ವಸಾಹತುಶಾಹಿ ಚರಿತ್ರೆ ಕಥನ ಸ್ವರೂಪ ಮತ್ತು ಚಿಂತನೆಗಳು | Vartha Bharati- ವಾರ್ತಾ ಭಾರತಿ

ವಸಾಹತುಶಾಹಿ ಚರಿತ್ರೆ ಕಥನ ಸ್ವರೂಪ ಮತ್ತು ಚಿಂತನೆಗಳು

ಭಾಗ - 2

ಜೇಮ್ಸ್ ಮಿಲ್‌ನ ಪ್ರಯೋಜನಾವಾದಿ ಚಾರಿತ್ರಿಕ ವ್ಯಾಖ್ಯಾನಕ್ಕೆ ಪ್ರತಿಸ್ವರ್ಧಿ ಎಂಬಂತೆ ಮೌಂಟ್‌ಸ್ಟುವರ್ಟ್ ಎಲ್‌ಪಿನ್‌ಸ್ಟನ್‌ನ ‘ಹಿಸ್ಟರಿ ಆಫ್ ಹಿಂದೂ ಇಂಡಿಯಾ ಆ್ಯಂಡ್ ಮುಹಮ್ಮದನ್ ಇಂಡಿಯಾ’ ಎಂಬ ಕೃತಿ 1841ರಲ್ಲಿ ಪ್ರಕಟವಾಯಿತು. ಎಲ್‌ಪಿನ್‌ಸ್ಟನ್ ತನ್ನ ಹೆಚ್ಚಿನ ಜೀವಿತ ಅವಧಿಯನ್ನು ಭಾರತದಲ್ಲಿ ನಾಗರಿಕ ಸೇವೆಯಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದು, ಭಾರತದ ಕುರಿತು ಮಿಲ್‌ಗಿಂತ ಆಳವಾದ ಜ್ಞಾನ ಹೊಂದಿದ್ದವನು. ಆ ಕಾರಣಕ್ಕಾಗಿ ಅವನ ಈ ಕೃತಿ ಭಾರತದ ವಿಶ್ವವಿದ್ಯಾನಿಲಯಗಳಲ್ಲಿ ಅಧಿಕೃತ ಚರಿತ್ರೆ ಕೃತಿ ಎಂದು ಮನ್ನಣೆ ಪಡೆದಿತ್ತು. ಆ ನಂತರ ಅವನು ‘ಹಿಸ್ಟರಿ ಆಫ್ ಬ್ರಿಟಿಷ್ ಪವರ್ ಇನ್‌ದಿ ಈಸ್ಟ್’ ಎಂಬ ಕೃತಿಯನ್ನು ಪ್ರಕಟಿಸಿದನು. ಈ ಕೃತಿಯಲ್ಲಿ ಲಾರ್ಡ್ ಹೇಸ್ಟೀಂಗ್‌ನವರೆಗಿನ ಬ್ರಿಟಿಷ್ ಆಡಳಿತದ ವಿಸ್ತರಣೆ ಮತ್ತು ಕ್ರೋಡೀಕರಣವನ್ನು ಕುರಿತು ವಿಸ್ತೃತ ಅಧ್ಯಯನ ಮಾಡಿದನು. ಜೇಮ್ಸ್ ಮಿಲ್ ಭಾರತದ ಇತಿಹಾಸ ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಕಾಲವನ್ನು ನಿಗದಿಪಡಿಸಿ ವರ್ಗೀಕರಣ ಮಾಡಿದ್ದು, ಎಲ್‌ಪಿನ್‌ಸ್ಟನ್‌ನ ಹಿಂದೂ, ಮುಸ್ಲಿಂ ಮತ್ತು ಬ್ರಿಟಿಷ್ ಕಾಲವೆಂಬುದು ಗುರುತಿಸಿ ಭಾರತೀಯ ಚರಿತ್ರೆಕಥನದ ಒಂದು ಸಂಪ್ರದಾಯವನ್ನಾಗಿ ದೃಢೀಕರಿಸುತ್ತಾನೆ. ಹಾಗಾಗಿ, ಅವನ ಕೃತಿಗಳು ಪ್ರಭಾವಿ ಪಠ್ಯಗಳು ಎಂದು ಭಾರತದಲ್ಲಿ ಪರಿಚಿತವಾದವು. ಆನಂತರ 1860ರ ದಶಕದಲ್ಲಿ ವೃತ್ತಿಪರ ಲೇಖಕರಿಂದ ಸಮರ್ಥ ಜ್ಞಾನವುಳ್ಳ ಕೃತಿಗಳು ಹೊರಬಂದವು. ಉದಾಹರಣೆಗೆ, 1867ರಿಂದ 1876ರ ನಡುವೆ ಜೆ. ಟಾಲ್ಚಿವೀಲರ್ ‘ಹಿಸ್ಟರಿ ಆಫ್ ಇಂಡಿಯಾ’ ಎಂಬ ಕೃತಿಯನ್ನು ಸುಮಾರು ಐದು ಸಂಪುಟಗಳಲ್ಲಿ ಪ್ರಕಟಿಸಿದನು. ಆನಂತರ 1886ರಲ್ಲಿ ‘ಇಂಡಿಯಾ ಅಂಡರ್ ಬ್ರಿಟಿಷ್ ರೂಲ್’ ಎಂಬ ಕೃತಿಯನ್ನು ಅವನೇ ಪ್ರಕಟಿಸಿದನು.

ಎಲ್‌ಪಿನ್‌ಸ್ಟನ್‌ನಿಗೆ ಉತ್ತಾರಾಧಿಕಾರಿ ಎಂದೇ ಗುರುತಿಸಬಹುದಾದ ಆನಂತರದ ತಲೆಮಾರಿನ ಲೇಖಕರಲ್ಲಿ ವಿನ್ಸೆಂಟ್ ಸ್ಮಿತ್ ಮೊದಲಿಗನಾಗುತ್ತಾನೆ. ‘ಎಲ್‌ಪಿನ್‌ಸ್ಟನ್‌ನ ಹಿಸ್ಟರಿ ಅಫ್ ಹಿಂದೂ ಆ್ಯಂಡ್ ಮುಹಮ್ಮದನ್ ಇಂಡಿಯಾ’ದ ಕೊನೆಯ ಮುದ್ರಣ 1911ರಲ್ಲಿ ಪ್ರಕಟವಾಯಿತು. ಆದರೆ, ಅದೇ ವರ್ಷ ಸ್ಮಿತ್‌ನ ಹಿಸ್ಟರಿ ಆಫ್ ಇಂಡಿಯಾ ಜನಮಾನಸದಲ್ಲಿ ಉತ್ಕೃಷ್ಟವಾದ ಸಂಶೋದನಾ ಕೃತಿ ಎಂದು ಅಕಡಮಿಕ್ ವಲಯದಲ್ಲಿ ಗುರುತಿಸಲಾಯಿತು. ಇದಕ್ಕೆ ಕಾರಣ ಆ ಕಾಲಘಟ್ಟದಲ್ಲಿ ಸಂಶೋಧನಾ ಕ್ಷೇತ್ರದಲ್ಲಿ ಆದ ಪ್ರಗತಿ ಮತ್ತು ಒಬ್ಬ ಸಂಶೋಧಕನಾಗಿ ಸ್ಮಿತ್ ಭಾರತೀಯ ಸಮಾಜ ಮತ್ತು ಸಂಸ್ಕೃತಿಯ ಕುರಿತು ಅಭೂತಪೂರ್ವವಾದ ಮಾಹಿತಿಗಳನ್ನು ಕಲೆ ಹಾಕಿದ್ದು, ಅವುಗಳ ಆಧಾರದ ಮೇಲೆ ಈ ಗ್ರಂಥವನ್ನು ರಚನೆ ಮಾಡಿದ್ದನು. ಹಾಗಾಗಿ, 1911ರಿಂದ ಸರಿಸುಮಾರು 20ನೇ ಶತಮಾನದವರೆಗೂ ಅವನ ಕೃತಿ ಭಾರತೀಯ ವಿಶ್ವವಿದ್ಯಾನಿಲಯದಲ್ಲಿ ಒಂದು ಅಧಿಕೃತ ಪಠ್ಯವಾಗಿ ಪರಿಗಣಿಸಲಾಗಿತ್ತು. ಅವನೊಬ್ಬ, ಆಡಳಿತಗಾರನಾಗಿ, ನಾಗರಿಕ ಸೇವೆಯಲ್ಲಿ ಸಕ್ರಿಯನಾಗಿದ್ದರೂ ಒಬ್ಬ ವೃತ್ತಿಪರ ಇತಿಹಾಸಕಾರನಂತೆ, ತನ್ನ ಕೃತಿ ರಚನೆ ಮತ್ತು ಮಾಹಿತಿಗಳ ಖಚಿತತೆ ವಿಚಾರವಾಗಿ ಸಮಗ್ರ ಜ್ಞಾನವನ್ನು ಪಡೆದು ಆ ಕಾಲದ ಸಂಶೋಧನಾ ಮಾರ್ಗದರ್ಶಿ ಅನುಸರಿಸಬೇಕಾದ ವಿಧಿವಿಧಾನಗಳ ನೆಲೆಯಲ್ಲಿ ತನ್ನ ಅಭಿಪ್ರಾಯಗಳನ್ನು ಮಂಡನೆ ಮಾಡಿದ್ದನು. ಬಹುಶಃ 1885ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನೇತೃತ್ವದಲ್ಲಿ ಆರಂಭವಾದ ರಾಷ್ಟ್ರೀಯ ಆಂದೋಲನ ಮತ್ತು 1905ರ ಬಂಗಾಳ ವಿಭಜನೆಯ ವಿಚಾರವಾಗಿ ಉದ್ಭವಿಸಿದ ರಾಜಕೀಯ ಪ್ರತಿರೋಧಗಳು ಭಾರತದ ಇತಿಹಾಸದ ಕುರಿತಾದ ವಿನ್ಸೆಂಟ್ ಸ್ಮಿತ್‌ನ ತೀರ್ಮಾನಗಳ ಮೇಲೆ ಪ್ರಭಾವ ಬೀರಿರಬಹುದು. ಏಕೆಂದರೆ, ತನ್ನ ಅಭಿಪ್ರಾಯಗಳಲ್ಲಿ ಪದೇ ಪದೇ ಅವನು ಭಾರತದ ಒಳಗಿನ ರಾಜಕೀಯ ಬಿಕ್ಕಟ್ಟು, ಅರಾಜಕತೆ, ಅಭದ್ರತೆ ಮತ್ತು ಬಲಿಷ್ಠ ಸರಕಾರ ಇಲ್ಲದಿರುವುದರ ಕುರಿತು ಉಲ್ಲೇಖ ಮಾಡುತ್ತಾನೆ. ಜೊತೆಗೆ, ಪ್ರಾಚೀನ ಮತ್ತು ಮಧ್ಯಕಾಲೀನ ಸಂದರ್ಭದಲ್ಲಿ ಬಲಿಷ್ಠ ಸಾಮ್ರಾಜ್ಯಗಳ ಅವನತಿಯಿಂದಾಗಿ ಭಾರತೀಯರಿಗೆ ಈ ದುಃಸ್ಥಿತಿ ಬಂದಿದ್ದು, ಬ್ರಿಟಿಷ್ ಸಾಮ್ರಾಜ್ಯಶಾಹಿ ಪ್ರಭುತ್ವದ ಸ್ಥಾಪನೆ ಭಾರತೀಯರಿಗೆ ಹೊಸ ಬೆಳಕನ್ನು ನೀಡುತ್ತದೆ, ಬ್ರಿಟಿಷರ ಆಡಳಿತದಿಂದ ಇಲ್ಲಿ ರಾಜಕೀಯ ಸ್ಥಿರತೆ, ಅಭಿವೃದ್ಧಿ ಹಾಗೂ ಹೊಸ ಯುಗ ಆರಂಭದ ಆಶ್ವಾಸನೆ ನೀಡುತ್ತದೆ ಎಂಬ ಮಾಹಿತಿಯನ್ನು ಒದುವ ವರ್ಗಕ್ಕೆ ರವಾನೆ ಮಾಡುತ್ತಾನೆ. ಆದರೆ, ಭಾರತೀಯ ರಾಷ್ಟ್ರೀಯ ಆಂದೋಲನ ಈಗಿನ ಪರಿಸ್ಥಿತಿಯಿಂದ ಭಾರತೀಯರನ್ನು ಪಾರು ಮಾಡಲು ಅಸಾಧ್ಯ ಮತ್ತು ಆ ಮೂಲಕ ಭಾರತೀಯರು ಬ್ರಿಟಿಷರ ಆಡಳಿತದಿಂದ ವಿಮುಕ್ತವಾಗಿ ತಮ್ಮ ರಾಜಕೀಯ ಭವಿಷ್ಯ ನಿರ್ಮಿಸಬೇಕೆಂಬ ಪ್ರಶ್ನೆಗಳಿಗೆ ವಿನ್ಸೆಂಟ್ ಸ್ಮಿತ್ ಹೆಚ್ಚೇನು ಗೌರವ ಕೊಡುವುದಿಲ್ಲ.

ಈ ನಡುವೆ ಭಾರತೀಯ ರಾಜಕೀಯ ಪ್ರಶ್ನೆ ಬ್ರಿಟಿಷ್ ಆಡಳಿತ ಅಂತ್ಯಗೊಳ್ಳುವ ಹೊತ್ತಿಗೆ ಹೆಚ್ಚು ಹೆಚ್ಚು ಪ್ರಜ್ವಲಿಸತೊಡಗಿತು ಮತ್ತು ಭಾರತೀಯ ರಾಷ್ಟ್ರೀಯ ಆಂದೋಲನದ ರಾಜಕೀಯ ಹೊಳವುಗಳನ್ನು ಪ್ರತಿನಿಧಿಸುವ ಚಾರಿತ್ರಿಕ ಗ್ರಂಥ 1934ರಲ್ಲಿ ಪ್ರಕಟವಾಯಿತು. ಎಡ್ವರ್ಡ್ ಥಾಮ್ಸನ್ ಮತ್ತು ಜಿ.ಟಿ. ಗ್ಯಾರೆಟ್ ಸಂಪಾದಿಸಿದ ‘ರೈಸ್ ಆ್ಯಂಡ್ ಪುಲ್‌ಪಿಲ್‌ಮೆಂಟ್ ಆಫ್ ಬ್ರಿಟಿಷ್ ರೂಲ್ ಇನ್ ಇಂಡಿಯಾ’ ಎಂಬ ಕೃತಿಯೂ ಭಾರತೀಯ ರಾಷ್ಟ್ರೀಯ ಕನಸುಗಳನ್ನು ಅನಾವರಣ ಮಾಡುವ ಕೃತಿಯಾಗಿದ್ದು, ಈ ಹಿಂದೆ ಬ್ರಿಟಿಷ್ ಬರಹಗಾರರು ಭಾರತೀಯ ಸಮಾಜ ಮತ್ತು ಭಾರತೀಯರ ಕುರಿತು ನೀಡಿರುವ ಚಿತ್ರಣಕ್ಕಿಂತ ಭಿನ್ನವಾದುದಾಗಿದೆ. ಥಾಮ್ಸನ್ ಒಬ್ಬ ಕ್ರೈಸ್ತ ಪಾದ್ರಿಯಾಗಿದ್ದು, ಬಂಗಾಳದ ಕಾಲೇಜಿನಲ್ಲಿ ಹಲವು ವರ್ಷಗಳಲ್ಲಿ ಅಧ್ಯಾಪಕನಾಗಿ ಕಾರ್ಯ ನಿರ್ವಹಿಸಿದ್ದು, ರವೀಂದ್ರನಾಥ ಟಾಗೂರ್‌ರವರ ಸ್ನೇಹಿತನಾಗಿದ್ದನು. ಗ್ಯಾರೆಟ್ ಮಾತ್ರ ಭಾರತದಲ್ಲಿ ಅಧಿಕಾರಿಯಾಗಿ 11 ವರ್ಷ ಬ್ರಿಟಿಷ್ ಆಡಳಿತದ ಸೇವೆಯಲ್ಲಿ ಇದ್ದವನು. ಆ ನಂತರ ಇಂಗ್ಲೆಂಡಿನ ಲೇಬರ್ ಪಾರ್ಟಿ ರಾಜಕಾರಣಿಯಾಗಿ ಕಾರ್ಯ ನಿರ್ವಹಿಸಿದ್ದನು. ಇವರಿಬ್ಬರೂ ಈ ಹಿಂದಿನ ಇತಿಹಾಸಕಾರರು ಭಾರತದ ಕುರಿತಾದ ತೀರ್ಮಾನಗಳನ್ನು ಪೂರ್ವಗೃಹದಿಂದ ಮಂಡನೆ ಮಾಡುವುದಿಲ್ಲ. ಆ ಕಾರಣಕ್ಕಾಗಿಯೆ ಬ್ರಿಟಿಷ್ ಸಂಪ್ರದಾಯವಾದಿಗಳ ಟೀಕೆಗೆ ಒಳಗಾಗ ಬೇಕಾಯಿತು. ಆದರೆ, ಭಾರತೀಯರ ಪ್ರಶಂಸೆಗೆ ಅರ್ಹರಾದರೂ ಈ ಗ್ರಂಥ ಭಾರತಕ್ಕೆ ಸ್ವಾತಂತ್ರ್ಯ ಬರುವ 15 ವರ್ಷಗಳ ಮೊದಲು ಪ್ರಕಟವಾಗಿದ್ದು, ಬ್ರಿಟಿಷರ ಬದಲಾದ ಮನಸ್ಥಿತಿಯನ್ನು ಪ್ರಕಟಿಸುತ್ತದೆ.

ಇಲ್ಲಿಯವರೆಗೆ ನಾವು ನೋಡಿರುವ ಕೃತಿಗಳು ಬಹುತೇಕ ಪಠ್ಯ ಪುಸ್ತಕಗಳಾಗಿ ಪ್ರಸಿದ್ಧಿ ಪಡೆದಿರುವವುಗಳು ಮತ್ತು ಭಾರತಕ್ಕೆ ಆಡಳಿತಗಾರರಾಗಿ ಭೇಟಿಕೊಟ್ಟ ಅಧಿಕಾರಿ/ಇತಿಹಾಸಕಾರರ ಭಾವನೆಗಳು ಮತ್ತು ಭಾರತವನ್ನು ಅವರು ಅರ್ಥ ಮಾಡಿಕೊಂಡಿರುವ ದೃಷ್ಟಿಕೋನಗಳನ್ನು ಪರಿಚಯಿಸುತ್ತವೆ. ಇದೇ ಅವಧಿಯಲ್ಲಿ ಚಾರಿತ್ರಿಕವಾಗಿ ಮಹತ್ವದ ಹಲವು ಕೃತಿಗಳು ಬೆಳಕಿಗೆ ಬಂದಿವೆ. ಅ ಕೃತಿಗಳಲ್ಲಿ ಭಾರತದಲ್ಲಿ ಆರಂಭಗೊಂಡ ವಸಾಹತುಶಾಹಿ ಯೋಜನೆಗಳು, ಕಾರ್ಯಸೂಚಿಗಳು ಮತ್ತು ಚಿಂತನೆಗಳು ಪ್ರಕಟವಾಗಿವೆ. ಅವುಗಳು ಈ ಕೆಳಗಿನಂತಿವೆ. 1. ಆಧುನಿಕ ಪಾಶ್ಚಾತ್ಯ ನಾಗರಿಕತೆ ಶ್ರೇಷ್ಠವಾದುದು ಎಂಬ ವಾದ: ಭಾರತದಲ್ಲಿ ಬ್ರಿಟಿಷರು ಭೇಟಿ ಕೊಡುವವರೆಗೆ ರಾಜಕೀಯ ಒಗ್ಗಟ್ಟು ಇರಲಿಲ್ಲ ಮತ್ತು 18ನೇ ಶತಮಾನ ಪ್ರಕ್ಷುಬ್ಧವಾದುದು, ಅರಾಜಕತೆ ಮತ್ತು ಬರ್ಬರತೆಯ ಕಾಲವಾಗಿದ್ದು, ಬ್ರಿಟಿಷರು ರಕ್ಷಕರಾಗಿ ಬಂದರು ಎಂಬುದು.

2. ಭಾರತದ ಕುರಿತು ಬ್ರಿಟಿಷ್ ಇತಿಹಾಸಕಾರರು ತೀರ್ಮಾನ ಕೊಡುವಾಗ ಡಾರ್ವಿನನ ವಿಕಾಸವಾದವನ್ನು ಅನುಸರಿಸಿದ್ದರು. ಅದರ ಪ್ರಕಾರ ಇತಿಹಾಸವು ಜನತೆ ಮತ್ತು ಸಂಸ್ಕೃತಿಗಳ ನಡುವಿನ ಸಂಘರ್ಷವಿದ್ದಂತೆ, ಪ್ರಾಣಿ ಪ್ರಾಣಿಗಳ ನಡುವಿನ ಸಂಘರ್ಷವಾಗಿದ್ದು, ಬ್ರಿಟಿಷರು ಭಾರತವನ್ನು ಇಂತಹ ಸಂಘರ್ಷದಿಂದ ಪಾರು ಮಾಡಲು ಬಂದಿದ್ದು, ಶ್ರೇಷ್ಠರು. ಹಾಗಾಗಿ ಭಾರತವನ್ನು ಆಳಲು ಅವರು ಶಕ್ತರು.

3. ಭಾರತೀಯ ಸಮಾಜವು ತಟಸ್ಥವಾದುದು, ಅಭಿವೃದ್ಧಿ ಹೊಂದಲು ಬೇಕಾದ ಯಾವ ಪರಿಕರಗಳೂ ಇಲ್ಲ. ಅದರೆ ಬ್ರಿಟಿಷರು ಅಭಿವೃದ್ಧಿ ಹಾದಿಯನ್ನು ಭಾರತೀಯರಿಗೆ ತೋರಿಸಿದರು. ಹಾಗಾಗಿ, ಭಾರತಕ್ಕೆ ಬ್ರಿಟನ್ ಆದರ್ಶ.

4. ಭಾರತೀಯ ರಾಜರನ್ನು ಮತ್ತು ಸಾಮ್ರಾಜ್ಯ ನಿರ್ಮಾಪಕರು ಮಹಾಕಾವ್ಯ ಹಾಗೂ ಪುರಾಣಗಳಲ್ಲಿ ಬಂದು ಹೋದ ಹೀರೋಗಳಾಗಿದ್ದು, ವಾಸ್ತವದಲ್ಲಿ ಅಂತಹವರು ಇಲ್ಲ.

5. ಆರಂಭದಲ್ಲಿ ವಸಾಹತುಸಾಹಿ ಚರಿತ್ರೆಕಥನವು ಭಾರತೀಯ ರಾಷ್ಟ್ರೀಯ ಆಂದೋಲನಕ್ಕೆ ವಿರುದ್ಧವಾಗಿದ್ದು, ಆ ಬಗೆಯ ಆಂದೋಲನವು ಬ್ರಿಟಿಷ್ ಪ್ರಭುತ್ವಕ್ಕೆ ಸವಾಲುವೊಡ್ದುವಂತಹದ್ದು. ಆನಂತರದ ಬರಹಗಳು ಅನುಕಂಪವನ್ನು ಪ್ರಕಟಿಸಿದವು.

ಒಟ್ಟಾರೆಯಾಗಿ ವಸಾಹತುಸಾಹಿ ಚರಿತ್ರೆಕಥನವು ಸಾಮ್ರಾಜ್ಯಶಾಹಿ ಯೋಜನೆಯ ಅಸ್ತ್ರವಾಗಿದ್ದು, ಭಾರತದಲ್ಲಿ ಬ್ರಿಟಿಷರ ಸಾಂಸ್ಕೃತಿಕ ಯಜಮಾನಿಕೆಯನ್ನು ಹೇರಿ ಬ್ರಿಟಿಷ್ ಆಡಳಿತಕ್ಕೆ ಕಾನೂನುಬದ್ಧವಾದ ಅಂಗೀಕಾರವನ್ನು ಪಡೆಯುವ ಕುತಂತ್ರ ರಾಜಕಾರಣ ಅಡಗಿದೆ.

ಅಂದರೆ, ವಸಾಹತು ಚರಿತ್ರೆ ಕಥನ ಒಂದು ನಿರ್ದಿಷ್ಟ ಮಾದರಿಯಾಗಿದ್ದು, ಭಾರತದಂತಹ ಹಿಂದುಳಿದ ದೇಶವನ್ನು ಆಧುನಿಕ ಯೂರೋಪಿನ ನಾಗರಿಕ ಮತ್ತು ರಾಜಕೀಯ ಮಾದರಿಗಳನ್ನು ಸಾಮ್ರಾಜ್ಯಶಾಹಿ ಆಡಳಿತದ ಅಡಿಯಲ್ಲಿ ಪರಿವರ್ತಿಸುವ ಆಶಯ ಇದೆ. ಇದು ಬ್ರಿಟಿಷರ ಸಿವಿಲೈಸಿಂಗ್ ಮಿಶನ್ ಕಾರ್ಯ ಸೂಚಿಯೂ ಹೌದು. ಈ ಪರಿಕಲ್ಪನೆಗಳು ವಸಾಹತುಶಾಹಿ ಆಡಳಿತದ ಭಾಷೆ ಮತ್ತು ಪರಂಪರೆಯನ್ನು ಪ್ರತಿನಿಧಿಸುತ್ತವೆ. ಆದಾಗ್ಯೂ ಭಾರತೀಯರು ಮತ್ತು ಇಲ್ಲಿನ ಸಮಾಜ ಹಾಗೂ ಸಂಸ್ಕೃತಿಯ ಕುರಿತು ಅನುಕಂಪ ತೋರಿಸಿದ ಹಲವು ಅಧಿಕಾರಿಗಳು ಹಾಗೂ ವಿದ್ವಾಂಸರು ಬ್ರಿಟಿಷ್ ಆಡಳಿತದ ಸೇವೆಯಲ್ಲಿದ್ದರು. ಥಾಮಸ್ ಮುನ್ರೋ, ಚಾರ್ಲ್ಸ್ ಟಾವೇಲಿಯನ್ ಇತ್ಯಾದಿ ಅಧಿಕಾರಿಗಳು ಲೂಟಿಕೋರ ಬ್ರಿಟಿಷ್ ಸರಕಾರದ ಭಾಗಿಗಳಾಗಿದ್ದರೂ, ಅವರಿಗೆ ಭಾರತದ ಕುರಿತು ಪೂರ್ವಗ್ರಹಪೀಡಿತ ದೃಷ್ಟಿಕೋನಗಳಿರಲಿಲ್ಲ.

ಈ ಎಲ್ಲಾ ನಕಾರಾತ್ಮಕ ಪ್ರತಿಕ್ರಿಯೆಗಳು ವಸಾಹತು ಬರವಣಿಗೆಗಳಲ್ಲಿ ಪ್ರಕಟವಾಗಿದ್ದರೂ, ಕೆಲವು ಸಕಾರಾತ್ಮಕ ಪರಿಣಾಮಗಳೂ ಇವೆ.

1. ವಸಾಹತು ಚರಿತ್ರೆಕಥನವು ಆ ಕಾಲದ ಆಧುನಿಕ ಯುರೋಪಿನ ಚರಿತ್ರೆ ರಚನಾ ಮಾದರಿಯನ್ನೇ ಅನುಸರಿಸಿದ್ದರೂ, ಅದರ ಕೊಡುಗೆ ಪ್ರಶಂಶನೀಯವಾದದ್ದು. ಏಶ್ಯಾಟಿಕ್ ಸೊಸೈಟಿ ಮತ್ತು ಆರ್ಕಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ಇತ್ಯಾದಿ ಸಂಸ್ಥೆಗಳ ಅರಂಭದಿಂದ ಭಾರತೀಯ ಇತಿಹಾಸಕಾರರಿಗೆ ಆ ನಂತರ ವಸ್ತುನಿಷ್ಠ ಸಂಶೋಧನೆಯಲ್ಲಿ ತೋಡಗಿಸಿಕೊಳ್ಳಲು ದಾರಿ ಮಾಡಿಕೊಟ್ಟಿತು. ಜನಾಂಗೀಯ ಪೂರ್ವಗ್ರಹವಿದ್ದರೂ ಬ್ರಿಟಿಷ್ ವಸಾಹತುಶಾಹಿ ಇತಿಹಾಸಕಾರರು ಸಂಗ್ರಹಿಸಿದ ದಾಖಲೆಗಳು ಅನನ್ಯವಾದವುಗಳು. ಮುಖ್ಯವಾಗಿ, ಚರಿತ್ರೆ ಬೋಧನೆ ಸಂಪ್ರದಾಯವು ಮೂರು ವಿಶ್ವವಿದ್ಯಾನಿಲಯಗಳಲ್ಲಿ ಆರಂಭವಾಯಿತು-ಕೋಲ್ಕತಾ, ಮುಂಬೈ ಮತ್ತು ಮದ್ರಾಸ್(1857-58). ಇದು ಊಹಿಸಲಾಗದ ಫಲಿತಾಂಶ ನೀಡಿತು.

 2. ವಸಾಹತು ಆಡಳಿತದ ಪೋಷಣೆಯಲ್ಲಿಯೇ ಇತಿಹಾಸ ಬೋಧನೆಯನ್ನು ಶಿಕ್ಷಣ ಸಂಸ್ಥೆಗಳಲ್ಲಿ ಆರಂಭಿಸಲಾಯಿತು ಮತ್ತು ಸಾಮ್ರಾಜ್ಯಶಾಹಿ ಚಿಂತನೆಯ ಪರವಾಗಿದ್ದು ವಸ್ತುನಿಷ್ಠತೆಯನ್ನು ಮರೆಮಾಚಿತ್ತು. ಏಕೆಂದರೆ, ವಸಾಹತು ಕಥನದ ವರ್ಗಕ್ಕೆ ಸೇರಿದ ವಿದ್ವಾಂಸರು ಶಿಕ್ಷಣಕ್ಕೆ ಸಂಬಂಧಿಸಿದ ಪಠ್ಯಗಳ ರಚನೆಕಾರರು. ಆದಾಗ್ಯೂ, ಕೆಲವು ಸಕಾರಾತ್ಮಕ ಪಲಿತಾಂಶಗಳು ಭಾರತೀಯರಿಗೆ ಲಭಿಸಿವೆ. ಒಂದನೆಯಾದಾಗಿ, ಜೇಮ್ಸ್ ಮಿಲ್ ಅಥವಾ ಎಲ್‌ಫಿನ್‌ಸ್ಟನ್‌ರವರ ಹಿಸ್ಟರಿ ಆಫ್ ಇಂಡಿಯಾ ಕೃತಿಗಳ ಜೊತೆಗೆ, ಭಾರತೀಯ ವಿದ್ಯಾರ್ಥಿಗಳು ಇಂಗ್ಲೆಂಡ್ ಮತ್ತು ಐರೋಪ್ಯ ದೇಶಗಳ ಇತಿಹಾಸದ ಕೃತಿಗಳನ್ನು ಓದುವ ಅವಕಾಶ ಪಡೆದಿದ್ದು, ಅದರಿಂದ ವಿದ್ಯಾವಂತ ಭಾರತೀಯರಿಗೆ ಯೂರೋಪ್ ಇತಿಹಾಸದಲ್ಲಿ ಚಿರಪರಿಚಿತವಾದ ಪರಿಕಲ್ಪನೆಗಳಾದ- ಲಿಬರ್ಟಿ, ಸ್ವಾತಂತ್ರ್ಯ ಸಂಗ್ರಾಮ, ಮಜನಿ, ಗಾರಿಬಾರ್ಡಿಯಂತಹ ನಾಯಕರ ಹೋರಾಟಗಳ ವಿವಿಧ ಮಜಲುಗಳ ಕುರಿತು ವಿಶೇಷವಾದ ಅಧ್ಯಯನ ಮಾಡಲು ಸಾಧ್ಯವಾಯಿತು. ಆದ ಕಾರಣ ಭಾರತದಲ್ಲಿ ಆರಂಭದಲ್ಲಿ ವಸಾಹತು ವಿರೋಧಿ ಆಂದೋಲನಗಳಲ್ಲಿ ಭಾಗವಹಿಸಿದ ಮಂದಗಾಮಿ ರಾಜಕಾರಣಿಗಳಿಗೆ ಮೇಲೆ ಉಲ್ಲೇಖಿಸಿದ ಚಿಂತನೆಗಳ ಉಪಯುಕ್ತತೆ ಅರಿವಾಯಿತು. ಎರಡನೆಯಾದಾಗಿ, ವೃತ್ತಿಪರ ಭಾರತೀಯ ಇತಿಹಾಸಕಾರರಿಂದ ಇತಿಹಾಸ ರಚನೆಗೆ ಅವಕಾಶಗಳು ಲಭ್ಯವಾದವು. ಇದರಿಂದಾಗಿ ಇತಿಹಾಸದ ಮರುನಿರೂಪಣೆಯು ಕೇವಲ ಬ್ರಿಟಿಷ್ ವಿದ್ವಾಂಸರಿಂದ ದಾಖಲೀಕೃತಿ ಸಂಶೋಧನೆ ಎಂಬ ಏಕಸ್ವಾಮಿತ್ವದ ಕಪಿಮುಷ್ಟಿಯಿಂದ ಬಿಡುಗಡೆಗೊಂಡು ಭಾರತೀಯರು ವಸ್ತುನಿಷ್ಠತೆ ಕಾಯ್ದುಕೊಳ್ಳುವ ಚರಿತ್ರೆರಚನಾ ಪರಂಪರೆಯಲ್ಲಿ ಮುಂಚೂಣಿಗೆ ಬಂದರು. ಬ್ರಿಟಿಷರನ್ನು ಹೊರತುಪಡಿಸಿ, ಉತ್ಕೃಷ್ಟ ಸಂಶೋಧನೆಯ ಭಾರತೀಯ ಎಶ್ಯಾಟಿಕ್ ಸೊಸೈಟಿ, ವಿಶ್ವವಿದ್ಯಾನಿಲಯ, ಕಾಲೇಜು ಮತ್ತು ಸರಕಾರಿ ಸಂಸ್ಥೆಗಳಲ್ಲಿ ಗುರುತಿಸಿಕೊಂಡರು.

 3. ಮೂರನೆಯದು ಪ್ರಾಮುಖ್ಯವಾದುದು. ನಾಗರೀಕ ಸೇವೆಯಲ್ಲಿ ತೊಡಗಿಸಿಕೊಂಡು ಇತಿಹಾಸಕಾರರಾಗಿ ಬರೆದಿರುವ ಇತಿಹಾಸದ ಸಂಪುಟಗಳನ್ನು ಓದಿದ ಭಾರತೀಯ ವಿದ್ಯಾರ್ಥಿಗಳು ಆ ಸಂಪುಟಗಳನ್ನು ವಿಮರ್ಶೆಗೆ ಒಳಪಡಿಸುವ ಮಟ್ಟಕ್ಕೆ ತಲುಪಿದರು. ಬ್ರಿಟಿಷ್ ಇತಿಹಾಸಕಾರರು ನಮ್ಮ ಮುಂದೆ ಮಂಡಿಸಿದ ಚರಿತ್ರೆಕಥನವು ಪೂರ್ವಗ್ರಹದಿಂದ ಕೂಡಿದ್ದು, ಅದರ ಮರುನಿರೂಪಣೆಗೆ ಒಳಪಡಿಸಬೇಕೆಂಬ ಧ್ವನಿಯನ್ನು ಗಟ್ಟಿಯಾಗಿ ಪ್ರಕಟಿಸಿದರು. ಭಾರತೀಯ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸ ಮುಗಿಸಿದವರಲ್ಲಿ ಒಬ್ಬರಾದ ಬಂಕಿಮ ಚಂದ್ರ ಚಟರ್ಜಿ ಬ್ರಿಟಿಷರು ನೀಡಿರುವ ಇತಿಹಾಸಕಥನದ ವಿಚಾರವಾಗಿ ದ್ವನಿಯೆತ್ತಿ ‘‘ನಮ್ಮ ದೇಶದ ಇತಿಹಾಸವನ್ನು ನಾವು ಯಾವಾಗ ಬರೆಯುವುದು?’’ ಎಂದು ಪದೇ ಪದೇ ಕೇಳಿದರು. ರವೀಂದ್ರನಾಥ ಟಾಗೋರ್‌ರವರು ‘‘ಬೇರೆ ದೇಶದ ಚರಿತ್ರೆಯ ಮೂಲಕ ಆ ದೇಶದ ಜನತೆಗೆ ಅವರ ದೇಶದ ಇತಿಹಾಸದ ಪರಿಚಯವಾಗುತ್ತದೆ. ಆದರೆ, ನಮ್ಮ ದೇಶದ ಕುರಿತು ಬ್ರಿಟಿಷರು ರಚಿಸಿದ ಇತಿಹಾಸ ಸಂಪುಟಗಳು ನಮ್ಮ ದೇಶದ ಕುರಿತು ನಮ್ಮನ್ನು ಮಸುಕುಗೊಳಿಸುತ್ತವೆ ಮತ್ತು ಆ ಚರಿತ್ರೆಕಥನದಲ್ಲಿ ನಮ್ಮ ತಾಯ್ನೆಡಿನ ಅರಿವು ಆಗುವುದೇ ಇಲ್ಲ’’ ಎಂದು ಅಭಿಪ್ರಾಯಪಡುತ್ತಾರೆ. ಇದು ಆ ಕಾಲದಲ್ಲಿದ್ದ ಶ್ರೇಷ್ಠ ಭಾರತೀಯ ವಿದ್ವಾಂಸರ ದೃಷ್ಟಿಕೋನಗಳಾಗಿದ್ದು, ಇದರಿಂದ ಆಗಿನ ರಾಷ್ಟ್ರೀಯವಾದಿಗಳು ನಮ್ಮ ದೇಶದ ಅಸ್ಮಿತೆಯನ್ನು ಕಂಡುಕೊಳ್ಳಲು ಪ್ರೇರಕಗಳಾದವು ಮತ್ತು ರಾಷ್ಟ್ರೀಯವಾದಿ ಚರಿತ್ರೆಕಥನದ ರಚನೆಗೆ ಚಾಲನೆ ನೀಡಿ, ಬ್ರಿಟಿಷ್ ವಸಾಹತುಶಾಹಿ ಚರಿತ್ರೆಕಥನದ ಯಜಮಾನಿಕೆಗೆ ಪೂರ್ಣವಿರಾಮ ಹಾಕಿತು. ಹಾಗಾಗಿ, ಚರಿತ್ರೆ ಕಥನದ ರಚನೆಯ ಮೂಲಕ ರಾಷ್ಟ್ರದ ಅಸ್ಮಿತೆ ಕುರಿತು ಜ್ಞಾನೋದಯಕ್ಕೆ ಅನುವು ಮಾಡಿಕೊಟ್ಟಿತು.

  ಕೊನೆಯದಾಗಿ, ವಸಾಹತುಶಾಹಿ ಚರಿತ್ರೆಕಥನ ಪರಿಕಲ್ಪನೆಯನ್ನು ಎರಡು ನೆಲೆಯಲ್ಲಿ ಬಳಸಲಾಗಿತ್ತು. ಒಂದು ವಸಾಹತು ರಾಷ್ಟ್ರಗಳ ಇತಿಹಾಸಕ್ಕೆ ಸಂಬಂಧಿಸಿದ್ದು. ಇನ್ನೊಂದು ವಸಾಹತು ಯಜಮಾನಿಕೆಯನ್ನು ಪ್ರತಿಪಾದಿಸುವ ಸಿದ್ಧಾಂತಗಳ ಪ್ರಭಾವಕ್ಕೆ ಒಳಗಾದ ಗ್ರಂಥಗಳು. ಇವತ್ತು ವಸಾಹತು ಚರಿತ್ರೆಕಥನವನ್ನು ಕುರಿತು ಬರೆಯುವ ಇತಿಹಾಸಕಾರರು ಎರಡನೇ ಪರಿಕಲ್ಪನೆಯನ್ನು ಅನುಸರಿಸಿದರು. ವಾಸ್ತವದಲ್ಲಿ ವಸಾಹತು ಅಧಿಕಾರಿಗಳು ವಸಾಹತು ರಾಷ್ಟ್ರಗಳ ಚರಿತ್ರೆ ಬರೆಯುವಾಗ ವಸಾಹತು ಪ್ರಭುತ್ವದ ಆಡಳಿತದ ಸ್ವರೂಪವನ್ನು ವಿವರಿಸುತ್ತಾ ಅವರ ಆಡಳಿತವನ್ನು ಸಮರ್ಥಿಸುವ ಪ್ರಯತ್ನ ಮಾಡುತ್ತಾರೆ. ಹಾಗಾಗಿ, ಇವರ ಕೃತಿಗಳಲ್ಲಿ ಯಥೇಚ್ಛವಾಗಿ ಭಾರತೀಯ ಸಮಾಜ ಮತ್ತು ಸಂಸ್ಕೃತಿಯ ಕುರಿತು ನಕಾರಾತ್ಮಕ ಟೀಕೆಗಳು ಪ್ರಜ್ಜಲಿಸುತ್ತವೆ. ಜೊತೆಗೆ, ಪಾಶ್ಚಾತ್ಯ ಸಂಸ್ಕೃತಿ, ಮೌಲ್ಯಗಳು ಮತ್ತು ಭಾರತದಲ್ಲಿ ಸಾಮ್ರಾಜ್ಯ ಕಟ್ಟಿದ ವ್ಯಕ್ತಿಗಳನ್ನು ವೈಭವೀಕರಿಸುವ ಪ್ರಯತ್ನಗಳು ಕಾಣುತ್ತೇವೆ. ಈ ಸಂಬಂಧ ಜೇಮ್ಸ್ ಮಿಲ್, ಎಲ್‌ಪಿನ್‌ಸ್ಟನ್, ವಿನ್ಸೆಂಟ್ ಸ್ಮಿತ್ ಮತ್ತು ಇತರರು ರಚಿಸಿದ ಕೃತಿಗಳು ಉತ್ತಮ ಉದಾಹರಣೆಗಳು. ಅವರು ವಸಾಹತುಶಾಹಿ ಚರಿತ್ರೆಕಥನದ ಹರಿಕಾರರಾಗಿ ವಸಾಹತೀಕರಣಕ್ಕೆ ಒಳಗಾದ ಜನತೆಯನ್ನು ಕೀಳಾಗಿ ನೋಡಿ ಸಾಮ್ರಾಜ್ಯಶಾಹಿ ರಾಷ್ಟ್ರಗಳನ್ನು ಹೊಗಳಿದ್ದಾರೆ ಅಲ್ಲದೆ, ಭಾರತೀಯ ಸಮಾಜ ತಟಸ್ಥ, ಅನಾಗರಿಕವಾದುದೆಂದು, ಸಾಂಸ್ಕೃತಿಕವಾಗಿ ಅತ್ಯಂತ ಹಿಂದುಳಿದಿದೆ ಎಂದು ತಾತ್ಸಾರದಿಂದ ನೋಡಿದ್ದಾರೆ. ಆದರೆ, ಬ್ರಿಟಿಷ್ ಸಮಾಜ ಮುಂದುವರಿದ ನಾಗರಿಕತೆ ಹೊಂದಿದ್ದು, ಅದು ಶ್ರೇಷ್ಠವಾದುದಾಗಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತ ದಾರಿಯನ್ನು ಹಿಡಿದಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top