಭಾರತೀಯ ಕನ್ನಡಿಗರ ಶೇ.49 ಹಣವನ್ನು ಒದಗಿಸಬೇಕು. ವಿವಾಹ ದೃಢೀಕರಣಪತ್ರ, ಶೈಕ್ಷಣಿಕ ಪ್ರಮಾಣಪತ್ರಗಳ ದೃಢೀಕರಣ, ವೀಸಾ ತಪಾಸಣೆ ಇತ್ಯಾದಿ ಪಡೆಯಲು ರಾಜ್ಯದ ಪ್ರಮುಖ ನಗರಗಳಲ್ಲಿ ಕೇಂದ್ರಗಳನ್ನು ತೆರೆಯಬೇಕು. ಶೇರು ಬಂಡವಾಳ ಹೂಡಿಕೆಗೆ ಪ್ರತ್ಯೇಕ ಸಂಸ್ಥೆ ರಚಿಸಬೇಕು. ವೈದ್ಯಕೀಯ ಚಿಕಿತ್ಸೆಗೆ ಆರ್ಥಿಕ ಧನ ಸಹಾಯ, ಆರೋಗ್ಯ ವಿಮಾ ಯೋಜನೆ, ಶಿಕ್ಷಣಕ್ಕೆ ಸಹಾಯ ಮಾಡಬೇಕು, ಗುರುತಿನ ಚೀಟಿ ನೀಡಬೇಕು, ಎಲ್ಲ ಸಮಸ್ಯೆಗಳನ್ನು ಒಂದೆಡೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಅನಿವಾಸಿ ಭಾರತೀಯ ಕನ್ನಡಿಗರ ಭವನ ತೆರೆಯಬೇಕು ಮತ್ತು ಸಮಿತಿ ರಚಿಸಿ ಪ್ರಾಥಮಿಕ ಹಂತದಲ್ಲಿ 50 ಕೋ.ರೂ. ಮಂಜೂರು ಮಾಡಬೇಕು ಎಂದು ವಿಧಾನಸಭೆಯಲ್ಲಿ ಮಂಡಿಸಲಾದ ವರದಿಯಲ್ಲಿ ತಿಳಿಸಲಾಗಿತ್ತು. ಆದರೆ, ಈವರೆಗೆ ಯಾವುದೂ ಕೂಡಾ ಅನುಷ್ಠಾನಗೊಂಡಿಲ್ಲ.

ಬಜೆಟ್‌ಗೆ ಸೀಮಿತಗೊಂಡ ಘೋಷಣೆ: ವರದಿ ಕಸದ ಬುಟ್ಟಿಗೆ

ಉದ್ಯೋಗ ಕಳೆದುಕೊಂಡು ವಿದೇಶದಿಂದ ಮರಳುವವರಿಗೆ ಊರಲ್ಲಿ ಸ್ವ ಉದ್ಯೋಗ ಮಾಡುವವರಿಗೆ ಆರ್ಥಿಕ ನೆರವು ನೀಡುವ ಬಗ್ಗೆ 2017ರ ಮಾರ್ಚ್ 15ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಸಿದ್ದರಾಮಯ್ಯ ಅಂದು ಮಂಡಿಸಿದ್ದ ರಾಜ್ಯ ಬಜೆಟ್‌ನಲ್ಲಿ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೂಲಕ ಶೇ.3ರ ಬಡ್ಡಿದರಲ್ಲಿ ಸಾಲ ಸೌಲಭ್ಯ ನೀಡುವುದಾಗಿ ಪ್ರಕಟಿಸಿದ್ದರು. ಇದು ಹಲವಾರು ವರ್ಷಗಳಿಂದ ಗಲ್ಫ್ ರಾಷ್ಟ್ರಗಳಲ್ಲಿ ದುಡಿದರೂ ಆರ್ಥಿಕ ಚೈತನ್ಯ ಕಾಣದೆ ನೊಂದ-ಬೆಂದ ಜೀವಗಳಿಗೆ ಅದರಲ್ಲೂ ಅವಿಭಜಿತ ದ.ಕ.ಜಿಲ್ಲೆಯ ಯುವಕರಿಗೆ ಆಶಾಕಿರಣವಾಗಿ ಪರಿಣಮಿಸಿತ್ತು. ಕೇರಳ ಮಾದರಿಯ ಈ ಮಹತ್ವದ ಯೋಜನೆಯ ಬಗ್ಗೆ ಅನಿವಾಸಿ ಭಾರತೀಯ ಕನ್ನಡಿಗರು ಭಾರೀ ನಿರೀಕ್ಷೆಯನ್ನಿಟ್ಟುಕೊಂಡಿದ್ದರು.

ಗಲ್ಫ್‌ನಲ್ಲಿ ದುಡಿದರೂ ಬದುಕಿನ ನೆಲೆ ಕಾಣದ, ಊರಿಗೆ ಬಂದು ನೆಲೆಯೂರಲು ಆಶಿಸುವ ನಿರುದ್ಯೋಗಿಗಳಿಗೆ ಸ್ವಉದ್ಯೋಗ ಮಾಡಲು ಈ ಯೋಜನೆ ಪೂರಕವಾಗಿತ್ತು. ಹೆಚ್ಚಿನ ಯುವಕರು ಗಲ್ಫ್ ರಾಷ್ಟ್ರಗಳ ಬಿಸಿಲ ತಾಪಕ್ಕೆ ಒಗ್ಗಿಕೊಳ್ಳಲಾಗದಿದ್ದರೂ ಮನೆಯವರ ಸಂಕಷ್ಟಗಳಿಗೆ ಸ್ಪಂದಿಸುವ ಸಲುವಾಗಿ ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುವುದು ಸಣ್ಣ ಸಂಗತಿಯಲ್ಲ. ಆದರೆ ಹಲವಾರು ಮಂದಿ ಈ ಸಂದರ್ಭ ನಾನಾ ತೊಂದರೆಗೀಡಾಗುತ್ತಿದ್ದಾರೆ. ಅಂತಹವರು ಅಲ್ಲಿ ಕೆಲಸ ಮಾಡಲಾಗದೆ ಊರಿಗೆ ಮರಳಲಾಗದೆ ಪರಿತಪಿಸುತ್ತಿದ್ದಾರೆ. ಅಂತಹವರಿಗೂ ಈ ಘೋಷಣೆ ಆಸರೆಯಂತೆ ಕಂಡಿತ್ತು. ಅಲ್ಲದೆ ಯೋಜನೆಯ ಪ್ರಯೋಜನ ಪಡೆಯಲು ಇಂತಹ ಯುವಕರು ಅರ್ಜಿ ಸಲ್ಲಿಸಿದ ಬಳಿಕ ಅವರಿಗೆ ಸೂಕ್ತ ಕೌನ್ಸಿಲಿಂಗ್ ನೀಡಿ ಯಾವ್ಯಾವ ಉದ್ಯೋಗ ಮಾಡಬಹುದು? ಅದರ ಸಾಧಕ ಬಾಧಕಗಳು ಏನು?ಎಂಬುದನ್ನು ತಿಳಿಸಿ ಕಾರ್ಯಗತಗೊಳಿಸಲು ಸರಕಾರ ನಿರ್ಧರಿಸಿತ್ತು.

ನೋಂದಣಿ ಕೇಂದ್ರ ಸ್ಥಾಪನೆ: ಯು.ಟಿ.ಖಾದರ್ 

ಸೌದಿ ಅರೇಬಿಯಾದಿಂದ ಕೆಲಸ ಕಳೆದು ಕೊಂಡು ತವರಿಗೆ ಮರಳುವವರ ಸಂಖ್ಯೆ ಹೆಚ್ಚಾಗುತ್ತಿರುವುದು ನಿಜ. ಇದರಿಂದ ಸಾವಿರಾರು ಮಂದಿ ನಿರುದ್ಯೋಗಿಗಳಾಗಿರುವುದನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಕೆಲಸ ಕಳೆದುಕೊಂಡವರಿಗೆ ಊರಲ್ಲಿ ಸ್ವ ಉದ್ಯೋಗ ಮಾಡಲು ಕನಿಷ್ಠ ಬಡ್ಡಿಯಲ್ಲಿ ಕನಿಷ್ಠ 5 ಲಕ್ಷ ರೂ. ನೀಡುವ ಸಹಾಯಧನದ ಯೋಜನೆಯನ್ನು ಹಾಕಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಅಲ್ಪಸಂಖ್ಯಾತರ ಕಲ್ಯಾಣ ಸಚಿವರ ಜೊತೆ ಸಮಾಲೋಚನೆ ಮಾಡುತ್ತೇನೆ. ಕೆಲಸ ಕಳೆದು ಕೊಂಡು ಬಂದವರು ಯಾರು ಎಂಬುದರ ಸಮೀಕ್ಷೆ ಮೊದಲು ನಡೆಯಬೇಕು. ಅದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ನೋಂದಣಿ ಕೇಂದ್ರವನ್ನು ಸ್ಥಾಪಿಸಲಾಗುವುದು. ಅದಕ್ಕಾಗಿ ಜಿಲ್ಲಾಧಿಕಾರಿ ಜೊತೆ ಚರ್ಚೆ ನಡೆಸುತ್ತೇನೆ.

ಯು.ಟಿ.ಖಾದರ್,  ದ.ಕ.ಜಿಲ್ಲಾ ಉಸ್ತುವಾರಿ ಸಚಿವರು

ವರದಿ ಜಾರಿಯಾಗಬೇಕಿತ್ತು: ಜೆ.ಆರ್.ಲೋಬೊ

ನಾನು ಅಧ್ಯಕ್ಷರಾಗಿದ್ದ ಸಮಿತಿಯು ಈ ಬಗ್ಗೆ ಸಮಗ್ರ ವರದಿಯೊಂದನ್ನು ಸಲ್ಲಿಸಿತ್ತು. ಸಮಿತಿಯ ವರದಿಯ ಆಧಾರದ ಮೇಲೆ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆಯೂ ನಡೆದಿತ್ತು. ಇನ್ನೇನೋ ಅನುಷ್ಠಾನದ ಹಂತದಲ್ಲಿರುವಾಗ ರಾಜ್ಯದ ರಾಜಕೀಯ ಚಿತ್ರಣ ಬದಲಾಯಿತು. ಮುಂದೇನು ಆಗಿದೆ ಎಂದು ಗೊತ್ತಿಲ್ಲ. ಹಾಲಿ ಸಮ್ಮಿಶ್ರ ಸರಕಾರವು ಆ ವರದಿಯನ್ನು ಅನುಷ್ಠಾನಗೊಳಿಸಿದರೆ ಉದ್ಯೋಗ ಕಳೆದುಕೊಂಡು ಸೌದಿ ಅರೇಬಿಯಾದಿಂದ ಮರಳಿ ಬರುವ ಕನ್ನಡಿಗರಿಗೆ ಅದರಲ್ಲೂ ಕರಾವಳಿ ತೀರದ ಜನರಿಗೆ ಹೆಚ್ಚು ಪ್ರಯೋಜನವಾದೀತು.

ಜೆ.ಆರ್.ಲೋಬೊ, ಮಾಜಿ ಶಾಸಕರು ಹಾಗೂ ಮಾಜಿ ಅಧ್ಯಕ್ಷರು ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ

ಕೆಎನ್‌ಆರ್‌ಐ ಬಲಪಡಿಸಬೇಕು

ಹೌದು... ಸೌದಿಯಲ್ಲಿ ಕರಾವಳಿಯ ಕನ್ನಡಿಗರ ಬದುಕು ಶೋಚನೀಯವಾಗಿದೆ. ಇಲ್ಲಿನ ಸರಕಾರವು ಜಾರಿಗೊಳಿಸಿದ ನೀತಿಯು ಹಲವರ ಬದುಕಿನ ಮೇಲೆ ಕರಿಛಾಯೆ ಮೂಡಿಸಿದೆ. ರಾಷ್ಟ್ರಮಟ್ಟದಲ್ಲಿ ಎನ್‌ಆರ್‌ಐ ಹೇಗಿದೆಯೋ, ರಾಜ್ಯಮಟ್ಟದಲ್ಲಿ ಕೆಎನ್‌ಆರ್‌ಐ ಸಂಸ್ಥೆಯನ್ನು ಬಲಪಡಿಸಬೇಕಿದೆ. ಇಲ್ಲಿನ ಕಾರ್ಮಿಕರು, ಉದ್ಯೋಗಿಗಳನ್ನು ಎರಡರಲ್ಲೂ ನೋಂದಣಿ ಮಾಡಿಸಿಕೊಳ್ಳಬೇಕು. ಕಷ್ಟಕಾಲದಲ್ಲಿ ಅವರಿಗೆ ಎಲ್ಲಾ ರೀತಿಯ ನೆರವು ನೀಡುವಂತಹ ವಾತಾವರಣ ರೂಪಿಸಬೇಕು.ನಾವೀಗ ನಮ್ಮ ಕೆಸಿಎಫ್ ಅಂದರೆ ಕರ್ನಾಟಕ ಕಲ್ಚರಲ್ ಫೌಂಡೇಶನ್‌ನ ಸಾಂತ್ವನ ವಿಭಾಗದಿಂದ ಸಾಕಷ್ಟು ನೆರವು ನೀಡುತ್ತಿದ್ದೇವೆ. ಗಲ್ಫ್ ರಾಷ್ಟ್ರಕ್ಕೆ ದುಡಿಯಲು ಆಗಮಿಸಿ ಸಂಕಷ್ಟದಲ್ಲಿರುವವರ ಕಣ್ಣೀರೊರೆಸುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ.

ಶೇಖ್ ಬಾವಾ ಮಂಗಳೂರು, ಕೋಶಾಧಿಕಾರಿ , ಕರ್ನಾಟಕ ಕಲ್ಚರಲ್ ಫೌಂಡೇಶನ್‌ನ ಅಂತರ್‌ರಾಷ್ಟ್ರೀಯ ಸಮಿತಿ

ಕೇಂದ್ರವು ಮಧ್ಯಪ್ರವೇಶಿಸಲಿ: ಮುನೀರ್ ಕಾಟಿಪಳ್ಳ

ಸೌದಿ ಅರೇಬಿಯಾ ಜಾರಿಗೆ ತಂದಿರುವ ಹೊಸ ಕಾರ್ಮಿಕ ನೀತಿಯಿಂದ ಆ ದೇಶದಲ್ಲಿ ಉದ್ಯೋಗ ಮಾಡಿ ಬದುಕು ಸಾಗಿಸುತ್ತಿರುವ ಕರಾವಳಿ ಜಿಲ್ಲೆಗಳ ಸಾವಿರಾರು ಯುವಕರ ಸಹಿತ ಲಕ್ಷಾಂತರ ಭಾರತೀಯರು ಉದ್ಯೋಗ ಕಳೆದುಕೊಳ್ಳುವುದು ನಿಶ್ಚಿತ. ಉದ್ಯೋಗ ಕಳೆದುಕೊಂಡ ಎಲ್ಲರೂ ತವರೂರು ಸೇರಿದರೆ ಅದರ ದುಷ್ಪರಿಣಾಮ ಕರಾವಳಿ ಜಿಲ್ಲೆಗಳ ಆರ್ಥಿಕತೆಯ ಮೇಲೂ ಬೀಳಲಿದೆ. ನಾವು ಆರಂಭದಲ್ಲೇ ಈ ಬಗ್ಗೆ ಧ್ವನಿ ಎತ್ತಿದ್ದೆವು. ಅದರ ಪರಿಣಾಮದ ಬಗ್ಗೆಯೂ ಎಚ್ಚರಿಸಿದ್ದೆವು. ಹಾಗಾಗಿ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಂಡು ಕೇಂದ್ರ ಸರಕಾರ ಮಧ್ಯ ಪ್ರವೇಶಿಸಬೇಕು. ಜಿಲ್ಲೆಯ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಮುಖಂಡರು ಸರಕಾರದ ಮೇಲೆ ಒತ್ತಡ ಹಾಕಬೇಕು.

ಮುನೀರ್ ಕಾಟಿಪಳ್ಳ, ರಾಜ್ಯಾಧ್ಯಕ್ಷರು, ಡಿವೈಎಫ್‌ಐ

ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು

ನಾನು ಸುಮಾರು 20 ವರ್ಷಗಳ ಕಾಲ ಗಲ್ಫ್ ರಾಷ್ಟ್ರಗಳಲ್ಲಿ ಅದರಲ್ಲೂ ಕತರ್, ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದೆ. ಅನಿವಾಸಿ ಭಾರತೀಯ ಸಮಸ್ಯೆ ಏನು ಎಂಬುದು ಅಲ್ಲಿ ಕೆಲಸ ಮಾಡಿದವರಿಗೆ ಮಾತ್ರ ಗೊತ್ತು. ಆವಾಗಿನ ನೀತಿ- ನಿಯಮಕ್ಕೂ ಈಗಿನ ನೀತಿ ನಿಯಮಕ್ಕೂ ತುಂಬಾ ವ್ಯತ್ಯಾಸವಿದೆ. ಆವಾಗ ಉದ್ಯೋಗ ಕಳೆದುಕೊಳ್ಳಬಹುದು ಎಂಬ ಭೀತಿ, ಆತಂಕವಿರಲಿಲ್ಲ. ಈಗ ಹಾಗಲ್ಲ. ನಿತಾಕತ್‌ನಿಂದ ಸಾವಿರಾರು ಮಂದಿ ಉದ್ಯೋಗ ಕಳೆದುಕೊಂಡು ತವರೂರಿಗೆ ಮರಳಿ ಬರುತ್ತಿದ್ದಾರೆ. ನನ್ನಂತೆ ತುಂಬಾ ವರ್ಷದ ಹಿಂದೆ ಬಂದವರು ಊರಲ್ಲಿ ಬದುಕಿಗೊಂದು ಮಾರ್ಗ ಕಂಡು ಕೊಂಡಿದ್ದರು. ಈಗ ಹಠಾತ್ ಆಗಿ ಮರಳಿ ಬರುವ ಕಾರಣ ಹೆಚ್ಚಿನವರಲ್ಲಿ ಹಣವೇ ಇಲ್ಲ. ಏನು ಮಾಡಬೇಕು ಎಂದೂ ತೋಚುತ್ತಿಲ್ಲ. ಹಾಗಾಗಿ ರಾಜ್ಯ ಸರಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪರ್ಯಾಯ ವ್ಯವಸ್ಥೆ ಮಾಡಬೇಕು.

 ಅಲಿ ಹಸನ್, ಅಧ್ಯಕ್ಷರು ಮಂಗಳೂರು ಸೆಂಟ್ರಲ್ ಕಮಿಟಿ

ಊರಿಗೆ ಮರಳಲು ಸಿದ್ಧರಾಗಿದ್ದೇವೆ...

ನಾನು ಕಳೆದ 11 ವರ್ಷದಿಂದ ದಮ್ಮಾಮ್‌ನಲ್ಲಿದ್ದೇನೆ. ಇಲ್ಲಿನ ಬಹುತೇಕ ಅಂಗಡಿ-ಮುಂಗಟ್ಟುಗಳಲ್ಲಿ ಶೇ.70ರಷ್ಟು ಸೌದಿ ಮತ್ತು ಶೇ.30ರಷ್ಟು ವಿದೇಶಿಗರಿಗೆ ಉದ್ಯೋಗ ನೀತಿಯನ್ನು ಕಡ್ಡಾಯಗೊಳಿಸ ಲಾಗುತ್ತಿದೆ. ಕಂಪೆನಿಗಳು ವಾರ್ಷಿಕ ರಿನ್ಯೂವಲ್ ಸಂದರ್ಭ ಅನಿವಾರ್ಯವಾಗಿ ಶೇ.30ಕ್ಕಿಂತ ಹೆಚ್ಚು ವಿದೇಶಿಗರು ಕೆಲಸದಲ್ಲಿರದಂತೆ ನೋಡಿಕೊಳ್ಳುತ್ತಿವೆ. ಲಕ್ಸುರಿ ಬದುಕು ಮಾಯವಾಗುತ್ತಿವೆ. ಬೃಹತ್ ಕಂಪೆನಿಯ ಹಿರಿಯ ಅಧಿಕಾರಿಗಳು ಮತ್ತು ಪೆಟ್ರೋಲ್ ಪಂಪ್, ಆಡು-ಒಂಟೆ ಮೇಯಿಸುವಂತಹ ಕಷ್ಟಕರವಾದ ಕೆಲಸಗಳನ್ನು ವಿದೇಶಿಯರಿಂದಲೇ ಮಾಡಿಸುತ್ತಿವೆ.ಬಟ್ಟೆಬರೆ ಅಂಗಡಿಗಳಿಗೆ ಸೌದಿಯ ಮಹಿಳೆಯರನ್ನು ನಿಯುಕ್ತಿಗೊಳಿಸಲಾ ಗುತ್ತದೆ. ಸಣ್ಣಪುಟ್ಟ ಅಂಗಡಿಗಳನ್ನು ಮುಚ್ಚಲಾಗುತ್ತದೆ. ದೊಡ್ಡ ದೊಡ್ಡ ಮಾಲ್ ಗಳು ತೆರೆಯಲ್ಪಡುತ್ತಿವೆ. ವಿದೇಶಿಗರು ಸ್ವಂತ ವ್ಯಾಪಾರ ಮಾಡಲಾಗದ ಕಾರಣ ಅಂಗಡಿ ಮುಂಗಟ್ಟುಗಳಿಗೆ ಹೊಸ ಸಾಮಗ್ರಿಗಳನ್ನು ತರಿಸಲಾಗುತ್ತಿಲ್ಲ. ಹಳೆಯ ಸಾಮಗ್ರಿಗಳನ್ನು ಖಾಲಿ ಮಾಡಿಸಲಾ ಗುತ್ತಿದೆ. ಹಾಗಾಗಿ ನಾವೀಗ ಊರಿಗೆ ಮರಳಲು ಸಿದ್ಧರಾಗಿದ್ದೇವೆ. ನಮಗೆ ಊರಲ್ಲೇ ಸ್ವಂತ ವ್ಯಾಪಾರ ಮಾಡಲು ಸರಕಾರ ನೆರವು ನೀಡಿದರೆ ಚೆನ್ನಾಗಿತ್ತು.

ದಾವೂದ್ ಬಜಾಲ್, ಮಂಗಳೂರು

ನಮ್ಮ ಸಂಕಷ್ಟವನ್ನು ಯಾರಲ್ಲಿ ಹೇಳಲಿ?

ನಾನು ಕಳೆದ 5 ವರ್ಷದಿಂದ ರಿಯಾದ್‌ನಲ್ಲಿ ನೆಲೆಸಿದ್ದೇನೆ. ನಮ್ಮ ಬದುಕು ಶೋಚನೀಯವಾಗಿದೆ. ಪ್ರತೀ ಕೆಲಸಕ್ಕೂ ಸೌದಿ ಪ್ರಜೆಯನ್ನು ನೇಮಿಸಲಾಗುತ್ತಿದೆ. ಕಳೆದ ಫೆಬ್ರವರಿಯಿಂದ ವೇತನದಲ್ಲೂ ಕೂಡ ಕಡಿತಗೊಳಿಸಲಾಗುತ್ತಿದೆ. ಇಲ್ಲಿ ಅಂಗಡಿ ವ್ಯವಹಾರ ನೋಡಿಕೊಳ್ಳುತ್ತಿದ್ದವರು ಇದೀಗ ಅದನ್ನೆಲ್ಲಾ ಸೌದಿ ಪ್ರಜೆಗಳಿಗೆ ಬಿಟ್ಟುಕೊಡುವ ಪರಿಸ್ಥಿತಿ ಇದೆ. ನಮ್ಮ ಆಸುಪಾಸಿನಲ್ಲೇ ಇರುವ ಕೇರಳಿಗರು ತಮ್ಮ ರೆಡಿಮೇಡ್ ಅಂಗಡಿಗಳಿಗೆ ಹೊಸ ಬಟ್ಟೆಬರೆ ತಂದು ಹಾಕದೆ ಹಳೆಯ ಸ್ಟಾಕ್‌ಗಳನ್ನು ಖಾಲಿ ಮಾಡುತ್ತಿದ್ದಾರೆ. ಬಹುತೇಕ ಅಂಗಡಿಗಳು ಖಾಲಿ ಖಾಲಿ ಆಗಿವೆ. ಮನೆಗೆ ಹೋಗಲಾಗದ, ಹೆಂಡತಿ-ಮಕ್ಕಳ ಕಣ್ಣೀರು ನೋಡಲಾಗದ ಸ್ಥಿತಿಯಲ್ಲಿ ಹಲವರಿದ್ದಾರೆ. ರೂಮ್ ಬಾಡಿಗೆ, ವಿದ್ಯುತ್ ಬಿಲ್, ಆಹಾರ ಎಲ್ಲವೂ ದುಬಾರಿಯಾಗಿದೆ. ಇಕಾಮದ ಶುಲ್ಕವೂ ಹೆಚ್ಚಾಗಿವೆ. ಒಟ್ಟಿನಲ್ಲಿ ನಾವು ತವರೂರಿಗೆ ಮರಳುವ ಸ್ಥಿತಿಯಲ್ಲಿದ್ದೇವೆ. ನಮ್ಮ ಸಂಕಷ್ಟವನ್ನು ನಾವು ಯಾರಲ್ಲಿ ಹೇಳಲಿ?

-ಅಶ್ರಫ್ ಪಾಣೆಮಂಗಳೂರು, ರಿಯಾದ್

ವಿವಿಧ ತೆರಿಗೆಗಳ ಹೊರೆ

ನಾನು ಸುಮಾರು 27 ವರ್ಷ ರಿಯಾದ್‌ನಲ್ಲಿ ಸ್ವಂತ ವ್ಯಾಪಾರ ಮಾಡಿಕೊಂಡು ಬದುಕುತ್ತಿದ್ದೆ. ನನ್ನ ಹೆಂಡತಿ ಮಕ್ಕಳು ಕೂಡಾ ಅಲ್ಲೇ ನೆಲೆ ನಿಂತಿದ್ದರು. ಆದರೆ, ಅಲ್ಲೀಗ ಬದುಕು ನಾವು ಎಣಿಸಿದಂತೆ ಮಾಡಲು ಸಾಧ್ಯವಿಲ್ಲ. ಎಲ್ಲವೂ ದುಬಾರಿಯಾಗಿದೆ. ಅಂಗಡಿಮುಂಗಟ್ಟುಗಳಲ್ಲಿ ಕೆಲಸ ಮಾಡುವಂತಿಲ್ಲ ಮತ್ತು ಸ್ವಂತ ಉದ್ಯಮವನ್ನೂ ಕೂಡ ಮಾಡುವಂತಿಲ್ಲ. ಅಂತಹ ಹೊಸ ಹೊಸ ನೀತಿಗಳನ್ನು ಸೌದಿ ಸರಕಾರ ಹಂತ ಹಂತವಾಗಿ ಜಾರಿಗೊಳಿಸಿ ನಮ್ಮನ್ನು ಉಪಾಯದಿಂದಲೇ ಸಾಗಹಾಕುತ್ತಿವೆ. ನಾನು ಕುಟುಂಬ ಸಮೇತ ಊರಿಗೆ ಬಂದು 25 ದಿನವಾಯಿತು. ಹೆಂಡತಿ-ಮಕ್ಕಳನ್ನೂ ಕರೆ ತಂದಿದ್ದೇನೆ. ಮಕ್ಕಳನ್ನು ಇಲ್ಲಿನ ಶಾಲೆಗೆ ಸೇರಿಸಿದ್ದೇನೆ. ನನಗೆ ತಿಳಿದಂತೆ ಕರ್ನಾಟಕದ ಲಕ್ಷಾಂತರ ಮಂದಿ ಸೌದಿಯಲ್ಲಿದ್ದರು. ಅದರಲ್ಲೂ ಜುಬೈಲ್‌ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದರು. ಅದು ಕೈಗಾರಿಕಾ ವಲಯವಾದ ಕಾರಣ ಅಲ್ಲಿ ಕಾರ್ಮಿಕರ ಸಂಖ್ಯೆಯಲ್ಲಿ ಹೆಚ್ಚಳವಿರುವುದು ಸಹಜ. ಹಾಗಾಗಿ ಅಲ್ಲಿ ದ.ಕ., ಉಡುಪಿಯ ಅಧಿಕ ಸಂಖ್ಯೆಯ ಕಾರ್ಮಿಕರು ಜುಬೈಲ್‌ನಲ್ಲಿದ್ದಾರೆ.

ನನಗೆ ತಿಳಿದಂತೆ ಇದೀಗ ಕೇವಲ 50 ಸಾವಿರ ಮಂದಿ ಸೌದಿಯಲ್ಲಿರಬಹುದಷ್ಟೆ. ಕಳೆದೊಂದು ವರ್ಷದಿಂದ ಗುಳೇ ಹೊರಡುವವರ ಸಂಖ್ಯೆ ಹೆಚ್ಚಾಗಿವೆ. ಅಲ್ಲೊಂದು ‘ಮಕ್ತಬ ಅಮಲ್’ ಎಂಬ ತೆರಿಗೆ ಪದ್ಧತಿ ಇದೆ. ಅದರ ಪ್ರಕಾರ ಅಂಗಡಿ, ಮಳಿಗೆಗಳಲ್ಲಿ ಕೆಲಸ ಮಾಡುವವರ ತೆರಿಗೆಯನ್ನೂ ನಾವು ಕಟ್ಟಬೇಕು. ಮುಂದಿನ ತಿಂಗಳಿನಿಂದ ಅದರ ದರವೂ ಹೆಚ್ಚಾಗಲಿದೆ. ಅದಲ್ಲದೆ ‘ಕಫೀಲ್’ ಗೆ ‘ಕಫಾಲ’ ನೀಡಬೇಕು. ಅಂದರೆ ಇದೀಗ ಒಬ್ಬನಿಗೆ ಕನಿಷ್ಟ 500 ರಿಯಾಲ್ ಕೊಡಬೇಕು. ಹೀಗೆ ಬೇರೆ ಬೇರೆ ವಿಧದ ತೆರಿಗೆಯ ಹೊರೆ ನಮ್ಮ ಮೇಲೆ ಹಾಕಲಾಗುತ್ತದೆ. ಆಟಿಕೆ ಅಂಗಡಿ, ಸುಗಂಧ ದ್ರವ್ಯದ ಅಂಗಡಿ, ಮಿಠಾಯಿ-ಕ್ಯಾಶ್ಯೂನೆಟ್ ಮತ್ತಿತರ ವಸ್ತು ಮಾರಾಟದ ಅಂಗಡಿ, ವಾಹನಗಳ ಸ್ಟಿಕ್ಕರ್, ಮೆಡಿಕಲ್ ಫಾರ್ಮಸಿ, ಬಟ್ಟೆಬರೆ, ಬ್ಯಾಗ್ ಅಂಗಡಿಗಳೆಲ್ಲವೂ ಸೌದಿಗಳು ಖಾಯಂ ಆಗುತ್ತಿದ್ದಾರೆ. ಸಣ್ಣ ಪುಟ್ಟ ಅಂಗಡಿಯೂ ಮುಚ್ಚಲ್ಪಟ್ಟಿವೆ. ‘ಬಕಾಲಾ’ ಅಂದರೆ ಸೂಪರ್ ಮಾರ್ಕೆಟ್‌ಗೆ ತೆರಳಿ ವಸ್ತುಗಳನ್ನು ಖರೀದಿಸುವುದನ್ನೂ ಕಡ್ಡಾಯಗೊಳಿಸಲಾಗುತ್ತಿದೆ. ನಾವಲ್ಲಿ ಮಾಲಕರು ಬಿಡಿ, ಕಾರ್ಮಿಕರೂ ಆಗಿರಬಾರದು ಎಂಬ ನಿಲುವು ಅವರದ್ದಾಗಿದೆ. ಹಾಗಾಗಿ ಎಲ್ಲರನ್ನೂ ಹಂತ ಹಂತವಾಗಿ ಕಳುಹಿಸಿಕೊಡುತ್ತಿದ್ದಾರೆ.

-ಅಬ್ದುಲ್ ಮುತ್ತಲಿಬ್ ನಂದರಬೆಟ್ಟು, ಬಿ.ಸಿ.ರೋಡ್

ಅನಿವಾಸಿ ಭಾರತೀಯರ ಬಗ್ಗೆ ಕಾಳಜಿಯಿಲ್ಲ

ಗಲ್ಫ್ ರಾಷ್ಟ್ರದಲ್ಲಿ ದುಡಿಯುವವರ ಬಗ್ಗೆ ಕೇಂದ್ರ-ರಾಜ್ಯ ಸರಕಾರ ಬಿಡಿ, ನಮ್ಮವರೇ ಆದ ಶಾಸಕರು, ಸಚಿವರು ಈವರೆಗೆ ಏನೂ ಮಾಡಿಲ್ಲ. ಕಳೆದ ಚುನಾವಣೆಯ ಸಂದರ್ಭ ನಮ್ಮ ಕುಟುಂಬಸ್ಥರ ಮತದ ಮೇಲೆ ಕಣ್ಣಿಟ್ಟು ಘಟಾನುಘಟಿ ರಾಜಕಾರಣಿಗಳು ಸೌದಿಗೆ ಬಂದರು. ಹಾಗೇ ಬಂದು ಅನಿವಾಸಿ ಉದ್ಯಮಿಗಳಿಗೆ ಲಾಭ ಮಾಡಿಕೊಟ್ಟು ಹೋಗುತ್ತಾರೆಯೇ ವಿನಃ ನಮ್ಮಂತಹ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಸೌದಿಯಲ್ಲಿ ನಿತಾಕತ್‌ನ ಸಮಸ್ಯೆ ನಿನ್ನೆ ಮೊನ್ನೆಯದಲ್ಲ. ವರ್ಷದ ಹಿಂದಿನಿಂದಲೇ ಈ ಸಮಸ್ಯೆ ಶುರುವಾಗಿದೆ. ಆವಾಗಲೇ ಸರಕಾರ ಎಚ್ಚೆತ್ತುಕೊಂಡಿದ್ದರೆ, ನಮ್ಮವರು ಇದೀಗ ಬೀದಿಗೆ ಬೀಳುವ ಸ್ಥಿತಿಯಲ್ಲಿರಲಿಲ್ಲ. ಅನಿವಾಸಿ ಭಾರತೀಯ ಸಮಿತಿ ಅಂತ ಒಂದಿದೆ. ಇದಕ್ಕೆ ಕನ್ನಡಿಗರು ಲೆಕ್ಕಕ್ಕೇ ಇಲ್ಲ. ಇನ್ನು ರಾಜ್ಯ ಸರಕಾರ ಕೂಡಾ ಕಳೆದ ಬಜೆಟ್‌ನಲ್ಲಿ ಅಲ್ಪ ಮೊತ್ತದ ಹಣವನ್ನು ಮೀಸಲಿಟ್ಟಿವೆ ಅಂತ ತಿಳಿಸಿದೆ. ಆ ಹಣದಿಂದ ಏನೇನೂ ಮಾಡಲು ಸಾಧ್ಯವಿಲ್ಲ. ಇಲ್ಲಿ ಒಬ್ಬ ನಿಧನರಾದರೆ ಮೃತದೇಹವನ್ನು ತವರೂರಿಗೆ ಕೊಂಡೊಯ್ಯಲು ಸಾಧ್ಯವಿಲ್ಲ. ಸಾಧ್ಯವಿದ್ದವರು ಕಾರ್ಗೋ ಮೂಲಕ ಕೆಜಿ ಲೆಕ್ಕದಲ್ಲಿ ತೂಗಿಸಿಕೊಂಡು ಅದಕ್ಕೆ ಹಣ ಪಾವತಿಸಿ ಮೃತದೇಹವನ್ನು ಊರಿಗೆ ಕೊಂಡೊಯ್ಯುತ್ತಾರೆ.

ಇಂತಹ ದುರವಸ್ಥೆ ನಮ್ಮದು. ಪಾಕಿಸ್ತಾನ, ಬಾಂಗ್ಲಾ, ಇಂಡೋನೇಷ್ಯಾ ಮತ್ತಿತರ ಕೆಲವು ರಾಷ್ಟ್ರಗಳು ಅಲ್ಲಿನ ಪ್ರಜೆಗಳು ಸೌದಿ ಅರೇಬಿಯಾ ಸಹಿತ ವಿದೇಶದಲ್ಲಿ ಕೊನೆಯುಸಿರೆಳೆದರೆ ಗೌರವಯುತವಾಗಿ ಮೃತದೇಹವನ್ನು ಉಚಿತವಾಗಿ ಸಾಗಿಸಿ ಕುಟುಂಬಸ್ಥರ ಕೈಗೆ ಒಪ್ಪಿಸುತ್ತದೆ. ಆದರೆ ಭಾರತ ಇನ್ನೂ ಆ ವ್ಯವಸ್ಥೆ ಕಲ್ಪಿಸಿಲ್ಲ. ನಮ್ಮ ಜನಪ್ರತಿನಿಧಿಗಳು ಕೇರಳದ ಜನಪ್ರತಿನಿಧಿಗಳನ್ನು ನೋಡಿ ಕಲಿಯಬೇಕು. ಆ ವಿಷಯದಲ್ಲಿ ಅವರ ಪಕ್ಷಾತೀತರು. ಕೇರಳಿಗನೊಬ್ಬ ಇಲ್ಲಿ ಸಂಕಷ್ಟದಲ್ಲಿದ್ದಾನೆ ಎಂದು ಗೊತ್ತಾದ ತಕ್ಷಣ ಬಂದು ಯೋಗಕ್ಷೇಮ ವಿಚಾರಿಸಿ ಹೋಗುತ್ತಾರೆ. ಕಷ್ಟಗಳಿಗೆ ಸ್ಪಂದಿಸುತ್ತಾರೆ. ನೀಡಿದ ಭರವಸೆ ಈಡೇರಿಸುತ್ತಾರೆ. ಆದರೆ ನಮ್ಮವರು ಕೇವಲ ಭರವಸೆ ನೀಡಿ ಹುಸಿ ನಗೆ ಬೀರಿ ಮರಳುತ್ತಾರೆ. ನಿತಾಕತ್ ಸಹಿತ ಅಧಿಕ ಶುಲ್ಕ ವಿಧಿಸುವ ನೀತಿಯಿಂದ ಇಲ್ಲಿನ ಉದ್ಯಮಗಳಿಗೂ ಹೊಡೆತ ಬೀಳುತ್ತಿವೆ. ಭಾರತೀಯ ಶ್ರೀಮಂತರು ಮಧ್ಯಮ ವರ್ಗಕ್ಕೆ ತಳ್ಳಲ್ಪಡುತ್ತಿದ್ದಾರೆ. ನಮ್ಮ ಪಾಡು ವೈರಿಗೂ ಬರಬಾರದು. ನಮ್ಮಲ್ಲಿ ಹೆಚ್ಚಿನವರು ಇಲ್ಲಿ ಮರ್ಯಾದೆಗಾಗಿ ಪೇಚಾಡುತ್ತಿದ್ದಾರೆ.

-ಫರ್ಝಾನ ಸಿದ್ಧಕಟ್ಟೆ, ಬಂಟ್ವಾಳ

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top