“ಮೋದಿ ವಿಜಯದಲ್ಲಿ ಮಾಧ್ಯಮದ ಸೋಲಿದೆ”

"2019ರ ಚುನಾವಣೆಯಲ್ಲಿ ನಾನೂ ಸೋತಿದ್ದೇನೆಯೇ?": ಮೋದಿ ಬೆಂಬಲಿಗರಿಗೆ ರವೀಶ್ ಕುಮಾರ್ ಪತ್ರ

"ಬಿಜೆಪಿ ಕಾರ್ಯಕರ್ತರಲ್ಲಿ ಬಿಜೆಪಿ ಎದ್ದು ಕಾಣುತ್ತದೆ , ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕಾಂಗ್ರೆಸ್ ಬಿಟ್ಟು ಬೇರೆಲ್ಲವೂ ಕಾಣುತ್ತದೆ. ಒಂದೋ ಕಾಂಗ್ರೆಸ್ ಚುನಾವಣೆ ಎದುರಿಸುವುದನ್ನು ನಿಲ್ಲಿಸಬೇಕು, ಇಲ್ಲವೇ ಚುನಾವಣೆಯನ್ನು ಮಾಡು ಇಲ್ಲವೇ ಮಡಿ ಎಂಬಂತೆ ಎದುರಿಸಬೇಕು. ಅಂತಹ ಕಾಂಗ್ರೆಸ್ ಆಗಬೇಕು. ಎಡಪಕ್ಷಗಳ ಪಾತ್ರ ಮುಕ್ತಾಯಗೊಂಡಿದೆ. ಅದು ಕೊಳೆಯುತ್ತಿದೆ. ಅವರ ಬಳಿ ಕೇವಲ ಕಚೇರಿ ಮಾತ್ರ ಉಳಿದಿದೆ. ಕೆಲಸ ಮಾಡಲು ಏನೂ ಉಳಿದಿಲ್ಲ. ಒಂದು ಪಕ್ಷದ ರೂಪದಲ್ಲಿ ಅವರ ಪಾತ್ರ ಅಂತ್ಯವಾಗಿದೆ".

23 ಮೇ 2019ರಂದು ಫಲಿತಾಂಶ ಬರುತ್ತಿರುವಾಗ ನನ್ನ ವಾಟ್ಸಾಪ್ ಗೆ ಮೂರು ತರಹದ ಮೆಸೇಜುಗಳು ಬರಲಾರಂಭಿಸಿದವು. ಈಗ ಆ ಪೈಕಿ ಎರಡು ರೀತಿಯ ಮೆಸೇಜುಗಳ ಬಗ್ಗೆ ಹೇಳುತ್ತೇನೆ , ಮೂರನೇ ರೀತಿಯ ಮೆಸೇಜುಗಳ ಬಗ್ಗೆ ಕೊನೆಯಲ್ಲಿ ಹೇಳುತ್ತೇನೆ. ಹೆಚ್ಚಿನ ಮೆಸೇಜುಗಳು “ಇವತ್ತು ರವೀಶ್ ಮುಖ ಬಾಡಿದೆಯೇ ?”, “ನಿನ್ನ ಪರಿಸ್ಥಿತಿ ಏನಾಗಿದೆ ?”, “ನೀನು ಅವಮಾನಕ್ಕೊಳಗಾಗುವುದನ್ನು ಒಮ್ಮೆ ನೋಡಬೇಕು”, “ನಿನ್ನ ಫೋಟೋ ತೆಗೆದು ಕಳಿಸು”, “ಇವತ್ತು ನಿನ್ನ ಮುಖ ಹೇಗಿದೆ ಎಂದು ನೋಡಬೇಕು”, “ನಿನಗೆ ಬರ್ನಾಲ್ ತಂದು ಕೊಡಬೇಕೇ”, “ನೀನು ಟೈರ್ ಪಂಚರ್ ಕೆಲಸ ಮಾಡುವುದನ್ನು ನೋಡಬೇಕು” ... ... ಇಂತಹ ಮೆಸೇಜುಗಳು. ನಾನು ಅವರೆಲ್ಲರಿಗೂ ಗೆಲುವಿನ ಅಭಿನಂದನೆ ತಿಳಿಸಿದೆ. ಸಾಲದ್ದಕ್ಕೆ ಲೈವ್ ಕಾರ್ಯಕ್ರಮದಲ್ಲೇ ಇಂತಹ ಮೆಸೇಜುಗಳ ಬಗ್ಗೆ ಪ್ರಸ್ತಾಪ ಮಾಡಿ ನನ್ನ ಮೇಲೆ ನಾನೇ ನಕ್ಕೆ. ಇನ್ನೊಂದು ರೀತಿಯ ಮೆಸೇಜುಗಳು – “ನೀವು ಇನ್ನು ಮುಂದೆ ನಿರುದ್ಯೋಗ ಸಮಸ್ಯೆ, ರೈತರ ಸಂಕಟ , ನೀರಿನ ತೊಂದರೆ ಇತ್ಯಾದಿಗಳ ಬಗ್ಗೆ ಮಾತಾಡುವುದನ್ನು ಬಿಟ್ಟು ಬಿಡಿ. ಈ ಜನರು ಇದಕ್ಕೇ ಅರ್ಹರು. ನೀವು ಹೇಳುವುದನ್ನು ನಿಲ್ಲಿಸಿ. ಈಗ ನಿಮ್ಮನ್ನೂ ಜನ ತಿರಸ್ಕರಿಸಿದ್ದಾರೆ ಎಂದು ನಿಮಗನಿಸುದಿಲ್ಲವೇ ?, ನಿಮ್ಮ ಪತ್ರಿಕೋದ್ಯಮ ಮೋದಿಯನ್ನು ಏಕೆ ಸೋಲಿಸುವಲ್ಲಿ ವಿಫಲವಾಯಿತು ಎಂದು ನೀವು ಯೋಚಿಸಿ... ಈ ಧಾಟಿಯ ಮೆಸೇಜುಗಳು. ನಾನು ಭ್ರಮೆಯನ್ನು ಸಾಕಿಕೊಂಡಿಲ್ಲ. ಈ ಬಗ್ಗೆ ಈ ಹಿಂದೆಯೂ ಬರೆದಿದ್ದೇನೆ. ಸಾಕುವುದಿದ್ದರೆ ಆಡು ಸಾಕಿ, ಭ್ರಮೆ ಸಾಕಬೇಡಿ.

2019 ರ ಜನಾದೇಶ ನನ್ನ ವಿರುದ್ಧದ ಫಲಿತಾಂಶ ಹೇಗಾಗುತ್ತದೆ ?, ನಾನು ಕಳೆದ ಐದು ವರ್ಷಗಳಲ್ಲಿ ಹೇಳಿದ್ದು, ಬರೆದಿದ್ದು ಕೂಡ ಚುನಾವಣಾ ಕಣದಲ್ಲಿದ್ದವೇ ?, ನಾವು ತೋರಿಸಿದ ಲಕ್ಷಾಂತರ ಜನರ ಸಂಕಟಗಳು ಸುಳ್ಳಾಗಿದ್ದವೇ ?, ಯುವಜನರು, ರೈತರು ಹಾಗು ಬ್ಯಾಂಕುಗಳಲ್ಲಿ ಗುಲಾಮರಂತೆ ಕೆಲಸ ಮಾಡುವವರು ಬಿಜೆಪಿ ಬೆಂಬಲಿಗರು ಎಂದು ನನಗೆ ಗೊತ್ತಿತ್ತು. ಅವರೂ ಕೂಡ ನನಗೆ ಯಾವತ್ತೂ ಸುಳ್ಳು ಹೇಳಿಲ್ಲ. ಅವರೆಲ್ಲರೂ ಮೊದಲು ಅಥವಾ ನಂತರ ತಾವು ನರೇಂದ್ರ ಮೋದಿಯವರ ಬೆಂಬಲಿಗರು ಎಂದೇ ಹೇಳಿದ್ದರು. ಆದರೆ ಅವರು ಮೋದಿ ಬೆಂಬಲಿಗರು ಎಂಬ ಕಾರಣಕ್ಕೆ ಅವರ ಸಮಸ್ಯೆಗಳನ್ನು ನಾನು ನಿರ್ಲಕ್ಷಿಸಲಿಲ್ಲ. ಅವರ ಸಮಸ್ಯೆಗಳು ನಿಜವಾಗಿದ್ದರಿಂದ ನಾನು ಅವುಗಳನ್ನು ತೋರಿಸಿದ್ದೇನೆ. ಇವತ್ತು ಯಾವುದೇ ಒಬ್ಬ ಸಂಸದ ತಾನು ಐವತ್ತು ಸಾವಿರ ಜನರಿಗೆ ಉದ್ಯೋಗ ನೇಮಕಾತಿ ಪತ್ರ ಕೊಡಿಸಿದೆ ಎಂದು ಹೇಳುವ ಸ್ಥಿತಿಯಲ್ಲಿಲ್ಲ. ಆದರೆ ನನ್ನ ಉದ್ಯೋಗ ಸರಣಿ ಕಾರ್ಯಕ್ರಮಗಳಿಂದಾಗಿ ದಿಲ್ಲಿಯಿಂದ ಬಿಹಾರದವರೆಗೆ ಜನರಿಗೆ ಉದ್ಯೋಗ ನೇಮಕಾತಿ ಪತ್ರ ಬಂತು. ಹಲವು ಪರೀಕ್ಷೆಗಳ ಫಲಿತಾಂಶ ಪ್ರಕಟವಾದವು. ಇದರಲ್ಲಿ ದೊಡ್ಡ ಸಂಖ್ಯೆಯ ಜನರು ಅವರಿಗೆ ನೇಮಕಾತಿ ಪತ್ರ ಸಿಕ್ಕಿದ ಮೇಲೆ ನಿಮಗೆ ನಾವು ಬೈಯುತ್ತಿದ್ದೆವು ಎಂದು ಹೇಳಿ ಕ್ಷಮೆ ಕೇಳಿದ್ದಾರೆ. ಹೀಗೆ ನೇಮಕಾತಿ ಆದೇಶ ಸಿಕ್ಕಿದ ಬಳಿಕ ನನ್ನಲ್ಲಿ ಕ್ಷಮೆ ಕೇಳಿ ಬಂದಿರುವ ಸಾವಿರಾರು ಪತ್ರಗಳು ಹಾಗು ಮೆಸೇಜುಗಳ ಸ್ಕ್ರೀನ್ ಶಾಟ್ ನನ್ನಲ್ಲಿ ಬಿದ್ದುಕೊಂಡಿವೆ. ಈ ಪೈಕಿ ಒಬ್ಬನಾದರೂ ನಾನು ಮೋದಿಯವರಿಗೆ ಮತ ಹಾಕಬೇಡಿ ಎಂದು ಹೇಳಿದ್ದೇನೆ ಎಂದು ಹೇಳಲಾರ. ಹಾಂ, ಮತ ಮನಃಪೂರ್ವಕವಾಗಿ ಹಾಕಿ ಮತ್ತು ಮತ ಹಾಕಿದ ಮೇಲೆ ಎಲ್ಲ ನಾಗರಿಕರಂತೆ ವರ್ತಿಸಿ ಎಂದು ಹೇಳಿದ್ದೇನೆ.

ಈ ಐವತ್ತು ಸಾವಿರ ಜನರಿಗೆ ನೇಮಕಾತಿ ಆದೇಶ ಕೊಡಿಸಿದ ಯಶಸ್ಸು ಎಷ್ಟು ಮಹತ್ವದ್ದು ಎಂದರೆ ನಾನು ಮೋದಿ ಬೆಂಬಲಿಗರೆದುರು ಅವಮಾನಿತನಾದಾಗಲೂ ಇದನ್ನು ಹೆಮ್ಮೆಯಿಂದ ನನ್ನ ಎದೆಗೆ ಬ್ಯಾಡ್ಜ್ ನಂತೆ ತಗುಲಿಸಿಕೊಂಡಿರುತ್ತೇನೆ. ಏಕೆಂದರೆ ತಮ್ಮ ಸಮಸ್ಯೆ ಬಗೆಹರಿಸುವಂತೆ ನನ್ನನ್ನು ಸಂಪರ್ಕಿಸಿದವರು ಆಗ ನನ್ನನ್ನಲ್ಲ, ಮೋದಿ ಬೆಂಬಲಿಗರನ್ನೇ ಅವಮಾನಿಸಲಿದ್ದಾರೆ. ನನ್ನ ಉದ್ಯೋಗ ಸರಣಿ ಕಾರ್ಯಕ್ರಮ ಎಷ್ಟು ಪ್ರಭಾವದಿಂದಾಗಿ ಪ್ರಚಂಡ ಬಹುಮತವಿದ್ದ ಮೋದಿ ಸರಕಾರ ಕೂಡ ರೈಲ್ವೆಯಲ್ಲಿ ಲಕ್ಷಾಂತರ ಉದ್ಯೋಗ ತೆರೆಯಿತು. ಅದು ದೊಡ್ಡ ವಿಷಯವಾಯಿತು. ಮೋದಿ ಸರಕಾರದ ಎಲ್ಲ ಐದು ವರ್ಷಗಳಲ್ಲಿ ರೈಲ್ವೆಯಲ್ಲಿ ಎಷ್ಟು ಉದ್ಯೋಗಾವಕಾಶ ಸೃಷ್ಟಿಯಾಯಿತು ಮತ್ತು ಕೊನೆಯ ಒಂದು ವರ್ಷದಲ್ಲಿ ಎಷ್ಟಾಯಿತು ಎಂದು ನೀವೇ ನೋಡಿ. ಈ ಬೇಡಿಕೆಯನ್ನು ಸರಕಾರದ ಮುಂದಿಟ್ಟಿದ್ದು ಗೋದಿ ಮೀಡಿಯಾಗಳೇ ಅಥವಾ ನಾನೇ ?, ಪ್ರೈಮ್ ಟೈಮ್ ನಲ್ಲಿ ಅದನ್ನು ತೋರಿಸಿದ್ದು ನಾನು. ರೈಲ್ವೆ ಸರಣಿ ಕಾರ್ಯಕ್ರಮದ ಮೂಲಕ ಸ್ವತಂತ್ರ ಸೇನಾನಿ ಎಕ್ಸ್ ಪ್ರೆಸ್ ನಂತಹ ರೈಲನ್ನು ಸ್ವಲ್ಪ ಸಮಯವಾದರೂ ಸಮಯಕ್ಕೆ ಸರಿಯಾಗಿ ಓಡಿಸಿದ್ದು ಮೋದಿ ವಿರೋಧಿ ಕೆಲಸವೇ ?, ಬಿಹಾರದ ಕಾಲೇಜುಗಳಲ್ಲಿ ಮೂರು ವರ್ಷದ ಬಿ ಎ ಪದವಿಯಲ್ಲಿ ಐದೈದು ವರ್ಷ ಕೊಳೆಯುವವರ ಬಗ್ಗೆ ಮಾತಾಡುವುದು ಮೋದಿ ವಿರೋಧಿಯೇ ?

ಈ ಐದು ವರ್ಷಗಳಲ್ಲಿ ನನ್ನನ್ನು ಕೋಟ್ಯಂತರ ಜನರು ಓದಿದರು. ಅದೆಷ್ಟೋ ಸಂಖ್ಯೆಯ ಜನರು ಬಂದು ನೋಡಿದರು. ಟಿವಿಯಲ್ಲಿ ನೋಡಿ, ಕೇಳಿದರು. ಹೊರಗೆ ಸಿಕ್ಕಿದಾಗ ಆಲಂಗಿಸಿದರು. ಪ್ರೀತಿಸಿದರು. ಅವರಲ್ಲಿ ನರೇಂದ್ರ ಮೋದಿಯವರ ಬೆಂಬಲಿಗರೂ ಇದ್ದರು. ಸಂಘದ ಜನರೂ ಇದ್ದರು, ವಿಪಕ್ಷದವರೂ ಇದ್ದರು. ಬಿಜೆಪಿಯವರೂ ಮೌನವಾಗಿ ಅಭಿನಂದಿಸುತ್ತಿದ್ದರು. ಇದರಲ್ಲಿ ಒಂದು ವಿಷಯ ನಾನು ತಿಳಿದುಕೊಂಡೆ. ಮೋದಿ ಬೆಂಬಲಿಗರಾಗಿರಲಿ ಅಥವಾ ವಿರೋಧಿಗಳಾಗಿರಲಿ ಅವರಿಗೆ ಗೋದಿ ಮೀಡಿಯಾ ಮತ್ತು ಪತ್ರಿಕೋದ್ಯಮದ ವ್ಯತ್ಯಾಸ ಗೊತ್ತಿತ್ತು. ಈ ಗೋದಿ ಮೀಡಿಯಾ ಮೋದಿಯವರ ಜನಪ್ರಿಯತೆಯ ಹೆಸರಲ್ಲಿ ನನ್ನ ಮೇಲೆ ದಾಳಿ ಮಾಡಿದಾಗ ಈ ಮೋದಿ ಬೆಂಬಲಿಗರು ಸುಮ್ಮನಾಗಿಬಿಡುತ್ತಾರೆ. ಭಾರತದಂತಹ ದೇಶದಲ್ಲಿ ಪ್ರಾಮಾಣಿಕ ಹಾಗು ನೈತಿಕವಾಗಿರುವುದಕ್ಕೆ ಒಂದು ಸಾಂಸ್ಥಿಕ ಮತ್ತು ಸಾಮಾಜಿಕ ಬೆಂಬಲ ಎಂಬುದು ಇರುವುದಿಲ್ಲ. ಇಲ್ಲಿ ಪ್ರಾಮಾಣಿಕನಾಗಿರುವ ಹೋರಾಟ ಏಕಾಂಗಿಯಾಗಿರುತ್ತದೆ ಮತ್ತು ಕೊನೆಗೆ ಅದರಲ್ಲಿ ಸೋಲಾಗುತ್ತದೆ. ಸತ್ಯವಾದಿ, ಪತ್ರಿಕೋದ್ಯಮದ ಮಾತಾಡುವ ರವೀಶ್ ಎಲ್ಲಿದ್ದಾರೆ ಎಂದು ಜನರು ಪ್ರಶ್ನಿಸುತ್ತಾರೆ. ನನ್ನಲ್ಲೂ ದೌರ್ಬಲ್ಯವಿದೆ. ನಾನು ಆದರ್ಶನೇನಲ್ಲ. ಹಾಗೆಂದು ನಾನೆಂದೂ ಹೇಳಿಕೊಂಡೂ ಇಲ್ಲ. ಆದರೆ ನೀವು ನನ್ನನ್ನು ಹಾಗೆ ಪರಿಗಣಿಸಿದರೆ ನೀವು ನಾನು ಹೇಳುತ್ತಿರುವ ಮತ್ತು ನನ್ನಂತಹ ಇನ್ನೂ ಹಲವು ಪತ್ರಕರ್ತರು ಪ್ರತಿಪಾದಿಸುತ್ತಿರುವ ಅದೇ  ಪತ್ರಿಕೋದ್ಯಮವನ್ನು ನೀವು ಮತ್ತೆ ಪುನರಾವರ್ತಿಸುತ್ತಿದ್ದೀರಿ.

ನನ್ನ ವೃತ್ತಿಯಲ್ಲಿ ನಾನು ಸೋಲುವ ಹೋರಾಟವನ್ನೇ ಮಾಡುತ್ತಿದ್ದೇನೆ ಎಂದು ನನಗೆ ಗೊತ್ತಿದೆ. ಇಷ್ಟು ದೊಡ್ಡ ಪ್ರಭುತ್ವ ಮತ್ತು ಕಾರ್ಪೊರೇಟ್ ಬಂಡವಾಳಶಾಹಿ ಜೊತೆ ಹೋರಾಡುವ ತಾಕತ್ತು ಕೇವಲ ಗಾಂಧೀಜಿಗೆ ಇತ್ತು. ಆದರೆ ನನ್ನಂತಹ ಪತ್ರಕರ್ತರು ಕಡಿಮೆ ಆದಾಯದಲ್ಲಿ ತೃಪ್ತಿ ಪಟ್ಟುಕೊಂಡು ನಿಜವಾದ ಪತ್ರಿಕೋದ್ಯಮ ಮಾಡುವುದನ್ನು ನೋಡಿದ ಮೇಲೆ ನಾನು ಅವರಿಗಿಂತ ಹೆಚ್ಚು ಮಾಡಬೇಕು ಎಂದು ನನಗನಿಸಿತು. ನಾನು ಪ್ರತಿದಿನ ಬೆಳಗ್ಗೆ ಇಂಗ್ಲೀಷಿನಿಂದ ಅನುವಾದ ಮಾಡಿ ಹಿಂದಿ ಓದುಗರಿಗಾಗಿ ಮೋದಿ ವಿರೋಧಿಯಾಗಲು ಬರೆದಿದ್ದಲ್ಲ. ಹಿಂದಿ ಓದುಗರು ಜಾಗೃತರಾಗಲಿ ಎಂದು ಬರೆದೆ. ಇದಕ್ಕಾಗಿ ಗಂಟೆಗಟ್ಟಲೆ ವ್ಯಯಿಸಿದೆ. ಇದನ್ನು ನಾನು ಏಕಾಂಗಿಯಾಗಿ ಸುದೀರ್ಘ ಕಾಲ ಮಾಡಲಾರೆ ಎಂದು ನನಗೆ ಚೆನ್ನಾಗಿ ಗೊತ್ತಿತ್ತು. ಮೋದಿ ವಿರೋಧಿ ಕ್ರೇಝ್ ಅಂತೂ ಇರಲೇ ಇಲ್ಲ. ನನ್ನ ವೃತ್ತಿ ಮೇಲೆ ಸ್ವಲ್ಪ ಹೆಚ್ಚೇ ಪ್ರೀತಿ ಇದ್ದಿದ್ದರಿಂದ ಪಣಕ್ಕೊಡ್ಡಿ ದುಡಿದೆ. ನನ್ನ ವೃತ್ತಿಯನ್ನೇ ಪ್ರಶ್ನಿಸುವುದರಲ್ಲಿ ಒಂದು ಅಪಾಯವಿತ್ತು. ನನ್ನ ಜೀವನೋಪಾಯವನ್ನೇ ಕಳೆದುಕೊಳ್ಳುವ ಅಪಾಯ. ಆದರೂ ಜೀವನದಲ್ಲಿ ಸ್ವಲ್ಪ ಸಮಯ ಅದನ್ನೂ ಮಾಡಿ ನೋಡಿದೆ. ಇದರಲ್ಲಿ ಅದರದ್ದೇ ಸಮಸ್ಯೆ ಇರುತ್ತದೆ, ಸವಾಲು ಇರುತ್ತದೆ ಆದರೆ ಇದರಿಂದ ಸಿಗುವ ಪಾಠ ಮಾತ್ರ ಅತ್ಯಂತ ಅಪರೂಪದ್ದು. ಈ ಆದಾಯದ ಪ್ರಶ್ನೆ ಕೇಳಿ ನಾನು ಮೋದಿ ಬೆಂಬಲಿಗರ ನಡುವೆ ಅವಿತುಕೊಳ್ಳಬಲ್ಲೆ, ಆದರೆ ನಿಮ್ಮ ಓದುಗರ ಮುಂದೆ ಮಾತ್ರ ಬರಲಾರೆ.

ನಾನು ಕೋಮುವಾದದ ವಿರುದ್ಧ ಎಲ್ಲರ ಎದುರು ಬಂದು ಖಂಡಿತ ಹೇಳಿದ್ದೇನೆ. ಇವತ್ತೂ ಹೇಳುತ್ತೇನೆ. ನಿಮ್ಮೊಳಗೆ ಧಾರ್ಮಿಕ ಮತ್ತು ಜಾತಿ ಪೂರ್ವಗ್ರಹ ಕುಳಿತುಬಿಟ್ಟಿದೆ. ನೀವು ಯಾಂತ್ರಿಕವಾಗುತ್ತಿದ್ದೀರಿ. ಮತ್ತೆ ಹೇಳುತ್ತೇನೆ. ಧಾರ್ಮಿಕ ಮತ್ತು ಜಾತಿ ಪೂರ್ವಗ್ರಹಪೀಡಿತ ಕೋಮುವಾದ ಒಂದು ದಿನ ನಿಮ್ಮನ್ನು ಮಾನವ ಬಾಂಬ್ ಆಗಿ ಪರಿವರ್ತಿಸುತ್ತದೆ. ಸ್ಟುಡಿಯೋದಲ್ಲಿ ನರ್ತಿಸುತ್ತಿರುವ ನಿರೂಪಕರನ್ನು ನೋಡಿದರೆ ಇದು ಪತ್ರಿಕೋದ್ಯಮವಲ್ಲ ಎಂದು ನಿಮಗೂ ಗೊತ್ತಾಗುತ್ತಿದೆ. ಬ್ಯಾಂಕುಗಳಲ್ಲಿ ಗುಲಾಮರಂತೆ ಕೆಲಸ ಮಾಡುತ್ತಿರುವ ಸಾವಿರಾರು ಮಹಿಳೆಯರು ಶೌಚಾಲಯ ಇಲ್ಲದ , ಗರ್ಭಕೋಶ ಬಿದ್ದು ಹೋಗುವಷ್ಟು ಸಮಸ್ಯೆ ಇರುವ ಬಗ್ಗೆ ನನಗೆ ಪತ್ರ ಬರೆದಿದ್ದು ನಾನು ಮೋದಿ ವಿರೋಧಿ ಎಂದೇ ?, ಅವರ ಆ ಪತ್ರಗಳು ಇಂದಿಗೂ ನನ್ನ ಬಳಿ ಇವೆ. ನಾನು ಅವರ ಸಮಸ್ಯೆಗಳಿಗೆ ಧ್ವನಿಯಾದೆ. ಬಳಿಕ ಅದೆಷ್ಟೋ ಕಡೆ ಬ್ಯಾಂಕುಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣವಾಯಿತು. ನಾನು ಮೋದಿ ಅಜೆಂಡಾ ನಡೆಸಿಲ್ಲ. ಅದು ನನ್ನ ಕೆಲಸವೂ ಅಲ್ಲ. ನೀವು ನನ್ನಿಂದ ಇದೇ ನಿರೀಕ್ಷೆ ಇಟ್ಟುಕೊಂಡಿದ್ದರೆ ಒಮ್ಮೆ ಅಲ್ಲ ನೂರು ಬಾರಿ ಯೋಚಿಸಿ ಎಂದೇ ಹೇಳುತ್ತೇನೆ.  

ಪತ್ರಿಕೋದ್ಯಮದಲ್ಲೂ ಗತಕಾಲದ ಪಾಪಗಳ ಸ್ಮರಣೆ ಖಂಡಿತ ಇದೆ. ಇದನ್ನು ಮೋದಿ ಆಗಾಗ ಮಾಡುತ್ತಿರುತ್ತಾರೆ. ಆದರೆ ಅವರ ಕಾಲದ ಪತ್ರಿಕೋದ್ಯಮದ ಮಾಡೆಲ್ ಗತಕಾಲದ ಪಾಪಗಳನ್ನೇ ಆಧರಿಸಿದೆ ಎಂಬುದನ್ನು ಅವರು ಮರೆತುಬಿಡುತ್ತಾರೆ. ಪತ್ರಿಕೋದ್ಯಮ ಸೋತಿದೆ ಎಂದು ನಾನು ಒಪ್ಪಿಕೊಳ್ಳುವುದಿಲ್ಲ. ಪತ್ರಿಕೋದ್ಯಮವೇ ಮುಗಿದು ಹೋಗುತ್ತದೆ, ಅದು ಬೇರೆ ಮಾತು. ಪತ್ರಿಕೋದ್ಯಮವೇ ಉಳಿಯದೆ ಇರುವಾಗ ನೀವು ಪತ್ರಿಕೋದ್ಯಮಕ್ಕಾಗಿ ನನ್ನ ಕಡೆಯೇ ನೀವು ಏಕೆ ನೋಡುತ್ತೀರಿ ?, ನೀವು ಸಂಪೂರ್ಣ ಸಮಾಪ್ತಿಯ ಸಂಕಲ್ಪ ಮಾಡಿದ್ದೀರಾ ?, ನಾನು ನನ್ನ ಮಾತಾಡುವಾಗ ಹೋರಾಟ ಮಾಡುತ್ತಿರುವ ಆ ಎಲ್ಲ ಪತ್ರಕರ್ತರ ಮಾತೂ ಅದರಲ್ಲಿದೆ. ಪತ್ರಿಕೋದ್ಯಮದ ಸಂಸ್ಥೆಗಳಲ್ಲಿ ಒಂದುಗೂಡಿರುವ ಅನೈತಿಕ ಶಕ್ತಿಗಳಿಂದಾಗಿ ಪತ್ರಿಕೋದ್ಯಮ ಮುಗಿದು ಹೋಗಿದೆ. ಅದನ್ನು ಒಬ್ಬ ವ್ಯಕ್ತಿ ಮಾಡಲಾರ. ಹೀಗಿರುವಾಗ ನಮ್ಮಂತಹವರು ಏನು ಮಾಡಬಲ್ಲರು ?, ಆದರೂ ಇಂತಹ ಕೆಲಸವನ್ನು ಕೇವಲ ಮೋದಿ ವಿರೋಧಿ ಕನ್ನಡಕದಿಂದ ನೋಡುವುದು ಸರಿಯಲ್ಲ. ಇದು ನಮ್ಮ ವೃತ್ತಿಯೊಳಗೆ ಬಂದಿರುವ ಅಧಃಪತನದ ವಿರೋಧವಾಗಿದೆ. ಈ ವಿಷಯವನ್ನು ಮೋದಿ ಬೆಂಬಲಿಗರಿಗೆ ಈ ಅವಧಿಯಲ್ಲಿ ತಿಳಿಸಿಕೊಡಬೇಕಾಗಿದೆ. ಮೋದಿ ಬೆಂಬಲ ಬೇರೆ. ಒಳ್ಳೆಯ ಪತ್ರಿಕೋದ್ಯಮದ ಬೆಂಬಲ ಬೇರೆ. ನಾನು ಮೋದಿ ಬೆಂಬಲಿಗರಲ್ಲೂ ವಿನಂತಿ ಮಾಡುವುದೇನೆಂದರೆ ಅವರು ಈ ಗೋದಿ ಮೀಡಿಯಾ ನೋಡುವುದನ್ನು ಬಂದ್ ಮಾಡಬೇಕು. ಅಂತಹ ಪತ್ರಿಕೆಗಳನ್ನು ಓದುವುದನ್ನು ನಿಲ್ಲಿಸಿ. ಇವುಗಳ ಹೊರತಾಗಿಯೂ ಮೋದಿಯವರನ್ನು ಬೆಂಬಲಿಸಲು ಸಾಧ್ಯವಿದೆ.

ಏನೇ ಇರಲಿ, 23 ಮೇ  2019ಕ್ಕೆ ಬಂದ ಬಿರುಗಾಳಿ ಈಗ ಹೋಗಿದೆ ಆದರೆ ಗಾಳಿ ಇನ್ನೂ ಜೋರಾಗಿಯೇ ಇದೆ. ನರೇಂದ್ರ ಮೋದಿಯವರು ಭಾರತದ ಜನರ ಮನೆ ಮನಗಳಲ್ಲಿ ಏಕಸ್ವಾಮ್ಯ ಸಾಧಿಸಿಬಿಟ್ಟಿದ್ದಾರೆ. 2014ರಲ್ಲಿ ಅವರಿಗೆ ಮನಸ್ಸಿಂದ ಮತ ಸಿಕ್ಕಿದ್ದರೆ 2019 ರಲ್ಲಿ ತನುಮನಗಳಿಂದ ಮತ ಬಂದಿದೆ. ತಮ್ಮ ಮೇಲೆ ಬಂದಿದ್ದ ಎಲ್ಲ ಸಂಕಟಗಳನ್ನು ಸಹಿಸಿಕೊಂಡು ಜನರು ಮನಃಪೂರ್ವಕವಾಗಿ ಅವರಿಗೆ ಮತ ಹಾಕಿದ್ದಾರೆ. ಅವರ ಈ ಜಯವನ್ನು ಉದಾರತೆಯಿಂದ ಸ್ವೀಕರಿಸಬೇಕು. ನಾನು ಅದನ್ನು ಸ್ವೀಕರಿಸುತ್ತೇನೆ. ಜನರನ್ನು ತಿರಸ್ಕರಿಸಿ ನೀವು ಪ್ರಜಾಪ್ರಭುತ್ವವಾದಿ ಆಗಲಾರಿರಿ. ಈ ಖುಷಿಯಲ್ಲಿ ಭವಿಷ್ಯದ ಅಪಾಯಗಳನ್ನು ನೋಡಬಹುದು ಆದರೆ ಅದಕ್ಕೂ ನೀವು ಈ ಖುಷಿಯಲ್ಲಿ ಶಾಮೀಲಾಗಬೇಕು. ಜನರನ್ನು ಮೋಡಿ ಮಾಡಿ ಮೋದಿಯಾಗಿಸುವ ವಿಷಯ ಯಾವುದು ಎಂದು ತಿಳಿದುಕೊಳ್ಳಲೂ ಇದರಲ್ಲಿ ಶಾಮೀಲಾಗಬೇಕು. ತಮ್ಮ ನಾಯಕರಲ್ಲೇ ತಾವು ಒಂದಾಗಿಬಿಡುವ ಇದನ್ನು ಅಂಧಭಕ್ತಿ ಎಂದೂ ಹೇಳಬಹುದು. ಆದರೆ ಇದನ್ನು ಭಕ್ತಿಯ ಪರಾಕಾಷ್ಠೆ ಎಂದೂ ನೋಡಬೇಕು. ಮೋದಿಯವರಿಗೆ ಜನರೇ ಮೋದಿಯಾಗುತ್ತಿರುವುದು ಆ ಪರಾಕಾಷ್ಠೆಯ ಪ್ರತೀಕವಾಗಿ ಕಾಣುತ್ತಿದೆ. ಮನೆಮನೆಯಲ್ಲಿ ಮೋದಿ ಬದಲು ನೀವು ಜನಜನ ಮೋದಿ ಎಂದು ಹೇಳಬಹುದು.

2014ರ ಬಳಿಕ ಈ ದೇಶದ ಗತಕಾಲ ಮತ್ತು ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಬಿಂದು ( ರೆಫರೆನ್ಸ್ ಪಾಯಿಂಟ್ ) ಬದಲಾಗಿದೆ ನಾನು ಮೊದಲೇ ಹೇಳುತ್ತಾ ಬಂದಿದ್ದೇನೆ. ಚುನಾವಣೆಯ ಮೊದಲೇ ಮೋದಿಯವರು ಹೊಸ ಭಾರತದ ಮಾತಾಡುತ್ತಿದ್ದರು. ಆ ಹೊಸ ಭಾರತ ಈಗ ಅವರ ಕಲ್ಪನೆಯ ಭಾರತವಾಗಿ ಬದಲಾಗಿದೆ. ಪ್ರತಿ ಜನಾದೇಶದಲ್ಲಿ ಅವಕಾಶಗಳು ಮತ್ತು ಅಪಾಯಗಳು ಇರುತ್ತವೆ. ಇವುಗಳಿಂದ ಮುಕ್ತ ಜನಾದೇಶ ಎಂಬುದಿಲ್ಲ. ಜನರು ಎಲ್ಲ ಅಪಾಯಗಳ ಹೊರತಾಗಿಯೂ ಒಂದು ಅವಕಾಶವನ್ನು ಆಯ್ಕೆ ಮಾಡಿದ್ದಾರೆ ಎಂದಾದರೆ ಅವರಿಗೆ ಆ ಅಪಾಯಗಳನ್ನು ಎದುರಿಸುವ ಧೈರ್ಯ ಕೂಡ ಇದೆ ಎಂದರ್ಥ. ಜನರು ಭಯಭೀತರಾಗಿಲ್ಲ ಎಂದರ್ಥ. ಇದು ಭಯದ ಜನಾದೇಶ ಅಲ್ಲ . ಇದರಿಂದ ಭಯಭೀತರಾಗಲೂ ಬಾರದು. ಐತಿಹಾಸಿಕ ಕಾರಣಗಳಿಂದಾಗಿ ಜನರ ನಡುವೆ ಹಲವು ಅತೃಪ್ತಿಗಳಿವೆ. ಹಲವು ದಶಕಗಳಿಂದ ಇದನ್ನು ಜನರು ಸಹಿಸಿಕೊಂಡು ಬಂದಿದ್ದಾರೆ. ಈಗ ಆ ಗತಕಾಲದ ಅತೃಪ್ತಿಯ ನೆನಪನ್ನು ಸಹಿಸಿಕೊಳ್ಳಲಾಗಿಲ್ಲ. ಅದೇ ಈ ಬಾರಿ ವಿಚಾರಧಾರೆಯ ಹೆಸರಲ್ಲಿ ಪ್ರಕಟವಾಗಿದೆ. ಅದನ್ನು ಹೊಸ ಭಾರತ ಎಂದು ಬಣ್ಣಿಸಲಾಗುತ್ತಿದೆ. 

ನೈತಿಕ ಶಕ್ತಿ ಇರುವವರು ಮಾತ್ರ ನರೇಂದ್ರ ಮೋದಿಯವರಿಗೆ ಪರ್ಯಾಯವಾಗಬಲ್ಲರು ಎಂದು ನಾನು ಯಾವಾಗಲೂ ಹೇಳಿದ್ದೇನೆ. ನನ್ನ ಲೇಖನಗಳಲ್ಲೂ ಈ ನೈತಿಕ ಬಲದ ಮಾತಾಡಿದ್ದೇನೆ. ಖಂಡಿತ ನರೇಂದ್ರ ಮೋದಿಯವರ ಪಕ್ಷದಲ್ಲೇ ಬೇಕಾದಷ್ಟು ಅನೈತಿಕ ಶಕ್ತಿಗಳು ಹಾಗು ಸಂಪನ್ಮೂಲಗಳ ವಿಪುಲ ಭಂಡಾರವೇ ಇದೆ. ಆದರೆ ಅದನ್ನು ಜನರು ಗತಕಾಲದ ಕಹಿ ನೆನಪುಗಳ ಗುಣದೋಷದಂತೆ ನೋಡುತ್ತಿದ್ದಾರೆ. ಹಾಗೆ ಸಹಿಸಿಕೊಳ್ಳುತ್ತಿದ್ದಾರೆ. ಮೋದಿಯವರೂ ಆ ಗತಕಾಲದ ಕಹಿ ನೆನಪುಗಳನ್ನು ಜೀವಂತ ಇಡುತ್ತಾರೆ. ಅವರು ಇದನ್ನು ಪ್ರತಿಕ್ಷಣ ನೆನಪು ಮಾಡಿಸುತ್ತಲೇ ಇರುವುದನ್ನು ನೀವು ನೋಡಿದ್ದೀರಿ. ಜನರನ್ನು ಗತಕಾಲದ ವರ್ತಮಾನದಲ್ಲಿ ಇಡುತ್ತಾರೆ ಅವರು. ಮೋದಿಯವರ ಪಕ್ಷದಲ್ಲಿರುವ ಅನೈತಿಕ ಶಕ್ತಿಗಳು ವಿಪಕ್ಷದಲ್ಲೂ ಇವೆ ಎಂಬುದು ಜನರಿಗೆ ಗೊತ್ತಿದೆ. ಎರಡು ಸಮಾನ ಅನೈತಿಕ ಶಕ್ತಿಗಳ ನಡುವೆ ಜನ ನಮ್ಮನ್ನೇ ಆಯ್ಕೆ ಮಾಡಬಹುದು ಎಂದು ವಿಪಕ್ಷ ಭಾವಿಸಿತು. ಹಾಗಾಗಿ ಅದೂ ಅಳಿದುಳಿದ ಅನೈತಿಕ ಶಕ್ತಿಗಳ ಮೊರೆ ಹೋಯಿತು. ಮೋದಿಯವರು ಆ ಅನೈತಿಕ ಶಕ್ತಿಗಳನ್ನೂ ದುರ್ಬಲ ಹಾಗು ಟೊಳ್ಳು ಮಾಡಿಬಿಟ್ಟರು. ಹಾಗಾಗಿ ವಿಪಕ್ಷ ನಾಯಕರು ಬಿಜೆಪಿಯತ್ತ ಹೋದರು. ವಿಪಕ್ಷದಲ್ಲಿ ಮಾನವ ಹಾಗು ಆರ್ಥಿಕ ಎರಡೂ ಸಂಪತ್ತುಗಳು ಖಾಲಿಯಾದವು. ಎರಡೂ ಕಡೆ ಅನೈತಿಕ ಶಕ್ತಿಗಳೇ ಆಧಾರ. ಇದರಿಂದ ವಿಪಕ್ಷಕ್ಕೆ ಒಂದು ಹೊಸ ಅವಕಾಶ ಸೃಷ್ಟಿಯಾಯಿತು. ಅದು ಚುನಾವಣೆಯ ಚಿಂತೆ ಬಿಟ್ಟು ತನ್ನ ರಾಜಕೀಯ ಹಾಗು ವೈಚಾರಿಕ ಪುನರುಜ್ಜೀವನಕ್ಕೆ ಪ್ರಯತ್ನಿಸಬಹುದಿತ್ತು. ಆದರೆ ವಿಪಕ್ಷ ಹಾಗೆ ಮಾಡಲಿಲ್ಲ.

ವಿಪಕ್ಷ ಗತಕಾಲದ ಕಹಿ ನೆನಪುಗಳಿಗಾಗಿ ಕ್ಷಮೆ ಕೇಳಬೇಕಿತ್ತು. ಇನ್ನು ಮುಂದೆ ಹೀಗಾಗುವುದಿಲ್ಲ ಎಂದು ಹೊಸ ಭರವಸೆ ಕೊಡಬೇಕಿತ್ತು. ಈ ಮಾತನ್ನು ಜನರಿಗೆ ತಲುಪಿಸಲು ಸುಡುವ ಬಿಸಿಲಲ್ಲಿ ನಡೆಯಬೇಕಿತ್ತು. ಅವರು ಅದನ್ನೂ ಮಾಡಲಿಲ್ಲ. 2014ರ ಬಳಿಕ ನಾಲ್ಕು ವರ್ಷ ಮನೆಯಲ್ಲೇ ಕುಳಿತರು. ಜನರ ನಡುವೆ ಜನರಾಗಿ ಹೋಗಲಿಲ್ಲ. ಜನರ ಸಮಸ್ಯೆಗಳ ಬಗ್ಗೆ ತಾತ್ಕಾಲಿಕವಾಗಿ ಅಲ್ಲಲ್ಲಿ ಮಾತಾಡಿ ಮತ್ತೆ ಮನೆಗೆ ಹೋಗಿ ಕೂತರು. 2019 ಬಂದಾಗ ತಮ್ಮ ಅಳಿದುಳಿದ ಅನೈತಿಕ ಶಕ್ತಿಗಳ ಸಮೀಕರಣದ ಮೂಲಕ ಒಂದು ಬೃಹತ್ ಅನೈತಿಕ ಶಕ್ತಿಸಮೂಹವನ್ನು ಎದುರು ಹಾಕಿಕೊಳ್ಳಲು ಹೊರಟರು. ಬೇರೆ ಬೇರೆ ರಾಜಕೀಯ ಪಕ್ಷಗಳ ಪ್ರಸ್ತುತತೆ ಈಗ ಮುಗಿದಿದೆ ಎಂಬುದನ್ನು ವಿಪಕ್ಷ ತಿಳಿದುಕೊಳ್ಳಬೇಕಿತ್ತು. ಎಸ್ಪಿ, ಬಿಎಸ್ಪಿ ಅಥವಾ ಆರ್ ಜೆ ಡಿ ಗಳ ಮೂಲಕ ನಮ್ಮ ಪ್ರಜಾಪ್ರಭುತ್ವದಲ್ಲಿ ಬಂದಿದ್ದ ಸಾಮಾಜಿಕ ಸಂತುಲನೆಗೆ ಈಗ ಯಾವುದೇ ಪಾತ್ರ ಇಲ್ಲ. ಇದು ವಾಸ್ತವ.

ಈ ರಾಜಕೀಯ ಪಕ್ಷಗಳು ಸಮಾಜದ ಹಿಂದುಳಿದ ಹಾಗು ವಂಚಿತ ಸಮುದಾಯಗಳನ್ನು ಅಧಿಕಾರದತ್ತ ತರುವ ಐತಿಹಾಸಿಕ ಕೆಲಸ ಮಾಡಿರುವುದು ಹೌದು. ಆದರೆ ಈ ಪ್ರಕ್ರಿಯೆಯಲ್ಲಿ ಅವರು ಇತರ ಹಿಂದುಳಿದವರನ್ನು ಮರೆತು ಬಿಟ್ಟರು. ಈ ಪಕ್ಷಗಳಲ್ಲೂ ಈ ಹಿಂದುಳಿದವರ ಪ್ರಾತಿನಿಧ್ಯ ಇತರ ಪಕ್ಷಗಳಲ್ಲಿ ಇರುವಂತೆಯೇ ನಕಲಿಯಾಗಿಬಿಟ್ಟಿತು. ಈ ಪಕ್ಷಗಳು ಈಗ ಅಪ್ರಸ್ತುತವಾಗಿರುವಾಗ ಅವುಗಳನ್ನು ವಿಸರ್ಜಿಸುವ ಧೈರ್ಯವನ್ನೂ ತೋರಿಸಬೇಕು. ತಮ್ಮ ಪುರಾತನ ಮಹತ್ವಾಕಾಂಕ್ಷೆಗಳನ್ನೂ ಬಿಟ್ಟು ಬಿಡಬೇಕಿತ್ತು. ಭಾರತೀಯರು ಇನ್ನು ಹೊಸ ವಿಚಾರ ಹಾಗು ಹೊಸ ಪಕ್ಷಗಳನ್ನು ಸ್ವಾಗತಿಸುವವರೆಗೆ ನರೇಂದ್ರ ಮೋದಿಯವರ ಜೊತೆಗೇ ಇರುತ್ತದೆ.

ಈಗ ಸಮಾಜ ಮತ್ತು ರಾಜಕೀಯದ ಹಿಂದೂಕರಣವಾಗಿದೆ. ಇದು ಶಾಶ್ವತ ಎಂದು ನಾನು ಒಪ್ಪುವುದಿಲ್ಲ. ಹೇಗೆ ಬಹುಜನ ಶಕ್ತಿಗಳ ಉತ್ಥಾನ ಶಾಶ್ವತವಾಗಿರಲಿಲ್ಲವೋ ಹಾಗೆಯೆ ಇದು ಕೂಡ ಶಾಶ್ವತವಲ್ಲ. ಇದು ಇತಿಹಾಸದ ಒಂದು ಚಕ್ರ. ಹೇಗೆ ಮಾಯಾವತಿ ಸವರ್ಣೀಯರ ಬೆಂಬಲ ಪಡೆದು ಮುಖ್ಯಮಂತ್ರಿಯಾದರೋ ಅದೇ ರೀತಿ ಇವತ್ತು ಸಂಘ ಪರಿವಾರ ಬಹುಜನರ ಬೆಂಬಲ ಪಡೆದು ಹಿಂದೂ ರಾಷ್ಟ್ರ ನಿರ್ಮಿಸುತ್ತಿದೆ. ಸವರ್ಣೀಯರು ತಮ್ಮ ಜಾತಿಯ ಓಟ್ ಬ್ಯಾಂಕ್ ಹಿಡಿದುಕೊಂಡು ಒಮ್ಮೆ ಎಸ್ಪಿ, ಒಮ್ಮೆ ಬಿಎಸ್ಪಿ ಅಥವಾ ಆರ್ ಜೆ ಡಿ ಯ ವೇದಿಕೆಗಳಲ್ಲಿ ತಮ್ಮ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದರು. ಅಲ್ಲಿ ಅವರು ನೆಲೆ ಕಂಡುಕೊಂಡಾಗ ಉಳಿದ ಬಹುಜನರು ಬೇರೆ ವೇದಿಕೆಗೆ ಹೋದರು.

ಬಹುಜನ ರಾಜಕೀಯ ಜಾತಿಯ ವಿರುದ್ಧ ಯಾವಾಗ ರಾಜಕೀಯ ಅಭಿಯಾನ ನಡೆಸಿವೆ ? ಜಾತಿ ಸಂಯೋಜನೆಯ ರಾಜಕೀಯ ನಡೆಯುವಾಗ ಸಂಘ ಪರಿವಾರವೂ ಜಾತಿ ಸಂಯೋಜನೆಯ ರಾಜಕೀಯ ಮಾಡಿತು. ಈ ಪ್ರಾದೇಶಿಕ ಪಕ್ಷಗಳು ಬಳಿಕ ಅಭಿವೃದ್ಧಿ ರಾಜಕೀಯ ಮಾಡಿದವಾದರೂ ರಾಷ್ಟ್ರೀಯ ಮಟ್ಟದಲ್ಲಿ ಅವು ಕೇವಲ ಹೆದ್ದಾರಿಗಳನ್ನು ಮಾಡಲು ಸೀಮಿತವಾದವು. ಚಂದ್ರಭಾನ್ ಪ್ರಸಾದ್ ಅವರ ಒಂದು ಮಾತು ನೆನಪಾಗುತ್ತಿದೆ. ಮಾಯಾವತಿ ಯಾಕೆ ಆರ್ಥಿಕ ವಿಷಯಗಳ ಬಗ್ಗೆ, ವಿದೇಶಾಂಗ ನೀತಿಯ ಬಗ್ಗೆ ಮಾತಾಡುವುದಿಲ್ಲ ? ಇದು ಎಲ್ಲ ಪ್ರಾದೇಶಿಕ ಪಕ್ಷಗಳ ಸ್ಥಿತಿ. ಅವರು ಪ್ರಾದೇಶಿಕ ರಾಜಕೀಯ ಮಾಡುತ್ತಾರೆ. ಆದರೆ ರಾಷ್ಟ್ರೀಯ ರಾಜಕೀಯ ಮಾಡುವಲ್ಲಿ ವಿಫಲರಾಗುತ್ತಾರೆ.

ಬಹುಜನ ಆಂದೋಲನವಾಗಿ ಮೂಡಿಬಂದ ಪಕ್ಷಗಳು ತಮ್ಮ ಸೈದ್ಧಾಂತಿಕ ಪುಸ್ತಕವನ್ನು ಯಾವತ್ತೋ ಎಸೆದಾಗಿದೆ. ಅವರ ಬಳಿ ಅಂಬೇಡ್ಕರ್ ರಂತಹ ಎಲ್ಲರಿಗಿಂತ ತಾರ್ಕಿಕ ವ್ಯಕ್ತಿ ಇದ್ದಾರೆ. ಆದರೆ ಈಗ ಅಂಬೇಡ್ಕರ್ ಪ್ರತಿಷ್ಠೆ ಮತ್ತು ಅಹಂಕಾರದ ಕಾರಣವಾಗಿಬಿಟ್ಟಿದ್ದಾರೆ. ದಲಿತ ರಾಜಕೀಯದ ಹೆಸರಲ್ಲಿ ಈಗ ಸಂಘಟನೆಗಳ ರಾಷ್ಟ್ರೀಯ ಅಧ್ಯಕ್ಷರು ಮಾತ್ರ ಸಿಗುತ್ತಾರೆ , ರಾಜಕೀಯ ಕಾಣಸಿಗುವುದಿಲ್ಲ ಎಂದು ನನ್ನ ಮಿತ್ರ ರಾಕೇಶ್ ಪಾಸ್ವಾನ್ ಹೇಳುವುದು ಸರಿಯಾಗಿಯೇ ಇದೆ. ಗಾಂಧೀವಾದದಂತೆಯೇ ಬಹುಜನ ರಾಜಕೀಯ ಕೂಡ ಒಂದು ಅಂಗಡಿಯಾಗಿಬಿಟ್ಟಿದೆ. ಇದರಲ್ಲಿ ಸೈದ್ಧಾಂತಿಕ ಬದ್ಧತೆ ಇರುವ ವ್ಯಕ್ತಿಯೊಬ್ಬ ಇವತ್ತಿನವರೆಗೆ ರಾಷ್ಟ್ರೀಯ ಮಟ್ಟದಲ್ಲಿ ಒಂದು ಪರ್ಯಾಯವಾಗಿ ಬೆಳೆಯಲಿಲ್ಲ. ಆತ ಪಕ್ಷ ಬೆಳೆಸುವುದಿಲ್ಲ. ತನ್ನ ಹಿತ ಕಾಯುವ ಸಂಘಟನೆ ಕಟ್ಟುತ್ತಾನೆ. ತನ್ನ ಜಾತಿಯ ಅಂಗಡಿ ಇಟ್ಟುಕೊಂಡು ಒಂದು ಪಕ್ಷವನ್ನು ಇನ್ನೊಂದು ಪಕ್ಷದ ಜೊತೆ ಸೇರಿಸುತ್ತಾನೆ. ಅವನೊಳಗೂ ಅಹಂಕಾರ ಬಂದುಬಿಟ್ಟಿದೆ. ಆತ ಬಿಎಸ್ಪಿ ಅಥವಾ ಇತರ ಬಹುಜನ ಪಕ್ಷಗಳ ದೌರ್ಬಲ್ಯದ ಬಗ್ಗೆ ಮಾತಾಡುವುದನ್ನು ಬಿಟ್ಟ.

ನನ್ನಂತಹವರ ಬರಹಗಳನ್ನು ಜಾತಿಯ ಆಧಾರದಲ್ಲಿ ತಿರಸ್ಕರಿಸಲು ಆರಂಭಿಸಿದ್ದು ಅಹಂಕಾರವಲ್ಲದೆ ಮತ್ತಿನ್ನೇನಲ್ಲ.  ನಾನು ನನ್ನ ಬದ್ಧತೆಯಿಂದ ಅಲುಗಾಡದೇ ಇದ್ದರೂ ಬದ್ಧತೆಯನ್ನು ತಮ್ಮ ಸೊತ್ತೆಂದು ತಿಳಿದುಕೊಂಡವರು ಅಂಬೇಡ್ಕರ್ ಅವರ ಹೆಸರನ್ನು ಆಯುಧದ ರೀತಿಯಲ್ಲಿ ಬಳಸಲು ಆರಂಭಿಸಿದ್ದರು. ಯಾರು ಏನನ್ನು ಬರೆಯಬೇಕೆಂದು ಅವರು ಜನರಿಗೆ ಆದೇಶ ನೀಡಲು ಆರಂಭಿಸಿದ್ದರು. ಬಿಜೆಪಿಯ ಸಮರ್ಥಕರು ರಾಷ್ಟ್ರವಾದದ ಪ್ರಮಾಣಪತ್ರ ವಿತರಿಸಿದಂತೆಯೇ  ಅಂಬೇಡ್ಕರ್‍ವಾದಿಗಳಲ್ಲಿಯೂ ಕೆಲ ಮಂದಿ ಪ್ರಮಾಣಪತ್ರ ವಿತರಿಸಲು ಆರಂಭಿಸಿದ್ದಾರೆ. ಬಹುಜನ ಪಕ್ಷಗಳಲ್ಲಿ ಯಾವುದೇ ಕಾನ್ಶೀರಾಂ ಇಲ್ಲವೆಂದು ನಾವು ತಿಳಿಯಬೇಕಾಗಿದೆ. ಕಾನ್ಶೀರಾಂ ಅವರ ಬದ್ಧತೆಗೆ ಸಾಟಿಯಿಲ್ಲ. ಅವರದ್ದು ವಿಚಾರವಂತಿಕೆಯ ಬದ್ಧತೆಯಾಗಿತ್ತು. ಅಂಬೇಡ್ಕರ್ ಹೆಸರಿನಲ್ಲಿ ತೀರಾ ಸಣ್ಣ ಉದ್ದೇಶವಿರುವ ರಾಜಕೀಯವನ್ನು ನಡೆಸುವ ಪ್ರಕಾಶ್ ಅಂಬೇಡ್ಕರ್ ಈಗ ನಮ್ಮ ನಡುವೆ ಇದ್ದಾರೆ. ಲೋಹಿಯಾ ಅವರ ಪರಿಸ್ಥಿತಿಯೂ ಇದೇ ಆಗಿತ್ತು. ಯಾರು ಅಂಬೇಡ್ಕರ್ ಅವರ ಸಿದ್ಧಾಂತಗಳಿಗೆ ಬದ್ಧರಾಗಿದ್ದಾರೆಯೋ ಅವರ ಸ್ಥಿತಿ ಕೂಡ ಗಾಂಧಿಯ  ಹೆಸರಿನಲ್ಲಿ ಬದ್ಧತೆ ಪ್ರದರ್ಶಿಸುವ ಗಾಂಧೀವಾದಿಗಳಂತಾಗಿದೆ. ಇಬ್ಬರೂ ಅಧಿಕಾರ ವಂಚಿತರಾಗಿ ಬದುಕುವಂತೆ ಶಾಪಗ್ರಸ್ಥರಾಗಿದ್ದಾರೆ. ಈಗ ಮೈತ್ರಿ ಪರಿಹಾರವಲ್ಲ. ವಿಲೀನವೇ ನಮ್ಮ ಮುಂದಿರುವ ದಾರಿ. ಅದು ಇನ್ನೊಂದು ಚುನಾವಣೆಗಾಗಿಯಲ್ಲ, ಭಾರತದ ಪರ್ಯಾಯ ಭವಿಷ್ಯಕ್ಕಾಗಿ.

ಈ ಐದು ವರ್ಷಗಳಲ್ಲಿ ನಾನು ಈ ಗುಂಪುಗಳ ಬಗ್ಗೆ ಕಡಿಮೆಯೇನೂ ಬರೆದಿಲ್ಲವೆಂದು ನೀವು ನೋಡಿರಬಹುದು. ಎಡಪಂಥೀಯರ ಬಗ್ಗೆ ಖಂಡಿತವಾಗಿ ಬರೆದಿಲ್ಲ. ವಾಮ ಪಕ್ಷಗಳ ವಿಚಾರಧಾರೆ ಈಗಲೂ ಪ್ರಸ್ತುತ ಎಂದು ನಾನು ನಂಬಿದ್ದೇನೆ. ಆದರೆ  ಅವರ ಪಕ್ಷಗಳು ಹಾಗೂ ಆ ಪಕ್ಷಗಳಲ್ಲಿ ಸಮಯ ಕಳೆಯುವ ರಾಜಕೀಯ ಮಾನವ ಸಂಪನ್ಮೂಲಗಳು ಪ್ರಸ್ತುತವಾಗಿಲ್ಲ. ಅವರ ಪಾತ್ರ ಮುಕ್ತಾಯಗೊಂಡಿದೆ. ಅದು ಕೊಳೆಯುತ್ತಿದೆ. ಅವರ ಬಳಿ ಕೇವಲ ಕಚೇರಿ ಮಾತ್ರ ಉಳಿದಿದೆ. ಕೆಲಸ ಮಾಡಲು ಏನೂ ಉಳಿದಿಲ್ಲ.  ನಿಮ್ಮ ಕಾರ್ಯಕ್ರಮಗಳಲ್ಲಿ ಎಡ ಪಕ್ಷಗಳು ಇರುವುದಿಲ್ಲ ಎಂದು ಈ ವಾಮ ಪಕ್ಷಗಳ ಜನರು  ದೂರುತ್ತಲೇ ಇರುತ್ತಾರೆ. ಏಕೆಂದರೆ ಒಂದು ಪಕ್ಷದ ರೂಪದಲ್ಲಿ ಅವರ ಪಾತ್ರ ಅಂತ್ಯವಾಗಿದೆ. ಮಹಾರಾಷ್ಟ್ರದಲ್ಲಿ ರೈತರ ಆಂದೋಲನದ ಆರಂಭದ ಕೆಲಸವನ್ನು ಬಿರ್ಜು ಕೃಷ್ಣ ಅವರಂತಹವರು ಮಾಡಿದ್ದು ನಿಜ. ಅದು ಆ ವಿಚಾರಧಾರೆಯ ಫಲವೇ ಹೊರತು ಪಕ್ಷದಿಂದಾಗಿ ಆಗಿದ್ದಲ್ಲ. ಈಗ ಇಂತಹ ವಿಚಾರಧಾರೆ ಉಪಯುಕ್ತವಾಗಿದೆಯೇ ಹೊರತು ಪಕ್ಷವಲ್ಲ. ಈ ಪಕ್ಷವನ್ನು ವಿಸರ್ಜಿಸುವ ಸಮಯ ಬಂದಿದೆ. ಹೊಸ ಚಿಂತನೆಗೆ ಸಮಯ ಬಂದಿದೆ. ನಾನು ಪಕ್ಷಗಳ ವೈವಿಧ್ಯತೆಯ ಸಮರ್ಥಕ ಆದರೆ ಉಪಯೋಗಕ್ಕಿಲ್ಲದ ವಿವಿಧತೆ ಯಾವುದೇ ಕೆಲಸಕ್ಕೆ ಬಾರದು. ಈ ಎಲ್ಲಾ ವಿಚಾರಗಳು ಕಾಂಗ್ರೆಸ್ ಪಕ್ಷಕ್ಕೂ ಅನ್ವಯವಾಗುತ್ತವೆ. ಬಿಜೆಪಿಯ ಕಾರ್ಯಕರ್ತರಲ್ಲಿ ನಿಮಗೆ ಬಿಜೆಪಿ ಕಾಣುತ್ತದೆ. ಆದರೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ನಿಮಗೆ ಕಾಂಗ್ರೆಸ್ ಬಿಟ್ಟು ಬೇರೆಲ್ಲಾ ಕಾಣುತ್ತದೆ. ಒಂದೋ ಕಾಂಗ್ರೆಸ್ ಚುನಾವಣೆ  ಎದುರಿಸುವುದನ್ನು ನಿಲ್ಲಿಸಬೇಕು. ಇಲ್ಲವೇ ಚುನಾವಣೆಯನ್ನು ಮಾಡು ಇಲ್ಲವೇ ಮಡಿ ಎಂಬಂತೆ ಎದುರಿಸಬೇಕು. ಅಂತಹ ಕಾಂಗ್ರೆಸ್ ಆಗಬೇಕು.

ಕಾಂಗ್ರೆಸ್‍ ಗೆ ನೆಹರೂ ಅವರನ್ನು ಸಮರ್ಥಿಸಿಕೊಳ್ಳಲು ಆಗಿಲ್ಲ. ಅದಕ್ಕೆ ಪಟೇಲ್ ಅವರಿಂದ ಹಿಡಿದು ಬೋಸ್ ಅವರ ತನಕ ಯಾರನ್ನೂ ಸಮರ್ಥಿಸಿಕೊಳ್ಳಲು ಆಗಿಲ್ಲ. ಸ್ವಾತಂತ್ರ್ಯ ಹೋರಾಟದ ವೈವಿಧ್ಯತೆ ಹಾಗೂ ಸುಂದರತೆಯ ಇತಿಹಾಸದ ನೆನಪುಗಳನ್ನು ಜೀವಂತವಾಗಿಸಲು ಅದಕ್ಕೆ ಸಾಧ್ಯವಾಗಿಲ್ಲ. ಗಾಂಧಿ ವಿಚಾರಧಾರೆಗಳನ್ನೂ  ಜೀವಂತವಾಗಿರಿಸಲು ಸಾಧ್ಯವಾಗಿಲ್ಲ. ನೀವು ಇಂದು ಬಿಜೆಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತನ ಬಳಿ ದೀನ್ ದಯಾಳ್ ಉಪಾಧ್ಯಾಯರ ಬಗ್ಗೆ ಏನಾದರೂ ತಪ್ಪು ಹೇಳಿಕೆ ನೀಡಿ,  ಅವರು ನೂರು ಮಾತುಗಳನ್ನು ಆಡುತ್ತಾರೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಐದು ವರ್ಷಗಳಲ್ಲಿ ನೆಹರೂ ಅವರ ಕುರಿತಂತೆ ಸಮಾನಾಂತರ ವಿಚಾರಧಾರೆ ಹುಟ್ಟಿಸಲು ಸಾಧ್ಯವಾಗಿಲ್ಲ. ಈಗ ಇರುವುದು ಒಂದೇ ದಾರಿ. ಭಾರತದಲ್ಲಿ ವಿಭಿನ್ನ ರಾಜಕೀಯ ಪಕ್ಷಗಳಲ್ಲಿರುವ ಜನರು ತಮ್ಮ ತಮ್ಮ ಪಕ್ಷ ತ್ಯಜಿಸಿ ಯಾವುದಾದರೂ ಒಂದೇ ಪಕ್ಷದಡಿ ಬರುವುದೇ ಈಗಿರುವ ದಾರಿ. ಅಲ್ಲಿ ವಿಚಾರಧಾರೆಗಳ ಪುನರ್ಜನ್ಮವಾಗಬೇಕು. ನೈತಿಕ ಬಲ ಹೆಚ್ಚಾಗಬೇಕು ಹಾಗೂ ಮಾನವ ಸಂಪನ್ಮೂಲ ಹಸ್ತಾಂತರವಾಗಬೇಕು. ಈ ಮಾತನ್ನು 2014ರಿಂದಲೇ ಜನರ ಬಳಿ ಹೇಳಿದ್ದೆ. ನಂತರ ಇಂತಹ ಮಾತುಗಳನ್ನೆಲ್ಲ ಹೇಳಲು ನಾನು ಯಾವ ವಿಚಾರವಂತನೆಂದು ನಕ್ಕು ಬಿಟ್ಟೆ. ಇಂದು ಬರೆಯುತ್ತಿದ್ದೇನೆ.

ಇಷ್ಟಾದರೂ ವಿಪಕ್ಷಗಳ ಬಗ್ಗೆ ಏಕೆ ಸಹಾನುಭೂತಿ ಉಳಿದಿದೆ. ಅವರ ರಾಜಕೀಯ ಪಕ್ಷಗಳ ವಿಚಾರವನ್ನು ಕಡಿಮೆ ತೋರಿಸಲಾಗಿದೆ ಯಾ ಬರೆಯಲಾಗಿದೆ. ಏಕೆಂದರೆ 2014ರ ನಂತರ ಪ್ರತಿ ಹಂತದಲ್ಲಿ ನರೇಂದ್ರ ಮೋದಿಯೇ ಪ್ರಮುಖರಾಗಿ ಬಿಟ್ಟಿದ್ದರು. ಸರಕಾರದ ಮಟ್ಟದಲ್ಲಿ ಮಾತ್ರವಲ್ಲದೆ ಸಾಂಸ್ಕೃತಿಕ ಹಾಗೂ ಧಾರ್ಮಿಕ ಮಟ್ಟದಲ್ಲೂ ಮೋದಿ ಹೊರತಾಗಿ ಬೇರೆ ಯಾವುದೂ ಕಾಣಲಿಲ್ಲ ಹಾಗೂ  ಬೇರೆ ಏನೂ ಇರಲಿಲ್ಲ. ಭಾರತದ ಶೇ. 99ರಷ್ಟು ಮಾಧ್ಯಮಗಳು ಪ್ರಜಾಪ್ರಭುತ್ವದ ಮೂಲ ತತ್ವಗಳನ್ನು ಹೊಸಕಿದಾಗ ನಾನು  ಅದರಲ್ಲಿ ಒಂದು ಸಮತೋಲನ ಸಾಧಿಸಲು ಯತ್ನಿಸಿದೆ. ಅಸಮ್ಮತಿ ಹಾಗೂ ವಿಪಕ್ಷಗಳ ಪ್ರತಿಯೊಂದು ದನಿಗೆ ಗೌರವ ನೀಡಿದೆ. ಅವರನ್ನು ಅಪಹಾಸ್ಯ ಮಾಡಿಲ್ಲ. ನಾನು ಇದನ್ನು ವಿಪಕ್ಷಗಳಿಗಾಗಿ ಮಾಡದೆ  ಭಾರತದ  ಪ್ರಜಾಪ್ರಭುತ್ವವನ್ನು  ಅವಮಾನದಿಂದ ರಕ್ಷಿಸಲು ಮಾಡಿದೆ. ನಾನು ಇಷ್ಟೊಂದು ಭಾರವನ್ನು ಎತ್ತಿಕೊಳ್ಳಬಾರದಾಗಿತ್ತು ಈ ಭಾರ ನನ್ನದಾಗಿರಲಿಲ್ಲ ಆದರೂ ಪ್ರತಿಯೊಬ್ಬ ನಾಗರಿಕನೊಳಗೆ ಹಾಗೂ ಪ್ರಜಾಪ್ರಭುತ್ವದ ಒಳಗೆ ಒಂದು ವಿಪಕ್ಷವಿಲ್ಲದೇ ಇದ್ದರೆ ಎಲ್ಲವೂ ಟೊಳ್ಳಾಗಬಹುದೆಂದು ಹೀಗೆ ಮಾಡಿದೆ. ನನ್ನ ಇಂತಹ ಯೋಜನೆಯ ಹಿಂದೆ ಭಾರತದ ಕಲ್ಯಾಣದ ಉದ್ದೇಶವಿತ್ತು.

ನರೇಂದ್ರ ಮೋದಿ ಪ್ರಚಂಡ ವಿಜಯ ಗಳಿಸಿದ್ದಾರೆ, ಆದರೆ ಮಾಧ್ಯಮದ ವಿಜಯ ಆಗಿಲ್ಲ. ಪ್ರತಿಯೊಂದು ವಿಜಯದಲ್ಲಿ ಒಂದು ಸೋಲಿದೆ. ಈ ವಿಜಯದ ಹಿಂದೆ ಮಾಧ್ಯಮದ ಸೋಲಿದೆ. ಮಾಧ್ಯಮಗಳು ಪ್ರಜಾಪ್ರಭುತ್ವದ  ಮೌಲ್ಯಗಳನ್ನು ಪಾಲಿಸಿಲ್ಲ, ಇಂದು ಗೋದಿ ಮೀಡಿಯಾ ಮಂದಿ ಮೋದಿಗೆ ದೊರೆತ ಜಯ ತಮಗೆ ದೊರೆತ ಜಯವೆಂದು ಹೇಳುತ್ತಿದ್ದಾರೆ. ವಾಸ್ತವವಾಗಿ ಅವರ ಬಳಿ ಕೇವಲ ಮೋದಿ ಉಳಿದಿದ್ದಾರೆ, ಪತ್ರಿಕೋದ್ಯಮ ಉಳಿದಿಲ್ಲ, ಪತ್ರಿಕೋದ್ಯಮದ ಮೌಲ್ಯ ಅಂತ್ಯಗೊಂಡಿದೆ, ಪ್ರಾಯಶಃ ಭಾರತದ ಜನರು ಪತ್ರಿಕೋದ್ಯಮವನ್ನು ತಿರಸ್ಕರಿಸಿರಬೇಕು. ನಮಗೆ ಮೋದಿ ಬೇಕು ಪತ್ರಿಕೋದ್ಯಮ ಬೇಡ ಎಂದು ಪ್ರಾಯಶ: ಅವರು  ಆದೇಶ ನೀಡಿದ್ದಾರೆ. ಆದರೂ ನಾನು ಇದೇ ಮೋದಿ ಸಮರ್ಥಕರ ಮೇಲೆ ನಂಬಿಕೆಯಿರಿಸಿದ್ದೇನೆ. ಅವರು ಮೋದಿ ಮತ್ತು ಮೀಡಿಯಾದ ಪಾತ್ರಗಳ ನಡುವೆ ವ್ಯತ್ಯಾಸ ಕಾಣುತ್ತಾರೆ ಹಾಗೂ ಅದು ಅವರಿಗೆ ಅರ್ಥವೂ ಆಗುತ್ತದೆ. ಜನತೆಯ ಪ್ರತಿನಿಧಿಗಳಾಗಿರುವ ಪತ್ರಕರ್ತರು ತಮ್ಮ ವೃತ್ತಿ ಧರ್ಮ ಮರೆತು ದೇಶ ನಾಯಕನ ಚರಣದಲ್ಲಿ ಎಲ್ಲವನ್ನೂ ಅರ್ಪಿಸುವಂತ ಪತ್ರಕರ್ತರಿರುವ ದೇಶ ಪ್ರಾಯಶಃ ಅವರಿಗೂ ಬೇಕಾಗಿಲ್ಲ. ನನ್ನೊಂದಿಗೆ ಅಸಮ್ಮತಿ ಇದ್ದರೂ ನನ್ನ ಪತ್ರಕರ್ತನ ಕೆಲಸ ಅವರಿಗೆ ಇಷ್ಟವಾಗಿದೆ ಎಂದು ಹಲವು ಮೋದಿ ಸಮರ್ಥಕರು ಹೇಳುವಾಗ ನನಗೆ ಖುಷಿಯಾಗತ್ತದೆ, ಇಂತಹ ಕೆಲಸ ಮುಂದುವರಿಸಿಕೊಂಡು ಹೋಗಿ ಎಂದು ಹೇಳುವ ಮೋದಿ ಸಮರ್ಥಕರಿಗೆ ನಾನು ಆಭಾರಿ. ನನ್ನ ಹಲವು ಸಹೋದ್ಯೋಗಿಗಳು ವಿವಿಧ ಕಡೆಗಳಿಗೆ ಚುನಾವಣೆ ವರದಿಗಾರಿಕೆಗೆ ಹೋದಾಗಲೂ ಮೋದಿ ಅಭಿಮಾನಿಗಳು ನೀವು ಬರೆದಿದ್ದನ್ನು ಓದುತ್ತಾರೆ ಎಂದು ಹೇಳಿದ್ದಾರೆ. ಸಂಘದ ಜನರೂ ನನ್ನ ಬರಹಗಳನ್ನು ಒಮ್ಮೆ ಓದುತ್ತಾರೆ. ನಾನು ಏನು ಹೇಳಿದ್ದೇನೆಂದು ತಿಳಿಯುತ್ತಾರೆ. ರವೀಶ್ ಇಲ್ಲದೇ ಇದ್ದರೆ ಅವರು ರವೀಶ್ ನನ್ನು ಮಿಸ್ ಮಾಡಿಕೊಳ್ಳುತ್ತಾರೆಂದು ನನಗೆ ಗೊತ್ತು.

ಎರಡು ವರ್ಷಗಳ ಹಿಂದೆ ದಿಲ್ಲಿಯಲ್ಲಿ ವಾಸವಾಗಿದ್ದ 80 ವರ್ಷದ ಹಿರಿಯರೊಬ್ಬರು ನನಗೆ ಪುಟ್ಟ ಭಗವದ್ಗೀತೆ ಕಳುಹಿಸಿದ್ದರು. ದೀರ್ಘ ಪತ್ರ ಬರೆದು ನನಗೆ ದೀರ್ಘಾಯುಷ್ಯವಿರಲಿ ಎಂದು ಹರಸಿದ್ದರು. ಅವರು ಕಳುಹಿಸಿದ್ದ ಪುಟ್ಟ ಭಗವದ್ಗೀತೆಯನ್ನು ನನ್ನ ಜತೆ ಇರಿಸಲು ಹೇಳಿದರು. ಅವರ ಮಾತಿಗೆ ಒಪ್ಪಿ ಅದನ್ನು ನನ್ನ ಬ್ಯಾಗಿನಲ್ಲಿ ಇಟ್ಟೆ. ಜನರು “ನಿಮ್ಮ ಜೀವ ಸುರಕ್ಷಿತವಲ್ಲ  ಜಾಗರೂಕರಾಗಿರಿ” ಎಂದು ಹೇಳಿದಾಗ ಆ ಗೀತೆಯನ್ನು ತಿರುವಿದೆ. ಅದರ ಒಂದು ಸೂತ್ರವನ್ನು ನಿಮ್ಮ ಮುಂದಿಡುತ್ತೇನೆ.

‘ಅಥಃ ಚೆತ್ತ್ವಮಿಮ್ ಧಮ್ರ್ಯ ಸಂಗ್ರಾಮ್ ನ ಕರಿಷ್ಯಸಿ, ತಥಃ ಸ್ವಧರ್ಮ್ ಕೀರ್ತಿ ಚ ಹಿತ್ವ ಪಾಪಮವಾಪ್ಸಸಿ’

ನನ್ನನ್ನು ಪ್ರೀತಿಸುತ್ತಾ ಇರಿ. ನನ್ನನ್ನು ಅವಮಾನಿಸಿ ಏನು ದೊರೆಯುತ್ತದೆ ?, ಮಹಾನ್ ಭಾರತದಲ್ಲಿ ನೀವು ಒಬ್ಬ ಪತ್ರಕರ್ತನಿಗೆ ಸಾಥ್ ನೀಡಿಲ್ಲ ಎಂದು ನಿಮ್ಮ ಸ್ವಾಭಿಮಾನವೇ ಮುರಿಯುತ್ತದೆ. ನನ್ನಂತಹವನು ನಿಮಗೆ ಇಂತಹ ಅಪರಾಧಿ ಪ್ರಜ್ಞೆಯಿಂದ ಮುಕ್ತವಾಗಲು ಅವಕಾಶ ನೀಡಿದ್ದೇನೆ. ವಿಪಕ್ಷಗಳಿಗೆ ತಮ್ಮ ಹಿಂದಿನ ಅನೈತಿಕತೆಗಳು ಈಗ ಭಾರವಾದಂತೆ ಈ ಅಪರಾಧಿ ಪ್ರಜ್ಞೆ ನಿಮ್ಮ ಮೇಲೆ ಭಾರವಾಗಲಿದೆ. ಆದುದರಿಂದ ನೀವು ನನ್ನನ್ನು ಶಕ್ತಿಯುತಗೊಳಿಸಿ, ನನ್ನಂತಹವನ ಜತೆ ನಿಲ್ಲಿ. ನೀವು ಮೋದಿಯನ್ನು ಶಕ್ತಿಶಾಲಿಗೊಳಿಸಿದ್ದೀರಿ, ಅಂತೆಯೇ ಪತ್ರಿಕೋದ್ಯಮವನ್ನೂ ಬಲಶಾಲಿಗೊಳಿಸುವುದೇ ನಿಮ್ಮ ಧರ್ಮ. ನಮಗೆ ಜೀವನಕ್ಕೆ ಬೇರೆ ದಾರಿಯಿಲ್ಲ. ಇದ್ದಿದ್ದರೆ ಇಷ್ಟರ ಹೊತ್ತಿಗೆ ಈ ವೃತ್ತಿ ತೊರೆಯುತ್ತಿದ್ದೆ. ಇದರರ್ಥ ನಾನು ಸೋತಿದ್ದೇನೆಂದಲ್ಲ. ಕಾರಣವೇನೆಂದರೆ  ನಾನು ದಣಿದಿದ್ದೇನೆ. ಏನಾದರೂ ಹೊಸತನ್ನು ಮಾಡಬೇಕೆಂದಿದ್ದೇನೆ. ಆದರೆ ಇಲ್ಲಿ ಇರುವವರೆಗೆ ಹೀಗೇ ಮುಂದುವರಿಯುತ್ತೇನೆ. ಏಕೆಂದರೆ ಜನತೆ ನನ್ನನ್ನು ಸೋಲಿಸಿಲ್ಲ, ಮೋದಿಯನ್ನು ಗೆಲ್ಲಿಸಿದ್ದಾರೆ. ಪ್ರಧಾನ ಮಂತ್ರಿ ಮೋದಿಗೆ ಅಭಿನಂದನೆಗಳು.

ಟಿಪ್ಪಣಿ: ಈ ದೀರ್ಘ ಲೇಖನಕ್ಕೆ ಕ್ಷಮೆಯಿರಲಿ. 

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top