ಭಾರತೀಯ ರೈತರಿಗೆ ‘ಕಹಿ’ ಬೆಳೆ | Vartha Bharati- ವಾರ್ತಾ ಭಾರತಿ

ಭಾರತೀಯ ರೈತರಿಗೆ ‘ಕಹಿ’ ಬೆಳೆ

ಭಾರತದ ಕೃಷಿ ಕ್ಷೇತ್ರ ಇಂದಿಗೂ ಅತಿ ಹೆಚ್ಚಿನ ಉದ್ಯೋಗ ದೊರಕಿಸುವ ವಲಯ. ಶೇ.58 ಪ್ರತಿಶತದಷ್ಟು ಕುಟುಂಬಗಳು ತಮ್ಮ ಬದುಕಿಗೆ ಕೃಷಿಯನ್ನೇ ಅವಲಂಬಿಸಿವೆ. ಹೀಗಿದ್ದರೂ ಕೂಡಾ, 1990ರ ಈಚೆಗೆ ರೈತರ ಆತ್ಮಹತ್ಯೆ ವರದಿಗಳು ಪತ್ರಿಕೆಗಳ ತಲೆಬರಹಗಳನ್ನು ಆಕ್ರಮಿಸಿದ್ದವು. ಸರಕಾರಿ ಅಂಕಿ ಅಂಶಗಳ ಪ್ರಕಾರವೇ 2011ರಲ್ಲಿ 14,000 ರೈತರು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಇದು ಆತ್ಮಹತ್ಯೆಗೆ ಇರುವ ಇತರೆ ಎಲ್ಲ ಕಾರಣಗಳ ಸರಾಸರಿಗಿಂತಲೂ ಶೇ. 47 ಹೆಚ್ಚು. 1995ರಲ್ಲಿ ಸರಕಾರವೇ ದಾಖಲೆ ಯನ್ನು ಇಡಲು ಆರಂಭಿಸಿದ ಬಳಿಕ 2014ರ ವರೆಗೆ ಸರಿಸುಮಾರು 3,00,000 ರೈತರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ.
ಪರಿಸ್ಥಿತಿ ಗಂಭೀರವಾಗಿದೆ. ಅದು ಕಾಣುವುದಕ್ಕಿಂತಲೂ ಗಂಭೀರವಾಗಿದೆ ಯೇನೋ ಅನ್ನಿಸುತ್ತಿದೆ. ಬ್ರಿಟಿಶ್ ಮೆಡಿಕಲ್ ಜರ್ನಲ್ ‘ದ ಲ್ಯಾನ್ಸೆಟ್’ನಲ್ಲಿ ಒಂದು ಅಧ್ಯಯನ ಪ್ರಕಟವಾಗಿತ್ತು. ಅದು ಹೇಳುವ ಪ್ರಕಾರ ಭಾರತದಲ್ಲಿ ರೈತರ ಆತ್ಮಹತ್ಯೆಯ ಸಂಖ್ಯೆಯನ್ನು ಕಡಿಮೆ ಮಾಡಿ ತೋರಿಸಲಾಗುತ್ತಿದೆ. ಇದನ್ನು ‘ಎವರಿಬಡಿ ಲವ್ಸ್ ಎ ಗುಡ್ ಡ್ರಾಟ್’ ನ ಲೇಖಕ ಪಿ. ಸಾಯಿನಾಥ್ ಸಂಪೂರ್ಣವಾಗಿ ಅನುಮೋದಿಸುತ್ತಾರೆ. ‘‘ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮಲ್ಲಿನ ರೈತರ ಆತ್ಮಹತ್ಯೆಯ ಸಂಖ್ಯೆಯನ್ನು ಸೊನ್ನೆ ಎಂದು ತೋರಿಸುತ್ತಿವೆ’’ ಎನ್ನುತ್ತಾರೆ ಅವರು. ರಾಷ್ಟ್ರೀಯ ಅಪರಾಧ ಅಂಕಿಅಂಶ ಸಂಸ್ಥೆಯ ಮಾನದಂಡಗಳನ್ನೇ ಬದಲಾಯಿಸುವ ಮೂಲಕ ಇದನ್ನು ಸಾಧಿಸಲಾಗಿದೆ. 2014ರಲ್ಲಿ ಈ ಸಂಸ್ಥೆಯು ಅಪರಾಧಗಳ ಹೊಸದೊಂದು ವರ್ಗವನ್ನು ಸೃಷ್ಟಿ ಮಾಡಿ ರೈತರ ಆತ್ಮಹತ್ಯೆಯನ್ನು ಈ ವರ್ಗಕ್ಕೆ ಸೇರಿಸುವ ಮೂಲಕ ರೈತರ ಆತ್ಮಹತ್ಯೆ ಎಂಬ ಸಮಸ್ಯೆಯನ್ನೇ ಕಾಣದಂತೆ ಮಾಡಿದೆ. ಆ ಮೂಲಕ ಅಧಿಕೃತ ಅಂಕಿಅಂಶಗಳನ್ನು ಕಡಿಮೆಮಾಡಿದೆ. ಕರ್ನಾಟಕವನ್ನೇ ಉದಾಹರಣೆಗೆ ತೆಗೆದುಕೊಳ್ಳುವುದಾದರೆ-2014ರಲ್ಲಿ 321 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿಂದಿನ ವರ್ಷದ 1,403 ಎಂಬ ಸಂಖ್ಯೆಗೆ ಹೋಲಿಸಿದರೆ ಇದು ಆಶ್ಚರ್ಯಕರವಾಗಿ ಕಡಿಮೆ ಇದೆ. ಆದರೆ, ‘ಇತರ ಸಾವುಗಳು’ ಎಂಬ ವಿಭಾಗದಲ್ಲಿ ಶೇಖಡ 245ರಷ್ಟು ಹೆಚ್ಚಳವಾಗಿದೆ. ಕಾಕತಾಳೀಯವೆ ಇದು? ಅಲ್ಲ, ಇದೊಂದು ಜಾಣ ನಡೆ ಮಾತ್ರ.
ಸಾಲಬಾಧೆಯಿಂದ ಪೀಡಿತರಾದ ರೈತರು ಅತಿಹೆಚ್ಚಿನ ಸಂಖ್ಯೆಯಲ್ಲಿ ಜೀವತೆಗೆದುಕೊಂಡಿರುವುದು ಖೇದಕರವಾದರೂ ಸತ್ಯ. ಆದರೆ ಈ ತುಂಬ ಸಂಕೀರ್ಣವಾದ ಸಂಗತಿಯನ್ನು ವಿಶ್ಲೇಷಿಸಿ ವರದಿ ಮಾಡುವಲ್ಲಿ ಮಾತ್ರ ಸುದ್ದಿವಾಹಿನಿಗಳು ಸೋಮಾರಿಯಾಗಿವೆ. ಈ ಪ್ರಶ್ನೆಗೆ ಉತ್ತರವು ಅನೇಕ ಕಾರಣಗಳಲ್ಲಿ ಹುದುಗಿದೆ. ವಿಫಲವಾಗುವ ಬೆಳೆ, ಹೆಚ್ಚು ಲಾಭಕೊಡುವ ಆದರೆ ಖಚಿತವಿರದ (ಉತ್ಪತ್ತಿ, ಗುಣಮಟ್ಟ ಮತ್ತು ಬೆಲೆಯ ವಿಷಯದಲ್ಲಿ) ಕೃಷಿಉತ್ಪನ್ನಗಳಾದ ಹತ್ತಿ, ಕಬ್ಬು, ಸೋಯಾಬಿನ್ ಗಳ ವಿಷಯದಲ್ಲಿ ಅತಿಹೆಚ್ಚಿನ ಬಡ್ಡಿಗೆ ಸಾಲ ತೆಗೆದುಕೊಂಡು ತೀರಿಸಲಾಗದಿರುವುದು, ಕೃಷಿಯೇತರ ವೃತ್ತಿಗೆ ಅವಕಾಶಗಳಿಲ್ಲದಿರುವುದು, ವೈಜ್ಞಾನಿಕ ವಿಧಾನಗಳಿಗೆ ಒಡ್ಡಿಕೊಳ್ಳಲು ಒಪ್ಪದಿರುವುದು, ಸರಿಯಾದ ಮೂಲಗಳಿಂದ ಸಕಾಲಕ್ಕೆ ಸಾಲ ದೊರೆಯದೇ ಇರುವುದು, ಹವಾಮಾನದ ಕುರಿತು ಕಡಿಮೆ ತಿಳುವಳಿಕೆ, ಬ್ಯಾಂಕ್‌ಗಳಿಗೆ ಸರಿಯಾದ ಸಮಯಕ್ಕೆ ಸಾಲಪಾವತಿ ಮಾಡಿದರೆ ಪ್ರೋತ್ಸಾಹ ಇಲ್ಲದಿರುವುದು ಇತ್ಯಾದಿ. ಕೆಲವು ಪ್ರದೇಶಗಳಲ್ಲಿ ನೀರಿನ ಹರಿವು ಇದ್ದರೂ ಸಹ ಅದನ್ನು ಬಳಸಿಕೊಳ್ಳಲು ವಿದ್ಯುತ್‌ನ ಕೊರತೆ ಇರುವುದು ಸಹ ಒಂದು ಬಗೆಯಲ್ಲಿ ರೈತರನ್ನು ಹಿಡಿದಿಟ್ಟಿದೆ. ಮಕ್ಕಳ ವಿದ್ಯಾಭ್ಯಾಸದ ಮೇಲಿನ ಖರ್ಚು, ಇದ್ದಕ್ಕಿದ್ದಂತೆ ಮೇಲೆದ್ದು ಬರುವ ಆರೋಗ್ಯ, ಮದುವೆ ಸಂಬಂಧಿ ವ್ಯಯಗಳು ಇತರೇ ಸಮಸ್ಯೆಗಳು ರೈತರನ್ನು ಬಾಧಿಸುತ್ತಿವೆ. ಈ ಎಲ್ಲವು ರೈತಾಪಿವರ್ಗದ ಮೇಲೆ ಅತಿಯಾದ ಒತ್ತಡವನ್ನು ಹೇರುತ್ತಿವೆ. ಮುಂಗಾರಿನ ಸಮಯದಲ್ಲಿ ಕೈಕೊಡುವ ಮಳೆ,ಬೆಳೆದ ಉತ್ಪನ್ನಗಳನ್ನು ಮಾರುಕಟ್ಟೆಗೆ ತಲುಪಿಸಲು ಇರುವ ದಾರಿಗಳಲ್ಲಿನ ಲೋಪಗಳು-ಇವೆಲ್ಲವೂ ರೈತರ ಆರ್ಥಿಕ ಸ್ಥಿತಿಯನ್ನು ಸಮಸ್ಯಾತ್ಮಕಗೊಳಿಸಿವೆ.
ಈ ರೈತರು ಮತ್ತು ಅವರ ಕುಟುಂಬ, ಭಾರತ ಬಹುಕಾಲದಿಂದ ಅನುಭವಿಸುತ್ತಿರುವ ಕೃಷಿ ಸಮಸ್ಯೆಗಳಿಂದ ಜರ್ಜರಿತವಾಗಿದೆ. ಎರಡು ದಶಕದ ಹಿಂದೆ ಜಾಗತಿಕ ಮಾರುಕಟ್ಟೆಗೆ ಭಾರತೀಯ ಕೃಷಿ ಕ್ಷೇತ್ರ ತೆರೆದುಕೊಂಡಾಗಿನಿಂದಲೂ ವೆಚ್ಚವು ಅಧಿಕವಾಗುತ್ತ ಉತ್ಪನ್ನವು ಕಡಿಮೆಯಾಗುತ್ತ ನಡೆದಿದೆ. ಇದು ರೈತರ ಮೇಲೆ ಮಾನಸಿಕ ಹಾಗೂ ಆರ್ಥಿಕ ಒತ್ತಡವನ್ನು ಅಧಿಕಗೊಳಿಸಿದೆ. ಈ ಕಾರಣದಿಂದ ಸಣ್ಣಹಿಡುವಳಿದಾರರು ಸಹ ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುವಂತಾಗಿದೆ. ಅತ್ಯಂತ ದುರ್ಭರವಾದ ವರ್ಷವೊಂದರಲ್ಲಿ ಹತ್ತಿಯನ್ನು ಮಾರಿದ ಹಣ ಅದಕ್ಕೆ ಹೂಡಿದ ಬಂಡವಾಳವನ್ನು ಹಿಂತಿರುಗಿಸಲಾರದು. ಇನ್ನು ಬಡ್ಡಿ ತೀರಿಸುವ ಮತ್ತು ಕುಟುಂಬಕ್ಕೆ ಬೇಕಾದ ಅಹಾರ ಇತ್ಯಾದಿ ಆವಶ್ಯಕತೆಗಳನ್ನು ತೀರಿಸಿಕೊಳ್ಳುವ ಸಾಧ್ಯತೆಯಂತೂ ದೂರವೇ ಉಳಿಯಿತು. ಇಂಥ ಪರಿಸ್ಥಿತಿಯಲ್ಲಿ ಉಳಿದ ದಾರಿಯೆಂದರೆ, ಹೂಡಿಕೆ ಮಾಡಲು ಮತ್ತಷ್ಟು ಸಾಲ ಮಾಡುವುದು ಹಾಗೂ ಅದು ಸಾಲದ ಸುಳಿಯನ್ನು ಇನ್ನಷ್ಟು ಹೆಚ್ಚಿಸುವುದು ಮಾತ್ರವೇ. ಸಾಲವೇ ಭಾರತದಲ್ಲಿ ರೈತರ ಆತ್ಮಹತ್ಯೆಗೆ ಇರುವ ಅತಿ ಪ್ರಮುಖ ಕಾರಣವಾಗಿದೆ.
ವಿಶ್ವಬ್ಯಾಂಕ್‌ನ ಅಂಕಿ ಅಂಶಗಳು ತೋರಿಸುವಂತೆ ಭಾರತದ ಕೃಷಿಭೂಮಿಯಲ್ಲಿ ಕೇವಲ ಶೇ. 35ರಷ್ಟು ಭಾಗ ಮಾತ್ರವೇ ನೀರಾವರಿಯಿಂದ ಕೂಡಿದೆ.(ಭೂಮಿಗೆ ಕೃತಕಪದ್ಧತಿಗಳ ಮೂಲಕ ನೀರನ್ನು ಹಾಯಿಸುವುದು)ಇದರ ಅರ್ಥ ಉಳಿದ ಶೇ. 65 ಭೂಮಿಯು ಮಳೆಯ ನೀರನ್ನೇ ನಂಬಿಕೊಂಡು ಉಳಿದಿದೆ. ಮತ್ತು ಮಳೆಯ ಮೇಲೆ ಸರಕಾರಕ್ಕೆ ಯಾವ ಬಗೆಯ ಹಿಡಿತವು ಇಲ್ಲ! ಸಣ್ಣ ಮತ್ತು ಮಧ್ಯಮ ಹಿಡುವಳಿದಾರರಿಗೆ ಸಾಂಸ್ಥಿಕ ಸಾಲನೀಡುವ ಸಂಸ್ಥೆಗಳೂ ದೂರವಾಗಿವೆ.ಇಂಥವರಿಗೆ ಹಳ್ಳಿಗಳಲ್ಲಿರುವ ವರ್ತಕರೇ ಸಾಲಕ್ಕೆ ಮೂಲ. ಅವರು ರೈತರಿಗೆ ಕೃಷಿಸಾಲವನ್ನು ನೀಡುತ್ತಾರೆ. ಇವರ ಮಧ್ಯೆ ನಡೆಯುವ ವ್ಯವಹಾರದಲ್ಲಿ ರೈತರಿಗೆ ಇರುವ ಸಾಧ್ಯತೆಗಳು ಬಹಳ ಕಡಿಮೆ. ಹೆಚ್ಚಿದ ಕೂಲಿಕಾರ್ಮಿಕರ ವೇತನ ಮತ್ತು ಅಂತರ್ಜಲವನ್ನು ಮೇಲೆತ್ತಲು ಜನರೇಟರ್‌ಗಳನ್ನು ಕೊಳ್ಳುವ ಅನಿವಾರ್ಯತೆ ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತದೆ.ಒಂದು ಕಾಲದಲ್ಲಿ ಬಹಳ ಸಹಾಯಕವಾಗಿದ್ದ ಸಹಾಯಧನವು ಈಗ ಬಹುತೇಕ ಎಲ್ಲರಿಗೂ ಮರೀಚಿಕೆಯಾಗಿದ್ದು, ಕೇವಲ ಆಹಾರಧಾನ್ಯ ಬೆಳೆಯುವವರಿಗಷ್ಟೇ ಸೀಮಿತವಾಗಿದೆ. ಈಗ ರೈತರು ಒಂದೋ ಹೋರಾಟ ಮಾಡಬೇಕು ಅಥವಾ ಸೋಲೊಪ್ಪಿಕೊಳ್ಳಬೇಕು. ಹೋರಾಟ ಮಾಡಲು ಕೆಲವರು ಹೆಚ್ಚುಬೆಲೆಯ ಬೀಜಗಳು, ಗೊಬ್ಬರ ಮತ್ತು ಕೀಟನಾಶಕಗಳ ಮೊರೆಹೋಗಿದ್ದಾರೆ. ಈ ಉತ್ಪನ್ನಗಳು ಈಗ ಎಲ್ಲ ಸಣ್ಣಹಳ್ಳಿಯ ಪುಟ್ಟ ಅಂಗಡಿಗಳಲ್ಲೂ ಸಾಲುಗಟ್ಟಿ ನಿಂತಿವೆ.
ಸಾವಯವ ಕೃಷಿ ಮಾಡಿ ಎನ್ನುವ ಮೂರು ಪದಗಳ ಮೂಲಕ ನಿಜಜೀವನದ ಈ ಸಮಸ್ಯೆಗಳನ್ನು ತಳ್ಳಿಹಾಕಲಾಗುತ್ತದೆ. ಒಂದು ವಿಚಾರವಾಗಿ ಇದು ಸರಿ. ಆದರೆ ಅದು ಹೇಳಿದಷ್ಟು ಸರಳವಾಗಿಲ್ಲ.ವರ್ಷಗಳ ಕಾಲ ರಾಸಾಯನಿಕ ಗೊಬ್ಬರಗಳನ್ನು ಸುರಿದು ಜಡಗೊಂಡ ಭೂಮಿ ತನ್ನಲ್ಲಿನ ವಿಷವನ್ನು ಕಳೆದುಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಆ ನಂತರ ಮಾತ್ರವೇ ಅಲ್ಲಿ ಸಾವಯವ ಕೃಷಿವಿಧಾನವನ್ನು ಅಳವಡಿಸಬಹುದು. ಅದರ ಅರ್ಥ ನೀವು ಮೂರು ವರ್ಷಗಳ ಕಾಲ ಸಾವಯವ ಪದ್ಧತಿಯಲ್ಲಿ ಕೃಷಿಮಾಡಿ ಆ ಮೂರು ವರ್ಷ ಸಾವಯವ ಬೆಲೆಗೆ ಬೆಳೆದದ್ದನ್ನು ಮಾರುವಂತಿಲ್ಲ. ಏಕೆಂದರೆ ಸಾವಯವ ಎಂದು ಕರೆಯುವ ಪ್ರಮಾಣಪತ್ರ ದೊರಕಲು ಅಷ್ಟು ಸಮಯ ಹಿಡಿಯುತ್ತದೆ.ಬಡತನರೇಖೆಯ ಕೆಳಗಿರುವ ರೈತರಿಗೆ ಕಡಿಮೆ ಇಳುವರಿ ಬರುವ ಈ ಭೀತಿಯೇ ಇಂಥಹ ಹೊಸಪದ್ಧತಿಗಳನ್ನು ಅಳವಡಿಸಿಕೊಳ್ಳುವುದರಿಂದ ತಡೆಯುತ್ತದೆ.
ಮಣ್ಣಿನ ಸಾರವನ್ನು ಪುನರ್‌ಸ್ಥಾಪಿಸುವ ಕುರಿತು, ನೀರಿನ ಬಳಕೆಯನ್ನು ಸಮರ್ಪಕವಾಗಿಸುವ ಕುರಿತು, ಅರಣ್ಯವನ್ನು ರಕ್ಷಿಸಿ ಗುಡ್ಡಗಾಡು ಜನರ ಭೂಮಿ ಮತ್ತು ಬದುಕುಗಳನ್ನು ಹಸನಾಗಿಸುವ ಕುರಿತು ಅನೇಕ ಮಾತುಕತೆಗಳು ನಡೆಯುತ್ತಿವೆ. ಹಸಿರೀಕರಣದ ಕನಸನ್ನು ಬಿಟ್ಟುಬಿಡಿ, ಅದನ್ನು ಲುಡ್ಡೀಟ್‌ಗಳ ಹಗಲುಗನಸೆಂದು ಜರೆಯಲಾಗುತ್ತದೆ. ಮಣ್ಣಿನ ಆರೋಗ್ಯವನ್ನು ರಕ್ಷಿಸಿಕೊಳ್ಳುವ ಕುರಿತು 12ನೆ ಯೋಜನಾ ವರದಿ ಮಾಡಿರುವ ಸಲಹೆಗಳನ್ನು ಕಾರ್ಯರೂಪಕ್ಕೇ ತಾರದ ಕೃಷಿನೀತಿಗಳು ಪೂರ್ಣ ಟೊಳ್ಳಾಗಿವೆ. ರಾಸಾಯನಿಕ ಗೊಬ್ಬರಗಳಿಗೆ ನೀಡುತ್ತಿರುವ ಸಹಾಯಧನವನ್ನು ಮುಂದುವರೆಸುತ್ತಿರುವುದು, ರೈತರನ್ನು ಈ ಬಗೆಯ ಗೊಬ್ಬರಗಳನ್ನೇ ಬಳಸಲು ಪ್ರೋತ್ಸಾಹಿಸುವುದು ಮಣ್ಣಿನ ಆರೋಗ್ಯವನ್ನು ಮತ್ತಷ್ಟು ಹಾಳುಗೆಡವಲು ಕಾರಣವಾಗುತ್ತಿದೆ. ಬಂಜರು ಬೀಳುತ್ತಿರುವ ಭೂಮಿಯನ್ನು ರಕ್ಷಿಸಲು ಇತರ ನೈಸರ್ಗಿಕ ದಾರಿಗಳನ್ನು ಕಂಡುಕೊಳ್ಳುವ ಕುರಿತು ಮಾತಾಗಲೀ ಪ್ರಯತ್ನವಾಗಲೀ ನಡೆಯುತ್ತಿಲ್ಲ. ಮೊನ್ಸಾಂಟೋ ತರದ ಕಂಪೆನಿಗಳು ಬೀಜಮಾರುಕಟ್ಟೆಯ ಮೇಲೆ ಸ್ವಾಮ್ಯ ಸಾಧಿಸಿ ಹತ್ತಿಯ ಸಾವಿರ ಬಗೆಯ ವೈವಿಧ್ಯವನ್ನು ನಾಶಪಡಿಸಿವೆ. ಈ ಬಗೆಯ ತಳಿಗಳು ವಿದರ್ಭ, ಮಹಾರಾಷ್ಟ್ರ ಮತ್ತು ಭಾರತದ ಇತರ ಭಾಗಗಳಲ್ಲಿ ಪೂರ್ಣವಾಗಿ ಮರೆಯಾಗಿ ಹೋಗಿವೆ. ನಾವು ನೆನಪಿಡಬೇಕಾದ್ದೆಂದರೆ, ಈ ಭಾಗದ ರೈತರು ಈ ತಳಿಗಳನ್ನು ಶತಮಾನಗಳಿಂದ ಬೆಳೆಯುತ್ತ ಬಂದು ಅದರಲ್ಲಿಯೇ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಮರ್ಥರಾಗಿದ್ದರು. ಈ ಬಗೆಯ ತಳಿಗಳು ಆಯಾ ಭೂಪ್ರದೇಶಕ್ಕೆ ತಕ್ಕವಾಗಿದ್ದು, ನೀರಿನ ಕೊರತೆಯ ನಡುವೆಯೂ ಚಿಗುರಬಲ್ಲವಾಗಿದ್ದವು.
6,00,000 ಹಳ್ಳಿಗಳಲ್ಲಿ ಇದನ್ನು ಪ್ರಯತ್ನಿಸುವುದು ಬಾಲಿಶವಾಗುತ್ತದೆ. ಕಾರಣ ಭವಿಷ್ಯವೆಂಬುದು ಖಾಲಿಹೊಡೆಯು ತ್ತಿರುವ ಹಳ್ಳಿಗಳಿಗೆ ಸೇರಿದ್ದಾಗಿದೆ. ಹಳ್ಳಿಗರೆಲ್ಲರೂ ನಗರಗಳತ್ತ ನಡೆದು ಮುಂದೆ ತಮ್ಮ ಮತಗಳನ್ನು ಕಾಲಿನಿಂದ ಹಾಕುವ ಸಮಯ ಸನ್ನಿಹಿತವಾಗುತ್ತಿದೆ. ತುಂಬ ದೊಡ್ಡ ಆರ್ಥಿಕತೆಯುಳ್ಳ ದೇಶಗಳಲ್ಲಷ್ಟೇ ರೈತರು ತಮ್ಮ ಹಳ್ಳಿಗಳಲ್ಲಿ ಸುಖವಾಗಿ ಉಳಿಯುವ ಪರಿಸ್ಥಿತಿಯಿದೆ. ಭಾರತದಲ್ಲಿ ಹಳ್ಳಿಗಳಲ್ಲಿ ಬದುಕುವುದು ಸುಲಭವಲ್ಲ:ಭಾರತವು ಅಷ್ಟು ಶ್ರೀಮಂತವಲ್ಲ.
ಸಹಾಯಧನಗಳು ಮತ್ತು ಸಾಲಮನ್ನಾದಂತಹ ಕಾರ್ಯಗಳು ರೈತರ ಸಮಸ್ಯೆಯನ್ನು ಸ್ವಲ್ಪ ಕಾಲಕ್ಕೆ ಮಾತ್ರವೇ ಬಗೆಹರಿಸಬಲ್ಲವು.ಆದರೆ ಈ ಸಮಸ್ಯೆಯ ಪೂರ್ಣಸ್ವರೂಪವನ್ನು ಅರ್ಥಮಾಡಿಕೊಂಡು ಬಗೆಹರಿಸಲು ಕೃಷಿಉತ್ಪನ್ನ, ಕೃಷಿಗೆ ಬೇಕಾದ ಹೂಡಿಕೆಗಳು, ಮತ್ತು ಬ್ಯಾಂಕುಗಳು, ನೀರಾವರಿಯ ಭದ್ರತೆ, ಶೀತಿಲಿಕರಣ ಘಟಕಗಳು, ಮಾರುಕಟ್ಟೆ ವ್ಯವಸ್ಥೆ, ಬೆಲೆನೀತಿ ಇತ್ಯಾದಿಗಳ ಕುರಿತ ಚಿಂತನೆ ಆವಶ್ಯಕವಾಗಿದೆ. ಮತ್ತು ರೈತರಿಗೆ ಕೃಷಿಯ ಜೊತೆಜೊತೆಗೆ ಹೈನುಗಾರಿಕೆ, ಕೋಳಿಸಾಕಾಣೆೆ, ಮೀನುಗಾರಿಕೆಗಳಂತಹ ಇತರ ಜೀವನ ನಿರ್ವಹಣಾ ಸಾಧ್ಯತೆಗಳನ್ನೂ ಪರಿಚಯಿಸಬೇಕಿದೆ.
 

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top