ಮಾಜಿ ಸ್ಪರ್ಧಿಯ ಆರೋಪಕ್ಕೆ ದನಿಗೂಡಿಸಿದ ನಿರೂಪಕಿ ಮಿನಿ ಮಾಥುರ್ ಹೇಳಿದ್ದು ಹೀಗೆ
'ಇಂಡಿಯನ್ ಐಡಲ್'ನಲ್ಲಿ ದೌರ್ಜನ್ಯ
#ರಿಯಾಲಿಟಿ ಶೋಗಳ ಕಹಿಸತ್ಯ
ಹೊಸದಿಲ್ಲಿ, ಆ.24: ಈ ಮೊದಲು ‘ಇಂಡಿಯನ್ ಐಡಲ್’ ಆಡಿಶನ್ ನಲ್ಲಿ ಭಾಗವಹಿಸಿದ್ದ ನಿಶಾಂತ್ ಕೌಶಿಕ್ ಎಂಬವರು ಈ ರಿಯಾಲಿಟಿ ಶೋ ತೆರೆಮರೆಯಲ್ಲಿ ನಡೆಯುವ ಕೃತ್ಯಗಳ ಬಗ್ಗೆ ಟ್ವೀಟ್ ಮಾಡಿ ಬಹಿರಂಗಪಡಿಸಿದ್ದರು. ಕೌಶಿಕ್ ರ ಈ ಟ್ವೀಟ್ ವೈರಲ್ ಆಗಿತ್ತಲ್ಲದೆ, ಭಾರೀ ವಿವಾದವನ್ನೂ ಸೃಷ್ಟಿಸಿತ್ತು.
ಈ ಮಧ್ಯೆ ಹಲವು ಗಾಯನ ರಿಯಾಲಿಟಿ ಷೋಗಳ ಅವತರಣಿಕೆಗಳ ನಿರೂಪಕಿಯಾಗಿದ್ದ ಮಿನಿ ಮಾಥುರ್ ಕೌಶಿಕ್ ರ ಆರೋಪಗಳಿಗೆ ದನಿಗೂಡಿಸಿದ್ದಾರೆ. ಕೌಶಿಕ್ ಬಣ್ಣಿಸಿದಂತೆ ಕ್ಯಾಮರಾ ಸಿಬ್ಬಂದಿಯ ನಡವಳಿಕೆಗಳನ್ನು ಮಿನಿ ಮಾಥುರ್ ಕೂಡಾ ಖಂಡಿಸಿದ್ದಾರೆ. ಆದರೆ ತಮ್ಮ ಅಭಿಪ್ರಾಯ ಟಿವಿ ರಿಯಾಲಿಟಿ ಶೋಗಳ ಸಮಗ್ರ ಪ್ರವೃತ್ತಿ ಬಗ್ಗೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೌಶಿಕ್ ಅವರ ಟ್ವೀಟ್ಗಳನ್ನು ಮಿನಿ ಮಾಥುರ್ ಅವರಿಗೂ ಟ್ಯಾಗ್ ಮಾಡಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಅವರು, "ನಾನು 2012ರ ಸೀಸನ್ನ ಭಾಗವಾಗಿರಲಿಲ್ಲ. ಆದರೆ ಅವರು ಬಣ್ಣಿಸಿದ ಬಹುತೇಕ ಅಂಶಗಳು ಟಿವಿ ರಿಯಾಲಿಟಿ ಶೋಗಳಲ್ಲಿ ನಡೆಯುತ್ತದೆ ಎನ್ನುವುದು ನನಗೆ ಚೆನ್ನಾಗಿ ಗೊತ್ತಿದೆ. ಈ ಕಾರಣದಿಂದಾಗಿಯೇ ನಾನು ಹೊರಬಂದಿದ್ದೇನೆ" ಎಂದು ಹೇಳಿದ್ದಾರೆ.
ಇಂಡಿಯನ್ ಐಡಲ್ನ ಮೊದಲ ಮೂರು ಅವತರಣಿಕೆಗಳಿಗೆ ನಿರೂಪಕಿಯಾಗಿದ್ದ ಮಾಥುರ್ ಮತ್ತೆ 6ನೇ ಸೀಸನ್ಗೆ ಮರಳಿದ್ದರು. ಅದು ಅವರ ಕಟ್ಟಕಡೆಯ ರಿಯಾಲಿಟಿ ಶೋ ನಿರೂಪಣೆಯೂ ಆಗಿತ್ತು.
"ನಾನು ಐಡಲ್ ಬಗ್ಗೆ ಮಾತ್ರ ಮಾತನಾಡುತ್ತಿಲ್ಲ. ಎಲ್ಲ ಟಿವಿ ರಿಯಾಲಿಟಿ ಶೋಗಳ ಪ್ರವೃತ್ತಿ ಬಗ್ಗೆ ನಾನು ಹೇಳುತ್ತಿದ್ದೇನೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಸ್ತುತ ಸೋನಿ ಟಿವಿಯಲ್ಲಿ ಇಂಡಿಯನ್ ಐಡಲ್ ನ 10ನೇ ಸೀಸನ್ ಪ್ರಸಾರವಾಗುತ್ತಿದ್ದು, ಅನು ಮಲಿಕ್, ವಿಶಾಲ್ ದದ್ಲಾನಿ ಮತ್ತು ನೇಹಾ ಕಕ್ಕಾರ್ ತೀರ್ಪುಗಾರರಾಗಿದ್ದಾರೆ. ಮನೀಶ್ ಪಾಲ್ ನಿರೂಪಕರಾಗಿದ್ದಾರೆ.
This sucks. Thanks for forwarding me this thread. I wasn’t part of the 2012 season but I know most of what he has articulated is known to happen on reality tv. One of the reasons I bowed out. This incessant need to create false emotion.
— Mini Mathur (@minimathur) August 22, 2018
RIP Organic, pure TV.