ಮರೆತಿಲ್ಲ
ಹುತಾತ್ಮ, ಮಹಾತ್ಮ, ರಾಷ್ಟ್ರಪಿತರೇ,
ನಿಮ್ಮನ್ನು ಮರೆಯಲು ಯಾರಿಗೆ ತಾನೇ ಸಾಧ್ಯ? ಹೇಗೆ ತಾನೇ ಸಾಧ್ಯ?
ನಿಮ್ಮನ್ನಾರೂ ಮರೆತವರಿಲ್ಲ, ನಾವಂತೂ ನಿಮ್ಮನ್ನೆಂದೂ ಮರೆತಿಲ್ಲ.
ನಮ್ಮ ಸ್ವಾತಂತ್ರ್ಯಕ್ಕೆ ನೀವು ನೀಡಿದ ಅನುಪಮ ಕೊಡುಗೆಗಳನ್ನು ನಾವೆಂದೂ ಮರೆತಿಲ್ಲ.
ನಿಮ್ಮ ಅಮೂಲ್ಯ ತ್ಯಾಗ ಬಲಿದಾನಗಳನ್ನು ನಾವೆಂದೂ ಮರೆತಿಲ್ಲ.
ನಿಮ್ಮ ಸರಳ, ಆದರ್ಶ, ಪ್ರಾಮಾಣಿಕ ಬದುಕನ್ನು ನಾವೆಂದೂ ಮರೆತಿಲ್ಲ.
ನೀವು ನಡೆಸಿದ ಸತ್ಯ, ನ್ಯಾಯ ಮತ್ತು ಅಹಿಂಸೆಯ ಹೋರಾಟವನ್ನು,
ನಿಮ್ಮ ಮಾತು, ನಿಮ್ಮ ನಡಿಗೆ ಮತ್ತು ನಿಮ್ಮ ಉಪವಾಸಗಳನ್ನು
ನಾವಂತೂ ಮರೆತಿಲ್ಲ, ನಾವೆಂದೂ ಮರೆತಿಲ್ಲ.
ಹುತಾತ್ಮ, ಮಹಾತ್ಮ, ರಾಷ್ಟ್ರಪಿತರೇ,
ನಿಮ್ಮ ಅಭಿಮಾನಿಗಳಂತೆ ನಟಿಸುತ್ತಾ ಬಂದು ನಿಮ್ಮೆದೆಗೆ ಗುಂಡಿಕ್ಕಿದ
ಹೇಡಿಗಳನ್ನು ನಾವು ಮರೆತಿಲ್ಲ, ನಾವೆಂದೂ ಮರೆತಿಲ್ಲ.
ನಿಮ್ಮ ಹಂತಕರನ್ನು ಮತ್ತವರ ಪ್ರಾಯೋಜಕರನ್ನೂ ನಾವೆಂದೂ ಮರೆತಿಲ್ಲ.
ನಿನ್ನೆ ನಿಮ್ಮನ್ನು ಕೊಂದವರು ಸತ್ಯ, ನ್ಯಾಯಗಳ, ಅಹಿಂಸೆ, ಕಾರುಣ್ಯಗಳ ಹಂತಕರು
ರಾಷ್ಟ್ರಪಿತನ ಹಂತಕರು ರಾಷ್ಟ್ರದ ಹಂತಕರು, ನಮ್ಮೆಲ್ಲರ ಹಂತಕರು,
ಹಂತಕರನ್ನು ನಾವೆಂದೂ ಮರೆತಿಲ್ಲ, ನಾವೆಂದೂ ಮರೆತಿಲ್ಲ.
ಹುತಾತ್ಮ, ಮಹಾತ್ಮ, ರಾಷ್ಟ್ರಪಿತರೇ,
ನಿಮ್ಮನ್ನು ಮರೆಯಲು ಯಾರಿಗೆ ತಾನೇ ಸಾಧ್ಯ? ಹೇಗೆ ತಾನೇ ಸಾಧ್ಯ?
ನೀವು ಪ್ರತಿನಿಧಿಸಿದ ಮೌಲ್ಯಗಳನ್ನು ನಾವಾರೂ ಮರೆತಿಲ್ಲ,
ಆ ಮೌಲ್ಯಗಳ ಶತ್ರುಗಳನ್ನೂ ನಾವಾರೂ ಮರೆತಿಲ್ಲ.
ನಾವೆಂದೂ ಮರೆತಿಲ್ಲ, ನಾವೆಂದೂ ಮರೆತಿಲ್ಲ.