ಆಡಂಬರ ಮತ್ತು ವೈಭೋಗದಿಂದ ದೂರವಿದ್ದ ಸ್ವಾಮಿ ಅಗ್ನಿವೇಶ್

ಮಂಗಳೂರಿಗೆ ಅವರು ಬಂದ ಸಂದರ್ಭದಲ್ಲಿ ಇಲ್ಲಿನ ವಿಶೇಷ ಆರ್ಥಿಕ ವಲಯಕ್ಕೆಂದು ಬಲಾತ್ಕಾರವಾಗಿ ಕೃಷಿಭೂಮಿಯ ಸ್ವಾಧೀನದ ಪ್ರಕ್ರಿಯೆ ನಡೆಯುತ್ತಿತ್ತು. ಅದರ ವಿರುದ್ಧ ಸ್ಥಳೀಯ ರೈತರ ಪ್ರತಿಭಟನೆಯ ಬಗ್ಗೆ ತಿಳಿದ ಅಗ್ನಿವೇಶ್, ಹೋರಾಟಗಾರರ ಕರೆಗೆ ಓಗೊಟ್ಟು ಸ್ಥಳಪರಿಶೀಲನೆಗೆ ಬಂದು ಅಲ್ಲಿನ ಸಂತ್ರಸ್ತರ ಜೊತೆ ಮನಬಿಚ್ಚಿ ಮಾತನಾಡಿದುದನ್ನು, ಸಾಂಕೇತಿಕವಾಗಿ ಗದ್ದೆಯಲ್ಲಿ ಎಲ್ಲರೊಂದಿಗೆ ಧರಣಿಯಲ್ಲಿ ಕುಳಿತದ್ದನ್ನು ಈಗಲೂ ಅನೇಕ ಕಾರ್ಯಕರ್ತರು ಜ್ಞಾಪಿಸಿಕೊಳ್ಳುತ್ತಾರೆ.


ಸ್ವಾಮಿ ಅಗ್ನಿವೇಶ್‌ರನ್ನು ನಾನು ಮೊದಲ ಬಾರಿ ಭೇಟಿಯಾದದ್ದು 2001 ಆಗಸ್ಟ್ ತಿಂಗಳಲ್ಲಿ. ಬೆಂಗಳೂರಿನಲ್ಲಿ ನಡೆಯಲಿದ್ದ ಕಾರ್ಪೊರೇಶನ್ ಬ್ಯಾಂಕು ಅಧಿಕಾರಿಗಳ ರಾಷ್ಟ್ರೀಯ ಸಮ್ಮೇಳನದ ಮುಖ್ಯ ಅತಿಥಿಯಾಗಿ ಅವರನ್ನು ಆಮಂತ್ರಿಸಿದ್ದೆವು. ಅವರನ್ನು ನಮ್ಮ ಸಂಘದ ದಿಲ್ಲಿ ಕಾರ್ಯಕರ್ತರು ಸಂಪರ್ಕಿಸಿದಾಗ ಬ್ಯಾಂಕು ಅಧಿಕಾರಿಗಳಿಗೂ ತನಗೂ ಎಲ್ಲಿನ ಸಂಬಂಧ ಎಂದಿದ್ದ ಅಗ್ನಿವೇಶ್ ಬಹಳ ಒತ್ತಾಯಕ್ಕೆ ಮಣಿದು ಬರಲೊಪ್ಪಿದ್ದರು. ಅವರನ್ನು ಸ್ವಾಗತಿಸಲು ಹಿಂದಿನ ದಿನ ಸಾಯಂಕಾಲ ಬೆಂಗಳೂರಿನ ಆಗಿನ ವಿಮಾನ ನಿಲ್ದಾಣಕ್ಕೆ ಹೋಗಿದ್ದೆ. ಅವರೊಂದಿಗೆ ಹೊರಗೆ ಬರುತ್ತಿದ್ದಂತೆ, ಅಲ್ಲಿಯೇ ಸರದಿಯಲ್ಲಿ ನಿಂತಿದ್ದ ಅಟೊ ರಿಕ್ಷಾ ಚಾಲಕರು ಅವರಿಗೆ ಸಾಷ್ಟಾಂಗ ನಮಸ್ಕಾರ ಹಾಕಲು ಬಗ್ಗಿದಾಗ ಅವರನ್ನು ತಡೆದು ನಿಲ್ಲಿಸಿ ಹೇಳಿದರು: ‘‘ನಾನೂ ನಿಮ್ಮಂತೆಯೇ ಒಬ್ಬ ಮನುಷ್ಯ. ಹೀಗೆ ಕಾಲಿಗೆ ಅಡ್ಡಬೀಳಬಾರದು’’ ಅಪರಿಚಿತರಾದ ಅವರ ಯೋಗಕ್ಷೇಮ ವಿಚಾರಿಸಿ ಮುಂದುವರಿದ ಕಾಷಾಯವಸ್ತ್ರ ಧಾರಿಯನ್ನು ಕಂಡು ನನಗೆ ಅಚ್ಚರಿಯಾಗಿತ್ತು.

ಅವರಿಗೆ ಉಳಕೊಳ್ಳಲು ಯಾವ ರೀತಿಯ ವ್ಯವಸ್ಥೆ ಆಗಬೇಕೆಂದು ಕೇಳಿದಾಗ ಅವರ ಸಂದೇಶ ಬಂದಿತ್ತು- ‘ನಿಮ್ಮ ಸದಸ್ಯರು ಎಲ್ಲಿರುತ್ತಾರೋ ನಾನೂ ಅಲ್ಲಿಯೇ ಉಳಕೊಳ್ಳಲು ಬಯಸುತ್ತೇನೆ’ ಎಂದರು. ಹಾಗಾಗಿ ನಮ್ಮ ಸದಸ್ಯರೂ ತಂಗಿದ್ದ ಸಾಮಾನ್ಯವಾದ ಒಂದು ಹೊಟೇಲ್‌ನಲ್ಲಿ ರೂಮಿನ ವ್ಯವಸ್ಥೆ ಮಾಡಿದ್ದೆವು. ನಿಲ್ದಾಣದಲ್ಲಿ ಆದ ಅನುಭವವೇ ಹೊಟೇಲ್‌ನಲ್ಲಿ ಮರುಕಳಿಸಿತು. ಲಿಫ್ಟ್ ಚಾಲಕ ಮತ್ತು ರೂಮ್‌ಬಾಯ್, ಅಡ್ಡಬೀಳಲು ಹೊರಟಾಗ ಮತ್ತೆ ಸ್ವಾಮಿಯವರಿಂದ ತಡೆ, ಬೆನ್ನು ತಟ್ಟಿ ಅದೇ ಮಾತು. ಮರುದಿನ ಸಮ್ಮೇಳನದ ಊಟದ ಸಂದರ್ಭದಲ್ಲಿ ಗಣ್ಯರಿಗೆಂದು ಕಾಯ್ದಿರಿಸಿದ ಕೊಠಡಿಗೆ ಹೋಗೋಣ ಎಂದರೆ, ‘‘ಬೇಡ, ನಿಮ್ಮ ಸದಸ್ಯರ ಜೊತೆಗೇ ನಾನು ಊಟಮಾಡುತ್ತೇನೆ, ಅವರಿರುವಲ್ಲಿಗೆ ಹೋಗೋಣ’’ ಎಂದರು. ಅಲ್ಲಿ ಯಾರು ಮಾತನಾಡಿಸಿದರೂ ಉತ್ತರಿಸಿ ಅವರ ಬಗ್ಗೆ, ಬ್ಯಾಂಕಿನ ಬಗ್ಗೆ, ಅವರ ಊರಿನ ಬಗ್ಗೆ ವಿಚಾರಿಸುತ್ತಿದ್ದರು. ಆ ಅನುಭವಗಳ ಹಿನ್ನೆಲೆಯಲ್ಲಿ ಮೊನ್ನೆ (ಶುಕ್ರವಾರ) ರಾತ್ರಿ ಅನೇಕ ಮಾಜಿ ಸಹೋದ್ಯೋಗಿಗಳು ಟೆಲಿಫೋನಿನಲ್ಲಿ ಅವರ ನಿಧನದ ವಾರ್ತೆ ತಿಳಿಸಿ ಅವರ ಆಳವಾದ ಸಾಮಾಜಿಕ ಕಳಕಳಿಯಿಂದ ಕೂಡಿದ್ದ ಅಂದಿನ ಭಾಷಣವನ್ನೂ ನೆನಪಿಸಿಕೊಂಡು ವಿಷಾದ ಹೇಳಿದುದು ಅಗ್ನಿವೇಶ್‌ರ ವ್ಯಕ್ತಿತ್ವಕ್ಕೆ ಹಿಡಿದ ಒಂದು ಕನ್ನಡಿ.

ನಾನು ಗಮನಿಸಿದ, ಸಂವಾದಿಸಿದ ಅನೇಕ ಆಧುನಿಕ ‘ಸನ್ಯಾಸಿ’ ಹಾಗೂ ‘ಯೋಗಿ’ಗಳಿಗಿಂತ ಭಿನ್ನವಾದ ವ್ಯಕ್ತಿ ಅವರಾಗಿದ್ದರು. ಆಡಂಬರ ಮತ್ತು ವೈಭೋಗದಿಂದ ವಿಮುಖರಾಗಿ ಎಲ್ಲರಲ್ಲಿ ಒಬ್ಬರಾಗುವ ಅವರ ಪ್ರಜ್ಞೆ ಅವರನ್ನು ಉಳಿದವರಿಗಿಂತ ಭಿನ್ನರಾಗಿಸಿತ್ತು. ಮುಂದೆ ನಾನು ಸಂಘದ ಕೆಲಸದ ನಿಮಿತ್ತ ದಿಲ್ಲಿಗೆ ಹೋದಾಗಲೆಲ್ಲ ಜಂತರ್ ಮಂತರ್‌ನಲ್ಲಿದ್ದ ಅವರ ‘ಬಂಧುವಾ ಮುಕ್ತಿ ಮೋರ್ಚ’ (ಜೀತದಾಳುಗಳ ವಿಮೋಚನಾ ರಂಗ- ಆಟ್ಞಛಿ ಔಚಿಟ್ಠ್ಟಛ್ಟಿೞಔಜಿಚಿಛ್ಟಿಠಿಜಿಟ್ಞ ಊ್ಟಟ್ಞಠಿಆಔಔಊ)ದ ಕಚೇರಿಯಲ್ಲಿ ಭೇಟಿಯಾಗುತ್ತಿದ್ದೆ. ಅವರಿಗಿಂತ 10 ವರ್ಷ ಚಿಕ್ಕವನಾಗಿದ್ದ ನನ್ನನ್ನು ಆತ್ಮೀಯತೆಯಿಂದ ‘ಹೇಗಿದ್ದೀರಿ ಭಟ್ಟರೇ’ ಎಂದು ಹಿಂದಿಯಲ್ಲಿ ಕೇಳುತ್ತಾ ತನ್ನ ಕೆಲಸವನ್ನು ಬದಿಗಿರಿಸಿ ಆದರಿಸುತ್ತಿದ್ದರು. ಅವರ ಜೊತೆಯಲ್ಲಿ ಊಟವೋ, ಇಲ್ಲ ತಿಂಡಿಯೋ ಸ್ವೀಕರಿಸಿಯೇ ಹೋಗಬೇಕು, ಅವರ ಆದರದ ಮುಂದೆ ಇಲ್ಲವೆನ್ನಲು ಸಾಧ್ಯವಿರಲಿಲ್ಲ. ಅವರ ಸಹಾಯಕರಿಗೆ ಪರಿಚಯಿಸುವ ಪರಿಪಾಠವನ್ನು ಮರೆಯಲು ಸಾಧ್ಯವಿಲ್ಲ.

ಹೋದ ದಶಕದ ಕೊನೆಗೆ ಸಂಘದ ಆಹ್ವಾನದ ಮೇರೆಗೆ ‘ಯುವಕರು ಮತ್ತು ಭಾವೈಕ್ಯ’ ಎಂಬ ವಿಷಯದ ಕುರಿತಂತೆ ಮಂಗಳೂರಿನಲ್ಲಿ ಏರ್ಪಡಿಸಿದ ವಿಚಾರಸಂಕಿರಣದಲ್ಲಿ ಭಾಗವಹಿಸಲು ಬಂದಿದ್ದರು- ಅನೇಕ ಕಾಲೇಜು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾವೈಕ್ಯ ಬೆಳೆಸುವಲ್ಲಿ ಅವರ ಪಾತ್ರವೇನು ಎಂಬುದರ ಬಗ್ಗೆ ಸರಳವಾಗಿ ತಿಳಿಯ ಹೇಳಿದ್ದರು. ವೇದಿಕೆಯಲ್ಲಿದ್ದ ಸಂಪನ್ಮೂಲ ವ್ಯಕ್ತಿಗಳಲ್ಲಿ ಒಬ್ಬರ ಬಾಳ ಸಂಗಾತಿ ಅನ್ಯಧರ್ಮೀಯರಾಗಿದ್ದರು-ಅವರ ಉದಾಹರಣೆಯನ್ನೇ ಯುವಕರ ಮುಂದೆ ಕೊಟ್ಟು ಸಮಾಜವನ್ನು ಭದ್ರಗೊಳಿಸುವಲ್ಲಿ ಧರ್ಮ, ಜಾತಿ, ಆಚಾರಗಳು ಅಡ್ಡಿಯಾಗಬಾರದು ಎಂದು ಪ್ರತಿಪಾದಿಸಿದ್ದು ಇಂದಿಗೂ ನನಗೆ ನೆನಪಿದೆ.

ಮಂಗಳೂರಿಗೆ ಅವರು ಬಂದ ಸಂದರ್ಭದಲ್ಲಿ ಇಲ್ಲಿನ ವಿಶೇಷ ಆರ್ಥಿಕ ವಲಯಕ್ಕೆಂದು ಬಲಾತ್ಕಾರವಾಗಿ ಕೃಷಿಭೂಮಿಯ ಸ್ವಾಧೀನದ ಪ್ರಕ್ರಿಯೆ ನಡೆಯುತ್ತಿತ್ತು. ಅದರ ವಿರುದ್ಧ ಸ್ಥಳೀಯ ರೈತರ ಪ್ರತಿಭಟನೆಯ ಬಗ್ಗೆ ತಿಳಿದ ಅಗ್ನಿವೇಶ್, ಹೋರಾಟಗಾರರ ಕರೆಗೆ ಓಗೊಟ್ಟು ಸ್ಥಳಪರಿಶೀಲನೆಗೆ ಬಂದು ಅಲ್ಲಿನ ಸಂತ್ರಸ್ತರ ಜೊತೆ ಮನಬಿಚ್ಚಿ ಮಾತನಾಡಿದುದನ್ನು, ಸಾಂಕೇತಿಕವಾಗಿ ಗದ್ದೆಯಲ್ಲಿ ಎಲ್ಲರೊಂದಿಗೆ ಧರಣಿಯಲ್ಲಿ ಕುಳಿತದ್ದನ್ನು ಈಗಲೂ ಅನೇಕ ಕಾರ್ಯಕರ್ತರು ಜ್ಞಾಪಿಸಿಕೊಳ್ಳುತ್ತಾರೆ. 
  


ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ ಬ್ರಾಹ್ಮಣ ಕುಟುಂಬದಲ್ಲಿ 1939ರಲ್ಲಿ ಜನಿಸಿದ ಅಗ್ನಿವೇಶ್‌ರ ಪೂರ್ವಾಶ್ರಮದ ಹೆಸರು ವೇಪಾ ಶಾಮರಾವ್. ಕೋಲ್ಕತಾದಲ್ಲಿ ಉಚ್ಚಶಿಕ್ಷಣ ಮುಗಿಸಿ ಅಧ್ಯಾಪಕ ಮತ್ತು ನ್ಯಾಯವಾದಿಯಾಗಿ ಸ್ವಲ್ಪ ಸಮಯ ಕೆಲಸಮಾಡಿದ್ದ ಶಾಮರಾವ್ ಅವರನ್ನು ಸೆಳೆದದ್ದು ಸಮಾಜ ಸೇವೆ. ಅದಕ್ಕೆ ಒದಗಿದ ಮಾಧ್ಯಮ ಸನ್ಯಾಸ. ದಯಾನಂದ ಸರಸ್ವತಿಯವರು ಸ್ಥಾಪಿಸಿದ ಆರ್ಯಸಮಾಜಕ್ಕೆ ಸೇರಿದ ಶಾಮರಾವ್ ಅಗ್ನಿವೇಶ್‌ರಾದರು. ‘ಅಗ್ನಿ’ ಎಲ್ಲವನ್ನೂ ಶುದ್ಧೀಕರಿಸುವ ಸಾಮರ್ಥ್ಯ ಹೊಂದಿ ಅದರ ಮುಂದೆ ಎಲ್ಲರೂ ಸಮಾನರು ಎಂಬ ನಂಬಿಕೆ ಅವರದ್ದಿರಬೇಕು- ಹಾಗಾಗಿ ‘ಅಗ್ನಿವೇಶ್’ ಎಂಬ ಹೆಸರು ಮತ್ತು ದಿರಿಸು ಅವರದಾಯಿತು. ಆ ವೇಷ ಧರಿಸಿದ ಮೇಲೆ ಅದು ಬಿಂಬಿಸುವ ಉದ್ದೇಶಕ್ಕಾಗಿ ತನ್ನ ಜೀವಮಾನವನ್ನೇ ಮುಡಿಪಾಗಿಟ್ಟರು.

1977-80ರ ಅವಧಿಯಲ್ಲಿ ಕಾಂಗ್ರೆಸೇತರ ಹರ್ಯಾಣ ಸರಕಾರದಲ್ಲಿ ಶಿಕ್ಷಣ ಮಂತ್ರಿಯಾಗಿ ಕೆಲಸಮಾಡಿದರು, ಆದರೆ, ಸರಕಾರದ ನೀತಿಗಳು ಒಪ್ಪಿತವಾಗದಿದ್ದಾಗ ರಾಜಕೀಯದಿಂದ ಹೊರಬಂದು, ಪೂರ್ಣಪ್ರಮಾಣದ ಸಾಮಾಜಿಕ ಕಾರ್ಯಕರ್ತರಾದರು. 1975ರಲ್ಲಿ ಇಂದಿರಾ ಗಾಂಧಿಯವರ 20 ಅಂಶದ ಕಾರ್ಯಕ್ರಮದಲ್ಲಿ ಜೀತಪದ್ಧತಿಯ ವಿಮೋಚನೆ ಒಂದಾಗಿತ್ತು. ಆದರೆ ಅದು ಘೋಷಣೆಯಲ್ಲಿಯೇ ಉಳಿಯಿತು. 1981ರಲ್ಲಿ ಅದನ್ನು ಸಾಧಿಸಲು ವಿಶಾಲ ಮಟ್ಟದ ಜನಾಂದೋಲನದ ಮತ್ತು ಜನಜಾಗೃತಿಯ ಅಗತ್ಯವನ್ನು ಅರಿತ ಅಗ್ನಿವೇಶ್‌ರು ‘ಬಂಧುವಾ ಮುಕ್ತಿ ಮೋರ್ಚ’ವನ್ನು ಸ್ಥಾಪಿಸಿದರು. ದೇಶದ ಹಲವೆಡೆ ಜೀತಪದ್ಧತಿಯನ್ನು ಗುರುತಿಸಿ ಸರಕಾರದ ಗಮನ ಸೆಳೆದು ಪರಿಸ್ಥಿತಿಯ ಸುಧಾರಣೆಗೆ ಶ್ರಮಿಸಿದರು. 21ನೇ ಶತಮಾನದ ಭಾರತದಲ್ಲಿ ಪರಿಹಾರ ಕಾಣದೆ ಉಳಿದ ಹೆಣ್ಣು ಭ್ರೂಣಹತ್ಯೆಯ ವಿರುದ್ಧ ಜನಜಾಗೃತಿಗಾಗಿ ದೇಶದ ಉದ್ದಗಲಕ್ಕೆ ಯಾತ್ರೆ ನಡೆಸಿದರು. ಜೊತೆಗೇ ಮಾನವ ನಿರ್ಮಿತ ಕಂದಕಗಳನ್ನು ಮುಚ್ಚುವತ್ತ ನಿರಂತರ ಯತ್ನಿಸಿ ಹಿಂದೂಸಮಾಜದಲ್ಲಿರುವ ಮೂಢನಂಬಿಕೆಗಳು, ಸಾಮಾಜಿಕ ತಾರತಮ್ಯಗಳು, ಜಾತಿಭೇದಗಳು, ತಳವರ್ಗದವರ ಮೇಲಿನ ದಬ್ಬಾಳಿಕೆಯ ವಿರುದ್ಧ ಧ್ವನಿ ಎಬ್ಬಿಸುತ್ತಲೇ ಇದ್ದರು. ಮಾನವಹಕ್ಕುಗಳ ರಕ್ಷಣೆಗಾಗಿ ಹೋರಾಟಕ್ಕೂ ಇಳಿದರು.

ಪರ್ಯಾಯ ನೊಬೆಲ್ ಎನ್ನಲಾಗುವ ‘ರೈಟ್ ಲೈವ್ಲಿಹುಡ್’ ಪ್ರಶಸ್ತಿ ಅವರನ್ನು ಅರಸಿಕೊಂಡು ಬಂತು. ವಿಶ್ವಸಂಸ್ಥೆಯ ಸಮಕಾಲೀನ ದಾಸ್ಯ ಸಮಸ್ಯೆಯ ಕುರಿತಾದ ಸಮಿತಿಯ ಮುಖ್ಯಸ್ಥರೂ ಆದರು. ಹಿಂದೂ ಸಮಾಜದ ಅನಿಷ್ಟಗಳ ಬಗ್ಗೆ ಅವರು ನಡೆಸಿದ ಎರಡು ಪ್ರತಿಭಟನೆಗಳನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಬೇಕು. 1987ರಲ್ಲಿ ರಾಜಸ್ಥಾನದ ದೇವರಾಲದಲ್ಲಿ ರೂಪ ಕುಮಾರಿ ಎಂಬ ಎಳೆವಯಸ್ಸಿನ ಯುವತಿ ಅಕಾಲಮೃತ್ಯುವಿಗೆ ಈಡಾದ ತನ್ನ ಗಂಡನ ಚಿತೆಗೆ ‘ಹಾರಿ’ ಸತಿಯಾದ ಸುದ್ದಿ ದೇಶದ ಗಮನ ಸೆಳೆಯಿತು. ಸತಿ ಪದ್ಧತಿ ಕಾನೂನು ಬಾಹಿರವಾಗಿದ್ದರೂ ಪುರಿಯ ಶಂಕರಾಚಾರ್ಯರು ‘ಸತಿ’ಯನ್ನು ಬೆಂಬಲಿಸಿ ಹೇಳಿಕೆ ನೀಡಿದರು. ಅದನ್ನು ತೀವ್ರವಾಗಿ ಖಂಡಿಸಿದ ಇನ್ನೊಬ್ಬ ಸನ್ಯಾಸಿ ಅಗ್ನಿವೇಶ್‌ರು. ಮಾತ್ರವಲ್ಲ ದಿಲ್ಲಿಯಿಂದ ದೇವರಾಲಕ್ಕೆ 19 ದಿನಗಳ ಪಾದಯಾತ್ರೆ ಮಾಡಿದರು. 1988ರಲ್ಲಿ ಅದೇ ರಾಜ್ಯದ ನಾಥದ್ವಾರ ದೇವಾಲಯದಲ್ಲಿ ಹಿಂದುಳಿದವರಿಗೆ ಪ್ರವೇಶ ನಿಷಿದ್ಧವೆಂಬ ಸಂಪ್ರದಾಯದ ವಿರುದ್ಧ ಪ್ರತಿಭಟಿಸಲು ಅವರೊಂದಿಗೆ ಇನ್ನೊಂದು ಪಾದಯಾತ್ರೆ ನಡೆಸಿದರು. ಈ ಎರಡು ಸಂದರ್ಭಗಳಲ್ಲಿಯೂ ಅವರ ಉದ್ದೇಶ ಸ್ಪಷ್ಟ: ಆಗಾಗ ಬೆಳಕಿಗೆ ಬರುವ ಹಿಂದೂಗಳ ಅನಿಷ್ಟ ಸಂಪ್ರದಾಯಗಳ ವಿರುದ್ಧ ಜಾಗೃತಿ ಹುಟ್ಟಿಸಿ ಸಾಮಾಜಿಕ ಸುಧಾರಣೆಯನ್ನು ತಳಮಟ್ಟದಿಂದಲೇ ಆರಂಭಿಸುವುದು.

‘‘ಧರ್ಮಗಳು ಸರ್ವಜನಾಂಗದ ಒಳಿತಿಗಾಗಿ ಹಾಗೂ ಸ್ವಾಸ್ಥ್ಯಕ್ಕಾಗಿ ಪರಸ್ಪರ ಸಮನ್ವಯದಿಂದ ಒಟ್ಟಾಗಿ ಕಾರ್ಯೋನ್ಮುಖವಾಗಬೇಕು. ಹಾಗಾದಾಗ ಮಾತ್ರ ಸಮಾಜಗಳು ಸಂಘರ್ಷದಿಂದ ಸಾಮರಸ್ಯದತ್ತ, ಕೋಮುವಾದದಿಂದ ಮಾನವತ್ವದೆಡೆಗೆ ನಾವು ಮುನ್ನಡೆಯಲು ಸಾಧ್ಯ; ಆಗ ಧರ್ಮಗಳು ಮಾನವಾಭ್ಯುದಯದ ಸಾಧನಗಳಾಗುತ್ತವೆ’’ ಎಂದು ಅಗ್ನಿವೇಶ್‌ರ ದೃಢವಾದ ನಿಲುವು. ಇತ್ತೀಚೆಗಿನ ದಿನಗಳಲ್ಲಿ, ನಿಷ್ಠುರವಾದಿಯಾದ ಅಗ್ನಿವೇಶ್‌ರ ಮಾನವೀಯ ಕಾಳಜಿ ಹಾಗೂ ಶೋಷಿತರ ಅಗತ್ಯವಾದ ಸಮಾನತೆಯನ್ನು ಬೇಡುವ ಆಕ್ರೋಶ ಈಗ ಬೆಳೆಯುತ್ತಿರುವ ಸಂಕುಚಿತ ಮನೋಭಾವನೆಯ ವರ್ಗಗಳಿಗೆ ಆಕ್ಷೇಪಾರ್ಹವಾಗಿದ್ದವು. ಅವರ ಕೆಲವು ಹೇಳಿಕೆಗಳ ಮರ್ಮವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿಲ್ಲದ ವರ್ಗಗಳ ಕೆಂಗಣ್ಣಿಗೆ ಗುರಿಯಾದರು.. ಆ ತರದ ಪ್ರತಿಭಟನೆಯಲ್ಲಿ ಭಾಗವಹಿಸುವ ಉದ್ದೇಶದಿಂದ ಜಾರ್ಖಂಡ್‌ಗೆ 2018ರಲ್ಲಿ ಅಗ್ನಿವೇಶ್‌ರು ಹೋಗುತ್ತಿದ್ದಾಗ ಸಮಾಜಘಾತಕ ಶಕ್ತಿಗಳು ಅವರ ಮೇಲೆ ಹಲ್ಲೆ ನಡೆಸಿದವು. ಹಲ್ಲೆ ನಡೆಸಿದವರು, ಅವರ ಹಿಂದಿನ ಶಕ್ತಿಗಳು ಇನ್ನೂ ಕಾನೂನಿನ ಬಲೆಗೆ ಸಿಕ್ಕಿಲ್ಲ. ಅವರನ್ನು ಹಿಡಿಯುವ ಗೋಜಿಗೆ ಕೇಂದ್ರ ಸರಕಾರವಾಗಲಿ, ರಾಜ್ಯಸರಕಾರವಾಗಲಿ ಇಂದಿಗೂ ಹೋಗಿಲ್ಲ. ಅಂದು ಬಿದ್ದ ಏಟು ದೈಹಿಕವಾಗಿ ಅಗ್ನಿವೇಶ್‌ರನ್ನು ಜರ್ಝರಿಸಿತು, ಆ ಅದಮ್ಯ ಚೇತನ ಅದರಿಂದ ಚೇತರಿಸಿಕೊಳ್ಳಲೇ ಇಲ್ಲ. ಸ್ವಾಮಿ ಅಗ್ನಿವೇಶ್‌ರ ಅಕಾಲಿಕ ನಿಧನದ ಹಿನ್ನೆಲೆ, ಅವರ ಮೇಲಿನ ದೌರ್ಜನ್ಯದ ಕುರಿತಂತೆ ಅಧಿಕಾರಶಾಹಿಯ ಮತ್ತು ಮುಖ್ಯವಾಹಿನಿಯ ಮಾಧ್ಯಮಗಳ ಜಾಣಮೌನ ‘ನವ’ ಭಾರತವು ಎತ್ತ ಸಾಗುತ್ತಿದೆ ಎಂಬುದರ ಬಗ್ಗೆ ಒಂದು ಆತಂಕಕಾರಿ ಸೂಚನೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top