ಪ್ರಾಥಮಿಕ ಶಾಲೆಗಳಲ್ಲಿ ಕಲಿಕಾ ಮಾಧ್ಯಮದ ಸಮಸ್ಯೆ | Vartha Bharati- ವಾರ್ತಾ ಭಾರತಿ

---

ಪ್ರಾಥಮಿಕ ಶಾಲೆಗಳಲ್ಲಿ ಕಲಿಕಾ ಮಾಧ್ಯಮದ ಸಮಸ್ಯೆ

ಭಾಗ-2

5ನೇ ತರಗತಿಯಿಂದಲೇ ಇಂಗ್ಲಿಷ್ ಕಲಿಯಲಾರಂಭಿಸಬೇಕು. ಯಾಕೆಂದರೆ, ಅಲ್ಲಿ ತನಕ ಮಾತೃಭಾಷೆಯಲ್ಲೇ ವಿಷಯಗಳನ್ನು ಕಲಿಯುತ್ತಲೂ, ಅವುಗಳನ್ನು ಅರ್ಥ ಮಾಡಿಕೊಳ್ಳುತ್ತಲೂ, ಅದೇ ಭಾಷೆಯಲ್ಲಿ ಯೋಚಿಸುತ್ತಲೂ ಬೆಳೆದ ಮಗುವಿನ ಬೌದ್ಧಿಕ ಸಾಮರ್ಥ್ಯ, ಗ್ರಹಿಸುವ ಸಾಮರ್ಥ್ಯ, ವಿವೇಚನಾ ಸಾಮರ್ಥ್ಯ ಸಾಕಷ್ಟು ಬೆಳೆದಿರುತ್ತದೆ. ಸೃಜನಶೀಲವಾಗಿ ಮನಸ್ಸು ಯೋಚಿಸುವ ಹಂತಕ್ಕೆ ಮುಟ್ಟಿರುತ್ತದೆ. ಈ ಹಂತದಲ್ಲಿ ಅಂದರೆ 5ನೇ ತರಗತಿಯಲ್ಲಿ ಒಂದು ಹೊಸ ಭಾಷೆಯನ್ನು ಕಲಿಯುವಷ್ಟು ಪಕ್ವತೆ ಆ ಮಗುವಿಗೆ ಬಂದಿರುತ್ತದೆ. ಮಾತೃಭಾಷೆಯಲ್ಲಿ ಅದಾಗಲೇ ಹಿಡಿತ ಸಾಧಿಸಿಯಾಗಿರುವುದರಿಂದ ಮತ್ತೊಂದು ಭಾಷೆಯನ್ನು ಕಲಿಯುವುದು ಕಷ್ಟವೆನಿಸುವುದಿಲ್ಲ. 1ನೇ ತರಗತಿಯಿಂದಲೇ ಇಂಗ್ಲಿಷ್ ಕಲಿತುಕೊಂಡು ಬಂದ ವಿದ್ಯಾರ್ಥಿಗಿಂತ ಹೆಚ್ಚಿನ ಹಿಡಿತವನ್ನು ಮಗು ಆ ಭಾಷೆಯಲ್ಲಿ ಪಡೆದುಕೊಳ್ಳುವುದು ಸಾಧ್ಯವಿದೆ. 50, 60 ವರ್ಷಗಳ ಹಿಂದೆ ಎಲ್ಲೆಲ್ಲೂ ಕನ್ನಡ ಮಾಧ್ಯಮ ಶಾಲೆಗಳೇ ಇದ್ದ ದಿನಗಳಲ್ಲಿ 10ನೇ ತರಗತಿ ತನಕ ಕನ್ನಡ ಮಾಧ್ಯಮದಲ್ಲೇ ಓದಿ, ಆ ಬಳಿಕ ಇಂಗ್ಲಿಷ್ ಮಾಧ್ಯಮದಲ್ಲಿ ಕಾಲೇಜು ಶಿಕ್ಷಣವನ್ನು ಪಡೆದವರು ಇಂಗ್ಲಿಷ್ ಭಾಷೆಯಲ್ಲಿ ಒಳ್ಳೆಯ ಹಿಡಿತವನ್ನು ಪಡೆದು ಮುಂದೆ ಬಂದ ಉದಾಹರಣೆಗಳಿವೆ. ಶಿಕ್ಷಣದ ಹಂತಗಳನ್ನು ಸರಾಗವಾಗಿ ದಾಟಿಕೊಂಡು ಮುಂದೆ ಹೋಗುವುದಕ್ಕೂ, ಶಿಕ್ಷಣ ಮಾಧ್ಯಮ ಇಂಗ್ಲಿಷ್ ಆಗಿರುವುದಕ್ಕೂ ಸಂಬಂಧವೇ ಇಲ್ಲ. 1ನೇ ತರಗತಿಯಿಂದಲೇ ಇಂಗ್ಲಿಷ್ ಕಲಿಯುವ ಮಕ್ಕಳ ಮೇಲೆ ಉಂಟಾಗಬಹುದಾದ ಒತ್ತಡವನ್ನೊಮ್ಮೆ ಯೋಚಿಸಬೇಕು. ಒಂದು ಆ ಮಗು ತನಗೆ ಪರಿಚಿತವಿರುವ ಮಾತೃಭಾಷೆ ಅಂದರೆ ಕನ್ನಡದ ಅಕ್ಷರಗಳ ಪರಿಚಯಮಾಡಿಕೊಳ್ಳಬೇಕು. ಕನ್ನಡದ ಪದಗಳು, ಪದಪುಂಜಗಳು, ವಾಕ್ಯಗಳು ಇವುಗಳನ್ನು ಕಲಿತುಕೊಳ್ಳಬೇಕು. ಅದೇ ಹೊತ್ತಿಗೆ ಪರಿಸರದಲ್ಲಿ ಇಲ್ಲದ ಅನ್ಯ ಭಾಷೆ ಇಂಗ್ಲಿಷ್‌ನ ಅಕ್ಷರಗಳು, ಪದಗಳು, ವಾಕ್ಯಗಳು-ಇವುಗಳನ್ನೂ ಕಲಿಯಬೇಕು. ಇದು ಆ ಮಗುವಿನ ಮೇಲೆ ಅಪಾರ ಒತ್ತಡವನ್ನು ಹಾಕುತ್ತದೆ. ಇಷ್ಟಕ್ಕೂ ಮಿಗಿಲಾಗಿ ಭಾಷೆ ಕಲಿಯುವುದು ಮತ್ತು ಕಲಿಸುವುದು ಅಷ್ಟೊಂದು ಸರಳ ಸಂಗತಿಯಲ್ಲ. ಆರಂಭದಲ್ಲಿ ಆ ಭಾಷೆಯ ಪದಗಳನ್ನು, ಪದಪುಂಜಗಳನ್ನು ಬಾಯಲ್ಲಿ ಹೇಳುವುದರ ಮೂಲಕವೇ ಅಭ್ಯಾಸ ಮಾಡಬೇಕು. ಅಕ್ಷರ ಕಲಿಕೆ ಅಂದರೆ ಬರಹ ಮೂಲಕ ಭಾಷೆ ಕಲಿಯುವುದು ನಂತರದ ಹಂತ. ಮಾತೃಭಾಷೆಯಾದರೂ ಅಷ್ಟೆ. ಹಾಗಾಗಿ ಎರಡು ಭಾಷೆಗಳ ಕಲಿಕೆ ಮಕ್ಕಳಲ್ಲಿ ಹೆಚ್ಚಿನ ಒತ್ತಡವನ್ನು ಉಂಟುಮಾಡುವುದೆಂಬುದು ಸತ್ಯ. ಕೆಲವು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಪ್ರಾಥಮಿಕ ಹಂತದಲ್ಲಿ ಕನ್ನಡವೇ ಕಲಿಕಾ ಮಾಧ್ಯಮವಾಗಬೇಕೆಂದು ಸರಕಾರ ಹೇಳಿದಾಗ ಹಲವು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಸುಪ್ರೀಂ ಕೋರ್ಟ್ ತನಕ ಹೋದಾಗ ಕೋರ್ಟ್, ಮಗುವಿನ ಕಲಿಕಾ ಮಾಧ್ಯಮದ ಆಯ್ಕೆ ಪೋಷಕರದ್ದೆಂದು ಹೇಳಿತು. ಇದು ಹೇಗಾಯಿತೆಂದರೆ ವೈದ್ಯರ ಬಳಿಗೆ ಚಿಕಿತ್ಸೆಗೆ ಹೋದ ವ್ಯಕ್ತಿ ತೆಗೆದುಕೊಳ್ಳಬೇಕಾದ ಔಷಧದ ಆಯ್ಕೆ ಆ ವ್ಯಕ್ತಿಯದ್ದು ಅಂದ ಹಾಗಾಯಿತು. ಶಿಕ್ಷಣತಜ್ಞರ ಅಭಿಪ್ರಾಯವನ್ನು ಕೋರ್ಟ್ ಎಷ್ಟರ ಮಟ್ಟಿಗೆ ಪರಿಶೀಲಿಸಿತೋ, ಯಾ ಈ ಬಗ್ಗೆ ಸಂಬಂಧಪಟ್ಟವರು ಕೋರ್ಟ್‌ಗೆ ಎಷ್ಟರ ಮಟ್ಟಿಗೆ ಮನವರಿಕೆ ಮಾಡಿಕೊಟ್ಟರೋ ತಿಳಿಯದು. ಅಂತೂ ಸುಪ್ರೀಂ ಕೋರ್ಟ್ ತೀರ್ಪು ಮಾತ್ರ ಶಿಕ್ಷಣ ವ್ಯಾಪಾರಿಗಳಿಗೆ ಒಂದು ವರವಾಗಿ ಪರಿಣಮಿಸಿತು. ಇಂದಿನ ಆಂಗ್ಲಮಾಧ್ಯಮ ಶಾಲೆಗಳ ಸ್ಥಿತಿಗತಿಗಳನ್ನು ಅವಲೋಕಿಸಿದರೆ ಇನ್ನೂ ಕೆಲವಂಶಗಳು ಕಂಡುಬರುತ್ತವೆ. ಇಂಗ್ಲಿಷ್ ಭಾಷೆಯನ್ನು ಯೋಗ್ಯ ರೀತಿಯಲ್ಲಿ ಕಲಿಸಬಲ್ಲ ಶಿಕ್ಷಕರ ಕೊರತೆ ಇದೆ. ಇತರ ವಿಷಯಗಳನ್ನು ಕಲಿಸುವ ಶಿಕ್ಷಕರಿಗೂ ಇಂಗ್ಲಿಷ್ ಭಾಷೆಯ ಮೇಲಿನ ಹಿಡಿತ ಅಷ್ಟಕ್ಕಷ್ಟೇ ಇದೆ. ಅನೇಕ ಶಾಲೆಗಳಲ್ಲಿ ಮಕ್ಕಳು ಮಾತನಾಡುವ ಇಂಗ್ಲಿಷ್ ಭಾಷೆಯ ಗುಣಮಟ್ಟ ಕೂಡ ನಿರಾಶಾದಾಯಕವಾಗಿರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ವಿದ್ಯಾರ್ಥಿಗಳೂ ಶಿಕ್ಷಕರೂ ತುಂಡು ತುಂಡು ಇಂಗ್ಲಿಷ್ ವಾಕ್ಯಗಳಲ್ಲೇ ಮಾತನಾಡುತ್ತಿರುತ್ತಾರೆ. ಅವು ಕೂಡ ಶಾಲಾ ಆವರಣದಲ್ಲಿ ಮಾತನಾಡುವ ಸಾಮಾನ್ಯ ರೂಢಿಯ ಮಾತುಗಳಷ್ಟೇ ಆಗಿರುತ್ತವೆ. ಇದನ್ನು ಮೀರಿದ ಇಂಗ್ಲಿಷ್ ಭಾಷಾ ಸಾಮರ್ಥ್ಯ ಇಬ್ಬರಲ್ಲೂ ಇರುವುದಿಲ್ಲ. ಪೋಷಕರು ಮಾತ್ರ ತಮ್ಮ ಮಗು ಸರಾಗವಾಗಿ ಇಂಗ್ಲಿಷ್‌ನಲ್ಲಿ ಮಾತನಾಡಲು ಸಮರ್ಥನಾಗಿದ್ದಾನೆ ಎಂಬ ಭ್ರಮೆಯಲ್ಲಿರುತ್ತಾರೆ. ಆಂಗ್ಲ ಮಾಧ್ಯಮ ಶಾಲೆಗಳ ವ್ಯಾಪಕತೆಯಿಂದ ಈಗ ಏನಾಗಿದೆಯೆಂದರೆ ನಮ್ಮ ಮಕ್ಕಳಿಗೆ ಇಂಗ್ಲಿಷ್, ಕನ್ನಡ ಎರಡೂ ಭಾಷೆಗಳ ಸ್ವಾಧೀನ ಸರಿಯಾಗಿ ಆಗುವುದೇ ಇಲ್ಲ.

ಇನ್ನೊಂದು ಅಂಶ ಏನೆಂದರೆ, ಹಿಂದಿನ ಕಾಲದ ಶಿಕ್ಷಕರಿಗೂ ಇಂದಿನ ಕಾಲದ ಶಿಕ್ಷಕರಿಗೂ ವ್ಯತ್ಯಾಸವಿದೆ. ವೃತ್ತಿಯ ಬಗ್ಗೆ ಶ್ರದ್ಧೆ, ಅಭಿಮಾನವಿಟ್ಟು ದುಡಿಯುತ್ತಿದ್ದ ಅಂದಿನ ಕಾಲದ ಶಿಕ್ಷಕರಂತೆ ಇಂದೂ ಇರುವರಾದರೂ ಅವರ ಸಂಖ್ಯೆ ತುಂಬ ಕಡಿಮೆ. ಒಂದೇ ಶಾಲೆಯಲ್ಲಿ ಖಾಯಂ ಆಗಿ ದುಡಿಯುವ ಖಾತ್ರಿ ಇಲ್ಲದ ಈ ದಿನಗಳಲ್ಲಿ ದಕ್ಷಿಣೆಗೆ ತಕ್ಕ ಪ್ರದಕ್ಷಿಣೆ ಎಂಬಂತೆ ತಮ್ಮ ಕರ್ತವ್ಯಗಳನ್ನು ನಡೆಸುವವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ. ಅಲ್ಲದೆ ಇಂದು ಕಲಿಸುವ ಹೊಣೆ ಶಿಕ್ಷಕರ ಕೈಯಿಂದ, ಹೆತ್ತವರ ಕೈಗೆ ಜಾರಿದೆ. ಮಕ್ಕಳ ಕಲಿಕೆಯನ್ನು ಖಾಸಗಿ ಟ್ಯೂಶನ್ ಮೂಲಕ ಪೂರ್ಣಗೊಳಿಸುವ ಪ್ರಕ್ರಿಯೆ ಸಾರ್ವತ್ರಿಕವಾಗಿದೆ. ಆಂಗ್ಲ ಮಾಧ್ಯಮ ಶಿಕ್ಷಣ ಜನಪ್ರಿಯವಾಗತೊಡಗಿದಂತೆ ಟ್ಯೂಶನ್ ದಂಧೆ ಸೊಂಪಾಗಿ ಬೆಳೆಯಿತು. ಶಾಲಾ ಕೆಲಸದ ಬಳಿಕ ಮಕ್ಕಳು ಸಂಜೆ ಆಟದ ಬಯಲಲ್ಲಿ ಆಟವಾಡುವ ಪರಿಪಾಠ ನಿಂತುಹೋಯಿತು. ಮಗು ಬೆಳಗ್ಗೆ ಎದ್ದಲ್ಲಿಂದ ಬೇಗನೇ ಶಾಲೆಗೆ ಹೊರಡುವುದು, ಸಂಜೆ ತನಕ ಶಾಲೆ, ಬಳಿಕ ಟ್ಯೂಶನ್, ರಾತ್ರಿ ಮನೆಯಲ್ಲಿ ಹೋಂವರ್ಕ್, ಪ್ರಾಜೆಕ್ಟ್‌ಗಳು, ಪರೀಕ್ಷೆಗೆ ತಯಾರಿ ಇತ್ಯಾದಿಗಳಲ್ಲಿ ಮಗು ಹೈರಾಣಾಗುತ್ತದೆ. ಆಂಗ್ಲಮಾಧ್ಯಮ ಶಿಕ್ಷಣ ಮಕ್ಕಳ ಮೇಲೆ ಹೇರಿರುವ ಈ ಒತ್ತಡವನ್ನು ಗಮನಿಸಬೇಕು. ಕರ್ನಾಟಕದಲ್ಲಿ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಾ ಹೋಗುತ್ತಿದೆ. ಹೆತ್ತವರು ಆಂಗ್ಲಮಾಧ್ಯಮ ಶಿಕ್ಷಣಕ್ಕೆ ಒಲವು ತೋರಿಸಿದ್ದೇ ಇದಕ್ಕೆ ಕಾರಣ. ಕನ್ನಡ ಸರಕಾರಿ ಶಾಲೆಗಳು ಮುಚ್ಚುತ್ತಾ ಹೋದುವು. ಸರಕಾರಿ ಕನ್ನಡ ಶಾಲೆಗಳನ್ನು ಉಳಿಸಲು ಸರಕಾರಿ ಶಾಲೆಗಳಲ್ಲೂ ಆಂಗ್ಲಮಾಧ್ಯಮವನ್ನು ಆರಂಭಿಸಬೇಕು, ಅಥವಾ 1ನೇ ತರಗತಿಯಿಂದಲೇ ಇಂಗ್ಲಿಷ್ ಕಲಿಸಬೇಕು-ಎಂದು ಕನ್ನಡ ಹೋರಾಟಗಾರರು ವಾದಿಸುತ್ತಿದ್ದಾರೆ. ಸರಕಾರಿ ಕನ್ನಡ ಶಾಲೆಗಳಲ್ಲಿ ಬಡವರ ಮಕ್ಕಳು ಸುಲಭವಾಗಿ ಆಂಗ್ಲಮಾಧ್ಯಮ ಶಿಕ್ಷಣ ಪಡೆಯುತ್ತಾರಲ್ಲಾ ಎಂಬ ಯೋಚನೆಯೂ ಕೆಲವರಿಗಿದೆ. ಆದರೆ ಶೈಕ್ಷಣಿಕ ನೀತಿಯನ್ನೇ ಕೈ ಬಿಟ್ಟ ಶಿಕ್ಷಣದಿಂದ ಬಡವರ ಮಕ್ಕಳು ಉದ್ಧಾರವಾಗುತ್ತಾರೆಂದು ನಿರೀಕ್ಷಿಸಬಹುದೇ?

 ಇಲ್ಲಿ ಸರಕಾರ ಕೂಡ ತಪ್ಪುನೀತಿ ಅನುಸರಿಸಿದೆ. ಆಂಗ್ಲಮಾಧ್ಯಮ ಶಾಲೆಗಳಿಗೆ ಬೇಕಾಬಿಟ್ಟಿ ಅನುಮತಿಯನ್ನು ಕೊಡುತ್ತಾ ಬಂದಿದೆ. ಎಷ್ಟೋ ಶಾಲೆಗಳು ಬೇರೊಂದು ಆಂಗ್ಲಮಾಧ್ಯಮ ಶಾಲೆಯ ಹೆಸರಿನಲ್ಲಿ ತಮ್ಮ ಮಕ್ಕಳಿಗೆ ವರ್ಷಗಟ್ಟಲೆ ಶಿಕ್ಷಣ ಕೊಡಿಸಿದ್ದೂ ಇದೆ. ಆಂಗ್ಲಮಾಧ್ಯಮ ಶಾಲೆಗಳಿಂದ ಒಳ್ಳೆಯ ಆದಾಯ ಇದೆ ಎಂದು ಗೊತ್ತಾದ ಕೂಡಲೇ ಉದ್ಯಮಿಗಳೂ, ರಾಜಕಾರಣಿಗಳೂ ಆಂಗ್ಲಮಾಧ್ಯಮ ಶಾಲೆಗಳನ್ನು ಸ್ಥಾಪನೆ ಮಾಡುತ್ತಾ ಹೋದರು. ಸನ್ನಿವೇಶ ಇದೀಗ ಹೆಜ್ಜೆ ಹಿಂದಿಡಲಾಗದಷ್ಟು ಮುಂದೆ ಹೋಗಿದೆ. ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಲೇ ಬೇಕೆಂಬ ಯೋಚನೆ ಸರಕಾರಕ್ಕೆ ಇರುವುದಾದರೆ, ಅದಕ್ಕೊಂದು ಹೊಸ ಯೋಜನೆಯನ್ನೇ ಸಿದ್ಧಪಡಿಸಬೇಕು. ಯಾವುದೇ ಆಂಗ್ಲಮಾಧ್ಯಮ ಶಾಲೆಗೆ ಕಡಿಮೆ ಇಲ್ಲದಂತೆ ಸರಕಾರಿ ಶಾಲೆಗಳನ್ನು ಸಜ್ಜುಗೊಳಿಸಬೇಕು. ಕಟ್ಟಡ, ಕೊಠಡಿ, ಆಟದ ಬಯಲುಗಳ ನವೀಕರಣ ಆಗಬೇಕು. ಕಲಿಕಾ ಸಾಮಗ್ರಿಗಳು ಬೇಕಾದಷ್ಟು ಲಭ್ಯವಿರಬೇಕು, ಸಮರ್ಥ ಶಿಕ್ಷಕರನ್ನು ಇದಕ್ಕಾಗಿ ಸರಿಯಾದ ಪರೀಕ್ಷೆ ನಡೆಸಿ ಆಯ್ಕೆ ಮಾಡಬೇಕು. ಇರುವ ಶಿಕ್ಷಕರಿಗೆ ವಿಶೇಷ ತರಬೇತಿಗಳನ್ನು ಏರ್ಪಡಿಸಿ ಅವರನ್ನು ಸಿದ್ಧಗೊಳಿಸಬೇಕು. ಹಣದ ಕೊರತೆಯಿಂದ ಯೋಜನೆಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು. ಶಾಲಾ ಕೆಲಸದ ಪರಿಶೀಲನೆ, ಮಾರ್ಗದರ್ಶನಗಳನ್ನು ಕರಾರುವಾಕ್ಕಾಗಿ ನಡೆಸಬೇಕು. ಶಾಲಾ ಕೆಲಸಗಳಲ್ಲಿ ಲೋಪ ಕಂಡುಬಂದರೆ, ಅದಕ್ಕೆ, ಶಿಕ್ಷಕರನ್ನೂ, ಅಧಿಕಾರಿಗಳನ್ನೂ ಉತ್ತರದಾಯಿಗಳನ್ನಾಗಿ ಮಾಡಬೇಕು. ಕರ್ತವ್ಯಲೋಪವೆಸಗಿದ ಶಿಕ್ಷಕರನ್ನೂ, ಶಿಕ್ಷಣಾಧಿಕಾರಿಗಳನ್ನೂ ನಿರ್ದಾಕ್ಷಿಣ್ಯವಾಗಿ ಮನೆಗೆ ಕಳುಹಿಸಬೇಕು. ಆದರೆ ಇದೆಲ್ಲ ಸದ್ಯೋಭವಿಷ್ಯದಲ್ಲಿ ಸಂಭವಿಸುವಂತೆ ತೋರುವುದಿಲ್ಲ. ನಾಡನ್ನು ಆಳುವವರು ಬೇರೊಂದು ದಾರಿಯಲ್ಲಿ ಬಹಳ ಮುಂದೆ ಹೋಗಿಯಾಗಿದೆ. ಸರಕಾರಿ ಶಾಲೆಗಳನ್ನು ಉತ್ತಮಪಡಿಸುವ ಪ್ರಯೋಗಗಳು ದಿಲ್ಲಿಯಲ್ಲಿ ಮತ್ತು ಪಕ್ಕದ ಕೇರಳದಲ್ಲಿ ಆಗಿದೆ ಮತ್ತು ಅಲ್ಲಿ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕೂಡ ಹೆಚ್ಚಾಗಿವೆ. ಈ ಪ್ರಯೋಗ ಸಾರ್ವತ್ರಿಕಗೊಳ್ಳಬೇಕಾಗಿದೆ.

   ನಮ್ಮ ಮಕ್ಕಳಿಗೆ ಆಂಗ್ಲಮಾಧ್ಯಮದಲ್ಲಿ ಶಿಕ್ಷಣ ನೀಡಿದರೆ ಮಾತ್ರ ಅವರ ಭವಿಷ್ಯ ಭದ್ರವಾಗುವುದೆಂಬ ಭ್ರಮೆ, ಹೆತ್ತವರ ಮನಸ್ಸಿನಿಂದ ನಿವಾರಣೆಯಾಗಬೇಕು. ಸರಕಾರ ಈ ಬಗ್ಗೆ ಸಮರ್ಪಕವಾದ ಮತ್ತು ಸ್ಪಷ್ಟವಾದ ಧೋರಣೆಯನ್ನು ಹೊಂದಿರಬೇಕು. ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಣಮಾಧ್ಯಮ ಯಾವುದಿರಬೇಕು ಎಂಬ ವಿಷಯಕ್ಕೆ ಸಂಬಂಧಪಟ್ಟಂತೆ ಶಿಕ್ಷಣತಜ್ಞರು ಮೌನ ವಹಿಸಿ, ಪ್ರವಾಹದೊಂದಿಗೆ ಸೇರಿಕೊಂಡಿರುವುದು ದುರದೃಷ್ಟಕರ. ಶಿಕ್ಷಣತಜ್ಞರಲ್ಲಿ ಕೆಲವರು ಮಾತ್ರ ತಮ್ಮ ಅಭಿಪ್ರಾಯಗಳನ್ನು ಹೇಳುತ್ತಲೇ ಇದ್ದರೂ, ಅವೆಲ್ಲ ಅರಣ್ಯರೋದನವಾಗಿದೆ. ಮುಖ್ಯವಾಗಿ ಮಗುವಿನ ಮೇಲೆ ಒತ್ತಡ ಬೀಳದ ಹಾಗೆ, ಕಲಿಕೆ ಒಂದು ಸಂತಸದ ಕ್ರಿಯೆ ಎಂದು ಮಗುವಿಗೆ ಮನವರಿಕೆಯಾಗಬೇಕು. ಮಾತೃಭಾಷೆ ಯಾ ಪರಿಸರದ ಭಾಷೆ ಕಲಿಕಾ ಮಾಧ್ಯಮವಾಗುವುದರಿಂದ, ಮಗುವಿಗೆ ಅನುಕೂಲವೇ ಎಂಬುದು ಹೆತ್ತವರಿಗೆ ಅರ್ಥವಾಗಬೇಕು. ಒತ್ತಡರಹಿತ ಕಲಿಕೆಯಲ್ಲಿ ಸೃಜನಶೀಲತೆ, ಕ್ರಿಯಾಶೀಲತೆಗಳು ಮಕ್ಕಳಲ್ಲಿ ಜಾಗೃತಗೊಂಡು, ಅವರ ವ್ಯಕ್ತಿತ್ವ ವಿಕಸನಕ್ಕೆ ಅದು ನೆರವಾಗುವಂತೆ ಮಾಡಬೇಕು. ಅಲ್ಲದೆ ಹೋದರೆ, ಬದುಕೆಂದರೆ ಉದ್ಯೋಗ, ಹಣಸಂಪಾದನೆ, ವಿನೋದ, ವಿಹಾರ-ಎಂಬುದಷ್ಟೇ ನಮ್ಮ ಮಕ್ಕಳಿಗೆ ಮುಖ್ಯವಾಗುತ್ತಾ ಹೋಗುತ್ತದೆ. ಅಂತಹ ಬದುಕು ನೀರಸ, ಅರ್ಥಹೀನ-ಎಂದು ಮನವರಿಕೆಯಾಗುವ ಹೊತ್ತಿಗೆ ತುಂಬ ತಡವಾಗಿರುತ್ತದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top