ಕರಾವಳಿಗರ ಸ್ವಾಭಿಮಾನದ ಅಲೆಯ ಮುಂದೆ ಮೋದಿ ಅಲೆಗೆ ನೆಲೆ ಇಲ್ಲ: ಮಿಥುನ್ ರೈ | Vartha Bharati- ವಾರ್ತಾ ಭಾರತಿ

---

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ

ಕರಾವಳಿಗರ ಸ್ವಾಭಿಮಾನದ ಅಲೆಯ ಮುಂದೆ ಮೋದಿ ಅಲೆಗೆ ನೆಲೆ ಇಲ್ಲ: ಮಿಥುನ್ ರೈ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿರುವ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ, ಯುವ ಮುಖಂಡ ಮಿಥುನ್ ಎಂ. ರೈ ಕ್ಷೇತ್ರದೆಲ್ಲೆಡೆ ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಶುಕ್ರವಾರ ತಮ್ಮ ನಿಬಿಡ ದಿನಚರಿಯ ನಡುವೆಯೇ ‘ವಾರ್ತಾಭಾರತಿ’ಯ ಫೇಸ್‌ಬುಕ್ ಲೈವ್ ಸಂದರ್ಶನದಲ್ಲಿ ವಿವರವಾಗಿ ಮಾತನಾಡಿ ಪತ್ರಿಕೆಯ ಹಾಗೂ ವೀಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

► ಹಲವು ಹಿರಿಯ ನಾಯಕರನ್ನು ಹಿಂದಿಕ್ಕಿ ಈ ಬಾರಿ ಲೋಕಸಭಾ ಟಿಕೆಟ್ ಪಡೆದಿದ್ದೀರಿ. ಅವರನ್ನೆಲ್ಲಾ ಒಟ್ಟಿಗೆ ತೆಗೆದುಕೊಂಡು ಹೋಗುವ ಸವಾಲನ್ನು ಹೇಗೆ ನಿಭಾಯಿಸುತ್ತೀರಿ?

ಕಾಂಗ್ರೆಸ್ ಕುಟುಂಬ ಸಂಪೂರ್ಣವಾಗಿ ನನ್ನ ಬೆಂಬಲಕ್ಕಿದೆ. ನಾನು ಟಿಕೆಟ್ ಆಕಾಂಕ್ಷಿಯಾಗಿ ದಿಲ್ಲಿಗೆ ಹೋಗಿಲ್ಲ. ಮಾ.23ರಂದು ನನಗೆ ದಿಲ್ಲಿಯಿಂದ ಕರೆಬಂತು. ನಾನು ಹೋದೆ. ಅಲ್ಲಿ ನೋಡಿದಾಗ ಜಿಲ್ಲೆಯ ಎಲ್ಲಾ ಪ್ರಮುಖ ಕಾಂಗ್ರೆಸ್ ಮುಖಂಡರು ಸೇರಿದ್ದರು. ಈ ಬಾರಿ ದ.ಕ. ಲೋಕಸಭಾ ಕ್ಷೇತ್ರದಲ್ಲಿ ಬದಲಾವಣೆಯಾಗಬೇಕು, ಮಿಥುನ್ ರೈಗೆ ಒಂದು ಅವಕಾಶ ಕೊಡಿ ಎಂದು ಅವರೇ ಸರ್ವಸಮ್ಮತವಾಗಿ ಹೇಳಿದರು. ಆ ಕಾರಣದಿಂದ ಅವರೆಲ್ಲರ ಸಮ್ಮತಿಯಿಂದಲೇ ನನಗೆ ಅವಕಾಶ ಲಭಿಸಿದೆ. ಯುವ ಕಾಂಗ್ರೆಸ್‌ನ ಕಾರ್ಯಕರ್ತನಾದ ನನ್ನ ಮೇಲೆ ಕಾಂಗ್ರೆಸ್ ಪಕ್ಷ ಇಟ್ಟಿರುವ ಜವಾಬ್ದಾರಿ ವಿಶ್ವಾಸಕ್ಕೆ ಧಕ್ಕೆಯಾಗ ದಂತೆ ಸಮರ್ಥವಾಗಿ ಕೆಲಸ ಮಾಡುತ್ತೇನೆ. ಈ ನಿಟ್ಟಿನಲ್ಲಿ ಕಾಂಗ್ರೆಸ್‌ನ ಎಲ್ಲಾ ಮುಖಂಡರು, ಕಾರ್ಯಕರ್ತರು ನನಗೆ ಬೆಂಬಲಿ ಸುತ್ತಾರೆ ಎನ್ನುವ ವಿಶ್ವಾಸವಿದೆ. ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ನಾನು ಭೇಟಿ ನೀಡಿದ್ದೇನೆ. ಅಲ್ಲಿನ ಎಲ್ಲ ಕ್ಷೇತ್ರಗಳ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ನನಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ರಮಾನಾಥ ರೈಯಂತಹ ಹಿರಿಯ ನಾಯಕರು ದಿನವಿಡೀ ನನ್ನ ಜೊತೆ ಪ್ರಚಾರ ಮಾಡುತ್ತಿದ್ದಾರೆ.

► ದ.ಕ. ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಅಲ್ಲಿ ಬಿಜೆಪಿಯನ್ನು ಸೋಲಿಸಲು ನಿಮಗೆ ಅನುಭವ ಸಾಲದು, ಪಕ್ಷದ ಸಂಘಟನಾ ಶಕ್ತಿಯೂ ಬಲಯುತವಾಗಿಲ್ಲ ಎನ್ನುವ ಅಭಿಪ್ರಾಯವಿದೆ. ಈ ಬಗ್ಗೆ ಏನು ಹೇಳುತ್ತೀರಿ?

ದ.ಕ. ಜಿಲ್ಲೆ ಬಿಜೆಪಿಯ ಭದ್ರಕೋಟೆ ಎಂದು ನನಗನಿಸುವುದಿಲ್ಲ. ನಳಿನ್ ಕುಮಾರ್ ಕಟೀಲು ಅವರು ಮೋದಿಯ ಹೆಸರು ಹೇಳಿಕೊಂಡು ಎರಡು ಚುನಾವಣೆಗಳಲ್ಲಿ ಜಯ ಗಳಿಸಿದ್ದಾರೆ. 10 ವರ್ಷಗಳಿಂದ ಸಂಸದರಾಗಿರುವ ಅವರು ಅವರ ಪಕ್ಷವೇ ಅಧಿಕಾರದಲ್ಲಿದ್ದರೂ ಜಿಲ್ಲೆಯ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ಇದು ಸಂಸದರ ವೈಫಲ್ಯ ಮತ್ತು ಮೋದಿ ಹೆಸರಲ್ಲಿ ಮತ ಕೇಳುವುದು ಜಿಲ್ಲೆಗೆ ಕಳಂಕ ತರುವ ಕೆಲಸ. ಅವರು ಲೋಕಸಭಾ ಸದಸ್ಯನಾಗಿ ತಮ್ಮ ಹೆಸರಿನಿಂದ ಸ್ವಾಭಿಮಾನದಿಂದ ಮತ ಕೇಳಬೇಕಾಗಿತ್ತು. ನಾನು ಈ ಜಿಲ್ಲೆಯ ಮಗನಾಗಿ ನನಗೆ ಮತ ನೀಡಿ ಎಂದು ಜನರ ಬಳಿ ಮತಕೇಳುತ್ತಿದ್ದೇನೆ.

► ನೀವು ಪಕ್ಷ ಸಂಘಟನೆಗಿಂತ ವೈಯಕ್ತಿಕ ವರ್ಚಸ್ಸಿನ ರಾಜಕೀಯ ಮಾಡುತ್ತಾ ಬಂದವರು ಎಂಬ ಅಭಿಪ್ರಾಯವಿದೆ. ಲೋಕ ಸಭೆಯ ಚುನಾವಣೆ ಎದುರಿಸಲು ಇದರಿಂದ ಸಾಧ್ಯವೇ?

ರಾಜಕೀಯವಾಗಿ ಕಾಂಗ್ರೆಸ್ ಪಕ್ಷ ಈ ಹಿಂದೆ ನನಗೆ ನೀಡಿದ ಜವಾಬ್ದಾರಿಗಳನ್ನು ನಾನು ಸಮರ್ಥವಾಗಿ ನಿಭಾಯಿಸಿದ್ದೇನೆ. ನಾನು ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಪಕ್ಷದ ಸಂಘಟನೆಯ ಕೆಲಸವನ್ನು ಸಮರ್ಥವಾಗಿ ಮಾಡಿದ್ದೇನೆ. ಜಿಲ್ಲೆಯ ಎಲ್ಲಾ ಕಡೆ ಸಂಘಟನೆಯ ಕೆಲಸ ಮಾಡಿದ್ದೇನೆ. ವೈಯಕ್ತಿಕವಾಗಿ ನನ್ನ ವೈದ್ಯ ಕುಟುಂಬ ಜಿಲ್ಲೆಯಲ್ಲಿ ಖ್ಯಾತಿ ಪಡೆದಿದೆ. ಕಡೆಂಜದ ನೋವು ನಿವಾರಕ ಎಣ್ಣೆ ತಯಾರು ಮಾಡುತ್ತಿದ್ದ ನನ್ನ ಮುತ್ತಜ್ಜನ ಹೆಸರಿನ ಮೂಲಕ ಜನ ನನ್ನನ್ನು ಗುರುತಿಸಿದ್ದಾರೆ. ನನ್ನ ತಂದೆ ಡಾ.ಮಹಾಬಲ ರೈಯವರು ಖ್ಯಾತ ವೈದ್ಯರು ನನ್ನ ಸಹೋದರರಾದ ಡಾ.ಮಯೂರ್ ರೈ, ಡಾ.ಮನೀಶ್ ರೈಯವರೂ ಖ್ಯಾತ ವೈದ್ಯರು. ನಾನು ಈ ಜಿಲ್ಲೆಯ ಶ್ರೀಮಂತ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸಲು ಪ್ರಯತ್ನಿಸುತ್ತಾ ಬಂದಿದ್ದೇನೆ. ಪಿಲಿನಲಿಕೆ, ಕಂಬಳ ಕ್ರೀಡೆಯನ್ನು ಬೆಳೆಸಲು ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಅದರೊಂದಿಗೆ ಯುವಜನರಿಗೆ ಕಲಾವಿದರಿಗೆ ಪ್ರೋತ್ಸಾಹ ನೀಡಿದ್ದೇನೆ. ಅವರನ್ನು ಸಂಘಟಿಸುವ ಕೆಲಸ ಮಾಡುತ್ತಾ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ದಿಲ್ಲಿಯ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಪಿಲಿನಲಿಕೆಯನ್ನು ವಿಶ್ವಕ್ಕೆ ಪರಿಚಯಿಸುವ ಗುರಿ ನನಗಿದೆ. ಇವೆಲ್ಲವನ್ನೂ ನೋಡಿ ನನಗೆ ಈ ಬಾರಿ ಅವಕಾಶ ನೀಡಿದ್ದಾರೆ.

► ದ.ಕ. ಜಿಲ್ಲೆಯಲ್ಲಿ ಬಿಜೆಪಿಯನ್ನು ಏಕೆ ಸೋಲಿಸಬೇಕು ಎಂದು ನೀವು ಹೇಳುತ್ತೀರಿ?

ಬಿಜೆಪಿಯಿಂದ ಆಯ್ಕೆಯಾದ ಸಂಸದರ ಇಚ್ಛಾ ಶಕ್ತಿಯ ಕೊರತೆಯಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದೆ. ಇಷ್ಟು ಶ್ರೀಮಂತ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಸುವಲ್ಲಿಯೂ ವಿಫಲವಾಗಿದ್ದಾರೆ. ಜಿಲ್ಲೆಯಲ್ಲಿ 156 ಪ್ರಥಮ ದರ್ಜೆ ಕಾಲೇಜುಗಳಿವೆ. 13 ಇಂಜಿನಿಯರಿಂಗ್ ಕಾಲೇಜುಗಳು, 7 ಮೆಡಿಕಲ್ ಕಾಲೇಜುಗಳಿವೆ. ಒಂದೇ ಕಿಮೀ ವ್ಯಾಪ್ತಿಯಲ್ಲಿ ಮೂರು ವೈದ್ಯಕೀಯ ಕಾಲೇಜು ಇರುವ ಕ್ಷೇತ್ರ ನಮ್ಮದು. ಇಂತಹ ಜಿಲ್ಲೆಯಲ್ಲಿ ಕಲಿತ ಯುವಜನರು ಉದ್ಯೋಗಕ್ಕಾಗಿ ಬೇರೆ ಕಡೆ ಹೋಗಬೇಕಾದ ಪರಿಸ್ಥಿತಿ ಇದೆ. ಇಲ್ಲಿನ ಯುವಕರು ಮಾದಕ ದ್ರವ್ಯ ಮೊದಲಾದ ದುಶ್ಚಟಕ್ಕೆ ಬಲಿ ಬೀಳಲು ನಿರುದ್ಯೋಗ ಒಂದು ಕಾರಣ. ಇಲ್ಲಿನ ಜನರ ಆದಾಯ ಹೆಚ್ಚಿಸುವ ಯಾವುದೇ ಕೆಲಸ ಆಗ್ತಾ ಇಲ್ಲ. ಸಂಸದರು ಇಲ್ಲಿನ ಸಮಸ್ಯೆಗಳ ಬಗ್ಗೆ ಗಮನಹರಿಸುತ್ತಿಲ್ಲ. ಸಿಆರ್‌ಝೆಡ್ ನಿಯಮಾವಳಿಯನ್ನು ಸಡಿಲಿಸಲು ಯಾವುದೇ ಪ್ರಯತ್ನ ಮಾಡಿಲ್ಲ. ಪರಿಣಾಮವಾಗಿ ಇಲ್ಲಿನ ಅಭಿವೃದ್ಧಿ ಕುಂಠಿತವಾಗಿದೆ. ಇಲ್ಲಿನ ಜನರು ದೊಡ್ಡ ಮನಸ್ಸಿನವರು. ಅವರು ಎಲ್ಲ ಧರ್ಮ, ಜಾತಿಗಳ ರಾಜಕಾರಣಿಗಳಿಗೆ ಅವಕಾಶ ಕೊಟ್ಟಿದ್ದಾರೆ. ಆದರೆ ತಪ್ಪುಮಾಡಿದಾಗ ಪಾಠ ಕಳಿಸಿದ್ದಾರೆ. ಹಾಗಾಗಿ ಈ ಬಾರಿ ಅವರು ಬದಲಾವಣೆ ಬಯಸಿದ್ದಾರೆ.

► ಮೋದಿ ಅಲೆಯಿಂದ ನಳಿನ್ ಕುಮಾರ್ ಗೆಲ್ಲಬಹುದು ಎಂಬ ಅಭಿಪ್ರಾಯವಿದೆ ಈ ಬಗ್ಗೆ ನಿಮ್ಮ ಅಭಿಪ್ರಾಯ?

ಈ ಹೇಳಿಕೆಯಲ್ಲೇ ಸಂಸದರ ವೈಫಲ್ಯವನ್ನು ಗುರುತಿಸಬಹುದು. ಆದರೆ ಈ ಬಾರಿ ಇದು ನಡೆಯುವುದಿಲ್ಲ. ಕರಾವಳಿಯ ಜನರ ಸ್ವಾಭಿಮಾನದ ಅಲೆಯ ಮುಂದೆ ಈ ಬಾರಿ ಮೋದಿ ಅಲೆ ಸೋಲುತ್ತದೆ.

► ಯಾವ ಭರವಸೆಗಳ ಆಧಾರದಲ್ಲಿ ನೀವು ಈ ಬಾರಿ ಜನರ ಬಳಿ ಮತಯಾಚಿಸುತ್ತೀರಿ?

ಜಿಲ್ಲೆಯ ಜನರು ಯಾರಿಗೂ ತಲೆಬಾಗದೆ ಸ್ವಾಭಿಮಾನದಿಂದ ಬದುಕುವ ರೀತಿ, ಸಾಕಷ್ಟು ಉದ್ಯೋಗವಕಾಶವನ್ನು ಸೃಷ್ಟಿಸುವುದು ನನ್ನ ಮೊದಲ ಆದ್ಯತೆ. ಸೌರ್ಹಾದವನ್ನು ಉಳಿಸುವುದು ನಮ್ಮ ಇನ್ನೊಂದು ಮುಖ್ಯ ಗುರಿ. ಜಿಲ್ಲೆಯಲ್ಲಿ ಅಮಾಯಕರ ನಡುವೆ ಜಾತಿ ವೈಷಮ್ಯವನ್ನು ಬಿತ್ತಿ ಲಾಭ ಪಡೆಯುವ ಕೆಲಸ ನಡೆಯುತ್ತಿದೆ. ಇದನ್ನು ತಪ್ಪಿಸಿ ಎಲ್ಲಾ ಜನರು ಒಗ್ಗಟ್ಟಿನಿಂದ ಬದುಕುವಂತೆ ಮಾಡುವುದು ಜನರಲ್ಲಿ ಭಯದ ವಾತಾವರಣ ತಪ್ಪಿಸಿ ಸೌರ್ಹಾದ ವಾತಾವರಣವನ್ನು ನಿರ್ಮಿಸಲು ಪ್ರಯತ್ನಿಸುತ್ತೇನೆ. ಎಲ್ಲ ವರ್ಗಗಳ ಕಾರ್ಮಿಕರಿಗೆ, ದುಡಿ ಯುವ ವರ್ಗಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸುವ ಯೋಜನೆ ಇದೆ.

► ಬಿಲ್ಲವರು, ಬಂಟರು, ಮೊಗವೀರರು ಬಿಜೆಪಿ ಕಡೆಗೆ ಹೆಚ್ಚಿನ ಒಲವು ಹೊಂದಿದ್ದಾರೆ ಎನ್ನುವ ಅಭಿಪ್ರಾಯವಿದೆ. ಅವರನ್ನು ಹೇಗೆ ಸೆಳೆಯುತ್ತೀರಿ?

ನಾನು ಸರ್ವ ಧರ್ಮಗಳನ್ನು ಗೌರವಿಸುವ ವ್ಯಕ್ತಿ. ನನ್ನ ಧರ್ಮವನ್ನು ಅನುಸರಿಸುತ್ತಾ ಇತರರ ಧರ್ಮವನ್ನು ಗೌರವಿಸುವುದು ನಮ್ಮ ಹಿರಿಯದಿಂದ ನನಗೆ ಬಂದ ಸಂಸ್ಕೃತಿ. ನಾರಾಯಣ ಗುರುಗಳು, ಪೈಗಂಬರರು, ಏಸು ಕ್ರಿಸ್ತರು ಎಲ್ಲರೂ ನೀಡಿದ ಸಂದೇಶವನ್ನು ಪಾಲಿಸುತ್ತೇನೆೆ. ಆದರೆ ಇಲ್ಲಿನ ಸಂಸದರು ಜಿಲ್ಲೆಗೆ ಬೆಂಕಿ ಹಚ್ಚುವ ಮಾತುಗಳನ್ನು ಆಡುತ್ತಾರೆ. ಕೇಸರಿ ಬಣ್ಣವನ್ನು ಭಯ ಹುಟ್ಟಿಸಲು ಬಳಸುತ್ತಾರೆ. ನಾವು ಕೇಸರಿಯನ್ನು ಸೌರ್ಹಾದದ ಒಗ್ಗಟ್ಟಿನ ಸಂಕೇತವಾಗಿ ಏಕತೆಯ ಸಂಕೇತವಾಗಿ ಬಳಸುತ್ತೇವೆ. ಸತ್ಯಜಿತ್ ಸುರತ್ಕಲ್‌ರಂತಹ ಬಿಲ್ಲವ ಸಮುದಾಯದ ಯುವಕರನ್ನು ಕೋಮು ಗಲಭೆಗೆ ಬಳಸಿಕೊಂಡು ಚುನಾವಣೆಯ ಸಂದರ್ಭ ಅವರನ್ನು ಮೂಲೆ ಗುಂಪು ಮಾಡಿದ್ದಾರೆ. ಇದನ್ನು ಜನರು ತಿಳಿದುಕೊಂಡಿದ್ದಾರೆ.

► ನೀವು ಮೃದು ಹಿಂದುತ್ವ ಮೂಲಕ ಹಿಂದೂಗಳ ಮತೆ ಸೆಳೆಯಲು ಹೊರಟಿದ್ದೀರಿ. ನಿಮ್ಮ ಜಾತ್ಯತೀತ ನಿಲುವಿನ ಬಗ್ಗೆ ಸಂಶಯವಿದೆ ಎಂಬ ಮಾತು ಕೇಳಿಬರುತ್ತಿದೆ?

ನನ್ನ ಮನೆಯಲ್ಲಿ ನನಗೆ ಕಲಿಸಿದ ಹಿಂದುತ್ವವನ್ನು ನಾನು ಅನುಸರಿ ಸುತ್ತಿದ್ದೇನೆ. ಅದನ್ನು ಬೀದಿಗೆ ತರುವುದಿಲ್ಲ. ನಾನು ಗೋವು ಸಾಕುವವರಿಗೆ ಗೋವು ದಾನ ಮಾಡಿದ್ದೇನೆ. ದಸರಾ ಸಂದರ್ಭದಲ್ಲಿ 9 ದಿನ ಉಪವಾಸ ಮಾಡುತ್ತೇನೆ. ಬರಿಗಾಲಲ್ಲಿ ಮಂಗಳೂರಿನಿಂದ ಕಟೀಲಿಗೆ ಪಾದಯಾತ್ರೆ ಮಾಡುತ್ತೇನೆ. ದೀಪಾವಳಿ, ರಮಝಾನ್, ಕ್ರಿಸ್‌ಮಸ್ ಸಂದರ್ಭದಲ್ಲಿ ಅವರ ಜೊತೆ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತೇನೆ. ನನ್ನಲ್ಲಿರುವುದು ಎಲ್ಲಾ ಧರ್ಮಗಳನ್ನು ಗೌರವಿಸುವ ಹಿಂದುತ್ವ.

► ಎಸ್‌ಡಿಪಿಐ ಸ್ಪರ್ಧೆಯಿಂದ ಅಲ್ಪಸಂಖ್ಯಾತರ ಮತ ವಿಭಜನೆ ಯಾಗುತ್ತದೆ ಎನ್ನುವ ಅಭಿಪ್ರಾಯವಿದೆ ಈ ಬಗ್ಗೆ?

ನಾವು ಯಾವುದೇ ಮತೀಯವಾದಿ ಪಕ್ಷ ಸಂಘಟನೆಯನ್ನು ಬೆಂಬಲಿಸುತ್ತಿಲ್ಲ. ಎಲ್ಲಾ ಮತೀಯ ಸಂಘಟನೆಗಳನ್ನು ಖಂಡಿಸುತ್ತೇವೆ. ಬಿಜೆಪಿ ಲಾಭಗಳಿಸಲು ಈ ತಂತ್ರಗಾರಿಕೆಯಲ್ಲಿ ತೊಡಗಿದೆ. ಇದಕ್ಕಾಗಿಯೇ ಎಸ್‌ಡಿಪಿಐಯನ್ನು ಸ್ಪರ್ಧೆಗೆ ಇಳಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಯು.ಟಿ.ಖಾದರ್ ವಿರುದ್ಧ ಹಲವಾರು ಮುಸ್ಲಿಂ ಅಭ್ಯರ್ಥಿಗಳನ್ನು ನಿಲ್ಲಿಸಿದ್ದರೂ ಖಾದರ್ ಜಯಗಳಿಸಿದ್ದಾರೆ. ಇದನ್ನು ಗಮನಿಸಿದಾಗ ನಮ್ಮ ಮೇಲೆ ವಿಶ್ವಾಸ ಇರುವ ಮುಸ್ಲಿಂ ಸಮುದಾಯ ಈ ಬಾರಿಯೂ ನಮ್ಮನ್ನು ಬೆಂಬಲಿಸುತ್ತಾರೆ ಎನ್ನುವ ವಿಶ್ವಾಸವಿದೆ.

► ಎಂಆರ್‌ಪಿಎಲ್‌ನಂತಹ ಕಂಪೆನಿಗಳಿಂದ ಸ್ಥಳೀಯರಿಗೆ ಆಗುತ್ತಿ ರುವ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ದೂರಿದೆ. ನೀವು ಆಯ್ಕೆಯಾದರೆ ಈ ಬಗ್ಗೆ ಏನು ಮಾಡುತ್ತೀರಿ?

ಜಿಲ್ಲೆಯ ಜನರಿಗೆ ಉದ್ಯೋಗ ದೊರೆಯುವಂತಹ ಪರಿಸರಕ್ಕೆ ಹಾನಿಯಾಗದಂತಹ ಕೈಗಾರಿಕೆಗಳ ಸ್ಥಾಪನೆಗೆ ನಮ್ಮ ಮೊದಲ ಆದ್ಯತೆ.

► ಬೂತ್ ಮಟ್ಟದಲ್ಲಿ ಬಿಜೆಪಿ ಸಂಘಟನೆಯನ್ನು ಎದುರಿಸಲು ಹೇಗೆ ಸಿದ್ಧತೆ ನಡೆಸಿದ್ದೀರಿ?

ಕ್ಷೇತ್ರದಲ್ಲಿ ಒಟ್ಟು 1,860ಬೂತ್‌ಗಳಿವೆ. ಎಲ್ಲಾ ಕಡೆ ಪ್ರಚಾರ ಹಾಗೂ ಚುನಾವಣಾ ತಯಾರಿ ಕೆಲಸ ಚೆನ್ನಾಗಿ ನಡೆಯುತ್ತಿದೆ. ಸಂಘಟನಾತ್ಮಕ ತಂತ್ರಗಾರಿಕೆಯಲ್ಲಿ ಅವರಿಗಿಂತ ಒಂದು ಹೆಜ್ಜೆ ನಾವೇ ಮುಂದೆ ಇದ್ದೇವೆ.

► ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯದಲ್ಲಿ ಬಿಜೆಪಿ ಸಂಘಟನೆ ಬಲಿಷ್ಠವಾಗಿದೆ. ಅಲ್ಲಿ ಮತದಾರರನ್ನು ಸೆಳೆಯಲು ಏನು ಮಾಡುತ್ತೀರಿ?

ಬೆಳ್ತಂಗಡಿ, ಪುತ್ತೂರು, ಸುಳ್ಯದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿರುವ ಸ್ವಾಭಿಮಾನಿ ರೈತರಿಗೆ ಕೇಂದ್ರ ಸರಕಾರ ಮೋಸ ಮಾಡಿದೆ. ಅಡಿಕೆ, ರಬ್ಬರ್, ಹಸಿಮೆಣಸು ಬೆಳೆಗಾರರಿಗೆ ಕೇಂದ್ರ ತೊಂದರೆ ನೀಡಿದೆ. ಗುಜರಾತ್‌ನ ಧಣಿಗಳಿಗೆ ಲಾಭ ಮಾಡಲು ನಮ್ಮ ರೈತರಿಗೆ ಮೋಸ ಮಾಡಲಾಗಿದೆ. ಸಿಪಿಸಿಆರ್‌ಐಯನ್ನು ಹೈದರಾಬಾದ್‌ಗೆ ವರ್ಗಾಯಿಸಲಾಗುತ್ತಿದೆ. ಇದಕ್ಕೆ ಆ ಭಾಗದ ಜನರು ತಕ್ಕ ಪಾಠವನ್ನು ಬಿಜೆಪಿಗೆ ಕಲಿಸಲಿದ್ದಾರೆ.

ವೀಕ್ಷಕರ ಪ್ರಶ್ನೆಗಳಿಗೆ ಉತ್ತರ

ನಿತಿನ್ ಬೆಳುವಾಯಿ: ನೀವು ನಾರಾಯಣ ಗುರುಗಳ ಹೆಸರಲ್ಲಿ ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಲು ಕ್ರಮ ಕೈಗೊಳ್ಳುತ್ತೀರಾ?

ನನಗೆ ನಾರಾಯಣ ಗುರುಗಳ ಬಗ್ಗೆ ಅಪಾರ ಗೌರವ. ಅವರ ಆದರ್ಶವನ್ನು ಪಾಲಿಸುವವನು ನಾನು. ಅವರ ಹೆಸರಲ್ಲಿ ಮಂಗಳೂರಿನಲ್ಲಿ ಬೃಹತ್ ಜನೋಪಯೋಗಿ ಯೋಜನೆಯೊಂದನ್ನು ಮಾಡಬೇಕು ಎಂದು ನನಗೂ ಬಯಕೆಯಿದೆ. ಈ ಬಗ್ಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ.

ಸುಧೀರ್ ಪೂಜಾರಿ: ಜಿಲ್ಲೆಯಲ್ಲಿರುವ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಯಾವ ಕ್ರಮ ಕೈಗೊಳ್ಳುತ್ತೀರಿ?

ಇದರಲ್ಲಿ ನಮ್ಮ ಹಾಲಿ ಸಂಸದರ ವೈಫಲ್ಯವಿದೆ. ಇಲ್ಲಿರುವ ವಿಶೇಷ ಆರ್ಥಿಕ ವಲಯದಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವಲ್ಲಿ ಅವರು ವಿಫಲವಾಗಿದ್ದಾರೆ. ಈ ಊರಿನ ಮಕ್ಕಳು ಇಲ್ಲೇ ಇದ್ದು ರೂಪಿಸಿಕೊಳ್ಳಬೇಕು ಎಂಬುದು ನನ್ನ ಗುರಿ. ಇದಕ್ಕಾಗಿ ಇಲ್ಲಿ ಅಟೊಮೊಬೈಲ್ ತಯಾರಿಕಾ ಕಾರ್ಖಾನೆಗಳು, ಬಿಪಿಒಗಳು, ಐಟಿ ಕಂಪೆನಿಗಳನ್ನು ತರಲು ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ.

ಆ್ಯಂಟನಿ ಡಿಸೋಜ: ಮಂಗಳೂರಿನಲ್ಲಿ ಮೂಲಭೂತ ಸೌಲಭ್ಯ ಹೆಚ್ಚಿಸಲು ಏನು ಮಾಡುತ್ತೀರಿ? ಸಮುದ್ರದ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸಲು ಪ್ರಯತ್ನ ಮಾಡುತ್ತೀರಾ?

ಮಂಗಳೂರಿಗೆ ಹೊಸ ದೃಷ್ಟಿಕೋನದೊಂದಿಗೆ ಗತ ವೈಭವ ಮರುಕಳಿಸುವಂತೆ ಮಾಡುವುದು ನನ್ನ ಗುರಿ. ಈ ನಗರವನ್ನು ಅಭಿವೃದ್ಧಿ ಶೀಲ ನಗರದಿಂದ ಅಭಿವೃದ್ಧಿ ಆಗಿರುವ ನಗರವಾಗಿ ಪರಿವರ್ತಿಸಲು ಬದ್ಧನಾಗಿದ್ದೇನೆ. ಸಮುದ್ರದ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸಲು ಮಾತ್ರವಲ್ಲ ಅದರಿಂದ ವಿದ್ಯುತ್ ಉತ್ಪಾದಿಸುವ ನಿಟ್ಟಿನಲ್ಲೂ ತಜ್ಞರ ಅಭಿಪ್ರಾಯ ಪಡೆದು, ಅತ್ಯಾಧುನಿಕ ತಂತ್ರಜ್ಞಾನ ಬಳಸುವ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗುತ್ತೇನೆ.

ಅಬೂಬಕರ್ ನವಾಝ್: ಕೋಮು ಹಿಂಸಾಚಾರ ತಡೆಯಲು, ಸೌಹಾರ್ದ ಬೆಳೆಸಲು ನೀವು ಏನು ಮಾಡುತ್ತೀರಿ?

ಕೋಮು ಹಿಂಸಾಚಾರದಲ್ಲಿ ತೊಡಗುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಸೂಕ್ತ ಕಾನೂನು ಕ್ರಮ ಕೈ ಗೊಳ್ಳಬೇಕಾಗಿದೆ. ಇಲ್ಲಿನ ಜನರು ಒಳ್ಳೆಯವರು. ಅವರ ನಡುವೆ ಹುಳಿ ಹಿಂಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ. ಇದರಿಂದ ನನಗೆ ರಾಜಕೀಯವಾಗಿ ಹಿನ್ನಡೆ ಆದರೂ ಪರವಾಗಿಲ್ಲ.

ಅನ್ವರ್: ಜಿಲ್ಲೆಯಲ್ಲಿ ಮರಳು ಮಾಫಿಯಾಕ್ಕೆ ನಿಮ್ಮ ಪಕ್ಷ ಬೆಂಬಲಿಸುತ್ತಿದೆ. ಇದರಿಂದ ಜನರಿಗೆ ಮರಳು ಸಿಗುತ್ತಿಲ್ಲ ಎಂಬ ದೂರಿದೆ?

ಮರಳು ಮಾಫಿಯಾಕ್ಕೆ ಪಕ್ಷ ಭೇದವಿಲ್ಲ. ನಮ್ಮ ಪಕ್ಷಕ್ಕೂ ಅದಕ್ಕೂ ಸಂಬಂಧವಿಲ್ಲ. ಸಾಧ್ಯವಾದರೆ ನಮಗೆ ಬಡವರಿಗೆ ಉಚಿತ ಮರಳು ಒದಗಿಸುವ ಬಯಕೆ ಇದೆ. ಇದಕ್ಕಾಗಿ ವಿಶೇಷ ಕಾನೂನು ರೂಪಿಸಲು ಪ್ರಯತ್ನಿಸುತ್ತೇನೆ.

ಶೇಖ್ ಫಾರೂಕ್: ನೀವು ಸಂಸದರಾದರೆ ಪಂಪ್‌ವೆಲ್ ಫ್ಲೈ ಓವರ್ ಯಾವಾಗ ಪೂರ್ಣಗೊಳಿಸುತ್ತೀರಿ?

ನಾನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಅದನ್ನು ಪೂರ್ಣಗೊಳಿಸಲು ಆದ್ಯತೆಯ ನೆಲೆಯಲ್ಲಿ ಪ್ರಯತ್ನಿಸುತ್ತೇನೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top