ಟಾಗೋರ್ ಕೃತಿಗಳು - ರೇ ಚಿತ್ರಗಳು

ಸತ್ಯಜಿತ್ ರೇ ಅವರು ಟಾಗೋರ್‌ರವರ ಐದು ಕೃತಿಗಳನ್ನು ಆಧರಿಸಿ ಮೂರು ಕಥಾ ಚಿತ್ರಗಳನ್ನು ನಿರ್ದೇಶಿಸಿದರು. ಈ ಮೂರೂ ಚಿತ್ರಗಳಲ್ಲಿ ಹೆಣ್ಣು ಕೇಂದ್ರಬಿಂದು. ‘ಪೋಸ್ಟ್ ಮಾಸ್ಟರ್’ ಮನುಷ್ಯ ಸಂಬಂಧಗಳು ಬಿರುಕುಗೊಳ್ಳುವ ಚಿತ್ರವಾದರೆ ‘ಮೊಣಿಹಾರ’ ಮನುಷ್ಯನ ಅದಮ್ಯ ಲೋಭತನವನ್ನು ಬಿಂಬಿಸುವ ಅಪೂರ್ವ ನಿರೂಪಣೆಯ ಚಿತ್ರ. ಆದರೆ ‘ಸಮಾಪ್ತಿ’ ಮನುಷ್ಯ ಸಂಬಂಧಗಳನ್ನು ಬೆಸೆಯುವ ಚಿತ್ರ. ಟಾಗೋರರ ಮೂರೂ ಕಥೆಗಳ ಕೇಂದ್ರದಲ್ಲಿರುವ ಮನುಷ್ಯ ತಾಕಲಾಟಗಳನ್ನು ದೃಶ್ಯರೂಪಕಗಳಲ್ಲಿ ರೇ ಅವರು ಸೆರೆ ಹಿಡಿದಿರುವ ರೀತಿ ಸಾಹಿತ್ಯ ಮತ್ತು ಸಿನೆಮಾ ನಡುವಿನ ಸಂಬಂಧಗಳನ್ನು ಅರಿಯಲು ಮತ್ತು ಸಾಹಿತ್ಯಕೃತಿಯೊಂದನ್ನು ಸಿನೆಮಾ ಮಾಧ್ಯಮಕ್ಕೆ ಅಳವಡಿಸುವ ರೀತಿಯನ್ನು ಅಧ್ಯಯನ ಮಾಡಲು ಯೋಗ್ಯ ಪಠ್ಯವೆನಿಸಿವೆ.

ಟಾಗೋರ್ ಅವರ ಕೃತಿಗಳನ್ನು ಯಶಸ್ವಿಯಾಗಿ ತೆರೆಗೆ ಅಳವಡಿಸಿದವರು, ಮರುವ್ಯಾಖ್ಯೆಗೆ ಒಳಪಡಿಸಿದವರು, ಸಿನೆಮ್ಯಾಟಿಕ್ ಅನುಭವವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಹೆಚ್ಚಿನ ಯಶಸ್ಸು ಸಾಧಿಸಿದವರು ಪ್ರಾಯಶಃ ಸತ್ಯಜಿತ್ ರೇ ಒಬ್ಬರೇ ಇರಬಹುದು. ರೇ ಅವರ ಯಶಸ್ಸಿನ ಹಿಂದೆ ಅವರ ಹಿನ್ನೆಲೆಯೂ ಕಾರಣವಿರಬಹುದು. ಟಾಗೋರ್ ಮತ್ತು ರೇ ಅವರು ಪ್ರಗತಿಪರ ಬ್ರಹ್ಮ ಸಮಾಜದ ಆಶಯಗಳನ್ನು ಪಾಲಿಸುತ್ತಿದ್ದ ಕುಟುಂಬಕ್ಕೆ ಸೇರಿದವರು. ರೇ ಅವರ ತಂದೆ ಸುಕುಮಾರ ರೇ ಮತ್ತು ಟಾಗೋರ್ ನಡುವೆ ನಿಕಟ ಸಂಪರ್ಕವಿತ್ತು. ಲಲಿತ ಕಲೆಗಳನ್ನು ಅಭ್ಯಾಸ ಮಾಡಲು ಸತ್ಯಜಿತ್ ರೇ ಅವರು ಶಾಂತಿನಿಕೇತನದಲ್ಲಿ ಪ್ರವೇಶ ಪಡೆದಾಗ ಟಾಗೋರ್ ಇನ್ನೂ ಬದುಕಿದ್ದರು. ಟಾಗೋರ್ ಅವರ ಕೃತಿಗಳನ್ನು ರೇ ಅಪಾರ ಶ್ರದ್ಧೆಯಿಂದ ಅಧ್ಯಯನ ಮಾಡಿದ್ದರು. ಹಾಗಾಗಿ ಟಾಗೋರ್ ಅವರನ್ನು ವ್ಯಕ್ತಿಯಾಗಿ ಮತ್ತು ಸೃಜನಶೀಲ ಸಾಹಿತಿಯಾಗಿ ರೇ ಅವರು ಅರ್ಥಮಾಡಿಕೊಂಡಿದ್ದರು. ಅವರು ನಿರ್ಮಿಸಿದ ಚಿತ್ರಗಳು- ಕೆಲವು ಪ್ರಕರಣಗಳಲ್ಲಿ ವಿವಾದ ಎದ್ದರೂ- ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳೆಂಬ ಮಾನ್ಯತೆಗೆ ಪಾತ್ರವಾದವು.

ಸತ್ಯಜಿತ್ ರೇ ಅವರು ಟಾಗೋರ್‌ರವರ ಐದು ಕೃತಿಗಳನ್ನು ಆಧರಿಸಿ ಮೂರು ಕಥಾ ಚಿತ್ರಗಳನ್ನು ನಿರ್ದೇಶಿಸಿದರು. ಅದರಲ್ಲಿ ‘ತೀನ್‌ಕನ್ಯಾ’ ಮೂರು ಸಣ್ಣ ಕಥೆಗಳನ್ನಾಧರಿಸಿದ ಮೂರು ಪ್ರತ್ಯೇಕ ಭಾಗಗಳಿದ್ದ ಸಂಯುಕ್ತ ಕಥಾಚಿತ್ರ. ಗುರುದೇವ ರವೀಂದ್ರನಾಥ ಟಾಗೋರರ ಶತಮಾನೋತ್ಸವ ಸಂದರ್ಭದಲ್ಲಿ ಅವರಿಗೆ ಗೌರವ ಅರ್ಪಿಸಲು ರೇ ಅವರು ನಿರ್ದೇಶಿಸಿದ ‘ತೀನ್‌ಕನ್ಯಾ’ ಪ್ರಯೋಗದ ದೃಷ್ಟಿಯಿಂದ ಮತ್ತು ಮನಸ್ಸಿನ ಪದರಗಳನ್ನು ಅನ್ವೇಷಿಸುವ ಬಗೆಯಿಂದ ಬಹು ಮಹತ್ವದ ಕೃತಿ.

 ಮೂರು ಚಿತ್ರಗಳು ಹೆಣ್ಣಿನ ವಿವಿಧ ಬಗೆಯ ಸಂಬಂಧಗಳ ಎಳೆಯಿಂದ ಬಂಧಿತವಾಗಿದೆ. ಮೊದಲ ಕಥೆ ಪೋಸ್ಟ್‌ಮಾಸ್ಟರ್, ದೂರದ ಹಳ್ಳಿಯೊಂದಕ್ಕೆ ಪೋಸ್ಟ್ ಮಾಸ್ಟರ್ ಆಗಿ ನೇಮಕವಾಗುವ ಕೋಲ್ಕತಾದಲ್ಲಿ ಬೆಳೆದ ವ್ಯಕ್ತಿ ಮತ್ತು ಅನಾಥ ಬಾಲಕಿಯೊಡನೆ ಅರಳಿಕೊಳ್ಳುವ ಮನುಷ್ಯ ಸಂಬಂಧಗಳನ್ನು ಕುರಿತ ಚಿತ್ರ. ಎರಡನೆಯ ಚಿತ್ರ ‘ಮೊಣಿಹಾರ’ ಕಥೆಯು ಫಣಿಭೂಷಣ ಮತ್ತು ಮಣಿಮಲ್ಲಿಕಾ ಎಂಬ ಗಂಡು ಹೆಣ್ಣಿನ ನಡುವಿನ ಕಥೆ. ಬಂಜೆ ಮಣಿಮಲ್ಲಿಕಾಳಿಗೆ ಒಡವೆಗಳ ಮೇಲೆ ಬೆಳೆಯುವ ಕಡುಮೋಹ ದುರಂತದ ಅಂಚಿಗೆ ತಳ್ಳುತ್ತದೆ. ಸತ್ತರೂ ಆಕೆಯ ವಾಂಛೆ ಹಾಗೆಯೇ ಉಳಿಯುವ ಮನುಷ್ಯನ ಅಂತರಂಗವನ್ನು ಶೋಧಿಸುವ ಅಪೂರ್ವವಾದ ಕಥೆ.

ಮೂರನೆಯ ಭಾಗ ‘ಸಮಾಪ್ತಿ’ ಮೃಣ್ಮಯಿ ಎಂಬ ಹುಡುಗಿಯ ಸ್ವಚ್ಛಂದ ಬದುಕು, ಆಕೆಯ ಸ್ವಾತಂತ್ರ್ಯ ಪ್ರೇಮ ಮತ್ತು ಕೊನೆಗೆ ಕಂಡುಕೊಳ್ಳುವ ಪ್ರೀತಿಗೆ ಸಂಬಂಧಿಸಿದ್ದು.

ಟಾಗೋರ್ ಅವರ ಚಿತ್ರಗಳನ್ನು ತೆರೆಗೆ ಅಳವಡಿಸಲು ರೇ ಅವರಿಗೆ ಹೆಚ್ಚಿನದಾದ ಸವಾಲಿತ್ತು. ಅದೆಂದರೆ ಅವಿಭಜಿತ ಭಾರತದ ಯುಗದಲ್ಲಿ ರಚನೆಗೊಂಡ ಟಾಗೋರ್ ಅವರ ಕೃತಿಗಳ ಪಾತ್ರಗಳ ಸ್ವರೂಪ ಆಧುನಿಕ ಭಾರತದ ಸಮಾಜದಲ್ಲಿನ ಪಾತ್ರಗಳಿಗಿಂತ ಭಿನ್ನವಾದವು. ದೇಶ ವಿಭಜನೆಗೊಂಡು ರಾಜ್ಯಗಳ ಒಕ್ಕೂಟವಾದ ಹದಿನಾಲ್ಕು ವರ್ಷಗಳ ತರುವಾಯದ ಆಧುನಿಕ ಭಾರತದ ಪರಿಸರ ಮತ್ತು ಮನೋಸ್ಥಿತಿಗೆ ಹೊಂದುವಂತೆ ಚಿತ್ರ ರೂಪಿಸಬೇಕಾದ ಹೊಣೆಗಾರಿಕೆಯಿತ್ತು. ಟಾಗೋರ್ ಅವರ ಆಶಯ ಮತ್ತು ದರ್ಶನವು ಇಪ್ಪತ್ತನೇ ಶತಮಾನದ ಪ್ರೇಕ್ಷಕರು ಅಂಗೀಕರಿಸುವ ರೀತಿಯಲ್ಲಿ ನಿರೂಪಣಾ ಮಾರ್ಗವೊಂದನ್ನು ಕಂಡುಕೊಳ್ಳುವುದು ರೇ ಅವರಿಗೆ ಅಗತ್ಯವಾಗಿತ್ತು. ಇದನ್ನು ಅವರು ‘ತೀನ್‌ಕನ್ಯಾ’ ಚಿತ್ರದಲ್ಲಿ ಸಮರ್ಥವಾಗಿ ಮಾಡಿದರು. ಅದರಲ್ಲೂ ಆ ಕಥಾಸಂಗಮದ ಮೊದಲ ಕಥೆ ‘ಪೋಸ್ಟ್ ಮಾಸ್ಟರ್’ ಚಿತ್ರದ ಅಂತ್ಯವನ್ನು ಉದ್ದೇಶಪೂರ್ವಕವಾಗಿ ಬದಲಿಸಿರುವ ವಿನ್ಯಾಸದಲ್ಲಿ ರೇ ಅವರು ಕಂಡುಕೊಂಡ ಮಾರ್ಗವನ್ನು ಕಾಣಬಹುದು.

‘ಪೋಸ್ಟ್‌ಮಾಸ್ಟರ್’ ಚಿತ್ರದ ಕಥಾನಾಯಕ ಕೋಲ್ಕತಾ ವಾಸಿ ನಂದಲಾಲ್ ದೂರದ ಹಳ್ಳಿಯೊಂದಕ್ಕೆ ಪೋಸ್ಟ್ ಮಾಸ್ಟರ್ ಆಗಿ ನೇಮಕಗೊಳ್ಳುತ್ತಾನೆ. ಅಪರಿಚಿತ ನಾಡಿನಲ್ಲಿ ಅನೇಕ ರೀತಿಯ ಭಯ, ತಲ್ಲಣಗಳನ್ನು ಎದುರಿಸುವ ಆತ ಮರಳಿ ತನ್ನ ನಗರಕ್ಕೆ ವರ್ಗಾವಣೆ ಪಡೆಯುವ ಪ್ರಯತ್ನದಲ್ಲಿದ್ದಾನೆ. ಅವನಿಗೆ ಅನಾಥ ಬಾಲಕಿ ರತನ್ ಸಂಗಾತಿ. ರತನ್ ಅವನ ಎಲ್ಲ ಸೇವೆ ಮಾಡುತ್ತಾಳೆ. ಮನಸನ್ನು ಮುದುಡಿಸುವ ಬೇಸರವನ್ನು ಕಳೆಯಲು ನಂದಲಾಲ್ ಆಕೆಗೆ ಓದು ಬರಹ ಕಲಿಸುತ್ತಾನೆ. ಇದರಿಂದ ಅನಾಥಳಾಗಿದ್ದ ಬಾಲಕಿ ತನ್ನ ಬಗ್ಗೆ ಕಾಳಜಿ ತೋರಿಸುವವನ ಮನುಷ್ಯ ಸಂಬಂಧದಿಂದ ಪುಲಕಿತಗೊಳ್ಳುತ್ತಾಳೆ. ಕಷ್ಟಪಟ್ಟು ಕಲಿಯುತ್ತಾಳೆ. ಇಬ್ಬರ ನಡುವೆ ಅರಿವಿಲ್ಲದಂತೆ ಸರಳ ಸಂಬಂಧವೊಂದು ಗಾಢರೂಪ ತಾಳುತ್ತದೆ. ನಂದಾಲಾಲ್ ಕಾಯಿಲೆ ಬಿದ್ದಾಗ ರತನ್ ತಾಯಿಯಂತೆ ಅವನ ಶುಶ್ರೂಷೆಗೆ ನಿಲ್ಲುತ್ತಾಳೆ. ಶಿಷ್ಯಳಾಗಿ, ಸೇವಕಿಯಾಗಿ, ಸಂಗಾತಿಯಾಗಿ, ತಾಯಿಯಾಗಿ ರತನ್ ಅವನ ಸಖ್ಯದಲ್ಲಿ ಹೊಸ ಜಗವೊಂದನ್ನು ಕಟ್ಟಿಕೊಳ್ಳುತ್ತಾಳೆ. ಕಾಯಿಲೆಯಿಂದ ಚೇತರಿಸಿಕೊಂಡ ನಂತರ ನಂದಲಾಲ್ ಊರು ಬಿಡುವ ನಿರ್ಧಾರ ಕೈಗೊಳ್ಳುತ್ತಾನೆ. ಬಾಲಕಿಗೆ ಆಘಾತವಾಗುತ್ತದೆ. ಅವಳ ವರ್ತನೆಯಿಂದ ಅವನ ಅಂತರಂಗದಲ್ಲಿ ಅಡಗಿದ್ದ ಆಕೆಯ ಮೇಲಿನ ಗಾಢ ವಾತ್ಸಲ್ಯ ಅರಿವಿಗೆ ಬರುತ್ತದೆ.

ಟಾಗೋರ್ ಅವರ ಮೂಲ ಕಥೆಯಲ್ಲಿ ಮರಳಿ ಊರಿಗೆ ಹೊರಟ ನಂದಲಾಲ್‌ನ ಕಾಲಿಗೆ ಬಿದ್ದು ರತನ್ ತನ್ನನ್ನು ನಗರಕ್ಕೆ ಕರೆದೊಯ್ಯವಂತೆ ಗೋಳುಗರೆಯುವ ಸನ್ನಿವೇಶವಿದೆ. ಆದರೆ ಅಂಥದೊಂದು ಸನ್ನಿವೇಶವನ್ನು ಸೃಷ್ಟಿಸುವುದು ರೇ ಅವರಿಗೆ ಸರಿಕಾಣಲಿಲ್ಲ. ಆರಂಭದಿಂದಲೂ ಅನಾಥಳಾದರೂ ದಿಟ್ಟ ಹುಡುಗಿಯಾಗಿ ಕಾಯ್ದುಕೊಂಡು ಬಂದ ರತನ್‌ಳ ವ್ಯಕ್ತಿತ್ವದ ಘನತೆಯನ್ನು ಅಂಥ ಸನ್ನಿವೇಶದಲ್ಲಿ ಮುಕ್ಕು ಮಾಡುವುದು ಸರಿ ಕಾಣಲಿಲ್ಲ. ಟಾಗೋರ್ ಅವರು ರತನಳು ದಾರಿದ್ರ್ಯದಿಂದ ಬಿಡುಗಡೆಯ ಮಾರ್ಗವಾಗಿ ನಗರಕ್ಕೆ ಆತನ ಜೊತೆಯಲ್ಲಿ ಹೋಗುವ ನಿರ್ಧಾರದಿಂದ ರತನಳ ವರ್ತನೆಗೆ ಹಿನ್ನೆಲೆ ಕಲ್ಪಿಸಿದರೆ ರೇ ಅವರು ಮನುಷ್ಯ ಸಂಬಂಧಗಳ ಘನತೆಯ ಹಿನ್ನೆಲೆಯನ್ನು ಮುಖ್ಯವಾಗಿಸಿಕೊಂಡು ದೃಶ್ಯ ಕಟ್ಟಿದರು. ತಮ್ಮ ಜೀವನಚರಿತ್ರೆಕಾರ ಆಂಡ್ರೂ ರಾಬಿನ್‌ಸನ್ ಜೊತೆ ಮಾತನಾಡುತ್ತಾ ಈ ವಿಚಾರವನ್ನು ಹಂಚಿಕೊಂಡಿರುವ ರೇ ಅವರು ಟಾಗೋರ್ ಅವರ ಕಥೆಯ ಅಂತ್ಯವನ್ನು ತನಗೆ ಅರಗಿಸಿಕೊಳ್ಳಲಾಗಲಿಲ್ಲ ಎಂದಿದ್ದಾರೆ. ನಾನು ಇಪ್ಪತ್ತನೆಯ ಶತಮಾನದ ಪ್ರಜೆಯಾಗಿ, ವಿಭಿನ್ನ ಪರಿಸರದಲ್ಲಿ ಬೆಳೆದವನಾಗಿ ಮತ್ತು ಹಲವು ಪ್ರಭಾವಗಳಿಗೆ ಒಳಗಾದವನಾಗಿ ನನಗೆ ಟಾಗೋರರ ಕಥೆಯ ಅಂತ್ಯ ತುಂಬಾ ಭಾವುಕವಾದದ್ದು ಮತ್ತು ಆಧುನಿಕ ಮನುಷ್ಯ ವರ್ತನೆಗೆ ಹೊರತಾದದ್ದು ಎನಿಸಿತು ಎಂದಿದ್ಧಾರೆ. ಹಾಗಾಗಿ ನಂದಲಾಲ್ ಊರಿಗೆ ಹೊರಡುವ ನಿರ್ಧಾರವನ್ನು ಗಂಟುಮೂಟೆ ಕಟ್ಟುವ ಮೂಲಕ ಸಹಜವಾಗಿ ವ್ಯಕ್ತಪಡಿಸುತ್ತಾನೆ. ಆವರೆಗೆ ಪೊರೆದ ರತನಳು ಅವನಿಗೆ ಆ ಅವಧಿಗೆ ಜೊತೆಯಾಗಿದ್ದ ವ್ಯಕ್ತಿಗಿಂತ ಹೆಚ್ಚಿನವಳಲ್ಲ. ಆದರೆ ಹೊಸ ಜಗತ್ತನ್ನು ಕಂಡ ರತನ್‌ಳ ವೇದನೆಯೇ ಬೇರೆ. ಅವಳು ಅದನ್ನು ಹೇಳಲಾರಳು. ತನ್ನನ್ನು ಕರೆದೊಯ್ಯಬಹುದೆಂಬ ನಿರೀಕ್ಷೆ ಸುಳ್ಳಾದಾಗ ನೋವನ್ನು ತಾನೇ ನುಂಗಿಕೊಳ್ಳುತ್ತಾಳೆ. ಅವನು ಕೊಡಲು ಬಂದ ಟಿಪ್ಸ್ ಹಣವನ್ನು ನಿರಾಕರಿಸಿ ಮಾತನಾಡದೆಯೆ ಹೊರಟುಹೋಗುತ್ತಾಳೆ. ತನ್ನ ತಪ್ಪುಅರಿವಾದ ನಂದಲಾಲ್ ಕುಸಿಯುತ್ತಾನೆ. ರತನ್‌ಳಿಂದ ನಂದಲಾಲ್ ಅಗಲುವ ದೃಶ್ಯವು ಸಿನೆಮಾವೊಂದು ತಲುಪಬಹುದಾದ ಶ್ರೇಷ್ಠ ಮಟ್ಟ. ಅಲ್ಲಿ ಮಾತಿಲ್ಲದೆಯೇ ಸಾವಿರ ಭಾವನೆಗಳ ಹರಿದಾಡುತ್ತವೆ.ಪೋಸ್ಟ್‌ಮಾಸ್ಟರ್ ಖಂಡಿತವಾಗಿಯೂ ಸತ್ಯಜಿತ್ ರೇ ಅವರ ಶ್ರೇಷ್ಠ ಚಿತ್ರಗಳಲ್ಲೊಂದು. ಸರಳ ನಿರೂಪಣೆ, ಅಂತರಂಗವನ್ನು ಶೋಧಿಸುವ ನೇರ ವಿಧಾನ ಮತ್ತು ಕಲಾವಿದರ ಸಹಜ ಅಭಿನಯದಿಂದ ಗಮನ ಸೆಳೆಯುತ್ತದೆ. ಮೇಲೋಡ್ರಾಮ ಇಲ್ಲದೆಯೇ ಹೃದಯವನ್ನು ಕಲಕುವ ಚಿತ್ರವಿದು. ಟಾಗೋರ್ ಅವರ ಕಥೆಯ ಮೂಲ ಆಶಯವನ್ನಿಟ್ಟುಕೊಂಡು ತಮ್ಮ ಅಪೂರ್ವ ಒಳನೋಟಗಳಿಂದ ಅದನ್ನು ವಿಸ್ತರಿಸಿರುವ ರೀತಿ ಸಹ ಕುತೂಹಲಕಾರಿಯಾದುದು. ನೋಡುಗರ ಮತ್ತು ಪೋಸ್ಟ್‌ಮ್ಯಾನ್‌ನ ಎದೆಯಲ್ಲಿ ಷಾಕ್ ನೀಡುವ ಹುಚ್ಚನ ಪಾತ್ರವೊಂದನ್ನು ಟಾಗೋರ್ ಕಥೆಗೆೆ ರೇ ಅವರು ಸೊಗಸಾಗಿ ಅಳವಡಿಸಿ ಕತೆಯ ಆಶಯವನ್ನು ವಿಸ್ತರಿಸಿರುವ ರೀತಿ ರೇ ಪ್ರತಿಭೆಗೆ ಹಿಡಿದ ಮತ್ತೊಂದು ಕನ್ನಡಿ.

                            ಪೋಸ್ಟ್ ಮಾಸ್ಟರ್

ರೇ ಬಗ್ಗೆ ಏನೊಂದೂ ಗೊತ್ತಿಲ್ಲದ ಪ್ರೇಕ್ಷಕನಿಗೆ ಅವರ ನಿರ್ದೇಶನ ಕೌಶಲ್ಯವನ್ನು ಪರಿಚಯಿಸುವ ಸಿನೆಮಾವೊಂದನ್ನು ಆಯ್ಕೆ ಮಾಡಲು ನನಗೆ ಹೇಳಿದರೆ ನನ್ನ ಮತ ‘ಪೋಸ್ಟ್ ಮಾಸ್ಟರ್’ಗೆ ಎಂದು ಅವರ ಜೀವನಚರಿತ್ರಕಾರ ಆಂಡ್ರೂ ರಾಬಿನ್‌ಸನ್ ಹೇಳುತ್ತಾರೆ.

‘ಪೋಸ್ಟ್‌ಮಾಸ್ಟರ್’ ಮನುಷ್ಯ ಸಂಬಂಧಗಳ ಅಗಲುವಿಕೆಯ ಚಿತ್ರಣವಾದರೆ ಎರಡನೆಯ ಕಥೆ ‘ಮೊಣಿಹಾರ’(ಮಣಿಹಾರ) ಮನುಷ್ಯನ ತೀರದ ಸಂಪತ್ತಿನ ಮೋಹ, ಕರ್ತವ್ಯ, ಸಂಕಟ ಮತ್ತು ಪಾಪಪ್ರಜ್ಞೆ ಕುರಿತ ಚಿತ್ರ. ಕಥಾ ನಿರೂಪಣೆಗೆ ದೆವ್ವದ ಪಾತ್ರವೊಂದನ್ನು ಬಳಸಿದ್ದಾರೆ. ರೇ ಅವರು ಅದು ಕಥೆಯ ವಿಸ್ತರಣೆಗೆ ಪೂರಕವಾಗಿರುವಂತೆ ಸೃಷ್ಟಿಸಿ ನಿರೂಪಣೆಯಲ್ಲಿ ಹೊಸ ಹಾದಿ ತುಳಿದಿದ್ದಾರೆ. ಮಕ್ಕಳಿಗಾಗಿ ಬರೆದ ಅನೇಕ ಕಥೆಗಳಲ್ಲಿ ದೆವ್ವದ ಪಾತ್ರಗಳನ್ನು ಸೃಷ್ಟಿಸಿರುವ ಸತ್ಯಜಿತ್ ರೇ ಅವರು ದೆವ್ವದ ಪಾತ್ರವನ್ನು ತಂದಿರುವ ಕಥಾಚಿತ್ರ ಇದೊಂದೆ.

ಕಥೆ ಬಹಳ ಸರಳವಾದದ್ದು. ಸಂಜೆ ಕವಿಯುತ್ತಿರುವ ಹೊತ್ತಿನಲ್ಲಿ ಜನರಿಲ್ಲದ ಬಂಗಲೆಯನ್ನು ಹಾಯ್ದು ನದಿ ತಟಾಕದಲ್ಲಿ ಶಾಲಾಮಾಸ್ತರನೊಬ್ಬ ಬಂದು ಕುಳಿತುಕೊಳ್ಳುತ್ತಾನೆ. ಸ್ವಲ್ಪ ಹೊತ್ತಿಗೆ ಮುಖ ಮರೆಮಾಡಿಕೊಂಡ ವ್ಯಕ್ತಿಯೊಬ್ಬ ಅವನನ್ನು ಕೂಡಿಕೊಳ್ಳುತ್ತಾನೆ. ಶಾಲಾ ಮಾಸ್ತರ್ ತಾನು ಬರೆಯಲಿರುವ ಆ ಬಂಗಲೆಯ ಕಥೆಯನ್ನು ಅಪರಿಚಿತನಿಗೆ ಹೇಳುತ್ತಾ ಹೋಗುತ್ತಾನೆ.

ಆ ಬಂಗಲೆಯ ಮಾಲಕ ಫಣಿಭೂಷನ್ ಸುಂದರಿಯಾದ ಮಣಿಮಲ್ಲಿಕಾಳನ್ನು ಮದುವೆಯಾಗಿ ಮನೆಗೆ ಕರೆತರುತ್ತಾನೆ. ಹಿಂಜರಿಕೆಯ ಸ್ವಭಾವದ ಫಣಿಯು ತಣ್ಣನೆಯ ಭಾವದ ಹೆಂಡತಿಯ ಮನ ಗೆಲ್ಲಲು ವಿಫಲ ಯತ್ನ ಮಾಡುತ್ತಾನೆ. ಮದುವೆಯಾಗಿ ಹತ್ತು ವರ್ಷವಾದರೂ ಮಕ್ಕಳಾಗದ ಮಣಿಮಲ್ಲಿಕಾಳಿಗೆ ಒಡವೆಗಳ ಮೇಲೆ ಅಪಾರ ಮೋಹ. ತನ್ನ ಸಂಗ್ರಹದಲ್ಲಿ ತುಂಬಿ ತುಳುಕುವ ಒಡವೆಗಳನ್ನು ಕಾಪಾಡಿಕೊಳ್ಳುವುದೇ ಅವಳ ಕಾಯಕ. ಫಣಿಯ ಸೆಣಬಿನ ಕಾರ್ಖಾನೆಗೆ ಬೆಂಕಿಬಿದ್ದು ಆದ ನಷ್ಟಕ್ಕೆ ತನ್ನ ಒಡವೆ ಮಾರಿಬಿಡಬಹುದೆಂಬ ಆತಂಕದಿಂದ ನಗರಕ್ಕೆ ಪತಿ ಹೋದ ಸಮಯದಲ್ಲಿ ತನ್ನ ಸೋದರ ಸಂಬಂಧಿಯೊಬ್ಬನನ್ನು ಕರೆಸಿ ಒಡವೆಗಳನ್ನು ಗಂಟುಮೂಟೆಯೊಡನೆ ತವರಿಗೆ ಹೊರಡುತ್ತಾಳೆ. ನಗರದಲ್ಲಿ ತಾನು ಹಿಂದೆ ಹೆಂಡತಿಗೆ ನೀಡಿದ ಭರವಸೆಯಂತೆ ಮಣಿಹಾರವೊಂದನ್ನು ಖರೀದಿಸಿ ಬಂದ ಫಣಿಗೆ ಹೆಂಡತಿ ಕಾಣೆಯಾದದ್ದು ಅರಿವಿಗೆ ಬರುತ್ತದೆ. ಕೆಲಕಾಲದ ನಂತರ ಹೆಂಡತಿ ದೆವ್ವವಾಗಿ ಬಂಗಲೆಯಲ್ಲಿ ತಿರುಗುವ ಅನುಭವವಾಗುತ್ತದೆ. ಖರೀದಿಸಿದ ಮಣಿಹಾರದ ಮೋಹದಿಂದ ಮಣಿಮಲ್ಲಿಕ ದೆವ್ವವಾಗಿ ಬಂದಳೆಂಬ ಸೂಚನೆಯನ್ನು ಶಾಲಾ ಮಾಸ್ತರ್ ಹೇಳಿ ಕಥೆ ಮುಗಿಸುತ್ತಾನೆ. ಅಪರಿಚಿತ ಆ ಕಥೆಯಲ್ಲಿರುವ ತಪ್ಪುಗಳನ್ನು ಎತ್ತಿತೋರಿಸುತ್ತಾನೆ. ಅಪರಿಚಿತ ತಾನೇ ಫಣಿಭೂಷಣ ಎಂದು ತಿಳಿಸಿ ಶಾಲಾ ಮಾಸ್ತರನಿಗೆ ಆಘಾತ ಬರಿಸಿ ಕತ್ತಲಲ್ಲಿ ಕರಗಿ ಹೋಗುತ್ತಾನೆ.

ರೇ ಅವರು ಚಿತ್ರದ ಉದ್ದಕ್ಕೂ ಭಯ, ಆತಂಕ, ಅನುಮಾನ ಮತ್ತು ಆಘಾತಗಳೇ ತುಂಬಿರುವ ರೀತಿಯಲ್ಲಿ ಚಿತ್ರವನ್ನು ನಿರೂಪಿಸಿ ಮನುಷ್ಯನ ಅಂತರಂಗದ ಬಹು ಪದರುಗಳನ್ನು ‘ಮೊಣಿಹಾರ’ದಲ್ಲಿ ಬಿಚ್ಚಿಟ್ಟಿದ್ದಾರೆ.

ನಗರದಲ್ಲಿ ಓದಿ ನಗರದ ಮೇಲರಿಮೆಯ ಪ್ರಭೆಯೊಡನೆ ಊರಿಗೆ ಹಿಂದಿರುಗುವ ಅಮೂಲ್ಯನಿಗೆ ಮೃಣ್ಮಯಿ ಎಂಬ ತುಂಟಾಟದ, ಸ್ವಚ್ಛಂದ ಹೆಣ್ಣುಮಗಳ ಕೀಟಲೆಗೆ ಒಳಗಾಗಿ ಕೊನೆಗೆ ಅವಳ ಪ್ರೇಮದಲ್ಲಿ ಬಿದ್ದು ಮದುವೆ ಯಾಗುತ್ತಾನೆ. ಮೃಣ್ಮಯಿಗೆ ಇದು ಒಲ್ಲದ ಮದುವೆ. ಅದನ್ನು ಮೊದಲ ರಾತ್ರಿಯೇ ಹೇಳಿ ತಾನು ಗಂಡಿಗೆ ಅಧೀನಳಾಗುವುದಿಲ್ಲವೆಂದು ಸ್ಪಷ್ಟಪಡಿಸುತ್ತಾಳೆ. ಅವಳ ಭಾವನೆಗಳನ್ನು ಒಪ್ಪಿಕೊಳ್ಳುವ ಅಮೂಲ್ಯ ಅವಳನ್ನು ಬಿಟ್ಟು ನಗರಕ್ಕೆ ಹಿಂದಿರುಗುತ್ತಾನೆ. ಗಂಡನ ಗೈರುಹಾಜರಿ ಮತ್ತು ಅನೇಕ ಘಟನೆಗಳ ತರುವಾಯ ಮೃಣ್ಮಯಿ ಮನಸ್ಸಿನಲ್ಲಿ ಪ್ರೀತಿಯ ಭಾವಗಳು ಅರಳುತ್ತವೆ. ಬಿರುಗಾಳಿಯ ಸಮಯದಲ್ಲಿ ಊರಿಗೆ ಹಿಂದಿರುಗುವ ಅಮೂಲ್ಯ ಮತ್ತು ಮೃಣ್ಮಯಿ ನಡುವೆ ಪ್ರೀತಿಯ ಬಂಧ ಸುತ್ತಿಕೊಳ್ಳುತ್ತದೆ.

ಆದರೆ ಇಂಥ ಸರಳ ಕಥೆಯ ಮೂಲಕ ರೇ ಅವರು ಮನುಷ್ಯನ ಅನೇಕ ತಾಕಲಾಟಗಳನ್ನು ಅನಾವರಣಗೊಳಿ ಸುತ್ತಾರೆ. ಅವರು ಬಳಸಿರುವ ಊರ ಪರಿಸರ, ನದಿ, ಉಯ್ಯಾಲೆ, ಅಳಿಲು ಮುಂತಾದ ಮೋಟಿಫ್‌ಗಳ ಮೂಲಕ ಮೃಣ್ಮಯಿಯ ಬದಲಾವಣೆಗಳನ್ನು ಸೆರೆಹಿಡಿದಿದ್ದಾರೆ. ಈ ಚಿತ್ರದಲ್ಲಿ ಮದುವೆಯ ರಾತ್ರಿ ಮೃಣ್ಮಯಿ ತನ್ನ ಕೊಠಡಿಯಲ್ಲಿ ಸುಮ್ಮನೇ ಮಲಗುವ ದೃಶ್ಯ ಸಿನೆಮಾ ನಿರೂಪಣೆಯಲ್ಲಿ ನವೀನವಾದದ್ದು. ಇಲ್ಲಿ ಮೃಣ್ಮಯಿಯ ಕೊಠಡಿಯಲ್ಲಿ ಕುಳಿತ ಕ್ಯಾಮರಾ ಹೊರಜಗತ್ತನ್ನು ತೋರಿಸುವ ಕಾಣಿಸುವ ರೀತಿ ಅನನ್ಯವಾದದ್ದು. ಕೇವಲ ಶಬ್ದಗಳಿಂದಲೇ ಹೊರಗಡೆಯ ಜಗತ್ತನ್ನು ನಿರ್ಮಿಸುವ ಪರಿ ವಿಶಿಷ್ಟವಾಗಿ ಕಾಡುತ್ತದೆ. ಮೂರೂ ಚಿತ್ರಗಳಲ್ಲಿ ಹೆಣ್ಣು ಕೇಂದ್ರಬಿಂದು. ‘ಪೋಸ್ಟ್ ಮಾಸ್ಟರ್’ ಮನುಷ್ಯ ಸಂಬಂಧಗಳು ಬಿರುಕುಗೊಳ್ಳುವ ಚಿತ್ರವಾದರೆ ‘ಮೊಣಿಹಾರ’ ಮನುಷ್ಯನ ಅದಮ್ಯ ಲೋಭತನವನ್ನು ಬಿಂಬಿಸುವ ಅಪೂರ್ವ ನಿರೂಪಣೆಯ ಚಿತ್ರ. ಆದರೆ ಸಮಾಪ್ತಿ ಮನುಷ್ಯ ಸಂಬಂಧಗಳನ್ನು ಬೆಸೆಯುವ ಚಿತ್ರ. ಟಾಗೋರರ ಮೂರೂ ಕಥೆಗಳ ಕೇಂದ್ರದಲ್ಲಿರುವ ಮನುಷ್ಯ ತಾಕಲಾಟಗಳನ್ನು ದೃಶ್ಯರೂಪಕಗಳಲ್ಲಿ ರೇ ಅವರು ಸೆರೆ ಹಿಡಿದಿರುವ ರೀತಿ ಸಾಹಿತ್ಯ ಮತ್ತು ಸಿನೆಮಾ ನಡುವಿನ ಸಂಬಂಧಗಳನ್ನು ಅರಿಯಲು ಮತ್ತು ಸಾಹಿತ್ಯಕೃತಿಯೊಂದನ್ನು ಸಿನೆಮಾ ಮಾಧ್ಯಮಕ್ಕೆ ಅಳವಡಿಸುವ ರೀತಿಯನ್ನು ಅಧ್ಯಯನ ಮಾಡಲು ಯೋಗ್ಯ ಪಠ್ಯವೆನಿಸಿವೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top