ಇಂದು ಡಾ. ಬಿ. ಆರ್. ಅಂಬೇಡ್ಕರ್‌ರ ಪರಿನಿಬ್ಬಾಣ ದಿನ

ಮಹಾಸಾಧಕನ ಅಂತಿಮ ದಿನಗಳು

ದೇಶದ ಕೋಟ್ಯಂತರ ಶೋಷಿತ ಸಮುದಾಯಗಳಿಗೆ ಸಾಮಾಜಿಕ ಹೋರಾಟದ ಮೂಲಕ ಸಮ ಸಮಾಜದ ನಿರ್ಮಾಣಕ್ಕಾಗಿ ಸಂಕಲ್ಪತೊಟ್ಟು ವಿವಿಧತೆಯಲ್ಲಿ ಏಕತೆ ಸಾರುವ ಸಂವಿಧಾನ ನೀಡಿದ ಡಾ. ಬಿ.ಆರ್. ಅಂಬೇಡ್ಕರ್‌ರವರು ಡಿಸೆಂಬರ್ 6, 1956ರಂದು ಮಹಾಪರಿನಿಬ್ಬಾಣ ಹೊಂದಿದರು. ಅಪಾರ ಅನುಯಾಯಿಗಳು ಮತ್ತು ದೇಶದ ಜನರಿಂದ ಬಾಬಾ ಸಾಹೇಬ್ ಎಂದು ಕರೆಯಿಸಿಕೊಂಡ ಡಾ. ಭೀಮ್ ರಾವ್ ರಾಮ್‌ಜೀ ಅಂಬೇಡ್ಕರ್‌ರವರು ಭಾರತ ದೇಶದಲ್ಲಿ ಚಿರಕಾಲ ಉಳಿಯುವಂತಹ ಪರಿಣಾಮಕಾರಿ ಮುದ್ರೆಯನ್ನೊತ್ತಿದ್ದಾರೆ.

ಸ್ವತಂತ್ರಭಾರತದ ಭವಿಷ್ಯವನ್ನು ರೂಪಿಸುವುದರಲ್ಲಿ ಪ್ರಮುಖ ಪಾತ್ರವಹಿಸಿ, ದೇಶದ ಕೋಟ್ಯಂತರ ಶೋಷಿತ ಸಮುದಾಯಗಳಿಗೆ ಸಾಮಾಜಿಕ ಹೋರಾಟದ ಮೂಲಕ ಸಮ ಸಮಾಜದ ನಿರ್ಮಾಣಕ್ಕಾಗಿ ಸಂಕಲ್ಪತೊಟ್ಟು ವಿವಿಧತೆಯಲ್ಲಿ ಏಕತೆ ಸಾರುವ ಸಂವಿಧಾನ ನೀಡಿದ ಡಾ. ಬಿ.ಆರ್. ಅಂಬೇಡ್ಕರ್‌ರವರು ಡಿಸೆಂಬರ್ 6, 1956ರಂದು ಮಹಾಪರಿನಿಬ್ಬಾಣ ಹೊಂದಿದರು. ಅಪಾರ ಅನುಯಾಯಿಗಳು ಮತ್ತು ದೇಶದ ಜನರಿಂದ ಬಾಬಾ ಸಾಹೇಬ್ ಎಂದು ಕರೆಯಿಸಿಕೊಂಡ ಡಾ. ಭೀಮ್ ರಾವ್ ರಾಮ್‌ಜೀ ಅಂಬೇಡ್ಕರ್‌ರವರು ಭಾರತ ದೇಶದಲ್ಲಿ ಚಿರಕಾಲ ಉಳಿಯುವಂತಹ ಪರಿಣಾಮಕಾರಿ ಮುದ್ರೆಯನ್ನೊತ್ತಿದ್ದಾರೆ. ಖಚಿತ ಸಾಮಾಜಿಕ ಹೋರಾಟಗಳನ್ನು ಮೈಗೂಡಿಸಿಕೊಂಡಿದ್ದ ಅವರು ಸಾಮಾಜಿಕ ಬದಲಾವಣೆಯಿಂದ ಮಾತ್ರ ಸಮಾನತೆ ಸಾಧಿಸಲು ಸಾಧ್ಯ ಎಂದು ಭಾರತ ದೇಶದಲ್ಲಿ ತಮ್ಮ ಅವಿರತ ಹೋರಾಟಗಳ ಮೂಲಕ ಎತ್ತಿ ತೋರಿಸಿದ್ದಾರೆ. ತಮ್ಮ 60ನೇ ವಯಸ್ಸಿನ ನಂತರ ಅವರು ಅನೇಕ ನೋವುಗಳನ್ನು ಮತ್ತು ಒತ್ತಡಗಳನ್ನು ಅನುಭವಿಸುತ್ತಿದ್ದರು. ಅನಾರೋಗ್ಯವು ಅವರನ್ನು ಕಾಡುತ್ತಿತ್ತು. ಹೀಗಿದ್ದುಕೊಂಡು ಅವರು ಶೋಷಿತರ ಹಿತರಕ್ಷಣೆಗಾಗಿ ಹೋರಾಡುತ್ತಿದ್ದರು.

ದೇಶದ ರಾಜಕೀಯ ವಿಚಾರಗಳು, ಶೋಷಿತ ಸಮುದಾಯದ ಹಿತ ಚಿಂತನೆ ಮತ್ತು ಅವರು ಸ್ಥಾಪಿಸಿದ ಜನತಾ ಶಿಕ್ಷಣದ ವಿಚಾರವಾಗಿ ಆಗಾಗ ಮುಂಬೈ ಮತ್ತು ದಿಲ್ಲಿಗೆ ಭೇಟಿ ನೀಡುತ್ತಿದ್ದರು. ತಾವು ಹಾಕಿಕೊಂಡಿದ್ದ ದಲಿತಾಭಿವೃದ್ಧಿ ಕೆಲಸ ಕಾರ್ಯಗಳಿಗಾಗಿ ಇಡೀ ಭಾರತ ದೇಶವನ್ನೇ ಸುತ್ತುತ್ತಿದ್ದರು. ಹೀಗಾಗಿ ಅವರ ಆರೋಗ್ಯ ದಿನೇ ದಿನೇ ಹದಗೆಡುತ್ತಿತ್ತು. ತಮ್ಮ ಧರ್ಮಪತ್ನಿ ತ್ಯಾಗಜೀವಿ ರಮಾಬಾಯಿ ತೀರಿಹೋದ ನಂತರ ಅವರು ಮರು ಮದುವೆ ಆಗಬಾರದೆಂದು ನಿರ್ಧರಿಸಿದ್ದರು. ಆದರೆ, 1948ರ ಹೊತ್ತಿಗೆ ಡಾ. ಬಿ. ಆರ್. ಅಂಬೇಡ್ಕರ್‌ರವರ ಆರೋಗ್ಯ ಕ್ಷೀಣಿಸುತ್ತಿದ್ದಾಗ, ವೈದ್ಯರ, ಸ್ನೇಹಿತರ ಅಭಿಪ್ರಾಯದ ಮೇರೆಗೆ ಆರೋಗ್ಯದ ಹಿತದೃಷ್ಟಿಯಿಂದ ಮರುಮದುವೆಯಾದರು. ಆ ಸಂದರ್ಭದಲ್ಲಿ ಕೋಟ್ಯಂತರ ದಲಿತರ ಭವಿಷ್ಯ ಅಡಗಿತ್ತು. 1955ರ ನಂತರ ದೈನಂದಿನ ಕೆಲಸ ಕಾರ್ಯಗಳನ್ನು ಮಾಡಲು ಅವರಿಗೆ ಕಷ್ಟವಾಗುತ್ತಿತ್ತು. ಈ ಸಂದರ್ಭದಲ್ಲಿ ಅವರ ಪತ್ನಿ ಸವಿತಾ ಅಂಬೇಡ್ಕರ್ ವೈದ್ಯರನ್ನು ಕರೆಯಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಅಪಾರ ಜನ ಸಮೂಹ ಮತ್ತು ಅನುಯಾಯಿಗಳು ಅವರ ಮನೆಗೆ ಬಂದು ಡಾ. ಅಂಬೇಡ್ಕರ್‌ರವರ ಆರೋಗ್ಯ ವಿಚಾರಿಸಿ ಹೋಗುತ್ತಿದ್ದರು. ಆಗ ಬಾಬಾ ಸಾಹೇಬರು ಲವಲವಿಕೆಯಿಂದ ಅವರನ್ನು ವಿಚಾರಿಸುತ್ತಿದ್ದರು.

ಡಾ. ಬಿ.ಆರ್ ಅಂಬೇಡ್ಕರ್ ರವರ ಕೊನೆಯ ಸಂದೇಶಗಳು ಪರಿಣಾಮಕಾರಿಯಾದಂತವು. 1956 ಮೇ 12ರಂದು ಬಿಬಿಸಿಗೆ ಮಾಡಿದ ಭಾಷಣದಲ್ಲಿ ತಾನು ಬೌದ್ಧ ಧರ್ಮವನ್ನು ಏಕೆ ಇಷ್ಟ ಪಡುತ್ತೇನೆ ಎಂಬ ವಿಚಾರವನ್ನು ಸ್ಪಷ್ಟಪಡಿಸುತ್ತಾರೆ. ‘‘ಬೌದ್ಧ ಧರ್ಮ ಒಂದು ಸಮಾನತೆ ಇರುವ ಸಮಾಜ ಸುಧಾರಣಾ ಸುವಾರ್ತೆ ಎಂಬುದನ್ನು ಅರಿತು ಬೆಳೆಸಿದರೆ, ಅದು ವಿಶ್ವಕ್ಕೆ ಶಾಶ್ವತವಾದ ಸುಖಿ ಸಮಾಜ ಪರಿಹಾರವಾಗಬಲ್ಲದು’’ ಎಂದು ಹೇಳುತ್ತಾರೆ. ಇದರಿಂದ ಭಾರತಕ್ಕೆ ಹೆಚ್ಚು ಉಪಯುಕ್ತವಾಗುತ್ತದೆ ಎನ್ನುತ್ತಾರೆ. ಅದೇ ವರ್ಷ 1956 ಮೇ 20ರಂದು ‘ವಾಯ್ಸಾ ಆಫ್ ಅಮೆರಿಕ’ದಲ್ಲಿ ಭಾರತದ ಪ್ರಜಾಪ್ರಭುತ್ವದ ಭವಿಷ್ಯ ಕುರಿತು ಸುದೀರ್ಘವಾಗಿ ಮಾತಾನಾಡುತ್ತಾ ‘‘ಭಾರತದ ಕೆಳಸ್ತರದ ಜನರಿಗೆ ಶಿಕ್ಷಣ ದೊರೆತರೆ, ಜಾತಿ ವ್ಯವಸ್ಥೆ ಕ್ಷೀಣಿಸುತ್ತದೆ. ಆದ್ದರಿಂದ ದಲಿತರು ಜಾತಿ ವ್ಯವಸ್ಥೆಯನ್ನು ಬುಡಸಮೇತ ಕಿತ್ತು ಹಾಕಲು ಶಿಕ್ಷಿತರಾಗಬೇಕು. ನಿಮಗೆ ನೀವೇ ಬೆಳಕಾಗಿ ಮು್ನಡೆಯಬೇಕು’’ ಎಂದು ನುಡಿದರು.

1956 ಜುಲೈ 29ರಂದು ‘ಬುದ್ಧ ಆ್ಯಂಡ್ ಕಾರ್ಲ್ ಮಾರ್ಕ್ಸ್’, ‘ರೆವಲ್ಯೂಶನ್ ಆ್ಯಂಡ್ ಕೌಂಟರ್ ರೆವಲ್ಯೂಶನ್ ಇನ್ ಎನ್ಸಿಯಂಟ್ ಇಂಡಿಯಾ ಆ್ಯಂಡ್ ರಿಡೈಲ್ಸ್ ಆಫ್ ಹಿಂದೂಯಿಸಂ’ ಮತ್ತು ‘ಬುದ್ಧ ಆ್ಯಂಡ್ ಹಿಸ್ ದಮ’್ಮ ಕೃತಿಗಳು ಪ್ರಕಟವಾಗುವುದರಲ್ಲಿದ್ದವು. ಇವು ನನ್ನ ಜೀವಿತ ಅವಧಿಯಲ್ಲಿ ಪ್ರಕಟಿಸಲು ಸಾಧ್ಯವಾಗುತ್ತಿಲ್ಲವಲ್ಲ! ಎಂದು ಡಾ. ಬಿ.ಆರ್ ಅಂಬೇಡ್ಕರ್‌ರವರು ತಮ್ಮ ಆಪ್ತ ಸಹಾಯ ರತ್ತುವಿನಲ್ಲಿ ಹೇಳಿಕೊಳ್ಳುತ್ತಾರೆ.

ಮುಂದೆ 1956 ಜುಲೈ 31 ರಂದು ನೀರವ ಮೌನದಿಂದ ‘‘ನಾನು ಏಕೆ ದುಃಖಿತನಾಗಿದ್ದೇನೆಂದು ನಿನಗೆ ತಿಳಿಯದು. ನಾನು ನನ್ನ ಜೀವನದ ಧ್ಯೇಯಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ! ನನ್ನ ಜನರು ಇತರರೊಂದಿಗೆ ಸರಿ ಸಮಾನರಾಗಿ ಅಧಿಕಾರಕ್ಕೇರಿ ಆಳ್ವಿಕೆ ಮಾಡುವುದನ್ನು ನನ್ನ ಜೀವಿತದ ಕಾಲದಲ್ಲಿ ನೋಡಲು ಬಯಸಿದ್ದೆ. ಆದರೆ ನನ್ನ ಆರೋಗ್ಯ ಕ್ಷೀಣಿಸುತ್ತಿದೆ. ಬಹುತೇಕ ನನ್ನ ಶಕ್ತಿ ಕುಂದಿದೆ. ನಾನು ಸಾಧಿಸಿ ಗಳಿಸಿದ ಫಲವನ್ನು ಕೆಲವು ವಿದ್ಯಾವಂತರು ಅನುಭವಿಸಿ ಸಂತೋಷದಿಂದಿದ್ದಾರೆ. ತುಳಿತಕ್ಕೆ ಒಳಗಾದ, ಅವಿದ್ಯಾವಂತರಾದ ಅವರ ಸೋದರ, ಬಂಧುಗಳ ಕಡೆ ಕಾಳಜಿ ವಹಿಸದೆ ಬಹುತೇಕರು ನಿಷ್ಪ್ರಯೋಜಕ ಸ್ವಾರ್ಥಿಗಳಾಗಿದ್ದಾರೆ. ಹಳ್ಳಿಗಳ ಸಮಾಜದ ಶೋಷಿತರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಬದಲಾಯಿಸಲು ಗಮನ ಹರಿಸದೆ ಅಧಿಕಾರ ಪ್ರಯೋಜನಕ್ಕಾಗಿ ಸವಲತ್ತುಗಳನ್ನು ಮಾತ್ರ ಪಡೆದು ಸುಖಿಸಲು ಆಶೆ ಪಡುತ್ತಿದ್ದಾರೆ. ಈ ಮೂಲಕ ನನ್ನನ್ನು ವಂಚಿಸಿದ್ದಾರೆ. ನನ್ನ ನಂತರ ಸಾಮಾಜಿಕ ಹೋರಾಟವನ್ನು ಮುಂದುವರಿಸಲು ಯಾರೂ ಮುಂದೆ ಬರುತ್ತಿಲ್ಲ! ನಾನು ಅನೇಕ ಕಷ್ಟ ನೋವುಗಳ ಅನುಭವಿಸಿಕೊಂಡು ಈ ವಿಮೋಚನ ರಥವನ್ನು ಎಳೆದು ತಂದಿದ್ದೇನೆ. ಮುಂದೆ ವಿವಿಧ ರೀತಿಯ ಅಡೆತಡೆಗಳು ಬರಬಹುದು! ಆದ್ದರಿಂದ ಈ ರಥ ಮುಂದೆ ಸಾಗಲು ಎಲ್ಲರೂ ಪ್ರಯತ್ನಿಸಬೇಕು. ಒಂದು ವೇಳೆ ಇದು ಸಾಧ್ಯವಾಗದಿದ್ದರೆ, ಈ ರಥವನ್ನು ಇಲ್ಲೇ ನಿಲ್ಲಿಸಲಿ, ಆದರೆ ಎಷ್ಟೇ ಕಷ್ಟ ಬಂದರೂ ಹಿಂದೆ ಹೋಗಲು ಬಿಡಬಾರದು ಇದೇ ನನ್ನ ಜನರಿಗೆ ನಾನು ತಿಳಿಸುವ ಅಂತಿಮ ಸಂದೇಶ. ನೀನು ನನ್ನ ಜನರಿಗೆ ತಿಳಿಸು ಹೋಗು...’’ ಎಂದು ಭಾವಪರವಶವಾಗಿ ಆಪ್ತ ಸಹಾಯಕ ಎಂ.ಎಸ್. ರತ್ತುವಿನಲ್ಲಿ ಹೇಳಿದರು.

ಮುಂದೆ, 1956 ಅಕ್ಟೋಬರ್ 14 ರಂದು ತಮ್ಮ ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮ ಸ್ವೀಕರಿಸಿ ತನ್ನ ಅಪಾರ ಶೋಷಿತ ಸಮುದಾಯಗಳಿಗೆ ತಾವೇ ಬೌದ್ಧ ಧರ್ಮದ ತತ್ವಗಳನ್ನು ಬೋಧಿಸಿದರು. 1956 ನವೆಂಬರ್ 15ರಂದು ನೇಪಾಳದಲ್ಲಿ ವಿಶ್ವ ಬೌದ್ಧ ಸಮ್ಮೇಳನದಲ್ಲಿ ಬುದ್ಧ ಮತ್ತು ಕಾರ್ಲ್‌ಮಾರ್ಕ್ಸ್ ಕುರಿತು ಮಾತನಾಡಿದರು. ಅಲ್ಲಿಂದ 1956 ನವೆಂಬರ್ 15ರಿಂದ ಕಠ್ಮಂಡುವಿನ ಬೌದ್ಧ ಸ್ಥಳಗಳನ್ನು ನೋಡಿ, ಹಿಂದಿರುಗುವಾಗ ಬನಾರಸ್ ವಿವಿ ಮತ್ತು ಕಾಶಿ ವಿದ್ಯಾಪೀಠ, ಸಾರನಾಥ್, ಖುಶಿನಗರ ಮುಂತಾದ ಕಡೆ ಪ್ರವಾಸ ಮಾಡಿ ನವೆಂಬರ್ 30 ರಂದು ದಿಲ್ಲಿಗೆ ಬಂದರು. 1956 ಡಿಸೆಂಬರ್ 1 ರಂದು ಮಥುರಾ ರಸ್ತೆಯ ಬೌದ್ಧ ಕಲಾ ವಸ್ತು ಪ್ರದರ್ಶನದ ವಿಗ್ರಹಗಳನ್ನು ನೋಡಿ ಆನಂದಪಟ್ಟರು. ಡಿಸೆಂಬರ್ 2 ರಂದು ಟಿಬೇಟಿಯನ್ನರ ಬೌದ್ಧ ಗುರು ದಲೈಲಾಮಾರನ್ನು ಭೇಟಿ ಮಾಡಿದ ನಂತರ ದಿಲ್ಲಿಯ ಅಶೋಕ ವಿಹಾರದಲ್ಲಿ ಬೌದ್ಧರ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಆದರೆ, ಅವರ ಆರೋಗ್ಯ ಅವರನ್ನು ಕಾಡುತ್ತಿತ್ತು. ಡಿಸೆಂಬರ್ 3ರಂದು ಅವರ ಉತ್ಸಾಹ ಮೊದಲಿನಂತಿರಲಿಲ್ಲ. ಅವರು ತಮ್ಮ ಮನೆಯ ಹುಲ್ಲು ಹಾಸಿನಲ್ಲಿ ಕುಳಿತು ತಮ್ಮ ಅನುಯಾಯಿಗಳೊಂದಿಗೆ ಕಾಲ ಕಳೆದರು.

ಆಗ ಅವರ ತೋಟದ ಕೆಲಸಗಾರ ರಾಮ್ ಚಂದಲ್‌ನಿಗೆ ಜ್ವರ, ಕೆಮ್ಮು ಇತ್ತು. ತಮ್ಮ ಆರೋಗ್ಯ ಲೆಕ್ಕಿಸದೇ ರತ್ತುವಿಗೆ ಹೇಳಿ ಅವನ ಆರೋಗ್ಯ ಸರಿಪಡಿಸಲು ಕ್ರಮವಹಿಸಿದರು. ರತ್ತು ಅಂದು ರಾತ್ರಿ ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್ ಪುಸ್ತಕ ಟೈಪ್ ಮಾಡಿ ರಾತ್ರಿ 11:30 ಗಂಟೆಗೆ ಮನೆಗೆ ಹೋದನು. ಡಿಸೆಂಬರ್ 4ರಂದು ಬಾಬಾ ಸಾಹೇಬರು ಕೆಲವು ಗಂಟೆಗಳ ಕಾಲ ರಾಜ್ಯ ಸಭೆಯಲ್ಲಿ ಹಾಜರಿದ್ದರು. ಡಿಸೆಂಬರ್ 16ರಂದು ಮುಂಬೈನಲ್ಲಿ ಬೌದ್ಧ ದೀಕ್ಷೆ, ಮತಾಂತರ ಕಾರ್ಯಕ್ರಮವಿತ್ತು. ಕಾರ್ಯಕ್ರಮ ಆದ ನಂತರ ಅಜಂತ ಎಲ್ಲೋರ ಬುದ್ಧ ಗುಹೆಗಳನ್ನು ನೋಡಲು ಆಶೆ ಪಟ್ಟಿದ್ದರು. ಇದಕ್ಕಾಗಿ ಪ್ರಯಾಣದ ಟಿಕೆಟ್ ಕೂಡ ಬುಕ್ಕಾಗಿತ್ತು. ಡಿಸೆಂಬರ್ 5ರಂದು ಹುಲ್ಲು ಹಾಸಿನಲ್ಲಿ ಕುಳಿತು ಕೆಲವು ಅನುಯಾಯಿಗಳ ಸಮಸ್ಯೆ ಆಲಿಸಿದರು. ಕೆಲವು ಜೈನ ಮುನಿಗಳು ಬಾಬಾ ಸಾಹೇಬರನ್ನು ಭೇಟಿ ಮಾಡಿ ಮಾತಾಡಿಸಿ ಹೋದರು. ರಾತ್ರಿ 11:15 ಗಂಟೆಯಲ್ಲಿ ‘ಬುದ್ಧ ಆ್ಯಂಡ್ ಹಿಸ್ ದಮ್ಮ’ ಗ್ರಂಥದ ಪ್ರಸ್ತಾವನೆ ನೋಡಲು ಬಯಸಿ ಅದರ ಪ್ರತಿಗಳನ್ನು ರತ್ತುವಿನಿಂದ ಪಡೆದುಕೊಂಡರು. ಕೆಲವು ಬುದ್ಧನ ಪುಸ್ತಕಗಳನ್ನು ನೋಡುತ್ತಿದ್ದರು. ರತ್ತು ‘‘ನಾನು ಇಂದು ಮನೆಗೆ ಹೋಗುವುದಿಲ್ಲ’’ ಎಂದಾಗ, ‘‘ಇಲ್ಲ ನೀನು ಮನೆಗೆ ಹೋಗು, ಅಲ್ಲಿ ನಿನ್ನ ಸಂಸಾರ ಇದೆ. ನೋಡಿಕೊಂಡು ಬೆಳಗ್ಗೆ ಬಾ’’ ಎಂದು ಹೇಳಿದರು. ಆಗ ಬಾಬಾ ಸಾಹೇಬರು ಬುದ್ಧಂ, ದಮ್ಮಂ, ಸಂಘಂ ಶರಣಂ ಗಚ್ಚಾಮಿ ಎಂದು ಪಟಿಸುತ್ತಿದ್ದರು. ಒಲ್ಲದ ಮನಸ್ಸಿನಿಂದ ರತ್ತು ಅಂದು ರಾತ್ರಿ 2 ಗಂಟೆಗೆ ಮನೆಗೆ ಹೋದರು. ಡಾ. ಬಿ.ಆರ್. ಅಂಬೇಡ್ಕರ್‌ರವರ ಆಪ್ತ ಕಾರ್ಯದರ್ಶಿ ನಾನಕ್ ಚಂದ್ ರತ್ತು ಡಾ.ಅಂಬೇಡ್ಕರ್‌ರವರ ಪ್ರತಿ ಕೆಲಸಗಳಿಗೆ ಅತ್ಯಂತ ಶ್ರದ್ಧ್ದೆಯಿಂದ ಸ್ಪಂದಿಸುತ್ತಿದ್ದರು. ಡಾ. ಅಂಬೇಡ್ಕರ್‌ರವರ ಅಂತಿಮ ದಿನಗಳಲ್ಲಿ ರತ್ತುವಿನ ಸೇವೆ ಅವಿಸ್ಮರಣೀಯವಾದದ್ದು.

ಡಿಸೆಂಬರ್ 6 ಬೆಳಗ್ಗೆ 6:30ಕ್ಕೆ ಮಾಹಿ ಸಾಹೇಬ್ ಡಾ. ಅಂಬೇಡ್ಕರ್‌ರವರನ್ನು ಅವರ ಅಧ್ಯಯನ ಕೊಠಡಿಯಲ್ಲಿ ಎಬ್ಬಿಸಿದಾಗ ಅವರ ದೇಹ ಅಲುಗಾಡಿತು. ಬುದ್ಧನ ಪುಸ್ತಕವನ್ನು ಓದುತ್ತಲೇ ಅವರ ಉಸಿರು ಈ ಲೋಕವನ್ನು ತ್ಯಜಿಸಿ ಹೋಗಿತ್ತು. ಭಾರತ ದೇಶದ ಕೋಟ್ಯಾನುಕೋಟಿ ಜನರ ಜೀವನಾಡಿಯಾದ ಡಾ. ಅಂಬೇಡ್ಕರ್ ಮಹಾ ಪರಿನಿಬ್ಬಾಣ ಹೊಂದಿದ್ದರು. ಅವರ ಸಾವು ಕಾಡ್ಗಿಚ್ಚಿನಂತೆ ದೇಶದ ಮೂಲೆ ಮೂಲೆ ತಲುಪಿತು. ದಿಲ್ಲಿಯ ಅಲಿಪುರ್ ರಸ್ತೆಯ ನಂ.26ನೇ ಬಂಗಲೆಯಲ್ಲಿ ಅಪಾರ ಜನ ಸಾಲುಗಟ್ಟಿ ಅವರನ್ನು ನೋಡಲು ನಿಂತರು. ಡಾ. ಅಂಬೇಡ್ಕರ್‌ರ ಪಾರ್ಥಿವ ಶರೀರವನ್ನು ಅಂತ್ಯ ಸಂಸ್ಕಾರ ಮಾಡಲು ಸಾರಾನಾಥ್‌ಗೆ ತೆಗೆದುಕೊಂಡು ಹೋಗಲು ಅವರ ಪತ್ನಿ ಸವಿತಾ ಅಂಬೇಡ್ಕರ್ ಯೋಚಿಸಿದ್ದರು. ಅವರ ಅನುಯಾಯಿಗಳ ಒತ್ತಾಯದ ಮೇರೆಗೆ ಅವರ ಕರ್ಮಭೂಮಿ ಮುಂಬೈಯಲ್ಲಿ ಅಂತ್ಯ ಸಂಸ್ಕಾರ ಮಾಡಲು ತಿರ್ಮಾನವಾಯಿತು. ಅವರ ಪಾರ್ಥಿವ ಶರೀರವು ಅವರ ಬಂಗಲೆಯಿಂದ ವಿಮಾನ ನಿಲ್ದಾಣದವರೆಗೂ ಮೆರವಣಿಗೆ ಮೂಲಕ ಸಾಗಿ, ನಂತರ ವಿಮಾನದ ಮೂಲಕ ಮುಂಬೈ ತಲುಪಿಸಲಾಯಿತು. ಅಲ್ಲಿ ಅಪಾರ ಜನ ಸಮೂಹದ ನಡುವೆ ಚೈತ್ಯಭೂಮಿಯಲ್ಲಿ ಅವರ ಶರೀರವನ್ನು ಬೌದ್ಧ ಧರ್ಮದ ವಿಧಿವಿಧಾನಗಳಿಂದ, ಬುದ್ಧಂ ಶರಣಂ ಗಚ್ಚಾಮಿ ತ್ರಿಶರಣಗಳಿಂದ ಮಹಾ ಪರಿನಿಬ್ಬಾಣ ಕಾರ್ಯಮಾಡಲಾಯಿತು. ಅವರ ಶಿಕ್ಷಣ, ಸಂಘಟನೆ, ಹೋರಾಟ, ತತ್ವಗಳು, ಭಾರತ ಸುಖಿ ರಾಷ್ಟ್ರವಾಗಲು ಅವರು ನೀಡಿದ ಸಂವಿಧಾನ ಮತ್ತು ಅವರು ಹಾಕಿಕೊಟ್ಟ ಬೌದ್ಧ ಧರ್ಮದ ಹಾದಿಯು ಇಂದಿಗೂ ಪ್ರತಿ ಭಾರತೀಯನಿಗೆ ಸೂರ್ಯ, ಭೂಮಿ, ಪ್ರಕೃತಿ ಇರುವ ತನಕ ಮಾರ್ಗದರ್ಶನ ನೀಡುತ್ತದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top