ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ: ಭಾರತೀಯ ಮಾಧ್ಯಮಗಳ ಮಟ್ಟವೇನು? | Vartha Bharati- ವಾರ್ತಾ ಭಾರತಿ

---

ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ: ಭಾರತೀಯ ಮಾಧ್ಯಮಗಳ ಮಟ್ಟವೇನು?

ಪತ್ರಕರ್ತರು ನಿಷ್ಪಕ್ಷಪಾತವಾಗಿ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರೆ ಅಂತಹವರಿಗೆ ಬೆದರಿಕೆ, ಕೊಲೆ ಬೆದರಿಕೆ ಹಾಕುವುದು ಸಾಮಾನ್ಯವಾಗಿ ಬಿಟ್ಟಿದೆ. ಅಧಿಕಾರದಲ್ಲಿರುವ ಸರಕಾರಕ್ಕೆ ಪ್ರಶ್ನೆ ಮಾಡಿದರೆ ಅಂತಹವರಿಗೆ ಫೋನ್ ಕರೆ ಮಾಡುವ ಮೂಲಕ ಬೆದರಿಕೆ ಹಾಕಲಾಗುತ್ತಿದೆ, ಕೊಲೆ ಬೆದರಿಕೆ ಕೂಡ ಹಾಕಲಾಗುತ್ತಿದೆ. ಬಾಯಿಗೆ ಬಂದಂತೆ ಬೈಯುವುದು, ಅಶ್ಲೀಲ ಪದಗಳಿಂದ ನಿಂದಿಸುವುದು ಇವೆಲ್ಲ ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಭ್ರಷ್ಟ ರಾಜಕಾರಣಿಗಳು, ಕ್ರಿಮಿನಲ್ ಹಿನ್ನೆಲೆವುಳ್ಳವರು ಈ ಕೆಲಸದಲ್ಲಿ ತೊಡಗಿದ್ದಾರೆ. ಪತ್ರಕರ್ತರ ಕುಟುಂಬದ ಸದಸ್ಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು, ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾದ ಪೋಸ್ಟ್ ಹಾಕುವುದು ಅವರ ಚಾರಿತ್ರ್ಯಹರಣ ಮಾಡುವುದು ಇವರ ಕೆಲಸವಾಗಿದೆ.

ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಮಾಧ್ಯಮ. ಮಾಧ್ಯಮಗಳು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯ. ಇಲ್ಲದಿದ್ದರೆ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯವಿಲ್ಲ. ಪ್ರಪಂಚದಲ್ಲಿ ಅತೀ ಹೆಚ್ಚು ‘ಪ್ರೆಸ್’ ಎಂಬ ಪದವನ್ನೇ ಬಳಸಲಾಗುತ್ತದೆ. ಪತ್ರಿಕೆಗಳು ಮತ್ತು ನ್ಯೂಸ್ ಚಾನೆಲ್‌ಗಳನ್ನು ಒಳಗೊಂಡು ಪ್ರೆಸ್ ಎಂದು ಹೇಳಲಾಗುತ್ತದೆ. ಭಾರತದಲ್ಲಿ ಮಾತ್ರ ಹೆಚ್ಚಾಗಿ ಮಾಧ್ಯಮಗಳು ಎಂದು ಹೇಳುವುದು ವಾಡಿಕೆ. ಅದೇನೆ ಇರಲಿ ಭಾರತೀಯ ಮಾಧ್ಯಮಗಳ ಬಗ್ಗೆ ಸ್ವಲ್ಪಗಮನ ಹರಿಸುವುದಾದರೆ ಇವು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಏಕೆಂದರೆ ಮೊನ್ನೆಯಷ್ಟೇ ಒಂದು ಆಘಾತಕಾರಿ ಸಂಗತಿಯೋದು ಬೆಳಕಿಗೆ ಬಂದಿದ್ದು ಇದಕ್ಕೆ ಸಾಕ್ಷಿಯಾಗಿದೆ. ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ ಬಿಡುಗಡೆಯಾಗಿದೆ.

ಅದರಲ್ಲಿ 180 ರಾಷ್ಟ್ರಗಳ ಪೈಕಿ ಭಾರತದ ಸ್ಥಾನ 140. ಅಂದರೆ ನಮ್ಮ ಮಾಧ್ಯಮಗಳು ಎಷ್ಟು ಕೆಳಮಟ್ಟಕ್ಕೆ ಇಳಿದಿವೆ ಎಂದು ತೋರಿಸುತ್ತದೆ. ಇದಕ್ಕೆ ಹಲವಾರು ಕಾರಣಗಳುಂಟು ಅದನ್ನು ಉದಾಹರಣೆ ಮೂಲಕ ಮುಂದೆ ನೋಡೋಣ. ಅಂದಹಾಗೆ ‘ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ’ವನ್ನು ‘ಗಡಿಗಳ ಕಟ್ಟುಪಾಡಿಲ್ಲದ ವರದಿಗಾರರು’ ಎಂಬ ಅಂತರ್ ರಾಷ್ಟ್ರೀಯ ಸಂಸ್ಥೆ ಪ್ರತೀ ವರ್ಷ ಬಿಡುಗಡೆ ಮಾಡುತ್ತದೆ. ಇದು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಸಂಘಟನೆಯಾಗಿದೆ. ಪ್ರಪಂಚದ ಆಯಾ ರಾಷ್ಟ್ರಗಳ ಪತ್ರಿಕಾ ಸ್ವಾತಂತ್ರ್ಯದ ಕುರಿತು ವಿಶ್ಲೇಷಣೆ ಮಾಡುತ್ತದೆ. ಅಂದರೆ ಯಾವ ರಾಷ್ಟ್ರದಲ್ಲಿ ಪತ್ರಿಕೆಗಳಿಗೆ ಅತೀ ಹೆಚ್ಚು ಸ್ವಾತಂತ್ರ್ಯವಿದೆ, ಯಾವ ರಾಷ್ಟ್ರಗಳಲ್ಲಿನ ಮಾಧ್ಯಮಗಳು ನಿರ್ಭೀತವಾಗಿ ಕಾರ್ಯನಿರ್ವಹಿಸುತ್ತವೆ, ಆಯಾ ದೇಶಗಳಲ್ಲಿನ ಪತ್ರಕರ್ತರಿಗೆ ವರದಿ ಮಾಡಲು ಸೂಕ್ತವಾದ ಮುಕ್ತವಾದ ಸ್ವಾತಂತ್ರ್ಯವಿದೆಯೇ ಎಂಬೆಲ್ಲ ಅಂಶಗಳನ್ನು ಗಣನೆಗೆ ತೆಗದುಕೊಂಡು ಪ್ರತೀ ವರ್ಷ ತನ್ನ ವರದಿ ಬಿಡುಗಡೆ ಮಾಡುತ್ತದೆ. ಇದರಲ್ಲಿ ನಾರ್ವೆ ದೇಶ ಪ್ರಥಮ ಸ್ಥಾನ ಪಡೆದುಕೊಂಡಿದೆ. ಮೊದಲ ಹತ್ತು ದೇಶಗಳನ್ನು ನೋಡುವುದಾದರೆ, ನಾರ್ವೆ, ಫಿನ್ಲೆಂಡ್, ಸ್ವೀಡನ್, ನೆದರ್‌ಲ್ಯಾಂಡ್, ಡೆನ್ಮಾರ್ಕ್, ಸ್ವಿಟ್ಸರ್‌ಲ್ಯಾಂಡ್, ನ್ಯೂಝಿಲ್ಯಾಂಡ್, ಜಮೈಕಾ, ಬೆಲ್ಜಿಯಂ ಮತ್ತು ಕೊಸ್ಟರಿಕಾ. ಈ ದೇಶಗಳಲ್ಲಿ ಪತ್ರಿಕೆಗಳು ಅತೀ ನಿರ್ಭೀತವಾಗಿ ಮತ್ತು ಅಲ್ಲಿನ ಪತ್ರಕರ್ತರೂ ಯಾವುದೇ ಭಯವಿಲ್ಲದೇ ನಿರ್ಭೀತರಾಗಿ ಕೆಲಸ ಮಾಡುತ್ತಾರೆ ಎಂದು ಈ ವರದಿಯಿಂದ ತಿಳಿದು ಬರುತ್ತದೆ. ಆದರೆ ಭಾರತದ ಪತ್ರಿಕಾ ಸ್ವಾತಂತ್ರ್ಯವನ್ನು ಗಮನಿಸಿದರೆ ತೀರ ಹೇಳಿಕೊಳ್ಳಲಾಗದಂತಹ ಅತ್ಯಂತ ಶೋಚನೀಯ ಸ್ಥಿತಿಗೆ ಬಂದು ತಲುಪಿದೆ. ಈಗಾಗಲೇ ವರದಿಯಂತೆ ವಿಶ್ವದ ಪತ್ರಿಕಾ ಸ್ವಾತಂತ್ರ್ಯದಲ್ಲಿ ಭಾರತೀಯ ಮಾಧ್ಯಮಗಳು ಗಳಿಸಿರುವ ಸ್ಥಾನ 140. ಕಳೆದ ವರ್ಷಕ್ಕೆ ಹೋಲಿಸಿದರೆ ಎರಡು ಸ್ಥಾನ ಕುಸಿದಿದೆ. ಕಳೆದ ವರ್ಷ ಇದು 138ನೇ ಸ್ಥಾನದಲ್ಲಿತ್ತು. ಪ್ರತೀ ವರ್ಷ ಎರಡು ಅಥವಾ ಮೂರು ಸ್ಥಾನಗಳಷ್ಟು ಕುಸಿಯುತ್ತಿದೆ.

ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕವನ್ನು ಪ್ರಥಮ ಬಾರಿಗೆ 2002ರಲ್ಲಿ ಬಿಡುಗಡೆ ಮಾಡಲಾಗಿತ್ತು. ಆಗ ಭಾರತದ ಮಾಧ್ಯಮಗಳು 80ನೇ ಸ್ಥಾನ ಪಡೆದುಕೊಂಡಿದ್ದವು. ಈಗ ಅದು 140ನೇ ಸ್ಥಾನಕ್ಕೆ ಕುಸಿದಿದೆ. ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 2002ರಿಂದ ಇಲ್ಲಿಯವರೆಗೆ ಭಾರತದ ಸ್ಥಾನ ನೋಡುವುದಾದರೆ 2002 ರಲ್ಲಿ 80ನೇ ಸ್ಥಾನದಲ್ಲಿದ್ದರೆ 2003ರಲ್ಲಿ ಒಮ್ಮೆಗೆ 128ನೇ ಸ್ಥಾನಕ್ಕೆ ಬಿದ್ದಿದೆ. 2004- 120, 2005- 106, 2006- 105, 2007- 120, 2008- 118, 2009- 105, 2010- 122, 2011 ಮತ್ತು 2012ರಲ್ಲಿ 131ನೇ ಸ್ಥಾನ, 2013-131, 2014- 140, 2015- 136, 2016- 133, 2017- 136, 2018- 138, 2019- 140ನೇ ಸ್ಥಾನ. ಪತ್ರಿಕಾ ಸ್ವಾತಂತ್ರ್ಯದಲ್ಲಿ ಈಗಿರುವ ಭಾರತದ ಸ್ಥಾನ(140) 2014ರಲ್ಲಿಯೂ ಕೂಡ ಇದೇ ಸ್ಥಾನ ಇತ್ತು ಎಂಬುದು ಗೊತ್ತಾಗುತ್ತದೆ. ಪ್ರತೀ ವರ್ಷ 2 ಅಥವಾ 3 ಸ್ಥಾನಗಳನ್ನು ಕಳೆದುಕೊಳ್ಳುತ್ತಿದೆ. ಇದರರ್ಥ ಭಾರತದಲ್ಲಿ ಮಾಧ್ಯಮಗಳು ಮುಕ್ತವಾಗಿ ವರದಿ ಮಾಡಲು ಸರಿಯಾದ ಮುಕ್ತವಾದ ಸ್ವಾತಂತ್ರ್ಯವಿಲ್ಲ ಎಂದು ಗೊತ್ತಾಗುತ್ತದೆ. ಈ ವರದಿಯ ಪ್ರಕಾರ ಪತ್ರಕರ್ತರು ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿದ್ದರೆ ಅಂತಹವರಿಗೆ ಅಂತರ್ಜಾಲದಲ್ಲಿ ಹಾಗೂ ದೈಹಿಕವಾಗಿ ದಾಳಿ ನಡೆಸಲಾಗುತ್ತಿದೆ ಎಂದು ಈ ವರದಿ ಹೇಳುತ್ತದೆ. ಪೊಲೀಸ್ ಘರ್ಷಣೆ, ಮಾವೋವಾದಿ ದಾಳಿಗಳು, ಕ್ರಿಮಿನಲ್ ಗ್ರೂಪ್‌ಗಳಲ್ಲದೆ ಭ್ರಷ್ಟ ರಾಜಕಾರಣಿಗಳು ಪತ್ರಕರ್ತರ ಮೇಲೆ ಹಲ್ಲೆ ಮತ್ತು ದಾಳಿಗಳನ್ನು ಮಾಡುತ್ತಾರೆ ಮತ್ತು ಮಾಡಿಸುತ್ತಿದ್ದಾರೆ. ಇದು ವಾಸ್ತವವೂ ಕೂಡ ಹೌದು. 2018ರಲ್ಲಿ 6 ಪತ್ರಕರ್ತರನ್ನು ಹತ್ಯೆ ಮಾಡಲಾಗಿದೆ. ನಗರ ಪ್ರದೇಶಗಳ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲೂ ಪತ್ರಕರ್ತರ ಮೇಲೆ ಹಲ್ಲೆಗಳಾಗುತ್ತಿವೆ.

ಮತ್ತೊಂದು ಮುಖ್ಯವಾದ ಆಘಾತಕಾರಿ ಸಂಗತಿ ಎಂದರೆ ಪ್ರಧಾನಿ ನರೇಂದ್ರ ಮೋದಿಯವರ ಹಿಂಬಾಲಕರು, ಹಿಂದುತ್ವ ಸಿದ್ಧಾಂತ ಹಾಗೂ ಹಿಂದೂ ರಾಷ್ಟ್ರೀಯವಾದಿಗಳೇ ಪತ್ರಕರ್ತರ ಮೇಲೆ ಹಲ್ಲೆ ಮಾಡುತ್ತಿದ್ದಾರೆ ಎಂದು ಈ ವರದಿಯಲ್ಲಿ ಹೇಳಲಾಗಿದೆ. ಪತ್ರಕರ್ತರು ನಿಷ್ಪಕ್ಷಪಾತವಾಗಿ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರೆ ಅಂತಹವರಿಗೆ ಬೆದರಿಕೆ, ಕೊಲೆ ಬೆದರಿಕೆ ಹಾಕುವುದು ಸಾಮಾನ್ಯವಾಗಿ ಬಿಟ್ಟಿವೆ. ಅಧಿಕಾರದಲ್ಲಿರುವ ಸರಕಾರಕ್ಕೆ ಪ್ರಶ್ನೆ ಮಾಡಿದರೆ ಅಂತಹವರಿಗೆ ಫೋನ್ ಕರೆ ಮಾಡುವ ಮೂಲಕ ಬೆದರಿಕೆ ಹಾಕಲಾಗುತ್ತಿದೆ, ಕೊಲೆ ಬೆದರಿಕೆ ಕೂಡ ಹಾಕಲಾಗುತ್ತಿದೆ. ಬಾಯಿಗೆ ಬಂದಂತೆ ಬೈಯುವುದು, ಅಶ್ಲೀಲ ಪದಗಳಿಂದ ನಿಂದಿಸುವುದು ಇವೆಲ್ಲ ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಭ್ರಷ್ಟ ರಾಜಕಾರಣಿಗಳು, ಕ್ರಿಮಿನಲ್ ಹಿನ್ನೆಲೆವುಳ್ಳವರು ಈ ಕೆಲಸದಲ್ಲಿ ತೊಡಗಿದ್ದಾರೆ. ಪತ್ರಕರ್ತರ ಕುಟುಂಬದ ಸದಸ್ಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು, ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾದ ಪೋಸ್ಟ್ ಹಾಕುವುದು ಅವರ ಚಾರಿತ್ರ್ಯಹರಣ ಮಾಡುವುದು ಇವರ ಕೆಲಸವಾಗಿದೆ. ಹಿಂದೆ (NDTV) ಯ ಖ್ಯಾತ ಪತ್ರಕರ್ತ, ನಿರೂಪಕ ರವೀಶ್ ಕುಮಾರ್ ಮತ್ತು (ABP News) ನ ಮಾಜಿ ನಿರೂಪಕ ಅಭಿಸಾರ್ ಶರ್ಮಾ ಕೂಡ ಕೊಲೆ ಬದರಿಕೆಗಳಿಗೆ ಒಳಗಾಗಿದ್ದರು. ಅವರಿಗೆ ಫೋನ್ ಕರೆ ಮಾಡಿ ಧಮಕಿ ಹಾಕಿ ಕೊಲೆ ಬೆದರಿಕೆ ಕೂಡ ಹಾಕಲಾಗಿತ್ತು. ನಿರೂಪಕ ರವೀಶ್ ಕುಮಾರ ದೂರು ದಾಖಲಿಸಿದ್ದರೂ ಏನೂ ಪ್ರಯೋಜನವಾಗಿಲ್ಲ. ಇನ್ನು ಅನೇಕ ಇಂತಹ ನಿಷ್ಪಕ್ಷಪಾತ ಪ್ರಾಮಾಣಿಕ ಪತ್ರಕರ್ತರಿಗೆ ಕೊಲೆ ಬೆದರಿಕೆಗಳು ಬರುತ್ತಿವೆ. (ABP News)ನ ಮತ್ತೋರ್ವ ಹಿರಿಯ ಖ್ಯಾತ ಪತ್ರಕರ್ತ ಹಾಗೂ ನಿರೂಪಕ ಪುಣ್ಯ ಪ್ರಸುನ್ ಬಾಜಪಾಯಿ ಅವರು ರಾಜಕಾರಣಿಗಳ ಒತ್ತಡದಿಂದ ಅನಿವಾರ್ಯವಾಗಿ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಬಂದೊದಗಿತ್ತು. ಸ್ವಲ್ಪ ಅದರ ಬಗ್ಗೆಯೂ ಇಲ್ಲಿ ಗಮನ ಹರಿಸುವುದು ಸೂಕ್ತವೆನಿಸುತ್ತದೆ. 2018 ಜೂನ್ 20ರಂದು ಪ್ರಧಾನಿ ಮೋದಿಯವರು ಛತ್ತೀಸ್‌ಗಡ ರಾಜ್ಯದ ಕೆಲ ರೈತರೊಂದಿಗೆ ವೀಡಿಯೊ ಸಂವಾದ ನಡೆಸಿದ್ದರು. ಅದರಲ್ಲಿ ಮೋದಿಯವರು ‘‘ಎರಡು ಪಟ್ಟು ಆದಾಯ ಹೆಚ್ಚಾಗಿದೆಯಾ’’ ಎಂದು ರೈತರಿಗೆ ಕೇಳಿದ್ದರು. ಆಗ ಆ ರೈತರು ‘‘ಆಗಿದೆ’’ ಎಂದು ಹೇಳಿದ್ದರು. ಇದನ್ನೇ ಮುಂದಿಟ್ಟುಕೊಂಡು (ABP News)ನ ತಂಡ ಗ್ರೌಂಡ್ ಲೆವಲ್ ರಿಪೋರ್ಟ್(ತಳ ಮಟ್ಟದ ವರದಿ) ಮಾಡಿದ್ದರು. ಮೋದಿಯವರ ಸಂವಾದದಲ್ಲಿ ತೊಡಗಿದ್ದ ರೈತ ಮಹಿಳೆಯನ್ನು ಸಂದರ್ಶನ ಮಾಡಿದ್ದರು. ಜೊತೆಗೆ ಆ ಗ್ರಾಮ (ಕನ್ಹಾರಿಪುರ್ ಗ್ರಾಮ)ದ ಎಲ್ಲ ರೈತರನ್ನು ಸಂದರ್ಶನ ಮಾಡಿ ಯಾವ ರೈತರು ಕೂಡ ತಮ್ಮ ಆದಾಯ ಎರಡು ಪಟ್ಟು ಹೆಚ್ಚಾಗಿಲ್ಲ ಬದಲಾಗಿ ಇನ್ನ್ನೂ ನಷ್ಟದಲ್ಲಿಯೇ ಇದ್ದೇವೆ ಎಂದು ಹೇಳಿದ್ದರು. ಆ ಗ್ರಾಮದ ಸರಪಂಚನನ್ನು ಸಂದರ್ಶನ ಮಾಡಲಾಗಿತ್ತು. ಆತ ಹೇಳುವ ಪ್ರಕಾರ ದಿಲ್ಲಿಯಿಂದ ತಂಡ ಬಂದು ರೈತರನ್ನು ಆಯ್ಕೆ ಮಾಡಿತ್ತು. ಅವರು ಹೇಳಿದಂತೆ ವೀಡಿಯೊ ಸಂವಾದದಲ್ಲಿ ಹೇಳಬೇಕು ಎಂದು ಹೇಳಿ ರೈತರನ್ನು ಆಯ್ಕೆ ಮಾಡಿದ್ದರು. ಒಟ್ಟಾಗಿ ಇದು ದಿಲ್ಲಿ ತಂಡ ಆಯ್ಕೆ ಮಾಡಿದ್ದು ‘‘ಆಯ್ದ’’ ರೈತರನ್ನು. ನಂತರ ಇದು ಕೂಡ ಬಯಲಾಯಿತು. ಇದನ್ನೇ (ABP News)ನ ಖ್ಯಾತ ನಿರೂಪಕ ಪುಣ್ಯಪ್ರಸುನ್ ಬಾಜಪಾಯಿ 2018 ಜುಲೈ 9ರಂದು ರಾತ್ರಿ 9ರಿಂದ 10 ಗಂಟೆಯವರೆಗೆ ನಡೆಯುವ ತನ್ನ ‘ಮಾಸ್ಟರ್ ಸ್ಟ್ರೋಕ್’ ಎಂಬ ವಿಶೇಷ ವರದಿಯಲ್ಲಿ ಬಿತ್ತರಿಸಿ ಸತ್ಯಾಸತ್ಯತೆ ಬಯಲು ಮಾಡಿದ್ದರು.

ಬಳಿಕ ಪಾರ್ಲಿಮೆಂಟ್‌ನಲ್ಲೂ ಈ ವರದಿ ಧೂಳೆಬ್ಬಿಸಿತ್ತು. ಸರಕಾರದ ಕೆಲ ಮಂತ್ರಿಗಳು ಹಾಗೂ ಪ್ರಭಾವಿಗಳು (ABP News) ನ ಮೇಲೆ ಒತ್ತಡ ಹಾಕಲಾರಂಭಿಸಿದರು. ಅನಿವಾರ್ಯವಾಗಿ ನಿರೂಪಕ ಪುಣ್ಯ ಪ್ರಸುನ್ ಬಾಜಪಾಯಿ 2018 ಅಗಸ್ಟ್ 2ರಂದು ರಾಜೀನಾಮೆ ನೀಡಬೇಕಾಯಿತು. ಯುಪಿಎ ಅವಧಿಯಲ್ಲೂ ಕೂಡ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಇಂತಹ ನಿಷ್ಪಕ್ಷಪಾತ ಪತ್ರಕರ್ತರ ಮೇಲೆ ರಾಜಕಾರಣಿಗಳೇ ಧಮಕಿ ಹಾಕಿ ಇಡೀ ಮಾಧ್ಯಮ ಲೋಕವನ್ನೇ ನಿಯಂತ್ರಿಸಲು ಯತ್ನಿಸುತ್ತಿದ್ದಾರೆ. ಇಂತಹ ಕೆಲ ಸುದ್ದಿಗಳನ್ನು ಪ್ರಾದೇಶಿಕ ಸುದ್ದಿ ಚಾನೆಲ್‌ಗಳು ಬಿತ್ತರಿಸುವುದು ತೀರ ಕಡಿಮೆ. ಇಂತ ಸಂಗತಿಗಳು ಸಾಮಾನ್ಯ ಜನರಿಗಾದರೂ ಹೇಗೆ ಗೊತ್ತಾಗಬೇಕು ಎಂಬುದು ನಮ್ಮ ಮುಂದಿರುವ ಪ್ರಶ್ನೆಯಾಗಿದೆ. ಖ್ಯಾತ ಐಟಿ ಉದ್ಯಮಿ ಟಿ.ವಿ ಮೋಹನ್ ದಾಸ್ ಪೈ ಹೇಳುವ ಪ್ರಕಾರ ‘‘ಯುವ ಜನರು ಟಿವಿ ನೋಡುವುದಿಲ್ಲ, ಪತ್ರಿಕೆ ಗಳನ್ನು ಓದುವುದಿಲ್ಲ. ಕೇವಲ ಯೂಟ್ಯೂಬ್ ಬಳಸುತ್ತಾರೆ. ವೀಡಿಯೊ ವೀಕ್ಷಿಸುತ್ತಾರೆ, ಸಾಮಾಜಿಕ ಜಾಲತಾಣಗಳಲ್ಲಿ ಏನನ್ನು ನೋಡುತ್ತಾರೋ ಅದರ ಪ್ರಭಾವಕ್ಕೆ ಒಳಪಡುತ್ತಾರೆ’’ ಎಂದು. ಹೌದು, ಯುವಸಮೂಹ ಸಾಮಾಜಿಕ ಜಾಲತಾಣಗಳಲ್ಲಿ ಬಂದ ವೀಡಿಯೊಗಳನ್ನೇ ಅಂತಿಮ ಎಂದು ನಂಬುತ್ತಿದ್ದಾರೆ.

ಅದನ್ನು ಸ್ವಪರಿಶೀಲನೆ ಮಾಡದೇ ಒಪ್ಪಿಕೊಳ್ಳುವ ಮನಸ್ಥಿತಿಗಳು ಹೆಚ್ಚಾಗಿವೆ. ಯುವ ಸಮೂಹದಲ್ಲಿ ಸ್ವಚಿಂತನೆ ಎಂಬುದು ಮಾಯವಾಗುತ್ತಿರುವುದು ಯುವಭಾರತಕ್ಕೆ ಅಪಾಯಕಾರಿಯೂ ಹೌದು. ವಿಶ್ವ ಪತ್ರಿಕಾ ಸ್ವಾತಂತ್ರ್ಯದಲ್ಲಿ ಮೊದಲ ಹತ್ತು ರಾಷ್ಟ್ರಗಳು ಬಲಾಢ್ಯ ರಾಷ್ಟ್ರಗಳೇನೂ ಅಲ್ಲ. ಅವು ಅತ್ಯಂತ ಚಿಕ್ಕ ಚಿಕ್ಕ ರಾಷ್ಟ್ರಗಳು. ಬಲಿಷ್ಠ ರಾಷ್ಟ್ರಗಳೆನಿಸಿಕೊಂಡ ಅಮೆರಿಕ. ರಶ್ಯಾ, ಯುನೈಟೆಡ್ ಕಿಂಗ್ ಡಮ್, ಚೀನಾ ಕೂಡ ಮೊದಲ ಹತ್ತು ರಾಷ್ಟ್ರಗಳಲ್ಲಿ ಸ್ಥಾನ ಪಡೆದುಕೊಂಡಿಲ್ಲ. ಮೊದಲ ಹತ್ತೂ ರಾಷ್ಟ್ರಗಳೂ ಯುರೋಪಿಯನ್ ರಾಷ್ಟ್ರಗಳಾಗಿವೆ. ಪತ್ರಿಕಾ ಸ್ವಾತಂತ್ರ್ಯ ಯುರೋಪಿಯನ್ ರಾಷ್ಟ್ರಗಳಲ್ಲೇ ಹೆಚ್ಚಾಗಿ ಕಾಣಬಹುದು. ಪತ್ರಿಕೋದ್ಯಮ(ಜರ್ನಲಿಸಂ)ನ ಕ್ವಾಲಿಟಿ ಕೂಡ ಆ ರಾಷ್ಟ್ರಗಳಲ್ಲೇ ಅತ್ಯುತ್ತಮವಾಗಿದೆ ಎಂದು ತಿಳಿದು ಬರುತ್ತದೆ. ಇನ್ನು ನೆರೆಯ ದೇಶ ಪಾಕಿಸ್ತಾನವನ್ನು ಗಮನಿಸಿದರೆ ವಿಶ್ವ ಪತ್ರಿಕಾ ಸ್ವಾತಂತ್ರ್ಯದಲ್ಲಿ 142ನೇ ಸ್ಥಾನ ಗಳಿಸಿದೆ. 139 ನೇ ಸ್ಥಾನದಲ್ಲಿ ದಕ್ಷಿಣ ಸೂಡಾನ್ ದೇಶವಿದೆ. ಈ ದೇಶ ಅತ್ಯಂತ ಹಸಿವಿನಿಂದ ಮತ್ತು ಆಂತರಿಕ ಯುದ್ಧದಿಂದ ತತ್ತರಿಸುತ್ತಿದೆ. ನೆರೆಯ ದೇಶವಾದ ಉತ್ತರ ಸೂಡಾನ್‌ನೊಂದಿಗೆ ನಿರಂತರ ಯುದ್ಧ ಸಂಘರ್ಷದಲ್ಲಿದೆ. 142 ನೇ ಸ್ಥಾನ ಪಡೆದುಕೊಂಡ ಪಾಕಿಸ್ತಾನ ಬಗ್ಗೆ ಹೇಳುವುದಾದರೆ, ಇಡೀ ಮಾಧ್ಯಮವೇ ಅಲ್ಲಿನ ಮಿಲಿಟರಿ ಹಿಡಿತದಲ್ಲಿದೆ. ಉಗ್ರ ಸಂಘಟನೆಗಳು ಪ್ರಾಮಾಣಿಕವಾಗಿ ವರದಿ ಮಾಡುವ ಹಲವಾರು ಪತ್ರಕರ್ತರನ್ನು ಹತ್ಯೆ ಮಾಡಿವೆ. 2018ರ ಪಾಕಿಸ್ತಾನದ ಲೋಕಸಭಾ ಚುನಾವಣೆಯಲ್ಲಿ ಅಲ್ಲಿನ ಪತ್ರಕರ್ತರಿಗೆ ಪತ್ರಿಕಾ ಸ್ವಾತಂತ್ರ್ಯವನ್ನು ಅಲ್ಲಿನ ಮಿಲಿಟರಿಯಿಂದ ತಡೆಹಿಡಿಯಲಾಗಿತ್ತು ಎಂದು ಈ ವರದಿಯಲ್ಲಿ ಹೇಳಿದೆ. ನಮ್ಮ ನೆರೆಯ ದೇಶಗಳಾದ ಬಾಂಗ್ಲಾದೇಶ 150ನೇ ಸ್ಥಾನ ಗಳಿಸಿದ್ದು, ನೇಪಾಳ 105ನೇ ಸ್ಥಾನ, ಭೂತಾನ್ 80ನೇ ಸ್ಥಾನ ಗಳಿಸಿದೆ. ನಮ್ಮ ದೇಶಕ್ಕಿಂತ ಪತ್ರಿಕಾ ಸ್ವಾತಂತ್ರ್ಯ ನೇಪಾಳ ಮತ್ತು ಭೂತಾನದಲ್ಲಿ ಅತೀಹೆಚ್ಚು ಇದೆ ಎಂದು ಈ ವರದಿಯಿಂದ ಗೊತ್ತಾಗುತ್ತದೆ. ಅದೇ ರೀತಿ ಶ್ರೀಲಂಕಾ 126, ಚೀನಾ 177, ರಶ್ಯಾ 149, ಅಮೆರಿಕ 48, ಕೆನಡಾ 18, ಉತ್ತರ ಕೊರಿಯಾ 179, ತುರ್ಕಮೆನಿಸ್ತಾನ್ 180 ಸ್ಥಾನ ಪಡೆದುಕೊಂಡಿವೆ. ಇನ್ನು ಬ್ರಿಕ್ಸ್ ದೇಶಗಳ ಪೈಕಿ ದಕ್ಷಿಣ್ ಆಫ್ರಿಕಾ ದೇಶ 31 ಸ್ಥಾನ ಪಡೆದುಕೊಡಿದೆ. ಇಲ್ಲಿನ ಪತ್ರಕರ್ತರು ನಿರ್ಭೀತರಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ತಿಳಿದು ಬರುತ್ತದೆ. ಯಾವುದೇ ಒಂದು ದೇಶದ ಪ್ರಜಾಪ್ರಭುತ್ವದ ಯಶಸ್ವಿಗೆ ಮಾಧ್ಯಮಗಳು ಬಹಳ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಆಯಾ ಕಾಲಘಟ್ಟದಲ್ಲಿ ಆಡಳಿತಶಾಹಿ ವರ್ಗ ಮಾಧ್ಯಮಗಳ ಮೇಲೆ ನಿಯಂತ್ರಣ ಸಾಧಿಸಲು ಯತ್ನಿಸುತ್ತಿವೆ. ತಮ್ಮ ವೈಫಲ್ಯಗಳನ್ನು ಜನರ ಮುಂದೆ ತೆಗೆದುಕೊಂಡು ಹೋಗುವುದನ್ನು ಆಡಳಿತಶಾಹಿ ವ್ಯವಸ್ಥೆ ತಡೆಹಿಡಿಯಲು ಯತ್ನಿಸುತ್ತಿವೆ. ಅಭಿವ್ಯಕ್ತಿ ಸ್ವಾತಂತ್ರ್ಯ ದಮನದ ಮುನ್ಸೂಚನೆ ಕಂಡು ಬರುತ್ತಿದೆ. ಇನ್ನೊಂದು ಮುಖ್ಯವಾದ ಅಂಶವನ್ನು ಗಮನಿಸುವುದಾದರೆ ಕೆಲ ಪತ್ರಿಕೆಗಳು ಹಾಗೂ ಕೆಲ ನ್ಯೂಸ್ ಚಾನೆಲ್‌ಗಳು ಆಯಾ ಪಕ್ಷಗಳಿಗೆ ಬಿಕರಿಯಾಗಿವೆಯೇನೋ ಎಂದು ಅನಿಸುತ್ತಿದೆ. ಕೆಲ ವರದಿಗಾರರಂತೂ ಕೆಲ ಪಕ್ಷಗಳಿಗೆ ಅಂಟಿಕೊಂಡಿದ್ದಾರೆ. ತಾವು ಬೆಂಬಲಿಸುವ ಪಕ್ಷಗಳ ಬಗ್ಗೆ ಸಕಾರಾತ್ಮಕ ತೋರಿಸಿ ಉಳಿದ ಪಕ್ಷಗಳ ಬಗ್ಗೆ ನಕಾರಾತ್ಮಕವನ್ನು ತೋರಿಸುವುದರಲ್ಲೇ ತೊಡಗಿವೆ.

ಪತ್ರಿಕಾ ನೀತಿ ಮತ್ತು ನೈತಿಕತೆ ಈಗಿನ ಮಾಧ್ಯಮಗಳಲ್ಲಿ ಬಹಳ ಕಡಿಮೆಯಾಗಿರುವುದಂತೂ ನಿಜ. ಕೆಲವೇ ಕೆಲವು ಪತ್ರಿಕೆಗಳು ಹಾಗೂ ನ್ಯೂಸ್‌ಚಾನೆಲ್‌ಗಳು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುತ್ತಿವೆ. ಭಾರತೀಯ ಕೆಲ ಮಾಧ್ಯಮಗಳಲ್ಲಿ ಹಾಗೂ ಪ್ರಾದೇಶಿಕ ಅಥವಾ ಸ್ಥಳಿಯ ಮಾಧ್ಯಮಗಳಲ್ಲಿ, ಕೆಲ ವರದಿಗಾರರಲ್ಲಿ ಸೂಕ್ಷ್ಮತೆ, ದೂರದೃಷ್ಟಿ, ಆಳವಾದ ಅಧ್ಯಯನ, ಗ್ರಹಿಕೆ, ಸಂಯಮದ ಕೊರತೆ ಎದ್ದು ಕಾಣಿಸುತ್ತದೆ. ನಿರೂಪಕರು ನಿರೂಪಣೆ ಮಾಡುವ ರೀತಿ ನೋಡಿದರೆ ಕ್ರಿಕೆಟ್ ಕಾಮೆಂಟ್ರಿ, ವೇದಿಕೆಯ ಮೇಲೆ ರಾಜಕಾರಣಿಗಳು ವೀರಾವೇಶದಿಂದ ಮಾಡುವ ಭಾಷಣದಂತೆ ಅತಿರೇಕವಾಗಿ ನಿರೂಪಣೆ ಮಾಡುತ್ತಿರುವುದು ಕಂಡು ಬರುತ್ತದೆ. ಪುಲ್ವಾಮ ಘಟನೆಯ ಸಂದರ್ಭದಲ್ಲಿ ನಿರೂಪಕರು ವರ್ತಿಸಿದ ರೀತಿ ಹೇಗಿತ್ತೇಂದರೆ ತಾವು ನಿರೂಪಕರು ಎಂಬುದನ್ನು ಮರೆತು ರಾಜಕಾರಣಿಗಳಂತೆ ವೇದಿಕೆಯ ಮೇಲೆ ನಿಂತು ಭಾಷಣ ಮಾಡುತ್ತಿದ್ದರೇನೋ ಎನ್ನುವಂತಿತ್ತು. ನಿಜವಾಗಿಯೂ ಆ ಸಂದರ್ಭದಲ್ಲಿ ನಿರೂಪಕರು ತಮ್ಮ ಸಂಯಮ ಮತ್ತು ತಾಳ್ಮೆ ಕಳೆದುಕೊಂಡು ಅತೀರೇಕವಾಗಿ ವರ್ತಿಸಿ ಮಾಧ್ಯಮ ನೀತಿಯನ್ನೇ ಬದಿಗೊತ್ತಿದ್ದರು. ಭಾರತೀಯ ಮಾಧ್ಯಮಗಳು ಕೇವಲ ಟಿಆರ್‌ಪಿ ಹಿಂದೆ ಬಿದ್ದಿವೆಯೇ ಹೊರತು ಪ್ರಜಾಪ್ರಭುತ್ವದ ಯಶಸ್ಸಿಗಲ್ಲ. ಕೇವಲ ಬೆರಳೆಣಿಕೆಯಷ್ಟು ಪತ್ರಿಕೆಗಳು ಮತ್ತು ನ್ಯೂಸ್ ಚಾನೆಲ್‌ಗಳು ಮಾಧ್ಯಮನೀತಿಯನ್ನು ಅನುಸರಿಸುತ್ತಿವೆ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿರುವ ಮಾಧ್ಯಮಗಳು ದೇಶದ ಪ್ರಜಾಪ್ರಭುತ್ವದ ಯಶಸ್ವಿಗೆ ಕಾರಣವಾಗಬೇಕಿದೆ. ಅತಿರೇಕದ ವರ್ತನೆ, ರಾಜಕೀಯ ಮತ್ತು ರಾಜಕಾರಣದಿಂದ ಅಂತರ ಕಾಯ್ದುಕೊಳ್ಳಬೇಕಾಗಿದೆ. ಮಾಧ್ಯಮಗಳಲ್ಲಿ ರಾಜಕೀಯ ಮೂಗು ತೋರಿಸುವುದನ್ನು ಬಿಡಬೇಕಾಗಿದೆ. ಸತ್ಯಾಸತ್ಯತೆ ತಿಳಿಸುವುದಕ್ಕೆ ಭಯಪಡದೇ ನಿಷ್ಪಕ್ಷಪಾತವಾಗಿ ನಿರ್ಭೀತವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top