ಪತಂಜಲಿ ತುಪ್ಪ ದೇಸಿಯೂ ಅಲ್ಲ?, ಗೋವಿನದ್ದೂ ಅಲ್ಲ?

ಪ್ರಿಯಾಂಕಾ ಪಾಠಕ್- ನಾರಾಯಣ್, 'ಮಿಂಟ್' ಪತ್ರಿಕೆಗೆ ಹಲವು ವರ್ಷಗಳ ಕಾಲ ಧರ್ಮ ಮತ್ತು ವಾಣಿಜ್ಯದ ಬಗ್ಗೆ ವ್ಯಾಪಕವಾಗಿ ವರದಿ ಮಾಡಿದವರು. "ಗಾಡ್‍ಮನ್ ಟು ಟೈಕೂನ್: ದ ಅನ್‍ಟೋಲ್ಡ್ ಸ್ಟೋರಿ ಆಫ್ ಬಾಬಾ ರಾಮ್‍ದೇವ್" ಎಂಬ ತಮ್ಮ ಕೃತಿಯಲ್ಲಿ ಹರಿದ್ವಾರದಲ್ಲಿ ಯೋಗ ಗುರುವಾಗಿದ್ದ ರಾಮ್‍ದೇವ್, ಭಾರತದ ಎರಡನೇ ಅತಿದೊಡ್ಡ, ಕ್ಷಿಪ್ರವಾಗಿ ಬೆಳೆಯುತ್ತಿರುವ ಗ್ರಾಹಕ ಸರಕು ಕಂಪನಿ ಪತಂಜಲಿಯನ್ನು ಹುಟ್ಟುಹಾಕಿ, ನಿರ್ವಹಿಸುವ ಉದ್ಯಮಿಯಾಗಿ ಬೆಳೆದ ಬಗೆಯನ್ನು ವಿವರಿಸಿದ್ದಾರೆ.

ಭಕ್ತಿಪ್ರಧಾನ ವಾಹಿನಿಗಳಾದ ಆಸ್ತಾ ಟಿವಿಯಂಥ ವಾಹಿನಿಗಳಲ್ಲಿ ಪ್ರೈಮ್ ಸ್ಲಾಟ್ ಪಡೆದ ಬಗೆ, 2011ರ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಅವರು ವಹಿಸಿದ ಪಾತ್ರ, ಅವರ ನಿಕಟವರ್ತಿಗಳಾಗಿದ್ದ ರಾಜೀವ್ ದೀಕ್ಷಿತ್ ಹಾಗೂ ಸ್ವಾಮಿ ಯೋಗಾನಂದರ ನಿಗೂಢ ಕೊಲೆ ಸೇರಿದಂತೆ ಅವರ ಸುತ್ತ ಸುತ್ತಿಕೊಂಡಿರುವ ಅಪರಾಧಗಳು, ಬಾಬಾರ ಗುರು ಶಂಕರದೇವ್ ಅವರ ಕಣ್ಮರೆಯಂಥ ವಿಚಾರಗಳನ್ನು ಎಳೆ ಎಳೆಯಾಗಿ ತೆರೆದಿಟ್ಟಿದ್ದಾರೆ.

ಭಾರತದಲ್ಲಿ ಆಯುರ್ವೇದ ವೈದ್ಯಪದ್ಧತಿಯ ಪುನರುತ್ಥಾನಕ್ಕೆ ರಾಮ್‍ದೇವ್ ಕಾರಣ ಎಂದು ಪಾಠಕ್ ಬಣ್ಣಿಸಿದ್ದಾರೆ. ಈ ಪುನರುಜ್ಜೀವನ ಅವರಿಗೆ ದೊಡ್ಡ ಲಾಭ ತಂದುಕೊಟ್ಟಿದೆ. ಪತಂಜಲಿ ಸಮೂಹದ ಆದಾಯ ಇತ್ತೀಚೆಗೆ 10 ಸಾವಿರ ಕೋಟಿ ರೂಪಾಯಿ ದಾಟಿದ್ದು, ದೈತ್ಯ ಕಂಪನಿಗಳೆನಿಸಿದ ಐಟಿಸಿ, ಗೋದ್ರೇಜ್ ಹಾಗೂ ಬ್ರಿಟಾನಿಯಾವನ್ನೂ ಹಿಂದಿಕ್ಕಿದೆ. ರಾಮ್‍ದೇವ್ ಅವರ ವ್ಯಾಪಾರ ಕೇಂದ್ರಿತವಾಗಿರುವುದು ಸ್ವದೇಶಿ ದೃಷ್ಟಿಕೋನದ ಮೇಲೆ. ಪತಂಜಲಿಯ ಉತ್ಪನ್ನಗಳು ದೇಸಿ ಮೂಲಗಳಿಂದ ತಯಾರಾಗಿವೆ ಎಂಬ ತತ್ವವನ್ನು ಆಧರಿಸಿವೆ. ಇವು ಉತ್ತಮ ಆರೋಗ್ಯಕ್ಕೆ ಪ್ರಾಚೀನ ಭಾರತದ ಹಲವು ರಹಸ್ಯಗಳನ್ನು ಅಳವಡಿಸಿಕೊಂಡಿರುವುದು ಮಾತ್ರವಲ್ಲದೇ, ಭಾರತೀಯ ಗ್ರಾಹಕರ ವಿದೇಶಿ ಬಹುಸಂಖ್ಯಾತ ಹಿಡಿತ ಸಡಿಲಗೊಳ್ಳಲು ಕಾರಣವಾಗಿವೆ. ಆದರೆ ಈ ಪ್ರತಿಪಾದನೆಯನ್ನು ಪಾಠಕ್ ನಾರಾಯಣ್ ಅನಾವರಣಗೊಳಿಸಿದ್ದಾರೆ. ಪತಂಜಲಿ ಅಯುರ್ವೇದದ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಕೆ.ಪಾತ್ರಾ ಜತೆಗಿನ ಸಂವಾದದಲ್ಲಿ ಪಾತ್ರಾ ಅವರು, "ರಾಮ್‍ದೇವ್ ಅವರ ದೇಸಿ ಹಸುವಿನ ತುಪ್ಪ ವಾಸ್ತವವಾಗಿ ಹಸುವಿನ ತುಪ್ಪವೇ ಅಲ್ಲ" ಎನ್ನುವುದನ್ನು ಈ ಕೆಳಗಿನ ಸಾರಾಂಶದಲ್ಲಿ ಅವರು ಬಿಂಬಿಸಿದ್ದಾರೆ.

2013ರ ವೇಳೆಗೆ ಪತಂಜಲಿ ಆಯುರ್ವೇದ ಫ್ಯಾಕ್ಟರಿಗಳು 500ಕ್ಕೂ ಹೆಚ್ಚು ಉತ್ಪನ್ನಗಳನ್ನು ಮಥಿಸುತ್ತಿದ್ದವು ಹಾಗು ನೂರಾರು ಹೊಸ ಉತ್ಪನ್ನಗಳ ಪ್ರಯೋಗ ನಡೆಸಲಾಗುತ್ತಿತ್ತು. ಪತಂಜಲಿ ಪ್ರಯೋಗಾಲಯದಲ್ಲಿ 30ಕ್ಕೂ ಹೆಚ್ಚು ವಿಜ್ಞಾನಿಗಳು ಪ್ರತಿದಿನ ಹೊಸ ಆಹಾರ ಉತ್ಪನ್ನ, ಆಯುರ್ವೇದ ಔಷಧಿ ಮತ್ತು ಪ್ರಸಾದನ ಸಾಮಗ್ರಿಗಳ ಅನುಶೋಧನೆಯಲ್ಲಿ ತೊಡಗಿಸಿದ್ದರು. ಹೀಗೆ ಹೊಸ ಉತ್ಪನ್ನಗಳ ಕಿರುಪ್ರವಾಹವೇ ರಾಮ್‍ದೇವ್ ಅವರ ವೈಯಕ್ತಿಕ ವೀಕ್ಷಣೆ ಮತ್ತು ಅಂಗೀಕಾರಕ್ಕಾಗಿ  ಯೋಗಗುರುಗಳ ಕಚೇರಿಗೆ ಹರಿಯುತ್ತಿತ್ತು. ಪತಂಜಲಿಯ ಅಭಿವೃದ್ಧಿ ಪರ್ವಕ್ಕೆ ಅಡಿಗಲ್ಲು ಹಾಕಿದ ಸಿಇಒ ಎಸ್.ಕೆ.ಪಾತ್ರ ಹೇಳುವಂತೆ, "ಹಲವು ಮಂದಿ ಸರಬರಾಜುದಾರರಿಂದ ನಾವು ಜೇನು ಖರೀದಿ ಮಾಡುತ್ತಿದ್ದೆವು. ಅದನ್ನು ಶುದ್ಧೀಕರಿಸಿ, ಸಂಸ್ಕರಿಸಿ, ಪ್ಯಾಕ್ ಮಾಡಿ ನಮ್ಮ ಲೇಬಲ್ ಹಚ್ಚಿ ಮಾರುತ್ತಿದ್ದೆವು. ಪತಂಜಲಿ ಜೇನು ಮಾರುಕಟ್ಟೆಯಲ್ಲಿ ಅತ್ಯಂತ ಅಗ್ಗವಾಗಿದ್ದರಿಂದ ತಕ್ಷಣವೇ ಮಾರುಕಟ್ಟೆಯಲ್ಲಿ ಜನಪ್ರಿಯ ಉತ್ಪನ್ನವಾಯಿತು" ಜೇನಿನ ಯಶಸ್ಸು, ತುಪ್ಪವನ್ನು ಆರಂಭಿಸುವ ಕಲ್ಪನೆಗೆ ಕಾರಣವಾಯಿತು. ಇದು ಭವಿಷ್ಯದಲ್ಲಿ ಪತಂಜಲಿಯನ್ನು ದೊಡ್ಡ ಕಂಪನಿಗಳ ಸಾಲಿಗೆ ಸೇರಿಸುವಲ್ಲಿ ಮಹತ್ವದ ಪಾತ್ರ ವಹಿಸಿತು.

ತುಪ್ಪದ ಉತ್ಪಾದಕರನ್ನು ಗುರುತಿಸಿದಾಗ ಇನ್ನೊಂದು ಪ್ರತಿಸ್ಪರ್ಧಿ ಬ್ರಾಂಡ್‍ಗೆ ಹಿಂದೆ ಕೆಲಸ ಮಾಡುತ್ತಿದ್ದ ಗೋರ್ವಧನ್ ಎಂಬ ವ್ಯಕ್ತಿಯ ಸಂಸ್ಥೆಯನ್ನು ಮೊದಲು ಪಾತ್ರಾ ಮೊದಲು ಖರೀದಿಸಿದರು. ಅದಕ್ಕೆ ವ್ಯಾಪಕ ಬೇಡಿಕೆಯಿದೆ ಎಂದು ತಿಳಿದುಕೊಳ್ಳಲು ಅವರಿಗೆ ಹೆಚ್ಚು ಸಮಯ ಹಿಡಿಯಲಿಲ್ಲ. "ಕೆಲವೇ ದಿನಗಳಲ್ಲಿ ನಮಗೆ ಉತ್ಪಾದನೆ ವಿಸ್ತರಿಸುವ ಅಗತ್ಯ ಎದುರಾಯಿತು. ನಾವು ಟ್ರಕ್‍ಗಟ್ಟಲೆ ಬಿಳಿ ಬೆಣ್ಣೆ ಖರೀದಿಸಿದೆವು, ಮೊದಲು ಕೆಲವು ನೂರು ಟನ್‍ನಷ್ಟು ತುಪ್ಪ ಉತ್ಪಾದಿಸಲಾಯಿತು. ಇದೀಗ ರಾಮ್‍ದೇವ್ 100 ಟನ್ ತುಪ್ಪವನ್ನು ಪ್ರತಿದಿನ ಉತ್ಪಾದಿಸುತ್ತಿದ್ದಾರೆ. ನೀವು ಕಲ್ಪಿಸಿಕೊಳ್ಳಲು ಸಾಧ್ಯವೇ? ಪ್ರತಿ ಬಾಟಲಿ ತುಪ್ಪ ಅವರಿಗೆ 50 ರಿಂದ 60 ರೂಪಾಯಿ ಲಾಭ ತಂದುಕೊಡುತ್ತದೆ" ಎಂದು ಪಾತ್ರಾ ಹೇಳಿದ್ದಾರೆ.

"ಆರಂಭದಲ್ಲಿ ಹಸುವಿನ ತುಪ್ಪ ಎಂದು ಪತಂಜಲಿ ಮಾರುತ್ತಿದ್ದ ತುಪ್ಪ ಹಸುವಿನ ತುಪ್ಪವಾಗಿರಲಿಲ್ಲ. ವಾಸ್ತವವಾಗಿ ಅದು ಬಿಳಿ ಬೆಣ್ಣೆಯಿಂದ ಮಾಡಿದ್ದಾಗಿತ್ತು. ಅಂದರೆ ಕೇವಲ ಹಸು ಮಾತ್ರವಲ್ಲದೇ ವಿವಿಧ ಪ್ರಾಣಿಗಳ ಹಾಲಿನಿಂದ ಉತ್ಪಾದಿಸಿದ ಬೆಣ್ಣೆಯಿಂದ ತುಪ್ಪ ತಯಾರಿಸಲಾಗುತ್ತಿತ್ತು. ಕರ್ನಾಟಕ ಹಾಗೂ ಮಹಾರಾಷ್ಟ್ರ ಸೇರಿದಂತೆ ದೇಶದ ಮೂಲೆಮೂಲೆಗಳಲ್ಲಿ ಸಣ್ಣ ಹಾಗೂ ಅತಿಸಣ್ಣ ಉತ್ಪಾದಕರಿಂದ ಖರೀದಿಸಲಾಗುತ್ತಿತ್ತು. (ಉತ್ಪಾದನಾ ಪ್ರಕ್ರಿಯೆಯಲ್ಲಿ ಬಿಳಿ ಬೆಣ್ಣೆ, ತುಪ್ಪವನ್ನು ನೀಡಿದರೂ, ಅದು ಅಷ್ಟೊಂದು ಪೌಷ್ಟಿಕವಲ್ಲ. ಬಿಳಿ ಬೆಣ್ಣೆ ಸಾಮಾನ್ಯವಾಗಿ ಬೆಣ್ಣೆಯ ಕೊಬ್ಬಿನ ಅಂಶ ಹಾಗೂ ಹಾಲಿನ ಘನ ಕಣಗಳನ್ನೂ ಒಳಗೊಂಡಿರುತ್ತದೆ. ತುಪ್ಪವು ಕೇವಲ ಬೆಣ್ಣೆಯ ಜಿಡ್ಡಿನ ಅಂಶವನ್ನಷ್ಟೇ ಒಳಗೊಂಡಿದೆ. ಬಿಳಿ ಬೆಣ್ಣೆಯನ್ನು ಸಂಪೂರ್ಣವಾಗಿ ಕುದಿಸಿ ಹಾಲಿನ ಘನ ಕಣಗಳು ಕರಗುವಂತೆ ಮತ್ತು ಹರಳುಗಟ್ಟುವಂತೆ ಮಾಡಿದರೆ ನೀವು ತುಪ್ಪ ಪಡೆಯುತ್ತೀರಿ. ಈ ತುಪ್ಪವು ಲ್ಯಾಕ್ಟೋಸ್ ಹಾಗೂ ಕಸೀನ್ ಮುಕ್ತವಾಗಿರುತ್ತದೆ. ಇದು ಸ್ಥಿರ ಮಾತ್ರವಲ್ಲದೇ, ಪೌಷ್ಟಿಕ- ಸಮೃದ್ಧ ಕೊಬ್ಬನ್ನು ಒಳಗೊಂಡಿರುತ್ತದೆ ಹಾಗೂ ಉತ್ತಮ ಕೊಲೆಸ್ಟ್ರಾಲ್‍ನ ಮೂಲವೂ ಆಗುತ್ತದೆ).

ಉದಾಹರಣೆಗೆ ನಂದಿನಿ ಹಾಲಿನ ಬ್ರಾಂಡ್ ಮಾಲಕತ್ವ ಹೊಂದಿರುವ ಕೆಎಂಎಫ್, ರಾಮ್‍ದೇವ್‍ಗೆ ಬಿಳಿ ಬೆಣ್ಣೆ ಪೂರೈಸುವ ಅತಿದೊಡ್ಡ ಸರಬರಾಜುದಾರ ಕಂಪನಿಗಳ ಪೈಕಿ ಒಂದು. ಕರ್ನಾಟಕದ 22 ಸಾವಿರ ಹಳ್ಳಿಗಳಲ್ಲಿ 23 ಲಕ್ಷ ಹಾಲು ಉತ್ಪಾದಕರಿಂದ ಅದು ಹಾಲು ಖರೀದಿಸುತ್ತದೆ ಹಾಗೂ ಹಸು, ಎಮ್ಮೆ ಅಥವಾ ಆಡಿನ ಹಾಲು ಪ್ರತ್ಯೇಕಿಸುವುದಿಲ್ಲ.

"ಆದ್ದರಿಂದ ರಾಮ್‍ದೇವ್ ಅವರ ಫ್ಯಾಕ್ಟರಿ ತಲುಪುವ ಬೆಣ್ಣೆ ಕೇವಲ ಹಸುವಿನ ಹಾಲಿನಿಂದ ಪಡೆದ ಬೆಣ್ಣೆಯಾಗಿರದೇ, ಎಮ್ಮೆ ಹಾಗೂ ಆಡಿನ ಹಾಲಿನ ಬೆಣ್ಣೆಯನ್ನೂ ಒಳಗೊಂಡಿರುತ್ತದೆ. ರಾಮ್‍ದೇವ್ ಇದನ್ನು ತುಪ್ಪವಾಗಿ ಮಾಡಲು ಬಿಳಿಬೆಣ್ಣೆಗೆ ಕೆಲ ಗಿಡಮೂಲಿಕೆಗಳನ್ನು ಸೇರಿಸುತ್ತಾರೆ, "ರಾಮ್‍ದೇವ್ ಪ್ರತಿಪಾದಿಸುವ ಹಸುವಿನ ತುಪ್ಪ... ಆದರೆ ಯಾರಿಗೆ ಗೊತ್ತು? ಅದು ಹಸುವಿನ ತುಪ್ಪವೇ ಅಥವಾ ಎಮ್ಮೆ ತುಪ್ಪವೇ ಅಥವಾ ಆಡಿನ ತುಪ್ಪವೇ?..ಸ್ವತಃ ರಾಮ್‍ದೇವ್ ಅವರಿಗೂ ಗೊತ್ತಿಲ್ಲ!. ಅವರಿಗೆ ಗೊತ್ತಾಗಲು ಸಾಧ್ಯವೂ ಇಲ್ಲ! ಆದರೆ ಅಲ್ಲಿ 1,500 ಕೋಟಿ ರೂಪಾಯಿಯ ವ್ಯವಹಾರ ಇದೆ" ಎಂದು ಪಾತ್ರಾ ವಿವರಿಸಿದ್ದಾರೆ.

ರಾಮ್‍ದೇವ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ದೇಸಿ ಹಸುವಿನ ತುಪ್ಪ ಎಂದು ಬಿಂಬಿಸುತ್ತಾರೆ. ಇಲ್ಲಿ ಹಾಲಿನ ಮೂಲದ ಭಿನ್ನತೆ ಮುಖ್ಯವಾಗುತ್ತದೆ ಹಾಗೂ ಆರೋಗ್ಯದ ಮೇಲೆ ಇದು ಪರಿಣಾಮ ಬೀರುತ್ತದೆ. ನ್ಯೂಝಿಲೆಂಡ್‍ನ ಲಿಂಕೋನ್ ವಿಶ್ವವಿದ್ಯಾನಿಲಯದ ಕೃಷಿ ನಿರ್ವಹಣೆ ಮತ್ತು ಕೃಷಿ ವ್ಯವಹಾರ ಪ್ರೊಫೆಸರ್ ಮತ್ತು ಡೆವಿಲ್ ಇನ್ ದ ಮಿಲ್ಕ್: ಇಲ್‍ನೆಸ್, ಹೆಲ್ತ್ ಅಂಡ್ ಪೊಲಿಟಿಕ್ಸ್ ಆಫ್ ಎ1, ಎ2 ಮಿಲ್ಕ್" ಲೇಖಕ ಕೀತ್ ವುಡ್‍ಫೋರ್ಡ್ ಹೇಳುವಂತೆ, "ನಾವು ಕುಡಿಯುವ ಹಾಲು ಮತ್ತು ಮಧುಮೇಹ, ಹೃದ್ರೋಗ, ಆಟಿಸಂ ಹಾಗೂ  ಮನೋವಿಕಾರಕ್ಕೆ ಸ್ಪಷ್ಟ ಸಂಬಂಧವಿದೆ. ಮಿಶ್ರ ತಳಿ ಹಸುಗಳಾದ ಜೆರ್ಸಿಯಂಥ ಹಸುವಿನ ಹಾಲು ಎ1 ಬೆಟಾ-ಕೆಸಿನ್ ಎಂಬ ಅಂಶವನ್ನು ಹೊಂದಿದೆ. ಇದು ಜೀರ್ಣವಾದಾಗ ಮಾನವನ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇನ್ನೊಂದೆಡೆ ಭಾರತದ ದೇಸಿ ಹಸುಗಳು ಸೇರಿದಂತೆ ಏಷ್ಯಾದ ಪಶುಗಳ ಹಾಲಿನಲ್ಲಿ ಎ2 ಪ್ರೊಟೀನ್ ಇರುತ್ತದೆ. ಇದು ಮಾನವನ ಬಳಕೆಗೆ ಸುರಕ್ಷಿತ.

ಇಷ್ಟಾಗಿಯೂ ರಾಮ್‍ದೇವ್ "ದೇಸಿ ಹಸುವಿನ ತುಪ್ಪ" ಎಂಬ ಹೆಸರಿನಲ್ಲಿ ಮಾರಾಟ ಮಾಡುವ ತುಪ್ಪ ದೇಸಿ ಎನ್ನುವ ಖಾತ್ರಿ ಹೊಂದಿಲ್ಲ ಮಾತ್ರವಲ್ಲದೇ ಅದು ಹಸುವಿನ ತುಪ್ಪ ಎನ್ನುವ ಖಾತ್ರಿಯೂ ಇಲ್ಲ.

ರಾಮ್‍ದೇವ್ ಅವರ ದೃಷ್ಟಿಯಲ್ಲಿರುವುದು, ಸಾಮಾನ್ಯ ಭಾರತೀಯ ಬೆಳಗ್ಗೆಯಿಂದ ಸಂಜೆಯವರೆಗೂ ಬಳಸುವ ಪ್ರತಿಯೊಂದು ಉತ್ಪನ್ನವನ್ನೂ ಪತಂಜಲಿ ಉತ್ಪಾದಿಸಬೇಕು ಎನ್ನುವುದು. ಪತಂಜಲಿ ಆಯುರ್ವೇದ ಉಪ್ಪನ್ನೂ ಉತ್ಪಾದಿಸುತ್ತಿದೆ. ಉಪ್ಪಿನ ಉದ್ಯಮ ದೇಶದಲ್ಲಿ 10 ಸಾವಿರ ಕೋಟಿ ವಹಿವಾಟಿನ ಸಂಘಟಿತ ಉದ್ಯಮ. ಪಾತ್ರಾ ಅವರು ಸಿಇಒ ಆಗಿದ್ದ ಅವಧಿಯಲ್ಲಿ ಪತಂಜಲಿ ಆಯುರ್ವೇದ, ಉಪ್ಪು ಉತ್ಪಾದಕ ಗುಜರಾತ್ ಜತೆ ಹೊಂದಾಣಿಕೆ ಮಾಡಿಕೊಂಡಿದೆ. ರಾಮ್‍ದೇವ್ ಅದನ್ನು ಸಗಟು ಪ್ರಮಾಣದಲ್ಲಿ ಖರೀದಿಸಿ, ಅಯೋಡಿನ್ ಸೇರಿಸಿ, ಪ್ಯಾಕ್‍ಮಾಡಿ ಮಾರಾಟ ಮಾಡುತ್ತದೆ. ಇಂದು ಒಂದು ಕೆ.ಜಿ. ಪ್ಯಾಕೆಟ್ ಟಾಟಾ ಉಪ್ಪಿಗೆ 20 ರೂಪಾಯಿ ಇದ್ದರೆ, ಆಶೀರ್ವಾದ್ 18, ಸಫೋಲಾ 31 ಹಾಗೂ ಪತಂಜಲಿ 12 ರೂಪಾಯಿಗೆ ಮಾರಾಟ ಮಾಡುತ್ತಿವೆ.
ಆದ್ದರಿಂದ ಏನವರ ರಹಸ್ಯ? ಪಾತ್ರಾ ಹೇಳುವಂತೆ, "ಮಾರುಕಟ್ಟೆ ದರದ ಬಗ್ಗೆ ಬಾಬಾ ತಲೆ ಕೆಡಿಸಿಕೊಳ್ಳುವುದಿಲ್ಲ. ಯಾವುದೇ ಬೆಲೆ ನಿಗದಿಯಲ್ಲೂ ಅವರ ನಿರ್ಧಾರವೇ ಅಂತಿಮ. ಕೆಲ ವಸ್ತುಗಳ ಉತ್ಪಾದನಾ ವೆಚ್ಚವನ್ನಷ್ಟೆ ಅವರು ಕೇಳುತ್ತಾರೆ. ಬಳಿಕ ಸಣ್ಣ ಪ್ರಮಾಣದ ಲಾಭದಲ್ಲಿ ಅದನ್ನು ಮಾರಾಟ ಮಾಡಬಯಸುತ್ತಾರೆ"

"ಹಣದ ಬಗ್ಗೆ ಅವರು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ತಮ್ಮದೇ ಪರಂಪರೆ ಬಗ್ಗೆ ಅವರು ಯೋಚಿಸುತ್ತಾರೆ. ಅವರ ಲಾಭದ ಪ್ರಮಾಣ ಅತ್ಯಲ್ಪ. ಔಪಚಾರಿಕ ಉದ್ದಿಮೆಗಳಿಗೆ ತೆರಿಗೆ ಪಾವತಿಸಿದ ಬಳಿಕ ಶೇಕಡ 15ರಷ್ಟು ಲಾಭ ಉಳಿಯುವುದು ತೀರಾ ಕಡಿಮೆ. ಅಂಥ ಸಾಧನೆ ಬಗ್ಗೆ ಹೂಡಿಕೆದಾರರು ತೃಪ್ತಿ ಹೊಂದಿರುವುದಿಲ್ಲ...ರಾಮದೇವ್ ಅವರಿಗೆ ಅಂಥ ಇತಿಮಿತಿ ಇಲ್ಲ" ಎಂದು ಗುಣೇಂದ್ರ ಕಪೂರ್ ಹೇಳುತ್ತಾರೆ.

(ಇದು ಜಗರಂಟ್ ಬುಕ್ಸ್ ಪ್ರಕಟಿಸಿರುವ ಪ್ರಿಯಾಂಕಾ ಪಾಠಕ್-ನಾರಾಯಣ್ ಅವರ "ಗಾಡ್‍ಮನ್ ಟೂ ಟೈಕೂನ್: ದ ಅನ್‍ಟೋಲ್ಡ್ ಸ್ಟೋರಿ ಆಫ್ ಬಾಬಾ ರಾಮ್‍ದೇವ್" ಕೃತಿಯ ಭಾಗ. ಈ ಪುಸ್ತಕಗಳು ಮಳಿಗೆಗಳಲ್ಲಿ ಮತ್ತು www.juggernaut.in ಲಭ್ಯ.)

ಕೃಪೆ: http://www.caravanmagazine.in

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top