ಹತ್ತಾರು ಕಿ.ಮೀ. ಬೆಟ್ಟ, ಬಯಲು ದಾಟಿದ ಮಡಿಕೇರಿ 'ಮದೆ' ನಿವಾಸಿಗಳು

ಭೂಕುಸಿತ, ಪ್ರವಾಹಗಳ ನಡುವೆ ಜೀವ ಉಳಿಸಲು 40 ಮಂದಿಯ 'ಮಹಾಪಲಾಯನ'

#ಕೊಚ್ಚಿಹೋದ ಕೊಡಗು: ವಿಶೇಷ ವರದಿ ಸರಣಿ

►40 ದಿನದ ಮಗು, ಗರ್ಭಿಣಿ, ಮಕ್ಕಳು, ವೃದ್ಧರಿದ್ದ ತಂಡ

►ಸಹಾಯದ ಹಸ್ತ ನೀಡಿದ ನಾಲ್ವರು ಯುವಕರು

“ಹೆಲಿಕಾಪ್ಟರ್ ಶಬ್ಧವೆಂದು ಸಂತಸಗೊಂಡಿದ್ದೆವು, ಆದರೆ ಗುಡ್ಡ ಕುಸಿದ ಸದ್ದು ಅದಾಗಿತ್ತು”

ಮಡಿಕೇರಿ, ಆ.28: “ನಮ್ಮ ಮನೆಗೂ ಮಡಿಕೇರಿ-ಮಂಗಳೂರು ಮುಖ್ಯ ರಸ್ತೆಗೂ ಕೇವಲ ಹತ್ತು ನಿಮಿಷದ ದಾರಿ. ಈ ದಾರಿಯಲ್ಲಿ ಸಣ್ಣ ಹೊಳೆಯೊಂದು ಹರಿಯುತ್ತಿದ್ದು, ಹೊಳೆಗೆ ನಿರ್ಮಿಸಿರುವ ಎರಡು ಸೇತುವೆಗಳು ಮಳೆ ನೀರಿಗೆ ಕೊಚ್ಚಿ ಹೋಗಿದೆ. ಇದರಿಂದ ಊರಿಗೆ ಇದ್ದ ಏಕೈಕ ದಾರಿಯನ್ನೂ ಕಳೆದುಕೊಂಡೆವು. ಕಣ್ಣೆದುರೇ ಬೃಹತ್ ಬೆಟ್ಟಗಳು ಟಿಪ್ಪರ್‍ನಿಂದ ಮರಳು ಖಾಲಿ ಮಾಡಿದ ಹಾಗೆ ನಮ್ಮೆದುರು ಒಂದರ ಹಿಂದೆ ಒಂದರಂತೆ ಕುಸಿದು ಬರುತ್ತಿದ್ದವು. ಭಯಭೀತರಾದ ನಾವು ಜೀವ ಉಳಿಸಲು ಗರ್ಭಿಣಿ, ಮಕ್ಕಳು, ಮಹಿಳೆಯರು, 40 ದಿನದ ಮಗುವಿನಿಂದ ಹಿಡಿದು 80 ವರ್ಷದ ವೃದ್ಧರವರೆಗಿನವರು ಸೇರಿ ಒಟ್ಟು 40 ಮಂದಿ ಹತ್ತಾರು ಕಿಲೋ ಮೀಟರ್ ನಡೆದು ಬೆಟ್ಟ, ಬಯಲು, ಹೊಳೆ, ಹಳ್ಳಗಳನ್ನು ದಾಟಿ ನಿರಾಶ್ರಿತ ಶಿಬಿರ ಸೇರಿದೆವು”.

ಇದು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಹೊದವಡ ಗ್ರಾಮದ ಕೊಟ್ಟಮುಡಿ ಹಳೆ ಜುಮಾ ಮಸೀದಿಯ ದಾರುಲ್ ಉಲೂಮ್ ಸುನ್ನೀ ಮದರಸದ ನಿರಾಶ್ರಿತ ಶಿಬಿರದಲ್ಲಿ ಆಶ್ರಯ ಪಡೆದಿರುವ, ಮಡಿಕೇರಿ ಎಫ್‍ಎಂಕೆಎಂಸಿ ಕಾಲೇಜಿನ ಎರಡನೇ ವರ್ಷದ ಬಿಕಾಂ ವಿದ್ಯಾರ್ಥಿ ಎಂ.ಬಿ.ಫಯಾಝ್ ಪ್ರಕೃತಿ ವಿಕೋಪದ ನಡುವೆ ತನ್ನ ಕುಟುಂಬ ಹಾಗೂ ನೆರೆಮನೆಯ 40 ಮಂದಿ ಜೀವ ಉಳಿಸಲು ಪಟ್ಟ ಪಾಡು ಹಾಗೂ ಪಾರಾಗಿ ಬಂದ ಘಟನೆಯನ್ನು ಬಿಟ್ಟಿಟ್ಟ ರೀತಿ.

“ಮಡಿಕೇರಿ ತಾಲೂಕಿನ ಎರಡನೇ ಮೊಣ್ಣಂಗೇರಿ ಗ್ರಾಮದ ಮದೆ ನಮ್ಮ ಊರು. ಆ.16ರಂದು ತಡ ರಾತ್ರಿ 2 ಗಂಟೆ ಸುಮಾರಿಗೆ ನಮ್ಮದೇ ಪರಿಸರದಲ್ಲಿರುವ ಅಜ್ಜಿ ಮನೆಯ ಹಿಂಬದಿಯ ತೋಟದ ಬರೆ ಕುಸಿದು ಮನೆ ಬಿರುಕುಬಿಟ್ಟಿತ್ತು. ಅಲ್ಲದೆ ಮನೆಯೊಳಗೆ ನೀರು ತುಂಬಲು ಆರಂಭಿಸಿತು. ಈ ಸಂದರ್ಭ ಮನೆಯಲ್ಲಿ ಮಲಗಿದ್ದ ಮೂವರು ಅದೃಷ್ಟಶಾವತ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ”.

ಎಂ.ಬಿ.ಫಯಾಝ್ 

“ನಿರಂತರ ಮಳೆಯಾಗುತ್ತಿದ್ದರಿಂದ ಕರೆಂಟ್ ಇರಲಿಲ್ಲ. ಗುಡ್ಡ ಕುಸಿತದಿಂದ ಪೈಪ್‍ಗಳು ತುಂಡಾಗಿ ಕುಡಿಯಲು ನೀರೂ ಇರಲಿಲ್ಲ. ಮೊಬೈಲ್ ನೆಟ್‍ವರ್ಕ್ ಅಂತೂ ಇರಲಿಲ್ಲ. 17ರಂದು ಬೆಳಗ್ಗೆ ನೋಡಬೇಕಾದರೆ ಹಲವೆಡೆ ಭೂಮಿ ಬಿರುಕು ಬಿಟ್ಟಿತ್ತು. ಹಲವು ಮನೆಗಳ ಗೋಡೆಗಳು ಕೂಡಾ ಬಿರುಕು ಬಿಟ್ಟಿತ್ತು. ಅಲ್ಲದೆ ಕಾಂಕ್ರಿಟ್ ರಸ್ತೆಯಲ್ಲೂ ಬಿರುಕು ಕಾಣಿಸಿಕೊಂಡಿತ್ತು. ಭಾರೀ ಮಳೆ ಸುರಿಯುತ್ತಿತ್ತು. ಹೊಳೆ, ಹಳ್ಳಗಳು ತುಂಬಿ ಹರಿಯುತ್ತಿತ್ತು. ಮಳೆ ಇನ್ನಷ್ಟು ಹೆಚ್ಚುತ್ತಿದ್ದಂತೆ ನಮ್ಮ ಕಣ್ಣೆದುರೇ ಮುಖ್ಯ ರಸ್ತೆಗೆ ಹೋಗುವ ಎರಡು ಸೇತುವೆಗಳು ಕುಸಿದು ನೀರು ಪಾಲಾಯಿತು. ಊರಿನಿಂದ ಹೋಗಲು ರಸ್ತೆ ಇಲ್ಲದೆ ನಾವು ಕಂಗಾಲಾದೆವು”.

“ಸ್ವಲ್ಪ ಹೊತ್ತಿನ ಬಳಿಕ ವಿವಿಧೆಡೆ ಗುಡ್ಡ ಕುಸಿಯಲು ಆರಂಭಿಸಿತು. ನೋಡು ನೋಡುತ್ತಿದ್ದಂತೆ ಗುಡ್ಡ ಕುಸಿದು ಅಜ್ಜಿ ಮನೆ ಸಂಪೂರ್ಣ ನಾಶವಾಯಿತು. ಇನ್ನು ಇಲ್ಲಿರುವುದು ಅಪಾಯ ಎಂದು ಅರಿತ ನಾವೆಲ್ಲರೂ ಗಂಡು ಮೂಟೆ ಕಟ್ಟಿದೆವು. ಎರಡು ಸೇತುವೆಗಳು ಕುಸಿದು ಹೋಗಿರುವುದರಿಂದ ಮುಖ್ಯ ರಸ್ತೆಗೆ ಹೋಗುವುದು ಅಸಾಧ್ಯವಾಗಿತ್ತು. ಕೊನೆಗೆ ನಮ್ಮ ಊರಿನ ಬೆಟ್ಟಗುಡ್ಡಗಳ ಮತ್ತೊಂದು ಭಾಗದಲ್ಲಿರುವ ಗಾಳಿಬೀಡು ಎಂಬ ಊರಿಗೂ ಹೋಗುವುದಾಗಿ ನಿರ್ಧರಿಸಿ ಹೊರೆಟೆವು. ಈ ಸಂದರ್ಭ ನಮ್ಮಲ್ಲಿ 40 ದಿನದ ಮಗು, ಶಸ್ತ್ರಚಿಕಿತ್ಸೆಗೆ ಒಳಗಾಗಿ ಮಗುವಿನ ತಾಯಿ, ಒಂದೂವರೆ ವರ್ಷದ ಒಂದು ಮಗು, ಆರು ವರ್ಷದೊಳಗಿನ 8 ಮಕ್ಕಳು, 5 ವೃದ್ಧರು ಸೇರಿ ಒಟ್ಟು 40 ಮಂದಿ ಇದ್ದರು”.

“ಜೋರಾಗಿ ಮಳೆ ಸುರಿಯುತ್ತಿತ್ತು. ವೃದ್ಧರು ಮಕ್ಕಳಿಗೆ ಬೆಟ್ಟ ಹತ್ತುವುದು ಕಷ್ಟಕರವಾಗಿತ್ತು. ಸ್ವಲ್ಪ ಮೇಲೆ ಹತ್ತಿದಂತೆ ಮೊಬೈಲ್ ನೆಟ್‍ವರ್ಕ್ ಸಿಕ್ಕಿತ್ತು. ಕೂಡಲೇ ಪರಿಚಯದ ಒಬ್ಬ ಪೊಲೀಸರ ಸಹಾಯದಿಂದ ಹೆಲಿಕಾಪ್ಟರ್ ನ ನಂಬರ್ ಪಡೆದು ಕರೆ ಮಾಡಿದೆವು. ಆದರೆ “ವಾತಾವರಣದಲ್ಲಿ ಮಂಜು ತುಂಬಿದ್ದರಿಂದ ಊರು ಯಾವುದು, ಬೆಟ್ಟ ಯಾವುದು, ಕಾಡು ಯಾವುದು ತಿಳಿಯುತ್ತಿಲ್ಲ. ಹಾಗಾಗಿ ಬರಲು ಸಾಧ್ಯವಿಲ್ಲ” ಎಂದು ಹೇಳಿ ಕಾಲ್ ಕಟ್ ಮಾಡಿದರು. ಮತ್ತೆ ನಾವು ಆರ್ಮಿಗೆ ಕರೆ ಮಾಡಿದೆವು. ನೀವು ಮುಖ್ಯ ರಸ್ತೆಗೆ ಬನ್ನಿ ಅಲ್ಲಿಂದ ನಾವು ಕರೆದುಕೊಂಡು ಹೋಗುತ್ತೇವೆ ಎಂದು ಉತ್ತರಿಸಿದರು. ಆದರೆ ನಮಗೆ ಮುಖ್ಯ ರಸ್ತೆಗೆ ಹೋಗಲು ಸೇತುವೆಯೆ ಇರಲಿಲ್ಲ”.

“ಮತ್ತೆ ನಾವು ಬೆಟ್ಟ ಹತ್ತುವುದನ್ನು ಮುಂದುವರಿಸಿದೆವು. ಜೋರಾಗಿ ಸುರಿಯುತ್ತಿದ್ದ ಮಳೆಯ ನಡುವೆಯೂ ಭಾರವಾದ ಗಂಟುಮೂಟೆಗಳನ್ನು ಹೊತ್ತು ಸುಮಾರು 4ರಿಂದ 5 ಕಿಲೋ ಮೀಟರ್‍ನಷ್ಟು ಬೆಟ್ಟ ಹತ್ತಿದ ಬಳಿಕ ಕಾಲಿಗೆ ಕಚ್ಚಿರುವ ಜಿಗಣೆಗಳನ್ನು ತೆಗೆಯಲು ಒಂದೆಡೆ ನಿಂತೆವು. ಅಲ್ಲಿ ನಮ್ಮ ಎದುರು ಒಂದು ಹೊಳೆ ಹರಿಯುತ್ತಿತ್ತು. ಜಿಗಣೆಗಳನ್ನು ತೆಗೆಯುತ್ತಿರಬೇಕಾದರೆ ನಮಗೆ ಹೆಲಿಕಾಪ್ಟರ್ ಬರುವ ಶಬ್ದ ಕೇಳಿತು. ನಾವೆಲ್ಲ ಆಕಾಶ ನೋಡುತ್ತಿರಬೆಕಾದರೆ ಶಬ್ದ ನಮ್ಮ ಎದುರಲ್ಲೇ ಕೇಳುತ್ತಿತ್ತು. ಅದು ಹೆಲಿಕಾಪ್ಟರ್ ಆಗಿರದೆ ಎದುರಿನ ಗುಡ್ಡ ಕುಸಿದು ಬರುತ್ತಿದ್ದ ಶಬ್ದವಾಗಿತ್ತು. ಈ ಸಂದರ್ಭ ನಾವೆಲ್ಲ ಜೀವದ ಆಸೆ ಬಿಟ್ಟಿದ್ದೆವು. ನಮ್ಮಲ್ಲಿದ್ದ ಮಹಿಳೆಯರು, ಮಕ್ಕಳು ಬೊಬ್ಬೆ ಹಾಕತೊಡಗಿದರು. ಆದರೆ ಕುಸಿದು ಬಂದ ಬೆಟ್ಟದ ಮಣ್ಣು ಎದುರಿನ ಹೊಳದಲ್ಲಿ ಹರಿಯುತ್ತಿದ್ದ ನೀರಿನ ರಭಸಕ್ಕೆ ನಮ್ಮ ಹತ್ತಿರ ಬಾರದೆ ನೀರಿನಲ್ಲಿ ಕೊಚ್ಚಿ ಹೋದವು. ಆಗ ನಾವು ನಿಟ್ಟುಸಿರುವ ಬಿಟ್ಟೆವು. ಎದುರಿನ ಬೆಟ್ಟ ಕುಸಿದಿರುವುದರಿಂದ ನಾವು ಹೊಳೆ ದಾಟಿ ಮುಂದೆ ಸಾಗದೆ ಯಾವ ಸ್ಥಳದಿಂದ ಹೊರಟಿದ್ದೆವೋ ಅದೇ ಸ್ಥಳಕ್ಕೆ ವಾಪಸ್ ಬಂದೆವು”.

“ಅಲ್ಲಿಂದ ಮತ್ತೊಂದು ಬೆಟ್ಟ ಬಯಲಾಗಿ ಒಂದು ಹೊಳೆಯನ್ನೂ ದಾಟಿ ಸುಮಾರು ನಾಲ್ಕು ಕಿಲೋ ಮೀಟರ್ ನಡೆದೆವು. ಈ ಸಂದರ್ಭ ನಮಗೆ ಪರಿಚಯಸ್ಥರೇ ಆದ ಬಾರಣ್ಣ, ದಿನೇಶ್, ನಂದ, ಚೇತನ್ ಎಂಬವರು ಎದುರಾದರು. ಅವರು ನಮ್ಮನ್ನು ಒಂದು ಬೆಟ್ಟದಿಂದ ಇಳಿಸಿ, ಹೊಳೆಯೊಂದನ್ನು ದಾಟಿಸಿ ಒಂದು ರಸ್ತೆಗೆ ತಲುಪಿಸಿದರು. ಹಿಂದಿರುವ ನೋಡುತ್ತಿದ್ದಂತೆ ನಾವು ಬಂದ ಬೆಟ್ಟವೂ ಕುಸಿದು ಮೈದಾನದಂತೆ ಮಣ್ಣು ಹರಡಿತು. ನಾವು ಆ ರಸ್ತೆಯಲ್ಲಿದ್ದ ಸಣ್ಣ ಸೇತುವೆಯೊಂದನ್ನು ದಾಟಿದೆವು. ಮಳೆ ನಿರಂತರ ಬರುತ್ತಿದ್ದರಿಂದ ಆ ಸೇತುವೆಯ ಮೇಲೂ ನೀರು ರಭಸದಿಂದ ಹರಿಯುತ್ತಿತ್ತು. ನಾವು ಒಂದಷ್ಟು ದೂರ ಸಾಗಿದಾಗ ಕೇಳಿದ ಶಬ್ದ ಆ ಸೇತುವೆ ಕುಸಿದು ಬಿದ್ದ ಶಬ್ದವಾಗಿತ್ತು”.

“ಅಲ್ಲಿಂದ ಮುಂದೆ ಹೋದಾಗ ಅಲ್ಲಿದ್ದ ಒಂದು ಹೋಂಸ್ಟೇಯಲ್ಲಿ ಜನರಿದ್ದರು. ಅವರು ನಮಗೆ ನೀರು ಕೊಟ್ಟರು. ಅದನ್ನು ಕುಡಿದು ನಾವು ಮುಂದೆ ಹೋಗಬೇಕಾದರೆ ತೋಟವೊಂದನ್ನು ಹತ್ತಬೇಕಿತ್ತು. ಬಾರಣ್ಣ, ದಿನೇಶ್, ನಂದ, ಚೇತನ್ ಕಟ್ಟಿ ಕೊಟ್ಟ ಹಗ್ಗದ ಸಹಾಯದಿಂದ ನಾವೆಲ್ಲ ತೋಟ ಹತ್ತಿದೆವು. ಈ ಸಂದರ್ಭ ಚೇತನ್ ನಮ್ಮಲ್ಲಿದ್ದ 40 ದಿನದ ಮಗುವನ್ನು ಹಿಡಿದಿದ್ದರೆ ಸಂಜಯ್ ನಮ್ಮಲ್ಲಿದ್ದ ಭಾರವಾದ ಗಂಟುಮೂಟೆಯನ್ನು ಹೊತ್ತಿದ್ದರು. ಆ ನಾಲ್ವರಿಗೆ ನಮ್ಮನ್ನು ಸುರಕ್ಷಿತ ಸ್ಥಳವಾದ ಬೆಳಕು ಮಾನಿ ಶಾಲೆಗೆ ತಲುಪಿಸುವುದು ಗುರಿಯಾಗಿತ್ತು. ಕೊನೆಗೂ ನಾವು ಶಾಲೆ ತಲುಪಿದೆವು. ಶಾಲೆಗೆ ಹತ್ತಿರದಲ್ಲಿದ್ದ ರಸ್ತೆಯೊಂದು ಕುಸಿಯುತ್ತಿರುವುದು ಕಣ್ಣಾರೆ ಕಂಡು ಬೆರಗಾದೆವು. ಬಳಿಕ ಅಲ್ಲಿಂದ ನಮ್ಮನ್ನು ಜೀಪುಗಳಲ್ಲಿ ಇಲ್ಲಿಗೆ ತಂದು ಬಿಟ್ಟಿದ್ದಾರೆ”.

“ಬೆಳಗ್ಗೆ 9 ಗಂಟೆಯ ಸುಮಾರಿಗೆ ಮನೆಯಿಂದ ಹೊರಟ ನಾವು ಬೆಳಕು ಮಾನಿ ಶಾಲೆಗೆ ತಲುಪಿದ್ದು ಸಂಜೆ 6:30ಕ್ಕೆ. ಅಲ್ಲಿಂದ 9 ಗಂಟೆ ರಾತ್ರಿಗೆ ಈ ಮದ್ರಸವನ್ನು ತಲುಪಿದ್ದೆವು. ಜೀವದ ರಕ್ಷಣೆಗಾಗಿ ಹತ್ತಾರು ಕಿಲೋ ಮೀಟರ್ ಬೆಟ್ಟಗುಡ್ಡಗಳನ್ನು ಏರಿ ಇಳಿದು ಪಟ್ಟಪಾಡು ನಮ್ಮ ಬದುಕಿನಲ್ಲಿ ಮಹಾಪಲಾಯನವೇ ಸರಿ. ಎಂದೂ ಮರೆಯುವಂತದಲ್ಲ. ನಮ್ಮ ಮನೆಗಳು, ಫಲವತ್ತಾದ ಕಾಫಿ ತೋಟಗಳು ಮಣ್ಣು ಪಾಲಾಗಿವೆ. ನಮಗೆ ತಿಳಿದಿರುವ ಹಾಗೆ ನಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ 194 ಮನೆಗಳು ಇದ್ದವು. ಅವುಗಳಲ್ಲಿ 100ರಷ್ಟು ಸಂಪೂರ್ಣ ನಾಶವಾಗಿದೆ. ಉಳಿದ ಮನೆಗಳು ಒಂದೂ ವಾಸಕ್ಕೆ ಯೋಗ್ಯವಲ್ಲ. ನೆಲೆ ಕಳೆದುಕೊಂಡಿರುವ ನಮಗೆ ಸರಕಾರ ಎಲ್ಲಿ ನೆಲೆ ಕಲ್ಪಿಸುತ್ತದೆಯೋ ತಿಳಿದಿಲ್ಲ ಎಂದು ಎಂ.ಬಿ.ಫಯಾಝ್ ಹೇಳುತ್ತಾರೆ”.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top