ನಕಲಿ ವಾಟ್ಸ್ಯಾಪ್ ಸಂದೇಶವನ್ನು ನಂಬಿ ‘ಮೃತ 30 ಚೀನಿ ಸೈನಿಕರ' ಹೆಸರುಗಳನ್ನು ಪ್ರಕಟಿಸಿದ ಟೈಮ್ಸ್ ನೌ!
ಹೊಸದಿಲ್ಲಿ: ಲಡಾಖ್ನಲ್ಲಿ ವಾಸ್ತವಿಕ ಗಡಿ ನಿಯಂತ್ರಣ ರೇಖೆ ಸಮೀಪ ಇತ್ತೀಚೆಗೆ ಭಾರತ-ಚೀನಾ ಸೇನಾಪಡೆಗಳ ನಡುವೆ ನಡೆದ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದು ಚೀನಾದ ಕಡೆಯಲ್ಲಿ ಎಷ್ಟು ಮಂದಿ ಮೃತಪಟ್ಟಿದ್ದಾರೆಂಬ ಕುರಿತು ಸ್ಪಷ್ಟತೆಯಿಲ್ಲ.
ಈ ನಡುವೆ ಟೈಮ್ಸ್ ನೌ ವಾಹಿನಿ ಜೂನ್ 17ರಂದು ಪ್ರಸಾರ ಮಾಡಿದ ಬ್ರೇಕಿಂಗ್ ನ್ಯೂಸ್ನಲ್ಲಿ “ಲಡಾಖ್ ಸಂಘರ್ಷದಲ್ಲಿ ತನ್ನ 30 ಸೈನಿಕರು ಹತರಾಗಿರುವ ಕುರಿತು ಚೀನಾ ಒಪ್ಪಿಕೊಂಡಿದೆ'' ಎಂದು ಹೇಳಿತ್ತಲ್ಲದೆ ಚೀನಾದ ಗ್ಲೋಬಲ್ ಟೈಮ್ಸ್ ಸುದ್ದಿ ಆಧಾರದಲ್ಲಿ ಈ ಹೇಳಿಕೆ ನೀಡಲಾಗಿದೆ ಎಂದೂ ತಿಳಿಸಿತ್ತು. ಈ ಕುರಿತಾದ ಟ್ವೀಟ್ ಗಳನ್ನು ಟೈಮ್ಸ್ ನೌ ಈಗ ತೆಗೆದು ಹಾಕಿದೆ.
ಈ ಸುದ್ದಿಯನ್ನು ಟೈಮ್ಸ್ ನೌ ಆ್ಯಂಕರ್ಗಳಾದ ರಾಹುಲ್ ಶಿವಶಂಕರ್ ಹಾಗೂ ನವೀಕ ಕುಮಾರ್ ಅವರು ವಾಚಿಸಿದ್ದು, ಮೃತಪಟ್ಟಿದ್ದಾರೆನ್ನಲಾದ 30 ಚೀನಿ ಸೈನಿಕರ ಹೆಸರುಗಳನ್ನೂ ಓದಿ ಹೇಳಿದ್ದರು. “ಗ್ಲೋಬಲ್ ಟೈಮ್ಸ್ ಹಾಕಿದ ಈ ಪಟ್ಟಿ ಕೂಡ ನಕಲಿ ಫಾರ್ವರ್ಡ್ ಸುದ್ದಿಯಾಗಿರಬಹುದು'' ಎಂದು ಕೊನೆಯಲ್ಲಿ ನವೀಕಾ ಕುಮಾರ್ ಹೇಳಿದ್ದರು.
ಆದರೆ ವಾಸ್ತವವಾಗಿ ನಕಲಿ ಫಾವರ್ಡ್ ಸಂದೇಶವೊಂದನ್ನು ಬಳಸಿ ಟೈಮ್ಸ್ ನೌ ಈ ಸುದ್ದಿ ಪ್ರಕಟಿಸಿತ್ತು. ಫೇಸ್ ಬುಕ್ ಹಾಗೂ ಟ್ವಿಟರ್ ನಲ್ಲಿ ವ್ಯಾಪಕವಾಗಿ ಹರಡಿದ್ದ ಈ ಸಂದೇಶದಲ್ಲಿ , “ಭಾರತದ ಕಾರ್ಯಾಚರಣೆಯಿಂದಾಗಿ ಮೃತಪಟ್ಟ 30 ಚೀನಿ ಯೋಧರ ಹೆಸರುಗಳನ್ನು ಭಾರತದೊಂದಿಗಿನ ಚೀನಾ ಗಡಿಯ ರಕ್ಷಣಾ ವ್ಯವಸ್ಥೆ ನೋಡಿಕೊಳ್ಳುವ ವೆಸ್ಟರ್ನ್ ಥಿಯೇಟರ್ ಕಮಾಂಡ್ ವಕ್ತಾರರು ಬಿಡುಗಡೆಗೊಳಿಸಿದ್ದಾರೆ'' ಎಂದು ಹೇಳಲಾಗಿತ್ತು. ಈ ನಕಲಿ ಸಂದೇಶದ ಪಟ್ಟಿಯಲ್ಲಿರುವ ಹೆಸರುಗಳನ್ನು ಟೈಮ್ಸ್ ನೌ ಆ್ಯಂಕರ್ಗಳು ಓದಿ ಹೇಳಿದ್ದರು. ಆದರೆ ಅಂತರ್ಜಾಲದಲ್ಲಿ ಹಾಗು ಗ್ಲೋಬಲ್ ಟೈಮ್ಸ್ನ ವೆಬ್ ತಾಣ ಹಾಗೂ ಟ್ವಿಟ್ಟರ್ ಪುಟದಲ್ಲಿ ಹುಡುಕಿದಾಗ ಎಲ್ಲಿಯೂ ಇಂತಹ ಸುದ್ದಿ ದೊರಕಿಲ್ಲ.
Oh dear god. This is just embarrassing. Refer to Alt News piece above. pic.twitter.com/SlZebbcEQP
— Manisha Pande (@MnshaP) June 18, 2020