ವಾರದ ವ್ಯಕ್ತಿ

ವಾಟಾಳ್ ‘ಹೋರಾಟ’ ಮತ್ತು ಬೂಟಿನೇಟು

‘ಕನ್ನಡಪರ ಹೋರಾಟದ ಸಂದರ್ಭದಲ್ಲಿ ಪೊಲೀಸರು ನನಗೆ ಬೂಟಿನಿಂದ ಹೊಡೆದಿದ್ದರು. ಇವತ್ತಿಗೂ ನಾನು ಆ ದಿನದಂದೇ ಜನ್ಮ ದಿನ ಆಚರಿಸಿಕೊಳ್ಳುತ್ತೇನೆ’ ಎನ್ನುವ ವಾಟಾಳ್ ನಾಗರಾಜ್, ಮೊನ್ನೆ ಬಹಳ ವಿಜೃಂಭಣೆಯಿಂದ ತಮ್ಮ 56ನೆ ಬೂಟಿನೇಟಿನ ಹುಟ್ಟುಹಬ್ಬವನ್ನು ಆಚರಿಸಿ ಕೊಂಡರು. ಆ ಹುಟ್ಟುಹಬ್ಬದ ಆಚರಣೆಯನ್ನು ಅವರು ಹೋರಾಟದ ಭಾಗವೆಂದು ಭಾವಿಸಿದ್ದಾರೆ. ಅದನ್ನು ಸಾರ್ವಜನಿಕ ಸಮಾರಂಭದಂತೆ ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ.

ಇದು ಕೆಲವರಿಗೆ ವಿಚಿತ್ರವಾಗಿ ಕಾಣಿಸಬಹುದು. ಹಾಗೆಯೇ ಹೋರಾಟಗಾರರಾಗಬೇಕೆನ್ನುವವರು ಬೂಟಿನೇಟು ತಿನ್ನಲು ಸಿದ್ಧರಿರಬೇಕು ಎಂಬ ಸಂದೇಶವನ್ನು ರವಾನಿಸಲೂಬಹುದು. ಜೊತೆಗೆ ಬೂಟಿನೇಟಿಗೆ ಅಂಜುವ, ಅವಮಾನವೆಂದು ಭಾವಿಸುವ ಜನರ ಮುಂದೆ, ಧೈರ್ಯಸ್ಥನ ಸ್ಥಾನ ದಕ್ಕಿಸಿಕೊಡಬಹುದು. ಆ ಸ್ಥಾನ ಹಲವು ಅನುಕೂಲಕರ ವಾತಾವರಣ ಸೃಷ್ಟಿಸಬಹುದು. ಒಂದೇ ಒಂದು ಬೂಟಿನೇಟು ಒಬ್ಬ ವ್ಯಕ್ತಿಯ ಏನೆಲ್ಲ ಬದಲಾವಣೆಗೆ ಸಾಧ್ಯ ಎನ್ನುವುದು ವಾಟಾಳ್ ನಾಗರಾಜ್‌ರ ವಿಷಯದಲ್ಲಿ ಸಾಬೀತಾಗಿದೆ. ಅದೇ ವಾಟಾಳ್ ವಿಶೇಷ.

ವಾಟಾಳ್ ನಾಗರಾಜ್ ಎಂದೊಡನೆ ವೈಟ್ ಆ್ಯಂಡ್ ವೈಟ್ ಡ್ರೆಸ್, ಕಪ್ಪುಕನ್ನಡಕ, ಆ ಕನ್ನಡಕಕ್ಕೇ ಅಂಟಿಕೊಂಡ ಟೋಪಿ. ಜೈ ಎನ್ನಲು ಜೊತೆಗೊಂದಷ್ಟು ಜನ. ಜನ ಬೋರಾದಾಗ, ಕತ್ತೆ, ದನ, ಎಮ್ಮೆ, ಎತ್ತಿನಗಾಡಿ. ಥರಾವರಿ ವೇಷಭೂಷಣಗಳು. ಬೀದಿಗಿಳಿದು ಪ್ರತಿಭಟನೆ, ರ್ಯಾಲಿ, ಚಳವಳಿ, ಸತ್ಯಾಗ್ರಹ, ಮುತ್ತಿಗೆ, ರಸ್ತೆ-ರೈಲ್ ರೋಖೋ. ಹೇಳಿದ್ದನ್ನೇ ಮತ್ತೆ ಮತ್ತೆ ಹೇಳಿದರೂ- ಕನ್ನಡ, ಕಾವೇರಿ, ಗಡಿ, ಗೋವಾ, ಪರಭಾಷೆ, ಡಬ್ಬಿಂಗ್, ರೈತ, ಕಾರ್ಮಿಕ, ಬಡವ, ಬೆಲೆ ಏರಿಕೆ- ಸದ್ಯದ ಜ್ವಲಂತ ಸಮಸ್ಯೆ ಎಂಬಂತೆ ಘನಗಂಭೀರವಾಗಿ ಹೇಳುವುದು. ಬೆಂಗಳೂರು-ಕರ್ನಾಟಕ ಬಂದ್‌ಗೆ ಕರೆ ಕೊಡುವುದು. ಮೈಕ್ ಕಂಡಾಕ್ಷಣ ಅರಚಾಡಿ, ಕ್ಯಾಮರಾ ಕಂಡೊಡನೆ ಉಗ್ರ ರೂಪ ಪ್ರದರ್ಶಿಸುವುದು. ಮೊದಲೇ ಗೊತ್ತಿದ್ದ, ಸಿದ್ಧರಾಗಿ ನಿಂತಿದ್ದ ಪೊಲೀಸರಿಂದ ಬಂಧನ-ಬಿಡುಗಡೆ. ಸುದ್ದಿ ಮಾಧ್ಯಮಗಳಲ್ಲಿ ಫೋಟೋ-ಸುದ್ದಿ ಪ್ರಕಟ. ಮತ್ತೆಲ್ಲ ಮಾಮೂಲಿ. ಇದು ವಾಟಾಳ್ ‘ಹೋರಾಟ’ದ ಶೈಲಿ.

ಇಂತಹ ವಾಟಾಳ್ ಹುಟ್ಟಿದ್ದು ಕನಕಪುರದ ಹತ್ತಿರದ ಮರಳೆಬೇಕುಪ್ಪೆಎಂಬ ಹಳ್ಳಿಯಲ್ಲಿ. ತಂದೆ ಮಾದಪ್ಪ, ತಾಯಿ ಪಾರ್ವತಮ್ಮ. ಚಿಕ್ಕವಯಸ್ಸಿನಲ್ಲಿಯೇ ಅಪ್ಪನನ್ನು ಕಳೆದುಕೊಂಡ ಒಬ್ಬನೇ ಮಗ ನಾಗರಾಜ, ತಾಯಿಯ ತವರೂರಾದ ಚಾಮರಾಜನಗರದ ವಾಟಾಳ್‌ಗೆ ವಲಸೆ ಹೋದರು. ಅಲ್ಲಿಯ ವಾಟಾಳ್ ಮಠದಲ್ಲಿ ಎಸೆಸೆಲ್ಸಿಯವರೆಗೆ ವಿದ್ಯಾಭ್ಯಾಸ ಮಾಡಿದರು. ಆನಂತರ ಬೆಂಗಳೂರಿನತ್ತ ಪಯಣ ಬೆಳೆಸಿದರು.

ಅಂದಹಾಗೆ ವಾಟಾಳರ ಕನ್ನಡಪರ ಹೋರಾಟ ಶುರುವಾಗಿದ್ದೇ 60ರ ದಶಕದಲ್ಲಿ. ಆ ಸಂದರ್ಭದಲ್ಲಿ ಕನ್ನಡ ಚಿತ್ರರಂಗ ಸಂಕಷ್ಟದಲ್ಲಿತ್ತು. ಬೆಂಗಳೂರಿನಲ್ಲಿ ಕನ್ನಡ ಭಾಷಿಕರಿಗಿಂತ ತಮಿಳರ ಕೈ ಮೇಲಾಗಿ, ತಮಿಳು ಸಂಘಟನೆಗಳ ಗದ್ದಲ ಜೋರಾಗಿತ್ತು. ಕನ್ನಡ ಚಿತ್ರಗಳಿಗಿಂತ ಪರಭಾಷಾ ಚಿತ್ರಗಳನ್ನು ಪ್ರದರ್ಶಿಸುವುದು ಹೆಚ್ಚಾಗಿ ಕನ್ನಡ ಸೊರಗಿತ್ತು. ಅಂತಹ ಕಡು ಕಷ್ಟದ ಸಮಯದಲ್ಲಿ ಕನ್ನಡ ಕಲಾವಿದರು ಸೇರಿ ನಿರ್ಮಿಸಿದ ‘ರಣಧೀರ ಕಂಠೀರವ’ ಚಿತ್ರ ಬಿಡುಗಡೆಗೆ ಬೆಂಗಳೂರಿನಲ್ಲಿ ಥಿಯೇಟರ್ ಸಿಗದಿದ್ದಾಗ, ಅನಕೃ, ರಾಮಮೂರ್ತಿ, ವಾಟಾಳ್ ಹೋರಾಟ ಮಾಡಿ, ಮೆಜೆಸ್ಟಿಕ್ ವೃತ್ತದ ಹಿಮಾಲಯ ಟಾಕೀಸ್‌ನಲ್ಲಿ ಸಿನೆಮಾ ಓಡುವಂತೆ ಮಾಡಿದ್ದರು.

ಸೆಪ್ಟಂಬರ್ 7, 1962ರಂದು ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿ ಕನ್ನಡಕ್ಕಾಗಿ ಭಾರೀ ಹೋರಾಟ ನಡೆದಿತ್ತು. ಅದೇ ಸಂದರ್ಭದಲ್ಲಿ ಅಲಂಕಾರ್ ಟಾಕೀಸ್‌ನಲ್ಲಿ ಹಿಂದಿ ಚಿತ್ರ ಪ್ರದರ್ಶನವಾಗುತ್ತಿತ್ತು. ಕನ್ನಡ ಚಿತ್ರ ಪ್ರದರ್ಶಿಸಬೇಕೆಂದು ವಾಟಾಳ್ ಮತ್ತು ಸಂಗಡಿಗರು ಗಲಾಟೆ ಮಾಡಿ, ಟಾಕೀಸ್‌ಗೆ ನುಗ್ಗಿ ಬೆಂಕಿ ಹಚ್ಚಿದರು. ವಾಟಾಳ್‌ರನ್ನು ಬಂಧಿಸಿ ಉಪ್ಪಾರಪೇಟೆಯ ಪೊಲೀಸ್ ಠಾಣೆಗೆ ಒಯ್ದರು. ಲೂಯಿಸ್ ಎನ್ನುವ ಖಡಕ್ ಪೊಲೀಸ್ ಅಧಿಕಾರಿ ವಾಟಾಳರಿಗೆ ಬೂಟಿನಲ್ಲಿ ಹೊಡೆದರು. ಆಗ ಎಸ್.ನಿಜಲಿಂಗಪ್ಪನವರು ಮುಖ್ಯಮಂತ್ರಿ ಆಗಿದ್ದರು. ಬೂಟಿನೇಟಿನ ಬಗ್ಗೆ ಸದನದಲ್ಲಿ ಚರ್ಚೆಯಾಗಿ, ಶಾಂತವೇರಿ ಗೋಪಾಲಗೌಡರು ಸರಕಾರವನ್ನು ತರಾಟೆಗೆ ತೆಗೆದುಕೊಂಡರು, ತಪ್ಪೊಪ್ಪಿಕೊಂಡ ಮುಖ್ಯಮಂತ್ರಿ ನಿಜಲಿಂಗಪ್ಪನವರು, ಆ ಪೊಲೀಸ್ ಅಧಿಕಾರಿಯನ್ನು ದಿಲ್ಲಿಗೆ ವರ್ಗಾವಣೆ ಮಾಡಿ, ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಇಲ್ಲಿಂದ ಮುಂದಕ್ಕೆ ಕನ್ನಡ ಹೋರಾಟಗಾರರಲ್ಲಿ ರಾಜಕೀಯ ಪ್ರಜ್ಞೆ(ಶಿವಸೇನೆಯಂತೆ) ಜಾಗೃತಗೊಂಡು, ಪಕ್ಷ-ಬಾವುಟದ ಅಗತ್ಯತೆ ಎದುರಾದಾಗ, ಕನ್ನಡ ಚಳವಳಿ ಯಲ್ಲಿ ಜಾತಿ ತಲೆ ಹಾಕಿತು. ಬ್ರಾಹ್ಮಣ-ಬ್ರಾಹ್ಮಣೇತರರೆಂಬ ಎರಡು ಗುಂಪುಗಳು ಹುಟ್ಟಿಕೊಂಡವು. ಅನಕೃ, ಮಾ.ರಾಮ ಮೂರ್ತಿ, ಅನಸು, ತರಾಸು, ಬೀಚಿ, ವೀಸಿಗಳು ಒಂದು ಕಡೆ; ವಾಟಾಳ್ ನಾಗರಾಜ್, ನಾರಾಯಣಕುಮಾರ್, ಪ್ರಭಾಕರ ರೆಡ್ಡಿ, ಸಂಪಂಗಿ, ಸಂಜೀವಪ್ಪ, ಲಕ್ಕಣ್ಣ ಇನ್ನೊಂದು ಕಡೆ. 1965ರ ವೇಳೆಗೆ ಬೆಂಗಳೂರಿನಲ್ಲಿ ರಾಜ್ಯೋತ್ಸವ ಕೂಡ ಎರಡೆರಡು ಸ್ಥಳಗಳಲ್ಲಿ ಆಚರಿಸಲು ಆರಂಭವಾಯಿತು.

ಹಾಗೆಯೇ ಚಿಕ್ಕಪೇಟೆ, ಬಳೇಪೇಟೆ, ಅವಿನ್ಯೂ ರಸ್ತೆ, ಬಿವಿಕೆ ಅಯ್ಯಂಗಾರ್ ರಸ್ತೆ, ಮೆಜೆಸ್ಟಿಕ್, ಮೈಸೂರು ಬ್ಯಾಂಕ್ ಸರ್ಕಲ್‌ಗಳಂತಹ ವ್ಯಾಪಾರ-ವಹಿವಾಟಿನ ಸ್ಥಳಗಳು ಕನ್ನಡ ಚಳವಳಿಗಾರರ, ಹೋರಾಟಗಾರರ ಕರ್ಮಭೂಮಿಯಾಗಿ ಮಾರ್ಪಾಡಾದವು. ಕನ್ನಡದ ನೆಪದಲ್ಲಿಯೇ 1967ರ ವಿಧಾನಸಭಾ ಚುನಾವಣೆಯಲ್ಲಿ ವಾಟಾಳ್ ಚಿಕ್ಕಪೇಟೆ ಕ್ಷೇತ್ರದಿಂದ ಸ್ಪರ್ಧಿಸಿ, ಮೊದಲ ಬಾರಿಗೆ ಶಾಸಕರಾಗಿ ವಿಧಾನಸೌಧ ಪ್ರವೇಶಿಸಿದರು. ರಾಜಕಾರಣಿಗಳ ಒಡನಾಟಕ್ಕೆ ಬಂದರು. ಮುಂದುವರಿದು, 1972ರ ವಿಧಾನಸಭಾ ಚುನಾವಣೆಯಲ್ಲಿ ವಾಟಾಳ್ ಚಾಮರಾಜಪೇಟೆಯಿಂದ ಸ್ಪರ್ಧಿಸಿ ಗೆದ್ದರು. ಮುಖ್ಯಮಂತ್ರಿ ದೇವರಾಜ ಅರಸು, 1973ರ ನವೆಂಬರ್ 1ರಂದು ಮೈಸೂರು ರಾಜ್ಯವನ್ನು ‘ಕರ್ನಾಟಕ’ ಎಂದು ನಾಮಕರಣ ಮಾಡಿದಾಗ, ಅಸೆಂಬ್ಲಿಯಲ್ಲಿ ವಾಟಾಳ್, ಅರಸರ ಮೇಲೆ ಮಲ್ಲಿಗೆ, ಸಂಪಿಗೆ ಹೂವು ಚೆಲ್ಲಿ ಅಭಿನಂದಿಸಿದರು. ಅಷ್ಟೇ ಅಲ್ಲ, ವಿಧಾನಸೌಧದ ಮೆಟ್ಟಿಲುಗಳ ಮೇಲೆ ಅದ್ದೂರಿ ಸಮಾರಂಭ ವೇರ್ಪಡಿಸಿ, ಅರಸು ದಂಪತಿಯನ್ನು ಸನ್ಮಾನಿಸಿದ್ದರು.

ಈ ಸನ್ಮಾನ ಕನ್ನಡಾಭಿಮಾನಕ್ಕೆ ಸೂಕ್ತವಾಗಿದ್ದರೂ, ಮುಂದುವರಿದು 1980ರಲ್ಲಿ ಗುಂಡೂರಾವ್ ಮುಖ್ಯಮಂತ್ರಿ ಯಾದಾಗ, ರೈಲ್ವೆ ನಿಲ್ದಾಣದಿಂದ ವಿಧಾನಸೌಧದವರೆಗೆ ಭವ್ಯ ಮೆರವಣಿಗೆ ಮಾಡಿ, ಸನ್ಮಾನಿಸಿದ್ದು ಬೇರೆಯದೇ ಅರ್ಥ ಹೊರಡಿಸಲಾರಂಭಿಸಿತು. ವಾಣಿಜ್ಯೋದ್ಯಮಿಗಳಿಗೆ ಸಂದೇಶ ರವಾನಿಸಿತು. ಮುಖ್ಯಮಂತ್ರಿಯೇ ಬಗಲಿಗಿದ್ದಾಗ, ನವೆಂಬರ್ ನಾಯಕರ ವಂತಿಗೆ ವಸೂಲಿ ಸುಲಭವಾಯಿತು. ಇದು, ಅದಾಗತಾನೆ ಪ್ರವಧರ್ಮಾನಕ್ಕೆ ಬರುತ್ತಿದ್ದ ‘ಲಂಕೇಶ್ ಪತ್ರಿಕೆ’ಯಲ್ಲಿ ಸುದ್ದಿಯಾಯಿತು. ಅದೇ ಸಮಯಕ್ಕೆ ಲಂಕೇಶರ ಸ್ನೇಹಿತರಾದ ‘ಸಂಜೆವಾಣಿ’ ಮಾಲಕರಾದ ಮಣಿ, ತಮ್ಮ ತಮಿಳುಸಂಘದಿಂದ ಆಚರಿಸುವ ಕನ್ನಡ ರಾಜ್ಯೋತ್ಸವಕ್ಕೆ ಲಂಕೇಶರನ್ನು ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಿದರು. ಕಾರ್ಯಕ್ರಮ ನಡೆಯುವಾಗ ವೇದಿಕೆಗೆ ನುಗ್ಗಿದ ವಾಟಾಳ್ ಮತ್ತವರ ಸಂಗಡಿಗರು ಲಂಕೇಶರ ಮೇಲೆ ಹಲ್ಲೆ ಮಾಡಿದರು. ಲಂಕೇಶರ ಮೇಲೆ ನಡೆದ ಹಲ್ಲೆ ದೊಡ್ಡ ಸುದ್ದಿಯಾಯಿತು. ವಾಟಾಳರ ಹೋರಾಟದ ‘ಹೂರಣ’ ಹೊರಬಿತ್ತು. ಹಲ್ಲೆ ಖಂಡಿಸಿ ಸಾಹಿತಿ-ಕಲಾವಿದರು ಬೀದಿಗಿಳಿದು ಮೆರವಣಿಗೆ ತೆಗೆದರು. ಟೌನ್‌ಹಾಲ್‌ನಲ್ಲಿ ಸಭೆ ಸೇರಿ ಒಕ್ಕೊರಲಿನಿಂದ ಖಂಡಿಸಿದರು. ಇದು ವಾಟಾಳರನ್ನು ಹೋರಾಟದ ಮುಂಚೂಣಿಯಿಂದ ಹಿಂದೆ ಸರಿಸಿತು. ಅಲ್ಲಿಂದ ಕೊಂಚ ಮಂಕಾದಂತೆ ಕಂಡ ವಾಟಾಳ್, ಬೆಂಗಳೂರನ್ನು ಬಿಟ್ಟರು. ಹೋರಾಟ, ಚಳವಳಿಗಳಿಂದ ಕೊಂಚ ದೂರವೇ ಉಳಿದರು. ಎರಡು ದಶಕಗಳ ಕಾಲ ಕನ್ನಡಪರ ಹೋರಾಟವನ್ನೇ ಉಸಿರಾಡಿದವರು, ಹಲವು ಸಂಘಟನೆಗಳನ್ನು ಒಂದುಗೂಡಿಸಿ ನಾಯಕನಾಗಿ ಮಿಂಚಿದವರು, ಕನ್ನಡವೆಂದರೆ ವಾಟಾಳ್ ಎನ್ನುವಂತಿದ್ದವರು, ಚಾಮರಾಜನಗರಕ್ಕೆ ತಮ್ಮ ಕಾರ್ಯಕ್ಷೇತ್ರವನ್ನು ಬದಲಿಸಿಕೊಂಡರು. 1994ರಲ್ಲಿ ಅಲ್ಲಿಂದ ಚುನಾವಣೆಗೆ ಸ್ಪರ್ಧಿಸಿ, ಜಾತಿ ಮತ್ತು ವರ್ಚಸ್ಸನ್ನು ಪಣವಾಗಿಟ್ಟು ಗೆದ್ದರು.

ಇಲ್ಲಿಂದ ವಾಟಾಳ್ ಹಿರಿಯ ಹೋರಾಟಗಾರಗಾಗಿ, ಅನುಭವಿ ರಾಜಕಾರಣಿಯಾಗಿ, ಮಾಗಿದ ವ್ಯಕ್ತಿಯಾಗಿ ಗೋಚರಿಸತೊಡಗಿದರು. 1997ರಲ್ಲಿ, ‘ಲಂಕೇಶ್ ಪತ್ರಿಕೆ’ ಯಲ್ಲಿ ಬಂದ ವರದಿಯೊಂದಕ್ಕೆ ಸದನದಲ್ಲಿ ಚರ್ಚೆಯಾಗಿ, ಪತ್ರಿಕೆ ವಿರುದ್ಧ ಹಕ್ಕುಚ್ಯುತಿ ಮಂಡನೆಯಾದಾಗ, ಮುಖ್ಯಮಂತ್ರಿ ಜೆ.ಎಚ್.ಪಟೇಲರಾದಿಯಾಗಿ ಎಲ್ಲರೂ ಪತ್ರಿಕೆಯ ವಿರುದ್ಧವಿದ್ದಾಗ, ಇದೇ ವಾಟಾಳ್ ಶಾಸನಸಭೆಯ ಹಕ್ಕುಬಾಧ್ಯತೆಗಳ ಬಗ್ಗೆ ತರ್ಕಬದ್ಧವಾಗಿ ವಾದ ಮಂಡಿಸಿ, ಪತ್ರಿಕೆಯ ವರದಿ ಸದನದ ಹಕ್ಕುಚ್ಯುತಿಗೆ ಒಳಪಡುವುದಿಲ್ಲವೆಂದು ವಾದಿಸಿ ಎಲ್ಲರ ಹುಬ್ಬೇರಿಸಿದ್ದರು. ಒಂದು ಕಾಲದಲ್ಲಿ ಲಂಕೇಶರ ಮೇಲೆ ಹಲ್ಲೆ ಮಾಡಿದ್ದವರು, ಇಂದು ಅವರ ಪರವಾಗಿ ವಕಾಲತ್ತು ವಹಿಸಿ, ಲಂಕೇಶರ ಮನ ಗೆದ್ದು ‘ಮೆಚ್ಯೂರ್ಡ್ ಪೊಲಿಟೀಷಿಯನ್’ ಎನಿಸಿ ಕೊಂಡಿದ್ದರು.

ಇದಾಗಿ ಇಪ್ಪತ್ತು ವರ್ಷ ಕಳೆದಿದೆ, ಕಾವೇರಿಯಿಂದ ತಮಿಳುನಾಡಿಗೆ ನೀರೂ ಹರಿದು ಹೋಗಿದೆ. ಇವತ್ತು ಕರ್ನಾಟಕದಲ್ಲಿ ಸಾವಿರಾರು ಸಂಘಟನೆಗಳು, ಲಕ್ಷಾಂತರ ಹೋರಾಟಗಾರರು, ಕನ್ನಡಾಭಿಮಾನವನ್ನು ಸ್ವಹಿತಾಸಕ್ತಿಗೆ ಬಳಸಿಕೊಳ್ಳುವ ‘ಉಗ್ರ ಹೋರಾಟ’ಗಾರರನ್ನೂ ನೋಡುತ್ತಿದ್ದೇವೆ. ಇದೆಲ್ಲವನ್ನು ಗಮನಿಸಿದರೆ, ಹಳೆ ವಾಟಾಳಲೇ ವಾಸಿ ಎನ್ನುವಂತಾಗಿದೆ. ಅದು ಹಾಗೆಯೇ, ವೃದ್ಧನಾರಿ ಪತಿವ್ರತೆಯಂತೆ. ವಾಟಾಳ್‌ರಿಗೆ ಈಗ ವಯಸ್ಸಾಗಿದೆ(75ರಿಂದ 80ರವರೆಗೆ). ಉತ್ಸಾಹ-ವರ್ಚಸ್ಸು ಕುಗ್ಗಿದೆ. ಅವರ ಪ್ರತಿಭಟನೆಗಳು ಪ್ರಹಸನಗಳಾಗಿವೆ. ಘೋಷಣೆಗಳು ಗೇಲಿಗೊಳಗಾಗುತ್ತಲಿವೆ. ಆದರೂ ಹೋರಾಟ ನಿಂತಿಲ್ಲ. ಆರೋಪ-ದೌರ್ಬಲ್ಯ-ಕೊರತೆಗಳ ನಡುವೆಯೂ ಕನ್ನಡಕ್ಕಾಗಿ ಆರು ದಶಕಗಳ ಕಾಲದ ವಾಟಾಳ್ ಹೋರಾಟ, ಅಷ್ಟು ಸುಲಭದಲ್ಲಿ ತಳ್ಳಿಹಾಕುವಂಥದ್ದಲ್ಲ, ಕನ್ನಡಿಗರು ಮರೆಯುವಂಥದ್ದಲ್ಲ.

70ರ ದಶಕದಲ್ಲಿ ಹೋರಾಟ ಎನ್ನುವುದು ಕನ್ನಡದ ಅಸ್ಮಿತೆಯಾಗಿತ್ತು. ನೆಲ, ಜಲ, ಭಾಷೆ ಎನ್ನುವುದು ಭಾವನಾತ್ಮಕ ವಿಚಾರವಾಗಿತ್ತು. ಅದಕ್ಕಾಗಿ ಹೋರಾಡುವ ಹೋರಾಟಗಾರರಿಗೆ ಬದ್ಧತೆ, ಪ್ರಾಮಾಣಿಕತೆ ಇತ್ತು. ಅದಕ್ಕೆ ಪೂರಕವಾಗಿ ಜನಬೆಂಬಲವಿತ್ತು. ಸರಕಾರದ ಸ್ಪಂದನೆಯೂ ಸಿಗುತ್ತಿತ್ತು. ಆದರೆ ಆ ವಾತಾವರಣ ಈಗಿಲ್ಲ. ಜಾಗತೀಕರಣದ ದೆಸೆಯಿಂದ ಗಡಿ-ಗೆರೆ ಅಳಿಸಿಹೋಗಿದೆ. ಭಾಷೆ-ಬಂಧ ಕಲಸಿಕೊಂಡಿದೆ. ಬದಲಾದ ಕಾಲಮಾನಕ್ಕೆ ತಕ್ಕಂತೆ ಹೋರಾಟದ ರೂಪುರೇಷೆಯೂ ಬದಲಾಗಿದೆ. ಜನರೂ ಬದಲಾಗಿದ್ದಾರೆ. ಹೋರಾಟ ಎನ್ನುವುದು ಇಂದು ಉದ್ಯಮವಾಗಿ, ಹೋರಾಟಗಾರರು ಕಾರ್ಮಿಕರಾಗಿ ಪರಿವರ್ತನೆ ಹೊಂದಿದ್ದಾರೆ. ಇಂತಲ್ಲಿ ನೀವು, ಕನ್ನಡದ ಅಸ್ಮಿತೆ, ನಾಡು-ನುಡಿಗಾಗಿ ನಿಸ್ವಾರ್ಥ ಸೇವೆ ಎಂದೆಲ್ಲ ಬಯಸುವುದು ಎಷ್ಟು ಸರಿ?

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top