ಈ ಹಬ್ಬಗಳ ಸಂದರ್ಭದಲ್ಲಿ ಕಾರು ಖರೀದಿಸುತ್ತೀರಾ...?
ವಾಹನ ಸಾಲಗಳ ಈ ಮಹತ್ವದ ಅಂಶಗಳು ಗಮನದಲ್ಲಿರಲಿ
ಕಾರಿನಂತಹ ದೊಡ್ಡ ಖರೀದಿಗಳಿಗಾಗಿ ಜನರು ಹಬ್ಬಗಳ ಋತುವನ್ನೇ ಕಾಯುತ್ತಿರು ತ್ತಾರೆ. ಏಕೆಂದರೆ ಸಾಮಾನ್ಯವಾಗಿ ಈ ಸಂದರ್ಭಗಳಲ್ಲಿ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ತಮ್ಮ ಕಾರು ಸಾಲಗಳ ಮೇಲಿನ ಬಡ್ಡಿದರಗಳನ್ನು ಇಳಿಸುತ್ತವೆ, ಅಷ್ಟೇ ಏಕೆ....ಸಂಸ್ಕರಣ ಶುಲ್ಕ ಮನ್ನಾದಂತಹ ಕೊಡುಗೆಗಳನ್ನೂ ನೀಡುತ್ತವೆ.
ಆದರೆ ಹೆಚ್ಚಿನವರು ಕಾರು ಸಾಲ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳುವ ಅಥವಾ ವಿವಿಧ ಬ್ಯಾಂಕುಗಳ ಯೋಜನೆಗಳನ್ನು ಹೋಲಿಸಿ ನೋಡುವ ಗೋಜಿಗೆ ಹೋಗುವುದಿಲ್ಲ. ಸಮಯದ ಅಭಾವವೂ ಇದಕ್ಕೆ ಕಾರಣವಾಗಿರಬಹುದು. ಹೀಗಾಗಿ ಈ ಬಾರಿಯ ದೀಪಾವಳಿಗೆ ಕಾರು ಖರೀದಿಸುವ ಯೋಚನೆಯೇನಾದರೂ ನಿಮ್ಮದಾಗಿದ್ದರೆ ಸಾಲ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಈ ಕೆಳಗಿನ ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಿ.
ಡೀಲರ್ ಮೂಲಕ ಸಾಲ ಸೌಲಭ್ಯ
ಸಾಮಾನ್ಯವಾಗಿ ಡೀಲರ್ಗಳು ತಮ್ಮ ಗ್ರಾಹಕರಿಗೆ ತಮ್ಮದೇ ಆದ ಸಾಲ ಸೌಲಭ್ಯವನ್ನು ಒದಗಿಸುತ್ತಾರೆ. ಸಾಲಕ್ಕಾಗಿ ಬ್ಯಾಂಕ್ಗಳ ಮೆಟ್ಟಿಲು ಹತ್ತಿಳಿಯುವ ಪ್ರಮೇಯ ತಪ್ಪುವುದ ರಿಂದ ಗ್ರಾಹಕರಿಗೂ ಇದು ಅನುಕೂಲಕರವಾಗಿದೆ. ಹೆಚ್ಚಿನ ಡೀಲರ್ಗಳು ಹಣಕಾಸು ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ತಮ್ಮ ಶೋರೂಮ್ಗಳಲ್ಲಿಯೇ ಸಾಲವನ್ನು ಒದಗಿಸುತ್ತಾರೆ.
ಆದರೆ ಇಂತಹ ಸಾಲವನ್ನು ಆಯ್ದುಕೊಳ್ಳುವ ಮುನ್ನ ನಿಮ್ಮ ಎಚ್ಚರಿಕೆಯಲ್ಲಿ ನೀವಿರಬೇಕು. ಡೀಲರ್ ಎಲ್ಲ ಬ್ಯಾಂಕ್ಗಳೊಂದಿಗೆ ಒಡಂಬಡಿಕೆ ಹೊಂದಿಲ್ಲದಿರಬ ಹುದು. ಆತ ತನ್ನ ವ್ಯವಹಾರವಿರುವ ಅಥವಾ ತನಗೆ ಹೆಚ್ಚಿನ ಕಮಿಷನ್ ನೀಡುವ ಬ್ಯಾಂಕಿನ ಸಾಲವನ್ನೇ ನಿಮಗೆ ಗಂಟು ಹಾಕಬಹುದು. ಹೀಗಾಗಿ ಡೀಲರ್ ನೀಡುವ ಆಫರ್ನ್ನು ಇತರ ಬ್ಯಾಂಕ್ಗಳು ಅಥವಾ ಆನ್ ಲೈನ್ ಮಾರುಕಟ್ಟೆಗಳಲ್ಲಿ ಹೋಲಿಸಿದರೆ ಕಡಿಮೆ ಬಡ್ಡಿ ಮತ್ತು ಉತ್ತಮ ಷರತ್ತುಗಳಿರುವ ಸಾಲ ಯೋಜನೆಗಳು ನಿಮ್ಮ ಕಣ್ಣಿಗೆ ಬೀಳಬಹುದು.
ಬಡ್ಡಿದರ
ಕಾರು ಸಾಲಗಳಿಗೆ ವಿಧಿಸಲಾಗುವ ಬಡ್ಡಿಯನ್ನು ಕೂಲಂಕಶವಾಗಿ ತಿಳಿದುಕೊಳ್ಳುವುದು ಅತ್ಯಂತ ಮುಖ್ಯವಾದ ಮಾನದಂಡಗಳಲ್ಲೊಂದಾಗಿದೆ. ಹಣಕಾಸು ಸಂಸ್ಥೆಗಳು ಸ್ಥಿರ ಅಥವಾ ಚರ ಮತ್ತು ಫ್ಲಾಟ್ ಅಥವಾ ಕಡಿಮೆಯಾಗುತ್ತ ಹೋಗುವ ಬಡ್ಡಿದರಗಳನ್ನು ಹೊಂದಿರುತ್ತವೆ.
ಸ್ಥಿರ ಅಥವಾ ಚರ ಬಡ್ಡಿದರ: ಬ್ಯಾಂಕುಗಳ ಸ್ಥಿರ ಮತ್ತು ಚರ ಬಡ್ಡಿದರಗಳು ಅವುಗಳ ಎಂಸಿಎಲ್ಆರ್ನೊಂದಿಗೆ ತಳುಕು ಹಾಕಿಕೊಂಡಿರುತ್ತವೆ. ಬಡ್ಡಿ ಪಾವತಿಯಲ್ಲಿ ನಿರ್ದಿಷ್ಟತೆ ಯನ್ನು ಬಯಸುವವರಿಗೆ ನಿಗದಿತ ದರ ಉತ್ತಮ ಆಯ್ಕೆಯಾಗಿದೆ. ಭವಿಷ್ಯದಲ್ಲಿ ಬಡ್ಡಿದರಗಳು ಇಳಿಯುವ ನಿರೀಕ್ಷೆ ಹೊಂದಿರುವವರು ಚರ ದರವನ್ನು ಆಯ್ಕೆ ಮಾಡಿಕೊಳ್ಳ ಬಹುದು. ಸಾಮಾನ್ಯವಾಗಿ ಬ್ಯಾಂಕೊಂದು ಸ್ಥಿರ ಅಥವಾ ಚರ...ಹೀಗೆ ಒಂದೇ ವಿಧದ ಬಡ್ಡಿದರವನ್ನು ಹೊಂದಿರುತ್ತದೆ.
ಹೆಚ್ಚಿನ ಬ್ಯಾಂಕ್ಗಳು ಎಲ್ಲ ಸಾಲಗಾರರಿಗೆ ಸ್ಟಾಂಡರ್ಡ್ ಬಡ್ಡಿದರವನ್ನೇ ವಿಧಿಸುತ್ತವೆ ಯಾದರೂ ಬ್ಯಾಂಕ್ ಆಫ್ ಬರೋಡಾ ಮಾತ್ರ ಗ್ರಾಹಕರ ಸಿಬಿಲ್ ಅಂಕಗಳನ್ನು ಆಧರಿಸಿ ಬಡ್ಡಿದರವನ್ನು ನಿಗದಿಗೊಳಿಸುತ್ತದೆ. ಸಿಬಿಲ್ ಸ್ಕೋರ್ ಕನಿಷ್ಠ 725 ಇದ್ದರೆ ಮಾತ್ರ ಈ ಬ್ಯಾಂಕ್ ಕಾರು ಸಾಲವನ್ನು ನೀಡುತ್ತದೆ.
ಫ್ಲಾಟ್ ಅಥವಾ ಕಡಿಮೆಯಾಗುವ ಬಡ್ಡಿದರ: ಇವೆರಡು ಬಡ್ಡಿದರಗಳ ಪೈಕಿ ಆಯ್ಕೆ ಮಾಡಿಕೊಳ್ಳುವಾಗ ಗ್ರಾಹಕ ಎಚ್ಚರಿಕೆಯನ್ನು ವಹಿಸಬೇಕು. ಬಡ್ಡಿದರ ಕಡಿಮೆ ಎಂದುಕೊಂಡು ಹಿಂದೆಮುಂದೆ ಯೋಚಿಸದೆ ಫ್ಲಾಟ್ ದರಕ್ಕೆ ಬಲಿ ಬೀಳಬಾರದು. ಫ್ಲಾಟ್ ಬಡ್ಡಿದರವು ಸಾಲದ ಅವಧಿಯುದ್ದಕ್ಕೂ ಒಂದೇ ಆಗಿರುತ್ತದೆ.
ನೀವು ಎಷ್ಟೇ ಅಸಲನ್ನು ಪಾವತಿಸಿದ್ದರೂ ಬಡ್ಡಿಯನ್ನು ನಿಮ್ಮ ಸಾಲದ ಸಂಪೂರ್ಣ ಮೊತ್ತದ ಮೇಲೆಯೇ ಲೆಕ್ಕ ಹಾಕಲಾಗುತ್ತದೆ. ಶೇ.5.64 ಫ್ಲಾಟ್ ಬಡ್ಡಿದರವು ಕಡಿಮೆ ಎಂದು ಗ್ರಾಹಕನಿಗೆ ಅನ್ನಿಸಬಹುದು, ಆದರೆ ಲೆಕ್ಕಾಚಾರ ಹಾಕಿದಾಗ ಆತ ತನ್ನ ಸಾಲದ ಮೇಲೆ ವಾರ್ಷಿಕ ಶೇ.10ರಷ್ಟು ಬಡ್ಡಿಯನ್ನು ಪಾವತಿಸುತ್ತಾನೆ. ಕಡಿಮೆಯಾಗುವ ಬಡ್ಡಿ ದರ ಆಯ್ಕೆ ಮಾಡಿಕೊಂಡರೆ ನೀವು ಪ್ರತಿತಿಂಗಳು ತುಂಬಿದ ಅಸಲು ಹಣವನ್ನು ಸಾಲದ ಮೊತ್ತದಲ್ಲಿ ವಜಾ ಮಾಡಿ ಉಳಿದ ಸಾಲಕ್ಕೆ ಬಡ್ಡಿಯನ್ನು ವಿಧಿಸಲಾಗುತ್ತದೆ. ಹೀಗಾಗಿ ಎರಡೂ ಬಡ್ಡಿದರಗಳನ್ನು ಹೋಲಿಸಿ ಲಾಭದಾಯಕವಾಗಿರುವುದನ್ನು ಆಯ್ಕೆ ಮಾಡಿಕೊಳ್ಳಿ.
ಶುಲ್ಕಗಳು
ಬಡ್ಡಿದರದ ಬಳಿಕ ಸಾಲದ ಮೇಲೆ ವಿಧಿಸಲಾಗುವ ಶುಲ್ಕಗಳು ಮುಖ್ಯವಾಗಿವೆ.
ಸಂಸ್ಕರಣ ಶುಲ್ಕ:ಹೆಚ್ಚಿನ ಬ್ಯಾಂಕುಗಳು ಸಾಲದ ಮೊತ್ತದ ಮೇಲೆ ಶೇಕಡಾ ಲೆಕ್ಕದಲ್ಲಿ ಸಂಸ್ಕರಣ ಶುಲ್ಕ ವಿಧಿಸುತ್ತವೆ. ಇದು ಸಾಮಾನ್ಯವಾಗಿ ಶೇ.0.5 ಪ್ಲಸ್ ತೆರಿಗೆ ಆಗಿರುತ್ತದೆ. ಗ್ರಾಹಕರನ್ನು ಸೆಳೆಯಲು ಕೆಲವು ಹಣಕಾಸು ಸಂಸ್ಥೆಗಳು ಇದನ್ನು ಮನ್ನಾ ಮಾಡುವ ಆಫರ್ ನೀಡಬಹುದು.
ಡಾಕ್ಯುಮೆಂಟೇಷನ್ ಶುಲ್ಕ: ಸಂಸ್ಕರಣ ಶುಲ್ಕದ ಜೊತೆಗೆ ಡಾಕ್ಯುಮೆಂಟೇಷನ್ ಶುಲ್ಕವನ್ನು ಪಾವತಿಸುವಂತೆ ಕೆಲವು ಹಣಕಾಸು ಸಂಸ್ಥೆಗಳು ಕೇಳಬಹುದು. ಇದು ಸಾಮಾನ್ಯವಾಗಿ 300ರಿಂದ 600 ರೂ.ಆಗಿರುತ್ತದೆ.
ಭಾಗಶಃ ಪಾವತಿ ಮತ್ತು ಅವಧಿ ಮುನ್ನ ಸಾಲ ತೀರುವಳಿ ಶುಲ್ಕ: ಇಎಂಐ ಜೊತೆಗೆ ಮುಂಗಡವಾಗಿ ಭಾಗಶಃ ಸಾಲ ಪಾವತಿಯನ್ನು ಅಥವಾ ಅವಧಿಗೆ ಮುನ್ನವೇ ಏಕಗಂಟಿನಲ್ಲಿ ಸಾಲವನ್ನು ಸಂಪೂರ್ಣವಾಗಿ ತೀರಿಸುವುದನ್ನು ಹಣಕಾಸು ಸಂಸ್ಥೆಗಳು ಪ್ರೋತ್ಸಾಹಿಸುವುದಿಲ್ಲ. ಹೀಗಾಗಿ ಅದಕ್ಕೆ ಅವು ದಂಡರೂಪದಲ್ಲಿ ಸ್ವಲ್ಪ ಶುಲ್ಕವನ್ನು ವಿಧಿಸುತ್ತವೆ. ಇದು ಸಾಮಾನ್ಯವಾಗಿ ಶೇ.5 ಪ್ಲಸ್ ತೆರಿಗೆ ಆಗಿರುತ್ತದೆ.
ಕೆಲವು ಹಣಕಾಸು ಸಂಸ್ಥೆಗಳು, ವಿಶೇಷವಾಗಿ ಹಬ್ಬಗಳ ಸಂದರ್ಭದಲ್ಲಿ ಮಂಜೂರು ಮಾಡಿದ ಸಾಲಗಳ ಮೇಲೆ ಇಂತಹ ಶುಲ್ಕವನ್ನು ಮನ್ನಾ ಮಾಡಬಹುದು.ಕೆಲವು ಸಂಸ್ಥೆಗಳು ಷರತ್ತುಗಳನ್ನು ವಿಧಿಸಬಹುದು. ಹೀಗಾಗಿ ಕಾರು ಸಾಲ ಪಡೆಯುವ ಮುನ್ನ ಈ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಒಳ್ಳೆಯದು.
ಇತರ ಅಂಶಗಳು
ಎಕ್ಸ್ ಶೋರೂಮ್ ಅಥವಾ ಆನ್ ರೋಡ್ ಬೆಲೆ: ಎಕ್ಸ್ ಶೋರೂಮ್ ಬೆಲೆಯು ತಯಾರಕರ ವೆಚ್ಚ, ಡೀಲರ್ನ ಲಾಭಾಂಶ ಮತ್ತು ಸಾಗಾಣಿಕೆ ವೆಚ್ಚವನ್ನು ಒಳಗೊಂಡಿ ರುತ್ತದೆ. ಪ್ರತಿ ಮಾಡೆಲ್ಗೂ ಇದು ನಗರದಿಂದ ನಗರಕ್ಕೆ ಭಿನ್ನವಾಗಿರುತ್ತದೆ. ಆದರೆ ಒಂದೇ ನಗರದಲ್ಲಿ ಸಾಮಾನ್ಯವಾಗಿ ಎಲ್ಲ ಡೀಲರ್ಗಳಲ್ಲಿ ಇದು ಏಕರೂಪವಾಗಿರುತ್ತದೆ. ಕೆಲವೊಮ್ಮೆ ಡೀಲರ್ಗಳು ಎಕ್ಸ್ ಶೋರೂಮ್ ಬೆಲೆಯಲ್ಲಿ ಡಿಸ್ಕೌಂಟ್ ನೀಡಬಹುದು. ಶೋರೂಮ್ ಬೆಲೆಯ ಮೇಲೆ ಸಾಮಾನ್ಯವಾಗಿ ಶೇ.90-95ರಷ್ಟು ಸಾಲ ದೊರೆಯುತ್ತದೆ. ಆನ್ ರೋಡ್ ಬೆಲೆಯಲ್ಲಿ ಕಾರಿನ ಬೆಲೆಯ ಜೊತೆಗೆ ನೋಂದಣಿ ವೆಚ್ಚ, ರಸ್ತೆ ತೆರಿಗೆ, ವಿಮೆ ಮತ್ತು ಇತರ ವೆಚ್ಚಗಳು ಒಳಗೊಂಡಿರುತ್ತವೆ. ಹೆಚ್ಚಿನ ಡೀಲರ್ಗಳು ಆನ್ ರೋಡ್ ಬೆಲೆಯ ಶೇ.85ರವರೆಗೆ ಸಾಲವನ್ನು ನೀಡುತ್ತಾರೆ.
ಸೂಕ್ತ ಅವಧಿಯ ಆಯ್ಕೆ
ಸಾಮಾನ್ಯವಾಗಿ ಕಾರು ಸಾಲಗಳನ್ನು ತೀರಿಸಲು 12ರಿಂದ 84 ತಿಂಗಳುಗಳ ಅವಧಿ ದೊರೆಯುತ್ತದೆ. ಅಲ್ಪಾವಧಿಗೆ ಹೋಲಿಸಿದರೆ ದೀರ್ಘಾವಧಿಯ ಸಾಲಗಳಿಗೆ ಇಎಂಐಗಳು ಕಡಿಮೆಯಿರುವುದರಿಂದ ಗ್ರಾಹಕರು ಸಾಮಾನ್ಯವಾಗಿ ದೀರ್ಘಾವಧಿಯ ಸಾಲಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಅಲ್ಪಾವಧಿ ಸಾಲಗಳಿಗೆ ಹೋಲಿಸಿದರೆ ದೀರ್ಘಾವಧಿ ಯ ಸಾಲಗಳಿಗೆ ಅಧಿಕ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ ಎನ್ನುವುದು ನೆನಪಿರಲಿ. ಉದಾಹರಣೆಗೆ ವಾರ್ಷಿಕ ಶೇ.9.5 ಬಡ್ಡಿಯಲ್ಲಿ ಸಾಲ ಪಡೆದುಕೊಂಡು 84 ತಿಂಗಳುಗಳಲ್ಲಿ ತೀರಿಸಿದರೆ ಒಟ್ಟು 1,86,000 ರೂ.ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಅದೇ 60 ತಿಂಗಳುಗಳಲ್ಲಿ ಸಾಲ ತೀರಿಸಿದರೆ ಕೇವಲ 1,30,000 ರೂ.ಬಡ್ಡಿಯಾಗುತ್ತದೆ.