ಹೂವಿನ ಹುಡುಗಿ | Vartha Bharati- ವಾರ್ತಾ ಭಾರತಿ

ಹೂವಿನ ಹುಡುಗಿ

ಅಪರೂಪದ ಹಳೆಯ ಅನುವಾದ ಕೃತಿಗಳು ಕನ್ನಡದಲ್ಲಿ ಹೇರಳವಾಗಿವೆ. ಅವು ಇಂದು ಲಭ್ಯವೂ ಇಲ್ಲ. ಸಮಕಾಲೀನರ ಕೃತಿಗಳನ್ನು ಮತ್ತೆ ಮತ್ತೆ ಪ್ರಕಟಿಸುವುದಕ್ಕೆ ಬದಲಾಗಿ ಈ ಹಳೆೆಯಹೊನ್ನುಗಳನ್ನು ಓದುಗರ ಮುಂದಿಟ್ಟರೆ ಓದುವ ಪರಂಪರೆ ನಶಿಸುತ್ತದೆಂದು ಹುಯ್ಲೆಬ್ಬಿಸುವ ಅಗತ್ಯ ಪಂಡಿತರಿಗೆ ಬರಲಿಕ್ಕಿಲ್ಲ. ಇಂಥದ್ದೊಂದು ಕೃತಿ 1952ರಲ್ಲಿ ಪ್ರಕಟವಾದ ‘ಹೂವಿನ ಹುಡುಗಿ’.


ಅನುವಾದದ ಹೊರತಾಗಿ ವಿಶ್ವದ ಯಾವುದೇ ಸಾಹಿತ್ಯ ಇನ್ನೊಂದು ಪ್ರದೇಶಕ್ಕೆ, ಜನಾಂಗಕ್ಕೆ, ಓದಿಸುವುದು ಸಾಧ್ಯವಿರಲಿಲ್ಲ; ಸಾಧ್ಯವಿಲ್ಲ. ವಿಶ್ವಮಾನವತ್ವಕ್ಕೆ ಮನುಷ್ಯನನ್ನು ಸಜ್ಜುಗೊಳಿಸಿದ ಕೀರ್ತಿ ಇಂತಹ ಅನುವಾದಕ್ಕೂ ಸೇರಿದೆ. ಕನ್ನಡದಲ್ಲಿ ಅನುವಾದ ಸಾಹಿತ್ಯ ಪ್ರಾರಂಭವಾಗಿ ಶತಮಾನವೇ ಕಳೆದಿದೆ. ಆದರೆ ಅದನ್ನೊಂದು ವಿಭಾಗವಾಗಿ, ಪ್ರತ್ಯೇಕವಾಗಿ, ಕಾಣುವ ಪದ್ಧತಿ ಇತ್ತೀಚೆಗಿನದು. ಪ್ರಾಯಃ ಅಧ್ಯಯನದ ದೃಷ್ಟಿಯಿಂದ ಈ ಬೆಳವಣಿಗೆ ಸ್ವಾಗತಾರ್ಹ. ಆದರೆ ಅವನ್ನು ಉಳಿಕೆ ಅಂದರೆ ಸ್ವಂತ ಕೃತಿಗಳಿಂದ ಬೇರೆಯಾಗಿ ಅರಿಯುವ ಅಗತ್ಯವೇ ಇಲ್ಲದ ಕಾಲದಿಂದ ಅವನ್ನು ಅಕಡೆಮಿಕ್ ಆಗಿ ಕಾಣುವ ಕಾಲಕ್ಕೆ ಬಂದಿರುವುದು ಒಂದು ರೀತಿಯಲ್ಲಿ ಅವನ್ನು ಸರಳ, ಸಾಮಾನ್ಯ ಓದುಗರಿಂದ ದೂರಮಾಡುವುದೂ ಹೌದು. ಇಷ್ಟೇ ಅಲ್ಲ, ಅನುವಾದಿಸುವುದರಿಂದ ಬರಹಗಾರರು ಸಮಾಜಕ್ಕೆ ಮತ್ತು ಸಾಮಾನ್ಯ ಓದುಗರಿಗೆ ಭಾರೀ ಉಪಕಾರ, ಸೇವೆ ಮಾಡುತ್ತಿದ್ದೇವೆಂಬ ಅಹಂಭಾವ ಬಂದಿರುವುದು ಈಚೆಗೆ. ಏಕೆಂದರೆ ಅನುವಾದ ಸಾಹಿತ್ಯವನ್ನು ಪ್ರತ್ಯೇಕಿಸಿ ಓದುವ ಪ್ರಸಂಗ, ಸಂಪ್ರದಾಯ ಕನ್ನಡದಲ್ಲಿ ಅಂತಲ್ಲ, ಭಾರತದ ಇತರ ಭಾಷೆಗಳಲ್ಲೂ ಇರಲಿಲ್ಲ. ಒಳ್ಳೆಯದು ಎಲ್ಲೇ ಯಾವುದೇ ಭಾಷೆಯಲ್ಲೇ ಇದ್ದರೂ ಅದನ್ನು ಸ್ವೀಕರಿಸುವ ಪರಂಪರೆ ಸಾರಸ್ವತಾಸಕ್ತರಿಗಿತ್ತು. ಹಾಗೆ ನೋಡಿದರೆ ನಮ್ಮ ಹಳೆಯ ಕಾಲದ ಎಲ್ಲ ಸಾಹಿತ್ಯವೂ ಒಂದಲ್ಲ ಒಂದು ರೀತಿಯ ಭಾವಾನುವಾದ. ಅವನ್ನು ರಿಮೇಕ್ ಮಾಡಿದ ಹಾಗಿತ್ತು. ಇದಕ್ಕೆ ಆದಿಕವಿ ಪಂಪನೂ ಹೊರತಲ್ಲ, ರನ್ನ, ಪೊನ್ನ, ಕುಮಾರವ್ಯಾಸ, ಲಕ್ಷ್ಮೀಶ, ರಾಘವಾಂಕರಾದಿಯಾಗಿ ಮುದ್ದಣನವರೆಗೂ ಹೊರತಲ್ಲ. ಮೂಲದ ಹೊನ್ನು ಒಂದೇ; ಅದನ್ನು ವಿನ್ಯಾಸಗೊಳಿಸಿದ ಬಗೆ ಬೇರೆ. ಅವರವರ ಭಾವಕ್ಕೆ; ಅವರವರ ಭಕುತಿಗೆ. ಅವರವರ ತೆರನಾಗಿ.

1898ರಷ್ಟು ಹಿಂದೆಯೇ ಬಿ. ವೆಂಕಟಾಚಾರ್ಯರು ಬಂಕಿಮಚಂದ್ರರ ‘ಕಪಾಲಕುಂಡಲಾ’ ಕಾದಂಬರಿಯನ್ನು ಅದೇ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದರು. ಆಗಲೇ ಅವರು ಬರೆದಿದ್ದರು: ‘‘ಈ ಗ್ರಂಥವೂ ಆ ಮಹಾತ್ಮರಿಂದ ವಂಗಭಾಷೆಯಲ್ಲಿ ರಚಿತವಾಗಿರುವುದರ ಭಾಷಾಂತರವು.’’ ‘‘ಬಂಕಿಂಬಾಬು ಅವರ ಅನೇಕ ಗ್ರಂಥಗಳು ಹಿಂದೂಸ್ಥಾನದ ಇತರ ಭಾಷೆಗಳಿಗೆ ತರ್ಜುಮೆಯಾಗಿರುವವಲ್ಲದೆ ಯುರೋಪ್ ಖಂಡದ ದೇಶಭಾಷೆಗಳಿಗೂ ಭಾಷಾಂತರ ಮಾಡಲ್ಪಟ್ಟಿವೆ. ಪ್ರಕೃತ ಗ್ರಂಥವು ಲಂಡನ್ನಿನ ಎಚ್.ಡಿ.ಫಿಲಿಪ್ಸ್ ಅವರಿಂದ ಇಂಗ್ಲಿಷ್ ಭಾಷೆಯಲ್ಲಿಯೂ, ಲೀಪಜಿಗ್‌ನ ಸಿ.ಕ್ಲೆಂ. ಅವರಿಂದ ಜರ್ಮನ್ ಭಾಷೆಯಲ್ಲಿಯೂ ತರ್ಜುಮೆ ಮಾಡಲ್ಪಟ್ಟು ಪ್ರಚುರಗೊಂಡಿದೆ. ಇದರಿಂದ ನಮ್ಮ ಪಂಡಿತವರ್ಯರಾದ ಬಂಕಿಂಬಾಬು ಅವರ ಗ್ರಂಥಗಳು ದೇಶವಿದೇಶಗಳಲ್ಲಿಯೂ ಎಷ್ಟರ ಮಟ್ಟಿಗೆ ಗ್ರಾಹ್ಯವಾಗಿ ಗೌರವಿಸಲ್ಪಟ್ಟಿವೆ ಎಂಬುದನ್ನು ಕಾವ್ಯಪ್ರಿಯರು ಸುಲಭವಾಗಿ ತಿಳಿಯಬಹುದು’’ (ಯಾವುದೇ ದುರುದ್ದೇಶವಿಲ್ಲದೆ ಬಳಸಿದ ಹಿಂದೂಸ್ಥಾನ, ಓದುಗನನ್ನು ಗೌರವಿಸುವ ಗ್ರಾಹ್ಯವಾಗಿ, ಮತ್ತು ಸಾಹಿತ್ಯ ವ್ಯಾಪ್ತಿಯ ಕಾವ್ಯಪ್ರಿಯರು ಎಂಬ ಈ ಪದವನ್ನು ಗಮನಿಸಿ!) ಬಿ. ವೆಂಕಟಾಚಾರ್ಯರು ‘ಕಪಾಲ ಕುಂಡಲಾ’ ಕೃತಿಯ ವಿಜ್ಞಾಪನೆಯಲ್ಲಿ ಈಚೆಗೆ ಪ್ರಚಲಿತವಾದ ಮೊದಲ ಮಾತು, ಮುನ್ನುಡಿಗಳಿಗಿಂತ ಈ ಪದ ಹೆಚ್ಚು ಕ್ಷಮತೆಯಿಂದ ಕೂಡಿದೆಯೆಂದು ಅನ್ನಿಸುತ್ತದೆ.

ಹಿನ್ನುಡಿಗೆ ಅಥವಾ ಅನುಬಂಧಕ್ಕೆ ಬದಲಾಗಿ ಋಣಾನುಬಂಧವೆಂಬ ಪದವನ್ನು ಬೇಂದ್ರೆಯವರು ಬಳಸುತ್ತಿದ್ದುದನ್ನು ನೋಡಿದ್ದೇನೆ. ಏಕೆಂದರೆ ಮೂಲವೂ ಋಣವೇ; ಅನುವಾದವೂ ಕೂಡ. ಎಂ. ಎಸ್. ಪುಟ್ಟಣ್ಣನವರು ‘ಸುಮತಿ ಮದನಕುಮಾರರ ಚರಿತ್ರೆ’ ಎಂಬ ಕಥಾಗುಚ್ಛವನ್ನು 1913ರಲ್ಲಿ ಬರೆದಿದ್ದರು. ಅದು ಭಾಷಾಂತರವಾ ಗಿರದಿದ್ದರೂ ಆಂಗ್ಲ ಕೃತಿಯೊಂದರ ಮಾದರಿಯಲ್ಲಿ ಬರೆದದ್ದೆಂದು ಅವರೇ ಹೇಳಿಕೊಂಡಿದ್ದರು. ಇದರಲ್ಲಿ ಯಾವುದೇ ಅರಿಮೆಯ ಪ್ರಶ್ನೆಯಿರಲಿಲ್ಲ. ಅಪರೂಪದ ಹಳೆಯ ಅನುವಾದ ಕೃತಿಗಳು ಕನ್ನಡದಲ್ಲಿ ಹೇರಳವಾಗಿವೆ. ಅವು ಇಂದು ಲಭ್ಯವೂ ಇಲ್ಲ. ಸಮಕಾಲೀನರ ಕೃತಿಗಳನ್ನು ಮತ್ತೆ ಮತ್ತೆ ಪ್ರಕಟಿಸುವುದಕ್ಕೆ ಬದಲಾಗಿ ಈ ಹಳೆೆಯಹೊನ್ನುಗಳನ್ನು ಓದುಗರ ಮುಂದಿಟ್ಟರೆ ಓದುವ ಪರಂಪರೆ ನಶಿಸುತ್ತದೆಂದು ಹುಯ್ಲೆಬ್ಬಿಸುವ ಅಗತ್ಯ ಪಂಡಿತರಿಗೆ ಬರಲಿಕ್ಕಿಲ್ಲ. ಇಂತಹದ್ದೊಂದು ಕೃತಿ 1952ರಲ್ಲಿ ಪ್ರಕಟವಾದ ‘ಹೂವಿನ ಹುಡುಗಿ’.

‘ಹೂವಿನ ಹುಡುಗಿ’ ತೆಲುಗು ಮೂಲದ ಕಿರುಕಾದಂಬರಿ. ಕೇವಲ 94 ಪುಟಗಳ ಈ ಕೃತಿಯನ್ನು ಬರೆದವರು ಕೂಡಲಿ ಲಕ್ಷ್ಮೀನರಸಿಂಹರಾವ್. ಅದನ್ನು ಕನ್ನಡಕ್ಕೆ ತಂದವರು ರಂಗರಾವ್ ದೇಶಮುಖ, ತಾಂಬೆ ಇವರು. ಕೃತಿಯನ್ನು ಪರಿಷ್ಕರಿಸಿದವರು ಸಿಂಪಿ ಲಿಂಗಣ್ಣನವರು. ಲಲಿತ ಸಾಹಿತ್ಯಮಾಲೆ, ಧಾರವಾಡ ಇದರ ಚುಳಕಿ ಗೋವಿಂದರಾಯರು ಈ ಕೃತಿಯನ್ನು ಮುದ್ರಿಸಿ ಪ್ರಕಟಿಸಿದರು. ವಿಶೇಷವೆಂದರೆ ಆಗಲೇ ಪ್ರತ್ಯೇಕವಾಗಿ ಮಾರಾಟದ ವ್ಯವಸ್ಥೆಯಿತ್ತು. ಈ ಕೃತಿಯ ಮಾರಾಟಗಾರರು ಮನೋಹರ ಗ್ರಂಥ ಭಾಂಡಾರ, ಧಾರವಾಡ ಮತ್ತು ಕನ್ನಡ ಪುಸ್ತಕಾಲಯ, ಬೆಳಗಾವಿ ಇವರು. ಇಂದು ಸರಕಾರಿ ಆಶ್ರಯದ ಸಾಹಿತ್ಯ ಹಾಗೂ ಭಾಷಾ ಪ್ರಾಧಿಕಾರಗಳು, ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡಮಿಗಳು ಪ್ರಕಟಣೆ ಮತ್ತು ಪ್ರಶಸ್ತಿಗೆ ನೀಡುವ ಪ್ರಾಧಾನ್ಯದ ಒಂದಂಶವನ್ನೂ ಮಾರಾಟದ ಬಗ್ಗೆ ನೀಡದಿರುವ ವಾತಾವರಣದಲ್ಲಿ ಇಂತಹ ಸಂಪ್ರದಾಯವನ್ನು ನೆನಪಿಸುವ ಅಗತ್ಯವಿದೆ.

ಕತೆಯ ಹಂದರ ಸಂಕ್ಷಿಪ್ತವಾಗಿ ಹೀಗಿದೆ: ನರ್ಮದೆ ಈ ಕತೆಯ ನಾಯಕಿ. ತಾಯಿಯಿಲ್ಲದ ಮತ್ತು ತಂದೆಯೊಂದಿಗೆ ಬದುಕುವ ಹುಡುಗಿ. ಜೈನಮತಸ್ಥರು. ಈ ಹುಡುಗಿ ಹೂ ಮಾರುತ್ತ ಬಂದು ಒಂದು ಶ್ರೀಮಂತ ಮನೆಯಲ್ಲಿ ವ್ಯಾಪಾರಮಾಡುತ್ತ ಅಲ್ಲಿನ ವಿಧವೆ ಯಜಮಾನತಿ ವಿಚಾರಿಸಿದಾಗ ತನ್ನ ವೃತ್ತಾಂತವನ್ನು ಹೇಳುವಳು. ಇದೊಂದು ಫ್ಲಾಷ್‌ಬ್ಯಾಕ್ ತಂತ್ರ. ಒಂದಿರುಳು ಅವಳ ಮನೆಗೆ ಒಬ್ಬ ಭಯೋತ್ಪಾದಕನಂತಿರುವ ತರುಣನು ಆಶ್ರಯ ಬೇಡಿ ಬರುವನು. ಮೊದಲು ಅಂಜಿದರೂ ಅವಳ ತಂದೆ ದಯೆಯಿಂದ ಅವನಿಗೆ ಊಟೋಪಚಾರ ನೀಡಿ ತಂಗಲು ಅವಕಾಶ ಮಾಡಿಕೊಡುವನು. ಅವನ್ಯಾರೆಂದು ವಿಚಾರಿಸಿದಾಗ ಅವನು ತನ್ನ ವೃತ್ತಾಂತವನ್ನು ಹೇಳುವನು. ಅವನೊಬ್ಬ ಶ್ರೀಮಂತ ವ್ಯಾಪಾರಿಯ ಮಗ. ದೇಶವಿದೇಶಗಳಲ್ಲಿ ಹೆಸರುವಾಸಿಯಾಗಿ ಸಾಕಷ್ಟು ಸಂಪಾದಿಸಿದ ಅವನ ತಂದೆಯೊಂದಿಗೆ ವ್ಯಾಪಾರದ ಪಾಲುದಾರನಾಗಿ ಸೇರಿದ ಡ್ಯೂಕ್ ಎಂಬ ಹೆಸರಿನ ಬಿಳಿಯನೊಬ್ಬನು ಅವನಿಗೆ ಮೋಸ ಮಾಡಿ ಈ ಆಸ್ತಿಯೆಲ್ಲವೂ ತನ್ನದೆಂದು ದಾಖಲೆ ಸಜ್ಜುಗೊಳಿಸಿ ಅವನ ಹೇರಳ ಆಸ್ತಿಪಾಸ್ತಿಯನ್ನು ಕಬಳಿಸಿ ಅವನನ್ನು ಬೀದಿಪಾಲು ಮಾಡುವನು. ಈ ವ್ಯಥೆಯಲ್ಲಿ ಅವನ ತಂದೆ ತೀರಿಕೊಳ್ಳುವನು.

ತಾಯಿ ಮತ್ತು ಇಬ್ಬರು ತಂಗಿಯರೊಂದಿಗೆ ಸಂಸಾರದ ನಿರ್ವಹಣೆಗೆ ಈತ ಕೆಲಸ ಹುಡುಕಿದರೂ ಸಿಗುವುದಿಲ್ಲ. ಕೊನೆಗೆ ಅದೇ ಸಂಸ್ಥೆಯಲ್ಲಿ ಉದ್ಯೋಗ ಲಭಿಸುವುದಾದರೂ ಅವನ ಅಸ್ಮಿತೆಗೆ ಭಂಗವಾಗಿ ಅದನು ತ್ಯಜಿಸುವನು. ಆದರೆ ಆ ಬಿಳಿಯನು ಅವನಲ್ಲಿ ಅವನ ತಂದೆಯದೊಂದು ಕಡತ ಅವನ ಮನೆಯಲ್ಲಿರಬಹುದೆಂದೂ ಅದನ್ನು ತಂದುಕೊಟ್ಟರೆ ನೂರು ರೂಪಾಯಿಯ ಬಹುಮಾನವನ್ನು ನೀಡುವೆನೆಂದೂ ಹೇಳುವನು. ಆದರೆ ಅವನು ಇದನ್ನು ಕಂಡರೂ ಬಿಳಿಯನಿಗೆ ಒಪ್ಪಿಸುವುದಿಲ್ಲ. ಇದರಿಂದಾಗಿ ತನ್ನ ಭಾಗ್ಯದ ಬಾಗಿಲು ತೆರೆಯಬಹುದೆಂದು ಅವನ ತಾಯಿ ಹೇಳಿದ ಮಾತಿನಲ್ಲಿ ವಿಶ್ವಾಸವಿಡುವನು. ಆದರೆ ಬಡತನ, ಹಸಿವು ತಾಳದೆ ಜೇಬುಗಳ್ಳತನಕ್ಕೆ ಮನಸುಮಾಡಿ ಒಮ್ಮೆ ಯಶಸ್ವಿಯಾದರೂ ಪೊಲೀಸರ ಕೈಗೆ ಸಿಕ್ಕಿಬೀಳುವನು. ಕಳ್ಳನೆಂಬ ಹಣೆಪಟ್ಟಿ ಲಭಿಸುವುದು. ಬಿಡುಗಡೆಯಾದ ಆನಂತರ ಹೊಟ್ಟೆಪಾಡಿಗಾಗಿ ಮತ್ತೊಮ್ಮೆ ಕಳ್ಳತನಕ್ಕೆ ಮನಸ್ಸುಮಾಡಿ ಒಂದು ಮೂರಂತಸ್ತಿನ ಮನೆಗೆ ಹೋದಾಗ ಅಲ್ಲಿ ಒಬ್ಬಾಕೆ ಕೊಲೆಯಾಗಿ ಬಿದ್ದಿರುವಳು. ಅವಳ ಮೈಮೇಲಿನ ಬಂಗಾರವನ್ನು ಕದಿಯಬೇಕೆಂಬಷ್ಟರಲ್ಲೇ ಮತ್ತೆ ಪೊಲೀಸರ ಕೈವಶವಾಗುವನು. ತನಗೆ ಆಗಬಹುದಾದ ಕಠಿನ ಶಿಕ್ಷೆಯನ್ನು ಗ್ರಹಿಸಿ ಭಯದಿಂದ ಧೈರ್ಯವನ್ನು ಪಡೆದುಕೊಂಡು ಕಾರಾಗೃಹದಿಂದ ಓಡಿಹೋಗುವನು.

ಪೊಲೀಸರು ಬೆಂಬತ್ತುವ ಹೊತ್ತಿನಲ್ಲಿ ನರ್ಮದೆಯ ಮನೆಗೆ ಸೇರುವನು. ಈ ಮನೆಯಲ್ಲಿ ರಕ್ಷಣೆಯನ್ನು ಪಡೆಯುವ ಹೊತ್ತಿನಲ್ಲೇ ನರ್ಮದೆಯೊಂದಿಗೆ ಪ್ರೇಮಾಂಕುರವಾಗುವುದು. ಅವನ ಒಳ್ಳೆಯತನ ಮತ್ತು ಅವನ ಬದುಕಿನ ಓಟದ ಅನಿವಾರ್ಯತೆ ನರ್ಮದೆಯಲ್ಲಿ ಅವನ ಕುರಿತ ಗೌರವವನ್ನು ಹೆಚ್ಚಿಸುವುದು. ಆದರೆ ಅವನು ಪೊಲೀಸರಿಂದ ತಪ್ಪಿಸುವ ಸಲುವಾಗಿ ಅಲ್ಲಿಂದ ಓಡಿಹೋಗುವನು. ಹೋಗುವ ಮೊದಲು ಅವಳನ್ನೇ ತನ್ನ ಜೀವನ ಸಂಗಾತಿಯಾಗಿ ಸ್ವೀಕರಿಸುವ ಮಾತು ಕೊಡುವನು. ತನ್ನ ಕಡತಗಳನ್ನು ಅವಳಲ್ಲಿ ಬಿಟ್ಟುಹೋಗುವನು. ಅದನ್ನವಳು ಅವನ ವಕೀಲರಿಗೆ ನೀಡುವಳು. ಅವನ ಆಸ್ತಿಯೆಲ್ಲ ಮರಳುವುದು. ಕೊಲೆಯನ್ನು ಅವನು ಮಾಡಿಲ್ಲವೆಂದು ಪತ್ತೆಯಾಗಿ ಆ ಆರೋಪದಿಂದಲೂ ಅವನಿಗೆ ಮುಕ್ತಿ ಸಿಗುವುದು. ಆದರೆ ಅವಳಿಗೆ ಮಾತ್ರ ಅವನು ಕಾಣಸಿಗುವುದಿಲ್ಲ.

ತನ್ಮಧ್ಯೆ ಅವಳ ತಂದೆ ತೀರಿಹೋಗುವನು. ಅವಳ ಶೀಲಕ್ಕೆ ಒಬ್ಬಾಕೆ ಚ್ಯುತಿ ತರಲು ಯತ್ನಿಸಿದಾಗ ಹೇಗೋ ಪಾರಾಗುವಳು. ಒಬ್ಬ ದಯಾಪರರ ನೆರವಿನಿಂದ ಜೀವನಕ್ಕೆ ದಾರಿಯಾಗಿ ಬೇರೊಂದು ಊರಿಗೆ ಬಂದು ಹೂ ಮಾರುವಳು. ಹೀಗೆ ತನ್ನ ಕಥೆ ಹೇಳಿದ ಆನಂತರ ಅವಳಿರುವಾಗಲೇ ಆ ಮನೆಯ ತರುಣ ಬರುವನು. ಅವನು ಇನ್ಯಾರೂ ಅಲ್ಲ, ಅವಳು ಸಂಧಿಸಿದ ಗೋಪಿನಾಥನೇ. ಅವಳು ಹೋದ ಮನೆ ಅವನದ್ದೇ. ಆನಂತರ ಮತ್ತೆ ಅವನ ವೃತ್ತಾಂತವನ್ನು ಕೇಳುವಳು. ಅವನು ತನ್ನ ಆಸ್ತಿ-ಪಾಸ್ತಿಗಳನ್ನು ಪಡೆದ ಆನಂತರ ಅವಳನ್ನು ಹುಡುಕಿ ಬಂದಾಗ ಅವಳು ಊರುಬಿಟ್ಟಿದ್ದು ಅವನಿಗೆ ಸಿಕ್ಕುವುದಿಲ್ಲ. ಈಗ ಮತ್ತೆ ಸಂಧಿಸಿದ ಆನಂತರ ಎಲ್ಲವೂ ಸುಖಮಯವಾಗುವುದು.

ಈ ಕೃತಿ ಘಟನಾವಳಿಗಳನ್ನು ತೆರೆದಿಡುತ್ತದೆ. ವ್ಯಕ್ತಿಗಳ, ಅಧಿಕಾರದ, ಕ್ರೌರ್ಯದ ಮುಖಗಳನ್ನು ಪರಿಚಯಿಸುತ್ತದೆ. ದಕ್ಷ ಪತ್ತೇದಾರಿ ಕಾದಂಬರಿಯಂತೆ ತಾರ್ಕಿಕವಾಗಿಯೂ ಮುಂದುವರಿಯುತ್ತದೆ. ಕಪ್ಪು-ಬಿಳುಪು ಪಾತ್ರ ಭಿನ್ನತೆಯಿಲ್ಲ. ಕಾಲ ಮತ್ತು ಸಂದರ್ಭವೇ ಇಲ್ಲಿ ಮುಖ್ಯ ಪಾತ್ರ. ಒಬ್ಬರೇ ನಿರೂಪಕರಲ್ಲ. ಮನುಷ್ಯ ಹೊಟ್ಟೆಯ ಹಸಿವಿಗೆ ಮತ್ತು ಸಾಂದರ್ಭಿಕ ಸತ್ಯಕ್ಕೆ, ವಾಸ್ತವಕ್ಕೆ ತುತ್ತಾಗಿ ತಪ್ಪಿತಸ್ಥನಾಗುತ್ತಾನೆಂಬ ಪ್ರಸಂಗವು ಫ್ರೆಂಚ್ ಕಾದಂಬರಿ ಲೇ ಮಿಸರೇಬಲ್ಸ್‌ನ್ನು ನೆನಪಿಸುತ್ತದೆ. ಮೋಸಗಾರನಾಗಿ ಬಿಳಿಯನೊಬ್ಬನನ್ನು ಚಿತ್ರಿಸಿದ್ದೂ ಬಿಳಿಯರು ಬಿಳಿಯಿಲ್ಲ ಎಂಬುದನ್ನು ನಿರೂಪಿಸುತ್ತದೆ. ಎಲ್ಲೂ ಮೆಲೊಡ್ರಾಮಕ್ಕೆ ಅವಕಾಶ ನೀಡದೆ ವಿಚಾರಕ್ಕೆ ಪ್ರಾಮುಖ್ಯತೆಯನ್ನು ನೀಡಲಾಗಿದೆ.

ಸ್ವಲ್ಪ ಸಂದೇಶಸಹಿತವೆಂದರೂ ಅದಕ್ಕೊಂದು ಅರ್ಥವ್ಯಾಪ್ತಿ ಲಭಿಸಿದೆ. ಪ್ರಾಯಃ ಇದನ್ನು ಕನ್ನಡದ ಪ್ರಗತಿಶೀಲ ಕಾದಂಬರಿಗಳಿಗೆ ಹೋಲಿಸಬಹುದಾದರೂ ಅಷ್ಟು ಉದ್ವೇಗ, ಆವೇಗ, ರೊಚ್ಚು, ಆದರ್ಶ ಇಲ್ಲಿ ಕಾಣುವುದಿಲ್ಲ. ನಿರೂಪಣೆ ಸರಳವಾಗಿದೆ. ಈ ದೃಷ್ಟಿಯಿಂದ ಇದು ಓದಬಹುದಾದ ಕೃತಿ. ಮೇಲ್ನೋಟಕ್ಕೆ ಅಥವಾ ಮೊದಲ ಓದಿಗೆ ಇದೊಂದು 1950ರ ದಶಕದ ಕಪ್ಪು-ಬಿಳುಪು ಹಿಂದಿ ಸಾಂಸಾರಿಕ ಸುಖಾಂತ ಚಲನಚಿತ್ರದಂತೆ ಅನ್ನಿಸಬಹುದು. ಆದರೆ ಓದುತ್ತ ಹೋದಂತೆ ಅದು ತನ್ನ ಒಳಸುರುಳಿಗಳನ್ನು ಬಿಚ್ಚಿಡುತ್ತದೆ.

ಕಿರು ಕಾದಂಬರಿ ಎಂಬ ನಾಮಧೇಯವಿದ್ದರೂ ಇದೊಂದು ನೀಳ್ಗತೆಯೆಂದೂ ಹೇಳಬಹುದು. ಅನುವಾದಕ್ಕೆ ಇದೊಂದು ಉದಾಹರಣೆ ಮಾತ್ರ. ಇಂತಹ ಅನುವಾದಿತ ಕೃತಿಗಳು ಬೇಕಷ್ಟಿವೆ. ಕನ್ನಡ ಎಂದೊ ಸಾಕಷ್ಟು ಸಂಪದ್ಭರಿತವಾಗಿತ್ತು. ನಮಗೆ ಅದರ ಅರಿವಾಗಬೇಕು. ಹಾಗಾಗಬೇಕಾದರೆ ಅವನ್ನು ಅಗೆಯಬೇಕು; ಬಗೆಯಬೇಕು. ಎಸ್. ದಿವಾಕರ್, ಟಿ.ಪಿ.ಅಶೋಕ ಮುಂತಾದವರು ಈ ಕೆಲಸವನ್ನು ಸಾಕಷ್ಟು ಮಾಡಿದ್ದಾರೆ. ಭಿನ್ನ ಸಂಸ್ಕೃತಿಗಳ, ವಿಚಾರ ಪರಂಪರೆಯ ಪರಿಚಯವಾಗುವುದು ಅನುವಾದ ಕಲೆಯಲ್ಲಿಯೇ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top