ಕನ್ನಡದಲ್ಲಿ ಪ್ರಪ್ರಥಮ ಜಾತಿ ವಿರೋಧಿ ರ‍್ಯಾಪ್ ಹಾಡಿದ ಹರೀಶ್ ಕಾಂಬಳೆ

‘ನೀ ಬಿಟ್ಟು ಬಿಡು ಜಾತಿ, ನಾ ಬಿಡುವೆ ಮೀಸಲಾತಿ’

‘ದೇಶದಲ್ಲಿ ಕೊರೋನ ಮಹಾಮಾರಿ ವಕ್ಕರಿಸಿದೆ. ಸರಕಾರ ಘೋಷಿಸಿದ್ದ ಲಾಕ್‌ಡೌನ್ ಮತ್ತು ಕೊರೋನ ಸಂಕಷ್ಟದ ಅವಧಿಯಲ್ಲಿ ಅತ್ಯಂಕ ಹೆಚ್ಚು ಸಂಕಷ್ಟಕ್ಕೆ ಸಿಲುಕಿದ್ದು ಬಡಜನರು. ಅತ್ಯಂತ ಹೆಚ್ಚು ದೌರ್ಜನ್ಯಕ್ಕೆ ಗುರಿಯಾಗಿದ್ದೂ ದಲಿತರು. ಈ ಅಂಶ ಬಹುತೇಕರಿಗೆ ಗೊತ್ತಿಲ್ಲ. ಕೊರೋನ ಅವಧಿಯಲ್ಲಿ ದಲಿತರ ಮೇಲೆ ಹೆಚ್ಚು ದೌರ್ಜನ್ಯಗಳು ನಡೆದಿವೆೆ. ಆದರೆ, ಹೆಚ್ಚು ಪ್ರಕರಣಗಳು ಬೆಳಕಿಗೆ ಬರುವುದಿಲ್ಲ. ಹೀಗಾಗಿ ನನ್ನ ಹೊಸ ರ್ಯಾಪ್ ಹಾಡು ‘ಮಹಾಮಾರಿ ಕಥೆ’ ಈ ಅಂಶವನ್ನೇ ಒಳಗೊಂಡಿದೆ’

-ಹರೀಶ್ ಕಾಂಬಳೆ

ಸಂವಿಧಾನ ಶಿಲ್ಪಿಡಾ. ಬಿ.ಆರ್.ಅಂಬೇಡ್ಕರ್ ಅವರ ಜೀವನಾಧಾರಿತ ‘ಮಹಾನಾಯಕ’ ಧಾರಾವಾಹಿ ನಿಲ್ಲಿಸುವಂತೆ ಕನ್ನಡ ಖಾಸಗಿ ವಾಹಿನಿಯ ಮುಖ್ಯಸ್ಥರಿಗೆ ಬಂದ ಬೆದರಿಕೆ ಕರೆಗಳ ಬಗ್ಗೆ ರಾಜ್ಯಾದ್ಯಂತ ಭಾರೀ ಸುದ್ದಿಯಾಗಿದೆ. ಆದರೆ, ಮಹಾರಾಷ್ಟ್ರ ಗಡಿಭಾಗಕ್ಕೆ ಹೊಂದಿಕೊಂಡಿರುವ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹತ್ಯಾಳ ಗ್ರಾಮದ ದಲಿತ ಯುವಕ ಹರೀಶ್ ಕಾಂಬಳೆಯವರ ಸಂಗೀತ ಲೋಕದಲ್ಲೇ ವಿಶಿಷ್ಟ ಪ್ರಯತ್ನದ ‘ಜಾತಿ’ ಎಂಬ ಹಿಪ್ ಹಾಪ್ ರ್ಯಾಪ್ ಹಾಡು ಯೂಟ್ಯೂಬ್‌ನಲ್ಲಿ ಸದ್ದಿಲ್ಲದೆ ಜನರನ್ನು ಸೆಳೆಯುತ್ತಿರುವುದು ಮಾತ್ರವಲ್ಲ, ‘ಕೀಳು ನನ್ನ ಜಾತಿಯಲ್ಲ, ಕೀಳು ನಿನ್ನ ಬುದ್ಧಿಮಟ್ಟ, ನೀನೇ ಅಪರಾಧಿ’ ಎಂದು ಜಾತಿವಾದಿಗಳಿಗೆ ಹೊಸ ಪ್ರಶ್ನೆಯನ್ನು ಕೇಳುತ್ತಿದೆ.

ಬದುಕಿನ ಜಂಜಾಟದಲ್ಲಿ ತುತ್ತಿನ ಚೀಲ ತುಂಬಿಸಿಕೊಳ್ಳಲು ಹೆಣಗಾಡುವುದು ದಲಿತ ಸಮುದಾಯಕ್ಕೆ ಹೊಸದೇನಲ್ಲ. ಇದೇ ವೇಳೆ ಸಮುದಾಯದ ಯುವಕರು ಮೊಬೈಲ್ ಎಂಬ ಮಾಯಾಲೋಕದಲ್ಲಿ ಕಳೆದುಹೋಗುತ್ತಿದ್ದರೆ ಹರೀಶ್ ಕಾಂಬಳೆ ಎಂಬ ಯುವಕ ತನ್ನ ಜೀವನದಲ್ಲಿ ಅನುಭವಿಸಿದ ಅತ್ಯಂತ ಘೋರ ಅಸ್ಪಶ್ಯತೆ, ಜಾತಿಯ ಅಪಮಾನ, ಸಮಾಜದಲ್ಲಿ ಜಾತಿ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆಯನ್ನು ಮೆಟ್ಟಿನಿಂತು ದೇಶದಲ್ಲೇ ಪ್ರಪ್ರಥಮ ಬಾರಿಗೆ ಕನ್ನಡ ಭಾಷೆಯಲ್ಲಿ ಹಿಪ್ ಹಾಪ್ ರ್ಯಾಪ್ ಹಾಡಿನ ಮೂಲಕ ‘‘ಹೇಳು ನಿನ್ನ ಮಹಾನ್ ದೇಶದಲ್ಲಿ ನನ್ನ ಸ್ಥಾನ ಎಲ್ಲಿ..’’ ಎಂದು ಜಾತಿ ವ್ಯವಸ್ಥೆ ಮತ್ತು ಜಾತಿವಾದಿಗಳಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಹೀಗೆ ‘ಹುಡುಕಾಟ’ದ ಮಧ್ಯದಲ್ಲೇ ಸಿಕ್ಕ ವಿಶಿಷ್ಟ ರೂಪದ ಹೊಸ ಪ್ರಯತ್ನದ ಹಿಪ್ ಹಾಪ್ ರ್ಯಾಪ್ ಸಿಂಗರ್ ಹರೀಶ್ ಕಾಂಬಳೆಯವರೊಂದಿಗೆ ‘ವಾರ್ತಾಭಾರತಿ’ ನಡೆಸಿದ ಸಂದರ್ಶನದ ಸಾರಾಂಶ ಪತ್ರಿಕೆ ಓದುಗರಿಗಾಗಿ ಇಲ್ಲಿ ನೀಡಲಾಗಿದೆ.

ವಾರ್ತಾಭಾರತಿ: ನಿಮ್ಮ ಹಿನ್ನೆಲೆ, ಶಿಕ್ಷಣ ಇತ್ಯಾದಿ ಬಗ್ಗೆ ಸ್ವಲ್ಪಹೇಳಿ?

ಹರೀಶ್ ಕಾಂಬಳೆ: ನಾನು ಅತ್ಯಂತ ಹಿಂದುಳಿದ ಹೈದರಾಬಾದ್ ಕರ್ನಾಟಕ ಾಗದ ಮಹಾರಾಷ್ಟ್ರ ಗಡಿಭಾಗದ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹತ್ಯಾಳ ಗ್ರಾಮದ ಕೃಷಿಕ ಹಿನ್ನೆಲೆಯ ಬಡ ಕುಟುಂಬದಲ್ಲಿ ಹುಟ್ಟಿದ ಯುವಕ. ಬಿಎಸ್ಸಿ, ಬಿಎಡ್ ವ್ಯಾಸಂಗ ಮಾಡಿದ್ದು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಕಲ್ಪನೆಯೊಂದಿಗೆ ಆರಂಭಗೊಂಡಿರುವ ಡಾ.ಬಿ.ಆರ್.ಅಂಬೇಡ್ಕರ್ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.

ವಾ.ಭಾ.: ಕನ್ನಡದಲ್ಲೇ ಇಂತಹದೊಂದು ಪ್ರಪ್ರಥಮ ಪ್ರಯತ್ನಕ್ಕೆ ಸ್ಫೂರ್ತಿಯಾದ ಅಂಶಗಳೇನು?

ಕಾಂಬಳೆ: ನಾನು ಶಿಕ್ಷಣವನ್ನು ಪೂರ್ತಿಗೊಳಿಸಿ ಉದ್ಯೋಗಕ್ಕಾಗಿ ಹುಡುಕಾಟದಲ್ಲಿದ್ದೆ. ಈ ವೇಳೆ ಶಾಲೆಯೊಂದರಲ್ಲಿ ಸಂದರ್ಶನಕ್ಕೆ ತೆರಳಿದ್ದೆ. ಅಲ್ಲಿನ ಸಂದರ್ಶಕರು ನನ್ನ ಹೆಸರಿನಲ್ಲೇ ನನ್ನ ಜಾತಿಯನ್ನು ಹುಡುಕಿದರು. ಇದನ್ನು ನನಗೆ ಸಹಿಸಲು ಸಾಧ್ಯವಾಗಲಿಲ್ಲ. ಅಲ್ಲದೆ, ನಾನು ನನ್ನ ಊರಿನಲ್ಲಿ ಸಾರ್ವಜನಿಕ ಬಾವಿಯಿಂದ ನೀರು ತುಂಬಿಕೊಳ್ಳುವ ವೇಳೆಯೂ ಜಾತಿಯ ಕಾರಣಕ್ಕೆ ಅಮಾನವೀಯ ಅವಮಾನ ಅನುಭವಿಸಿದ್ದೆ. ನನ್ನ ಹಿಪ್ ಹಾಪ್ ರ್ಯಾಪ್ ಹಾಡುಗಳಿಗೆ ಇದೇ ಸ್ಫೂರ್ತಿಯಾಗಿದೆ.

ವಾ.ಭಾ.: ಹಿಪ್ ಹಾಪ್ ಕ್ಷೇತ್ರಕ್ಕೆ ಬರಲು ಪ್ರೇರಣೆ ಏನು?

ಕಾಂಬಳೆ: ದಕ್ಷಿಣ ದೇಶಗಳ ಮೂಲದಿಂದ ಬಂದ ಹಿಪ್ ಹಾಪ್ ರ್ಯಾಪ್ ಹಾಡುಗಳು ಹುಟ್ಟಿದ್ದೇ ವ್ಯವಸ್ಥೆಯಲ್ಲಿನ ಅನ್ಯಾಯದ ವಿರುದ್ಧದ ಧ್ವನಿಯಾಗಿ. ಜನರನ್ನು ಜಾಗೃತಗೊಳಿಸಲು ಮತ್ತು ಸಮಸ್ಯೆಗಳನ್ನು ಹೇಳಿಕೊಳ್ಳಲು ಸಂಗೀತ ಅತ್ಯಂತ ಪರಿಣಾಮಕಾರಿ ಮಾಧ್ಯಮ. ಪ್ರೀತಿ, ಪ್ರೇಮದ ಗುಂಗಿನಲ್ಲೇ ಯೌವನ ಕಳೆಯುವ ಯುವಕರನ್ನು ವ್ಯವಸ್ಥೆಯಲ್ಲಿನ ‘ಜಾತಿಯ ಅಸಮಾನತೆ, ಅಸ್ಪಶ್ಯತೆ’ಯ ಸಮಸ್ಯೆಗಳ ಬಗ್ಗೆ ನಾನೇ ಬರೆದು ಹಾಡಿದ, ರ್ಯಾಪ್ ಹಾಡುಗಳ ಮೂಲಕ ಗಮನ ಸೆಳೆಯುವ ಒಂದು ಪ್ರಯತ್ನವಿದು. ಹೇಳಿ ಕೇಳಿ ಬೀದರ್ ಜಿಲ್ಲೆಯ ಬಸವಕಲ್ಯಾಣ ಆಧುನಿಕ ಸಂಸತ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಮಾಜ ಸುಧಾರಕ ಬಸವಣ್ಣನವರ ಕರ್ಮಭೂಮಿ. ಹೀಗಾಗಿ ನಾನು ಬದಲಾವಣೆಗಾಗಿ(ಕ್ರಾಂತಿ) ಈ ವೇದಿಕೆಯನ್ನು ಆಯ್ಕೆ ಮಾಡಿಕೊಂಡಿದ್ದೇನೆ.

ವಾ.ಭಾ.: ಜಾತಿ ವಿರೋಧಿ ಚಳವಳಿಗೆ ನಿಮ್ಮ ಪ್ರಯತ್ನ ಹೇಗೆ ಪೂರಕ?

ಕಾಂಬಳೆ: ಹೋರಾಟ, ಚಳವಳಿಗಳ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಆದರೆ, ಸಮಾಜದಲ್ಲಿನ ವಾಸ್ತವ ಸಂಗತಿ ಮತ್ತು ವಾಸ್ತವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಬೇಕೆಂಬುದು ನನ್ನ ಅಪೇಕ್ಷೆ. ರ್ಯಾಪ್ ಹಾಡುಗಾರರು ಪ್ರೀತಿ-ಪ್ರೇಮದ ಅಮಲೇರಿಸಿಕೊಂಡವರಂತೆ ಮತ್ತಿನಲ್ಲಿರುತ್ತಾರೆ. ಆದರೆ, ನಾನು ನನ್ನ ಜೀವನದಲ್ಲಿ ಅನುಭವಿಸಿದ ‘ಜಾತಿ’ಯ ಅವಮಾನವನ್ನು ನನ್ನ ‘ವಸ್ತು’ವನ್ನಾಗಿ ಮಾಡಿಕೊಂಡಿದ್ದೇನೆ. ದೊಡ್ಡ ಸಂಖ್ಯೆಯಲ್ಲಿ ಜನರು ನನ್ನ ‘ಜಾತಿ’ ಹಿಪ್ ಹಾಪ್ ರ್ಯಾಪ್ ಹಾಡನ್ನು ಯೂಟ್ಯೂಬ್‌ನಲ್ಲಿ ವೀಕ್ಷಿಸಿದ್ದಾರೆ. ಬಹಳಷ್ಟು ಮಂದಿ ಇಷ್ಟಪಟ್ಟಿದ್ದಾರೆ. ಕೆಲವರು ತಿರಸ್ಕಾರವನ್ನೂ ಮಾಡಿದ್ದಾರೆ. ಅದು ಜನರ ತಿಳುವಳಿಕೆಗೆ ಬಿಟ್ಟದ್ದು.

ವಾ.ಭಾ.: ಜಾತಿ ಹಾಗೂ ಅದರ ಹೆಸರಲ್ಲಿ ನಡೆಯುತ್ತಿರುವ ದೌರ್ಜನ್ಯ ಗಳನ್ನು ಅರ್ಥಮಾಡಿಕೊಳ್ಳಲು ನಿಮ್ಮ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳು, ಪುಸ್ತಕಗಳು ಇತ್ಯಾದಿಗಳ ಬಗ್ಗೆ ಹೇಳಿ?

ಕಾಂಬಳೆ: ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಅವರೇ ರೂಪಿಸಿದ ಸಂವಿಧಾನ. ಹಲವು ಪುಸ್ತಕಗಳನ್ನು ಓದಿದ್ದೇನೆ, ಓದುತ್ತಿದ್ದೇನೆ. ಬದಲಾವಣೆ ಜಗದ ನಿಯಮ. ಈ ಸಮಾಜ ನಿಂತ ನೀರಲ್ಲ. ಬದಲಾವಣೆ ಅಗತ್ಯ, ಜಾತಿಯ ಬದಲಾವಣೆಗೆ ಮನಸ್ಸುಗಳು ಬದಲಾಗಬೇಕು.

ವಾ.ಭಾ.: ‘ಜಾತಿ’ ಹಿಪ್ ಹಾಪ್ ಮಾಡಿ ವರ್ಷವಾಯಿತು, ಆದರೂ ಹೆಚ್ಚು ಪ್ರಚಾರ ಸಿಗಲಿಲ್ಲ, ಕಾರಣ?

ಕಾಂಬಳೆ: ನಾನು ಇದರ ಪ್ರಚಾರಕ್ಕಾಗಿ ಏನೂ ಮಾಡಿಲ್ಲ. ಒಂದು ವರ್ಷದ ಹಿಂದೆ ನನ್ನ ಮನಸ್ಸಿನಲ್ಲಿ ‘ಜಾತಿ’ ವಿಷಯದ ಮೇಲೆ ಹಿಪ್ ಹಾಪ್ ರ್ಯಾಪ್ ಹಾಡು ಮಾಡಬೇಕು ಎನಿಸಿತು ಮಾಡಿದೆ. ಯೂಟ್ಯೂಬ್‌ನಲ್ಲಿ ಹಲವು ಜನರು ಸ್ವೀಕರಿಸಿದ್ದಾರೆ. ಕೆಲವರು ಬೆದರಿಕೆ ರೂಪದಲ್ಲಿಯೂ ಎಲ್ಲಿದೆ ‘ಜಾತಿ’ ಎಂದೂ ಪ್ರಶ್ನಿಸಿದ್ದಾರೆ. ನಾನು ಅವರಿಗೆ ಬಹಳ ನೇರಾನೇರವಾಗಿಯೇ ಉತ್ತರಿಸಿದ್ದೇನೆ. ಎಲ್ಲರೂ ಸಮಾನರು ಎನ್ನುತ್ತಾರೆ. ಆದರೆ, ಸಮಾಜದಲ್ಲಿ ಜಾತಿ ಎಲ್ಲೆಡೆ ಹಬ್ಬಿದೆ. ಹೀಗಾಗಿಯೇ ನಾನು ‘‘ಕೀಳು ನನ್ನ ಜಾತಿಯಲ್ಲ, ಕೀಳು ನಿನ್ನ ಬುದ್ಧಿಮಟ್ಟ, ನೀನೇ ಅಪರಾಧಿ’’ ಎಂದು ಪ್ರಶ್ನಿಸಿದ್ದೇನೆ.

ವಾ.ಭಾ.: ಈ ಪ್ರಯತ್ನಕ್ಕೆ ಪ್ರತಿಕ್ರಿಯೆ ಹೇಗಿದೆ? ಇದನ್ನು ಮುಂದುವರಿಸುತ್ತೀರಾ?

ಕಾಂಬಳೆ: ನಿಧಾನವಾಗಿ ಉತ್ತಮ ಪ್ರತಿಸ್ಪಂದನೆ ಸಿಗುತ್ತಿದೆ. ನಾನು ಇದನ್ನು ಮುಂದುವರಿಸುತ್ತೇನೆ. ಕೊರೋನ ಸೋಂಕಿನ ಕುರಿತು ರಚಿಸಿದ್ದ ‘ಮಹಾಮಾರಿ ಕಥೆ ಮತ್ತು ರಾಜನೀತಿ’ ಎಂಬ ಎರಡು ಹೊಸ ರ್ಯಾಪ್ ಹಾಡುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತಿದ್ದೇನೆ. ಹೊಸದೇನನ್ನಾದರೂ ನೀಡಬೇಕೆಂಬ ತುಡಿತ, ಹಂಬಲ ನನ್ನನ್ನು ಸದಾ ಕಾಡುತ್ತಿದೆ. ಜಾತಿ ಮನಸ್ಥಿತಿ ಬದಲಾವಣೆ ಆಗಲೇಬೇಕು ಎಂಬುದು ನನ್ನ ಉದ್ದೇಶವಾಗಿದೆ.

ವಾ.ಭಾ: ಎಲ್ಲ ಪ್ರಯತ್ನಗಳ ಹೊರತಾಗಿಯೂ ಜಾತಿ ವ್ಯವಸ್ಥೆ ಯ ಬಲಿಪಶು ಯುವಜನರೇ ಅದನ್ನು ಅರ್ಥಮಾಡಿಕೊಳ್ಳದೆ ಬಲಪಂಥೀಯರ ಕಾಲಾಳು ಗಳಾಗುತ್ತಿದ್ದಾರೆ. ನಿಮ್ಮ ಪ್ರಕಾರ ಇದಕ್ಕೆ ಕಾರಣ ಮತ್ತು ಪರಿಹಾರವೇನು?

ಕಾಂಬಳೆ: ಈ ಪ್ರಶ್ನೆಗೆ ಉತ್ತರ ನೀಡುವುದು ಕಷ್ಟ. ಆದರೆ, ಜನರಿಗೆ ತಿಳುವಳಿಕೆ ಬಹಳ ಮುಖ್ಯ. ಯುವಕರ ಪ್ರಜ್ಞೆ ಜಾಗೃತಗೊಳ್ಳಬೇಕಿದೆ. ಡಾ.ಬಿ.ಆರ್.ಅಂಬೇಡ್ಕರ್ ರೂಪಿಸಿರುವ ಸಂವಿಧಾನದಲ್ಲಿ ಎಲ್ಲಕ್ಕೂ ಉತ್ತರ ಅಡಗಿದೆ. ಸಂವಿಧಾನವನ್ನು ಎಲ್ಲರೂ ಅತ್ಯಂತ ಸಮರ್ಪಕ ರೀತಿಯಲ್ಲಿ ಪಾಲನೆ ಮಾಡಿದರೆ ಜಾತಿಯ ಅಸಮಾನತೆ, ಅಸ್ಪಶ್ಯತೆ, ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯ, ಕೊಲೆ, ಅತ್ಯಾಚಾರಗಳಿಗೆ ಅವಕಾಶವೇ ಇರುವುದಿಲ್ಲ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top