‘ಬಂಡವಾಳ’ದ ಮಹತ್ವ | Vartha Bharati- ವಾರ್ತಾ ಭಾರತಿ
‘ಬಂಡವಾಳ ಸಂಪುಟ-1’ ಅಗಸ್ಟ್ 2ರಂದು ಬಿಡುಗಡೆಯಾಗಲಿದೆ.

‘ಬಂಡವಾಳ’ದ ಮಹತ್ವ

ನವಕರ್ನಾಟಕ ಮತ್ತು ಕ್ರಿಯಾ ಮಾಧ್ಯಮಗಳ ಜಂಟಿ ಯೋಜನೆಯಾದ ‘ಮಾರ್ಕ್ಸ್200-ಕ್ಯಾಪಿಟಲ್150’ ಯೋಜನೆಯ ಕೊನೆಯ ಪ್ರಕಟನೆಯಾಗಿ, ‘ಬಂಡವಾಳ ಸಂಪುಟ-1’ ಪ್ರಕಟವಾಗುತ್ತಿದೆ. ಇದು ದೊಡ್ಡ (ಕ್ರೌನ್ ¼ ) ಸೈಜಿನಲ್ಲಿ 700ಕ್ಕೂ ಹೆಚ್ಚು ಪುಟಗಳ ಬೃಹತ್ ಹೊತ್ತಿಗೆಯಾಗಿದೆ. ನಾಡಿನ ಹಿರಿಯ ಲೇಖಕರು ಮತ್ತು ಅನುವಾದಕರುಗಳಾದ ಡಾ.ಜಿ.ರಾಮಕೃಷ್ಣ, ಜಿ.ರಾಜಶೇಖರ್, ವಿ.ಎನ್.ಲಕ್ಷ್ಮೀನಾರಾಯಣ್, ಟಿ.ಎಸ್. ವೇಣುಗೋಪಾಲ್, ನಗರಗೆರೆ ರಮೇಶ್, ಡಾ.ಬಿ.ಆರ್.ಮಂಜುನಾಥ್ ಸೇರಿದಂತೆ ಇಪ್ಪತ್ತು ಹಿರಿಯ ಪರಿಣತರು ಒಂದು ವರ್ಷಕ್ಕೂ ಹೆಚ್ಚು ಕಾಲ ತಮ್ಮ ಪರಿಶ್ರಮದಿಂದ ಈ ಕೃತಿಯನ್ನು ಸಿದ್ಧಪಡಿಸಿದ್ದಾರೆ. ಬಂಡವಾಳ ಸಂಪುಟ-1ರ ಕನ್ನಡ ಅನುವಾದದ ಬಿಡುಗಡೆ ಸಾಂಸ್ಕೃತಿಕವಾಗಿ ಒಂದು ಪ್ರಮುಖ ಘಟನೆ. ಅಗಸ್ಟ್ 2ರಂದು ನಾಡೋಜ ಬರಗೂರು ರಾಮಚಂದ್ರಪ್ಪಅವರು ಬಿಡುಗಡೆ ಮಾಡಲಿರುವ ‘ಬಂಡವಾಳ ಸಂಪುಟ-1’ರ ದೀರ್ಘ ಪ್ರವೇಶಿಕೆಯಿಂದ ಆಯ್ದ ಭಾಗ.

ಕಾರ್ಮಿಕ ವರ್ಗವು ಶೋಷಣಾ ರಹಿತ ಸಮಾನ ಸಮೃದ್ಧ ಸಮಾಜವಾದಿ ಸಮಾಜ ಕಟ್ಟುತ್ತದೆ ಎಂದು ‘ಬಂಡವಾಳ’ ಮತ್ತು ಮಾರ್ಕ್ಸ್ ಅವರ ಇತರ ಕೃತಿಗಳು ಸಿದ್ಧಪಡಿಸಿದ್ದವು. ಅದಕ್ಕಾಗಿ ಕಾರ್ಮಿಕ ವರ್ಗವನ್ನು ಸಿದ್ಧಗೊಳಿಸಲು ಮಾರ್ಕ್ಸ್ ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಘಟನೆಯನ್ನೂ ಕಟ್ಟಿದ್ದರು. ಮುಂದಿನ 50 ವರ್ಷಗಳ ಕಾಲ, ಅವರ ‘ಬಂಡವಾಳ’ ಗ್ರಂಥದ ಪ್ರಭಾವ ಜಗತ್ತಿನ ಎಲ್ಲೆಡೆ ಹರಡಿತ್ತು. ಜಗತ್ತಿನಾದ್ಯಂತ ಚರ್ಚೆಯಾಗುತ್ತಿತ್ತು.

‘ಬಂಡ್ವಾಳವಿಲ್ಲದ ಬಡಾಯಿ’ ಆಧುನಿಕ ಕನ್ನಡ ನಾಟಕಕಾರ ಟಿ.ಪಿ.ಕೈಲಾಸಂ ಅವರ ಒಂದು ಪ್ರಸಿದ್ಧ ನಾಟಕ. ಆದರೆ ಈಗ ಬಂಡವಾಳದ ಬಡಾಯಿಯ ಕಾಲ. ಬಂಡವಾಳದ್ದು ಬಡಾಯಿ ಮಾತ್ರವಲ್ಲ, ಅದರದ್ದೇ ಈಗ ಎಲ್ಲೆಲ್ಲೂ ಯಜಮಾನಿಕೆ. ಅದು ಮಾಡಿದ್ದೇ ರೂಲ್ಸು. ಅದರದ್ದೇ ಜಗದ ತುಂಬಾ ಕಾರುಬಾರು. ಬಂಡವಾಳಶಾಹಿ ವ್ಯವಸ್ಥೆಯೇ ಮನುಕುಲದ ಚರಮ ಸಾಧನೆ. ಇದಕ್ಕೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ಅದು ಮನುಷ್ಯ-ಸಹಜವಾದ ಅತ್ಯಂತ ಅಭಿವೃದ್ಧಿ ಹೊಂದಿದ ವ್ಯವಸ್ಥೆ. ಅದು ಅಜರಾಮರ, ಎಂದು ಅದರ ಭಕ್ತರು ಹೇಳಿದ್ದೇ ಹೇಳಿದ್ದು. ಆದರೆ 150 ವರ್ಷಗಳ ಹಿಂದೆಯೇ ಈ ಭಕ್ತರ ಬೊಗಳೆ ಬಯಲು ಮಾಡಿದ್ದು ಆಗ 50 ವಯಸ್ಸಿನ ಕಾರ್ಲ್ ಮಾರ್ಕ್ಸ್. 1867ರಲ್ಲಿ ಜರ್ಮನಿಯ ಹಾಂಬರ್ಗ್‌ನಲ್ಲಿ ಪ್ರಕಟವಾದ ಅವರ ಮೇರು ಕೃತಿ ಬಂಡವಾಳದ ಮೊದಲ ಸಂಪುಟ ಇದನ್ನು ಮಾಡಿತ್ತು. ಆ ನಂತರ ಮಾರ್ಕ್ಸ್ ಮುಂದುವರಿಸಿದ್ದ ಬಂಡವಾಳಶಾಹಿ ವ್ಯವಸ್ಥೆಯ ಮಾಹಿತಿ, ಅಧ್ಯಯನ, ವಿಶ್ಲೇಷಣೆಗಳ ಟಿಪ್ಪಣಿಗಳನ್ನು ಆಧರಿಸಿ, ಎಂಗೆಲ್ಸ್ ಬಂಡವಾಳದ ಸಂಪುಟ 2 ಮತ್ತು 3ನ್ನು ಮಾರ್ಕ್ಸ್ ನಿಧನದ ನಂತರ ಪ್ರಕಟಿಸಿದ್ದರು.

‘ಬಂಡವಾಳದ ಬಡಾಯಿ’ಯಲ್ಲಿ ಯಾವುದೇ ಬಂಡ್ವಾಳವಿಲ್ಲ ಎಂದು ‘ಬಂಡವಾಳ’ (ಈ ಪ್ರವೇಶಿಕೆಯಲ್ಲಿ ಉದ್ಧರಣೆಯ ಚಿಹ್ನೆ ನಡುವೆ ಇರುವ ‘ಬಂಡವಾಳ’, ಮಾರ್ಕ್ಸ್ ಅವರ ಕೃತಿಯ ಉಲ್ಲೇಖ ಎಂದು ತಿಳಿಯಬೇಕು) ಜಗತ್ತಿಗೆ ಸಾರಿತ್ತು. ಅದಕ್ಕೆ ಆದಿಯೂ ಇದೆ, ಅಂತ್ಯವೂ ಇದೆ ಅದು ಅಜರಾಮರವಲ್ಲ. ಅದು ಮನುಷ್ಯ-ಸಹಜ ಅಲ್ಲ. ಮಾತ್ರವಲ್ಲ ಮನುಷ್ಯ-ವಿರೋಧಿ ಸಹ. ಬಂಡವಾಳಶಾಹಿಯು ಬಿಕ್ಕಟ್ಟುಗ್ರಸ್ತ ವ್ಯವಸ್ಥೆ. ಬಂಡವಾಳ ಮತ್ತು ಶ್ರಮದ ನಡುವೆ ಮೂಲಭೂತ ವೈರುಧ್ಯವಿದ್ದು, ಇದು ಬಂಡವಾಳಶಾಹಿ ಮತ್ತು ಕಾರ್ಮಿಕ ವರ್ಗಗಳ ನಡುವಿನ ಸತತ ವರ್ಗ ಸಂಘರ್ಷದಲ್ಲಿ ಪ್ರಕಟವಾಗುತ್ತದೆ. ತಕ್ಕ ಪರಿಸ್ಥಿತಿ ನಿರ್ಮಾಣವಾದಾಗ ಬಂಡವಾಳವೇ ಹುಟ್ಟುಹಾಕಿದ ಕಾರ್ಮಿಕ ವರ್ಗ ಈ ವ್ಯವಸ್ಥೆಯ ಗೋರಿ ತೋಡುತ್ತದೆ. ಕಾರ್ಮಿಕ ವರ್ಗವು ಶೋಷಣಾ ರಹಿತ ಸಮಾನ ಸಮೃದ್ಧ ಸಮಾಜವಾದಿ ಸಮಾಜ ಕಟ್ಟುತ್ತದೆ ಎಂದು ‘ಬಂಡವಾಳ’ ಮತ್ತು ಮಾರ್ಕ್ಸ್ ಅವರ ಇತರ ಕೃತಿಗಳು ಸಿದ್ಧಪಡಿಸಿದ್ದವು. ಅದಕ್ಕಾಗಿ ಕಾರ್ಮಿಕ ವರ್ಗವನ್ನು ಸಿದ್ಧಗೊಳಿಸಲು ಮಾರ್ಕ್ಸ್ ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಘಟನೆಯನ್ನೂ ಕಟ್ಟಿದ್ದರು. ಮುಂದಿನ 50 ವರ್ಷಗಳ ಕಾಲ, ಅವರ ‘ಬಂಡವಾಳ’ ಗ್ರಂಥದ ಪ್ರಭಾವ ಜಗತ್ತಿನ ಎಲ್ಲೆಡೆ ಹರಡಿತ್ತು. ಜಗತ್ತಿನಾದ್ಯಂತ ಚರ್ಚೆಯಾಗುತ್ತಿತ್ತು. ಮಾರ್ಕ್ಸ್ ಅವರ ಸಿದ್ಧಾಂತವನ್ನು ಆಧಾರವಾಗಿ ಇಟ್ಟುಕೊಂಡ ಕಮ್ಯುನಿಸ್ಟ್ ಪಕ್ಷಗಳು ಸ್ಥಾಪಿತಗೊಂಡಿದ್ದವು. ವ್ಲಾದಿಮಿರ್ ಲೆನಿನ್ ನಾಯಕತ್ವದ ರಶ್ಯನ್ ಕಮ್ಯುನಿಸ್ಟ್ ಪಕ್ಷದ ನಾಯಕತ್ವದಲ್ಲಿ ಬಂಡವಾಳ ಪ್ರಕಟವಾದ 50 ವರ್ಷಗಳಲ್ಲೇ ಮೊದಲ ಕಾರ್ಮಿಕ ಕ್ರಾಂತಿಯಾಗಿ ಆ ದೇಶ ಸಮಾಜವಾದದತ್ತ ಮೊದಲ ಹೆಜ್ಜೆ ಇಟ್ಟಿತ್ತು. ಮುಂದಿನ 50 ವರ್ಷಗಳಲ್ಲಿ (ಅಂದರೆ ‘ಬಂಡವಾಳ’ ಪ್ರಕಟವಾಗಿ 100 ವರ್ಷಗಳಲ್ಲಿ) ಚೀನಾ, ಇಡೀ ಪೂರ್ವ ಯುರೋಪಿನ ದೇಶಗಳಿಂದ ಹಿಡಿದು ಕ್ಯೂಬಾದವರೆಗೆ ಹಲವು ದೇಶಗಳಲ್ಲಿ ಸಮಾಜವಾದಿ ಕ್ರಾಂತಿ ನಡೆಯಿತು. ಅಷ್ಟು ಹೊತ್ತಿಗೆ ಜಗತ್ತಿನ ಜನಸಂಖ್ಯೆಯ ಪ್ರತಿ ಮೂವರಲ್ಲಿ ಒಬ್ಬರು ಸಮಾಜವಾದಿ ವ್ಯವಸ್ಥೆಯತ್ತ ದಾಪುಗಾಲಿನ ಹೆಜ್ಜೆಯಿಡುತ್ತಿರುವ ಸಮಾಜವಾದಿ ಬಣದ ದೇಶಗಳಲ್ಲಿ ವಾಸಿಸುತ್ತಿದ್ದರು. ಅಭಿವೃದ್ಧಿ ಹೊಂದಿದ ಬಂಡವಾಳಶಾಹಿ ದೇಶಗಳ ವಸಾಹತುಶಾಹಿಯಿಂದ ವಸಾಹತುಗಳ ವಿಮೋಚನೆಯ ಪ್ರಕ್ರಿಯೆ ಪೂರ್ಣವಾಗಿತ್ತು. ಈ 50 ವರ್ಷಗಳಲ್ಲಿ ಜಗತ್ತಿನ ಹೆಚ್ಚಿನ ಪ್ರಮುಖ ಭಾಷೆಗಳಿಗೆ ‘ಬಂಡವಾಳ’ ಅನುವಾದವಾಗಿತ್ತು. ‘ಬಂಡವಾಳ’ 20ನೇ ಶತಮಾನದ ಬೆಳವಣಿಗೆಗಳ ಮೇಲೆ ಅತ್ಯಂತ ಹೆಚ್ಚಿನ ಪ್ರಭಾವ ಹೊಂದಿದ್ದು, ಅದರ ಗತಿಯನ್ನು ನಿರ್ಧರಿಸಿತು. 100 ವರ್ಷಗಳ ಕಾಲವೂ ಒಂದು ಕಡೆಗೆ, ಮಾರ್ಕ್ಸ್‌ರ ‘ಬಂಡವಾಳ’ದ ಅಧ್ಯಯನ ಮತ್ತು ಪ್ರಭಾವ ಜಗತ್ತಿನ ತುಂಬ ಹರಡಿತ್ತು. ಜೊತೆ ಜೊತೆಗೆ ‘ಬಂಡವಾಳದ ಬಡಾಯಿ’ ಸಹ ಜಗತ್ತಿನ ತುಂಬ ನಡೆಯುತ್ತಿತ್ತು. ವಾಸ್ತವದಲ್ಲಿ ಮಾರ್ಕ್ಸ್‌ರ ‘ಬಂಡವಾಳ’ದ ಮತ್ತು ‘ಬಂಡವಾಳದ ಬಡಾಯಿ’ ನಡುವೆ ಸತತ ಮುಖಾಮುಖಿ ನಡೆದಿತ್ತು. 1990ರ ದಶಕದ ಆದಿಯಲ್ಲಿ ಸೋವಿಯೆತ್ ಒಕ್ಕೂಟ ಮತ್ತು ಪೂರ್ವ ಯುರೋಪಿನ ದೇಶಗಳಲ್ಲಿ ಬಂಡವಾಳಶಾಹಿ ವ್ಯವಸ್ಥೆಯ ಮರುಸ್ಥಾಪನೆಯ ನಂತರ ಈ ಮುಖಾಮುಖಿ ಇನ್ನಷ್ಟು ತೀವ್ರವಾಗಿದೆ. ಸಮಾಜವಾದ ವ್ಯವಸ್ಥೆ ಬಿದ್ದು ಹೋಗಿದ್ದರಿಂದ, ಬಂಡವಾಳಶಾಹಿ ವ್ಯವಸ್ಥೆಯ ಬಗೆಗಿನ ಮಾರ್ಕ್ಸ್ ಅವರ ವಿಶ್ಲೇಷಣೆ ಸಹ ತಪ್ಪು ಎಂದು ಸಾಬೀತಾಗಿದೆ ಎಂಬ ಪ್ರಚಾರ ಜೋರಾಗಿತ್ತು. ಆದರೆ 20ನೇ ಶತಮಾನದ ಕೊನೆಯಲ್ಲಿ ಕಳೆದ ಸಹಸ್ರಮಾನದ (11-20 ನೇ ಶತಮಾನದ ಅವಧಿ) ಹತ್ತು ಶ್ರೇಷ್ಠ್ಟ ಚಿಂತಕರು ಯಾರು ಎಂದು ಬಿಬಿಸಿ ನಡೆಸಿದ ಆನ್ ಲೈನ್ ಸಮೀಕ್ಷೆಯಲ್ಲಿ ಮಾರ್ಕ್ಸ್ ಮೊದಲ ಸ್ಥಾನದಲ್ಲಿ ಹೊಮ್ಮುವುದನ್ನು ಯಾವ ಪ್ರಚಾರಕ್ಕೂ ತಡೆಯಲಾಗಲಿಲ್ಲ.

ಕಳೆದ ಮೂರು ದಶಕಗಳಲ್ಲಿ ಜಾಗತಿಕವಾಗಿರುವ ಹಣಕಾಸು ಬಂಡವಾಳ ಹಿಂದೆಂದಿಗಿಂತಲೂ ಗಟ್ಟಿ ಸದ್ದು ಮಾಡುತ್ತಿದೆ. ಆದರೆ 2008ರ ಮಹಾ ಬಿಕ್ಕಟ್ಟು ಮತ್ತು ಆ ಮೇಲೆ ಈ ವರೆಗೂ ಬಿಗಡಾಯಿಸಿರುವ ಬಿಕ್ಕಟ್ಟಿನಿಂದ ಚೇತರಿಕೆಯ ಸವಾಲುಗಳು ಬಂಡವಾಳದ ಮಹತ್ವವನ್ನು ಮತ್ತೆ ಹೆಚ್ಚಿಸಿವೆ. ಈ ಮಹಾ ಬಿಕ್ಕಟ್ಟಿನ ಸಂದರ್ಭದಲ್ಲಿ ‘ಬಂಡವಾಳ’ದ ಪ್ರತಿಗಳಿಗೆ ಬೇಡಿಕೆ ಹೆಚ್ಚಿತ್ತು. ಆಗ ನ್ಯೂಯಾರ್ಕ್ ಟೈಮ್ಸ್ ಲೇಖನವೊಂದರಲ್ಲಿ ಮಹಾ ಬಿಕ್ಕಟ್ಟನ್ನು ಅರ್ಥ ಮಾಡಿಕೊಂಡು ಪರಿಹಾರ ಹುಡುಕಬೇಕಾದರೆ ಮಾರ್ಕ್ಸ್‌ರ ‘ಬಂಡವಾಳ’ಕ್ಕೆ ಮರಳಬೇಕು ಎಂದಿತ್ತು. ಈ ವರೆಗೆ ಬಂಡವಾಳಶಾಹಿ ಆರ್ಥಿಕದ ಮಾರ್ಕ್ಸ್‌ವಾದಿ ವಿಶ್ಲೇಷಣೆಯನ್ನು ನಿರ್ಲಕ್ಷಿಸಿದ್ದ ಅಥವಾ ಹೀಗಳೆಯುತ್ತಿದ್ದ ಹಲವು ಬೂರ್ಜ್ವಾ ಅರ್ಥಶಾಸ್ತ್ರಜ್ಞರು ಬಿಕ್ಕಟ್ಟು ಹೇಗೆ ಉಂಟಾಗುತ್ತದೆ? ಬಿಕ್ಕಟ್ಟನ್ನು ತಾಳಿಕೊಳ್ಳಬಲ್ಲ ಪರಿಹಾರಗಳು ಏನು? ಇಂತಹ ಪ್ರಶ್ನೆಗಳಿಗೆ ಉತ್ತರ ಸಿಗಬಹುದು ಎಂಬುದಕ್ಕಾಗಿ ‘ಬಂಡವಾಳ’ದ ಅಧ್ಯಯನ ಆರಂಭಿಸಿದ್ದರಂತೆ. ಜರ್ಮನಿಯಲ್ಲಿ 2010ರಲ್ಲಿ ‘ಬಂಡವಾಳ’ದ ಪ್ರತಿಗಳ ಮಾರಾಟ 10 ಪಟ್ಟು ಏರಿತ್ತು. ಹ್ಯಾಂಬರ್ಗಿನಲ್ಲಿ ‘ಬಂಡವಾಳ ಸಂಪುಟ 1’ರ ಪ್ರಕಟನೆಯ 150ನೇ ವಾರ್ಷಿಕದ (ಸೆಪ್ಟಂಬರ್ 2017) ಸಂದರ್ಭದಲ್ಲಿ ಅದರ ಇಂದಿನ ಪ್ರಸ್ತುತತೆ ಬಗ್ಗೆ ಜರ್ಮನಿ-ವ್ಯಾಪಿಯಾಗಿ ಸಮೀಕ್ಷೆ ನಡೆಸಲಾಯಿತು. ಆ ಸಮೀಕ್ಷೆಯಲ್ಲಿ ಮೂವರಲ್ಲಿ ಇಬ್ಬರು ಹಿಂದೆಂದಿಗಿಂತಲೂ ‘‘ದಾಸ್ ಕ್ಯಾಪಿಟಲ್ ಇಂದು ಪ್ರಸುತ’’ ಎಂದು ಅಭಿಪ್ರಾಯ ನೀಡಿದ್ದರು. ಕೇವಲ ಶೇ.6 ಮಾತ್ರ ‘‘ಇಂದಿಗೆ ದಾಸ್ ಕ್ಯಾಪಿಟಲ್ ಅಪ್ರಸ್ತುತ’’ ಎಂದರು.

ಸಾಮಾನ್ಯವಾಗಿ ಯಾವುದೇ ಸಂಶೋಧನಾ ಪ್ರಕಟನೆಯ (ಪುಸ್ತಕ ಅಥವಾ ಲೇಖನ) ಹೆಚ್ಚುಗಾರಿಕೆ, ಮಹತ್ವ ಮತ್ತು ಅದಕ್ಕೆ ಸಿಕ್ಕಿರುವ ಮನ್ನಣೆಯನ್ನು, ಅದನ್ನು ಇತರ ಸಂಶೋಧನಾ ಪ್ರಕಟನೆಗಳು ಎಷ್ಟು ಬಾರಿ ಉಲ್ಲೇಖಿಸಿವೆ ಅಥವಾ ಉದ್ಧರಿಸಿವೆ ಎಂಬುದರ ಮೇಲೆ ಅಳೆಯಲಾಗುತ್ತದೆ. ಈಗ ಹೆಚ್ಚಿನ ಪ್ರಮುಖ (ಬಂಡವಾಳದಂತಹ ಹಿಂದಿನ ಶತಮಾನಗಳ ಕ್ಲಾಸಿಕ್‌ಗಳು ಸೇರಿದಂತೆ) ಸಂಶೋಧನಾ ಪ್ರಕಟನೆಗಳು ಇಂಟರ್‌ನೆಟ್‌ನಲ್ಲಿ (ಎಲ್ಲವೂ ಉಚಿತವಲ್ಲದಿರಬಹುದು) ಲಭ್ಯವಿದ್ದು, ‘ಗೂಗಲ್ ಸ್ಕಾಲರ್’ ಎಂಬ ವೆಬ್ ಸೇವೆ ಒಂದು ನಿರ್ದಿಷ್ಟ ಸಂಶೋಧನಾ ಪ್ರಕಟನೆ ಯಾವ ಇತರ ಪ್ರಕಟನೆಗಳಲ್ಲಿ ಉಲ್ಲೇಖಿತ/ಉಧೃತವಾಗಿವೆ ಎಂಬ ಪಟ್ಟಿಯನ್ನು ಕೊಡುತ್ತದೆ. 2004ರಿಂದ ಬಳಕೆಯಲ್ಲಿರುವ ‘ಗೂಗಲ್ ಸ್ಕಾಲರ್’ ಕೊಡುವ ಈ ಮಾಹಿತಿಯನ್ನು ಸಂಗ್ರಹಿಸಿ ವಿವಿಧ ಪ್ರಕಟನೆಗಳನ್ನು ಹೋಲಿಸಬಹುದು. ಮೇ 2016ರಲ್ಲಿ ಇಂತಹ ಒಂದು ಅಧ್ಯಯನವನ್ನು ಕೈಗೊಳ್ಳಲಾಗಿದ್ದು, 1950ಕ್ಕಿಂತ ಮೊದಲು ಪ್ರಕಟವಾದ ಸಮಾಜಶಾಸ್ತ್ರದ ಪುಸ್ತಕಗಳಲ್ಲಿ ದಾಸ್ ಕ್ಯಾಪಿಟಲ್ ಅತ್ಯಂತ ಹೆಚ್ಚು ಇತರ ಸಮಾಜಶಾಸ್ತ್ರದ ಪ್ರಕಟನೆಗಳಲ್ಲಿ ಉಲ್ಲೇಖಿತ/ಉಧೃತವಾಗಿರುವ ಪುಸ್ತಕ ಎಂದು ಗುರುತಿಸಲಾಗಿದೆ. ದಾಸ್ ಕ್ಯಾಪಿಟಲ್ 40,237 ಇತರ ಸಮಾಜಶಾಸ್ತ್ರದ ಪ್ರಕಟನೆಗಳಲ್ಲಿ ಉಧೃತವಾಗಿದೆ. ರಾಜಕೀಯ ಅರ್ಥಶಾಸ್ತ್ರದ ಕ್ಲಾಸಿಕ್‌ಗಳು ಎಂದು ಪರಿಗಣಿಸಲಾಗುವ ಆ್ಯಡಂ ಸ್ಮಿತ್ ಅವರ ‘ವೆಲ್ತ್ ಆಫ್ ನೇಶನ್ಸ್’ ಎರಡನೇ ಸ್ಥಾನದಲ್ಲಿ (36,331 ಉಲ್ಲೇಖ/ಉದ್ಧರಣೆಗಳು) ಮತ್ತು ಜಾನ್ ಕೇನ್ಸ್ ಅವರ ‘ಜನರಲ್ ಥಿಯರಿ ಆಫ್ ಎಂಪ್ಲಾಯ್‌ಮೆಂಟ್, ಇಂಟರೆಸ್ಟ್ ಆ್ಯಂಡ್ ಮನಿ’’ ಆರನೇ ಸ್ಥಾನದಲ್ಲಿ (29,131 ಉಲ್ಲೇಖ/ಉದ್ಧರಣೆಗಳು) ಇವೆ. ಈ ಅಧ್ಯಯನ ಇಂಟರ್‌ನೆಟ್‌ನಲ್ಲಿ ಲಭ್ಯವಿರದ ಪ್ರಕಟನೆಗಳನ್ನು ಒಳಗೊಳ್ಳುವುದಿಲ್ಲ. ಅವನ್ನು ಒಳಗೊಂಡರೆ ‘ಬಂಡವಾಳ’ದ ಸ್ಕೋರ್ ಇನ್ನೂ ಹೆಚ್ಚಾಗಬಹುದು. ಇವೆಲ್ಲದ್ದರಿಂದ ಪುನಃ ಮಾರ್ಕ್ಸ್ ರ ‘ಬಂಡವಾಳ’ದ ಮಹತ್ವ ಮತ್ತು ಜನಪ್ರಿಯತೆ ಹೆಚ್ಚಿದೆ ಎಂದು ತಿಳಿಯುತ್ತದೆ.

‘ಬಂಡವಾಳ’ ಹೆಚ್ಚು ಕಡಿಮೆ ಎಲ್ಲಾ ಆಧುನಿಕ ಭಾಷೆಗಳಲ್ಲಿ ಅನುವಾದವಾಗಿದೆ. ಮಾರ್ಕ್ಸಿಸ್ಟ್ ಇಂಟರ್‌ನೆಟ್ ಆಕರದ (www.marxists.org) ಪ್ರಕಾರ 18 ಭಾಷೆಗಳಲ್ಲಿರುವ ‘ಬಂಡವಾಳ ಸಂಪುಟ 1’ರ ಅನುವಾದಗಳು ಇಂಟರ್‌ನೆಟ್‌ನಲ್ಲಿ ಲಭ್ಯ ಇವೆ. ಅವುಗಳಲ್ಲಿ 11 ಭಾಷೆಗಳ ಅನುವಾದಗಳು ಅದೇ ಆಕರದಲ್ಲಿವೆ. 2012ರಲ್ಲಿ ಜಪಾನೀ ಭಾಷೆಯಲ್ಲಿ ‘ಬಂಡವಾಳ’ವನ್ನು ಕಾಮಿಕ್ಸ್ ರೂಪದಲ್ಲಿ ಪ್ರಕಟಿಸಲಾಗಿದೆ.

ಭಾರತದ ಭಾಷೆಗಳಲ್ಲಿ ಬಂಡವಾಳ ಹಿಂದಿ, ಬಂಗಾಳಿ, ಪಂಜಾಬಿ, ಮಲಯಾಳಂ, ತೆಲುಗು, ತಮಿಳು, ಒಡಿಯಾ, ಉರ್ದುಗಳಲ್ಲಿ ಅನುವಾದವಾಗಿದ್ದು ಪ್ರಕಟವಾಗಿದೆ. ಸಂಪುಟ 1 ರ ಹಿಂದಿ ಅನುವಾದವನ್ನು 1961ರಲ್ಲಿ ಮಾಸ್ಕೋದ ಪ್ರಗತಿ ಪ್ರಕಾಶನ ಮತ್ತು ಪೀಪಲ್ಸ್ ಪಬ್ಲಿಷಿಂಗ್ ಹೌಸ್ ಜಂಟಿಯಾಗಿ ಪ್ರಕಟಿಸಿದವು. ಸಂಪುಟ 2ನ್ನು 1979 ರಲ್ಲಿ ಮತ್ತು ಸಂಪುಟ 3ನ್ನು 1983ರಲ್ಲಿ ಅವೇ ಪ್ರಕಾಶಕರು ಪ್ರಕಟಿಸಿದರು. ಸಂಪುಟ 1ರ ಅನುವಾದಕರು ಓಂ ಪ್ರಕಾಶ್ ಸಂಗಲ್. ಸಂಪುಟ 2ರ ಅನುವಾದಕರು ಹಿಂದಿಯ ಪ್ರಸಿದ್ಧ ಲೇಖಕ ರಾಮವಿಲಾಸ ಶರ್ಮ (ಸಂಪಾದಕರು ನರೇಶ್ ವೇದಿ). ಸಂಪುಟ 3ರ ಅನುವಾದಕರು ನರೇಶ್ ವೇದಿ (ಸಂಪಾದಕರು ಬುದ್ಧಿಪ್ರಸಾದ್ ಭಟ್). ‘ಬಂಡವಾಳ’ ಸಂಪುಟ 1ರ ಮೊದಲ ಪೂರ್ಣ ಬಂಗಾಳಿ ಅನುವಾದವನ್ನು ಪಿಯೂಶ್ ದಾಸಗುಪ್ತಾ ಅವರು ಮಾಡಿದ್ದು, 1974ರಲ್ಲಿ ಕೋಲ್ಕ್ಕತಾದ ಬಾನಿ ಪ್ರಕಾಶನದಿಂದ ಪ್ರಕಟವಾಗಿತ್ತು. ಎರಡನೇ ಮುದ್ರಣ 1981ರಲ್ಲಿ, 3ನೇ ಮುದ್ರಣ 1986ರಲ್ಲಿ ಮತ್ತು 4ನೇ ಮುದ್ರಣ 2009ರಲ್ಲಿ ಪ್ರಕಟಿತವಾಗಿತ್ತು. ಮಾಸ್ಕೋದ ಪ್ರಗತಿ ಪ್ರಕಾಶನ ಸಹ ಮೊದಲ ಸಂಪುಟವನ್ನು 1988ರಲ್ಲಿ ಎರಡನೇ ಸಂಪುಟವನ್ನು 1989ರಲ್ಲಿ ಮತ್ತು ಸಂಪುಟ-3 ನಂತರ ಪ್ರಕಟವಾಯಿತು. ಎರಡೂ ಬಂಗಾಳಿ ಅನುವಾದದ ಭಾಗಗಳು ಪಿಡಿಎಫ್ ರೂಪದಲ್ಲಿ ನೆಟ್‌ನಲ್ಲಿ ಲಭ್ಯ ಇವೆ. ಉರ್ದುವಿನಲ್ಲಿ ಸೈಯದ್ ಮುಹಮ್ಮದ್ ತಾಕಿ ಅವರ ಅನುವಾದವನ್ನು 1961ರಲ್ಲಿ ಲಾಹೋರಿನ ದಾರುಲ್ ಶೌರ್ ಪ್ರಕಾಶನ ಪ್ರಕಟಿಸಿದೆ. ಅದರ ಹಲವು ಆವೃತ್ತಿಗಳು ಬಂದಿದ್ದು 2011ರಲ್ಲಿ ಇತ್ತೀಚಿನ ಆವೃತ್ತಿ ಪ್ರಕಟವಾಗಿದೆ. ಪಂಜಾಬಿಯಲ್ಲಿ ಸಹ ‘ಬಂಡವಾಳ’ದ ಮೂರು ಸಂಪುಟಗಳು ಪ್ರಕಟವಾಗಿವೆ. ಮೊದಲ ಸಂಪುಟವನ್ನು ದಿಲ್ಲಿಯ ಪ್ರಸಿದ್ಧ ನವಯುಗ ಪ್ರಕಾಶನ 1975ರಲ್ಲಿ ಪ್ರಕಟಿಸಿತು. ಬಂಡವಾಳದ ಅನುವಾದವನ್ನು ನಾಲ್ಕು ಪಂಜಾಬಿ ಲೇಖಕರು- ಗುರುಬಚನ್ ಸಿಂಗ್ ಭುಲ್ಲರ್, ಪ್ಯಾರಾ ಸಿಂಗ್ ಸೆಹ್ರಾಯಿ, ಕರಂಜಿತ್ ಸಿಂಗ್, ಪ್ರೇಮ್ ಸಿಂಗ್-ನಿರ್ವಹಿಸಿದರು.

ಮಾರ್ಕ್ಸ್ ಅವರ 150ನೇ ಹುಟ್ಟುಹಬ್ಬದಂದು (ಮೇ 5, 1968) ‘ಬಂಡವಾಳ’ದ ಮಲಯಾಳಂ ಅನುವಾದದ ಬಿಡುಗಡೆ ಆಯಿತು. ‘ಬಂಡವಾಳ ಸಂಪುಟ 1’ರ ತೆಲುಗು ಅನುವಾದ ಸೆಪ್ಟಂಬರ್ 1996ರಲ್ಲಿ ಪ್ರಕಟವಾಯಿತು. ಇದರಲ್ಲಿ 5 ಅನುವಾದಕರು ಭಾಗವಹಿಸಿದ್ದು, ಇದು ಮೊದಲಿಗೆ ಮಾಸ್ಕೋದ ಪ್ರಗತಿ ಪ್ರಕಾಶನ ಮತ್ತು ವಿಶಾಲಾಂಧ್ರ ವಿಜ್ಞಾನ ಸಮಿತಿಯ ಜಂಟಿ ಯೋಜನೆಯಾಗಿದ್ದು, ಕೊನೆಗೆ ವಿಶಾಲಾಂಧ್ರ ವಿಜ್ಞಾನ ಸಮಿತಿ ಒಂದೇ ಅದನ್ನು ಪ್ರಕಟಿಸಿತು. ನವೆಂಬರ್ 1998 ಮತ್ತು ಅಕ್ಟೋಬರ್ 2000ದಲ್ಲಿ ಬಂಡವಾಳ ಸಂಪುಟ 2 ಮತ್ತು 3 ಅನುಕ್ರಮವಾಗಿ ಪ್ರಕಟವಾದವು. ಬಂಡವಾಳದ ಈ ನೇರ ಅನುವಾದವಲ್ಲದೆ, ಬಂಡವಾಳವನ್ನು ಸರಳವಾಗಿ ವಿವರಿಸುವ ಅರ್ಥೈಸುವ ಪ್ರಸಿದ್ಧ ತೆಲುಗು ಲೇಖಕಿ ರಂಗನಾಯಕಮ್ಮ ಅವರ ನಾಲ್ಕು ಸಂಪುಟಗಳು ಸಹ ಬಂಡವಾಳದ ವಿಶ್ಲೇಷಣೆಗಳನ್ನು ಜನಸಾಮಾನ್ಯರತ್ತ ಒಯ್ಯುವಲ್ಲಿ ದೊಡ್ಡ ಪಾತ್ರ ವಹಿಸಿವೆ. ತಮಿಳು ಅನುವಾದವನ್ನು ಮಾರ್ಕ್ಸ್ ಅವರ 180ನೇ ಹುಟ್ಟುಹಬ್ಬದಂದು (ಮೇ 5, 1998) ಬಿಡುಗಡೆ ಮಾಡಲಾಯಿತು. ತ್ಯಾಗರಾಜನ್ ಎಂಬವರು ಜೈಲಿನಲ್ಲಿದ್ದಾಗ ಈ ಅನುವಾದವನ್ನು ಮಾಡಿದ್ದು ಆ ಮೇಲೆ ಕೃಷ್ಣಯ್ಯ ಎಂಬವರು ಅದನ್ನು ಪರಿಷ್ಕರಿಸಿ, ನ್ಯೂ ಸೆಂಚುರಿ ಬುಕ್ ಹೌಸ್ ಅದನ್ನು ಪ್ರಕಟಿಸಿತು. ಬಂಡವಾಳ ಸಂಪುಟ 1ರ ಒಡಿಯಾ ಅನುವಾದವನ್ನು ಸೆಪ್ಟಂಬರ್ 2010ರಲ್ಲಿ ಒಡಿಶಾ ಲೋಕಶಿಕ್ಷಣ ಟ್ರಸ್ಟ್ ಪ್ರಕಟಿಸಿತು. ಪ್ರಮುಖ ಭಾರತೀಯ ಭಾಷೆಗಳಲ್ಲಿ ‘ಬಂಡವಾಳ’ ಕನ್ನಡ ಅನುವಾದ (ಅಸ್ಸಾಮಿ, ಕಾಶ್ಮೀರಿ ಬಿಟ್ಟರೆ) ಬಹುಶಃ ಕೊನೆಯದು. ಆದರೂ ನಾಡಿನ ಇಂದಿನ ಸಾಂಸ್ಕೃತಿಕ ರಾಜಕೀಯ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಮಹತ್ವದ್ದು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top