ಮೋದಿ ಘೋಷಿಸಿದ ಕೃಷಿ ವಿಮೆಯಲ್ಲಿ ರೈತರಿಗೆ 2,800 ಕೋಟಿ ರೂ. ಬಾಕಿಯಿರಿಸಿದ ಕಂಪೆನಿಗಳು

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2016ರ ಜನವರಿಯಲ್ಲಿ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ (ಪಿಎಂಎಫ್ ಬಿವೈ) ಎಂಬ ಹೊಸ ಕೃಷಿ ವಿಮಾ ಯೋಜನೆಯನ್ನು ಘೋಷಿಸಿತು. ಹಿಂದಿನ ಕೃಷಿ ವಿಮೆ ಯೋಜನೆಗಳಿಗೆ ಹೋಲಿಸಿದರೆ ಈ ಯೋಜನೆಯ ಸುಧಾರಣಾ ಅಂಶವೆಂದರೆ, ರೈತರ ಕ್ಲೇಮ್ ಗಳನ್ನು ತಕ್ಷಣವೇ ವಿಲೇವಾರಿ ಮಾಡುವುದು ಎಂದು ಸರ್ಕಾರ ಪ್ರಚುರಪಡಿಸಿತು.

ಆದರೆ "ದ ವೈರ್" ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ ಬಂದ ಉತ್ತರವನ್ನು ವಿಶ್ಲೇಷಿಸಿದ್ದು, ರೈತರಿಗೆ ವಿಮಾ ಕಂಪನಿಗಳು 2829 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿರುವ ಅಂಶ ಬಹಿರಂಗವಾಗಿದೆ. ಪಿಎಂಎಫ್ ಬಿವೈ ಯೋಜನೆಯಡಿ ಎರಡು ಹಂಗಾಮಿನ ಪರಿಹಾರ ಮೊತ್ತ ರೈತರಿಗೆ ಬಾಕಿ ಇದೆ.

ಅಕ್ಟೋಬರ್ 10ರಂದು ಕೃಷಿ ಹಾಗೂ ರೈತರ ಕಲ್ಯಾಣ ಸಚಿವಾಲಯ ಆರ್‍ಟಿಐ ಪ್ರಶ್ನೆಯೊಂದಕ್ಕೆ ನೀಡಿದ ಉತ್ತರ ಹೀಗಿದೆ:

"ಬಹುತೇಕ ಕ್ಲೇಮ್‍ಗಳು 2017-18ರ ಹಿಂಗಾರು ಹಂಗಾಮಿನ ಅವಧಿಗೆ ಸಂಬಂಧಿಸಿದ್ದಾಗಿದ್ದು, ಇದನ್ನು ಕಂಪನಿ ಇನ್ನಷ್ಟೇ ಅಂದಾಜಿಸಿ ಅನುಮೋದಿಸಬೇಕಾಗಿದೆ". ಆದ್ದರಿಂದ 2017-18ನೇ ವರ್ಷದ ಹಂಗಾಮಿಗೆ ಸಂಬಂಧಿಸಿದಂತೆ, ಬಹುತೇಕ ಅಂಕಿ ಅಂಶಗಳು 2017ನೇ ವರ್ಷದ ಮುಂಗಾರು ಹಂಗಾಮಿಗೆ ಸಂಬಂಧಿಸಿದ್ದು, 2017-18ರ ಹಿಂಗಾರು ಹಂಗಾಮಿನಲ್ಲಿ ಪಾವತಿಸಲಾದ ಶೇಕಡ 1ರಷ್ಟು ಕ್ಲೇಮ್‍ಗಳನ್ನು ಮಾತ್ರ ಅಂಕಿ ಅಂಶಗಳು ಪ್ರತಿನಿಧಿಸುತ್ತವೆ.

2016-17ನೇ ಹಂಗಾಮಿನಲ್ಲಿ 546 ಕೋಟಿ ರೂಪಾಯಿ ಮೌಲ್ಯದ ಕ್ಲೇಮ್ ಗಳು ಬಾಕಿ ಇವೆ. ಪಿಎಂಎಫ್ ಬಿವೈ ಮಾರ್ಗಸೂಚಿಯ ಪ್ರಕಾರ, ಬೆಳೆಗಳ ಕಟಾವು ಪೂರೈಸಿದ ಎರಡು ತಿಂಗಳ ಒಳಗಾಗಿ ಕ್ಲೇಮ್ ಗಳನ್ನು ವಿಲೇವಾರಿ ಮಾಡಬೇಕು. 2016-17ರ ಹಂಗಾಮಿನ ಕಟಾವು ಗರಿಷ್ಠ ಎಂದರೆ 2017ರ ಮೇ ತಿಂಗಳ ಅಂತ್ಯದ ಒಳಗಾಗಿ ಮುಕ್ತಾಯವಾಗುತ್ತದೆ.

2017-18ನೇ ಋತುವಿನಲ್ಲಿ 2,282 ಕೋಟಿ ರೂಪಾಯಿ ಮೌಲ್ಯದ ಕ್ಲೇಮ್ ‍ಗಳು ಪಾವತಿಗೆ ಬಾಕಿ ಇವೆ. ಈ ಅಂಕಿ ಅಂಶಗಳು 2017-18ನೇ ಋತುವಿಗೆ ಸಂಬಂಧಿಸಿದ್ದಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಈ ಅವಧಿಯ ಬೆಳೆಗಳ ಕಟಾವು ಗರಿಷ್ಠ ಎಂದರೆ, 2017ರ ಡಿಸೆಂಬರ್ ತಿಂಗಳ ಒಳಗಾಗಿ ಮುಕ್ತಾಯವಾಗಿದೆ.

ಅಂದರೆ ಆರ್‍ ಟಿಐ ಪ್ರಶ್ನೆಗೆ ಸಚಿವಾಲಯ ನೀಡಿದ ಉತ್ತರದ ಪ್ರಕಾರ, ರೈತರಿಗೆ ಬಾಕಿ ಇರುವ 2,282 ಕೋಟಿ ರೂಪಾಯಿಗಳು ಬೆಳೆಗಳ ಕಟಾವು ಅವಧಿ ಮುಕ್ತಾಯವಾಗಿ ಒಂಬತ್ತು ತಿಂಗಳಿನಿಂದ ಬಾಕಿ ಇವೆ. ಆದರೆ ಪಿಎಂಎಫ್ ಬಿವೈ ಮಾರ್ಗಸೂಚಿಯ ಅನ್ವಯ ಕ್ಲೇಮ್ ‍ಗಳನ್ನು, ಬೆಳೆಗಳ ಕಟಾವು ಮುಗಿದು ಎರಡು ತಿಂಗಳ ಒಳಗಾಗಿ ವಿಲೇವಾರಿ ಮಾಡಬೇಕು.

2016-17 ಮತ್ತು 2017-18ರ ಹಂಗಾಮಿಗೆ ಸಂಬಂಧಿಸಿದಂತೆ ರೈತರಿಂದ ಸಲ್ಲಿಕೆಯಾದ ಅಂದಾಜು ಕ್ಲೇಮ್ ಮೊತ್ತ 34,441 ಕೋಟಿ ರೂಪಾಯಿಗಳು. ವಿಮಾ ಕಂಪನಿಗಳು 31,612 ಕೋಟಿ ರೂಪಾಯಿಗಳನ್ನು ಪಾವತಿಸಿದ್ದು, 2,829 ಕೋಟಿ ರೂಪಾಯಿ ಪಾವತಿಸಬೇಕಾಗಿದೆ.

ಕೃಷಿ ವಿಮಾ ವಹಿವಾಟಿನಲ್ಲಿ ತೊಡಗಿಸಿಕೊಂಡಿರುವ ಪ್ರಮುಖ ವಿಮಾ ಕಂಪನಿಗಳಲ್ಲಿ ರಿಲಯನ್ಸ್ ಜನರಲ್ ಇನ್ಶೂರೆನ್ಸ್, ಐಸಿಐಸಿಐ ಲೊಂಬಾರ್ಡ್, ಎಸ್‍ಬಿಐ ಜನರಲ್ ಇನ್ಶೂರೆನ್ಸ್, ಅಗ್ರಿಕಲ್ಚರ್ ಇನ್ಶೂರೆನ್ಸ್ ಕಂಪನಿ (ಎಐಸಿ) ಆಫ್ ಇಂಡಿಯಾ, ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಗಳು ಸೇರಿವೆ.

ರೈತರಿಗೆ ಬಾಕಿ ಉಳಿಸಿಕೊಂಡಿರುವ ವಿಮಾ ಕಂಪನಿಗಳ ಪೈಕಿ ಸಿಂಹಪಾಲು ಸರ್ಕಾರಿ ಸ್ವಾಮ್ಯದ ಎಐಸಿಯದ್ದು. ಈ ಕಂಪನಿ ರೈತರ 1,061 ಕೋಟಿ ರೂಪಾಯಿ ಮೌಲ್ಯದ ಕ್ಲೇಮ್ ಪಾವತಿಸಬೇಕಿದೆ. ಈ ಪೈಕಿ 154 ಕೋಟಿ ರೂಪಾಯಿ 2016-17ನೇ ಹಂಗಾಮಿಗೆ ಸಂಬಂಧಿಸಿದ್ದಾಗಿದ್ದರೆ, ಉಳಿಕೆ 907 ಕೋಟಿ ರೂಪಾಯಿ, 2017-18ನೇ ಸಾಲಿಗೆ ಸಂಬಂಧಿಸಿದ್ದು ಅಂದರೆ 2017-18ರ ಹಿಂಗಾರು ಹಂಗಾಮಿಗೆ ಸಂಬಂಧಿಸಿದ್ದು.

2018ರ ಮಾರ್ಚ್‍ಗೆ ಅಂತ್ಯವಾದ ಹಣಕಾಸು ವರ್ಷದಲ್ಲಿ ಎಐಸಿಯ ಕಾರ್ಯನಿರ್ವಹಣೆ ಲಾಭ 703 ಕೋಟಿ ರೂಪಾಯಿಗಳು. ಎಚ್‍ ಡಿಎಫ್‍ಸಿ ಕೂಡಾ ರೈತರಿಗೆ 300 ಕೋಟಿ ರೂಪಾಯಿ ಹಾಗೂ ಐಸಿಐಸಿಐ 260 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿವೆ. ರೈತರ ಕ್ಲೇಮ್ ಪಾವತಿಯಾಗದಿರುವ ಪ್ರಕರಣಗಳಲ್ಲಿ ಬಹುತೇಕ ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ತಮಿಳುನಾಡು, ಕರ್ನಾಟಕ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ರೈತರದ್ದು.

2016-17ನೇ ಹಂಗಾಮಿನಲ್ಲಿ ಪಾವತಿಗೆ ಬಾಕಿ ಇರುವ 546 ಕೋಟಿ ರೂಪಾಯಿಗಳ ಪೈಕಿ 257 ಕೋಟಿ ರೂಪಾಯಿ ಮೌಲ್ಯದ ಕ್ಲೇಮ್ ‍ಗಳು ಕರ್ನಾಟಕದ ರೈತರದ್ದು. ಆ ವರ್ಷ ಕರ್ನಾಟಕ ಭೀಕರ ಬರಗಾಲ ಅನುಭವಿಸಿದ್ದು, ರಾಜ್ಯದ 176 ತಾಲೂಕುಗಳ ಪೈಕಿ 160 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು.

2017-18ನೇ ಹಂಗಾಮಿನಲ್ಲಿ, 2018ರ ಅಕ್ಟೋಬರ್ 10ರ ವರೆಗೆ ಹಿಮಾಚಲ ಪ್ರದೇಶದ ರೈತರು ಸಲ್ಲಿಸಿದ ಒಟ್ಟು ಕ್ಲೇಮ್ ‍ಗಳ ಪೈಕಿ ಶೇಕಡ 91ರಷ್ಟು ಬಾಕಿ ಇವೆ. ಈ ವರ್ಷದಲ್ಲಿ ತಮಿಳುನಾಡು ರೈತರು ಸಲ್ಲಿಸಿದ ಶೇಕಡ 86ರಷ್ಟು ಕ್ಲೇಮ್ ‍ಗಳು ಅಂದರೆ ಒಟ್ಟು ಸಲ್ಲಿಕೆಯಾದ 144 ಕೋಟಿ ರೂಪಾಯಿ ಮೌಲ್ಯದ ಕ್ಲೇಮ್ ‍ಗಳ ಪೈಕಿ 124 ಕೋಟಿ ರೂಪಾಯಿ ಮೌಲ್ಯದ ಕ್ಲೇಮ್ ‍ಗಳು ಬಾಕಿ ಇವೆ.

2017-18ರ ಹಿಂಗಾರು ಕ್ಲೇಮ್ ವಿಳಂಬ

ಪಿಎಂಎಫ್ ಬಿವೈ ಬಗ್ಗೆ ರೈತರ ಪ್ರಮುಖ ಆರೋಪವೆಂದರೆ, ಸಕಾಲಿಕವಾಗಿ ಕ್ಲೇಮ್ ಗಳು ವಿಲೇವಾರಿಯಾಗದಿರುವುದು. ಒಂದು ನಿರ್ದಿಷ್ಟ ಹಂಗಾಮಿನಲ್ಲಿ ಆದ ಬೆಳೆ ಹಾನಿಗೆ ಸಂಬಂಧಿಸಿದ ಪರಿಹಾರ ಮುಂದಿನ ಹಂಗಾಮು ಬಿತ್ತನೆಗೆ ಮುನ್ನ ಲಭಿಸಿದರೆ ಮಾತ್ರ ರೈತರಿಗೆ ಬೆಳೆ ವಿಮೆ ಪ್ರಯೋಜನವಾಗುತ್ತದೆ ಎನ್ನುವುದು ರೈತರ ವಾದ. ಉದಾಹರಣೆಗೆ ಮುಂಗಾರು ಹಂಗಾಮು ಬೆಳೆಹಾನಿಯಾದಲ್ಲಿ, ಹಿಂಗಾರು ಹಂಗಾಮಿನ ಬಿತ್ತನೆಯಾಗುವ ಮುನ್ನವೇ ಪರಿಹಾರ ಮೊತ್ತ ಪಾವತಿಯಾಗಬೇಕು ಎನ್ನುವುದು ಅವರ ಪ್ರತಿಪಾದನೆ.

2018ರ ಅಕ್ಟೋಬರ್ 10ಕ್ಕೆ ಆರ್‍ಟಿಐ ಪ್ರಶ್ನೆ ಕೇಳಿದಾಗ, ಹಿಂಗಾರು ಹಂಗಾಮಿನ ಕಟಾವು ಮುಗಿದು ನಾಲ್ಕು ತಿಂಗಳುಗಳು ಕಳೆದಿವೆ. ಆದರೆ ಸಚಿವಾಲಯಕ್ಕೆ ಇನ್ನೂ ಹಿಂಗಾರು ಹಂಗಾಮಿನ ಅಂದಾಜು ಕ್ಲೇಮ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ವಾಸ್ತವವಾಗಿ ಪಿಎಂಎಫ್ ಬಿವೈ ಮಾರ್ಗಸೂಚಿಯ ಪ್ರಕಾರ, ಕಟಾವು ನಡೆದು ಎರಡು ತಿಂಗಳ ಒಳಗಾಗಿ ಕ್ಲೇಮ್ ವಿಲೇವಾರಿ ಮಾಡಬೇಕು ಎನ್ನುವುದನ್ನು ಇಲ್ಲಿ ಸ್ಮರಿಸಬಹುದು.

ವಿಳಂಬಕ್ಕೆ ಕಾರಣ

ಐಸಿಆರ್‍ಐಇಆರ್ ಗಾಗಿ ಅಶೋಕ್ ಗುಲಾಟಿ, ಪ್ರೇರಣಾ ತಿವಾರಿ ಮತ್ತು ಸಿರಾಜ್ ಹುಸೈನ್ ಎಂಬುವವರು ಸಿದ್ಧಪಡಿಸಿದ ಅಧ್ಯಯನ ವರದಿಯಲ್ಲಿ, ಕ್ಲೇಮ್‍ಗಳ ವಿಲೇವಾರಿ ವಿಳಂಬವಾಗಿರುವುದಕ್ಕೆ ಪ್ರಮುಖ ಕಾರಣಗಳನ್ನು ಪಟ್ಟಿ ಮಾಡಲಾಗಿದೆ.

ಕ್ಲೇಮ್ ಸಲ್ಲಿಕೆಗೆ ನೀಡಿದ ಗಡುವನ್ನು ಪದೇ ಪದೇ ವಿಸ್ತರಿಸುವುದು, ಬೆಳೆ ಕಟಾವು ಪ್ರಯೋಗಗಳನ್ನು ನಡೆಸಿದ ಬಳಿಕ ಅದರ ಇಳುವರಿ ವರದಿ ನೀಡುವಲ್ಲಿ ಆಗುವ ವಿಳಂಬ, ವಿಮಾ ಕಂಪನಿಗಳಿಗೆ ವಿಮಾಕಂತು ಸಬ್ಸಿಡಿಯ ಪಾವತಿಯನ್ನು ತಡವಾಗಿ ಮಾಡುವುದು ಕ್ಲೇಮ್ ವಿಲೇವಾರಿ ವಿಳಂಬಕ್ಕೆ ಪ್ರಮುಖ ಕಾರಣಗಳು.

"ರೈತರ ಹಿತಾಸಕ್ತಿ ಕಾಪಾಡುವ ಪವಿತ್ರ ಉದ್ದೇಶದ ಈ ಯೋಜನೆ, ಕಾರ್ಯನಿರ್ವಹಣೆ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಮಾತ್ರ ಯಶಸ್ವಿಯಾಗಬಲ್ಲದು" ಎಂದು ಅಧ್ಯಯನ ವರದಿ ಸ್ಪಷ್ಟವಾಗಿ ಹೇಳಿದೆ.

ಬೆಳೆ ಕಟಾವು ಪ್ರಯೋಗ ಕೂಡಾ ವಿವಾದಾತ್ಮಕ ಎಂದು ಸಿರಾಜ್ ಹುಸೈನ್ ಅಭಿಪ್ರಾಯಪಡುತ್ತಾರೆ. "ಈ ಪ್ರಯೋಗದ ಫಲಿತಾಂಶದ ಬಗ್ಗೆ ಕಂಪನಿಗಳು ತಗಾದೆ ತೆಗೆಯುತ್ತವೆ. ಇದು ಕೂಡಾ ವಿಳಂಬಕ್ಕೆ ಮತ್ತೊಂದು ಕಾರಣ" ಎಂದು ವೈರ್ ಜತೆ ಮಾತನಾಡಿದ ಅವರು ಹೇಳಿದರು.

ಕ್ಲೇಮ್ ಪಾವತಿಯಲ್ಲಿ ವಿಳಂಬವಾಗಿರುವುದನ್ನು ಕೇಂದ್ರ ಸರ್ಕಾರ ಕೂಡಾ ಒಪ್ಪಿಕೊಂಡಿದೆ. ಲೋಕಸಭೆಯಲ್ಲಿ 2018ರ ಜುಲೈನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಕೃಷಿ ಸಚಿವರು, 2017ರ ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ, ಬೆಳೆ ಕಟಾವು ಮುಗಿದು ಏಳು ತಿಂಗಳ ಬಳಿಕ ಕೂಡಾ ಶೇಕಡ 40ರಷ್ಟು ಕ್ಲೇಮ್‍ಗಳು ವಿಲೇವಾರಿಗೆ ಬಾಕಿ ಇದೆ ಎಂದು ಒಪ್ಪಿಕೊಂಡಿದ್ದರು.

ಕಳೆದ ಸೆಪ್ಟೆಂಬರ್‍ನಲ್ಲಿ ಕೇಂದ್ರ ಸರ್ಕಾರ ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ಪ್ರಯತ್ನ ಮಾಡಿತು. ಇದರ ಅಂಗವಾಗಿ ಪಿಎಂಎಫ್ ಬಿವೈಗೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿತು. ಈ ಮಾರ್ಗಸೂಚಿಯಲ್ಲಿ ಆಗಿರುವ ಪ್ರಮುಖ ಬದಲಾವಣೆ ಎಂದರೆ, ಕ್ಲೇಮ್ ಪಾವತಿಗೆ ನಿಗದಿಪಡಿಸಿದ ಅವಧಿ ಮುಗಿದು ಎರಡು ತಿಂಗಳಿಗಿಂತ ಹೆಚ್ಚು ವಿಳಂಬವಾದಲ್ಲಿ, ವಿಮಾ ಕಂಪನಿಗಳು ರೈತರಿಗೆ ಶೇಕಡ 12ರಷ್ಟು ಬಡ್ಡಿಯನ್ನು ಪಾವತಿಸಬೇಕು ಎನ್ನುವುದು.

ಆದರೆ ಈ ಹೊಸ ಮಾರ್ಗಸೂಚಿಯಿಂದ ಆಗಿರುವ ಪರಿಣಾಮ ಶೂನ್ಯ ಎಂದು ಪಶ್ಚಿಮ ಉತ್ತರ ಪ್ರದೇಶದ ರೈತ ಸಂಘಟನೆಯಾದ ಭಾರತೀಯ ಕಿಸಾನ್ ಆಂದೋಲನದ ಅಧ್ಯಕ್ಷ ಕುಲದೀಪ್ ತ್ಯಾಗಿಯವರ ಪ್ರತಿಪಾದನೆ. "ಇದರಿಂದ ಯಾವುದೇ ಬದಲಾವಣೆಯಾಗಿಲ್ಲ; ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದಂತೆಯೇ ವಿಮಾಕಂಪನಿಗಳು ಈಗ ಕೂಡಾ ಕಾರ್ಯ ನಿರ್ವಹಿಸುತ್ತಿವೆ" ಎಂದು ಅವರು ಹೇಳುತ್ತಾರೆ.

ಕಳೆದ ಸೆಪ್ಟೆಂಬರ್ ಕೊನೆ ವೇಳೆಗೆ ವಾಯುವ್ಯ ಭಾರತದಲ್ಲಿ ಭಾರಿ ಮಳೆಯಾಗಿದೆ. ಇದರಿಂದ ಸಾಕಷ್ಟು ಬೆಳೆಹಾನಿಯಾಗಿದೆ. ಗಟ್ಟಿಮುಟ್ಟಾದ ಬೆಳೆ ಎನಿಸಿಕೊಂಡ ಕಬ್ಬು ಬೆಳೆ ಕೂಡಾ ನಾಶವಾಗಿದೆ. ಆದರೆ ಈ ನಷ್ಟಕ್ಕೆ ಪರಿಹಾರ ನೀಡುವ ಪ್ರಕ್ರಿಯೆಯೇ ಇನ್ನೂ ಆರಂಭವಾಗಿಲ್ಲ. ನಾವು ಈ ಬಗ್ಗೆ ಜಿಲ್ಲಾಡಳಿತವನ್ನು ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ಅವರ ವಾದ.

                                                       

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top