ಪರಿಸರವೇ ನನ್ನನ್ನು ರೂಪಿಸಿದ್ದು

ಪರಿಸರ ಕಾರ್ಯಕರ್ತ, ಬರಹಗಾರ, ಸೂಕ್ಷ್ಮ ವಿಚಾರಗಳ ಸಂಶೋಧಕ, ಅಲೆಮಾರಿ ಹೀಗೆ ಬಹುಮುಖಿ ಆಸಕ್ತಿ, ಅಭಿರುಚಿಗಳ ಗ್ರಾಮಜೀವಿ ಶಿವಾನಂದ ಕಳವೆ. ಕಳವೆ ಎನ್ನುವ ಶಿರಸಿಯ ಗ್ರಾಮದೊಂದಿಗೆ ತನ್ನನ್ನು ಜಗತ್ತಿಗೆ ತೆರೆದುಕೊಂಡಿರುವ ಕಾನ್ಮನೆಯ ಸಹಜ, ಸರಳಜೀವಿಯೊಂದಿಗಿನ ಸಂದರ್ಶನ

► ಈಗ ಏನ್ ಮಾಡ್ತಾ ಇದ್ದೀರಾ?

ಮಳೆಗಾಲ ನನಗೆ ಓದಿನ ಕಾಲ. ಸ್ವಲ್ಪ ಓದುತ್ತಾ, ಪರಿಸರದ ವೈವಿಧ್ಯ ಸವಿಯುತ್ತಾ ಹೊಸತೇನನ್ನಾದರೂ ಮಾಡಬಹುದೇ? ಕಲಿಯ ಬಹುದೇ? ಎಂದು ಯೋಚಿಸಲು ಮಳೆಗಾಲವೇ ಪ್ರಸಕ್ತ. ಹಾಗಾಗಿ ದಿನನಿತ್ಯದ ಕೃಷಿ, ಹವ್ಯಾಸ, ಅಭ್ಯಾಸಗಳೊಂದಿಗೆ ಸ್ವಲ್ಪ ವಿಶ್ರಾಂತಿಯಲ್ಲಿದ್ದೇನೆ.

► ಓದೇ ನಿಮ್ಮನ್ನು ರೂಪಿಸಿದ್ದಲ್ವಾ?

ವಾಸ್ತವವೇನೆಂದರೆ, ಬಿ.ಕಾಂ ಓದಿನ ನಂತರ ಕೆಲಸಕ್ಕೆಂದು ಊರು ಬಿಟ್ಟೆ. ಸದಾ ಅಲೆಮಾರಿ ಯಾದ ನನಗೆ ಕೆಲಸ, ಆ ಅನಪೇಕ್ಷಿತ ಒತ್ತಡ, ಒಂಥರಾ ಜೀವನಶೈಲಿ ಇವೆಲ್ಲಾ ಒಗ್ಗದೆ ಊರಿಗೆ ಬಂದೆ. ನನ್ನಿಷ್ಟದ ಕೆಲಸ ಅಲೆದಾಟ. ಕಾಡು, ಮೇಡೆನ್ನದೆ ನಗರದಿಂದ ದೂರದೂರ ನಡೆದೆ. ಹವ್ಯಾಸ, ಅನಿವಾರ್ಯತೆ, ಅವಶ್ಯಕತೆ ನನ್ನನ್ನು ಪರಿಸರದೊಂದಿಗೆ ಸೇರಿಸಿಬಿಟ್ಟವು. ಬರೆದದ್ದು, ಅನುಭವಿಸಿದ್ದು ಕಾರ್ಯರೂಪಕ್ಕೆ ತರಬೇಕಾಗಿತ್ತು. ಸುತ್ತ ಮುತ್ತಲಿನವರ ಸಹಕಾರದಿಂದ ಪ್ರಯೋಗಕ್ಕಿಳಿದೆ.

►ಪತ್ರಕರ್ತರಾದ್ರಿ?

ಹೌದು, ನಾನು ಕತೆ ಬರೆದೆ. ಅದಕ್ಕೆ ನ್ಯಾಯ ಒದಗಿಸಿಲ್ಲ, ಪತ್ರಕರ್ತನಾದೆ, ಲೇಖನ ಬರೆದೆ. ಅವ್ಯಾವೂ ನನ್ನ ವೃತ್ತಿ, ಪ್ರವೃತ್ತಿಗಳಲ್ಲ. ನನ್ನ ಅಭ್ಯಾಸ, ಹವ್ಯಾಸಗಳ ಕಾರಣಕ್ಕೆ ಜನ ಕರೆದರು ಭಾಷಣ ಮಾಡಿದೆ. ಪರೋಕ್ಷವಾಗಿ ಟೀಕೆ-ವಿಮರ್ಶೆಗಳು ಬಂದವು. ವಾಸ್ತವದಲ್ಲಿ ಅವೇ ನನ್ನನ್ನು ರೂಪಿಸಿದವು, ಬೆಳೆಸಿದವು. ಅಭಿರುಚಿ, ಆಸಕ್ತಿಗಳ ಫಲವಾಗಿ ಸಂಪನ್ಮೂಲ ವ್ಯಕ್ತಿಯೊಬ್ಬರ ಬದಲಿ ಅತಿಥಿಯಾಗಿ ಹೋಗಿದ್ದಾಗ, ಯಲ್ಲಾಪುರ ಬಿಸ್ಗೋಡಿನ ಕಾರ್ಯಕ್ರಮದಲ್ಲಿ ಪ್ರಾಯೋಗಿಕವಾಗಿಯಾದರೂ ನೀವೇನು ಮಾಡದ್ದೀರಿ? ಎನ್ನುವ ಪ್ರಶ್ನೆ ಬಂತು.

ವೈಯಕ್ತಿಕವಾಗಿ ನಾವು ತೋಟಕ್ಕೆ ನೀರಿನ ಕೊರತೆ, ತೊಂದರೆ ಅನುಭವಿಸಿದೆವು. ಈ ಅನುಭವ, ಆಸಕ್ತಿ, ಹುಡುಕಾಟದ ಫಲ ನೀರಿನ ರಚನೆ ಬಗ್ಗೆ ಅಧ್ಯಯನಕ್ಕೆ ತೊಡಗಿದೆ. ಮಲೆನಾಡು, ಬಯಲುಸೀಮೆ, ಅರೆಮಲೆನಾಡಿನ ಪ್ರದೇಶ, ವ್ಯಕ್ತಿ, ಅನುಭವಗಳನ್ನು ಕೇಳಿದೆ. ಚಿತ್ರದುರ್ಗದಲ್ಲಿ ಕಾಲುವೆಯಲ್ಲಿ ಈಜಾಡಿದ ಅನುಭವ ಹೇಳಿದ ವ್ಯಕ್ತಿಯಂಥ ಅನೇಕ ಹಿರಿಯರನ್ನು ಕಂಡೆ. ಅವರೊಂದಿಗಿನ ಕಲಿಕೆಯ ಅನುಭವದಿಂದ ನೀರು, ನದಿ, ಕೆರೆಗಳತ್ತ ಕೇಂದ್ರೀಕರಿಸಿದೆ. ಪ್ರಯೋಗ ಮಾಡಿ ಯಶಸ್ವಿಯಾದೆ. ಗುಡ್ಡದ ಕೆರೆಗಳಿಂದ ನಮ್ಮೂರ ತೋಟಕ್ಕೆ ನಿರಂತರ ನೀರು ಬಂತು. ಅದರಿಂದ ಅಸಕ್ತಿ, ಹೆಸರು, ಪ್ರಚಾರ ಎಲ್ಲಾ ಬಂತು. ಕೆಲವರು ನಾನು ದುಡ್ಡಿಗೆ, ಪ್ರಚಾರಕ್ಕೆ ಇದನ್ನೆಲ್ಲಾ ಮಾಡುತ್ತೇನೆ ಎಂದುಕೊಂಡಿದ್ದರು. ಅವ್ಯಾವೂ ಸತ್ಯವಲ್ಲ, ಅವರ ನಿರೀಕ್ಷೆಯಂತೆ ಆಗಲಿಲ್ಲ. ಆದರೆ ಮಾಡಿದ ಕೆಲಸದಿಂದ ಪ್ರಚಾರ, ಪ್ರಸಿದ್ಧಿ ಎಲ್ಲಾ ಬಂತು. ನನ್ನ ವೃತ್ತಿ ಯಾವಾಗಲೂ ಕೃಷಿಯೇ.

► ಬುಕಾನಿನ್ ಎಲ್ಲಿ ಸಿಕ್ಕ?

ಏನೋ ಮಾಹಿತಿ ಹುಡುಕುತ್ತಾ ಶಿರಸಿಯ ಪಂಡಿತ್ ಗ್ರಂಥಾಲಯಕ್ಕೆ ಹೋದೆ. ಅಲ್ಲಿ ಹುಲ್ಲಿನ ಬಗ್ಗೆ ನನಗೆ ಮಾಹಿತಿ ಬೇಕಿತ್ತು. ಅಲ್ಲಿಯ ಆಚಾರ್ಯ ಇದು ನೋಡಿ ಎಂದು ಬುಕಾನಿನ್ ವರದಿ ಕೊಟ್ಟರು. ಅದ್ಭುತ. ಸಂಪರ್ಕ ಸಾಧನಗಳಿಲ್ಲದ ಸಮಯದಲ್ಲಿ ಕುದುರೆ, ಎತ್ತಿನ ಗಾಡಿ ಮೇಲೆ ಬಂದು ಬುಕಾನಿನ್ 1800ರಲ್ಲಿ ಮೈಸೂರು, ಮಲಬಾರ್, ಕೆನರಾದ ಮಾಹಿತಿ ಸಂಗ್ರಹಿಸಿದ್ದ. ಮಾಹಿತಿ ದಾಖಲೆ ಸಂಗ್ರಹಿಸುವ, ಶಿಸ್ತುಬದ್ಧವಾಗಿ ಜೋಡಿಸುವ ಪದ್ಧತಿಯಿಂದ ಪ್ರಾರಂಭವಾಗಿ ವಿಶಿಷ್ಟ ಒಳನೋಟಗಳನ್ನೇ ಕೊಟ್ಟ ವ್ಯಕ್ತಿ ಫ್ರಾನ್ಸಿಸ್ ಬುಕಾನಿನ್. ಅಂಗಿಯ ಗುಂಡಿ, ಸ್ನಾನದ ಸೋಪು ಬರೀ ನೂರು ವರ್ಷಗಳ ಈಚೆಗೆ ಬಳಕೆಗೆ ಬಂದಿದ್ದು. ಅದೇ ಒಂದು ಕ್ರಾಂತಿ.

► ಇಂಥವರು ಮತ್ತ್ಯಾರ್ಯಾರೆಲ್ಲಾ ಸಿಕ್ಕರು?

ಬಹಳ ಜನ, ಚಿತ್ರದುರ್ಗದ ಹೊಸ್ಮನೆ ಹನುಮಂತಪ್ಪ, ಯಲ್ಲಾಪುರದ ಶಾಂತಾರಾಮ ಸಿದ್ಧಿ ಸಿಕ್ಕ, ಬಲೆಭೀಮ ಬಹಳ ವರ್ಷ ಕಾಡಿನಲ್ಲೇ ಇದ್ದ, ಆತ ನರಭಕ್ಷಕ ಎನ್ನುವುದರೊಂದಿಗೆ ಅನೇಕ ವದಂತಿಗಳ ದಂತಕತೆಗಳೇ ಆತನ ಬಗ್ಗೆ ಸೃಷ್ಟಿಯಾಗಿದ್ದವು. ನಾನು ಅವನ ಸ್ನೇಹ ಮಾಡಿದೆ. ಅಂಥ ಅನೇಕರು ನನಗೆ ಸಿಕ್ಕರು. ದೇವನಹಳ್ಳಿಯ ರಾಮಗೌಡ ನಾಟಿಪದ್ಧತಿ ತಿಳಿಯದ ಕಾಲದಲ್ಲಿ ಭತ್ತದ ಬೆಳೆ, ಆಗಿನ ಹೂಲಿ (ಹುಲಿ) ಭತ್ತದ ಕತೆ ಹೇಳಿದ. ಹೀಗೆ ಅಮಾಯಕರು, ಅನಾಮಿಕರೇ ಬಹಳಷ್ಟು ಹೇಳಿದ್ದು, ಅದನ್ನು ನೋಡುವ ಕಣ್ಣು, ಕೇಳುವ ಕಿವಿ ತೆರೆದಿರಬೇಕಷ್ಟೆ. ಕಾಡಿನ ಜ್ಞಾನ, ಇಲ್ಲಿಯ ಜೀವ ವೈವಿಧ್ಯತೆಗಳ ತಿಳುವಳಿಕೆ. ಹುಲ್ಲು, ಮರ, ಬಳ್ಳಿ, ನೀರು, ನದಿ ನಮ್ಮ ಸ್ಥಳೀಯ ಜ್ಞಾನ, ಅನುಭವ, ವಾಸ್ತವಗಳೆಲ್ಲಾ ಸರಿಯಾಗಿ ಅರ್ಥವಾದದ್ದೇ ಹಿರಿಯರು, ಅನುಭವಿಗಳು, ವಿದ್ಯೆ ಇಲ್ಲದವರು, ಸಹಜವಾಗಿ ಬದುಕಿದವರಿಂದ. ನೆಲ ಓದಿದವರು, ಕೃಷಿ ಸಾಧಕರು, ಕೃಷಿ ಶಿಕ್ಷಕರು, ಅಭಿವೃದ್ಧಿಯ ಅಂಚಿನಲ್ಲಿ ನಡೆದವರು. ತಮ್ಮಷ್ಟಕ್ಕೆ ತಾವೇ ಬದುಕಿದವರು. ಅಂಥವರೇ ನನಗೆ ಕಲಿಸಿದವರು. ಸರಕಾರಿ, ಅರೆಸರಕಾರಿ, ಸರಕಾರೇತರ ವ್ಯವಸ್ಥೆಯಲ್ಲಿ ತಜ್ಞತೆ ಇಲ್ಲ. ನಮಗೆ ಹೀಗೆ ಸ್ವಯಂ ಸಾಧನೆ ಮಾಡಿದ ತಜ್ಞರಿಂದ ಅನುಕೂಲ ಹೆಚ್ಚು, ಬಡತನ, ಅನಿವಾರ್ಯತೆಗಳ ಜನಜೀವನದ ಕತೆ, ಕೃಷಿ (ಸಂ) ಕಥನಗಳು, ಇವೇ ನಮಗೆ ದಾರಿತೋರಿದ್ದು.

► ಕಾಡು, ಪ್ರಾಣಿ ಪ್ರಪಂಚ, ನೀರು, ಜೀವವೈವಿಧ್ಯತೆ ಇವುಗಳ ಕಾಳಜಿಯ ಗುಟ್ಟು?

ಮನುಷ್ಯನಿಲ್ಲದೆ ಪ್ರಾಣಿ ಬದುಕಬಲ್ಲುದು, ಪ್ರಾಣಿಗಳಿಲ್ಲದೆ ಮನುಷ್ಯ ಬದುಕಲ್ಲ. ಸಾಗರದ ಅಬಸೆಯಂಥ ಗ್ರಾಮದಲ್ಲಿ ನೀರಿದ್ದಾಗ ಹುಲಿ ಇತ್ತು. ಅಥವಾ ಹುಲಿ ಇದ್ದಾಗ ನೀರಿತ್ತು. ಈಗಿಲ್ಲ ಅಂದರೆ ಸಮತೋಲನ ತಪ್ಪುತ್ತಿದೆ ಎಂದರ್ಥ.

► ಕಾನ್ಮನೆ ಯೋಜನೆ?

ಕಾನ್ಮನೆ ನಮ್ಮದೇ ಚಿಂತನೆ, ಜನ ನೋಡಲು ಬರುತ್ತಾರೆ, ಅಧ್ಯಯನಾರ್ಥಿಗಳಿಗೆ ಅನುಕೂಲವಾಗಲಿ ಎಂದು 50 ಜನರ ವಸತಿ, ಅಭ್ಯಾಸಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಇದೆ. ಅದನ್ನೆಲ್ಲಾ ನಿರ್ವಹಿಸುವುದೇ ಕಷ್ಟ. ನನ್ನ ಈ ಕಲ್ಪನೆ, ಚಿಂತನೆ, ಹವ್ಯಾಸ, ಅಭ್ಯಾಸಗಳಿಂದಾಗಿ ಸೆಲಿಬ್ರಿಟಿಗಳ ಸಂಪರ್ಕವಾಯಿತು. ಅವರೂ ಜಲಸಂರಕ್ಷಣೆ, ಕೆರೆ, ನದಿ, ಕಾಡು ಪರಿಸರದ ಬಗ್ಗೆ ಕೆಲಸಮಾಡುವ ಆಸಕ್ತಿ ತೋರುತ್ತಿದ್ದಾರೆ. ವ್ಯಾವಹಾರಿಕ ಪರಿಸರದ ವ್ಯಕ್ತಿಗಳನ್ನು ಕೈಬೀಸಿ ಕರೆಯುವ ಮಟ್ಟಿಗೆ ನಮ್ಮ ಕೆಲಸ ಫಲ ನೀಡಿದೆ.

► ದೇಶಿಯತೆ ಬಿಟ್ಟು ನಾವು ಕಳೆದುಕೊಳ್ಳುತ್ತಿರುವುದೇನು?

ಬಡತನದ ಬದುಕು ದಾಖಲೆ ಆಗ್ತಾ ಇಲ್ಲ, ಬಡತನದಲ್ಲಿ, ಬವಣೆಯ ಬದುಕಿನಲ್ಲಿ ಎಷ್ಟೊಂದು ಅನುಭವ, ಜ್ಞಾನ ಸಂಪಾದನೆ ಆಗಿರುತ್ತೆ, ಅವು ಸ್ಥಳೀಯ ಸಮಸ್ಯೆ, ಸವಾಲುಗಳಿಗೆ ಉತ್ತರ ನೀಡುತ್ತವೆ. ಆದರೆ ಸ್ಥಳೀಯತೆ, ಗ್ರಾಮ್ಯಜ್ಞಾನ ಉಪೇಕ್ಷೆಗೊಳಗಾಗಿ ಅಬ್ಬರ, ವೈಭವದ ಬದುಕೇ ಎಲ್ಲಾ ಎನ್ನುವ ಈಗಿನ ವರ್ತಮಾನ ಅನಿವಾರ್ಯ ವ್ಯವಸ್ಥೆ. ಅದನ್ನು ಹಿಡಿದು ನಿಲ್ಲಿಸುವಂಥ ಶಕ್ತಿ ಇಲ್ಲವಲ್ಲ.

► ಮುಂದಿನ ದಾರಿ?

ಆಯಾ ಕಾಲಕ್ಕೆ ಏನಾಗಬೇಕು ಅದು ಆಗಿಯೇ ತೀರುತ್ತದೆ. ಜನ, ಜನಸಾಮಾನ್ಯರು ಪರಿಸರ, ನೀರು, ನದಿ, ಕೆರೆಗಳ ಬಗ್ಗೆ ಕೇಳುತ್ತಿದ್ದಾರೆ. ಜಾಗೃತಿ ಮಾಡುತ್ತಾ ಸಂಘಟಿತ ಪ್ರಯತ್ನಕ್ಕೆ ಮುಂದಾಗುತ್ತಿದ್ದಾರೆ. 1700 ವರ್ಷಗಳ ನೀರಿನ ವಿಕೇಂದ್ರೀಕರಣ ವ್ಯವಸ್ಥೆ ಅರ್ಥವಾಗಬೇಕಿದೆ. ಸಾಧಕರ ಕತೆಗಳಿಂದ ಜನ ಕಲಿಯತೊಡಗಿದ್ದಾರೆ. ಉತ್ತರಕನ್ನಡ ಜಿಲ್ಲೆ, ವಿಶೇಶವಾಗಿ ಶಿರಸಿ, ಬಳ್ಳಾರಿ ರಾಜ್ಯದ ಬಹಳ ಕಡೆ ಜಲಮರುಪೂರಣ, ಜಲಸಂರಕ್ಷಣೆ ಆಂದೋಲನವಾಗುತ್ತಿದೆ. ಜನರಿಗೆ ಕಳೆದುಕೊಂಡ ಅನುಭವ, ಕೊರತೆಯ ಬಿಸಿ ತಾಕಿದಾಗಲೇ ಮುಂಜಾಗ್ರತೆ, ಮಾರ್ಗೋಪಾಯಗಳು ಹೊಳೆಯುವುದು. ಜನ ಪರ್ಯಾಯಗಳ ಹುಡುಕಾಟಕ್ಕೆ ಮುಂದಾಗಿದ್ದಾರೆ. ಕೆರೆ, ನದಿ, ಜಲ ಪರ್ಯಾಯ ಸಾಧನಗಳು, ಅಸ್ತಿತ್ವದಲ್ಲಿರುವುದರ ಸಂರಕ್ಷಣೆ ಈಗ ಆಗಬೇಕಾಗಿರುವ ಕೆಲಸ, ಅದು ಈಗಲೇ ಪ್ರಾರಂಭವಾಗಿದೆ.

► ನಿಮ್ಮ ಸಾಧನೆ ಬಗ್ಗೆ ನಿಮ್ಮ ಅನಿಸಿಕೆ?

ಅಂಥದ್ದೇನಿಲ್ಲ. ನಾಟಿ ವೈದ್ಯರು, ಬಾಣಂತಿಯರ ಚಿಕಿತ್ಸಾ ಪದ್ಧತಿ, ಮಳೆಕೊಯ್ಲು, ಜಲಸಂರಕ್ಷಣೆ, ಕಾಡು, ಮೇಡು ಇವೆಲ್ಲಾ ನನ್ನ ಹವ್ಯಾಸ. ಇದೊಂದು ಜರ್ನಿ ಅಷ್ಟೆ. ಅದರಿಂದ ಉಪಯೋಗವಾದರೆ ಖುಷಿ, ಮತ್ತೇನಿದೆ ಇದೆಲ್ಲಾ ಬಿಟ್ಟು. ಕಾಡಿನ ಜ್ಞಾನ, ಕಾಡಿನ ಸಂಪತ್ತು ಅಪಾರ. ಅದರ ಅಸ್ಮಿತೆಯಲ್ಲಿಯೇ ಹೊಸತು ಕಾಣಬೇಕು. ಜ್ಞಾನ, ಶಬ್ದ, ಸಂಪತ್ತು, ಜೀವಂತಿಕೆ ಕಾಡಿನಲ್ಲಿದ್ದಷ್ಟು ನಾಡಿನಲ್ಲಿಲ್ಲ. ನಮ್ಮ ಪರಿಸರ ದೊಡ್ಡ ವಿವೇಕ, ಜ್ಞಾನ, ಅದ್ಭುತ ಶಕ್ತಿ. ಅದರ ಮುಂದೆ ಮನುಷ್ಯ ತೀರಾ ಸಣ್ಣವ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top