ಶಾಂತಿ ನೊಬೆಲ್ ಪಡೆಯಲು ಪ್ರಧಾನಿ ಮೋದಿ ಇಥಿಯೋಪಿಯಾ ಪ್ರಧಾನಿ ಅಬೀ ಅಹ್ಮದ್ ರಿಂದ ಕಲಿಯಬೇಕಾದದ್ದೇನು? | Vartha Bharati- ವಾರ್ತಾ ಭಾರತಿ

ಶಾಂತಿ ನೊಬೆಲ್ ಪಡೆಯಲು ಪ್ರಧಾನಿ ಮೋದಿ ಇಥಿಯೋಪಿಯಾ ಪ್ರಧಾನಿ ಅಬೀ ಅಹ್ಮದ್ ರಿಂದ ಕಲಿಯಬೇಕಾದದ್ದೇನು?

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಹೆಚ್ಚಾಗಿ ಭಾರತದಲ್ಲಿ ಪ್ರಮುಖ ಚುನಾವಣೆಗಳು ಸನ್ನಿಹಿತವಾದ ಸಮಯದಲ್ಲಿಯೇ ಅವರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆಯುತ್ತಾರೆ. ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ಏಕೆ ಪರಿಗಣಿಸಲಾಗಿಲ್ಲ ಎನ್ನುವುದು ಅಚ್ಚರಿಯೇ ಸೈ. ಅವರು ಸಿಯೋಲ್ ಶಾಂತಿ ಪ್ರಶಸ್ತಿಯನ್ನು ಗೆಲ್ಲಬಹುದಾದರೆ ನೊಬೆಲ್ ಪ್ರಶಸ್ತಿಯನ್ನು ಏಕೆ ಗೆಲ್ಲಬಾರದು?

ವಿಷಯಾಧಾರಿತ ಅಭಿಯಾನದಲ್ಲಿ ತೊಡಗಿಕೊಂಡವರಿಗೆ ಅಥವಾ ಶಾಂತಿಕರ್ತರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗುತ್ತದೆ. ಮೋದಿ ಇವೆರಡೂ ಆಗಿದ್ದಾರೆ. ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಬಲವಾದ ಹಕ್ಕು ಮಂಡಿಸಲು ಮೋದಿ ಅವರು 2019ನೇ ಸಾಲಿನ ಪ್ರಶಸ್ತಿ ವಿಜೇತರಾದ ಇಥಿಯೋಪಿಯಾದ ಪ್ರಧಾನಿ ಅಬೀ ಅಹ್ಮದ್ ಅವರತ್ತ ಕಣ್ಣು ಹಾಯಿಸಬಹುದು.

2014ರಲ್ಲಿ ಕೇಂದ್ರದಲ್ಲಿ ಜನಪ್ರಿಯತೆಯನ್ನು ಕಳೆದುಕೊಂಡಿದ್ದ ಸರಕಾರವನ್ನು ಪದಚ್ಯುತಗೊಳಿಸಿ ಮೋದಿಯವರು ಅಧಿಕಾರಕ್ಕೇರಿದಾಗ ಜನರು ಹೆಚ್ಚಿನ ಆಶಯಗಳು ಮತ್ತು ನಿರೀಕ್ಷೆಗಳನ್ನಿಟ್ಟುಕೊಂಡಿದ್ದರು. 2018, ಎಪ್ರಿಲ್‌ ನಲ್ಲಿ ಅಬೀ ಅಹ್ಮದ್ ಅವರೂ ಇಂತಹದೇ ಸನ್ನಿವೇಶದಲ್ಲಿ ಇಥಿಯೋಪಿಯಾದ ಪ್ರಧಾನಿ ಗಾದಿಗೇರಿದ್ದರು. ಅವರ ಪದೋನ್ನತಿಯಿಂದ ಜನರಲ್ಲಿ ಎಂತಹ ಭರವಸೆ ಮೂಡಿತ್ತೆಂದರೆ ಅದನ್ನು ‘ಅಬಿಮೇನಿಯಾ’ ಎಂದು ಬಣ್ಣಿಸಲಾಗಿತ್ತು. ಮೋದಿ ಮತ್ತು ಅಬೀ ಅಹ್ಮದ್ ನಡುವಿನ ಇನ್ನೊಂದು ಬಹುದೊಡ್ಡ ಹೋಲಿಕೆಯೆಂದರೆ ಇಬ್ಬರೂ, ವಿಶೇಷವಾಗಿ ರಾಜತಾಂತ್ರಿಕತೆಯಲ್ಲಿ ವೈಯಕ್ತಿಕ ಸ್ಪರ್ಶದಲ್ಲಿ ಅಥವಾ ಆತ್ಮೀಯತೆಯಲ್ಲಿ ನಂಬಿಕೆಯನ್ನಿಟ್ಟಿದ್ದಾರೆ. ತಮ್ಮ ಸುತ್ತ ವ್ಯಕ್ತಿತ್ವ ಆರಾಧನೆಯನ್ನು ಉತ್ತೇಜಿಸುವುದರ ಮೇಲೆ ಈ ಇಬ್ಬರೂ ನಾಯಕರು ವಿಶ್ವಾಸವನ್ನಿರಿಸಿದ್ದಾರೆ.

ಉಭಯ ನಾಯಕರ ನಡುವೆ ಸಾದೃಶ್ಯವನ್ನು ರೂಪಿಸುವುದು ಎರಡೂ ಸನ್ನಿವೇಶಗಳು ಒಂದೇ ಎಂದು ಹೇಳುವುದಲ್ಲ. ಎಷ್ಟೆಂದರೂ ಇಥಿಯೋಪಿಯಾ ಭಾರತವಲ್ಲ. ಭಾರತದ ತಲಾ ಜಿಡಿಪಿಯು ಇಥಿಯೋಪಿಯಾಕ್ಕಿಂತ ಮೂರು ಪಟ್ಟು ಹೆಚ್ಚಿದೆ.

ಇಥಿಯೋಪಿಯಾದಲ್ಲಿನ ಸಂಘರ್ಷಗಳು, ಆಂತರಿಕವಾಗಿ ನಿರ್ವಸಿತರಾದವರ ಸಂಖ್ಯೆ, ರಾಜಕೀಯ ಹಿಂಸಾಚಾರ ಮತ್ತು ದಮನದ ಮಟ್ಟ, ಜೈಲಿನಲ್ಲಿರುವ ಮತ್ತು ದೇಶಭ್ರಷ್ಟರಾಗಿರುವ ಪತ್ರಕರ್ತರು ಮತ್ತು ರಾಜಕೀಯ ನಾಯಕರ ಸಂಖ್ಯೆ... ಇಂತಹ ಅತಿರೇಕಗಳು ಭಾರತದಲ್ಲಿ ನಡೆದಿಲ್ಲ. ಆದರೆ ಭಾರತವು ತನ್ನ ಇಂತಹ ಪಥದಿಂದ ವಿಮುಖವಾಗಲಿದೆಯೇ ಎಂಬ ಕಳವಳ ಸೃಷ್ಟಿಯಾಗಿರುವುದಂತೂ ನಿಜ.

ಮೋದಿಯವರು ನೊಬೆಲ್ ಶಾಂತಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಳ್ಳಲು ಬಯಸಿದ್ದರೆ ಅಬೀ ಅಹ್ಮದ್ ಹೇಗೆ ಇಥಿಯೋಪಿಯಾವನ್ನು ಸರ್ವಾಧಿಕಾರದಿಂದ ಪ್ರಜಾಪ್ರಭುತ್ವದತ್ತ, ದಬ್ಬಾಳಿಕೆಯಿಂದ ಸ್ವಾತಂತ್ರ್ಯದತ್ತ ಮತ್ತು ಸಂಘರ್ಷದಿಂದ ಸಮರಸದತ್ತ ಒಯ್ಯುತ್ತಿದ್ದಾರೆ ಎನ್ನುವುದನ್ನು ಅಗತ್ಯವಾಗಿ ಗಮನಿಸಬೇಕು. ಅಬೀ ಅಹ್ಮದ್ ಅವರು ಯಾವ ಏಣಿಯನ್ನು ಹತ್ತುತ್ತಿದ್ದಾರೋ ಅದೇ ಏಣಿಯನ್ನು ಮೋದಿಯವರು ಇಳಿಯುತ್ತಿದ್ದಾರೆ.

ರಾಷ್ಟ್ರೀಯ ಭದ್ರತೆ ದೇಶ ಯಾರಿಗೆ ಬೇಕು?

1993ರಲ್ಲಿ ಎರಿಟ್ರಿಯಾ ಇಥಿಯೋಪಿಯಾದಿಂದ ವಿಭಜನೆಗೊಂಡು ಪ್ರತ್ಯೇಕ ರಾಷ್ಟ್ರವಾಗಿತ್ತು. ವಿಭಜನೆಯ ಫಲ ತೀರಾ ಕಹಿಯಾಗಿತ್ತು. ಪ್ರಾದೇಶಿಕ ಹಕ್ಕುಗಳ ಕುರಿತು ಉಭಯ ದೇಶಗಳ ನಡುವೆ ಯುದ್ಧವೇ ಸಂಭವಿಸಿತ್ತು. 2000ರಲ್ಲಿ ಯುದ್ಧವು ಕೊನೆಗೊಂಡಿತ್ತಾದರೂ ಬಿಕ್ಕಟ್ಟು ಮುಂದುವರಿದಿತ್ತು. ಕಡಿಮೆ ತೀವ್ರತೆಯ ಸಂಘರ್ಷಗಳು ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಲೇ ಇದ್ದವು. ಈ ಕಥೆಗೂ ಭಾರತ-ಪಾಕಿಸ್ತಾನ ನಡುವಿನ ಕಥೆಗೂ ಹೆಚ್ಚಿನ ವ್ಯತ್ಯಾಸಗಳಿಲ್ಲ.

ವಿವಾದಿತ ಭೂ ಪ್ರದೇಶವು ಎರಿಟ್ರಿಯಾಗೆ ಸೇರಬೇಕು ಎಂದು ವಿಶ್ವಸಂಸ್ಥೆ ತೀರ್ಪು ನೀಡಿತ್ತು. ಆದರೆ ಇಥಿಯೋಪಿಯಾ ಅದನ್ನು ಬಿಟ್ಟು ಕೊಡಲು ಸಿದ್ಧವಿರಲಿಲ್ಲ. ಈ ತುಂಡು ಭೂಮಿಗಾಗಿ ಸಂಘರ್ಷವು 80,000 ಜೀವಗಳನ್ನು ಬಲಿ ಪಡೆದಿತ್ತು. ಆಗ ಸೇನೆಯಲ್ಲಿ ಗುಪ್ತಚರ ಅಧಿಕಾರಿಯಾಗಿದ್ದ ಅಬೀ ಅಹ್ಮದ್ ಕೂಡ ಈ ಯುದ್ಧದಲ್ಲಿ ಭಾಗಿಯಾಗಿದ್ದರು.

ದೇಶದ ಪ್ರಧಾನಿಯಾದ ಸೇನಾಧಿಕಾರಿ ಮೋದಿಯವರಂತೆ ಅತಿಯಾದ ರಾಷ್ಟ್ರವಾದಿಯಾಗಿರುತ್ತಾರೆ ಎಂದು ನೀವು ನಿರೀಕ್ಷಿಸಬಹುದು. ಆದರೆ ಇಥಿಯೋಪಿಯಾ 2000ರಲ್ಲಿ ಅಂಕಿತ ಹಾಕಿದ್ದ ಶಾಂತಿ ಒಪ್ಪಂದದ ಶಿಫಾರಸುಗಳನ್ನು ಅನುಸರಿಸುತ್ತದೆ ಎಂದು ಅಬಿ ಸ್ಪಷ್ಟಪಡಿಸಿದ್ದು, ಹಿಂಸಾಚಾರ ಮತ್ತು ದ್ವೇಷ ತಕ್ಷಣವೇ ಅಂತ್ಯಗೊಂಡಿದ್ದವು. ಇದೇ ಪ್ರಯತ್ನಕ್ಕಾಗಿ ಅಬೀ ಅಹ್ಮದ್ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ಒಲಿದಿದೆ.

ಇದಕ್ಕೆ ತದ್ವಿರುದ್ಧವಾಗಿ ಮೋದಿಯವರ ಆಡಳಿತವಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚುತ್ತಿದೆ. ಪಾಕಿಸ್ತಾನವು ಶಾಶ್ವತ ಹಗೆತನವನ್ನು ಬಯಸುತ್ತಿದೆ ಮತ್ತು ಇದೇ ಕಾರಣಕ್ಕಾಗಿ ಭಯೋತ್ಪಾದಕರನ್ನು ಬಳಸುತ್ತಿದೆ ಎನ್ನುವುದು ಭಾರತದ ವಾದ. ಆದರೆ ಭಾರತವು ಕಾಶ್ಮೀರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಪಾಕಿಸ್ತಾನಿ ಭಯೋತ್ಪಾದನೆಯನ್ನು ಮಟ್ಟ ಹಾಕಬಹುದು. ದಿಲ್ಲಿ ಸರಕಾರವು ಕಾಶ್ಮೀರಿಗಳನ್ನು ಪ್ರತ್ಯೇಕವಾಗಿಯೇ ಇರಿಸಿದ್ದು, ಇದು ಪಾಕಿಸ್ತಾನಿ ಭಯೋತ್ಪಾದನೆಗೆ ಅಗತ್ಯ ಬೆಂಬಲವನ್ನೊದಗಿಸಿತ್ತು.

ಆದರೆ ಮೋದಿಯವರ ಕ್ರಮಗಳು ದಿಲ್ಲಿ ಸರಕಾರದ ಬಗ್ಗೆ ಕಾಶ್ಮೀರದಲ್ಲಿ ಅಳಿದುಳಿದಿದ್ದ ಸದ್ಭಾವನೆಯನ್ನೂ ನಾಶಗೊಳಿಸಿದೆ. ಜಮ್ಮು -ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಕಿತ್ತುಕೊಳ್ಳುವ ಮೂಲಕ ಪಾಕಿಸ್ತಾನದ ಜೊತೆಗಿನ ಸಂಘರ್ಷ ಇನ್ನಷ್ಟು ತೀವ್ರಗೊಂಡಿದೆ. ಇದು ಭಯೋತ್ಪಾದನೆಯ ಅಪಾಯ, ನಂತರ ಮಿಲಿಟರಿ ಕಾರ್ಯಾಚರಣೆಯ ಅಪಾಯವನ್ನು ಹೆಚ್ಚಿಸಿದೆ. ಹಿಂಸಾಚಾರದ ಈ ವಿಷಪೂರಿತ ಚಕ್ರವು ಭಾರತವನ್ನು ರಾಷ್ಟ್ರೀಯ ಭದ್ರತೆಯನ್ನು ಹೊಂದಿದ ದೇಶವನ್ನಾಗಿಸಬಹುದು.

ಭಿನ್ನಾಭಿಪ್ರಾಯ ಯಾರಿಗೆ ಅಗತ್ಯವಿದೆ?

ಇಥಿಯೋಪಿಯಾ ರಾಷ್ಟ್ರೀಯ ಭದ್ರತೆಯ ದೇಶವಾಗಬೇಕು ಎಂದು ಮಾಜಿ ಸೇನಾಧಿಕಾರಿ ಅಬೀ ಅಹ್ಮದ್ ಬಯಸಿಲ್ಲ. ಅವರು ಶಾಂತಿ, ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನು ಬಯಸಿದ್ದಾರೆ. ಇಥಿಯೋಪಿಯಾದೊಂದಿಗೆ ಶಾಂತಿ ಒಪ್ಪಂದಕ್ಕೆ ಅಂಕಿತ ಹಾಕಿದ ಎರಿಟ್ರಿಯಾದ ಅಧ್ಯಕ್ಷರು ದಬ್ಬಾಳಿಕೆ ನಡೆಸುತ್ತಿರುವುದರಿಂದ ಅವರನ್ನು ನೊಬೆಲ್ ಪ್ರಶಸ್ತಿಗೆ ಪಾಲುದಾರರನ್ನಾಗಿ ಮಾಡಿಲ್ಲ ಎನ್ನುವುದನ್ನು ಗಮನಿಸಬೇಕು.

1995ರಿಂದಲೂ ನಾಲ್ಕು ಪಕ್ಷಗಳ ಮೈತ್ರಿಕೂಟ ಇಪಿಆರ್‌ ಡಿಎಫ್ ಇಥಿಯೋಪಿಯಾವನ್ನು ಆಳುತ್ತಿದೆ. ಅಲ್ಲಿ ಚುನಾವಣೆಯೆಂದರೆ ಹಾಸ್ಯಾಸ್ಪದ ವಿಷಯವಾಗಿದೆ. 2015ರಲ್ಲಿ ಇಪಿಆರ್‌ ಡಿಎಫ್ 547 ಸ್ಥಾನಗಳ ಪೈಕಿ 500 ಸ್ಥಾನಗಳನ್ನು ಗೆದ್ದಿತ್ತು. ಪತ್ರಿಕಾ ಸ್ವಾತಂತ್ರ್ಯವನ್ನು ದಮನಿಸಲಾಗಿತ್ತು. ಪ್ರತಿಪಕ್ಷ ನಾಯಕರನ್ನು ಜೈಲಿಗೆ ತಳ್ಳಲಾಗಿತ್ತು. ಭಿನ್ನಮತೀಯರನ್ನು ದೇಶಭ್ರಷ್ಟಗೊಳಿಸಲಾಗಿತ್ತು. 2018ರಲ್ಲಿ ಅಬೀ ಅಧಿಕಾರ ವಹಿಸಿಕೊಂಡಾಗ ಸಾವಿರಾರು ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಿದ್ದರು. ದೇಶಭ್ರಷ್ಟ ಭಿನ್ನಮತೀಯರನ್ನು ಸ್ವದೇಶಕ್ಕೆ ಮರಳುವಂತೆ ಆಹ್ವಾನಿಸಿದ್ದರು ಮತ್ತು ಭಿನ್ನಮತೀಯರಿಗೆ ಆಡಳಿತದಲ್ಲಿ ಪ್ರಮುಖ ಸ್ಥಾನಗಳನ್ನು ನೀಡಿದ್ದರು.

2020ರಲ್ಲಿ ಇಥಿಯೋಪಿಯಾದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆ ಮುಕ್ತ ಮತ್ತು ನ್ಯಾಯಸಮ್ಮತವಾಗಬೇಕೆಂದು ಅಬೀ ಅಹ್ಮದ್ ಬಯಸಿದ್ದಾರೆ. ಆ ರಾಷ್ಟ್ರವು ಈಗಾಗಲೇ ಅಭೂತಪೂರ್ವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರವನ್ನು ಅನುಭವಿಸುತ್ತಿದೆ. ಅಲ್ಲಿ ವಿರೋಧಿಗಳು ಮತ್ತು ಭಿನ್ನಮತೀಯರಿಗೆ ಈ ಹಿಂದೆ ಭಯೋತ್ಪಾದಕರೆಂದು ಹಣೆಪಟ್ಟಿ ಹಚ್ಚಲಾಗಿತ್ತು. ಮೋದಿಯವರ ಭಾರತದಲ್ಲಿ ಈಗ ಭಿನ್ನಮತೀಯರಿಗೆ ದೇಶವಿರೋಧಿಗಳು, ಹಿಂದೂ ವಿರೋಧಿಗಳು ಮತ್ತು ನಗರ ನಕ್ಸಲರು ಎಂಬ ಹಣೆಪಟ್ಟಿಯನ್ನು ಅಂಟಿಸಲಾಗುತ್ತಿದೆ. ಅಬೀ ಅಹ್ಮದ್ ರಾಜಕೀಯ ವಲಯವನ್ನು ಗಣನೀಯವಾಗಿ ವಿಸ್ತರಿಸಿದ್ದರೆ, ಮೋದಿ ಅದನ್ನು ಕುಗ್ಗಿಸುತ್ತಿದ್ದಾರೆ.

ಉತ್ತರ ಪ್ರದೇಶ ಪೊಲೀಸರು ಸ್ಥಳೀಯ ಪತ್ರಕರ್ತರ ವಿರುದ್ಧ ಎಫ್‌ಐಆರ್‌ ಗಳನ್ನು ದಾಖಲಿಸುತ್ತಿರುವ ಭರಾಟೆಯನ್ನು ಕಂಡರೆ ಮೋದಿಯವರ ಭಾರತದಲ್ಲಿ ಜೈಲುಗಳು ಶೀಘ್ರವೇ ಪತ್ರಕರ್ತರಿಂದ ತುಂಬತೊಡಗಬಹುದು. ತನ್ನ ಚುನಾವಣೆಗಳು ವಿಶ್ವಾಸಾರ್ಹವಾಗಿರಬೇಕು ಎಂದು ಇಥಿಯೋಪಿಯಾ ಬಯಸುತ್ತಿದ್ದರೆ ಮೋದಿ ಸರಕಾರವು ಭಿನ್ನಮತವನ್ನು ವ್ಯಕ್ತಪಡಿಸಿದ್ದ ಚುನಾವಣಾ ಆಯುಕ್ತರ ಕುಟುಂಬಕ್ಕೆ ಆದಾಯ ತೆರಿಗೆ ನೋಟಿಸುಗಳನ್ನು ಕಳುಹಿಸುವ ಮೂಲಕ ಅವರನ್ನು ಬೇಟೆಯಾಡುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗವು ನಿರೀಕ್ಷಿತ ನಿಷ್ಪಕ್ಷಪಾತವನ್ನು ಪ್ರದರ್ಶಿಸಿರಲಿಲ್ಲ. ಕಾಶ್ಮೀರದಲ್ಲಿ ರಾಜಕೀಯ ನಾಯಕರ ಗಡಣವೇ ಗೃಹಬಂಧನದಲ್ಲಿದೆ ಮತ್ತು ದೇಶಾದ್ಯಂತ ರಾಜಕೀಯ ವಿರೋಧಿಗಳನ್ನು ಮಾತ್ರ ಗುರಿಯಾಗಿಸಿಕೊಂಡು ಆಯ್ದ ‘ಭ್ರಷ್ಟಾಚಾರದ ವಿರುದ್ಧ ದಾಳಿ’ ಗಳನ್ನು ನಡೆಸಲಾಗುತ್ತಿದೆ. ಪತ್ರಿಕಾ ಸ್ವಾತಂತ್ರ್ಯ ಸೂಚಿಯಲ್ಲಿ ಇಥಿಯೋಪಿಯಾ ಮೇಲಕ್ಕೇರುತ್ತಿದ್ದರೆ ಭಾರತದ ಸ್ಥಾನ ಕುಸಿಯುತ್ತಿದೆ.

ನೊಬೆಲ್ ಪ್ರಶಸ್ತಿ ಪಡೆಯಬೇಕು ಎಂಬ ತನ್ನ ಹಂಬಲದಲ್ಲಿ ಮೋದಿಯವರು ಅಬೀ ಅಹ್ಮದ್ ಅವರಿಂದ ಪಾಠ ಕಲಿಯಬಹುದಾದ ಇನ್ನೊಂದು ಕ್ಷೇತ್ರವಿದೆ. ಅಬಿ ತನ್ನ ರಾಷ್ಟ್ರದ ಆರ್ಥಿಕತೆಯಲ್ಲಿ ಸುಧಾರಣೆಗಳನ್ನು ತರುತ್ತಿದ್ದಾರೆ. ಸರಕಾರಿ ಸ್ವಾಮ್ಯದ ಕಂಪನಿಗಳನ್ನು ಖಾಸಗೀಕರಿಸುತ್ತಿತ್ತಾರೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಪ್ರಚೋದಿಸುತ್ತಿದ್ದಾರೆ. ಆ ರಾಷ್ಟ್ರದ ಬೆಳವಣಿಗೆ ದರ ಎರಡಂಕಿಗಳನ್ನು ತಲುಪಿದ್ದರೆ ಭಾರತವು ಆರ್ಥಿಕ ಹಿಂಜರಿತವನ್ನು ಅನುಭವಿಸುತ್ತಿದೆ. (ಇಥಿಯೋಪಿಯಾ ಅಂಕಿಸಂಖ್ಯೆಗಳನ್ನು ಉತ್ಪ್ರೇಕ್ಷಿಸಿದೆ ಎಂದು ಯಾರೂ ಆರೋಪಿಸಿಲ್ಲ.)

ವಿವಿಧತೆಯಲ್ಲಿ ಏಕತೆ

ಇಥಿಯೋಪಿಯಾದಲ್ಲಿ ಎಲ್ಲವೂ ಚೆನ್ನಾಗಿದೆಯೆಂದು ಇವು ಯಾವುದೂ ಹೇಳುವುದಿಲ್ಲ. ಆದರೆ ಮೋದಿಯವರಂತೆ ಅಬೀ ಅಹ್ಮದ್ ತನ್ನ ರಾಷ್ಟ್ರದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಹೇಳಿಕೊಳ್ಳುತ್ತಿಲ್ಲ. ಹೆಚ್ಚಿನ ರಾಜಕಿಯ ಸ್ವಾತಂತ್ರ್ಯವೆಂದರೆ ಇಥಿಯೋಪಿಯಾ ಜನಾಂಗೀಯ ಘರ್ಷಣೆಗಳ ಮರುಕಳಿಕೆಗೆ ಸಾಕ್ಷಿಯಾಗುತ್ತಿದೆ ಎಂದೇ ಅರ್ಥ. ಇಥಿಯೋ-ರಾಷ್ಟ್ರವಾದ ಮತ್ತು ನೈತಿಕ ರಾಷ್ಟ್ರವಾದ ಕುರಿತು ತೀವ್ರ ಚರ್ಚೆಗಳು ಅಲ್ಲಿ ನಡೆಯುತ್ತಿದ್ದು, 29 ಲಕ್ಷದಷ್ಟು ಆಂತರಿಕ ನಿರ್ವಸಿತರ ಭವಿಷ್ಯ ತೂಗುಯ್ಯಾಲೆಯಲ್ಲಿದೆ.

ಅಬೀ ಅಹ್ಮದ್ ಒಕ್ಕೂಟವಾದ ಮತ್ತು ರಾಷ್ಟ್ರವಾದದ ನಡುವೆ ಸಮತೋಲನ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಈಗ ಮೋದಿಯವರು ಜನರ ಒಪ್ಪಿಗೆಯಿಲ್ಲದೆ ಜಮ್ಮ-ಕಾಶ್ಮೀರವನ್ನು ಹೇಗೆ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಪರಿವರ್ತಿಸಿದ್ದಾರೆ ಎನ್ನುವದನ್ನು ಗಮನಿಸಿದರೆ ಭಾರತೀಯ ಒಕ್ಕೂಟವಾದವನ್ನು ಅಬೀ ಅಹ್ಮದ್ ಮಾದರಿಯಾಗಿ ತೆಗೆದುಕೊಳ್ಳಬೇಕು ಎಂದು ಹೇಳುವುದು ಕಷ್ಟವಾಗುತ್ತದೆ. ಮೋದಿಯವರ ಆಡಳಿತವು ದೇಶದ ಮೇಲೆ ಒಂದು ಭಾಷೆ, ಒಂದು ಧರ್ಮ, ಒಂದು ಚುನಾವಣೆ ಮತ್ತು ಒಂದು ಪಕ್ಷವನ್ನು ಹೇರುವ ಬೆದರಿಕೆಯೊಡ್ಡುತ್ತಿದ್ದರೆ ಅಬೀ ಅಹ್ಮದ್ ಅವರು ನೆಹರು ಶೈಲಿಯಲ್ಲಿ ‘ವಿವಿಧತೆಯಲ್ಲಿ ಏಕತೆ’ಗಾಗಿ ಮಾರ್ಗೋಪಾಯಗಳನ್ನು ಅನ್ವೇಷಿಸುತ್ತಿದ್ದಾರೆ.

ದೇಶದಲ್ಲಿಯ ಜನಾಂಗೀಯ ಸಂಘರ್ಷಕ್ಕೆ ಅಂತ್ಯ ಹಾಡಲು ಅಬೀ ಅಹ್ಮದ್ ಆಯೋಗವೊಂದನ್ನು ಸ್ಥಾಪಿಸಿದ್ದರೆ ಇತ್ತ ಮೋದಿ ಮಿಲಿಯಾಂತರ ಭಾರತೀಯ ಮುಸ್ಲಿಮರನ್ನು ಬಂಧನ ಕೇಂದ್ರಗಳಲ್ಲಿ ಇರಿಸುವ ಮತ್ತು ಅವರಿಗೆ ಹಕ್ಕುಗಳನ್ನು ನಿರಾಕರಿಸುವ ನಿಟ್ಟಿನಲ್ಲಿರುವಂತಿದೆ. ಗುಂಪುಗಳು ಕ್ಷುಲ್ಲಕ ಕಾರಣಕ್ಕಾಗಿ ಮುಸ್ಲಿಮರನ್ನು ಹತ್ಯೆ ಮಾಡುವುದು ಮುಂದುವರಿದಿದ್ದರೆ, ಮೋದಿಯವರ ಸರಕಾರವು ಗುಂಪು ಹತ್ಯೆಗಳ ವಿರುದ್ಧ ಹೊಸ ಕಾನೂನು ರೂಪಿಸುವಂತೆ ಸರ್ವೋಚ್ಚ ನ್ಯಾಯಾಲಯದ ಸಲಹೆಯನ್ನು ಪಾಲಿಸಲು ನಿರಾಕರಿಸುತ್ತಿದೆ.

 ‘ಮೆಡೆಮರ್ ’ಎನ್ನುವುದು ಇಥಿಯೋಪಿಯಾಕ್ಕಾಗಿ ಅಬೀ ಅಹ್ಮದ್ ರ ಘೋಷಣೆಯಾಗಿದ್ದು, ಇದು ಮೋದಿಯವರ ‘ಸಬ್ ಕಾ ಸಾಥ್’ ಭರವಸೆಯನ್ನು ಹೋಲುತ್ತದೆ. ಅಬೀ ಅಹ್ಮದ್ ರ ಈ ಘೋಷಣೆ ಕಾರ್ಯರೂಪಕ್ಕೆ ಬಂದಿರುವುದರಿಂದ ಅವರು ನೊಬೆಲ್ ಗೆದ್ದಿದ್ದಾರೆ. ಮೋದಿಯವರು ಕೆಲವು ಟಿಪ್‌ಗಳನ್ನು ಎರವಲು ಪಡೆದುಕೊಳ್ಳಲು ಅಬೀ ಅಹ್ಮದ್ ರೊಂದಿಗೆ ‘ಅನೌಪಚಾರಿಕ ಶೃಂಗಸಭೆ ’ಯೊಂದನ್ನು ಅಗತ್ಯವಾಗಿ ನಡೆಸಬೇಕು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top