2015 : ಕೋಮುವಾದ, ಅಸಹಿಷ್ಣುತೆಯ ಆರ್ಭಟ | Vartha Bharati- ವಾರ್ತಾ ಭಾರತಿ

2015 : ಕೋಮುವಾದ, ಅಸಹಿಷ್ಣುತೆಯ ಆರ್ಭಟ

2015ನೆ ಇಸವಿಯಲ್ಲಿ ಭಾರತವು ಅತ್ಯಂತ ಜಟಿಲವಾದ ಹಾಗೂ ಆತಂಕಕಾರಿ ವಿದ್ಯಮಾನಗಳಿಗೆ ಸಾಕ್ಷಿಯಾಯಿತು. ಪ್ರಧಾನಿ ನರೇಂದ್ರ ಮೋದಿ ಅಮೆರಿಕ, ಬ್ರಿಟನ್ ಸೇರಿದಂತೆ ವಿವಿಧ ದೇಶಗಳಿಗೆ ಭೇಟಿ ನೀಡುವ ಮೂಲಕ, ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸನ್ನು ಹೆಚ್ಚಿಸುವಲ್ಲಿ ತೃಪ್ತಿಕರವಾದ ಸಫಲತೆಯನ್ನು ಕಂಡರು. ಆದರೆ ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಹಾಗೂ ಕೋಮುವಾದವು, ಕೇಂದ್ರ ಸರಕಾರಕ್ಕೆ ಮಾತ್ರವಲ್ಲ ದೇಶದ ಪ್ರತಿಷ್ಠೆಗೂ ಅಪಾರ ಧಕ್ಕೆಯುಂಟು ಮಾಡಿತು. ಈ ಅಸಹಿಷ್ಣುತೆ, ಕೋಮುವಾದದ ಘಟನೆಗಳು, ಕೇಂದ್ರ ಸರಕಾರದ ಕೆಲವು ಉತ್ತಮ ಸಾಧನೆಗಳಿಗೆ ಮಸಿ ಬಳಿದವು. ಅಷ್ಟೇ ಏಕೆ ಇದರಿಂದಾಗಿ ಬಿಜೆಪಿಗೆ ದಿಲ್ಲಿ ಹಾಗೂ ಬಿಹಾರ ಚುನಾವಣೆಗಳಲ್ಲಿ ಭಾರೀ ಬೆಲೆಯನ್ನೇ ತೆರಬೇಕಾಯಿತು. ಈ ಎರಡೂ ರಾಜ್ಯಗಳಲ್ಲಿ ಅಧಿಕಾರದ ಗದ್ದುಗೆ ಏರುವ ಕನಸು ಕಾಣುತ್ತಿದ್ದ ಬಿಜೆಪಿ ಹೀನಾಯ ಸೋಲನ್ನು ಅನುಭವಿಸಿತು.

 ಗಣರಾಜ್ಯೋತ್ಸವದಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಭಾರತ ಭೇಟಿಯು ಉಭಯದೇಶಗಳ ಬಾಂಧವ್ಯದಲ್ಲಿ ಹೊಸ ಶಕೆಯನ್ನು ಸೃಷ್ಟಿಸುವ ಭರವಸೆ ಮೂಡಿಸಿತು. ಆದಾಗ್ಯೂ, ಒಬಾಮ ತನ್ನ ವಿದಾಯ ಭಾಷಣದಲ್ಲಿ ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆ ತೀವ್ರವಾಗಿರುವ ಬಗ್ಗೆ ಸೂಚ್ಯವಾಗಿ ಹೇಳಿದ್ದುದು, ಮೋದಿ ಸರಕಾರಕ್ಕೆ ಇರಿಸುಮುರಿಸನ್ನುಂಟು ಮಾಡಿತ್ತು. ದಿಲ್ಲಿ ಹಾಗೂ ಬಿಹಾರ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ದಯನೀಯ ಸೋಲುಕಂಡಿತು. 70 ಮಂದಿ ಸದಸ್ಯಬಲದ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 67 ಸ್ಥಾನಗಳ ಪ್ರಚಂಡ ಬಹುಮತದೊಂದಿಗೆ ಅಧಿಕಾರದ ಗದ್ದುಗೆಗೇರಿದರೆ, ಬಿಜೆಪಿ ಕೇವಲ ಮೂರು ಸ್ಥಾನಗಳನ್ನು ಪಡೆದು, ತೀವ್ರ ಮುಖಭಂಗ ಅನುಭವಿಸಿತು. ಬಿಹಾರದಲ್ಲಿ ಜೆಡಿಯು, ಆರ್‌ಜೆಡಿ, ಕಾಂಗ್ರೆಸ್‌ನ ಮಹಾಮೈತ್ರಿಕೂಟವು ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಿತು. ಮುಖ್ಯಮಂತ್ರಿ ನಿತೀಶ್ ಕುಮಾರ್ 5ನೆ ಬಾರಿ ಮುಖ್ಯಮಂತ್ರಿಯಾಗಿ ದಾಖಲೆ ನಿರ್ಮಿಸಿದರು. ರಾಜಸ್ಥಾನ ಹಾಗೂ ಗುಜರಾತ್‌ನ ಸ್ಥಳೀಯಾಡಳಿತ ಚುನಾವಣೆಗಳಲ್ಲಿಯೂ ಬಿಜೆಪಿ ಭಾರೀ ನಿರಾಶೆಯನ್ನು ಅನುಭವಿಸಿದೆ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಮಹಾರಾಷ್ಟ್ರ, ಹರ್ಯಾಣದಲ್ಲಿ ಗೋ ಹತ್ಯೆ ನಿಷೇಧ

  ಬಿಜೆಪಿ ಆಡಳಿತವಿರುವ ಹರ್ಯಾಣ ಹಾಗೂ ಮಹಾರಾಷ್ಟ್ರಗಳು ಗೋಹತ್ಯೆ ಹಾಗೂ ಬೀಫ್ ಸೇವನೆ ನಿಷೇಧಿಸಿ ಕಾನೂನನ್ನು ಜಾರಿಗೊಳಿಸಿರುವುದು ಭಾರೀ ವಿವಾದಕ್ಕೆ ಕಾರಣವಾಯಿತು. ಸರಕಾರವು ಜನತೆಯ ಆಹಾರ ಸೇವನೆಯ ಹಕ್ಕನ್ನು ಕಸಿಯುತ್ತಿದೆಯೆಂದು ಪ್ರಗತಿಪರರು, ಚಿಂತಕರು ಹಾಗೂ ರಾಜಕೀಯ ನಾಯಕರಿಂದ ವ್ಯಾಪಕ ಪ್ರತಿಭಟನೆ ವ್ಯಕ್ತವಾಯಿತು. ಈ ಮಧ್ಯೆ ಜಮ್ಮುಕಾಶ್ಮೀರ ಹೈಕೋರ್ಟ್ ಕೂಡಾ ರಾಜ್ಯದಲ್ಲಿ ಬೀಫ್ ನಿಷೇಧವನ್ನು ಎತ್ತಿಹಿಡಿಯಿತಾದರೂ, ಅದನ್ನು ಜಾರಿಗೊಳಿಸುವ ಹೊಣೆಯನ್ನು ರಾಜ್ಯ ಸರಕಾರಕ್ಕೆ ಸೇರಿದ್ದೆಂದು ತಿಳಿಸಿತ್ತು. ಆದರೆ ಜಮ್ಮುಕಾಶ್ಮೀರ ಸರಕಾರ ಅದನ್ನು ಜಾರಿಗೊಳಿಸುವ ಪ್ರಸ್ತಾಪವನ್ನು ತಿರಸ್ಕರಿಸಿತು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಬಿಜೆಪಿಗೆ ಶಾಕ್ ಕೊಟ್ಟ ಹಾರ್ದಿಕ್

ಪಾಟಿದಾರ್ ಮೀಸಲಾತಿ ಆಂದೋಲನದ ನಾಯಕ, 22 ವರ್ಷದ ಹಾರ್ದಿಕ್ ಪಟೇಲ್, ದಿನಬೆಳಗಾಗುವುದರೊಳಗೆ ಪ್ರಭಾವಿ ನಾಯಕನಾಗಿ ಹೊರಹೊಮ್ಮಿದರು. ಬಲಿಷ್ಠ ಪಟೇಲ್ ಸಮುದಾಯಕ್ಕೆ ಓಬಿಸಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ಅವರು ಆರಂಭಿಸಿದ ಚಳವಳಿಯು ಗುಜರಾತ್‌ನಲ್ಲಿ ಆಡಳಿತಾರೂಢ ಬಿಜೆಪಿಗೆ ನಡುಕ ಹುಟ್ಟಿಸಿತು. ಕೇವಲ 55 ದಿನಗಳಲ್ಲಿ ಪಟೇಲ್ ಸಮುದಾಯದ ಲಕ್ಷಾಂತರ ಮಂದಿ ಸದಸ್ಯರನ್ನು ತನ್ನೆಡೆಗೆ ಸೆಳೆದುಕೊಳ್ಳುವಲ್ಲಿ ಸಫಲರಾದ ಹಾರ್ದಿಕ್, ತನ್ನ ಚಳವಳಿಯನ್ನು ದೇಶದ ಇತರ ಭಾಗಗಳಿಗೂ ವಿಸ್ತರಿಸುವ ಬೆದರಿಕೆಯೊಡ್ಡಿದ್ದರು. ಕೇವಲ ಎರಡು ತಿಂಗಳುಗಳಲ್ಲಿ ನೂರಕ್ಕೂ ಅಧಿಕ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ ಪಟೇಲ್, ತನ್ನ ಸಮುದಾಯವನ್ನು ರಾಜ್ಯ ಸರಕಾರದ ವಿರುದ್ಧ ಒಗ್ಗೂಡಿಸಿದರು. ಆಗಸ್ಟ್ 25ರಂದು ಅಹ್ಮದಾಬಾದ್‌ನಲ್ಲಿ ನಡೆದ ರ್ಯಾಲಿಯ ಬಳಿಕ ಹಾರ್ದಿಕ್‌ರನ್ನು ಪೊಲೀಸರು ಬಂಧಿಸಿದ ಘಟನೆ ಭಾರೀ ಹಿಂಸಾಚಾರಕ್ಕೆ ಕಾರಣವಾಯಿತು. ಆಗ ನಡೆದ ಪೊಲೀಸ್ ಗೋಲಿಬಾರ್‌ನಲ್ಲಿ 12 ಮಂದಿ ಮೃತಪಟ್ಟರು.

ಹಿಂಸಾಚಾರದ ಬಳಿಕ ಅಹ್ಮದಾಬಾದ್ ಸೇರಿದಂತೆ ವಿವಿಧೆಡೆ ಕರ್ಫ್ಯೂ ಹೇರಲಾಯಿತು. ಗಲಭೆಯನ್ನು ನಿಯಂತ್ರಿಸಲು ಕೊನೆಗೆ ಸೇನೆಯನ್ನೇ ಕರೆಸಬೇಕಾಯಿತು. ಪಟೇಲ್ ಆಂದೋಲನದ ಬಿಸಿಯನ್ನು ಗುಜರಾತ್‌ನ ಆನಂದಿಬೆನ್ ನೇತೃತ್ವದ ಬಿಜೆಪಿ ಸರಕಾರ ಈಗಾಗಲೇ ಅನುಭವಿಸಿದೆ. ಕಳೆದ ನವೆಂಬರ್‌ನಲ್ಲಿ ನಡೆದ ಸ್ಥಳೀಯಾಡಳಿತ ಚುನಾವಣೆಯಲ್ಲಿ ಗ್ರಾಮಪಂಚಾಯತ್‌ಹಾಗೂ ಪಟ್ಟಣ ಪಂಚಾಯತ್‌ಗಳಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಅಭ್ಯರ್ಥಿಗಳೇ ಅಧಿಕ ಸಂಖ್ಯೆಯಲ್ಲಿ ಗೆಲುವು ಕಂಡಿರುವುದು ಪಟೇಲ್ ಸಮುದಾಯ ಬಿಜೆಪಿಯಿಂದ ದೂರಸರಿದಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಗಲ್ಲಿಗೇರಿದ ಮೆಮನ್

     1993ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಅಪರಾಧಿ ಯಾಕೂಬ್ ಮೆಮನ್‌ನನ್ನು ನವೆಂಬರ್ 30ರಂದು ನಾಗಪುರದ ಕಾರಾಗೃಹದಲ್ಲಿ ಗಲ್ಲಿ ಗೇರಿಸಲಾಯಿತು. ಇದಕ್ಕೆ ಕೆಲವೇ ತಾಸುಗಳ ಮುನ್ನ ಯಾಕೂಬ್ ಮೆಮನ್‌ಗೆ ವಿಧಿಸಲಾದ ಗಲ್ಲು ಶಿಕ್ಷೆಯ ತೀರ್ಪನ್ನು ಪುನರ್‌ಪರಿಶೀಲಿಸುವಂತೆ ಕೋರಿ, ಆತನ ವಕೀಲರಾದ ಆನಂದ್‌ಗೋಪಾಲ್ ಹಾಗೂ ಪ್ರಶಾಂತ್ ಭೂಷಣ್ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಸುಪ್ರೀಂಕೋರ್ಟ್,ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ರಾತ್ರಿ 2:30ಕ್ಕೆ, ಕಲಾಪವನ್ನು ನಡೆಸಿತು. ರಾತ್ರಿ 3: 00 ಗಂಟೆಯವರೆಗೆ ವಿಚಾರಣೆ ನಡೆಸಿದ ನ್ಯಾಯಾಲಯವು, 4:50ಕ್ಕೆ ತೀರ್ಪನ್ನು ಪ್ರಕಟಿಸಿ, ಮೆಮನ್‌ನ ಗಲ್ಲು ಶಿಕ್ಷೆಯನ್ನು ಎತ್ತಿಹಿಡಿಯಿತು.ಮುಂಜಾನೆ 7:30ರ ವೇಳೆಗೆ ಯಾಕೂಬ್‌ನನ್ನು ಗಲ್ಲಿಗೇರಿಸಲಾಯಿತು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಶೀನಾಬೋರಾ ಕೊಲೆ ಪ್ರಕರಣ

ಶೀನಾ ಬೋರಾ ಕೊಲೆ ಪ್ರಕರಣ ಇಡೀ ದೇಶವನ್ನೇ ಚಕಿತಗೊಳಿಸಿತು. ಕಾರ್ಪೊರೇಟ್ ಜಗತ್ತಿನಲ್ಲಿ ಅಲ್ಪಸಮಯದಲ್ಲೇ ಕೀರ್ತಿಯ ಶಿಖರವೇರಿದ ಇಂದ್ರಾಣಿ ಮುಖರ್ಜಿ ಮುಖ್ಯ ಆರೋಪಿಯಾಗಿರುವ ಈ ಪ್ರಕರಣದ ತನಿಖೆಯು ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಲೇ ಹೋಯಿತು. ಟಿವಿ ಮಾಧ್ಯಮ ಜಗತ್ತಿನ ಉದ್ಯಮಿ ಪೀಟರ್ ಮುಖರ್ಜಿಯ ಪತ್ನಿಯಾದ ಇಂದ್ರಾಣಿ, ತನ್ನ ಮಾಜಿ ಪತಿ ಸಿದ್ಧಾರ್ಥ್‌ದಾಸ್‌ಗೆ ಜನಿಸಿದ ತನ್ನ ಪುತ್ರಿ ಶೀನಾಬೋರಾಳನ್ನು ಹತ್ಯೆಗೈದ ಆರೋಪವನ್ನು ಎದುರಿಸುತ್ತಿದ್ದಾಳೆ.

ಭಾರತ ಕಾರ್ಪೊರೇಟ್ ಜಗತ್ತಿನಲ್ಲಿ ಇಂದ್ರಾಣಿ ಮುಖರ್ಜಿಯ ದಿಢೀರ್ ಬೆಳವಣಿಗೆ, ತನಿಖೆಯ ಆರಂಭದಲ್ಲಿ ಶೀನಾ ಬೋರಾ ಆಕೆಯ ಪುತ್ರಿಯೇ ಅಥವಾ ಸಹೋದರಿಯೇ ಎಂಬ ಬಗ್ಗೆ ಉಂಟಾದ ಗೊಂದಲಗಳು, ಉದ್ಯಮಿಯಾಗಿ ಬೆಳೆಯುವ ಇಂದ್ರಾಣಿಯ ಮಹತ್ವಾಕಾಂಕ್ಷೆ ಇವೆಲ್ಲವೂ ಟಿವಿ ವಾಹಿನಿಗಳಲ್ಲಿ, ಸುದ್ದಿ ಮಾಧ್ಯಮಗಳಿಗೆ ರಂಗುರಂಗಿನ ಕಥೆಗಳಾದವು. ಇತ್ತ ಜೈಲಿನಲ್ಲಿ ಇಂದ್ರಾಣಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆಯಿತು. ಆನಂತರ ಇಂದ್ರಾಣಿಯ ಪತಿ, ಪೀಟರ್ ಮುಖರ್ಜಿಯ ಬಂಧನದ ಬಳಿಕ ಪ್ರಕರಣವು ಹೊಸ ತಿರುವನ್ನು ಪಡೆಯಿತು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ದಿಲ್ಲಿ, ಬಿಹಾರಗಳಲ್ಲಿ ಬಿಜೆಪಿಗೆ ಮುಖಭಂಗ

ದಿಲ್ಲಿ ಹಾಗೂ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅವಮಾನಕಾರಿ ಸೋಲನ್ನು ಕಂಡಿರುವುದು ಈ ವರ್ಷದ ಮಹತ್ವದ ಬೆಳವಣಿಗೆಯಾಗಿದೆ. ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಈ ಎರಡೂ ರಾಜ್ಯಗಳಲ್ಲಿ ಬಿಜೆಪಿ ಪ್ರಚಂಡ ಗೆಲುವನ್ನು ಕಂಡಿತ್ತು. 70 ಸದಸ್ಯಬಲದ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು 67 ಸ್ಥಾನಗಳಲ್ಲಿ ಜಯಗಳಿಸಿ,ಬಿಜೆಪಿಯನ್ನು ಧೂಳೀಪಟಗೊಳಿಸಿತು. ಬಿಜೆಪಿಗೆ ಕೇವಲ ಮೂರು ಸ್ಥಾನಗಳು ದೊರೆತರೆ, ಕಾಂಗ್ರೆಸ್ ಒಂದು ಸ್ಥಾನವನ್ನೂ ಪಡೆಯಲು ವಿಫಲವಾಯಿತು. 2014ರಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ 49 ದಿನಗಳ ಆಡಳಿತ ನಡೆಸಿ, ಆನಂತರ ರಾಜೀನಾಮೆ ನೀಡಿದ್ದ ಕೇಜ್ರಿವಾಲ್, ಈ ಸಲ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದರು.

   ಇತ್ತ ಬಿಹಾರದಲ್ಲೂ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿತು. ದಿಲ್ಲಿಯಲ್ಲಿ ಭಾರೀ ಸೋಲಿನ ಕಹಿಯುಂಡ ಬಿಜೆಪಿ, ಬಿಹಾರ ಚುನಾವಣೆಯಲ್ಲಿ ಗೆಲ್ಲಲು ಶತಗತಾಯ ಯತ್ನಿಸಿತ್ತು. ಪ್ರಧಾನಿ ನರೇಂದ್ರ ಮೋದಿ ರಾಜ್ಯಾದ್ಯಂತ 31ಕ್ಕೂ ಅಧಿಕ ರ್ಯಾಲಿಗಳನ್ನುದ್ದೇಶಿಸಿ ಭಾಷಣ ಮಾಡಿ ಮತಯಾಚಿಸಿದರು. ಮೋದಿ ಈ ಚುನಾವಣೆಯನ್ನು ತನ್ನ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಗಣಿಸಿದ್ದರು. ಆದರೆ ನಿತೀಶ್, ಲಾಲು ಹಾಗೂ ಕಾಂಗ್ರೆಸ್ ಪಕ್ಷಗಳ ಮಹಾಮೈತ್ರಿ ಕೂಟವು, ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೇರಿತು. ನಿತೀಶ್ ಐದನೆ ಬಾರಿಗೆ ಮುಖ್ಯಮಂತ್ರಿಯಾದರು.

ಬಿಹಾರದಲ್ಲಿ ಮಹಾಮೈತ್ರಿಕೂಟದ ಗೆಲುವು, ಭವಿಷ್ಯದಲ್ಲಿ ಬಿಜೆಪಿ ವಿರುದ್ಧ ಜಾತ್ಯತೀತ ಪಕ್ಷಗಳು ಒಂದುಗೂಡುವ ಸಾಧ್ಯತೆಗಳನ್ನು ಹೆಚ್ಜಿಸಿದೆಯೆಂದು ರಾಜಕೀಯ ವಿಮರ್ಶಕರು ಅಭಿಪ್ರಾಯಪಡುತ್ತಾರೆ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ತಲ್ಲಣಗೊಳಿಸಿದ ದಾದ್ರಿ ಹತ್ಯೆ

ಉತ್ತರಪ್ರದೇಶದ ದಾದ್ರಿಯಲ್ಲಿ ಗೋಮಾಂಸ ಸಂಗ್ರಹಿಸಿಟ್ಟಿದ್ದಾರೆಂಬ ಶಂಕೆಯಲ್ಲಿ 52 ವರ್ಷ ವಯಸ್ಸಿನ ಮುಹಮ್ಮದ್ ಅಖ್ಲಾಕ್‌ರನ್ನು ಬರ್ಬರವಾಗಿ ಹತ್ಯೆಗೈದು, ಆತನ ಪುತ್ರ ದಾನಿಶ್‌ರನ್ನು ಗಂಭೀರವಾಗಿ ಗಾಯಗೊಳಿಸಿದ ಘಟನೆ ಇಡೀ ದೇಶವನ್ನೇ ತಲ್ಲಣಗೊಳಿಸಿತು. ಸ್ಥಳೀಯ ಬಿಜೆಪಿ ನಾಯಕ ಸಂಜಯ್ ರಾಣಾನ ಪುತ್ರ ವಿಶಾಲ್ ನೇತೃತ್ವದ ಗುಂಪೊಂದು ಈ ಅಮಾನುಷ ಕೃತ್ಯವನ್ನೆಸಗಿತ್ತು. ದಾದ್ರಿ ಹತ್ಯಾಕಾಂಡದ ವಿರುದ್ಧ ದೇಶಾದ್ಯಂತ ಪ್ರತಿಭಟನೆ, ಆಕ್ರೋಶ ವ್ಯಕ್ತವಾದವು.

     ‘ಘರ್‌ವಾಪಸಿ’ ಹೆಸರಿನಲ್ಲಿ ವಿಶ್ವಹಿಂದೂ ಪರಿಷತ್ ಪಶ್ಚಿಮಬಂಗಾಳ ಹಾಗೂ ಅಗ್ರಾಗಳಲ್ಲಿ ನಡೆಸಿದ ಸಾಮೂಹಿಕ ಮತಾಂತರಕ್ಕೆ ಭಾರೀ ವಿರೋಧ ವ್ಯಕ್ತವಾಯಿತು. ದೇಶಾದ್ಯಂತ ಘರ್‌ವಾಪಸಿ ಹಮ್ಮಿಕೊಳ್ಳುವ ಉದ್ದೇಶ ಹೊಂದಿದ್ದ ವಿಎಚ್‌ಪಿ ಪ್ರತಿಭಟನೆಗೆ ಹಿಂಜರಿದು ತನ್ನ ಕಾರ್ಯಕ್ರಮನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು. ಖ್ಯಾತ ಕನ್ನಡ ಸಾಹಿತಿ, ಇತಿಹಾಸ ತಜ್ಞ ಎಂ.ಎಸ್.ಕಲಬುರ್ಗಿ ಹತ್ಯೆ ಘಟನೆಯ ಬಳಿಕ ಅಸಹಿಷ್ಣುತೆ ವಿರುದ್ಧದ ಪ್ರತಿಭಟನೆಯು ಇನ್ನಷ್ಟು ಕಾವು ಪಡೆದುಕೊಂಡಿತು. ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ ಹಾಗೂ ಅಭಿವ್ಯಕ್ತಿ ಸ್ವಾತಂತ್ರದ ಹರಣ ನಡೆಯುತ್ತಿದೆಯೆಂದು ಆಕ್ರೋಶ ವ್ಯಕ್ತಪಡಿಸಿ, ಅರುಂಧತಿ ರಾಯ್, ನಯನತಾರಾ ಸೆಹಗಲ್ ಸಹಿತ 40ಕ್ಕೂ ಅಧಿಕ ಸಾಹಿತಿಗಳು ಸಾಹಿತ್ಯ ಅಕಾಡಮಿ ಮತ್ತಿತರ ಸರಕಾರಿ ಪ್ರಶಸ್ತಿಗಳನ್ನು ಹಿಂದಿರುಗಿಸಿದರು. ಅನೇಕ ವಿಜ್ಞಾನಿಗಳು ಹಾಗೂ ಕಲಾವಿದರು ಕೂಡಾ ಇವರನ್ನು ಅನುಸರಿಸಿದರು. ಹಿಂದಿನ ಯುಪಿಎ ಸರಕಾರದಂತೆ, ಹಾಲಿ ಎನ್‌ಡಿಎ ಸರಕಾರಕ್ಕೂ ಸ್ವಜನಪಕ್ಷಪಾತ ಹಾಗೂ ಭ್ರಷ್ಟಾಚಾರದ ಕಳಂಕ ತಟ್ಟಿತು. ಬಹುಕೋಟಿ ರೂ. ಐಪಿಎಲ್ ಭ್ರಷ್ಟಾಚಾರ ಹಗರಣದ ಆರೋಪಿ, ಬ್ರಿಟನ್‌ನಲ್ಲಿ ನೆಲೆಸಿರುವ ಲಲಿತ್ ಮೋದಿಗೆ ವೀಸಾ ದೊರಕಿಸಿಕೊಡಲು ನೆರವಾದರೆಂಬ ಆರೋಪವು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ರನ್ನು ವರ್ಷದ ಪೂರ್ವಾರ್ಧದಲ್ಲಿ ಕಾಡಿದರೆ, ವರ್ಷಾಂತ್ಯದಲ್ಲಿ ವಿತ್ತ ಸಚಿವರಿಗೆ ಡಿಡಿಸಿಎ ಹಗರಣದ ಬಿಸಿ ತಟ್ಟಿತು. ಜೇಟ್ಲಿ ದಿಲ್ಲಿ ಕ್ರಿಕೆಟ್ ಮಂಡಳಿ (ಡಿಡಿಸಿಎ) ಅಧ್ಯಕ್ಷರಾಗಿದ್ದಾಗ, ಸಂಸ್ಥೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆಯೆಂದು ತನ್ನದೇ ಸಂಸದ, ಮಾಜಿ ಕ್ರಿಕೆಟಿಗ ಕೀರ್ತಿ ಆಝಾದ್‌ರ ಆರೋಪವು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿತು. ನ್ಯಾಶನಲ್ ಹೆರಾಲ್ಡ್ ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿ ದಿಲ್ಲಿ ಹೈಕೋರ್ಟ್ ಸೋನಿಯಾ,ರಾಹುಲ್‌ಗೆ ಸಮನ್ಸ್ ನೀಡಿದುದು, ಸಂಸತ್‌ನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ವಾಕ್ಸಮರಕ್ಕೆ ಕಾರಣವಾಯಿತು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಸ್ಮಾರ್ಟ್‌ಸಿಟಿ ಯೋಜನೆಗೆ ಚಾಲನೆ

ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಸ್ಮಾರ್ಟ್‌ಸಿಟಿ ಯೋಜನೆಗೆ ಈ ವರ್ಷ ಚಾಲನೆ ದೊರೆಯಿತು. ಕರ್ನಾಟಕದ ಆರು ನಗರಗಳು ಸೇರಿದಂತೆ ಒಟ್ಟು 98 ನಗರಗಳನ್ನು ಸ್ಮಾರ್ಟ್‌ಸಿಟಿ ಯೋಜನೆಗೆ ಆಯ್ಕೆ ಮಾಡಲಾಯಿತು. ಕೇಂದ್ರ ಸರಕಾರದ ಇನ್ನೊಂದು ಬೃಹತ್

ಯೋಜನೆಯಾದ ಬುಲೆಟ್ ಟ್ರೈನ್ ಯೋಜನೆಗೆ ಸಂಬಂಧಿಸಿ, ಜಪಾನ್ ಜೊತೆ ಒಪ್ಪಂದಕ್ಕೆ ಸಹಿಹಾಕಲಾಯಿತು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಜನಸಾಮಾನ್ಯರಿಗೆ ಬೆಲೆಯೇರಿಕೆಯ ಬಿಸಿ

   ವರ್ಷದ ಮಧ್ಯದಲ್ಲಿ ದಿನಬಳಕೆಯ ತರಕಾರಿ, ಬೇಳೆಕಾಳು, ಈರುಳ್ಳಿ ಬೆಲೆಗಳು ಗಗನಕ್ಕೇರಿದ್ದು, ಜನಸಾಮಾನ್ಯರ ಬದುಕನ್ನು ದುಸ್ತರಗೊಳಿಸಿತು. ಆರ್‌ಬಿಐ ಗೃಹ ಸಾಲದ ಬಡ್ಡಿದರವನ್ನು ಕಡಿತಗೊಳಿಸಿದುದು ಜನಸಾಮಾನ್ಯರ ಮೊಗದಲ್ಲಿ ಸ್ವಲ್ಪಮಟ್ಟಿಗೆ ಮಂದಹಾಸವನ್ನು ಮೂಡಿಸಿತು. ವರ್ಷಾಂತ್ಯದಲ್ಲಿ ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ 16ರಿಂದ 18 ವರ್ಷದೊಳಗಿನ ಬಾಲಾಪರಾಧಿಗಳಿಗೆ ಶಿಕ್ಷೆಯನ್ನು ವಿಧಿಸಲು ಅವಕಾಶ ನೀಡುವ, ಬಾಲ ನ್ಯಾಯ ಕಾಯ್ದೆ (ಮಕ್ಕಳ ಪಾಲನೆ ಹಾಗೂ ರಕ್ಷಣೆ)ಯನ್ನು ಅಂಗೀಕರಿಸಿತು.
 

♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಕಾಡಿದ ನೈಸರ್ಗಿಕ ವಿಕೋಪ

ಕಳೆದ ವರ್ಷದಂತೆ ಈ ವರ್ಷವೂ ನೈಸರ್ಗಿಕ ವಿಕೋಪವನ್ನು ದೇಶ ಎದುರಿಸಿದೆ. ಎಪ್ರಿಲ್ ಹಾಗೂ ಮೇನಲ್ಲಿ ಉತ್ತರ ಹಾಗೂ ಈಶಾನ್ಯ ಭಾರತದ ರಾಜ್ಯಗಳಲ್ಲಿ ಸಂಭವಿಸಿದ ಭೂಕಂಪಗಳಲ್ಲಿ ಕನಿಷ್ಠ 17 ಮಂದಿ ಸಾವನ್ನಪ್ಪಿದರು. ಚೆನ್ನೈ ಸೇರಿದಂತೆ ತಮಿಳುನಾಡಿನ ವಿವಿಧೆಡೆ ಸುರಿದ ಭೀಕರ ಮಳೆಯಿಂದಾಗಿ ಲಕ್ಷಾಂತರ ಮಂದಿ ನಿರಾಶ್ರಿತರಾದರು. ಚೆನ್ನೈ ನಗರವಂತೂ ಶತಮಾನದಲ್ಲೇ ಕಂಡರಿಯದಂತಹ ಭೀಕರ ಪ್ರವಾಹವನ್ನು ಕಂಡಿತು. ತಮಿಳುನಾಡಿನ ಪ್ರವಾಹಸಂತ್ರಸ್ತರಿಗೆ ದೇಶಾದ್ಯಂತ ನೆರವಿನ ಮಹಾಪೂರವೇ ಹರಿದುಬಂದಿತು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦

‘ಪ್ರಶಸ್ತಿ ವಾಪಸಿ’ ಚಳವಳಿ

  ದೇಶದ ಜಾತ್ಯತೀತ ಸ್ವರೂಪಕ್ಕೆ ಧಕ್ಕೆಯುಂಟಾಗುತ್ತಿದೆ. ಧಾರ್ಮಿಕ ಅಸಹಿಷ್ಣುತೆ ಹೆಚ್ಚುತ್ತಿದೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ ಅಪಾಯದಲ್ಲಿದೆಯೆಂದು ಆತಂಕ ವ್ಯಕ್ತಪಡಿಸಿ 40ಕ್ಕೂ ಅಧಿಕ ಸಾಹಿತಿಗಳು, ಕವಿಗಳು ಸಾಹಿತ್ಯ ಅಕಾಡಮಿ ಪ್ರಶಸ್ತಿ ಸೇರಿದಂತೆ ತಮಗೆ ದೊರೆತ ಪ್ರಶಸ್ತಿಗಳನ್ನು ಹಿಂದಿರುಗಿಸಿದ ಘಟನೆಯು ಈ ವರ್ಷದ ಮಹತ್ವದ ಬೆಳವಣಿಗೆಗಳಲ್ಲೊಂದಾಗಿದೆ. ಕಲಬುರ್ಗಿ, ದಾದ್ರಿ ಹತ್ಯೆಗಳ ವಿರುದ್ಧದ ಪ್ರತಿಭಟನೆಯು ಅಂತಿಮವಾಗಿ ಅಸಹಿಷ್ಣುತೆಯ ವಿರುದ್ಧ ಪ್ರಗತಿಪರ ಹಾಗೂ ಸಾಹಿತಿಗಳ ಸಾಮೂಹಿಕ ಬಂಡಾಯವಾಗಿ ಪರಿವರ್ತನೆಯಾಯಿತು. ದಾದ್ರಿ ಹತ್ಯೆ ಪ್ರಕರಣವನ್ನು ಖಂಡಿಸುವಲ್ಲಿ ಮೋದಿ ಸರಕಾರ ವಿಳಂಬ ನೀತಿಯನ್ನು ಅನುಸರಿಸಿದ್ದುದು ಅವರ ಆಕ್ರೋಶವನ್ನು ಇನ್ನಷ್ಟು ಹೆಚ್ಚಿಸಿತು. ಆರೆಸ್ಸೆಸ್‌ನ ಮುಖವಾಣಿ ಪಾಂಚಜನ್ಯ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಗೋಸಂರಕ್ಷಣೆಗಾಗಿ ಜನರನ್ನು ಹತ್ಯೆಗೈಯುವುದನ್ನು ಪರೋಕ್ಷವಾಗಿ ಸಮರ್ಥಿಸಿದ್ದುದು ವಿವಾದದ ಬೆಂಕಿಗೆ ಇನ್ನಷ್ಟು ತುಪ್ಪ ಸುರಿಯಿತು.

   ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆಯೆಂದು ಆಕ್ರೋಶ ವ್ಯಕ್ತಪಡಿಸಿ, ಹಿಂದಿಕವಿಗಳಾದ ಮಂಗೇಶ್ ದಬ್ರಾಲ್, ರಾಜೇಶ್ ಜೋಶಿ, ಕನ್ನಡ ಸಾಹಿತಿ ಕುಂ. ವೀರಭದ್ರಪ್ಪ, ಗುರುಭಚನ್ ಸಿಂಗ್ ಭುಲ್ಲರ್, ಅಜ್ಮೀರ್ ಸಿಂಗ್‌ಔಲಖ್ ಸೇರಿದಂತೆ 30ಕ್ಕೂ ಅಧಿಕ ಸಾಹಿತಿಗಳು ಅಕಾಡಮಿ ಪ್ರಶಸ್ತಿಗಳನ್ನು ಹಿಂದಿರುಗಿಸಿದರು. ಬೂಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಅರುಂಧತಿ ರಾಯ್, 1989ರಲ್ಲಿ ತನಗೆ ದೊರೆತ ಅತ್ಯುತ್ತಮ ಚಿತ್ರಕಥೆಗಾಗಿನ ರಾಷ್ಟ್ರೀಯ ಪ್ರಶಸ್ತಿಯನ್ನು ವಾಪಸ್ ಮಾಡಿದ್ದಾರೆ. ಭಾರತರತ್ನ ಪುರಸ್ಕೃತ ವಿಜ್ಞಾನಿ ಸಿ.ಎನ್.ಆರ್.ರಾವ್ ಕೂಡಾ ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ವಿರುದ್ಧ ಆತಂಕ ವ್ಯಕ್ತಪಡಿಸಿದರು.

ಅಸಹಿಷ್ಣುತೆ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಬಾಲಿವುಡ್ ನಟರಾದ ಶಾರುಕ್ ಖಾನ್ ಹಾಗೂ ಆಮಿರ್ ಖಾನ್ ಕೂಡಾ ಸಂಘಪರಿವಾರದ ಬೆಂಬಲಿಗರ ಆಕ್ರೋಶವನ್ನು ಎದುರಿಸಬೇಕಾಯಿತು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಹರ್ಯಾಣ: ದಲಿತ ಮಕ್ಕಳ ಜೀವಂತ ದಹನ

    ಹರ್ಯಾಣದ ಫರೀದಾಬಾದ್‌ನಲ್ಲಿ ಸವರ್ಣೀಯರ ಗುಂಪೊಂದು ದಲಿತ ಕುಟುಂಬದ ಮನೆಗೆ ಬೆಂಕಿ ಹಚ್ಚಿ ಇಬ್ಬರು ಮಕ್ಕಳನ್ನು ಜೀವಂತವಾಗಿ ದಹಿಸಿದ ಘಟನೆಯು ಈ ವರ್ಷದ ಅತ್ಯಂತ ಕರಾಳ ಘಟನೆಗಳಲ್ಲೊಂದಾಗಿದೆ. ಪೂರ್ವ ವೈಷಮ್ಯದ ಹಿನ್ನೆಲೆಯಲಿ ್ಲ ದಾಳಿ ನಡೆಸಿದ ಗುಂಪು, ಮನೆಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿತ್ತು. ಅಲ್ಲಿ ಮಲಗಿದ್ದ 2 ವರ್ಷ ಹಾಗೂ 9 ತಿಂಗಳು ಪ್ರಾಯದ ಎರಡು ಕಂದಮ್ಮಗಳು ಜೀವಂತವಾಗಿ ದಹನಗೊಂಡರೆ, ಅವರ ಹೆತ್ತವರಿಗೆ ಗಂಭೀರ ಸುಟ್ಟಗಾಯಗಳಾದವು. ಹಂತಕರ ಬಂಧನಕ್ಕೆ ಆಗ್ರಹಿಸಿ ಫರೀದಾಬಾದ್‌ನಲ್ಲಿ ದಲಿತರು ರಸ್ತೆ ತಡೆ ನಡೆಸಿದರು. ಕೊನೆಗೂ ಜನಾಕ್ರೋಶಕ್ಕೆ ಮಣಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದರು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦♦

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top