‘‘ಇವಿಎಂ ಬಳಕೆ ಅಸಾಂವಿಧಾನಿಕ’’ -ಪ್ರೊ. ವಿಲಾಸ್ ಖಾರತ್ | Vartha Bharati- ವಾರ್ತಾ ಭಾರತಿ

ಮಾತು ಕತೆ

‘‘ಇವಿಎಂ ಬಳಕೆ ಅಸಾಂವಿಧಾನಿಕ’’ -ಪ್ರೊ. ವಿಲಾಸ್ ಖಾರತ್

‘‘ಪ್ರಜಾಪ್ರಭುತ್ವ ಉಳಿವಿಗಾಗಿ ಮತ್ತು ಇವಿಎಂ ತೊಲಗಿಸಿ ಹಾಗೂ ಬ್ಯಾಲೆಟ್ ಪೇಪರ್ ಜಾರಿಗೊಳಿಸಬೇಕು’’ ಎಂಬ ಪರಿವರ್ತನಾ ಯಾತ್ರೆಯ ಮೂಲಕ ದೇಶಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಹೊಸದಿಲ್ಲಿಯ ಅಂಬೇಡ್ಕರ್ ರಿಸರ್ಚ್ ಸೆಂಟರಿನ ನಿರ್ದೇಶಕ ಹಾಗೂ ಬಾಂಸೆಫ್ ಮತ್ತು ರಾಷ್ಟ್ರೀಯ ಬಹುಜನ ಕ್ರಾಂತಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪ್ರೊ. ವಿಲಾಸ್ ಖಾರತ್ ಶನಿವಾರ ‘ವಾರ್ತಾಭಾರತಿ’ ಕಚೇರಿಗೆ ಭೇಟಿ ನೀಡಿದ ಸಂದರ್ಭ ಅವರೊಂದಿಗೆ ನಡೆಸಿದ ವಿಶೇಷ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಚುನಾವಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ವಿವಿಪ್ಯಾಟನ್ನು ಕೂಡಾ ಬಳಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಈ ನಿರ್ಧಾರದ ಮೇಲೆ ಯಾವ ಗಮನವನ್ನೂ ಹರಿಸಲಿಲ್ಲ. ಎಷ್ಟು ಇವಿಎಂ ಸೌಲಭ್ಯವಿರುತ್ತದೆ ಅಷ್ಟೇ ಪ್ರಮಾಣದಲ್ಲಿ ವಿವಿಪ್ಯಾಟ್ ಸೌಲಭ್ಯವಿರಬೇಕಿತ್ತು. ಆದರೆ ಕೇವಲ ಶೇ. 0.31ರಷ್ಟು ಮಾತ್ರ ವಿವಿಪ್ಯಾಟ್ ಬಳಸಲಾಗಿದೆ. ಮತಚಲಾವಣೆ ಮಾಡುವುದು ನಮ್ಮ ಹಕ್ಕು. ಈ ಹಕ್ಕಿನ ಉಲ್ಲಂಘನೆ ಮಾಡಲಾಗುತ್ತಿದೆ. ಹಾಗಾಗಿ ವಿಶ್ವದೆಲ್ಲೆಡೆ ಇವಿಎಂ ಅನ್ನು ಬಳಕೆ ಮಾಡುವುದಿಲ್ಲ. ಇವಿಎಂ ಅಸಾಂವಿಧಾನಿಕವಾಗಿರುವ ಹಿನ್ನ್ನೆಲೆಯಲ್ಲಿ ನಾವು ಇವಿಎಂ ಬಳಕೆಗೆ ಆಕ್ಷೇಪ ಮಾಡುತ್ತಿದ್ದೇವೆ.

ಪ್ರ: ಇವಿಎಂ ಬಗ್ಗೆ ನಿಮಗೆ ಇರುವ ತಕರಾರು ಏನು?

*ಇವಿಎಂ ಯಂತ್ರದಲ್ಲಿ ಅವ್ಯವಸ್ಥೆ ಇದೆ. ಇದು ಕೇವಲ ಆರೋಪವಲ್ಲ. 2012ರ ಅಕ್ಟೋಬರ್ 7ರಂದು ಜಸ್ಟೀಸ್ ಸದಾಶಿವ ಅವರು ಸುಬ್ರಮಣಿಯನ್ ಸ್ವಾಮಿಯವರ ಪ್ರಕರಣದಲ್ಲಿ ತೀರ್ಪು ನೀಡುವಾಗ ಇವಿಎಂ ಯಂತ್ರವನ್ನು ಅವ್ಯವಸ್ಥೆಗೊಳಿಸಲು ಸಾಧ್ಯವಿದೆ. ಪಾರದರ್ಶಕವಾದ ಮತದಾನ ನಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದು ಸಾಧ್ಯವಿದೆ ಎಂಬುದನ್ನು ಸುಪ್ರೀಂಕೋರ್ಟ್ ಕೂಡಾ ಒಪ್ಪಿದೆ. ಇವಿಎಂನಲ್ಲಿ ದೊರಕುವ ಫಲಿತಾಂಶಕ್ಕೆ ಯಾವುದೇ ಭೌತಿಕ ಸಾಕ್ಷಿಗಳಿಲ್ಲ. ನಾವು ಎಟಿಎಂ ಮುಖಾಂತರ ಹಣ ತೆಗೆಯುವಾಗ ನಮಗೆ ಸಾಕ್ಷಿಯಾಗಿ ರಶೀದಿ ಲಭ್ಯವಿದೆ. ರೈಲಿನಲ್ಲಿ ಪ್ರಯಾಣ ಮಾಡುವುದಾದರೆ ಅದರ ಟಿಕೆಟ್ ನಮಗೆ ದೊರಕುವ ಸಾಕ್ಷಿ. ಯಾವುದಾದರೂ ಮಾಲ್ ಅಥವಾ ಅಂಗಡಿಗಳಿಂದ ಸಾಮಗ್ರಿಗಳನ್ನು ಖರೀದಿ ಮಾಡಿದರೆ ಅಲ್ಲಿ ದೊರಕುವ ರಶೀದಿ ನಮಗೆ ಸಾಕ್ಷಿ. ಆದರೆ ನಾವು ಮತ ಚಲಾಯಿಸಿದ ನಂತರ ಆ ಮತ ನಾವು ಹಾಕಿದವರಿಗೆಯೇ ಬಿದ್ದಿದೆಯೇ ಅಥವಾ ಬೇರೆ ಯಾರಿಗಾದರೂ ಹೋಗಿದೆಯೇ ಎಂಬುದಕ್ಕೆ ಯಾವ ಸಾಕ್ಷಿಗಳು ನಮಗೆ ಲಭ್ಯವಿದೆ? ಆದ್ದರಿಂದ ಚುನಾವಣೆಯಲ್ಲಿ ನಡೆಯುವ ಅವ್ಯವಸ್ಥೆಯನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಇವಿಎಂ ಯಂತ್ರದ ಜೊತೆಯಲ್ಲೇ ‘ವಿವಿಪ್ಯಾಟ್’ ಎಂಬ ಇನ್ನೊಂದು ತಾಂತ್ರಿಕ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿತ್ತು. ಇದು ಇವಿಎಂ ಯಂತ್ರದಲ್ಲಿ ನಡೆಯುವ ಅವ್ಯವಹಾರವನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಮತದಾರರು ಚಲಾಯಿಸಿದ ಮತ ತಾವು ಚುನಾಯಿಸ ಬಯಸುವ ಅಭ್ಯರ್ಥಿಗೆ ದೊರೆತಿದೆಯೇ ಎಂಬುದನ್ನು ಖಾತರಿ ಪಡಿಸಲು ವಿವಿಪ್ಯಾಟ್ ಸಹಾಯಕವಾಗಿದೆ. ಮತದಾನದ ಲೆಕ್ಕಚಾರದಲ್ಲಿ ಯಾವುದೇ ಅವ್ಯವಸ್ಥೆ ಕಂಡುಬಂದರೂ ವಿವಿಪ್ಯಾಟ್‌ನಲ್ಲಿ ಇರುವ ಮತದಾರರು ಮತ ಚಲಾಯಿಸಿದ ಚೀಟಿ ಮತ್ತು ಇವಿಎಂ ಯಂತ್ರದಲ್ಲಿ ಲಭ್ಯವಿರುವ ಲೆಕ್ಕಾಚಾರ ಸಮಾನವಾಗಿದೆಯೇ ಎಂದು ಪರಿಶೀಲನೆ ನಡೆಸಲಾಗುತ್ತದೆ. ಇವೆರಡರಲ್ಲೂ ವ್ಯತ್ಯಾಸ ಕಂಡುಬಂದಲ್ಲಿ ಚುನಾವಣೆಯಲ್ಲಿ ಕುತಂತ್ರ ನಡೆದಿರುವ ಸಾಧ್ಯತೆಯ ಬಗ್ಗೆ ಅಲ್ಲಗಳೆಯಲಾಗದು. ಚುನಾವಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ವಿವಿಪ್ಯಾಟನ್ನು ಕೂಡಾ ಬಳಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಈ ನಿರ್ಧಾರದ ಮೇಲೆ ಯಾವ ಗಮನವನ್ನೂ ಹರಿಸಲಿಲ್ಲ. ಎಷ್ಟು ಇವಿಎಂ ಸೌಲಭ್ಯವಿರುತ್ತದೆ ಅಷ್ಟೇ ಪ್ರಮಾಣದಲ್ಲಿ ವಿವಿಪ್ಯಾಟ್ ಸೌಲಭ್ಯವಿರಬೇಕಿತ್ತು. ಆದರೆ ಕೇವಲ ಶೇ. 0.31ರಷ್ಟು ಮಾತ್ರ ವಿವಿಪ್ಯಾಟ್ ಬಳಸಲಾಗಿದೆ. ಮತಚಲಾವಣೆ ಮಾಡುವುದು ನಮ್ಮ ಹಕ್ಕು. ಈ ಹಕ್ಕಿನ ಉಲ್ಲಂಘನೆ ಮಾಡಲಾಗುತ್ತಿದೆ. ಹಾಗಾಗಿ ವಿಶ್ವದೆಲ್ಲೆಡೆ ಇವಿಎಂ ಅನ್ನು ಬಳಕೆ ಮಾಡುವುದಿಲ್ಲ. ಇವಿಎಂ ಅಸಾಂವಿಧಾನಿಕವಾಗಿರುವ ಹಿನ್ನ್ನೆಲೆಯಲ್ಲಿ ನಾವು ಇವಿಎಂ ಬಳಕೆಗೆ ಆಕ್ಷೇಪ ಮಾಡುತ್ತಿದ್ದೇವೆ.

ಪ್ರ: ಚುನಾವಣಾ ಆಯೋಗ ಇವಿಎಂನಲ್ಲಿ ಯಾವುದೇ ಸಮಸ್ಯೆಯಾಗಲು ಸಾಧ್ಯವಿಲ್ಲ ಎಂದು ಹೇಳುತ್ತಿದೆಯಲ್ಲ?

*ಆದರೆ ಆ ಮಾತು ನಂಬಲರ್ಹವಲ್ಲ. ಇವಿಎಂ ಮತಗಳನ್ನು ತಿರುಚಲು ಸಾಧ್ಯವಿದೆ ಎಂಬುದನ್ನು ಜನತೆಗೆ ತಿಳಿಸುವ ಜವಾಬ್ದಾರಿ ಮಾಧ್ಯಮದ್ದಾಗಿದ್ದು, ಮಾಧ್ಯಮ ಈ ಕಾರ್ಯವನ್ನು ಮಾಡುತ್ತಿಲ್ಲ. ಮಾಧ್ಯಮಗಳು ಚುನಾವಣಾ ಆಯೋಗ ಯಂತ್ರಗಳ ಪರಿಶೀಲನೆ ನಡೆಸಲು ಅವಕಾಶ ಕಲ್ಪಿಸುತ್ತದೆ ಎಂದು ಪ್ರಚಾರ ಮಾಡಿತು. ಆದರೆ ಪರಿಶೀಲನೆ ನಡೆಸುವ ಸಂದರ್ಭ ಯಾರೂ ಬರಲಿಲ್ಲ. ಜನರಿಗೆ ನಿಜವನ್ನು ತಿಳಿಸಬೇಕಾದ ಮಾಧ್ಯಮಗಳು ಅದನ್ನು ಮರೆಮಾಚಿವೆ. ಚುನಾವಣಾ ಆಯೋಗವೇ ಸುಪ್ರೀಂಕೋರ್ಟಿನ ತೀರ್ಪನ್ನು ಪಾಲಿಸುತ್ತಿಲ್ಲ. ಸಂವಿಧಾನಾತ್ಮಕವಾದ ನೀತಿಯನ್ನು ಅವಲಂಬಿಸುತ್ತಿಲ್ಲ. ರಾಷ್ಟ್ರೀಯ ಮಾಧ್ಯಮವೆಂದು ಕರೆಯಲ್ಪಡುವ ಮಾಧ್ಯಮಗಳು ರಾಷ್ಟ್ರದ್ರೋಹಿ ಮಾಧ್ಯಮಗಳಾಗಿವೆ. ಸುಳ್ಳು ಮಾಹಿತಿಗಳನ್ನು ಪ್ರಚಾರ ಮಾಡಿ ಸತ್ಯವನ್ನು ಮರೆಮಾಚುತ್ತಿದೆ. ಆದ್ದರಿಂದ ಈ ಮಾತನ್ನು ನಾವು ಒಪ್ಪುವುದಿಲ್ಲ.

ಪ್ರ: ಇವಿಎಂನಲ್ಲಿ ಇಷ್ಟು ಸಮಸ್ಯೆ ಇದೆಯೆಂದಾದರೆ ಯಾವುದೇ ರಾಜಕೀಯ ಪಕ್ಷ ಇವಿಎಂ ಬಳಸಿದರೆ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಯಾಕೆ ಹೇಳುತ್ತಿಲ್ಲ?

*ಸುಬ್ರಮಣಿಯನ್ ಸ್ವಾಮಿ ‘‘ಕಾಂಗ್ರೆಸ್ ಎರಡು ಬಾರಿ ಇವಿಎಂ ಬಳಸಿ ಸರಕಾರ ರಚನೆ ಮಾಡಿವೆೆ’’ ಎಂದು ದೂರು ದಾಖಲಿಸಿದ್ದರು. ಕಾಂಗ್ರೆಸ್ ಹಾಗೂ ಆರೆಸ್ಸೆಸ್ ಎರಡು ಬಾರಿ ಜನರಿಗೆ ಮೋಸ ಮಾಡಿವೆ. ಆದರೆ ಜನತೆಗೆ ಇದು ತಿಳಿದಿಲ್ಲ. 2019ರ ಚುನಾವಣೆಯ ಮೊದಲು ಇವಿಎಂನಲ್ಲಿ ವಿವಿಪ್ಯಾಟ್ ಅಳವಡಿಕೆಯಾಗಬೇಕು. ನಮಗೆ ಇವಿಎಂನಲ್ಲಿ ಯಾವುದೇ ನಂಬಿಕೆ ಇಲ್ಲ ಎಂದು ಹಲವು ಪಕ್ಷಗಳು ಸುಪ್ರೀಂ ಕೋರ್ಟಿಗೆ ತೆರಳಿವೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಪಕ್ಷಗಳ ಪೈಕಿ ಕಾಂಗ್ರೆಸ್ ಇರಲಿಲ್ಲ. ಇದುವೇ ಮುಖ್ಯ ಸಾಕ್ಷಿ. ಯಾರು ಇವಿಎಂ ವಿರುದ್ಧ ಧ್ವನಿ ಎತ್ತುತ್ತಾರೋ ಅವರಿಗೆ ಸಿಬಿಐ ದಾಳಿ ನಡೆಸುವ ಭಯ ಹುಟ್ಟಿಸಿ ಸುಮ್ಮನಾಗಿಸುತ್ತಾರೆ. ಇದಕ್ಕೆ ಉದಾಹರಣೆ ಮಾಯಾವತಿ ಹಾಗೂ ಶರದ್ ಪವಾರ್. ಅವರು ಇವಿಎಂಗೆ ವಿರೋಧ ವ್ಯಕ್ತಪಡಿಸಿ ಮತ್ತೆ ಮೌನವಾದರು. ತಮ್ಮ ಹಗರಣಗಳ ಪಟ್ಟಿಯನ್ನು ಬಿಚ್ಚಿಡುವ ಭಯದಿಂದ ಯಾವ ನಾಯಕರು ಕೂಡಾ ಇವಿಎಂ ವಿರುದ್ಧ ಮಾತನಾಡಲು ಮುಂದೆ ಬರುವುದಿಲ್ಲ.

ಪ್ರ: ಇವಿಎಂ ಬಳಕೆ ಬಗ್ಗೆ ಜನಸಾಮಾನ್ಯರಿಗೂ ಯಾವುದೇ ತೊಂದರೆ ಇದ್ದ ಹಾಗೆ ಕಾಣುತ್ತಿಲ್ಲ.. ಕೇವಲ ಕೆಲವು ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು, ಕೆಲವು ಪಕ್ಷಗಳು ಮಾತ್ರ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿವೆ?

*ಜನರು ಹಸಿವಿನಿಂದ ಹಾಗೂ ನಿರುದ್ಯೋಗದಿಂದಾಗಿ ಸಂತೋಷವಾಗಿದ್ದಾರಾ?. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರು ಸಂತೋಷವಾಗಿದ್ದಾರಾ?. ಜನತೆಯ ಸಂಕಷ್ಟಕ್ಕೆ ಧ್ವನಿಯಾಗಬೇಕಾದ ಜನಪ್ರತಿನಿಧಿಗಳು ಧ್ವನಿ ಅಡಗಿಕೊಂಡಿದ್ದಾರೆ. ಜನತೆಯ ಪರವಾಗಿ ಮಾತನಾಡಲು ಯಾರೂ ಇಲ್ಲ. ಹಾಗಾಗಿ ಬಹುಜನ ಕ್ರಾಂತಿ ಮೋರ್ಚಾ ಸಂಘಟನೆ ದೇಶಾದ್ಯಂತ ಇವಿಎಂ ವಿರುದ್ಧ ಧ್ವನಿ ಎತ್ತಿದೆ. ಪ್ರಜಾಪ್ರಭುತ್ವ ಇಲ್ಲದಿದ್ದರೆ ನಮ್ಮ ಜನತೆಗೆ ಯಾವ ಸಂಕಷ್ಟ ಎದುರಾಗಬಹುದು ಎಂಬುದನ್ನು ನಾವು ನೋಡುತ್ತಿದ್ದೇವೆ. ಪತ್ರಕರ್ತೆ ಗೌರಿಲಂಕೇಶ್ ಹತ್ಯೆಗೆ ಕಾರಣವಾದ ಅಂಶಗಳಲ್ಲಿ ಇವಿಎಂನ್ನು ವಿರೋಧ ಮಾಡಿದ್ದು ಕೂಡಾ ಒಂದು. ಕಲಬುರ್ಗಿ, ಪನ್ಸಾರೆ ಹತ್ಯೆ ನಡೆದಿವೆ. ಬಿಜೆಪಿಯವರೇ ಆಗಿರುವ ಗೋಪಿನಾಥ್ ಮುಂಡೆಯನ್ನು ಹತ್ಯೆ ಮಾಡಿರುವುದರ ಹಿಂದೆ ಇವಿಎಂನ್ನು ವಿರೋಧ ಮಾಡಿರುವುದೇ ಕಾರಣವೆಂದು ಈಗಾಗಲೇ ಇವಿಎಂ ಹ್ಯಾಕರ್ ಒಬ್ಬ ತಿಳಿಸಿದ್ದಾನೆ. ಜನತೆ ಇವಿಎಂ ವಿರುದ್ಧ ಧ್ವನಿ ಎತ್ತಬೇಕು. ಆದರೆ ಜನತೆಗೆ ಈ ಕುರಿತು ಮಾಹಿತಿಯ ಅಭಾವವಿದೆ. ಅರಿವಿನ ಅಭಾವವೇ ಈ ದೇಶದಲ್ಲಿನ ಸಮಸ್ಯೆಗೆ ಕಾರಣ. ಅದೇ ರೀತಿ ರಾಜಕಾರಣಿಗಳು ಈ ಕುರಿತು ಮಾತನಾಡುವುದಿಲ್ಲ. ಯಾಕೆಂದರೆ ಅವರು ಬ್ರಾಹ್ಮಣವಾದಿ ದಳದ ಹಿಂಬಾಲಕರಾಗಿದ್ದಾರೆ. ಸಿಬಿಐಗೆ ಭಯ ಪಡುತ್ತಿದ್ದಾರೆ. ಆದರೆ ನಾವು ಭಯಪಡುವುದಿಲ್ಲ. ನಮಗೆ ಪ್ರಜಾಪ್ರಭುತ್ವ ಉಳಿಸಬೇಕಿದೆ.

ಪ್ರ: ದೇಶದ ಎಲ್ಲಾ ಸಮಸ್ಯೆಗಳಿಗೆ ಬ್ರಾಹ್ಮಣರೇ ಕಾರಣವೆಂದು ನೀವು ಹೇಳುತ್ತೀರಿ. ಇದು ಅತಿರೇಕದ ವಾದವಲ್ಲವೇ?

*ಇತ್ತೀಚೆಗೆ ಹೊರಬಿದ್ದ ಅಯೋಧ್ಯೆ ತೀರ್ಪು ನಂಬಿಕೆಯ ಆಧಾರದಲ್ಲಿ ನೀಡಲಾಗಿದೆ. ಆದರೆ ಯಾವುದೇ ವಿಚಾರಣೆಯಲ್ಲೂ ಕೋರ್ಟಿಗೆ ಮುಖ್ಯವಾಗಿ ಬೇಕಾಗಿರುವುದು ನಂಬಿಕೆಯಲ್ಲ ಸಾಕ್ಷಿ. ಕೆಲವನ್ನು ವಿರೋಧಿಸಲು ಬ್ರಾಹ್ಮಣರು ಮುಂದೆ ಬರದೆ ಬ್ರಾಹ್ಮಣನಲ್ಲದ ಬಾಬಾ ರಾಮದೇವ್‌ರಂತಹವರನ್ನು ಮುಂದೆ ಕಳುಹಿಸುತ್ತಾರೆ. ಬಾಬಾ ರಾಮ್‌ದೇವ್ ‘‘ಈ ದೇಶದಲ್ಲಿ ಪೆರಿಯಾರ್ ಹಾಗೂ ಅಂಬೇಡ್ಕರ್ ಅವರ ಕೆಲವು ಚೇಲಾಗಳು ಇದ್ದಾರೆ. ಇವರು ಇಂಟಲೆಕ್ಚುವಲ್ ಟೆರರಿಸ್ಟ್ (ಬೌದ್ಧಿಕ ಉಗ್ರರು)’’ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ನಮ್ಮ ರಾಷ್ಟ್ರೀಯ ಅಧ್ಯಕ್ಷರು ಬಾಬಾ ರಾಮ್‌ದೇವ್‌ರಿಗೆ ಲೀಗಲ್ ನೋಟಿಸ್ ಕಳುಹಿಸುವುದಾಗಿ ಹೇಳಿದರು. ಈಗ ಬಾಬಾ ರಾಮ್ ದೇವ್ ನಾಪತ್ತೆಯಾಗಿದ್ದಾರೆ. ಬ್ರಾಹ್ಮಣ ಅಥವಾ ಬ್ರಾಹ್ಮಣವಾದ ಎಂದರೆ ವಿಷಸರ್ಪದಂತೆ. ಬ್ರಾಹ್ಮಣ ಮತ್ತು ಬ್ರಾಹ್ಮಣವಾದ ಬೇರೆ ಬೇರೆಯಲ್ಲ. ಅವೆರಡು ಒಂದೇ. ಕಮ್ಯುನಿಸ್ಟರಲ್ಲಿರುವ ಕೆಲವು ಬ್ರಾಹ್ಮಣರು ‘‘ನಾವು ಬ್ರಾಹ್ಮಣವಾದದ ವಿರುದ್ಧ ಮಾತನಾಡಬೇಕು ಬ್ರಾಹ್ಮಣರ ವಿರುದ್ಧವಲ್ಲ’’ ಎಂದು ಹೇಳುತ್ತಾರೆ. ಆದರೆ ಸರ್ಪ ಬೇರೆಯೇ ವಿಷ ಬೇರೆಯೇ ಆಗಲು ಸಾಧ್ಯವಿಲ್ಲ. ಬ್ರಾಹ್ಮಣವಾದ ಎಂದರೆ ಏನು ಎಂಬುದನ್ನು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳುತ್ತಾರೆ ‘‘ನ್ಯಾಯ, ಸಮಾನತೆಯ ಅಭಾವವೇ ಬ್ರಾಹ್ಮಣವಾದವಾಗಿದೆ’’. ನಾವು ಬ್ರಾಹ್ಮಣರನ್ನು ಗುರಿಯಾಗಿಸುತ್ತಿಲ್ಲ. ಆದರೆ ಬ್ರಾಹ್ಮಣರು ಶೇ. 3 ಜನರಿದ್ದರೂ ಶೇ. 85 ಜನರ ಹಕ್ಕನ್ನು ಕಸಿಯುತ್ತಿದ್ದಾರೆ. ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ, ಮಾಧ್ಯಮ ಇವರ ಹಿಡಿತದಲ್ಲಿದೆ. ಪ್ರಜಾಪ್ರಭುತ್ವ ದೇಶದಲ್ಲಿ ಕೆಲವೇ ಕೆಲವು ಸಂಖ್ಯೆಯ ಜನರ ಕೈಯಲ್ಲಿ ದೇಶದ ಹಿಡಿತ ಇರಲು ಸಾಧ್ಯವಾಗಬಾರದು. ಭಾರತದ ಪ್ರಜಾಪ್ರಭುತ್ವ ನೈಜವಾಗಿ ಪ್ರತಿನಿಧಿಸುವ ಪ್ರಜಾಪ್ರಭುತ್ವವಾಗಿದೆ. ಆದರೂ ಇವರು ದೇಶವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಷಡ್ಯಂತ್ರಕಾರಿ ಬ್ರಾಹ್ಮಣರಿಂದ ಹೀಗೆ ಆಗಿದೆ.

ಪ್ರ: ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸಿಲ್ಲ ಎಂದು ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ಬಂತು. ಇಂತಹ ಬೆಳವಣಿಗೆ ಕುರಿತು ನೀವು ಏನು ಹೇಳುತ್ತೀರಿ?

*ಪ್ರಸ್ತುತ ರಾಜ್ಯದಲ್ಲಿ ಸರಕಾರ ರಚನೆ ಮಾಡುವಾಗ ಇಲ್ಲಿರುವ ಶಾಸಕರನ್ನು ಮುಂಬೈಯಲ್ಲಿ ಖರೀದಿ ಮಾಡಲಾಗಿದೆ ಎಂದು ಬಿಜೆಪಿಯ ಒಬ್ಬ ಮಂತ್ರಿ ಹೇಳುತ್ತಾರೆ. ಈ ಹೇಳಿಕೆಯಿಂದಲೇ ಬಿಜೆಪಿಯ ಸಿದ್ಧಾಂತ ಬಯಲಾಗುತ್ತದೆ. ಬಿಜೆಪಿ ಸಂವಿಧಾನದ ಮೇಲೆ ನಂಬಿಕೆ ಇಟ್ಟಿಲ್ಲ. ಅವರು ಅಸಮಾನತೆಯೇ ಉಸಿರಾಗಿರುವ ಮನುಸ್ಮತಿಯನ್ನು ಸಂವಿಧಾನವೆಂದು ನಂಬುವವರು. ಸಂವಿಧಾನವನ್ನು ನಂಬದ ಇವರು ದೇಶದ ಜನರ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸುತ್ತಾರೆ. ಸಂವಿಧಾನ ರಚನಾ ಸಮಿತಿಯಲ್ಲಿದ್ದ ಒಬ್ಬರು ಒಂದು ಸಭೆಗೆ ಮಾತ್ರ ಹಾಜರಾದರು. ಉಳಿದ ಇಬ್ಬರು ಊರಲ್ಲಿ ಇರಲಿಲ್ಲ. ಒಬ್ಬರು ವೃದ್ಧರು ವಿದೇಶಕ್ಕೆ ಹೋಗಿ ಅಲ್ಲಿಯೇ ನೆಲೆಸಿದ್ದರು. ಸಂವಿಧಾನ ರಚನಾ ಸಮಿತಿಯಲ್ಲಿದ್ದ ಸಂವಿಧಾನ ರಚನೆಯ ಜವಾಬ್ದಾರಿ ಇರುವವರು ಯಾರೂ ಇರಲಿಲ್ಲ. ಆ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಒಬ್ಬರೇ ಸಂವಿಧಾನ ರಚನೆ ಮಾಡುವ ಜವಾಬ್ದಾರಿ ಹೊರಬೇಕಾಯಿತು. ಅವರು ಇದನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿ ಅವರ ಶ್ರಮದಿಂದಾಗಿ ನಮಗೆ ಸಂವಿಧಾನ ರಚನೆಯಾಯಿತು. ಹಾಗಾಗಿ ಸಂವಿಧಾನ ರಚನೆಯ ಅಂತ್ಯದಲ್ಲಿ ಧನ್ಯವಾದ ಕಾರ್ಯಕ್ರಮದಲ್ಲಿ ಸಂವಿಧಾನ ರಚನಾ ಸಮಿತಿಯ ಸದಸ್ಯರು ‘ಸಂವಿಧಾನದ ಕರ್ತೃ’ ಎಂಬ ಪದವಿಯನ್ನು ಅಂಬೇಡ್ಕರ್ ಅವರಿಗೆ ನೀಡಿದ್ದಾರೆ. ಇದು ನಾವು ನೀವು ನೀಡಿರುವುದಲ್ಲ. ಬಿಜೆಪಿಯವರು ಸಂವಿಧಾನ ಸಮಿತಿಯ ಅಪಮಾನವನ್ನು ಮಾಡುತ್ತಿದ್ದಾರೆ. ಅವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಇಂತಹವರ ಹೇಳಿಕೆಯ ಮೇಲೆ ನಾವು ಗಮನಕೊಡಬಾರದು. ಇದು ಸಂವಿಧಾನ ವಿರೋಧಿ ಹೇಳಿಕೆ.

ಪ್ರ: ದಲಿತರ ವಿರುದ್ಧ ದೌರ್ಜನ್ಯ ಹೆಚ್ಚುತ್ತಿದ್ದರೂ ದಲಿತರು ಆ ಕುರಿತು ಜಾಗೃತರಾಗಿಲ್ಲ. ರಾಜಕೀಯವಾಗಿ ಅವರನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಮಾತಿದೆ?

*ಇದು ಸತ್ಯವಾದದ್ದು. ಆದರೆ ದಲಿತ ಎಂಬ ಶಬ್ದವೇ ನಮ್ಮ ಸಂವಿಧಾನದಲ್ಲಿ ಇಲ್ಲ. ಭಾರತದಲ್ಲಿ ದಲಿತ ಎಂಬ ಪದವನ್ನು ಹೇರಿಕೆ ಮಾಡಲಾಗಿದೆ. ಸಂವಿಧಾನದ ಪ್ರಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ. ದಲಿತ ಎಂಬ ಪದಬಳಕೆ ರಾಜಕೀಯವಾಗಿ ಅಸ್ಪಶ್ಯರನ್ನಾಗಿ ಮಾಡುವ ಜಾಲವಾಗಿದೆ. ದಲಿತ ಶಬ್ದ ಪ್ರಯೋಗ ಮಾಡುವುದರಿಂದ ಅಂಬೇಡ್ಕರ್‌ವಾದ ಕೇವಲ ಪರಿಶಿಷ್ಟ ಜಾತಿಯದು ಎಂದೆನಿಸಿಕೊಳ್ಳುತ್ತದೆ. ಇದು ಬಹುಜನರಿಂದ ಪ್ರತ್ಯೇಕಗೊಳಿಸುವ ನಿಟ್ಟಿನಲ್ಲಿ ನಡೆಸುವ ಷಡ್ಯಂತ್ರವಾಗಿದೆ. ರಾಜಕೀಯ ಮೀಸಲಾತಿಯಿಂದ ನಾವು ಯಾರನ್ನು ಚುನಾಯಿಸಲು ಬಯಸುತ್ತೇವೆ ಅವರು ಚುನಾಯಿತರಾಗುವುದಿಲ್ಲ. ನಾವು ಯಾರನ್ನು ಬಯಸುವುದಿಲ್ಲವೋ ಅವರು ಚುನಾಯಿತರಾಗುತ್ತಾರೆ. ಅಂದರೆ ನಾಯಕರನ್ನು ಹೇರಿಕೆ ಮಾಡಲಾಗುತ್ತಿವೆ. 131 ಎಂಪಿಗಳು ಹಾಗೂ 1050 ಎಂಎಲ್‌ಎಗಳು ಇದ್ದಾರೆ. ಇವರು ಮೇಲ್ಜಾತಿಯ ಪಕ್ಷದ ಗುಲಾಮರು ಹಾಗಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಮೇಲೆ ಅತ್ಯಾಚಾರ ನಡೆಯುವಾಗ ಸಂಸತ್ತಲ್ಲಾಗಲಿ ಸಭೆಯಲ್ಲಾಗಲಿ ಅಥವಾ ಎಲ್ಲಿಯೇ ಆಗಲಿ ಅವರು ಮಾತನಾಡುವುದಿಲ್ಲ. ಇವರ ಶೋಷಣೆ ಮಾಡಿಯೇ ಮತವನ್ನು ಕಸಿಯಲಾಗುತ್ತದೆ. ಎಲ್ಲಿಯವರೆಗೆ ರಾಜಕೀಯ ಮೀಸಲಾತಿ ಕೊನೆಯಾಗುವುದಿಲ್ಲವೋ ಅಲ್ಲಿಯವರೆಗೆ ಇವರನ್ನು ಬಳಸಲಾಗುತ್ತದೆ. ಆದರೆ ರಾಷ್ಟ್ರಾದ್ಯಂತ ಪರಿಶಿಷ್ಟ ಜಾತಿಯಲ್ಲಿ ಜಾಗರೂಕತೆ ಮೂಡುತ್ತಿದೆ.

ಸಂಸತ್ತಿನಲ್ಲಿ ಕೆಲವು ಆರೆಸ್ಸೆಸ್‌ನ ಜನರು ಸಂವಿಧಾನವನ್ನು ಸುಟ್ಟರು. ಆದರೆ ಯಾವ ಎಂಪಿ, ಎಂಎಲ್‌ಎಗಳೂ ಮಾತನಾಡಲಿಲ್ಲ. ಹಾಗಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರಲ್ಲಿ ಜಾಗೃತಿ ಮೂಡಿಸುವ ಮತ್ತು ಅವರಲ್ಲಿ ನಾಯಕತ್ವ ಗುಣ ಬೆಳೆಸುವ ಅಗತ್ಯವಿದೆ. ಅವರ ನಾಯಕರು ರಾಜಕೀಯ ಗುಲಾಮರಾಗಿದ್ದಾರೆ. ಸಮಾಜದ ಬದಲಾವಣೆ ಮಾಡಬೇಕಾದ ನಾಯಕರು ಬಿಜೆಪಿಯೊಂದಿಗೆ ಸೇರಿದ್ದಾರೆ. ಹಾಗಾಗಿ ಸ್ವಾಭಾವಿಕವಾಗಿ ಅವರ ದುರ್ಬಳಕೆಯಾಗುತ್ತಿವೆ.

ಪ್ರ: ದಲಿತರು-ಹಿಂದುಳಿದವರು-ಅಲ್ಪಸಂಖ್ಯಾತರುರಾಜಕೀಯವಾಗಿ ಒಂದುಗೂಡುವ ಮಾತು ನಿಜವಾಗಲು ಸಾಧ್ಯವೇ?

ಹೌದು ಸಾಧ್ಯವಿದೆ. ಸಂವಿಧಾನ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಕ್ಕೆ ರಕ್ಷಣೆ ನೀಡಿದೆ. ಈ ದೇಶ ಉಳಿಯಲು ಮುಖ್ಯ ಕಾರಣ ಸಂವಿಧಾನದ ಚೌಕಟ್ಟು. ಸಂವಿಧಾನದ ಚೌಕಟ್ಟನ್ನೇ ತಿರಸ್ಕಾರ ಮಾಡಿದರೆ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ. ಈ ಎಲ್ಲಾ ಸಮುದಾಯಕ್ಕೆ ಅರಿವು ಮೂಡಿಸಿ ಒಂದು ರಾಜಕೀಯ ಶಕ್ತಿಯಾಗಿಸಬಹುದು. ಶೇ. 3 ಜನರಿಗೆ ನಾಲ್ಕು ರಾಷ್ಟ್ರೀಯ ಪಕ್ಷಗಳಿವೆ. ಆದರೆ ಬಹುಸಂಖ್ಯೆಯಲ್ಲಿ ಇರುವ ನಮಗೆ ಒಂದು ರಾಷ್ಟ್ರೀಯ ಪಕ್ಷವಿಲ್ಲ. ಆದರೆ ಇದನ್ನು ಪ್ರಜಾಪ್ರಭುತ್ವ ಎನ್ನಲಾಗುತ್ತಿದೆ. ಒಬ್ಬ ಬ್ರಾಹ್ಮಣನ ವಿರುದ್ಧ ಇನ್ನೊಬ್ಬ ಬ್ರಾಹ್ಮಣನಾಗಲು ಸಾಧ್ಯವಿಲ್ಲ. ಸಮಸ್ಯೆಯನ್ನು ಸೃಷ್ಟಿ ಮಾಡುವ ಸಿದ್ಧಾಂತ ಸಮಸ್ಯೆಗೆ ಪರಿಹಾರವಾಗಲು ಸಾಧ್ಯವಿಲ್ಲ. ಸಮಸ್ಯೆ ನಮ್ಮದಾಗಿರುವಾಗ ನಾವೇ ಅದನ್ನು ಸರಿಪಡಿಸಬೇಕು. ಇದು ಸಾಧ್ಯವಿದೆ. ಅತಿ ಶೀಘ್ರದಲ್ಲಿ ಆಗುತ್ತೆ.

ಪ್ರ: ಬಿಎಸ್ಪಿ ನಾಯಕಿ ಈಗ ದಲಿತರ ಮತ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಬಿಎಸ್ಪಿಪಕ್ಷವೇ ವಿಫಲವಾಗಿರುವಾಗ ಪರ್ಯಾಯವೇನು?

* ಫುಲೆ, ಅಂಬೇಡ್ಕರ್ ಸಿದ್ಧಾಂತವನ್ನು ನೆಚ್ಚಿಕೊಂಡಿದ್ದ ಕಾನ್ಶಿರಾಮ್ ಅವರು ಬಹುಜನ ಸಮಾಜವಾದಿ ಪಕ್ಷ ಸ್ಥಾಪನೆ ಮಾಡಿದ್ದು, ಅದು ರಾಷ್ಟ್ರೀಯ ಪಕ್ಷವಾಗಿತ್ತು. ಆದರೆ ಈಗ ಉತ್ತರಪ್ರದೇಶದ ಪಕ್ಷವಾಗಿಯೂ ಉಳಿದಿಲ್ಲ. ಅದರ ಆನೆ ಚಿಹ್ನೆಯನ್ನು ತಿರಸ್ಕಾರ ಮಾಡಲಾಗಿದೆ. ಕಾನ್ಶಿರಾಮ್ ಅವರು ಯಾವ ಸಿದ್ಧಾಂತದ ಆಧಾರದ ಮೇಲೆ ಪಕ್ಷ ಕಟ್ಟಿದರೋ ಆ ಸಿದ್ಧಾಂತವನ್ನು ಮಾಯಾವತಿಯವರು ಕಡೆಗಣಿಸಿದರು. ಬ್ರಾಹ್ಮಣರಾದ ಸತೀಶ್ ಮಿಶ್ರಾ ಆರೆಸ್ಸೆಸ್‌ನವರು ಹಾಗಾಗಿ ಆರೆಸ್ಸೆಸ್‌ನ ನೀತಿಯನ್ನೇ ಮಾಡಿದ್ದಾರೆ. ‘ಬಹುಜನ’ ಎಂಬ ಪದವನ್ನು ತೆಗೆದು ಈಗ ‘ಸರ್ವಜನ’ ಎಂಬ ಪಕ್ಷವನ್ನು ಮಾಡಿದ್ದಾರೆ. ಆ ಪಕ್ಷಕ್ಕೆ ಬಲದ ಸಂಕೇತವಾದ ಆನೆಯ ಚಿಹ್ನೆಯಾಗಿತ್ತು, ಆದರೆ ಈಗ ಆನೆಯಲ್ಲ ಗಣೇಶ, ಬ್ರಹ್ಮ, ವಿಷ್ಣು, ಮಹೇಶ ಎಂಬ ಘೋಷಣೆ ಕೂಗಲಾಗುತ್ತದೆ. ಅಂಬೇಡ್ಕರ್ ಸಿದ್ಧಾಂತ ಬಿಟ್ಟು ಈಗ ಬ್ರಾಹ್ಮಣವಾದದೆಡೆ ವಾಲಿದೆ. ಒಂದು ಕಾಲದಲ್ಲಿ ‘‘ಗೂಂಡಾಗಳ ಎದೆಯ ಮೇಲೆ ಏರು, ಆನೆಯ ಚಿಹ್ನೆಯ ಗುಂಡಿಯನ್ನು ಒತ್ತು’’ ಎಂದು ಘೋಷಣೆ ಇತ್ತು. ಈಗ ಆನೆ ನಾಪತ್ತೆಯಾಗಿ ಬ್ರಹ್ಮ, ವಿಷ್ಣು ಮಹೇಶ್ವರ ಆಗಿದೆ. ಆ ಗೂಂಡಾಗಳು ಆನೆಯ ಮೇಲೆ ಸವಾರಿ ಮಾಡುತ್ತಿದ್ದಾರೆ. ಮಾಯಾವತಿ ಹಾಗೂ ಬಿಜೆಪಿಯ ನಡುವೆ ಒಪ್ಪಂದವಾಗಿದೆ. ಹಾಗಾಗಿ ಉತ್ತರಪ್ರದೇಶ ಹೊರತು ಪಡಿಸಿ ಬೇರೆ ಯಾವ ರಾಜ್ಯಗಳಿಗೂ ಈ ಪಕ್ಷ ಪ್ರವೇಶ ಮಾಡುತ್ತಿಲ್ಲ. ಈ ಒಪ್ಪಂದದ ಪ್ರಕಾರ ಮಾಯಾವತಿಯನ್ನು ಅಲ್ಲಿ ಇರಿಸಲಾಗಿದೆ. ಮಾಯಾವತಿಯವರು ಪೂರ್ಣರೂಪದಲ್ಲಿ ಸಿದ್ಧಾಂತಕ್ಕೆ ತಿಲಾಂಜಲಿ ನೀಡಿದ್ದಾರೆ. ಈಗ ಉತ್ತರಪ್ರದೇಶದಲ್ಲಿ ಮಾಯಾವತಿಯವರನ್ನು ತೆಗೆದುಹಾಕಿ ಭಾಜಪ ಉಳಿಸಿ ಎಂಬ ಘೋಷಣೆ ಕೇಳಿಬರುತ್ತಿದೆ. ಮಾಯಾವತಿ ಬ್ರಾಹ್ಮಣರು ಹೇಳಿದಂತೆ ಕೆಲಸ ಮಾಡುತ್ತಿದ್ದಾರೆ. ಭಾಜಪಕ್ಕೆ ಭವಿಷ್ಯವಿಲ್ಲ ಆದರೆ ಚಳವಳಿಗೆ ಭವಿಷ್ಯವಿದೆ. ಬಹುಜನ ಪಕ್ಷ ಒಂದು ಆಂದೋಲನವಾಗಿತ್ತು. ಈ ಆಂದೋಲನವನ್ನು ಬ್ರಾಹ್ಮಣರು ಉಪಾಯದಿಂದ ನಾಶ ಮಾಡಿದ್ದಾರೆ. ‘ಸವರ್ಣ ರಿಸರ್ವೇಶನ್ ಬಿಲ್’ ಜಾರಿಯಾದಾಗ ಮಾಯಾವತಿ ‘‘ಅದು ನಾನು ಹೇಳಿದ ಕಾರಣ ಬಿಜೆಪಿ ಈ ಬಿಲ್ ಮಾಡಿದೆ’’ ಎಂದು ಹೇಳಿದ್ದಾರೆ. ಹಾಗಾದರೆ ಮಯಾವತಿ ಹಾಗೂ ಬಿಜೆಪಿಯ ನೀತಿ ಒಂದೇ. ಆದರೆ ಬಿಎಸ್ಪಿ ಬಹುಜನರ ಪಕ್ಷವೇ ಅಥವಾ ಬಿಜೆಪಿಯ ಒಂದು ಭಾಗವೇ?

ಪ್ರ: ನಮ್ಮ ದೇಶದ ಸಂವಿಧಾನಕ್ಕೆ 70 ವರ್ಷಗಳಾಯಿತು. ಈ ಸಂದರ್ಭದಲ್ಲಿ ನಮ್ಮ ಸಂವಿಧಾನ ಎದುರಿಸುತ್ತಿರುವ ಸವಾಲುಗಳೇನು ಹಾಗೂ ಆ ಸವಾಲುಗಳನ್ನು ಹೇಗೆ ಎದುರಿಸುವುದು?

*ಆರೆಸ್ಸೆಸ್‌ನವರು ಪ್ರಧಾನಿ, ರಾಷ್ಟ್ರಪತಿ, ಸಂಸದರು, ವಿಪಕ್ಷ ನಾಯಕರು ಇರುವ ಸಂಸತ್ತಿನಲ್ಲೇ ಸಂವಿಧಾನವನ್ನು ಸುಟ್ಟರು. ಆದರೆ ಅದರ ವಿರುದ್ಧ ಯಾರೂ ಮಾತನಾಡಿಲ್ಲ. ಅದನ್ನು ವಿರೋಧಿಸಿ ಸಂವಿಧಾನ ಸುಟ್ಟವರಿಗೆ ಗಲ್ಲು ಆಗಬೇಕೆಂದು ಹೇಳಿಲ್ಲ. ಈ ದೇಶದಲ್ಲಿ ದೇಶದ ಸಂವಿಧಾನವನ್ನು ಕಡೆಗಣಿಸಿ ಬೇರೆ ಸಂವಿಧಾನವನ್ನು ಅನುಷ್ಠಾನ ಮಾಡಲಾಗಿದೆ. ಇದು ದೊಡ್ಡ ಸವಾಲಾಗಿದೆ. ಸರಕಾರಿ ರಂಗವನ್ನು ಖಾಸಗೀಕರಣ ಮಾಡಲು ಸರಕಾರ ಮುಂದಾಗಿದೆ. ಆದರೆ ಇದನ್ನು ವಿರೋಧಿಸಲು ವಿಪಕ್ಷವೇ ಇಲ್ಲದಂತಾಗಿದೆ. ಭಾರತದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ಆಗಿವೆ. ಬೇರೆ ವಿಪಕ್ಷವಿಲ್ಲ. ಇದು ಬಹುದೊಡ್ಡ ದೌರ್ಭಾಗ್ಯ. ಇನ್ನು ಯಾವುದೇ ಚುನಾವಣೆ ನಡೆಯುವುದು ಬೇಡ ಎಂದು ಬಿಜೆಪಿ ಬಯಸುತ್ತಿದೆ. ರಾಷ್ಟ್ರಪತಿ ಚುನಾವಣೆ ಪದ್ಧ್ದತಿಯನ್ನು ಜಾರಿಗೆ ತರಲು ಮುಂದಾಗಿದೆ. ಪ್ರಸ್ತುತ ಅವರು ಸಂವಿಧಾನದ ಮೇಲೆ ಹಿಡಿತವಿಡಲು ಕಾರಣ ಇವಿಎಂ ಆಗಿದೆ. ಇವೆಲ್ಲಾ ಸಮಸ್ಯೆಗಳಿಗೆ ಕಾರಣ ಬ್ರಾಹ್ಮಣವಾದ ಹಾಗೂ ಇವಿಎಂನ ನಿಯಂತ್ರಣವಾಗಿದೆ. ಎಲ್ಲಿಯವರೆಗೆ ಇವಿಎಂನ್ನು ನಿಷೇಧ ಮಾಡುವುದಿಲ್ಲ ಅಲ್ಲಿಯವರೆಗೂ ಸಂವಿಧಾನದ ಸುರಕ್ಷತೆಗೆ ಯಾವುದೇ ಖಾತರಿ ಇಲ್ಲ. ಸಂವಿಧಾನವನ್ನು ಉಳಿಸಬೇಕಾದಲ್ಲಿ ಇವಿಎಂ ವಿರುದ್ಧ ಒಂದು ದೊಡ್ಡ ಆಂದೋಲನ ನಡೆಸುವ ಅಗತ್ಯವಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top