ವಸಾಹತುಶಾಹಿ ಚರಿತ್ರೆ ಕಥನ: ಸ್ವರೂಪ ಮತ್ತು ಚಿಂತನೆಗಳು | Vartha Bharati- ವಾರ್ತಾ ಭಾರತಿ

ವಸಾಹತುಶಾಹಿ ಚರಿತ್ರೆ ಕಥನ: ಸ್ವರೂಪ ಮತ್ತು ಚಿಂತನೆಗಳು

ಭಾಗ-1

ವಸಾಹತು ಇತಿಹಾಸ ಕಥನ ಎರಡು ವಿಚಾರಗಳನ್ನು ಪ್ರತಿನಿಧಿಸುತ್ತವೆ. ಒಂದನೆಯದು ವಸಾಹತುಶಾಹಿ ಆಡಳಿತ ಕಾಲಘಟ್ಟದಲ್ಲಿ ವಸಾಹತುಶಾಹಿ ರಾಷ್ಟ್ರಗಳು ವಸಾಹತೀಕರಿಸಿದ ದೇಶದ ಇತಿಹಾಸವನ್ನು ಚಿತ್ರಿಸುವ ಕಥನದ ರೂಪಕ. ಎರಡನೆಯದು ವಸಾಹತುಶಾಹಿ ಚಿಂತನೆಗಳು ಮತ್ತು ಸಿದ್ಧಾಂತಗಳನ್ನು ಪ್ರತಿಪಾದಿಸುವ ಇತಿಹಾಸಕಾರರ ಪ್ರತಿಪಾದನೆಗಳು. ಮೊದಲನೆಯ ಆಶಯವು ಬ್ರಿಟಿಷರು ಭಾರತವನ್ನು ಆಳ್ವಿಕೆ ನಡೆಸುವ ಕಾಲಘಟ್ಟದ್ದು. ಎರಡನೆಯ ಆಶಯ ಸ್ವಾತಂತ್ರೋತ್ತರ ಕಾಲದಲ್ಲಿ ಪ್ರಚಾರಕ್ಕೆ ಬಂದಿರುವ ಆಶಯ. ಈ ಬಗೆಯ ಬರವಣಿಗೆಗಳನ್ನು ಪರಿಚಯಿಸಿದ ವ್ಯಕ್ತಿಗಳಲ್ಲಿ ಬಹುತೇಕರು ಬ್ರಿಟಿಷ್ ವಸಾಹತುಶಾಹಿ ಅಧಿಕಾರಿಗಳು. ಆದರೆ, ವಸಾಹತುಶಾಹಿ ಇತಿಹಾಸವು ಅಧ್ಯಯನದ ವಿಷಯ ಮತ್ತು ವಸಾಹತುಶಾಹಿ ದೃಷ್ಟಿಕೋನ ಒಂದು ಸೈದ್ಧಾಂತಿಕ ನಿಲುವು ಆಗಿ ಬಳಕೆಗೆ ಬಂದಿದೆ. ಸಾಮ್ರಾಜ್ಯ ಕಟ್ಟುವ ವಿಚಾರವು ಬ್ರಿಟಿಷ್ ಇತಿಹಾಸಕಾರರ ಕೃತಿಗಳಲ್ಲಿ ವಸಾಹತು ಶಾಹಿ ಚಿಂತನೆಗಳಾಗಿ ರೂಪುಗೊಂಡು ಭಾರತದಲ್ಲಿ ಬ್ರಿಟಿಷ್ ಆಡಳಿತ ಸಮರ್ಥನೆಯನ್ನು ಪ್ರತಿಪಾದಿಸುತ್ತದೆ. ಈ ಪ್ರತಿಪಾದನೆಗಳು ಬೇರೆ ಬೇರೆ ಹಂತದಲ್ಲಿ ವಿಭಿನ್ನ ವ್ಯಕ್ತಿ ಕೇಂದ್ರಿತ ಇತಿಹಾಸಕಾರರು ಭಾರತ ಸಮಾಜ ಮತ್ತು ಸಂಸ್ಕೃತಿ ಕುರಿತಾದ ವಿಮರ್ಶೆಗಳ ರೂಪದಲ್ಲಿ ರಚನೆಯಾದವುಗಳು. ಭಾರತದಲ್ಲಿನ ಪರಿಸ್ಥಿತಿಯ ಅವಲೋಕನ ಮಾಡುತ್ತ (ಬ್ರಿಟಿಷ್ ಸೈನಿಕರು ಭಾರತವನ್ನು ಆಕ್ರಮಿಸಿಕೊಳ್ಳುವ ಸಂದರ್ಭದಲ್ಲಿ) ಬ್ರಿಟಿಷ್ ಆಡಳಿತ ಸ್ಥಾಪನೆ, ಶಾಂತಿ ಸ್ಥಾಪನೆ ಮತ್ತು ಅಭಿವೃದ್ಧಿಗೆ ಚಾಲನೆ ನೀಡುತ್ತದೆ ಎಂಬ ಆಶ್ವಾಸನೆಯಂತಿದೆ. ಆದರೆ, ಅವರ ಆಲೋಚನಾ ಕ್ರಮದಲ್ಲಿರುವ ಸ್ವಾರ್ಥ, ಭಾರತೀಯ ಸಮಾಜ ಮತ್ತು ರಾಜಕೀಯ ಸಂಸ್ಥೆಗಳ ಮೇಲಿನ ಕೀಳರಿಮೆ ಇತ್ಯಾದಿ ವಿವರಗಳು ಸಾರ್ವಜನಿಕವಾಗಿ ಚರ್ಚೆಗೆ ಒಳಪಟ್ಟಿರುವುದು ಭಾರತಕ್ಕೆ ಸ್ವಾತಂತ್ರ ಬಂದ ಮೆಲೆ. ಲೀಯೋಪೊಲ್ಡ್ ರಾಂಕೆಯವರು ಹೇಳು ವಂತೆ ಇತಿಹಾಸ ಮತ್ತು ಚಾರಿತ್ರಿಕ ಸತ್ಯವೆಂಬುದು ನಡೆದ ಘಟನೆ ಹೇಗೆ ನಡೆಯಿತೆಂದು ಹಾಗೆಯೇ ಮಂಡನೆ ಮಾಡುವುದು ಎಂಬ ವಿಚಾರ ಇತಿಹಾಸಕಾರರಲ್ಲಿ ಹೆಚ್ಚು ಪ್ರಭಾವಿತವಾದದ್ದು 20ನೇ ಶತಮಾನದಲ್ಲಿ. ಇಲ್ಲಿ ಚಾರಿತ್ರಿಕ ಘಟನೆಯ ಮರು ನಿರೂಪಣೆಯಲ್ಲಿ ವಸ್ತು ನಿಷ್ಠತೆ ಮತ್ತು ಎಲ್ಲರಿಗೆ ಒಪ್ಪಿಗೆಯಾಗುವ ವಿಚಾರಗಳು ಹೆಚ್ಚು ಅಲಂಕೃತಗೊಳ್ಳುತ್ತವೆ. ಆ ಕಾರಣಕ್ಕಾಗಿ, ವಸಾಹತುಶಾಹಿ ಇತಿಹಾಸಕಾರರು ಪ್ರತಿಪಾದಿಸುವ ಸಾಮ್ರಾಜ್ಯಶಾಹಿ ಪ್ರಭುತ್ವ ಪರವಾದ ಸೈದ್ಧಾಂತಿಕ ನಿಲುವುಗಳನ್ನು ಚರಿತ್ರೆ ಕುರಿತಾದ ಸಂಕಥನದಲ್ಲಿ ಸೇರ್ಪಡಿಸಿಕೊಳ್ಳುವುದು ಸ್ವಲ್ಪ ಪ್ರಯಾಸದ ಸಂಗತಿಯಾಗಿದೆ. ಈ ಬಗೆಯ ವಿಮರ್ಶೆಗಳು ವಸಾಹತುಶಾಹಿ ಇತಿಹಾಸಕಾರರ ಬರವಣಿಗೆಗಳನ್ನು ಟೀಕಿಸುವ ನೆಪದಲ್ಲಿ ಭಾರತಕ್ಕೆ ಸ್ವಾತಂತ್ರ ಲಭಿಸಿದ ನಂತರ ಹೆಚ್ಚು ಪ್ರಕಟವಾಗಲು ಆರಂಭವಾದವು.

ವಸಾಹತುಶಾಹಿ ಸಿದ್ಧಾಂತಗಳು ಚರಿತ್ರೆಕಥನದಲ್ಲಿ ಹೇಗೆ ಪ್ರಜ್ವಲಿಸಲು ಆರಂಭವಾದವು ಎಂಬ ಪ್ರಶ್ನೆಯನ್ನು ಚರ್ಚಿಸುವ ಮೊದಲು, ನಾವು ಯಾವ ಇತಿಹಾಸಕಾರರನ್ನು ಉದ್ದೇಶಿಸಿ ಅಧ್ಯಯನ ಮಾಡುತ್ತಿದ್ದೇವೆ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. 18ನೇ ಶತಮಾನದಲ್ಲಿ ನಮಗೆ ಯಾವುದೇ ನೈಜವಾದ ಚಾರಿತ್ರಿಕ ಗ್ರಂಥಗಳು ಲಭ್ಯವಾಗುವುದಿಲ್ಲ. ಈ ಅವಧಿಯಲ್ಲಿ ಬ್ರಿಟಿಷರು ತಮ್ಮ ವಸಾಹತು ಕಾರ್ಯಾಚರಣೆಯಲ್ಲಿ ಹೆಚ್ಚು ತಮ್ಮನ್ನು ತೊಡಗಿಸಿಕೊಂಡು, ಭಾರತದ ಉದ್ದಗಲಕ್ಕೂ ಇರುವ ಶ್ರೀಮಂತ ಪ್ರಾಂತಗಳನ್ನು ಆಕ್ರಮಿಸಿಕೊಳ್ಳುವ ತವಕದಲ್ಲೇ ಮಗ್ನರಾಗಿದ್ದುದರಿಂದ ಇಲ್ಲಿನ ಚರಿತ್ರೆಯ ಕುರಿತಾದ ಆಳವಾದ ಅಧ್ಯಯನ ಮಾಡಲು ವಿಶೇಷ ಆಸಕ್ತಿ ಹೊಂದಿರಲಿಲ್ಲ. ಆದಾಗ್ಯೂ 18ನೇ ಶತಮಾನದ ಕೊನೆಯಲ್ಲಿ ಒಂದು ನಿರ್ದಿಷ್ಟ ಚಾರಿತ್ರಿಕ ಮನೋಭಾವನೆಯಿಂದ ಭಾರತದ ಚರಿತ್ರೆ ತಿಳಿದುಕೊಳ್ಳುವ ಆಸಕ್ತಿ ತೋರಿದ ಬರಹಗಾರರಲ್ಲಿ ಚಾರ್ಲ್ಸ ಗ್ರಾಂಟ್ ಮೇಲ್ಪಂಕ್ತಿಯನ್ನು ಅಲಂಕರಿಸುತ್ತಾನೆ. ಈತ ಕ್ರೈಸ್ತ ಮತಧರ್ಮ ಪ್ರಚಾರದ ಗುಂಪಿಗೆ ಸೇರಿದವನಾಗಿದ್ದು, ಅವನು ‘ಒಬ್ಸರ್ವೇಶನ್ಸ್ ಆನ್ ದಿ ಸ್ಟೇಟ್ ಆಫ್ ಸೊಸೈಟಿ ಅಮಂಗ್ ದಿ ಎಷ್ಯಾಟಿಕ್ ಸಬ್ಜಕ್ಟ್ಸ್‌ಆಫ್ ಇಂಡಿಯಾ’ ಎಂಬ ಗ್ರಂಥವನ್ನು 1792ರಲ್ಲಿ ಪ್ರಕಟಿಸಿದನು. ಅವನ ಪ್ರಕಾರ ಬ್ರಿಟಿಷರು ಭಾರತದಲ್ಲಿ ಆರಂಭಿಸುವ ಆಡಳಿತವು ಇಲ್ಲಿನ ಬುಡಕಟ್ಟು ಸಮುದಾಯಗಳ ನಂಬಿಕೆ, ನಡಾವಳಿ ಮತ್ತು ಅಚಾರಿತ್ರಿಕ ಕಟ್ಟುಪಾಡುಗಳ ಮೇಲೆ ಕ್ರೈಸ್ತ ಧರ್ಮದ ಹೊಸ ಬೆಳಕನ್ನು ಚೆಲ್ಲುವ ಉದ್ದೇಶ ಹೊಂದಿದೆ. ಈ ಬಗೆಯ ಪ್ರತಿಫಲಿಸುವ ಬರವಣಿಗೆಗಳು ಭಾರತೀಯ ಸಮಾಜ ಮತ್ತು ಇತಿಹಾಸದ ಕುರಿತು 19ನೇ ಶತಮಾನದ ಆರಂಭದ ದಶಕಗಳವರೆಗೆ ರಚನೆಯಾಗಿರುವುದು ತೀರ ವಿರಳ. 19ನೇ ಶತಮಾನದ ಎರಡನೇ ದಶಕದ ಹೊತ್ತಿಗೆ ಭಾರತದಲ್ಲಿ ಬ್ರಿಟಿಷ್ ಆಡಳಿತ ಮತ್ತಷ್ಟು ಭದ್ರಗೊಂಡಿದ್ದು ಅಲ್ಲದೇ, ಸಾಮ್ರಾಜ್ಯಶಾಹಿ ವಿಸ್ತರಣೆಯ ಹೊಸ ಘಟ್ಟವನ್ನು ಅದು ತಲುಪಿತು. 1815ರ ಹೊತ್ತಿಗೆ ಬ್ರಿಟನ್ ಫ್ರಾನ್ಸ್ ನ ನೆಪೋಲಿಯನ್ ಬೊನಪಾಟ್‌ನ ವಿರುದ್ಧದ ಕಾರ್ಯಾಚರಣೆಯಲ್ಲಿ ಯಶಸ್ಸು ಕಂಡಿದ್ದು ಅಲ್ಲದೇ, ಜಾಗತಿಕ ಮಟ್ಟದಲ್ಲಿ ಮೊದಲ ಶ್ರೇಣಿಯಲ್ಲಿ ಮುಂದುವರಿದ ಬಂಡವಾಳಶಾಹಿ ಸಮಾಜವಾಗಿ ಗುರುತಿಸಿಕೊಂಡಿತು ಅಲ್ಲದೆ, ಬ್ರಿಟನ್ ಮೊದಲ ಹಂತದ ಕೈಗಾರಿಕಾ ಕ್ರಾಂತಿಯನ್ನು ಅನುಭವಿಸಿ ಜಗತ್ತಿನಲ್ಲೇ ಅತೀ ದೊಡ್ಡ ದೇಶವಾಗಿ ಕೈಗಾರಿಕಾ ಕ್ಷೇತ್ರದಲ್ಲಿ ಗಮನಾರ್ಹವಾಗಿ ಬೆಳೆದು ನಿಂತಿತು. ಈ ಬಗೆಯ ಯಶಸ್ಸು, ಅದೇ ಕಾಲಘಟ್ಟದಲ್ಲಿ ಯಾಜಮಾನಿಕೆ ಸ್ಥಾಪಿಸಿ ತನ್ನ ಸಾರ್ವಭೌಮತ್ವವನ್ನು ಪ್ರದರ್ಶನ ಮಾಡಲು ರಚಿಸಿದ ವೇದಿಕೆಯಾದ ಭಾರತದ ಕುರಿತಾದ ಬರವಣಿಗೆಯಲ್ಲಿ ಪ್ರಕಟವಾಗಲಾರಂಭಿಸಿತು. ಅವರ ಭಾವನೆಗಳು, ನಂಬಿಕೆಗಳು, ಯಶಸ್ವಿ ಕಾರ್ಯಾಚರಣೆ ಮತ್ತು ದೃಷ್ಟಿಕೋನಗಳು 19ನೇ ಶತಮಾನದ ಎರಡನೇ ಯಾರ್ಧದಲ್ಲಿ ಹೆಚ್ಚು ಪ್ರತಿಫಲಿಸತೊಡಗಿದವು.

 ಸರಿಸುಮಾರು ಇದೇ ಹೊತ್ತಿಗೆ ಅಂದರೆ, 1806ರಿಂದ 1818ರ ನಡುವೆ ಜೇಮ್ಸ್ ಮಿಲ್ ಭಾರತದ ಇತಿಹಾಸದ ಕುರಿತು ಹಲವು ಸಂಪುಟಗಳಲ್ಲಿ ತನ್ನ ಕೃತಿಗಳನ್ನು ಪ್ರಕಟಿಸಿದನು. ಈ ಕೃತಿಗಳು ಭಾರತದ ಕುರಿತು ಬ್ರಿಟಿಷರು ಪ್ರಕಟಿಸುವ ಭಾವನೆಗಳ ಮೇಲೆ ವಿಶೇಷ ಪ್ರಭಾವ ಬೀರಿದವು. ಮಿಲ್‌ನ ಕೃತಿಗಳು ಹಿಸ್ಟರಿ ಆಫ್ ಬ್ರಿಟಿಷ್ ಇಂಡಿಯಾ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿದ್ದು, ಮೊದಲ ಮೂರು ಸಂಪುಟಗಳು ಪ್ರಾಚೀನ ಹಾಗೂ ಮಧ್ಯಕಾಲೀನ ಭಾರತದ ಕುರಿತಾದ ವರದಿಗಳಾಗಿದ್ದು, ಕೊನೆಯ ಮೂರು ಸಂಪುಟಗಳು ವಿಶೇಷವಾಗಿ ಭಾರತದಲ್ಲಿ ಬ್ರಿಟಿಷರ ಆಡಳಿತದ ಕುರಿತು ವಿಸ್ತೃತ ರೂಪಗಳಾಗಿವೆ. ಈ ಸಂಪುಟಗಳು ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚು ಪ್ರಚಾರ ಕಂಡಿದ್ದು, ಅವುಗಳ ಮರು ಮುದ್ರಣಗಳು 1820, 1826 ಮತ್ತು1840ರಲ್ಲಿ ಹೊರ ಬಂದವು. ಜೊತೆಗೆ ಬ್ರಿಟಿಷ್ ಭಾರತೀಯ ನಾಗರಿಕ ಸೇವಾ ಅಧಿಕಾರಿಗಳು ತೆಗೆದುಕೊಳ್ಳುವ ಪರೀಕ್ಷೆಗಳಿಗೆ ಶ್ರೇಷ್ಠ ಪಠ್ಯಗಳಾಗಿ ಪರಿಗಣಿಸಲಾಗಿತ್ತು. ಈ ಅಧಿಕಾರಿಗಳು ಹೈಲ್ಬರಿಯಲ್ಲಿ ಸ್ಥಾಪನೆಯಾದ ಈಸ್ಟ್ ಇಂಡಿಯಾ ಕಾಲೇಜಿನಲ್ಲಿ ತರಬೇತಿ ಪಡೆಯುವಾಗ ಭಾರತದ ಇತಿಹಾಸ, ಸಮಾಜ ಕುರಿತಾದ ಮಾಹಿತಿಗಳಿಗೆ ಮೂಲ ಆಕರಗಳಾಗಿ ಬಳಸುತ್ತಿದ್ದರು.

ಜೇಮ್ಸ್ ಮಿಲ್ ಭಾರತಕ್ಕೆ ಎಂದೂ ಭೇಟಿ ಕೊಟ್ಟವನಲ್ಲ. ಆದರೆ, ಅವನ ಕೃತಿಗಳು ಭಾರತಕ್ಕೆ ಭೇಟಿ ಕೊಟ್ಟ ಬ್ರಿಟಿಷ್ ಬರಹಗಾರರ ಕೃತಿಗಳನ್ನು ಆಧರಿಸಿ ರಚನೆಯಾದವುಗಳು. ಭಾರತದ ಮತ್ತು ಭಾರತೀಯರ ಕುರಿತು ಅನೇಕ ಕಪೋಲ ಕಲ್ಪಿತ ಪೂರ್ವಗ್ರಹಗಳು ಈ ಕೃತಿಗಳಲ್ಲಿ ಪ್ರಕಟವಾಗಿದ್ದು, ಅದನ್ನು ಓದಿದ ಬಹುತೇಕ ಬ್ರಿಟಿಷ್ ಅಧಿಕಾರಿಗಳು ಅದನ್ನೇ ಒಪ್ಪಿಕೊಂಡಿದ್ದರು. (ಪರಿಪೂರ್ಣತೆ, ವಸ್ತುನಿಷ್ಠತೆ ಮತ್ತು ನಿಖರತೆಯಂತಹ) ನ್ಯೂನತೆಗಳನ್ನು ಒಳಗೊಂಡಿದ್ದರೂ, ಮಿಲ್‌ನ ಕೃತಿಗಳು ಎರಡು ಪ್ರಮುಖ ಕಾರಣಗಳಿಗೆ ಮುಖ್ಯ ಆಗುತ್ತವೆ. ಒಂದನೆಯದು, ಜೇಮ್ಸ್ ಮಿಲ್‌ನು ಬ್ರಿಟನ್‌ನ ಪ್ರಭಾವಿ ರಾಜಕೀಯ ಮತ್ತು ಆರ್ಥಿಕ ಚಿಂತನೆಯನ್ನು ಪ್ರತಿಪಾದಿಸುವ ಪ್ರಯೋಜನವಾದಿ ಪಂಗಡಕ್ಕೆ ಸೇರಿದವನು. ಈ ಚಿಂತನೆಯ ಪ್ರೇರಕನು ಪ್ರಭಾವಿ ತತ್ವಜ್ಞಾನಿ ಜೆರೆಮಿ ಬೆಂಥೆಮ್. ಪ್ರಯೋಜನವಾದಿ ಯೋಜನೆಯ ಪ್ರತಿಪಾದಕನಾಗಿ ಮಿಲ್‌ನ ಹಿಸ್ಟರಿ ಆಫ್ ಇಂಡಿಯಾ ಎಂಬ ಕೃತಿಯಲ್ಲಿ ಭಾರತದಲ್ಲಿ ಬ್ರಿಟಿಷ್ ಆಡಳಿತದ ಪ್ರಯೋಜನವಾದಿ ಅಜೆಂಡಾಗಳನ್ನು ಸೂಚಿಸುತ್ತದೆ. ಎರಡನೆಯದಾಗಿ, ಈ ಕೃತಿಯ ಚಿಂತನೆಗಳು 19ನೇ ಶತಮಾನದ ಬ್ರಿಟಿಷ್ ಆಡಳಿತಗಾರರ ಮನಸ್ಥಿತಿಯನ್ನು ಪ್ರಕಟಿಸುತ್ತದೆ. ಈ ಕಾಲಘಟ್ಟ ಬ್ರಿಟಿಷರ ಆಂಗ್ಲೋ-ಫ್ರೆಂಚ್ ಯುದ್ಧದಲ್ಲಿ ಬ್ರಿಟನ್ ವಿಜಯ ಆಗಿ ಕೈಗಾರೀಕರಣದಲ್ಲಿ ಮುಂದುವರಿದ ರಾಷ್ಟ್ರವಾಗಿ ಜಾಗತಿಕವಾಗಿ ತನ್ನ ಅಸ್ಮಿತೆಯನ್ನು ಪ್ರಕಟಿಸುವ ಹಂತಕ್ಕೆ ತಲುಪಿತ್ತು. ಜೇಮ್ಸ್ ಮಿಲ್ ಅತ್ಯಂತ ವಿಶ್ವಾಸದಿಂದ ಸಾಮ್ರಾಜ್ಯ ಶಾಹಿಯ ವಿವಿಧ ಮುಖವನ್ನು ತನ್ನ ಕೃತಿಗಳಲ್ಲಿ ಪರಿಚಯಿಸುತ್ತಾನೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top