ಮೋದಿ ಭಾರತ v/s ಗಾಂಧಿ ಭಾರತ | Vartha Bharati- ವಾರ್ತಾ ಭಾರತಿ

ಮೋದಿ ಭಾರತ v/s ಗಾಂಧಿ ಭಾರತ

ಮಹಾತ್ಮಾ ಗಾಂಧಿ ಸುಮಾರು 1000 ವರ್ಷಗಳ ದಾಸ್ಯದಿಂದ ಭಾರತಕ್ಕೆ ಬಿಡುಗಡೆ ತಂದು ಕೊಟ್ಟ ಮೇರು ಮುತ್ಸದ್ದಿ. ಅವರು ಭಾರತದ ಬಹುತ್ವವನ್ನು ಅಪಾರವಾಗಿ ಗೌರವಿಸಿ ಸರ್ವಧರ್ಮಗಳ ಸಬಲೀಕರಣದ ಪುಣ್ಯಭೂಮಿಯಾಗಿ ಭಾರತವು ಬೆಳೆಯಬೇಕೆಂದು ಬಲವಾಗಿ ನಂಬಿದ್ದರು. ಭಾರತವು ಐತಿಹಾಸಿಕ ಮತ್ತು ಸಾಂಸ್ಕೃತಿಕ ಕಾರಣಗಳಿಂದಾಗಿ ಎಂದಿಗೂ ಹಿಂದೂ ರಾಷ್ಟ್ರವಾಗದು ಎಂದು ಪ್ರತಿಪಾದಿಸಿದರು. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳು ಬಹುಸಂಖ್ಯಾತ ಭಾರತೀಯರಿಗೆ ಅನ್ನ, ಉದ್ಯೋಗ, ಬದುಕು ಮೊದಲಾದವುಗಳನ್ನು ನೀಡುವುದರಿಂದ ಸ್ವಾತಂತ್ರಾನಂತರದಲ್ಲಿ ನಮ್ಮನ್ನು ಆಳುವವರು ಈ ಎರಡು ಕ್ಷೇತ್ರಗಳನ್ನು ಕಡೆಗಣಿಸಬಾರದೆಂದು ಸೂಚಿಸಿದ್ದರು. ಆಧುನೀಕರಣ, ನಗರೀಕರಣ, ಯಾಂತ್ರೀಕರಣ, ಕೈಗಾರಿಕೀಕರಣ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನುಕರಣೆಯಿಂದ ಭಾರತದ ಕೃಷಿಕರು, ಕುಶಲಕರ್ಮಿಗಳು ಮತ್ತು ಕಾರ್ಮಿಕರು ಅತಂತ್ರರಾಗುವುದಾಗಿ ಗಾಂಧಿ ಬಹಳ ಹಿಂದೆಯೇ ಎಚ್ಚರಿಸಿದ್ದರು.

ಪ್ರಬಲ ಶಕ್ತಿಗಳ ನಿಯಂತ್ರಣಕ್ಕೊಳಪಟ್ಟ ಭಾರತ ಸರಕಾರ ಪಾಶ್ಚಿಮಾತ್ಯ ಅಭಿವೃದ್ಧಿ ಮಾದರಿಯನ್ನು ಅಳವಡಿಸಿಕೊಂಡು ಕೈಗಾರಿಕೆ, ರಕ್ಷಣೆ ಮೊದಲಾದವುಗಳಿಗೆ ಆದ್ಯತೆ ನೀಡಿ ಕನಿಷ್ಠ ಅಗತ್ಯಗಳು, ಮೂಲಸೌಕರ್ಯಗಳು, ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ, ಮಾನವಾಭಿವೃದ್ಧಿ, ಸುಸ್ಥಿರ ಅಭಿವೃದ್ಧಿ ಮೊದಲಾದವುಗಳನ್ನು ನಿರ್ಲಕ್ಷಿಸಿದ ಕಾರಣ ಗ್ರಾಮೀಣ ಬಡವರು ಜೀವನೋಪಾಯ ಮಾರ್ಗಗಳನ್ನು ಹುಡುಕಿಕೊಂಡು ನಗರ ಪ್ರದೇಶಗಳಿಗೆ ವಲಸೆ ಬರುವಂತಹ ಅಸಹಾಯಕ ಸ್ಥಿತಿ ನಿರ್ಮಾಣವಾಯಿತು. ಎಲ್ಲೆ ಮೀರಿದ ನಗರೀಕರಣದಿಂದ ನಗರಗಳು ಕೊಳಚೆ ಪ್ರದೇಶಗಳಾಗಿ ಪರಿವರ್ತಿಸಲ್ಪಟ್ಟಿವೆ. ಮಹಾ ನಗರಗಳಲ್ಲಿ ನಾಗರಿಕ ಸೌಲಭ್ಯಗಳಿಂದ ಸುಸಜ್ಜಿತವಾದ ಪ್ರದೇಶಗಳಿಗಿಂತ ಮೂಲ ಸೌಕರ್ಯಗಳಿಂದ ವಂಚಿತವಾದ ಕೊಳಚೆ ಪ್ರದೇಶಗಳು ಹೆಚ್ಚಿರುವುದು ಅನುಭವ ವೇದ್ಯವಾಗಿದೆ. ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ವಲಸೆ ಬಂದ ಜನರು ಕೊಳಚೆ ಪ್ರದೇಶಗಳಲ್ಲಿ ಸುರಕ್ಷತೆ ಮತ್ತು ನಾಗರೀಕ ಸೌಲಭ್ಯಗಳಿಂದ ವಂಚಿತರಾಗಿ ನಾಯಿ, ಹಂದಿ ಮೊದಲಾದ ಪ್ರಾಣಿಗಳ ಜೊತೆ ದಯನೀಯವಾಗಿ ಬದುಕುತ್ತಿರುವುದು ನಾಗರೀಕತೆಗೆ ಎಸಗಿದ ಬಹುದೊಡ್ಡ ಅವಮಾನವಾಗಿದೆ. ಗಾಂಧಿ ಇಂತಹ ಆಧುನಿಕ ಭಾರವನ್ನು ಖಂಡಿತವಾಗಿಯೂ ನಿರೀಕ್ಷಿಸಿರಲಿಲ್ಲ.

ಗಾಂಧಿ ಸ್ವರಾಜ್ಯದ ಸಂಕೇತವಾದರೆ, ಅಂಬೇಡ್ಕರ್ ಸುರಾಜ್ಯದ ಸಂಕೇತವಾಗಿದ್ದಾರೆ. ಬ್ರಿಟಿಷರ ಬಂದೂಕು ಶಕ್ತಿಯನ್ನು ಗಾಂಧಿ ನೇತೃತ್ವದ ಲೇಖನಿ ಶಕ್ತಿ ಮಣಿಸಿತು ಎಂದು ಬ್ರಿಟನ್ನಿನ ಮಾಜಿ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಬಹಳ ಹಿಂದೆಯೇ ಅಭಿಮಾನಪೂರ್ವಕವಾಗಿ ನುಡಿದಿದ್ದರು. ಅಹಿಂಸೆಗಿಂತ ಮಿಗಿಲಾದ ಶಕ್ತಿ ಜಗತ್ತಿನಲ್ಲಿ ಯಾವುದೂ ಇಲ್ಲವೆಂದು ಗಾಂಧಿ ಬಲವಾಗಿ ನಂಬಿದ್ದರು. ನೆಲ್ಸನ್ ಮಂಡೇಲಾ ಸುಮಾರು 27 ವರ್ಷಗಳ ಕಾಲ ದಕ್ಷಿಣ ಆಫ್ರಿಕಾದ ಕಪ್ಪು ಜನರ ಬಿಡುಗಡೆಗಾಗಿ ಸೆರೆಮನೆ ವಾಸ ಅನುಭವಿಸಿದ್ದರು. ಆದರೆ ಗಾಂಧಿ ತನ್ನ ಬದುಕಿನ ಅರ್ಧಭಾಗವನ್ನು ಸೆರೆಮನೆಯಲ್ಲೇ ಕಳೆದರೆಂಬುದಕ್ಕೆ ಸಾಕಷ್ಟು ದಾಖಲೆಗಳಿವೆ. ಗಾಂಧಿ ಎಂದಿಗೂ ಕೂಡ ಶಕ್ತಿ ರಾಜಕಾರಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳದೇ ಮುಕ್ತಿ ರಾಜಕಾರಣದಲ್ಲಿ ಪ್ರಜ್ಞಾಪೂರ್ವಕವಾಗಿ ತೊಡಗಿಸಿಕೊಂಡರು. ಎಲ್ಲ ಧರ್ಮಗಳು ಮತ್ತು ಜನಾಂಗಗಳ ಯುವಕರು, ಮಹಿಳೆಯರು ಮತ್ತು ವಿದ್ಯಾವಂತರನ್ನು ಸ್ವಾತಂತ್ರ ಚಳವಳಿಯಲ್ಲಿ ಸಕ್ರಿಯವಾಗಿ ಗಾಂಧಿ ತೊಡಗಿಸಿದರು. ಅವರು ಮನಸ್ಸು ಮಾಡಿದ್ದರೆ ಈ ದೇಶದ ಮೊದಲ ಪ್ರಧಾನಿಯಾಗಬಹುದಿತ್ತು. ಸ್ವಾತಂತ್ರ್ಯ ದಕ್ಕಿದ ಸಂದರ್ಭದಲ್ಲಿ ಬಂಗಾಳದಲ್ಲಿ ಜರುಗಿದ ಹಿಂದೂ-ಮುಸಲ್ಮಾನ್ ಸಾಮಾಜಿಕ ಸಂಘರ್ಷವನ್ನು ಪ್ರೀತಿಯಿಂದ ಬಗೆಹರಿಸುವಲ್ಲಿ ಅವರು ನಿರತರಾಗಿದ್ದರು.

ಸ್ವಾತಂತ್ರ ಚಳವಳಿಯಲ್ಲಿ ಭಾಗವಹಿಸದೇ ಅಂಡಮಾನ್, ನಿಕೋಬಾರ್, ಲಕ್ಷದ್ವೀಪ ಮೊದಲಾದೆಡೆ ಬ್ರಿಟಿಷರಿಗೆ ಶರಣಾಗಿ ಅವರಿಂದ ಭತ್ಯೆ ಸ್ವೀಕರಿಸಿದ ಸಾವರ್ಕರ್, ಗೊಲ್ವಾಲ್ಕರ್, ಹೆಗಡೆವಾರ್ ಮೊದಲಾದವರಿಂದ ಸಂಘಟಿಸಲ್ಪಟ್ಟ ಆರೆಸ್ಸೆಸ್ ಇಂದು ನಮಗೆ ರಾಷ್ಟ್ರೀಯತೆಯ ಪಾಠ ಹೇಳುತ್ತಿರುವುದು ಬಹುದೊಡ್ಡ ವಿಪರ್ಯಾಸವಾಗಿದೆ. ನಾಥೂರಾಮ್ ಗೋಡ್ಸೆ ಗಾಂಧೀಜಿಯನ್ನು ಭಾರತದ ಮಹಾಶತೃವೆಂದು ತಪ್ಪಾಗಿ ಗ್ರಹಿಸಿ ಅವರನ್ನು ಹತ್ಯೆಗೈದ ಸಂದರ್ಭ ಸ್ವಾತಂತ್ರೋತ್ತರ ಭಾರತದಲ್ಲಿ ಕೋಮುವಾದಿ ರಾಜಕಾರಣಕ್ಕೆ ಮುನ್ನುಡಿ ಬರೆಯಿತು. ಈಗ ವರ್ತಮಾನದಲ್ಲಿರುವ ಗೋಡ್ಸೆ ವಿಚಾರಧಾರೆಯ ಸಂತಾನದವರು ವಿದೇಶಗಳಿಗೆ ಹೋಗಿ ತಾವು ಬುದ್ಧ, ಗಾಂಧಿ ಮತ್ತು ಅಂಬೇಡ್ಕರ್ ನಾಡಿನವರು ಎಂದು ಪರಿಚಯಿಸಿಕೊಳ್ಳುತ್ತಿರುವುದು ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಗಾಂಧಿ ಯುಗದಿಂದ ಗೋಡ್ಸೆ ಯುಗದೆಡೆಗೆ ಭಾರತೀಯರನ್ನು ಸಾಂಸ್ಕೃತಿಕ ಸಾಮ್ರಾಜ್ಯಶಾಹಿ ದಬ್ಬುತ್ತಿರುವುದು ಮಾನವೀಯತೆಗೆ ಬಗೆದ ಬಹುದೊಡ್ಡ ಅಪಚಾರವಾಗಿದೆ. ಸಂವಿಧಾನದತ್ತವಾಗಿ ಬಂದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರವನ್ನು ಬಳಸಿಕೊಂಡು ಮಹತ್ವದ ವಿಷಯಗಳು ಮತ್ತು ವಿದ್ಯಮಾನಗಳ ಬಗ್ಗೆ ತಮ್ಮ ವಿಚಾರಧಾರೆಗಳನ್ನು ಮಂಡಿಸುತ್ತಿರುವ ಚಿಂತಕರು ಮತ್ತು ಹೋರಾಟಗಾರರ ಹತ್ಯೆ ಸರಣಿಗಳು ಭಾರತದಲ್ಲಿ ಉಲ್ಪಣಿಸುತ್ತಿರುವ ಅಸಹಿಷ್ಣುತೆಗೆ ಸಾಕ್ಷಿಯಾಗಿದೆ. ಇಷ್ಟೆಲ್ಲಾ ಅವಾಂತರಗಳ ನಡುವೆಯೂ ಭಾರತೀಯರಿಗೆ ಗಾಂಧಿ ಅಹಿಂಸಾವಾದಿಯಾಗಿ, ಬಹುತ್ವದ ಪ್ರತಿಪಾದಕರಾಗಿ, ದುರ್ಬಲ ವರ್ಗಗಳ ಸಬಲೀಕರಣದ ಹರಿಕಾರರಾಗಿ ಮತ್ತು ಸಾಮಾಜಿಕ ಸಾಮರಸ್ಯದ ಸಂಕೇತವಾಗಿ ಹೆಚ್ಚು ಪ್ರಸ್ತುವಾಗಿದ್ದಾರೆ.

ಗಾಂಧಿ ಬದುಕಿದ್ದರೆ ಅಂದು ಕ್ವಿಟ್ ಇಂಡಿಯಾ ಚಳವಳಿ ನಡೆಸಿದ ಹಾಗೆ ಇಂದು ಕ್ವಿಟ್ ಎನ್‌ಡಿಎ ಚಳವಳಿಯನ್ನು ಪ್ರೀತಿ ಮತ್ತು ನಿರ್ಭೀತಿಯಿಂದ ಮುನ್ನಡೆಸುತ್ತಿದ್ದರು. ಬಾಂಬುಗಳ ಬಲವನ್ನು ಆಧರಿಸಿ ಪರಸ್ಪರ ಕಾಲು ಕೆರೆದುಕೊಂಡು ಜಗಳಕ್ಕೆ ನಿಂತಿರುವ ಭಾರತ ಮತ್ತು ಪಾಕಿಸ್ತಾನಗಳ ನೇತಾರರಿಗೆ ಗಾಂಧಿ ಸರ್ವನಾಶ ಮಾಡುವ ಬಾಂಬ್ ಸಹವಾಸವನ್ನು ಬಿಟ್ಟು ಸರ್ವರನ್ನೂ ಉದ್ಧರಿಸುವ ಶಾಂತಿ, ಸಹಬಾಳ್ವೆ, ಸಾಮರಸ್ಯ ಮತ್ತು ಸಾರ್ವಭೌಮತ್ವದೆಡೆಗೆ ಪ್ರಜೆಗಳನ್ನು ಅಹಿಂಸಾತ್ಮಕವಾಗಿ ಮುನ್ನಡೆಸಿ ಎಂದು ನರೇಂದ್ರ ಮೋದಿ ಮತ್ತು ಇಮ್ರಾನ್‌ಖಾನ್‌ರವರಿಗೆ ವಿವೇಕ ಹೇಳುತ್ತಿದ್ದರು. ಗಾಂಧಿ ಅಂದು ಮಾನವೀಯತೆಯನ್ನು ಆಧರಿಸಿದ ರಾಷ್ಟ್ರೀಯತೆಯನ್ನು ಭಾರತದ ಉದ್ದಗಲಕ್ಕೂ ಬೆಳೆಸಿದರೆ ಇಂದು ಹಿಂದುತ್ವವಾದಿಗಳು ಅಬ್ಬರದ ದೇಶಪ್ರೇಮ ಬೆಳೆಸುತ್ತಿರುವುದು ಖಂಡನೀಯ. ಹಿರಿಯ ಸ್ವಾತಂತ್ರ ಹೋರಾಟಗಾರ 102 ವರ್ಷಗಳನ್ನು ಸಾರ್ಥಕವಾಗಿ ಪೂರೈಸಿರುವ ಮಾನವತಾವಾದಿ ಎಚ್.ಎಸ್.ದೊರೆಸ್ವಾಮಿ ಗೋಡ್ಸೆ ಯುಗದಿಂದ ಮತ್ತೆ ಗಾಂಧಿ ಯುಗದೆಡೆಗೆ ದೇಶವನ್ನು ಮುನ್ನಡೆಸುವ ಅವಶ್ಯಕತೆಯನ್ನು ಪ್ರತಿಪಾದಿಸಿದ್ದಾರೆ. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ಮಾಲಿನ್ಯ ಎಲ್ಲೆ ಮೀರಿ ಹೆಚ್ಚುತ್ತಿರುವುದರಿಂದ ಇಂದು ಪ್ರಾಕೃತಿಕ ವಿಕೋಪಗಳು ಸತತವಾಗಿ ಜರುಗುತ್ತಿವೆ. ಮನುಷ್ಯನ ಎಲ್ಲ ಆಸೆಗಳನ್ನು ಪೂರೈಸುವ ಶಕ್ತಿ ಪ್ರಕೃತಿಗಿದೆ, ಆದರೆ ಮನುಷ್ಯನ ಎಲ್ಲ ದುರಾಸೆಗಳನ್ನು ಪ್ರಕೃತಿ ಪೂರೈಸುವುದಿಲ್ಲ. ಪ್ರಕೃತಿ ಧರ್ಮಕ್ಕೆ ವಿರುದ್ಧವಾದ ಯಾವುದೇ ರೀತಿಯ ಕೈಗಾರಿಕೀಕರಣ, ನಗರೀಕರಣ, ಯಾಂತ್ರೀಕರಣ ಮೊದಲಾದವುಗಳಿಂದ ಪರಿಸರ ವಿನಾಶದ ಜೊತೆಗೆ ಸಕಲ ಜೀವರಾಶಿಗಳ ವಿನಾಶ ಉಂಟಾಗುತ್ತದೆಂದು ಗಾಂಧಿ ನೀಡಿದ ಎಚ್ಚರಿಕೆಯನ್ನು ಗ್ರಹಿಸಿ ಸರಿಯಾದ ಪಥದಲ್ಲಿ ಮುನ್ನಡೆದಿದ್ದರೆ ಇಂದು ಭಾರತ ಮುಳುಗುತ್ತಿರಲಿಲ್ಲ. ಭಾರತವನ್ನು ಇಂತಹ ದುಸ್ಥಿತಿಯಿಂದ ಪಾರು ಮಾಡಿ ಪ್ರಕೃತಿ ಸ್ನೇಹಿ ಮತ್ತು ಮೌಲ್ಯ ಸ್ನೇಹಿ ಅಭಿವೃದ್ಧಿ ಕಾರಣಕ್ಕೆ ಗಾಂಧಿ ಮಾರ್ಗವನ್ನು ಅನುಸರಿಸದೇ ಅನ್ಯಮಾರ್ಗವಿಲ್ಲ ವೆಂಬುದು ನಮಗೆ ಅರಿವಾಗಬೇಕಿದೆ. ಗ್ರೇಟಾ ಥನ್ಬರ್ಗ್ ಎಂಬ ಬಾಲಕಿ ನನ್ನ ಭವಿಷ್ಯವನ್ನು ಏಕೆ ಕಿತ್ತುಕೊಂಡಿರಿ? ಎಂದು ಪ್ರಕೃತಿ ಮಾಲಿನ್ಯಕ್ಕೆ ಕಾರಣರಾದ ಸ್ಥಾಪಿತ ಹಿತಾಸಕ್ತಿಗಳನ್ನು ಪ್ರಶ್ನಿಸಿದ್ದಾಳೆ. ಇಂದು ಗಾಂಧಿ ನೇತೃತ್ವದ ಹಸಿರುಕ್ರಾಂತಿ ಭಾರತವನ್ನಷ್ಟೇ ಅಲ್ಲ ಇಡೀ ವಿಶ್ವವನ್ನು ಮಾಲಿನ್ಯ ಮತ್ತು ವಿನಾಶಗಳಿಂದ ಪಾರು ಮಾಡಬಲ್ಲದು.

ಬದಲಾಗುತ್ತಿರುವ ಪರಿಸರದ ಹಿನ್ನೆಲೆಯಲ್ಲಿ ಪ್ರಜ್ಞಾವಂತರು, ಸಾಮಾಜಿಕ ಚಳುವಳಿಗಾರರು ಮತ್ತು ವಿವಿಧ ಸಿದ್ಧಾಂತಗಳನ್ನು ಅನುಸರಿಸುತ್ತಿರುವ ಜನರು (ಆರೆಸ್ಸೆಸ್‌ನವರನ್ನು ಒಳಗೊಂಡಂತೆ) ಗಾಂಧಿಯ ವಿಚಾರಧಾರೆಗಳತ್ತ ಆಕರ್ಷಿತಾಗಿದ್ದಾರೆ. ಹವಾಮಾನ ವೈಪರೀತ್ಯಗಳಿಂದ ಮನುಕುಲವನ್ನು ರಕ್ಷಿಸುವ ನಿಟ್ಟಿನಲ್ಲಿ ಸೂಕ್ತ ಪರಿಹಾರವನ್ನು ಗಾಂಧಿ ಮಾದರಿಯಲ್ಲಿ ಕಂಡುಕೊಳ್ಳಬಹುದು. ನಿಮ್ಮ ಹಳ್ಳಿಗಳಿಗೆ ವಾಪಸ್ಸು ತೆರಳಿ, ಮಾತೃಭೂಮಿಯ ಋಣವನ್ನು ತೀರಿಸಿ ಎಂಬ ಗಾಂಧಿಯ ಸಂದೇಶವನ್ನು ಇಂದು ವಿದ್ಯಾವಂತ ಯುವಜನರು ಪಾಲಿಸತೊಡಗಿದ್ದಾರೆ. ಲಕ್ಷಾಂತರ ರೂಪಾಯಿ ಬಹುರಾಷ್ಟ್ರೀಯ ಕಂಪೆನಿಗಳ ವೇತನವನ್ನು ಬಿಟ್ಟು ಹಳ್ಳಿಗಳಿಗೆ ಬಂದು ನಾಲ್ಕಾರು ಎಕರೆ ಭೂಮಿಯನ್ನು ಖರೀದಿಸಿ ಕೃಷಿ, ಹೈನುಗಾರಿಕೆ, ತೋಟಗಾರಿಕೆ, ಮೀನುಗಾರಿಕೆ ಮೊದಲಾದ ಸುಸ್ಥಿರ ಅಭಿವೃದ್ಧಿ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪ್ರಕೃತಿಯ ಮಡಿಲಲ್ಲಿ ಸುಖವಾಗಿ ಬದುಕುತ್ತಿರುವ ಹೊಸ ಪೀಳಿಗೆ ನಮ್ಮ ನಡುವೆ ಇರುವುದು ಅತ್ಯಂತ ಸಮಾಧಾನಕರ ಸಂಗತಿಯಾಗಿದೆ. ರಾಸಾಯನಿಕ ಕೃಷಿಗೆ ವಿದಾಯ ಹೇಳಿ ಸಾವಯವ ಕೃಷಿ / ಸಹಜ ಕೃಷಿಯೆಡೆಗೆ ಮುಖ ಮಾಡಿ ಹಳ್ಳಿಗಾಡಿನ ಜನರಿಗೆ ಉದ್ಯೋಗಾವಕಾಶಗಳನ್ನು ದೊರಕಿಸಿಕೊಡುವ ಮತ್ತು ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ನವಪೀಳಿಗೆಯ ಭಾರತೀಯರು ವಹಿಸುತ್ತಿರುವ ಪಾತ್ರ ಅನನ್ಯವಾದುದು. ಶ್ರೇಷ್ಠ ರಂಗಕರ್ಮಿ ಮತ್ತು ಗಾಂಧಿವಾದಿ ಪ್ರಸನ್ನ ಗ್ರಾಮೀಣ ಕೇಂದ್ರಿತ ಆರ್ಥಿಕ ವ್ಯವಸ್ಥೆಯ ಪ್ರಧಾನ ಪ್ರತಿಪಾದಕರಾಗಿ ಯುವಜನರನ್ನು ಸ್ವಾಭಿಮಾನದ ಕಡೆಗೆ ಮುನ್ನಡೆಸುತ್ತಿರುವುದು ನಮ್ಮ ಪುಣ್ಯ.

ಅಂದು ಗಾಂಧಿ ವೈಭವದ ಜೀವನವನ್ನು ತ್ಯಜಿಸಿ ಸರಳ ಜೀವನವನ್ನು ಅಳವಡಿಸಿಕೊಂಡು ಭಾರತೀಯರಲ್ಲಿ ಹೊಸ ಸಂಚಲನವನ್ನು ಉಂಟುಮಾಡಿದ್ದರು. ವಿದ್ಯಾರ್ಥಿ ದೆಸೆಯಲ್ಲಿ ಸೂಟು-ಬೂಟುದಾರಿ ಗಾಂಧಿ ಭಾರತಕ್ಕೆ ಮರಳಿದ ನಂತರ ಅರೆ ಹೊಟ್ಟೆ, ಅರೆ ಮೈ ಮತ್ತು ಗ್ರಾಮೀಣ ಸರಳ ಜೀವನ ಕ್ರಮಗಳನ್ನು ಅಳವಡಿಸಿಕೊಂಡರು. ನಾನು ಭಾರತೀಯರ ನೈಜ ಪ್ರತಿನಿಧಿಯಾಗಿ ಬದುಕಲು ಬಯಸುತ್ತೇನೆಯೇ ಹೊರತಾಗಿ ಆಡಂಬರದ ಜೀವನ ನಡೆಸಿ ದೇಶದ್ರೋಹಿಯಾಗಲು ಇಷ್ಟಪಡುವುದಿಲ್ಲ ಎಂದು ಘೋಷಿಸಿ ಗಾಂಧಿ ಶ್ರೇಷ್ಠ ಫಕೀರರಾದರು. ಆದರೆ ಇಂದು ನಮ್ಮನ್ನು ಆಳುತ್ತಿರುವ ನರೇಂದ್ರಮೋದಿ ಸೇವಿಸುವ ಆಹಾರ ಅತ್ಯಂತ ವೆಚ್ಚದಾಯಕ (ದಿನವೊಂದಕ್ಕೆ 30 ಸಾವಿರ ರೂಪಾಯಿಗಳ ದುಬಾರಿ ಆಹಾರ), ಧರಿಸುವ ವಸ್ತ್ರ ಕನಿಷ್ಠ 2ಲಕ್ಷ ರೂ. ಗಳಿಗೂ ಹೆಚ್ಚು ಮತ್ತು ವಿದೇಶ ಪ್ರವಾಸ ತೆರಿಗೆದಾರರು, ರೈತರು ಮತ್ತು ಕಾರ್ಮಿಕರ ಬೆವರು ಮತ್ತು ರಕ್ತದ ಹಣ. ನಮಗೆ ಶ್ರೀಮಂತರಿಂದ, ಶ್ರೀಮಂತರಿಗಾಗಿ ಮತ್ತು ಶ್ರೀಮಂತರಿಗೋಸ್ಕರ ಬದುಕುವ ಪ್ರಧಾನಿ ನರೇಂದ್ರ ಮೋದಿಗಿಂತ ಬಡವರಿಂದ, ಬಡವರಿಗಾಗಿ ಮತ್ತು ಬಡವರಿಗೋಸ್ಕರ ಬದುಕಿದ ಮಹಾತ್ಮಾ ಗಾಂಧಿ ಹೆಚ್ಚು ಪ್ರಸ್ತುತ. ದೇಶದ ಯುವಜನರ ಅಭಿವೃದ್ಧಿಗೆ, ರೈತರ ಕಲ್ಯಾಣಕ್ಕೆ, ಕಾರ್ಮಿಕರ ಅಭ್ಯುದಯಕ್ಕೆ ಮತ್ತು ಎಲ್ಲ ಪ್ರಜೆಗಳ ಸುಸ್ಥಿರ ಅಭಿವೃದ್ಧಿಗೆ ಮೋದಿ ಮಾದರಿಗಿಂತ ಗಾಂಧಿ ಮಾದರಿ ಅನಿವಾರ್ಯವಾಗಿದೆ. ಮುಳುಗುತ್ತಿರುವ ಭಾರತವನ್ನು ಉದ್ಧರಿಸಲು ಗಾಂಧಿ ಮತ್ತೆ ಹುಟ್ಟಿ ಬರಲಿ ಎಂಬುದು ನಮ್ಮೆಲ್ಲರ ಆಶಯವಾಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top