ಬಿಜೆಪಿ ನೇತಾನ ನೆತ್ತಿಯ ಮೇಲೆ ಕೂರುವನೇ ಬೇಗುಸರಾಯ್ ಕಾ ಬೇಟಾ ? | Vartha Bharati- ವಾರ್ತಾ ಭಾರತಿ

---

ಬಿಜೆಪಿ ನೇತಾನ ನೆತ್ತಿಯ ಮೇಲೆ ಕೂರುವನೇ ಬೇಗುಸರಾಯ್ ಕಾ ಬೇಟಾ ?

ವಾರಣಾಸಿ, ಅಮೇಠಿ, ವಯನಾಡ್‌ಗಳಷ್ಟೇ ದೇಶಾದ್ಯಂತ ಚರ್ಚೆಯಲ್ಲಿರುವ ಬಿಹಾರದ ಈ ಕ್ಷೇತ್ರದಲ್ಲಿ ಮೂರು ದಿನ ‘ವಾರ್ತಾಭಾರತಿ’ಯ ಪ್ರಧಾನ ಸಂಪಾದಕರ ನೇತೃತ್ವದ ತಂಡ ಕಂಡದ್ದು ಇಲ್ಲಿದೆ.

ಬಿಹಾರದ ರಾಜಧಾನಿ ಪಾಟ್ನಾದಿಂದ ಸುಮಾರು 125 ಕಿ.ಮೀ. ದೂರದಲ್ಲಿದೆ ಬೇಗುಸರಾಯ್. ಅಲ್ಲಿರುವ ಒಂದು ಗ್ರಾಮದ ಹೆಸರು ಬಿಹಟ್. ಈ ಪುಟ್ಟ ಗ್ರಾಮ ಇಂದು ಇಡೀ ದೇಶ ಮಾತ್ರವಲ್ಲ, ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಲ್ಲಿದೆ. ದೇಶದ ವಿವಿಧೆಡೆಗಳಿಂದ ಮಾತ್ರವಲ್ಲದೆ ಪಕ್ಕದ ನೇಪಾಳದಿಂದಲೂ ವಿದ್ಯಾರ್ಥಿಗಳು, ಸಾಮಾಜಿಕ ಕಾರ್ಯಕರ್ತರು, ನಟನಟಿಯರು, ರಂಗ ಕಲಾವಿದರು, ಸೆಲೆಬ್ರಿಟಿಗಳು, ಬರಹಗಾರರು, ದೇಶ ವಿದೇಶಗಳ ಎಲ್ಲ ಪ್ರಮುಖ ಮಾಧ್ಯಮಗಳ ಖ್ಯಾತನಾಮ ಸಂಪಾದಕರು, ಇನ್ನೂ ಹಲವು ರಂಗಗಳಲ್ಲಿರುವ ಉತ್ಸಾಹಿ ಯುವಜನರು ಸಾವಿರ ಸಾವಿರ ಸಂಖ್ಯೆಯಲ್ಲಿ ಬಂದಿಳಿಯುತ್ತಿದ್ದಾರೆ. ಯೂಟ್ಯೂಬ್, ಫೇಸ್‌ಬುಕ್, ವಾಟ್ಸ್‌ಆ್ಯಪ್, ಟ್ವಿಟರ್ ತುಂಬೆಲ್ಲಾ ಈ ಗ್ರಾಮದ್ದೇ ವೀಡಿಯೊಗಳು. ಇವರೆಲ್ಲರ ಪಾಲಿನ ಆಕರ್ಷಣೆಯ ಕೇಂದ್ರಬಿಂದು 32 ವರ್ಷದ ಯುವಕ ಕನ್ಹಯ್ಯಾ ಕುಮಾರ್. ಸದ್ಯ ಲೋಕಸಭಾ ಚುನಾವಣೆಯಲ್ಲಿ ಬೇಗುಸರಾಯ್ ಕ್ಷೇತ್ರದಲ್ಲಿ ಸಿಪಿಐ ಪಕ್ಷದ ಅಭ್ಯರ್ಥಿ.

ನಾವು ಶನಿವಾರ ಮುಂಜಾನೆ 7 ಗಂಟೆಯೊಳಗೆ ಕನ್ಹಯ್ಯಾರ ಮನೆ ತಲುಪುವಾಗಲೇ ಅಲ್ಲಿ ಜನಜಂಗುಳಿ. ಹಿಂದಿನ ರಾತ್ರಿ ಕನ್ಹಯ್ಯಾ ಪ್ರಚಾರ ಮುಗಿಸಿ ಮನೆ ತಲುಪುವಾಗ 2 ಗಂಟೆ ಕಳೆದಿದೆ. ಬೆಳ್ಳಂಬೆಳಗ್ಗೆಯೇ ಮತ್ತೆ ಜನರ ನಡುವೆ ಹೋಗಲು ತಯಾರಾಗಿ ಮನೆಯಿಂದ ಕನ್ಹಯ್ಯಾ ಹೊರಬಿದ್ದರು.

ಕನ್ಹಯ್ಯಾರನ್ನು ಕಂಡ ಕೂಡಲೇ ಹಿಂಡು ಹಿಂಡು ಜನ. ಊರಿನ ಹಿರಿಯರು, ಕಿರಿಯರು ಜೊತೆಗೆ ಕನ್ಹಯ್ಯಾರನ್ನು ನೋಡಲು, ಮಾತನಾಡಿಸಲು, ಶುಭ ಹಾರೈಸಲು ಮತ್ತು ಕನ್ಹಯ್ಯಾ ಪರ ಪ್ರಚಾರದಲ್ಲಿ ಕೈಜೋಡಿಸಲು ಎಲ್ಲೆಲ್ಲಿಂದಲೋ ಸ್ವಯಂಪ್ರೇರಿತರಾಗಿ ಬಂದ ಜನರು. ಅದರಲ್ಲೂ ಯುವಜನರ ಸಂಖ್ಯೆಯೇ ಹೆಚ್ಚು. ಬಿಡುವಿಲ್ಲದ, ನಿದ್ದೆಯಿಲ್ಲದ ನಿರಂತರ ಪ್ರಚಾರದ ಸುಸ್ತು ಕನ್ಹಯ್ಯಾ ಮುಖದಲ್ಲಿ ಎದ್ದು ಕಾಣುತ್ತಿತ್ತು. ಆದರೆ ಚುನಾವಣಾ ಅಖಾಡದಲ್ಲಿ ಗೆದ್ದು ಬರಲು ಇದೆಲ್ಲವನ್ನೂ ಮೀರಿ ಮುನ್ನುಗ್ಗಬೇಕು ಎಂಬ ಛಲ, ವಿಶ್ವಾಸ ಹಾಗೂ ಹುರುಪು ಕೂಡ ಈ ಯುವಕನಲ್ಲಿ ತುಂಬಿ ತುಳುಕುತ್ತಿತ್ತು. ಹಾಗಾಗಿ ದೇಹದ ದಣಿವು ಹಾಗೂ ತಾನು ಸ್ವೀಕರಿಸಿರುವ ಬೃಹತ್ ಸವಾಲು-ಇವೆರಡೂ ಈ ಯುವ ನಾಯಕನ ಪುಟಿಯುವ ಉತ್ಸಾಹಕ್ಕೆ ಯಾವ ಭಂಗವನ್ನೂ ತಂದಿಲ್ಲ ಎಂಬುದು ಸ್ಪಷ್ಟವಾಗಿತ್ತು.

ಕೆಲವರಿಗೆ ಕನ್ಹಯ್ಯಾ ಅದ್ಭುತ ಮಾತುಗಾರ, ಇನ್ನು ಕೆಲವರಿಗೆ ಬೇಗುಸರಾಯ್ ಹಾಗೂ ಬಿಹಟ್ ಹೆಸರನ್ನು ‘ಫೇಮಸ್’ ಮಾಡಿದ ಹೀರೊ, ಇನ್ನು ಕೆಲವರಿಗೆ ಈತ ನಾಳೆ ಮೋದಿಗೆ ಸಡ್ಡು ಹೊಡೆದು ನಿಲ್ಲುವ ಭವಿಷ್ಯದ ನಾಯಕ, ಇನ್ನು ಕೆಲವರಿಗೆ ಆತ ಬಿಹಾರದ ದಿಕ್ಕು ಬದಲಿಸಬಲ್ಲ ತಾಕತ್ತಿರುವ ಮಾಸ್ ಲೀಡರ್, ಇನ್ನು ಕೆಲವರಿಗೆ ಆತ ಯೂಟ್ಯೂಬ್ ಸೆನ್ಸೇಷನ್...

ಹೀಗೆ ಕನ್ಹಯ್ಯಾನಿಗಾಗಿ ಪಾಟ್ನಾಕ್ಕೆ ಬಂದು, ಅಲ್ಲಿಂದ ಬೇಗುಸರಾಯ್‌ಗೆ ತಲುಪಿ ಅಲ್ಲಿಂದ ಮತ್ತೆ ಬಿಹಟ್‌ಗೆ ಪ್ರಯಾಣಿಸಲು ಒಬ್ಬೊಬ್ಬರಿಗೂ ಒಂದೊಂದು ಕಾರಣ. ಕನ್ಹಯ್ಯಾನ ಗೆಲುವಿನಲ್ಲಿ ನನ್ನದೊಂದು ಪುಟ್ಟ ಕಾಣಿಕೆ ಹೇಗಾದರೂ ಇರಲಿ ಎಂದು ಬಂದವರೇ ಅದೆಷ್ಟೋ ಜನ, ದ್ವೇಷ ಭಾಷಣ ಮಾಡುವ ಗಿರಿರಾಜ್ ಸಿಂಗ್‌ರನ್ನ ಸೋಲಿಸುವುದಕ್ಕಾಗಿ ಕನ್ಹಯ್ಯಾ ಗೆಲ್ಲಲೇಬೇಕು ಎಂದು ಸಹಕರಿಸಲು ಬಂದವರು ದೊಡ್ಡ ಸಂಖ್ಯೆಯಲ್ಲಿದ್ದರೆ ರಾಜಕೀಯ ಎಲ್ಲ ಇರಲಿ, ಕನ್ಹಯ್ಯಾನನ್ನು ಒಮ್ಮೆ ನೋಡಿ, ಆತನ ಭಾಷಣವನ್ನೊಮ್ಮೆ ಲೈವ್ ಆಗಿ ಕೇಳಿ ಹೋಗೋಣ ಎಂದು ಬಂದವರೂ ಇಲ್ಲಿದ್ದಾರೆ. ಅವರಿಗೆ ಒಮ್ಮೆ ಕನ್ಹಯ್ಯಾನನ್ನು ನೋಡಿ, ಮಾತಾಡಿಸಿ, ಫೋಟೊ ತೆಗೆಸಿಕೊಂಡು ಹೋಗಬೇಕು ಅಷ್ಟೇ. ಹೀಗೆ ಈಗ ಬೇಗುಸರಾಯ್ ಮತ್ತು ಬಿಹಟ್ ಇಡೀ ದೇಶದ ಗಮನ ಸೆಳೆದ ಲೋಕಸಭಾ ಕ್ಷೇತ್ರ ಮಾತ್ರವಲ್ಲ, ತಾತ್ಕಾಲಿಕ ಪ್ರವಾಸಿ ತಾಣವಾಗಿಯೂ ಮಾರ್ಪಟ್ಟಿದೆ.

ಮನೆಯಿಂದ ಪ್ರಚಾರಕ್ಕೆ ದೂರದ ಊರುಗಳಿಗೆ ಹೊರಡುವ ಮೊದಲು ಕನ್ಹಯ್ಯಾ ತನ್ನ ಪ್ರಚಾರದ ಉಸ್ತುವಾರಿ ಹೊತ್ತ ತಂಡದ ಜೊತೆ ಚರ್ಚಿಸಬೇಕು. ಅದರ ಜೊತೆಗೆ ಭೇಟಿಯಾಗಲು ಬಂದವರನ್ನು ಮಾತಾಡಿಸಬೇಕು. ಅವುಗಳ ನಡುವೆಯೇ ಅಲ್ಲಿದ್ದವರಿಗೆ ಮನೆಯವರು ಮತ್ತು ಕಾರ್ಯಕರ್ತರು ಪೂರಿ ಬಾಜಿಯ ಬೆಳಗ್ಗಿನ ಉಪಾಹಾರ ನೀಡುತ್ತಾರೆ. ಕನ್ಹಯ್ಯಾನ ತಾಯಿ ಮೀನಾದೇವಿ ಅಂಗನವಾಡಿ ಶಿಕ್ಷಕಿ. ಇಬ್ಬರು ಸೋದರರು - ಒಬ್ಬ ಹಿರಿಯ, ಒಬ್ಬ ಕಿರಿಯ. ಒಬ್ಬ ಸೋದರಿ. ಕನ್ಹಯ್ಯಾರ ತಂದೆ ಇತ್ತೀಚಿಗೆ ನಿಧನರಾಗಿದ್ದಾರೆ.

ಕನ್ಹಯ್ಯಾ ಇದೇ ವರ್ಷದ ಫೆಬ್ರವರಿಯಲ್ಲಿ ಜವಾಹರ ಲಾಲ್ ವಿವಿಯಲ್ಲಿ ಆಫ್ರಿಕನ್ ಅಧ್ಯಯನದಲ್ಲಿ ಪಿಎಚ್‌ಡಿ ಅಧ್ಯಯನ ಪೂರ್ಣಗೊಳಿಸಿದರು. ಈಗ ಅವರು ಡಾ. ಕನ್ಹಯ್ಯಾ ಕುಮಾರ್. ಸಾಮಾನ್ಯವಾಗಿ ಜೆಎನ್‌ಯುನಂತಹ ಪ್ರತಿಷ್ಠಿತ ವಿವಿಯಿಂದ ಡಾಕ್ಟರೇಟ್ ಪಡೆದ ಬಳಿಕ ಯಾವುದೇ ವಿವಿಯಲ್ಲಿ ಅಧ್ಯಾಪಕ ವೃತ್ತಿ ಕೈಬೀಸಿ ಕರೆಯುತ್ತದೆ ಅಥವಾ ಶೈಕ್ಷಣಿಕ ರಂಗದಲ್ಲಿ ಇನ್ನೂ ಹಲವಾರು ಅವಕಾಶಗಳು ತೆರೆದುಕೊಳ್ಳುತ್ತವೆ. ಆದರೆ ಇದು ಸಾಮಾನ್ಯ ಸಂದರ್ಭವೂ ಅಲ್ಲ, ಕನ್ಹಯ್ಯಾ ಸಾಮಾನ್ಯ ಪಿಎಚ್‌ಡಿ ಪದವೀಧರನೂ ಅಲ್ಲ. 2016ರಲ್ಲಿ ನಡೆದ ಜೆಎನ್‌ಯು ವಿವಾದ ಇಂದು ಕನ್ಹಯ್ಯಾ ರನ್ನು ದೇಶದ ಉದ್ದಗಲಕ್ಕೆ ಪರಿಚಯಿಸಿದೆ. ಹಾಗಾಗಿ ಇಂದು ಕನ್ಹಯ್ಯಾ ಪ್ರಧಾನಿ ಸಹಿತ ಆಡಳಿತ ಪಕ್ಷ ಮತ್ತು ವಿಪಕ್ಷಗಳೂ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರುವ ಲೋಕಸಭಾ ಚುನಾವಣಾ ಅಭ್ಯರ್ಥಿ. ಹಾಗಾಗಿಯೇ ಬೇಗುಸರಾಯ್ ಇಂದು ದೇಶದ ಪ್ರಮುಖ ಸ್ಟಾರ್ ಕ್ಷೇತ್ರಗಳಲ್ಲಿ ಒಂದು.

ಎಪ್ರಿಲ್ 29ರಂದು ಮತದಾನ ನಡೆಯಲಿರುವ ಬೇಗುಸರಾಯ್ ಸಿಪಿಐ ಸಂಘಟನೆ ಬಲಿಷ್ಠವಾಗಿ ಬೇರೂರಿರುವ ಕ್ಷೇತ್ರವೇ. ಕಳೆದ ಲೋಕಸಭಾ ಚುನಾವಣೆಯಲ್ಲಿ ಇಲ್ಲಿ ಸಿಪಿಐ ಅಭ್ಯರ್ಥಿ 1,92,639 ಮತ ಪಡೆದಿದ್ದಾರೆ. ಆದರೆ ಕ್ಷೇತ್ರದಲ್ಲಿರುವ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚಿನವುಗಳಲ್ಲಿ ಈ ಹಿಂದೆ ಸಿಪಿಐ ಅಭ್ಯರ್ಥಿಗಳು ಹಲವು ಬಾರಿ ಗೆದ್ದಿದ್ದರೂ ಈಗ ಪಕ್ಷದ ಶಾಸಕರಿಲ್ಲ. 1967ರಲ್ಲಿ ಇಲ್ಲಿಂದ ಸಿಪಿಐ ಪಕ್ಷದ ಯೋಗೇಂದ್ರ ಶರ್ಮ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಸದ್ಯಕ್ಕೆ ಮೂರು ಕ್ಷೇತ್ರಗಳಲ್ಲಿ ಆರ್‌ಜೆಡಿ ಶಾಸಕರಿದ್ದರೆ ತಲಾ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಯು ಶಾಸಕರಿದ್ದಾರೆ. ಕ್ಷೇತ್ರದಲ್ಲಿ ಪಕ್ಷದ ಶಾಸಕರಿದ್ದರೆ ಲೋಕಸಭಾ ಚುನಾವಣೆಗೆ ಬಲ ಬರುತ್ತದೆ. ಆದರೆ ಇಲ್ಲಿ ಸಿಪಿಐ ಶಾಸಕರು ಒಬ್ಬರೂ ಇಲ್ಲದಿದ್ದರೂ ಪಕ್ಷದ ಚುನಾವಣಾ ಪ್ರಚಾರ ಹಾಗೂ ಸಂಘಟನೆಯಲ್ಲಿ ಯಾವುದೇ ಕೊರತೆ ಕಂಡುಬರುತ್ತಿಲ್ಲ. ಬದಲಾಗಿ ಈ ಬಾರಿ ಪಕ್ಷದ ಸ್ಥಳೀಯ ನಾಯಕರು, ವಿಶೇಷವಾಗಿ ಯುವ ಕಾರ್ಯಕರ್ತರು ಭಾರೀ ಹುಮ್ಮಸ್ಸಿನಿಂದ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಕನ್ಹಯ್ಯಾ!

ಕನ್ಹಯ್ಯಾ ಅಭ್ಯರ್ಥಿಯಾಗಿದ್ದೇ ಇಡೀ ಕ್ಷೇತ್ರದ ಚುನಾವಣಾ ಅಖಾಡದ ಚಿತ್ರಣವೇ ಬದಲಾಗಿದೆ. ಕ್ಷೇತ್ರದ ಹೆಸರು ದೇಶದೆಲ್ಲೆಡೆ ಮನೆ ಮಾತಾಗಿದೆ. ಮಾತ್ರವಲ್ಲ, ಕ್ಷೇತ್ರದೊಳಗೂ ಕನ್ಹಯ್ಯಾ ಹವಾ ಸೃಷ್ಟಿಯಾಗಿದೆ. ಇನ್ನೂ ಪಕ್ಕದ ಮನೆ ಹುಡುಗನಂತೆ ಕಾಣುವ, ಅದೇ ರೀತಿ ಎಲ್ಲರೊಡನೆ ವ್ಯವಹರಿಸುವ ಆದರೆ ದೇಶದೆಲ್ಲೆಡೆ ತನ್ನ ಅದ್ಭುತ ಮಾತುಗಾರಿಕೆಯಿಂದ ಜನರನ್ನು ಸೆಳೆಯುತ್ತಿರುವ ಕನ್ಹಯ್ಯಾ ನಮ್ಮ ಅಭ್ಯರ್ಥಿ ಎಂಬುದೇ ಇಲ್ಲಿ ಪಕ್ಷದ ವಿಶ್ವಾಸ ಹಲವು ಪಟ್ಟು ಹೆಚ್ಚಲು ಕಾರಣವಾಗಿದೆ. ಜೊತೆಗೆ ಕನ್ಹಯ್ಯಾಗಾಗಿ ಎಲ್ಲೆಡೆಯಿಂದ ಖ್ಯಾತನಾಮರು ಸ್ವಯಂಪ್ರೇರಿತರಾಗಿ ಬಂದು ಇಲ್ಲಿ ಪ್ರಚಾರ ನಡೆಸುತ್ತಿ ರುವುದು ಚುನಾವಣಾ ಕಣದ ರಂಗೇರಿಸಿದೆ. ನಮ್ಮ ಹುಡುಗನಲ್ಲಿ ಏನೋ ವಿಶೇಷ ಇದೆ ಎಂಬುದು ಇಲ್ಲಿನ ಜನರಿಗೆ ಅರಿವಾಗಿದೆ. ಹಾಗಾಗಿ ಈ ಬಾರಿ ಬೇಗುಸರಾಯ್‌ಯಲ್ಲಿ ತೀವ್ರ ಜಿದ್ದಾಜಿದ್ದಿಯ ಹೋರಾಟ ಖಚಿತವಾಗಿದೆ.

ಬೇರೆ ಕಡೆಗಳಂತೆ ಇಲ್ಲೂ ಕ್ಷೇತ್ರದ ಜಾತಿ ಸಮೀಕರಣ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ಈ ಬಾರಿ ವಹಿಸಲಿದೆಯೇ ಎಂಬುದು ಫಲಿತಾಂಶವನ್ನು ನಿರ್ಧರಿಸಲಿದೆ. ಕನ್ಹಯ್ಯಾ ಹಾಗೂ ಇಲ್ಲಿನ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಇಬ್ಬರೂ ಮೇಲ್ವರ್ಗದ ಭೂಮಿಹಾರ್ ಜಾತಿಗೆ ಸೇರಿದವರು.

ಸುಮಾರು 4.5 ಲಕ್ಷ ಭೂಮಿಹಾರ್ ಮತದಾರರು ಇಲ್ಲಿದ್ದಾರೆ. ಜೊತೆಗೆ ಸುಮಾರು ಎರಡೂವರೆ ಲಕ್ಷ ಮುಸ್ಲಿಮ್, ಸುಮಾರು ಒಂದು ಲಕ್ಷ ಯಾದವ ಹಾಗೂ ಇನ್ನೊಂದು ಲಕ್ಷ ತೀವ್ರ ಹಿಂದುಳಿದ ಜಾತಿಗಳ ಮತದಾರರಿದ್ದಾರೆ. ಈ ಪೈಕಿ ಭೂಮಿಹಾರರು ಪ್ರಬಲ ಬಿಜೆಪಿ ಬೆಂಬಲಿಗರು ಎಂದೇ ಗುರುತಿಸಲ್ಪಟ್ಟವರು. ಕ್ಷೇತ್ರದಲ್ಲಿರುವ ಇನ್ನೋರ್ವ ಪ್ರಮುಖ ಅಭ್ಯರ್ಥಿ ಆರ್‌ಜೆಡಿ ಪಕ್ಷದಿಂದ ಕಳೆದ ಬಾರಿ ಎರಡನೇ ಸ್ಥಾನ ಪಡೆದಿದ್ದ ಮುಸ್ಲಿಮ್ ಸಮುದಾಯದ ತನ್ವೀರ್ ಹಸನ್.

ಕಳೆದ ಬಾರಿ ಇಲ್ಲಿಂದ ಬಿಜೆಪಿಯ ಡಾ. ಬೋಲಾ ಸಿಂಗ್ 60 ಸಾವಿರ ಮತಗಳ ಅಂತರದಿಂದ ತನ್ವೀರ್ ಹಸನ್‌ರನ್ನು ಸೋಲಿಸಿದ್ದರು. ಬದಲಾದ ರಾಜಕೀಯ ಲೆಕ್ಕಾಚಾರದಲ್ಲಿ ನವಾಡದಿಂದ ಕಳೆದ ಬಾರಿ ಗೆದ್ದಿದ್ದ ಗಿರಿರಾಜ್‌ರನ್ನು ಈ ಬಾರಿ ಬಿಜೆಪಿ ಇಲ್ಲಿಂದ ಕಣಕ್ಕಿಳಿಸಿದೆ. ಈಗ ಭೂಮಿಹಾರರು ಯಾವ ಕಡೆ ವಾಲುತ್ತಾರೆ ಎಂಬುದು ಬೇಗುಸರಾಯ್‌ಯಲ್ಲಿ ಎಲ್ಲೆಡೆ ಕೇಳಿ ಬರುತ್ತಿರುವ ಪ್ರಶ್ನೆ. ಭೂಮಿಹಾರರು ತನ್ನ ಕೈಬಿಡುವುದಿಲ್ಲ ಆದರೆ ಮುಸ್ಲಿಮರು ಮತ್ತು ಇತರರ ಮತಗಳು ಕನ್ಹಯ್ಯಾ, ತನ್ವೀರ್ ನಡುವೆ ವಿಭಜನೆಯಾಗಿ ಗೆಲ್ಲಬಹುದು ಎಂಬ ಅಂದಾಜಿನಲ್ಲಿ ಬಿಜೆಪಿಯ ಗಿರಿರಾಜ್ ಸಿಂಗ್ ಇದ್ದಾರೆ. ಭೂಮಿಹಾರರ ಮತಗಳು ಗಿರಿರಾಜ್ ಮತ್ತು ಕನ್ಹಯ್ಯಾ ನಡುವೆ ವಿಭಜನೆಯಾಗಿ ತಾನೇ ಗೆಲ್ಲುವ ಸಾಧ್ಯತೆ ಬಗ್ಗೆ ತನ್ವೀರ್ ಆಶಾಭಾವನೆಯಲ್ಲಿದ್ದಾರೆ.

ಇನ್ನು ಇಲ್ಲಿನ ಮುಸ್ಲಿಮರಿಗೆ ಕನ್ಹಯ್ಯಾ ಮೇಲೆ ಆಸೆ, ತನ್ವೀರ್ ಮೇಲೆ ಪ್ರೀತಿ ಎಂಬಂತಹ ವಾತಾವರಣ. ತೀವ್ರವಾಗಿ ಬೆಳೆಯುತ್ತಿರುವ ಕೋಮುವಾದವನ್ನು ಕನ್ಹಯ್ಯಾ ಸಮರ್ಥವಾಗಿ ಎದುರಿಸುತ್ತಾರೆ ಎಂಬ ಭಾವನೆ ಒಂದು ಕಡೆಯಾದರೆ, ಕೊನೆಗೆ ತಮ್ಮ ಮತ ವಿಭಜನೆಯಾಗಿ ‘ದ್ವೇಷ ಕಾರುವ’ ಗಿರಿರಾಜ್ ಗೆಲುವಿಗೆ ತಾವೇ ಸಹಕರಿಸಿದಂತಾಗಬಹುದೇ ಎಂಬ ಆತಂಕ. ಇದು ಮುಸ್ಲಿಮರಿಗೆ ಸದ್ಯಕ್ಕೆ ದೇಶದ ಬೇರೆ ಕಡೆಗಳಲ್ಲೂ ಇರುವ ಸಮಸ್ಯೆಯೇ. ಆದರೆ ಮುಸ್ಲಿಮರಲ್ಲಿ ಈಗಾಗಲೇ ಖ್ಯಾತರಾಗಿರುವ ಕನ್ಹಯ್ಯಾ ಈಗ ಅವರು ಮತ ನೀಡುವಂತೆ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ.

ನೀವು ನನನ್ನ ಬೆಂಬಲಿಸಿ. ಗೆದ್ದರೂ ಗೆಲ್ಲದಿದ್ದರೂ ಅವರಿಗೆ (ಬಿಜೆಪಿ) ಅವರಜ್ಜಿಯನ್ನು ನೆನಪಿಸುವ ಹಾಗೆ ಕೆಲಸ ಮಾಡುತ್ತೇನೆ. ಮುಸ್ಲಿಮರು ಮುಸ್ಲಿಮರಿಗೇ ಮತ ಹಾಕುತ್ತಾರೆ ಎಂಬ ಅಪಪ್ರಚಾರವನ್ನು ನೀವು ಸೋಲಿಸಿ. ನನಗೆ ಮತ ನೀಡಿದರೆ ಬಿಜೆಪಿ ಗೆಲ್ಲುತ್ತದೆ ಎಂದು ಹೇಳಲಾಗುತ್ತಿದೆ. ಹಾಗೆ ಆಗಲು ಇವಿಎಂ ಸರಿ ಕೆಲಸ ಮಾಡುತ್ತಿಲ್ಲವೇ ? ಬೇರೇನೂ ಆಗದಿದ್ದರೂ ನಿಮ್ಮ ಸಂಕಟದ ಸಮಯದಲ್ಲಿ ನಿಮ್ಮ ಜೊತೆ ನಾನಿರುತ್ತೇನೆ. ಅವರ (ಬಿಜೆಪಿ) ವಿರುದ್ಧ ಮಾತಾಡುತ್ತೇನೆ. ಈ ಬಾರಿ ಬೇಗುಸರಾಯ್‌ಯಲ್ಲಿ ಸ್ಥಳೀಯ ಹುಡುಗನನ್ನೇ ಗೆಲ್ಲಿಸಲು ಜನ ಪಣತೊಟ್ಟಿದ್ದಾರೆ. ನೇತಾ ಬೇಡ, ಬೇಟಾ (ಮಗ) ಬೇಕು ಎಂದು ಎಲ್ಲ ಕಡೆ ಜನರು ಹೇಳುತ್ತಿದ್ದಾರೆ. ನೀವು ಬಿಜೆಪಿಯವರ ಪ್ರಚೋದನೆಗೆ ಬಲಿಯಾಗಬೇಡಿ. ಶಾಂತವಾಗಿರಿ ಮತ್ತು ಎಪ್ರಿಲ್ 29ರಂದು ಕಳೆದ ಐದು ವರ್ಷಗಳ ದೌರ್ಜನ್ಯದ ವಿರುದ್ಧ ಮತ ಚಲಾಯಿಸಿ ಎಂದು ವಿನಂತಿಸುವ ಕನ್ಹಯ್ಯಾ, ಆಕಸ್ಮಿಕವೆಂದರೆ ಇವಿಎಂನಲ್ಲಿ ನಾನು ಗಿರಿರಾಜ್ ಸಿಂಗ್‌ರ ನೆತ್ತಿಯ ಮೇಲೆ ಕೂತು ಬಿಟ್ಟಿದ್ದೇನೆ (ಇವಿಎಂನಲ್ಲಿ ಕನ್ಹಯ್ಯಾಗೆ ನಂ 1 ಸ್ಥಾನ ). ಇದನ್ನು ನಾನು ಮಾಡಿಲ್ಲ. ಚುನಾವಣಾ ಆಯೋಗವೇ ಮಾಡಿದೆ ಎಂದು ಮುಸ್ಲಿಮರಿಗೆ ಕನ್ಹಯ್ಯಾ ಹೇಳುತ್ತಿದ್ದಾರೆ. ತಮ್ಮೆದುರಿನ ಭರವಸೆಯ ಯುವ ನಾಯಕ ಮತ್ತು ಮುಸ್ಲಿಮ್ ಅಭ್ಯರ್ಥಿ - ಈ ದ್ವಂದ್ವವನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ.

ಆದರೆ ಕನ್ಹಯ್ಯಾ ಈ ಜಾತಿ ಸಮೀಕರಣಗಳನ್ನೆಲ್ಲಾ ಮೀರಿ ಎಲ್ಲ ಸಮುದಾಯಗಳಿಂದಲೂ ಮತ ಸೆಳೆಯುತ್ತಾರೆ ಎಂಬುದು ಸಿಪಿಐ ಮತ್ತು ಕನ್ಹಯ್ಯಾ ಬೆಂಬಲಿಗರ ಗಟ್ಟಿ ನಂಬಿಕೆ. ಇದಕ್ಕೆ ಇಂಬು ನೀಡುವಂತಹ ವಾತಾವರಣ ಕೂಡ ಕ್ಷೇತ್ರದೆಲ್ಲೆಡೆ ಕಂಡು ಬರುತ್ತಿರುವುದು ಸುಳ್ಳಲ್ಲ. ಎಲ್ಲ ಸಮುದಾಯಗಳ ಜನರಲ್ಲಿ ಅದರಲ್ಲೂ ವಿಶೇಷವಾಗಿ ಯುವ ಜನರಲ್ಲಿ ಕನ್ಹಯ್ಯಾ ಬಗ್ಗೆ ಜಾತಿಯನ್ನು ಮೀರಿದ ಅಭಿಮಾನ, ಪ್ರೀತಿ ಇರುವುದು ಸ್ಪಷ್ಟವಾಗಿ ಎದ್ದು ಕಾಣುತ್ತದೆ.

ಕನ್ಹಯ್ಯಾ ಪ್ರಚಾರಕ್ಕೆ ಹೊರಡುವಾಗ ಅವರ ಹಿಂದೆ ಮುಂದೆ ಕನಿಷ್ಠ ನೂರು ಬೈಕುಗಳಲ್ಲಿ ಹಾಗು ಇನ್ನೊಂದಿಷ್ಟು ಕಾರುಗಳಲ್ಲಿ ಯುವಜನರ ಹಿಂಡೇ ಇರುತ್ತದೆ. ಇವರೆಲ್ಲ ಸ್ವಯಂಪ್ರೇರಿತರಾಗಿ ಬರುತ್ತಿರುವ, ಪಾವತಿ ಪಡೆಯದ ಅಭಿಮಾನಿಗಳು, ಕಾರ್ಯಕರ್ತರು ಎಂಬುದು ಗಮನಿಸಬೇಕಾದ ಅಂಶ.

ಹೋದಲ್ಲೆಲ್ಲಾ ಕನ್ಹಯ್ಯಾರನ್ನು ಎಲ್ಲ ಸಮುದಾಯದ ಹಿರಿಯರು ಶುಭಕೋರಿ ಹರಸುವುದನ್ನು ನೋಡುವಾಗ ಹಿರಿಯರಲ್ಲೂ ಊರಿನ ಹುಡುಗ ಕನ್ಹಯ್ಯಾ ಬಗ್ಗೆ ಪ್ರೀತಿ, ಅಭಿಮಾನ ಇರುವುದು ಕಾಣುತ್ತದೆ. ಗಿರಿರಾಜ್ ಸಿಂಗ್ ಸ್ಥಳೀಯರಲ್ಲ ಎಂಬ ಅಂಶ ಕೂಡ ಇಲ್ಲಿ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಬೇಗುಸರಾಯ್‌ಯಲ್ಲಿರುವ ಕಮ್ಯುನಿಸ್ಟ್ ಸಂಘಟನೆ ಹಾಗೂ ಅದರಿಂದ ಇಲ್ಲಿನ ಜನರಲ್ಲಿರುವ ಒಟ್ಟಾರೆ ಜಾಗೃತಿ ಕೂಡ ಗಿರಿರಾಜ್‌ರ ಕೋಮು ಧ್ರುವೀಕರಣ ರಾಜಕಾರಣಕ್ಕೆ ದೊಡ್ಡ ಸವಾಲಾಗಿದೆ.

ಇನ್ನು ಕನ್ಹಯ್ಯಾ ಭೂಮಿಹಾರನಾದರೂ ಆತ ಧಾರ್ಮಿಕ ವಿಧಿವಿಧಾನಗಳನ್ನು ಪಾಲಿಸುವುದಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಇಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಕನ್ಹಯ್ಯಾ ತಂದೆ ನಿಧನರಾದಾಗ ಕೇಶ ಮುಂಡನ ಮಾಡಿಸಿಲ್ಲ ಎಂದು ಉದಾಹರಣೆ ಕೂಡ ಕೊಡುತ್ತಾರೆ. ಆದರೆ ಇದಕ್ಕೆ ತಿರುಗೇಟು ನೀಡಿರುವ ಕನ್ಹಯ್ಯಾ ನಾನು ಪುರೋಹಿತರ ಅಣತಿಯಂತೆ ಖರ್ಚು ವೆಚ್ಚ ಮಾಡುವ ಬದಲು ಆ ದುಡ್ಡನ್ನು ಬಡವರಿಗೆ ಕೊಟ್ಟು ದೇವರನ್ನು ಒಲಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಇಲ್ಲಿ ಅದೂ ಚರ್ಚೆಯ ವಿಷಯ.

ಇಲ್ಲಿನ ಕಮ್ಯುನಿಸ್ಟ್ ನಾಯಕರಲ್ಲಿ ಕನ್ಹಯ್ಯಾ ಗೆದ್ದೇ ಗೆಲ್ಲುತ್ತಾರೆ ಎಂಬ ತುಂಬು ವಿಶ್ವಾಸ ಇದೆ. ಅದಕ್ಕಾಗಿ ಪಕ್ಷದ ಕಾರ್ಯಕರ್ತರು ಹಾಗು ಕನ್ಹಯ್ಯಾರ ಜೆಎನ್‌ಯು ನಿಂದ ಬಂದಿರುವ ಹಾಗೂ ಇತರ ಮಿತ್ರರು ಇಲ್ಲಿನ ಸುಡುಬಿಸಿಲಿನಲ್ಲಿ ಸಾಕಷ್ಟು ಬೆವರು ಹರಿಸುತ್ತಲೂ ಇದ್ದಾರೆ. ಮಹಾಘಟಬಂಧನ್ ಕೊನೆ ಗಳಿಗೆಯಲ್ಲಿ ಕನ್ಹಯ್ಯಾರನ್ನು ಕೈಬಿಟ್ಟ ಬಗ್ಗೆ ಅವರಲ್ಲಿ ಸಿಟ್ಟಿದೆ. ಸ್ವತಃ ಲಾಲೂ ಅವರೇ ಕರೆದು ಇಲ್ಲಿಂದ ನೀನು ಸ್ಪರ್ಧಿಸು, ನಾನು ಬೆಂಬಲಿಸುತ್ತೇನೆ ಎಂದಿದ್ದರು. ಆದರೆ ಕನ್ಹಯ್ಯಾನ ವಯಸ್ಸಿನವರೇ ಆಗಿರುವ ಲಾಲು ಪುತ್ರ, ಮಾಜಿ ಡಿಸಿಎಂ ತೇಜಸ್ವಿ ಯಾದವ್ ನಾಳೆ ಎಲ್ಲಿ ಕನ್ಹಯ್ಯಾ ಬಿಹಾರದ ನಾಯಕನಾಗಿ ತನಗೆ ಪರ್ಯಾಯವಾಗಿ ಬೆಳೆದು ಬಿಡಬಹುದು ಎಂದು ಕನ್ಹಯ್ಯಾಗೆ ಬೆಂಬಲ ತಪ್ಪಿಸಿ, ತಮ್ಮ ಅಭ್ಯರ್ಥಿ ಹಾಕಿದರು ಎಂದು ಸ್ಥಳೀಯ ನಾಯಕರು ಹೇಳಿದರು.

ಜೊತೆಗೆ ಮುಖೇಶ್ ಅಂಬಾನಿ ಪುತ್ರಿಯ ವಿವಾಹಕ್ಕೆ ತೇಜಸ್ವಿ ಹೋಗಿದ್ದಾಗ ಕನ್ಹಯ್ಯಾಗೆ ಬೆಂಬಲ ನೀಡದಂತೆ ಅಂಬಾನಿ ಸಹಿತ ಇತರ ಕೆಲವು ಉದ್ಯಮಿಗಳು ತೇಜಸ್ವಿಯ ತಲೆ ತಿನ್ನುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಮಾತು ಕೂಡ ಇಲ್ಲಿನ ಸಿಪಿಐ ಮುಖಂಡರಿಂದ ಕೇಳಿಬಂತು. ಲಾಲು ಪುತ್ರನ ಈ ನಡೆಯಿಂದ ಅವರ ಪಕ್ಷದೊಳಗೇ ಕ್ಷೇತ್ರದಲ್ಲಿ ಅಸಮಾಧಾನ ಇದೆ ಎಂದೂ ಹೇಳಲಾಗುತ್ತಿದೆ. ಅದು ಕನ್ಹಯ್ಯಾಗೆ ಎಷ್ಟು ಪ್ರಯೋಜನ ಆಗಲಿದೆ ಎಂದು ಕಾದು ನೋಡಬೇಕು.

ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಒಲ್ಲದ ಮನಸ್ಸಿನಿಂದಲೇ ಇಲ್ಲಿಂದ ಕಣಕ್ಕಿಳಿದವರು. ಕಾರಣವೇ ಇಲ್ಲದೆ ಕ್ಷೇತ್ರ ಬದಲಾಯಿಸಿದರು ಎಂದು ಸಿಟ್ಟಾಗಿ ಕೂತಿದ್ದ ಗಿರಿರಾಜ್ ಪಕ್ಷ ಮನವೊಲಿಸಿದ ಬಳಿಕ ಎಂದಿನಂತೆ ದೇಶದ್ರೋಹಿ, ದೇಶಪ್ರೇಮಿ ಘೋಷಣೆಯ ಮೂಲಕವೇ ಪ್ರಚಾರ ಪ್ರಾರಂಭಿಸಿದ್ದಾರೆ.

ಕನ್ಹಯ್ಯಾರನ್ನು ಬೇಗುಸರಾಯ್‌ಯಲ್ಲಿ ಮಣಿಸುವುದು ಸುಲಭವಲ್ಲ ಎಂಬುದು ಗಿರಿರಾಜ್‌ಗೂ ಚೆನ್ನಾಗಿ ಗೊತ್ತಿದೆ. ಕಣಕ್ಕಿಳಿದ ಮೇಲೆ ಕ್ಷೇತ್ರದಲ್ಲಿರುವ ಕನ್ಹಯ್ಯಾ ಹವಾ ನೋಡಿ ಬಿಜೆಪಿ, ಗಿರಿರಾಜ್ ಬೆದರಿದ್ದಾರೆ ಎಂಬುದು ಸ್ಥಳೀಯ ಸಿಪಿಐ ಮುಖಂಡರ ಅನಿಸಿಕೆ. ಈಗಾಗಲೇ ಮೂರ್ನಾಲ್ಕು ಬಾರಿ ಕನ್ಹಯ್ಯಾ ಪ್ರಚಾರಕ್ಕೆ ತಡೆ ಒಡ್ಡಲು ಬಿಜೆಪಿ ಕಾರ್ಯಕರ್ತರು ಪ್ರಯತ್ನಿಸಿದ್ದಾರೆ. ಇತ್ತೀಚಿಗೆ ಕೊರೈ ಎಂಬ ಗ್ರಾಮದಲ್ಲಿ ಕನ್ಹಯ್ಯಾ ವಿರುದ್ಧ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು ಹಾಗೂ ಸಿಪಿಐ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಒಟ್ಟಾರೆ ತನ್ನ ಪ್ರಚೋದನಕಾರಿ ಹೇಳಿಕೆಗಳಿಂದಲೇ ಕಳೆದ ಐದು ವರ್ಷಗಳನ್ನು ಅಧಿಕಾರದಲ್ಲಿ ಕಳೆದಿರುವ ಗಿರಿರಾಜ್‌ಗೆ ಈಗ ಕನ್ಹಯ್ಯಾ ಸುಲಭದ ತುತ್ತಲ್ಲ ಎಂಬುದು ಸ್ಪಷ್ಟವಾಗಿದೆ. ಅದಕ್ಕಾಗಿ ತನ್ನ ಬತ್ತಳಿಕೆಯಲ್ಲಿರುವ ಒಂದೊಂದೇ ಬಾಣಗಳನ್ನು ಬಿಡುತ್ತಿದ್ದಾರೆ. ಈ ಇಬ್ಬರ ಅಬ್ಬರದ ನಡುವೆ ಆರ್‌ಜೆಡಿ ಅಭ್ಯರ್ಥಿ ತನ್ವೀರ್ ಹಸನ್ ದೊಡ್ಡ ಸದ್ದುಗದ್ದಲವಿಲ್ಲದೆ ತಮ್ಮಷ್ಟಕ್ಕೆ ಮತ ಸೆಳೆಯುವ ಪ್ರಯತ್ನದಲ್ಲಿ ಮುಳುಗಿದ್ದಾರೆ.

ಕನ್ಹಯ್ಯಾ ನಾಮಪತ್ರ ಸಲ್ಲಿಕೆಗೆ ದಿಲ್ಲಿ, ಮುಂಬೈನಿಂದ ಗಣ್ಯರ ದಂಡೇ ನೆರೆದಿತ್ತು. ಗುಜರಾತ್ ಶಾಸಕ ಹಾಗೂ ದಲಿತ ಮುಖಂಡ ಜಿಗ್ನೇಶ್ ಮೇವಾನಿ ಇಲ್ಲಿ ಎರಡೂ ವಾರಗಳ ಕಾಲ ಬಿರುಸಿನ ಪ್ರಚಾರ ನಡೆಸಿ ಹೋಗಿದ್ದಾರೆ. ತೀಸ್ಟಾ ಸೆಟಲ್ವಾಡ್, ನಟಿ ಸ್ವರಭಾಸ್ಕರ್ ಕೂಡ ಪ್ರಚಾರ ಮಾಡಿದ್ದಾರೆ. ಪ್ರಕಾಶ್‌ ರಾಜ್ ಅವರು ಕನ್ಹಯ್ಯಾ ಪರ ಐದಾರು ದಿನ ಪ್ರಚಾರ ಮಾಡಿದ್ದಾರೆ. ಈಗ ಖ್ಯಾತ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಅವರು ಕನ್ಹಯ್ಯಾ ಪರ ಊರೂರು ಸುತ್ತುತ್ತಿದ್ದಾರೆ. ಶಬನಾ ಆಝ್ಮಿ, ಜಾವೇದ್ ಅಖ್ತರ್ ಎರಡು ದಿನಗಳ ಪ್ರಚಾರಕ್ಕೆ ಮತ್ತು ಪ್ರಗತಿಪರರ ಮನವೊಲಿಸಲು ಬರುತ್ತಿದ್ದಾರೆ. ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಮಂಗಳವಾರ ಸಂಜೆ ನಡೆದ ಸಮಾವೇಶದಲ್ಲಿ ಕನ್ಹಯ್ಯಾಗೆ ಮತ ಯಾಚಿಸಿದ್ದಾರೆ. ಬಿಜೆಪಿಯಿಂದ ಅಮಿತ್ ಶಾ ಖುದ್ದು ಬರಲಿದ್ದಾರೆ.

ಇಲ್ಲಿ ಮತದಾನ ಎಷ್ಟು ಆಗಲಿದೆ ಎಂಬುದೂ ಬಹಳ ಮುಖ್ಯ. ವಿಶೇಷವಾಗಿ ಕನ್ಹಯ್ಯಾ ಪರ ಇರುವ ಕಾರ್ಮಿಕರು ಈ ಸುಡು ಬಿಸಿಲಿನಲ್ಲಿ ಎದ್ದು ಬಂದು ಮತದಾನ ಮಾಡುವುದೇ ದೊಡ್ಡ ಸವಾಲು. ಅತ್ಯಂತ ವ್ಯವಸ್ಥಿತವಾಗಿ ಹಾಗೂ ಅಷ್ಟೇ ಚಾಕಚಕ್ಯತೆಯಿಂದ ಪ್ರಚಾರ ನಡೆಸುತ್ತಿರುವ ಕನ್ಹಯ್ಯಾ ಅವರ ಪಕ್ಷ ಹಾಗೂ ಕಾರ್ಯಕರ್ತರು ಈ ನಿಟ್ಟಿನಲ್ಲಿ ಕೆಲಸ ಮಾಡದೇ ಇರಲಿಕ್ಕಿಲ್ಲ.

ಕನ್ಹಯ್ಯಾರ ತಾಯಿಯೂ ಸೆಲೆಬ್ರಿಟಿ !

ಕನ್ಹಯ್ಯಾರ ಊರಿಗೆ ಬಂದವರೆಲ್ಲರಿಗೂ ಕನ್ಹಯ್ಯಾರ ತಾಯಿಯನ್ನು ಕಂಡು ಮಾತನಾಡಿಸುವ ಆಸೆ. ತನ್ನ ಪಿಎಚ್‌ಡಿ ಥೀಸಿಸ್ ಅನ್ನು ಅಂಗನವಾಡಿಯಲ್ಲಿ ಶಿಕ್ಷಕಿಯಾಗಿರುವ ತಾಯಿಗೆ ಸಮರ್ಪಿಸಿದ ಕನ್ಹಯ್ಯಾರ ಫೋಟೊ ನೋಡಿದವರಿಗೆ ಇಂತಹ ‘ಭವಿಷ್ಯದ ನಾಯಕನನ್ನು’ ಬೆಳೆಸಿದ ಆ ತಾಯಿಯನ್ನು ನೋಡಬೇಕು ಎಂಬ ಬಯಕೆ. ಅವರನ್ನು ಕಂಡು, ಅವರ ಜೊತೆ ಫೋಟೋ ತೆಗೆಸಿಕೊಂಡು, ತಮ್ಮೂರಿನಿಂದ ತಂದ ಉಡುಗೊರೆಗಳನ್ನು ಕೊಡುವ ಉತ್ಸಾಹ ಜನರಿಗೆ. ಈಗ ಕನ್ಹಯ್ಯಾ ಮಾತ್ರವಲ್ಲ ಆತನ ತಾಯಿಯೂ ಇಲ್ಲಿ ಸೆಲೆಬ್ರಿಟಿ !

ದುಡ್ಡು ಬೇಡ, ಜನರಿಂದ ಬಂದಿದೆ 

ಕನ್ಹಯ್ಯಾರನ್ನು ನೋಡಲು, ಶುಭಕೋರಲು ಬರುವವರಲ್ಲಿ ಚುನಾವಣಾ ಪ್ರಚಾರದ ಖರ್ಚಿಗೆ ಹಣ ದೇಣಿಗೆ ನೀಡಲು ಹಲವರು ಮುಂದೆ ಬಂದರೂ ಕನ್ಹಯ್ಯಾರ ತಂಡ ಅದನ್ನು ಸ್ವೀಕರಿಸುತ್ತಿಲ್ಲ. ಕನ್ಹಯ್ಯಾ ಈಗಾಗಲೇ 'our democracy' ವೆಬ್ ತಾಣದ ಮೂಲಕ ಕೇವಲ ಏಳು ದಿನಗಳಲ್ಲೇ ಚುನಾವಣೆಯ ಗರಿಷ್ಠ ಖರ್ಚಿನ ಮಿತಿಯಾದ 70 ಲಕ್ಷ ರೂ. ಸಂಗ್ರಹಿಸಿದ್ದನ್ನು ತಿಳಿಸುವ ಆತನ ತಂಡದವರು ನಗದು ಕೊಡುಗೆಯನ್ನು ನಯವಾಗಿ ತಿರಸ್ಕರಿಸುತ್ತಾರೆ.

ಬಂದ ಎಪ್ಪತ್ತು ಲಕ್ಷಗಳಲ್ಲೂ ಒಬ್ಬರು ಮಾತ್ರ ಐದು ಲಕ್ಷ ರೂ. ಕೊಟ್ಟಿದ್ದರೆ ನೂರು, ಇನ್ನೂರು ರೂ.ಗಳಲ್ಲಿ ದೇಣಿಗೆ ಕಳಿಸಿದ ಜನರ ಸಂಖ್ಯೆಯೇ ಹೆಚ್ಚು ಎಂದು ಅವರು ಮಾಹಿತಿ ನೀಡಿದರು.

ಸಂಸದ ಮಾತ್ರವಲ್ಲ ಪ್ರಧಾನಿಯಾಗುತ್ತಾನೆ ... !

ಕನ್ಹಯ್ಯಾ ಸ್ವಗ್ರಾಮ ಬಿಹಟ್ ಹಾಗು ಬೀರ್ಪುರ, ಸಿಸೋನಿಯಾ ಸುತ್ತಮುತ್ತಲ ಗ್ರಾಮಗಳ ಜನರಲ್ಲಿ ಮಾತಾಡುವಾಗ ಕನ್ಹಯ್ಯಾ ಬಗ್ಗೆ ಅವರಲ್ಲಿ ಉತ್ಕಟ ಪ್ರೀತಿ ಹಾಗೂ ಅಷ್ಟೇ ನಿರೀಕ್ಷೆ ಇರುವುದು ಅವರ ಮುಖ ಭಾವದಲ್ಲೇ ಗೊತ್ತಾಗುತ್ತಿತ್ತು. ಈ ಹುಡುಗ ನಮಗಾಗಿ ಏನಾದರೂ ಖಂಡಿತ ಮಾಡುತ್ತಾನೆ ಎಂಬ ಸಣ್ಣ ಆಸೆಯಿಂದ ಹಿಡಿದು ಈತ ಸಾಮಾನ್ಯನಲ್ಲ. ಮೋದಿಗೇ ಸವಾಲು ಹಾಕಿದ್ದಾನೆ. ಮುಂದೆ ಈತ ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಹುದ್ದೆವರೆಗೂ ಹೋಗುತ್ತಾನೆ. ಬಿಹಾರಕ್ಕಾಗಿ ದೊಡ್ಡ ಕೆಲಸ ಮಾಡುತ್ತಾನೆ ಎಂದು ಕನ್ಹಯ್ಯಾ ಬಗ್ಗೆ ಭಾರೀ ಭರವಸೆ ವ್ಯಕ್ತಪಡಿಸುವವರೂ ಇಲ್ಲಿ ಕಮ್ಮಿಯಿಲ್ಲ.

ತನ್ವೀರ್ ಗೆದ್ದರೆ ಗಿರಿರಾಜ್‌ಗೆ ಸೋಲು, ಕನ್ಹಯ್ಯಾ ಗೆದ್ದರೆ ಮೋದಿಗೆ ಸೋಲು !

ಇದು ಬೇಗುಸರಾಯ್ ಉದ್ದಗಲಗಳಲ್ಲಿ ಕನ್ಹಯ್ಯಾ ನನ್ನ ಬೆಂಬಲಿಸುವವರು ಮತದಾರರಿಗೆ ಹೇಳುತ್ತಿರುವ ಮಾತು. ತನ್ನ ಪ್ರತಿಸ್ಪರ್ಧಿ ಗಿರಿರಾಜ್ ಸಿಂಗ್ ಬಗ್ಗೆ ಕನ್ಹಯ್ಯಾ ಹೇಳುತ್ತಿರುವುದು ಅವರು ನಾನ್ ಪರ್ಫಾರ್ಮಿಂಗ್ ಅಸೆಟ್ (ಪ್ರಯೋಜನಕ್ಕಿಲ್ಲದ ಸೊತ್ತು) ಎಂದು. ಸಾರ್ವಜನಿಕ ಸಂಸ್ಥೆಗಳು ಲಾಭ ತರದಿದ್ದರೆ ಅವುಗಳನ್ನು ಸರಕಾರ ಖಾಸಗಿಗೆ ಮಾರುತ್ತದೆ. ಆದರೆ ನಿಜವಾಗಿ ಈ ನಾನ್ ಪರ್ಫಾರ್ಮಿಂಗ್ ಅಸೆಟ್ (ನಾಯಕರು)ಗಳನ್ನು ನಾವು ಬದಲಾಯಿಸಬೇಕಾಗಿದೆ. ಅವರನ್ನು ಮಾರಲು ಸಾಧ್ಯವಿಲ್ಲ. ಏಕೆಂದರೆ ಅವರು ಈಗಾಗಲೇ ತಮ್ಮನ್ನು ಮಾರಿಕೊಂಡಿದ್ದಾರೆ !

ಬೇಗುಸರಾಯ್-ಪ್ರತಿಯೊಂದಕ್ಕೂ ಇಲ್ಲಿಂದ ವಲಸೆ ಹೋಗಬೇಕು

ಸುಮಾರು 30 ಲಕ್ಷ ಜನಸಂಖ್ಯೆ ಇರುವ ಈ ಕ್ಷೇತ್ರ ಸೌಲಭ್ಯಗಳ ದೃಷ್ಟಿಯಲ್ಲಿ ಇನ್ನೂ ಸಾಕಷ್ಟು ಹಿಂದುಳಿದಿದೆ. ಇಲ್ಲಿ ಇನ್ನೂ ಕೆಲವೆಡೆ ಸರಿಯಾದ ರಸ್ತೆಗಳೇ ಇಲ್ಲ. ಶುದ್ಧ ಕುಡಿಯುವ ನೀರು, ವಿದ್ಯುತ್ ಕೂಡ ಎಲ್ಲರಿಗೂ ಸಿಗುವ ಹಾಗೆ ಇಲ್ಲಿ ಕಾಣುತ್ತಿಲ್ಲ. ಆಧುನಿಕ ಸೌಲಭ್ಯಗಲಿರುವ ಆಸ್ಪತ್ರೆಗಳಲ್ಲ. ಕೃಷಿಯೇ ಇಲ್ಲಿನ ಜನರ ಮುಖ್ಯ ಆದಾಯ ಮೂಲ. ಅದರಲ್ಲೂ ಸಾಕಷ್ಟು ಸಮಸ್ಯೆಗಳಿವೆ. ಉನ್ನತ ಶಿಕ್ಷಣ ಸಂಸ್ಥೆಗಳೂ ಇಲ್ಲ. ಉದ್ಯೋಗಕ್ಕೆ ಮಾತ್ರವಲ್ಲ ಪ್ರತಿಯೊಂದಕ್ಕೂ ಇಲ್ಲಿಂದ ವಲಸೆ ಹೋಗಿಯೇ ಪಡೆಯಬೇಕಾದ ಪರಿಸ್ಥಿತಿ ಇಲ್ಲಿದೆ.

ಹಮಾರಾ ಬಚ್ಚಾ ... ಪರ ಮುಸ್ಲಿಮರು

ಬೇಗುಸರಾಯ್ ನ ವಿವಿಧ ಗ್ರಾಮಗಳಲ್ಲಿ ಮತದಾನದ ದಿನ ಸಮೀಪಿಸುತ್ತಿರುವಂತೆಯೇ ಮುಸ್ಲಿಮ್ ಸಮುದಾಯ ಕನ್ಹಯ್ಯಾ ಬಗ್ಗೆ ಒಲವು ತೋರುತ್ತಿರು ವುದು ಕಂಡುಬರುತ್ತಿದೆ.

ಕನ್ಹಯ್ಯಾರನ್ನು ‘ಹಮಾರಾ ಬಚ್ಚಾ.. (ನಮ್ಮ ಮಗು)’ ಎಂದೇ ಸಂಬೋಧಿಸುವ ಮುಸ್ಲಿಂ ಹಿರಿಯರು ಆರ್‌ಜೆಡಿ ಅಭ್ಯರ್ಥಿ ಮುಸ್ಲಿಮ್ ಆಗಿರಬಹುದು. ಆದರೆ ನಮಗೆ ನ್ಯಾಯದ ಪರ, ಅನ್ಯಾಯದ ವಿರುದ್ಧ ಗಟ್ಟಿ ದನಿಯಲ್ಲಿ ಮಾತಾಡುವ ನಾಯಕರು ಇಂದು ಬಹಳ ಅಗತ್ಯ. ಆ ನಿಟ್ಟಿನಲ್ಲಿ ನಾವು ಕೇವಲ ಸಮುದಾಯ ನೋಡಿ ಮತ ಚಲಾಯಿಸಲಾಗದು ಎಂದು ಹೇಳುತ್ತಾರೆ.

ಬಿಹಾರದಲ್ಲಿ ಮಹಾಘಟ್‌ ಬಂಧನವನ್ನು ಬೆಂಬಲಿಸುವ ವಿವಿಧ ಮುಸ್ಲಿಮ್ ಸಂಘಟನೆಗಳ ಪ್ರಮುಖ ನಾಯಕರೂ ಕನ್ಹಯ್ಯಾರನ್ನು ಬೆಂಬಲಿಸುವಂತೆ ಸಮುದಾಯಕ್ಕೆ ಪರೋಕ್ಷ ಕರೆ ನೀಡಿದ್ದಾರೆ ಎಂಬ ಮಾತು ಕೇಳಿಬಂತು. ಇನ್ನು ಈಗಾಗಲೇ ಮುಸ್ಲಿಮ್ ಸಂಸದರು ಕಡಿಮೆ ಇದ್ದಾರೆ, ಹಾಗಾಗಿ ನಾವು ಇಲ್ಲಿ ಇರುವ ಮುಸ್ಲಿಮ್ ಅಭ್ಯರ್ಥಿಯನ್ನು ಬೆಂಬಲಿಸದಿದ್ದರೆ ಹೇಗೆ ? ನಿನ್ನೆ ಮೊನ್ನೆ ಬಂದ ಯೂಟ್ಯೂಬ್ ಸ್ಟಾರ್ ಅನ್ನು ನಂಬುವುದು ಹೇಗೆ ? ಎಂದು ಕೇಳುವವರಿಗೆ ನಾವು ಎಲ್ಲ ಮುಸ್ಲಿಮರು ಮತ ಹಾಕಿದರೂ ಈ ಬಾರಿ ತನ್ವೀರ್ ಹಸನ್ ಗೆಲ್ಲುವುದಿಲ್ಲ. ಹಾಗಿರುವಾಗ ಇರುವ ಸಮರ್ಥ ಅಭ್ಯರ್ಥಿಯನ್ನು ಬೆಂಬಲಸುವುದೇ ಜಾಣ ನಡೆ ಎಂದು ತಿದ್ದುವವರೂ ಮುಸ್ಲಿಮರಲ್ಲೇ ಇದ್ದಾರೆ.

''ಕ್ಷೇತ್ರದಲ್ಲಿ ನಮಗೆ ಜನರ ಅದ್ಭುತ ಬೆಂಬಲ ನೋಡಿ ಬಿಜೆಪಿ ಕಂಗಾಲಾಗಿದೆ. ಹಾಗಾಗಿ ಆಗಾಗ ನೀತಿ ಸಂಹಿತೆ ಉಲ್ಲಂಘನೆ ಮಾಡಿ ನಮ್ಮ ವಿರುದ್ಧ ಅಪಪ್ರಚಾರದಲ್ಲಿ ನಿರತವಾಗಿದೆ. ಬಿಜೆಪಿ ಗಲಾಟೆ ಮಾಡಿಸುವಲ್ಲಿ ಮೀಡಿಯಾ ಮತ್ತು ಪೊಲೀಸರು ಮೊದಲೇ ಹೇಗೆ ತಲುಪಿರುತ್ತಾರೆ ಎಂಬುದು ಸೋಜಿಗದ ವಿಷಯ. ಅಂದರೆ ಇಲ್ಲಿ ನಮ್ಮ ವಿರುದ್ಧ ಗಲಾಟೆ ಮಾಡುವವರು ಜನರಲ್ಲ, ಬಿಜೆಪಿಯಿಂದ ಪಾವತಿ ಪಡೆದವರು. ಬಿಜೆಪಿ ಕಂಗಾಲಾಗಿರುವುದು ಅದರ ನಡೆಯಿಂದ ಸ್ಪಷ್ಟವಾಗಿದೆ. ಎ.29ರಂದು ಜನರು ಇವರಿಗೆ ತಕ್ಕ ಪಾಠ ಕಲಿಸುತ್ತಾರೆ. ಯುವಕರನ್ನು ಮೋದಿ ನಿರುದ್ಯೋಗಿಗಳಾಗಿ ಮಾಡಿದ್ದಾರೆ. ಅದೇ ಯುವಕರು ಮೋದಿಯನ್ನು ಈ ಬಾರಿ ನಿರುದ್ಯೋಗಿ ಮಾಡುತ್ತಾರೆ''.

- ಎಪ್ರಿಲ್ 22ರಂದು ಕನ್ಹಯ್ಯಾ ಹೇಳಿಕೆ

''ಬೇಗುಸರಾಯ್‌ಯಲ್ಲಿ ನಮ್ಮ ಅಭ್ಯರ್ಥಿ ಕನ್ಹಯ್ಯಾ ಎಲ್ಲೇ ಹೋದರೂ ಜನರು ಜಾತಿಮತ ಭೇದವಿಲ್ಲದೆ ಸ್ವಾಗತಿಸುತ್ತಿದ್ದಾರೆ. ಜನರಿಂದ ಅದ್ಭುತ ಸ್ಪಂದನೆ ಸಿಗುತ್ತಿದೆ. ಭಾರೀ ಜನಬೆಂಬಲ ವ್ಯಕ್ತವಾಗುತ್ತಿದೆ. ಇದನ್ನು ನೋಡಿ ಬಿಜೆಪಿ, ಆರೆಸ್ಸೆಸ್ ಬೆದರಿವೆ. ಹಾಗಾಗಿ ನಮ್ಮ ಪ್ರಚಾರಕ್ಕೆ ಅಡ್ಡಿ ಮಾಡುವುದು, ಅಪಪ್ರಚಾರ ಮಾಡುವುದು ನಡೆಯುತ್ತಿದೆ. ಮೊನ್ನೆ ಒಂದು ಗ್ರಾಮದಲ್ಲಿ ಇದೇ ರೀತಿ ಮಾಡಲು ಬಂದ ಬಿಜೆಪಿಯವರನ್ನು ಗ್ರಾಮಸ್ಥರೇ ಓಡಿಸಿದ್ದಾರೆ. ಇಲ್ಲಿ ಕನ್ಹಯ್ಯಾ ಗೆಲ್ಲುವುದು ಖಚಿತ''.

-ಡಾ.ಕೆ.ನಾರಾಯಣ, ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ

''ಈ ಬಾರಿ ಸಾಂಪ್ರದಾಯಿಕ ಎಡರಂಗದ ಪ್ರಚಾರದ ಬದಲು ಹೊಸ ರಣತಂತ್ರ ಅನುಸರಿಸಲಾಗಿದೆ. ಇದರಲ್ಲಿ ನೇರವಾಗಿ ತಮ್ಮ ಪಕ್ಷದ ಅಭ್ಯರ್ಥಿಗೆ ಮತನೀಡಿ ಎಂದು ಕೇಳುತ್ತಿಲ್ಲ. ಬದಲಾಗಿ ಮನೆಮನೆಗೆ ಹೋಗಿ ಮೊದಲು ತಮ್ಮ ಪಕ್ಷದ ಬಗ್ಗೆ ಏನೂ ಹೇಳದೆ ಜನರನ್ನು ಮಾತಾಡಿಸುತ್ತಾರೆ. ಅವರ ಸಮಸ್ಯೆಗಳನ್ನು ಕೇಳುತ್ತಾರೆ. ಅವರಿಗಿರುವ ಅಸಮಾಧಾನ ಏನೇನು ಎಂದು ಗುರುತಿಸುತ್ತಾರೆ. ಆಮೇಲೆ ತಮ್ಮ ಪಕ್ಷದ, ಅಭ್ಯರ್ಥಿಯ ಬಗ್ಗೆ ವಿವರವಾಗಿ ಹೇಳಿ ಮತ ಯಾಚಿಸುತ್ತಾರೆ''
-ಅರುಪ್ ದಾಸ್, ಕೋಲ್ಕತ್ತದ ಸಿಪಿಎಂ ಮುಖವಾಣಿ ‘ಗಣಶಕ್ತಿ ಪತ್ರಿಕೆ’ಯ ಹಿರಿಯ ಪತ್ರಕರ್

    ಕನ್ಹಯ್ಯಾ ಕುಮಾರ್ ಅವರ ಮನೆ

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top