ಅವಸಾನದ ಅಂಚಿನಲ್ಲಿ ವಿಶ್ವವಿದ್ಯಾನಿಲಯಗಳು: ಡಾ. ಪುರುಷೋತ್ತಮ ಬಿಳಿಮಲೆ | Vartha Bharati- ವಾರ್ತಾ ಭಾರತಿ

ಅವಸಾನದ ಅಂಚಿನಲ್ಲಿ ವಿಶ್ವವಿದ್ಯಾನಿಲಯಗಳು: ಡಾ. ಪುರುಷೋತ್ತಮ ಬಿಳಿಮಲೆ

ನನ್ನ ಪ್ರಕಾರ ದೇಶದ ಕೆಲವು ವಿಶ್ವವಿದ್ಯಾನಿಲಯಗಳು ಚಿಂತಾಜನಕ ಮಾತ್ರವಲ್ಲ, ಅವುಗಳು ಸತ್ತುಹೋಗಿವೆ. ಅವುಗಳಿಗೆ ಹೇಗೆ ಜೀವ ಬರುತ್ತದೆ, ಅವುಗಳನ್ನು ಹೇಗೆ ಜೀವ ಮಾಡುವುದೆಂದು ನನಗಂತೂ ಗೊತ್ತಿಲ್ಲ. ಆದರೆ ಆಳುವ ವರ್ಗಗಳಿಗೆ ವಿಶ್ವವಿದ್ಯಾನಿಲಯಗಳೆಂದರೆ ಬಹಳ ಖುಷಿ, ಯಾಕೆಂದರೆ ಅವು ಮಾತನಾಡುವುದಿಲ್ಲ, ಅವುಗಳಿಗೊಂದಿಷ್ಟು ದುಡ್ಡುಕೊಟ್ಟರೆ ಅವುಗಳ ಪಾಡಿಗೆ ಬಾಲ ಅಲ್ಲಾಡಿಸಿಕೊಂಡಿರುತ್ತದೆ. ಇದು ದೇಶಕ್ಕೆ ಬಹಳ ಅಪಾಯಕಾರಿಯಾದ ಬೆಳವಣಿಗೆ.

ಬೇರೆ ಬೇರೆ ಸಾಮಾಜಿಕ ಮತ್ತು ರಾಜಕೀಯ ಕಾರಣಗಳಿಗಾಗಿ ಸುದ್ದಿಯಲ್ಲಿರುವ ದಿಲ್ಲಿಯ ಜೆಎನ್‌ಯು (ಜವಾಹರ ಲಾಲ್ ನೆಹರೂ ವಿಶ್ವವಿದ್ಯಾನಿಲಯ)ನಲ್ಲಿ ಹಾಸ್ಟೆಲ್ ಶುಲ್ಕ ಏರಿಕೆಯನ್ನು ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಬಗ್ಗೆ ಜೆಎನ್‌ಯು ಕನ್ನಡ ವಿಭಾಗದ ಮುಖ್ಯಸ್ಥ, ಸಾಹಿತಿ, ಸಂಶೋಧಕ ಡಾ. ಪುರುಷೋತ್ತಮ ಬಿಳಿಮಲೆ ಅವರೊಂದಿಗೆ ‘ವಾರ್ತಾಭಾರತಿ’ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಪ್ರ: ಜೆಎನ್‌ಯುವಿನಲ್ಲಿ ಶುಲ್ಕ ಏರಿಕೆಯ ವಿಚಾರದಲ್ಲಿ ಭಾರೀ ಗದ್ದಲವಾಗಿತ್ತು. ಈ ಬಗ್ಗೆ ಏನು ಹೇಳುತ್ತೀರಿ?

* ಜವಾಹರಲಾಲ್ ವಿಶ್ವವಿದ್ಯಾನಿಲಯವನ್ನು 1968ರಲ್ಲಿ ಎಂ. ಚಾಗ್ಲಾ ಅವರ ನೇತೃತ್ವದಲ್ಲಿ ಒಂದು ವಿಶೇಷ ಕಾಯ್ದೆ ಮಾಡಿ ಸ್ಥಾಪನೆ ಮಾಡಿರುವಂತಹದ್ದು. ದೇಶದ ಬೇರೆ ಬೇರೆ ಕಡೆಯ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ರಾಷ್ಟ್ರದ ರಾಜಧಾನಿಯಲ್ಲಿ ಓದಲು ಒಂದು ಅವಕಾಶ ಕಲ್ಪಿಸುವುದು ಜೆಎನ್‌ಯು ಉದ್ದೇಶವಾಗಿದೆ.

   ಆದರೆ ವಿಶ್ವವಿದ್ಯಾನಿಲಯದ ಪ್ರವೇಶ ಶುಲ್ಕ ಜಾಸ್ತಿ ಮಾಡಿದ್ದಾರೆ. 1968ರ ವಿಶೇಷ ಕಾಯ್ದೆಯ ಮೂಲಕ ವಿವಿ ಪ್ರಾರಂಭಿಸಿದ್ದರೋ ಅದರ ಮೂಲ ಧ್ಯೇಯವನ್ನು ನಾಶಮಾಡಿ, ವಿವಿಯನ್ನು ಬದಲಾಯಿಸುವ ಕೆಲಸ ಇದರ ಹಿಂದಿರುವ ಉದ್ದೇಶ. ಇದನ್ನು ಬಹಳ ವ್ಯವಸ್ಥಿತವಾಗಿ ನಡೆಸುತ್ತಿದ್ದಾರೆ. ಅದರ ಒಂದು ಭಾಗವಾಗಿ ವಿವಿಯ ಪ್ರವೇಶ ಶುಲ್ಕ, ಹಾಸ್ಟೆಲ್ ಶುಲ್ಕವನ್ನು ಹೆಚ್ಚು ಮಾಡಿದ್ದು, ಇದರಿಂದಾಗಿ ಬಡವರಿಗೆ ಕಷ್ಟವಾಗಲಿದೆ.

ಪ್ರ: ಈ ಪ್ರತಿಭಟನೆಯಲ್ಲಿ ಒಂದು ವರ್ಗದ ವಿದ್ಯಾರ್ಥಿ ಸಂಘಟನೆಗಳು ಮಾತ್ರ ಭಾಗಿಯಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಇದು ನಿಜವೇ?

* ಇಲ್ಲ ಇಲ್ಲ... ನೋಡಿ ಪ್ರತಿಭಟನೆ ನಡೆಯುವ ಸಂದರ್ಭ ನಾನು ಅಲ್ಲೇ ಇದ್ದೆ. ಉಪಕುಲಪತಿಯ ಕಚೇರಿಯ ಎದುರು ಸೇರಬಾರದು ಎಂದು ನ್ಯಾಯಾಲಯದಿಂದ ಒಂದು ಆದೇಶವನ್ನು ತಂದಿದ್ದಾರೆ. ಸುಮಾರು ಎರಡು ಸಾವಿರ ವಿದ್ಯಾರ್ಥಿಗಳು ಅಲ್ಲಿನ ನಮ್ಮ ಕುಲಪತಿಯನ್ನು ಭೇಟಿ ಮಾಡಲು ನಾವು ವಿವಿಯ ಕಚೇರಿಗಳಿಗೆ ಭೇಟಿ ನೀಡದೆ ಇನ್ನೆಲ್ಲಿಗೆ ಹೋಗಬೇಕೆಂದು ಪ್ರಶ್ನಿಸಿದ್ದಾರೆ. ‘‘ನಮ್ಮ ಮೇಲೆ ಕಂಟೆಂಪರರಿ ಕೇಸ್ ಹಾಕಿ ಬಂಧಿಸುವುದಾದರೆ ಬಂಧಿಸಿ’’ ಎಂದು ವಿದ್ಯಾರ್ಥಿಗಳು ಅಲ್ಲಿ ಸೇರಿದರು. ಹಾಗೆ ಸೇರಿದವರಲ್ಲಿ ಎಬಿವಿಪಿ, ಎನ್‌ಎಸ್ಯುಐ ಸೇರಿದಂತೆ ಎಸ್ಎಫ್ಐ ಮತ್ತು ಎಐಎಸ್ಎಫ್ ಕೂಡ ಭಾಗಿಯಾಗಿದ್ದವು. ಎಡಪಂಥೀಯರಲ್ಲಿ ಸಣ್ಣ ಸಣ್ಣ ಸುಮಾರು 29 ಸಂಘಟನೆಗಳಿವೆ. ಅವರೆಲ್ಲರೂ ಭಾಗಿಯಾಗಿದ್ದರು. ಹಾಗಾಗಿ ಇಲ್ಲಿ ಒಂದು ವರ್ಗದ ವಿದ್ಯಾರ್ಥಿಗಳೆಂದಿಲ್ಲ. ಇಲ್ಲಿನ ಸ್ಟೂಡೆಂಟ್ ಯೂನಿಯನ್ (ಜೆಎನ್‌ಯುಎಸ್

ಯು) ಎಡಪಂಥೀಯರ ಕೈಯಲ್ಲಿರುವುದರಿಂದ ಇಲ್ಲಿ ಮಾಧ್ಯಮಗಳಿಗೆ ಮಾತನಾಡುವವರು ಅವರೇ ಆಗಿರುತ್ತಾರೆ. ಆದರೆ ಇದೊಂದು ಸಮೂಹ ಚಳವಳಿ ಇದರಲ್ಲಿ ಎಲ್ಲರೂ ಭಾಗಿಯಾಗಿದ್ದಾರೆ. ಇವರ ಮಧ್ಯೆ ಸಣ್ಣ ಸಣ್ಣ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಶುಲ್ಕ ಹೆಚ್ಚಳದ ವಿಷಯದಲ್ಲಿ ಎಲ್ಲರೂ ಪ್ರತಿಭಟನೆ ಮಾಡಿದ್ದಾರೆ. ಒಂದೇ ವರ್ಗದ ವಿದ್ಯಾರ್ಥಿಗಳು ಮಾತ್ರ ಭಾಗಿಯಾಗಿದ್ದು ಎಂಬುವುದು ಸುಳ್ಳು ಪ್ರಚಾರ.

ಪ್ರ: ಜೆಎನ್‌ಯುವಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಒಂದಿಷ್ಟು ಅಪಪ್ರಚಾರಗಳು ಕೇಳಿ ಬರುತ್ತಿವೆ.

* ಜೆಎನ್‌ಯುವಿನ ಬಗ್ಗೆ ಹೊರಗಿನವರು ನೀಡುತ್ತಿರುವ ಮಾಹಿತಿಗಳು ಶೇ.95 ಸುಳ್ಳು. ಜೆಎನ್‌ಯು ಹಿರಿಮೆಯನ್ನು ಕುಗ್ಗಿಸಲು ಯಾರೋ ಹರಿಯಬಿಡುವ ಸುದ್ದಿಗಳು ಸತ್ಯವಲ್ಲ. ಒಳಗಿನ ಸತ್ಯಗಳು ನಿಮಗೆ ಬೇಕಾದಲ್ಲಿ ನೀವೇ ನೇರವಾಗಿ ಜೆಎನ್‌ಯುಗೆ ಬನ್ನಿ, ನಮ್ಮ ಜೊತೆ ಅಥವಾ ವಿದ್ಯಾರ್ಥಿಗಳ ಜೊತೆ ಕುಳಿತುಕೊಳ್ಳಿ ಅಥವಾ ಸುಮ್ಮನೆ ನಮ್ಮ ಕ್ಯಾಂಪಸಿನೊಳಗೆ ಒಂದು ರೌಂಡು ಹೊಡೆದುಬನ್ನಿ.

ಪ್ರ: ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿಯಂತಹ ಹಲವು ಸಾಧಕರು ಜೆಎನ್‌ಯುವಿನಿಂದ ಬಂದವರು, ಆದರೆ ಜೆಎನ್‌ಯು ಇತ್ತೀಚೆಗೆ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದೆ.

* ಜೆಎನ್‌ಯು ಮೊದಲಿನಿಂದಲೂ ವಿವಾದಗಳಿಂದಲೇ ಇದ್ದದ್ದು, ಇವಾಗಲ್ಲ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾ ಗಾಂಧಿ ಜೆಎನ್‌ಯುಗೆ ಬರುವ ಒಂದು ಕಾರ್ಯಕ್ರಮವಿತ್ತು, ಈ ವಿದ್ಯಾರ್ಥಿಗಳು ಇಂದಿರಾ ಗಾಂಧಿಯನ್ನೂ ಬರಲು ಬಿಟ್ಟಿಲ್ಲ. ಆಗ ಇಂದಿರಾಗಾಂಧಿ ಗೇಟಿನಿಂದ ಹೊರನಡೆದುಬಿಟ್ಟರು. 1992ರಲ್ಲಿ ನೆಹರೂವಿನ ಪ್ರತಿಮೆ ನಿರ್ಮಿಸಿದರು. ನರಸಿಂಹ ರಾವ್ ಮತ್ತು ಮನಮೋಹನ್ ಸಿಂಗ್ ಜೋಡಿಯಿಂದಾಗಿ ಇಕನಾಮಿಕ್ ಲಿಬರಿಸಂ ಬಂದಿತ್ತು. ಆ ಸಂದರ್ಭದಲ್ಲಿ ಮನಮೋಹನ್ ಸಿಂಗ್ ಅರ್ಥ ಮಂತ್ರಿಯಾಗಿದ್ದರು. ಇಕಾನಾಮಿಕ್ ಲಿಬರಿಸಂಗೆ ಜೆಎನ್‌ಯು ವಿರುದ್ಧವಾಗಿದ್ದುದರಿಂದ ನೆಹರೂ ಪ್ರತಿಮೆಯನ್ನು ಅನಾವರಣಗೊಳಿಸುವ ಸಂದರ್ಭದಲ್ಲಿ ಮನಮೋಹನ್‌ಸಿಂಗ್ ಬರಬಹುದು, ಆದರೆ ಮಾತನಾಡಬಾರದು ಎಂದು ನಿರ್ಬಂಧ ಹೇರಿದ್ದರು. ಹಾಗಾಗಿ ಮನಮೋಹನ್ ಸಿಂಗ್ ಪ್ರತಿಮೆಯನ್ನು ಅನಾವರಣಗೊಳಿಸಿ ಭಾಷಣ ಮಾಡದೆ ಹೊರಟು ಹೋಗಿದ್ದರು. ಹೀಗೆ ಜೆಎನ್‌ಯುವಿನಲ್ಲಿ ವಿವಾದಗಳು ಮೊದಲಿನಿಂದಲೂ ಇತ್ತು. ಆದರೆ ಅದು ಚರ್ಚೆಗಳ ರೂಪದಲ್ಲಿತ್ತು. ಈ ಮೂರು ನಾಲ್ಕು ವರ್ಷಗಳಿಂದ ಇಂತಹವುಗಳನ್ನು ಮಟ್ಟ ಹಾಕುವಂತಹ ಪ್ರಯತ್ನಗಳು ನಡೆಯುತ್ತಿವೆ.

ಪ್ರ: ದೇಶದಲ್ಲಿರುವ ಉಳಿದ ವಿಶ್ವವಿದ್ಯಾನಿಲಯಕ್ಕೂ ಮತ್ತು ಜೆಎನ್‌ಯುಗಿರುವ ವ್ಯತ್ಯಾಸ ಏನು?

* ಬೇರೆ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ ಸಂಬಂಧ ಯಾಂತ್ರಿಕವಾದದ್ದು, ನಮ್ಮಲ್ಲಿ ಜೈವಿಕವಾದ ಸಂಬಂಧವಿದೆ. ಉದಾಹರಣೆಗೆ ತಮಿಳುನಾಡಿನ ಒಬ್ಬ ವಿದ್ಯಾರ್ಥಿ ನನ್ನ ಬಳಿ ಬಂದು ಬೊಳುವಾರು ಮುಹಮ್ಮದ್ ಕುಂಞಿ ಅವರ ಬಗ್ಗೆ ಅಧ್ಯಯನ ನಡೆಸುತ್ತಾರೆ. ಆತ ಒಂದು ತರಗತಿಯಲ್ಲಿ ಒಂದು ಗಂಟೆ ನನ್ನ ಜೊತೆ ಕೂತು ಮಾತನಾಡುತ್ತಾರೆೆ. ಆದರೆ ತರಗತಿ ಮುಗಿದ ಮೇಲೆ ಸಂಜೆಯಿಂದ ರಾತ್ರಿಯವರೆಗೂ ನಾನು ಮತ್ತು ಅವರು ಕೂತು ಮಾತನಾಡುತ್ತೇವೆ. ಆ ಸಂದರ್ಭ ಅವರು ಒಬ್ಬರೇ ಬರುವುದಿಲ್ಲ, ಜೊತೆಗೆ ಅವರ ಗೆಳೆಯರನ್ನೂ ಕರೆದುಕೊಂಡು ಬರುತ್ತಾರೆ. ನಾವೆಲ್ಲ ಚರ್ಚೆಗಳನ್ನು ನಡೆಸುತ್ತೇವೆ. ತನ್ನೊಳಗೆ ಹುದುಗಿಸಿಕೊಂಡಿರುವ ಅನೌಪಚಾರಿಕ ಚರ್ಚೆಯ ಮೂಲಕ ಉಳಿದ ವಿವಿಗಳಿಗಿಂತ ಜೆಎನ್‌ಯು ಭಿನ್ನವಾಗಿದೆ. ಔಪಚಾರಿಕ ಚರ್ಚೆಗಳು ತರಗತಿಯಲ್ಲಿ ನಡೆಯುತ್ತದೆ. ಅನೌಪಚಾರಿಕವಾಗಿ ಮಾತನಾಡುವಾಗ ವಿದ್ಯಾರ್ಥಿಗಳು ಬಹಳ ಮುಕ್ತವಾಗಿ ಚರ್ಚೆ ನಡೆಸುತ್ತಾರೆ. ನಾನು ಕರ್ನಾಟಕದ ಬೇರೆ ಬೇರೆ ವಿಶ್ವವಿದ್ಯಾನಿಲಯಗಳಲ್ಲಿ ಕೆಲಸಮಾಡಿದ್ದೇನೆ. ಅಲ್ಲಿ ಯಾವುದೇ ವಿದ್ಯಾರ್ಥಿಗಳು ಕೂಡಾ ಪ್ರಶ್ನೆ ಮಾಡುವುದಿಲ್ಲ. ಆದರೆ ಮರದ ಅಡಿಯಲ್ಲಿ ಕೂತೋ ಅಥವಾ ಕ್ಯಾಂಟಿನ್‌ನಲ್ಲಿ ಚಹಾ ಕುಡಿಯುತ್ತಾ ಮಾತನಾಡಿದರೆ ವಿದ್ಯಾರ್ಥಿಗಳು ಯಾವುದೇ ಪ್ರಶ್ನೆಗಳಿದ್ದರೂ ಕೇಳುತ್ತಾರೆ. ಇಲ್ಲಿ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ವ್ಯತ್ಯಾಸ ಬಹಳ ಕಡಿಮೆ. ಇಲ್ಲಿನ ಯಾವುದೇ ವಿದ್ವಾಂಸರ ಜೊತೆ ಮಾತನಾಡಲು ಅಪಾಯಿಂಟ್ಮೆಂಟ್ ಬೇಕಾಗಿಲ್ಲ. ಇಲ್ಲಿನ ಉಪಕುಲಪತಿಗಳು ತಮ್ಮ ಫೈಲ್ಗಳನ್ನು ಹಿಡಿದುಕೊಳ್ಳಲು ಹಿಂದೆ ಮುಂದೆ ಯಾವುದೇ ಸಿಬ್ಬಂದಿಯನ್ನು ನೇಮಿಸುವುದಿಲ್ಲ. ಇಂದಿಗೂ ಯಾವುದೇ ಕಾರ್ಯಕ್ರಮಕ್ಕೂ ತೆರಳುವುದಿದ್ದರೆ ಸೈಕಲ್ನಲ್ಲಿಯೇ ಸಂಚರಿಸುತ್ತಾರೆ. ಇಂತಹ ಅನೌಪಚಾರಿಕವೇ ಇಲ್ಲಿನ ಶಕ್ತಿ. ಇದೊಂದು ರಾಷ್ಟ್ರೀಯ ವಿಶ್ವವಿದ್ಯಾನಿಲಯವಾಗಿರುವುದರಿಂದ ಪ್ರತೀ ತರಗತಿಯಲ್ಲೂ ಎಲ್ಲ ಭಾಷೆಯನ್ನಾಡುವ ವಿದ್ಯಾರ್ಥಿಗಳು ಸಿಗುತ್ತಾರೆ.

ಪ್ರ: ದೇಶದ ಜನ ಪಾವತಿ ಮಾಡುವ ತೆರಿಗೆಯ ಹಣವನ್ನು ಜೆಎನ್‌ಯುಗೆ ಖರ್ಚು ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ?

* ನಾನು ಹೇಳುತ್ತೇನೆ, ಒಬ್ಬ ಪ್ರೊಫೆಸರ್ ಆಗಿ ಹೆಚ್ಚಿನ ಟ್ಯಾಕ್ಸ್ ನಾನು ಕಟ್ಟುತ್ತೇನೆ. ಆ ಹಣ ಎಲ್ಲಿಗೆ ಹೋಗುತ್ತದೆ? ನನ್ನ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಿ. ಭಾರತದ ಹಿಂದುಳಿದ ವರ್ಗದ, ದಲಿತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಉಚಿತವಾಗಿ ಕೊಡಿ. ಜನರು ಕಟ್ಟಿದ ಟ್ಯಾಕ್ಸ್ ಹಣ ಜೆಎನ್‌ಯುವಿನಲ್ಲಿ ಖರ್ಚಾಗುತ್ತಿದೆ ಎಂದು ಕೇಳುತ್ತೀರಲ್ವಾ? ನಾನು ಕೇಳುತ್ತಿದ್ದೇನೆ, ನಾನು ಕಟ್ಟಿದ ಹಣ ಎಲ್ಲಿಗೆ ಹೋಯ್ತು? ನಾನೊಂದು ಕಾರು ಖರೀದಿ ಮಾಡಿದರೆ ರೋಡ್ ಟ್ಯಾಕ್ಸ್ ಕಟ್ಟುತ್ತೇನೆ, ಸೋಪ್ ಖರೀದಿಗೂ ಟ್ಯಾಕ್ಸ್ ಕಟ್ಟುತ್ತೇನೆ, ಸಿಗುವ ಸಂಬಳದಲ್ಲೂ ಇನ್‌ಕಂ ಟ್ಯಾಕ್ಸ್ ಕಟ್ಟುತ್ತೇನೆ, ಹೊಟೇಲ್‌ನಲ್ಲಿ ಊಟಮಾಡಿದರೆ ಅದಕ್ಕೂ ಟ್ಯಾಕ್ಸ್ ಕಟ್ಟುತ್ತೇನೆ. ಹಾಗಾದರೆ ನಾನು ಕಟ್ಟುವ ಟ್ಯಾಕ್ಸ್ ಹಣ ಎಲ್ಲಿಗೆ ಹೋಯ್ತು? ರೆಸಾರ್ಟ್‌ಗಳಿಗೆ ಹೋಗುತ್ತಾ? ವಿಶೇಷ ವಿಮಾನಗಳಿಗೆ ಖರ್ಚಾಗಿ ಹೋಗುತ್ತಾ? ಅಥವಾ ವಿದೇಶ ಪ್ರಯಾಣದಲ್ಲಿ ಖರ್ಚಾಗುತ್ತಾ? ನನಗೆ ಉತ್ತರ ಕೊಡಲಿ. ನಾವು ಹೇಳುತ್ತಿರುವುದು ಶುಲ್ಕ ಹೆಚ್ಚು ಮಾಡಿದ್ದು ತಪ್ಪುಎಂದಲ್ಲ. ಫೀಸ್ ಇಟ್ಟಿರುವುದೇ ತಪ್ಪು. ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಿ, ದೇಶ ಉದ್ಧಾರವಾಗಲಿ. 90 ಶೇಕಡಾ ವಿದ್ಯಾರ್ಥಿಗಳಿಗೆ ಬಡತನ ಕೊಟ್ಟು, 10 ಶೇಕಡಾ ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮಾಡಿ ಕೊಟ್ಟರೆ ದೇಶ ಕಟ್ಟಲು ಆಗುವುದಿಲ್ಲ. ಹಾಗೆ ಕಟ್ಟುವ ದೇಶ ಬಹಳ ದುರ್ಬಲವಾಗಿರುತ್ತದೆ. ಜೆಎನ್‌ಯುವಿನ ಮಾದರಿಯೇನಿದೆ ಅದು ದೇಶಕ್ಕೆ ಮಾದರಿಯಾಗಬೇಕಿತ್ತು. ಅದು ಸಾಧ್ಯವಾಗಿಲ್ಲ. ಜೆಎನ್‌ಯುವಿನ ಹೋರಾಟ ದೇಶದ ಹೋರಾಟವನ್ನಾಗಿ ಮಾರ್ಪಡಿಸಲು ಸಾಧ್ಯವಾಗಿಲ್ಲ. ಅದಕ್ಕೆ ನಾವು ಕೂಡ ಒಂದು ಕಾರಣ. ಇದರ ವಿರುದ್ಧ ಕೆಲಸ ಮಾಡುತ್ತಿರುವ ಶಕ್ತಿಗಳು ಬಹಳ ದೊಡ್ಡದಾಗಿದ್ದರಿಂದ ನಾವು ತಕ್ಕ ಮಟ್ಟಿನ ಹಿನ್ನಡೆಯನ್ನು ಅನುಭವಿಸುತ್ತಿರುವುದು ನಿಜ.

ಪ್ರ: ಒಟ್ಟು ದೇಶದ ವಿಶ್ವಾವಿದ್ಯಾನಿಲಯಗಳ ಸ್ಥಿತಿಗತಿಗಳ ಬಗ್ಗೆ ನಿಮ್ಮ ಅಭಿಪ್ರಾಯ?

* ದೇಶದ ಅನೇಕ ವಿಶ್ವವಿದ್ಯಾನಿಲಯಗಳು ಚಿಂತಾಜನಕವಾಗಿವೆ. ಉದಾಹರಣೆಗೆ ಕರ್ನಾಟಕದ ವಿಶ್ವವಿದ್ಯಾನಿಲಯ ಮತ್ತು ಕಾಲೇಜುಗಳಲ್ಲಿ ಕನ್ನಡವನ್ನೇ ಪಾಠಮಾಡಿ, ವೇತನ ಪಡೆದುಕೊಂಡು ಕನ್ನಡವನ್ನೇ ಉಸಿರಾಡುವ ಕನ್ನಡ ಮೇಷ್ಟ್ರುಗಳ ಸಂಖ್ಯೆ ಎಷ್ಟಿರಬಹುದು? ಈ ಮೇಷ್ಟ್ರುಗಳಿಂದ ಕನ್ನಡಕ್ಕೆ ಕೊಡುಗೆ ಏನು ಎಂಬುದನ್ನು ಯೋಚನೆ ಮಾಡಿ. ನವಶಿಕ್ಷಣ ನೀತಿಯಲ್ಲಿ ಕನ್ನಡದ ಜಾಗವನ್ನು ಹಿಂದಿ ಆಕ್ರಮಿಸುವ ಲಕ್ಷಣಗಳು ಬಂದಾಗ ಕುತ್ತು ಬರುವುದು ಕನ್ನಡ ಮೇಷ್ಟ್ರುಗಳಿಗೆ. ಆದರೆ ಇದರ ಬಗ್ಗೆ ಯಾವ ಕನ್ನಡ ಮೇಷ್ಟ್ರುಗಳು ಸ್ವರ ಎತ್ತಲಿಲ್ಲ. ಉನ್ನತ ಶಿಕ್ಷಣದಲ್ಲಿ ಕನ್ನಡ ಕಾಣೆಯಾಗುತ್ತಿದೆ. ಈ ಬಗ್ಗೆಯೂ ಸ್ವರ ಎತ್ತುತ್ತಿಲ್ಲ. ಉನ್ನತ ಶಿಕ್ಷಣದಲ್ಲಿ ಅತ್ಯುತ್ತಮವಾದ ಸಂಶೋಧನೆಗಳು ನಡೀತಾ ಇಲ್ಲ. ಅತ್ಯುತ್ತಮವಾದ ಸಂಶೋಧನೆಗಳನ್ನು ನಡೆಸಲು ಉತ್ತಮವಾದ ಮಾರ್ಗದರ್ಶನ ನೀಡಲು ಯೋಗ್ಯವಾದ ಕನ್ನಡ ಶಿಕ್ಷಕರು ಉನ್ನತ ಶಿಕ್ಷಣದಲ್ಲಿಲ್ಲ. ಈಗಿನ ವಿಶ್ವವಿದ್ಯಾನಿಲಯಗಳಿಗೆ ನೇಮಕವಾಗುವ ಕುಲಪತಿಗಳನ್ನು ನೋಡಿ, ಅವರ ಹಿಂದೆ ಜಾತಿ, ದುಡ್ಡು, ರಾಜಕೀಯ ಕೆಲಸ ಮಾಡುತ್ತಿವೆ. ಆದರೆ ಶೈಕ್ಷಣಿಕ ಅರ್ಹತೆ ಎಲ್ಲಿ ಕೆಲಸ ಮಾಡುತ್ತಿದೆ?

ನಮ್ಮ ದೇಶದ ಅನೇಕ ವಿಶ್ವವಿದ್ಯಾನಿಲಯದ ಕುಲಪತಿಗಳಿಗೆ ವಿಶ್ವವಿದ್ಯಾನಿಲಯಗಳು ಎಂದರೆ ಏನು ಎಂಬುದೇ ಗೊತ್ತಿಲ್ಲ. ಅವರಿಗೊಂದು ಕಾರು ಮತ್ತು ಬಂಗಲೆ ಸಿಗುತ್ತೆ ಆರಾಮವಾಗಿರುತ್ತಾರೆ. ವಿಶ್ವವಿದ್ಯಾನಿಲಯಗಳನ್ನು 21ನೇ ಶತಮಾನದ ಅಗತ್ಯಗಳಿಗೆ ಅನುಗುಣವಾಗಿ ಸಜ್ಜುಗೊಳಿಸುವ, ವಿದ್ಯಾರ್ಥಿಗಳನ್ನು 21ನೇ ಶತಮಾನದ ಸವಾಲುಗಳಿಗೆ ತಯಾರುಗೊಳಿಸುವ, ಕನ್ನಡದಂತಹ ಸಣ್ಣ ಭಾಷೆ ಎದುರಿಸುತ್ತಿರುವ ಬಿಕ್ಕಟ್ಟುಗಳಿಗೆ ಪರಿಹಾರ ಕಂಡುಕೊಳ್ಳುವ, ಜಾಗತೀಕರಣದ ಸಂದರ್ಭದಲ್ಲಿ ಕನ್ನಡ ಭಾಷೆಗೆ ಹಾಗೂ ಕರ್ನಾಟಕ ರಾಜ್ಯಕ್ಕೆ ಮನ್ನಣೆಯನ್ನು ತಂದು ಕೊಡುವ ಕೆಲಸಗಳನ್ನು ಇಂದಿನ ಕುಲಪತಿಗಳು ಮಾಡುತ್ತಿಲ್ಲ. ಇತ್ತೀಚೆಗೆ ಎನ್‌ಆರ್ಇಪಿ ಬಂದಾಗ ದೊಡ್ಡ ಮಟ್ಟದ ಚರ್ಚೆ ವಿಶ್ವವಿದ್ಯಾನಿಲಯಳಲ್ಲಿ ನೆಯಬೇಕಿತ್ತು. ಅಲ್ಲಿ ಅರ್ಥಶಾಸ್ತ್ರಜ್ಞರು, ರಾಜಕಿೀಯ ಶಾಸ್ತ್ರಜ್ಞರು, ಅಂತಾರಾಷ್ಟ್ರೀಯ ಅಧ್ಯಯನಗಳ ವಿದ್ವಾಂಸರಿರುತ್ತಾರೆ, ಆದರೆ ಯಾವ ವಿಶ್ವವಿದ್ಯಾನಿಲಯಗಳಲ್ಲಿ ಆ ಬಗ್ಗೆ ಚರ್ಚೆ ನಡೆದಿದೆ? ಸಾಮಾಜಿಕ ಜಾಲತಾಣಗಳಲ್ಲಿ ನಡೆದಷ್ಟು ಚರ್ಚೆ ವಿಶ್ವವಿದ್ಯಾನಿಲಯಗಳಲ್ಲಿ ನಡೆಯಲಿಲ್ಲ. ಕುಲಪತಿಗಳು ಲಕ್ಷಾಂತರ ರೂಪಾಯಿ ವೇತನ ಪಡೆದು ಆರಾಮವಾಗಿದ್ದಾರೆ. ನನ್ನ ಪ್ರಕಾರ ದೇಶದ ಕೆಲವು ವಿಶ್ವವಿದ್ಯಾನಿಲಯಗಳು ಚಿಂತಾಜನಕ ಮಾತ್ರವಲ್ಲ ಅವುಗಳು ಸತ್ತುಹೋಗಿವೆ. ಅವುಗಳಿಗೆ ಹೇಗೆ ಜೀವ ಬರುತ್ತದೆ, ಅವುಗಳನ್ನು ಹೇಗೆ ಜೀವ ಮಾಡುವುದೆಂದು ನನಗಂತೂ ಗೊತ್ತಿಲ್ಲ. ಆದರೆ ಆಳುವ ವರ್ಗಗಳಿಗೆ ವಿಶ್ವವಿದ್ಯಾನಿಲಯಗಳೆಂದರೆ ಬಹಳ ಖುಷಿ, ಯಾಕೆಂದರೆ ಅವು ಮಾತನಾಡುವುದಿಲ್ಲ, ಅವುಗಳಿಗೊಂದಿಷ್ಟು ದುಡ್ಡುಕೊಟ್ಟರೆ ಅವುಗಳ ಪಾಡಿಗೆ ಬಾಲ ಅಲ್ಲಾಡಿಸಿಕೊಂಡಿರುತ್ತದೆ. ಇದು ದೇಶಕ್ಕೆ ಬಹಳ ಅಪಾಯಕಾರಿಯಾದ ಬೆಳವಣಿಗೆ. ವಿಶ್ವವಿದ್ಯಾನಿಲಯಗಳು ತಲೆ ಕೊಡವಿ, ಮೈ ಕೊಡವಿ ಹೊಸ ಎಚ್ಚರದಿಂದ ಮೇಲೆ ಬರಬೇಕೆಂದು ಆಸೆ ಪಡುತ್ತೇನೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top