---

ಗುಂಡಿಕ್ಕಿದ್ದರೂ ರಕ್ತದ ಕಲೆ ಕಂಡುಬರದ ವಿಚಿತ್ರ ಪ್ರಕರಣವಿದು…

ಹರೇನ್ ಪಾಂಡ್ಯ ಹತ್ಯೆಯ ಮರುತನಿಖೆ ಅಗತ್ಯ: ಮೊದಲು ಪ್ರಕರಣದ ತನಿಖೆ ನಡೆಸಿದ್ದ ಪೊಲೀಸ್ ಅಧಿಕಾರಿ

#ಸಿಎಂ ಮೋದಿಯ ವಿರುದ್ಧ ಬಂಡಾಯವೆದ್ದಿದ್ದ ಬಿಜೆಪಿ ನಾಯಕನ ಹತ್ಯೆಗೆ ಇನ್ನೂ ಸಿಕ್ಕಿಲ್ಲ ಉತ್ತರ

ಬಿಜೆಪಿ ಮುಖಂಡ ಹರೇನ್ ಪಾಂಡ್ಯ ಅವರ ನಿಗೂಢ ಹತ್ಯೆ ಪ್ರಕರಣದ ನೈಜ ಆರೋಪಿಗಳನ್ನು ಗುರುತಿಸಿ ಶಿಕ್ಷಿಸುವ ಸಲುವಾಗಿ ಹೊಸ ತನಿಖೆ ಅಗತ್ಯ ಎಂದು ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಳ್ಳುವ ಮುನ್ನ ತನಿಖೆ ನಡೆಸಿದ್ದ ಗುಜರಾತ್ ಪೊಲೀಸ್ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.

ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ 13 ವರ್ಷಗಳ ಅವಧಿಯಲ್ಲಿ ನಡೆದ ಎನ್ ಕೌಂಟರ್ ಪ್ರಕರಣಗಳು ಮತ್ತು ವಿವರಣೆಗೆ ನಿಲುಕದ ಹತ್ಯೆಗಳ ಪೈಕಿ ಪಾಂಡ್ಯ ಹತ್ಯೆ ಪ್ರಕರಣ ದೊಡ್ಡ ಪಿತೂರಿಯನ್ನು ಒಳಗೊಂಡಿದೆ. ಆಡಳಿತ ಪಕ್ಷದ ಜನಪ್ರಿಯ ನಾಯಕ, ಮಾಜಿ ಗೃಹ ಸಚಿವ ಪಾಂಡ್ಯ ಅವರನ್ನು ಮೋದಿ ಮೂಲೆಗುಂಪು ಮಾಡಿದ್ದರು ಹಾಗೂ 2002ರ ಮುಸ್ಲಿಂ ವಿರೋಧಿ ಹಿಂಸಾಚಾರದ ಬಗ್ಗೆ ತನಿಖೆ ನಡೆಸಿದ ಸ್ವತಂತ್ರ ನ್ಯಾಯಮಂಡಳಿಯ ಮುಂದೆ ರಾಜ್ಯ ಸರ್ಕಾರದ ಸಹಭಾಗಿತ್ವದ ಬಗ್ಗೆ ಸಾಕ್ಷಿಯನ್ನೂ ನುಡಿದಿದ್ದರು ಎಂದು ತಿಳಿದುಬಂದಿದೆ.

2003ರ ಮಾರ್ಚ್ 26ರಂದು ಅವರ ನಿರ್ಜೀವ ದೇಹ ನಗರದ ಲಾ ಗಾರ್ಡನ್ ಹೊರಗೆ ಅವರ ಕಾರಿನಲ್ಲಿ ಪತ್ತೆಯಾಗಿತ್ತು. ಅವರ ಕಾರನ್ನು ಜನನಿಬಿಡ ಸ್ಥಳದಲ್ಲಿ ನಿಲ್ಲಿಸಿದ್ದರೂ, ಯಾರಿಗೂ ಬಂದೂಕಿನಿಂದ ಗುಂಡು ಹಾರಿದ ಸದ್ದು ಕೇಳಿರಲಿಲ್ಲ. ಗುಜರಾತ್ ಹೈಕೋರ್ಟ್ ಮುಂದೆ ಏಕೈಕ ಸಾಕ್ಷಿ ನೀಡಿದ ವಿವರಣೆ ವಿಶ್ವಾಸಾರ್ಹವಾಗಿರಲಿಲ್ಲ.

ಈ ಅಪರಾಧದ ಸಂಬಂಧ ಸಿಬಿಐ 12 ಮಂದಿ ಮುಸ್ಲಿಮರನ್ನು ವಿಚಾರಣೆಗೆ ಗುರಿಪಡಿಸಿತ್ತು ಮತ್ತು ವಿಶೇಷ ಭಯೋತ್ಪಾದಕ ವಿರೋಧಿ ನ್ಯಾಯಾಲಯದಲ್ಲಿ ಅವರಿಗೆ ಶಿಕ್ಷೆಯಾಗುವಂತೆ ನೋಡಿಕೊಂಡಿತ್ತು. ಸಿಬಿಐ ಪ್ರಕಾರ, ಮುಸ್ಲಿಂ ವಿರೋಧಿ ಹಿಂಸಾಚಾರಕ್ಕೆ ಪ್ರತೀಕಾರವಾಗಿ ಪಾಂಡ್ಯ ಅವರನ್ನು ಹತ್ಯೆ ಮಾಡಲಾಗಿದೆ. ಆದರೆ ಸಿಬಿಐ ಪ್ರಕರಣ ಎಷ್ಟು ಅಸಂಭವನೀಯವಾಗಿತ್ತು ಎಂದರೆ, 2011ರಲ್ಲಿ ಗುಜರಾತ್ ಹೈಕೋರ್ಟ್ ಎಲ್ಲ ಆರೋಪಿಗಳನ್ನು ದೋಷಮುಕ್ತಗೊಳಿಸಿದ್ದು ಮಾತ್ರವಲ್ಲದೇ, ಸಿಬಿಐ ತನಿಖೆಯ ಗುಣಮಟ್ಟದ ಬಗ್ಗೆ ಕೆಂಡಕಾರಿತ್ತು.

ಹರೇನ್ ಪಾಂಡ್ಯ ಹತ್ಯೆ ಪ್ರಕರಣದ ಮೊದಲ ತನಿಖೆ ನಡೆಸಿದ್ದ ಪೊಲೀಸ್ ಅಧಿಕಾರಿ ವೈ.ಎ.ಶೇಖ್, "ದ ವೈರ್" ಜತೆ ಮಾತನಾಡಿ, ಗುಜರಾತ್ ಹೈಕೋರ್ಟ್ ತೀರ್ಪನ್ನು ಉಲ್ಲೇಖಿಸಿ ತನಿಖಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಲಾಗಿತ್ತು ಎಂದು ಅಭಿಪ್ರಾಯಪಟ್ಟರು.

ಈ ಪ್ರಕರಣದಲ್ಲಿ ದಾಖಲೆಗಿಂತ ಭಿನ್ನವಾಗಿ ಎದ್ದುಕಾಣುವ ಅಂಶವೆಂದರೆ, ಹರೇನ್ ಪಾಂಡ್ಯ ಹತ್ಯೆ ಪ್ರಕರಣದ ತನಿಖೆಯನ್ನು ಹಾಳುಗೆಡವಲಾಗಿದ್ದು, ಹಲವು ಅಪೇಕ್ಷಿತ ಅಂಶಗಳನ್ನು ಕೈಬಿಡಲಾಗಿದೆ. ಸಂಬಂಧಪಟ್ಟ ತನಿಖಾಧಿಕಾರಿಯ ಕೌಶಲಹೀನತೆಯನ್ನು ಇದಕ್ಕೆ ಹೊಣೆ ಮಾಡಬೇಕು. ಇದರ ಪರಿಣಾಮವಾಗಿ ಹಲವು ಮಂದಿಗೆ ಅನ್ಯಾಯ, ದೊಡ್ಡ ಪ್ರಮಾಣದ ಕಿರುಕುಳವಾಗಿದೆ. ಸಾರ್ವಜನಿಕ ಸಂಪನ್ಮೂಲ ಮತ್ತು ನ್ಯಾಯಾಲಯದ ಅಮೂಲ್ಯ ಸಾರ್ವಜನಿಕ ವೇಳೆ ನಷ್ಟವಾಗಿದೆ ಎಂದು ಛೀಮಾರಿ ಹೈಕೋರ್ಟ್ ಹಾಕಿತ್ತು.

ಅಂದು ವೈ.ಸಿ.ಮೋದಿ ಸಿಬಿಐನ ತನಿಖಾಧಿಕಾರಿಯಾಗಿದ್ದರು. 2017ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವೈ.ಸಿ.ಮೋದಿಯವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ ಐಎ) ಮುಖ್ಯಸ್ಥರನ್ನಾಗಿ ನೇಮಕ ಮಾಡಿದರು.

ಪಾಂಡ್ಯ ಅವರ ದೇಹವಿದ್ದ ಸ್ಥಿತಿಯಿಂದ ಹಿಡಿದು, ಅವರ ದೇಹದಲ್ಲಿ ಕಂಡುಬಂದ ಗುಂಡಿನ ಗಾಯಗಳವರೆಗೆ ವಿವಿಧ ಅಂಶಗಳನ್ನು ಪರಿಗಣಿಸಿದರೆ ಮತ್ತು ಕಾರಿನಲ್ಲಿ ಯಾವುದೇ ರಕ್ತದ ಕಲೆಗಳು ಇಲ್ಲದ ಹಿನ್ನೆಲೆಯಲ್ಲಿ ಸಿಬಿಐ ಪ್ರತಿಪಾದನೆಯನ್ನು ನಂಬುವುದು ಕಷ್ಟಸಾಧ್ಯ ಎಂದು ವೈ.ಎ.ಶೇಖ್ ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಪುನರ್ ಪರಿಶೀಲನೆ ನಡೆಸಿ, ಮರು ತನಿಖೆ ನಡೆಸುವ ಅಗತ್ಯವಿದೆ ಎನ್ನುವುದು ಅವರ ಸ್ಪಷ್ಟ ಅಭಿಮತ.

ಹೈಕೋರ್ಟ್‍ನ ಖಂಡನೆಯನ್ನು ಪರಿಗಣಿಸುವ ಬದಲು, ಸಿಬಿಐ 2013ರಲ್ಲಿ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿತು.

ಈ ಪ್ರಕರಣ ಸುಪ್ರೀಂ ಕೋರ್ಟ್‍ನಲ್ಲಿ ಈ ತಿಂಗಳ ಕೊನೆಗೆ ವಿಚಾರಣೆಗೆ ಬರಲಿದ್ದು, ಇದಕ್ಕೆ ಸಂಬಂಧಪಡದ ಪ್ರಕರಣವೊಂದರಲ್ಲಿ ಕಳೆದ ನವೆಂಬರ್‍ನಲ್ಲಿ ಸಾಕ್ಷಿಯೊಬ್ಬ ಬಹಿರಂಗಪಡಿಸಿದ ಅಂಶಗಳು, ಈ ಪ್ರಕರಣದ ವಾದ- ಪ್ರತಿವಾದಗಳ ಮೇಲೆ ದಟ್ಟ ಪ್ರಭಾವ ಬೀರುವ ಸಾಧ್ಯತೆ ಇದೆ.

ವಂಝಾರಾ ವಿರುದ್ಧ ಬಾಡಿಗೆ ಹತ್ಯೆ ಆರೋಪ

ಸೊಹ್ರಾಬುದ್ದೀನ್-ಕೌಸರ್‍ಬೀ-ಪ್ರಜಾಪತಿ ನಕಲಿ ಎನ್‍ಕೌಂಟರ್ ಪ್ರಕರಣದಲ್ಲಿ ಅಭಿಯೋಜಕರ ಸಾಕ್ಷಿಯಾದ ಅಝಂ ಖಾನ್ 2018ರ ನವೆಂಬರ್ 3ರಂದು ಸಾಕ್ಷ್ಯ ಹೇಳಿದ್ದಾನೆ. ಗುಜರಾತ್ ಪೊಲೀಸ್ ಅಧಿಕಾರಿ ಡಿ.ಜಿ.ವಂಝಾರಾ ಅವರು ಪಾಂಡ್ಯ ಹತ್ಯೆಗೆ ಗುತ್ತಿಗೆ ನೀಡಿದ್ದರು ಎಂಬುದಾಗಿ ತನ್ನ ಬಳಿ ಸೊಹ್ರಾಬುದ್ದೀನ್ ಹೇಳಿದ್ದರು ಎಂದು ಅಝಂ ಖಾನ್ ಬಹಿರಂಗಪಡಿಸಿದ್ದರು.

"ಸೊಹ್ರಾಬುದ್ದೀನ್ ಜತೆಗಿನ ಚರ್ಚೆಯ ವೇಳೆ, ನಯೀಮ್ ಖಾನ್ ಮತ್ತು ಶಹೀದ್ ರಾಂಪುರಿ, ಹರೇನ್ ಪಾಂಡ್ಯ ಹತ್ಯೆಗೆ ಗುತ್ತಿಗೆ ಪಡೆದರು ಹಾಗೂ ಆ ಕೆಲಸವನ್ನು ನಿರ್ವಹಿಸಿದರು ಎನ್ನುವುದು ತಿಳಿದುಬಂತು. ನನಗೆ ಇದರಿಂದ ಬೇಸರ ಎನಿಸಿತು. ಒಬ್ಬ ಒಳ್ಳೆಯ ವ್ಯಕ್ತಿಯನ್ನು ಅವರು ಕೊಂದರು ಎಂದು ನಾನು ಸೊಹ್ರಾಬುದ್ದೀನ್ ಬಳಿ ಹೇಳಿದೆ. ಈ ಹತ್ಯೆಗೆ ಗುತ್ತಿಗೆ ನೀಡಿದ್ದು ವಂಝಾರಾ ಎಂಬ ವಿಷಯವನ್ನು ಸೊಹ್ರಾಬುದ್ದೀನ್ ಆ ಬಳಿಕ ನನಗೆ ತಿಳಿಸಿದರು" ಎನ್ನುವುದು ಅಝಂ ಖಾನ್ ನೀಡಿದ ಸಾಕ್ಷ್ಯ.

ಪಾಂಡ್ಯ ಹತ್ಯೆಗೆ ಮೇಲಿನಿಂದ ಆದೇಶ ಬಂದಿತ್ತು ಎಂದು ಖಾನ್ ತೆರೆದ ನ್ಯಾಯಾಲಯಲ್ಲಿ ಸಾಕ್ಷ್ಯ ನುಡಿದಿದ್ದರೂ, ನ್ಯಾಯಾಧೀಶ ಎಸ್.ಜೆಎ.ಶರ್ಮಾ ಅವರು ಅಝಂಖಾನ್‍ ನ ಸಾಕ್ಷ್ಯದಿಂದ ಅಧಿಕೃತವಾಗಿ ಈ ಶಬ್ದಗಳನ್ನು ಕಿತ್ತುಹಾಕುವಂತೆ ಸೂಚಿಸಿದರು.

ಆ ಬಳಿಕ ಸೊಹ್ರಾಬುದ್ದೀನ್, ಹತ್ಯೆಗಾಗಿ ಪ್ರಜಾಪತಿ ಹಾಗೂ ಮತ್ತೊಬ್ಬ ಹುಡುಗನನ್ನು ನಿಯೋಜಿಸಿದ್ದ ಎಂದು ಖಾನ್ ವಿವರಿಸಿದ್ದರು. "ಉದಯಪುರದಲ್ಲಿರುವ ಆತನ ನಿವಾಸದಲ್ಲಿ ಸೊಹ್ರಾಬುದ್ದೀನ್ ಜತೆಗಿನ ನನ್ನ ಚರ್ಚೆ ಬಗ್ಗೆ ಸಿಬಿಐ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದೆ. ಸೊಹ್ರಾಬುದ್ದೀನ್ ಪರವಾಗಿ ಪ್ರಜಾಪತಿ ಹಾಗೂ ಮತ್ತೊಬ್ಬ ಹುಡುಗ ಹರೇನ್ ಪಾಂಡ್ಯ ಅವರನ್ನು ಹತ್ಯೆ ಮಾಡಿದ್ದಾರೆ" ಎಂದು ಪಾಟಿ ಸವಾಲಿನ ವೇಳೆ ಖಾನ್ ಹೇಳಿದ್ದನ್ನು ನ್ಯಾಯಾಲಯದ ದಾಖಲೆಯಲ್ಲಿ ಸೇರಿಸಲಾಗಿದೆ.

ಪ್ರಜಾಪತಿ ಶೂಟರ್ ಆಗಿದ್ದೇಕೆ?

ವಂಝಾರಾ, ಸೊಹ್ರಾಬುದ್ದೀನ್ ಮತ್ತು ಪ್ರಜಾಪತಿ ಪಾಂಡ್ಯ ಹತ್ಯೆಯಲ್ಲಿ ಶಾಮೀಲಾಗಿದ್ದರು ಹಾಗೂ ಪ್ರಜಾಪತಿ ಗುಂಡು ಹಾರಿಸಿದ್ದ ಎಂಬ ಖಾನ್ ಹೇಳಿಕೆ ಹಲವು ಸಂದೇಹಗಳಿಗೆ ಎಡೆಮಾಡಿಕೊಟ್ಟಿದೆ. ಪಾಂಡ್ಯ ಹತ್ಯೆ ಹಿಂದಿನ ರಾಜಕೀಯ ಪಿತೂರಿಯ ಅಂಶವನ್ನು ಮತ್ತೆ ಚರ್ಚೆಗೆ ತಂದಿದ್ದಲ್ಲದೇ, ಸೊಹ್ರಾಬುದ್ದೀನ್ ಮತ್ತು ಪ್ರಜಾಪತಿ ಹತ್ಯೆ ಹಿಂದೆ ವಂಝಾರಾ ಹಾಗೂ ಗುಜರಾತ್ ಪೊಲೀಸರ ಉದ್ದೇಶವೇನು ಎಂಬ ವಿಷಯದ ಬಗ್ಗೆಯೂ ಬೆಳಕು ಚೆಲ್ಲಿದೆ. ಬಹುಶಃ ಪಾಂಡ್ಯ ಹತ್ಯೆ ಬಗ್ಗೆ ಈ ಇಬ್ಬರು ಬಾಯಿಮುಚ್ಚಿ ಕುಳಿತುಕೊಳ್ಳುವ ಸಾಧ್ಯತೆ ಇಲ್ಲ ಎಂಬ ಭೀತಿಯಿಂದ ಈ ಹತ್ಯೆ ಮಾಡಿರಬೇಕು ಎಂಬ ಸಂದೇಹ ಹುಟ್ಟುಹಾಕಿದೆ.

ಪಾಂಡ್ಯ ಹತ್ಯೆ ಬಗ್ಗೆ ಇದುವರೆಗೆ ಗಮನಕ್ಕೆ ಬಾರದಿದ್ದ ಅಂಶವೊಂದು ಕೂಡಾ ಇಲ್ಲಿ ಪ್ರಸ್ತುತ ಎನಿಸಿದೆ. ಒಬ್ಬ ವ್ಯಕ್ತಿ ನೀಡಿದ ವಿವರಣೆಯ ಆಧಾರದಲ್ಲಿ ಗುಜರಾತ್ ಪೊಲೀಸ್ ಇಲಾಖೆಯ ಅಪರಾಧ ವಿಭಾಗವು ಶಂಕಿತ ಹಂತಕನ ರೇಖಾಚಿತ್ರವನ್ನು ಸಿದ್ಧಪಡಿಸಿತ್ತು. ಈ ಹತ್ಯೆ ಪ್ರಕರಣಕ್ಕೆ ಅನಿಲ್ ಯಾದ್ರಾಮ್ ಎಂಬ ಸಣ್ಣ ವ್ಯಾಪಾರಿ ಏಕೈಕ ಪ್ರತ್ಯಕ್ಷದರ್ಶಿ ಸಾಕ್ಷಿ ಎಂದು ಸಿಬಿಐ ವಿಚಾರಣೆ ವೇಳೆ ಹೇಳಿತ್ತು.

ಆದರೆ ಹೀಗೆ ಒದಗಿಸಿದ ರೇಖಾಚಿತ್ರ ವಿಚಾರಣಾ ನ್ಯಾಯಾಲಯದಲ್ಲಿ ಯಾವ ಪ್ರಯೋಜನಕ್ಕೂ ಬರಲಿಲ್ಲ. ಸಿಬಿಐ ಹಂತಕ ಎಂದು ಗುರುತಿಸಿದ ಅಸ್ಗರ್ ಅಲಿ ಎಂಬಾತನಿಗೂ ಈ ರೇಖಾಚಿತ್ರಕ್ಕೂ ಹೋಲಿಕೆಯೇ ಇಲ್ಲ ಎಂದು ನ್ಯಾಯಾಧೀಶೆ ಸೋನಿಯಾ ಗೋಕಣಿ ಹೇಳಿದ್ದರು. ಕುತೂಹಲದ ವಿಚಾರವೆಂದರೆ ಆ ರೇಖಾಚಿತ್ರವನ್ನು ತುಳಸೀರಾಂ ಪ್ರಜಾಪತಿಯ ಸಾಮ್ಯತೆಯನ್ನು ಹೊಂದಿದೆ. ಅಝಂ ಖಾನ್ ಹೇಳುವಂತೆ ಪಾಂಡ್ಯರನ್ನು ಹತ್ಯೆ ಮಾಡಿದ್ದು ತುಳಸೀರಾಂ ಪ್ರಜಾಪತಿ.

ಈ ಪ್ರಕರಣದ ಮೂಲ ತನಿಖಾಧಿಕಾರಿ ಶೇಖ್ ಜತೆ ಈ ಎರಡೂ ಚಿತ್ರಗಳನ್ನು "ದ ವೈರ್" ಹಂಚಿಕೊಂಡಾಗ, ಸಾಮ್ಯತೆ ಇರುವುದನ್ನು ಅವರೂ ಒಪ್ಪಿಕೊಂಡರು. ಆದರೆ ಇದು ಹೇಗೆ ಸಾಧ್ಯವಾಯಿತು ಎಂಬ ಬಗ್ಗೆ ಯಾವ ವಿವರಣೆಯನ್ಣೂ ನೀಡಲಿಲ್ಲ. ಸಾಕ್ಷಿಯೊಬ್ಬ ನೀಡಿದ ಮಾಹಿತಿ ಆಧಾರದಲ್ಲಿ ಪೊಲೀಸ್ ಚಿತ್ರಗಾರ ಎ.ಎ.ಚೌಹಾಣ್ ಈ ರೇಖಾಚಿತ್ರವನ್ನು ತಯಾರಿಸಿದ್ದಾರೆ. ಆದರೆ ಇಂಥ ರೇಖಾಚಿತ್ರ ಇದೆ ಎನ್ನುವುದು ಗಮನಕ್ಕೆ ಬಂದದ್ದೇ ವಿಚಾರಣೆ ವೇಳೆಯಲ್ಲಿ ಎಂದು ಅವರು ಸ್ಪಷ್ಟಪಡಿಸಿದರು.

ಆದರೆ ಈ ಹೋಲಿಕೆಯ ಬಗ್ಗೆ ಸಂಶಯಕ್ಕೆ ಮುಖ್ಯ ಕಾರಣವೆಂದರೆ, ಪಾಂಡ್ಯ ಹತ್ಯೆಯಾದ ದಿನ ತುಳಸೀರಾಂ ಪ್ರಜಾಪತಿ ಮಧ್ಯಪ್ರದೇಶ ಜೈಲಿನಲ್ಲಿದ್ದ.

ಶೂಟಿಂಗ್ ನಡೆದ ದಿನ ಮುಂಜಾನೆ ಪೊಲೀಸ್ ನಿಯಂತ್ರಣ ಕೊಠಡಿಯಿಂದ ಶೇಖ್ ಅವರನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿತ್ತು ಹಾಗೂ ಎರಡು ದಿನಗಳ ಕಾಲ ಮಾತ್ರ ಅವರು ತನಿಖೆ ನಿರ್ವಹಿಸಿದರು. ಪಾಂಡ್ಯ ಅವರ ದೇಹವನ್ನು ಮೊದಲು ನೋಡಿದ ವ್ಯಕ್ತಿಗಳ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರು ಮತ್ತು ಪಾಂಡ್ಯ ಅವರ ಮೊಬೈಲ್ ವಶಪಡಿಸಿಕೊಂಡಿದ್ದರು. ಸಣ್ಣ ವ್ಯಾಪಾರಿ ಈ ಘಟನೆಗೆ ಪ್ರತ್ಯಕ್ಷದರ್ಶಿ ಸಾಕ್ಷಿ ಎಂದು ಕೇಳಿಬಂದ ಬಳಿಕ ಆತನನ್ನು ಸಂಪರ್ಕಿಸಿದ್ದರು. ಆದರೆ ಆ ವೇಳೆಗೆ ಸರ್ಕಾರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತು.

ಸಾಕ್ಷಿ ಕಟಕಟೆಯಲ್ಲಿ ನಿಲ್ಲುವ ಮುನ್ನವೇ ಯಾದ್‍ ರಾಂನ ನಡತೆ ಕುತೂಹಲಕಾರಿಯಾಗಿತ್ತು. ಆತನೇ ಹೇಳಿದಂತೆ ಮುಂಜಾನೆ 7.30ಕ್ಕೆ ಈ ಹತ್ಯೆಯನ್ನು ಆತ ನೋಡಿದ್ದ. ಹಂತಕ ತಕ್ಷಣ ಓಡಿಹೋದರೂ, ಗುಂಡು ತಗುಲಿದ ವ್ಯಕ್ತಿ ಜೀವಂತವಿದ್ದಾನೆಯೇ ಅಥವಾ ಸತ್ತಿದ್ದಾನೆಯೇ ಎಂಬ ಗೊಡವೆಗೆ ಯಾದ್‍ ರಾಂನ ಹೋಗಲಿಲ್ಲ. ಪೊಲೀಸರಿಗೆ ಈ ಬಗ್ಗೆ ಮಾಹಿತಿಯನ್ನೂ ನೀಡಲಿಲ್ಲ. ಬದಲಾಗಿ ಆ ಸ್ಥಳದಿಂದ ತನ್ನ ಉದ್ಯೋಗದಾತರ ಬಳಿಗೆ ಹೋಗಿ ಯಾರಿಗೋ ಗುಂಡು ಹೊಡೆಯಲಾಗಿದೆ ಎಂದು ಮಾಹಿತಿ ನೀಡಿದ್ದ. ಯಾದ್‍ ರಾಂನ ಗೆ ಸಂತ್ರಸ್ತ ವ್ಯಕ್ತಿಯ ಗುರುತು ಇಲ್ಲದಿದ್ದರೂ, ಆತನ ಮಾಲಕರು ಹರೇನ್ ಪಾಂಡ್ಯ ಸಿಬ್ಬಂದಿಗೆ ಕರೆ ಮಾಡಿ, ಲಾ ಗಾರ್ಡನ್‍ ಗೆ ಬರುವಂತೆ ಕೋರಿದ್ದರು. ಪಾಂಡ್ಯ ಸಿಬ್ಬಂದಿ ಘಟನಾ ಸ್ಥಳಕ್ಕೆ ಬರುವ ವೇಳೆಗೆ ಯಾರೋ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ. ಆಗ ಸಮಯ ಬೆಳಗ್ಗೆ 10.30 ಆಗಿತ್ತು. ಆಗ ಕೂಡಾ ಯಾರಿಗೆ ನಿರ್ದಿಷ್ಟವಾಗಿ ಏನಾಗಿದೆ ಎಂಬ ಬಗ್ಗೆ ನಿಯಂತ್ರಣ ಕೊಠಡಿಗೆ ಮಾಹಿತಿ ಇರಲಿಲ್ಲ. ಶೇಖ್‍ ಗೆ ನಿಯಂತ್ರಣ ಕೊಠಡಿಯಿಂದ ಬಂದ ಮಾಹಿತಿ, "ಏನೋ ಗಲಭೆ ಇದೆ. ದಯವಿಟ್ಟು ಏನು ಎಂದು ಪರಿಶೀಲಿಸಿ" ಎಂದಾಗಿತ್ತು.

ಎರಡೇ ವಾರಗಳ ಒಳಗಾಗಿ, ಈ ಪ್ರಕರಣವನ್ನು ಭೇದಿಸಿದ್ದಾಗಿ ಸಿಬಿಐ ಘೋಷಿಸಿತ್ತು. ಅಸ್ಗರ್ ಎಂಬ ಯುವಕನ ಮೇಲೆ ಹತ್ಯೆ ಆರೋಪ ಹೊರಿಸಿತ್ತು ಹಾಗೂ ಈ ಪಿತೂರಿಯಲ್ಲಿ ಮತ್ತೆ ಕೆಲವರನ್ನು ಸೇರಿಸಿತು. ಸ್ಥಳೀಯ ಧರ್ಮಗುರು ಮುಫ್ತಿ ಸೂಫಿಯಾನ್ ಎಂಬುವವರಿಂದ ಈ ಕೃತ್ಯ ಎಸಗಲು ಪ್ರೇರಣೆ ಪಡೆದಿದ್ದರು ಎಂದು ಹೇಳಿತ್ತು. ಧರ್ಮಗುರು ರಾಜ್ಯದಿಂದ ಪಲಾಯನ ಮಾಡಿದ್ದಾರೆ ಎನ್ನಲಾಗಿದ್ದು, ಬಹುಶಃ ಪಾಕಿಸ್ತಾನಕ್ಕೆ ತೆರಳಿರಬೇಕು ಎನ್ನುವುದು ಸಿಬಿಐ ವಾದವಾಗಿತ್ತು. ಆ ಪ್ರಕರಣವನ್ನು ಸಿಬಿಐ ಭೇದಿಸಿದ ಬಳಿಕ ಇದುವರೆಗೂ ಆ ಧರ್ಮಗುರು ಪತ್ತೆಯಾಗಿಲ್ಲ. ಪೊಲೀಸ್ ಕಣ್ಗಾವಲು ಇದ್ದಾಗ್ಯೂ ಹಲವು ವಾರಗಳ ಬಳಿಕ ಆತನ ಕುಟುಂಬ ಕೂಡಾ ಕಣ್ಮರೆಯಾಗಿದೆ!

ಉತ್ತರ ಸಿಗದ ಪ್ರಶ್ನೆಗಳು

ತುಳಸೀರಾಂ ಪ್ರಜಾಪತಿ, ಪಾಂಡ್ಯ ಹತ್ಯೆ ಪ್ರಕರಣದಲ್ಲಿ ಶಾಮೀಲಾಗಿದ್ದಾನೆ ಎಂಬ ದಿಢೀರ್ ಸಂಶಯ ಪಾಂಡ್ಯ ಹತ್ಯೆ ಪ್ರಕರಣ ಸುತ್ತ ಇರುವ ಹಲವು ನಿಗೂಢತೆಗಳ ಪೈಕಿ ಒಂದು.

ವಿಚಾರಣಾ ನ್ಯಾಯಾಲಯದ ತೀರ್ಪನ್ನು ಮತ್ತು ಅಭಿಯೋಜಕರ ವಾದವನ್ನು ಪರಾಮರ್ಶಿಸಿದ ಬಳಿಕ ಹೈಕೋರ್ಟ್ ಒಂದು ನಿರ್ಧಾರಕ್ಕೆ ಬಂದಿದ್ದು, ಹತ್ಯೆ ಬಗೆಗಿನ ಪ್ರಮುಖ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ ಎಂದು ಸ್ಪಷ್ಟಪಡಿಸಿದೆ. ಯಾವ ವೇಳೆಯಲ್ಲಿ ಗುಂಡಿಕ್ಕಲಾಗಿದೆ ಎನ್ನುವುದು ನಿಗೂಢ; ಇನ್ನೂ ವಿಚಿತ್ರವೆಂದರೆ, ಪಾಂಡ್ಯ ಅವರ ಮೃತದೇಹ ಮಾರುತಿ 800 ಕಾರಿನ ಒಳಗೆ ಪತ್ತೆಯಾಗಿದ್ದು, ಅವರ ಪಾದ ಸ್ಟೀರಿಂಗ್ ವ್ಹೀಲ್ ಬಳಿ ಇತ್ತು. ಸಿಬಿಐ ವಿವರಣೆಯಂತೆ ಪತ್ತೆಯಾದ ಗುಂಡುಗಳು ಮತ್ತು ಅವರ ದೇಹದ ಮೇಲಿದ್ದ ಗಾಯದ ಸ್ವರೂಪಗಳಿಗೂ ತಾಳೆಯಾಗುವುದಿಲ್ಲ. ನ್ಯಾಯಾಲಯದಲ್ಲಿ ಹಾಜರುಪಡಿಸಿದ ಬಂದೂಕು ಮತ್ತು ಗುಂಡುಗಳಿಗೆ ಹೋಲಿಕೆ ಇಲ್ಲ. ವಾಸ್ತವವೆಂದರೆ ಮತ್ತೊಂದು ಬಂದೂಕನ್ನು ಸೊಹ್ರಾಬುದ್ದೀನ್ ವಾಸ್ತವ್ಯವಿದ್ದ ಉದಯಪುರದಿಂದ ವಶಪಡಿಸಿಕೊಳ್ಳಲಾಗಿತ್ತು. ಆದರೆ ಇದನ್ನು ನ್ಯಾಯಾಲಯದ ಗಮನಕ್ಕೆ ತಂದಿಲ್ಲ.

ಒಂದು ಗುಂಡು ಪಾಂಡ್ಯ ಅವರ ವೃಷಣಭಾಗಕ್ಕೆ ತಾಗಿ ಮೇಲ್ಮುಖವಾಗಿ ಹೋಗಿದ್ದರೂ, ಕಾರಿನಲ್ಲಿ ಒಂದು ಹನಿ ರಕ್ತ ಇದ್ದುದು ಹೊರತುಪಡಿಸಿ ಉಳಿದೆಲ್ಲೂ ರಕ್ತದ ಕಲೆಗಳಿರಲಿಲ್ಲ. ಅಂತೆಯೇ ಗುಂಡಿನ ಪಥ ಕೂಡಾ ಎಲ್ಲ ಭೌತವಿಜ್ಞಾನವನ್ನೂ ಮೀರುವಂಥದ್ದು; ಏಕೆಂದರೆ ಸಿಬಿಐ ಹಾಜರುಪಡಿಸಿದ ವ್ಯಕ್ತಿ ಸಾಕ್ಷ್ಯ ಹೇಳಿದ ಪ್ರಕಾರ, ಗುಂಡು ಹಾರಿಸಿದ ವ್ಯಕ್ತಿ ಕಾರಿನ ಹೊರಗಿನಿಂದ, ಕೇವಲ 3 ಇಂಚು ಅಗಲ ಇರುವ ಕಾರಿನ ಬಾಗಿಲ ಕಿಟಕಿಯ ಮೂಲಕ ಗುಂಡು ಹಾರಿಸಿದ್ದ.

ಈ ಬಗ್ಗೆ ಹೈಕೋರ್ಟ್ ಹೇಳಿದ್ದು ಹೀಗೆ:

"ಕಾರಿನ ಗಾಜು ಎಷ್ಟು ತೆರೆದುಕೊಂಡಿರುತ್ತದೆ ಎನ್ನುವುದನ್ನು ವೈಜ್ಞಾನಿಕವಾಗಿ ಅಳತೆ ಮಾಡಲಾಗಿದ್ದು, ಇದು 3 ಇಂಚಿಗಿಂತಲೂ ಕಡಿಮೆ. ಪ್ರತ್ಯಕ್ಷದರ್ಶಿ ಹೇಳಿದಂತೆ, ಪಾಂಡ್ಯ ಅವರಿಗೆ ಕಾರಿನ ಹೊರಗಿನಿಂದ ಗುಂಡು ಹಾರಿಸಲಾಗಿದೆ. ಆದರೆ ಪ್ರಕರಣದ ಏಕೈಕ ಸಾಕ್ಷಿ ನೀಡಿದ ಈ ಸಾಕ್ಷ್ಯವು ಅಸಂಭವನೀಯ ಎಂದು ವೈದ್ಯಕೀಯ ಪುರಾವೆಗಳು ಮತ್ತು ಎಫ್‍ಎಸ್‍ಎಲ್ ವರದಿಯಿಂದ ಸ್ಪಷ್ಟವಾಗುತ್ತದೆ. ಸಂತ್ರಸ್ತ ವ್ಯಕ್ತಿ ಚಾಲಕನ ಆಸನದಲ್ಲಿರುವಾಗ ಹೊರಗಿನಿಂದ ಗುಂಡು ಹೊಡೆದ ವ್ಯಕ್ತಿಯ ಎತ್ತರ ಹಾಗೂ ಕೋನದ ಹಿನ್ನೆಲೆಯಲ್ಲಿ ಅಥವಾ ಮೊದಲ ಗುಂಡು ತಗುಲಿದ ಬಳಿಕ ಸಂತ್ರಸ್ತ ವ್ಯಕ್ತಿ ಪಕ್ಕದ ಸೀಟಿಗೆ ಬಿದ್ದರೂ ಗುಂಡು, ವೃಷಣಕ್ಕೆ ತಾಗಿ ಗಾಯ ಮಾಡುವ ಸಾಧ್ಯತೆ ಇಲ್ಲ ಎಂದು ವೈದ್ಯಕೀಯ ವರದಿಯಲ್ಲಿ ಹೇಳಲಾಗಿದೆ"

ವಿಸ್ಮಯಕರ ಎಂಬಂತೆ ಕಾರಿನಲ್ಲಿ ಯಾವುದೇ ರಕ್ತದ ಕಲೆಗಳು ಇಲ್ಲದಿರುವ ಬಗ್ಗೆ ಹೈಕೋರ್ಟ್ ಹೀಗೆ ಅಭಿಪ್ರಾಯ ವ್ಯಕ್ತಪಡಿಸಿತ್ತು:

"ಸಂತ್ರಸ್ತ ವ್ಯಕ್ತಿಯ ತೋಳು ಮತ್ತು ಕತ್ತಿನಿಂದಾಗಿ ಅವರ ಬಟ್ಟೆ ರಕ್ತದಿಂದ ಒದ್ದೆಯಾಗಿದ್ದು, ಕಾರಿನ ಒಳಗೆ ಆಸನದ ಕೆಳಗೆ ಬಿದ್ದಿದ್ದ ಅವರ ಮೊಬೈಲ್ ಫೋನ್ ಹಾಗೂ ಕೀಗಳಲ್ಲಿ ರಕ್ತದ ಕಲೆಗಳಿದ್ದರೂ, ಚಾಲಕನ ಆಸನದ ಪಕ್ಕ ಒಂದು ಹನಿ ರಕ್ತ ಇದ್ದುದು ಹೊರತುಪಡಿಸಿದರೆ ಶ್ರೀ ಪಾಂಡ್ಯ ಅವರ ಕಾರಿನಲ್ಲಿ ಯಾವುದೇ ರಕ್ತದ ಕಲೆಗಳು ಇಲ್ಲ ಎಂಬ ಅಂಶ ದಾಖಲೆಗಳಿಂದ ತಿಳಿದುಬರುತ್ತಿದೆ. ಇದರಿಂದಾಗಿ ಈ ಹತ್ಯೆಯ ನಿಗೂಢತೆ ಮತ್ತಷ್ಟು ಆಳಕ್ಕೆ ಹೋಗುತ್ತಿದೆ" ಎಂದು ಕೋರ್ಟ್ ಹೇಳಿತ್ತು.

ವಶಪಡಿಸಿಕೊಂಡ ಗುಂಡುಗಳ ಆಧಾರದಲ್ಲಿ, ಎರಡು ಬಂದೂಕುಗಳು ಇದ್ದಿರುವ ಸಾಧ್ಯತೆ ಬಹಳಷ್ಟು ಇದೆ ಹಾಗೂ ಇಬ್ಬರು ಹಂತಕರಿದ್ದ ಸಾಧ್ಯತೆ ಇದೆ. ಪಾಂಡ್ಯ ಅವರ ಕಾರಿನಲ್ಲಿ ರಕ್ತದ ಕಲೆಗಳು ಇಲ್ಲದಿರುವುದು ಸ್ಪಷ್ಟವಾಗಿ ಸೂಚಿಸುವಂತೆ, ಅವರನ್ನು ಕಾರಿನಲ್ಲಿ ಹತ್ಯೆ ಮಾಡಲಾಗಿಲ್ಲ; ಆದರೆ ಬೇರೆಲ್ಲೋ ಹತ್ಯೆ ಮಾಡಿ, ಕಾರಿಗೆ ತುರುಕಲಾಗಿದೆ. ಏಕೆ ಹೀಗೆ ಮಾಡಲಾಗಿದೆ, ಯಾರು ಹೀಗೆ ಮಾಡಿದ್ದಾರೆ ಎನ್ನುವ ಪ್ರಶ್ನೆಗಳಿಗೆ ಉತ್ತರ ಸೂಕ್ತ ತನಿಖೆಯಿಂದಷ್ಟೇ ಸಿಗಬೇಕು. ಈ ಬಗೆಯ ತನಿಖೆಯನ್ನು ಸಿಬಿಐ ಎಂದೂ ಮಾಡಲೇ ಇಲ್ಲ.

ಸೊಹ್ರಾಬುದ್ದೀನ್ ಮತ್ತು ಇಶ್ರತ್ ಜಹಾನ್ ನಕಲಿ ಎನ್‍ ಕೌಂಟರ್ ಪ್ರಕರಣಗಳ ಬಗ್ಗೆ 2013ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಕೋಪೋದ್ರಿಕ್ತರಾಗಿ ಬರೆದ ಪತ್ರದಲ್ಲಿ, ‘ಪಾಂಡ್ಯ ಪ್ರಕರಣವನ್ನು ರಾಜಕೀಯಗೊಳಿಸಲಾಗುತ್ತಿದೆ’ ಎಂದು ಆಪಾದಿಸಿದ್ದರು. “ಈ ವಿಳಂಬಿತ ಹಂತದಲ್ಲಿ ಬಿಜೆಪಿ ನಾಯಕರನ್ನು ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಮಾತುಗಳನ್ನು ಹಿರಿಯ ಕಾಂಗ್ರೆಸ್ ಮುಖಂಡರು ಅಧಿಕಾರ ಸ್ಥಾನದಲ್ಲಿ ಹೇಳುತ್ತಿದ್ದಾರೆ...ತನ್ನದೇ ತನಿಖೆ ದೋಷಯುಕ್ತ ಎಂದು ಒಪ್ಪಿಕೊಳ್ಳುವಂತೆ ಸಿಬಿಐ ಮೇಲೆ ಒತ್ತಡ ತರಲಾಗುತ್ತಿದೆ" ಎಂದು ಆಪಾದಿಸಿದ್ದರು.

ಪಾಂಡ್ಯ ಪ್ರಕರಣವನ್ನು ರಾಜಕೀಯಗೊಳಿಸುವುದು ಹಾಗಿರಲಿ; ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಹೋಗಲು ನಿರ್ಧರಿಸಿದ್ದು, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಹಾಗೂ ಪಾಂಡ್ಯ ಹತ್ಯೆ ಪ್ರಕರಣದಲ್ಲಿ 12 ಮಂದಿಯನ್ನು ದೋಷಮುಕ್ತಗೊಳಿಸಿದ್ದು ಗುಜರಾತ್ ಹೈಕೋರ್ಟ್. ಸಿಬಿಐ ತನಿಖೆ ದೋಷಪೂರ್ಣ ಮಾತ್ರವಲ್ಲದೇ, ಸ್ವೀಕಾರಾರ್ಹವಲ್ಲ ಎಂದು ಕೋರ್ಟ್ ಛೀಮಾರಿ ಹಾಕಿತ್ತು.

ಸರಳವಾಗಿ ಹೇಳಬೇಕೆಂದರೆ, ಹೈಕೋರ್ಟ್ ತೀರ್ಪಿನ ಪ್ರಕಾರ, ಸಿಬಿಐ ಹೇಳುವಂತೆ ಪಾಂಡ್ಯ ಹತ್ಯೆ ನಡೆದಿಲ್ಲ. ತನಿಖಾ ತಂಡ ಅಸಂಖ್ಯಾತ ಸುಳಿವುಗಳನ್ನು ಕೈಬಿಟ್ಟಿದೆ ಹಾಗೂ ಪಾಂಡ್ಯ ಅವರ ದೇಹ ಯಾವ ಸ್ಥಿತಿಯಲ್ಲಿತ್ತು ಎಂದು ಸಾಕ್ಷ್ಯ ನುಡಿಯಲು ಅವರ ಸಿಬ್ಬಂದಿಗೆ ಅವಕಾಶ ನೀಡದಿರುವುದು ಅಚ್ಚರಿಯ ಸಂಗತಿ ಎಂದೂ ಹೈಕೋರ್ಟ್ ಹೇಳಿತ್ತು.

ಈ ಕೃತ್ಯ ನಡೆದು 15 ವರ್ಷಗಳು ಕಳೆದಿದ್ದು, ಪಾಂಡ್ಯ ಅವರ ತಂದೆ ಹಾಗೂ ವಿಧವಾ ಪತ್ನಿ, ಗುಜರಾತ್‍ ನ ಹಲವು ಮಂದಿ ಬಿಜೆಪಿ ಮುಖಂಡರು ಹಾಗೂ ಇದೀಗ ಮೂಲ ತನಿಖಾಧಿಕಾರಿ ಸಿಬಿಐನ ತನಿಖೆಯ ಅಸಂಭವನೀಯತೆ ಬಗ್ಗೆ ಆರೋಪ ಮಾಡಿದ್ದಾರೆ. ಪ್ರಕರಣದ ಮರು ತನಿಖೆಯನ್ನು ವಿಳಂಬ ಮಾಡಿದಷ್ಟೂ, ತನಿಖೆ ಸಂಪೂರ್ಣ ತಣ್ಣಗಾಗುವ ಸಾಧ್ಯತೆ ಹೆಚ್ಚು. ಬಹುಶಃ ಈ ಪ್ರಕರಣದಲ್ಲಿ ಸಿಬಿಐಗೆ, ಬಹಿರಂಗಪಡಿಸಿದ ಅಂಶಕ್ಕಿಂತ ಹೆಚ್ಚು ಅಂಶಗಳನ್ನು ತಿಳಿದಿದೆ ಎನ್ನುವುದು ಸ್ಪಷ್ಟ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top