ಹಾವುಗಳು ಮಸಾಜ್ ಮಾಡುವ ಈ ಸ್ಪಾಗಳ ಬಗ್ಗೆ ಗೊತ್ತೇ?
ಆಧುನಿಕ ಯುಗದ ಸ್ಪಾಗಳು ಜನಸಾಮಾನ್ಯರಿಗೆ ದುಬಾರಿಯೆನಿಸಬಹುದು. ಆದರೆ ಇವು ಮಸಾಜ್ ಮತ್ತು ವಿವಿಧ ಚಿಕಿತ್ಸೆಗಳ ಮೂಲಕ ತಮ್ಮ ಗ್ರಾಹಕರಿಗೆ ಹೊಸ ಹುರುಪು, ಚೈತನ್ಯ ಒದಗಿಸುತ್ತವೆ ಎನ್ನುವುದು ಸುಳ್ಳಲ್ಲ. ಕಾಲಕ್ಕೆ ತಕ್ಕಂತೆ ಈ ಮಸಾಜ್ಗಳು ಮತ್ತು ಚಿಕಿತ್ಸೆಗಳೂ ಬದಲಾಗುತ್ತಿರುತ್ತವೆ. ಇವುಗಳ ನಡುವೆಯೇ ಹಾವುಗಳನ್ನೂ ಮಸಾಜ್ ಮಾಡಲು ಬಳಸಲಾಗುತ್ತಿದೆ. ಇಂಡೋನೇಷ್ಯಾ ಮತ್ತು ಥೈಲಂಡ್ಗಳಲ್ಲಿ ಇಂತಹ ಸ್ಪಾಗಳಿದ್ದು, ಹಾವುಗಳು ಮತ್ತು ಹೆಬ್ಬಾವುಗಳನ್ನು ಬಳಸಿ ಮಾಡಲಾಗುವ ಮಸಾಜ್ಗೆ ಅಲ್ಲಿಯ ಜನರು ಮರುಳಾಗಿದ್ದಾರೆ. ಹೀಗಾಗಿ ಅಲ್ಲಿ ಇಂತಹ ಸ್ಪಾ ಕೇಂದ್ರಗಳಲ್ಲಿ ಗ್ರಾಹಕರ ಸಂದಣಿಯೇ ನೆರೆದಿರುತ್ತದೆ.
ಇಲ್ಲಿ ಗ್ರಾಹಕರನ್ನು ಅವಲಂಬಿಸಿ ವಿವಿಧ ಗಾತ್ರಗಳ, ಜಾತಿಗಳ ಹಾವುಗಳನ್ನು ಮಸಾಜ್ ಮಾಡಲು ಬಳಸಲಾಗುತ್ತದೆ. ಇವು ವಿಷಪೂರಿತವಲ್ಲ. ಇವುಗಳ ವಿಷವನ್ನು ಮೊದಲೇ ಸಂಪೂರ್ಣವಾಗಿ ಹೊರತೆಗೆದಿರುತ್ತಾರೆ. ಈ ಹಾವುಗಳು ಗ್ರಾಹಕರ ಶರೀರದ ತುಂಬೆಲ್ಲ ನಿಧಾನವಾಗಿ ತೆವಳುತ್ತ ಮಸಾಜ್ ಮಾಡುತ್ತವೆ. ಇದು ಈವರೆಗಿನ ಅತ್ಯುತ್ತಮ ಮಸಾಜ್ ವಿಧಾನವಾಗಿದೆ ಎಂದು ಸಮೀಕ್ಷೆಯೊಂದು ಹೇಳಿದೆ.
ಹಾವುಗಳಿಂದ ಮಸಾಜ್ ವೇಳೆ ಗ್ರಾಹಕರಿಗೆ ಕೆಲವೇ ನಿಮಿಷಗಳಲ್ಲಿ ತಾಜಾ ಆದ ಅನುಭವವಾಗುತ್ತದೆ. ಅಲ್ಲದೆ ಅದು ಶರೀರದ ನೋವುಗಳನ್ನೂ ನಿವಾರಿಸುತ್ತದೆ. ಈ ಮಸಾಜ್ ಇಡೀ ದೇಹದ ಜೊತೆಗೆ ಮಿದುಳಿಗೂ ಚೇತೋಹಾರಿ ಅನುಭವವನ್ನು ನೀಡುತ್ತದೆ.
ಇಂಡೋನೇಷ್ಯಾ ಮತ್ತು ಥೈಲಂಡ್ಗಳಲ್ಲಿ ಜನಪ್ರಿಯವಾಗಿರುವ ಹಾವುಗಳಿಂದ ಮಸಾಜ್ ಪದ್ಧತಿ ಈಗ ನಿಧಾನವಾಗಿ ಇತರ ದೇಶಗಳಿಗೂ ವ್ಯಾಪಿಸುತ್ತದೆ. ಫಿಲಿಪ್ಪೀನ್ಸ್ನ ಸೆಬು ನಗರದಲ್ಲಿರುವ ಮೃಗಾಲಯವೊಂದು ಈ ಮಸಾಜ್ನ್ನು ನೀಡುತ್ತಿದ್ದು, ಇಲ್ಲಿ ಜನರು ಸಾಲುಗಟ್ಟಿ ನಿಲ್ಲುತ್ತಾರೆ. ಸ್ಪಾಗಳಲ್ಲಿ ಇದು ತುಂಬ ದುಬಾರಿಯಾಗಿದ್ದರೆ ಇಲ್ಲಿ ಮಾತ್ರ ಸಂಪೂರ್ಣವಾಗಿ ಉಚಿತವಾಗಿದೆ!
ಈ ಮಸಾಜ್ಗೆ ಹೆಚ್ಚಾಗಿ ಹೆಬ್ಬಾವುಗಳನ್ನು ಬಳಸಲಾಗುತ್ತಿದ್ದು, ಅವು ಕನಿಷ್ಠ 250 ಕೆ.ಜಿ. ತೂಕ ಹೊಂದಿರುತ್ತವೆ. ಒಮ್ಮೆ ಮಸಾಜ್ ಆರಂಭವಾಯಿತೆಂದರೆ ಪಾರಾಗು ವಂತಿಲ್ಲ. ಈ ಹೆಬ್ಬಾವುಗಳು ಶರೀರದ ಮೇಲೆ ಮೆಲ್ಲನೆ ತೆವಳುವ ಜೊತೆಗೆ ನಾಲಿಗೆಯನ್ನೂ ಹೊರಳಾಡಿಸುವುದರಿಂದ ಕಚಗುಳಿಯೂ ಆಗುತ್ತಿರುತ್ತದೆ. ಈ ಮಸಾಜ್ ಪಡೆಯುವಾಗ ಒಂದು ನಿರ್ಬಂಧವನ್ನು ಕಡ್ಡಾಯವಾಗಿ ಪಾಲಿಸಬೇಕಿದ್ದು, ಧೈರ್ಯಶಾಲಿಗಳಿಗೆ ಮಾತ್ರ ಇದು ಸಾಧ್ಯ. ಮಸಾಜ್ ಆರಂಭಗೊಂಡ ಬಳಿಕ ಗ್ರಾಹಕರು ಗಾಬರಿಗೊಂಡು ಕೂಗುವಂತಿಲ್ಲ, ಹಾಗೇನಾದರೂ ಮಾಡಿದರೆ ಶರೀರದ ಕಂಪನಗಳನ್ನು ಗ್ರಹಿಸುವ ಹಾವುಗಳು ಗ್ರಾಹಕರನ್ನು ತಮ್ಮ ಆಹಾರ ಅಥವಾ ತಮ್ಮ ಮೇಲೆ ದಾಳಿ ಮಾಡಲು ಬಂದವರು ಎಂದು ತಿಳಿಯುವ ಅಪಾಯವಿದೆ!