ದ.ಕ. ಜಿಲ್ಲೆಯನ್ನು ಕಾಡುತ್ತಿದೆ ಡ್ರಗ್ಸ್ ಹಾವಳಿ

ಡ್ರಗ್ಸ್ ಮಾಫಿಯಾದ ಕರಾಳ ಹಸ್ತ!

ಬುದ್ಧಿವಂತರ ಜಿಲ್ಲೆಯೆಂದೇ ಕರೆಸಿಕೊಳ್ಳುವ ದಕ್ಷಿಣ ಕನ್ನಡ ಜಿಲ್ಲೆ, ಅದರಲ್ಲೂ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿರುವ ಮಂಗಳೂರು ನಗರವು ಮಾದಕ ದ್ರವ್ಯವೆಂಬ ವಿಷದ ಜಾಲದೊಳಗೆ ಸಿಲುಕಿ ನಲುಗುತ್ತಿರುವುದು ನಗ್ನ ಸತ್ಯ. ಈ ಮಾದಕ ದ್ರವ್ಯ (ಡ್ರಗ್ಸ್ ಹಾವಳಿ) ಯುವ ಶಕ್ತಿಯನ್ನೇ ಗುರಿಯಾಗಿಸಿಕೊಂಡಿರುವುದಲ್ಲದೆ, ಹೊರ ರಾಜ್ಯ, ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ತನ್ನ ಕಬಂಧ ಬಾಹುವನ್ನು ಚಾಚಿರುವುದು ಆತಂಕಕಾರಿ ವಿಷಯ.

ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ನಗರ ಮಾತ್ರವಲ್ಲದೆ ಮೆತ್ತಗೆ ಗ್ರಾಮಾಂತರ ಪ್ರದೇಶಗಳಿಗೂ ಗಾಂಜಾ ಸೇರಿದಂತೆ ಮಾದಕ ದ್ರವ್ಯಗಳ ಹಾವಳಿ ಯುವಜನತೆಯನ್ನು ಆವರಿಸಿ, ಅಕ್ರಮ ಚಟುವಟಿಕೆ, ಸಂಘರ್ಷಗಳಿಗೂ ಕಾರಣವಾಗುತ್ತಿದೆ. ಪ್ರಸ್ತುತ ಮಂಗಳೂರು ಕಮಿಷನರೇಟ್ ಹಾಗೂ ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ದಕ್ಷ ಪೊಲೀಸ್ ಅಧಿಕಾರಿಗಳ ಕಣ್ಗಾವಲಿನ ಹೊರತಾಗಿಯೂ ಮಾದಕ ದ್ರವ್ಯ ಜಾಲ ಮಾತ್ರ ಎಗ್ಗಿಲ್ಲದೆ ತನ್ನ ಚಟುವಟಿಕೆಗಳನ್ನು ಮುಂದುವರಿಸುತ್ತಿದೆ. ಮುಖ್ಯವಾಗಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಇತ್ತೀಚೆಗೆ ಅಧಿಕಾರಿಗಳ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಡ್ರಗ್ಸ್ ಪತ್ತೆ ಪ್ರಕರಣಗಳು ವರದಿಯಾಗುತ್ತಿರುವುದು ಇಲ್ಲಿ ಡ್ರಗ್ಸ್ ಮಾಫಿಯಾ ತನ್ನ ವಿಷಜಾಲವನ್ನು ಬಿತ್ತಿರುವುದಕ್ಕೆ ಪ್ರಮುಖ ಸಾಕ್ಷಿಯೂ ಹೌದು. ಕೆಲ ವರ್ಷಗಳ ಹಿಂದೆ ಗೂಡಂಗಡಿಗಳಿಗೆ ಸೀಮಿತಗೊಂಡಿದ್ದ ಡ್ರಗ್ಸ್, ಗಾಂಜಾ ಹಾವಳಿ ಇದೀಗ ಕಾಲೇಜು ಕ್ಯಾಂಪಸ್‌ಗಳ ಸುತ್ತ ಕಂಡುಬರುತ್ತಿದೆ. ಮಿಂಟ್, ಚಾಕಲೆಟ್, ಸಿಗರೇಟ್ ರೂಪದಲ್ಲಿ ವಿದ್ಯಾರ್ಥಿಗಳ ಕೈಗೆ ಈ ಡ್ರಗ್ಸ್ ತಲುಪುತ್ತಿದ್ದು, ಹಿಂದೆ ಉನ್ನತ ಶಿಕ್ಷಣಕ್ಕಾಗಿ ಜಿಲ್ಲೆ, ನಗರಕ್ಕೆ ಆಗಮಿಸುತ್ತಿದ್ದ ವಿದ್ಯಾರ್ಥಿಗಳನ್ನು ಗುರಿಯಾಸಿಕೊಂಡಿದ್ದ ಈ ದುಷ್ಟ ಹಾವಳಿ ಇದೀಗ ನಮ್ಮ ಯುವ ಸಮುದಾಯವನ್ನೂ ಸೆಳೆಯುತ್ತಿದೆ.

ಮಂಗಳೂರು ನಗರವನ್ನು ಕೇಂದ್ರೀಕರಿಸಿಕೊಂಡು ಬಂದರು, ಬೈತಧಕ್ಕೆ, ರೈಲು ನಿಲ್ದಾಣ, ಕದ್ರಿ ಪಾರ್ಕ್, ಬೀಚ್, ಸೆಂಟ್ರಲ್ ಮಾರ್ಕೆಟ್, ಉಳ್ಳಾಲ, ಕೃಷ್ಣಾಪುರ, ಬೆಂಗ್ರೆ, ಕೂಳೂರು, ಕಾವೂರು, ಪಂಜಿಮೊಗರು, ಬೊಂದೇಲ್, ಹಳೆ ಬಸ್ ನಿಲ್ದಾಣ, ಕೂಳೂರು, ಸ್ಟೇಟ್‌ಬ್ಯಾಂಕ್, ಕೃಷ್ಣಾಪುರ ಗಾಂಜಾ ದಂಧೆಯ ಪ್ರಮುಖ ತಾಣಗಳಾಗಿ ಗುರುತಿಸಿಕೊಂಡಿವೆ. ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಸಾರ್ವಜನಿಕರಿಂದ ಈ ಸ್ಥಳಗಳಿಂದ ದೂರು ಕರೆಗಳು ಬರುತ್ತಿರುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ. ಗಾಂಜಾ, ಕೊಕೇನ್, ಹೆರಾಯಿನ್, ಬ್ರೌನ್‌ಶುಗರ್ ಇತ್ಯಾದಿ ಕೇರಳ- ಹೈದರಾಬಾದ್, ಗೋವಾದಿಂದ ಮಂಗಳೂರಿಗೆ ಪೂರೈಕೆಯಾ ಗುತ್ತಿದೆ. ಪಾಕಿಸ್ತಾನದಿಂದಲೂ ಆಮದಾಗುತ್ತಿದೆ ಎಂದು ಹೇಳಲಾಗುತ್ತಿದೆ. ಬೂದಿ, ಹಳೆ ಮಾತ್ರೆಗಳು, ಇಲಿಪಾಶಣ, ಮಲೇರಿಯಾ ರೋಗ ನಿಯಂತ್ರಣಕ್ಕೆ ಸಿಂಪಡಿಸುವ ದ್ರವ್ಯವನ್ನು ಬಳಸಿ ಬ್ರೌನ್‌ಶುಗರ್ ತಯಾರಿಸಲಾಗುತ್ತಿದ್ದು, ಇವು ಮನುಷ್ಯನ ದೇಹದೊಳಗೆ ಹೊಕ್ಕರೆ ಆಗುವ ಅಪಾಯ ಎಷ್ಟರಮಟ್ಟಿಗೆ ಇರುತ್ತದೆ ಎಂದು ತಿಳಿಯಬಹುದು. ಈ ಬ್ರೌನ್‌ಶುಗರ್, ಹೆರಾಯಿನ್, ಟಿಡಿಜೆಸಿಕ್ ಇತ್ಯಾದಿ ಹೊಸ ಬಗೆಯ ಮಾದಕ ದ್ರವ್ಯಗಳಲ್ಲ. ಅವು ಈ ಹಿಂದೆಯೇ ಇತ್ತು. ಈಗ ಹೊಸ ಹೆಸರಿನಲ್ಲಿ ಕಂಗೊಳಿಸುತ್ತಿವೆ ಅಷ್ಟೆ.

ನೆರೆಯ ಕೇರಳ, ಗೋವಾ, ಮಹಾರಾಷ್ಟ್ರದಿಂದ ರೈಲಿನ ಮೂಲಕ ನಗರ ಹಾಗೂ ಜಿಲ್ಲೆಯ ವಿವಿಧ ಕಡೆಗಳಿಗೆ ಗಾಂಜಾ ಹಾಗೂ ಇತರ ಮಾದಕ ದ್ರವ್ಯಗಳು ಪೂರೈಕೆಯಾಗುತ್ತಿವೆ ಎಂಬ ಮಾಹಿತಿಯಿದೆ. ಈ ದಂಧೆಯು ಭಾರೀ ಕಮಿಷನ್ ರೂಪದಲ್ಲಿ ನಡೆಯುತ್ತಿರುವುದಲ್ಲದೆ, ಇದೀಗ ಸಾಮಾಜಿಕ ಜಾಲತಾಣವಾದ ಇಮೇಲ್, ವಾಟ್ಸ್ ಆ್ಯಪ್‌ಗಳ ಮೂಲಕವೂ ಈ ದಂಧೆಯು ನಡೆಯುತ್ತಿದೆ. ಮೆಡಿಕಲ್, ಇಂಜಿನಿಯರಿಂಗ್ ಹಾಗೂ ಇತರ ವೃತ್ತಿಪರ ಕಾಲೇಜು ಗಳಿಗೆ ವ್ಯಾಸಂಗ ಮಾಡಲು ಬರುತ್ತಿದ್ದ ಹೊರ ಪ್ರದೇಶದ ವಿದ್ಯಾರ್ಥಿ ಗಳನ್ನು ಬಹುಮುಖ್ಯವಾಗಿ ಗುರಿಯಾಗಿಸಿಕೊಂಡು ನಡೆಯುತ್ತಿದ್ದ ಈ ಮಾಫಿಯಾ, ಇದೀಗ ನಮ್ಮ ಸ್ಥಳೀಯ ಯುವಕರನ್ನೂ ಆಕರ್ಷಿಸಿ ಸಂಘರ್ಷಗಳಿಗೆ ಕಾರಣವಾಗುತ್ತಿರುವುದು ಹಲವಾರು ಪ್ರಕರಣ ಗಳಿಂದ ಈಗಾಗಲೇ ಬಯಲಾಗಿದೆ. ಮಾದಕ ದ್ರವ್ಯ ಸೇವನೆಯ ಚಟಕ್ಕೆ ದಾಸನಾದಲ್ಲಿ ಅದರಿಂದ ಹೊರಬರು ವುದು ಕಷ್ಟ.

ಅದರಿಂದಾಗಿಯೇ ಒಮ್ಮೆ ಈ ಚಟಕ್ಕೆ ಬಿದ್ದವರು ಮತ್ತೆ ಅದಕ್ಕಾಗಿ ಹುಡುಕಾಟ, ಅದನ್ನು ಪಡೆಯುವುದಕ್ಕಾಗಿ ಯಾವುದೇ ಕೃತ್ಯಕ್ಕೂ ಮುಂದಾಗುತ್ತಾರೆ. ಇದನ್ನೇ ಬಂಡವಾಳವಾಗಿಸಿಕೊಂಡಿರುವ ಮಾದಕದ್ರವ್ಯ ಜಾಲವು, ಹದಿ ಹರೆಯದ ಯುವಜನಾಂಗವನ್ನೇ ಗುರಿಯಾಗಿಸಿ ತನ್ನ ವ್ಯವಹಾರವನ್ನು ನಡೆಸುತ್ತಿದೆ. ಮಾದಕ ದ್ರವ್ಯಗಳ ವ್ಯಸನವು ಆರೋಗ್ಯ ಮಾತ್ರವಲ್ಲದೆ ಮಾನಸಿಕ ತೆಯ ಮೇಲೆ ತೀವ್ರವಾದ ಪರಿಣಾಮವನ್ನು ಬೀರುವುದಲ್ಲದೆ, ಕ್ರಿಮಿನಲ್ ಚಟುವಟಿಕೆಗಳಿಗೂ ಪ್ರೇರೇಪಿಸುತ್ತದೆ. ಮಾದಕ ದ್ರವ್ಯ ಸೇವನೆ ಚಟವಾಗುತ್ತಾ ಹೋದಂತೆ ಮೆದುಳು ಹಾಗೂ ದೇಹದ ಭಾಗ ಗಳು ನಿಷ್ಕ್ರಿಯಗೊಳ್ಳಲಾರಂಭಿಸುತ್ತದೆ. ನಿರಂತರ ಸೇವನೆಯಿಂದ ಮಾನಸಿಕ ಸ್ಥಿಮಿತವನ್ನು ಕಳೆದುಕೊಳ್ಳುವುದಲ್ಲದೆ, ಕೊನೆಗೆ ಪ್ರಾಣ ಹಾನಿಗೂ ಕಾರಣವಾಗುತ್ತದೆ. ಕುಟುಂಬ ಕಲಹ, ವೈಮನಸ್ಸು ಇಡೀ ಕುಟುಂಬದ ನೆಮ್ಮದಿಯನ್ನೇ ಕದಡಿಬಿಡುತ್ತದೆ.

ಕೋಡ್ ಸಂಖ್ಯೆ ಬಳಸುತ್ತಾರೆ!
ಡ್ರಗ್ಸ್ ಜಾಲ ಅದೆಷ್ಟು ವ್ಯವಸ್ಥಿತವಾಗಿ ನಡೆಯುತ್ತದೆ ಎಂದರೆ, ಡ್ರಗ್ಸ್ ಜಾಲದ ರೂವಾರಿಗಳ ಹೆಸರು ಎಲ್ಲೂ ಹೊರಬರುವುದೇ ಇಲ್ಲ. ತಮ್ಮ ಸಂವಹನವನ್ನು ಇವರು ಕೋಡ್ ಸಂಖ್ಯೆಯ ಆಧಾರದ ಮೇಲೆಯೇ ನಡೆಸುತ್ತಾರೆ. ಹಾಗಾಗಿ ಇಲ್ಲಿ ಹೆಸರು ಗೌಣ. ಯಾವ ಕ್ಷಣದಲ್ಲಾದರೂ ತಮ್ಮ ವಿವರ ಬಹಿರಂಗವಾದೀತು ಎಂಬ ಆತಂಕದಿಂದ ಇವರು ಹೆಸರಿನ ಬದಲು ಕೋಡ್ ಸಂಖ್ಯೆಗೆ ಆದ್ಯತೆ ನೀಡುತ್ತಾರೆ.

ಇಲ್ಲಿ ಅಕ್ರಮವೂ ಇದೆ, ಜತೆಗೆ ಸಕ್ರಮವೂ...!
ಮಾದಕ ದ್ರವ್ಯದಲ್ಲಿ ಸಕ್ರಮ ಮತ್ತು ಅಕ್ರಮವಿದೆ. ಬೀಡಿ, ಸಿಗರೇಟು, ಪಾನ್‌ಪರಾಗ್, ಅಮಲುಭರಿತ ಕೆಲವು ಪಾನೀಯಗಳು ಸಕ್ರಮವಾದರೆ, ಗಾಂಜಾ, ಕೊಕೇನ್, ಹೆರಾಯಿನ್, ಬ್ರೌನ್‌ಶುಗರ್ ಇತ್ಯಾದಿ ಅಕ್ರಮವಾಗಿದೆ. ಈ ಮಧ್ಯೆ ಅತ್ತ ಅಕ್ರಮವೂ ಅಲ್ಲದ ಇತ್ತ ಸಕ್ರಮವೂ ಆಗದ ಕೆಲವು ವಸ್ತುಗಳ ಮೂಲಕವೂ ಕೆಲವರು ನಶೆ ಏರಿಸಿಕೊಳ್ಳುತ್ತಾರೆ. ಇದಕ್ಕೆ ಇನ್‌ಹೆಲೆಂಟ್ ಎನ್ನುತ್ತಾರೆ. ಉದಾ: ವೈಟ್ನರ್, ಪೆಟ್ರೋಲ್, ಪೈಂಟಿಂಗ್, ವಾರ್ನಿಶ್, ಫೆವಿಕಾಲ್, ಸೈಕಲ್ ಟ್ಯೂಬ್‌ಗೆ ಬಳಸುವ ದ್ರವ್ಯ, ನೇಲ್‌ಪಾಲಿಶ್, ಶೂ ಪಾಲಿಶ್, ಟೂತ್‌ಪೇಸ್ಟ್ ಅಲ್ಲದೆ ಅಮಲು ಮಾತ್ರೆ, ಅಮಲುದ್ರವ್ಯ ಮಿಶ್ರಿತ ಸಿರಪ್ ಸೇವನೆ ಇತ್ಯಾದಿ. ಬ್ರೆಡ್‌ಗೆ ಐಯಡೆಕ್ಸ್ ಅಥವಾ ವಿಕ್ಸ್ ಬೆರೆಸಿ ತಿನ್ನುವ ಮತ್ತು ಝಂಡುಬಾಮ್‌ಗೆ ಗುಟ್ಕಾ ಹಾಕಿ ತಿನ್ನುವ ಮೂಲಕವೂ ನಶೆ ಏರಿಸುವವರೂ ಇದ್ದಾರೆ.

ವಯಸ್ಸಿನ ಹಂಗಿಲ್ಲ

ಗಾಂಜಾ-ಡ್ರಗ್ಸ್ ಜಾಲದ ಬಲೆಗೆ ಬೀಳುವವರಿಗೆ ವಯಸ್ಸಿನ ಹಂಗಿಲ್ಲ. 8ನೆ ತರಗತಿಯ ವಿದ್ಯಾರ್ಥಿಯಿಂದ ಹಿಡಿದು 75 ವರ್ಷ ಪ್ರಾಯದವರೂ ಕೂಡ ಈ ಜಾಲಕ್ಕೆ ಸಿಲುಕಿದ್ದಾರೆ. ಇದರ ಪೂರೈಕೆದಾರರು ಹೆಚ್ಚಾಗಿ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿದ ಕಾರಣ ನಗರ ಮತ್ತು ಗ್ರಾಮಾಂತರ ಪ್ರದೇಶದ ಶಾಲಾ-ಕಾಲೇಜು, ವಿಶ್ವವಿದ್ಯಾನಿಲಯ, ಮೆಡಿಕಲ್-ಇಂಜಿನಿಯರಿಂಗ್, ಫ್ಯಾಶನ್ ಡಿಸೈನಿಂಗ್ ಹೀಗೆ ವಿವಿಧ ಕೋರ್ಸ್‌ಗಳನ್ನು ನೀಡುವ ಕಾಲೇಜುಗಳ ಸುತ್ತಮುತ್ತಲಿನ ಪೆಟ್ಟಿಗೆ ಅಂಗಡಿಗಳಲ್ಲಿ ಯಥೇಚ್ಛವಾಗಿ ಗಾಂಜಾ-ಡ್ರಗ್ಸ್ ಲಭ್ಯವಾಗುತ್ತದೆ. ಇದನ್ನು ಮಟ್ಟಹಾಕಬೇಕಾದ ಪೊಲೀಸ್ ಇಲಾಖೆ ಕಂಡೂ ಕಾಣದಂತೆ ಸುಮ್ಮನಾಗಿದೆೆ. ಹಿರಿಯ ಪೊಲೀಸ್ ಅಧಿಕಾರಿಗಳು ಇದರ ನಿರ್ಮೂಲನೆಗೆ ಪಣತೊಟ್ಟಿದ್ದರೂ ಕೆಳಮಟ್ಟದ ಪೊಲೀಸರು ಭಕ್ಷೀಸಿನ ಹಿಂದೆ ಬಿದ್ದಿರು ವುದು ಗುಟ್ಟಾಗಿ ಉಳಿದಿಲ್ಲ.

ವಿಚಿತ್ರ ವರ್ತನೆ
 ಈ ಡ್ರಗ್ಸ್‌ಗೆ ತುತ್ತಾದವರ ವರ್ತನೆ ಕೂಡ ವಿಚಿತ್ರವಾಗಿರುತ್ತದೆ. ಇವರು ಯಾವ ಅಪರಾಧವನ್ನೂ ಮಾಡಲು ಹೇಸಲಾರರು. ಇವರು ಕೆಲವೊಮ್ಮೆ ಇತ್ತ ಡ್ರಗ್ಸ್ ತೆಗೆಯಲಾಗದ ಮತ್ತು ಅತ್ತ ಡ್ರಗ್ಸ್ ಬಿಡಲೂ ಆಗದ ವಿಚಿತ್ರ ಸನ್ನಿವೇಶದಲ್ಲಿ ಸಿಲುಕುತ್ತಾರೆ. ಹಠಾತ್ತಾಗಿ ಶಬ್ದ ಕೇಳಿದ ಹಾಗೆ, ಪೊಲೀಸರು ಹೊಡೆಯಲು ಬಂದ ಹಾಗೆ, ತಾನು ಪ್ರಯಾಣಿಸುವ ಬಸ್ಸನ್ನೇ ಆನೆಯೊಂದು ಎತ್ತುವ ಹಾಗೆ, ತನ್ನ ಮೈಮೇಲೆ ಬೆಟ್ಟ-ಗುಡ್ಡ ಬಿದ್ದ ಹಾಗೆ, ಹಾವು ಕಚ್ಚಲು ಬಂದ ಹಾಗೆ... ಇತ್ಯಾದಿ ವಿಚಿತ್ರ ನಡವಳಿಕೆ ಇವರಲ್ಲಿ ಕಂಡು ಬರುತ್ತದೆ. ಕೆಲವೊಮ್ಮೆ ಆತ್ಮಹತ್ಯೆಗೂ ಇವರು ಮುಂದಾಗುವುದುಂಟು.

ಮಾನಸಿಕ ಕಾಯಿಲೆ
ಸ್ನೇಹಿತರ ಸಂಗ ಬೆಳೆಸಿದ ಬಳಿಕ ಯಾವುದೋ ಶೋಕಿಗಾಗಿ ಡ್ರಗ್ಸ್ -ಗಾಂಜಾ ಚಟಕ್ಕೆ ಬಿದ್ದವರು ಮಾನಸಿಕ ಕಾಯಿಲೆಗೆ ತುತ್ತಾಗುವ ಅಪಾಯವಿದೆ ಎಂದು ಮಾನಸಿಕ ರೋಗ ತಜ್ಞ ವೈದ್ಯರು ಅಭಿಪ್ರಾ ಯಪಡುತ್ತಾರೆ. ಒಂದೆಡೆ ಹೆಂಡತಿ-ಮಕ್ಕಳು ಬಿಟ್ಟು ಹೋಗಿರುತ್ತಾರೆ, ಇನ್ನೊಂದೆಡೆ ಕೆಲಸದಿಂದ ಕಿತ್ತು ಹಾಕಲ್ಪಟ್ಟಿರುತ್ತಾರೆ. ಇದರಿಂದ ಇವರಲ್ಲಿ ಅಭದ್ರತೆ ಕಾಡಿರುತ್ತದೆ. ಮರೆವು ಅಧಿಕವಾಗುತ್ತದೆ. ಭಯ-ಸಂಶಯ ವಿಪರೀತವಾಗುತ್ತದೆ. ಇದರಿಂದ ಕಂಗಾಲಾಗಿ ಮಾನಸಿಕ ರೋಗಿಯಾಗುವ ಅಪಾಯವೇ ಅಧಿಕ ಎಂದು ವೈದ್ಯರು ಹೇಳುತ್ತಾರೆ.

ಸಮಾಜದಲ್ಲಿ ಜಾಗೃತಿ

ಈ ಗಾಂಜಾ, ಡ್ರಗ್ಸ್ ಯಾವುದೇ ಧರ್ಮಕ್ಕೆ ಸೀಮಿತವಾಗಿಲ್ಲ. ಎಲ್ಲಾ ಧರ್ಮೀಯರಲ್ಲೂ ಇದು ವ್ಯಾಪಿಸಿದೆ. ಆದರೆ ಜಿಲ್ಲೆಯ ಮುಸ್ಲಿಮ್ ಬಾಹುಳ್ಯವಿರುವ ಪ್ರದೇಶಗಳಲ್ಲಿ ಇದು ಪಿಡುಗಾಗಿ ಪರಿಣಮಿಸಿದೆ. ಆ ಹಿನ್ನೆಲೆಯಲ್ಲಿ ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿ (ಕಿಸಾ) ಹೊರತರುವ ‘ಸುನ್ನಿ ಸಂದೇಶ’ ಮಾಸಪತ್ರಿಕೆಯ 15ನೆ ವಾರ್ಷಿಕೋತ್ಸವದ ಪ್ರಯುಕ್ತ ‘ಮಾದಕ ದ್ರವ್ಯದ ವಿರುದ್ಧ ಜನಾಂದೋಲನ ಕಾರ್ಯಕ್ರಮ’ವು ಕಳೆದ ತಿಂಗಳು ಜಿಲ್ಲಾದ್ಯಂತ ಜರಗಿದೆ ನಗರದ ನೆಹರೂ ಮೈದಾನದಲ್ಲಿ ಬೃಹತ್ ಸಮಾವೇಶವೂ ಜರಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ‘ಕಿಸಾ’ ಪ್ರಧಾನ ಕಾರ್ಯದರ್ಶಿ ಕೆ.ಎಲ್. ಉಮರ್ ದಾರಿಮಿ ಪಟ್ಟೋರಿ, ‘ಮಾದಕ ದ್ರವ್ಯದ ವಿರುದ್ಧ ಜನಾಂದೋ ಲನ ಪ್ರಯುಕ್ತ ಬೆಂಗರೆ, ಕಿನ್ಯ ಜಮಾಅತ್ ವ್ಯಾಪ್ತಿಯಲ್ಲಿ ಜಾಗೃತಿ ಕಾರ್ಯಕ್ರಮ ಮಾಡಲಾಗಿದೆ. ನೆಹರೂ ಮೈದಾನದ ಕಾರ್ಯಕ್ರಮದ ವಾಹನ ಪ್ರಚಾರ ಜಾಥಾದಲ್ಲಿ ಕೂಡ ಈ ಬಗ್ಗೆ ಭಾಷಣ ಮಾಡ ಲಾಗಿದೆ. ಕಿರುಹೊತ್ತಿಗೆ ಪ್ರಕಟಿಸಿ ಹಂಚಲಾಗಿದೆ. ರೇಂಜ್ ಮಟ್ಟದ ಸಭೆಯಲ್ಲಿ ಖತೀಬರಿಗೆ ಸೂಚನೆ ನೀಡಿ ಮಸೀದಿಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದ ಕನಿಷ್ಠ 3 ಜಿಲ್ಲೆಗಳಿಗೆ ಭೇಟಿ ನೀಡುವ ಮೂಲಕ ಮಾದಕ ದ್ರವ್ಯದ ವಿರುದ್ಧ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದ್ದಾರೆ.

ಕುಟುಂಬದ ಹಳಿಯೇ ತಪ್ಪಿತು...!

ಅದೊಂದು ಮಧ್ಯಮ ವರ್ಗದ ಸುಸಂಸ್ಕೃತ ಕುಟುಂಬ. ಎಲ್ಲರೂ ಮೈಮುರಿದು ದುಡಿದು ತಮ್ಮ ಪಾಡಿಗೆ ತಾವಿದ್ದು ಬದುಕು ಸಾಗಿಸುತ್ತಿದ್ದರು. ಹೀಗಿರುವಾಗ ಆ ಕುಟುಂಬದಲ್ಲೇ ಸಜ್ಜನ ಎಂದು ಎಲ್ಲರೂ ಭಾವಿಸಿದ್ದ ಯುವಕನೊಬ್ಬ ಮಾದಕ ದ್ರವ್ಯದ ಜಾಲಕ್ಕೆ ಸಿಲುಕಿದ. ಕೆಲಸ ಮಾಡುವ ಬದಲು ಬೀದಿ ಬೀದಿ ಅಲೆಯತೊ ಡಗಿದ. ಅಷ್ಟೇ ಅಲ್ಲ, ಅವರಿವರ ಮೇಲೆ ಹಲ್ಲೆಗೈದು ಕುಟುಂಬದಿಂದ ಛೀಮಾರಿ ಹಾಕಲ್ಪಟ್ಟ. ಯುವಕನನ್ನು ಮಾದಕ ದ್ರವ್ಯ ಜಾಲದಿಂದ ಬಿಡಿಸಲು ಕೌನ್ಸಿಲಿಂಗ್, ವೈದ್ಯರಿಗೆ ತೋರಿಸುವ ಬದಲು ನೂಲು, ತಾಯಿತದ ಮೊರೆ ಹೋದರು. ಇತ್ತ ಯುವಕನ ಉಪಟಳ ಹೆಚ್ಚಾಯಿತೇ ವಿನ: ಕಡಿಮೆಯಾಗಲಿಲ್ಲ. ಕೆಟ್ಟ ಯುವಕರ ಸಂಘ ಬೆಳೆಸಿದ ಪರಿಣಾಮ ಕೊಲೆ, ಕೊಲೆಯತ್ನ ಇತ್ಯಾದಿ ಪ್ರಕರಣಗಳು ಯುವಕನ ಮೇಲೆ ದಾಖಲಾದವು.

ಇದರಿಂದ ಪೊಲೀಸರು ಯುವಕನ ಮನೆಗೆ ದಾಳಿ ಮಾಡತೊಡಗಿರು. ಇದರಿಂದ ಅಣ್ಣ-ತಮ್ಮಂದಿರು, ತಂದೆ-ತಾಯಿಗೆ ನೆಮ್ಮದಿ ಇಲ್ಲದಂತಾ ಯಿತು. ‘ನೀನು ಊರು ಬಿಟ್ಟು ಹೋಗು ಅಥವಾ ಪೊಲೀಸರೇ ಏನಾದರು ಮಾಡಲಿ’ ಎಂದು ಹೆತ್ತ ತಾಯಿಯೇ ಹೇಳುವಂತಹ ಪರಿಸ್ಥಿತಿ ಇದೀಗ ನಿರ್ಮಾಣವಾಗಿದೆ. ‘ನನ್ನಂತಹ ಸ್ಥಿತಿಗೆ ಯಾರಿಗೂ ಬಾರದಿರಲಿ. ಮಗನಿಂದಾಗಿ ನಮ್ಮ ಕುಟುಂಬದ ನೆಮ್ಮದಿ ಹಾಳಾಯಿತು. ಎಲ್ಲಿಗೆ ಹೋದರೂ ನಮ್ಮನ್ನು ವಕ್ರದೃಷ್ಟಿಯಿಂದ ನೋಡುತ್ತಾರೆ. ಮಗ ಗಾಂಜಾ ವ್ಯಸನಿಯಾಗಿದ್ದಾನೆ ಎಂದು ಗೊತ್ತಾದ ತಕ್ಷಣ ನಾವು ಎಚ್ಚೆತ್ತುಕೊಂಡಿದ್ದರೆ ಇಂತಹ ಸಮಸ್ಯೆ ಎದುರಾಗುತ್ತಿರಲಿಲ್ಲ’ ಎಂದು ಹಾದಿ ತಪ್ಪಿದ ಯುವಕನ ತಾಯಿ ಕಣ್ಣೀರಾಗುತ್ತಾರೆ. ‘ಈಗ ನಿಮ್ಮ ಮಗ ಎಲ್ಲಿ?’ ಎಂದು ಕೇಳಿದರೆ, ವೌನವೇ ಅವರ ಉತ್ತರ.

ಪುನರ್ವಸತಿ ಕೇಂದ್ರ ತೆರೆಯಲು ಸರಕಾರ ನಿರಾಸಕ್ತಿ
ದ.ಕ.ಜಿಲ್ಲೆಯ ಯುವಜನತೆಯನ್ನು ಬಲಿ ಪಡೆಯುತ್ತಿರುವ ‘ಡ್ರಗ್ಸ್’ ಜಾಲಕ್ಕೆ ಸಂಬಂಧಿಸಿದಂತೆ ಸೂಕ್ತ ಚಿಕಿತ್ಸೆ ಮತ್ತು ಕೌನ್ಸಿಲಿಂಗ್ ನೀಡಲು ಸರಕಾರಿ ‘ಮಾದಕ ವ್ಯಸನ ಮುಕ್ತ ಪುನರ್ವಸತಿ ಕೇಂದ್ರ’ದ ಅಗತ್ಯವಿದೆ. ಆದರೆ, ಸರಕಾರ ಈ ನಿಟ್ಟಿನಲ್ಲಿ ಆಸಕ್ತಿ ವಹಿಸುತ್ತಿಲ್ಲ.

ಕಳೆದ ಹಲವು ವರ್ಷಗಳಿಂದ ಜಿಲ್ಲೆಯ ಯುವ ಜನತೆ ಅದರಲ್ಲೂ ನಗರವಾಸಿ ಯುವಕ-ಯುವತಿಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವ್ಯಸನಗಳಿಗೆ ತುತ್ತಾಗುತ್ತಿದ್ದಾರೆ. ಅದರಲ್ಲೂ ಡ್ರಗ್ಸ್‌ನ ಸುಳಿಗೆ ಸಿಲುಕಿದ್ದಾರೆ. ಶಾಲಾ ವಿದ್ಯಾರ್ಥಿಗಳಿಂದ ಹಿಡಿದು 60 ವರ್ಷ ಪ್ರಾಯ ದಾಟಿದವರು ಕೂಡ ಇದರ ಹಿಂದೆ ಬಿದ್ದಿದ್ದಾರೆ. ಆದರೆ, ಇವರಿಗೆ ಸಕಾಲದಲ್ಲಿ ಚಿಕಿತ್ಸೆ ನೀಡುವ, ಕೌನ್ಸಿಲಿಂಗ್ ನೀಡುವ ಸರಕಾರಿ ಕೇಂದ್ರದ ಅಗತ್ಯವಿದೆ. ಈಗಾಗಲೆ ಮಂಗಳೂರಿನ ಕಂಕನಾಡಿಯಲ್ಲಿ ಪ್ರಜ್ಞಾ ಮತ್ತು ಬಜಾಲ್‌ನಲ್ಲಿ ಲಿಂಕ್ ಅಮಲು ಚಿಕಿತ್ಸಾ ಕೇಂದ್ರ ಹಾಗು ಪುತ್ತೂರಿನಲ್ಲೊಂದು ಕೇಂದ್ರವಿದೆ. ಇಲ್ಲಿ ಹೆಚ್ಚಾಗಿ ಮದ್ಯವರ್ಜನಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಮೊದಲ ಬಾರಿಗೆ ಡ್ರಗ್ಸ್ ಜಾಲದೊಳಗೆ ಪ್ರವೇಶಿಸಿದವರಿಗೂ ಆರಂಭಿಕ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಡ್ರಗ್ಸ್ ವ್ಯೆಹಕ್ಕೆ ಸಿಲುಕಿ ಹೊರಬರಲಾಗದೆ ಚಡಪಡಿಸುವವರನ್ನು ಗುಣಪಡಿಸುವಂತಹ ಮತ್ತು ಕೌನ್ಸಿಲಿಂಗ್ ನೀಡುವಂತಹ ಸರಕಾರಿ ಕೇಂದ್ರವಿಲ್ಲದಿರುವುದು ದುರಂತ.

ಅಮಲುಮುಕ್ತ ಸಮಾಜಕ್ಕಾಗಿ ಕಳೆದ ಹಲವು ವರ್ಷದಿಂದ ತನ್ನ ಬದುಕನ್ನೇ ಮುಡಿಪಾಗಿಟ್ಟಿರುವ ಪ್ರಜ್ಞಾ ಕೌನ್ಸಿಲಿಂಗ್‌ನ ಮುಖ್ಯಸ್ಥೆ ಪ್ರೊ. ಹಿಲ್ಡಾ ರಾಯಪ್ಪನ್ ಈ ಕುರಿತು ಮಾತನಾಡುತ್ತಾ, ‘ಡ್ರಗ್ಸ್‌ಗೆ ತುತ್ತಾದವರಿಗೆ ಚಿಕಿತ್ಸೆ ನೀಡಲು ಮಂಗಳೂರು, ದೇರಳಕಟ್ಟೆಯ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಇದೆ. ಆದರೆ ಮಂಗಳೂರಿನಲ್ಲಿ ಸರಕಾರಿ ಚಿಕಿತ್ಸಾ ಕೇಂದ್ರವಿಲ್ಲ. ದ.ಕ.ಜಿಲ್ಲೆಯಲ್ಲಿ ಅದರಲ್ಲೂ ಮಂಗಳೂರಿನಲ್ಲಿ ಡ್ರಗ್ಸ್ ಜಾಲಕ್ಕೆ ಬಲಿಯಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಯುವತಿಯರೂ ಈ ಜಾಲಕ್ಕೆ ಸಿಲುಕಿ ರುವುದು ವಿಪರ್ಯಾಸ. ಇದನ್ನು ಸಂಪೂರ್ಣವಾಗಿ ಮಟ್ಟಹಾಕಲು ಸೂಕ್ತ ಕೇಂದ್ರದ ಅಗತ್ಯವಿದೆ. ಖಾಸಗಿಯವರಿಗೆ ಇದನ್ನು ನಡೆಸಲು ಆರ್ಥಿಕ ಹೊರೆ ಬಿದ್ದೀತು. ಅದಕ್ಕಾಗಿ ಸರಕಾರವೇ ಚಿಕಿತ್ಸಾ ಕೇಂದ್ರ ತೆರೆಯಬೇಕು’ ಎನ್ನುತ್ತಾರೆ.

‘ಇದಕ್ಕೆ ಅಲ್ಪಕಾಲದ ಚಿಕಿತ್ಸೆ ನೀಡಿದರೆ ಸಾಲದು. ಕನಿಷ್ಠ 6 ತಿಂಗಳು ಮತ್ತು ಗರಿಷ್ಠ 2-3 ವರ್ಷ ಬೇಕು. ಅಷ್ಟೇ ಅಲ್ಲ ಡ್ರಗ್ಸ್‌ಗೆ ತುತ್ತಾ ದವರಿಗೆ ಕೌನ್ಸಿಲಿಂಗ್ ನೀಡಲು ನುರಿತ ಸಮಾಲೋಚಕರ ಮತ್ತು ತರಬೇತುದಾರರ ಅಗತ್ಯವಿದೆ. ಅಲ್ಲದೆ ಸೂಕ್ತ ಭದ್ರತೆ ಬೇಕು. ಭ್ರಾಮಕ ಲೋಕದಲ್ಲಿರುವ ಈ ಮಂದಿ ಪೀಠೋಪಕರಣ, ಕಟ್ಟಡಕ್ಕೆ ಹಾನಿ ಮಾಡುವ ಅಪಾಯವೂ ಇದೆ. ಅದಕ್ಕಾಗಿ ಭದ್ರತಾ ಸಿಬ್ಬಂದಿ ಕೂಡ ಬೇಕು. ಜೊತೆಗೆ ಗ್ರಂಥಾಲಯ, ಒಳಾಂಗಣ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಚಿತ್ರಕಲೆ ಇತ್ಯಾದಿಗೂ ಪ್ರೋತ್ಸಾಹ ನೀಡಬೇಕು. ಇವೆಲ್ಲವುಗಳಿಗೆ ಸಾಕಷ್ಟು ಹಣಬೇಕು. ಖಾಸಗಿ ಸಂಸ್ಥೆಗಳು ಇದರ ಖರ್ಚು ಭರಿಸಲು ಹರಸಾಹಸ ಪಡಬೇಕಾದೀತು. ಹಾಗಾಗಿ ಸರಕಾರವೇ ಈ ಬಗ್ಗೆ ಮುತುವರ್ಜಿ ವಹಿಸಬೇಕು. ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಆಸಕ್ತಿ ವಹಿಸಬೇಕು ಎಂದು ಹಿಲ್ಡಾ ರಾಯಪ್ಪನ್ ಅಭಿಪ್ರಾಯಪಡುತ್ತಾರೆ.

ಸೀಮಿತ ಪ್ರದೇಶಗಳ ಸೇರ್ಪಡೆಗೆ ಚಿಂತನೆ

ಮಂಗಳೂರು ಪಾಲಿಕೆಯ ಕುದ್ರೋಳಿ ವಾರ್ಡ್‌ನ 9 ಮೊಹಲ್ಲಾಗಳಲ್ಲೂ ಸಮಿತಿ ಗಾಂಜಾ ಮಾರಾಟದ ವಿರುದ್ಧ ಸಕ್ರಿಯವಾಗಿ ಕಣ್ಗಾವಲು ನಡೆಸುತ್ತಿದೆ. ಇದೀಗ ಬೆಂಗರೆ, ಸುರತ್ಕಲ್ ಸಮೀಪದ ಕೃಷ್ಣಾಪುರ, ಬೋಕ್ಕಪಟ್ಣ, ಬಂದರು, ಕಂಡತ್‌ಪಳ್ಳಿ ಪ್ರದೇಶಗಳಿಂದ ಜನರು ತಮ್ಮನ್ನು ಸಂಪರ್ಕಿಸಿ ಸಮಿತಿಯಲ್ಲಿ ಈ ಪ್ರದೇಶಗಳನ್ನು ಸೇರಿಸಿ ವಿಸ್ತರಣೆ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಆದರೆ, ಸದ್ಯಕ್ಕೆ ಬೊಕ್ಕಪಟ್ಣ, ಬಂದರು ಮತ್ತು ಕಂಡತ್‌ಪಳ್ಳಿ ಪ್ರದೇಶಗಳನ್ನು ಸಮಿತಿಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಸಮಿತಿ ಸಭೆಯನ್ನು ಕರೆದು ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಸಮಿತಿ ತಿಳಿಸಿದೆ.

ಕಾನೂನು ಬಾಹಿರ ಗಾಂಜಾ ಮಾರಾಟದಲ್ಲಿ ತೊಡಗಿದವರನ್ನು ಹಿಡಿದು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸುತ್ತಿದ್ದರೂ ಆರೋಪಿಗಳ ವಿರುದ್ಧ ಕೂಲಂಕಷ ತನಿಖೆ ನಡೆಯುತ್ತಿಲ್ಲ. ಆರೋಪಿಗಳ ಮೇಲೆ ಕಾನೂನಿನಡಿ ಕ್ರಮ ಕೈಗೊಳ್ಳಲು ಮಾತ್ರ ಸೀಮಿತವಾಗಬಾರದು. ಇದರೊಂದಿಗೆ ಆರೋಪಿಗಳ ಕೈಗೆ ಗಾಂಜಾಗಳು ಹೇಗೆ ಸುಲಭದಲ್ಲಿ ಸಿಗುತ್ತಿವೆ, ಎಲ್ಲಿಂದ ಪೂರೈಕೆಯಾಗುತ್ತಿವೆ ಎಂಬಿತ್ಯಾದಿಗಳ ವಿಷಯದಲ್ಲಿ ಪೊಲೀಸರ ತನಿಖೆ ಚುರುಕುಗೊಳ್ಳಬೇಕು. ಹೀಗಾದಲ್ಲಿ ಗಾಂಜಾ ಪೂರೈಕೆಯ ಜಾಡು ಹಿಡಿಯಲು ಮತ್ತು ಅದನ್ನು ಮಟ್ಟಹಾಕಲು ಸಾಧ್ಯವಾಗಬಹುದು ಎನ್ನುವುದು ಸಮಿತಿಯ ಸಲಹೆ.

ಮಾದರಿಯಾದ ಕೆಡುಕು ಮುಕ್ತ ಹೋರಾಟ ಸಮಿತಿ
ಮಂಗಳೂರು ನಗರದ ಬಹುತೇಕ ಕಡೆಗಳಲ್ಲಿ ಅನಧಿಕೃತ ಗಾಂಜಾ ಮಾರಾಟ ಹಾಗೂ ಅವುಗಳಿಗೆ ಬಲಿ ಬೀಳುತ್ತಿರುವ ವಿದ್ಯಾರ್ಥಿಗಳು, ಜನಸಾಮಾನ್ಯರ ಹಿತದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಿರುವ ನಗರದ ಕುದ್ರೋಳಿಯ ನಾಗರಿಕರಿಂದ 2015ರಲ್ಲಿ ಜಿಲ್ಲೆಗೇ ಮಾದರಿಯಾಗುವಂತೆ ಪ್ರಥಮ ಬಾರಿಗೆ ಕೆಡುಕು ಮುಕ್ತ ಹೋರಾಟ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.

ಕುದ್ರೋಳಿ 43ನೆ ವಾರ್ಡ್‌ಗೆ ಸೀಮಿತಗೊಂಡು ಆರಂಭಿಸಲಾಗಿರುವ ಈ ಸಮಿತಿಯು ವಾರ್ಡ್ ವ್ಯಾಪ್ತಿಗೊಳಪಟ್ಟ ನಾಗರಿಕರು, ದೇವಸ್ಥಾನ, ಮಸೀದಿ ಮುಖ್ಯಸ್ಥರನ್ನೊಳಗೊಂಡಂತೆ ಪ್ರಥಮವಾಗಿ ಕುದ್ರೋಳಿ ಯಾದ್ಯಂತ ಬೃಹತ್ ರ್ಯಾಲಿಯನ್ನು ಆಯೋಜಿಸಿದ್ದರು. ಈ ಮೂಲಕ ಅಕ್ರಮ ಗಾಂಜಾ ಮಾರಾಟಗಾರರಿಗೆ ಎಚ್ಚರಿಕೆಯನ್ನು ರವಾನಿಸಲಾಯಿತು. ಗಾಂಜಾ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು.

ಬೃಹತ್ ರ್ಯಾಲಿಯ ಮೂಲಕ ಜನ ಬೆಂಬಲವನ್ನು ಪಡೆದ ಕೆಡುಕು ಮುಕ್ತ ಹೋರಾಟ ಸಮಿತಿಯು ಅಂದಿನಿಂದ ಇಂದಿನವರೆಗೂ ಗಾಂಜಾ ವಿರುದ್ಧ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಗಾಂಜಾ ಮಾರಾಟದ ಕೇಂದ್ರವಾಗಿದ್ದ ಕುದ್ರೋಳಿಯಲ್ಲ್ಲಿ ಪ್ರಥಮವಾಗಿ ಸಮಿತಿಯ ಪದಾಧಿಕಾರಿಗಳು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಅಡ್ಡೆಗಳನ್ನು ಗುರುತಿಸಿ ಅವುಗಳಿಗೆ ದಾಳಿ ನಡೆಸಿ ಅವುಗಳನ್ನು ಮುಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕುದ್ರೋಳಿ 43ನೆ ವಾರ್ಡ್‌ಗೆ ಸೀಮಿತಗೊಂಡ ಈ ಸಮಿತಿಯು ಅಕ್ರಮ ಗಾಂಜಾ ಮಾರಾಟದ ಜಾಡು ಹಿಡಿಯಲು ಮತ್ತು ಅದರ ನಿರ್ಮೂಲನೆಗಾಗಿ ಪಣ ತೊಟ್ಟು ವಾರ್ಡ್‌ನೊಳಗೆ 9 ಮೊಹಲ್ಲಾಗಳನ್ನು ರಚನೆ ಮಾಡಿತು. ಪ್ರತೀ ಮೊಹಲ್ಲಾಗಳಲ್ಲಿ ಮಾಸಿಕ ಸಭೆಗಳನ್ನು ಕೈಗೊಂಡು ಗಾಂಜಾ ಮಾರಾಟ ಅಡ್ಡೆಯ ಬಗ್ಗೆ ಹಾಗೂ ಅದರಲ್ಲಿ ತೊಡಗಿಸಿಕೊಂಡವರ ಬಗ್ಗೆ ಸಭೆಯಲ್ಲಿ ಮಾಹಿತಿಯನ್ನು ಕಲೆ ಹಾಕಲು ಪ್ರಾರಂಭಿಸಿತು. ಇಂತಹ ಅಡ್ಡೆಗೆ ದಾಳಿ ನಡೆಸುವ ಮುನ್ನ ನಾವು ಪೊಲೀಸರಿಗೆ ಮಾಹಿತಿಯನ್ನು ನೀಡುತ್ತೇವೆ. ಅವರು ಕ್ರಮ ಕೈಗೊಳ್ಳದಿದ್ದರೆ ನಾವೇ ದಾಳಿ ನಡೆಸಿ ಗಾಂಜಾ ಮಾರಾಟದಲ್ಲಿ ತೊಡಗಿಸಿಕೊಂಡವರನ್ನು ಹಿಡಿದು ಪೊಲೀಸರಿಗೆ ಹಸ್ತಾಂತರಿಸುತ್ತೇವೆ ಎನ್ನುತ್ತಾರೆ ಸಮಿತಿಯ ಅಧ್ಯಕ್ಷ ಹಾಗೂ ಕುದ್ರೋಳಿ 43ನೆ ವಾರ್ಡ್‌ನ ಕಾರ್ಪೊರೇಟರ್ ಅಬ್ದುಲ್ ಅಝೀಝ್ ಕುದ್ರೋಳಿ.

ಡ್ರಗ್ಸ್ ವಿಷಕ್ಕಿಂತಲೂ ಅಪಾಯಕಾರಿ
ಡ್ರಗ್ಸ್ ಸೇವನೆ ವಿಷ ಸೇವನೆಗಿಂತಲೂ ಅಪಾಯಕಾರಿಯಾಗಿದೆ. ವಿಷ ಸೇವಿಸಿದ ವ್ಯಕ್ತಿ ಒಮ್ಮೆಲೆ ಸಾವನ್ನಪ್ಪಬಹುದು.ಆದರೆ ಡ್ರಗ್ಸ್ ಸೇವನೆಯ ಚಟ ಅಂದರೆ ವ್ಯಕ್ತಿಗೆ ಸ್ಲೋ ಫಾಯಿಸನ್ ನೀಡಿದಂತೆ, ವ್ಯಕ್ತಿ ನಿಧಾನವಾಗಿ ಸಾಯುತ್ತಾನೆ.ಡಗ್ಸ್ ತೆಗೆದು ಕೊಂಡವರು ಯಾರೂ ಬದುಕಿನಲ್ಲಿ ಒಳ್ಳೆಯದಾಗಿಲ್ಲ. ಮನೋರಂಜನೆಗಾಗಿ ಒತ್ತಡ ನಿವಾರಣೆಗಾಗಿ ಎಂದು ಡ್ರಗ್ಸ್ ಮೊರೆ ಹೋದವರಿಗೆ ಯಾರಿಗೂ ಒಳ್ಳೆದಾಗಿಲ್ಲ. ಮಕ್ಕಳು, ಯುವಕರು ಸೇರಿದಂತೆ ಇದರಿಂದ ದೂರ ಉಳಿಯುವ ಬಗ್ಗೆ ನಿರ್ಧಾರ ಮಾಡಬೇಕು ಮನೋರಂಜನೆಗಾಗಿ ಕ್ರೀಡೆ ಹಾಗೂ ಇತರ ಉತ್ತಮ ಹವ್ಯಾಸಗಳಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳಬೇಕು.
- ಭೂಷಣ್ ಗುಲಾಬ್ ರಾವ್ ಬೊರಸೆ

ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.


ಸುಳಿವು ಇದ್ದಲ್ಲಿ ಮಾಹಿತಿ ನೀಡಿ
ನಗರದಲ್ಲಿ ಮಾದಕ ದ್ರವ್ಯ ಬಳಕೆ ತಡೆಗೆ ಪೊಲೀಸ್ ಇಲಾಖೆಯ ಮೂಲಕ ಹಲವು ಜಾಗೃತಿ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕಾನೂನು ಸುವ್ಯವಸ್ಥೆಗೆ ತೊಡಕಾಗುವ ಯಾವುದೇ ಚಟುವಟಿಕೆಗಳ ಬಗ್ಗೆ ಜನರ ಸುರಕ್ಷತೆಗೆ ಸಂಬಂಧಿಸಿದಂತೆ ಪೊಲೀಸ್ ಕಾರ್ಯಾಚರಣೆಗಳು ನಿರಂತರವಾಗಿ ನಡೆಯುತ್ತಿದೆ.ಮಾದಕ ದ್ರವ್ಯ ಮಾರಾಟ,ಬಳಕೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಯಾವುದಾದರು ಸುಳಿವು,ಮಾಹಿತಿ ಇದ್ದಲ್ಲಿ ನಿರ್ಭಯವಾಗಿ ಪೊಲೀಸ್ ಇಲಾಖೆಗೆ ತಿಳಿಸಬಹುದು.ಮಾಹಿತಿ ನೀಡಿದವರ ಬಗ್ಗೆ ಗೌಪ್ಯತೆಯನ್ನು ಕಾಯ್ದಕೊಳ್ಳಲಾಗುವುದು.
-ಶಾಂತರಾಜು,

ಪೊಲೀಸ್ ಉಪ ಆಯುಕ್ತರು, ಮಂಗಳೂರು ಕಮಿಷನರೇಟ್.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿ


2016ರಲ್ಲಿ ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಮಾದಕ ದ್ರವ್ಯಗಳ ಪತ್ತೆಗೆ ಸಂಬಂಧಿಸಿ 16 ಪ್ರಕರಣಗಳು ಪತ್ತೆಯಾಗಿದ್ದವು. ಈ ಪ್ರಕರಣಗಳಲ್ಲಿ ಒಟ್ಟು 38.454 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿತ್ತು. 2017ರಲ್ಲಿ ಕಳೆದ ಎರಡು ತಿಂಗಳಲ್ಲಿ (ಜನವರಿ- ಫೆಬ್ರವರಿ) ಗಾಂಜಾ ಪತ್ತೆಗೆ ಸಂಬಂಧಿಸಿ 9 ಪ್ರಕರಣಗಳು ದಾಖಲಾಗಿದ್ದು, ಒಟ್ಟು 660 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ವರ್ಷ ಪುತ್ತೂರು ನಗರದಲ್ಲಿ ಹೆಚ್ಚಿನ ಗಾಂಜಾ ಪತ್ತೆ ಪ್ರಕರಣಗಳು ಪತ್ತೆಯಾಗಿದ್ದರೆ, ಸುಳ್ಯ, ವಿಟ್ಲ, ಬೆಳ್ಳಾರೆ, ಬೆಳ್ತಂಗಡಿಗಳಲ್ಲೂ ಪ್ರಕರಣಗಳು ದಾಖಲಾಗಿತ್ತು. ಕಳೆದ ಎರಡು ತಿಂಗಳಲ್ಲಿ ಬಂಟ್ವಾಳ, ವಿಟ್ಲ, ಪುತ್ತೂರು, ಬೆಳ್ತಂಗಡಿಗಳಲ್ಲಿ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಮಂಗಳೂರು ಕಮಿಷನರೇಟ್ ವ್ಯಾಪ್ತಿ
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 2015ರಿಂದ 2017ರ ಫೆಬ್ರವರಿ ವರೆಗೆ ಒಟ್ಟು 332 ಪ್ರಕರಣಗಳು ದಾಖಲಾಗಿವೆೆ. ಈ ಪೈಕಿ 432 ಮಂದಿಯನ್ನು ವಿವಿಧ ಪ್ರಕರಣಗಳಲ್ಲಿ ಬಂಧಿಸಲಾಗಿದೆ 29ಮಂದಿಗೆ ಶಿಕ್ಷೆಯಾಗಿದೆ. 206 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿವೆ. 96 ಪ್ರಕರಣಗಳಲ್ಲಿ ಆರೋಪಿಗಳ ತನಿಖೆ ನಡೆಯುತ್ತಿದೆ. ಈ ಪೈಕಿ 2016ರಲ್ಲಿ ಜಿಲ್ಲೆಯಲ್ಲಿ 239 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 304 ಮಂದಿ ಬಂಧನಕ್ಕೊಳಗಾಗಿದ್ದಾರೆ. 2015ರಲ್ಲಿ 49ಪ್ರಕರಣಗಳು ದಾಖಲಾಗಿದ್ದು ಈ ಪೈಕಿ70 ಮಂದಿ ಬಂಧನಕ್ಕೊಳಗಾಗಿದ್ದು ಮೂರು ಮಂದಿ ಶಿಕ್ಷೆಗೊಳಗಾಗಿದ್ದಾರೆ.44ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಈ ವರ್ಷ ಇದುವರೆಗೆ 44 ಪ್ರಕರಣಗಳು ದಾಖಲಾಗಿದ್ದು 4 ಪ್ರಕರಣಗಳ ಬಗ್ಗೆ ವಿಚಾರಣೆ ನಡೆಯುತ್ತಿದೆ. 40 ಪ್ರಕರಣಗಳ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ. 49 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಇಲಾಖೆಯ ವರದಿ ತಿಳಿಸಿದೆ 

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top