ಪಡೆದೂ ಕೆಟ್ಟರು ಕಮ್ಯುನಿಸ್ಟರು | Vartha Bharati- ವಾರ್ತಾ ಭಾರತಿ

ಪಡೆದೂ ಕೆಟ್ಟರು ಕಮ್ಯುನಿಸ್ಟರು

ಪ್ರೀತ್ಯಾದರಗಳಿದ್ದೂ ಆಕ್ಷೇಪಿಸಬಹುದಾದ, ಟೀಕಿಸಬಹುದಾದ ಪಕ್ಷವೆಂದರೆ ಕಮ್ಯುನಿಸ್ಟ್ ಮಾತ್ರ ಅಂದುಕೊಂಡಿದ್ದೇನೆ. ಸದ್ಯದ ಸ್ಥಿತಿಯ ವಿಶ್ವದಲ್ಲಿ ಕಮ್ಯುನಿಸಂ ಎಲ್ಲಿದೆಯೆಂದು ಕೇಳಿದರೆ ಚೀನಾ ಹಾಗೂ ಲ್ಯಾಟಿನ್ ಅಮೆರಿಕದ ಕೆಲವು ದೇಶಗಳನ್ನು ಹೆಸರಿಸಬಹುದು. ಆದರೆ ಅಲ್ಲಿರುವುದು ಕಮ್ಯುನಿಸಮ್ಮೇ ಅಥವಾ ಆ ಚಿಂತನೆಯ ಹೆಸರಿನಲ್ಲಿ ಒಬ್ಬ ಅಥವಾ ಕೆಲವೇ ಮಂದಿ ನಡೆಸುವ ಸರ್ವಾಧಿಕಾರವೇ?- ಹೇಳುವುದು ಕಷ್ಟ. ಭಾರತದಲ್ಲಿ ಕಮ್ಯುನಿಸಂ ಎಲ್ಲಿದೆಯೆಂದು ಕೇಳಿದರೆ ಈಗಷ್ಟೇ ಪ್ರವಾಹಪೀಡೆಗೊಳಗಾಗಿ ಸಕಲ ಸಂಕಷ್ಟಗಳನ್ನು ಅನುಭವಿಸುವಲ್ಲಿ ಎಲ್ಲರೂ ಸಮಾನರಾಗಿರುವ ಕೇರಳವನ್ನಷ್ಟೇ ಹೆಸರಿಸಬೇಕಾದ ಜರೂರು ಮತ್ತು ಅನಿವಾರ್ಯತೆ ಬಂದೊದಗಿದೆ. ಹಾಗಾದರೆ ಪಶ್ಚಿಮ ಬಂಗಾಳದಲ್ಲಿಲ್ಲವೇ? ತ್ರಿಪುರದಲ್ಲಿಲ್ಲವೇ? ಭಾರತದ ಹಲವು ಭಾಗಗಳಲ್ಲಿಲ್ಲವೇ? ಹೀಗೆ ಪ್ರಶ್ನಿಸಿದರೆ ‘ಇರಬಹುದು’ ಎಂದು ನಿರಾಸೆಯ ಭಾವದಲ್ಲಿ ಹೇಳುವ ಪರಿಸ್ಥಿತಿಯೊದಗಿದೆ. ಕಮ್ಯುನಿಸ್ಟ್ ಅಲ್ಲದವನಿಗೂ ಕಮ್ಯುನಿಸಂ ಎಂದರೆ ಒಂದು ರೀತಿಯ ಭಯ, ಕುತೂಹಲ ಮಿಶ್ರಿತ ಗೌರವ. ಅಲ್ಲಿ ಚಿಂತನೆಗೊಡ್ಡಬಲ್ಲ, ಒಯ್ಯಬಲ್ಲ ಒಂದಷ್ಟು ವಿಚಾರಗಳಿವೆ; ಸಿದ್ಧಾಂತಗಳಿವೆ ಎಂಬ ನಂಬಿಕೆ.

ಕೆಲವು ವರ್ಷಗಳ ಹಿಂದೆ ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಒಬ್ಬ ಹಿರಿಯ ಕಾರ್ಯಕರ್ತರಲ್ಲಿ ನಕ್ಸಲ್ ಮತ್ತಿತರ ಎಡಪಂಥದ ವಿಚಾರಗಳನ್ನು ಚರ್ಚಿಸುತ್ತಿದ್ದೆ. ಅವರು ಕಮ್ಯುನಿಸಂನ ಬದ್ಧ ವಿರೋಧಿಗಳು. ಆಗ ಕುದುರೆಮುಖವಲಯದಲ್ಲಿ ನಕ್ಸಲ್ ಚಟುವಟಿಕೆಗಳು ಜೋರಾಗಿದ್ದವು. ಸಾಕೇತರಾಜನ್ ಪೊಲೀಸರಿಂದ ಹತ್ಯೆಗೊಳಗಾಗಿದ್ದನೋ ಇಲ್ಲವೋ ಈಗ ನೆನಪಾಗುವುದಿಲ್ಲ. ನಾವು ಮಾತನಾಡುತ್ತಾ ಭಾರತೀಯ ರಾಜಕಾರಣದ ಭ್ರಷ್ಟತೆ ಮತ್ತು ಅದಕ್ಕಂಟಿಕೊಂಡ ಎಲ್ಲ ಬಗೆಯ ನಕಾರಾತ್ಮಕ ಯೋಚನೆಗಳು ಮತ್ತು ಕಾರ್ಯಕ್ರಮಗಳು ಇವನ್ನೆಲ್ಲ ಚರ್ಚಿಸುವಾಗ ನನ್ನ ಈ ಸಹಭಾಗಿ ‘‘ಒಮ್ಮೆಲೇ ಇವನ್ನೆಲ್ಲ ನೋಡುವಾಗ ನಕ್ಸಲ್ ಆಗಬೇಕೆಂದು ಯಾರಿಗೂ ಅನ್ನಿಸೀತು’’ ಎಂದರು. ಕಮ್ಯುನಿಸ್ಟ್ ಆಗಬೇಕು ಎಂದು ಅವರು ಹೇಳಲಿಲ್ಲ. ನಿಜ ಹೇಳಿದಿರಿ ಎಂದೆ. ಒಂದು ಕ್ಷಣಕಾಲ ನಮ್ಮಲ್ಲಿ ಮೌನ ಆವರಿಸಿತು. ಆನಂತರ ಅವರು ‘‘ನಾನು ಈ ಸಂಘಟನೆಯಲ್ಲಿ ಬಹಳ ದೂರ ಮತ್ತು ಬಹಳ ಕಾಲ ಕ್ರಮಿಸಿದ್ದೇನೆ; ಬದುಕಿನ ಮುಖ್ಯ ಹಂತ ಕಳೆಯುತ್ತ ಬಂದಿದೆ; ಈಗ ಮರಳಿ ಹೋಗುವ ಹಾಗಿಲ್ಲ. ಇಲ್ಲೇ ಮುಗಿಸಬೇಕು’’ ಎಂದರು. ಸಂಘಟನೆಯನ್ನೋ ತನ್ನ ಬದುಕನ್ನೋ ಎಂದು ನಾನು ಪ್ರಶ್ನಿಸಲಿಲ್ಲ. (ಅಲ್ಲಿಗೆ ಆ ಚರ್ಚೆ ಮುಗಿಯಿತು. ಈಗ ಅವರು ಆರೆಸ್ಸೆಸ್ ಸಂಘಟನೆಯ ಏಣಿಯನ್ನು ಮತ್ತಷ್ಟು ಏರಿದ್ದಾರೆ; ಇರಲಿ.)

ಕಮ್ಯುನಿಸ್ಟ್ ಪಕ್ಷಗಳಲ್ಲಿರುವ ಯೋಜಕ ಶ್ರೇಣಿ (ಕೇಡರ್)ಯ ಸರ್ವಸಮರ್ಪಣ ಭಾವದ ಜಾತ್ಯತೀತ, ಧರ್ಮನಿರಪೇಕ್ಷ ಕಾರ್ಯಕರ್ತರು ಇತರ ಯಾವ ರಾಜಕೀಯ ಪಕ್ಷಗಳಲ್ಲೂ ಇರಲಾರರು. ಭಾರತೀಯ ಜನತಾ ಪಕ್ಷವೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರನ್ನು ನೆಚ್ಚಿಕೊಂಡಿ ದೆಯೇ ಹೊರತು ಅದರದ್ದೇ ಆದ ಕಾರ್ಯಕರ್ತರು ಹೆಚ್ಚುಕಡಿಮೆ ಕಾಂಗ್ರೆಸ್ ಕಾರ್ಯಕರ್ತರಂತೆ; ಲಾಭವಿಲ್ಲದೆ ಪ್ರವಾಹಕ್ಕೆ ಬೀಳರು.
ತಾತ್ವಿಕ ಬದ್ಧತೆಯಿದ್ದರೂ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಸೂಚಿಸದ ಮತ್ತು ಸಾಧಿಸದ ಯಾವ ಸಿದ್ಧಾಂತಗಳೂ ಇಂದು ಉಳಿಯಲಾರವು. ಆದರೆ ಎಲ್ಲರ ಕಣ್ಣನ್ನೂ ಕೆಂಪಾಗಿಸುವ ಒಂದೇ ಪಕ್ಷವಿದ್ದರೆ ಅದು ಕಮ್ಯುನಿಸ್ಟರದು. ಅಲ್ಲೂ ನಮ್ಮ ಪರಿಶಿಷ್ಟ ಜಾತಿಗಳಲ್ಲಿರುವಂತೆ ಬಲಗೈ, ಎಡಗೈ ಇಂತಹ ವ್ಯತ್ಯಾಸಗಳಿವೆ. ಈ ಎರಡೂ ಕೈಗಳು ಒಗ್ಗೂಡುವ ಯಾವ ಲಕ್ಷಣವೂ ಕಾಣುವುದಿಲ್ಲ. ಒಟ್ಟಾಗದೆ ಪ್ಪಾಳೆಯ ಸದ್ದು ಕೇಳದು. ದೇಶದ ಧೂರ್ತ ವೈಶಿಷ್ಟ್ಯ ಮತ್ತು ವೈಚಿತ್ರ್ಯವೆಂದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿ, ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬರಲಿ ಎರಡೂ ಪಕ್ಷಗಳು ಪರಸ್ಪರ ಸುರಕ್ಷಿತವಾಗಿರುತ್ತವೆ. ಇದೊಂದು ‘ಧರ್ಮಯುದ್ಧ’. ಆದರೆ ಇಬ್ಬರೂ ಸೇಡು ತೀರಿಸಿಕೊಳ್ಳಲು ಆಯ್ದುಕೊಳ್ಳುವುದು ಕಮ್ಯುನಿಸ್ಟರನ್ನೇ. ರೀತಿ, ವಿಧಿ, ವಿಧಾನ ಮಾತ್ರ ಸ್ವಲ್ಪಬೇರೆಬೇರೆ. (ತೆಲುಗುಕವಿ ವರವರರಾವ್, ಕ್ರಾಂತಿಕಾರಿ ಹಾಡುಗಾರ ಗದ್ದರ್, ಚಿಂತಕ ಪ್ರೊ.ಸಾಯಿಬಾಬಾ ಮುಂತಾದವರ ಪರಿಸ್ಥಿತಿ ನಮ್ಮ ಕಣ್ಣ ಮುಂದಿದೆ.) ಕಾಂಗ್ರೆಸ್ ಎಡಕ್ಕೆ ವಾಲಿದಂತೆ ಕೇಂದ್ರದಲ್ಲಿ ನಿಲ್ಲುವ ಪಕ್ಷ. ಅಗತ್ಯ ಬಿದ್ದರೆ ಕೋಮುವಾದಿಗಳೂ ಅದಕ್ಕೆ ಅಸ್ಪಶ್ಯರಲ್ಲ. ಭಾರತೀಯ ಜನತಾ ಪಾರ್ಟಿಯು ಕಾಂಗ್ರೆಸನ್ನು ಸೋಲಿಸಬಲ್ಲ ಮತ್ತು ಸೋಲಿಸಿದ ಪಕ್ಷವೆಂದು ಬಿಂಬಿಸಿಕೊಂಡು ಬಂದರೂ ಅದಕ್ಕೂ ಕಾಂಗ್ರೆಸ್ ಧೋರಣೆಗಳೇ ರಾಜಕೀಯ ಸೈದ್ಧಾಂತಿಕ ಬೇರುಗಳು. ಈ ಎರಡೂ ಪಕ್ಷಗಳು ತಮ್ಮ ಪಾತ್ರಗಳನ್ನು ಅದಲು-ಬದಲು ಮಾಡುತ್ತಲೇ ಇವೆ. ಈ ಮ್ಯೂಚುಯಲ್ ಫಂಡಿನ ಸ್ಥಿರತೆಯ ಬಗ್ಗೆ ನಮ್ಮ ಪ್ರಗತಿಪರರಿಗೆ ಅಪಾರ ವಿಶ್ವಾಸವಿದೆ.

ಬುದ್ಧಿಜೀವಿಗಳಲ್ಲೂ ಪ್ರಾಮಾಣಿಕ ಮತ್ತು ತೋರಿಕೆಯ ಬುದ್ಧಿಜೀವಿಗಳೆಂಬ ಎರಡು ಗುಂಪುಗಳಿವೆ. ಮೊದಲನೆಯವರು ತಮ್ಮ ಸೈದ್ಧಾಂತಿಕ ಶ್ರದ್ಧೆಗೆ ದ್ರೋಹ ಬಗೆಯಲಾರರು. ವ್ಯವಸ್ಥೆಯನ್ನು ವಿರೋಧಿಸುವಾಗ ಎಂತಹ ಕಾಠಿಣ್ಯವನ್ನಾದರೂ ತೋರಬಲ್ಲರು; ಎಂತಹ ಸೌಲಭ್ಯ-ಸವಲತ್ತುಗಳನ್ನೂ ಧಿಕ್ಕರಿಸಬಲ್ಲರು. ಅಪ್ರಾಮಾಣಿಕ ಬುದ್ಧಿಜೀವಿಗಳು ಸದಾ ಪ್ರಗತಿ, ಸಮಾನತೆ, ಸಾಮಾಜಿಕ ನ್ಯಾಯ ಇತ್ಯಾದಿಗಳನ್ನು ಮಾತನಾಡುತ್ತಲೇ ವ್ಯವಸ್ಥೆಯಿಂದ ತಮಗೆ ಬರಬೇಕಾದ ಸಕಲ ಸವಲತ್ತುಗಳನ್ನೂ, ಮಾನ್ಯತೆಗಳನ್ನೂ ಪಡೆಯಬಲ್ಲರು. ಪ್ರಾಯಃ ಇಂದು ಅಡ್ವಾಣಿಯವರು ಸಂಶೋಧಿಸಿದ ಮತ್ತು ಬಲಪಂಥೀಯರು ಸಾರಾಸಗಟಾಗಿ ಬಳಸಿ ತಿಪ್ಪೆಗೆಸೆಯುವ ‘ಢೋಂಗಿ ಬುದ್ಧಿಜೀವಿಗಳು’ ಎಂಬ ಪದವು ಈ ಎರಡನೆಯ ವರ್ಗದವರಿಗೆ ಅನ್ವಯಿಸಬಹುದು.

ಆದ್ದರಿಂದಲೇ ನಮ್ಮ ಬಹುಪಾಲು ಬುದ್ಧಿಜೀವಿಗಳಿಗೆ ಕಾಂಗ್ರೆಸ್ ಪಕ್ಷವೆಂದರೆ ಪ್ರಗತಿಯ, ಜಾತ್ಯತೀತತೆಯ ಹೆಸರಿನಲ್ಲಿ ಸವಲತ್ತಿನ ಆರಾಮಕ್ಕೆ ಮತ್ತು ನೆರಳಿಗೆ ಆಶ್ರಯ ನೀಡಬಲ್ಲ ಆಲದ ಮರದಂತಿದೆ. ಎಡಪಂಥವನ್ನು ಬೆಂಬಲಿಸುತ್ತಲೇ ನಿರ್ಣಾಯಕ ಕ್ಷಣಗಳಲ್ಲಿ ಅವರ ಕೈಬಿಟ್ಟು ಸ್ವೀಕಾರಾರ್ಹವೆಂಬ ನೆಪದಲ್ಲಿ ರಾಷ್ಟ್ರೀಯ ಅನುಕೂಲ ಸಿದ್ಧಾಂತವನ್ನು ಪೋಣಿಸುತ್ತವೆ.

ಇದೇ ರೀತಿಯ ತಂತ್ರಗಳನ್ನು ಕೆಲವು ವರ್ಷಗಳಿಂದ ಕೆಲವಾದರೂ ಪ್ರಾದೇಶಿಕ ಪಕ್ಷಗಳೂ ಅನುಸರಿಸಿವೆ. ನಾವಿಂದು ಭಾರತೀಯ ಜನತಾ ಪಾರ್ಟಿಗೆ ಸೆಡ್ಡು ಹೊಡೆಯಬಲ್ಲ ನಾಯಕಿಯೆಂದು ಭಾವಿಸುವ ಮಮತಾ ಬ್ಯಾನರ್ಜಿಯೂ ಅಧಿಕಾರಕ್ಕೆ ಬರಬೇಕಾದರೆ ಕಾಂಗ್ರೆಸ್‌ಗಿಂತಲೂ ಹೆಚ್ಚಾಗಿ ಈ ಎಡ ಪಕ್ಷಗಳನ್ನೇ ಗುರಿಮಾಡಿಕೊಂಡದ್ದು. ಈ ದೇಶದ ಯೋಚನಾಕ್ರಮಕ್ಕೆ ಅನುಗುಣವಾಗುತ್ತದೆಂದು ಪಶ್ಚಿಮ ಬಂಗಾಳದ ಎಡಪಕ್ಷದ ಸರಕಾರ ಕೈಗೊಂಡ ಸಿಂಗೂರಿನಂತಹ ಗೊಂದಲಮಯ ಬಂಡವಾಳಶಾಹಿ ಯೋಜನೆ ಎಡಪಕ್ಷಗಳಿಗೆ ಮುಳುವಾದದ್ದು ಈಗ ಇತಿಹಾಸ. ಸ್ವತಂತ್ರ ಭಾರತದ ಒಂದು ಹಂತದಲ್ಲಿ ಕಾಂಗ್ರೆಸನ್ನು ಹೊರತುಪಡಿಸಿದರೆ ಸಂಸತ್ತಿನಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಮತ್ತು ಹೆಚ್ಚು ರಾಜ್ಯಗಳಲ್ಲಿ ಸರಕಾರಗಳನ್ನು ಹೊಂದಿದ್ದು ಎಡಪಕ್ಷಗಳು. ನೆಹರೂ ಎಡಪಕ್ಷಗಳ ಟೀಕೆಗೆ ಗುರಿಯಾಗುತ್ತಿದ್ದರೂ ಅದನ್ನು ಅಲಕ್ಷಿಸಿ ಎಡಪಕ್ಷಗಳಿಗೆ ಕೊಡಬೇಕಾದ ಗೌರವವನ್ನು ನೀಡುತ್ತಿದ್ದರು. ಕಮ್ಯುನಿಸ್ಟರಲ್ಲದಿದ್ದರೂ ಎಡಪಂಥವನ್ನು ಹೋಲುವ ವಿ.ಕೆ.ಕೃಷ್ಣಮೆನನ್‌ರಂತಹ ವ್ಯಕ್ತಿಯನ್ನು ತನ್ನ ಸಂಪುಟದಲ್ಲಿ ಸಚಿವರಾಗಿಸಿದ್ದರು.

ಈ ನೀತಿ ಆನಂತರ ಪೇಲವವಾಯಿತು. ಪ್ರಾಯಃ ಎಡಪಕ್ಷಗಳು ಯಾಕೆ ವಿಫಲವಾಗಿವೆ ಅಥವಾ ಅಗುತ್ತಿದ್ದರೆ ಯಾಕೆ ಆಗುತ್ತಿವೆ ಎಂಬುದಕ್ಕೆ ಕರಾರುವಾಕ್ಕು ಉತ್ತರ ಪಡೆಯುವುದು ಕಷ್ಟ. ಅಧಿಕಾರಕ್ಕೆ ಬಂದಾಗಲೂ ಕೆಳಹಂತದ ಕಾರ್ಯಕರ್ತರು ನಡೆಸುವ ಅತ್ಯುತ್ಸಾಹದ ನಡವಳಿಕೆಗಳು ಅವರಿಗೇ ಮುಳುವಾಗುತ್ತಿವೆಯೇ? ಎಡಪಂಥದ ವಿಚಾರಧಾರೆಗಳನ್ನು ಹೊಂದಿದ ಬುದ್ಧಿಜೀವಿಗಳು ನಡೆಸುವ ಅಕಡಮಿಕ್ ವೈಪರೀತ್ಯಗಳು ಶ್ರೀಸಾಮಾನ್ಯರ ಪಾರಂಪರಿಕ ಅಥವಾ ಸಾಂಪ್ರದಾಯಿಕ ಭಾವನೆಗಳನ್ನು ಕೆಣಕಿದವೇ? ದೇವರನ್ನು ನಂಬುವ ಮತ್ತು ಹಾಗೆ ನಂಬಿದಂತೆ ನಟಿಸುವ ರಾಜಕಾರಣಿಗಳನ್ನು ನಮ್ಮ ಜನರು ಗೌರವಿಸುತ್ತಾರೆ. ಪ್ರಾಯಃ ಇಂತಹ ನಟನೆ ಜನಸ್ವೀಕಾರಾರ್ಹವಾದರೂ ಕಮ್ಯುನಿಸ್ಟರಿಗೆ ಬಾರದು; ತೋರದು. ಈ ಧೋರಣೆ ಅವರನ್ನು ಪ್ರಾಮಾಣಿಕ ಬುದ್ಧಿಜೀವಿಗಳನ್ನಾಗಿಸಿ ಜನಾಭಿಪ್ರಾಯದಿಂದ ದೂರವಿರಿಸಿದೆಯೇ? ಈ ದೇಶದ ಕಮ್ಯುನಿಸ್ಟರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಅಥವಾ ಅವರಲ್ಲೊಬ್ಬರು ದೇಶದ ಅಗ್ರಮಾನ್ಯ ಪದ-ಪದವಿಯನ್ನು ಅಲಂಕರಿಸಲಿದ್ದ ಮೊದಲ ಅವಕಾಶವೆಂದರೆ ಜ್ಯೋತಿಬಸು. ಭೂಸುಧಾರಣೆ ಮುಂತಾದ ಶೋಷಿತರ ಪರವಾದ ಆಡಳಿತ ಕ್ರಮದ ಮೂಲಕ ಸತತ ಎರಡು ದಶಕಗಳ ಕಾಲ ಪಶ್ಚಿಮ ಬಂಗಾಳದ ಆಡಳಿತವನ್ನು ಕಮ್ಯುನಿಸ್ಟರ ಕೈಗೊದಗಿಸಿದ ಜ್ಯೋತಿಬಸು ಅವರನ್ನು ಪ್ರಧಾನಿಯಾಗಿ ಆರಿಸಲು 1996ರಲ್ಲಿ ಕೇಂದ್ರದಲ್ಲಿ ಸಮ್ಮಿಶ್ರ ಸರಕಾರಕ್ಕೆ ಅವಕಾಶ ದೊರೆತಾಗ ಸರ್ವಪಕ್ಷಗಳೂ ಇಚ್ಛಿಸಿದ್ದವು. ಆದರೆ ಪಕ್ಷವು ಸರಕಾರವನ್ನು ಸೇರಲು ನಿರಾಕರಿಸಿ ತಾನಾಗಿ ಒದಗಿ ಬಂದ ಅವಕಾಶವನ್ನು ಕೈಚೆಲ್ಲಿತು. ಈ ನಿರ್ಧಾರಕ್ಕೆ ಯಾವ ತಾರ್ಕಿಕ ಅಥವಾ ಸೈದ್ಧಾಂತಿಕ ಕಾರಣಗಳೂ ಇರಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡು ಚುನಾವಣೆಯನ್ನು ಎದುರಿಸಿದ ಪಕ್ಷವೊಂದು ಅಧಿಕಾರದಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ನಿರ್ಧರಿಸಿದ್ದು ಪ್ರಾಮಾಣಿಕತೆಗಿಂತಲೂ ವ್ಯಕ್ತಿ ಮತ್ಸರ ಮತ್ತು ದುರಭಿಮಾನವೇ ಆಗಿತ್ತೆಂದು ಜನರು ಆಡಿಕೊಳ್ಳುವಂತಾಯಿತು. ಮುಂದೆ ಜ್ಯೋತಿಬಸು ಅವರೇ ಈ ನಿರ್ಧಾರವನ್ನು ಚಾರಿತ್ರಿಕ ಪ್ರಮಾದವೆಂದರು.

ಇತ್ತೀಚೆಗೆ ನಿಧನರಾದ ಸೋಮನಾಥ ಚಟರ್ಜಿಯವರಂತಹ ಹಿರಿಯ ಕಮ್ಯುನಿಸ್ಟ್ ಧುರೀಣರ ಕುರಿತು ಕಮ್ಯುನಿಸ್ಟರು ನಡೆದುಕೊಂಡ ರೀತಿಯೂ ಅರ್ಥವಾಗದ್ದು. 2004ರಲ್ಲಿ ಮೊದಲ ಯುಪಿಎ ಸರಕಾರ ಆಯ್ಕೆಯಾದಾಗ ಸೋಮನಾಥ ಚಟರ್ಜಿಯವರು ಲೋಕಸಭೆಯ ಸಭಾಪತಿಯಾಗಿ ಆಯ್ಕೆಯಾಗುವುದಕ್ಕೆ ಕಮ್ಯುನಿಸ್ಟರು ಆಕ್ಷೇಪಿಸಲಿಲ್ಲ. ಆದರೆ ಮುಂದೆ ಸರಕಾರಕ್ಕೆ ಬೆಂಬಲ ವಾಪಾಸು ಮಾಡಿದಾಗ ಸೋಮನಾಥ ಚಟರ್ಜಿಯವರು ಸಭಾಪತಿ ಸ್ಥಾನದಿಂದ ಕೆಳಗಿಳಿಯಬೇಕೆಂದು ಪಟ್ಟುಹಿಡಿದರು. ಹೇಳಿಕೇಳಿ ಸಭಾಪತಿ ಸ್ಥಾನವು ನಿರಪೇಕ್ಷವಾದದ್ದು; ಪಕ್ಷಾತೀತವಾದದ್ದು. ಹೇಗಿದ್ದರೂ ಅಲ್ಲಿ ಒಬ್ಬ ಹಿರಿಯ ರಾಜಕೀಯ ತಜ್ಞರಿರುವಾಗ ಅಲ್ಲಿಂದ ಸಾಮಾಜಿಕ ನ್ಯಾಯ ಲಭಿಸುತ್ತದೆಂದು ಭಾವಿಸುವುದೇ ತಾರ್ಕಿಕವಾಗಿತ್ತು. ಚಟರ್ಜಿಯವರು ಸಹಜವಾಗಿಯೇ ತಮ್ಮ ಪದವಿಯಿಂದಿಳಿಯಲು ನಿರಾಕರಿಸಿದರು. ಈ ನಿರಾಕರಣೆಯನ್ನು ಅಶಿಸ್ತೆಂದೂ ಪಕ್ಷದ ಧೋರಣೆಗೆ ವ್ಯತಿರಿಕ್ತವಾದ ನಡೆಯೆಂದೂ ಪರಿಗಣಿಸಿ ಅವರನ್ನು ಪಕ್ಷದಿಂದಲೇ ಹೊರಹಾಕಲಾಯಿತು. ಸೋಮನಾಥ ಚಟರ್ಜಿಯವರು ನಿಧನರಾದಾಗ ಅವರ ಕುಟುಂಬದವರು ಕಮ್ಯುನಿಸ್ಟರ ಕುರಿತು ತೋರಿದ ಅನಾದರಣೆಯು ಕಮ್ಯುನಿಸಮ್ಮಿನ ಕುರಿತ ಯಥಾರ್ಥ ಟೀಕೆಯೆಂದೇ ತಿಳಿಯಬಹುದು. ಹೀಗೆ ತಮ್ಮಲ್ಲಿರುವ ಮುತ್ಸದ್ದಿಗಳನ್ನು ನಿರ್ದಾಕ್ಷಿಣ್ಯವಾಗಿ ತುಳಿಯುವ ಮೂಲಕ ಕಮ್ಯುನಿಸಂ ಮರದ ಗೆಲ್ಲಿನಲ್ಲಿ ಕುಳಿತು ಕಾಂಡವನ್ನು ಕಡಿಯುವ ಕೆಲಸವನ್ನೇ ಮಾಡಿದಂತಿದೆ.

ತಮ್ಮ ಆಡಳಿತ ಸುಧಾರಣೆಗಳಿಂದಾಗಿ ಕೈಗಾರಿಕೆಗಳು ಬರಲು ಹಿಂಜರಿದು ನಿರುದ್ಯೋಗ ಮುಂತಾದ ಸಮಸ್ಯೆಗಳು ಹೆಚ್ಚಾಗಿ ಜ್ಯೋತಿ ಬಸು ಅಧಿಕಾರದಿಂದ ಕೆಳಗಿಳಿದಾಗ ಕಮ್ಯುನಿಸ್ಟರ ಪ್ರಾಬಲ್ಯ ಕುಂಠಿತವಾಯಿತು. ಬುದ್ಧದೇವ ಭಟ್ಟಾಚಾರ್ಯ ಈ ಜಾರಿಕೆಯನ್ನು ತಡೆಯುವಲ್ಲಿ ಯಶಸ್ವಿಯಾಗಲಿಲ್ಲ. ಅನಂತರದ್ದು ಮಮತಾ ರಾಜಕೀಯ. ತ್ರಿಪುರದಲ್ಲೂ ಮಾಣಿಕ್ ಸರಕಾರವು ಎಷ್ಟೇ ಪ್ರಾಮಾಣಿಕ ಯತ್ನಗಳನ್ನು ನಡೆಸಿದರೂ ಭೂಮಾಲಕರು, ಕೈಗಾರಿಕೋದ್ಯಮಿಗಳು ಮತ್ತು ಹಣವಂತರ ಸಹಾನುಭೂತಿಯನ್ನು ಕಳೆದುಕೊಂಡು ಅದಾಗಲೇ ಜಾತಿ-ಮತ-ಧರ್ಮದ ಅಫೀಮಿನೊಂದಿಗೆ ಬೆಳೆಯುತ್ತಿದ್ದ ಯುವ ಜನಾಂಗವನ್ನು ಆಕರ್ಷಿಸಲು ವಿಫಲರಾದರು. ಪರಿಣಾಮವಾಗಿ ದೇಶದ ಸರಳ ಮತ್ತು ಪ್ರಾಮಾಣಿಕ ಆದರೆ ಅತ್ಯುತ್ತಮ ಮುಖ್ಯಮಂತ್ರಿಯೊಬ್ಬರ ಸರಕಾರವನ್ನೂ ಕಳೆದುಕೊಂಡಿತು.

ಇತ್ತೀಚೆಗೆ ಅದರ ಪ್ರಧಾನ ನಾಯಕರಲ್ಲೊಬ್ಬರಾದ ಸೀತಾರಾಮ ಯಚೂರಿಯವರು ರಾಜ್ಯಸಭೆಗೆ ಪುನರಾಯ್ಕೆ ಬಯಸಿದರೂ ಪಕ್ಷವು ಒಲವು ತೋರದೆ ಅಲ್ಲೂ ವ್ಯಕ್ತಿಗತ ಮೇಲಾಟವಿದೆಯೆಂಬುದನ್ನು ತೋರಿಸಿಕೊಟ್ಟಿದೆ. ಯಚೂರಿಯವರು ಜ್ಯೋತಿಬಸುವಿನಂತೆ ಸಾರ್ವತ್ರಿಕ ಮನ್ನಣೆಯನ್ನು ಗಳಿಸಿದ ಒಬ್ಬ ಧುರೀಣ. ಅವರು ಪುನರಾಯ್ಕೆ ಹೊಂದುವುದು ಪಕ್ಷದ ಅಗತ್ಯಗಳಲ್ಲೊಂದಾಗಿತ್ತು. ಹೀಗೆ ಒಂದಲ್ಲ ಒಂದು ಸಂದರ್ಭಗಳಲ್ಲಿ ಕಮ್ಯುನಿಸ್ಟರು ವ್ಯೆಹಾತ್ಮಕ ವೈಫಲ್ಯವನ್ನು ತೋರುತ್ತಲೇ ಬಂದಿದ್ದಾರೆ. (ಕಾಂಗ್ರೆಸ್ ಇದೇ ಹಾದಿಯಲ್ಲಿದ್ದರೂ ಅಲ್ಲಿ ಅಧಿಕಾರದ ಹೊರತಾಗಿ ಅಂತಹ ಹೇಳಿಕೊಳ್ಳಬಲ್ಲ ಸಿದ್ಧಾಂತವಿದ್ದಂತೆ ಅನ್ನಿಸುವುದಿಲ್ಲ.)

ಈಗ ಕಮ್ಯುನಿಸ್ಟರು ನಿಜಕ್ಕೂ ಒಂದು ಸಂಕ್ರಮಣ ಕಾಲವನ್ನು ಸಮೀಪಿಸಿದ್ದಾರೆ. ತಮ್ಮ ಅಸ್ತಿತ್ವವನ್ನು ಕಾಯ್ದುಕೊಳ್ಳಲು ಅವರು ಜನರ ಸಮೀಪ ಹೋಗುವುದು ಅವಶ್ಯವಿದೆ. ಪ್ರಜಾಪ್ರಭುತ್ವದ ನಿಯಮಗಳನ್ನು ಪಾಲಿಸುವುದರೊಂದಿಗೇ ಬಳಸಿಕೊಳ್ಳುವುದೂ ಜಾಣತನವಾಗುತ್ತದೆ. ಕೇವಲ ಅಲ್ಲಿ-ಇಲ್ಲಿ ಸೆಮಿನಾರುಗಳಲ್ಲಿ ಬುದ್ಧಿಜೀವಿಗಳು ನೀಡುವ ಬೆಂಬಲವು ಮತಗಳನ್ನು ತಾರದು. ಮತಗಳು ಬಾರದೆ ಅಧಿಕಾರ ದಕ್ಕದು. ಅಧಿಕಾರವು ದಕ್ಕದೆ ಸಾಮಾಜಿಕ ಹಿತವನ್ನು ಸಾಧಿಸುವುದು, ಕಾಪಾಡುವುದು ಸಾಧ್ಯವಾಗದು. ಇದಕ್ಕೆ ಸಮೀಪವಾಗಿ ಡಾ.ಯು.ಆರ್.ಅನಂತಮೂರ್ತಿಯವರು ತಮ್ಮ ‘ಕೇರಳದ ರಾಜಕೀಯ’ ಎಂಬ ಪದ್ಯದ ನಾಲ್ಕು ಸಾಲುಗಳಲ್ಲಿ ಲಯಬದ್ಧವಾಗಿ ಹೀಗೆ ಬರೆದಿದ್ದಾರೆ:

ಪಡೆದು ಕೆಟ್ಟರು ಕಮ್ಯುನಿಸ್ಟರು
ಕೆಟ್ಟು ಪಡೆದರು ಕಾಂಗಿ ಕಾಂಗರು

ಕೆಡದೆ ಉಳಿದವರಾರು ಎಂದರೆ ಬಿಸಿಲು ಕಾಯುವ ಬೆಪ್ಪರು॥

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top