ಕನ್ನಡ ಕಲಿಕೆಗೊಂದು ಹೊಸ ಜಾಲತಾಣ www.kannadakalike.org | Vartha Bharati- ವಾರ್ತಾ ಭಾರತಿ

ಕನ್ನಡ ಕಲಿಕೆಗೊಂದು ಹೊಸ ಜಾಲತಾಣ www.kannadakalike.org

ಇದೊಂದು ಹೊಸಬಗೆಯ ಪ್ರಯತ್ನ. ಉರ್ದು ಮತ್ತು ಹಿಂದಿ ಭಾಷೆಗಳನ್ನು ಹೊರತುಪಡಿಸಿದರೆ ಬೇರಾವ ಭಾರತೀಯ ಭಾಷೆಯಲ್ಲೂ ಇಂಥ ಪ್ರಯೋಗ ನಡೆದಿಲ್ಲ. ಹೊಸ ಹೊಸ ವೀಡಿಯೊಗಳನ್ನು ಸೇರಿಸುವುದರ ಮೂಲಕ ಈ ಜಾಲತಾಣವನ್ನು ನವೀಕರಿಸುತ್ತಲೇ ಹೋಗಬಹುದು. ಅದೇ ರೀತಿ ಉಪಯೋಗಿಸುವವರ ಅನುಭವ ಮತ್ತು ಅಭಿಪ್ರಾಯಗಳನ್ನು ಗಮನಿಸಿಕೊಂಡು ಪರಿಷ್ಕರಿಸಲೂ ಅವಕಾಶವಿದೆ.

2015ರ ನವೆಂಬರ್ ತಿಂಗಳಿಂದ ದಿಲ್ಲಿಯ ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದಲ್ಲಿ ಸಕ್ರಿಯವಾಗಿರುವ ಕನ್ನಡ ಅಧ್ಯಯನ ಪೀಠವು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡವನ್ನು ಬಲಗೊಳಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಬರುತ್ತಿದೆ. ಕನ್ನಡೇತರರಿಗೆ ಕನ್ನಡ ಕಲಿಸುವಿಕೆ, ಉನ್ನತ ಸಂಶೋಧನೆಗಳಿಗೆ ಅವಕಾಶ, ತೌಲನಿಕ ಅಧ್ಯಯನಗಳಿಗೆ ಪ್ರೋತ್ಸಾಹ, ರಾಷ್ಟ್ರೀಯ ಮಹತ್ವದ ವಿಚಾರ ಸಂಕಿರಣಗಳ ಆಯೋಜನೆ ಮೊದಲಾದ ಕೆಲಸಗಳ ಜೊತೆಗೆ ಕನ್ನಡ ಅಧ್ಯಯನ ಪೀಠವು ಅಭಿಜಾತ ಕನ್ನಡದ ಅತ್ಯುತ್ತಮ ಕೃತಿಗಳಾದ ವಡ್ಡಾರಾಧನೆ (ಶಿವಕೋಟ್ಯಾಚಾರ್ಯ, ಕ್ರಿ.ಶ. 890), ಕವಿರಾಜ ಮಾರ್ಗಂ (ಶ್ರೀವಿಜಯ, ಕ್ರಿ.ಶ. 840) ಮತ್ತು ಗದಾಯುದ್ಧಂ ( ರನ್ನ, ಕ್ರಿ.ಶ. 990)ಗಳನ್ನು ಇಂಗ್ಲಿಷ್‌ಗೆ ಅನುವಾದಿಸಿ ಪ್ರಕಟಿಸಿದೆ. ಇದೀಗ ಪೀಠವು ಕನ್ನಡೇತರರು ಕನ್ನಡವನ್ನು ಕಲಿಯಲು ಸಹಾಯ ಮಾಡುವಂಥ ಹೊಸಬಗೆಯ ಜಾಲತಾಣ www.kannadakalike.orgನ್ನು ಸಿದ್ಧ ಪಡಿಸಿದೆ. ಸದ್ಯದಲ್ಲಿಯೇ ಅದನ್ನು ಬೆಂಗಳೂರಿನಲ್ಲಿ ಲೋಕಾರ್ಪಣೆಗೊಳಿಸಲಾಗುವುದು.

ಜಾಲತಾಣದ ಉದ್ದೇಶ:

ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಕನ್ನಡಿಗರು ಕರ್ನಾಟಕವನ್ನು ಬಿಟ್ಟು ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಹಾಗೂ ಜಗತ್ತಿನ ಅನೇಕ ದೇಶಗಳಲ್ಲಿ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಹೀಗೆ ಹೋದವರಲ್ಲಿ ಮೊದಲ ತಲೆಮಾರಿನ ಜನರು ತಮ್ಮ ಜೊತೆ ಕರ್ನಾಟಕದ ಸಾಂಸ್ಕೃತಿಕ ನೆನಪುಗಳನ್ನೂ ಕನ್ನಡ ಭಾಷೆಯನ್ನೂ ಕೊಂಡೊಯ್ಯುತ್ತಾರೆ, ಮನೆಯೊಳಗೆ ಮಾತೃಭಾಷೆಯನ್ನೂ ಉಳಿಸಿಕೊಳ್ಳುತ್ತಾರೆ. ಆದರೆ ಇವರಲ್ಲಿ ಎರಡನೇ ತಲೆಮಾರಿನ ಜನರ ಅಗತ್ಯಗಳೇ ಬೇರೆ. ಅವರು ಸಾಮಾನ್ಯವಾಗಿ ತಾವು ಎಲ್ಲಿ ಬದುಕುತ್ತಾರೋ ಅಲ್ಲಿನ ಭಾಷೆಯನ್ನು ಕಲಿತು ವ್ಯವಹರಿಸುತ್ತಾರೆ. ಬಹಳ ಕ್ಷಿಪ್ರವಾಗಿ ಸ್ಥಳೀಯ ಭಾಷೆಯನ್ನು ಮನೆಯೊಳಕ್ಕೆ ತರುತ್ತಾರೆ. ಹಾಗೆಯೇ ನಿಧಾನವಾಗಿ ತಮ್ಮ ಭಾಷೆಗೆ ಅಪರಿಚಿತವಾಗಿ ಬೆಳೆಯುತ್ತಾರೆ. ತಮಿಳು, ಮಲೆಯಾಳಂ ಮತ್ತು ಬಾಂಗ್ಲಾ ಭಾಷಿಕರಲ್ಲಿ ಈ ಪ್ರಕ್ರಿಯೆ ಇಲ್ಲವೆಂಬಷ್ಟು ಕಡಿಮೆ. ಅವರು ಹೊರನಾಡಿನಲ್ಲಿ ಇದ್ದಾಗ್ಯೂ ಮಾತೃಭಾಷೆಯನ್ನು ಬಿಟ್ಟು ಕೊಡುವುದಿಲ್ಲ. ಆದರೆ ಕನ್ನಡಿಗರು ಬಹಳ ಬೇಗ ಅನ್ಯಭಾಷೆಗಳಿಗೆ ಒಲಿದುಬಿಡುತ್ತಾರೆ.

ಎರಡನೆಯದಾಗಿ, ಜಾಗತೀಕರಣದ ಪರಿಣಾಮವಾಗಿ ಇವತ್ತು ಕರ್ನಾಟಕದ ಉದ್ದಗಲಕ್ಕೂ ಅನ್ಯಭಾಷಿಕರು ಕೆಲಸಮಾಡುತ್ತಿದ್ದಾರೆ. ಇವರಲ್ಲಿ ಅನೇಕರಿಗೆ ತಾವು ಕೆಲಸ ಮಾಡುವ ನೆಲದ ಭಾಷೆಯಲ್ಲಿ ಪ್ರತಿ ದಿನ ವ್ಯವಹರಿಸಬೇಕಾದ ಅಗತ್ಯವಿರುತ್ತದೆ.

ಜೊತೆಗೆ ಅತ್ಯಂತ ಶ್ರೀಮಂತವಾದ ಸಾಹಿತ್ಯಿಕ ಪರಂಪರೆಯಿರುವ ಕನ್ನಡವನ್ನು ಅಧ್ಯಯನ ಮಾಡಲು, ಕರ್ನಾಟಕದ ಭಾಷಿಕ ವೈವಿಧ್ಯ, ವಿಭಿನ್ನ ಚರಿತ್ರೆ, ಕುತೂಹಲಕಾರಿ ವಾಸ್ತು, ಶಿಲ್ಪ, ಬುಡಕಟ್ಟುಗಳು, ಜಾನಪದ, ಪರಿಸರ, ಕರ್ನಾಟಕದ ಆಧುನಿಕತೆ ಮೊದಲಾದ ಅನೇಕ ವಿಷಯಗಳ ಬಗೆಗೆ ಸಂಶೋಧನೆ ಮಾಡಲು ತರುಣ ವಿದ್ವಾಂಸರು ಆಸಕ್ತಿ ತೋರಿಸುತ್ತಿದ್ದಾರೆ. ಇಂಥ ಹೊಸ ತಲೆಮಾರಿನ ಅವಶ್ಯಕತೆಗಳನ್ನು ಗಮನಿಸಿ ಅವರಿಗೆ ಕನ್ನಡವನ್ನು ಕಲಿಸುವ ಕೆಲಸವನ್ನು ನಾವು ಆದ್ಯತೆಯ ಮೇಲಿಂದ ಮಾಡಬೇಕಾಗಿದೆ.

ಇಂಥ ಅವಶ್ಯಕತೆಯನ್ನು ಗಮನಿಸಿ ದಿಲ್ಲಿಯ ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠವು ಕನ್ನಡ ಸಂಸ್ಕೃತಿ ಇಲಾಖೆಯ ಅನುದಾನದ ಸಹಾಯದಿಂದ ‘ಕನ್ನಡ ಕಲಿಕೆ’ ಎಂಬ ಹೆಸರಿನ ಜಾಲತಾಣವೊಂದನ್ನು ಸಿದ್ಧಪಡಿಸಿದೆ.

ಜಾಲತಾಣದ ಸ್ವರೂಪ:

ಭಾಷಾ ಕಲಿಕೆಗೆ ಸಾಮಾನ್ಯವಾಗಿ ಸಿದ್ಧ ಪಡಿಸಲಾಗುತ್ತಿರುವ ಜಾಲತಾಣಗಳು ಪಠ್ಯ ಪುಸ್ತಕಗಳನ್ನೇ ಅಂತರ್ಜಾಲಕ್ಕೆ ಅಳವಡಿಸಿ ರುತ್ತವೆ. ಪ್ರಕಟಿತ ಪುಸ್ತಕಗಳ ಮಾದರಿಯಲ್ಲಿಯೇ ಇರುವ ಇವು ಆಧುನಿಕ ತಂತ್ರಜ್ಞಾನದ ಪೂರ್ಣ ಪ್ರಯೋಜನವನ್ನು ಪಡೆಯುವಲ್ಲಿ ಬಹುತೇಕವಾಗಿ ವಿಫಲವಾಗಿರುತ್ತವೆ. ಹಾಗೆಯೇ ಮೊಬೈಲ್ಗಳಲ್ಲಿ ಇವುಗಳ ಉಪಯೋಗ ಮಾಡುವುದೂ ಸುಲಭ ವಾಗಿರುವುದಿಲ್ಲ. ಇಂಥ ಮಿತಿಗಳನ್ನು ಮೀರಲು ಸಿದ್ಧಪಡಿಸಲಾದ ಪ್ರಸ್ತುತ ಜಾಲತಾಣದಲ್ಲಿ ಭಾಷಾ ಕಲಿಕೆಯ ನಾಲ್ಕು ಪ್ರಮುಖ ಕೌಶಲ್ಯಗಳಾದ ಆಲಿಸುವಿಕೆ, ಮಾತಾಡುವಿಕೆ, ಓದುವಿಕೆ ಮತ್ತು ಬರೆಯುವಿಕೆಯನ್ನು ಪ್ರೋತ್ಸಾಹಿಸಲು 30 ವೀಡಿಯೊಗಳನ್ನು ಪಠ್ಯವಾಗಿ ಬಳಸಿಕೊಳ್ಳಲಾಗಿದೆ. ಹೀಗೆ ಮಾಡುವಾಗ ಭಾಷಾ ಕಲಿಸುವಿಕೆ ಯಲ್ಲಿ ಅಂತರ್‌ರಾಷ್ಟ್ರೀಯವಾಗಿ ಅನುಸರಿಸಲಾಗು ತ್ತಿರುವ ಸಂವಹನ, ಸಂಸ್ಕೃತಿ, ಸಂಪರ್ಕ, ಹೋಲಿಕೆ ಮತ್ತು ಸಮುದಾಯದ ಮಾದರಿಗಳನ್ನು ಗಮನದಲ್ಲಿರಿಸಿ ಕೊಳ್ಳಲಾಗಿದೆ. ಈ ವಿಧಾನದಲ್ಲಿ ಅನ್ಯಭಾಷಾ ಪರಿಸರದಲ್ಲಿ ಕನ್ನಡವು ಸಂವಹನಗೊಳ್ಳಬೇಕಾದ ರೀತಿ, ಭಿನ್ನ ಸಂಸ್ಕೃತಿಗಳ ನಡುವೆ ಕನ್ನಡವು ಅನುಷ್ಠಾನಗೊಳ್ಳಬೇಕಾದ ಬಗೆ, ಬೇರೆ ಭಾಷೆಯವರೊಡನೆ ಕನ್ನಡವು ಸಂಪರ್ಕ ಸಾಧಿಸಲು ತಯಾರಾಗ ಬೇಕಾದ ರೀತಿ, ಭಾಷಾ ಕಲಿಕೆಯಲ್ಲಿ ಸಹಜವಾಗಿ ಏರ್ಪಡುವ ತೌಲನಿಕ ದೃಷ್ಟಿಕೋನ ಹಾಗೂ ಯುವ ಸಮುದಾಯಕ್ಕೆ ಕನ್ನಡವನ್ನು ಹೇಳಿಕೊಡಲಾಗುವುದು ಎಂಬ ಪ್ರಜ್ಞೆ - ಇವಿಷ್ಟನ್ನೂ ಗಮನದಲ್ಲಿರಿಸಿಕೊಳ್ಳಲಾಗಿದೆ.

30 ವೀಡಿಯೊಗಳೇ ಪಠ್ಯಗಳು:

 ಸಾಮಾನ್ಯವಾದ ಜಾಲ ತಾಣಗಳಲ್ಲಿ ಕಾಣಿಸಿಕೊಳ್ಳುವ ಪಾಠಗಳ ಬದಲಾಗಿ ಪ್ರಸ್ತುತ ಜಾಲತಾಣದಲ್ಲಿ 4ರಿಂದ 6 ನಿಮಿಷಗಳ ವ್ಯಾಪ್ತಿಯ, ಸರಾಸರಿ 500 ಪದಗಳಿರುವ ಒಟ್ಟು 30 ವೀಡಿಯೊಗಳನ್ನು ಅಳವಡಿಸಲಾಗಿದೆ. ನೈಜ ಸಂದರ್ಭದಲ್ಲಿ ದಾಖಲಿಸಲಾದ ಈ ವೀಡಿಯೊಗಳು ಕನ್ನಡ ಭಾಷೆಯನ್ನು ಅದರ ಸಹಜ ಸಂದರ್ಭದಲ್ಲಿರಿಸಿ ವಿವರಿಸುತ್ತವೆ ಮತ್ತು ಮೇಲೆ ಹೇಳಿದ ನಾಲ್ಕು ಕೌಶಲಗಳಲ್ಲಿ ಮೊದಲನೆಯ ಮೂರನ್ನು (ಆಲಿಸುವುದು, ಮಾತಾಡುವುದು ಮತ್ತು ಓದುವುದು) ಸುಲಭವಾಗಿ ಕಲಿಯಲು ಅನುವು ಮಾಡಿಕೊಡುತ್ತವೆ. ಜೊತೆಗೆ ಕನ್ನಡ ಪದಗಳ ಉಚ್ಚಾರಣೆಯನ್ನೂ ಅದು ಸ್ಪಷ್ಟ ಪಡಿಸುತ್ತದೆ.

ಆಸಕ್ತರು ಮೊದಲು ವೀಡಿಯೊವನ್ನು ಧ್ಯಾನಿಸಿ ನೋಡ ಬಹುದು. ಆನಂತರ ವೀಡಿಯೊದಲ್ಲಿ ಬಳಕೆಯಾದ ಪಠ್ಯವನ್ನು ಕೇಳಬಹುದು ಮತ್ತು ಓದಬಹುದು. ಅಗತ್ಯಬಿದ್ದರೆ ಸುಲಭವಾಗಿ ಅದನ್ನು ಪುನರಾವರ್ತಿಸಿಕೊಳ್ಳ ಬಹುದು. ಈ ಹಂತದಲ್ಲಿ ಅದು ಅರ್ಥವಾಗದಿದ್ದರೆ ಅದರ ಇಂಗ್ಲಿಷ್ ಅನುವಾದವನ್ನೂ ಗಮನಿಸಬಹುದು. ವೀಡಿಯೊದಲ್ಲಿ ಬಳಕೆಯಾದ ಮುಖ್ಯ ಪದಗಳ ಪಟ್ಟಿಯನ್ನು ಆಂಗ್ಲಾನುವಾದದ ಸಹಿತ ನೀಡಲಾಗಿದೆ, ವ್ಯಾಕರಣ ರೂಪಗಳನ್ನೂ ಕೊಡಲಾಗಿದೆ. ಕೊನೆಯಲ್ಲಿ ಮನೆಗೆಲಸ ನೀಡಲಾಗಿದೆ. ಈ ಮನೆಗೆಲಸವನ್ನು ಜಗತ್ತಿನ ಯಾವ ಮೂಲೆಯಿಂದಾದರೂ ಮಾಡಿ ಕಳಿಸಿದರೆ, ಅದನ್ನು ತಿದ್ದಿ ಹಿಂದಕ್ಕೆ ಕಳಿಸುವ ವ್ಯವಸ್ಥೆಯನ್ನೂ ಜಾಲತಾಣದಲ್ಲಿ ಅಳವಡಿಸಲಾಗಿದೆ. ಮುಂಚಿತವಾಗಿ ಸಮಯ ನಿಗದಿ ಪಡಿಸಿಕೊಂಡರೆ ಅಧ್ಯಾಪಕರನ್ನು ನೇರವಾಗಿ ಸಂಪರ್ಕಿಸಿ ಚರ್ಚಿಸಲು ಅವಕಾಶ ಮಾಡಿಕೊಡಲಾಗಿದೆ.

ಸದ್ಯ ಜಾಲತಾಣದಲ್ಲಿ ಲಭ್ಯವಿರುವ ವೀಡಿಯೋಗಳು ಈ ಕೆಳಗಿನಂತಿವೆ:

1. ಶಿಶು ಗೀತೆಗಳು 2. ಕನ್ನಡ ಪತ್ರಿಕೆಗಳು 3. ನಮ್ಮ ಆಹಾರ 4. ತರಕಾರಿ ಮಾರುಕಟ್ಟೆ 5. ಆಧುನಿಕ ಕೃಷಿ 6. ಕಾಫಿ ಬೆಳೆ 7. ಯಕ್ಷಗಾನದ ಬಣ್ಣಗಳು 8. ಬಹುರೂಪಿಗಳು 9. ಕೊಡಗು ಸೀರೆ 10. ಕಡಲು 11. ಮಂಟೆಸ್ವಾಮಿ ಕಾವ್ಯ 12. ಜನಪದ ಲೋಕ 13. ಮೆಕ್ಕಿಕಟ್ಟೆಯ ಉರುಗಳು 14. ಕುಡುಬಿಯರು 15. ಕುಶಲ ಕರ್ಮಿಗಳ ಕತೆ 16. ಕನ್ನಡ ಸಂಶೋಧನೆ 17. ಪತ್ರಿಕೋದ್ಯಮ 18. ದಾಸರ ಪದಗಳು 19. ಹೋಟೆಲ್ ಮೈಲಾರಿ 20. ಭೂತರಾಧನೆ 21. ರಂಗಾಯಣ 22. ಹೋಟೆಲ್ ಉದ್ಯಮ 23. ಕುಶಲಕರ್ಮಿಗಳ ಶಿಕ್ಷಣ ಸಂಸ್ಥೆ 24. ಹಂಚಿನ ಕಾರ್ಖಾನೆ 25. ಶ್ರೀರಂಗಪಟ್ಟಣ 26. ರಂಗ ಗೀತೆ 27. ಹಂಪಿ 28. ಕಲಾವಿದನ ಆತ್ಮಕತೆ 29. ರವೀಂದ್ರ ಕಲಾಕ್ಷೇತ್ರ ಮತ್ತು 30. ಜಾಗತೀಕರಣ.

ಇವು ಸ್ಥೂಲವಾಗಿ ಕನ್ನಡದ ಪ್ರಾದೇಶಿಕ ವೈವಿಧ್ಯಗಳನ್ನು ಪ್ರತಿನಿಧಿಸುವುದರ ಜೊತೆಗೆ, ದೈನಂದಿನ ವ್ಯವಹಾರಗಳಲ್ಲಿ ಕನ್ನಡವನ್ನು ಜನರು ಬಳಸುತ್ತಿರುವ ರೀತಿಯ ಬಗೆಗೆ ಬೆಳಕು ಚೆಲ್ಲುತ್ತದೆ. ಈ ವೀಡಿಯೊಗಳನ್ನು ನೋಡುವವರು ಭಾಷೆಯ ಜೊತೆಗೆ ಕನ್ನಡ ಸಂಸ್ಕೃತಿಯ ಕಡೆಗೂ ಗಮನ ಹರಿಸುತ್ತಾರೆ.

ಉದಾಹರಣೆಗೆ ಶಿಶು ಗೀತೆಗಳು ಎಂಬ ಹೆಸರಿನ ಮೊದಲಿನ ವೀಡಿಯೊವನ್ನು ನೋಡಿದರೆ, ಅದರಲ್ಲಿ ಇತಿಹಾಸ ಪ್ರಸಿದ್ಧ ಹಂಪಿಯ ಸರಕಾರಿ ಶಾಲೆಯೊಂದರಲ್ಲಿ ದಾಖಲಿಸಿದ ‘‘ಹುಯ್ಯೋ ಹುಯ್ಯೋ ಮಳೆರಾಯ’’, ‘‘ತಕ ತಕ ಥೈ’’ ಮತ್ತು ‘‘ಆನೆ ಬಂತೊಂದಾನೆ’’ ಹಾಡುಗಳು ಸಿಗುತ್ತವೆ. ಮೊದಲನೇ ಹಾಡಿನಲ್ಲಿ ‘‘ಹುಯ್ಯೋ ಹುಯ್ಯೋ’’ ‘‘ಬಾರೋ ಬಾರೋ’’, ‘‘ಸುರಿಯೋ ಸುರಿಯೋ’’ ಎಂಬ ಸಾಲುಗಳು ಮತ್ತೆ ಮತ್ತೆ ಪುನರಾವರ್ತನೆಯಾಗುತ್ತವೆ. ಮಳೆರಾಯ ಹಾಗೂ ನೀರಿಲ್ಲ ಪದಗಳೂ ಆಗಾಗ ಕಿವಿಗೆ ಬೀಳುತ್ತವೆ. ಮಕ್ಕಳು ಸಹಜವಾಗಿ ಅವುಗಳನ್ನು ಅಭಿನಯಿಸಿ ತೋರಿಸುವುದರಿಂದ ಪದಗಳ ಅರ್ಥ ಸ್ಪಷ್ಟತೆ ಇನ್ನೂ ಹೆಚ್ಚಾಗುತ್ತದೆ. ಇದೇ ರೀತಿ ಎರಡನೆಯ ಹಾಡಿನಲ್ಲಿ ತಕ ತಕ ಥೈ, ಕೈ, ಮೇಲೆ-ಕೆಳಗೆ, ಮುಂದೆ- ಹಿಂದೆ, ಚಾಚು ಮೊದಲಾದ ಪದಗಳು ಬಳಕೆಯಾಗಿದ್ದು ಅವು ಅಲ್ಪಪ್ರಾಣ- ಮಹಾಪ್ರಾಣ ಹಾಗೂ ವಿರುದ್ಧಾರ್ಥಕ ಪದಗಳನ್ನು ವಿವರಿಸಲು ಸಹಾಯ ಮಾಡುತ್ತವೆ. ವೂರನೆಯದಾದ ಆನೆಬಂತೊಂದಾನೆ ಹಾಡಿನಲ್ಲಿ ಸಣ್ಣ, ದೊಡ್ಡ, ಕಪ್ಪು, ಹೊಟ್ಟೆ, ಅಗಲ,ಉದ್ದ, ಮೋಟು, ಮೊದಲಾದ ವಿಶೇಷಣಗಳನ್ನು ಪ್ರಸ್ತುತ ಪಡಿಸಲಾಗಿದೆ. ಹೀಗೆ ಎಲ್ಲಾ ವೀಡಿಯೊಗಳೂ ಕಲಿಕೆಗೆ ವಿಶೇಷವಾಗಿ ಸಹಕರಿಸುತ್ತವೆ. ಜೊತೆಗೆ ಕರ್ನಾಟಕದ ಇತಿಹಾಸ, ಜಾನಪದ, ಸಾಹಿತ್ಯ, ವರ್ತಮಾನ, ರಂಗಭೂಮಿ, ಉದ್ಯಮ, ಮಾರುಕಟ್ಟೆ, ಕೃಷಿ, ಆಹಾರ, ಉಡುಗೆ ತೊಡುಗೆ, ಚಿತ್ರಕಲೆ, ಭೌಗೋಳಿಕತೆ ಮೊದಲಾದ ವಿಷಯಗಳ ಕಡೆಗೂ ಗಮನ ಸೆಳೆಯುತ್ತದೆ.

ವ್ಯಾಕರಣ ಸೂತ್ರಗಳು

ಜಾಲತಾಣದ ಇನ್ನೊಂದು ಮಗ್ಗುಲಲ್ಲಿ ಪ್ರಾಯೋಗಿಕವಾಗಿ ಅಗತ್ಯವಾಗಿರುವ ವ್ಯಾಕರಣ ಸೂತ್ರಗಳನ್ನು ನೀಡಲಾಗಿದೆ. ಅವುಗಳೆಂದರೆ 1. ಕನ್ನಡ ವರ್ಣಮಾಲೆ 2. ವರ್ಣಮಾಲೆಯ ಹೆಚ್ಚುವರಿ ಗುಣಗಳು 3. ಒತ್ತಕ್ಷರಗಳು 4. ಆಜ್ಞಾರ್ಥಕ ರೂಪಗಳು 5. ಸರ್ವನಾಮಗಳು 6. ನಾಮಪದಗಳು 7. ಕ್ರಿಯಾಪದ ರಹಿತ ವಾಕ್ಯಗಳು 8. ವರ್ತಮಾನ ಕಾಲ 9. ಭೂತ ಕಾಲ 10. ಭವಿಷ್ಯತ್ ಕಾಲ 11. ವಿಭಕ್ತಿಗಳು 12. ಕೃದಂತಗಳು 13. ಗುಣವಾಚಕಗಳು ಹಾಗೂ ಕ್ರಿಯಾ ವಿಶೇಷಣಗಳು 14. ಅಂಕೆಗಳು 15. ಪ್ರೇರಣಾತ್ಮಕ ಪ್ರತ್ಯಯಗಳು 16. ಕ್ರಿಯಾ ಪದಗಳ ವಿವಿಧ ರೂಪಗಳು 17. ಪ್ರಶ್ನಾರ್ಥಕ ಪದಗಳು ಹಾಗೂ 18. ಲಿಖಿತ ಮತ್ತು ಆಡು ಮಾತಿನ ರೀತಿಗಳು.

ವರ್ಣಮಾಲೆಯನ್ನು ಕಲಿಸಲು ಬಿಳಿ ಹಲಗೆಯ ಮೇಲೆ ಅಕ್ಷರ ಮೂಡುವ ವಿಧಾನವನ್ನು ಅಳವಡಿಸಲಾಗಿದೆ. ಈ ವ್ಯಾಕರಣ ರೂಪಗಳನ್ನು ಮತ್ತು ವೀಡಿಯೊಗಳನ್ನು ಒಂದಕ್ಕೊಂದು ಪೂರಕವಾಗಿ ಬಳಸಿಕೊಳ್ಳುವ ಜಾಣ್ಮೆಯನ್ನು ಬೋಧಕರು ತೋರಿಸಿಕೊಳ್ಳಬೇಕು.

ಕೊನೆಯ ಮಾತು:

ಹೀಗೆ ಇದೊಂದು ಹೊಸಬಗೆಯ ಪ್ರಯತ್ನ. ಉರ್ದು ಮತ್ತು ಹಿಂದಿ ಭಾಷೆಗಳನ್ನು ಹೊರತುಪಡಿಸಿದರೆ ಬೇರಾವ ಭಾರತೀಯ ಭಾಷೆಯಲ್ಲೂ ಇಂಥ ಪ್ರಯೋಗ ನಡೆದಿಲ್ಲ. ಹೊಸ ಹೊಸ ವೀಡಿಯೊಗಳನ್ನು ಸೇರಿಸುವುದರ ಮೂಲಕ ಈ ಜಾಲತಾಣವನ್ನು ನವೀಕರಿಸುತ್ತಲೇ ಹೋಗಬಹುದು. ಅದೇ ರೀತಿ ಉಪಯೋಗಿಸುವವರ ಅನುಭವ ಮತ್ತು ಅಭಿಪ್ರಾಯಗಳನ್ನು ಗಮನಿಸಿಕೊಂಡು ಪರಿಷ್ಕರಿಸಲೂ ಅವಕಾಶವಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top